ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದು ಅವರು ಹಿಂದೂ ಧರ್ಮವನ್ನು ಆಚರಿಸುವುದಾಗಿ ಜನಗಣತಿಯಲ್ಲಿ ಹೇಳಿದ್ದರೆ, ಅವರ ಹಕ್ಕುಮಾನ್ಯತೆಯನ್ನು ಪರಿಗಣಿಸಿ ದೇವಸ್ಥಾನಕ್ಕೆ ಒಪ್ಪಿಗೆ ಕೊಡಬಹುದು. ಇದಾದ ಮೇಲೆ ದೇವಾಲಯ ಕಟ್ಟಡದ ನಿರ್ಮಾಣಕ್ಕೆ ಹಣ ಹೊಂದಿಸಬೇಕು. ದೇವಸ್ಥಾನ ಸ್ಥಾಪನೆಯ ಕನಸು ಕಂಡವರು ಹಗಲುರಾತ್ರಿ ಶ್ರಮವಹಿಸಿ ನಿಧಿಸಂಗ್ರಹಣೆ ಮಾಡಬೇಕು. ಕೆಲವರಿಗಂತೂ ಇದೇ ಅವರ ನಿತ್ಯಜೀವನವಾಗುತ್ತದೆ. ಇವೆಲ್ಲವನ್ನೂ ಆಯೋಜಿಸಿ ಕಾರ್ಯರೂಪಕ್ಕೆ ತರಲು ಹಲವಾರು ವರ್ಷಗಳೇ ಹಿಡಿಯುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ನವರಾತ್ರಿ ಹಬ್ಬದ ಈ ಸಮಯದಲ್ಲಿ ಶಕ್ತಿ ಸ್ವರೂಪಿಣಿ ದೇವಿಯರನ್ನು ನೆನೆಯುತ್ತಾ ನಿಮಗೆ ಶುಭ ಕೋರುತ್ತೀನಿ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ದೇಸಿಗಳು ತವರು ನೆಲದ ಹಬ್ಬಗಳನ್ನು ನೆನೆಯದೇ ಇರುವುದಿಲ್ಲ. ಭಾರತೀಯರಾಗಲಿ, ಆಫ್ರಿಕನ್ನರಾಗಲಿ, ಚೀನೀಯರಾಗಲಿ, ಚಿಲಿ ದೇಶದವರಾಗಲಿ, ಗ್ರೀಕರಾಗಲಿ ಎಲ್ಲರಿಗೂ ಅವರವರ ಸಂಸ್ಕೃತಿಗಳೊಡನೆ ಅದರಲ್ಲೂ ಹಬ್ಬಗಳ ಜೊತೆ ಇರುವ ಬಾಂಧವ್ಯವು ಗಾಢವಾದದ್ದು.
ಅನಿವಾಸಿ ಭಾರತೀಯರು ಆಚರಿಸುವ ಹಬ್ಬಗಳ ವೈವಿಧ್ಯಗಳು ಬೆರಗು ತರುತ್ತವೆ. ದಕ್ಷಿಣ ಭಾರತೀಯ, ಕರ್ನಾಟಕ ರಾಜ್ಯದ ಮೂಲದವರಲ್ಲಿ ನವರಾತ್ರಿ / ದಸರೆಯ ಗೊಂಬೆಯಾಚರಣೆ. ಗುಜರಾತಿ ಜನರ ಸಮುದಾಯವು ದಾಂಡಿಯ ರಾಸ್ ಕೋಲಾಟ ಪ್ರದರ್ಶನ. ನವರಾತ್ರಿಯ ಒಂದೊಂದೂ ದಿನದ ವಿಶೇಷ ಬಣ್ಣವನ್ನು ಆನಂದಿಸುತ್ತಾ ಮಹಿಳೆಯರು ಆಯಾ ಬಣ್ಣಗಳ ಸೀರೆಯುಟ್ಟು ನಲಿದಾಡುತ್ತಾರೆ.
