ಪಿಯುಸಿಯಲ್ಲಿ ಇಮಾಂಸಾಬಿಯ ರೂಮಿನಲ್ಲಿ ಅದ್ಹೇಗೋ ಹೊಂದಿಸಿಕೊಂಡು ನಿಯರ್ ಫಸ್ಟ್‌ಕ್ಲಾಸ್‌ನಲ್ಲಿ ಪಾಸೇನೋ ಆದೆ. ಆದರೆ ಅವನು ಫೇಲಾದ ಹೊಟ್ಟೆಕಿಚ್ಚಿಗೆ ನನ್ನ ಪಾಲಿಗೆ ರೂಮಿನ ಬಾಗಿಲು ಮುಚ್ಚಿಕೊಂಡಿತು. ನಿತ್ಯ ಮನೆಯಲ್ಲಿ ಅಪ್ಪನ ಮತ್ತಿನ ಬಡಬಡಿಕೆಗಳು, ಅದಕ್ಕೆ ಪ್ರತಿಯಾಗಿ ಅಮ್ಮನ ಬೈಗುಳಗಳು ನನ್ನನ್ನು ಚಿತ್ರಹಿಂಸೆಗೆ ಈಡು ಮಾಡಿದವು. ಎದುರಿಗೆ ಕಲ್ಲುಗೋಡೆಯಂತೆ ಇಂಜಿನಿಯರಿಂಗ್. ಇಷ್ಟೆಲ್ಲದರ ನಡುವೆ ಸೋತು ಸುಣ್ಣಾಗಿ ಹೋಗಿದ್ದವನಿಗೆ ಕಾಲೇಜಿನಲ್ಲಿ ಸುರೇಶ್ ಪರಿಚಯವಾದ. ಚಿಂತೆಗಳಿಗೆ ಪರಿಹಾರ ಇದೇ ಎಂದು ಗುಟಖಾ ತಿನ್ನಿಸಿದ, ಸಿಗರೇಟ್ ಸೇದಿಸಿದ.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಚಿದಾನಂದ ಸಾಲಿ ಬರೆದ ಕತೆ ‘ಕೊಟ್ಟ ಕುದುರೆಯನೇರಲರಿಯದೆ’ ನಿಮ್ಮ ಈ ಭಾನುವಾರದ ಓದಿಗೆ
ಕೊಟ್ಟಕುದುರೆಯನೇರಲರಿಯದೆ
ಮತ್ತೊಂದು ಕುದುರೆಯ ಬಯಸುವವ
ವೀರನೂ ಅಲ್ಲ, ಧೀರನೂ ಅಲ್ಲ
ಇದು ಕಾರಣ ನೆರೆಮೂರು ಲೋಕ
ಹಲ್ಲಣವ ಹೊತ್ತು ಬಳಲುತ್ತೈದಾರೆ
ಗುಹೇಶ್ವರಲಿಂಗವನವರೆತ್ತ ಬಲ್ಲರು?
-ಅಲ್ಲಮಪ್ರಭು
1
ಸಿಗರೇಟು ಬೆರಳ ಸುಟ್ಟಿತು.
`ಆಹ್..’ ಅದನ್ನು ಬಿಸಾಡಿ ಕೈ ಜಾಡಿಸಿಕೊಂಡೆ. ಎಷ್ಟು ಬೇಗ ಮುಗಿಯಿತಲ್ಲ ಅನಿಸಿತು. ಅದಾದರೂ ಏನು ಮಾಡೀತು ಪಾಪ? ಕೇವಲ ಒಂದೂವರೆ ರೂಪಾಯಿಯದು. ಕೋಟಿಗೂ ಮಿಕ್ಕಿದ ಬೆಲೆಯ ದೇಹಗಳು ಚಿಂತೆಯಲ್ಲಿ ಸುಟ್ಟು ಬೂದಿಯಾಗುತ್ತಿರುವಾಗ, ಹೊಟ್ಟೆಗಿಲ್ಲದೆ ಒದ್ದೆ ಬಟ್ಟೆ ಹೊದ್ದುಕೊಂಡು ಅಂಗಾತ ಮಲಗಿ ನಕ್ಷತ್ರಗಳ ಎಣಿಸುತ್ತಿರುವಾಗ, ಹಸಿವು ತಾಳಲಾಗದ ಹಸುಗೂಸುಗಳಿಗೆ ತಾಯಂದಿರು ಅಫೀಮು ತಿನ್ನಿಸಿ ಮಲಗಿಸುತ್ತಿರುವಾಗ..
ಅಫೀಮೆಂದರೆ ನೆನಪಾಯ್ತು- `ಅಪ್ಪ ಈಗ ಎಲ್ಲಿರಬಹುದು?’
`ಛೇ. ಅಪ್ಪನ ಬಗ್ಗೆ ಯೋಚಿಸುವುದಾದರೂ ಏಕೆ? ರಾಕ್ಷಸ!’
`ಎಲ್ಲಾದರೂ ಉಂಟೆ? ಅಪ್ಪ ಎಷ್ಟಾದರೂ ನನ್ನ ಹುಟ್ಟಿಸಿದವನಲ್ಲವೆ?’
`ಹುಟ್ಟಿಸಿದ್ದರೆ ಹುಟ್ಟಿಸಿದ್ದಾನು. ಮುಂದೆ ಮಗ ತನ್ನ ಪಾಲಿಗೆ ಸುಖದ ವೃಕ್ಷವಾಗಿಯೇ ಆಗುತ್ತಾನೆ ಎಂದುಕೊಂಡೇನಲ್ಲವಲ್ಲ?! ತನ್ನ ತೀಟೆಗೆ ತಾನು, ಸುಖದ ಫಲ ನಾನು. ಈ ಹೊತ್ತಿಗೆ ಯಾವ ಬಾರಿನಲ್ಲಿ ಬಿದ್ದು ಮುಲುಗುತ್ತಿರುವನೊ..’
