“ಅವರ ಕಾವ್ಯದಲ್ಲಿ ಕ್ರಿಸ್ತನ ಕ್ರೂಶಾರೋಹಣ, ಐಸಾಕ್-ನ ತ್ಯಾಗ ಮತ್ತು ಇತರರ, ಹಾಗೂ ತನ್ನ ಸ್ವಂತ ಸಾವಿನ ದೃಶ್ಯಗಳು, ಹಾಗೂ ಪ್ರಾಣಿಗಳ ವಧೆ ಮತ್ತು ದೇಶೀಯ ಜೀವನದ ಅಭಿವ್ಯಕ್ತಿಯಾಗಿ ಬಿಡಿಸಿದ ಚಿತ್ರಗಳೊಂದಿಗೆ ಸಂಯೋಜಿಸಲಾಗಿದೆ. ಲಿಥುವೇನಿಯನ್ ಸಂಸ್ಕೃತಿಯಲ್ಲಿನ ಭೂಮಿಯ ಪವಿತ್ರ ರೂಪಕವು ಇಲ್ಲಿ ಮರಣ ಮತ್ತು ಸತ್ತವರ ಸ್ಥಳವಾಗಿ ಅಥವಾ ಅವರೊಂದಿಗೆ ಸಂಬಂಧಿಸಿದ ಸ್ಥಳವಾಗಿ ಕಂಡುಬರುತ್ತದೆ”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲಿಥುವೇನಿಯಾ ದೇಶದ ಕವಿ ಲಿಥುವೇನಿಯಾ ದೇಶದ ಕವಿ ಶಿಗಿತಾಸ್ ಪಾರೂಲ್‌ಶ್ಕಿಸ್‌ರ (Sigitas Parulskis) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಶಿಗಿತಾಸ್ ಪಾರೂಲ್‌ಶ್ಕಿಸ್ ಅವರ ಕಾವ್ಯವನ್ನು ಪಾಪನಿವೇದನೆಯ (confessional) ಅಥವಾ ಆತ್ಮಚರಿತ್ರೆಯ ರೀತಿಯ ಕವನಗಳು ಎಂದು ವಿವರಿಸಬಹುದು. ಅವರ ಕವನಗಳು ಸೋವಿಯತ್ ಸೈನ್ಯದಲ್ಲಿ ಸೇವೆ ಸಲ್ಲಿಸುವುದು, ಆಘಾತಕಾರಿ ಕುಟುಂಬ ಸಂಬಂಧಗಳು, ವಿವಾಹ ವಿಚ್ಛೇದನ, ಮಾತೃ-ಪಿತೃತ್ವ (parenthood) ಮತ್ತು ಮದ್ಯವ್ಯಸನದಂತಹ ವಿಷಯಗಳನ್ನು ಅನ್ವೇಷಿಸುತ್ತವೆ. ಮತ್ತೊಂದೆಡೆ, ಈ ಅನುಭವಗಳನ್ನು ಸಾಮಾನ್ಯವಾಗಿ ಸಾಹಿತ್ಯ ಮತ್ತು ಕಲೆಯ ಇಂಟರ್‌ಟೆಕ್ಸ್ಟ್‌ಗಳನ್ನು ಮತ್ತು ಬೈಬಲ್ ಮತ್ತು ಕ್ರಿಶ್ಚಿಯನ್ ಪುರಾಣಗಳಿಗೆ ಪರೋಕ್ಷವಾಗಿ ಪ್ರಸ್ತಾವಿಸುವ ಮೂಲಕ ಬಹಿರಂಗಪಡಿಸಲಾಗುತ್ತದೆ. ಉದಾಹರಣೆಗೆ, ತಂದೆ/ಮಗ ಸಂಬಂಧದ ಸಂದರ್ಭವನ್ನು ಕ್ರಿಶ್ಚಿಯನ್ ಸಂಕೇತಗಳ ಮೂಲಕ ಬಿಚ್ಚಿಡಲಾಗುತ್ತದೆ. ಪಾರೂಲ್‌ಶ್ಕಿಸ್-ರ ಕಾವ್ಯದಲ್ಲಿ ಮತ್ತೆ ಮತ್ತೆ ಕಂಡುಬರುವ ಲಕ್ಷಣವೆಂದರೆ ತಂದೆಯು ದೇವರು ಅಥವಾ ಅಬ್ರಹಾಂನ ರೀತಿಯಲ್ಲಿ ಮಗನನ್ನು ತ್ಯಾಗ ಮಾಡುವ ಕ್ರಿಯೆಯಾಗಿದೆ. ಪುತ್ರ ಅಥವಾ ಪುತ್ರಿ ಹತ್ಯೆ ಒಬ್ಬರ ಇಚ್ಛೆಗೆ ವಿರುದ್ಧವಾಗಿ ನಡೆಸುವ ಹತ್ಯೆ – ಇದು ವಿಧಿ, ಒಂದು ಸಾಂಸ್ಕೃತಿಕ ಶಾಪ, ಪಿತೃಹತ್ಯೆಯ ಬಗ್ಗೆ ಮಗನ ನಿರಂತರ ಕಲ್ಪನೆಗಳಂತೆಯೇ.

