ಹೆರ್ಬೆರ್ತರ ಕವಿತ್ವದ ಉದ್ದೇಶ ಹಾಗೂ ಕಾವ್ಯದ ವಿಷಯಗಳು ಗಂಭೀರವಾಗಿದ್ದರೂ, ಅವರ ಕವನಗಳಲ್ಲಿ ನವಿರಾದ ಹಾಸ್ಯ ಹಾಗೂ ವ್ಯಂಗ್ಯವನ್ನೂ ಕಾಣಬಹುದು. ಅವರ ಕವನಗಳಲ್ಲಿ ಬೈಬಲ್‌ ಹಾಗೂ ಗ್ರೀಕ್ ಪುರಾಣಗಳ ಉಲ್ಲೇಖಗಳೂ ಇವೆ. ಈ ಪುರಾಣಗಳ ಪ್ರಯೋಗದಿಂದ ಹೆರ್ಬೆರ್ತರು ಸಮಕಾಲೀನ ಅನುಭವಗಳ ತೀಕ್ಷ್ಣ ಝಳಪನ್ನು ಸ್ವಲ್ಪ ಮಟ್ಟಿಗೆ ಮೃದುಗೊಳಿಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಪೋಲಂಡ್ ದೇಶದ ಖ್ಯಾತ ಕವಿ ಜ಼್ಬಿಗ್ನಿಎಫ಼್ ಹೆರ್ಬೆರ್ತ್-ರವರ (Zbigniew Herbert, 1924 – 1998) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಜ಼್ಬಿಗ್ನಿಎಫ಼್ ಹೆರ್ಬೆರ್ತ್ರು 20-ನೆಯ ಶತಮಾನದ ಪೋಲಿಷ್ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ಹಾಗೂ ಪ್ರಬಂಧಕಾರರಾಗಿದ್ದರು. ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಅವರು ಪೋಲಂಡಿನಲ್ಲಿ ನಾಜ಼ಿ ಆಕ್ರಮಣದ ವಿರುದ್ಧ ಚಳುವಳಿಗಳಲ್ಲಿ ಪಾಲ್ಗೊಂಡಿದ್ದರು. ಅವರ ಕವನಗಳಲ್ಲಿ ಕಂಡುಬರುವ ನೇರ ನುಡಿ ಹಾಗೂ ಬಲವಾದ ನೈತಿಕ ಕಾಳಜಿಗಳು ನಾಜ಼ಿ ಹಾಗೂ ಕಮ್ಯೂನಿಸ್ಟ್ ಸರ್ವಾಧಿಕಾರದ ಅಡಿಯಲ್ಲಿ ಅವರ ಅನುಭವಗಳಿಂದ ರೂಪುಗೊಂಡಿತು.

ಹೆರ್ಬೆರ್ತರು ಅರ್ಥಶಾಸ್ತ್ರ, ಕಾನೂನು, ಹಾಗೂ ತತ್ವಶಾಸ್ತ್ರ ವಿಷಯಗಳಲ್ಲಿ ಪೋಲಂಡಿನ ಬೇರೆ ಬೇರೆ ಯೂನಿವರ್ಸಿಟಿಗಳಿಂದ ಪದವಿಗಳನ್ನು ಪಡೆದರು. ತಮ್ಮ ಹರೆಯದಲ್ಲೇ ಕವನಗಳನ್ನು ಬರೆಯಲು ಪ್ರಾರಂಭಿಸಿದರೂ, ಹೆರ್ಬೆರ್ತರು 1956-ರ ವರೆಗೂ ಯಾವ ಕವನವನ್ನೂ ಪ್ರಕಟಿಸಲಿಲ್ಲ. ನಾಜ಼ಿ ಆಕ್ರಮಣದ ಕಾಲದಲ್ಲಿ ಎಲ್ಲಾ ಪ್ರಕಟಣೆ ಕಾರ್ಯಗಳನ್ನು ಹತ್ತಿಕ್ಕಿಸಲಾಯಿತು ಹಾಗೂ ನಂತರ ಬಂದ ದಮನಕಾರಿ ಕಮ್ಯೂನಿಸ್ಟ್ ಆಡಳಿತ ಕಾಲದಲ್ಲಿ ಬರಹಗಳ ಮೇಲೆ ತೀವ್ರವಾದ ನಿಯಂತ್ರಣವನ್ನು ಹೇರಿಸಲಾಯಿತು. ಈ ನಿಯಂತ್ರಣಗಳು 1956-ರ ಹೊತ್ತಿಗೆ ಸಡಿಲಗೊಂಡಾಗ, ಹೆರ್ಬೆರ್ತರು 1956-ರಲ್ಲಿ ತಮ್ಮ ಮೊದಲ ಕವನ ಸಂಕಲನವನ್ನು ಹೊರತಂದರು.

