ಅವ್ರು ಮಾಡ್ತಿರೋದು ಸರೀನಾ! ಇವ್ನು ಮಾಡ್ತಿರೋದು ಸರೀನಾ!.. ಬೀಜ-ವೃಕ್ಷದ ಪ್ರಶ್ನೆ ಇದ್ದಹಾಗೆ ಇದು ಬಿಡಿಸಲಾಗದ ಪ್ರಶ್ನೆ ಎನಿಸಿತು. ಪ್ರತಿ ತಂದೆ-ತಾಯಿಗಳೂ ಸಹ ಮೊದಲು ಮಕ್ಕಳಾಗಿರುತ್ತಾರೆ ತಾನೆ!… ‘ಬೆಳೆದ ಪರಿಸರ, ಪಡೆದ ಸಂಸ್ಕಾರಗಳೇ ಮುಖ್ಯ ಅದೇ ಎಲ್ಲದಕ್ಕೂ ಮೂಲ’ ಎಂದು ಹೇಳುತ್ತಿದ್ದ ರಿಯಾಜ್‌ನ ಮಾತು ನೂರಕ್ಕೆ ನೂರು ಸತ್ಯ ಎನಿಸಿತು. ಏನು ಹೇಳಬೇಕು ಎಂದು ನನಗೆ ತೋಚಲಿಲ್ಲ. ಅವನೂ ಸಹ ಏನೂ ಆಡಲಿಲ್ಲ. ಬಹಳ ಹೊತ್ತಿನ ಕಾಲ ಮೌನ ಆವರಿಸಿತು.
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಕಾ.ಹು. ಚಾನ್‌ಪಾಶಾ ಬರೆದ ಕತೆ ‘ಅವಳಿಗನ್ನೂ ಹದಿನಾರು’

ಸಂಜೆಯ ನಸುಗತ್ತಲು ಕವಿದಿತ್ತು. ಕೆಂಪೇರಿದ ಸೂರ್ಯ ಪಡುವಣವನ್ನೆಲ್ಲಾ ಕೆಂಪಾಗಿಸಿ ತನ್ನ ಗೂಡು ಸೇರಲು ಹಾತೊರೆಯುತ್ತಿದ್ದ. ಬೀದಿ ದೀಪಗಳು ಆಗತಾನೇ ಬೆಳಗಿ ಮಂದ ಬೆಳಕು ಚೆಲ್ಲುತ್ತಿದ್ದ ದಾರಿ ಹಿಡಿದು ಗೆಳೆಯ ರಿಯಾಜ್‌ನ ಮನೆಗೆ ಆತುರಾತುರದಿಂದ ಹೊರಟೆ. “ಸರಿಯಾಗಿ ಐದಕ್ಕೆಲ್ಲಾ ಬಂದು ಬಿಡುತ್ತೀನಿ…” ಎಂದು ಹೇಳಿದ್ದೆ. ಯಾವ ಊರಿಗೆ ಹೋದರೂ ಅಷ್ಟೆ, ಅಲ್ಲಿನ ಲೈಬ್ರರಿಯಲ್ಲಿನ ಒಂದೆರಡು ಪುಸ್ತಕಗಳ ಮೇಲಿನ ಧೂಳೊರೆಸಿ ಕಣ್ಣಾಡಿಸಿದಾಗಲೇ ಮನಸ್ಸಿಗೆ ಒಂದು ರೀತಿಯ ತೃಪ್ತಿ. ಆ ಚಟದಿಂದಲೇ ಕೋಲಾರದ ಡಿ.ವಿ.ಜಿ. ಲೈಬ್ರರಿಯಲ್ಲಿ ಸಾರಾ ಅಬೂಬಕರರ ಕಥೆಗಳನ್ನೋದುತ್ತ ಮೈಮರೆತಾಗ ಕೆಲಸದ ಆಳು ಬಾಗಿಲು ಹಾಕಲು ಬಂದು ಎಚ್ಚರಿಸಿದಾಗಲೇ ಈ ಮೈ-ಮನ ಜಾಗೃತವಾಗಿ ರಿಯಾಜ್ ಕಾಯುತ್ತಿರಬಹುದೆಂದು ಬೇಗಬೇಗನೆ ಉದ್ದುದ್ದನೆಯ ಹೆಜ್ಜೆಗಳನ್ನಿಟ್ಟಿದ್ದು.

“ತಡವಾಯಿತ್ತಲ್ಲಾ….” ಎಂದು ಚಿಂತಿಸುತ್ತ ಆತುರದಿಂದ ಮುಖ್ಯ ರಸ್ತೆಯಿಂದ ಎಡಕ್ಕೆ ತಿರುಗಿ ಮೇಲಿನ ಬೀದಿಗೆ ಹೋಗುವ ಬದಲು ಕೆಳಗಿನ ಬೀದಿಗೆ ಹೊರಟುಹೋದೆ. ಬಹಳ ದೂರದವರೆಗೂ ನಡೆದೆ. ರಿಯಾಜ್‌ನ ಮನೆ ಅಲ್ಲೆಲ್ಲೂ ಕಾಣಿಸಲಿಲ್ಲ. ಗಾಬರಿಯಿಂದ ಸುತ್ತಮುತ್ತ ನೋಡಿದೆ. ಆ ಪರಿಸರ ಹೊಸ ಅನುಭವವನ್ನ ನೀಡುತ್ತಿತ್ತು. ಈ ಮೊದಲು ರಿಯಾಜ್‌ನ ಜೊತೆಗೂಡಿ ಒಮ್ಮೆ ಮಾತ್ರ ಮನೆಗೆ ಹೋಗಿದ್ದೆ. ಅದೂ ರಾತ್ರಿಯ ವೇಳೆ; ಹೀಗೆ ಹೋಗಿ ಹಾಗೆ ಬಂದಿದ್ದೆ ಅಷ್ಟೆ. ಸ್ಮೃತಿ ಪಟಲದ ಮೇಲೆ ಅಚ್ಚಾಗಿದ್ದ ಅಸ್ಪಷ್ಟ ಕುರುಹುಗಳನ್ನ ಗುರ್ತಿಸುತ್ತ ಕಣ್ಣುಗಳು ಮನೆಯನ್ನ ಹುಡುಕಾಡುತ್ತಿತ್ತು. ಸುತ್ತಿದ ಬೀದಿಯನ್ನೇ ಎಷ್ಟು ಬಾರಿ ಸುತ್ತಿದರೂ ಪ್ರಯತ್ನ ಫಲಕಾರಿಯಾಗಲಿಲ್ಲ. “ಯಾವುದೇ ಬೀದಿಯಾಗಲಿ ಒಮ್ಮೆ ಓಡಾಡಿದರೆ ಸಾಕು ಚೆನ್ನಾಗಿ ನೆನಪಿರುತ್ತದೆ. ನೀನೇನೂ ಚಿಂತಿಸಬೇಡ ಮನೆಗೆ ನಾನೇ ಬರುತ್ತೇನೆ…..” ಎಂದು ರಿಯಾಜನಿಗೆ ಸವಾಲು ಬೇರೆ ಒಡ್ಡಿದ್ದೆ. ದಾರಿತಪ್ಪಿ ದಿಕ್ಕು ತೋಚದಂತಾದಾಗ ಮನಸ್ಸು ಕಂಗಾಲಾಗ ತೊಡಗಿತು. ಇನ್ನು ಕಾಲಹರಣ ಮಾಡುವುದು ಬೇಡವೆನಿಸಿ ಅಲ್ಲೇ ಪಕ್ಕದಲ್ಲಿದ್ದ ಪೆಟ್ಟಿಗೆ ಅಂಗಡಿಯಲ್ಲಿ ಮಾಂಸಪರ್ವತದಂಥ ದೇಹವನ್ನ ಮಂದವಾಗಿ ತೂಗಾಡಿಸುತ್ತ ವ್ಯಾಪಾರ ಮಾಡುತಿದ್ದ ಸಾಬಿಯನ್ನ ವಿಳಾಸ ಕೇಳೋಣವೆಂದು ಹೆಜ್ಜೆಇಟ್ಟೆ.

“ಅಕ್ಕ ನಂಗೆ….. ಅಕ್ಕ ನಂಗೆ…..” ಆ ಅಂಗಡಿಯಿಂದ ಎರಡು ಬನ್ನುಗಳನ್ನ ಖರೀದಿಸಿದ ಕೋಮಲ ಕಾಯದ ಹುಡುಗಿಯ ಸುತ್ತಲು ನಾಲ್ಕೈದು ಮಕ್ಕಳು ಗುಂಪು ಕಟ್ಟಿ ಗದ್ದಲ ಮಾಡುತ್ತಿದ್ದರು. ತನ್ನ ಕೊಳಕಾದ ಸುಂದರ ಕೈಗಳಿಂದ ಬನ್ನನ್ನು ಹಂಚಿ ಒಂದು ಭಾಗವನ್ನು ತನ್ನ ಸಣ್ಣನೆಯ ಸೊಂಟದ ಮೇಲೆ ಕುಳ್ಳರಿಸಿಕೊಂಡಿದ್ದ ಎರಡು ವರ್ಷದ ಮಗುವಿಗೆ ತಿನ್ನಿಸಿದಳು. ತಮ್ಮಂದಿರೊಂದಿಗೆ ಆಟವಾಡುತ್ತ, ನಗುತ್ತಿದ್ದ ಆ ಹದಿನಾರರ ಹುಡುಗಿ ನೋಡುವ ಕಣ್‌ಮನಗಳಿಗೆ ಆಕರ್ಷಣೀಯವಾಗಿದ್ದಳು. ನಾನು ನೋಡುತ್ತ ನಿಂತು ಬಿಟ್ಟೆ. ಒಮ್ಮೆಲೆ ಎಚ್ಚೆತ್ತು ಬಂದ ಕಾರ್ಯ ನೆನಪಾಗಿ ಸಾಬಿಯನ್ನ ವಿಚಾರಿಸಿ, ಮೇಲಿನ ಬೀದಿಗೆ ಬಂದು ರಿಯಾಜ್‌ನ ಮನೆ ಸೇರಿದೆ.

