ಇಷ್ಟೊತ್ತು ಗುಡುಗುತ್ತಿದ್ದ ಯಜಮಾನ ಈಗ ನಕ್ಕ. ‘ಎಲ್ಲಾ ನಂದೇ; ಇಲ್ಲಿರೋ ಕಾಡು, ಮರ, ಭೂಮಿ ಎಲ್ಲಾ ನಂದೇ..’ ಗಹಗಹಿಸಿ ಜೋರಾಗಿ ನಕ್ಕ. ಜೋರುಮಳೆ ಬಂದು ನಿಂತಂತೆ ಯಜಮಾನನ ನಗು ನಿಂತಿತು. ಐದಾರು ಬಾರಿ ಚಿಲುಮೆಯ ಕಿಡಿ ಕತ್ತಲಿನಲ್ಲಿ ಯಜಮಾನನ ಕೈ ಬಾಯಿಯ ಹಾದಿಯಲ್ಲಿ ಓಡಾಡಿತು. ಆ ಸಮಯ ಅಲ್ಲಿರುವ ಪ್ರತಿಯೊಬ್ಬರ ಉಸಿರಾಟದ ಶಬ್ದವು ಸ್ಪಷ್ಟವಾಗಿ ಕೇಳಿಸುವಷ್ಟು ನಿಶ್ಯಬ್ದ ಇತ್ತು. ಆ ನಿಶ್ಯಬ್ದವನ್ನು ಸೀಳಿ ಯಜಮಾನನ ಆಜ್ಞೆಯ ನುಡಿ ಬಂತು. “ಹಾಗಾದ್ರೆ ಈಗೊಂದು ಕೆಲಸ ಮಾಡಿ. ಇಲ್ಲೇ ಹತ್ತಿರದಲ್ಲಿ ಸುತ್ತಮುತ್ತಲು ಇರುವ ಗುಡಿಸಲುಗಳಿಗೆಲ್ಲ ಬೆಂಕಿ ಹಚ್ಚಿ ಬನ್ನಿ. ಅವು ಉರಿಯುವಷ್ಟು ಕ್ಷಣವಾದರೂ ಈ ಮನೆಗೆ ಬೆಳಕಾಗುತ್ತೆ.”
ನವೀನ್ ಮಧುಗಿರಿ ಬರೆದ ಸಣ್ಣಕಥೆ “ಬೆಳಕು” ನಿಮ್ಮ ಈ ಭಾನುವಾರದ ಓದಿಗೆ
“ಅಳ್ಬೇಡ ಸುಮ್ನಿರು ರಾಜ. ಆಯಾ ಬರ್ತಳೆ, ಈಗ ಬೆಳಕು ತರ್ತಾಳೆ. ಭಯ ಪಡ್ಬೇಡ, ನಿನ್ನಮ್ಮ ನೋಡು ನಿನ್ ಜೊತೆಗೆ ಇದ್ದೀನಲ್ಲ.” ಗಾಢ ಕತ್ತಲಿನಲ್ಲಿ ಮಹಡಿಯ ಕೋಣೆಯಿಂದ ಮಗು ಅಳುತ್ತಿರುವುದು, ಆ ಮಗುವನ್ನ ತಾಯಿ ಸಮಾಧಾನಿಸುತ್ತಿರುವ ಧನಿ ಕೇಳುತ್ತಿತ್ತು.
ಬಂಗಲೆಯ ನಡುವಿನ ವಿಶಾಲ ಪಡಸಾಲೆಯಲ್ಲಿ ಸಿಂಹಾಸನದಂತಹ ಕುರ್ಚಿಯ ಮೇಲೆ ಕುಳಿತ ಯಜಮಾನನ ಕೈಯಲ್ಲಿ ಉರಿವ ಧೂಮ್ರದ ಚಿಲುಮೆಯಿತ್ತು. ಅದು ಆತನ ಕೈಯಿಂದ ಬಾಯಿಗೆ ಚಲಿಸುವಾಗ ಕತ್ತಲಿನಲ್ಲಿ ಬೆಂಕಿಯ ಕಿಡಿಯೊಂದು ಓಡಾಡಿದಂತೆ ಕಾಣುತ್ತಿತ್ತು. ಆತನ ಕೈಯಲ್ಲಿನ ಬೆಂಕಿಯ ಕಿಡಿಗಿಂತಲೂ ಬಾಯಲ್ಲಿನ ಉರಿ ಜೋರಾಯಿತು.
