ಖಾದಿ ಬೋರ್ಡ್‌ಗೆ ಹೋಗೋದು, ಅಲ್ಲಿಂದ ಈ ಕೇಸರಿ ಅಥವಾ ಕಾವಿ ದಟ್ಟಿ ತರೋದು ಅದನ್ನು ಮೂರೂ ಹೊತ್ತು ಸುತ್ತಿಕೊಂಡು ಓಡಾಡೋದು. ಇದು ನಮ್ಮ ಅಮ್ಮನಿಗೆ ಇಷ್ಟ ಇಲ್ಲ. ಕಾರಣ ಇವನು ರಾಮಕೃಷ್ಣ ಆಶ್ರಮಕ್ಕೆ ಹೋಗಿದ್ದ, ಅಲ್ಲಿ ಪ್ರಭಾವ ಇವನೂ ಸನ್ಯಾಸಿ ಆಗಿಬಿಡ್ತಾನೆ ಎನ್ನುವ ಭಯ. ಇದನ್ನು ಅಮ್ಮ ನನ್ನ ಮದುವೆ ಆದ ಎಷ್ಟೋ ವರ್ಷದ ನಂತರ ತನ್ನ ಸೊಸೆಗೆ ಅಂದರೆ ನನ್ನ ಹೆಂಡತಿಗೆ ಹೇಳಬೇಕಾದರೆ ನನ್ನ ಕಿವಿಗೆ ಬಿತ್ತು. ಅಯ್ಯೋ ಅದಾ ಸನ್ಯಾಸಿ ಆಗೋದೂ……… ಅಂತ ನನ್ನಾಕೆ ಬಿದ್ದು ಬಿದ್ದು ನಕ್ಕಿದ್ದಳು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೆಂಟನೆಯ ಕಂತು ನಿಮ್ಮ ಓದಿಗೆ

ಅರಾಸೇ ಅವರ ಬಗ್ಗೆ ಬರೆಯುತ್ತಾ ನೆನಪು ಶ್ರೀ ಮಿತ್ರಾ ಅವರ ಸುತ್ತ ಸರಿಯಿತು. ನಂತರ ಶ್ರೀ ಸತ್ಯವ್ರತ ಅವರ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಹಾಕಿದ್ದೆ. ಅರಾಸೆ ಅವರ ಎಷ್ಟೋ ಪ್ರಸಂಗಗಳು ಒಂದಾದ ಹಾಗೆ ಮತ್ತೊಂದು ಮನಸಿನ ಪರದೆ ಮೇಲೆ ಹಾದು ಹೋಗುತ್ತದೆ. ಅದು ಬಂದ ಬಂದ ಹಾಗೇ ತಿಳಿಸಿ ಮುಂದಕ್ಕೆ ಹೋಗುವ ಪ್ಲಾನ್ ಹಾಕಿಕೊಂಡಿದ್ದೇನೆ. ಸದ್ಯಕ್ಕೆ ಈ ನೆನಪು ಬಂದಿದೆ..

ಅರಾಸೇ ಪುಸ್ತಕ ಮಾರಾಟ

ದಾವಣಗೆರೆ ಚಿತ್ರದುರ್ಗಕ್ಕೆ ಸರ್ಕಾರದಿಂದ ಅಧಿಕಾರಿಯೊಬ್ಬರು ಹಿರಿಯ ಹುದ್ದೆಗೆ ವರ್ಗವಾಗಿ ಬಂದರು. ಅವರೂ ಸಹ ಸಾಹಿತಿಗಳು. ಅರಾಸೇ ಅವರಿಗೂ ಅಧಿಕಾರಿಗಳಿಗೂ ಪರಿಚಯ ಆಗಿ ಸ್ನೇಹಿತರೂ ಆದರು. ಅರಾಸೇ ಅವರ ಒಂದು ಪುಸ್ತಕ ಒಂದೆರೆಡು ವರ್ಷಗಳ ಹಿಂದೆ ಪ್ರಕಟ ಆಗಿ ಸುಮಾರು ಪ್ರತಿಗಳು ಮನೆ ಅಟ್ಟದ ಮೇಲೆ ಬಿದ್ದಿದ್ದವು. ಇವರ ಮನೆಗೆ ಒಮ್ಮೆ ಬಂದಿದ್ದ ಅಧಿಕಾರಿ ಅಟ್ಟ ನೋಡಿ ವಿಷಯ ತಿಳಿದುಕೊಂಡರು. ಇದಕ್ಕೊಂದು ವ್ಯವಸ್ಥೆ ಮಾಡೋಣ ಅಂತ ಭರವಸೆ ಕೊಟ್ಟರು. ಅವತ್ತೇ ಸಂಜೆ ಒಬ್ಬ ಸಬ್ ಇನ್ಸ್ಪೆಕ್ಟರು ಇವರ ಮನೆಗೆ ಬಂದರು. ಅಟ್ಟದ ಮೇಲಿನ ಪುಸ್ತಕ ಇಳಿಸಿ ಎಣಿಸಿದರು, ಜೀಪ್‌ನಲ್ಲಿ ಹಾಕಿಕೊಂಡು ಹೋದರು. ಇದಾದ ಮೂರು ನಾಲ್ಕು ದಿವಸಕ್ಕೆ ಇವರ ಗುರುತಿನವರು ಒಬ್ಬರು ಮನೆಗೆ ಬಂದರು.

ಅಲ್ಲಯ್ಯಾ ಸರಸ್ವತಿನ ಹೀಗೆ ರೋಡಲ್ಲಿ ಬಿಸಾಕ್ತಾರೇನಯ್ಯಾ…. ಅಂತ ಬೇಜಾರು ಪಟ್ಟರು. ದಾವಣಗೆರೆಯಿಂದ ಐದಾರು ಕಿಲೋಮೀಟರ್ ದೂರದಲ್ಲಿ ನಿನ್ನ ಪುಸ್ತಕ ಹೆದ್ದಾರಿ ಉದ್ದಕ್ಕೂ ಅನಾಥವಾಗಿ ಹೇಳೋರೂ ಕೇಳೋರೂ ಇಲ್ಲದೆ ಬಿದ್ದಿವೆ…. ಅಂದರು!

ಅವರು ಹೋದ ಸ್ವಲ್ಪ ಹೊತ್ತಿಗೆ ಸಬ್ ಇನ್ಸ್ಪೆಕ್ಟರು ಬಂದು ಒಂದು ಕವರ್ ಕೊಟ್ಟು ಪುಸ್ತಕದ ಬಾಬತ್ತು ಅಂದರು. ಪುಸ್ತಕ ಹೇಗೆ ಮಾರಾಟ ಆಯಿತು ಅಂತ ಎಷ್ಟೋ ದಿವಸದ ನಂತರ ಇವರು ಕಂಡು ಹಿಡಿದರು. ಹೈವೇಯಲ್ಲಿ ಹೋಗುವ ಲಾರಿ ಹಿಡಿಯೋದು, ಡ್ರೈವರ್‌ಗೆ ರೋಪ್ ಹಾಕಿ ಒಂದೋ ಎರಡೋ ಪುಸ್ತಕ ತುರುಕಿ ಪೋಲೀಸು ಕಾಸು ವಸೂಲಿ ಮಾಡಿದರು. ಕನ್ನಡ ಬರದೇ ಇರೋ ಡ್ರೈವರ್‌ಗಳು. ಪೊಲೀಸ್ ಕೈಲಿ ತಪ್ಪಿಸಿಕೊಳ್ಳಲು ಪುಸ್ತಕ ತಗೊಂಡರು, ಕೇಳಿದಷ್ಟು ಕಾಸು ಕೊಟ್ಟರು. ನಂತರ ಲಾರಿ ಓಡಿಸಿಕೊಂಡು ಪುಸ್ತಕ ಪಕ್ಕಕ್ಕೆ ಎಸೆದು ಕ್ಯಾಕರಿಸಿ ಉಗುಳಿ (ಇದು ಅರಾ ಸೇ ವಿವರಣೆ)ಹೋದರು!