ಈ ವರ್ಷವಂತೂ ಆಸ್ಟ್ರೇಲಿಯಾ-ಭಾರತೀಯ ಸಮುದಾಯಗಳು ನವರಾತ್ರಿ ಮತ್ತು ಇನ್ನೂ ಬರಲಿರುವ ದೀಪಾವಳಿ ಹಬ್ಬಗಳಾಚರಣೆ ಕುರಿತು ಭಾರಿ ಪ್ರಚಾರ ಮಾಡುತ್ತಿವೆ. ಅಷ್ಟೆಲ್ಲಾ ಖರ್ಚು ಮಾಡಿ ಹಣ ಹೂಡಿ ಇವೆಂಟ್ ಏರ್ಪಾಡು ಮಾಡಿ ಜನ ಬರದಿದ್ದರೆ ಹೇಗೆ? ಜನ ಬರುವಂತೆ ಮಾಡಲು ಎಲ್ಲಾ ಕಡೆ ಮಾಹಿತಿ ಹಂಚಬೇಕು. ಫೇಸ್ಬುಕ್ ಪುಟಗಳು, ವಾಟ್ಸಾಪ್ ಗುಂಪುಗಳು, ಸಂಘಸಂಸ್ಥೆಗಳ ವೆಬ್ಸೈಟ್ ಚೆನ್ನಾಗಿ ಕೆಲಸ ಮಾಡುತ್ತವೆ. ಇವನ್ನು ಗಮನಿಸಿದರೆ ಅಬ್ಬಬ್ಬಾ ಆಸ್ಟ್ರೇಲಿಯನ್-ಭಾರತೀಯರ ಉತ್ಸಾಹವೇ ಎಂದು ಮೆಚ್ಚುಗೆಯಾಗುತ್ತದೆ. ಇಂತಹ ಸಮುದಾಯ ಆಚರಣೆಗಳ ಸಮಯದಲ್ಲಿ ಅನೇಕರ ವ್ಯಾಪಾರವಹಿವಾಟುಗಳಿಗೆ ಒಂದಷ್ಟು ಲಾಭವಾಗುತ್ತದೆ.
ಇನ್ನೊಂದು ಆಸಕ್ತಿಯ ವಿಷಯವೆಂದರೆ ಆಸ್ಟ್ರೇಲಿಯಾದಲ್ಲಿ ದೇವಸ್ಥಾನವೊಂದನ್ನು ಸ್ಥಾಪಿಸಬೇಕೆಂದರೆ ಅದೊಂದು ದೊಡ್ಡ ಕೆಲಸ, ಜವಾಬ್ದಾರಿ. ದೇವಾಲಯಕ್ಕೆ ಯೋಗ್ಯವಾದ ಜಾಗ ಖರೀದಿಸಬೇಕು, ರಾಜ್ಯ ಸರಕಾರ ಮತ್ತು ಸ್ಥಳೀಯ ನಗರಪಾಲಿಕೆಯ ಅನುಮತಿ, ಪರವಾನಗಿ ಪಡೆಯಬೇಕು. ಇದನ್ನು ತೀರ್ಮಾನಿಸಲು ಸರಕಾರವು ಜನಗಣತಿ ಅಂಕಿಸಂಖ್ಯೆಗಳನ್ನು ಪರಿಶೀಲಿಸುತ್ತದೆ. ಆಯಾ ಪ್ರದೇಶದಲ್ಲಿ ವಾಸವಿರುವ ಜನರು ಯಾವ್ಯಾವ ಧರ್ಮವನ್ನು ಪಾಲಿಸುವುದಾಗಿ ಹೇಳಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರಿದ್ದು ಅವರು ಹಿಂದೂ ಧರ್ಮವನ್ನು ಆಚರಿಸುವುದಾಗಿ ಜನಗಣತಿಯಲ್ಲಿ ಹೇಳಿದ್ದರೆ, ಅವರ ಹಕ್ಕುಮಾನ್ಯತೆಯನ್ನು ಪರಿಗಣಿಸಿ ದೇವಸ್ಥಾನಕ್ಕೆ ಒಪ್ಪಿಗೆ ಕೊಡಬಹುದು. ಇದಾದ ಮೇಲೆ ದೇವಾಲಯ ಕಟ್ಟಡದ ನಿರ್ಮಾಣಕ್ಕೆ ಹಣ ಹೊಂದಿಸಬೇಕು. ದೇವಸ್ಥಾನ ಸ್ಥಾಪನೆಯ ಕನಸು ಕಂಡವರು ಹಗಲುರಾತ್ರಿ ಶ್ರಮವಹಿಸಿ ನಿಧಿಸಂಗ್ರಹಣೆ ಮಾಡಬೇಕು. ಕೆಲವರಿಗಂತೂ ಇದೇ ಅವರ ನಿತ್ಯಜೀವನವಾಗುತ್ತದೆ. ಇವೆಲ್ಲವನ್ನೂ ಆಯೋಜಿಸಿ ಕಾರ್ಯರೂಪಕ್ಕೆ ತರಲು ಹಲವಾರು ವರ್ಷಗಳೇ ಹಿಡಿಯುತ್ತವೆ. ಇತ್ತೀಚಿನ ವರ್ಷಗಳಲ್ಲಿ ಹೊಸ ದೇವಸ್ಥಾನ ಕಟ್ಟಡ ನಿರ್ಮಾಣದ ಕೆಲಸ ಇನ್ನಷ್ಟು ಕಠಿಣವಾಗಿದೆ ಎಂದು ಕೇಳಿದ್ದೀನಿ. ನಮ್ಮ ಬ್ರಿಸ್ಬೇನ್ ನಗರದ ದಕ್ಷಿಣದಲ್ಲಿ ಒಂದು, ಗೋಲ್ಡ್ ಕೋಸ್ಟ್ ಪ್ರದೇಶದಲ್ಲಿ ಒಂದು ಎಂಬಂತೆ ಅಲ್ಲಲ್ಲಿ ಕೆಲ ದೇವಸ್ಥಾನಗಳು ತಲೆ ಎತ್ತಿವೆ. ಆದರೆ ಇವಕ್ಕೆ ಇನ್ನೂ ಹೊಸ ಕಟ್ಟಡವಿಲ್ಲ.
ನಾನು ೨೦೦೧ ನೇ ಇಸವಿಯಲ್ಲಿ ಆಸ್ಟ್ರೇಲಿಯಾಕ್ಕೆ ಬಂದದ್ದು. ವೊಲಂಗಾಂಗ್ ಪಟ್ಟಣಕ್ಕೆ. ಅದಿರುವುದು ಸಿಡ್ನಿ ನಗರದ ಸಮೀಪ. ಬಂದ ಹೊಸತರಲ್ಲಿ ನನ್ನ ಆಸ್ಟ್ರೇಲಿಯನ್ ಸ್ನೇಹಿತೆ ವೊಲಂಗಾಂಗ್ -ಸಿಡ್ನಿ ಮಧ್ಯೆ ಇರುವ Helensburg ನಲ್ಲಿ ಸ್ಥಾಪನೆಯಾಗಿದ್ದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದರು. ಜನರಿಂದ ದೂರವಾಗಿ ಊರಿನ ಹೊರಗಿದ್ದ ಪ್ರಶಾಂತ ವಿಶಾಲ ಜಾಗ ಬಹಳ ಚೆನ್ನಾಗಿತ್ತು. ನಿಸರ್ಗದ ಮಧ್ಯೆ ಮೌನ ತುಂಬಿಕೊಂಡು ಆಧ್ಯಾತ್ಮಿಕ ಭಾವನೆ ಹುಟ್ಟಿಸುವಂತಿತ್ತು. ದೇವಸ್ಥಾನ ಸಂಕೀರ್ಣದ ಯೋಜನೆಯನ್ನು ಪ್ರಿಂಟ್ ಮಾಡಿ ಪ್ರಕಟಿಸಿದ್ದರು. ಕಟ್ಟಡದ ಕೆಲಸ ನಡೆಯುತ್ತಿತ್ತು. ತಮಿಳುನಾಡಿನಿಂದ ಕರೆಸಿದ್ದ ಶಿಲ್ಪಿಗಳು ದೇವರಮೂರ್ತಿಗಳನ್ನು ಕೆತ್ತುತ್ತಿದ್ದರು. ಅರ್ಚಕರೊಬ್ಬರು Helensburg ಊರಿನ ಚಳಿ ತಾಳಲಾರದೆ ತಮಿಳುನಾಡಿನ ತವರಿಗೆ ವಾಪಸ್ ಆಗಿದ್ದರು. ಆ ಸಮಯದಲ್ಲಿ ಸ್ಥಳೀಯ ಪತ್ರಿಕಗಳು ಕೆಲವೊಂದು ವಿಷಯಗಳನ್ನು ಪ್ರಕಟಿಸಿದ್ದವು. ದೇವಸ್ಥಾನದ ಕಮಿಟಿಯವರು ಟೆಂಪೊರರಿ ವೀಸಾ ಮೇಲೆ ತಮಿಳುನಾಡಿನಿಂದ ಕರೆಸಿದ್ದ ಶಿಲ್ಪಿಗಳಿಗೆ ಯೋಗ್ಯವಾದ ವಸತಿ ಕೊಟ್ಟಿಲ್ಲ, ಅವರಿಗೆ ಆಸ್ಟ್ರೇಲಿಯನ್ ಸರಕಾರ/ಕಾನೂನಿನ ಪ್ರಕಾರ ಇದ್ದ ನಿಗದಿತ ಸಂಬಳ ಕೊಡುತ್ತಿಲ್ಲ, ಅವರನ್ನು ಶೋಷಿಸಲಾಗುತ್ತಿದೆ, ಇತ್ಯಾದಿ ತಕರಾರಿನ ವಿಷಯಗಳು. ಶಿಲ್ಪಿಗಳ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಸ್ಥಳೀಯ ಜನರು ಆರೋಪಿಸಿದ್ದರು. ಕಾಲಕ್ರಮೇಣ ಎಲ್ಲವೂ ತಿಳಿಯಾಗಿ, ದೇವಸ್ಥಾನದ ಸಂಕೀರ್ಣವು ಪೂರ್ತಿಯಾಗಿ ಜನಪ್ರವಾಹ ಹರಿದಿತ್ತು. ನಾನು ಆಗಾಗ ಹೋಗುತ್ತಿದ್ದೆ. ಹೊಸದಾಗಿ ಶುರುವಾಗಿದ್ದ ವೀಕೆಂಡ್ ಟೆಂಪಲ್ ಕ್ಯಾಂಟೀನ್‌ನ ತಮಿಳುನಾಡು ಶೈಲಿಯ ರುಚಿಕರ ದೋಸೆ, ಇಡ್ಲಿ-ವಡೆ ತಿನ್ನಲು ಸಿಡ್ನಿಯಿಂದ ಉತ್ತರ ಭಾರತೀಯರು ಬರುತ್ತಿದ್ದರು. ಈಗ Helensburg ಹಿಂದೂ ಟೆಂಪಲ್ ದೊಡ್ಡದೊಂದು ಆಕರ್ಷಣೆಯಾಗಿದೆ. ಪ್ರವಾಸಿಗಳ ‘must do’ ಪಟ್ಟಿಯಲ್ಲಿದೆ.