1965-ರಲ್ಲಿ ಜನಿಸಿದ ಶಿಗಿತಾಸ್ ಪಾರೂಲ್‌ಶ್ಕಿಸ್ ಸಮಕಾಲೀನ ಲಿಥುವೇನಿಯನ್ ಸಾಹಿತ್ಯದ ಪ್ರಮುಖ ಬರಹಗಾರರಲ್ಲಿ ಒಬ್ಬರು. ಅವರು ತಮ್ಮ ವ್ಯಂಗ್ಯ, ತೀಕ್ಷ್ಣ, ವಿಮರ್ಶಾತ್ಮಕ ಮತ್ತು ಕೆಲವೊಮ್ಮೆ ಪ್ರಚೋದನಕಾರಿ ಬರವಣಿಗೆಯ ಶೈಲಿಗೆ ಹೆಸರುವಾಸಿಯಾಗಿದ್ದಾರೆ. 1990-ರಲ್ಲಿ Iš ilgesio visa tai (All That is Due to Longing) ಹೆಸರಿನ ಕವನ ಸಂಕಲನದೊಂದಿಗೆ ಪಾರೂಲ್‌ಶ್ಕಿಸ್‌ ಅವರು ಕವಿಯಾಗಿ ಲಿಥುವೇನಿಯನ್ ಸಾಹಿತ್ಯಲೋಕದೊಳಗೆ ಕಾಲಿಟ್ಟರು. ಕಾವ್ಯ, ಪ್ರಬಂಧ, ಕಾದಂಬರಿ, ನಾಟಕ ಹಾಗೂ ಸಾಹಿತ್ಯ ವಿಮರ್ಶೆ – ಈ ಎಲ್ಲಾ ಕ್ಷೇತ್ರಗಳಿಗೆ ಈ ನಿಪುಣ, ಬಹುಮುಖಿ ಬರಹಗಾರ ಹಲವಾರು ಸ್ಮರಣೀಯ ಕೃತಿಗಳನ್ನು ನೀಡಿದ್ದಾರೆ. ನಿಜ ಹೇಳುವುದಾದರೆ, ಈ ಪ್ರತಿಯೊಂದು ಕ್ಷೇತ್ರದ ಬೇಡಿಕೆಗಳಲ್ಲಿ ಪಾರಂಗತರಾಗಲು ಪಾರೂಲ್‌ಶ್ಕಿಸ್‌ಗೆ ಹೆಚ್ಚು ಸಮಯ ಹಿಡಿಯಲಿಲ್ಲ: ಅವರ ಎರಡನೇ ಕವನ ಸಂಗ್ರಹ, Mirusiųjų (Of the Dead, 1994) ಅವರಿಗೆ ಪ್ರತಿಷ್ಠಿತ ಯೊಟ್ವಿಂಗಿಯನ್ ಪ್ರಶಸ್ತಿಯನ್ನು (Yotvingian Prize) ತಂದುಕೊಟ್ಟಿತು; ಅವರ ಮೊದಲ ಪ್ರಬಂಧಗಳ ಪುಸ್ತಕ, Nuogi drabužiai (Naked Clothes, 2002) ಬಹುಶಃ ಅವರ ಅತ್ಯುತ್ತಮ ಪ್ರಬಂಧ ಸಂಕಲನ; ಮತ್ತು ಅವರ ಮೊದಲ ಕಾದಂಬರಿ, Trys sekundės dangaus (Three Seconds of Heaven, 2002) ವಿಮರ್ಶಕರಿಂದ ಪ್ರಶಂಸೆ ಪಡೆಯಿತು ಮತ್ತು ಇದು ಅವರ ಬಹು-ಅನುವಾದಿತ ಕೃತಿಯಾಗಿದೆ.

1990-ರಲ್ಲಿ ಅವರು ವಿಲ್ನಿಯಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು; ಅಲ್ಲಿ ಅವರು ಲಿಥುವೇನಿಯನ್ ಭಾಷೆ ಮತ್ತು ಸಾಹಿತ್ಯವನ್ನು ಅಧ್ಯಯನ ಮಾಡಿದರು. ಅವರು ಲಿಥುವೇನಿಯಾದ ಗಮನಾರ್ಹ ನಿಯತಕಾಲಿಕೆಗಳು ಮತ್ತು ವೃತ್ತಪತ್ರಿಕೆಗಳಿಗೆ ಹಲವು ಬರಹಗಳನ್ನು ಬರೆದಿದ್ದಾರೆ. ಅವರು ಬರವಣಿಗೆಯ ಜತೆಯಲ್ಲಿ, ವಿಲ್ನಿಯಸ್ ವಿಶ್ವವಿದ್ಯಾಯದಲ್ಲಿ ಸೃಜನಶೀಲ ಬರವಣಿಗೆಯ ವಿಷಯದಲ್ಲಿ ಉಪನ್ಯಾಸಗಳನ್ನು ನೀಡುತ್ತಾರೆ ಮತ್ತು ವಿವಿಧ ಪತ್ರಿಕೆಗಳು ಮತ್ತು ಇಂಟರ್ನೆಟ್ ವೆಬ್‌ಸೈಟ್‌ಗಳಿಗೆ ಲೇಖನಗಳನ್ನು ಬರೆಯುತ್ತಾರೆ. ಪ್ರಬಂಧಗಳು, ಕವನ ಸಂಕಲನಗಳು, ನಾಟಕಗಳು, ಒಂದು ಕಾದಂಬರಿ ಮತ್ತು ಎರಡು ಚಿತ್ರಕಥೆಗಳು ಸೇರಿದಂತೆ ಹದಿನಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರು www.balsas.lt ವೆಬ್‌ಸೈಟ್‌ನಲ್ಲಿ ಅನೇಕ ಸಣ್ಣ ಕಥೆಗಳನ್ನು ಪ್ರಕಟಿಸಿದ್ದು, ಈ ಸಣ್ಣಕಥೆಗಳನ್ನು Sraigė su beisbolo lazda ಎಂಬ ಹೆಸರಿನ ಸಂಕಲನವಾಗಿ ಪ್ರಕಟಿಸಲಾಯಿತು. ಪಾರೂಲ್‌ಶ್ಕಿಸ್‌ರವರು ಹಲವಾರು ನಾಟಕಗಳನ್ನು ಸಹ ಬರೆದಿದ್ದಾರೆ.