ಆಮೆ ನಡೆಯುವಷ್ಟು ಮೆಲ್ಲಗೆ ಹರಿಯುತ್ತ, ಮಿರಿಮಿರಿ ಮಿನುಗುವ ಎರಡು ಕೈಗಳುಷ್ಟದ್ದದ ಹಾವು ರಸ್ತೆಗಡ್ಡವಾಗಿ ತೆವಳಿಕೊಂಡು ಹೋಯಿತು. ಯಾವ ಜಾತಿಯದೊ? ನಾಗಣ್ಣ ಇದ್ದರೆ ಅದರ ಜಾತಿ ಜಾತಕ ಎಲ್ಲ ಹೇಳಿಬಿಡುತ್ತಿದ್ದ. ಅಪ್ಪನ ಬಗೆಗಿನ ಯೋಚನೆಯಲ್ಲಿ ಮುಳುಗೇಳುತ್ತ ನಿದ್ದೆಯಲ್ಲೆಂಬಂತೆ ನಡೆಯುತ್ತಿರುವ ನನಗೆ, ಅದನ್ನು ಕಂಡದ್ದೇ ಪುಕುಪುಕು ಶುರುವಾಯ್ತು. ಅಮ್ಮ ನೆನಪಾದಳು.
ಮೈಮಾರಿಕೊಂಡು ನಮ್ಮನ್ನು ಸಲಹಬೇಕಾದ ಅವಳ ಸ್ಥಿತಿ ನೆನಪಾಯಿತು. ನನಗೆ ಇದರ ಬಗ್ಗೆ ಯೋಚಿಸಿದಾಗಲೆಲ್ಲ ನಾಚಿಕೆಯಾಗಿ ತಲೆತಗ್ಗಿಸುವಂತಾಗುತ್ತೆ. ಆಗೀಗ ನಾನು ಆ ಕುರಿತು ಗುಂಯ್ ಗುಂಯ್ ಮಾಡಿದಾಗ ಅಮ್ಮ ಹೇಳುವುದು ಒಂದೇ ಮಾತು: “ಮನೆ ಸಂಸಾರ ಯಾರ್ ನಡಸ್ತಾರಲೇ ಮಾನಿಗೇಡಿ. ನಿಮ್ಮಪ್ಪಂಬೋನು ಕುಡ್ದು ಹಾಳ್ಮಾಡ್ತಾನ, ನೀನು ಓದಿ ಹಾಳ್ಮಾಡ್ತೀದಿ. ಯಾರ್ ನಿಮ್ತಾತ ದುಡಿತಾನಾ?”. ಅಮ್ಮನ ಈ ಮಾತಿಗೆ ಮತ್ತು ಅಮ್ಮನ ಬಗ್ಗೆ ಇಮಾಂಸಾಬಿ ಇನ್‍ಡೈರೆಕ್ಟ್ ಆಗಿ ಆಡುವ ಕೊನೆ ಮೊದಲಿರದ ಗೇಲಿಮಾತುಗಳಿಗೆ ಎದುರಾಡಲು ನನ್ನಲ್ಲಿ ಶಕ್ತಿಯಿಲ್ಲ. ನನ್ನ ಅಸಹಾಯಕತೆ ನೆನಪಾದಾಗಲೆಲ್ಲ ನನ್ನ ಬಗ್ಗೆ ನನಗೆ ಹೇಸಿಗೆಯಾಗುತ್ತದೆ.
ನಾನೇ ಸರಿಯಿಲ್ಲ. ಸರಿಯಾಗಿ ಓದಬೇಕಿತ್ತು ನಾನು. ಅಮ್ಮ ದುಡಿದುಡಿದು ಬೆಂಡಾಗಿ ನನಗೆ ದುಡ್ಡು ಕೊಡುತ್ತಲೇ ಬಂದಳು. ನಾನೂ ಅಷ್ಟೇ ಪ್ರಾಮಾಣಿಕವಾಗಿ ವರ್ಷಕ್ಕೆ ಕನಿಷ್ಟ ಒಂದಾದರೂ ಸಬ್ಜೆಕ್ಟ್ ಬಾಕಿ ಉಳಿಸುತ್ತಲೇ ಬಂದೆ. ನಾನು ಪ್ರತಿ ಸಾರಿ ಫೇಲಾದಾಗ, ಓಣಿಯವರೊಂದಿಗೆ ಜಗಳ ಮಾಡುವಾಗಿನಷ್ಟು ಬಾಯಿ ಮಾಡುತ್ತ ಅಮ್ಮ ನನ್ನನ್ನು ಬೈದೇ ಬೈದಳು. ಅದು ಅವಳ ಕರ್ತವ್ಯವೋ, ಕರ್ಮವೋ ನನಗಿನ್ನೂ ದ್ವಂದ್ವ ಪರಿಹಾರವಾಗಿಲ್ಲ.
ತಂಪಾದ ಗಾಳಿ.
ಹಾಯೆನಿಸುವ, ಹಾಗೇ ಮಲಗಿಬಿಡೋಣ ಎನಿಸುವಂಥ ತಂಪಾದ ಗಾಳಿ. ತಿರುಗಿ ನೋಡಿದರೆ ಮಾವಿನಕೆರೆ. ಕೆರೆಯ ತುಂಬಾ ಆಟವಾಡಿಕೊಳ್ಳುತ್ತಿರುವ ತೆರೆಗಳು. ದಂಡೆ ಮೇಲೆ ನಾನು. ಮೇಲೆ ನಕ್ಷತ್ರಗಳ ಸಂತೆಯಿರಬೇಕು. ದೂರದಲ್ಲಿ ಆಕಾಶವಾಣಿಯ ಟವರ್, ಮೇಲೆ ಕೆಂಪು ದೀಪ. `ಕೆಂಪು ದೀಪ’ ಎಂದರೆ ಅಮ್ಮನ ವೃತ್ತಿಗೆ ಸಂಬಂಧಿಸಿದ ಪದವೂ ಆಗುತ್ತದೆ. ನನಗೆ ನಿಲ್ಲು ಎಂದು ಮುನ್ಸೂಚನೆ ಕೊಡುತ್ತಿರುವ ಸಂಚಾರಿ ಸಂಕೇತವೂ ಆಗುತ್ತದೆ. ಆಹಾ! ಅರ್ಥೈಸಿಕೊಂಡಷ್ಟು ಅರ್ಥಗಳು.
ಇಲ್ಲಿಂದ ಜೋರಾಗಿ ಕಾಲು ಹಾಕಿದರೆ ಇಪ್ಪತ್ತು ನಿಮಿಷದ ಹಾದಿ. ವೆಸ್ಟ್ ಪೋಲಿಸ್ ಸ್ಟೇಷನ್ ಹತ್ತಿರದ ತಿರುವು ದಾಟಿ, ಉಮಾ ಹೋಟೆಲ್ ಮುಂದಿನಿಂದ ಸಾಗಿ ವಿಮೆನ್ಸ್ ಕಾಲೇಜ್(4.30ಕ್ಕಾದರೂ ಬಂದಿದ್ದರೆ ಸುಜ್ಜಿ ಎದುರಾಗುತ್ತಿದ್ದಳು) ದಾಟಿದರೆ ಸ್ಟೇಷನ್ ಸರ್ಕಲ್, ತುಸು ದೂರ ಒಳಕ್ಕೆ ಹೋದರೆ ಸ್ಟೇಷನ್ನು. ಅಲ್ಲಿ ಪ್ಲಾಟ್‍ಫಾರಮ್ಮು; ಸದಾ ಮಲಗಿರುವ ಹಳಿ; ಆಗಾಗ ಬರುವ ರೈಲು; ಅದರ ಒಳಗಿಂದ ಹೊರಬರುವ, ಹೊರಗಿಂದ ಅದರ ಒಳನುಸುಳುವ ಜನರು; ಅದು ಸಾಗಿದ ನಂತರ ಅವರೆಸೆದ ಪ್ಲಾಸ್ಟಿಕ್ ವಸ್ತುಗಳಿಗಾಗಿ ರೈಲುಮಡಿಲ ಮಕ್ಕಳ ತರಾತುರಿಯ ಓಡಾಟ, ಕಿತ್ತಾಟ; ಸಿಕ್ಕವನ ಮುಖದಲ್ಲಿ ಜಗತ್ತನ್ನೇ ಗೆದ್ದ ಸಂಭ್ರಮ!
ಆದರೆ ರೈಲು ಸಾಗುವವರೆಗಿನದು ಮಾತ್ರ ನಾ ಕಾಣಬಲ್ಲದ್ದು. ನಂತರದ ಸಂಗತಿ ನೋಡಲು ನಾನೆಲ್ಲಿರುತ್ತೇನೆ? ನಾನೇ ಇಲ್ಲವಾಗುವ ಪ್ರಸಂಗ ತಂದೊಡ್ಡಿದ ಘಟನೆಗಳೆಲ್ಲ ನೆನಪಾಗುತ್ತವೆ..
2
ಅದು ನಾನು ಪಿಯುಸಿಯಲ್ಲಿ ನಿಯರ್ ಫಸ್ಟ್‌ಕ್ಲಾಸ್ ಬಂದ ವಿಷಯ. ಸೆಕೆಂಡ್ ಕ್ಲಾಸ್ ಎನ್ನುವ ಬದಲು ಹಾಗೆನ್ನಬೇಕೆಂದು ಅಪ್ಪ ಹೇಳಿದಾಗಿನಿಂದ ನಾನು ನನ್ನ ಫಲಿತಾಂಶವನ್ನು ಎಲ್ಲರೊಂದಿಗೆ ಹೇಳಿಕೊಂಡಿದ್ದೇ ಹಾಗೆ. ಫಸ್ಟ್ ಕ್ಲಾಸ್ ಎಂಬ ಶಬ್ದ ಉಚ್ಚರಿಸುತ್ತ ನನ್ನಲ್ಲೇ ನಾನು ಪುಳಕಗೊಳ್ಳುತ್ತಿದ್ದೆ. ಸರೀಕರಿಗೆ ಹಿರಿಮಗನಾದ ನನ್ನನ್ನು ಪರಿಚಯಿಸುತ್ತ ಪಿಯುಸಿಯಲ್ಲಿ ನಿಯರ್ ಫಸ್ಟ್‌ಕ್ಲಾಸ್ ಎಂದು ಹೇಳಿ ಬೀಗುತ್ತಿದ್ದ. ಅವನ ಕಣ್ಣುಗಳು- ಭರ್ಜರಿ ಬೇಟೆ ಸಿಗುವುದು ಖಾತ್ರಿಯಾದ ಹಸಿದ ಹೆಬ್ಬುಲಿಯೊಂದರ ಕಂಗಳಂತೆ- ಖುಷಿಯಲ್ಲಿ ಹೊಳೆಯುತ್ತಿದ್ದವು.
ಆನಂತರ ಮೀಸಲಾತಿಯಿಂದಾಗಿ ನನಗೆ ಇಂಜಿನಿಯರಿಂಗ್ ಸೀಟು ದೊರೆತಾಗಲಂತೂ ಅವನು ಹಗಲೇ ಕುಡಿದು ಗಾಳಿಯಲ್ಲಿ ತೇಲುತ್ತಿದ್ದ. ಅಮ್ಮ ಗಿರಾಕಿಗಳ ತೆಕ್ಕೆಯಲ್ಲಿ ನಮ್ಮ ಬದುಕನ್ನೇ ಒತ್ತೆಯಿಟ್ಟು ಅಳುತ್ತಳುತ್ತಲೇ ಖುಷಿಪಟ್ಟಳು. ಅವಳ ಅಳು ಮತ್ತು ಆಸೆಗಳು ಜಗತ್ತಿಗೆಂದೂ ಗೊತ್ತಾಗುವುದಿಲ್ಲ. ಗೊತ್ತಾಗುವುದು ಕೇವಲ ಅವಳ ವೃತ್ತಿ. ಕೇಳಿಸುವುದು ಜಗಳದಲ್ಲಿ ಅವಳು ಬಳಸುವ ಹೊಲಸಾತಿ ಹೊಲಸು ಶಬ್ದಗಳು. ಆದರೆ ಅವಳ ಆಸೆ ನನಗೆ ಗೊತ್ತಾಗಿತ್ತು ಎಂದಿಗಾದರೂ ನಾನು ಇಂಜಿನಿಯರನಾಗಿ ದೂರದ ಊರಲ್ಲಿ ಅವಳಿಗೊಂದು ಘನತೆಯ ಬಾಳು ಬಾಳಿಸುವ ಕನಸೊಂದು ಅವಳಲ್ಲಿ ಚಿಗುರಿದೆಯೆಂದು.