ಕಾದು ಕಾದು ಕೆಂಪಾಗಿದ್ದ ರಿಯಾಜ್‌ನನ್ನ ತಣ್ಣಗಾಗಿಸಲು ನನಗೆ ಬಹಳ ಹೊತ್ತು ಹಿಡಿಯಲಿಲ್ಲ. ಸಿ. ಅಶ್ವಥ್ ರಾಗಸಂಯೋಜನೆ ಮಾಡಿ ಹಾಡಿರುವ ಭಾವಗೀತೆಗಳೆಂದರೆ ಅವನಿಗೆ ಬಲು ಅಚ್ಚುಮೆಚ್ಚು. ನಾಲ್ಕೈದು ಗೀತೆಗಳನ್ನ ಹಾಡುವ ಹೊತ್ತಿಗಾಗಲೇ ತಣ್ಣಗಾಗಿ ಕೂತುಬಿಟ್ಟಿದ್ದ. ಸಂಗೀತ ಕಛೇರಿ ಮುಗಿಸಿ ಬಹಳ ಹೊತ್ತಿನವರೆಗೂ ಹರಟೆ ಹೊಡೆಯುತ್ತ ಕುಳಿತೆವು. ಮಧ್ಯರಾತ್ರಿ ಯಾವಾಗಲೋ ಊಟ ಮುಗಿಸಿ ಮಲಗಿದೆವು.

ಅಭ್ಯಾಸಬಲದಿಂದ ಬೆಳಿಗ್ಗೆ ಆರುಗಂಟೆಗೆಲ್ಲಾ ಎಚ್ಚರವಾಯಿತು. ಎದ್ದು ನೋಡಿದೆ. ರಿಯಾಜ್ ಕಾಣಿಸಲಿಲ್ಲ. ಟೆೃರೆಸ್ ಮೇಲೆ ಇರಬಹುದೆನಿಸಿ ಮೆಟ್ಟಿಲನ್ನೇರಿ ನೋಡಿದೆ. ಅಲ್ಲೂ ಇರಲಿಲ್ಲ. ಬಹುಶಃ ನಮಾಜ್‌ಗೆ ಹೋಗಿರಬಹುದೆಂದುಕೊಂಡು ಅತ್ತ ಇತ್ತ ಕಣ್ಣಾಡಿಸುತ್ತ ನಿಂತೆ. ತಣ್ಣನೆಯ ತಂಗಾಳಿ ಮೈಕೊರೆಯುತ್ತಿತ್ತು. ಉದಯಿಸಿದ ಸೂರ್ಯ ಇನ್ನೂ ಮೋಡಗಳ ಮರೆಯಲ್ಲಿ ಅವಿತುನಿಂತಿದ್ದ. ಆ ಮುಂಜಾವಿನ ಮುಸುಕು ಬೆಳಕು ಎಲ್ಲೆಡೆ ಹರಡಿ ಕಣ್‌ಮನ ತಣಿಸುತ್ತಿತ್ತು.

ಸುತ್ತಲೂ ಕಣ್ಣಾಡಿಸಿದೆ. ನೆನ್ನೆ ದಾರಿತಪ್ಪಿ ಹೋಗಿದ್ದ ಆ ಕೆಳಗಿನ ಬೀದಿ ಕಾಣಿಸಿತು. ಸೂಕ್ಷ್ಮವಾಗಿ ದೃಷ್ಟಿ ಹರಿಸಿದೆ. ಸ್ಲಮ್ ಏರಿಯಾದಂತೆ ಕಾಣುತ್ತಿತ್ತು. ಜೋಪಡಿ ಮಾದರಿಯ ಸಣ್ಣ ಸಣ್ಣ ಮನೆಗಳು ಅಡ್ಡಾದಿಡ್ಡವಾಗಿ ಎದ್ದು ನಿಂತಿದ್ದವು. ಸಂದಿಗೊಂದಿಯ ಹಳ್ಳದಿನ್ನೆಗಳಿಂದ ಕೂಡಿದ ಪುಟ್ಟರಸ್ತೆ, ಅದರಲ್ಲೇ ಹರಿಯುತ್ತಿದ್ದ ಕೊಳಚೆ ನೀರು, ಅಲ್ಲಲ್ಲೇ ಕೊಳೆತು ನಾರುವಂತಿತ್ತು. ಒಮ್ಮೆ ಸುತ್ತಲೂ ದಿಟ್ಟಿಸಿ “ಇಂಥ ಸ್ಲಮ್ ಏರಿಯಾದಲ್ಲಿ ಈ ಜನ ಅದು ಹೇಗೆ ಬದುಕುತ್ತಾರೋ!…. ಆ ಶಿವನೇ ಬಲ್ಲ!….” ಎನ್ನುತ್ತ ನಿಟ್ಟುಸಿರು ಬಿಡುತ್ತಿದ್ದೆ. ಅಷ್ಟರಲ್ಲೇ ಅಲ್ಲಿಂದ ಯಾರೋ ಜಗಳವಾಡುತ್ತಿದ್ದ ಧ್ವನಿ ಕೇಳಿಸಿತು. “ಛೇ! ನೆನ್ನೆ ನಾನು ಹೋಗಿದ್ದು ಈ ಬೀದಿಗಾ! ಆ ಮುಸುಕು ಮಬ್ಬಿನಲ್ಲಿ ಆತುರದಲ್ಲಿ ಏನೂ ಕಾಣಿಸಲಿಲ್ಲ……” ಎಂದು ಮನಸ್ಸು ಅಸಹ್ಯ ಪಡೆದುಕೊಳ್ಳುತ್ತಿದ್ದರೂ ಆ ಕೊಳಕು ಬಟ್ಟೆಯ ಜನ ಬೀದಿಯಲ್ಲಿ ನಿಂತು ಕಿತ್ತಾಡುತ್ತಿದ್ದ ಪರಿ ಕುತೂಹಲವನ್ನು ಹುಟ್ಟಿಸಿತು. ಕಣ್ಣರಳಿಸಿ ನೋಡುತ್ತ ಆಲಿಸಿದೆ.

“ಏಯ್ ಗುಲಾಬ್, ನನ್ನ ಮಗನಿಗೆ ಸಲ್ಮಾನ ಕೊಟ್ಟು ಮದುವೆ ಮಾಡ್ತಿಯೋ ಇಲ್ವೋ?…. ನನ್ನ ಫಯಾಜ್ ಯಾವುದರಲ್ಲೇ ಕಡಿಮೆ ಇದಾನೆ, ಕೈ ತುಂಬ ಸಂಪಾದ್ನೆ ಮಾಡ್ತಾನೆ, ಗಾಡಿ ಇಟ್ಟಿದ್ದಾನೆ, ಮೊಬೈಲ್ ತಗೊಂಡಿದ್ದಾನೆ….”

“ಲೇ ಹಾಜಿರ, ಸಾಕ್‌ ನಿಲ್ಸೆ ನಿನ್ನ ಬಡಾಯಿ ನಾನೂ ಕಂಡಿದ್ದಿನೀ… ನಿನ್ಮಗ ಯಾವುದ್ರಲ್ಲೂ ಕಡಿಮೆಯಿಲ್ಲ; ಎಲ್ಲದ್ರಲ್ಲೂ ಜಾಸ್ತಿನೇ, ಅದಕ್ಕೆ ಮೊನ್ನೆ ಆ ಹಿಂದೂ ಹುಡ್ಗಿನ ಕೆಣ್ಕಿ ಒದೆತಿಂದ್ಕೊಂಡು ಬಂದಿದ್ದು. ಆ ಮುಸ್ಡಿಗೆ ಕಾಲೇಜ್ಗೆ ಹೋಗೊ ಹುಡ್ಗಿ ಬೇಕಾಗಿತ್ತೆನೋ…..”

“ನನ್ಮಗ ಗಂಡ್ಸು ಕಣೇ; ಊರೆಲ್ಲಾ ತಿರ್ಗಾಡ್ತಾನೆ….. ಅವಳೇನು ಕಡ್ಮೆ ಏನು? ನಾನೇ ಕಣ್ಣಾರೆ ಕಂಡಿದ್ದಿನಿ. ನನ್ಮಗನ್ ಜೊತೆ ಪಿಚ್ಚರ್‍ಗೆ ಹೋಗ್ತಿದ್ಲು ಮಿಟಿಕಲಾಡಿ. ಅವಳಿಗೇನು ಬುದ್ದಿಯಿಲ್ವೇನು? ಅವಳೇ ಎಲ್ಲಾ ಮಾಡಿದ್ದು ಬಿಕನಾಸಿ. ಇಲ್ದಿದ್ರೆ ನನ್ಮಗ ಹೇಗೋ ಇರ್ತಿದ್ದ….”

“ಅವಳಲ್ಲ ಬಿಕನಾಸಿ ನೀನು, ಎಂಥ ಮಗನನ್ನ ಹೆತ್ತಿದ್ದೀಯಾ ನೋಡು… ನನ್ಮಗಳನ್ನ ಹಾಳ್ಬಾವಿಗಾದ್ರೂ ತಳ್ತಿನೇ ಹೊರ್ತು ನಿನ್ ಮನೆಗೆ ಮಾತ್ರ ಕಳಿಸೋಲ್ಲ…..”

