ನಮ್ಮ ಎದುರು ರಸ್ತೆಯ ಎಚ್ ಎಂ ಟಿ ಕೆಲಸಗಾರ ಗೋಪಾಲರಾವ್ ಎನ್ನುವವರು ಕೊಂಚ ಮೈ ಬಿಸಿ, ಜರ ಬಂದಿದೆ ಎಂದು ವೈದ್ಯರಿಗೆ ತೋರಿಸಲು ಹೋದರು. ವೈದ್ಯರು ಚಿಕಿತ್ಸೆ ನೀಡಬೇಕಾದರೆ ಅಂದರೆ ಇಂಜೆಕ್ಷನ್ ಕೊಟ್ಟಾಗ ಅವರ ಜೀವ ಹೋಯಿತು. ವೈದ್ಯರ ನಿರ್ಲಕ್ಷ್ಯ ಎಂದು ಕಾರ್ಮಿಕರು ಕೋಪಾವೇಶಗೊಂಡರು. ಈ ಎಸ್ ಐ ಆಸ್ಪತ್ರೆ ಮುಂದೆ ಕಾರ್ಮಿಕ ಸಾಗರ ನೆರೆಯಿತು ಮತ್ತು ಪರಿಸ್ಥಿತಿ ವಿಕೋಪಕ್ಕೆ ಹೋಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂರನೇ ಕಂತು ನಿಮ್ಮ ಓದಿಗೆ
ಹೋದ ಎಪಿಸೋಡು ರಾಜಾಜಿನಗರದ ಹೆಸರು, ರಾಜಾಜಿ ಹಾಗೂ ಅವರ ನಮ್ಮೂರಿನ ಸ್ನೇಹಿತರ ಬಗ್ಗೆ ಹೇಳಿದೆ ಅಲ್ಲವೇ. ಡಿ ವಿ ಜಿ, ನವರತ್ನ ರಾಮರಾಯರು, ಪಾಂಚಾಲಿ ಪತ್ರಿಕೆ, ಲಂಕೇಶ್ ಮತ್ತು ಕನ್ನಡ ಸಾಹಿತ್ಯದ ಕಳೆದ ಶತಮಾನದ ಒಂದು ಮಹತ್ವದ ಮಜಲನ್ನು ಸಹ ನೆನಪಿಸಿಕೊಂಡೆವು….
ಈಗ ಮುಂದಕ್ಕೆ….
ಮೊದಲ ಸಾವು
ಇ ಎಸ್ ಐ ಆಸ್ಪತ್ರೆ ಇದ್ದ ಜಾಗ ಬಯಲು ಆಗ. ಅದರ ಹಿಂಭಾಗದಲ್ಲಿ ಒಂದು ಪುಟ್ಟ ಕಟ್ಟಡದಲ್ಲಿ ಇ ಎಸ್ ಐ ನ ಪುಟ್ಟ ಆಸ್ಪತ್ರೆ ಇತ್ತು. ಅದಕ್ಕೆ ಮೊದಲು ಆಸ್ಪತ್ರೆ ಮೂರನೇ ಬ್ಲಾಕಿನ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಇತ್ತು. ಎಚ್ ಎಂ ಟಿ ಕೆಲಸಗಾರರಿಗೆ ಎಂದೇ ಎಚ್ ಎಂ ಟಿ ಆಡಳಿತ ವರ್ಗ ನಾಲ್ಕನೇ ಬ್ಲಾಕ್‌ನ ಕ್ವಾರ್ಟರ್ಸ್‌ನಲ್ಲಿ ಒಂದು ಆಸ್ಪತ್ರೆ (ಅಂದರೆ out patient unit) ನಡೆಸುತ್ತಿತ್ತು. ಅಲ್ಲಿಗೆ ಜಾಲಹಳ್ಳಿಯ ಕಾರ್ಖಾನೆಯಿಂದ ಒಬ್ಬರು ವೈದ್ಯರು ಮಧ್ಯಾಹ್ನದ ವೇಳೆ ಬರುತ್ತಿದ್ದರು. ಒಬ್ಬ ಕಾಂಪೌಂಡರ್ ಕೆಮ್ಮು ನೆಗಡಿ ಜ್ವರಕ್ಕೆ ಔಷಧಿಗಳನ್ನು ದೊಡ್ಡದೊಡ್ಡ ಬಾಟಲಿಯಲ್ಲಿ ತಯಾರಿಸಿ ಇಟ್ಟುಕೊಂಡು ರೋಗಿಗಳಿಗೆ ಕೊಡುತ್ತಿದ್ದರು. ಅಮೆರಿಕದಿಂದ ಬರುತ್ತಿದ್ದ ಹಾಲಿನ ಪುಡಿಯಿಂದ ಹಾಲು ತಯಾರಿಸಿ ಮಕ್ಕಳಿಗೆ ಬೆಳಗಿನ ಹೊತ್ತು ಹಂಚುತ್ತಿದ್ದರು. ಇದು ಅರವತ್ತರ ದಶಕದಲ್ಲಿ. ಈ ಹಾಲು ಕುಡಿಯಲು ಆಗ ದೂರದ ಪ್ರದೇಶ ಅನಿಸಿದ ಎಂಟ್ರೆನ್ಸ್‌ನಿಂದ ಸಹ ಹುಡುಗರು ಬರುತ್ತಿದ್ದರು. ಕಳೆದ ವರ್ಷ ಭೇಟಿ ಆದ ಗೆಳೆಯ ಮುರಳಿ, ಇಲ್ಲಿನ ಹಾಲು ಕುಡಿಯಲು ಬರ್ತಿದ್ದೆ ಅಂತ ನೆನೆಸಿಕೊಂಡ. ಎಷ್ಟೋ ವರ್ಷಗಳ ನಂತರ ಇದು ಪೀ ಎಲ್ 480 ರ ಅನುದಾನ ಅಂತ ಕೇಳಿದ್ದೆ. ಬಡ ದೇಶಗಳಿಗೆ ನೀಡುವ ಸಹಾಯದ ಬಗ್ಗೆ ಕಾನೂನುಗಳನ್ನ ಪೀ ಎಲ್ 480 (ಪಬ್ಲಿಕ್ ಲಾ 480) ಅಡಿ ರೂಪಿಸಲಾಗಿತ್ತು. ಅದೂ ಎಂತಹ ಸಹಾಯ ಅಂದರೆ ಸಾಗಾಣಿಕೆ ವೆಚ್ಚ ಕೊಂಚ ಕಡಿಮೆ ಮತ್ತು ಡಾಲರ್ ರೂಪದಲ್ಲಿ ಬಡ ರಾಷ್ಟ್ರಗಳು ಹಣ ಪಾವತಿಸಬೇಕು! ಬೇರೆ ದಾರಿ ಮತ್ತು ಗತಿ ಇಲ್ಲದೆ ಅದಕ್ಕೆ ಒಪ್ಪಿದರು ಅಂತ ಕಾಣುತ್ತೆ. ಅಮೆರಿಕದವರು ಭಾರತಕ್ಕೆ ಹಾಗೂ ಇತರ ಬಡದೇಶಗಳಿಗೆ ನೆರವಾಗಲು ಈ ಪೀ ಎಲ್ 480 ಯೋಜನೆ ರೂಪಿಸಿದ್ದರು ಮತ್ತು ಈ ಯೋಜನೆ ಮೂಲಕ ಭಾರತದಲ್ಲಿ ತಮ್ಮ ಬೇಹುಗಾರಿಕೆ ಬಲ ಪಡಿಸಿದರು ಎಂದು ನಂತರ ಪ್ರಚಾರ ಆಗಿತ್ತು. ಅಂತರ್ರಾಷ್ಟ್ರೀಯವಾಗಿಯೂ ಬೇಹುಗಾರಿಕೆ ಜಾಲ ವಿಸ್ತರಿಸಿಕೊಂಡರು ಎಂದು ಆಗಿನ ವಿರೋಧ ಪಕ್ಷಗಳು ಹೇಳಿದ್ದವು. ಹಾಲಿನ ಪುಡಿ ನಮ್ಮ ದೇಶಕ್ಕೆ ಬಂದ ನಂತರ ಹೇರಳವಾಗಿ ಎಲ್ಲೆಂದರಲ್ಲಿ ಪಾರ್ಥೇನಿಯಂ ಗಿಡಗಳು ಹರಡಿದ್ದವು. ಅಲ್ಲಿಯವರೆಗೆ ಪಾರ್ಥೇನಿಯಂ ಗಿಡ ಭಾರತದಲ್ಲಿ ಕಾಣಿಸಿರಲಿಲ್ಲ. ಪೀ ಎಲ್ 480ರ ಮೂಲಕವೇ ಭಾರತಕ್ಕೆ ಪಾರ್ಥೇನಿಯಂ ಗಿಡಗಳನ್ನು ಅಮೆರಿಕದವರು ರವಾನಿಸಿದರು ಎಂದು ಮುಂದೆ ರಾಜಕೀಯ ಭಾಷಣಗಳೂ ಆದವು.
