ಚಿಕ್ಕವನಿದ್ದಾಗ ತನ್ನನ್ನು ಎಲ್ಲರೂ ಅದೆಷ್ಟು ಕಾಳಜಿಯಿಂದ ಮಾತನಾಡಿಸುತ್ತಿದ್ದರೆಂದರೆ, ಗೆಳೆಯರೆಲ್ಲ ಹೊಟ್ಟೆಕಿಚ್ಚು ಪಡುವಷ್ಟು. ಶಾಲೆಗೆ ಹೋಗಿ ಬರುವಾಗ ‘ಮಾಳಿಗಿ ಶಂಕರಪ್ಪನಂತ ಗಟ್ಟಿ ಕುಳ ತನ್ನ ಕರೆದು ಮಾತಾಡದಂದ್ರ ಹುಡುಗಾಟ್ಕೀನ?’ ಅಂದುಕೊಳ್ಳುತ್ತಿದ್ದ. ಬೇರೆಯವರು ನಕ್ಕೊಂಡೇ ಕೇಳುತ್ತಿದ್ದರು “ಏನ್ಲೇ ಶಿದ್ಲಿಂಗ, ನಿಮ್ಮ ಶಂಕರಪ್ಪ ಏನಂದ?” ತಮ್ಮತಮ್ಮಲ್ಲೇ ಕಣ್ಣು ಮಿಟುಕಿಸುತ್ತಿದ್ದರು. “ನೀ ಹಾಕ್ಕೊಂಡ ಅಂಗಿ ಸರಿಯಾಗೇತೇನ್ಲೆ? ಚೊಣ್ಣ ಬರೋಬರಿ ಆಗೇತಿಲ್ಲ? ನಿಮ್ಮವ್ವ ಮನ್ಯಾಗ ಇದ್ಲೇನು?”
‘ನಾನು ಮೆಚ್ಚಿನ ನನ್ನ ಕತೆ’ಯ ಸರಣಿಯಲ್ಲಿ ಚನ್ನಪ್ಪ ಅಂಗಡಿ ಬರೆದ ಕತೆ ‘ಪಿರಾಮಿಡ್ಡಿನಿಂದೆದ್ದು ಬಂದವನು’

 

ಸಂಜೆಯ ತಂಗಾಳಿಯನ್ನು ಮನಸ್ಸು ತುಂಬಿ ಬರುವಂತೆ ಗ್ರೇಟಾ ಆಸ್ವಾದಿಸುತ್ತಿದ್ದಳು. ಇದು ಇಲ್ಲಿಯೇ ಹುಟ್ಟಿ ಬೆಳೆದ ಗಾಳಿಯಲ್ಲ. ಇಲ್ಲದಿದ್ದರೆ ಒಂದು ಕಡೆಯಿಂದ ತಲೆ ನೇವರಿಸುವಂತ ತಂಪು, ಮತ್ತೊಂದು ಕಡೆಯಿಂದ ಎದೆ ಬೆಚ್ಚಗಾಗಿಸುವ ಬಿಸುಪು ಏಕಕಾಲಕ್ಕೆ ಅನುಭವಿಸಲು ಹೇಗೆ ಸಾಧ್ಯ? ಆಕೆ ಸ್ವಲ್ಪ ಹೆಚ್ಚಾಗಿಯೇ ಕೈಬೀಸಿಕೊಂಡು ನಡೆಯುತ್ತಿದ್ದ ಗತಿಗೆ ಕೊರಳೊಳಗಿನ ಕ್ರಾಸ್ ಆಚೀಚೆ ಓಲಾಡುತ್ತಿತ್ತು. ತನ್ನ ಮಗನೇರಿದ ಶಿಲುಬೆಯನ್ನೇ ಕೊರಳಲ್ಲಿ ಹೊತ್ತು ನಡೆದಾಡುತ್ತಿರುವ ತಾಯಿ ಮೇರಿಯಂತೆ ಒಂದೊಂದು ಸಲ ಆಕೆ ಕಾಣುತ್ತಿದ್ದಳು. ನೀಳವಾದ ಕೈಯಿಂದ ಸುತ್ತಲಿನ ದೃಶ್ಯಗಳನ್ನು ತೋರಿಸುತ್ತ ಆಕೆ ಮಾತನಾಡುವ ಭಂಗಿಯನ್ನು ನೋಡುತ್ತಲೇ ಇರಬೇಕೆನ್ನಿಸುತ್ತಿತ್ತು. ಅಥವಾ ಅದವನಿಗೆ ಅನಿವಾರ್ಯವಾಗಿತ್ತು. ಶಿಲ್ಪದಂಥ ಆಕೆಯ ಶರೀರಕ್ಕೆ ಹೊಂದಿಕೊಂಡಿರುವ ನಿಲುವಂಗಿಯ ಸೊಂಟದ ಭಾಗದಲ್ಲಿನ ಬಿಗಿಪಟ್ಟಿ ಯಾವಾಗಲೂ ಕಣ್ಸೆಳೆಯುತ್ತಿತ್ತು. ಅಥವಾ ಆತ ಹಾಗೆಂದುಕೊಳ್ಳುತ್ತಿದ್ದ. ದಿನವಿಡೀ ಉರಿದುರಿದ ಸೂರ್ಯ ಕಣ್ಣಿಗೆ ಜೋಂಪು ಹತ್ತಿದ ಮಗುವಿನಂತೆ ಭೂಮಿಯ ಮತ್ತೊಂದು ಬದಿಗೆ ಒರಗಿಕೊಳ್ಳಲು ಹವಣಿಸುತ್ತಿದ್ದ. ‘ಧಡಲ್…. ಢಮಾರ್….’ ಎಂಬ ಸಿಡಿಯುವ ಸದ್ದಿಗೆ ಇಬ್ಬರೂ ಕಾದ ಹಂಚಿನ ಮೇಲಿನ ಅರಳಿನಂತೆ ಪುಟಿದರು. ತಲೆ ಮೇಲೆಯೇ ಮುಗಿಲ ತುಣಕೊಂದು ಕಳಚಿ ಬಿದ್ದಂತೆ ಗರಬಡಿದು ನಿಂತರು. ಸದ್ದು ಬಂದ ಕೆಲವು ಕ್ಷಣಗಳವರೆಗೂ ಭೂಮಿ ಅದರುತ್ತಿತ್ತು. ಅಥವಾ ಅವರಿಗೆ ಹಾಗೆ ಭಾಸವಾಗುತ್ತಿತ್ತು. ಜೀವಗಳೆರಡೂ ಸ್ತಿಮಿತಕ್ಕೆ ಬಂದ ಮೇಲೆ ಆಕೆ ಜೋಲಿ ಹೊಡೆಯುತ್ತ ಬಂದು, ನಿರ್ವಾಹವಿಲ್ಲದೆ ಅವನೆದೆಗೆ ಒರಗಿದಳು.

“ಸುರುವಾತು ಗಾಜಾ ಪಟ್ಟಿ ಯುದ್ಧ. ಸಪ್ಪಳಾ ನೋಡಿದ್ರ ಇದು ಇಸ್ರೇಲ್ ಹಾರ್ಸಿದ ಮಿಸೈಲ್ ಇಲ್ಲಾ ಸೆಲ್ಲರ್ ಇರಬೇಕು.” ಮೃದುವಾಗಿ ಅವಳ ತಲೆ ಸವರುತ್ತ ಹೇಳಿದ. ಗಡಿದಾಟಿ ಬಂದ ಸದ್ದು ಎಷ್ಟು ಹಮಾಸ ಉಗ್ರರು ಸತ್ತರೆಂಬ ಲೆಕ್ಕವನ್ನು ಕೊಡಬಹುದಿತ್ತು. ಆದರೆ ಪ್ಯಾಲಿಸ್ಟೀನಿನಲ್ಲಿ ಎಷ್ಟು ಜನ ಅಣ್ಣನನ್ನು, ತಮ್ಮನನ್ನು, ಮಗನನ್ನು, ತಂದೆಯನ್ನು, ಗಂಡನನ್ನು, ಗೆಳೆಯನನ್ನು ಕಳೆದುಕೊಂಡರೆಂಬ ಲೆಕ್ಕ ಕೊಡುವವರ್ಯಾರು?

ಅವಳ ತುಟಿಗಳು ಅದರುತ್ತಿದ್ದವು. ಮಾತು ಹೊರಬರಲಾಗದೇ ಬಿಸಿಯುಸಿರು ಬಿಡುತ್ತಿದ್ದಳು. ತನ್ನ ಸಂತೈಸುವಿಕೆಯನ್ನು ಮುಂದುವರೆಸುತ್ತ ಉಸುರಿದ, “ಇದೇನ ನಮಗ ಹೊಸಾದೇನು? ನೀರಿನ ಮ್ಯಾಲಿನ ಗುಳ್ಳಿಯಂಗ ಜೀವ. ಯಾಕ ಹೆದರ್ತಿ ಬಿಡು.”

ಅವನಿಗೆ ತಲೆ ತಾಗಿಸಿಕೊಂಡು ನಿಂತವಳಿಗೆ ಅವನ ಎದೆಯ ಬಡಿತದ ಸದ್ದು ಸ್ಪಷ್ಟವಾಗಿ ಕೇಳುತ್ತಿತ್ತು. ಹಿಂಸೆಗೆ ವಿಹ್ವಲಗೊಂಡ ಮನಸ್ಸು. “ಸೀಡಾ, ನಾಟಕಾ ಮಾಡಬ್ಯಾಡಾ. ನೀ ನನಗಿಂತ ಹೆದರ್ಕೊಂಡಿ. ಇಸ್ರೇಲ್ ಗಾಜಾ ಮ್ಯಾಲ ಇನ್ನೊಂದು ಬಾಂಬ್ ಹಾಕಿದ್ರ, ಅಲ್ಲಿ ಮಂದಿ ಸಾಯಕಿಂತ ಮೊದಲ ನೀನ ಸಾಯ್ತಿ” ಎಂದು ನಗಲು ಪ್ರಯತ್ನಿಸಿದಳು. ಅವಳ ಆ ರೀತಿಯ ನೇರ ಮಾತಿಗೇ ಆತ ಮಾರು ಹೋಗಿದ್ದು. ಆಕೆ ಒಮ್ಮೆ ಅವನಿಗೆ ಸೀಡಾ ಎನ್ನುತ್ತಿದ್ದಳು. ಮತ್ತೊಮ್ಮೆ ಸಿಡಲ್ ಅಂತಿದ್ದಳು. ಇನ್ನೊಮ್ಮೆ ಇನ್ನೊಂದು ರೀತಿಯಲ್ಲಿ ಕರೆಯುತ್ತಿದ್ದಳು. ಅಂತೂ ತನ್ನ ಹೆಸರನ್ನು ಗ್ರೇಟಾಳ ಬಾಯಿಂದ ಸರಿಯಾಗಿ ಉಚ್ಛರಿಸುವಂತೆ ಮಾಡುವ ಅವನ ಪ್ರಯತ್ನ ಕೈಗೂಡಲಿಲ್ಲ. ಭಾವನೆಯ ಮುಂದೆ ಭಾಷೆ ಮುಖ್ಯವಾಗಲಿಲ್ಲ.