ಪಿಯುಸಿಯಲ್ಲಿ ಇಮಾಂಸಾಬಿಯ ರೂಮಿನಲ್ಲಿ ಅದ್ಹೇಗೋ ಹೊಂದಿಸಿಕೊಂಡು ನಿಯರ್ ಫಸ್ಟ್‌ಕ್ಲಾಸ್‌ನಲ್ಲಿ ಪಾಸೇನೋ ಆದೆ. ಆದರೆ ಅವನು ಫೇಲಾದ ಹೊಟ್ಟೆಕಿಚ್ಚಿಗೆ ನನ್ನ ಪಾಲಿಗೆ ರೂಮಿನ ಬಾಗಿಲು ಮುಚ್ಚಿಕೊಂಡಿತು. ನಿತ್ಯ ಮನೆಯಲ್ಲಿ ಅಪ್ಪನ ಮತ್ತಿನ ಬಡಬಡಿಕೆಗಳು, ಅದಕ್ಕೆ ಪ್ರತಿಯಾಗಿ ಅಮ್ಮನ ಬೈಗುಳಗಳು ನನ್ನನ್ನು ಚಿತ್ರಹಿಂಸೆಗೆ ಈಡು ಮಾಡಿದವು. ಎದುರಿಗೆ ಕಲ್ಲುಗೋಡೆಯಂತೆ ಇಂಜಿನಿಯರಿಂಗ್. ಇಷ್ಟೆಲ್ಲದರ ನಡುವೆ ಸೋತು ಸುಣ್ಣಾಗಿ ಹೋಗಿದ್ದವನಿಗೆ ಕಾಲೇಜಿನಲ್ಲಿ ಸುರೇಶ್ ಪರಿಚಯವಾದ. ಚಿಂತೆಗಳಿಗೆ ಪರಿಹಾರ ಇದೇ ಎಂದು ಗುಟಖಾ ತಿನ್ನಿಸಿದ, ಸಿಗರೇಟ್ ಸೇದಿಸಿದ. ದಿನಕ್ಕಿಷ್ಟು ಇವೇ ಬೆಳೆದು ವರ್ಷಕ್ಕಿಷ್ಟು ವಿಷಯಗಳು ಉಳಿಯುತ್ತಲೇ ಬಂದವು. ಐದು ವರ್ಷದ ಇಂಜಿನಿಯರಿಂಗ್ ಈಗ ಏಳನೇ ವರ್ಷಕ್ಕೆ ಕಾಲಿಟ್ಟಿದೆ. ಈ ಪ್ರವಾಹದಲ್ಲಿ ಬ್ಯಾಕ್‌ಲಾಗ್‌ಗಳು ಕಾಲಿಗೆ ಕಟ್ಟಿದ ಗುಂಡಿನಂತೆ ನನ್ನನ್ನು ಒಳಗೆಳೆಯುತ್ತಿವೆ.
ಈಗ ಅಪ್ಪ ತನ್ನ ಗೆಳೆಯರಿಗೆ ನನ್ನ ಪರಿಚಯಿಸುವುದನ್ನು ಬಿಟ್ಟು ವರ್ಷಗಳೇ ಆಗಿವೆ.
3
`ವರ್ಷಗಳಿಂದ ನಡೆಯುತ್ತಲೇ ಇದ್ದೇನೆ’ ಎಂಬ ಭಾವ ಮೂಡುವ ಹೊತ್ತಿಗೆ ಅಂತೂ ಸ್ಟೇಷನ್ನು ನನ್ನ ಮುಂದೆ ಬಂದು ನಿಂತಾಗಿತ್ತು.
ಟಿಕೆಟಿಗಾಗಿ ಸರದಿ ನಿಂತ ಪ್ರಯಾಣಿಕರು; ಗಿರಾಕಿಗಳಿಗಾಗಿ ಕಾದು ನಿಂತಿರುವ ಟಾಂಗಾ, ರಿಕ್ಷಾ, ಆಟೋಗಳು; ಒಳಗೆ ಬ್ರೆಡ್ಡು, ಆಮ್ಲೆಟ್, ಚಹಾ ಇತ್ಯಾದಿಗಳನ್ನು ತಯಾರು ಮಾಡಿಕೊಳ್ಳುತ್ತಿರುವ ವ್ಯಾಪಾರಿಗಳು.. ಇಡೀ ಪ್ಲಾಟ್‌ಫಾರಂ- ಅದೇ ತಾನೆ ಮೈ ಕೊಡವಿಕೊಂಡು ನಿದ್ದೆಯಿಂದೇಳುವ ಮಗು ಕಣ್ಣುಜ್ಜಿಕೊಳ್ಳುತ್ತ ರಂಪ ಮಾಡುವಂತೆ- ಗಜಿಬಿಜಿ ಗದ್ದಲದಿಂದ ತುಂಬಿಹೋಯ್ತು. ಎಂದಿಗಿಂತಲೂ ಈ ವಾತಾವರಣ ಸುಂದರವಾಗಿಯೂ, ನೋಡುತ್ತಲೇ ಇರಬೇಕೆನ್ನುವಂತೆಯೂ ಕಾಣಿಸತೊಡಗಿತು.
ಬಂದ ಕೆಲಸ ನೆನಪು ಮಾಡಿಕೊಂಡು ಮನಸ್ಸು, ಬುದ್ಧಿಗಳನ್ನು ಶಕ್ತಿ ಮೀರಿ ಹತೋಟಿಗೆ ತಂದುಕೊಂಡು ಸಜ್ಜು ಮಾಡಿಕೊಂಡೆ. `ಇನ್ನಾದರೂ ಸಾಯಬೇಕು’ ಎಂಬ ಯಾರದೋ ಕವಿತೆಯ ಸಾಲು ನೆನಪಾಗಿ ಪೂರ್ವಯೋಜಿತ ಯೋಜನೆಯ ಬೆಂಕಿಗೆ ತುಪ್ಪ ಹಾಕಿ ಮತ್ತಷ್ಟು ಉರಿ ಹೆಚ್ಚಿಸಿದವು. ಯೋಚಿಸಿದೆ: `ಇಷ್ಟೊಂದು ಗದ್ದಲವಿದೆ. ಕೂಲಿಗಳಿಗಾಗಿ ಪ್ರಯಾಣಿಕರು, ಪ್ರಯಾಣಿಕರ ಹಿಂದೆ ಪಿಕ್‌ಪಾಕೆಟಿನವರು, ಪಿಕ್‌ಪಾಕೇಟಿನವರ ಹಿಂದೆ ಪೋಲಿಸರು, ಅವರ ಕಣ್ತಪ್ಪಿಸಿ ಸರಭರ ಓಡಾಡುತ್ತಿರುವ ಪುಡಿ ವ್ಯಾಪಾರಿಗಳು.. ಇವರೆಲ್ಲ ನನ್ನನ್ನು ಹಾಗೇ ಬಿಡಲಾರರು. ಕೆಲಸ ಕೆಡುತ್ತದೆ. ಮುಂದಿನ ಟ್ರೇನಿಗಾದರೆ ಸರಿಯಾದೀತು. ಮಧ್ಯರಾತ್ರಿ ಆಗಿರುವುದರಿಂದ ರಶ್ಶೂ ಕಡಿಮೆಯಿರುತ್ತದೆ. ಆಗ ಯಾರೂ ಅಡ್ಡಿ ಬರಲಿಕ್ಕಿಲ್ಲ’.