ವಿಶ್ವವಿದ್ಯಾಯದಿಂದ ಪಾರೂಲ್‌ಶ್ಕಿಸ್-ರು ನೇರವಾಗಿ ಸೋವಿಯತ್ ಸೈನ್ಯದಲ್ಲಿ ಕಡ್ಡಾಯ ಸೇವೆಗಾಗಿ ಹೋದರು ಹಾಗೂ ಅಲ್ಲಿ ಮಿಲಿಟರಿಯ ಅಮಾನವೀಯ ವ್ಯವಸ್ಥೆಯನ್ನು ಅನುಭವಿಸಿದರು. ಸೈನ್ಯ-ಸೇವೆಯಿಂದ ನಾಗರಿಕ ಜೀವನ ಮತ್ತು ಸಾಹಿತ್ಯಕ್ಕೆ ಅವರು ‘ಉನ್ನತ ಪದಗಳ’ ಅಪನಂಬಿಕೆಯೊಂದಿಗೆ ಮತ್ತು ಪೂರ್ಣ-ರೂಪದ ‘ಪೋಸ್ಟ್-ಹ್ಯೂಮನಿಸಮ್’-ನ (Post-humanism) ಪ್ರಜ್ಞೆಯೊಂದಿಗೆ ಮರಳಿದರು. ‘ಪೋಸ್ಟ್-ಹ್ಯೂಮನಿಸಮ್’ ತತ್ವದ ಪ್ರಕಾರ ಮಾನವನೊಬ್ಬ ನೈಸರ್ಗಿಕ ಜೀವಿ, ದೈಹಿಕವಾಗಿ ಒಂದು ಪ್ರಾಣಿ, ಹಾಗೂ ಇಲ್ಲಿ ಸಂಸ್ಕೃತಿ ಎಂಬುದು ತುಂಬಾ ತೆಳುವಾದ ಮತ್ತು ವಿಶ್ವಾಸಾರ್ಹವಲ್ಲದ ಒಂದು ಚಿಪ್ಪು ಅಷ್ಟೆ. ಈ ಕಾರಣಕ್ಕಾಗಿ, ಹಳೆಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನ ವಿಧಾನಗಳು ತಮ್ಮ ಅರ್ಥವನ್ನು ಕಳೆದುಕೊಂಡಿವೆ. ಸಾಮಾಜಿಕ ಮತ್ತು ಸಾಹಿತ್ಯಿಕ ಸಂಬಂಧಗಳ ಮುರಿತದ ಪ್ರಜ್ಞೆಯು ಲೇಖಕನ ಬರಹಗಳಲ್ಲಿ ಕುರೂಪತೆ ಮತ್ತು ನಕಾರಾತ್ಮಕತೆ ಸೌಂದರ್ಯದ (aesthetic) ವರ್ಗಗಳಾಗಿ ರೂಪಾಂತರಗೊಳ್ಳುತ್ತದೆ.

ಲಿಥುವೇನಿಯಾದ ಕಾದಂಬರಿಕಾರ, ಕವಿ, ಹಾಗೂ ವಿಮರ್ಶಕ ರಿಮಾಂತಸ್ ಕ್‌ಮಿತಾ-ರ ಪ್ರಕಾರ (Rimantas Kmita), “ಪಾರೂಲ್‌ಶ್ಕಿಸ್-ರು ತಮ್ಮ ಕವನಗಳಲ್ಲಿ ಹಳ್ಳಿ-ಜನರ ದುಡಿತ ಹಾಗೂ ತಂದೆ-ತಾಯಿಯ ರೂಪಕಗಳನ್ನು ವಿಧಿವತ್ತಾಗಿಸುತ್ತಾರೆ (ritualize) ಹಾಗೂ ಇವುಗಳ ಅಧಿಕೃತ ಮುಂದುವರಿಕೆ (authentic continuation) ಇನ್ನು ಮುಂದೆ ಸಾಧ್ಯವಿಲ್ಲ ಎಂದು ಕೂಡ ತೋರಿಸುತ್ತಾರೆ. ಈ ರೀತಿಯಾಗಿ, ಸಾವಿನ ವಿದ್ಯಮಾನವು ಅವರ ಸಾಹಿತ್ಯದ ಕೇಂದ್ರವಾಗುತ್ತದೆ. ಮಾನವತಾವಾದಿ ಆದರ್ಶಗಳ, ಸಾಂಪ್ರದಾಯಿಕ ಸಂಸ್ಕೃತಿಯ ಹಾಗೂ ಕೆಲವು ನಿರ್ದಿಷ್ಟ ಜನರ ಸಾವು ಅವರ ಕವನ ಸಂಕಲನಗಳ ಕೇಂದ್ರ ವಸ್ತುವಾಗಿವೆ. ಸಾವು ಯಾವುದೇ ತರಹದ ಮುಖವಾಡಗಳನ್ನು ಹರಿದು ಹಾಕುತ್ತದೆ – ಅದೇ ಏಕೈಕ ಹಾಗೂ ನಿರಂತರ, ಸತ್ಯದ ಪಾಲಕ (‘ಏಕೆಂದರೆ, ಸತ್ಯವು ಸತ್ತವರಿಗೆ ಮಾತ್ರ ಸೇರಿದ ಸೊತ್ತು’).”