ತೀರಾ ಇತ್ತೀಚೆಗೆ ಆ ಗಿಡಗಳು ಅಷ್ಟಾಗಿ ಕಾಣುತ್ತಿಲ್ಲ. ಖಾಲಿ ಜಾಗ ಇದ್ದರೆ ತಾನೇ ಅವು ಬೆಳೆಯೋದು..? ನಗರಗಳು ಸಿಮೆಂಟ್ ಕಾಂಕ್ರೀಟು ಆದರೆ ಇದೊಂದು ಪ್ರಯೋಜನ ಇದೆ! ಪಾರ್ಥೇನಿಯಂ ನಶಿಸುತ್ತದೆ. ಇದು ನಮ್ಮ ಸೋಷಿಯಲ್ ತಿಂಕರ್ಸ್ ಆಳವಾಗಿ ಅಭ್ಯಸಿಸಬೇಕಾದ ಸಂಗತಿ! ಇ ಎಸ್ಐ ಆಸ್ಪತ್ರೆ ಒಂದೇ ಇಡೀ ರಾಜಾಜಿನಗರದ ಕಾರ್ಮಿಕ ಲೋಕದ ಆಸ್ಪತ್ರೆ ಆಗ. ನಂತರ ದೊಡ್ಡ ಇ ಎಸ್ ಐ ಆಸ್ಪತ್ರೆ ಕಟ್ಟಡ ಶುರು ಆಗಿ ಆಸ್ಪತ್ರೆ ಅಲ್ಲಿಗೆ ಶಿಫ್ಟ್ ಆಯಿತು. ಈಗ ಇ ಎಸ್ ಐ ಆಸ್ಪತ್ರೆ ಹೈಟೆಕ್ ಆಗಿದೆ. ನಗರದ ಅತಿ ದುಬಾರಿ ಚಿಕಿತ್ಸೆಗಳು ಕಾರ್ಮಿಕರಿಗೆ ಉಚಿತವಾಗಿ ದೊರೆಯುತ್ತಿದೆ. ಮೊದಲು ಅಂದರೆ ಇಪ್ಪತ್ತು ವರ್ಷಗಳ ಹಿಂದೆ ಬಡ ಕಾರ್ಮಿಕ ಯೋಚಿಸಲೂ ಆಗದ ಚಿಕಿತ್ಸೆಗಳು ಸಿಗುತ್ತಿವೆ. ಇದು ಬೆಳವಣಿಗೆ ಅಂದರೆ ಅಂತ ನನ್ನ ಗೆಳೆಯರು ವರ್ಣಿಸುತ್ತಾರೆ! ಹೌದು ಅಲ್ಲವೇ….
ಇ ಎಸ್ ಐ ಆಸ್ಪತ್ರೆಯಲ್ಲಿ ಘಟಿಸಿದ ಒಂದು ಘಟನೆ ಅದು ಯಾಕೋ ನನ್ನ ಮನಸ್ಸಿನಲ್ಲಿ ಆಳವಾಗಿ ಕೂತುಬಿಟ್ಟಿದೆ. ನಮ್ಮ ಎದುರು ರಸ್ತೆಯ ಎಚ್ ಎಂ ಟಿ ಕೆಲಸಗಾರ ಗೋಪಾಲರಾವ್ ಎನ್ನುವವರು ಕೊಂಚ ಮೈ ಬಿಸಿ, ಜರ ಬಂದಿದೆ ಎಂದು ವೈದ್ಯರಿಗೆ ತೋರಿಸಲು ಹೋದರು. ವೈದ್ಯರು ಚಿಕಿತ್ಸೆ ನೀಡಬೇಕಾದರೆ ಅಂದರೆ ಇಂಜೆಕ್ಷನ್ ಕೊಟ್ಟಾಗ ಅವರ ಜೀವ ಹೋಯಿತು. ವೈದ್ಯರ ನಿರ್ಲಕ್ಷ್ಯ ಎಂದು ಕಾರ್ಮಿಕರು ಕೋಪಾವೇಶಗೊಂಡರು. ಈ ಎಸ್ ಐ ಆಸ್ಪತ್ರೆ ಮುಂದೆ ಕಾರ್ಮಿಕ ಸಾಗರ ನೆರೆಯಿತು ಮತ್ತು ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಆಗ ಎಚ್ ಎಂ ಟಿ ಸಂಸ್ಥೆಯಲ್ಲಿ ಕಾರ್ಮಿಕ ನಾಯಕರಾಗಿದ್ದವರು ಶ್ರೀ ಎಂ ಎಸ್ ಕೃಷ್ಣನ್ ಅವರು. ಸಿಪಿಐ ಕಮ್ಯುನಿಸ್ಟ್ ನಾಯಕ, ಕಾರ್ಮಿಕರ ಅಚ್ಚು ಮೆಚ್ಚು ಹಾಗೂ ಮುಂದೆ ಎಂ ಎಲ್ ಎ ಸಹ ಆದವರು. ಮುಂದೆ ಕಮ್ಯುನಿಸ್ಟ್ ಪಾಲಿಟ್ ಬ್ಯುರೋದಲ್ಲಿ ಉನ್ನತ ಹುದ್ದೆ ಹೊಂದಿದರು. ಅವರು ಓಡೋಡಿ ಬಂದರು. ಉದ್ರಿಕ್ತ ಗುಂಪಿನ ಕೋಪ ಶಮನ ಮಾಡಿದರು, ಮೃತನ ಶವ ಸಂಸ್ಕಾರಕ್ಕೆ ಹೆಗಲು ಕೊಟ್ಟರು. ಪೆನ್ಸಿಲಿನ್ ಇಂಜೆಕ್ಷನ್ ಟೆಸ್ಟ್ ಡೋಸ್ ಕೊಡದೇ ನೇರ ಚುಚ್ಚಿದ್ದು ಸಾವಿಗೆ ಕಾರಣ ಎಂದು ಎಷ್ಟೋ ದಿವಸ ಆದಮೇಲೆ ವರದಿ ಬಂದಿತಂತೆ.. ಬಹುಶಃ ಇದು ನಾನು ಕಣ್ಣಾರೆ ಕಂಡ ಮೊದಲ ಸಾವು ಆ ಕಾಲೋನಿಯಲ್ಲಿ. ಎಂ ಎಸ್ ಕೃಷ್ಣನ್ ಮುಂದೆ ದೊಡ್ಡ ನಾಯಕರಾಗಿದ್ದು ಈಗ ಇತಿಹಾಸ. ಅವರ ಪಿತ್ರಾರ್ಜಿತ ಆಸ್ತಿಯನ್ನು ಒಂದು ಕಲ್ಯಾಣ ಮಂಟಪ ಕಟ್ಟಲು ದಾನ ಮಾಡಿದರು ಎಂದು ಕೇಳಿದ್ದೆ. ನಾನು ಕೆಲಸಕ್ಕೆ ಸೇರಿದಾಗ ಅವರು ನಮ್ಮ ಕಾರ್ಖಾನೆಯ ಟ್ರೇಡ್ ಯೂನಿಯನ್ ನಾಯಕರು. ಇವರ ಬಗ್ಗೆ ಎಲ್ಲರಿಗೂ ಪ್ರೀತಿ. ಇದರ ಬಗ್ಗೆ ಮುಂದೆ ಇನ್ನೂ ವಿವರವಾಗಿ ಹೇಳುತ್ತೇನೆ.
ಅಮೆರಿಕದವರು ಭಾರತಕ್ಕೆ ಹಾಗೂ ಇತರ ಬಡದೇಶಗಳಿಗೆ ನೆರವಾಗಲು ಈ ಪೀ ಎಲ್ 480 ಯೋಜನೆ ರೂಪಿಸಿದ್ದರು ಮತ್ತು ಈ ಯೋಜನೆ ಮೂಲಕ ಭಾರತದಲ್ಲಿ ತಮ್ಮ ಬೇಹುಗಾರಿಕೆ ಬಲ ಪಡಿಸಿದರು ಎಂದು ನಂತರ ಪ್ರಚಾರ ಆಗಿತ್ತು. ಅಂತರ್ರಾಷ್ಟ್ರೀಯವಾಗಿಯೂ ಬೇಹುಗಾರಿಕೆ ಜಾಲ ವಿಸ್ತರಿಸಿಕೊಂಡರು ಎಂದು ಆಗಿನ ವಿರೋಧ ಪಕ್ಷಗಳು ಹೇಳಿದ್ದವು.