ಹೆರ್ಬೆರ್ತರ ಹಲವಾರು ಕವನಗಳಲ್ಲಿ, ಪ್ರಬಂಧಗಳಲ್ಲಿ, ನಾಟಕಗಳಲ್ಲಿ, ಅವರು ಒಂದು ನೈತಿಕ ಹಾಗೂ ತಾತ್ವಿಕ ಗಂಭೀರತೆಯ ಅನ್ವೇಷಣೆ ಹಾಗೂ ಮಾದರಿಯ ಸೃಷ್ಟಿಯಲ್ಲಿ ತೊಡಗಿದ್ದಾರೆಂದು ಕಂಡುಬರುತ್ತದೆ. ಒಂದು ಸಮಾಜದಲ್ಲಿ ಒಬ್ಬ ಕವಿಯ ಪಾತ್ರದ ಬಗ್ಗೆ ಅವರ ಪರಿಕಲ್ಪನೆಯಿಂದ ಮೂಡಿದ ಗಂಭೀರತೆ ಇದು. ಪೋಲಿಷ್ ಸಮಾಜದಲ್ಲಿ ಒಬ್ಬ ಕವಿಯ ಸ್ಥಾನದ ಬಗ್ಗೆ ಹೆರ್ಬೆರ್ತರು ಹೀಗೆಂದಿದ್ದಾರೆ: “ಪೋಲಂಡಿನಲ್ಲಿ ಕವಿಯನ್ನು ಪ್ರವಾದಿಯನ್ನಾಗಿ ಕಾಣುತ್ತಾರೆ. ಆತ ಕೇವಲ ಪದಗಳ ರೂಪಕಾರ ಅಥವಾ ವಾಸ್ತವದ ಅನುಕರಣೆ ಮಾಡುವವನಲ್ಲ. ಆತ ಪ್ರಜೆಗಳ ಆಳವಾದ ಭಾವನೆಗಳನ್ನು ಹಾಗೂ ಅವರ ವಿಸ್ತಾರವಾದ ಪ್ರಜ್ಞೆಗಳನ್ನು ಅಭಿವ್ಯಕ್ತಿಸುತ್ತಾನೆ.”

ಹೆರ್ಬೆರ್ತರ ಕವಿತ್ವದ ಉದ್ದೇಶ ಹಾಗೂ ಕಾವ್ಯದ ವಿಷಯಗಳು ಗಂಭೀರವಾಗಿದ್ದರೂ, ಅವರ ಕವನಗಳಲ್ಲಿ ನವಿರಾದ ಹಾಸ್ಯ ಹಾಗೂ ವ್ಯಂಗ್ಯವನ್ನೂ ಕಾಣಬಹುದು. ಅವರ ಕವನಗಳಲ್ಲಿ ಬೈಬಲ್‌ ಹಾಗೂ ಗ್ರೀಕ್ ಪುರಾಣಗಳ ಉಲ್ಲೇಖಗಳೂ ಇವೆ. ಈ ಪುರಾಣಗಳ ಪ್ರಯೋಗದಿಂದ ಹೆರ್ಬೆರ್ತರು ಸಮಕಾಲೀನ ಅನುಭವಗಳ ತೀಕ್ಷ್ಣ ಝಳಪನ್ನು ಸ್ವಲ್ಪ ಮಟ್ಟಿಗೆ ಮೃದುಗೊಳಿಸುತ್ತಾರೆ.