“ಏ ದರಿದ್ರ ನಾಯಿಗಳಾ ಎಲ್ ಸಾಯ್ತಿದ್ದೀರ?” ಯಜಮಾನನ ದನಿ ಕತ್ತಲಿನ ಬಂಗಲೆಯ ಮೂಲೆಮೂಲೆಯಲ್ಲೂ ಚಂಡಿನಂತೆ ಪುಟಿದೆದ್ದು ಉರುಳಿತು.
“ಇಲ್ಲೇ ಇದ್ದೀವ್ ಬುದ್ದಿ”
“ಇದ್ದೀವ್ ದಣಿ”
“ಗೋಡೆತಾವ್ ಕೂತಿದ್ದೆ ಒಡೆಯ”
“ಅಪ್ಪಣೆಯಾಗ್ಲಿ ಸಾವ್ಕಾರ್ರೇ”
“ಹೇಳಿ ಯಜ್ಮಾನ್ರೇ”
ಜೊತೆಯಾದ ನಾಲ್ಕಾರು ದನಿಗಳು ತಮ್ಮ ಯಜಮಾನನನ್ನು ಬೇರೆ ಬೇರೆ ಹೆಸರುಗಳಿಂದ ಕರೆದವಾದರೂ ಎಲ್ಲಾ ದನಿಯಲ್ಲೂ ಒಂದೇ ರೀತಿಯ ಭಯ ಮಿಶ್ರಿತ ನಡುಕವಿತ್ತು. ದನಿಯ ಜೊತೆಗೆ ಹತ್ತಾರು ಹೆಜ್ಜೆಗಳ ಸಪ್ಪಳ ಯಜಮಾನನನ್ನು ಸಮೀಪಿಸಿದವು.
“ಕತ್ತಲಾದರೂ ಸುಮ್ಮನೆ ಕುಳಿತಿದ್ದೀರಾ!? ಹೋಗಿ ಬೆಳಕು ಗಿಳಕನ್ನಾದ್ರು ಹಚ್ರಿ ತೊಲಗ್ರೀ” ಯಜಮಾನ ಗುಡುಗಿದ.
“ದೀಪ್ದಾಗೆ ಎಣ್ಣೆ ಬತ್ತಿ ಖಾಲಿಯಾಗೈತೆ ಒಡೆಯ” ಹೆಣ್ಣು ಧ್ವನಿ ನಡುಗುತ್ತಾ ನುಡಿಯಿತು.
“ಮೊದ್ಲೇ ಇದ್ನ ಬೊಗ್ಳೋಕ್ ಏನಾಗಿತ್ತು?” ಯಜಮಾನ ಕುದಿದುಹೋದ.
“ನೀವೇ ಹೇಳಿದ್ದೀರಲ್ಲ, ನೀವ್ ಹೇಳಿದ್ದಷ್ಟೇ ನಾವು ಕೇಳ್ಬೇಕು. ನಾವೇನು ನಿಮಗೆ ಹೇಳುವ ಹಾಗಿಲ್ಲವಲ್ಲ ಒಡೆಯ” ಗಂಡು ದನಿಯೊಂದು ಭಯ ಭಕ್ತಿಯಿಂದ ನುಡಿಯಿತು.
“ಅಗ್ಗಿಷ್ಟಿಕೆಗಾದ್ರೂ ಬೆಂಕಿ ಹಚ್ರಿ” ಯಜಮಾನ ಆಜ್ಞಾಪಿಸಿದ.