ಅದೇ ಸಮಯದಲ್ಲಿ ಒಂದು ಯುವ ಪೀಳಿಗೆ ಸದ್ದಿಲ್ಲದೆ ಬೆಳೆಯುತ್ತಿತ್ತು ಮತ್ತು ಅದರ ನಾಯಕನಾಗಿ ವೈ.ಎಸ್.ವಿ. ದತ್ತ ರೂಪುಗೊಳ್ಳುತ್ತಿದ್ದರು. ದತ್ತ ಅವರ ಮನೆ ನಮ್ಮ ರಸ್ತೆಯಲ್ಲೇ ಎರಡು ಮನೆಗಳಾದ ಮೇಲೆ ಇದ್ದದ್ದು. ದತ್ತನ ಅಣ್ಣ ವೈ. ಎಸ್. ಶಿವಸ್ವಾಮಿ ನಮ್ಮ ಎರಡನೇ ಅಣ್ಣ ರಾಜುವಿನ ಜತೆ. ಇಬ್ಬರಿಗೂ ಸಮಾನ ಸಾಹಿತ್ಯಾಸಕ್ತಿ. ಇಬ್ಬರೂ ಪುಸ್ತಕ ವಿಲೇವಾರಿ ಮಾಡಿಕೊಳ್ಳುತ್ತಿದ್ದರು. ಹೆಚ್ಚಾಗಿ ಎನ್. ನರಸಿಂಹಯ್ಯ, ಅ ನ ಕೃ, ತರಾಸು ಅವರು ಬರೆದಿರೋದು. ಆಗಿನ್ನೂ ಬೈರಪ್ಪ, ಅನಂತಮೂರ್ತಿ, ಲಂಕೇಶ್, ತೇಜಸ್ವಿ ಅವರುಗಳು ಅಷ್ಟು ಖ್ಯಾತರಾಗಿರಲಿಲ್ಲ. ಮನೆಗೆ ಹಲವು ಪುಸ್ತಕಗಳ ಜತೆಗೆ ಅಪ್ಪ ಅಮ್ಮನಿಗಾಗಿ ಕೊರವಂಜಿ ತರುತ್ತಿದ್ದರು. ನಮ್ಮ ಮನೆಯ ಎಲ್ಲರೂ ಪುಸ್ತಕ ಓದುತ್ತಿದ್ದರು. ಇನ್ನೂ ಪ್ರಕಟ ಆಗುತ್ತಿದ್ದ ಕೊರವಂಜಿಯ ಸಂಚಿಕೆಗಳನ್ನು ತಲಾ ಹನ್ನೆರೆಡರಂತೆ ನಮ್ಮ ಅಪ್ಪ ಬೈಂಡ್ ಮಾಡಿಸಿ ಇಟ್ಟಿದ್ದರು. ಅದೇ ರೀತಿ ಚಂದಮಾಮ ಸಹ. ಅವು ಹತ್ತೋ ಹದಿನೈದೋ ಇದ್ದ ನೆನಪು. ಇದೂ ಸಹ ಆಗಾಗ ಶಿವಸ್ವಾಮಿ ಸೇರಿದ ಹಾಗೆ ನಮ್ಮ ಪರಿಚಯದ ನಮ್ಮ ರಸ್ತೆಯ ಹಲವರ ಓದಿನ ಭಾಗವಾಗಿತ್ತು. ನನ್ನ ಅಣ್ಣಂದಿರು ರಸ್ತೆಯಲ್ಲೇ ಪುಸ್ತಕ ಓದುತ್ತಾ ಹೋಗುತ್ತಿದ್ದದ್ದನ್ನು ನನ್ನ ಗೆಳೆಯ ಮೊನ್ನೆ ನೆನೆಸಿಕೊಂಡ. ಆಗಾಗ ನಾನೂ ಸಹ ನರಸಿಂಹಯ್ಯ, ಅನಕೃ, ತರಾಸು ಮುಂತಾದವರ ಪುಸ್ತಕ ಓದುತ್ತಿದ್ದೆ. ಕೊರವಂಜಿ, ಚಂದಮಾಮ ಓದುತ್ತಿದ್ದೆ, ಕೆಲವು ಸಲ ಕೊರವಂಜಿಯ ಲೇಖನ (ಮುಖ್ಯವಾಗಿ ಅ ರಾ ಸೇ ಅವರದ್ದು) ಅರ್ಥ ಆಗುತ್ತಿರಲಿಲ್ಲ. ಅಮ್ಮ, ಅಣ್ಣಂದಿರು ಗೊತ್ತಾಗದ್ದನ್ನು ವಿವರಿಸುತ್ತಿದ್ದರು.