‘ಢಂ….ಢಂ….’ ಮತ್ತೊಂದು ಅಸ್ತ್ರ ಗಾಜಾ ಪಟ್ಟಿಯ ನೆಲದೊಡಲಿಗೆ ಈಟಿಯಂತಿರಿದೇ ಬಿಟ್ಟಿತು. ಈಗ ಅವನೇ ಬೆಚ್ಚಿ ಗ್ರೇಟಾಳ ಶಿಲುಬೆ ಹೊತ್ತ ಮೃದುವಾದ ಎದೆಗೆ ಮಗುವಿನಂತೆ ತಬ್ಬಿದ. ತಬ್ಬಿಕೊಳ್ಳಲು, ಹಬ್ಬಿಕೊಳ್ಳಲು ಈ ಕಾಣದೂರಿನಲ್ಲಿ ಯಾರಿದ್ದಾರೆ, ಈ ಸೀಡಾ ಎಂಬ ಶಿದ್ಲಿಂಗನಿಗೆ.

ಬಸ್ಸು ಕೈರೊ ಕಡೆಗೆ ಮುಖ ಮಾಡಿ ನಿಂತಿತ್ತು. ವಾರದ ರಜೆ ಮುಗಿದಿತ್ತು.

*****

ಶಿದ್ಲಿಂಗು ಊರೇಕೆ ಬಿಟ್ಟ? ಅವನು ಹೊರಟ ಬೆನ್ನಿಗೇ ಶಿಸ್ತಿನ ಸಿಪಾಯಿಗಳಂತೆ ಪ್ರಶ್ನೆಗಳ ಸಾಲು ಸಾಲು. ಕೇಳುವವರು ಎಷ್ಟು ದಿನ ಕೇಳಿಯಾರು? ಮನದೊಳಗಿನ ಅರಿವು ಯಾವ ಇಸ್ರೇಲ್ ಕ್ಷಿಪಣಿಗೂ ಕಡಿಮೆಯಿಲ್ಲದಂತೆ ಅವನ ಮೇಲೆ ಬಂದೆರಗುತ್ತಿತ್ತು. ಹಿಂಸೆಗೆಷ್ಟು ಮುಖ? ಹೊಡೆದರೆ, ಬಡಿದರೆ, ಕೊಂದರೆ ಮಾತ್ರ ಹಿಂಸೆಯೆ? ನಾಲ್ಕು ಜನರ ನಡುವೆ ಸದಾ ಅವಮಾನಕ್ಕೊಳಗಾಗುವ ಶಿಕ್ಷೆಯೇನು ಕಡಿಮೆಯೆ? ಪೆಟ್ಟಿನಿಂದಾದ ನೋವು ಗಾಯ ಮಾಯುವವರೆಗೆ ಮಾತ್ರ ಇರುತ್ತದೆ. ಮನಸ್ಸಿಗಾದ ನೋವು ಆಳಕ್ಕಿಳಿದು ಕಲುಕಿ ಕಂಗೆಡಿಸುತ್ತದೆ.

ಚಿಕ್ಕವನಿದ್ದಾಗ ತನ್ನನ್ನು ಎಲ್ಲರೂ ಅದೆಷ್ಟು ಕಾಳಜಿಯಿಂದ ಮಾತನಾಡಿಸುತ್ತಿದ್ದರೆಂದರೆ, ಗೆಳೆಯರೆಲ್ಲ ಹೊಟ್ಟೆಕಿಚ್ಚು ಪಡುವಷ್ಟು. ಶಾಲೆಗೆ ಹೋಗಿ ಬರುವಾಗ ‘ಮಾಳಿಗಿ ಶಂಕರಪ್ಪನಂತ ಗಟ್ಟಿ ಕುಳ ತನ್ನ ಕರೆದು ಮಾತಾಡದಂದ್ರ ಹುಡುಗಾಟ್ಕೀನ?’ ಅಂದುಕೊಳ್ಳುತ್ತಿದ್ದ. ಬೇರೆಯವರು ನಕ್ಕೊಂಡೇ ಕೇಳುತ್ತಿದ್ದರು “ಏನ್ಲೇ ಶಿದ್ಲಿಂಗ, ನಿಮ್ಮ ಶಂಕರಪ್ಪ ಏನಂದ?” ತಮ್ಮತಮ್ಮಲ್ಲೇ ಕಣ್ಣು ಮಿಟುಕಿಸುತ್ತಿದ್ದರು. “ನೀ ಹಾಕ್ಕೊಂಡ ಅಂಗಿ ಸರಿಯಾಗೇತೇನ್ಲೆ? ಚೊಣ್ಣ ಬರೋಬರಿ ಆಗೇತಿಲ್ಲ? ನಿಮ್ಮವ್ವ ಮನ್ಯಾಗ ಇದ್ಲೇನು?” ಹೀಗೆಲ್ಲ ಶಂಕರಪ್ಪನವರು ವಿಚಾರಿಸಿದರೆ ಉಳಿದವರಿಗೇಕೆ ಹೊಟ್ಟೆಯಲ್ಲಿ ಕಾರಾ ಕಲಿಸಿದ ಹಾಗಾಗಬೇಕು? ಅದೆಲ್ಲಾ ಏನಾದರಾಗಲಿ. ತಾ ಮುಂದೆ ಹೋದಮೇಲೆ ಮುಸಿ ಮುಸಿ ನಗುವುದೇಕೆ? ಶಿದ್ಲಿಂಗನ ಪಾಲಿಗೆ ಮಾಳಿಗಿ ಶಂಕರಪ್ಪನಂತ ದೊಡ್ಡ ಮನುಷ್ಯ ತನ್ನ ಬಗ್ಗೆ ವಿಚಾರಿಸಿಕೊಳ್ಳುವ ಕಕ್ಕುಲಾತಿ ಮುಂದೆ ಉಳಿದೆಲ್ಲಾ ಮಾತುಕತೆಗಳು ಗೌಣವಾದವು. ಆ ಬಾಲ್ಯವೇ ಕೊನೆಯವರೆಗೂ ಇರಬೇಕಾಗಿತ್ತು. ಮನುಷ್ಯನ ಅರಿವು ಅವಮಾನಕ್ಕೆ ದಾರಿ; ಅವಮಾನಕ್ಕಿಂತ ಅಗಾಧವಾದ ಹಿಂಸೆಯಿಲ್ಲ. ಮಿಟ್ಟಿಮನಿ ಬಸಪ್ಪ ಅದೊಂದು ದಿನ ನಾಲ್ಕು ಜನರ ನಡುವೆ ಕುಳಿತಾಗಲೇ ಮಾತನಾಡಿಸಿದ. ಚಿಗುರು ಮೀಸೆಯ ಹುಡುಗನ ಗದ್ದವನ್ನು ಕೈಯಲ್ಲಿ ಹಿಡಿದು ಮೇಲೆ ಕೆಳಗೆ ನೋಡುತ್ತ “ಅಲಲಲ…. ಬರ್ತಾ ಬರ್ತಾ ಮಾರಿಮ್ಯಾಲ ಶಂಕ್ರಪ್ಪನ ಕಳಾ ಬರಾಕತ್ತತಿ ನೋಡು…..” ಅಂತ ಗಹಗಹಿಸಿದ. ಶಿದ್ಲಿಂಗು ಮನೆಗೆ ಬಂದು ತಾಸುಗಟ್ಟಲೆ ಗುಂಡುಕಲ್ಲಿನಂತೆ ನೆಲಕ್ಕಂಟಿಕೊಂಡ. ಗೋಡೆ ಮೇಲಿನ ಕನ್ನಡಿಯನ್ನು ಬೆಳಕಿಗೆ ತಂದು ಮುಖ ನೋಡಿಕೊಂಡ. ಕಣ್ಣು, ಮೂಗು, ಬಣ್ಣ, ಬಾಯಿ ಪ್ರತಿಯೊಂದರಲ್ಲಿ ಮನೆಯೊಳಗಿನ ಅಪ್ಪನಿಗೂ, ತನಗೂ, ಮಾಳಿಗಿ ಶಂಕರಪ್ಪನಿಗೂ ಹೋಲಿಸಿ ನೋಡಿದ. ಯಾವುದು ಸತ್ಯ? ಹಡೆದ ತಾಯಿಯನ್ನು ಯಾವ ಬಾಯಿಯಿಂದ ಕೇಳುತ್ತಾನೆ? ಈ ವಿಚಾರ ತನ್ನ ಊರಿನ ಹೊಕ್ಕಳು ಬಳ್ಳಿಯನ್ನೇ ಕತ್ತರಿಸಿ ಬಿಸಾಕುವಂತಿತ್ತು. ತಾನಿನ್ನು ಜನರ ಮಾತನ್ನು ಕೇಳಲಾರೆ. ಅವರ ದೃಷ್ಟಿಯನ್ನು ಎದುರಿಸಲಾರೆ. ತನ್ನ ಹುಟ್ಟಿನ ಗುಟ್ಟು ಕುರಿತ ನೆರಳು ಬೀಳದ ಜಾಗೆಗೆ ತೆರಳಬೇಕು. ಒಂದೊಂದು ಗಳಿಗೆಯಲ್ಲಿ ಎಲ್ಲರೂ ಎಲ್ಲವೂ ಬೇಡವಾಗಿ ಬಿಡುತ್ತದಲ್ಲ, ಹಾಗೆ. ಅದು ಅವನ ಜೀವನದ ಮೊದಲ ತಿರುವು. ಪ್ರಶ್ನೆಗಳನ್ನು ಬೆನ್ನಿಗೆ ಬಿದ್ದ ಬೇತಾಳದಂತೆ ಮರದ ಸುತ್ತ ಕವಾಯತು ಮಾಡಲು ಬಿಟ್ಟು ಮುನ್ನಡೆದ.