“ನೀನೇನು ಕಳ್ಸ್‌ಬೇಕಾಗಿಲ್ಲ ಫಯಾಜ್ ಬರ್ಲಿಯಿರು. ಅವನೇ ಎತ್ಹಾಕ್ಕೊಂಡು ಹೋಗ್ತಾನೆ…. ಯಾರ್ ಏನ್ ಮಾಡ್ತಾರೊ ನಾನೂ ನೋಡ್ತಿನಿ…..”

“ನಾನೇನು ಕೈಕಟ್ಕೊಂಡು ಕೂತ್ಕೊಂಡಿಲ್ಲ. ಯಾವನ್ ಬರ್ತಾನೊ ಬರ್ಲಿ. ಪರ್ಕೇಲಿ ಹೊಡ್ದು ಓಡಿಸ್ತೀನಿ. ನನ್ಮಗಳ ತಂಟೆಗೆ ಯಾರ್ ಬಂದ್ರು ಅಷ್ಟೇ ಮುಖಕ್ಕೆ ಕೆಸ್ರು ಬಳಿತೀನಿ….”

“ಲೇ ಮಾನ್ಕೆಟ್ಟೋಳೆ, ನನ್ಮಗನ್ನ ಪರ್ಕೇಲಿ ಹೊಡಿತಿಯೇನೇ! ಅವನನ್ನೇ ಕರ್ಕೊಂಡು ಬರ್ತಿನಿರೇ…. ಅದಹೆಂಗ್ ಹೋಡಿತಿಯೊ ನಾನೂ ನೋಡ್ತೀನಿ….” ಎಂದು ಅರಚಿ ಗೊಣಗಾಡುತ್ತ ಹಿಂದೆ ಹಿಂದಕ್ಕೆ ನೋಡುತ್ತ ಹೊರಟುಹೋದಳು.

ಸಣ್ಣ ಮಗುವನ್ನ ಎತ್ತಿಕೊಂಡಿದ್ದ ಗುಲಾಬ್ ಮತ್ತೆ ರೇಗಾಡಿದಳು. ಜೋಪಡಿಯ ಮುಂದೆ ನೆರೆದಿದ್ದ ಜನರನ್ನ ಕಂಡು “ಇಲ್ಲೇನು ಕೋತಿ ಕುಣಿತಾ ಇದೆಯಾ, ಹೋಗ್‌ಹೋಗಿ ನಿಮ್‌ಕೆಲ್ಸ ನೋಡ್ಹೋಗಿ ಎಲ್ರೂ ಬಂದ್‌ಬಿಟ್ಟವ್ರೆ ಬೆಳ್‌ಬೆಳಿಗ್ಗೆನೆ….” ಎಂದು ಗದರಿಸಿದ್ದರಿಂದ ಗುಂಪು ಚದುರಿತು.

“ಓಹೋ….. ಇವಳೇನು ದೊಡ್‌ಸಾಚಯೇನು?….” ಎಂದು ಯಾರೋ ಹೇಳಿದ್ದು ಕೇಳಿಸಿತು.

“ಯಾವಳೇ ಅವ್ಳು ಬಿಟ್‌ಮುಂಡೆ?….” ಎಂದು ಅತ್ತ ಇತ್ತ ಕಣ್ಣಾಡಿಸಿ ಸೊಂಟದಿಂದ ಜಾರುತ್ತಿದ್ದ ಮಗುವನ್ನ ಸರಿಯಾಗಿ ಕುಳ್ಳಿರಿಸಿಕೊಂಡು ಮತ್ತೆ ಸುತ್ತಲು ದುರುಗುಟ್ಟಿ ನೋಡುತ್ತ ನಿಂತಳು.

ನೆನ್ನೆ ಸಂಜೆ ನೋಡಿದ್ದ ಆ ಕೋಮಲ ಕಾಯದ ಹದಿನಾರರ ಹುಡ್ಗಿ ಮಗುವನ್ನ ಎತ್ತಿಕೊಂಡು ತನ್ನ ತಮ್ಮಂದಿರೊಂದಿಗೆ ಅಲ್ಲೇ ಪಕ್ಕದಲ್ಲಿ ಮೌನಗೌರಿಯಂತೆ ನಿಂತಿದ್ದಳು. ಆ ಹುಡ್ಗಿಯನ್ನ ನೋಡಿದ ಗುಲಾಬ್ “ನೀನೇನೆ ಇನ್ನು ಇಲ್ಲೇ ನಿಂತಿದ್ದಿಯಾ….. ಮನೆ ಕೆಲ್ಸವೆಲ್ಲಾ ಹಾಗೇಯಿದೆ….. ಹೋಗಿ ನೀರು ತಕೊಂಡು ಬಂದು ಆ ಬಟ್ಟೆ ಒಗಿಹೋಗು…. ನಿಂತ್ಕೊಂಡಿದ್ದಾಳೆ ರಾಣಿತರ…..” ವಟಗುಟ್ಟುತ್ತ ಮನೆಯೊಳಗೆ ಹೋದಳು.

ಆ ಹುಡ್ಗಿ ತನ್ನ ಸೊಂಟದಲಿದ್ದ ಮಗುವನ್ನ ಬಹಳ ಅಕ್ಕರೆಯಿಂದ ಎದೆಗೊತ್ತಿಕೊಂಡು ಮುದ್ದಾಡಿದಳು. ಇದುವರೆಗೆ ಹಿಡಿದಿಟ್ಟಿದ್ದ ಕಣ್ಣೀರಕಟ್ಟೆ ಒಡೆಯಿತು. ಮಗುವನ್ನು ಅಪ್ಪಿಕೊಂಡಳು. ಅವಳ ವೇದನೆ ಯಾರಿಗೂ ಅರ್ಥವಾಗುತ್ತಿರಲಿಲ್ಲ. ನೋವೆಲ್ಲವನ್ನು ತಾನೊಬ್ಬಳೇ ಅನುಭವಿಸುತ್ತ ಮರುಗುವಂತಿತ್ತು. ಮನೆಯೊಳಗೆ ಗೊಣಗಾಡುತ್ತಿದ್ದ ಗುಲಾಬ್‌ನ ಧ್ವನಿ ಕೇಳಿಸಿತು. ಮತ್ತೆಲ್ಲಿ ಹೊರಗೆ ಬಂದು ಬೈಯುತ್ತಾಳೋ ಎಂದು ಹೆದರಿ ಕಣ್ಣುಗಳನ್ನೊರೆಸುತ್ತ ಮಗುವನ್ನ ಸೊಂಟಕ್ಕೇರಿಸಿ ಬಿಂದಿಗೆ ಹಿಡಿದು ನೀರಿಗೆ ಹೋದಳು.
ಆ ಹುಡ್ಗಿಗೂ ಆಕೇಗೂ ಏನು ಸಂಬಂಧವೆಂದು ಅರ್ಥವಾಗದೆ ಅತ್ತಕಡೆಯೇ ನೋಡುತ್ತ ಕೂತಿದ್ದೆ. ಅಷ್ಟರಲ್ಲಿಯೆ ರಿಯಾಜ್ ಎರಡು ಗ್ಲಾಸ್ ಕಾಫಿ ಹಿಡಿದು ಬಂದ.

“ಏನ್ ವಿವೇಕ್ ಸೀರಿಯಸ್ಸಾಗಿ ತಿಂಕ್ ಮಾಡುತ್ತಿದ್ದಿಯಾ?….. ಬೆಳ್‌ಬೆಳಿಗ್ಗೆ ಸುಪ್ರಭಾತ ಕೇಳಿ ಟೆಂಪ್ಟ್ ಆಗಿಬಿಟ್ಟಿಯಾ….”
“ಸ್ಲಮ್ ಏರಿಯಾದಲ್ಲಿ ಇದೆಲ್ಲಾ ಮಾಮುಲ್ ತಾನೇ…”