ನನ್ನ ಲೆಕ್ಕದಲ್ಲಿ ಪೋಲೀಸು ದುಡ್ಡು ಮಾಡಿರಬಹುದೋ ಏನೋ….

ಅರಾಸೇ ಇಂತಹ ಕತೆಗಳನ್ನು ಬಹಳ ರೋಚಕವಾಗಿ ವಿವರಿಸುತ್ತಾ ಇದ್ದರು! ಅಲ್ಲಿನ ಮಂಡಿ ಮಾರ್ಕೆಟ್ ವ್ಯವಹಾರ ಅವರ ಬಾಯಲ್ಲೇ ಕೇಳಬೇಕು.

ಇದು ಹಾಗಿರಲಿ. ಕಳೆದ ಸಂಚಿಕೆಯ ಮುಕ್ತಾಯಕ್ಕೆ ಈ ಕೆಲವು ವಾಕ್ಯ ಬರೆದಿದ್ದೆ..

….ಗಾಂಧಿ ಭವನದ ಸುತ್ತ ಮುತ್ತ ಹೋದಾಗ ಈ ನೆನಪುಗಳು ಕಣ್ಣೆದುರು ಸಾಗುತ್ತದೆ ಮತ್ತು ಅರಿವು ಇಲ್ಲದ ಹಾಗೆ ಕಣ್ಣು ತೇವವಾದ ಹಾಗೆ ಅನಿಸುತ್ತದೆ. ಮೌಲ್ಯಗಳಿಗಾಗಿ ಬದುಕಿದ್ದ, ಅದನ್ನೇ ಉಸಿರಾಗಿಸಿಕೊಂಡಿದ್ದ ಹಿರಿಯರ ನೆನಪು ಆಗಾಗ ಮರು ಹುಟ್ಟು ಪಡೆಯುತ್ತದೆ….

ದಿವಸಕ್ಕೆ ಹತ್ತು ಹದಿನೈದು ಲೋಟ ಕಾಫಿ ಹೀರುವ ನನಗೆ ವಿನೋಬಾ ಅವರು ಗುರು ಆಗಿದ್ದರೆ ಹೇಗೆ ಇರುತ್ತಿತ್ತು ಎನ್ನುವ ಪ್ರಶ್ನೆ ಸುಮಾರು ಸಲ ಕಾಡಿದೆ. ಮನಸು ಅದಕ್ಕೆ ಒಂದು ಸಿದ್ಧ ಉತ್ತರ ಸಹ ಕೊಟ್ಟಿತು.. ಒಂದು ಮುಷ್ಟಿ ಬೆಳ್ಳುಳ್ಳಿ ಜಗಿದು ಬಂದಿದ್ದರೆ, ಕಾಫಿ ವಾಸನೆ ಇದಕ್ಕಿಂತ ಸಾವಿರ ಪಾಲು ವಾಸಿ, ಇನ್ಮೇಲೆ ಕಾಫಿ ಕುಡಿದೇ ಬಂದು ತರ್ಜುಮೆ ಮಾಡು ಅಂತ ವಿನೋಬಾಜಿ ಅಪ್ಪಣೆ ಕೊಡುತ್ತಿದ್ದಿರಬಹುದು…….!

ಸತ್ಯವ್ರತ ಅವರನ್ನು ಆಳವಾಗಿ ಬಲ್ಲ ಬಂಧುಗಳು ಪ್ರತಿಕ್ರಿಯಿಸಿದ್ದು ಹೀಗೆ.. ಅವರು ಕೇಂದ್ರ ಸಂಪುಟದಲ್ಲಿ ಯಾವುದಾದರೂ ಪ್ರಭಾವಿ ಸಚಿವರಾಗುವ ಎಲ್ಲಾ ಸಾಧ್ಯತೆ ಇದ್ದವು ಮತ್ತು ಇವರನ್ನು ಇವರ ಸಂಗಡ ಜೈಲಿನಲ್ಲಿದ್ದ ಹಿರಿಯ ಧುರೀಣರು ಸಹ ಸಚಿವರಾಗುವಂತೆ ಕೋರಿದ್ದರು. ಆದರೆ ಇವರು ಬೇಡ ಅಂತ ಹಠ ಹಿಡಿದರು. ಇದು ಸತ್ಯವ್ರತ ಅವರ ಮತ್ತೊಂದು ಮುಖ!

ಮತ್ತೆ ಕುಮಾರ ಪಾರ್ಕ್‌ಗೆ ಹೋಗೋಣ. ಶೇಷಾದ್ರಿಪುರಂ ಒಂದು ಭಾಗ ಇದು. ಮಧ್ಯೆ ಒಂದು ರೈಲ್ವೆ ಕಂಬಿ ಹಾದು ಹೋಗುತ್ತೆ. ಅದರ ಸಮಾನಾಂತರ ರಸ್ತೆಗೆ ರೈಲ್ವೆ ಪ್ಯಾರಲಲ್ ರೋಡ್ (ರೈಲಿಗೆ ಸಮಾನಾಂತರ ರಸ್ತೆ) ಅಂತ ಹೆಸರಿಟ್ಟರು. ಈ ಹೆಸರು ಸುಮಾರು ಕಡೆ ಇದೇ ಕಾರಣಕ್ಕೆ ಚಾಲ್ತಿಯಲ್ಲಿದೆ. ಬೆಂಗಳೂರಿನ ಮತ್ತೊಂದು ರೈಲ್ವೆ ಸ್ಟೇಷನ್ ಪಕ್ಕದ ರೋಡಿಗೆ ಪ್ಲಾಟ್ಫಾರ್ಮ್ ರೋಡ್ ಅಂತ ಹೆಸರು. ಕನ್ನಡದಲ್ಲಿ ಈ ಹೆಸರು ಅಂದರೆ ರೈಲಿಗೆ ಸಮಾನಾಂತರ ರಸ್ತೆ ಅಂತ ಹೇಳಿದರೆ ಯಾವ ಪಂಪನಿಗೂ ಅರ್ಥ ಆಗೋದು ಇಲ್ಲ. ಪಂಪ ಯಾರು ಅಂದಿರಾ? ಆತ ನಮ್ಮ ಆದಿ ಕವಿ..!

ಶೇಷಾದ್ರಿ ಪುರವನ್ನು ರೈಲ್ವೆ ಕಂಬಿ ಹಳಿಗಳು ಸೀಳಿಕೊಂಡು ಹೋಗುತ್ತಲ್ಲಾ, ಅದನ್ನು ಕುಮಾರ ಪಾರ್ಕ್ ಪೂರ್ವ ಪಶ್ಚಿಮ ಅಂತಾ ವಿಭಾಗಿಸಿದ್ದಾರೆ. ಅಂದ ಹಾಗೆ ಕುಮಾರ ಪಾರ್ಕ್‌ಗೆ ಹೆಸರು ಕೊಟ್ಟ ಈ ಕುಮಾರ ಯಾರು ಎಂದು ನಿಮ್ಮ ಹಾಗೆಯೇ ನಾನೂ ಸಹ ತಲೆ ಕೆಡಿಸಿಕೊಂಡಿದ್ದೆ. ಸುಮಾರು ಜನರ ಹತ್ತಿರ ಈ ಸಂಗತಿ ತೆಗೆದಿದ್ದೆ. ದೇವೆಗೌಡರ ಮಗ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯಿಂದ ಕುಮಾರ ಪಾರ್ಕ್ ಬಂದಿದೆ ಅಂತ ಒಬ್ಬರು ಗೆಳೆಯರು ಕಡಾ ಖಂಡಿತವಾಗಿ ಹೇಳಿದ್ದರು. ಹೇಳಿಕೇಳಿ ಅವರು ಹಾಸ್ಯ ಪಾಸ್ಯ ಬರೆಯುವ ಜನ ಆದ್ದರಿಂದ ಅವರ ಮಾತು ನಾನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಅದು ಒಂದು ರೀತಿ ಒಳ್ಳೇದೇ ಆಯ್ತು!