ಹನ್ನೆರಡು ಹತ್ತಕ್ಕೆ ನಂತರದ ರೈಲು. ಅದೇ ಸರಿ. ಆಗ ಯಾರೂ ಅಡ್ಡಿ…. ಅಡ್ಡಿಯಾಗುವ ಮಾತು ನೆನಪಾದರೆ ನನ್ನನ್ನು ಇಲ್ಲಿವರೆಗೆ ಬರುವಂತೆ ಮಾಡಿದ ಅಮ್ಮನ ಬಾಯಿ ಹರುಕತನ ಮತ್ತು ಆ ಕಹಿ ಘಟನೆಗಳು ನೆನಪಾಗುತ್ತವೆ..
..ಕಟ್ಟಿದ್ದ ನಾಲ್ಕು ಬ್ಯಾಕ್‌ಲಾಗ್ ಪರೀಕ್ಷೆಗಳಲ್ಲಿ ಒಂದರಲ್ಲಿ ಪಾಸಾಗಿದ್ದೆ- ಅದೂ ಕಟಾಕಟಿ ಅಂಕಗಳನ್ನು ಪಡೆದುಕೊಂಡು. ಯಾವತ್ತೂ ನನ್ನ ಆರ್ಥಿಕ ಮತ್ತು ಹಾರ್ದಿಕ ಮಿತ್ರನಾದ ಸುರೇಶ್ ಮೊಟ್ಟಮೊದಲ ಬಾರಿಗೆ ನನ್ನನ್ನು ಪಾರ್ಟಿ ಕೊಡುವಂತೆ ಕೇಳಿದ. ದೈನೇಸಿಯಾಗಿ ಅವನ ಮುಖ ನೋಡಿದ್ದಕ್ಕೆ `ಚಾ ಅಷ್ಟೇ ಕುಡಸಲೇ ಸಾಕು’ ಅಂದ. ನನ್ನ ಹತ್ತಿರ ಅದಕ್ಕೂ ದುಡ್ಡಿರಲಿಲ್ಲ. ಸಾಲದ್ದಕ್ಕೆ ಇಮಾಂಸಾಬ್ ಮತ್ತು ನರಸಿಂಹಲು ಕೂಡ ಅದೇ ಸಮಯಕ್ಕೆ ಬಂದು ಸೇರಿಕೊಂಡರು. ನಿರ್ವಾಹವಿಲ್ಲದೆ ಮನೆಗೆ ಹೊರಟೆವು. ತಂಗಿಗೆ ಚಾ ಮಾಡಲು ಹೇಳಿದರೆ ಕೈಸನ್ನೆ ಮಾಡಿ ಸಕ್ಕರೆ ಇಲ್ಲವೆಂದಳು. ದೇವರ ಪಟದ ಮುಂದೆ ಅಮ್ಮ ಪ್ರತಿ ಮಂಗಳವಾರ, ಶುಕ್ರವಾರ ಹಾಕುತ್ತಿದ್ದ ದುಡ್ಡನ್ನು ಎತ್ತಿಕೊಡುವುದಕ್ಕೂ ಅಮ್ಮ ನೋಡುವುದಕ್ಕೂ ಸರಿಹೋಯ್ತು.
ಬೈಗುಳಗಳ ಧಾರಾಕಾರ ಮಳೆ.
ಗೊತ್ತಲ್ಲ `ಅಮ್ಮನ ಬಾಯಿ ಓಣಿಯಷ್ಟೇ ದೊಡ್ಡದು!’
ನಾನು ಪ್ರತಿ ಸಾರಿ ಫೇಲಾದಾಗ, ಓಣಿಯವರೊಂದಿಗೆ ಜಗಳ ಮಾಡುವಾಗಿನಷ್ಟು ಬಾಯಿ ಮಾಡುತ್ತ ಅಮ್ಮ ನನ್ನನ್ನು ಬೈದೇ ಬೈದಳು. ಅದು ಅವಳ ಕರ್ತವ್ಯವೋ, ಕರ್ಮವೋ ನನಗಿನ್ನೂ ದ್ವಂದ್ವ ಪರಿಹಾರವಾಗಿಲ್ಲ.
ಹೊರಗೆ ಹುಡುಗರು ಹಾಡಿಕೊಳ್ಳುತ್ತಿದ್ದರು- `ಅಪ್ಪನ ರೊಕ್ಕ ಎಣಿಸಲಾರೆ, ಅಮ್ಮನ ಸೀರಿ ಮಡಚಲಾರೆ’. ಅಸಹಾಯಕನಾಗಿ ನುಡಿ ನುಂಗಿಕೊಂಡೆ- `ಅಮ್ಮನ ಬಾಯ ಮುಚ್ಚಲಾರೆ’.
ಆ ಬೈಗುಳಗಳಿಗೆ ಸುರೇಶ್ ತತ್ತರಿಸಿ ಹೋದ. ಅವಮಾನದಿಂದ ಕುಗ್ಗಿ ಕುಸಿದುಹೋದ.
ಅವನು ನನಗೆ ಕೊಡಿಸಿದ ಲೆಕ್ಕವಿಲ್ಲದಷ್ಟು ಸಿಗರೇಟುಗಳ ಮುಂದೆ, ನಾ ಕುಡಿಸಬೇಕೆಂದಿದ್ದ ಒಂದೇ ಒಂದು ಕಪ್ ಚಾ ಕಂಡೂ ಕಾಣದಷ್ಟು ಚಿಕ್ಕದಾಯ್ತು.
ನಾನೂ!
ಕುಡಿತದ ಕವಿ ಅಪ್ಪ, ಬಾಯ್ಬಡುಕ ಅಮ್ಮ, ಜಗಳವಿಲ್ಲದೆ ಮನೆಗೆ ಬರದ ತಮ್ಮ, ಮನೆಗೆಲಸದ ಹೊರೆಯ ಮಧ್ಯೆ ಕಸಮುಸುರೆಯೇ ಆಗಿರುವ ನನ್ನ ಪ್ರೀತಿಯ ತಂಗಿ ಅಪ್ಪಿ, ಮಾತುಮಾತಿಗೆ ಚುಚ್ಚಿ ಕೊಲ್ಲುವ ಇಮಾಂ, ನನ್ನಿಂದಾಗಿ ಬೈಗುಳ ತಿಂದು ಅವಮಾನ ಅನುಭವಿಸಿದ ಸುರೇಶ್..