“ಯಾಕ್ ಮಾರಾಯ ಹಿಂಗ್ ಅಂತಿಯಾ ನಿಮ್ಮೂರಲ್ಲಿ ಯಾರೂ ಕಿತ್ತಾಡೊದೇಯಿಲ್ವ? ನಾನು! ನಾನು! ಅಂತ ಕಿತ್ತಾಡುಕೊಂಡು ಇವತ್ತು ಈ ಜಗತ್ತೇ ಹತ್ತಿಕೊಂಡು ಉರಿತಾ ಇದೆ….. ಲೋ ವಿವೇಕ್, ನೀನೀಗ ನೋಡ್ತಿರೋದು ಕೋಲಾರದ ಒಂದು ಏರಿಯಾ ಮಾತ್ರ. ಇಂಥಹ ಏರಿಯಾಗಳು ಇಲ್ಲಿ ಬಹಳಷ್ಟಿವೆ. ಇದಕ್ಕಿಂತ ನೂರುಪಟ್ಟು ಸ್ಲಮ್ ಏರಿಯಾಗಳಿರೋದು ನೀನಿರುವ ಆ ಬೆಂಗಳೂರಿನಂತಹ ನಗರಗಳಲ್ಲಿಯೇ….. ಆಫೀಸು-ಮನೆ ಅಂತ ಗುಬ್ಬಚ್ಚಿ ಗೂಡಲ್ಲೇ ಜೀವಮಾನ ಕಳೆಯೋ ನಿಮ್ಮಂಥವರಿಗೆ ಇದೆಲ್ಲಾ ಕಾಣಲ್ಲ ಕಣೊ….” ಇನ್ನೂ ಏನೋ ಹೇಳಬೇಕೆಂದುಕೊಂಡಿದ್ದ. ಆದರೆ ಮೌನ ವಹಿಸಿದ. ಮತ್ತೆ ಅವನೇ ಮೌನ ಮುರಿದು;
“ವಿವೇಕ್, ಹಳ್ಳಿ ನಗರ ಅಂತಲೇ ಅಲ್ಲ ಎಲ್ಲಿ ಬೇಕಾದ್ರು ನೋಡು, ಒಳ್ಳೆಯ ಸಂಸ್ಕಾರ ಇಲ್ಲದೇ ಇರೋರು ಹೀಗೆಯೇ ಕಿತ್ತಾಡಿ ಸಾಯೋದು….. ಅನ್‌ಎಜುಕೇಟೆಡ್ಸ್ ಮಾತ್ರವಲ್ಲಪ್ಪ ಎಜುಕೇಟೆಡ್ಸು ಅಷ್ಟೇ. ಯಾರಾದರೇನು ಮೊದಲು ಮಾನವೀಯತೆ ಮುಖ್ಯ. ಒಳ್ಳೆಯ ಸಂಸ್ಕಾರ ಇಲ್ದಿದ್ರೆ ಅವರ್ಗು ಇವರ್ಗು ಏನು ವ್ಯತ್ಯಾಸ ಇಲ್ಲ….. ಜನ ಇವತ್ತು ವಿದ್ಯಾವಂತರಾಗ್ತಯಿದ್ದಾರೆ, ಬುದ್ಧಿವಂತರಾಗ್ತಯಿದ್ದಾರೆ ಆದ್ರೆ ವಿಚಾರವಂತರಾಗ್ತಯಿಲ್ಲ…. ಅದೇ ದುರಂತ!…”

“ನೀನು ಹೇಳೋದೂ ಸರಿ ಬಿಡು…. ಅಂದಹಾಗೆ ಆ…. ನೀರು ಎತ್ಕೊಂಡು ಬರ್ತಿರೊ ಹುಡ್ಗಿಗೂ ಆ ಮನೆಯಾಕೆಗೂ ಏನ್ ಸಂಬಂಧ?” ಕಾಫಿ ಹೀರುತ್ತ ಕೇಳಿದೆ.

“ಓ…. ಏನ್ ವಿವೇಕ್ ರಾಯರೇ ಕಥೆಯೋ! ಕಾದಂಬರಿಯೋ! ಅಥವಾ ಒಂದು ಮಹಾಕಾವ್ಯವನ್ನೇ ಬರೆದರೆ ಉತ್ತಮ!…. ಯಾಕ್ ಹೇಳ್ತಿದ್ದಿನಿ ಅಂದ್ರೆ ಒಬ್ಬೊಬ್ಬರ ಬದುಕು ಸಹ ಒಂದೊಂದು ಮಹಾಕಾವ್ಯ! ಹಲವಾರು ಬದುಕುಗಳ ಒಡನಾಟದಿಂದ ಸಮೃದ್ಧವಾದ ಜೀವನ ಎತ್ತರೆತ್ತರಕ್ಕೆ ಏರಬೇಕಾಗಿತ್ತು, ಮಾನವ ವಿಶ್ವಮಾನವನಾಗಬೇಕಾಗಿತ್ತು ಅಲ್ಲವೇ! ಆದ್ರೆ ನೋಡು ತುಕ್ಕು ಹಿಡಿದ ಕಬ್ಬಿಣವಾಗಿ ಹೇಗೆ ಬಿದ್ದಿದೆ…. ಅದು ಅವರವರು ಪಡೆದ ಸಂಸ್ಕಾರ….” ಹುಸಿನಗು ಬೀರುತ್ತ ಕಾಫಿಯ ಖಾಲಿ ಗ್ಲಾಸನ್ನ ಪಕ್ಕಕ್ಕಿಟ್ಟು ನನ್ನನ್ನೇ ದಿಟ್ಟಿಸಿ ನೋಡಿದ. ನಾನು ಮೌನವಹಿಸಿದ್ದನ್ನು ಗಮನಿಸಿ ಅವನೇ ಮಾತು ಮುಂದುವರೆಸಿದ;

“ಅಲ್ಲಿ ನೋಡು, ಸೊಂಟದ ಮೇಲೆ ಮಗುವನ್ನ ಕುಳ್ಳರಿಸಿಕೊಂಡು, ತಲೆಯ ಮೇಲೆ ತುಂಬಿದ ಬಿಂದಿಗೆ ಹೊತ್ತು ಬರುತ್ತಿರುವ ಆ ಹುಡ್ಗಿಯ ಹೆಸರು ಸಲ್ಮಾ. ಆ ಪುಟ್ಟ ಮಗು ಯಾರು ಅಂದುಕೊಂಡಿದ್ದೆ?”

“ಆ ಹುಡ್ಗಿಯ ತಮ್ಮ ತಾನೇ…”

“ಏಯ್ ಫೂಲ್! ಆ ಮಗು ಅವಳದ್ದೆ ಕಣೋ. ಆ ಹುಡ್ಗಿ ಒಂಬತ್ತು ತಿಂಗ್ಳು ಹೊತ್ತು ಹೆತ್ತ ಮಗು. ಅವಳಿಗೆ ಮದುವೆಯಾಗಿ ಎರಡು ವರ್ಷಗಳಾಗಿವೆ…..”

“ವಾಟ್! ಜೋಕ್ ಮಾಡ್ತಿಲ್ಲ ತಾನೇ?….. ಆ ಪುಟ್ಟ ಹುಡ್ಗಿಗೆ ಒಂದು ಪುಟ್ಟ ಮಗುನಾ! ಅವಳಿಗಿನ್ನು ಹದಿನೆಂಟು ತುಂಬಿದ ಹಾಗಿಲ್ಲ…..”

“ಹೌದು. ಅವಳಿಗಿನ್ನು ಹದಿನಾರು!…. ಈ ಹುಡ್ಗಿಯ ಒಬ್ಬಳದ್ದೇ ಅಲ್ಲಾ ಇಲ್ಲಿರುವ ಬಹುಪಾಲು ಹೆಣ್ಣು ಮಕ್ಕಳ ಕೇಸ್ ಇದೇ ಕಣೋ. ನಮ್ಮಲ್ಲಿ…… ಛೇ ಛೇ ಅಲ್ಲ, ಈ ಮುಸ್ಲಿಮರಲ್ಲಿ ಅರ್ಧಭಾಗದಷ್ಟು ಹೆಣ್ಣು ಮಕ್ಕಳ ಸ್ಥಿತಿ ಹೀಗೇ ಇದೆ. ಮಗಳು ವಯಸ್ಸಿಗೆ ಬರೋದೇ ತಡ ಯಾವಾಗ ಮದ್ವೆ ಮಾಡೋಣ, ಯಾವಾಗ ಬೇಗ ಆಚೆ ಕಳ್ಸೋಣ ಅಂತ ಕಾಯ್ತ ಇರ್ತಾರೆ, ಜೊತೆಗೆ ವರದಕ್ಷಿಣೆಯ ಕಾಟ. ಅದರ ಜೊತೆಗೆ ಮನೆ ತುಂಬ ಮಕ್ಕಳು ಬೇರೆ. ಈ ವರದಕ್ಷಿಣೆ, ವರೋಪಚಾರದ ಜಟಿಲ ಸಮಸ್ಯೆಯಿಂದ ಎಷ್ಟೋ ಹೆಣ್‌ಮಕ್ಕಳಿಗೆ ಮದ್ವೆಯ ಭಾಗ್ಯನೇ ಇಲ್ಲ. ಆಮೇಲೆ ಎಷ್ಟು ದುಡ್ಡು ಕೊಡ್ತೀನಿ ಅಂದ್ರೂ ‘ವಯಸ್ಸು ಜಾಸ್ತಿ’ ಅಂತ ಒಂದು ಗಂಡೂ ಮುಂದೆ ಬರೊಲ್ಲ….. ಬರೋರು ಧನಪಿಶಾಚಿಗಳು ಮಾತ್ರ…. ಮದ್ವೆ ಆದ್ರೂ ನೆಮ್ಮದಿ ಇಲ್ಲ……. ತನ್ನ ಮಗಳು ಚೆನ್ನಾಗಿರಲಿ ಅಂತ ಎಷ್ಟೆಲ್ಲಾ ಕಷ್ಟ ಪಡೋ ತಂದೆ-ತಾಯಂದಿರು ಸರಿಯಾಗಿ ಎಜುಕೇಷನ್ ಕೊಡ್ಸೊಲ್ಲ. ಎಲ್ಲದಕ್ಕೂ ಧರ್ಮ ಧರ್ಮ ಅಂತ ನೇತಾಡ್ತಾರೆ; ಅವರಪ್ಪನ ಮನೆ ಗಂಟು ಇದ್ದಂಗೆ. ಇವರಿಗೆ ಧರ್ಮನೇ ಕಾನೂನು, ಧರ್ಮನೇ ಸರ್ವಸ್ವ…. ಯಾರೋ ಕೆಲವರು ಅದರಲ್ಲು ನಗರದಲ್ಲಿರುವವರು ಬೆರಳೆಣಿಕೆಯ ಜನ ಮಾತ್ರ ಎಲ್ಲಾ ಅರ್ಥಮಾಡ್ಕೊಂಡು ಬಾಳ್ತಿದ್ದಾರೆ…… ಈ ಪರಿಸ್ಥಿತಿ ಗಂಡು ಮಕ್ಕಳಿಗೂ ಅನ್ವಯಿಸುತ್ತೆ, ಎಲ್ಲಾ ಮತಸ್ಥರಿಗೂ ಅನ್ವಯಿಸುತ್ತೆ….” ಕೆಲಕ್ಷಣ ಮೌನವಹಿಸಿದ. ಸಿಟ್ಟು ತಣ್ಣಗಾದ ಬಳಿಕ ಮತ್ತೆ ಹೇಳಲು ಪ್ರಾರಂಭಿಸಿದ;