ದಿವಾನ್ ಶೇಷಾದ್ರಿ ಅಯ್ಯರ್ ಅವರಿಂದ ಶೇಷಾದ್ರಿಪುರಂ ಹೆಸರು ಅಂತ ಹೇಳಿದ್ದೆ. ಅವರ ವಾಸಸ್ಥಾನ ಹೊಸ ಜಾಗ ಕುಮಾರ ಪಾರ್ಕ್‌ಗೆ ಬದಲಾಯಿತು. ಅವರ ಮೂಲ ಪಾಲ್ಗಾಟ್ ಬಳಿಯ ಮನೆ ಇದ್ದದ್ದು ಅಲ್ಲಿನ ಕುಮಾರಪುರಂನಲ್ಲಿ. ಅಲ್ಲಿನ ನೆನಪಿಗೆ ಇಲ್ಲಿನ ವಾಸ ಸ್ಥಾನ ಕುಮಾರ ಪಾರ್ಕ್ ಎಂದು ಹೆಸರು ಬಂದಿತು. ಶೇಷಾದ್ರಿ ಅಯ್ಯರ್ ಅವರ ಸ್ವಂತ ವಾಸಸ್ಥಳ ಕುಮಾರ ಕೃಪ ರಾಜ್ಯದ ಅತಿಥಿ ಗೃಹ ಆಗಿದೆ. ಹೀಗೆ ಅಲ್ಲಿನ ಕುಮಾರಪುರಮ್ ಇಲ್ಲಿನ ಕುಮಾರ ಕೃಪ ಆಯಿತು. ತಮಿಳು ನಾಡಿನ ಅಲ್ಲಿನ ಜನರ ಜತೆ ಜತೆಗೆ ಅಲ್ಲಿನ ಹೆಸರನ್ನೂ ಸಹ ಬೆಂಗಳೂರಿಗೆ ತಂದರು. ಮೀನಾಕ್ಷಿ ಕೊಯಿಲ್ ಸ್ಟ್ರೀಟ್, ಧರ್ಮರಾಜ ಕೊಯಿಲ್ ಇಂತಹ ಆಮದು ಮಾಡಿಕೊಂಡ ಹಲವಾರು ಹೆಸರುಗಳಲ್ಲಿ ಒಂದು.

ಶಿವಾನಂದ ಸ್ಟೋರ್ಸ್‌ನಿಂದ ಎಡಕ್ಕೆ ತಿರುಗಿದರೆ ಮೊದಲ ಎಡ ರಸ್ತೆಯಲ್ಲಿ ಗಾಂಧಿ ಭವನ, ಅದರ ಮುಂದಕ್ಕೆ ಬಲ ಭಾಗಕ್ಕೆ ಸರ್ವೋದಯ ಪತ್ರಿಕಾ ಕಚೇರಿ, ಅದರ ಪಕ್ಕದ ಗೇಟಿನ ಮೂಲಕ ಒಳಹೋದರೆ ಅನಾಥ ಆಶ್ರಮ, ವೃದ್ಧಾಶ್ರಮ ಇದೆ ಎಂದು ತಿಳಿಸಿದ್ದೆ. ಇದು ಹತ್ತು ಹದಿನೈದು ವರ್ಷ ಮೊದಲು. ಈಗಿನ ಕತೆ ಏನು ಎಂದು ಸ್ಪಷ್ಟವಾಗಿ ತಿಳಿಯದು. ಸತ್ಯವ್ರತ ಅವರು ದೇವರ ಪಾದ ಸೇರಿದ ನಂತರ ಅವರ ಶ್ರೀಮತಿ ಲಕ್ಷ್ಮೀ ಅವರನ್ನು ನೋಡಲು ಹೋಗುತ್ತಿದ್ದೆ. ಲಕ್ಷ್ಮೀ ಅವರೂ ಸಹ ಹೋದಮೇಲೆ ಆ ಕಡೆ ಹೋಗಿಲ್ಲ. ಅದೇ ರಸ್ತೆ ಎಲ್ಲೂ ತಿರುವು ತೆಗೆದುಕೊಳ್ಳದೇ ಮುಂದೆ ಬಂದರೆ ರಾಜ್ಯ ಸರ್ಕಾರದ ಮಂತ್ರಿಗಳಿಗಾಗಿ ನಿರ್ಮಿಸಿರುವ ದೊಡ್ಡ ದೊಡ್ಡ ಬಂಗಲೆಗಳು. ಇಂತಹ ಬಂಗಲೆಯಲ್ಲಿ ವಾಸ ಮಾಡಿದ ಮನುಷ್ಯ ಮುಂದೆ ಸಾಧಾರಣ ಮನೆಗೆ ಹೋಗಲು ಸಾಧ್ಯವೇ ಎಂದು ಹಲವು ಬಾರಿ ಆಶ್ಚರ್ಯ ಪಟ್ಟಿದ್ದು ಉಂಟು.

ಇದು ಮೊದಲ ಎಡ ತಿರುವಿನ ರಸ್ತೆಯ ಕತೆ. ಅಲ್ಲಿ ತಿರುಗದೆ ನೇರ ಹೋದರೆ ನಿಮಗೆ ಖಾದಿ ಗ್ರಾಮೋದ್ಯೋಗ ಮಂಡಳಿಯ ಒಂದು ದೊಡ್ಡ ಮಳಿಗೆ ಕಾಣುತ್ತದೆ. ಬಹುಶಃ ಇಡೀ ರಾಜ್ಯದಲ್ಲಿ ಖಾದಿ ಮಂಡಳಿ ಇಷ್ಟು ವಿಸ್ತಾರವಾದ ಮಳಿಗೆ ಹೊಂದಿರುವುದು ಇಲ್ಲಿ ಒಂದೇ ಕಡೆ ಎಂದು ನನ್ನ ತಿಳುವಳಿಕೆ. ಎಪ್ಪತ್ತು ಎಂಬತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಸುಮಾರು ಖಾದಿ ಮಳಿಗೆ ಇದ್ದವು. ಅದರಲ್ಲಿ ಸುಬೇದಾರ್ ಛತ್ರದ ರಸ್ತೆ, ಕೃಷ್ಣ ರಾಜೇಂದ್ರ ಮಾರು ಕಟ್ಟೆ ಸಮೀಪದ್ದು ಕೋಟೆ ಎದುರು, ಶಂಕರಪುರದ ಮಳಿಗೆ ಸುಮಾರು ವಿಸ್ತಾರ ಇದ್ದು ಬಹು ವೈವಿಧ್ಯಮಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದವು ಮತ್ತು ಗ್ರಾಹಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ವರ್ಷಕ್ಕೊಮ್ಮೆ ಖಾದಿ ಉತ್ಸವ ಎಂದು ಸರ್ಕಾರಿ ಕಾಲೇಜು ಮೈದಾನದಲ್ಲಿ ದೊಡ್ಡ ಉತ್ಸವ ಇರುತ್ತಿತ್ತು ಮತ್ತು ಅಲ್ಲಿ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿತ್ತು. ಒಂದೆರೆಡು ಬಾರಿ ಅಂತಹ ಉತ್ಸವಕ್ಕೆ ಹೋಗಿ ಬಟ್ಟೆ ತಂದಿರುವ ನೆನಪಿದೆ.

ನಾನು ಕಲಾಕ್ಷೇತ್ರ, ಟೌನ್ ಹಾಲ್ ಇಂತಹ ಕಡೆ ತಿರುಗಿ ತಿರುಗಿ ಬುದ್ಧಿವಂತ ಆಗಿ ಬಲ್ಗಾನಿನ್ ಗಡ್ಡ ಬಿಟ್ಟಿದ್ದೆ. ಆಗ ಹೆಗಲಿಗೆ ಒಂದು ಜೋಳಿಗೆ ರೀತಿಯ ಬ್ಯಾಗ್ ಮತ್ತು ಖಾದಿ ಜುಬ್ಬಾ ತೊಡುತ್ತಿದ್ದೆ. ಅದು ಬುದ್ಧಿಜೀವಿಗಳ ಯೂನಿಫಾರ್ಮ್ ಅಂತ ಅಘೋಷಿತವಾಗಿ ನಿರ್ಣಯ ಆಗಿತ್ತು. ನನಗೆ ಬೇಕಾದ ಜೋಳಿಗೆ, ಖಾದಿ ಜುಬ್ಬಾ ಇವುಗಳನ್ನು ಖಾದಿ ಮಂಡಳಿಯಿಂದ ಕೊಳ್ಳುತ್ತಿದ್ದೆ. ಇದು ನಾನು ಬುದ್ಧಿಜೀವಿ ಪಟ್ಟ ಬಿಡುವ ತನಕ ಇತ್ತು!

