ಬರುವಾಗ ಸುಳ್ಯ, ಪುತ್ತೂರಿನ ಸಮೀಪ ಬೆಳಗಿನ ಜಾವ ಸುಮಾರು ೪ ಗಂಟೆಗೆ ಮೂತ್ರವಿಸರ್ಜನೆಗಾಗಿ ಗಾಡಿ ನಿಲ್ಲಿಸಿದರು. ನಂತರ ಹೊರಟು ಇನ್ನೇನು ಮೈಸೂರು ಹತ್ತಿರ ಬರುತ್ತಿದ್ದಂತೆ ಎಲ್ಲರಿಗೂ ಸಂಪೂರ್ಣ ಎಚ್ಚರವಾಯಿತು. ಇದ್ದಕ್ಕಿದ್ದಂತೆ ಯಾರೋ ‘ರಾಜಪ್ಪ ಎಲ್ಲಿ’ ಅಂತ ಕೇಳಿದರು. ಟೆಂಪೋ ಎಲ್ಲಾ ಹುಡುಕಿದರೂ ರಾಜಪ್ಪ ಇಲ್ಲ. ಎಲ್ಲಿ ಬಿಟ್ಟು ಬಂದ್ವಿ ಗೊತ್ತಿಲ್ಲ. ಅವರು ಪಾಪ ಒಂದು ಪಟಾಪಟಿ ಲುಂಗಿ ಬನಿಯನ್ ಮತ್ತು ಟವೆಲ್ ಸುತ್ತಿಕೊಂಡು ಇಳಿದವರು ವಾಪಸ್ ಬರುವ ಹೊತ್ತಿಗೆ ಟೆಂಪೋ ಹೊರಟಾಗಿತ್ತು. ಕಾಲಲ್ಲಿ ಚಪ್ಪಲಿಯೂ ಇಲ್ಲದಂತೆ ಯಾರದ್ದೋ ಸಹಾಯ ಕೇಳಿ ಕೊನೆಗೆ ಚಾಮರಾಜನಗರದಲ್ಲಿ ಕಾಣಿಸಿಕೊಂಡರು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿಯಲ್ಲಿ ನಾಟಕರಂಗದ ಕೆಲವು ತಮಾಷೆ ಪ್ರಸಂಗಗಳು
ಹವ್ಯಾಸಿ ರಂಗಭೂಮಿಯಲ್ಲಿ ಒಂದು ನಾಟಕದ ತಾಲೀಮಿನಿಂದ ಪ್ರದರ್ಶನದವರೆಗೆ ಹಲವಾರು ಹಿನ್ನೆಲೆಯಿಂದ ಬಂದವರು, ವಿವಿಧ ವಯೋಮಾನದ ಕಲಾವಿದರು ಪಾಲ್ಗೊಳ್ಳುತ್ತಾರೆ. ಅವರೆಲ್ಲರೂ ಈ ನಾಟಕದಲ್ಲಿ ಭಾಗವಹಿಸುವ ಕಾರಣಗಳು ಬೇರೆ ಬೇರೆಯೇ ಇರುತ್ತದೆ. ಹಾಗಾಗಿ ಹವ್ಯಾಸಿ ತಂಡ ಯಾವಾಗಲೂ ಫ಼್ರೆಶ್ ಆಗಿರುತ್ತದೆ. ಕೆಲವರಿಗೆ ಸ್ಟೇಜ್ ಮೇಲೆ ಬೇರೆ ಬೇರೆ ಬಟ್ಟೆ ಹಾಕಿಕೊಂಡು ಮಿಂಚಬೇಕು ಅನ್ನೋ ಆಸೆ, ಇನ್ನು ಕೆಲವರು ತಮ್ಮ ಪರಿಚಯದವರು ತಾಲೀಮಿನಲ್ಲಿದ್ದಾರೆ ಎಂದು ನಾಟಕಕ್ಕೆ ತಾವೂ ಸೇರಿದವರು, ಇನ್ನು ಕೆಲವರು ಏನೂ ಗೊತ್ತಿಲ್ಲದೆ ಖುಶಿಗಾಗಿ ಬರುವವರು ಅದರಲ್ಲೂ ಕೆಲವರು ನಟನೆ ಕಲಿಯಲೇಬೇಕು ಎನ್ನುವವರು. ಹೀಗೆ ನಾನಾ ವಿಧದ ಜನ ಬರುತ್ತಾರೆ. ಆದರೆ, ಅವರೆಲ್ಲರನ್ನೂ ಒಂದು ಗುರಿಗೆ ತರುವುದು ನಿರ್ದೇಶಕರಿಗೆ ಸವಾಲಿನ ಕೆಲಸವೇ. ಹೆಚ್ಚಿನವರು ತಾಲೀಮಿನಲ್ಲಿ ಎಲ್ಲಿ ತಮ್ಮ ಪ್ರತಿಭೆ ತೋರಿಸಿದರೆ ಕಡಿಮೆ ಆಗುತ್ತದೋ ಎಂದು ತಮ್ಮ ಪ್ರತಿಭೆಯನ್ನು ಪ್ರದರ್ಶನದ ದಿನಕ್ಕೆಂದೇ ಮೀಸಲಿಟ್ಟಿರುತ್ತಾರೆ.