ತಮ್ಮಂದಿರೊಂದಿಗೆ ಆಟವಾಡುತ್ತ, ನಗುತ್ತಿದ್ದ ಆ ಹದಿನಾರರ ಹುಡುಗಿ ನೋಡುವ ಕಣ್‌ಮನಗಳಿಗೆ ಆಕರ್ಷಣೀಯವಾಗಿದ್ದಳು. ನಾನು ನೋಡುತ್ತ ನಿಂತು ಬಿಟ್ಟೆ. ಒಮ್ಮೆಲೆ ಎಚ್ಚೆತ್ತು ಬಂದ ಕಾರ್ಯ ನೆನಪಾಗಿ ಸಾಬಿಯನ್ನ ವಿಚಾರಿಸಿ, ಮೇಲಿನ ಬೀದಿಗೆ ಬಂದು ರಿಯಾಜ್‌ನ ಮನೆ ಸೇರಿದೆ.

“ಆಗ್ಲೆ, ಮಗು ಎತ್ಕೊಂಡು ಜಗಳವಾಡುತ್ತಿದ್ದಳಲ್ಲಾ ಆಕೆ ಸಲ್ಮಾಳ ತಾಯಿ. ಹೆಸರು ಗುಲಾಬ್ ಅಂತ. ಈಕೆಗೆ ಹದಿಮೂರು ಜನ ಮಕ್ಳು. ಸಲ್ಮಾನೇ ದೊಡ್ಡವಳು….. ನಿನಗೊಂದು ಹಾಸ್ಯಮಯ ಸಂಗ್ತಿ ಹೇಳ್ತೀನಿ ಕೇಳು; ತಾಯಿ-ಮಗಳು ಒಂದೇ ಸಲ ಗರ್ಭಿಣಿಯಾಗಿ ತಿರುಗಾಡುತಿದ್ರು, ಒಂದೇ ದಿನ ಹೆರಿಗೆನೂ ಆಯ್ತು. ಈಗ ತೊಟ್ಟಿಲು ಪಕ್ಕದಲ್ಲಿ ತೊಟ್ಟಿಲು ಕಟ್ಟಿ ಮಕ್ಕಳನ್ನ ತೂಗಾಡಿಸ್ತ ಇದ್ದಾರೆ…..” ಎನ್ನುತ್ತ ನಕ್ಕ. ಅವನ ಆ ನಗೆಯಲ್ಲಿ ವೇದನೆ ಅಡಗಿತ್ತು. ಅದನ್ನು ತೋರ್ಪಡಿಸಿಕೊಳ್ಳದೆ ಮಾತು ಮುಂದುವರೆಸಿದ. ನಾಲ್ಕು ಜನ ಗಂಡ್‌ಮಕ್ಳು ಗ್ಯಾರೇಜಿಗೆ ಕೆಲ್ಸಕ್ಕಂತ ಹೋಗ್ತಾರೆ. ಮೂರು ಜನ ಹೆಣ್‌ಮಕ್ಳು ಅವರಿವರ ಮನೆಕೆಲ್ಸಕ್ಕಂತ ಹೋಗ್ತಾರೆ. ಉಳಿದವು ಸಲ್ಮಾ ಜೊತೆ ಆಟವಾಡ್ಕೊಂಡು ಇರ್ತಾವೆ…. ಅಲ್ಲಿ ನೋಡು ಗಡ್ಡ ಕೆರೆದುಕೊಂಡು ಮನೆ ಮುಂದೆ ಕೂತಿದ್ದಾನಲ್ಲಾ ಅವನೇ ಸಲ್ಮಾಳ ತಂದೆ. ದಿಲ್‌ದಾರ್ ಅಂತ ಅವನ ಹೆಸ್ರು. ಶುದ್ಧ ಅಯೋಗ್ಯ. ಒಂದು ಬಿಡಿಗಾಸು ಸಹ ಸಂಪಾದ್ನೆ ಮಾಡೊಲ್ಲ. ಹೆಂಡ್ತಿ-ಮಕ್ಳು ಕೂಡಿಟ್ಟಿರೋ ದುಡ್ಡನ್ನ ಕದ್ದು ಊರೆಲ್ಲಾ ಸುತ್ತಾಡ್ಕೊಂಡು ದರ್ಬಾರು ಮಾಡ್ತಾಯಿರ್ತಾನೆ. ಚೆಲುವ ಚೆನ್ನಿಗರಾಯ, ಹದಿಮೂರು ಮಕ್ಕಳ ತಂದೆ…..”

“ಸಲ್ಮಾಳ ಗಂಡ ಏನ್ ಕೆಲ್ಸ ಮಾಡ್ತಾನೆ?”

“ಅವನಿದ್ದಿದ್ದರೆ ಈ ರಾದ್ಧಾಂತನೇ ಆಗುತ್ತಿರಲಿಲ್ಲ…… ಅವನ ಹೆಸ್ರು ಅನ್ವರ್. ಗುಲಾಬಳ ಅಕ್ಕನ ಮಗ. ತನ್ನ ಅಕ್ಕ ಎರಡನೇ ಮದ್ವೆ ಮಾಡ್ಕೊಂಡು ಮುಂಬೈಗೆ ಹೋಗುವಾಗ ಇವನನ್ನ ಇಲ್ಲೇ ಬಿಟ್ಟುಹೋದ್ಲು. ಕಷ್ಟನೋ ಸುಖಾನೋ ಗುಲಾಬ್ ಸಾಕಿ ಬೆಳೆಸಿದ್ಲು. ಕಡೆಗೆ ಸಲ್ಮಾಳನ್ನ ಕೊಟ್ಟು ಮದ್ವೆ ಕೂಡ ಮಾಡಿದ್ಲು. ತನ್ನ ಮಗಳನ್ನ ಬೇರೆಯವರಿಗೆ ಕೊಟ್ಟು ಮದ್ವೆ ಮಾಡ್ದ್ರೆ ಎಲ್ಲಿ ವರದಕ್ಷಿಣೆ ವರೋಪಚಾರ ಜಾಸ್ತಿ ಆಗತ್ತೋ ಅಂತ ಹೆದ್ರಿ ಮನೆಯಲ್ಲೇ ಇದ್ದ ಅಕ್ಕನ ಮಗನಿಗೆ ಕೊಟ್ಟು ಮದ್ವೆ ಮಾಡಿದ್ಲು. ಅವನು ಆಗೋದಿಲ್ಲ ಅಂತಿದ್ದ. ‘ಆಟೋ ಕೊಡಿಸ್ತೀನಿ’ ಅಂತ ಬಲವಂತ ಮಾಡಿದ್ಲು. ಆಟೋ ಆಸೆಗೆ ಅವನೂ ಒಪ್ಪಿದ. ಅವತ್ತು ರಾತ್ರಿ ನಾನು ಹೇಗಾದರೂ ಮಾಡಿ ಈ ಮದ್ವೆನ ನಿಲ್ಲಿಸಬೇಕು ಅಂತ ನಿರ್ಧರಿಸಿ ಪೊಲೀಸರಿಗೆ ಕಂಪ್ಲೆಂಟು ಕೊಡಲು ಹೊರಟಿದ್ದೆ. ಹೇಗೋ ವಿಷಯ ತಿಳಿದು ಸಲ್ಮಾಳ ತಾಯಿ ಮಕ್ಕಳೊಂದಿಗೆ ಬಂದು ನನ್ನ ಕಾಲು ಹಿಡಿದುಕೊಂಡ್ಳು ‘ಮದ್ವೆ ನಿಂತ್ಹೋದ್ರೆ ನಮಗೆ ಸಾವೇಗತಿ’ ಎಂದು ಅಂಗಲಾಚಿಕೊಂಡ್ಳು. ಹೃದಯ ಕರಗಿದಂತಾಯ್ತು. ಮನ ಮಿಡಿಯುತ್ತಿದ್ದರೂ ನಿರ್ಲಿಪ್ತನಾದೆ….. ಗುಲಾಬಕ್ಕ ತಕ್ಕಮಟ್ಟಿಗೆ ಮದ್ವೆ ಮಾಡಿ ಮುಗಿಸಿದ್ಳು. ಆದ್ರೆ, ಯಾರ ಪಾಪದಫಲವೋ ಏನೋ ಮದ್ವೆಯಾದ ಆರೇ ತಿಂಗಳಿಗೆ ಅನ್ವರ್ ಆಕ್ಸಿಡೆಂಟಲ್ಲಿ ಸತ್ತುಹೋದ. ಪಾಪ! ಏನೇನೂ ಅರಿಯದ ಸಲ್ಮಾ ವಿಧವೆಯಾದ್ಲು. ಅವತ್ತು ಆ ಗೋಳು ನನ್ನಿಂದ ನೋಡಕ್ಕಾಗ್ಲಿಲ್ಲ…… ಆಗಲೆ ನಡೆದ ಜಗಳಕ್ಕೆ ಮತ್ತೆ ಆ ಆಟೋನೇ ಕಾರಣ. ಜಗಳವಾಡಕ್ಕೆ ಬಂದಿದ್ದಳಲ್ಲಾ ಆಕೆ ಹಾಜೀರ; ಸ್ವಂತ ಗುಲಾಬಕ್ಕನ ಎರಡನೇ ಅಕ್ಕ……”

“ಏನಂದೆ, ಆಕೆ ಗುಲಾಬ್‌ನ ಅಕ್ಕನಾ! ಮತ್ತೆ ಅವ್ರು ಆ ರೀತಿ ಕಿತ್ತಾಡ್ತಾಯಿದ್ರು…… ಯಾರ ಮದ್ವೆ ವಿಚಾರಕ್ಕೆ ಈ
ರಾದ್ಧಾಂತ?”