ನಿರ್ಧರಿಸಿಬಿಟ್ಟೆ ನಾನಾಗಲೇ- ಇನ್ನು ಸಾಯಲೇಬೇಕು!
4
ಹಸಿವಾಗತೊಡಗಿತು.
ಹೊಟ್ಟೆಯೊಳಗೆ ಬೆಂಕಿಯ ನಾಲಿಗೆಯಾಡಿದಂತೆ. ಜಂಬಣ್ಣ ಅಮರಚಿಂತರ ಹನಿಗವಿತೆ ನೆನಪಾಯಿತು:
ರೊಟ್ಟಿ-
ವಿಸ್ತಾರದಲಿ
ಭೂಮಿಗಿಂತ ಮಿಗಿಲು;
ಎತ್ತರದಲಿ
ಎವರೆಸ್ಟ್‌ಗಿಂತ ದಿಗಿಲು.
ಹಸಿವಿನ ಶಕ್ತಿ ಸಾರುವ ಈ ಕವಿತೆ ನನ್ನೊಳಗಿನ ಬೆಂಕಿಯ ಜ್ವಾಲೆಯನ್ನು ಮತ್ತಷ್ಟು ಪ್ರಖರವಾಗಿಸಿತು. ಮಲಗಿದರೆ ಹಸಿವಾದದ್ದೇ ನೆನಪಾಗುವುದಿಲ್ಲ ಎಂದುಕೊಂಡು, ಇನ್ನೂ ಬಾರದ ರೈಲಿಗಾಗಿ ಬೈದುಕೊಳ್ಳುತ್ತ ಬೆಂಚಿನ ಮೇಲೆ ಅಡ್ಡಾದೆ.
ಅದು ರೈಲ್ವೇ ಪ್ಲಾಟ್‌ಫಾರಮ್ ಎಂದು ನೆನಪು ಮಾಡಿಕೊಡುವಂತೆ ಸೊಳ್ಳೆಗಳು ಬಂದು ಕಿವಿಯಲ್ಲಿ ಹಾಡತೊಡಗಿದವು. ನನಗೆ ಸೊಳ್ಳೆಗಳು ಹೊಸದಲ್ಲ. ಈ ಗಾತ್ರದ ಮತ್ತು ಇಷ್ಟೊಂದು ಸಂಖ್ಯೆಯ ಸೊಳ್ಳೆಗಳ ಏಕಕಾಲಿಕ ದಾಳಿ ಹೊಸದು. ಇನ್ನೆಲ್ಲಿಯ ನಿದ್ದೆ?
ನೀರವ ರಾತ್ರಿ. ಕೊರೆಯುವ ಚಳಿ. ಗದಗುಡುವ ಹಲ್ಲುಗಳು. ಸಂತೆ ಮುಗಿಸಿ ಹಾಯಾಗಿ ಮಲಗಿಕೊಂಡಂತೆ ನಕ್ಷತ್ರಗಳು. ಹಸಿವನ್ನೇ ನೆನಪಿಸುವ ದೊಡ್ಡ ದೊಡ್ಡ ನಿಯಾನ್ ಬಲ್ಬುಗಳು. ಹಾಡುವ- ಹಾರಾಡುವ ಸೊಳ್ಳೆಗಳು…
ಜಾತಕಪಕ್ಷಿಯಂತೆ ನಾ ಕಾಯುತ್ತಿರುವ ಇನ್ನೂ ಬಾರದ ಹನ್ನೆರಡೂ ಹತ್ತರ ರೈಲಿಗೆ ಇನ್ನಿಲ್ಲದಂತೆ ಶಪಿಸಿದೆ.. ಎಣಿಸಿ ಹೆಜ್ಜೆ ಹಾಕುತ್ತ ಸಾಗಿ ಟೈಮು ಕೇಳಿದರೆ ಒಂದೂ ನಲವತ್ತಾಗಿತ್ತು. ವೇಳಾಪಟ್ಟಿಯ ಹತ್ತಿರ ಹೋಗಿ ನೋಡಿದರೆ ನನ್ನ ರೈಲು ಮೂರು ಗಂಟೆ ತಡವಾಗಿ ಬರುವುದಿತ್ತು. ಮನೆಗೆ ಹೋಗಿ ನಾಳೆ ಬಂದು `ಹೋದರಾಯ್ತು’ ಎಂದುಕೊಂಡು ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ, ಬಂದ ದಾರಿಗೆ ಸುಂಕವಿಲ್ಲದಂತೆ ಕಾಲೆಳೆಯತೊಡಗಿದೆ.
ಎರಡಾಗಿರಬೇಕು. ಅಂಬಾಭವಾನಿ ಗುಡಿ ಕಟ್ಟೆ ಮೇಲೆ ಬೀಡಿ ಸೇದುತ್ತ ಕುಳಿತಿದ್ದ ರಾತ್ರಿ ಪಾಳಿಯ ಕನಿಷ್ಠಬಿಲ್ಲೆಗಳು ನನ್ನ ತೊಳ್ಳೆ ನಡುಗುವಂತೆ ಶಬ್ದ ಮಾಡಿ ಗದರಿ ಕರೆದವು. ನಡುಗುತ್ತ ಹೋದೆ. ತಿನ್ನುವಂತೆ ನೋಡಿ ನನ್ನ ಮೇಲೆ ಯದ್ವಾತದ್ವಾ ಪ್ರಶ್ನೆಗಳ ವಾಂತಿ ಮಾಡಿಕೊಂಡವು. ನಾನು ಎಲ್ಲ ಸರಿಯಾಗಿಯೇ ಹೇಳಿ ಕೊನೆಗೆ ಊರಿಗೆ ಹೊರಟಿದ್ದ ಮಿತ್ರನೊಬ್ಬನನ್ನು ರೈಲ್ವೆ ಸ್ಟೇಷನ್ನಿಗೆ ಬಿಟ್ಟುಬರಲಿಕ್ಕೆ ಹೋಗಿದ್ದೆನೆಂದೆ. ನನ್ನ ಕಪ್ಪು ಒರಟು ಮುಖ, ಹೊಲಸಾದ ಹಳೆ ಬಟ್ಟೆಗಳನ್ನು ನೋಡಿ ಅವು ಮತ್ತೂ ಅವಮಾನಿಸಿದವು. ಅನಬಾರದ್ದನ್ನು ಅಂದು ಅವಮಾನಿಸಿದವು.