ತಾನು ಹೋದ ದೂರಕ್ಕೆ ಕೂಡ ಪ್ರಶ್ನೆಯೆಂಬ ಬೇತಾಳ ಬಂದೇ ಬಿಡುತ್ತಿತ್ತು. ಎಲ್ಲಿಗೆ ಹೋದರೂ ಗುರುತು ಪರಿಚಯದವರು ಸಿಕ್ಕುಬಿಡುತ್ತಿದ್ದರು. ಹಿಂದು ಮುಂದು ಕುಶಲೋಪರಿ ವಿಚಾರಿಸಿದರೆ ಶಂಕರಪ್ಪನನ್ನು ಕುರಿತು ಮಾತನಾಡಿದಂತೆಯೇ ಅನಿಸುತ್ತಿತ್ತು. ಯಾರಾದರೂ ಒಂದು ಕ್ಷಣಕ್ಕಿಂತ ಹೆಚ್ಚು ದಿಟ್ಟಿಸಿದರೆ ಅವರು ತನ್ನ ಹುಟ್ಟಿನ ಹಿನ್ನೆಲೆಯನ್ನು ಬಲ್ಲವರೆಂದೋ ಇಲ್ಲವೇ ಅದನ್ನು ಕೆದಕಲು ಬಂದ ಸಂಶೋಧಕರೆಂದೋ ತಿಳಿದುಬಿಡುತ್ತಿದ್ದ. ಬೆನ್ನತ್ತಿದ ಪ್ರಶ್ನೆಗಿಂತ ವೇಗವಾಗಿ ಓಡುತ್ತಲೇ ಇದ್ದ. ಒಮ್ಮೆ ತಾನು ಗೆದ್ದರೆ ಮತ್ತೊಮ್ಮೆ ಗುಟ್ಟು ಗೆಲ್ಲುತ್ತಿತ್ತು.

ಊರು ಬಿಟ್ಟವನಿಗೆ ಜಿಲ್ಲೆ, ರಾಜ್ಯ, ದೇಶ ಬಿಡುವುದು ಅಸಾಧ್ಯವೇನಾಗಲಿಲ್ಲ. ಪಾಸ್‌ಪೋರ್ಟ್, ವೀಸಾ ಎಲ್ಲ ದೊರೆತದ್ದು ನೆನಪಿಸಿಕೊಂಡರೆ ಅದೊಂದು ಪವಾಡವೆನಿಸುತ್ತದೆ. ಯಾವುದು ಕನಸು, ಯಾವುದು ವಾಸ್ತವ ಎಂಬುದು ಗೊತ್ತಾಗದಷ್ಟು ಒಂದರೊಳಗೊಂದು ಹೆಣೆದುಕೊಂಡಿವೆ. ತಾಯ್ನೆಲವನ್ನು ಬಿಟ್ಟು ಬಂದವನಿಗೆ ತಂದೆ ಯಾರೆಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯಿತು.

******

ಇಲ್ಲಿ ಗಂಗಾ ನದಿ ಮತ್ತು ನೈಲ್ ನದಿಗಳ ಹೆಸರು ಅದಲುಬದಲಾದರೂ ತನಗೇನು ವ್ಯತ್ಯಾಸವಿಲ್ಲ. ನೈಲ್ ನದಿ ಕಣಿವೆಯ ಕಪ್ಪು ಭೂಮಿ ತನ್ನೂರಿನ ಎರೆಹೊಲದಂತಿದೆ; ಈಜಿಪ್ಟಿನ ಮರುಭೂಮಿ ಮಸಾರಿ ಹೊಲವನ್ನು ನೆನಪಿಸುತ್ತದೆ. ಕೆಲವು ನೆನಪುಗಳೇ ಹಾಗೆ. ಬೆಂಬಿಡದ ಭೂತದಂತೆ. ಶಿದ್ಲಿಂಗು ಕೆಲಸಕ್ಕೆ ಹೋಗುವ ಸಂಸ್ಥೆಯ ದಾರಿಯಲ್ಲೇ ಭಾರತದ ರಾಯಭಾರ ಕಛೇರಿಯಿದೆ. ಕಟ್ಟಡದ ಮೇಲೆ ಹಾರುವ ಎರಡೂ ದೇಶದ ಧ್ವಜಗಳು ಅವಳಿ-ಜವಳಿ ಮಕ್ಕಳಂತೆ ಕಾಣುತ್ತವೆ. ಕೇಸರಿ ಬಿಳಿ ಹಸಿರಿಗೆ ಹತ್ತಿರವಾದ ಬಣ್ಣಗಳೇ ಪರದೇಶದ ಧ್ವಜದಲ್ಲೂ. ಬಿಳಿಪಟ್ಟಿಯಲ್ಲಿ ಅಶೋಕನ ಚಕ್ರದ ಬದಲು ‘ಕೋಟ್ ಆಫ್ ಆಮ್ರ್ಸ್’ ಪಕ್ಷಿಯ ಚಿತ್ರವಷ್ಟೆ. ಚಕ್ರ ಪ್ರಗತಿಯ ಸಂಕೇತವಾದರೆ, ಪಕ್ಷಿ ಜೀವಂತಿಕೆಯ ಸಾಕ್ಷಿ.

ಗ್ರೇಟಾ ಕಚೇರಿಯಲ್ಲಿ ಕೆಲಸ ಪ್ರಾರಂಭಿಸುವ ಮೊದಲು ‘Bilady Bilady Bilady’ (ನನ್ನ ದೇಶ, ನನ್ನ ದೇಶ, ನನ್ನ ದೇಶ) ಎಂಬ ರಾಷ್ಟ್ರಗೀತೆಯನ್ನು ಹೇಳುತ್ತಿದ್ದಳು. ಐವತ್ತೆರಡರ ಕ್ರಾಂತಿಯಲ್ಲಿ ಅಜ್ಜನನ್ನೂ, ನಂತರದ ಜನಾಂಗೀಯ ಕಿಚ್ಚಿನಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡರೂ ಆಕೆಗೆ ದೇಶವೆಂದರೆ ಪೀಠಭೂಮಿ. ಈಜಿಪ್ಟಿನ ಪ್ರಾಚೀನ ನಾಗರಿಕತೆಯೆಂದರೆ ಜೀವ ಸೃಷ್ಟಿಯ ಮೂಲ. ನೈಲ್ ನದಿಯೆಂದರೆ ಕೋಟಿ ಕಾಮಧೇನುಗಳ ಕೆಚ್ಚಲು. ಅರೇಬಿಕ್ ಭಾಷೆಯೆಂದರೆ ದೇವನುಡಿ. ಕೈರೊ ನಗರವೆಂದರೆ ಸಾವಿರ ಮಿನಾರುಗಳ ಪರಂಧಾಮ. ಸುಯೆಜ್ ಕಾಲುವೆಯೆಂದರೆ ಜೀವನ ಸಾಕ್ಷಾತ್ಕಾರದ ರಾಜಮಾರ್ಗ. ಪಿರಾಮಿಡ್ಡೆಂದರೆ ಮಾನವನ ಪರಾಶಕ್ತಿಯ ಶಿಖರ. ಮೆಡಿಟರೇನಿಯನ್ ಸಮುದ್ರವೆಂದರೆ ಸ್ವರ್ಗಲೋಕದ ಹೆಬ್ಬಾಗಿಲು.

“ಕೆಂಪು ಸಮುದ್ರ ಅಂದ್ರ, ಮಚ್ಚಿ ಮೂರು ಪಾಲಾಗಂಗ ಹೊಡಿದಾಡಿ ಸತ್ತವರ ರಕ್ತ” ಅಂತ ಅವನು ನಡುವೆ ಬಾಯಿ ಹಾಕಿದರೆ ಕಣ್ಣು ಕಿಸಿದು ಹೇಳುತ್ತಿದ್ದಳು. “ಎಲ್ಲಾ ದೇಶದ ಇತಿಹಾಸದೊಳಗನೂ ರಕ್ತಸಿಕ್ತ ಅಧ್ಯಾಯ ಇದ್ದ ಇರ್ತತಿ. ನಿನ್ನ ದೇಶದ್ದೂ ಒಮ್ಮೆ ನೆನಪು ಮಾಡ್ಕೊ. ಮನುಷ್ಯಾ ಭೂಮಿಗೆ ಬರುವಾಗ್ಲೂ ಇನ್ನೊಂದು ಜೀವಕ್ಕ ಹಿಂಸೆ ಮಾಡಿನ ಹುಟ್ಟಿಬರ್ತಾನು”. ಸಂಜೆಗೆ ತೆಹರೀರ್ ಚೌಕದ ಫುಟ್‌ಪಾತ್‌ನಲ್ಲಿ ಹುರಿದ ರೇಶ್ಮೆಹುಳುಗಳನ್ನು ಕೊಡಿಸಿಬಿಟ್ಟರೆ ಬಾರಾಖೂನ್ ಮಾಫ್. ನಂತರ ಬಾಂಗ್ಲಾದೇಶೀ ಹೋಟೇಲ್‌ನಲ್ಲಿ ಸೆಣಬಿನೆಲೆಯ ಗ್ರೀನ್‌ಸೂಪ್‌ನ್ನು ಅವನಿಗೆ ಕೊಡಿಸಿ ಋಣಮುಕ್ತಳಾಗುತ್ತಿದ್ದಳು. ಕೆಲವು ಪೌಂಡು ಸಂಬಳ ಪಡೆಯುವ ಅವರಿಗೆ ಅದಕ್ಕಿಂತ ಹೆಚ್ಚಿನದನ್ನು ಕಲ್ಪಿಸಿಕೊಳ್ಳುವುದೆಂದರೆ ಗಿಜಾ ಪಿರಾಮಿಡ್ಡಿನ ಶೃಂಗವೇರಿದಂತೆ.