ಅವರ ಬರಹಗಳು ಇಂಗ್ಲಿಷ್ ಭಾಷೆಗೆ ಅನುವಾದವಾಗುತ್ತಿದ್ದ ಹಾಗೆ ಅವರಿಗೆ ಅಂತರ್‌ರಾಷ್ಟ್ರೀಯ ಖ್ಯಾತಿಯೂ ದೊರೆಯಿತು. ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಸನ್ಮಾನಗಳು, ಪುರಸ್ಕಾರಗಳು ಅವರಿಗೆ ಸಂದಿವೆ. ಜ಼್ಬಿಗ್ನಿಎಫ಼್ ಹೆರ್ಬೆರ್ತ್ರ ಹನ್ನೊಂದು ಕವನ ಸಂಕಲನಗಳು, ಐದು ಪ್ರಬಂಧ-ಕಥಾ ಸಂಕಲನಗಳು, ಹಾಗೂ ಆರು ನಾಟಕಗಳು ಪ್ರಕಟವಾಗಿವೆ.

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ಜ಼್ಬಿಗ್ನಿಎಫ಼್ ಹೆರ್ಬೆರ್ತ್-ರ ಐದೂ ಕವನಗಳನ್ನು ಅಲಿಸಾ ವ್ಯಾಲೆಸ್-ರವರು (Alissa Valles) ಮೂಲ ಪೋಲಿಷ್ ಭಾಷೆಯಿಂದ ಇಂಗ್ಲಿಷ್‌ ಭಾಷೆಗೆ ಅನುವಾದಿಸಿದ್ದಾರೆ.

*****


ನಾನು ಮಾತು ಕೊಟ್ಟೆ
ಮೂಲ: I Gave my Word

ನಾನು ಚಿಕ್ಕವನಾಗಿದ್ದೆ
ಲೋಕಜ್ಞಾನ ನನಗೆ ಹೇಳಿದ್ದೇನೆಂದರೆ
ಮಾತು ಕೊಡಬಾರದೆಂದು

ನಾನು ಸುಲಭವಾಗಿ ಹೇಳಬಹುದಾಗಿತ್ತು
ಸ್ವಲ್ಪ ಯೋಚಿಸಿ ಹೇಳುತ್ತೇನೆ
ಅವಸರವೇನಿದೆ
ರೈಲು ವೇಳಾಪಟ್ಟಿಯೇನೂ ಅಲ್ಲವಲ್ಲ

ನಾನು ಮಾತು ಕೊಡುವೆ
ಡಿಗ್ರಿ ಮುಗಿಸಿದ ನಂತರ
ಮಿಲಿಟ್ರಿ ಸೇವೆ ಮುಗಿಸಿದ ನಂತರ
ಸಂಸಾರ ಹೂಡಿದ ನಂತರ

ಆದರೆ ಸಮಯ ಸಿಡಿಯಿತು
ಹಿಂದೂ ಇಲ್ಲದಾಯಿತು
ಮುಂದೂ ಇಲ್ಲದಾಯಿತು
ಕಣ್ಣು ಕುಕ್ಕುವ ಇಂದಿನಲ್ಲಿ
ಆಯ್ಕೆಯೊಂದ ಮಾಡಬೇಕಿತ್ತು
ಎಂದೇ ನಾನು ಮಾತ ಕೊಟ್ಟೆ

ಒಂದು ಮಾತು –
ಅದೊಂದು ಉರುಳು ನನ್ನ ಕುತ್ತಿಗೆಗೆ
ಒಂದು ಕಡೇ ಮಾತು

ಎಲ್ಲವೂ ಬೆಳಗಾಗಿ
ತಿಳಿಯಾಗಿರುವ
ಅಪರೂಪದ ಕ್ಷಣಗಳಲ್ಲಿ
ನಾನು ನನ್ನಲ್ಲೇ ನೆನೆಸುವೆ
“ನಾ ಕೊಟ್ಟ ಮಾತು,
ನನ್ನ ಮಾತನ್ನು ತಿರುಗಿ ಪಡೆಯಲು
ಅದೆಷ್ಟು ಹಂಬಲಿಸುವೆ”

ಇದು ಹೆಚ್ಚು ಹೊತ್ತು ಉಳಿಯುವುದಿಲ್ಲ
ಭೂಮಿಯ ಅಕ್ಷ ಚೀರುತ್ತದೆ
ಜನರು ಮಡಿಯುತ್ತಾರೆ
ಹಾಗೆಯೇ ಭೂದೃಶ್ಯಗಳು ಕೂಡ
ಸಮಯದ ವರ್ಣಚಕ್ರಗಳು
ಆದರೆ ನಾ ಕೊಟ್ಟ ಮಾತು
ನನ್ನ ಗಂಟಲಲ್ಲಿ ಸಿಕ್ಕಿಕೊಂಡಿದೆ


ಕನಸಿನ ಭಾಷೆ
ಮೂಲ: Dream Language

ಮಲಗುವಾಗ ನಾನು
ಎಲ್ಲರಂತೆ
ಬೆಳಕೇರುವ ಮುಂಚೆ
ಕೀಲಿ ಕೊಡುತ್ತೇನೆ ಗಡಿಯಾರಕ್ಕೆ

ಮುಳುಗುತ್ತೇನೆ ನಾನು
ಬಿಳಿ ಹಡಗೊಂದರಲ್ಲಿ
ಒಗೆಯುತ್ತವೆ ಅಲೆಗಳು ನನ್ನನ್ನು
ಬಿಳಿ ಹಡಗಿನಿಂದ
ಹುಡುಕುತ್ತೇನೆ ನಾನು
ಬೀಗದಕೈಗಳನ್ನು
ಕೊಲ್ಲುತ್ತೇನೆ ನಾನು
ಡ್ರಾಗನ್ನೊಂದನ್ನು
ನಗುತ್ತದೆ ಅದು
ಹಚ್ಚುತ್ತೇನೆ ನಾನು
ದೀಪವೊಂದನ್ನು
ಆದರೆ ಎಲ್ಲಕ್ಕಿಂತ ಮೇಲಾಗಿ
ವಟವಟ ಮಾತಾಡುತ್ತೇನೆ ನಾನು

ನನಗೆ ಗುಮಾನಿಯೇನೆಂದರೆ
ನಾವು ದೃಶ್ಯಗಳಲ್ಲಿ ಕನಸುತ್ತೇವೆಂದು
ಆದರೆ ಹೆಣೆಯುತ್ತೇನೆ ನಾನು
ಈ ಎಲ್ಲಾ ಚಮತ್ಕಾರಿ ಎಳೆಗಳನ್ನು
ಕಥನಗಳ ದಿಬ್ಬದಲಿ
ಮಲಗಿರುವವನಂತೆ
ಹಾಗೇ ಇರಬೇಕಲ್ಲವಾ
ಕನಸಿನ ಭಾಷೆ

ಒಂದು ಚೊಕ್ಕವಾದ ಭಾಷೆ
ಬಹುದೂರ ಎಟುಕುಳ್ಳಂತಹ ಭಾಷೆ
ಹಗುರ
ವ್ಯಾಕರಣವನ್ನು, ಧ್ವನಿನಿಯಮಗಳನ್ನು
ಉಲ್ಲಂಘಿಸುವ ಭಾಷೆ
ಅಣಕದ ಭಾಷೆ
ನಾನರಿಯದ ಭಾಷೆ

ಮಲಗಿದಾಗ ನಾನು
ಬೆಕ್ಕಿನ ಜಾಗದಲ್ಲಿ
ಕಂಚಿನ ದೇಹವನ್ನು
ಇರಿಯುತ್ತದೆ ಕಂಪನವೊಂದು
ನರಳುತ್ತೇವೆ ನಾವು ರಾಗದ ಧಾಟಿಯಲ್ಲಿ