ಯಾವುದೇ ನಾಟಕ ಅಭ್ಯಾಸ ಮಾಡಬೇಕಾದರೆ ನಿರ್ದೇಶಕರು ‘ಪ್ರಾಪರ್ಟಿಗಳ ಜೊತೆ ಅಭ್ಯಾಸ ಮಾಡಿ’ ಅಂತ ಪದೇ ಪದೇ ಹೇಳುತ್ತಿದ್ದರೂ ಅದರ ಬಗ್ಗೆ ನಟರು ಹೆಚ್ಚಿನ ಗಮನ ಕೊಡುವುದಿಲ್ಲ. ವೃತ್ತಿಪರ ತಂಡದ ಹಾಗೆ ನೇಪಥ್ಯದ ಕೆಲಸಗಳಿಗೆ ಅಂತಲೇ ಬೇರೆ ಜನ ಇಲ್ಲದಿರುವುದರಿಂದ ಪಾತ್ರಕ್ಕೆ ಬೇಕಾದ ಸಲಕರಣೆಗಳನ್ನು ನಟರೇ ಹೊಂದಿಸಿಕೊಳ್ಳಬೇಕಾಗುತ್ತದೆ.
ಇಂತಹ ನಾಟಕ ತಯಾರಿ ಹಾಗೂ ಪ್ರದರ್ಶನದ ಸಂದರ್ಭಗಳಲ್ಲಿ ಹಲವಾರು ತಮಾಷೆ ಪ್ರಸಂಗಗಳು ನಡೆಯುತ್ತವೆ. ಆ ಕ್ಷಣಕ್ಕೆ ಜೀವನ್ಮರಣದ ಪ್ರಶ್ನೆ ಎನಿಸಿದ್ದು ನಂತರ ಅದೇ ನಗು ತರಿಸುತ್ತದೆ.
ಹಿಂತಿರುಗಿದ ಮಡಕೆ
ಬಹುಶಃ ‘ಮಹಿಮಾಪುರ’ ನಾಟಕ. ನಮ್ಮ ಪರಿಚಯದವರೊಬ್ಬರು ಅದರಲ್ಲಿ ಪಾತ್ರ ಮಾಡಿದ್ದರು. ನಾವು ನಾಟಕ ನೋಡಲು ಹೋಗಿದ್ದೆವು. ಮೊದಲನೆಯ ದೃಶ್ಯ ಜಾತ್ರೆಯದ್ದು. ಅದಕ್ಕೆ ಈ ಹುಡುಗ ಮತ್ತು ನಟಿಯೊಬ್ಬರು ದೊಡ್ಡ ಮಡಕೆಯನ್ನು ತಲೆಗೆ ಹಾಕಿಕೊಂಡು ಮೆರವಣಿಗೆಯಲ್ಲಿ ಗುಂಪಿನಲ್ಲಿ ನೃತ್ಯ ಮಾಡುವ ದೃಶ್ಯ. ಮಡಕೆಗೆ ಕಣ್ಣು ಕಾಣುವಂತೆ ತೂತು ಮಾಡಿಟ್ಟಿದ್ದರು. ಆದರೆ ಈ ನಟ ತಾಲೀಮಿನಲ್ಲಿ ಅದನ್ನು ಒಮ್ಮೆಯೂ ಹಾಕಿ ಅಭ್ಯಾಸ ಮಾಡಿರಲಿಲ್ಲ. ಎರಡು ಹೆಜ್ಜೆ ನೃತ್ಯ ಮಾಡುತ್ತಿದ್ದಂತೆ ತೂತು ಮಾಡಿದ ಮಡಕೆಯ ಭಾಗ ತಲೆಯ ಹಿಂದೆ ಹೋಗಿಬಿಡ್ತು. ಈ ನಟನಿಗೆ ಮುಂದೆ ಏನೂ ಕಾಣಿಸುತ್ತಿಲ್ಲ. ಎರಡು ಕೈಗಳನ್ನು ಅಕ್ಕ ಪಕ್ಕದವರು ಹಿಡಿದಿದ್ದಾರೆ. ಅವರಿಗೆ ಈ ನಟನಿಗೆ ಕಣ್ಣು ಕಾಣಿಸುತ್ತಿಲ್ಲ ಎನ್ನುವುದು ತಿಳಿಯುತ್ತಿಲ್ಲ. ಅವನು ಮುಂದೆ ಮುಂದೆ ಬಂದು ವೇದಿಕೆಯ ತುದಿಗೆ ಬಂದುಬಿಟ್ಟ. ನೋಡುತ್ತಿರುವವರಿಗೆ ಇನ್ನೆಲ್ಲಿ ಬಿದ್ದುಬಿಡುತ್ತಾನೋ ಎಂಬ ಆತಂಕ. ಇದನ್ನು ನೋಡಿದ ಇನ್ನೊಬ್ಬರು ಅವನನ್ನು ಸೈಡ್ ವಿಂಗಿಗೆ ಎಳೆದುಕೊಂಡು ಹೋದರು.
ನಿಜವಾದ ನೇಣು
‘ನೇಣಿನ ನೆರಳಲ್ಲೇ’ ಎಂಬ ನಾಟಕ. ಗಲ್ಲು ಶಿಕ್ಷೆಗೆ ಗುರಿಯಾಗುವ ಖೈದಿಯ ಮುಂದೆ ಇಡೀ ನಾಟಕ ನಡೆಯುತ್ತದೆ. ನೇಣಿನ ಹಗ್ಗವನ್ನು ತೂಗುಹಾಕಲು ಒಂದು ಫ಼್ರೇಮ್‌ಮಾಡಿಸಿ ಹಗ್ಗ ಕಟ್ಟಲು ಇಬ್ಬರಿಗೆ ಹೇಳಿದ್ದರು. ಅವರು ತಮ್ಮ ಉದ್ದಕ್ಕೆ ಆ ಹಗ್ಗವನ್ನು ಕಟ್ಟಿ ಪ್ರದರ್ಶನ ಕ್ಕೆ ತಯಾರಾದರು. ಆದರೆ ಆ ಪಾತ್ರ ಮಾಡುತ್ತಿದ್ದ ನಟ, ನನ್ನ ತಮ್ಮನ ಎತ್ತರ ಅವರಿಗಿಂತ ಕಡಿಮೆ. ಅವನು ಹೋಗಿ ನೇಣಿನ ಹಗ್ಗಕ್ಕೆ ತಲೆ ತೂರಿಸುತ್ತಾನೆ, ಎರಡು ಕಾಲುಗಳೂ ನೇತಾಡುತ್ತಿವೆ. ತಕ್ಷಣ ಮತ್ತೊಬ್ಬರು ಓಡಿ ಹೋಗಿ ಕೆಳಗೆ ಒಂದು ಕುರ್ಚಿಯನ್ನಿಟ್ಟರು.