ಸದ್ದು ಬಂದ ಕೆಲವು ಕ್ಷಣಗಳವರೆಗೂ ಭೂಮಿ ಅದರುತ್ತಿತ್ತು. ಅಥವಾ ಅವರಿಗೆ ಹಾಗೆ ಭಾಸವಾಗುತ್ತಿತ್ತು. ಜೀವಗಳೆರಡೂ ಸ್ತಿಮಿತಕ್ಕೆ ಬಂದ ಮೇಲೆ ಆಕೆ ಜೋಲಿ ಹೊಡೆಯುತ್ತ ಬಂದು, ನಿರ್ವಾಹವಿಲ್ಲದೆ ಅವನೆದೆಗೆ ಒರಗಿದಳು.

ರಮದನ್ ಹಬ್ಬದಲ್ಲಿ ಸಂಗೀತ ಕೇಳುವುದು; ಫವಾನೀಸ್ ಲಾಂದ್ರಗಳನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಳ್ಳುವುದು; ವೆಕಾಲೆತ್ ಘೌರಿಗೆ ಹೋಗಿ ತನೌರಾ ನೃತ್ಯ ನೋಡುವುದು; ಬೆಳ್ಳುಳ್ಳಿ, ಕೊತ್ತಂಬರಿ ಹಾಕಿದ ಮುಲಕಿಯಾ ತಿನ್ನುವುದು, ಹೀಗೆ ಅವನನ್ನು ನೆಲದ ಸಂಸ್ಕೃತಿಯಲ್ಲಿ ಒಂದಾಗಿಸಿ ಜೀವನ ಜೀವಂತವಾಗಿರುವಂತೆ ಮಾಡಲು ಗ್ರೇಟಾ ಯಾವಾಗಲೂ ಶ್ರಮಿಸುತ್ತಿದ್ದಳು.

ಸಂಸ್ಥೆಯ ಮುಖ್ಯಸ್ಥನಾದ ಓಮರ್ ಹೇಳುತ್ತಿದ್ದ “ಇದು ಸುಗ್ಗಿಹಬ್ಬದ ಕಾಲ. ಯೂರೋಪಿಯನ್ನರು ಬಹಳ ಬರ್ತಾರು. ನಾವು ಪೂರ್ತಿ ತಯಾರಿಯೊಳಗಿರಬೇಕು.” ಹೀಗೆ ಹೇಳುತ್ತಿದ್ದಂತೆ ನಾಸಿರ್, ಮಫೌಜ್, ಸದತ್ ಒಳಗೊಳಗೇ ಕುದಿಯುತ್ತಿದ್ದರು.
ಯುರೋಪಿಯನ್ನರೆಂದರೆ ಅವರಿಗೆ ಮೈಯೆಲ್ಲ ಉರಿಯುತ್ತದೆ. ಯುನೈಟೆಡ್ ಕಿಂಗ್ಡಮ್ ಅಂದರಂತೂ ಅವರ ಪಾಲಿಗೆ ಸೈತಾನನ ಅವತಾರ. ಜಗತ್ತನ್ನು ಕೊಳ್ಳೆ ಹೊಡೆದ ಬ್ರಿಟಿಷರನ್ನು ಕೆಂಪು ಸಮುದ್ರದಲ್ಲಿ ಮುಳುಗಿಸಿ ಸಾಯಿಸಬೇಕೆನ್ನಿಸುತ್ತದೆ. ಆದರೆ ಡ್ಯಾಫ್ನಿ ಮತ್ತು ಲಿಡಿಯಾರಿಗೆ ಒಳಗೊಳಗೆ ಖುಶಿಯಾಯಿತು. ಲಿಡಿಯಾ ತುಂಬಿದೆದೆಯನ್ನು ಉಬ್ಬಿಸಿಕೊಂಡು ಕನಲಿದಳು. ನಾಸಿರ್, ಸದತ್ ಅವಳನ್ನು ಕೆಕ್ಕರಿಸಿಕೊಂಡು ತಿಂದುಬಿಡುವಂತೆ ನೋಡಿದರು. ಗ್ರೇಟಾ ತನ್ನ ಪಾಡಿಗೆ ಅದೇನನ್ನೋ ಬರೆದುಕೊಳ್ಳುತ್ತಿದ್ದಳು. ಶಿದ್ಲಿಂಗು ಸುಮ್ಮನೇ ಎಲ್ಲವನ್ನೂ ಕೇಳುತ್ತಿದ್ದ. ಮಫೌಜ್, ನಾಸಿರ್, ಸದತ್ ತನ್ನನ್ನು ನೋಡಿಕೊಂಡು ತಮ್ಮತಮ್ಮೊಳಗೆ ಏನಾದರೂ ಮಾತನಾಡಿಕೊಂಡರೆ ಅವನಿಗೆ ಕುತ್ತಿಗೆಯನ್ನು ಹಿಚುಕಿದಂತಾಗುತ್ತಿತ್ತು. ಅಂದಿನ ರಾತ್ರಿ ನಿದ್ದೆಯಲ್ಲಿ ತನ್ನೂರಿನ ಗೆಳೆಯರೆಲ್ಲ ಸುತ್ತಲೂ ಕುಣಿಯುತ್ತ ಇವನನ್ನು ಒಂದಾದ ಮೇಲೊಂದು ಪ್ರಶ್ನೆ ಕೇಳಿದಂತಾಗುತ್ತಿತ್ತು. ಮಿಟ್ಟಿಮನಿ ಬಸಪ್ಪ ತನ್ನೆದುರಿಗೆ ಮಾಳಿಗಿ ಶಂಕರಪ್ಪನನ್ನು ಕರೆತಂದು ‘ಹೇಳು, ಇವನ್ಯಾರು ಹೇಳು. ನಿನ್ನ ಮ್ಯಾಲ ಇವನಿಗ್ಯಾಕ ಅಷ್ಟು ದೇಖರೇಕಿ?’ ಎಂದಂತೆನಿಸುತ್ತಿತ್ತು. ಮರುಬೆಳಿಗ್ಗೆ ಆಫೀಸಿಗೆ ಬರುತ್ತಲೇ ಗ್ರೇಟಾಳೇನಾದರೂ ತನ್ನನ್ನು ತದೇಕಚಿತ್ತದಿಂದ ನೋಡಿದಳೆಂದರೆ ಭರ್ಚಿಯಿಂದ ಇರಿದಂತಾಗುತಿತ್ತು. ಇದೆಲ್ಲ ಕಳಚಿಕೊಂಡು ಬದುಕಲು ತಾನಿನ್ನೂ ಎಷ್ಟು ದೂರ ಓಡಬೇಕು? ಯಾವ ಗಡಿಯೊಳಗೆ ಹೋಗಿ ಸೇರಿಕೊಂಡರೆ ಈ ಪ್ರಶ್ನೆಗಳೆಂಬ ಕ್ಷಿಪಣಿಗಳು ಹಾರಿ ಬರದಂತೆ ತಡೆಯಬಹುದು? ತನ್ನ ಬೆನ್ನ ಹಿಂದಿರುವ ನಿಗೂಢತೆ ಕಣ್ಣ ಮುಂದಿನ ಭವಿಷ್ಯವನ್ನೇ ಸುಳ್ಳು ಮಾಡುವಷ್ಟು ಕತ್ತಲೆಯನ್ನು ತಲೆಯ ಮೇಲೆ ಸುರಿಯುತ್ತದೆ. ಆ ಕತ್ತಲೆಯಿಂದ ತನ್ನ ಮುಖ ಗುರುತು ಸಿಗದಷ್ಟು ಮಸಿಯಾಗುತ್ತದೆ. ದುರ್ದೈವವೆಂದರೆ, ಆದರೂ ತನ್ನನು ಸಹೋದ್ಯೋಗಿಗಳು ಗುರುತಿಸಿಯೇ ಬಿಡುತ್ತಾರೆ.

ಓಮರ್ ತನ್ನ ಮಾತನ್ನು ಮುಂದುವರೆಸಿದ. “ಬಂದವರಿಗೆ ಸರಿಯಾದ ಸೇವಾ ಕೊಡಬೇಕು. ಅವರ ದೇಶ, ಭಾಷೆ, ಧರ್ಮಾ ನೋಡಾಕ ಹೋಗಬ್ಯಾಡ್ರಿ.” ಆದೇಶ ಕಟ್ಟುನಿಟ್ಟಾಗಿತ್ತು. ಏಕೆಂದರೆ ವಿದೇಶಿ ಪ್ರವಾಸಿಗರ ಭದ್ರತೆ ತಲೆನೋವಿನ ಸಂಗತಿಯಾಗಿತ್ತು. ಹೋಸ್ನಿ ಮುಬಾರಕ್ ಅಧ್ಯಕ್ಷ ಸ್ಥಾನದಿಂದ ಇಳಿದಾಗ ಕೈರೋದ ತೆಹರೀರ್ ಚೌಕದಲ್ಲಿ ನಡೆದ ವಿಜಯೋತ್ಸವದಲ್ಲಿ ಜನಾಂಗೀಯ ದ್ವೇಷದ ಬೆಂಕಿ ಹೊತ್ತಿಕೊಂಡಿತ್ತು. ವಿಜಯೋತ್ಸವ ನೋಡಲು ಹೋಗಿದ್ದ ಗ್ರೇಟಾ ಕೊರಳೊಳಗಿನ ಕ್ರಾಸ್‌ನ್ನು ಉಡುಪಿನೊಳಗೆ ಮುಚ್ಚಿ ತಲೆಗೆ ಸ್ಕಾರ್ಫ್ ಸುತ್ತಿಕೊಂಡು ಪಾರಾಗಿದ್ದಳು. ಆದರೆ ಒಂದೊಂದು ಕಾರಣಕ್ಕಾಗಿ ಗ್ರೇಟಾ ಮತ್ತು ಶಿದ್ಲಿಂಗನಿಗೆ ಇಲ್ಲಿ ಬದುಕುವುದು ಅನಿವಾರ್ಯವಾಗಿತ್ತು.