ದತ್ತನ ಅಣ್ಣ ಶಿವಸ್ವಾಮಿ ಅವರಿಗೆ ಖಾದಿ ಬೋರ್ಡ್‌ನಲ್ಲಿ ಕೆಲಸ. ಕೆಲವು ವರ್ಷಗಳ ಹಿಂದೆ ದೇವರ ಪಾದ ಸೇರಿದರು. ದತ್ತ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಮುಗಿಸಿ ನಂತರ ಸ್ನಾತಕೋತ್ತರ ಪದವಿ (ಎಂಎಸ್ಸಿ) ಪಡೆದಿದ್ದರು. ಡಾ. ಎಚ್ಚೆನ್ ಅವರ ಮೆಚ್ಚಿನ ಶಿಷ್ಯ ಅಂತ ಎಲ್ಲರೂ ಮೆಚ್ಚುತ್ತಿದ್ದ ವ್ಯಕ್ತಿ. ಡಾ. ಎಚ್ಚೆನ್ ಅವರು ವಾಚಕರ ವಾಣಿಗೆ ಆಗ ಹೇರಳವಾಗಿ ಪತ್ರ ಬರೆಯುತ್ತಿದ್ದರು. ಆ ಪತ್ರಗಳು ಇವರ ಬಿಕ್ಕಲಂ ಎಂದು ಕೇಳಿದ್ದೆ. ಒಂದು ಟುಟೋರಿಯಲ್ ನಡೆಸುತ್ತಿದ್ದ ದತ್ತನ ಹಿಂದೆ ಹದಿನಾರು ಇಪ್ಪತ್ತರ ವಯಸ್ಸಿನ ಯುವಕರ ದೊಡ್ಡ ಹಿಂಡೆ ಇರುತ್ತಿತ್ತು. ಅವರನ್ನು ಸಮಾಜಮುಖಿ ಕಾರ್ಯಗಳಿಗೆ ದತ್ತ ಪ್ರೆರೇಪಿಸುತ್ತಾ ಇದ್ದರು. ದತ್ತನ ಸಂಗಡ ನಾಗರಾಜ ಮೂರ್ತಿ ಸಹ ಇರುತ್ತಿದ್ದರು. ಇದೇ ದತ್ತನೇ ಮುಂದೆ ಎಂ ಎಲ್ ಎ ಆಗಿ ದೇವೇಗೌಡರ ಮುಖವಾಣಿಯಾಗಿ ದೈತ್ಯನಾಗಿ ಬೆಳೆದದ್ದು ಒಂದು ರೋಚಕ ಕತೆ. ತುಂಬಾ ಇತ್ತೀಚೆಗೆ ದತ್ತ ಕುಮಾರವ್ಯಾಸನ ಕುರಿತು ಮಾಡಿದ ಒಂದು ಭಾಷಣ ಕೇಳಿದೆ. ಅದು ಕೇಳಿದ ನಂತರ ಇವರು ರಾಜಕೀಯಕ್ಕೆ ಹೋಗಿದ್ದು ಸಾರಸ್ವತ ಲೋಕದ ನಷ್ಟ ಅನಿಸಿತು. ನಾಗರಾಜ ಮೂರ್ತಿ ನಂತರ ನಾಟಕ ರಂಗದಲ್ಲಿ ಸಕ್ರಿಯ ಹಾಗೂ ಭಾರತ ಯಾತ್ರಾ ಕೇಂದ್ರದ ಸಂಪನ್ಮೂಲ ವ್ಯಕ್ತಿ.