ಈಗ ಮತ್ತೆ ದಸರೆಯ ದೇವಿಯರತ್ತ ನನ್ನ ಚಿತ್ತ. ಹೀಗೇ ಹೋದ ಭಾನುವಾರ ‘soul sisters’ ಹೆಂಗಳೆಯರ ಹಾಡುಗಾರಿಕೆಯನ್ನು ಕೇಳಲು ಹೋಗಿದ್ದೆ. ಇವರೆಲ್ಲಾ ನಮ್ಮ ನಡುವಿನ ದಿನನಿತ್ಯವೂ ಸಿಗುವ ಸಾಧಾರಣ ಹೆಂಗಸರು. ಕೆಲವರ್ಷಗಳ ಹಿಂದೆ ಒಂದಿಬ್ಬರು ತಾವ್ಯಾಕೆ ಒಂದು ಹೆಂಗಸರ choir ಹಾಡುಗಾರಿಕೆ ಗುಂಪೊಂದನ್ನು ಶುರು ಮಾಡಬಾರದು, ತಮಗೆ ಗೊತ್ತಿದ್ದಂತೆ ಹಾಡುವುದು, ಹಾಡುತ್ತಾ ಹಾಡುತ್ತಾ, ಆನಂದಿಸುತ್ತಾ, ಚೆನ್ನಾಗಿ ಹಾಡಲು ಕಲಿಯುವುದು. ಹೆಂಗಸರು ತಾವೆಲ್ಲಾ ಒಬ್ಬರಿಗೊಬ್ಬರು ಸಾಥ್ ಕೊಡುವುದು, ಅಂತೆಲ್ಲಾ ಎಂದುಕೊಂಡರಂತೆ. ನೋಡುತ್ತಾ ನೋಡುತ್ತಾ ಅವರ ಗುಂಪು ದೊಡ್ಡದಾಗಿ ಮೂವತ್ತಕ್ಕೂ ಹೆಚ್ಚಿನ ಸದಸ್ಯರಿದ್ದಾರೆ. ಪ್ರತಿ ಸೋಮವಾರ ಸಂಜೆ ಒಂದೆಡೆ ಸೇರಿ ಹಾಡುವುದನ್ನು ಕಲಿಯುತ್ತಾ ಒಬ್ಬರಿಗೊಬ್ಬರು ತರಬೇತಿ ಕೊಟ್ಟುಕೊಂಡು ಅಭ್ಯಸಿಸುತ್ತಾರೆ. ನಡುನಡುವೆ ಕಷ್ಟಸುಖದ ಮಾತಾಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ಇದೆಲ್ಲವೂ ಪರಸ್ಪರ ಒಪ್ಪಿಗೆ, ವಿಶ್ವಾಸ, ನಂಬಿಕೆಗಳ ಆಧಾರದ ಮೇಲೆ ನಡೆಯುತ್ತದೆ. ಸದಸ್ಯರಾಗಲು ಇವನ್ನೆಲ್ಲಾ ಒಪ್ಪಲೇಬೇಕು, ಆದ ಬಳಿಕ ಅವನ್ನು ಪಾಲಿಸಲೇಬೇಕು ಎನ್ನುವುದು ಲಿಖಿತ ನಿಬಂಧನೆ. choir ಹಾಡುಗಾರಿಕೆಯಾದರೂ ಅದಕ್ಕೆ ಯಾವುದೇ ಧರ್ಮದ ಸೋಂಕಿಲ್ಲ.
ಹೀಗೆ ಅವರು ಸಾಗುತ್ತಾ ಹೋದ ವರ್ಷ ಅವರ ಪ್ರಪ್ರಥಮ ಸಾರ್ವಜನಿಕ ಹಾಡುಗಾರಿಕೆ ಪ್ರದರ್ಶನವಿತ್ತು. ಆಗ ನನ್ನನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದು ‘soul sisters’ choir ಗುಂಪಿನ ನಿರ್ವಾಹಕಿ ಮತ್ತು curator, ನನ್ನ ವಿದ್ಯಾರ್ಥಿನಿ. ಈಕೆ ಅದ್ಭುತ ಹಾಡುಗಾರ್ತಿ ಎಂದು ಅವತ್ತೇ ನನಗೆ ತಿಳಿದಿದ್ದು. ತನ್ನ choir ಗುಂಪಿನಲ್ಲಿ ಬಹುರೂಪಿಯಾದ ಇವಳು ಹಲವಾರು ಪಾತ್ರಗಳನ್ನು ನಿರ್ವಹಿಸುತ್ತಾ ಆ ದಿನ (ಮತ್ತು ಈ ವರ್ಷ) ಹಾಡುಗಾರಿಕೆಯ ಕಂಡಕ್ಟರ್ ಕೂಡ ಆಗಿದ್ದಳು. ಅವರುಗಳು ಆರಿಸಿಕೊಂಡಿದ್ದ ಹಾಡುಗಳಲ್ಲಿ ಕೆಲವಷ್ಟೇ ನನಗೆ ಪರಿಚಯವಿದ್ದದ್ದು. ಶಾಸ್ತ್ರೀಯ choir ಪದ್ಧತಿಯಲ್ಲಿ ತರಬೇತಿ ಪಡೆದಿರುವ ನನ್ನ ಬ್ರಿಟಿಷ್ ಗಂಡನ ಮುಖದಲ್ಲಿ ಹಾಡು ಕೇಳುತ್ತಾ ಮೆಚ್ಚುಗೆ, ಮಂದಹಾಸ. ನಾನಂತೂ ಈ ಹೆಂಗಸರ ಸಾಧನೆಗೆ ಬೆಕ್ಕಸಬೆರಗಾಗಿದ್ದೆ. ಬಹಳ ವಿಶೇಷವೆನಿಸಿದ್ದು ಈ ವಿದ್ಯಾರ್ಥಿನಿಯ ಸಾಧನೆಗಳ ಬಗ್ಗೆ. ಏಕೆಂದರೆ ಅವಳು ಭಾರತೀಯ ಮೂಲದವಳು. ಅಲ್ಲಿ ಹುಟ್ಟಿ ಬೆಳೆದು, ಹೆಚ್ಚಿನ ಓದಿಗಾಗಿ ಇಲ್ಲಿ ಆಸ್ಟ್ರೇಲಿಯಾಕ್ಕೆ ಬಂದು, ಒಂದು ಡಿಗ್ರಿ ಮಾಡಿ, ಮತ್ತೊಂದನ್ನು ಓದುತ್ತಾ ಸಂಸಾರಸ್ಥಳಾಗಿ ಇಲ್ಲೇ ನೆಲೆಸಿದ್ದಾಳೆ. ಪ್ರಥಮ ಪ್ರದರ್ಶನಕ್ಕೆಂದು ಭಾರತದಿಂದ ಅವಳ ತಂದೆತಾಯಿಯರು ಬಂದಿದ್ದರು. ಅವಳು ಹಲವಾರು genre ಇಂಗ್ಲಿಷ್ ಹಾಡುಗಳನ್ನು ಹಾಡುವಾಗ ಸ್ವಲ್ಪವೂ ಭಾರತೀಯ accent ಇಲ್ಲ. ಗುಂಪಿನಲ್ಲಿ ಹಲವರು ಬಹುಸಂಸ್ಕೃತಿಗಳ ನಾಡುಗಳಿಂದ ಬಂದವರು. ಕೆಲವರ ಮಾತೃಭಾಷೆ ಬೇರೆಯದಾಗಿದ್ದು ಇಂಗ್ಲಿಷ್ ಎರಡನೇ ಅಥವಾ ಮೂರನೇ ಭಾಷೆಯಾಗಿತ್ತು. ಹಲವಾರು ಹಾಡುಗಾರರು ಲೀಲಾಜಾಲವಾಗಿ ಆದರೆ ಅಷ್ಟೇ ಅದ್ಭುತವಾಗಿ ಹಾಡುತ್ತಿದ್ದರು. ಸ್ಟೇಜಿನ ಮೇಲೆ ಆ ದೇವಿಯರು ಹಾಡುತ್ತಾ ನಲಿಯುತ್ತಾ ನಕ್ಕಾಗ ನವರಾತ್ರಿ ಅಲಲಿಯೇ ಬಂದಿತ್ತು. ಎಲ್ಲರ ಕಂಠಗಳೂ ಮಿಳಿತು ಅವರು ಆನಂದಿಸುತ್ತಾ ಹಾಡುವಾಗ ಪ್ರೇಕ್ಷಕ ವರ್ಗದಲ್ಲಿದ್ದ ಅವರ ಕುಟುಂಬಗಳಿಗೆ, ಸ್ನೇಹಿತರಿಗೆ, ಸಮುದಾಯಕ್ಕೆ ತೃಪ್ತಿ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.