ಓಮರ್‌ನ ಖಡಕ್ ಮಾತು ನೆನಪಿನ ಹುದುಲಿನಲ್ಲಿ ಹೂತುಹೋದ ಶಿದ್ಲಿಂಗನನ್ನು ಬೆಚ್ಚಿ ಬೀಳಿಸುವಂತಿತ್ತು.
ರಜೆ ಪಡೆದು ಊರಿಗೆ ಹೋಗಿದ್ದ ನಾಸಿರ್ ಮತ್ತು ಸದತ್ ಆಸ್ವಾನ್ ಆಣೆಕಟ್ಟಿನಿಂದ ನೈಲ್ ನದಿಗೆ ನೀರು ಬಿಟ್ಟಿದ್ದರಿಂದ ಪ್ರವಾಹ ಉಂಟಾಗಿದೆ. ತಮಗೆ ಪ್ರವಾಸದಲ್ಲಿ ಸೇರಿಕೊಳ್ಳಲಾಗುತ್ತಿಲ್ಲವೆಂಬ ಸಂದೇಶವನ್ನು ಕಂಪನಿಗೆ ಕಳಿಸಿದರು. ತಂಡದಲ್ಲಿ ಅವರಿಬ್ಬರು ಇಲ್ಲದ್ದರಿಂದ ಸೌಹಾರ್ದಯುತ ವಾತಾವರಣವಿತ್ತು. ಯುರೋಪಿಯನ್ನರ ಸ್ವೇಚ್ಛೆ ಕೆಲವರಿಗೆ ಮುಜುಗರ ತಂದರೂ ಕಂಪನಿಯ ಉಪದೇಶದಂತೆ ಟೂರಿಸ್ಟ್‌ಗಳಿಗೆ ಈ ಪ್ರವಾಸವೊಂದು ಸ್ಮರಣೀಯ ಸಂದರ್ಭವಾಗುವಂತೆ ನೋಡಿಕೊಳ್ಳಲು ಎಲ್ಲರೂ ಶ್ರಮವಹಿಸುತ್ತಿದ್ದರು. ಗ್ರೇಟಾ ಕಾಪ್ಟಿಕ್ ಕ್ರೈಸ್ತಳಾದರೂ ಯುರೋಪಿಯನ್ನರ ಐತಿಹಾಸಿಕ ರಾಜಕೀಯ ದಬ್ಬಾಳಿಕೆಯ ವಿರೋಧಿಯಾಗಿದ್ದಳು. ಆದರೆ ತನ್ನ ಸಿದ್ಧಾಂತಕ್ಕಾಗಿ ನೌಕರಿಗೆ ಮೋಸ ಮಾಡಲು ತಯಾರಿರಲಿಲ್ಲ. ತನ್ನವರನ್ನು ಕಳೆದುಕೊಂಡ ಪ್ರಾರಬ್ಧಕ್ಕೆ ದೇಶವನ್ನು ದ್ವೇಷಿಸಲು ಮನಸ್ಸು ಮಾಡಲಿಲ್ಲ. ಶಿದ್ಲಿಂಗ ಇದ್ದುಬಿದ್ದವರನ್ನು, ಜನ್ಮಕ್ಕೆ ಕಾರಣರಾದವರನ್ನು ಬಿಟ್ಟು ಬಂದು ಪರದೇಶಿಯಾಗಿದ್ದ.

ಪ್ರವಾಸಿಗರ ವಾಹನ ಪ್ರೇಕ್ಷಣೀಯ ಸ್ಥಳಗಳತ್ತ ಹೊರಟಿತು. ಅಲ್ ಅಜರ್ ಉದ್ಯಾನವನ, ಇಜಿಪ್ಟಿಯನ್ ಮ್ಯೂಜಿಯಂ, ಅಕ್ಟೋಬರ್ ಆರರ ಪನೋರಮಾ ಹೀಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ವಿದೇಶಿಯರು ದಿಲ್‍ಖುಶ್ ಆದ ಸಂಭ್ರಮದಲ್ಲಿದ್ದರು. ವಸ್ತು ಸಂಗ್ರಹಾಲಯದಲ್ಲಿನ ಲಕ್ಷಗಟ್ಟಲೆ ಕಲಾಕೃತಿಗಳು, ವಸ್ತುಗಳನ್ನು ನೋಡಿ ಮೂಕವಿಸ್ಮಿತರಾದರು. ಈಜಿಪ್ಟಿನ ಮಿಲಿಟರಿ ಶಕ್ತಿಯನ್ನು ಮ್ಯೂಜಿಯಂನಲ್ಲಿ ಕಂಡು ಹುಬ್ಬೇರಿಸಿದರು. ಸಂಜೆಯ ತನೌರಾ ನೃತ್ಯ ಅವರನ್ನು ಕೂಡಾ ಕುಣಿಸಿತು. ಹೋದಲ್ಲೆಲ್ಲ ಅನುಭವಿ ಗೈಡ್‌ಗಳಿಂದ ಸ್ಥಳಗಳ ಹಿನ್ನೆಲೆ ಮುನ್ನೆಲೆ ಹೇಳಿಸುವ ವ್ಯವಸ್ಥೆಯಂತೂ ಮೊದಲೇ ಆಗಿತ್ತು.

ತೀರ ಪ್ರದೇಶದ ಅಲೆಕ್ಸಾಂಡ್ರಿಯಾ ದಾರಿಯಲ್ಲಿನ ಹತ್ತಿ ಬೆಳೆ ಭಾರತವನ್ನು ನೆನಪಿಸಿತು. ನೈಲ್ ಎಂಬ ಮಾಹಾತಾಯಿ ಕೋಟ್ಯಾನುಗಟ್ಟಲೆ ಮಕ್ಕಳನ್ನು ಮಡಿಲಲ್ಲಿಟ್ಟು ಸಲಹುವ ಪರಿಗೆ ಶಿದ್ಲಿಂಗನ ಕಣ್ಣೆವೆ ತೇವಗೊಂಡವು. ಪಕ್ಕದಲ್ಲಿದ್ದ ಗ್ರೇಟಾ ಅವನ ಕೈಸವರಿ “ನಾನಿಲ್ಲೇನು ತಬ್ಬಲಿ? ಎಲ್ಲರೂ ನಮ್ಮವರ. ಈ ಭೂಮಿ ನಮ್ಮನಿ” ಅಂದಳು, ಕಣ್ಣಲ್ಲಿ ಮಾತ್ರ. ಅವನಿಗೆ ಅರೇಬಿಕ್ ಭಾಷೆ ಕಲಿಸುವ ಮೊದಲು ಆಕೆ ಹೀಗೆಯೇ ಮಾತಾಡುತ್ತಿದ್ದುದು. ಸ್ವತಃ ತನ್ನ ಕಥೆಯನ್ನೆಲ್ಲ ಶಿದ್ಲಿಂಗನಲ್ಲಿ ಹೇಳಿಕೊಂಡರೂ ಅವನು ದೇಶ ಬಿಟ್ಟು ಬಂದ ಕಾರಣವನ್ನೆಂದೂ ಕೇಳದ ಗ್ರೇಟಾ, ಅವನ ಪಾಲಿಗೆ ಇಂದಿಗೂ ಗ್ರೇಟ್. ಇವನೊಂದಿಗಿನ ಸ್ನೇಹಕ್ಕಾಗಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾದರೂ ಅದನ್ನೆಲ್ಲ ಅಲಕ್ಷಿಸಿದ ದಿಟ್ಟೆಗೆ ಅವನೆಂದೋ ಶರಣಾಗಿದ್ದ. ಆದರೆ ಆ ಮುದ್ದು ಮುಖದಲ್ಲಿನ ಪ್ರಶ್ನಾರ್ಥಕ ದೃಷ್ಟಿಯನ್ನು ಎದರಿಸಲು ಮಾತ್ರ ಅಸಮರ್ಥನಾಗಿದ್ದ.

ಅಲೆಕ್ಸಾಂಡ್ರಿಯಾದ ಕೋಪ್ಟಿಕ್ ಆರ್ಥೋಡಕ್ಸ್ ಚರ್ಚ್‌ನಲ್ಲಿ ಪ್ರಾರ್ಥನೆಯಾಯಿತು. ಗ್ರೇಟಾ ಎರಡು ನಿಮಿಷ ಮಂಡಿಯೂರಿ ಕೈಗಳನ್ನು ಡೆಸ್ಕ್‌ ಮೇಲಿಟ್ಟು ಶಾಂತಳಾದಳು. ಪಾದ್ರಿ ಬಂದು ತಲೆ ಮೇಲೆ ಕೈಯಿಡುತ್ತಿದ್ದಂತೆ ಕಣ್ಣೊಳಗಿಂದ ಯೇಸುವಿನ ಬೆಳಕು ಬಂದಿತು. ‘ಸೀಡಾ, ಇಲ್ಲಿ ಬಾ’ ಎಂದು ಅವನನ್ನು ಕರೆದೊಯ್ದು ಹೊರಗೋಡೆಯ ಮೇಲಿರುವ ಚಿತ್ರದಲ್ಲಿನ ಡೌಟ್‌ಫುಲ್ ಥಾಮಸ್‌ನ ಸನ್ನಿವೇಶವನ್ನು ತೋರಿಸಿದಳು.