ರಾಜಾಜಿನಗರವನ್ನು ರೈಲ್ವೆ ಸ್ಟೇಶನ್ ಕಡೆಯಿಂದ ಪ್ರವೇಶಿಸಿದರೆ ನೇರ ನಾಲ್ಕನೇ ಬ್ಲಾಕಿಗೆ ಪ್ರವೇಶ. ಮುಂದೆ ಎಡ ಭಾಗದಲ್ಲಿ ಇದ್ದ ದೊಡ್ಡ ಜಾಗದಲ್ಲಿ ರಾಮ್ ಕುಮಾರ್ ಮಿಲ್ಸ್ ತಲೆ ಎತ್ತಿತು. ಈಗ ಅದು ದೊಡ್ಡ ಅಂಗಡಿ ಸಮೂಹಗಳಾಗಿವೆ. ಕೊಂಚ ಮುಂದೆ ಬಂದರೆ ಇನ್ನೊಂದು ದೊಡ್ಡ ಖಾಲಿ ಮೈದಾನ. ಇದು ನಮ್ಮ ಕ್ರಿಕೆಟ್ ಮೈದಾನ, ನಂತರ ಇಲ್ಲೇ ಎಂ ಇ ಐ ಪಾಲಿಟೆಕ್ನಿಕ್ ಬಂದದ್ದು. ಇದಕ್ಕೆ ಮೊದಲು ಬಲಕ್ಕೆ ತಿರುಗಿದರೆ ಅಲ್ಲೇ ಒಂದು ಕಿರು ಮೈದಾನ. ಇದು ನಂತರ ಕುಮಾರವ್ಯಾಸ ಮಂಟಪ ಆಯಿತು. ಅದನ್ನು ದಾಟಿದರೆ ಬಲಕ್ಕೆ ರಾಮಮಂದಿರ, ಅದೇ ರಸ್ತೆ ಮುಂದುವರೆದು ಜೂಗನಹಳ್ಳಿ ಸೇರುತ್ತಿತ್ತು, ನೇರ ಹೋದರೆ ಭಾಷ್ಯಂ ಸರ್ಕಲ್. ಸರ್ಕಲ್ ಎಡಕ್ಕೆ ಐದನೇ ಬ್ಲಾಕ್, ಈಗಿನ ಪ್ರಸನ್ನ ಟಾಕೀಸ್‌ಗೆ ರಸ್ತೆ. ಭಾಷ್ಯಂ ಸರ್ಕಲ್‌ಗೆ ಮೊದಲು ಎಡಕ್ಕೆ ಹೋದರೆ ಅಲ್ಲಿ ಒಂದು ಪುಟ್ಟ ಹಳೆಯ ಗುಡಿ ಮತ್ತು ಒಂದು ಆಶ್ರಮದ ಹಾಗೆ ಕಾಣುತ್ತಿದ್ದ ಒಂದು ಮನೆ ಸುತ್ತ ಮುತ್ತಲಿನ ಗಿಡ ಮರಗಳಿಂದ ಆವೃತವಾಗಿತ್ತು. ಒಂದು ಪುಟ್ಟ ಕೊಳ ಸಹ ಅಲ್ಲಿತ್ತು. ಕಾವಿ ಬಟ್ಟೆ ತೊಟ್ಟ ವಯಸ್ಸಾದ ಹೆಂಗಸರು, ಗಂಡಸರು ಅಲ್ಲಿ ವಾಸವಿದ್ದರು. ಯಾವಾಗಲೂ ಧ್ಯಾನ ಜಪ ತಪ ಮಾಡುತ್ತಿದ್ದುದು ಕಾಣಿಸುತ್ತಿತ್ತು. ಅಪರೂಪಕ್ಕೆ ಒಂದು ಬಾಳೆಹಣ್ಣು ಕೊಡುತ್ತಿದ್ದರು. ನಗರ ಬೆಳೆದಂತೆ ಆ ಜಾಗವೂ ಸೈಟುಗಳಾಗಿ ಭವ್ಯ ಬಂಗಲೆಗಳು ಬಂದಿವೆ.
ಪ್ರಸನ್ನ ಟಾಕೀಸ್ ಬರುವ ಮೊದಲು ಇದೇ ರಸ್ತೆಯ ಮೂಲಕ ಚೋಳರ ಪಾಳ್ಯ ಸೇರಬಹುದಿತ್ತು. ಈಗ ಈ ಪಾಳ್ಯದ ಹೆಸರು ಯಾರಿಗೂ ತಿಳಿಯದು. ಪ್ರಸನ್ನ ಕಡೆಯಿಂದ ಬಲಕ್ಕೆ ತಿರುಗಿದರೆ ಅದು ಹೊಸಹಳ್ಳಿಗೆ ದಾರಿ. ಸ್ವಾತಂತ್ರ್ಯ ಹೋರಾಟಗಾರ ಶ್ರೀ ಕೆ ಟಿ ಭಾಷ್ಯಮ್ ಅವರ ಹೆಸರಿನಲ್ಲಿ ಒಂದು ವೃತ್ತ, ಅದೇ ಭಾಷ್ಯಂ ಸರ್ಕಲ್. ಮಲ್ಲೇಶ್ವರದಲ್ಲಿ ಒಂದು ಪಾರ್ಕ್ ಹೆಸರು ಭಾಷ್ಯಂ ಪಾರ್ಕು. ಭಾಷ್ಯಂ ಸರ್ಕಲ್ ನಿಂದ ನೇರ ಹೋದರೆ ಎಡಭಾಗದಲ್ಲಿ ಧೋಬಿ ಘಾಟ್. ಅಂದರೆ ಅಗಸರು ಬಟ್ಟೆ ಮಡಿ ಮಾಡಿ ಒಣಗಿಸಲು ಇದ್ದ ಜಾಗ. ಒಗೆಯುವ ಕಲ್ಲುಗಳು ಸಾಲು ಸಾಲಾಗಿ ಇತ್ತು. ಅದರ ಪಕ್ಕ ನೀರಿನ ತೊಟ್ಟಿ ಮತ್ತು ಬಟ್ಟೆ ಒಣಗಿಸಲು ಸರ್ವೇ ಮರಗಳನ್ನು ಹೂಣಿ ಅದಕ್ಕೆ ಬಿಗಿಯಾಗಿ ಕಟ್ಟಿದ ಸಾಲು ಸಾಲು ಹಗ್ಗ. ಈಗ ಅದು ಅಷ್ಟು ಉಪಯೋಗದಲ್ಲಿ ಇದ್ದ ಹಾಗೆ ಇಲ್ಲ. ಕಾರಣ ಧೋಬಿಗಳೆ ಇಲ್ಲವಲ್ಲ.