ಮಾಯವಾದ ಕಾಸ್ಟ್ಯೂಂ
ತುಘಲಕ್ ನಾಟಕ. ಕೆಲವು ಹಿರಿಯ ನಟರು ನಿರ್ದೇಶಕರ ಮಾತನ್ನು ಚಾಚೂ ತಪ್ಪದೇ ಕೇಳುತ್ತಿದ್ದರು. ಅವರು ತಾವು ನಾಟಕದ ಮಧ್ಯದಲ್ಲಿ ಬದಲಾಯಿಸಬೇಕಾದ ಬಟ್ಟೆಗಳನ್ನು ಒಂದು ಸೀರೆಯ ಮೇಲೆ ಸೈಡ್ ವಿಂಗಿನಲ್ಲಿ ನೀಟಾಗಿ ಜೋಡಿಸಿಕೊಂಡಿದ್ದರು. ನಾಟಕದಲ್ಲಿ ದೆಹಲಿಯಿಂದ ದೌಲತಾಬಾದ್‌ಗೆ ಹೋಗುತ್ತಿರುವ ಜನರ ಗುಂಪಿನ ದೃಶ್ಯ ಬರುತ್ತದೆ. ಆಗ ಬಟ್ಟೆಗಳ ಗಂಟುಗಳನ್ನು ಜನ ತೆಗೆದುಕೊಂಡು ಹೋಗಬೇಕು. ಪ್ರದರ್ಶನದ ಸಮಯದಲ್ಲಿ ಆ ಜನರ ಪಾತ್ರ ಮಾಡುತ್ತಿದ್ದ ನಟನೊಬ್ಬನಿಗೆ ತಾನು ಬಟ್ಟೆ ಗಂಟು ಮಾಡಿಕೊಂಡಿಲ್ಲ ಎನ್ನುವುದು ನೆನಪಾಗಿದೆ. ಅಕ್ಕ ಪಕ್ಕ ನೋಡಿದ್ದಾನೆ. ಒಂದು ಸೀರೆಯ ಮೇಲೆ ಹಲವು ಬಟ್ಟೆಗಳಿವೆ. ಆ ಸೀರೆಯನ್ನೇ ಗಂಟು ಮಾಡಿಕೊಂಡು ದೃಶ್ಯಕ್ಕೆ ಹೋಗಿಬಿಟ್ಟ. ಸೀರೆಯ ಮೇಲೆ ಬಟ್ಟೆಗಳನ್ನು ಇಟ್ಟುಕೊಂಡಿದ್ದ ನಟರು ದೃಶ್ಯ ಮುಗಿಸಿಕೊಂಡು ಮುಂದಿನ ಬದಲಾವಣೆಗೆ ಸೈಡ್ ವಿಂಗಿಗೆ ಬಂದು ನೋಡುತ್ತಾರೆ. ಸೀರೆಯೂ ಇಲ್ಲ ಅದರ ಮೇಲೆ ಜೋಡಿಸಿ ಇಟ್ಟಿದ್ದ ಕಾಸ್ಟ್ಯೂಂ ಗಳೂ ಇಲ್ಲ. ವೇದಿಕೆಯ ಮೇಲೆ ಅವರ ಕಾಸ್ಟ್ಯೂಂ ಗಳು ಇನ್ನೊಬ್ಬ ನಟನ ಗಂಟಾಗಿದೆ. ಸೈಡ್ ವಿಂಗಿನಿಂದ, ಅವನಿಗೆ ಸನ್ನೆ ಮಾಡಿದರು; ‘ಬಟ್ಟೆ ಗಂಟು ಕೊಡು, ಅದರಲ್ಲಿ ನಾನ ಕಾಸ್ಟ್ಯೂಂ ಇದೆ’ ಅಂತ. ಕೊನೆಗೆ ಆ ನಟ ವಿಂಗಿನ ಹತ್ತಿರ ಹೇಗೋ ಬಂದು ಬಟ್ಟೆ ಗಂಟನ್ನು ಎಸೆದ. ಇವರು ಸಿಟ್ಟು, ಆತಂಕದಲ್ಲಿ ಮುಂದಿನ ದೃಶ್ಯಕ್ಕೆ ತಯಾರಾದರು.