“ಆ ಮನೆಯಲ್ಲಿ ಇನ್ಯಾರಿದ್ದಾರೆ. ಸಲ್ಮಾ ಬಗ್ಗೆನೇ…….” ಎಂದ ನಿರಾಶೆಯಿಂದ. ಅವನ ಮುಖದಲ್ಲಿ ವಿರಕ್ತಿಯ ರೇಖೆಗಳು ಮೂಡಿದವು. ಈ ಪುಟ್ಟ ಹುಡ್ಗಿಯ ಮೇಲೆ ಇಷ್ಟೊಂದು ಶೋಷಣೆಯಾ? ಎನಿಸಿತು. ಮನಸು ಮರುಗತೊಡಗಿತು. ನಮ್ಮ ನಡುವೆ ಕೆಲವು ಕ್ಷಣಗಳು ಮೌನ ಆವರಿಸಿತು.

“ಈ ಜಗತ್ತಿನಲ್ಲಿ ಎಲ್ಲದಕ್ಕೂ ಅವರು ಬೆಳೆದ ಪರಿಸರ ಪಡೆದ ಸಂಸ್ಕಾರಗಳೇ ಕಾರಣ ಅಲ್ವೇ… ಹೇಗಾದರೂ ಮಾಡಿ ಆ ಆಟೋನ ಪಡಿಬೇಕು ಅನ್ನೊದೇ ಹಾಜಿರಾಳ ಪ್ಲಾನು. ಅವಳ ಮಗ ಫಯಾಜ್ ಶುದ್ಧ ಪೋಕರಿ ಹುಡ್ಗ. ಹಿಂದೂ ಹುಡ್ಗಿಯ ಹಿಂದೆ ಬಿದ್ದಿದ್ದಾನೆ ಅಂತ ತಿಳ್ದು ಅವನಿಗೆ ಬೇಗ ಮದ್ವೆ ಮಾಡಬೇಕು ಅಂತ ನಿರ್ಧರಿಸಿ ತಂಗಿ ಮಗಳನ್ನೇ ಸೊಸೆಯಾಗಿ ಮಾಡಿಕೊಂಡರೆ ಆಟೋಸಿಗತ್ತೆ ಅಂತ ಹುನ್ನಾರ ಹಾಕಿದ್ಲು. ವಿಧವೆಯಾದ ಸಲ್ಮಾಗೆ ಒಂದು ಮಗುಕೂಡ ಇದೆ, ಇನ್ನು ಚಿಕ್ಕ ವಯಸ್ಸು ಅವಳಿಗೆ ಬಾಳು ಕೊಡುವುದಾಗಿ ಹೇಳಿ ಏನೆನೋ ನಾಟಕ ಹೆಣೆದ್ಳು. ಆದ್ರೆ ಗುಲಾಬಕ್ಕನ ಹತ್ರ ಅದು ಯಾವ್ದು ನಡೆದಿಲ್ಲ. ಆ ಲಿಂಗಾಯತ್ತರ ಹುಡ್ಗಿ ಫಯಾಜ್‌ಗೆ ಒಲಿದಿದ್ಳು. ಅವರಿಬ್ರು ಓಡಿಹೋಗಕ್ಕೆ ಸಿದ್ಧರಾಗಿದ್ರು. ‘ಆಟೋ ಬರುತ್ತೆ’! ಎಂಬ ಆಸೆಯಿಂದ ಅದನ್ನ ತಪ್ಪಿಸಿ ಸಲ್ಮಾಗೆ ಗಂಟುಹಾಕೋ ಹಾಜಿರಾಳ ಹುನ್ನಾರ ತಿಳಿದ ಗುಲಾಬಕ್ಕ ನಿರಾಕರಿಸಿದ್ಳು. ಅದಕ್ಕೇ ಈ ಎಲ್ಲಾ ರಾದ್ಧಾಂತ….. ಮುಂದೆ ಇನ್ನೇನಾಗತ್ತೋ ಯಾರಿಗೊತ್ತು….” ಎಂದು ಹೇಳಿ ನಿಟ್ಟುಸಿರು ಬಿಟ್ಟ.

ಸಲ್ಮಾಳ ಅನಾಥ ಸ್ಥಿತಿ ಕಣ್ಣಿಗೆ ಚಿತ್ರ ಕಟ್ಟುತಿತ್ತು. ಒಡನೆಯೇ “ಇವಳ ಸಮಸ್ಯೆಗೆ ಪರಿಹಾರವೇ ಇಲ್ವೇ?” ಎಂದು ಕೇಳಿದೆ.

“ಪರಿಹಾರ!…. ಅದು ಬರೀ ಕನಸಿನ ಮಾತು ವಿವೇಕ್” ಎಂದ ನಿರಾಶೆಯಿಂದ.

“ವಿವೇಕ್, ಮೊದ್ಲು ತಂದೆ-ತಾಯಿ ಸರಿಯಾಗಿದ್ರೆ ಮಕ್ಕಳೂ ಸಹ ಸರಿಯಾಗಿರ್ತಾರೆ. ನನ್ನ ತಂದೆ-ತಾಯಿ ಸರಿಯಾಗಿದಿದ್ದರೆ ನಾನು ಯಾಕೆ ಹೀಗೆ ಇಲ್ಲಿರುತ್ತಿದ್ದೆ? ಅವರಿಗೆ ಬೇಕಾಗಿರೋದು ನಾನಲ್ಲ ನನ್ನ ಸಂಬಳ. ಅದಕ್ಕೇ ಪ್ರತಿತಿಂಗ್ಳು ತಪ್ಪದೆ ಹಳ್ಳಿಗೆ ಹಣ ಕಳುಹಿಸ್ತಿನಿ…. ಅವರಿಂದ ದೂರವಾಗಿ ಇಲ್ಲಿ ಹಾಸ್ಟಲ್ಲಲ್ಲಿ ಓದು ಮುಗಿಸಿ ಈಗ ಕೆಲ್ಸ ಮಾಡ್ಕೊಂಡು ಈ ಬಾಡಿಗೆ ಮನೇಲಿ ಹಾಯಾಗಿದ್ದೀನಿ… ಮನೆಯವರ ಒತ್ತಡಾನೂ ಇಲ್ಲ, ದೇವರು-ಧರ್ಮದ ಕಾಟಾನೂ ಇಲ್ಲ. ಎಲ್ಲಾ ತ್ಯಜಿಸಿ ನನ್ನ ಬದುಕನ್ನ ನಾನೇ ರೂಪಿಸಿಕೊಂಡಿದ್ದೀನಿ…..” ಎಂದು ತನ್ನ ಅಳಲನ್ನ ತೋಡಿಕೊಂಡ.

ಅವ್ರು ಮಾಡ್ತಿರೋದು ಸರೀನಾ! ಇವ್ನು ಮಾಡ್ತಿರೋದು ಸರೀನಾ!.. ಬೀಜ-ವೃಕ್ಷದ ಪ್ರಶ್ನೆ ಇದ್ದಹಾಗೆ ಇದು ಬಿಡಿಸಲಾಗದ ಪ್ರಶ್ನೆ ಎನಿಸಿತು. ಪ್ರತಿ ತಂದೆ-ತಾಯಿಗಳೂ ಸಹ ಮೊದಲು ಮಕ್ಕಳಾಗಿರುತ್ತಾರೆ ತಾನೆ!… ‘ಬೆಳೆದ ಪರಿಸರ, ಪಡೆದ ಸಂಸ್ಕಾರಗಳೇ ಮುಖ್ಯ ಅದೇ ಎಲ್ಲದಕ್ಕೂ ಮೂಲ’ ಎಂದು ಹೇಳುತ್ತಿದ್ದ ರಿಯಾಜ್‌ನ ಮಾತು ನೂರಕ್ಕೆ ನೂರು ಸತ್ಯ ಎನಿಸಿತು. ಏನು ಹೇಳಬೇಕು ಎಂದು ನನಗೆ ತೋಚಲಿಲ್ಲ. ಅವನೂ ಸಹ ಏನೂ ಆಡಲಿಲ್ಲ. ಬಹಳ ಹೊತ್ತಿನ ಕಾಲ ಮೌನ ಆವರಿಸಿತು. “ಸರಿ, ಬಾ ಹೊತ್ತಾಯಿತು ಹೋಗೋಣ…..” ಎಂದು ಅವನೇ ಹೇಳಿ ಕರೆದುಕೊಂಡು ಹೋದ. ಹೋಟಲ್ಲಿನ ತಿಂಡಿ ಏಕೋ ರುಚಿಸಲಿಲ್ಲ. ಕಾಫಿ ಕುಡಿದ ನಂತರ ನಾನು ಹೊರಡಲು ಸಿದ್ಧನಾದೆ. ನಾಲ್ಕೈದು ದಿನ ಉಳಿಯಲು ಬಲವಂತ ಮಾಡಿದ. ಕೆಲಸಗಳ ಒತ್ತಡ ಇದದ್ದರಿಂದ ಮತ್ತೆ ಬರುವುದಾಗಿ ಹೇಳಿ ಹೊರಟೆ. ರಿಯಾಜ್ ಬಸ್ಸು ಹತ್ತಿಸಲು ಬಂದಿದ್ದಾಗ ಸಲ್ಮಾಳ ವಿಷಯವಾಗಿ ಏನೋ ಹೇಳಬೇಕೆಂದು ಮನಸ್ಸಿಗನಿಸಿತು. ಆದರೆ ಶಬ್ದಗಳು ಮೂಡಲಿಲ್ಲ. ಮೌನವಾಗಿ ಬಸ್ಸು ಹತ್ತಿ ಕುಳಿತೆ.