ಏಸುಕ್ರಿಸ್ತ ಧರ್ಮಾಂಧರಿಂದ ಶಿಲುಬೆಗೇರಿಸಲ್ಪಟ್ಟ ಮೇಲೆ ಪುನರುತ್ಥಾನ ಹೊಂದಿದ ಘಟನೆಯದು. ಮತ್ತೆ ಹುಟ್ಟಿ ಬಂದ ಕ್ರಿಸ್ತನನ್ನು ಕಂಡು ಎಲ್ಲರಿಗೂ ಸಂತೋಷ, ಆಶ್ಚರ್ಯ, ದಿಗ್ಭ್ರಮೆಯಾದರೆ, ಥಾಮಸ್ ಇದನ್ನು ನಂಬುವುದಿಲ್ಲ. ಏಸು ಅಂತ ಹೇಳಿಕೊಂಡು ಬಂದವನು ಅವನೇ ಹೌದೋ ಅಲ್ಲವೋ ಎಂಬ ಸಂಶಯ ಅವನಿಗೆ ಕಾಡುತ್ತದೆ. ಹತ್ತಿರ ಹೋಗಿ ನೋಡಿದಾಗ ಏಸುವಿನ ಮೈಮೇಲೆ ಆಳವಾದ ಗಾಯಗಳು ಕಾಣುತ್ತವೆ. ಆದರೂ ಥಾಮಸ್ ಮೈಮೇಲಿನ ಗಾಯದೊಳಗೆ ಬೆರಳು ಹಾಕಿ ಅಲುಗಾಡಿಸಿ ನೋಡಿ ಆತ ಏಸುವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ಹಾಗಾಗಿ ಅವನ ಹೆಸರು ಡೌಟಿಂಗ್ ಥಾಮಸ್. ಕಥೆಯನ್ನು ಹೇಳಿ ಮುಂದೆ ಹೊರಟ ಗ್ರೇಟಾಳನ್ನು ತಡೆದು ‘ಈ ಕಥಿ ನಂಗ್ಯಾಕ ಹೇಳಿದಿ?’ ಎಂದು ಕೇಳಬೇಕೆಂದಿದ್ದ ಶಿದ್ಲಿಂಗನಿಗೆ ಮಾತೇ ಹೊರಡಲಿಲ್ಲ. ಅವನ ಮುಖ ಅರ್ಧಕ್ಕರ್ಧ ವಿವರ್ಣವಾಯಿತು.

ಅಲೆಕ್ಸಾಂಡ್ರಿಯಾದ ತೀರದಲ್ಲಿ ಪ್ರವಾಸಿಗರು ಮೆಡಿಟರೇನಿಯನ್ ಸಮುದ್ರಕ್ಕಿಳಿದರು. ಯಾವ ಸಂಕೋಚವಿಲ್ಲದೇ ಗಂಡು-ಹೆಣ್ಣುಗಳು ಒಳ ಉಡುಪಿನಲ್ಲಿಯೇ ದಂಡೆಯಲ್ಲಿ ಆಟವಾಡಿದರು. ಹಲವರು ಅಂಗಾತ ಮಲಗಿ, ಇನ್ನು ಕೆಲವರು ಬೋರಲಾಗಿ ಬಿದ್ದು ಬಿಸಿಲಿಗೆ ಮೈ ಒಡ್ಡಿದ್ದರು. ಮಬ್ಬುಗವಿಯುತ್ತಿದ್ದಂತೆ ಕೆಲವು ಜೋಡಿಗಳು ದೂರದ ಬಂಡೆಗಳ ಮರೆಗೆ ಸರಿದವು. ನಾಸಿರ್ ಮತ್ತು ಸದತ್ ಯೂರೋಪಿಯನ್ನರನ್ನು ಬಾಯ್ತುಂಬ ಬೈಯುವ ಅವಕಾಶವನ್ನು ಕಳೆದುಕೊಂಡರು.

ಸಹಾರಾ ಮರುಭೂಮಿಯನ್ನು ತೋರಿಸುತ್ತ ಗೈಡ್ ಹೇಳಿದ “ಇದೊಂದು ಸಮೃದ್ಧ ಹುಲ್ಲುಗಾವಲಿತ್ತು. ಭೂಮಿನ ಸಿಕ್ಕಾಪಟ್ಟಿ ಮೇಯ್ಸಿದ್ದರಿಂದ ಬರಡಾಯಿತು. ಬುಡಕಟ್ಟು ಮಂದಿ ಮಣ್ಣನ್ನು ಸರಿಯಾಗಿ ಮೆಂಟೇನ್ ಮಾಡ್ಲಿಲ್ಲ. ಆಮೇಲೆ ನೈಲ್‌ ನದಿ ದಂಡಿಗುಂಟ ನೆಲಿನಿಲ್ಲಾಕ ವಲಸೆ ಹೋದ್ರು.” ವಲಸೆ ಹೋಗಲು ಒಬ್ಬೊಬ್ಬರಿಗೆ ಒಂದೊಂದು ಕಾರಣ. ತಾನು ಕೂಡ ಹಾಗೆಯೇ ವಲಸೆ ಬಂದಿದ್ದಲ್ಲವೇ? ಅವಮಾನವು ತನ್ನ ಸ್ವಾಭಿಮಾನವನ್ನು ಅಜೀರ್ಣವಾಗುವಷ್ಟು ಮೇಯ್ದಿದ್ದರಿಂದ ತನ್ನ ವ್ಯಕ್ತಿತ್ವವೇ ಬರಡಾಯಿತು. ಹಾಗಾಗಿ ತಾನು ಪಾಪ ತೊಳೆಯುವ ಗಂಗೆ ಹುಟ್ಟಿ ಹರಿದ ದೇಶವನ್ನು ಬಿಟ್ಟು ಹೊರಟಿದ್ದು. ಗೊತ್ತುಗುರಿಯಿಲ್ಲದ ಜಾಗೆಯಲ್ಲಿ ಮಾತ್ರ ತಾನು ನೆಮ್ಮದಿಯಿಂದಿರಲು ಸಾಧ್ಯವೆಂದು ಹೊರಟ ಪ್ರಯಾಣ ಇಲ್ಲಿಯವರೆಗೆ ತಂದು ನಿಲ್ಲಿಸಿದೆ. ‘ಶಿದ್ಲಿಂಗ’ ಎಂಬ ಹೆಸರನ್ನೂ ಉಚ್ಛರಿಸಲು ಬಾರದ ಗ್ರೇಟಾ ದಾರಿಯಲ್ಲಿ ಎದುರಾಗದಿದ್ದರೆ ಇಷ್ಟೊತ್ತಿಗೆ ತಾನು ಎಲ್ಲಿಗೆ ಹೋಗಿ ಮುಟ್ಟುತ್ತಿದ್ದನೊ?

ಪ್ರವಾಸಿಗರಲ್ಲಿ ಅನೇಕರು ತಮ್ಮ ಜೀವಮಾನದಲ್ಲಿ ಒಮ್ಮೆಯಾದರೂ ನೋಡಲೇಬೇಕೆಂದು ಆಸೆಪಟ್ಟಿದ್ದ ಜಾಗೆಗೆ ವಾಹನ ಬಂದಿತು. ಕೈರೋದ ದಕ್ಷಿಣಕ್ಕಿರುವ ಗಿಜಾ (ಅಲ್ ಜಿಜಾ) ಪಟ್ಟಣದ ಪಿರಾಮಿಡ್‌ಗಳು ಆಕಾಶವನ್ನೇ ಚುಚ್ಚುವಂತೆ ಎದೆ ಸೆಟಿಸಿ ನಿಂತಿದ್ದವು. ಟೂರಿಸ್ಟ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರೂ ಇದೇ ಮೊದಲ ಬಾರಿಗೆ ಪಿರಾಮಿಡ್‌ಗಳನ್ನು ನೋಡುವ ಆಸಕ್ತಿ ಶಿದ್ಲಿಂಗನಲ್ಲಿ ಹುಟ್ಟಿ ಬಂದಿತ್ತು. ಗ್ರೇಟಾ ಎಷ್ಟೇ ಸಲ ನೋಡಿದ್ದರೂ ಇದೇ ಮೊದಲ ಬಾರಿಗೆ ಬಂದವಳಂತೆ ಕುತೂಹಲಮಿಶ್ರಿತ ಉತ್ಸಾಹದಲ್ಲಿದ್ದಳು. ತನ್ನ ಗೆಳೆಯನಿಗೆ ಅವುಗಳನ್ನು ತೋರಿಸಬೇಕೆಂಬ ಆಸೆಯೂ ಇತ್ತಲ್ಲ. ಸುತ್ತಾಡಲು ಬಹಳ ಸಮಯವಾಗುತ್ತದೆಯೆಂದು ಎಲ್ಲರಿಗೂ ಖುಶರಿಗಳ ಪೊಟ್ಟಣವನ್ನು ವಿತರಿಸಿದರು. ಅಕ್ಕಿ, ಚನ್ನಂಗಿ ಬೇಳೆ, ಗೋಧಿ ಸೇವಿಗೆ ಮಿಶ್ರಣದ ತಿನಿಸನ್ನು ಎಲ್ಲರೂ ಬಾಯಿ ಚಪ್ಪರಿಸಿದರು. ಮೇಲಿನ ಹುರಿದ ಈರುಳ್ಳಿಯಿಂದ ರುಚಿ ಇಮ್ಮಡಿಸಿತ್ತು.