ಪಾರೂಲ್‌ಶ್ಕಿಸ್-ರ ಕಾವ್ಯದಲ್ಲಿ ಕಂಡುಬರುವ ರೂಪಕಗಳ ಬಗ್ಗೆ ಬರೆಯುತ್ತಾ ರಿಮಾಂತಸ್ ಕ್‌ಮಿತಾ ಹೀಗೆನ್ನುತ್ತಾರೆ, “ಅವರ ಕಾವ್ಯದಲ್ಲಿ ಕ್ರಿಸ್ತನ ಕ್ರೂಶಾರೋಹಣ, ಐಸಾಕ್-ನ ತ್ಯಾಗ ಮತ್ತು ಇತರರ, ಹಾಗೂ ತನ್ನ ಸ್ವಂತ ಸಾವಿನ ದೃಶ್ಯಗಳು, ಹಾಗೂ ಪ್ರಾಣಿಗಳ ವಧೆ ಮತ್ತು ದೇಶೀಯ ಜೀವನದ ಅಭಿವ್ಯಕ್ತಿಯಾಗಿ ಬಿಡಿಸಿದ ಚಿತ್ರಗಳೊಂದಿಗೆ ಸಂಯೋಜಿಸಲಾಗಿದೆ. ಲಿಥುವೇನಿಯನ್ ಸಂಸ್ಕೃತಿಯಲ್ಲಿನ ಭೂಮಿಯ ಪವಿತ್ರ ರೂಪಕವು ಇಲ್ಲಿ ಮರಣ ಮತ್ತು ಸತ್ತವರ ಸ್ಥಳವಾಗಿ ಅಥವಾ ಅವರೊಂದಿಗೆ ಸಂಬಂಧಿಸಿದ ಸ್ಥಳವಾಗಿ ಕಂಡುಬರುತ್ತದೆ (‘ಭೂಮಿ ಶುದ್ಧವಾಗಿದೆ, ಸಾವಿನಂತೆ’). ಪಾರೂಲ್‌ಶ್ಕಿಸ್-ರ ಬರಹಗಳಲ್ಲಿ, ‘ಮೆಟಾಫಿಝಿಕ್ಸ್’ ಮತ್ತು ಅದರಾಚೆಗಿನ ಸಂಬಂಧಗಳು ಕೆಳಮುಖವಾಗಿ ನಿರ್ದೇಶಿಸಲ್ಪಡುತ್ತವೆ, ಸ್ವರ್ಗದ ಕಡೆಗೆ ಅಲ್ಲ, ಭೂಮಿಯೊಳಗೆ ಆಳವಾಗಿ ನೂಕುವ ಪಥದಲ್ಲಿ – ಬೀಟ್‌ರೂಟ್‌ಗಳು ಬೇರುಬಿಡುವುದನ್ನು ವಿವರಿಸುವಾಗಲೇ ಆಗಲಿ ಅಥವಾ ಅಂತ್ಯಕ್ರಿಯೆಯನ್ನು ವಿವರಿಸುವಾಗಲೇ ಆಗಲಿ. ಪಾರೂಲ್‌ಶ್ಕಿಸ್-ರ ಕಾವ್ಯದಲ್ಲಿ ಮನುಷ್ಯನು ಸಂಕಟದಲ್ಲಿ ಮುಳುಗಿರುವ ಜೀವಿ; ವಿರೋಧಾಭಾಸಗಳಿಂದ ತುಂಬಿದ ಮತ್ತು ನಿರ್ಣಾಯಕವಾಗಿ ಯಾವುದನ್ನೂ ಪರಿಹರಿಸಲು ಸಾಧ್ಯವಾಗದಂತಹ ಜೀವಿ.”

ಎಲ್ಲಾ ಪ್ರಮುಖ ಲಿಥುವೇನಿಯನ್ ಸಾಹಿತ್ಯ ಬಹುಮಾನಗಳನ್ನು ಪಡೆದಿರುವ ಪಾರೂಲ್‌ಶ್ಕಿಸ್-ರು, 2004-ರಲ್ಲಿ ರಾಷ್ಟ್ರೀಯ ಸಂಸ್ಕೃತಿ ಮತ್ತು ಕಲೆಯ ಪ್ರಶಸ್ತಿಯನ್ನು ಪಡೆದರು ಮತ್ತು 2016-ರಲ್ಲಿ ಸಾಹಿತ್ಯ, ಕಲೆ ಮತ್ತು ವಿಜ್ಞಾನಕ್ಕಾಗಿ ಬಾಲ್ಟಿಕ್ ಅಸೆಂಬ್ಲಿ ಪ್ರಶಸ್ತಿಯನ್ನು ಪಡೆದರು. ಪಾರೂಲ್‌ಶ್ಕಿಸ್ ಅವರ ಕೃತಿಗಳನ್ನು ರಷ್ಯನ್, ಇಂಗ್ಲಿಷ್, ಲ್ಯಾಟ್ವಿಯನ್, ಫಿನ್ನಿಶ್, ಪೋಲಿಷ್, ಜೆಕ್, ಫ್ರೆಂಚ್, ಜರ್ಮನ್, ಸ್ವೀಡಿಷ್, ಗ್ರೀಕ್, ಇಟಾಲಿಯನ್ ಮತ್ತು ಹಂಗೇರಿಯನ್ ಮತ್ತು ಇತರ ಭಾಷೆಗಳಿಗೆ ಅನುವಾದಿಸಲಾಗಿದೆ.

ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ಶಿಗಿತಾಸ್ ಪಾರೂಲ್‌ಶ್ಕಿಸ್-ರವರ ಐದು ಕವನಗಳಲ್ಲಿ ಮೊದಲ ಮೂರು ಕವನಗಳನ್ನು ಮೆಡೆಯ್ನೆ ಟ್ರಿಬಿನೆವಿಚ್ಯಸ್ (Medeinė Tribinevičius) ಹಾಗೂ ನಂತರದ ಎರಡು ಕವನಗಳನ್ನು ಲಯಿಮಾ ವಿನ್ಸ್ ಸ್ರುವೊಜಿನಿಸ್‌ರವರು (Laima Vincë Sruoginis) ಲಿಥುವೇನಿಯನ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿದ್ದಾರೆ.

*****

1
ಖಾಲಿ
ಮೂಲ: Empty

ನನ್ನ ಬೂಟುಗಳು ಖಾಲಿ, ಆಹಾ, ಖಾಲಿ ನನ್ನ ಬೂಟುಗಳು.
ಕಾಣುತ್ತಿವೆ ಚರ್ಮದ ಬಿರುಕುಗಳಲ್ಲಿ ಬಿಳಿಯ ಉಪ್ಪಿನ ಗೆರೆಗಳು.

ಮತ್ತೆ ನನ್ನ ಪ್ಯಾಂಟು, ನನ್ನ ಪ್ಯಾಂಟು ಪೂರ್ತಿ ಖಾಲಿಯಾಗಿದೆ,
ಎಲ್ಲಿದೆ ಗಂಡುತನ, ಎಲ್ಲಿದೆ ಘನತೆ,
ಹೆಂಗಸೊಬ್ಬಳ ಮುಂದೆ ಮಂಡಿಯೂರೆಂದಾಗ
ಪ್ಯಾಂಟಿನ ಕಾಲುಗಳು ತಿರುಚಿಕೊಳ್ಳುತ್ತವೆ,
ಗಾಳಿಯಲ್ಲಿ ತೇಲಿಹೋಗುವ ಮರಳಿನ ಕಂಬಗಳಂತೆ.
ಅವ್ಯಕ್ತ

ಮತ್ತೆ ನನ್ನ ಕೋಟು, ನನ್ನ ಕೋಟು ಪೂರ್ತಿ ಖಾಲಿಯಾಗಿದೆ,
ಜೋಲಾಡುತ್ತಿರುವ ಕೋಟಿನ ಕೈಗಳು
ಬಡಿಯುತ್ತಿವೆ ಒಳ-ಹೊರಗಾದ ಜೇಬುಗಳನ್ನ.
ಏನೂ ಇಲ್ಲ,
ಶುದ್ಧವಾಗಿಯೂ ಏನೂ ಇಲ್ಲ ಅಲ್ಲಿ.

ನನ್ನ ಟೈ ಗಾಳಿಯಲ್ಲಿ ನೇತಾಡುತ್ತಿದೆ,
ಥೂ, ಹಾಳಾದ್ದು, ಥೂ, ನಾನೆಂದೂ ಆ ಟೈಯನ್ನು
ಕಟ್ಟಿಕೊಳ್ಳಲೇ ಇಲ್ಲ, ನನ್ನದೇ ಯೋಚನೆಗಳು
ಸಾಕಾಗಿತ್ತು ನನಗೆ ನನ್ನ ಕತ್ತು ಹಿಸುಕಲು.

ಮತ್ತೂ, ಎಲ್ಲಿ ನಾನಿರಬೇಕಾಗಿತ್ತೊ, ಅಲ್ಲಿ –
ಎಲ್ಲ ಖಾಲಿ, ಪೂರ್ತಿಯಾಗಿ ಖಾಲಿಯಾಗಿದೆ.
ಅರಿವೆಗಳು, ಮನೆ, ಹಣ,
ಪುಸ್ತಕಗಳು, ಗೆಳೆಯರು – ನನ್ನ ಎಲ್ಲಾ ಗುರುತುಗಳು
ಚೂರುಚೂರೇ ಅಳಿಸಿಹೋಗಿವೆ.

ನಾನು ಈಗಲೂ ನೊಡಬಲ್ಲೆ, ಒಂದು ಕೊನೆಯ ಅವಕಾಶ
ನನಗೂ ಸಿಗುತ್ತೆ:
ಯಾರೋ ಹಳೆಯ ದಿನಪತ್ರಿಕೆಗಳನ್ನು
ನನ್ನ ಖಾಲಿ ಬೂಟುಗಳ ಒಳಗೆ ತುರುಕುತ್ತಿದ್ದಾರೆ,
ಶವಕಾಯುವಿಕೆಯ ಜಾಗರಣೆಯ ವೇಳೆಯಲ್ಲಿ
ತಮ್ಮ ಆಕಾರ ಕಳೆದುಕೊಳ್ಳದಿರಲಿ ಅಂತ.