ಪಿ.ಎಚ್.ಡಿ. ಗಾಗಿ ಥೀಸಿಸ್ ಸಿದ್ಧಪಡಿಸಬೇಕಾಗಿತ್ತು. ಅದರ ನಿಮಿತ್ತ ಬೇಲೂರು, ಹಳೇಬೀಡು, ಹಂಪೆ, ಬಾದಾಮಿ, ಐಹೊಳೆ….. ತಿರುಗಾಡುತ್ತಾ ಹೋದೆ. ಬಿಡುವೇ ಸಿಗಲಿಲ್ಲ. ರಿಯಾಜ್‌ನನ್ನು ಭೇಟಿಯಾಗಿ ಮೂರು ವರ್ಷಗಳೇ ಕಳೆಯಿತು. ಈ ಮಧ್ಯೆ ಒಂದೆರಡು ಬಾರಿ ಮನೆಗೆ ಹೋಗಿದ್ದೆ. ರಿಯಾಜ್ ಮನೆ ಖಾಲಿಮಾಡಿರುವ ವಿಷಯ ತಿಳಿದು ಬೇಸರವಾಯಿತು. ಅವನ ನೆನಪು ಬಹಳವಾಗಿ ಕಾಡಹತ್ತಿತು.

ಮೊನ್ನೆ; ಅದೇ, ತಿಂಗಳ ಹಿಂದೆ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ರಿಯಾಜ್ ಸಿಕ್ಕಿದ್ದ. ಆದರೆ ಕುಳಿತು ಮಾತನಾಡುವಷ್ಟು ಪುರುಸೊತ್ತಿರಲಿಲ್ಲ ನಮಗಾಗ. ಅಡ್ರೆಸ್ ಕೊಟ್ಟು “ಖಂಡಿತವಾಗಿ ಮನೆಗೆ ಬರಬೇಕು……” ಎಂದು ಹೇಳಿ ಹೊರಟುಹೋದ.

ಮಾರನೆಯ ದಿನವೇ ಬಿಡುವು ಮಾಡಿಕೊಂಡು ಅಡ್ರೆಸ್ ಹಿಡಿದು ಮನೆ ಹುಡುಕುತ್ತಾ ಹೋದೆ. ಕೊನೆಗೂ ಮನೆ ಸಿಕ್ಕಿತು. ಒಳಗೆ ಪ್ರವೇಶಿಸಿದ ನನಗೆ ಆಶ್ಚರ್ಯ ಕಾದಿತ್ತು. ರಿಯಾಜ್ ಸಲ್ಮಾಳನ್ನ ಮದುವೆಯಾಗಿದ್ದ! ಅವರ ನಡುವಿನ ಆ ಅನ್ಯೋನ್ಯ ಪ್ರೀತಿಯ ಕಂಡು ನಾನು ಬೆಕ್ಕಸ ಬೆರಗಾಗಿಬಿಟ್ಟೆ. ಅದು ಕನಸೋ! ನನಸೋ! ಒಂದೂ ಅರ್ಥವಾಗದ ಸ್ಥಿತಿಯಲ್ಲಿ ತೊಳಲಾಡಿದೆ. ಅಂದು ‘ರಿಯಾಜ್, ನೀನು ಸಲ್ಮಾಳನ್ನ ಮದುವೆಯಾಗು’ ಎಂದು ಹೇಳಬೇಕೆಂದುಕೊಂಡಿದ್ದೆ. ಆದರೆ ಧೈರ್ಯಸಾಲದೆ ಮೌನವಾಗಿ ಬಸ್ಸುಹತ್ತಿ ಕುಳಿತಿದ್ದೆ. ಆದರೆ ಇಂದು ಅದನ್ನ ನಿಜವಾಗಿಸಿದ ಗೆಳೆಯನ ಬಗ್ಗೆ ಹೆಮ್ಮೆ ಪಟ್ಟು ಸಂಭ್ರಮಿಸಿದೆ. “ಇದೆಲ್ಲಾ ಹೇಗಾಯಿತು” ಎಂದು ಕಾತುರದಿಂದ ಕೇಳಿದೆ. ಅದಕ್ಕೆ ಅವನು;

“ಲೋ ವಿವೇಕ್; ಇದಕ್ಕೆಲ್ಲಾ ನಿನ್ನ ವಿವೇಕವೇ ಕಾರಣ! ಇವಳ ಸಮಸ್ಯೆಗೆ ಪರಿಹಾರವೇ ಇಲ್ಲವೇ? ಎಂದು ನೀನು ಪ್ರಶ್ನಿಸಿದೆ, ನೆನೆಪಿದೆಯಾ? ಆಗ ನನ್ನಲ್ಲಿ ಉತ್ತರವಿರಲಿಲ್ಲ. ಆ ಪ್ರಶ್ನೆ ಎದೆಯಾಳಕ್ಕೆ ಹೊಕ್ಕು ಪ್ರತಿಘಳಿಗೆಯೂ ಕಾಡತೊಡಗಿತು. ಮೈ-ಮನ ಹತ್ತಿಕೊಂಡು ಉರಿಯುತಿತ್ತು. ಏನು ಮಾಡಬೇಕೆಂದು ದಿಕ್ಕೇ ತೋಚಲಿಲ್ಲ. ಬಹಳ ಹೊತ್ತು ಯೋಚಿಸಿದೆ. ಹಲವು ವರ್ಷಗಳಿಂದ ಎದೆಗೂಡಲ್ಲೇ ಬಚ್ಚಿಟ್ಟುಕೊಂಡಿದ್ದ ಮಾತುಗಳನ್ನ ಸಲ್ಮಾಳ ಎದುರು ಬಿಚ್ಚಿಡಬೇಕೆನಿಸಿತು. ಯಾವುದು ಏನೇ ಆಗಲಿ ಸಲ್ಮಾಳನ್ನೇ ಮದುವೆ ಯಾಗುವುದಾಗಿ ನಿರ್ಧರಿಸಿ ಅವಳ ಮನೆಯ ಕಡೆಗೆ ನಡೆದೆ. ಮನೆಯ ಮುಂದೆ ಬಹಳ ಜನ ಗುಂಪು ಸೇರಿದ್ದರು. ಒಂದು ಪೊಲೀಸರ ಜೀಪೂ ಸಹ ನಿಂತಿತ್ತು….. ಅಂದು ಸಂಜೆ ಮತ್ತೆ ದೊಡ್ಡ ಗಲಾಟೆಯೇ ನಡೀತಂತೆ. ಹಾಜೀರ ತನ್ನ ಮಗನಿಗೆ ಏನು ಹೇಳಿ ಹುರಿದುಂಬಿಸಿದ್ದಳೋ ಏನೋ ಅವನು ಕೋಪಾವೇಶದಿಂದ ಬಂದು ಗುಲಾಬಕ್ಕನ ಕತ್ತು ಕತ್ತರಿಸಿಬಿಟ್ಟನಂತೆ!….. ಪೊಲೀಸರು ಅವನನ್ನ ಮತ್ತು ಹಾಜೀರಳನ್ನ ಅರೆಸ್ಟ್ ಮಾಡಿದ್ದರು. ಆ ನಾಲಾಯಕ್ ದಿಲ್‍ದಾರ್ ಎಲ್ಲಿ ಓಡಿಹೋದನೋ ಯಾರಿಗೂ ಗೊತ್ತಿಲ್ಲವಂತೆ………. ಬೀದಿಪಾಲಾದ ಇವರನ್ನ ಕೊಳೆತ ಈ ಕೆಟ್ಟ ಸಮಾಜ ಹೊಂಚುಹಾಕಲು ಪ್ರಯತ್ನಿಸುತ್ತಿತ್ತು. ನಾನು ಧೈರ್ಯ ಮಾಡಿಕೊಂಡು ಸಲ್ಮಾಳ ಬಳಿ ಹೋಗಿ ನನ್ನ ಭಾವನೆಗಳನ್ನ ಹೇಳಿಕೊಂಡೆ. ಅದಕ್ಕೆ ಅವಳಿಗೂ ಸಹ ಒಪ್ಪಿಗೆ ಇತ್ತು……..

ಆ ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸಿದ್ದೀನಿ. ಸಲ್ಮಾಗೆ ಈಗ ಹದಿನಾರಲ್ಲ ಹತ್ತೊಂಬತ್ತು! ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾದೆ. ಆ ಪುಟ್ಟ ಮಗುನೇ ಈಗ ನಮ್ಮ ಮಗು. ಆ ಒಂದೇ ಮಗು ಸಾಕು ಅಂತ ನಿರ್ಧರಿಸಿದ್ದೀವಿ……. ಆ ಹೇಳೋದೇ ಮರೆತೆ. ಸಲ್ಮಾ ಎಸ್ಸೆಸೆಲ್ಸಿ ಪಾಸಾಗಿದ್ದಾಳೆ. ಕಾಲೇಜಿಗೂ ಕಳುಹಿಸ್ತಿದ್ದಿನಿ…..” ಎಂದು ಸಂತೋಷದಿಂದ ಹೇಳಿದ.