ಅಲ್ಲೇ ನ್ಯಾಯಮೂರ್ತಿ ಶ್ರೀ ರಾಮಾಜೋಯಿಸ್ ಅವರ ಮನೆ ಇತ್ತು. ಅದೇ ರಸ್ತೆ ಮುಂದುವರೆದರೆ ಶಿವನಹಳ್ಳಿಗೆ. ಆಗ ಬಸವೇಶ್ವರ ನಗರ, ಹಾವನೂರು ಸರ್ಕಲ್ ಇವು ಯಾವುದೂ ಇಲ್ಲ. ಇವೆಲ್ಲಾ ನಂತರ ಬಂದವು. ಸಾಣೆಗುರುವನಹಳ್ಳಿ ಕೆರೆ, ಶಿವನಹಳ್ಳಿ ಕೆರೆ ಇವೆರೆಡೂ ಆಗ ಇದ್ದ ಕೆರೆಗಳು. ಆಗ ಬೆಂಗಳೂರಿನಲ್ಲಿ ಸಾವಿರದ ಮೇಲೆ ಕೆರೆಗಳು ಇದ್ದವು ಎಂದು ಒಂದು ಸರ್ಕಾರೀ ಮಾಹಿತಿ, ಇದು ಲಕ್ಷ್ಮಣ ರಾವ್ ಅವರ ಸಮಿತಿ ನೀಡಿದ ವರದಿ. ಈಗ ಅದು ನೂರಕ್ಕೂ ಕಡಿಮೆ. ಸಾಣೆಗುರುವನಹಳ್ಳಿ ಕೆರೆ, ಶಿವನಹಳ್ಳಿ ಕೆರೆ ಎರಡೂ ಕೆರೆಗಳು ನಂತರ ಕಾಣದಂತೆ ಮಾಯವಾದವು. ಲ್ಯಾಂಡ್ ಮಾಫಿಯಾ ನುಂಗಿ ನೀರುಕುಡಿದವು. ಸಾಣೆಗುರುವನಹಳ್ಳಿಯ ಕೆರೆ ಅಥವಾ ಶಿವನಹಳ್ಳಿ ಕೆರೆ ಅಂದ ಕೂಡಲೇ ನನಗೆ ಒಂದು ದುರಂತ ಕಣ್ಣೆದುರು ಬಂದು ನಿಲ್ಲುತ್ತೆ. ಈಗಲೂ ಸಹ ಕಣ್ಣು ಮಂಜು ಆಗುತ್ತೆ. ಅದರ ಬಗ್ಗೆ ಹೇಳಬೇಕಾದರೆ ಕಣ್ಣು ಹನಿ ಗೂಡುತ್ತದೆ…
(ಮುಂದುವರೆಯುವುದು)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
ಈ ನೆನಪುಗಳಿಗ ಧನ್ಯವಾದಗಳು. 1950 ರ ದ ಶಕದಲ್ಲಿ ನಾವು ಬೆಳೆಯುತ್ತಿದ್ದಾಗ ರಾಜಾಜಿನಗರ ಎಂಬ ಹೊಸ ಬಡಾವಣೆ ಬರುತ್ತೆ ಎಂದು ಕೇಳುತ್ತಿದ್ದೆವು.
Nostalgia of growth of our Rajajinagar, mainly ESI hospital, 4, 5, & 6 blocks. I think you would have mentioned about LF Dispensary close to your house then. They had three coloured liquid medicines in huge jars and some tablets used to dispense for patients indispositions.