ಹಳೆಯ ದಿನಪತ್ರಿಕೆಗಳ ಜತೆಗೆ
ಖಾಲಿಯಾಗಿರುವ ನನ್ನ ನೆನಪುಗಳು.

***

2
ಇಖ್ತಿಸ್*
ಮೂಲ: Ichthys

ಹೊಟೇಲ್ ಕಿಟಕಿಯ ಹತ್ತಿರ ನಿಂತಿದ್ದೆ
ಅಚಾನಕ್ಕಾಗಿ ಬೆಳಕು ಕಡಲಹಕ್ಕಿಯಂತೆ
ಬಂದು ಜೋರಾಗಿ ಗಾಜಿಗೆ ಅಪ್ಪಳಿಸಿತು
ಅಗಲವಾಗಿ ತೆರೆದ ಕೊಕ್ಕು
ನಾನೊಂದು ಕೊಳೆತ ಮೀನಿನ
ತುಂಡೋ ಎಂಬಂತೆ

*ಗ್ರೀಕ್ ಭಾಷೆಯಲ್ಲಿ ಮೀನಿಗೆ ‘ಇಖ್ತಿಸ್’ ಅಂತಾರೆ. ಮೊದಲ ಶತಮಾನದಷ್ಟು ಹಿಂದೆಯೇ, ಕ್ರಿಶ್ಚಿಯನ್ನರು ಈ ಪದದಿಂದ ಒಂದು ಅಕ್ರೋಸ್ಟಿಕ್- ಅನ್ನು (ಪ್ರಥಮಾಕ್ಷರಿ) ಮಾಡಿದರು: “ಇಸೌಸ್ ಕ್ರಿಸ್ಟೋಸ್ ಥಿಯೋ ಯಿಯೋಸ್ ಸೋಟರ್,” [Iesous Christos Theou Yios Soter] ಅಂದರೆ “ಯೇಸು ಕ್ರಿಸ್ತ, ದೇವರ ಮಗ, ಸಂರಕ್ಷಕ.” ಮೀನುಗಳ ಸಂಕೇತ ಸಾಕಷ್ಟು ಸಲ ಬೈಬಲ್-ನಲ್ಲಿ ಕಂಡುಬರುತ್ತೆ. ಏಸು ಕ್ರಿಸ್ತನು, ಮಾತ್ರ ಎರಡು ಮೀನುಗಳು ಮತ್ತು ಐದು ರೊಟ್ಟಿಗಳನ್ನು ಉಪಯೋಗಿಸಿ 5,000 ಜನರಿಗೆ ಊಟ ತಿನಿಸಿದನು. ತನ್ನ ಶಿಷ್ಯರನ್ನು “ಮೀನುಗಾರರು” ಎಂದು ಕರೆದನು. ಆರಂಭಿಕ ಚರ್ಚಿನಲ್ಲಿ ನಿಮಜ್ಜನೆಯ ಮೂಲಕ ಮಾಡುತ್ತಿದ್ದ ‘ನೀರಿನ ಬ್ಯಾಪ್ಟಿಸಮ್’ ಮೀನು ಮತ್ತು ಮತಾಂತರದ ನಡುವೆ ಸಮಾನಾಂತರವನ್ನು ಸ್ಥಾಪಿಸಿತು. ಎರಡನೇ ಶತಮಾನದ ದೇವತಾಶಾಸ್ತ್ರಜ್ಞ ಟೆರ್ಟುಲಿಯನ್ ಈ ರೀತಿ ಹೇಳಿದ್ದಾನೆ: “ನಾವು, ಚಿಕ್ಕ ಮೀನುಗಳು, ನಮ್ಮ ಮೀನು ಇಖ್ತಿಸ್, ಏಸು ಕ್ರಿಸ್ತನ ಪ್ರತಿಮೆಯ ಹಾಗೆ ನೀರಿನಲ್ಲಿ ಜನಿಸುತ್ತೇವೆ.”

ಮೀನು, ಶಿಲುಬೆಯ ಚಿಹ್ನೆಗಿಂತ ಭಿನ್ನವಾಗಿತ್ತು, ಆದ್ದರಿಂದ ಅನುಮಾನ ಬರುತ್ತಿರಲಿಲ್ಲ. ಹಾಗಾಗಿ, ಆದ್ಯ ಕ್ರೈಸ್ತ ವಿಶ್ವಾಸಿಗಳಿಗೆ ಇದೊಂದು ರಹಸ್ಯ ಸಂಕೇತವಾಗಿತ್ತು. ಕ್ರಿಸ್ತನ ನಂತರದ ಮೊದಲ ಶತಮಾನಗಳಲ್ಲಿ ರೋಮನ್ನರು ಬೆದರಿಕೆ ಹಾಕಿದಾಗ, ಕ್ರೈಸ್ತರು ಮೀನಿನ ಗುರುತನ್ನು ಸಭೆಯ ಸ್ಥಳಗಳಲ್ಲಿ, ಸಮಾಧಿಗಳಲ್ಲಿ ಅಥವಾ ಶತ್ರುಗಳಿಂದ ಸ್ನೇಹಿತರನ್ನು ಪ್ರತ್ಯೇಕಿಸಲು ಬಳಸುತ್ತಿದ್ದರು. ಒಂದು ಪುರಾತನ ಕಥೆಯ ಪ್ರಕಾರ, ಒಬ್ಬ ಕ್ರಿಶ್ಚಿಯನ್ ರಸ್ತೆಯಲ್ಲಿ ಅಪರಿಚಿತರನ್ನು ಭೇಟಿಯಾದಾಗ, ಅವನು ಮಣ್ಣಿನಲ್ಲಿ ಸರಳವಾದ ಮೀನಿನ ಬಾಹ್ಯರೇಖೆಯ ಒಂದು ಚಾಪವನ್ನು ಸೆಳೆಯುತ್ತಾನೆ. ಅಪರಿಚಿತರು ಇತರ ಚಾಪವನ್ನು ಎಳೆದರೆ, ಇಬ್ಬರೂ ವಿಶ್ವಾಸಿಗಳು, ತಾವು ಒಂದೇ ಜನರು ಎಂದು ತಿಳಿದುಕೊಳ್ಳುತ್ತಿದ್ದರು.