ಮಲಗಿದಾಗ ನಾನು
ಬೆಕ್ಕಿನ ಜಾಗದಲ್ಲಿ
ನನ್ನ ದೇಹವನ್ನು ಕೆಲವೊಮ್ಮೆ
ಇರಿಯುತ್ತದೆ ಕಂಪನವೊಂದು
ರಾಗವೊಂದು ನರಳಿಕೆಯಂತೆ
ಕೇಳಿಬರುತ್ತೆ

ಇಂತಹ ಸಮಯಗಳಲ್ಲಿ
ಕನಸಿನ ಭಾಷೆ
ತನ್ನನ್ನು ಮುಚ್ಚಿಕೊಳ್ಳುತ್ತದೆ
ಆಯಾಸದಿಂದ
ಸ್ವತಂತ್ರವಾಗಿ

ಶುದ್ಧವಾದ
ಸವಿಭಯದ ಭಾಷೆ


ಕವಿತಾನುವಾದದ ಬಗ್ಗೆ
ಮೂಲ: On Translating Poetry

ಒಂದು ಅಡ್ನಾಡಿ ಹೆಜ್ಜೇನಿನ ತರ
ಅವನು ಒಂದು ಹೂವಿನ ಮೇಲೆ ಇಳಿದ
ನಾಜೂಕಾದ ಕಾಂಡವನ್ನು ಬಗ್ಗಿಸುತ್ತಾ

ಹೂದಳಗಳ ಸಾಲುಗಳನ್ನ
ತಳ್ಳಿಕೊಂಡು ಮುನ್ನುಗ್ಗಿದ
ನಿಘಂಟಿನ ಪುಟಗಳನ್ನ
ಮಗುಚುವ ಹಾಗೆ

ಹೋಗಬೇಕು ಅವನಿಗಲ್ಲಿ
ಕಂಪು ಇಂಪು ಇರುವಲ್ಲಿ
ಅವನಿಗೆ ನೆಗಡಿಯಾಗಿದ್ದರೂ
ನಾಲಿಗೆ ರುಚಿ ಇಲ್ಲದಿದ್ದರೂ
ಅವನು ನುಗ್ಗುತ್ತಲೇ ಇದ್ದ
ಹಳದಿ ಶಲಾಕೆಗೆ ತಲೆ
ಗುದ್ದಿಕೊಳ್ಳುವವರೆಗೂ

ಅಷ್ಟೇ, ಅಲ್ಲಿವರೆಗೆ ಮಾತ್ರ ಹೋಗಬಲ್ಲ
ಪುಷ್ಪಪಾತ್ರವನ್ನು ಭೇಧಿಸಿ ಮುನ್ನುಗ್ಗುವುದು
ಬೇರೊಳಗೆ ಸೇರುವುದು
ಬಹಳ ಕಷ್ಟ

ಎಂದೇ, ಹೆಜ್ಜೇನು ಮತ್ತೆ ಮೇಲಕ್ಕೆ ಹಾರುತ್ತೆ
ಜೋರಾಗಿ ಝೇಂಕರಿಸುತ್ತಾ
ಡೌಲಿನಿಂದ ಹೊರಮೂಡುತ್ತಾನೆ

ನಾನಲ್ಲಿ ಒಳಗೆ ಹೋಗಿದ್ದೆ
ಅವನ ಮಾತನ್ನು ನಂಬದವರಿದ್ದರೆ
ಅವರು
ಅವನ ಮೂಗನ್ನು ನೋಡಬಹುದು
ಪರಾಗದ ಹಳದಿ ಹರಡಿದೆ ಅದರ ಮೇಲೆ