ಹಾಗೇ ಗುಡಿ ಹಿಂದುಗಡೆ ಕಣ್ಣು ಹಾಯಿಸಿದೆ. ಒಬ್ಬ ಆರಕ್ಷಕ ಹೊಟ್ಟೆಪಾಡಿಗೆ ಮೈಮಾರಿಕೊಳ್ಳುವ ಬಡ ವೇಶ್ಯೆಯೊಬ್ಬಳ ಮೇಲೆ ಕಾರ್ಯನಿರತನಾಗಿದ್ದ. ಕಾಮಾತುರಾಣಾಂ ನ ಭಯಂ ನ ಲಜ್ಜಾ. ನನ್ನ ದೃಷ್ಟಿ ಆ ಕಡೆ ಹರಿದಿದ್ದನ್ನು ಗಮನಿಸಿ ನನಗೆ ಯಾವ ವಿವರಣೆಗೂ ಹೆಚ್ಚಿನ ಅವಕಾಶ ಕೊಡದೆ ಜೀಪಿನಲ್ಲಿ ಹಾಕಿಕೊಂಡು ಬಂದು ಪೋಲಿಸ್ ಠಾಣೆಯಲ್ಲಿ ಕೂರಿಸಿದರು. ಅದೇ ಸಮಯಕ್ಕೆ, ಮನೆಗಳ್ಳತನ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದವನೊಬ್ಬನನ್ನು ಎಳೆತಂದು ನನ್ನೆದುರಿಗೇ ಬೂಟುಗಾಲು ಅಂಗೈ ಮೇಲಿಟ್ಟು, ಹಿಟ್ಟಿನ ಗಿರಣಿಯ ರಬ್ಬರ್ ಬೆಲ್ಟಿನಿಂದ ಬುರುಬುರು ಬಾಸುಂಡೆಗಳೇಳುವಂತೆ ಹೊಡೆದು ಹಣ್ಣುಗಾಯಿ ನೀರುಗಾಯಿ ಮಾಡಿದರು. ಆ ತರದ್ದನ್ನು ಹಿಂದೆಂದೂ ಕಂಡಿರದ ನಾನು, ನನ್ನ ಸ್ಥಿತಿಯನ್ನೂ ಹೀಗೇ ಮಾಡುವರೇನೋ ಎಂದು ಊಹಿಸಿಯೇ ಬೆದರಿ, ಅಕ್ಷರಶಃ ನಾಲ್ಕು ಹನಿ ಮೂತ್ರ ಜಿನುಗಿಸಿಕೊಂಡೆ. ತೊಡೆ ತಂಪಾಗಿ, ದೇಹದಲ್ಲೊಂದು ನಡುಕದ ಸೆಳಕು ಮೂಡಿ ಬೆನ್ನ ಹುರಿಗುಂಟ ಮಿಂಚಾಡಿಸಿತು.
ಮತ್ತೊಮ್ಮೆ ನನ್ನ ಪ್ರವರ ಕೇಳಲಾಯಿತು. ಮೊದಲಿನ ಕ್ಯಾಸೆಟ್ಟೇ ಮತ್ತೆ ಹಾಕಿದೆ. ಆತ ಇಷ್ಟಗಲವಾದ. ಎಲ್ಲ ತಿಳಿದವನಂತೆ ಮಾತಾಡಿ ನನಗಿಷ್ಟು ಪುಗಸಟ್ಟೆ ಸಲಹೆಗಳನ್ನು ಕೊಟ್ಟ. ಅಚಾನಕ್ಕಾಗಿ ಅಲ್ಲಿ ತೂಗು ಹಾಕಿದ್ದ ಫಲಕ ನೋಡಿದರೆ ಆ ವ್ಯಕ್ತಿಯೂ ನನ್ನ ಜಾತಿಯವನೇ ಆಗಿದ್ದುದು ಕಾಣಿಸಿತು. ಆತನ ವಿಶ್ವಾಸದ ಮಾತುಗಳಿಗೆ ಕಾರಣ ಹೊಳೆಯಿತು. ನನ್ನ ತಲೆಯೊಳಗೆ ಯೋಚನೆಗಳ ತರಂಗಗಳು ಒಂದಕ್ಕೊಂದು ತಟ್ಟುತ್ತ ಹೊಯ್ದಾಡಿಕೊಂಡು ಮನಸ್ಸನ್ನು ಕಲ್ಲು ಬಿದ್ದ ಕೆರೆಯಾಗಿಸಿದವು.
ಯೋಚಿಸುತ್ತ ಯೋಚಿಸುತ್ತ ಯಾವಾಗ ನಿದ್ದೆಗೆ ಜಾರಿದೆನೋ ಗೊತ್ತೇ ಆಗಲಿಲ್ಲ. ಎದ್ದಾಗ ಎದುರಿಗೆ ಮಾವ ಇದ್ದ. ಏನೇನು ಮಾತುಕತೆಯಾಗಿತ್ತೋ ಗೊತ್ತಿಲ್ಲ, ಅಂತೂ ನನ್ನನ್ನು ಕಳಿಸಿಕೊಟ್ಟರು. ಮಾವನೊಂದಿಗೆ ಮನೆ ಕಡೆ ಹೆಜ್ಜೆ ಹಾಕುತ್ತ ಮನಸಿನಲ್ಲೇ ಆಶಾಗೋಪುರ ಕಟ್ಟತೊಡಗಿದೆ.
ನನ್ನ ಇಂಜಿನಿಯರಿಂಗ್ ಮುಗಿದು, ನೌಕರಿ ದೊರೆತು, ಹೊಸ ಮನೆ ಕಟ್ಟಿ, ಅಪ್ಪಿಯ ಮದುವೆ ಮಾಡಿ, ಸಮಾಜದಲ್ಲಿ ಎಲ್ಲರಿಂದ ಗೌರವ ಪಡೆಯುತ್ತ..
ಯಾರೋ ಅಡ್ಡ ಬಂದರು.
`ಓಹ್! ಇವನೊಬ್ಬ’ ಎಂದು ಗದರಿಕೊಂಡೆ. ಎರಡು ಕಾಲುಗಳನ್ನು ಕಳೆದುಕೊಂಡಿದ್ದರೂ, ಉಳಿದ ತೊಡೆಗಳಿಗೆ ಬಟ್ಟೆ ಕಟ್ಟಿಕೊಂಡು ಅವುಗಳ ಮೇಲೆ ನಡೆಯುತ್ತ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಾನೆ. ಇವತ್ತು ಅವನಲ್ಲೇನೋ ವಿಶೇಷ ಕಂಡಂತೆನಿಸಿತು.
