ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಾಗಶ್ರೀ ಶ್ರೀರಕ್ಷ ಬರೆದ ದಿನದ ಕವಿತೆ.

ಬಂಡೆಯಲ್ಲ ಕೆತ್ತನೆಯಾಗುತ್ತೇನೆ

ನನಗೂ ಅರ್ಥವಾಗಬಾರದೆಂದು
ಬರೆಯುತ್ತೇನೆ
ಗಡಿಯಾರದ ಮುಳ್ಳಿನ ಲಯಬದ್ದ ಚಲನೆಗೆ
ಎದೆ ಬಡಿತವನ್ನು ಹೊಂದಿಸಲು ಹವಣಿಸಿ
ಗದ್ದಲವೆನಿಸಿ, ಕಣ್ಣು ಬಿಟ್ಟು
ಧ್ಯಾನಸ್ಥ ಸ್ಥಿತಿಯಲ್ಲಿ ಬಂಡೆಯಲ್ಲ
ಕೆತ್ತನೆಯಾಗುತ್ತೇನೆ
ದಿನ ಉದುರುವ ತಲೆಗೂದಲು
ಕಳಚಿ ತುಂಬಿಕೊಂಡು,
ಕಿವಿ ಹಿಂಡಿದರೆ
ನೋವು ದೂರದಿಂದ ತಲೆದೂಗಿತ್ತು
ಕರೆದರೆ ಓ ಗೊಡದೆ
ಧ್ವನಿ ನನಗೆ ಮಾತ್ರ ಕೇಳಿಸಿತು
ಆಚೆ ಕೇಳಲಿಲ್ಲವೆಂಬ ಸುಖದಗ್ನಿಯೇ
ಒಂದು ಸುಖ
ನನಗೂ ತುಂಬಿ ತುಂಬಿ ಬರುತ್ತಿದೆ
ಎದೆ ಹೊಟ್ಟೆಯೊಳಗೆ ಚೇಳು ಕಚ್ಚಿ
ಹೆಪ್ಪುಗಟ್ಟಿದ ಕೆಂಪು ಬಂಡೆಯಲ್ಲ ಕೆತ್ತನೆಗೆ
ನೀಲಿ ಚರ್ಮದ ಕವಚ…
ಇನ್ನೂ ಬಡಿತವಿದೆ
ಮುಗಿದ ಗಳಿಗೆಯ ಕಣ್ಣ ಕೆಂಪು ಹನಿಯಲ್ಲಿ
ಯಾರನ್ನ ನೋಡಲಿ?
ಪಾರದರ್ಶಕಲ್ಲವದು
ಬಣ್ಣದ ಬದುಕಿನ ಕೊಂಕು ಹನಿಯಲ್ಲಿ
ಯಾರ ಬಿಂಬವೂ ಕಾಣುವುದಿಲ್ಲ
ಬದುಕಿಬಿಟ್ಟೆ