“ಉರುವಲು ತಂದಿಲ್ಲ ಒಡೆಯ” ಮತ್ತೆರಡು ಗಂಡು ಧನಿ ಒಟ್ಟಾಗಿ ನುಡಿದವು.
“ತಿಂತೀರಲ್ಲ, ತರೋಕೇನ್ ರೋಗ?” ಯಜಮಾನ ಗದರಿದ.
“ಸುತ್ಲು ಮುತ್ಲು ಕಾಡ್ನೆಲ್ಲ ಸರ್ಕಾರ ನಿಮ್ಮೆಸ್ರುಗ್ ಮಾಡ್ಕೊಟ್ಟೈತೆ. ನಿಮ್ಮಪ್ಪಣೆಯಿಲ್ದೆ ಅಲ್ಲೊಂದ್ ಹೆಜ್ಜೆಯಿಡಕಾಯ್ತದಾ ಧಣಿ.” ಒಂದು ಹಣ್ಣಾದ ಗಂಡಸಿನ ಧ್ವನಿ.
ಇಷ್ಟೊತ್ತು ಗುಡುಗುತ್ತಿದ್ದ ಯಜಮಾನ ಈಗ ನಕ್ಕ. ‘ಎಲ್ಲಾ ನಂದೇ; ಇಲ್ಲಿರೋ ಕಾಡು, ಮರ, ಭೂಮಿ ಎಲ್ಲಾ ನಂದೇ..’ ಗಹಗಹಿಸಿ ಜೋರಾಗಿ ನಕ್ಕ. ಜೋರುಮಳೆ ಬಂದು ನಿಂತಂತೆ ಯಜಮಾನನ ನಗು ನಿಂತಿತು. ಐದಾರು ಬಾರಿ ಚಿಲುಮೆಯ ಕಿಡಿ ಕತ್ತಲಿನಲ್ಲಿ ಯಜಮಾನನ ಕೈ ಬಾಯಿಯ ಹಾದಿಯಲ್ಲಿ ಓಡಾಡಿತು. ಆ ಸಮಯ ಅಲ್ಲಿರುವ ಪ್ರತಿಯೊಬ್ಬರ ಉಸಿರಾಟದ ಶಬ್ದವು ಸ್ಪಷ್ಟವಾಗಿ ಕೇಳಿಸುವಷ್ಟು ನಿಶ್ಯಬ್ದ ಇತ್ತು. ಆ ನಿಶ್ಯಬ್ದವನ್ನು ಸೀಳಿ ಯಜಮಾನನ ಆಜ್ಞೆಯ ನುಡಿ ಬಂತು. “ಹಾಗಾದ್ರೆ ಈಗೊಂದು ಕೆಲಸ ಮಾಡಿ. ಇಲ್ಲೇ ಹತ್ತಿರದಲ್ಲಿ ಸುತ್ತಮುತ್ತಲು ಇರುವ ಗುಡಿಸಲುಗಳಿಗೆಲ್ಲ ಬೆಂಕಿ ಹಚ್ಚಿ ಬನ್ನಿ. ಅವು ಉರಿಯುವಷ್ಟು ಕ್ಷಣವಾದರೂ ಈ ಮನೆಗೆ ಬೆಳಕಾಗುತ್ತೆ.”
“ಅಪ್ಪಣೆ ಒಡೆಯ”
“ಊಂ ದಣಿ”
“ಆಗ್ಲಿ ಯಜಮಾನ್ರೇ”
“ಸರಿ ಬುದ್ದಿ”
“ಹೊರಟ್ವಿ ಸಾವ್ಕಾರ್ರೆ”
ಎಲ್ಲರ ಹೆಜ್ಜೆ ಸಪ್ಪಳ ಬಾಗಿಲಿನತ್ತ ಹೊರಟವು.