ಎಷ್ಟು ಜನಕ್ಕೆ ನೆನಪು ಇದೆಯೋ ಇಲ್ಲವೋ ತಿಳಿಯದು. ಗಾಂಧಿ ಹುಟ್ಟಿದ ದಿವಸವಾದ ಅಕ್ಟೋಬರ್ ಎರಡನೇ ತಾರೀಖಿನಿಂದ ನಲವತ್ತೈದು ದಿವಸ ಖಾದಿ ಬಟ್ಟೆಗಳ ಮೇಲೆ ಶೇ ಮೂವತ್ತೋ ನಲವತ್ತೋ ಸೋಡಿ ಅಂದರೆ ರಿಯಾಯಿತಿ ಮಾರಾಟ ಇರುತ್ತಿತ್ತು. ನಮ್ಮ ಮನೆಗೆ ವರ್ಷಕ್ಕೆ ಬೇಕಾದಷ್ಟು ಟವಲ್ ಪವಲ್ ತರ್ತಾ ಇದ್ದೆ, ತುಂಬಾ ಚೀಪ್ ಅನಿಸೋದರ ಜತೆಗೆ ಅದರಿಂದ ಮೈ ಒರೆಸಿಕೊಂಡರೆ ಅದೇನೋ ಹಿತವಾದ ಸುಖ ಸಿಗೋದು. ನನಗೆ ಅಂತ ದಟ್ಟಿ ಪಂಚೆ, ಅಪ್ಪನಿಗೆ ಬನಿಯನ್ನು… ಹೀಗೆ ಒಂದು ಗಂಟು ಅಕ್ಟೋಬರ್ ತಿಂಗಳಲ್ಲಿ ಮನೆಗೆ ಬರೋದು. ತುಂಬಾ ಕಡಿಮೆ ಅನಿಸುವ ಬೆಲೆಗೆ ಬಟ್ಟೆ ಸಿಗ್ತಾ ಇತ್ತಲ್ಲ, ಅದರಿಂದ ಶರ್ಟ್ ಬಟ್ಟೆ, ಕೆಲವು ಸಲ ರೆಡಿಮೇಡ್ ಬಟ್ಟೆ ಇದರ ವ್ಯಾಪಾರ ಸಹ ಆಗ್ತಾ ಇತ್ತು. ಬನಿಯನ್‌ಗೆ ಒಂದು ಜೇಬು ಇರುತ್ತಿತ್ತು ಮತ್ತು ಅದನ್ನು ಶರಟು ಮೇಲಿನಿಂದ ಕೈ ತೂರಿಸಿ ಉಪಯೋಗಿಸಬೇಕಿತ್ತು. ಪಿಕ್ ಪಾಕೆಟ್ ಮಾಡುವವರಿಂದ ರಕ್ಷಣೆ ಪಡೆಯಲು ಜೋಬಿನ ವಿನ್ಯಾಸ ಹೀಗಿದೆ ಎಂದು ತೀರ್ಮಾನಿಸಿದ್ದೆ.

ನಾನು ನಿವೃತ್ತಿ ಹೊಂದಿದ ಮೇಲೆ ಒಂದು ಪ್ರವಾಸ ರೈಲಿನಲ್ಲಿ ಮಾಡಬೇಕಾಯಿತು. ಆಗ ಖಾದಿ ಅಂಗಡಿ ಹುಡುಕಿ ಇಂತಹ ಎರಡು ಬನಿಯನ್ ಕೊಂಡೆ, ಅದೂ ಒಳ್ಳೇ ಸರ್ವೀಸ್ ಕೊಟ್ಟಿತು! ಈಗಲೂ ಒಂದು ಬನಿಯನ್ ಕಬೋರ್ಡ್‌ನಲ್ಲಿ ಒಂದು ಮೂಲೆಯಲ್ಲಿ ತನ್ನ ಅದೃಷ್ಟವನ್ನು ಹಳಿಯುತ್ತಾ ಬಿದ್ದಿದೆ.

ಕೇಸರಿ ಕಲರಿನ ದಟ್ಟಿ ಸಹ ಅಲ್ಲಿ ಸಿಕ್ತಾ ಇತ್ತು. ಕೇಸರಿ ಕಲರಿನ ದಟ್ಟಿ ಮೇಲೆ ನನಗೊಂದು ರೀತಿ ಪ್ರೀತಿ ನನ್ನ ಹೈಸ್ಕೂಲ್ ಪಿಯೂಸಿ ದಿನಗಳ ನಡುವೆ ಹುಟ್ಟಿತ್ತು. ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದೆ. ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ನನ್ನ ತರಹದ ಪರೀಕ್ಷೆ ಕಟ್ಟಿರುವ ಹುಡುಗರಿಗೆ ಎರಡು ವಾರದ ಒಂದು ಸಮ್ಮರ್ ರಿಟ್ರೀಟ್ ಕಾರ್ಯಕ್ರಮ ಇದೆ, ಇದರಲ್ಲಿ ಭಾಗವಹಿಸಲು ಇಷ್ಟ ಇರೋರು ಬೇಕಾದರೆ ಸಂಪರ್ಕಿಸಿ ಅಂತ ಪೇಪರಿನಲ್ಲಿ ಒಂದು ಜಾಹಿರಾತು ಬಂದಿತ್ತು. ಅದನ್ನ ನೋಡಿ ನಮ್ಮ ದೊಡ್ಡಣ್ಣ ಅರ್ಜಿ ಹಾಕಿದ್ದ, ನನಗಾಗಿ. ನಾನು ಆಯ್ಕೆ ಆಗಿ ಮೈಸೂರಿನ ಆಶ್ರಮಕ್ಕೆ ಹೋದೆ. ಅಲ್ಲಿ ನಮಗೆ ಆಧ್ಯಾತ್ಮಿಕ ತರಗತಿ, ನೀತಿ ಕತೆ, ನಮ್ಮ ಮನಸಿಗೆ ಇಷ್ಟ ಆಗುವ ಹಾಗೆ ವಿವೇಕಾನಂದ, ರಾಮಕೃಷ್ಣ ಮತ್ತು ಹಿಂದೂ ದೇವರು ಹಾಗೂ ಮಿಕ್ಕ ಧರ್ಮಗಳ ಬಗ್ಗೆ ತರಗತಿಗಳು ಇದ್ದವು. ಬೆಳಿಗ್ಗೆ ಒಬ್ಬರು ಸ್ವಾಮಿಗಳು ಹಾರ್ಮೋನಿಯಂ ಎದುರು ಇಟ್ಟುಕೊಂಡು ಗೀತೆ, ಹಿಂದಿ ಕನ್ನಡ ಭಕ್ತಿಗೀತೆ, ರಾಮಕೃಷ್ಣ ವಚನ ಇತ್ಯಾದಿ ಹಾಡುವರು, ನಾವೂ ಸಹ ಅವರ ಜತೆ ಹಾಡ್ತಾ ಇದ್ದೆವು. ಒಳ್ಳೇ ಊಟ ತಿಂಡಿ ಸಂಜೆ ಆಟ… ಆ ವಯಸ್ಸಲ್ಲಿ ಇದಕ್ಕಿಂತ ಖುಷಿ ಕೊಡುವ ಬೇರೆ ಯಾವ ಅಡ್ಡ ಸೆಳೆತ ಇರಲಿಲ್ಲ ನಮಗೆ. ಸುಮಾರು ಶ್ಲೋಕಗಳು ಆಗ ಕಲಿತದ್ದು ಆರು ದಶಕದ ನಂತರ ಒಂದೆರೆಡು ಸಾಲು ಹೇಳುವ ಮಟ್ಟಿಗೆ ನನ್ನ ಬುರುಡೆಯಲ್ಲಿ ಇನ್ನೂ ಅಂಟಿದೆ. ಅದರಲ್ಲಿ ಒಂದು ಅಂದರೆ ಸರ್ವ ಮಂಗಳ ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಿಕೇ..