ಅಸಹಾಯಕ ನಾಟಕಕಾರ
ಮೈಸೂರು ರಂಗಾಯಣದ ವತಿಯಿಂದ “ಅರಹಂತ” ಎನ್ನುವ ನಾಟಕ ಆಡುವುದಕ್ಕೆ ನಮಗೆ ಒಂದು ಪ್ರಾಜೆಕ್ಟ್ ಕೊಟ್ಟಿದ್ದರು. ಗಂಗಾಧರ ಸ್ವಾಮಿಯವರು ಅದರ ನಿರ್ದೇಶಕರು. ರಂಗಾಯಣ ದ ಹಲವು ಹಿರಿಯ ಕಲಾವಿದರು ನಮಗೆ ತರಬೇತಿ ಕೊಡಲು ಬರುತ್ತಿದ್ದರು. ಆ ಸಂದರ್ಭದಲ್ಲಿ ನಾಟಕಕಾರರೂ ಬಂದಿದ್ದರು. ನಿರ್ದೇಶಕರಿಗೆ ಅಂತ ನೀಡಿದ್ದ ಕೊಠಡಿಯಲ್ಲಿ ಅವರೂ ಉಳಿದುಕೊಂಡಿದ್ದರು. ಊಟ ಮಾಡಿ ಒಂದು ಬರ್ಮುಡಾ ಬನಿಯನ್ನಿಲ್ಲಿ ವಾಕ್ ಮಾಡುತ್ತಿದ್ದ ನಾಟಕಕಾರರು ತಂಡದ ಒಬ್ಬ ಹುಡಿಗನಿಗೆ ಅವರ ರೂಂ ನ ಕೀ ಕೊಟ್ಟು ಏನನ್ನೋ ತಂದು ರೂಂ ನಲ್ಲಿ ಇಡಲು ಹೇಳಿದ್ದರು. ಇವನು ನಮ್ಮ ಮನೆಗೆ ಬಂದವನೇ ಹರಟೆಯಲ್ಲಿ ಪಾಲ್ಗೊಂಡು ತಾನು ಏನಕ್ಕೆ ಬಂದಿದ್ದೀನಿ ಎನ್ನುವುದನ್ನೇ ಮರೆತುಬಿಟ್ಟ. ಅತ್ತ ಕಡೆ ಬರ್ಮುಡಾ ಬನಿಯನ್ ಹಾಕಿಕೊಂಡ ನಾಟಕಕಾರರು ಕಾದೂ ಕಾದೂ ಸುಸ್ತಾದರು. ರೂಂ ಕೀ ಬೇರೆ ಅವನಿಗೆ ಕೊಟ್ಟುಬಿಟ್ಟಿದ್ದಾರೆ. ಫ಼ೋನ್ ಮಾಡಲು ಈಗಿನಂತೆ ಮೊಬೈಲ್ ಇರಲಿಲ್ಲವಾದ್ದರಿಂದ ಪಾಪ ಅದೇ ವೇಷದಲ್ಲೇ ನಮ್ಮ ಮನೆಯವರೆಗೂ ನಡೆದುಕೊಂಡು ಬಂದು, ‘ಏನ್ರೀ ಜವಾಬ್ದಾರಿ ಇಲ್ವಾ ನಿಮಗೆ’ ಅಂದಾಗಲೇ ನಾವೆಲ್ಲರೂ ಏನಾಗಿರಬಹುದು ಎಂದು ಊಹಿಸಿದ್ದೆವು!
ತಂಡ ಬಿಟ್ಟು ಬಂದ ಕಲಾವಿದ
ಹಿಂದೆ ಉಡುಪಿ ರಂಗಭೂಮಿ ಯವರು ನಡೆಸುವ ರಾಜ್ಯಮಟ್ಟದ ಸ್ಪರ್ಧೆಗೆ ಹೋಗಿದ್ದೆವು. ಪೋಲೀಕಿಟ್ಟಿ ನಾಟಕ. ಚಾಮರಾಜನಗರದಿಂದ ಒಂದು ಟೆಂಪೋ ಮಾಡಿಕೊಂಡು ಹೋಗಿದ್ದೆವು. ವಾಪಸ್ ಬರುವಾಗ ಸುಳ್ಯ, ಪುತ್ತೂರಿನ ಸಮೀಪ ಬೆಳಗಿನ ಜಾವ ಸುಮಾರು ೪ ಗಂಟೆಗೆ ಮೂತ್ರವಿಸರ್ಜನೆಗಾಗಿ ಗಾಡಿ ನಿಲ್ಲಿಸಿದರು. ನಂತರ ಹೊರಟು ಇನ್ನೇನು ಮೈಸೂರು ಹತ್ತಿರ ಬರುತ್ತಿದ್ದಂತೆ ಎಲ್ಲರಿಗೂ ಸಂಪೂರ್ಣ ಎಚ್ಚರವಾಯಿತು. ಇದ್ದಕ್ಕಿದ್ದಂತೆ ಯಾರೋ ‘ರಾಜಪ್ಪ ಎಲ್ಲಿ’ ಅಂತ ಕೇಳಿದರು. ಟೆಂಪೋ ಎಲ್ಲಾ ಹುಡುಕಿದರೂ ರಾಜಪ್ಪ ಇಲ್ಲ. ಎಲ್ಲಿ ಬಿಟ್ಟು ಬಂದ್ವಿ ಗೊತ್ತಿಲ್ಲ. ಅವರು