ಗುಡಿ ಚಿಕ್ಕದಾಗಿದ್ದರೂ ಆಕರ್ಷಕವಾಗಿದೆ. ಹೊರಬಾಗಿಲ ಚೌಕಟ್ಟು ಹೂಬಳ್ಳಿಗಳ ಕೆತ್ತನೆಯಿಂದ ಮನಸೆಳೆಯುತ್ತದೆ. ಗರ್ಭಗುಡಿ, ಅರ್ಧಮಂಟಪ ಹಾಗೂ ನವರಂಗಗಳನ್ನುಳ್ಳ ಕಟ್ಟಡ. ಗರ್ಭಗೃಹದಲ್ಲಿ ಬೃಹದಾಕಾರದ ರಾಮೇಶ್ವರನೆಂಬ ಹೆಸರಿನ ಶಿವಲಿಂಗವಿದೆ. ಬನವಾಸಿಯ ಕದಂಬೇಶ್ವರನನ್ನು ನೆನಪಿಸುವ ಲಿಂಗ. ದಿನನಿತ್ಯ ಅರ್ಚಕರಿಂದ ಪ್ರತ್ಯೇಕ ಪೂಜೆ ಸಲ್ಲದಿದ್ದರೂ ಯಾರು ಬೇಕಾದರೂ ಬಂದು ಸ್ವತಃದೇವರಿಗೆ ಪೂಜೆ ಸಲ್ಲಿಸಿ ಹೋಗಬಹುದೆಂದು ಗುಡಿಯ ಮೇಲ್ವಿಚಾರಕ ನೌಕರರು ತಿಳಿಸಿದರು. ನಡುಮಂಟಪದಲ್ಲಿ ಇರಿಸಿದ ಅರಸನೊಬ್ಬನ ಮೂರ್ತಿಶಿಲ್ಪ ವಿಶಿಷ್ಟವಾಗಿದೆ. ನಡುಮಂಟಪದಲ್ಲಿ ನಿಂತು ತಲೆಯೆತ್ತಿ ನೋಡಿ. ಒಳಛಾವಣಿ ಎಂದರೆ ಭುವನೇಶ್ವರಿಯಲ್ಲಿ ನಡುವೆ ನಟರಾಜ ಶಿವನ ಶಿಲ್ಪ ಮೂಡಿದೆ.
ಟಿ.ಎಸ್. ಗೋಪಾಲ್ ಬರೆಯುದ ದೇಗುಲಗಳ ಸರಣಿಯ ಮೂವತ್ತೊಂಭತ್ತನೆಯ ಕಂತು
ಚಾಮರಾಜನಗರ ಜಿಲ್ಲೆಯಲ್ಲಿರುವ ನರಸಮಂಗಲದ ರಾಮೇಶ್ವರ ದೇವಾಲಯ ನಮ್ಮ ನಾಡಿನ ಅತಿ ಪ್ರಾಚೀನ ದೇಗುಲಗಳಲ್ಲೊಂದು. ಈ ದೇವಾಲಯ ಗಂಗ ಅರಸರ ಕಾಲದ ನಿರ್ಮಾಣವಾಗಿದ್ದು ಬಹುಶಃ ಒಂಭತ್ತನೆಯ ಶತಮಾನದಲ್ಲಿ ಕಟ್ಟಲಾದ ನಿರ್ಮಿತಿಯೆಂದು ವಿದ್ವಾಂಸರ ಅಭಿಪ್ರಾಯ. ಇದೊಂದೇ ಕಾರಣಕ್ಕಾದರೂ ನೀವು ಮರೆಯದೆ ಕರ್ನಾಟಕದ ದಕ್ಷಿಣ ತುದಿಯ ಈ ಗ್ರಾಮಕ್ಕೆ ಬರಬೇಕು.
ಚಾಮರಾಜನಗರದಿಂದ ಇಪ್ಪತ್ತೆಂಟು ಕಿ.ಮೀ. ದೂರದಲ್ಲಿರುವ ನರಸಮಂಗಲಕ್ಕೆಅಮಚವಾಡಿ ಮಾರ್ಗವಾಗಿ ಬರಬಹುದು. ಗುಂಡ್ಲುಪೇಟೆಯಿಂದ ಬರುವುದಾದರೆ, ತೆರಕಣಾಂಬಿಯ ಕಡೆಯಿಂದಲೂ ತಲುಪುವ ರಸ್ತೆಯಿದೆ. ಪ್ರಾಚೀನ ಕಾಲದಲ್ಲಿ ಈ ಊರು ನರಸಿಂಹಮಂಗಲ ಎಂಬ ಅಗ್ರಹಾರವಾಗಿದ್ದಿತೆಂದು ಶಾಸನಗಳಲ್ಲಿ ಉಲ್ಲೇಖವಿದೆ. 1337ರ ಶಾಸನವೊಂದರಲ್ಲಿ ಹೆಸರಿಸಿರುವ ಬಿಲ್ಲಚೊಕ್ಕಯ್ಯ, ಭೋಗಯ್ಯ ಮೊದಲಾದ ಪ್ರಮುಖ ದಂಡನಾಯಕರು, ನರಸಿಂಹಮಂಗಲದ ರಾಮನಾಥದೇವರ ಶ್ರೀಕಾರ್ಯಕ್ಕೆಂದು ನರಸಿಂಹಮಂಗಲವನ್ನು ಸರ್ವಮಾನ್ಯವಾಗಿ ದಾನ ನೀಡಿರುವರೆಂಬ ವಿವರವಿದೆ.
ನರಸಮಂಗಲದ ಗುಡಿಯನ್ನೂ ವಿಶಾಲವಾದ ಆವರಣವನ್ನೂ ಭಾರತೀಯ ಪುರಾತತ್ವ ಇಲಾಖೆಯ ನೇತೃತ್ವದಲ್ಲಿ ಸಂರಕ್ಷಿಸಿರುವುದು ಸ್ತುತ್ಯರ್ಹವಾಗಿದೆ. ಗುಡಿಯ ಮುಂಭಾಗದ ಒಂದು ವೇದಿಕೆಯ ಮೇಲೆ ದೊಡ್ಡ ನಂದಿಯೊಂದನ್ನು ಕಾಣುತ್ತೀರಿ. ಹಸನ್ಮುಖದ ನಂದಿ, ಅದರ ಕೊರಳ ಹಾರಗಳು, ಗಂಟೆ, ಎಲ್ಲವೂ ಸೊಗಸಾಗಿ ಕೆತ್ತಲ್ಪಟ್ಟಿವೆ. ದೇವಾಲಯದ ಹೊರಭಾಗದಲ್ಲಿ ಹಿಂದೆ ಮಂಟಪವಿದ್ದಿರಬಹುದಾದ ಜಾಗದಲ್ಲಿ ಜಗುಲಿ ಮಾತ್ರ ಉಳಿದುಕೊಂಡಿದ್ದು, ಸೋಪಾನದ ಎಡೆಯಲ್ಲಿ ಶಂಖನಿಧಿ ಪದ್ಮನಿಧಿಯರೆಂಬ ರಕ್ಷಕರನ್ನು ಚಿತ್ರಿಸಲಾಗಿದೆ.
ಗುಡಿ ಚಿಕ್ಕದಾಗಿದ್ದರೂ ಆಕರ್ಷಕವಾಗಿದೆ. ಹೊರಬಾಗಿಲ ಚೌಕಟ್ಟು ಹೂಬಳ್ಳಿಗಳ ಕೆತ್ತನೆಯಿಂದ ಮನಸೆಳೆಯುತ್ತದೆ. ಗರ್ಭಗುಡಿ, ಅರ್ಧಮಂಟಪ ಹಾಗೂ ನವರಂಗಗಳನ್ನುಳ್ಳ ಕಟ್ಟಡ. ಗರ್ಭಗೃಹದಲ್ಲಿ ಬೃಹದಾಕಾರದ ರಾಮೇಶ್ವರನೆಂಬ ಹೆಸರಿನ ಶಿವಲಿಂಗವಿದೆ. ಬನವಾಸಿಯ ಕದಂಬೇಶ್ವರನನ್ನು ನೆನಪಿಸುವ ಲಿಂಗ. ದಿನನಿತ್ಯ ಅರ್ಚಕರಿಂದ ಪ್ರತ್ಯೇಕ ಪೂಜೆ ಸಲ್ಲದಿದ್ದರೂ ಯಾರು ಬೇಕಾದರೂ ಬಂದು ಸ್ವತಃದೇವರಿಗೆ ಪೂಜೆ ಸಲ್ಲಿಸಿ ಹೋಗಬಹುದೆಂದು ಗುಡಿಯ ಮೇಲ್ವಿಚಾರಕ ನೌಕರರು ತಿಳಿಸಿದರು. ನಡುಮಂಟಪದಲ್ಲಿ ಇರಿಸಿದ ಅರಸನೊಬ್ಬನ ಮೂರ್ತಿಶಿಲ್ಪ ವಿಶಿಷ್ಟವಾಗಿದೆ.