ನನಗೋ ಹೇಳತೀರದ ಸಂತೋಷ ಸಡಗರ. ಒಂದು ವಾರ ಅವನ ಮನೆಯಲ್ಲೇ ಉಳಿದು ಊರಿಗೆ ಹೊರಡೋಣವೆಂದು ಬರುತ್ತಿದ್ದೆ. ದಾರಿಯಲ್ಲಿ ಆ ಸ್ಲಮ್ ಏರಿಯಾ ಮತ್ತೆ ಕಾಣಿಸಿತು. ಮತ್ತೆ ಕುತೂಹಲದಿಂದ ದೃಷ್ಟಿಹರಿಸಿ ಸೂಕ್ಷ್ಮವಾಗಿ ನೋಡಿದೆ. ಎದೆ ಧಗ್ಗೆಂದಿತು! ಸಲ್ಮಾಳಂತಹ ಹದಿನಾರರ ಹಲವಾರು ಹುಡುಗಿಯರು ಕಾಣಿಸಿಕೊಂಡರು. ನಿಟ್ಟುಸಿರು ಬಿಡುತ್ತ ಏರಿಯಾ ಒಳಕ್ಕೆ ಹೋದೆ. ಅದೇ ಸಂದಿಗೊಂದಿಯ ರಸ್ತೆ, ಅಡ್ಡದಿಡ್ಡವಾಗಿ ಬೆಳೆದಿದ್ದ ಚಿಕ್ಕ ಚಿಕ್ಕ ಜೋಪಡಿಗಳು, ಅಲ್ಲೇ ಹರಿಯುವ ಕೊಳಚೆ ನೀರು ಅಸಹ್ಯ ತರಿಸುತ್ತಿತ್ತು….. ಇಲ್ಲಿ ಬದುಕುವ ಜನರ ಬದುಕು?…… ರಿಯಾಜ್ ಹೇಳುತಿದ್ದ ಹಾಗೆ ಬಹುಪಾಲು ಹುಡುಗರು ಹುಡುಗಿಯರು ತಮ್ಮ ಜೀವನ ಜಂಜಾಟದಲ್ಲಿ ತೊಳಲಾಡುತ್ತಿದ್ದರು. ಅಕ್ಷರ ಜ್ಞಾನವಿಲ್ಲದ ಮಕ್ಕಳ ದಂಡು ದಂಡೇ ಮೆರೆದಿತ್ತು. ಈ ಮೊದಲೇ ಇಂಥ ಹಲವಾರು ದುಃಸ್ಥಿತಿಯನ್ನ ಕಂಡ ಅನುಭವ ಕಾಡಹತ್ತಿತು. ರಿಯಾಜ್ ಹೇಳಿದ ಒಂದೊಂದು ಮಾತು ಸಹ ಕಣ್ಣ ಮುಂದೆ ಚಿತ್ರ ಕಟ್ಟುತ್ತಿತ್ತು. ಸಲ್ಮಾಳ ಒಂದು ಬಾಳು ಮಾತ್ರ ಹಸನಾಯಿತು. ಆದರೆ ಇವಳಂತಹ ಹದಿನಾರರ ಹುಡುಗಿಯರ ಸಂಖ್ಯೆ ಅದೆಷ್ಟಿದೆಯೋ?….. ಇನ್ನು ಬೇರೆ ಬೇರೆ ಸಮಸ್ಯೆಗಳಿಂದ ಬಳಲುತ್ತಿರುವ ಜೀವಗಳು ಎಷ್ಟಿವೆಯೋ?…. ಇವರ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ?…. ನನ್ನೊಳಗೆ ನಾನೇ ಪ್ರಶ್ನೆಗಳನ್ನ ಹಾಕಿಕೊಂಡು ಸ್ತಬ್ಧನಾಗಿ ನಿಂತುಬಿಟ್ಟೆ!…………

ಕಾ. ಹು. ಚಾನ್‍ಪಾಷ
ನಾನು ಕತೆಗಳನ್ನೇಕೆ ಬರೆದೆ? ಈ ಕತೆಗಳನ್ನೇ ಏಕೆ ಬರೆದೆ? ಎಂದು ಒಮ್ಮೊಮ್ಮೆ ಪ್ರಶ್ನಿಸಿಕೊಂಡಾಗ ಮನ ಮೂಕವಾಗಿಬಿಡುತ್ತದೆ. ನಾನು ಕಂಡ-ಕೇಳಿದ ಕೆಲವು ಘಟನೆಗಳು ನನ್ನನ್ನು ಬಹಳವಾಗಿ ಕಾಡುತ್ತಿದ್ದವು. ಅದೇಕೊ ನನ್ನಲ್ಲಿ ಹುಟ್ಟಿದ ಪ್ರಶ್ನೆಗಳಿಗೆ ಉತ್ತರ ಹುಡುಕದೆ ಸುಮ್ಮನೆ ಕೂರಲು ಆಗಲಿಲ್ಲ; ಅವು ಹಾಗೆ ಕೂರಲು ಬಿಡಲೂ ಇಲ್ಲ. ಅವುಗಳ ಬೆನ್ನುಹತ್ತಿ ಹೊರಟ ಫಲವಾಗಿ ಅವು ಕತೆಗಳಾಗಿ ರೂಪ ತಳೆದವು. ಬಹುಶಃ ಅವುಗಳಿಗೆ ಕಥಾನಕವೇ ಸೂಕ್ತ ಎನಿಸಿರಬಹುದೆನೋ? ನಾನು ಬರೆದ ಕತೆಗಳಲ್ಲಿ ನನ್ನ ಮೆಚ್ಚಿನ ಕತೆ ‘ಅವಳಿಗಿನ್ನೂ ಹದಿನಾರು’ ಎಂಬ ಕತೆ. ನನ್ನನ್ನು ಬಹಳವಾಗಿ ಕಾಡಿದ ಕಾಡುತ್ತಿರುವ ಕತೆ.
‘ಅವಳಿಗಿನ್ನೂ ಹದಿನಾರು’ ಈ ಕತೆಯಲ್ಲಿನ ‘ಗುಲಾಬ್’ ಮತ್ತು ‘ಸಲ್ಮಾ’ ಜೀವಂತ ಪಾತ್ರಗಳು. ಗುಲಾಬ್ ನನ್ನ ತಾಯಿಯ ಬಾಲ್ಯ ಗೆಳತಿ. ಹನ್ನೆರಡು ಮಕ್ಕಳ ತಾಯಿ. ಒಮ್ಮೆ ಅಜ್ಜಿಯ ಊರಿಗೆ ಹೋಗಿದ್ದಾಗ ಅಮ್ಮನೊಂದಿಗೆ ನಾನು ಗುಲಾಬ್ ಅವರ ಮನೆಗೆ ಹೋದೆ. ಬಾಣಂತಿಯಾಗಿದ್ದ ಆಕೆ ತನ್ನ ಮಗುವಿಗೆ ಕಟ್ಟಿದ ಜೋಳಿಗೆಯ ಪಕ್ಕದಲ್ಲೇ ಅವಳ ಮಗಳೂ ಸಹ ತನ್ನ ಮಗುವಿಗೆ ಜೋಳಿಗೆ ಕಟ್ಟಿ ತೂಗುತ್ತಿದ್ದಳು. ಅವಳು ನನಗಿಂತ ಕಿರಿಯವಳು. ಜೋಪಡಿಯಂತಹ ಆ ಚಿಕ್ಕ ಮನೆಯಲ್ಲಿ ಈ ತಾಯಿ-ಮಗಳು ಪಕ್ಕ ಪಕ್ಕದಲ್ಲಿ ಜೋಳಿಗೆ ಕಟ್ಟಿ ತಮ್ಮ ಮಕ್ಕಳನ್ನು ತೂಗುತ್ತಿದ್ದದನ್ನು ಕಂಡು ಎದೆ ಚುರುಕ್ ಎಂದಿತು. ಕೆಲವು ದಿನಗಳ ನಂತರ ಇದು ಕತೆಯಾಗಿ ರೂಪತಾಳಿತು. ಶಿಕ್ಷಣದಿಂದ ವಂಚಿತ ಮುಸ್ಲಿಂ ಹೆಣ್ಣು ಮಕ್ಕಳು ಹದಿನಾರನೇ ವಯಸ್ಸಿಗೆ ಮಕ್ಕಳನ್ನು ಹೆರುವ ಯಂತ್ರಗಳಾಗಿ ಇಂದಿಗೂ ಬದುಕು ನೂಕುತ್ತಿದ್ದಾರೆ. ತಂದೆ ತಾಯಿ, ಪೋಷಕರು ವಿದ್ಯಾಭ್ಯಾಸವಿಲ್ಲದೆ ಬಡತನ, ಅಜ್ಞಾನಗಳಿಂದ ಧರ್ಮದ ಚೌಕಟ್ಟಿನಲ್ಲಿ ಬದುಕುತ್ತಿದ್ದಾರೆ. ಸಲ್ಮಾಳ ಬದುಕು ಹಸನಾದಂತೆ ಎಲ್ಲಾ ಹೆಣ್ಣು ಮಕ್ಕಳ ಬದುಕು ಹಸನಾಗಲಿ.