ಪಾಪ ಒಂದು ಪಟಾಪಟಿ ಲುಂಗಿ ಬನಿಯನ್ ಮತ್ತು ಟವೆಲ್ ಸುತ್ತಿಕೊಂಡು ಇಳಿದವರು ವಾಪಸ್ ಬರುವ ಹೊತ್ತಿಗೆ ಟೆಂಪೋ ಹೊರಟಾಗಿತ್ತು. ಕಾಲಲ್ಲಿ ಚಪ್ಪಲಿಯೂ ಇಲ್ಲದಂತೆ ಯಾರದ್ದೋ ಸಹಾಯ ಕೇಳಿ ಕೊನೆಗೆ ಚಾಮರಾಜನಗರದಲ್ಲಿ ಕಾಣಿಸಿಕೊಂಡರು. ಅವತ್ತು ಎಷ್ಟು ಬೈದುಕೊಂಡಿದ್ದರೋ…. ಆದರೆ ಇವತ್ತಿಗೂ ಆ ಸಂದರ್ಭವನ್ನು ನೆನಪಿಸಿಕೊಳ್ಳುತ್ತಾರೆ.
ಸ್ವೆಟರ್ ಒಗೆದ ಕಲಾವಿದ
ನಮ್ಮ ತಂಡದಿಂದ ಒಂದೆರಡು ಬಾರಿ ನಾಟಕ ವಿಭಾಗದಲ್ಲಿ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿದ್ದೆವು. ಪ್ರತಿ ಬಾರಿಯೂ ಬೇರೆ ಬೇರೆ ರಾಜ್ಯಗಳಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳು ನಡೆಯುತ್ತಿತ್ತು. ನಾವು ಗೆದ್ದ ವರ್ಷ ಪಂಜಾಬಿನಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆ. ಮೊದಲೇ ತಿಳಿಸಿದಂತೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯದಲ್ಲಿ ಗೆದ್ದ ಎಲ್ಲಾ ಸ್ಪರ್ಧಿಗಳೂ ಸೇರಬೇಕಿತ್ತು. ಅಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಎಲ್ಲರಿಗೂ ಒಂದೇ ಬಗೆಯ ಉಡುಪು ಕೊಡುತ್ತಾರೆ. ಮಹಿಳೆಯರಿಗೆ ಸೀರೆ ಪುರುಷರಿಗೆ ಶೇರ್ವಾನಿ. ಅದನ್ನು ಕೊಟ್ಟ ತಕ್ಷಣ ನಮಗೆಲ್ಲರಿಗೂ ಖುಶಿ. ಆದರೆ ಸೈಜ಼್ ಗಳು ವ್ಯತ್ಯಾಸವಾಗಿಹೋಗಿತ್ತು. ಹಾಗಾಗಿ ನಮ್ಮ ತಂಡದ ಹುಡುಗರು ನನಗೆ L ಬೇಕು ನಿನಗೆ M ತೊಗೋ ಅಂತ ಕ್ರೀಡಾಂಗಣದ ಹಿಂದೆಲ್ಲೋ ಹೊಂದಿಸಿಕೊಳ್ತಾ ಇದೀವಿ. ಹೊರಗೆ ಬಂದು ನೋಡಿದರೆ ಯಾರೂ ಇಲ್ಲ. ಎಲ್ಲರೂ ನಮ್ಮ ತಂಡವನ್ನು ಬಿಟ್ಟು ಬಸ್ ಹತ್ತಿ ರೈಲ್ವೇ ಸ್ಟೇಷನ್‌ಗೆ ಹೋಗಿ ಆಗಿತ್ತು. ರೈಲು ಹೊರಡಲು ಇನ್ನು ಅರ್ಧ ಗಂಟೆ ಮಾತ್ರ ಇದೆ. ನಾಟಕದ ಲಗೇಜ್, ನಮ್ಮ ಲಗೇಜ್ ಎತ್ತಿಕೊಂಡು ಸಿನಿಮೀಯ ರೀತಿಯಲ್ಲಿ ಸಿಕ್ಕ ಸಿಕ್ಕ ಆಟೋ ಹಿಡಿದು ಅಕ್ಷರಶಃ ಕೊನೆಯ ಕ್ಷಣದಲ್ಲಿ ಎಲ್ಲರೂ ರೈಲು ಹಿಡಿದೆವು.