ನಡುಮಂಟಪದಲ್ಲಿ ನಿಂತು ತಲೆಯೆತ್ತಿ ನೋಡಿ. ಒಳಛಾವಣಿ ಎಂದರೆ ಭುವನೇಶ್ವರಿಯಲ್ಲಿ ನಡುವೆ ನಟರಾಜ ಶಿವನ ಶಿಲ್ಪ ಮೂಡಿದೆ. ಈ ಶಿಲ್ಪದ ಸುತ್ತ ಎಂಟು ಚೌಕಗಳಲ್ಲಿ ಅಷ್ಟದಿಕ್ಪಾಲಕರು ವಾಹನಾರೂಢರಾಗಿ ಶಿವನನ್ನು ಸೇವಿಸುತ್ತಿರುವ ದೃಶ್ಯ ಅತ್ಯಂತ ಆಕರ್ಷಕವಾಗಿದೆ. ಮಂಟಪದ ಕಂಬಗಳು ವೃತ್ತಾಕಾರದಲ್ಲಿದ್ದು ಗಂಗರ ಕಾಲದ ನಿರ್ಮಿತಿಗಳ ಶೈಲಿಯನ್ನು ಪ್ರತಿನಿಧಿಸುತ್ತವೆ. ಒಳಛಾವಣಿಯ ಅಂಚಿನಲ್ಲಿ ಯಕ್ಷರೇ ಮೊದಲಾದ ದೇವಪರಿವಾರವನ್ನು ಚಿತ್ರಿಸಿರುವುದನ್ನು ಕಾಣಬಹುದು.
ಇನ್ನು ದೇಗುಲದ ಹೊರಬದಿಯ ಆವರಣದಲ್ಲಿ ದೊಡ್ಡ ಶಿವಲಿಂಗಗಳಿವೆ. ಬೇರೆ ಬೇರೆ ಗುಡಿಗಳಲ್ಲಿ ಇರಿಸಿದ್ದ ಇವು ಕಾಲಾಂತರದಲ್ಲಿ ಭಗ್ನಗೊಂಡಿವೆ. ಹಿಂಬದಿಯ ದೊಡ್ಡ ಕೊಠಡಿಯೊಂದರಲ್ಲಿ ಅನೇಕ ಶಿಲ್ಪಗಳನ್ನು ರಕ್ಷಿಸಿ ಇರಿಸಲಾಗಿದೆ. ಇವುಗಳಲ್ಲಿ ವಾರಾಹಿ, ಕೌಮಾರಿ, ಚಾಮುಂಡಿ, ವೈಷ್ಣವಿ ಮತ್ತಿತರ ಸಪ್ತಮಾತೃಕೆಯರ ವಿಗ್ರಹಗಳು ಗಮನಿಸತಕ್ಕವು. ಐದು ಅಡಿಗಳಿಗೂ ಹೆಚ್ಚು ಎತ್ತರವಿರುವ ಈ ಶಿಲ್ಪಗಳು ಗಂಗರಕಾಲದ ಸೊಗಸಿನ ಮೂರ್ತಿಗಳಾಗಿವೆ. ಇಲ್ಲೇ ಚಾಮರಾಜನಗರ ಜಿಲ್ಲೆಯ ಹೊಳೆ ಆಲೂರಿನಲ್ಲಿ ಇಂಥ ಸಪ್ತಮಾತೃಕೆಯರ ಶಿಲ್ಪಗಳನ್ನು ಕಾಣಬಹುದು.