ಮೆಂಕಾರ್ ಪಿರಾಮಿಡ್, ಖಫರ್ ಪಿರಾಮಿಡ್, ಖುಫು ಪಿರಾಮಿಡ್‌ಗಳನ್ನು ಏಕಕಾಲಕ್ಕೆ ಕಣ್ಣುಗಳಲ್ಲಿ ತುಂಬಿಕೊಂಡ ಪ್ರವಾಸಿಗರ ಮುಖ ಮತ್ತಷ್ಟು ಕೆಂಪಾದವು. ಗೈಡ್ ವಿವರಣೆ ನೀಡುತ್ತಿದ್ದ. ಈಜಿಪ್ಟನ್ನು ಆಳುತ್ತಿದ್ದ ಫರೋಹಗಳು ತಮ್ಮ ಜೀವಿತಾವಧಿಯಲ್ಲೇ ಕಟ್ಟಿದ ಸ್ವರ್ಗದ ಬಾಗಿಲುಗಳು ಪಿರಾಮಿಡ್‌ಗಳು. ಗಿಜಾದಲ್ಲಿರುವ ಖುಫು ಪಿರಾಮಿಡ್ ಅತ್ಯಂತ ಎತ್ತರದ್ದು. ಪ್ರಾಚೀನ ವಿಶ್ವದ ಏಳು ಅದ್ಭುತಗಳಲ್ಲಿ ಇದುವರೆಗೂ ಉಳಿದಿದ್ದು ಅದೊಂದು ಮಾತ್ರ. ಆಕಾಶವನ್ನು ಮುಟ್ಟುತ್ತಿರುವ ಅವುಗಳನ್ನು ಕಟ್ಟಲು ಸಾವಿರಗಟ್ಟಲೆ, ಲಕ್ಷಗಟ್ಟಲೆ ಕೂಲಿಯಾಳುಗಳು ದುಡಿದಿದ್ದಾರೆ. ಟನ್‌ಗಟ್ಟಲೆ ತೂಗುವ ಕಲ್ಲುಗಳನ್ನು ಎಳೆದು ತಂದು ಅಷ್ಟು ಎತ್ತರೆತ್ತರಕ್ಕೆ ಕಳಿಸಲು ಕಟ್ಟಿಗೆಯ ಜಾರು ಬಂಡಿಗಳನ್ನು ಬಳಸಲಾಗುತ್ತಿತ್ತು. ನೂರಾ ಐವತ್ತು ಮೀಟರ್ ಎತ್ತರದವರೆಗೆ ಕಲ್ಲುಗಳನ್ನು ಕಳಿಸಲು ಸಾವಿರಾರು ಜನರು ವರ್ಷಗಟ್ಟಲೆ ಬಿಟ್ಟೂ ಬಿಡದೆ ದುಡಿಯಬೇಕಾಗಿತ್ತು. ದೈವಸ್ವರೂಪಿಯಾದ ಚಕ್ರವರ್ತಿ ಸತ್ತ ನಂತರ ಸ್ವರ್ಗಕ್ಕೆ ಕಳಿಸಲು ಇಷ್ಟೆಲ್ಲ ವ್ಯವಸ್ಥೆ. ಹಾಗಾಗಿ ದೊರೆ ಸತ್ತ ಮೇಲೆ ಅವನ ಶವ ಸಂಸ್ಕರಿಸಿ ‘ಮಮ್ಮಿ’ ಮಾಡಿ ಕೆಡದಂತೆ ಇಡುತ್ತಿದ್ದರು. ನಂತರ ಫರೋಗೆ ಅಗತ್ಯವಿರುವ ಆಹಾರ, ಬಟ್ಟೆ, ಪೀಠೋಪಕರಣಗಳು, ಒಡವೆ, ವಸ್ತುಗಳೊಂದಿಗೆ, ಸೇವಕರ ಪಡೆಯನ್ನೂ ಇರಿಸಲಾಗುತ್ತಿತ್ತು.

ಗೈಡ್ ಬೀಗಿಕೊಂಡು ಹೇಳುತ್ತಿದ್ದಾಗ ಶಿದ್ಲಿಂಗನಿಗೆ ತಲೆ ಚಿಟ್ಟೆನಿಸುತ್ತಿತ್ತು. ‘ಇದನೆಲ್ಲಾ ನಾವು ಶಾಲ್ಯಾಗಿದ್ದಾಗ ಕಲಿತೇವಿ ಬಿಡೋ ಮಾರಾಯಾ. ಎಷ್ಟು ತುತ್ತೂರಿ ಊದಾಕ್ಹತ್ತಿ. ಈ ದೊಡ್ಡದೊಡ್ಡ ರಾಜರೆಲ್ಲ ತೊತ್ತಿನ ಮೊಲೆಹಾಲು ಕುಡಿದು ಬೆಳದೋರಂತ ಜಗತ್ತಿಗೆ ಗೊತ್ತಿಲ್ಲೇನು? ಇವರು ದಂಡಯಾತ್ರೆಗ ಹೋದಾಗ ಅಂತಃಪುರದ ರಾಣೀರಿಗೆ ಮಕ್ಕಳು ಹುಟ್ಟತಿದ್ರು’ ಅಂತ ಮನಸ್ಸಿನಲ್ಲಿ ಸಮಾಧಾನಪಟ್ಟುಕೊಂಡ.

ಉಳಿದವರೆಲ್ಲರೂ ಬೆರಗಾಗಿ ಒಂದು ಶಬ್ದವೂ ಜಾರಿ ಹೋಗದಂತೆ ಗೈಡ್‌ನ ಮಾತನ್ನು ಕಿವಿದೆರೆದು ಕೇಳುತ್ತಿದ್ದರು. ಗ್ರೇಟಾ ಕೂಡ ಕಣ್ಣು ಮಿಟುಕಿಸದೇ ನಿಂತಿದ್ದಳು. ಆದರೆ ಆ ಕಣ್ಣುಗಳು ಮಿನುಗುವುದನ್ನು ಮರೆತಿರಲಿಲ್ಲ. ಎಲ್ಲರೂ ಮುಂದೆ ಹೋದಾಗ ಶಿದ್ಲಿಂಗ ಅವಳ ಭುಜವಲುಗಿಸಿ ಎಚ್ಚರಗೊಳಿಸಿದ.

“ಪಿರಾಮಿಡ್ ಬಗ್ಗೆ ನಿಂಗ ಏನು ಅನಸ್ತತಿ, ಸೀಡಾ?” ಇಹಲೋಕಕ್ಕೆ ಬಂದು ಕೇಳಿದಳು. “ಡಿಯರ್ ಗ್ರೇಟಾ, ನನ್ನ ಪ್ರಕಾರ ಪಿರಾಮಿಡ್ಡಂದ್ರ ಸತ್ತ ಹೆಣಾ ದಫನ್ ಮಾಡಿದ ಸಮಾಧಿ. ನಮ್ಮೂರ ಸುಡುಗಾಡಗಟ್ಟಿಗೂ ಈ ಜಗಕ್ಕೂ ಏನೇನೂ ಫರಕಿಲ್ಲ. ಪಿರಾಮಿಡ್ಡಂದ್ರ ಶೋಷಣೆಯ ಸಂಕೇತ; ಹಿಂಸೆಯ ಪರಾಕಾಷ್ಠೆ; ಗುಲಾಮಗಿರೀಗ ಪಕ್ಕಾ ಉದಾಹರಣೆ.” ಎಂದು ನಿರ್ವಿಕಾರವಾಗಿ ಹೇಳಿದ. ಅವಳು ಆಶ್ಚರ್ಯದಿಂದ ಕೇಳಿದಳು “ಯಾಕ ಹಂಗಂತಿ? ಸಾವಿರಾರು ವರ್ಷಗಳಿಂದ ಈ ಕಟ್ಟಡ ಎದಿ ಸೆಟಿಸಿಕೊಂಡು ನಿಂತಿದ್ದು ನೋಡಿದ್ರ ನಿನಗ ಹೆಮ್ಮೆ ಅನ್ನಿಸುವಂಗಿಲ್ಲ?”

ಅವನೂ ಬಿಡಲಿಲ್ಲ, “ಇದು ಬೆವರಷ್ಟ ಅಲ್ಲ, ರಕ್ತಾ ಬಸಿದು ಕಟ್ಟಿದ್ದು. ಕಲ್ಲುಮಣ್ಣು ಕೆಳಾಗ ಎಷ್ಟು ಮಂದಿ ಸಿಕ್ಕು ಚಟ್ನ್ಯಾಗಿ ಹೋದ್ರೋ ಏನೊ! ಹೆಣಕ್ಕ ಸಿಂಗಾರ ಮಾಡಿದ್ರ ಏನುಪಯೋಗ?” ಮೈಯೊಳಗಿನ ರಕ್ತ ಕುದಿಯುತ್ತ ಮುಖಕ್ಕೆ ನುಗ್ಗುತ್ತಿತ್ತು. ಯಾವಾಗಲೂ ಅವಳು ಹೇಳುವುದಕ್ಕೆಲ್ಲ ಗೋಣು ಹಾಕುತ್ತಿದ್ದವನು ಇಂದು ಏಟಿಗೆ ಎದಿರೇಟಾಗಿ, ಮಾತಿಗೆ ಮಾತು ಸೇರಿಸುತ್ತ ಹೋದ. ಎಲ್ಲಿ ಗ್ರೇಟಾಳಿಗೆ ಬೇಸರವಾಗುತ್ತದೆಯೋ ಅಂತ ಯೋಚಿಸಲಿಲ್ಲ. ಮೊದಲಿನಂತೆ ಅಳೆದೂ ಸುರಿದೂ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇದೇ ಮೊದಲ ಬಾರಿಗೆ ಆತ ವಾದಕ್ಕೆ ನಿಂತಿದ್ದ. ಗ್ರೇಟಾ ಮುಖ ಸಡಿಲಿಸಿಕೊಂಡು ಹೇಳಿದಳು, “ನೆಗೆಟಿವ್ ದೃಷ್ಟಿಂದ ನೋಡಿದ್ರ ಎಲ್ಲಾನೂ ಹಂಗ ಕಾಣ್ತತಿ. ಇದು ಕಾಲ-ದೇಶ-ಭಾಷೆ ಮೀರೋ ಪ್ರಯತ್ನ. ಇಲ್ಲಿ ಸಾವು ಸಾವಲ್ಲ. ಹೆಣಾನೂ ಕೆಡದಂಗ, ಸಾಯ್ದಂಗ ಕಾಯ್ಕೊಳ್ಳೊ ವ್ಯವಸ್ಥಾ ಐತಿ. ಜೀವಾಕಾಯೋ ಪರಾಶಕ್ತಿ ಐತಿ, ಅಂತನೂ ನೋಡಬೋದಲ್ಲ? ಮತ್ತಿದು ಬರೇ ಪಿರಾಮಿಡ್ಡಿನ ಪ್ರಶ್ನೆಯಲ್ಲ. ನಮ್ಮ ನಮ್ಮ ಬದುಕಿನ ಸತ್ಯಕ್ಕ ಸಂಬಂಧಿಸಿದ ವಿಷಯ ಐತಿ. ಹಂಗ ನೋಡಿದ್ರ ನಮ್ಮ ಹುಟ್ಟಿಗೆ ನಾವು ಕಾರಣ ಅಲ್ಲ, ಅದು ನಾವು ಮಾಡಿದ ತಪ್ಪೂ ಅಲ್ಲ.” ಶಿದ್ಲಿಂಗನಿಗೆ ಹಿಂದಿನ ಘಟನಾವಳಿಗಳೆಲ್ಲ ಸುಳುಸುಳುನೆ ಕಣ್ಣ ಮುಂದೆ ಹಾದು ಹೋದವು. ಶಾಲೆ ಕಲಿತಿದ್ದು, ಗೆಳೆಯರೊಂದಿಗೆ ಆಡಿದ್ದು, ಅವ್ವನ ತುತ್ತು ತಿಂದಿದ್ದು, ಅಪ್ಪನ ಹೆಗಲು ಏರಿದ್ದು, ಶಂಕರಪ್ಪ ತಂದ ಹೊಸ ಅಂಗಿ ಚೊಣ್ಣ ಹಾಕಿದ್ದು, ಇದುವರೆಗೂ ತನಗೇಕೆ ನೆನಪಾಗಲಿಲ್ಲ? ಹುಟ್ಟು ಮತ್ತು ಸಾವುಗಳು ನಿಸರ್ಗದ ಸಹಜ ಕ್ರಿಯೆಗಳೆಂದೇಕೆ ಅನಿಸಲಿಲ್ಲ? ಬದುಕುವದೇನಿದ್ದರೂ ಮುಂದಿದೆ. ಹಿಂದಿನದನ್ನು ನೆನೆದು ಭವಿಷ್ಯವನ್ನೇಕೆ ಹಾಳು ಮಾಡಿಕೊಳ್ಳಬೇಕು? ಯೋಚಿಸುತ್ತ ನಿಂತವನನ್ನು ಈಗ ಎಚ್ಚರಿಸುವ ಸರದಿ ಗ್ರೇಟಾಳದ್ದು. ಅವಳ ಕಡೆಗೆ ತಿರುಗಿ ನೋಡಿದ. ಕಣ್ಣುಗಳು ಮತ್ತೆ ಮಿಂಚಹತ್ತಿದ್ದವು. ಹತ್ತಿರ ಬಂದು ಕಿವಿಯಲ್ಲುಸಿರಿದಳು “ಶಿದ್ಲಿಂಗು, ನನ್ನೂ ನಿನ್ನ ದೇಶಕ್ಕ ಕರಕೊಂಡು ಹೋಗು. ನಿಮ್ಮೂರು ನಂಗೂ ತೋರಿಸು. ನಾ ಬರಾಕ ತಯಾರದೇನಿ.”