ಏನಾಗುವುದು ಆಗ
ಮೂಲ: What will Happen

ಏನಾಗುವುದು ಆಗ
ಕವನಗಳಿಂದ ಕೈಗಳು
ಕಳಚಿ ಬಿದ್ದಾಗ

ಅನ್ಯ ಬೆಟ್ಟಗಳಲ್ಲಿ
ನಾನು ಒಣ ನೀರನ್ನು ಕುಡಿವಾಗ

ಇದೇನೂ ಮುಖ್ಯವಾಗಬೇಕಿಲ್ಲ
ಆದರೆ ಆಗುತ್ತೆ

ಕವನಗಳು ಏನಾಗುತ್ತವೆ
ಉಸಿರು ತೆರಳಿದಾಗ
ನುಡಿಯ ಘನತೆ ತಿರಸ್ಕೃತವಾದಾಗ

ಕಣಿವೆಯೊಳಗಿನ
ಕತ್ತಲುಕವಿದ ಕಾಡಿನಂಚಿನಲಿ
ಹೊಸ ನಗುವ ಸದ್ದು
ಮಾರ್ದನಿಸುತ್ತದೆ
ನಾನು ಮೇಜನ್ನು ಬಿಟ್ಟು
ಕಣಿವೆಯೊಳಗೆ ಇಳಿವೆನಾ?


ತಾರೆಗಳು ನೆಚ್ಚಿದವರು
ಮೂಲ: The Stars’ Chosen Ones

ಅಲ್ಲಿದ್ದಾನೊಬ್ಬ ಕವಿ
ಅವನು ಏಂಜಲ್ ಅಲ್ಲ

ರೆಕ್ಕೆಗಳಿಲ್ಲ ಅವನಿಗೆ
ಗರಿಚಿಗುರಿದ ಬಲಗೈ
ಮಾತ್ರ

ಆ ಕೈ ಗಾಳಿಯನ್ನು ಬಡಿಯುತ್ತೆ
ಅವನು ಮೂರಡಿ ಹಾರುತ್ತಾನೆ ಮೇಲಕ್ಕೆ
ಮತ್ತೆ ತಿರುಗಿ ಬೀಳುತ್ತಾನೆ ಕೆಳಕ್ಕೆ

ಅವನು ಪೂರ್ತಿಯಾಗಿ ಕೆಳ ಬಿದ್ದ ಮೇಲೆ
ಪಾದಗಳಿಂದ ನೆಲವ ಒದ್ದು
ತೇಲುತ್ತಾನೆ ಮೇಲೆ ಒಂದು ಗಳಿಗೆ
ಗರಿಚಿಗುರಿದ ಕೈಯನ್ನು ಪಟಪಟಿಸುತ್ತಾ

ಆಹಾ, ಅವನು ಮಾತ್ರ ಮಣ್ಣಿನ ಆಕರ್ಷಣೆಯನ್ನು ತಡೆಯಬಲ್ಲನಾದರೆ
ಅವನು ತಾರೆಗಳ ಬೀಡೊಂದರಲ್ಲಿ ಮನೆ ಮಾಡಿಬಲ್ಲ
ಅವನು ಕಿರಣದಿಂದ ಕಿರಣಕ್ಕೆ ಧಾವಿಸಬಲ್ಲ
ಅವನು…

ಆದರೆ
ತಾವೆಲ್ಲಿ ಅವನ ಭುವಿಯಾಗುವೆವೋ
ಎಂಬ ಆಲೋಚನೆ ಮಾತ್ರದಲ್ಲೇ
ತಾರೆಗಳು ಬೆದರಿ ಬಿದ್ದವು

ತನ್ನ ಗರಿಚಿಗುರಿದ ಕೈಯಿಂದ ಕವಿ
ತನ್ನ ಕಣ್ಣುಗಳನ್ನು ಮರೆಸಿಕೊಳ್ಳುತ್ತಾನೆ
ಹಾರಾಟದ ಕನಸು ಕಾಣುತ್ತಿಲ್ಲ ಈಗ ಅವನು
ಕಾಣುತ್ತಾನೆ ಅನಂತದ ನೆರಳ್‌ಚಿತ್ರದಲ್ಲಿ
ಮಿಂಚಿನ ಝಳಪಿನಂತೆ ಗೆರೆಗೀರಿದ
ಪತನದ ಕನಸು