ಮತ್ತೊಂದು ಅಂದರೆ ಗೀತೆಯ “ಕರ್ಮಣ್ಯೇ ವಾಧಿಕಾರಸ್ಥೆ…” ಹೀಗೊಂದೆರಡು ಮೂರು.. ಇನ್ನೂ ತಲೆಯಲ್ಲಿ ಇರೋದು. ಅಲ್ಲಿ ನಮಗೆ ಪಾಠ ಮಾಡಿದ ಸ್ವಾಮಿ ಹರ್ಶಾನಂದರು, ಸೋಮನಾಥಾನಂದರು ….. ಎಲ್ಲರೂ ಮುಂದೆ ತುಂಬಾ ದೊಡ್ಡ ಹೆಸರು ಮಾಡಿದವರು. ನಮ್ಮ ಜತೆ ಸಂಜೆ ಬ್ಯಾಸ್ಕೆಟ್ ಬಾಲ್ ಮತ್ತು ಫುಟ್ ಬಾಲ್ ಆಟಕ್ಕೆ ಬರುತ್ತಿದ್ದವರು ಒಂದು ಕಾಲದಲ್ಲಿ ರಾಜ್ಯ ಬ್ಯಾಸ್ಕೆಟ್ ಬಾಲ್ ತಂಡದವರು. ಇವರೆಲ್ಲರೂ ಕಾವಿ ಪಂಚೆ, ಕಾವಿ ಜುಬ್ಬಾ ತೊಟ್ಟು ತುಂಬಾ ಹಸನ್ಮುಖರಾಗಿ ನಮ್ಮ ಸಂಗಡ ಮಾತು ಕತೆ ನಡೆಸೋರು. ಒಂದು ಆಶ್ಚರ್ಯದ ಸಂಗತಿ ಅಂದರೆ ಅವರು ಯಾರೂ ಗಡ್ಡ ಮೀಸೆ ಕೊನೆಗೆ ಕ್ರಾಪು ಜುಟ್ಟು ಸಹ ಬಿಟ್ಟಿರಲಿಲ್ಲ. ನುಣ್ಣಗೆ ಬೋಳಿಸಿದ ಬೋಡು ತಲೆ, ಅಷ್ಟೇ ನುಣ್ಣಗೆ ಕಾಣಿಸುವ ಗಲ್ಲ ಮತ್ತು ಕೆನ್ನೆ! ಈಗಿನ ಮಾಡ್ ಗುರುಗಳ ಹಾಗೆ ಗಡ್ಡ, ಮೀಸೆ ಜುಟ್ಟು ಇವು ಯಾವೂ ಇರದ ಸನ್ಯಾಸಿಗಳು ಅವರು.

ಕುಮಾರ ಪಾರ್ಕ್‌ಗೆ ಹೆಸರು ಕೊಟ್ಟ ಈ ಕುಮಾರ ಯಾರು ಎಂದು ನಿಮ್ಮ ಹಾಗೆಯೇ ನಾನೂ ಸಹ ತಲೆ ಕೆಡಿಸಿಕೊಂಡಿದ್ದೆ. ಸುಮಾರು ಜನರ ಹತ್ತಿರ ಈ ಸಂಗತಿ ತೆಗೆದಿದ್ದೆ. ದೇವೆಗೌಡರ ಮಗ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯಿಂದ ಕುಮಾರ ಪಾರ್ಕ್ ಬಂದಿದೆ ಅಂತ ಒಬ್ಬರು ಗೆಳೆಯರು ಕಡಾ ಖಂಡಿತವಾಗಿ ಹೇಳಿದ್ದರು. ಹೇಳಿಕೇಳಿ ಅವರು ಹಾಸ್ಯ ಪಾಸ್ಯ ಬರೆಯುವ ಜನ ಆದ್ದರಿಂದ ಅವರ ಮಾತು ನಾನು ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಅದು ಒಂದು ರೀತಿ ಒಳ್ಳೇದೇ ಆಯ್ತು!

ಬಹುಶಃ ಅದರ ಅಂದರೆ ಅವರ ವೇಷ ಭೂಷಣದ ಪ್ರಭಾವ ಇರಬೇಕು ನನಗೆ ಕೇಸರಿ ಬಣ್ಣದ ದಟ್ಟಿ ಮೇಲೆ ತುಂಬಾ ಇಷ್ಟ! ಇದು ಇಲ್ಲಿಗೆ ಸ್ಟಾಪ್. ಗಡ್ಡ ಮೀಸೆ ಜುಟ್ಟು ಮತ್ತು ಹಿಪ್ಪಿ ಅವತಾರ ನಂತರದ ದಿನದಲ್ಲಿ ಪರಿಸರದ ಪ್ರಭಾವದಿಂದ ಇದ್ದವು. ಅಂದ ಹಾಗೆ ಆಗಿನ್ನೂ ಭಾಜಪ ಹುಟ್ಟಿರಲಿಲ್ಲ ಮತ್ತು ನನಗೆ ಯಾವ ರಾಜಕೀಯ ಸಿದ್ಧಾಂತಗಳೂ ಈಗಿನ ಹಾಗೆ ತಲೆ ಒಳಗೆ ನುಸುಳಿರಲಿಲ್ಲ!

ಖಾದಿ ಬೋರ್ಡ್‌ಗೆ ಹೋಗೋದು, ಅಲ್ಲಿಂದ ಈ ಕೇಸರಿ ಅಥವಾ ಕಾವಿ ದಟ್ಟಿ ತರೋದು ಅದನ್ನು ಮೂರೂ ಹೊತ್ತು ಸುತ್ತಿಕೊಂಡು ಓಡಾಡೋದು. ಇದು ನಮ್ಮ ಅಮ್ಮನಿಗೆ ಇಷ್ಟ ಇಲ್ಲ. ಕಾರಣ ಇವನು ರಾಮಕೃಷ್ಣ ಆಶ್ರಮಕ್ಕೆ ಹೋಗಿದ್ದ, ಅಲ್ಲಿ ಪ್ರಭಾವ ಇವನೂ ಸನ್ಯಾಸಿ ಆಗಿಬಿಡ್ತಾನೆ ಎನ್ನುವ ಭಯ. ಇದನ್ನು ಅಮ್ಮ ನನ್ನ ಮದುವೆ ಆದ ಎಷ್ಟೋ ವರ್ಷದ ನಂತರ ತನ್ನ ಸೊಸೆಗೆ ಅಂದರೆ ನನ್ನ ಹೆಂಡತಿಗೆ ಹೇಳಬೇಕಾದರೆ ನನ್ನ ಕಿವಿಗೆ ಬಿತ್ತು. ಅಯ್ಯೋ ಅದಾ ಸನ್ಯಾಸಿ ಆಗೋದೂ……… ಅಂತ ನನ್ನಾಕೆ ಬಿದ್ದು ಬಿದ್ದು ನಕ್ಕಿದ್ದಳು. ಅದನ್ನ ಅಲ್ಲಿಗೇ ಬಿಡದೆ ಅವಳ ಕಡೆ ನೆಂಟರು ಇಷ್ಟರು ಎಲ್ಲರಿಗೂ ಡಂಗೂರ ಹೊಡೆದು ಬಿಟ್ಟಳು. ಅದರ ಪರಿಣಾಮ ಅಂದರೆ ಈಗಲೂ ಅವಳ ಬಂಧುಗಳು ಯಾರಾದರೂ ಕಾವಿ ಉಟ್ಟಿರುವ ಸಜ್ಜನರನ್ನು ನೋಡಿದರೆ ಪ್ರಭಿ ಗಂಡ ಅಂತ ಕಿಸಕ್ ಅನ್ನುತ್ತಾರೆ. ನಾನು ಯಾವಾಗಲಾದರೂ ಕೇಸರಿ ಕಲರ್ ಏನಾದರೂ ತೊಟ್ಟರೆ “ಹೊ ಸನ್ಯಾಸಿ…..” ಅಂತ ನಗು ತಡೆಯಲು ಹೋಗಿ ಕೆಮ್ಮಿ ಕಣ್ಣಲ್ಲಿ ನೀರು ಹರಿಸುತ್ತಾರೆ. ಇದು ಎಷ್ಟೋ ಸಲ ನನ್ನ ಎದುರಿಗೇ ನನಗೆ ಚುಡಾಯಿಸಲು ನಡೆದಿದೆ! ಅವರು ಕೆಮ್ಮು ಸಿಕ್ಕಿಸಿಕೊಂಡು ಕಣ್ಣಲ್ಲಿ ನೀರು ಹರಿಸುವುದು ಕಂಡು ನಾನು ಸಂತೋಷ ಪಟ್ಟು ಅವರ ಈ ಸುಖ ಹೆಚ್ಚಲಿ ಎಂದು ಮನಸಾರೆ ಹಾರೈಸಿದ್ದೇನೆ!

ಖಾದಿ ಬಟ್ಟೆ ನೆನಪಿನ ಜತೆಗೆ ನನ್ನ ನೆನಪು ಓಡುವುದು ಎಪ್ಪತ್ತರ ದಶಕದಲ್ಲಿ ನನ್ನ ವಯಸ್ಸಿನವರ ಆಕರ್ಷಣೆ ಅನಿಸಿದ್ದ ಹ್ಯಾಂಡ್ ಲೂಂ ಹೌಸ್ ಬಟ್ಟೆ ಅಂಗಡಿ. ಟೌನ್ ಹಾಲ್ ಎದುರಿನ ಕೆನರಾ ಬ್ಯಾಂಕಿನ ಕೇಂದ್ರ ಕಚೇರಿ ಕಟ್ಟಡದಲ್ಲಿ ಇದು ಇತ್ತು. ಅಲ್ಲಿನ ರೆಡಿಮೇಡ್ ಬಟ್ಟೆ ನಮ್ಮ ಆಕರ್ಷಣೆಯಲ್ಲಿ ಒಂದು. ಚಿತ್ರ ವಿಚಿತ್ರ ಪ್ರಿಂಟ್ ಹಾಕಿಸಿಕೊಂಡ ಬಟ್ಟೆಯಲ್ಲಿ ಶರ್ಟು ಹೊಲಿಸಿ ಅದನ್ನು ತೊಟ್ಟು ಮೆರೆಯುವುದು ಆಗಿನ ನಮ್ಮ ಫ್ಯಾಶನ್. ರಾಜೇಶ್ ಖನ್ನಾ ಒಂದು ಸಿನಿಮಾದಲ್ಲಿ ಕಾಲರ್ ಇರುವ ಜುಬ್ಬಾ ಹಾಕಿದ್ದ. ಅದರ ಪ್ರಭಾವ ಆಗಿನ ಯುವಕರಲ್ಲಿ ಹೇಗಿತ್ತು ಅಂದರೆ ಪ್ರತಿಯೊಬ್ಬರ ಬಳಿಯೂ ಬೇರೆ ಬೇರೆ ಬಣ್ಣಗಳ ಕನಿಷ್ಠ ಅರ್ಧ ಡಜನ್ ಈ ರೀತಿಯ ಜುಬ್ಬಾ ಇರುತ್ತಿತ್ತು ಮತ್ತು ಅದಕ್ಕೆ ಆಗ ಹೆಸರು ಗುರು ಶರ್ಟ್ ಅಂತ. ಒಂದು ಐದಾರು ವರ್ಷ ಈ ಟ್ರೆಂಡ್ ಚಾಲ್ತಿಯಲ್ಲಿತ್ತು. ಹ್ಯಾಂಡ್ ಲೂಂ ಹೌಸ್ ಬಟ್ಟೆ ಅಂಗಡಿಯಲ್ಲಿ ರಾಶಿ ರಾಶಿ ಈ ಗುರು ಶರ್ಟ್ ಹೊಲಿದು ಹೊಲಿದು ಗುಡ್ಡೆ ಹಾಕ್ತಾ ಇದ್ದರು. ಬಣ್ಣ ಬಣ್ಣದ ಇವು ಕೈಗೆ ಎಟಕುವ ಬೆಲೆಯಲ್ಲಿ ಸಿಕ್ಕುತ್ತಿತ್ತು. ಆಗ ಗುರು ಶರ್ಟ್ ಇಲ್ಲದ, ಹಾಕಿಲ್ಲದ ಯುವಕರು ಇರಲೇ ಇಲ್ಲ!

ಈ ಖಾದಿ ಪಂಚೆ ಟವಲ್ಲುಗಳ ಸಂಗಡ ಮತ್ತೊಂದು ನೆನಪಿನಲ್ಲಿ ಇರುವುದು ಅಂದರೆ ಕೋ ಆಪ್ಟೆಕ್ಸ್ ಎನ್ನುವ ತಮಿಳು ನಾಡಿನ ಬಟ್ಟೆ ಉತ್ಪಾದಕರ ಸಂಘದ ಬಟ್ಟೆಗಳು. ಖಾದಿ ಹಾಗೂ ಕರ್ನಾಟಕದ ಜವಳಿ ಉದ್ಯಮಕ್ಕೆ ಪೈಪೋಟಿ ಈ ಕೋ ಆಪ್ಟೆಕ್ಸ್‌ದು. ಪಂಚೆ ಟವಲ್… ಹೀಗೆ ಸುಮಾರು ವರ್ಷ ಇದರ ವಹಿವಾಟು ಬೆಂಗಳೂರಿನ ತುಂಬಾ ಹಬ್ಬಿತ್ತು ಮತ್ತು ಅದರದ್ದೇ ಆದ ವಿಶಿಷ್ಟ ಛಾಪು ಸಹ ಮೂಡಿಸಿತ್ತು. ತಮಿಳರು ಇರುವ ಪ್ರದೇಶದಲ್ಲಿ ಈ ಅಂಗಡಿಯ ಸರ್ವ ವಸ್ತುಗಳೂ ಎಲ್ಲರ ಮನೆಯಲ್ಲಿ ಉಪ್ಯೋಗವಾಗುತ್ತಿತ್ತು. ಡಿ ಎಂ ಕೆ ಬಾವುಟ ನೆನಪಿಗೆ ತರುವ ಹಾಗೆ ಎರಡು ಅದೇ ಅಂದರೆ ಡಿ ಎಂ ಕೆ ಬಾವುಟ ರೀತಿಯ ಎರಡು ಇಂಚು ಉದ್ದ ಅಗಲದ ಪಟ್ಟಿ ಈ ಟವಲ್ಲುಗಳಿಗೆ ಸೇರಿರುತ್ತಿತ್ತು. ಚಳವಳಿ ಏರು ಹಾದಿಯಲ್ಲಿನ ಸಮಯ ಅದು, ಈ ರೀತಿಯ ಟವಲ್ ಕಂಡರೆ ಕೋಪ! ಆದರೆ ಟವಲ್ ಚೆನ್ನಾಗಿ ನೀರು ಹೀರುತ್ತೆ, ಒಂದು ಕ್ಷಣದ ಮಟ್ಟಿಗೆ ಕೋಪ ಅದುಮಿ ಕೊ ಆಪ್ಟೆಕ್ಸ್ ಟವಲ್ ಮನೆ ಸೇರುತ್ತಿತ್ತು. ಅವರ ರಾಜ್ಯದ ಉತ್ಪನ್ನಗಳ ಮೇಲೆ ಅತಿಯಾದ ಪ್ರೀತಿ ಮತ್ತು ನಂಬಿಕೆ ಮೊನ್ನೆ ಕೇರಳದಲ್ಲಿ ನೋಡಿದೆ. ದೊಡ್ಡ ಹೋಟೆಲ್‌ಗೆ ಹೋಗಿದ್ದೆ, ಅಲ್ಲಿ ಕೈ ತೊಳೆಯಲು, ಸ್ನಾನಕ್ಕೆ ಸೋಪು ಇಟ್ಟಿದ್ದರು. ಆ ಸೋಪು ಕೇರಳದ ತಯಾರಿಕೆ, ಚಂದ್ರಿಕಾ ಸೋಪು. ಬೆಂಗಳೂರಿನ ಯಾವುದಾದರೂ ಹೋಟೆಲಿನಲ್ಲಿ ನೀವು ಮೈಸೂರು ಸಾಬೂನು ಕಾರ್ಖಾನೆಯ ಯಾವುದಾದರೂ ಉತ್ಪನ್ನ ನೋಡಿದ್ದೀರಾ..?