ಗ್ರೇಟಾ ಮೊದಲ ಬಾರಿಗೆ ಅವನ ಹೆಸರನ್ನು ಸ್ಪಷ್ಟವಾಗಿ ಹೇಳಿದ್ದಳು. ಶಿದ್ಲಿಂಗನಿಗೆ ಸತ್ಯವನ್ನು ಶೋಧಿಸುವ, ಅದನ್ನು ಸ್ವೀಕರಿಸುವ ಮತ್ತು ಜಗತ್ತಿನೊಂದಿಗೆ ಹಂಚಿಕೊಳ್ಳುವ ಆಸೆಯಾಯಿತು. ತನ್ನೊಳಗಿನ ಆತ್ಮವಿಶ್ವಾಸ ಚಿಯೋಪ್ಸ್ ಪಿರ್ಯಾಮಿಡ್ಡಿನಂತೆ ಬೆಳೆಯುತ್ತಿತ್ತು. ಅದರ ಶೃಂಗ ತನ್ನ ಕೈಯೊಳಗಿತ್ತು.

*****

ಇಷ್ಟವಾಗುವ ಅತೃಪ್ತಿ- ಚನ್ನಪ್ಪ ಅಂಗಡಿ
ನಾನು ಅನೇಕ ಸಲ ಕಥೆ ಬರೆದು ಬಿಡುಗಡೆ ಪಡೆಯಬಹುದೆಂದು ಅಂದುಕೊಳ್ಳುತ್ತೇನೆ. ಅಂತರಂಗದ ತಳಮಳವನ್ನು ಕಥೆ ಮಾಡಿ ಹಗುರಾಗಬೇಕೆಂದುಕೊಳ್ಳುತ್ತೇನೆ. ಆದರೆ ಒಂದೊಂದು ಕಥೆಯನ್ನು ಬರೆದು ಮುಗಿಸುತ್ತಿದ್ದಂತೆ ನನ್ನೊಳಗೆ ಒಂದಷ್ಟು ಅತೃಪ್ತಿ ಹುಟ್ಟಿಕೊಳ್ಳುತ್ತದೆ. ಒಮ್ಮೊಮ್ಮೆ ಈ ಹಳಹಳಿಕೆ ಬಹಳಷ್ಟು ಕಾಡುತ್ತದೆ. ನನಗೆ ಇದ್ದುದರಲ್ಲೇ ಕಡಿಮೆ ಅತೃಪ್ತಿಯನ್ನು ಉಂಟು ಮಾಡಿದ ಕಾರಣಕ್ಕೆ ‘ಪಿರಾಮಿಡ್ಡಿನಿಂದೆದ್ದು ಬಂದವನು’ ಎಂಬ ಕತೆ ಸ್ವಲ್ಪ ಮಟ್ಟಿಗೆ ಇಷ್ಟವಾಗಿದೆ. ಹಾಗೆಂದ ಮಾತ್ರಕ್ಕೆ ನಾನು ಇದುವರೆಗೆ ಬರೆದ ಕತೆಗಳಲ್ಲಿ ಇದು ಅತಿ ಹೆಚ್ಚು ಯಶಸ್ವಿಯಾದ ಕತೆಯೇನಲ್ಲ. ಪ್ರಾಚೀನ ಜಗತ್ತಿನ ಅದ್ಭುತಗಳಲ್ಲೊಂದಾಗಿದ್ದು, ಇವತ್ತಿಗೂ ನೋಡಲು ಸಿಗುತ್ತಿರುವ ಮನುಷ್ಯ ನಿರ್ಮಿತಿಯಾದ ಪಿರಮಿಡ್ಡಿನ ಬಗ್ಗೆ ನನಗಿರುವ ಕುತೂಹಲ ಮತ್ತು ಮನುಷ್ಯನ ಹುಟ್ಟಿಗಂಟುವ ಕಳಂಕಗಳ ವ್ಯಾಖ್ಯೆ ಈ ಕತೆಯೊಳಗಿರುವ ದ್ರವ್ಯ. ನಾನದನ್ನು ಇದುವರೆಗೆ ಪ್ರತ್ಯಕ್ಷವಾಗಿ ನೋಡಲಾಗಲಿಲ್ಲವೆಂಬ ಸೇಡನ್ನು ಈ ಕತೆ ಬರೆಯುವ ಮೂಲಕ ತೀರಿಸಿಕೊಂಡಿದ್ದೇನೆ. ಅದು ಮನುಷ್ಯನ ಅಗಾಧ ಶಕ್ತಿ ಮತ್ತು ಅದರ ಸಾಧ್ಯತೆಗಳ ಸಂಕೇತ. ಒಂದು ಕತೆಯಲ್ಲಿ ಅದನ್ನು ಚಿತ್ರಿಸಿ ಬಿಡಬಹುದೆಂಬುದು ಕೇವಲ ಭ್ರಮೆ.
ಇನ್ನು ತನ್ನ ಕತೆ ನಿರಂತರ ಬೆಳೆಯುತ್ತ ಹೋಗಬೇಕೆಂಬುದು ಪ್ರತಿ ಲೇಖಕನ ಹಂಬಲ. ಹಾಗೆ ಬೆಳೆಯಬೇಕೆಂದರೆ ಅದು ದೇಶ-ಭಾಷೆ–ಕಾಲಗಳನ್ನು ದಾಟಬೇಕೆಂಬುದು ನನ್ನ ಅಭಿಪ್ರಾಯ. ನಾವು ಕಂಡುಂಡಿರದ ಸಂಸ್ಕೃತಿಯನ್ನು ಕತೆಯ ಮೂಲಕ ಕಟ್ಟುವುದು ಸವಾಲಿನ ಸಂಗತಿಯೇ ಸರಿ. ದೇಶದ ಗಡಿಯನ್ನು ದಾಟದವನು ತನ್ನ ಸೃಜನಶೀಲತೆಯ ಮೂಲಕ ಎಲ್ಲಿಗಾದರೂ, ಹೋಗಿ ಬರಬಹುದೆಂಬುದು ಬರಹಗಾರನಿಗಿರುವ ಸವಲತ್ತು. ಅದನ್ನು ಸರಿಯಾಗಿ ಬಲಿಸಿಕೊಂಡು ಮುನ್ನಡೆದನೆ? ದೇಶ-ಭಾಷೆ-ಕಾಲಗಳು ಒಂದರೊಳಗೊಂದು ಕರಗಿಕೊಳ್ಳುವಲ್ಲಿ ಯಶಸ್ವಿಯಾದವೆ? ಹೋಗಲಿ ಇದೊಂದು ಕತೆಯಾಯಿತೆ? ನನ್ನ ಉತ್ತರ ಅದೇ,- ಅತೃಪ್ತಿ.
ಇನ್ನು ಈ ಕತೆಯಲ್ಲಿ ಬರುವ ಶಿದ್ಲಿಂಗ ಕಾಣೆಯಾಗಿದ್ದಾನೆ. ನಾನು ಈಗಲೂ ಆತನ ಹುಡುಕಾಟದಲ್ಲಿದ್ದೇನೆ. ಈ ಕತೆ ನನಗೆ ಒಂದಷ್ಟು ಇಷ್ಟವಾಗಿದ್ದರೆ ಅದಕ್ಕೆ ಆ ಹುಡುಕಾಟವೂ ಕಾರಣ.