ಅವರೆಲ್ಲರೂ ಯಜಮಾನನ ಮನೆಯಲ್ಲಿ ಒಂದು ಹಿಡಿ ಅನ್ನ ಒಂದು ಬೊಗಸೆ ನೀರಿಗಾಗಿ ದುಡಿಯುತ್ತಿದ್ದರು. ಯಜಮಾನ ಸುಡಲು ಹೇಳಿದ ಗುಡಿಸಲು ಅವರ ಮನೆಗಳಾಗಿದ್ದವು. ಅಲ್ಲಿ ಅವರದೇ ಮನೆಯ ವೃದ್ಧರು ಮಕ್ಕಳು ಬಂಧುಗಳು ಇದ್ದರು. ಯಜಮಾನನ ಆಜ್ಞೆಯಂತೆ ಅವರು ತಮ್ಮದೇ ಗುಡಿಸಲುಗಳನ್ನ ಸುಡಲು ಹೊರಟಿದ್ದರು.
ಅವರುಗಳು ಹೋಗಿ ಹೆಚ್ಚೇನು ಹೊತ್ತಾಗಿರಲಿಲ್ಲ. ಇದ್ದಕ್ಕಿದ್ದಂತೆ ಧಗಧಗಿಸುವ ಬೆಂಕಿ. ಬಂಗಲೆಯಲ್ಲಿ ಬೆಳಕೋ ಬೆಳಕು. ಚಿಲುಮೆ ಎಳೆಯುತ್ತಿದ್ದ ಯಜಮಾನನ ಮುಖ ಬೆಳಕಿನಲ್ಲಿ ಪ್ರಜ್ವಲಿಸಿತು. ಸರ್ವ ರೀತಿಯ ಅಹಂಕಾರ ಭಾವಗಳು ಆತನ ಮುಖದ ಮೇಲೆ, ಮೈಯಲ್ಲಿನ ರೋಮ ರೋಮದ ಮೇಲೆ ನರ್ತಿಸುತ್ತಿದ್ದವು. ಇದ್ದಕ್ಕಿದ್ದಂತೆ ಬೆಳಕಿನ ಪ್ರಕಾಶ ಹೆಚ್ಚಾಯಿತು. ಚಿಲುಮೆ ಎಳೆಯುತ್ತಿದ್ದ ಯಜಮಾನ ಕಿಟಕಿಯ ಕಡೆ ತಿರುಗಿ ನೋಡಿ ಬೆಚ್ಚಿದ. ಅವನದೇ ಮನೆಯ ಕೆಲಸದಾಳುಗಳ ಸುಟ್ಟು ಕರಕಲಾದ ದೇಹಗಳು ಕೈಯಲ್ಲಿ ಉರಿವ ಬೆಂಕಿಯ ಪಂಜು ಹಿಡಿದು ಬೆಳಕು ನೀಡಲು ಬಂಗಲೆಯನ್ನು ಸಮೀಪಿಸುತ್ತಿದ್ದವು.
ರಘುನಂದನ್ ವಿ. ಆರ್ ‘ನವೀನ್ ಮಧುಗಿರಿ ಎಂಬ ಕಾವ್ಯನಾಮದಿಂದ ಬರೆಯುತ್ತಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ನವೀನ್ ಅವರಿಗೆ ಕಥೆ, ಕವಿತೆ, ಹಾಯ್ಕು ಮತ್ತು ಶಿಶುಗವಿತೆಗಳನ್ನು ಬರೆಯುವುದರಲ್ಲಿ ಆಸಕ್ತಿ. ‘ರುಚಿಗೆ ತಕ್ಕಷ್ಟು ಪ್ರೀತಿ’ (ಕವಿತೆಗಳ ಸಂಕಲನ) ‘ಚಿಟ್ಟೆ ರೆಕ್ಕೆ’ (ಕಿರುಗವಿತೆಗಳ ಸಂಕಲನಗಳು) ಮತ್ತೆರಡು ಇವರ ಪ್ರಕಟಿತ ಕೃತಿಗಳು.