ನೋಡಿ ಹಳೇದು ಅಂದರೆ ನೆನಪು ಎಲ್ಲೆಲ್ಲಿಗೆ ಹಾರುತ್ತೆ ಅಂತ. ಬಟ್ಟೆ ವಿಷಯಕ್ಕೆ ಬಂದರೆ ಆಗಿನ ಮತ್ತೊಂದು ಮಧ್ಯಮ ವರ್ಗದ ಆಪ್ತ ಸಂಗತಿ ನೆನಪಿಗೆ ಬಂದೇ ಬರಬೇಕು. ಬಿನ್ನಿಮಿಲ್ ಮತ್ತು ರಾಜಾ ಮಿಲ್ ಹೆಸರಿನ ಎರಡು ಬಟ್ಟೆ ಮಿಲ್‌ಗಳು ಆಗ ಬೆಂಗಳೂರಿನ ಪ್ರಮುಖ ಬಟ್ಟೆ ತಯಾರಿಕಾ ಘಟಕಗಳು. ಇವೆರೆಡೂ ಶರ್ಟು ಪ್ಯಾಂಟು ಸೂಟಿನ ಬಟ್ಟೆ ಹಾಗು ಕಾಟನ್ ಸೀರೆ ತಯಾರಿಸುತ್ತಾ ಇದ್ದರು. ರಾಜಾಮಿಲ್‌ಗಿಂತಲೂ ಬಿನ್ನಿ ಅವರ ಬಟ್ಟೆ ಹೆಚ್ಚು ಮಾರಾಟ ಆಗುತ್ತಿತ್ತು. ಬಿನ್ನಿ ಶೋ ರೂಂಗಳು ಸುಮಾರು ಇದ್ದವು. ಬಿನ್ನಿ ಅವರ ಅಪ್ಸರ ಹೆಸರಿನ ಶರ್ಟ್ ಬಟ್ಟೆ ಆಗ ತುಂಬಾ ಫೇಮಸ್. ಹದಿನೆಂಟು ರುಪಾಯಿ ಮೀಟರು ಮತ್ತು ಬೆಂಗಳೂರಿನ ಸುಮಾರು ಸ್ಕೂಲುಗಳು ಇದೇ ಬಟ್ಟೆ ಯೂನಿಫಾರ್ಮ್‌ಗೆ ಆಯ್ಕೆ ಮಾಡುತ್ತಿದ್ದರು. ನನ್ನ ಮೊದಲನೇ ಸಂಬಳ ಅಂದರೆ ಸ್ಟೈಪೆಂಡ್ ಎಂಭತ್ತು ರೂಪಾಯಿ. ಆಗ ಕಿನೋ ಥಿಯೇಟರ್ ಪಕ್ಕ ನಾರಾಯಣ ರಾವ್ ಮಾಂಡ್ರೆ ಬಿನ್ನಿ ಶೋ ರೂಂಗೆ ಹೋದೆ. ಐದು ಕ್ರೀಂ ಬಣ್ಣದ ಶರಟು ತಗೊಂಡೆ, ನಮ್ಮ ಅಪ್ಪನಿಗೆ ಒಂದು, ನಾವು ನಾಲ್ಕು ಜನ ಅಣ್ಣ ತಮ್ಮಂದಿರಿಗೇ ತಲಾ ಒಂದು. ಪೂರ್ತಿ ತೋಳಿನ ಶರ್ಟ್ ಬೆಲೆ ಹನ್ನೆರೆಡು ರೂಪಾಯಿ ಐವತ್ತು ಪೈಸೆ. (ಇದು ೧೯೭೦, ಮೇ ತಿಂಗಳು. ಅದರ ಮುಂದಿನ ತಿಂಗಳು ಅಮ್ಮ ಅತ್ತಿಗೆ ಅಕ್ಕ ಇವರಿಗೆ ಸೀರೆ ಕಾಣಿಕೆ ಆಯಿತು). ನಮ್ಮ ಅಪ್ಪ ಶರಟು ತೊಟ್ಟು ನಮ್ಮ ಬಂಧು ಬಳಗಕ್ಕೆ ಗೋಪಿ ಈ ಶರಟು ಕೊಡಿಸಿದ, ಅವನ ಮೊದಲನೇ ಸಂಬಳದಲ್ಲಿ ಅಂತ ಸುಮಾರು ದಿವಸ ಹೇಳಿ ಹೇಳಿ ನಾನು ನಾಚಿಕೆ ಇಂದ ಕುಸಿಯೋ ಹಾಗೆ ಮಾಡಿದ್ದರು. ಬಿನ್ನಿ ಮತ್ತು ರಾಜಾ ಮಿಲ್ ನಿಧಾನಕ್ಕೆ ಕಾಲಗರ್ಭ ಸೇರಿದವು. ರಾಜಾ ಮಿಲ್ ಇದ್ದ ಕಡೆ ಈಗ ಮಂತ್ರಿ ಸ್ಕ್ವೇರ್ ಬಂದಿದೆ. ಬಿನ್ನಿ ಸ್ಥಳದಲ್ಲಿ ದೊಡ್ಡ ಗೇಟೆಡ್ ಹೌಸಿಂಗ್ ಕಾಂಪ್ಲೆಕ್ಸ್ ಬಂದಿದ್ದು ಅಲ್ಲಿದ್ದ ಕೆಲಸದವರು ಅವರ ಸಂಸಾರ ಕಾಲ ಗರ್ಭ ಸೇರಿದ್ದಾರೆ. ನಮ್ಮ ಕಣ್ಣೆದುರೇ ನಡೆದ ಮಾಯಾ ಬಝಾರ್ ಇದು! ಮತ್ತೊಂದು ಮೇಲ್ ಮಧ್ಯಮ ವರ್ಗಕ್ಕೆ ಎಂದು ರೇಮಂಡ್ಸ್ ಶೋ ರೂಂ ಕೆಂಪೇಗೌಡ ರಸ್ತೆ ಮತ್ತು ಎಂ ಜಿ ರಸ್ತೆಯಲ್ಲಿ ಇದ್ದವು. ಅಲ್ಲಿನ ಬಟ್ಟೆ ಸುಮಾರು ದುಬಾರಿ. ಮದುವೆಗೆ ಮಾವ ಸೂಟು ಕೊಡ್ತಾನೆ ಅಂದರೆ ರೇಮಾಂಡ್ಸ್ ಶೋ ರೂಂ ಗೆ ದಂಡು ಹೋಗ್ತಾ ಇತ್ತು. ರೇಮಂಡ್ಸ್ ಶೋ ರೂಂ ಬಳಿ ಯಾರೋ ಪರಿಚಯದವನು ತಲೆ ಬಗ್ಗಿಸಿ ಹೋಗ್ತಾ ಇದ್ದಾನೆ ಅಂದರೆ ಅವನು ಖೆಡ್ಡಾ ಆದ ಅಂದರೆ ಮದುವೆ ಎನ್ನುವ ದೊಡ್ಡ ಹಳ್ಳಕ್ಕೆ ಬಿದ್ದ ಎನ್ನುವ ಅರ್ಥ ಇತ್ತು! ಸುಮಾರು ಗುಜರಾತಿನ ಮಿಲ್ ಹೆಸರು ಹೊತ್ತ ಬಟ್ಟೆಗಳ ಥಾನ್ ಥಾನು ಅವೆನ್ಯೂ ರಸ್ತೆಯ ಅಡ್ಡ ರಸ್ತೆಗಳಲ್ಲಿ ವ್ಯಾಪಾರ ಆಗುತ್ತಿತ್ತು. ಕಳೆದ ವರ್ಷ ಅತ್ತ ಹೋಗಿದ್ದೆ, ಅಲ್ಲಿನ ವ್ಯಾಪಾರ ವೃದ್ಧಿಸಿದೆ ಅನಿಸಿತು.