***

3
ಗೋಡೆ
ಮೂಲ: The Wall

ಪ್ರತಿ ದಿನ ಬೆಳಗ್ಗೆ ನಾನು ಪಕ್ಕದಲ್ಲಿದ್ದ
ಚರ್ಚಿನ ಸ್ಮಶಾನಕ್ಕೆ ಹೋಗುತ್ತಿದ್ದೆ,
ಹಿಂದಿನ ರಾತ್ರಿ ಸಂಕಲಿಸಿದ,
ನನ್ನ ಬಾಯಲ್ಲಿ ಮತ್ತು ನನ್ನ ದೇಹದಲ್ಲಿ
ಆತ್ಮ ಸುಪ್ತವಾಗಿ ಮಲಗಿರುವ ಜಾಗವೆಂಬಲ್ಲಿ
ಸೇರಿಕೊಂಡ ಕನಸಿನ ಚೂರುಗಳನ್ನ,
ಗಬ್ಬು ವಾಸನೆಗಳನ್ನ ಚೆಲ್ಲಲು ಹೋಗುತ್ತಿದ್ದೆ.

ಅದೊಂದು ವಿಚಿತ್ರವಾದ ಸ್ಮಶಾನ –
ಕ್ಯಾಥಲಿಕರು, ದೇವರಿಲ್ಲದವರು,
ಮತ್ತು ಸಂಪ್ರದಾಯಸ್ಥರು,
ಇವರೆಲ್ಲರೂ ಒಂದು ಕಡೆ ಕಲೆತರು
ಇನ್ನೊಂದು ಕಡೆ – ಯಹೂದ್ಯರು ಮಾತ್ರ,
ಗೋರಿಕಲ್ಲುಗಳ ಮೇಲೆ ಬರೆದಿರುವುದನ್ನು ಓದಿದಾಗ
ಅವರಿಗೆ ‘ತೋರಾ’ನೇ ಅವರ ಜೀವನದ ಅತಿ ಮುಖ್ಯ
ಗ್ರಂಥವೆಂಬ ಮಾತನ್ನು ನಂಬುವುದು ಕಷ್ಟವಾಗುತ್ತೆ.

ಒಂದು ದಿನ ವಿಕಾರವಾದ ಕಾಂಕ್ರೀಟ್ ಗೋಡೆಯೊಂದನ್ನು
ನಡುವೆ ಕಟ್ಟಿ ಸ್ಮಶಾನವನ್ನು ಇಬ್ಭಾಗ ಮಾಡಲಾಯಿತು.

ಸ್ಮಶಾನಗಳಿಗೆ ಹೋಗುವುದ ಇಷ್ಟಪಡುತ್ತಿದ್ದೆ –
ಸಾವಿನ ಭಯ ಅದನ್ನು ಇನ್ನೂ ಹತ್ತಿರದಿಂದ
ಅರಿತುಕೊಳ್ಳಲು ಪ್ರೇರೇಪಿಸುತ್ತದೆ,
ಓಡಿಹೋಗಲು ಅಲ್ಲ.
ಯಾವಾಗ ಗೋಡೆ ಉದ್ಭವಿಸಿತೊ ನಾನಲ್ಲಿ ಹೋಗುವುದ ನಿಲ್ಲಿಸಿದೆ.

ಒಬ್ಬರೊಬ್ಬರ ಕತ್ತು ಹಿಸುಕುವ ಇರುವವರಿಗಿಂತ
ಒಬ್ಬರ ಜತೆ ಒಬ್ಬರು ಮಾತಾಡದ ಮೃತರೇ
ಹೆಚ್ಚು ಆಘಾತಕರ.

***

4
ಹಲ್ಲಿನ ಹುಟ್ಟು
ಮೂಲ: The Genesis of Teeth

ಅಪ್ಪ ದೇವರ ಹಾಗೆ ಬಂದ,
ಹೊಲಗಳ ಮಧ್ಯದಿಂದ,
ನೆಲವ ತುಳಿಯೋಣ ಮಗ, ಅಂತಂದ.

ನಾವು ತುಳಿದೆವು, ತುಳಿದೆವು,
ನೆತ್ತರು ಹರಿಯಿತು,
ನಾವು ಬೆವರ ಒರೆಸಿಕೊಂಡೆವು,
ನಾವು ಕಾಳುಗಳ ಬಿತ್ತಿದೆವು.

ಒಂದು ಮರ ಬೆಳೆಯಿತು,
ಬೆಳೆದು ಮರಗಟ್ಟಿತ್ತು,
ಓ, ಮತ್ತೆ ಆ ಮರದಲ್ಲಿ ಅಮ್ಮ ಕೂತಳು.