ಪಂಜಾಬಿಗೆ ಹೋದ ನಾಟಕದ ತಂಡದಲ್ಲಿ ಬೆಂಗಳೂರನ್ನೂ ನೋಡಿರದ ಕಲಾವಿದರಿದ್ದರು. ಪಂಜಾಬಿನ ವಾತಾವರಣ ಆಗ ಮೈನಸ್ ೫ ರ ಆಸುಪಾಸು ಇತ್ತು. ಒಂದು ಸ್ವೆಟರ್ ಸಾಕಾಗುತ್ತಿರಲಿಲ್ಲ. ಹಾಗಾಗಿ ನಾವು ನಾಟಕ ತಾಲೀಮಿನ ಜೊತೆ ಎಲ್ಲರ ಬಳಿಯೂ ಇದ್ದ ಸ್ವೆಟರ್‌ಳನ್ನು ಥರ್ಮಲ್ಸ್‌ಗಳನ್ನು ಗುಡ್ಡೆ ಹಾಕಿ ಹಂಚಿಕೊಂಡಿದ್ದೆವು. ಪಂಜಾಬ್‌ನ ಲುಧಿಯಾನ ತಲುಪಿದ ನಂತರ ಪುರುಷರಿಗೆ ಮಹಿಳೆಯರಿಗೆ ಹಾಸ್ಟೆಲ್‌ಗಳನ್ನು ಅಲಾಟ್ ಮಾಡಿದರು. ಎಲ್ಲರೂ ತಮ್ಮ ತಮ್ಮ ರೂಮ್‌ಗಳಲ್ಲಿ ಲಗೇಜ್ ಇಟ್ಟು ಒಂದುಕಡೆ ಸೇರಿದೆವು. ನಮ್ಮ ನಟರೊಬ್ಬರು ಪ್ಯಾಂಟು ಶರ್ಟ್ ಹಾಕಿಕೊಂಡು ಚಳಿಯಲ್ಲಿ ಬಂದರು. ನಾವು ‘ನಿಮ್ಮ ಥರ್ಮಲ್ಸ್ ಎಲ್ಲಿ?’ ಅಂತ ಕೇಳಿದಾಗ ಅವರು ‘ಬಂದ ತಕ್ಷಣ ಒಗೆದು ಒಣಹಾಕಿದ್ದೇನೆ’ ಎಂದಾಗ ಸೂರ್ಯನ ಮುಖವನ್ನೂ ಕಾಣೋದಕ್ಕೆ ಸಾಧ್ಯವಿರದ ಅಲ್ಲಿ ಅವರ ಮುಂದಿನ ಪರಿಸ್ಥಿತಿಯನ್ನು ನೆನೆದು ಎಲ್ಲರಿಗೂ ಶಾಕ್ ಆಯಿತು.
ಹೀಗೆ ನಾಟಕಗಳನ್ನು ಮಾಡಿ ಎಷ್ಟೇ ವರ್ಷಗಳು ಕಳೆದರೂ ಎಲ್ಲರೂ ಒಟ್ಟಾಗಿ ಸೇರಿದಾಗ ಇಂತಹ ಪ್ರಸಂಗಗಳನ್ನು ನೆನೆದು ಮತ್ತೆ ಆ ದಿನಗಳಿಗೇ ಹೋಗುತ್ತೇವೆ.

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣ ದ ಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದ ‘ಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ ಮಿಲಾಂಗಿ” ಹಲವಾರು ಪ್ರದರ್ಶನಗಳನ್ನು ಕಂಡಿದೆ.