ಖಾದಿ ಭಂಡಾರದ ಬಗ್ಗೆ ಹೇಳುತ್ತಾ ಇದ್ದೆ. ಕುಮಾರ ಪಾರ್ಕ್‌ನ ಖಾದಿ ಮಂಡಳಿಗೆ ನನ್ನ ಭೇಟಿ ಹೆಚ್ಚು, ಅದರ ನಂತರ ಕೋಟೆ ಖಾದಿ ಭಂಡಾರ ಮತ್ತು ಸುಬೇದಾರ್ ಛತ್ರದ ರಸ್ತೆಯ ಅಂಗಡಿ. ಆಗ ಗಾಂಧಿ ಭವನದ ಖಾದಿ ಮಳಿಗೆಯಲ್ಲಿ ಗ್ರಾಮೀಣ ಉತ್ಪನ್ನಗಳು ಮಾರಾಟಕ್ಕೆ ಇರುತ್ತಿದ್ದವು. ಅಲ್ಲಿಂದಲೇ ನಾವು ಕೊಟ್ಟಣದ ಅಕ್ಕಿ ತರುತ್ತಿದ್ದೆವು. ಕೊಟ್ಟಣದ ಅಕ್ಕಿ ಅಂದರೆ ಕೆಂಪು ಬಣ್ಣದ ಪಾಲಿಶ್ ಆಗಿರದ ಅಕ್ಕಿ. ತುಂಬಾ ರುಚಿ ಇರುತ್ತಿತ್ತು. ಇದು ಅಲ್ಲಿ ಮಾತ್ರ ಸಿಗುತ್ತಿತ್ತು. ಅಕ್ಕಿಗಳಲ್ಲೇ ಹದಿನೈದು ಇಪ್ಪತ್ತು ವೆರೈಟಿ ಇದ್ದವು. ಈಗಿನಂತೆ ಸೋನಾ ಮಸೂರಿ ಮತ್ತು ಕೋಸರಿಗೆ ಎರಡು ಹಾಗಲ್ಲ. ಇನ್ನೊಂದು ವಿಶೇಷ ಅಂದರೆ ಸ್ಟೀಮಡ್ ಅಕ್ಕಿ ಆಗ ನಮಗೆ ಗೊತ್ತೇ ಇರಲಿಲ್ಲ. ಸುಮಾರು ವರ್ಷ ಇದೇ ಅಕ್ಕಿಯನ್ನು ಕೊಟ್ಟಣದ್ದು ಸುಮಾರು ದೇವಸ್ಥಾನಗಳಲ್ಲಿ ಬಳಸಿದ್ದು ನೋಡಿದ್ದೀನಿ. ಊಟದ ಎಲೆಯ ಮೇಲೆ ಅನ್ನ ಪುಟ್ಟ ಪರ್ವತದ ರೂಪು ಪಡೆದದ್ದು ಅದನ್ನು ಚೊಕ್ಕ ಮಾಡಿದ ಅನ್ನ ರಾಕ್ಷಸರು…. ಇವರೆಲ್ಲರ ನೆನಪು ಬರುತ್ತದೆ. ಇನ್ನೊಂದು ವಿಶೇಷ ಅಂದರೆ ಗೃಹ ಕೈಗಾರಿಕೆಯ ಸುಮಾರು ವಸ್ತುಗಳು ಅಲ್ಲಿ ಅಂದರೆ ಖಾದಿ ಅಂಗಡಿಯಲ್ಲಿ ಲಭ್ಯ. ಕುಟೀರ ಎನ್ನುವ ಮೈ ಸಾಬೂನು, ಸ್ಯಾಂಡಲ್ ಸಾಬೂನು, ಊದು ಬತ್ತಿ, ಧೂಪದ ಉಂಡೆ, ಮತ್ತೊಂದು ಗೃಹ ಕೈಗಾರಿಕೆ ಚರ್ಮದ ಚಪ್ಪಲಿ, ಬೂಟು, ಬೆಲ್ಟು, ಜಂಬದ ಚೀಲ…. ಮುಂತಾದ ವಸ್ತುಗಳು ಅಲ್ಲಿ ಮಾರಾಟ ಆಗುತ್ತಿತ್ತು. ಈಚೆಗೆ ಬೆಂಗಳೂರಿನ ರಸ್ತೆಗಳಲ್ಲಿ ಕಾಣಿಸುತ್ತಿರುವ ಚಿಪ್ಪು ಆಕಾರದ ಬೆಲ್ಲ ಖಾದಿ ಭಂಡಾರದಲ್ಲಿ ಆಗಲೇ ಸಿಗುತ್ತಿತ್ತು. ಜೋನಿ ಬೆಲ್ಲ ಎಂದು ಅದನ್ನು ಹೇಳುತ್ತಿದ್ದರು. ಈಗ ಜೋನಿ ಬೆಲ್ಲ ದ್ರವ ರೂಪದಲ್ಲಿ ಬಾಟಲಿಯಲ್ಲಿ ಸಿಗುತ್ತದೆ ಮತ್ತು ನಮ್ಮ ಮಲೆನಾಡಿನ ಉತ್ಪನ್ನ ಅದು. ಭಾರತೀಯ ಉತ್ಪನ್ನಗಳನ್ನು ಕೊಳ್ಳಿ ಎನ್ನುವ ಸ್ಲೋಗನ್ ಹುಟ್ಟುವ ಮುನ್ನವೇ ಖಾದಿ ಮಂಡಳಿ ಆ ಸ್ಲೋಗನ್ ಅನ್ನು ಅನುಷ್ಠಾನ ಮಾಡಿತ್ತು.

ಇನ್ನೊಂದು ಹೇಳೋದು ಮರೆತಿದ್ದೆ ಅರವತ್ತು ಎಪ್ಪತ್ತರ ದಶಕದಲ್ಲಿ ರಾ ಕಾಟನ್ (ಕಚ್ಚಾ ಹತ್ತಿ) ಹೆಸರಿನಲ್ಲಿ ಪ್ಯಾಂಟ್ ಬಟ್ಟೆ ಕಟ್ ಪೀಸ್ ರೀತಿ ಮಾರಾಟ ಆಗುತ್ತಿತ್ತು. ಮುಖ್ಯವಾಗಿ ಇವೂ ಫುಟ್ ಪಾತ್ ವ್ಯಾಪಾರ. ನಾಲ್ಕುವರೆ ರುಪಾಯಿಗೆ ಒಂದು ಪ್ಯಾಂಟ್ ಅಳತೆ. ಪ್ಯಾಂಟ್ ತೊಟ್ಟಾಗ ಅದೇನೋ ಹಿತಾನುಭವ. ಕಾಲೇಜು ಹುಡುಗರಲ್ಲಿ ನಾಲ್ಕಾರು ಇಂತಹ ಪ್ಯಾಂಟ್ ಇರುತ್ತಿತ್ತು ಮತ್ತು ಅದನ್ನು ಕಾಲೇಜಿಗೆ ಧರಿಸುತ್ತಿದ್ದರು. ಆಗ ಕಾಲೇಜುಗಳಿಗೆ ಇನ್ನೂ ಯೂನಿಫಾರ್ಮ್ ಪದ ತಲೆ ಹಾಕಿರಲಿಲ್ಲ.

ಇನ್ನೂ ಇದೆ….