ಅಪ್ಪ ಅಮ್ಮನನ್ನು ಮರದಿಂದ ಕಿತ್ತಿದ,
ನನ್ನನ್ನು ಮೇಲೆತ್ತಿದ.

ನೆಲ ಮೇಲೆಕ್ಕೆದ್ದಿತು ಕೋಪದಿಂದ,
ಮಗನನ್ನು ಒದ್ದಿತು,
ಮರ ಒಡೆಯಿತು.

ಅಪ್ಪ ದೇವರ ಹಾಗೆ ಬೊಬ್ಬಿಟ್ಟ,
‘ಮರ ಬಿದ್ದುಬಿಟ್ಟಿದೆ,’
ಅಮ್ಮ ಮರವನ್ನು ಹೊದೆದಳು.

ಅಮ್ಮ ಹೊರಟು ಹೋದಳು,
ಅಪ್ಪ ಮರವನ್ನು ಖಾಲಿ ಹೊಲಗಳ
ಮಧ್ಯೆ ಎಳೆದುಕೊಂಡು ಹೋದ.

ನಾನು ಲಾಳಾಕಾರದ ಮರದ ಮೋಟಿನ ಮೇಲೆ ಕೂರುವೆ,
ನನ್ನ ಹಲ್ಲುಗಳು ಉದುರುತ್ತವೆ,
ನಾನು ನನ್ನ ಹಲ್ಲುಗಳ ಬಿತ್ತುವೆ.

***

4
ನನ್ನ ಮುಖವ ಅಳೆಯುವೆನು
ಮೂಲ: Measuring my Face

ನನ್ನ ಸೂಟು ಚೆನ್ನಾಗಿದೆ
ಸುಖಕರವಾಗಿದೆ
ನನ್ನ ಒಳ್ಳೆ ಉಣ್ಣೆಯ ಸೂಟು

ನನ್ನ ದೇವರಿಗೆ ಬೆಚ್ಚಗಿನ ಮನೆಯಿದೆ
ನನ್ನ ಅಪ್ಪನಿಗೆ
ನನ್ನ ಮನೆಯಿಲ್ಲ

ನನ್ನ ದನಿ ಸ್ಥಿರವಾಗಿದೆ
ನನ್ನ ಹೆಜ್ಜೆಗಳು ಪ್ರತಿ ಕ್ಷಣವನ್ನು
ಅಳೆಯುತ್ತವೆ

ನನ್ನ ಕೆನ್ನೆ ತಣ್ಣಗಿದೆ
ಗೇಟಿಗೆ ಮುಷ್ಠಿ-ಗುದ್ದಿದ ನೆಗ್ಗು ಕೂಡ
ನನಗೆ ಹಿಡಿಸಿದೆ

ನನ್ನ ಅಪ್ಪನ ಹತ್ತಿರ ಕೊಡಲಿ ಇಲ್ಲ
ನನ್ನ ಕೊಡಲಿ ನನ್ನ ಮುಖದಲ್ಲಿ ನೆಟ್ಟಿದೆ

ನನ್ನವಳು ಅಂದವಾಗಿ ಬಟ್ಟೆತೊಟ್ಟಿದ್ದಾಳೆ
ನನ್ನವಳು ಪೀಡಿಸುತ್ತಾಳೆ
ನನ್ನ ಹೃದಯದಲ್ಲಿ ನನ್ನ

ನನ್ನ ದೇವರಿಗೆ ತಾಯಿ ಇದ್ದಾಳೆ ನನ್ನ
ಅಪ್ಪನಿಗೆ ತಾಯಿ ಇಲ್ಲ ನನ್ನ

ಒಳ್ಳೆಯ ನಡತೆಗೂ ನನ್ನ ಕಷ್ಟಗಳಿಗೂ
ಹೊಂದಾಣಿಕೆಯಿಲ್ಲ ನನ್ನ ಮುಖವಿರಬೇಕು
ಹಿತವಾಗಿ ಶಾಂತವಾಗಿ
ಉದಾತ್ತವಾಗಿ

ನನ್ನ ದೇವರ ಮುಖ ಯೌವನಭರಿತ
ಆಕರ್ಷಕ ನನ್ನ
ಅಪ್ಪನ ಮುಖ ಮುಪ್ಪಾಗಿದೆ
ಸೊರಗಿದೆ ನನ್ನ

ನನ್ನ ಮುಖದಲ್ಲಿ ಒಂದು ಹಲ್ಲು
ಒಂದು ಕಣ್ಣು ಒಂದು ನಾಲಗೆ
ಬಿದ್ದು ಹೋಗಿವೆ ಯಾಕೆ
ಬೇಕು ನನಗೆ ಇಂತಹ ಮುಖ
ನಾನು ಕೂಡಲೆ ಎಲ್ಲಾ ಹಣ
ಸಂದಾಯ ಮಾಡುತ್ತೇನೆ

ನನ್ನ ಮುಖ
ನನ್ನ ಹಾಗೆ ಕಾಣಬೇಕು ನಾನು
ನನ್ನ ಮುಖದ ಹಾಗೆ ಕಾಣಿಸಲ್ಲ

ನನ್ನ ದೇವರಿಗೆ ನನ್ನ
ಮುಖವಿಲ್ಲ
ಅಪ್ಪನಿಗೆ ನನ್ನ ಮುಖವಿದೆ
ನನಗಿಲ್ಲ