ಈ ಶಿಲ್ಪಗಳೇ ಅಲ್ಲದೆ, ಗಣೇಶ, ಕಾರ್ತಿಕೇಯ, ಸೂರ್ಯ ಮತ್ತಿತರ ವಿಗ್ರಹಗಳೂ ಇಲ್ಲಿವೆ. ತಲೆಯ ಮೇಲೆ ಹೆಡೆಯೆತ್ತಿದ ಸರ್ಪವುಳ್ಳ ಪಾರ್ಶ್ವನಾಥ ತೀರ್ಥಂಕರನ ಎತ್ತರವಾದ ಮೂರ್ತಿಯೊಂದಿದ್ದು ರಕ್ಷಣೆಯ ದೃಷ್ಟಿಯಿಂದ ಬೇರಾವುದೋ ಸ್ಥಳದಿಂದ ತಂದು ಇಲ್ಲಿರಿಸಲಾಗಿದೆ. ನೀವು ನೋಡಲೇಬೇಕಾದ ಇನ್ನೊಂದು ಶಿಲ್ಪವೆಂದರೆ, ಗುಡಿಯ ಹಿಂಭಾಗದಲ್ಲಿರಿಸಿರುವ ಮಹಿಷಮರ್ದಿನಿಯ ಮೂರ್ತಿ. ಎಂಟು ಭುಜಗಳ ಮೂರ್ತಿ. ಮಹಿಷನನ್ನು ತುಳಿಯುತ್ತಿರುವ, ತ್ರಿಶೂಲದಿಂದ ಇರಿಯುತ್ತಿರುವ ಭಂಗಿ ಭವ್ಯವಾಗಿದೆ. ಮಹಿಷನ ತಲೆ ಕತ್ತರಿಸಿದೆ. ಬಲಬದಿಯಲ್ಲಿ ಸಿಂಹ ಮಹಿಷನನ್ನು ಕಚ್ಚುತ್ತಿದೆ, ಅದರ ಉಗುರುಗಳು ಮಹಿಷನ ಬೆನ್ನ ಮೇಲೆ ಮೂಡಿರುವಂತೆ ಚಿತ್ರಿಸಿರುವ ಪರಿ ಗಮನೀಯ.
ನರಸಮಂಗಲದ ದೇವಾಲಯದ ಇನ್ನೊಂದು ವಿಶೇಷವೆಂದರೆ ಅದರ ಶಿಖರ. ಗಾರೆಗಚ್ಚಿನಿಂದ ಮಾಡಿದ ದ್ರಾವಿಡ ಶೈಲಿಯ ಈ ಶಿಖರ ತನ್ನ ಮೂಲಸ್ವರೂಪದಲ್ಲಿ ಉಳಿದುಬಂದಿರುವುದೇ ಒಂದು ಅಚ್ಚರಿ. ಈ ಶಿಖರದ ಮೇಲೆ ಅನೇಕ ದೇವತಾಮೂರ್ತಿಗಳಿದ್ದು ಮನಸೆಳೆಯುವಂತಿವೆ. ಶಿವನ ದಕ್ಷಿಣಾಮೂರ್ತಿ ಹಾಗೂ ಗಜಾಸುರ ಸಂಹಾರ ರೂಪಗಳು, ಗರುಡವಾಹನ ವಿಷ್ಣು, ದೇವತಾ ಸ್ತ್ರೀಯರು ಮೊದಲಾದ ಶಿಲ್ಪಗಳು ಕಾಲಾಂತರದಲ್ಲಿ ಭಗ್ನಗೊಂಡಿದ್ದರೂ ಅವುಗಳ ಸೊಬಗು ಅಂದಗೆಡದೆ ಉಳಿದುಬಂದಿದೆ.
ನಮ್ಮ ನಾಡಿನ ಅತಿ ಪ್ರಾಚೀನ ದೇವಾಲಯಗಳ ಸಾಲಿಗೆ ಸೇರುವ ನರಸಮಂಗಲಕ್ಕೆ ಬಂದುಇಲ್ಲಿನ ಶಿಲ್ಪಗಳ ವೈಶಿಷ್ಟ್ಯವನ್ನು ಗಮನಿಸಿ ಆನಂದಿಸುವುದು ಅಗತ್ಯ ಮಾತ್ರವಲ್ಲ, ನಮ್ಮಕರ್ತವ್ಯವೂ ಹೌದು.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.