ಬಗ್ಗಿ ನನ್ನ ಕಾಲುಗಳನ್ನು ನೋಡಿಕೊಂಡೆ.
5
ಮನೆಯೊಳಗೆ ಹಾಗೇ ಹೋಗಲು ಅಮ್ಮ ಬಿಡಲಿಲ್ಲ. ಹೊರಗೇ ಸ್ನಾನ ಮಾಡಿ ಆಂಜನೇಯಸ್ವಾಮಿ ಗುಡಿಗೆ ಹೋಗಿ ಬಂದ ಮೇಲೆಯೇ ಮನೆಯೊಳಗೆ ಬಿಟ್ಟುಕೊಂಡದ್ದು.
ಕೀಳರಿಮೆಯಿಂದ ಕುಸಿಯುತ್ತಿದ್ದ ನನಗೆ ಯಾರಿಗೂ ಮುಖ ಕೊಟ್ಟು ಮಾತಾಡುವ ಧೈರ್ಯವಾಗಲಿಲ್ಲ. ತೀರಾ ಮನೆಯೊಳಗೆ ಹೋದ ಮೇಲೆ ಭಂಡ ಧೈರ್ಯ ಮಾಡಿ ಅಮ್ಮನನ್ನು ದಿಟ್ಟಿಸಿ ನೋಡಿದೆ. ರಾತ್ರಿಯೆಲ್ಲ ನಿದ್ದೆಗೆಟ್ಟು ಅತ್ತ ಹಾಗಿತ್ತು. ನನ್ನ ಭಂಡತನವು ಸೋತು ಹೋಯಿತು. ಇನ್ನೂ ನೋಡಲಾಗದೆ ತಪ್ಪಿತಸ್ಥನಂತೆ ತಲೆತಗ್ಗಿಸಿದೆ. ಕೈಗೆ ಬಂದ ಮಗ ಕೈ ಬಿಟ್ಟೇಬಿಟ್ಟ ಎಂದು ಹೆದರಿ ಅಮ್ಮ ತೊಪ್ಪೆಯಾಗಿದ್ದಳು. ಅಪ್ಪ ಎಂದಿನಂತೆ ನಿರ್ಲಿಪ್ತ, ಸ್ಥಿತಪ್ರಜ್ಞ.
ಉರಿಯುವುದಿಲ್ಲವೆಂದು ಹಠ ಮಾಡುತ್ತಿದ್ದ ಕಟ್ಟಿಗೆಗಳೊಂದಿಗೆ ಜಿದ್ದಿಗೆ ಬಿದ್ದು ಓಲೆ ಹೊತ್ತಿಸುತ್ತ ಅಪ್ಪಿ ರೊಟ್ಟಿ ಸುಡುತ್ತಿದ್ದಳು. ಬಡವರ ಬದುಕುಗಳಂತೆ ಒಲೆಯೊಳಗೆ ಉರಿಯುತ್ತಿರುವ ಕಟ್ಟಿಗೆಗಳು ಕೆಲವು. ಜೊತೆಗೆ ಅಷ್ಟಿಷ್ಟು ಉರಿದ ಬೆಂಕಿ ಕೆಂಡಗಳು- ಕೆಂಪಗೆ.
ಆ ಅರ್ಧ ಸುಟ್ಟ ಕಟ್ಟಿಗೆಗಳ ಕೆಂಪು ತುದಿ ನೋಡಿ ನನಗೆ ಸಿಗರೇಟ್ ಸೇದುವ ಆಸೆಯಾಗತೊಡಗಿತು.
ಚಿದಾನಂದ ಸಾಲಿ
1998ರಲ್ಲಿ ನಾನು ಈ ಕಥೆಯನ್ನು ಬರೆದೆ. ಬಿಎಸ್ಸಿಯಲ್ಲಿ ಫೇಲಾಗಿದ್ದರಿಂದ ಅನವಶ್ಯಕವಾಗಿ ಹಾಳಾಗಿ ಹೋಗಬಹುದಾಗಿದ್ದ ಒಂದು ಅಕಡೆಮಿಕ್ ಇಯರ್ ಅನ್ನು ಉಳಿಸಿಕೊಳ್ಳುವ ಪ್ರಯತ್ನವಾಗಿ, ಪಿಯುಸಿಯ ಡೂಪ್ಲಿಕೇಟ್ ಟೀಸಿ ತೆಗೆಸಿ ಅದರ ಆಧಾರದ ಮೇಲೆ ಟಿಸಿಎಚ್ ಎಂಬ ತರಬೇತಿ ಕೋರ್ಸಿಗೆ ಸೇರಿಕೊಂಡಿದ್ದ ದಿನಗಳವು. ಇದೇ ರೀತಿ ಇಂಜಿನಿಯರಿಂಗ್‌ನಲ್ಲಿ ಬ್ಯಾಕ್ ಉಳಿಸಿಕೊಂಡು ಟಿಸಿಎಚ್ಚಿಗೆ ಬಂದಿದ್ದ ಆಂಜನೇಯ ಕಡಿವಾಳ, ವಿರೂಪಾಕ್ಷಿ ಅಲಬನೂರು ನನಗೆ ಕ್ಲಾಸ್‌ಮೇಟುಗಳಾದರು. ನೇರವಾಗಿ ಪಿಯುಸಿಯಿಂದ ಬಂದಿದ್ದ ಮಿಕ್ಕೆಲ್ಲ ಹುಡುಗರಿಗಿಂತ ವಯಸ್ಸಲ್ಲಿ, ನೋವಿನಲ್ಲಿ ದೊಡ್ಡವರು ನಾವು. ಸಹಜವಾಗಿ ಈ ಸಮಾನದುಃಖಿಗಳ ಸಮಾವೇಶ ಬಲು ಗಾಢವಾಗಿ ಕಚ್ಚಿಕೊಂಡಿತು. ನಾನು ಜೀವನದ ಮೊತ್ತಮೊದಲ ಸಿಗರೇಟನ್ನು ಅಲ್ಲೇ ಸೇದಿದೆ. ಆಗ ಆಂಜನೇಯ ನನಗೆ ತನ್ನ ನೋವನ್ನು, ತಾನು ಕಂಡ ವಿಕ್ಷಿಪ್ತ ಬದುಕಿನ ವಿವಿಧ ಮುಖಗಳನ್ನು ಹೇಳುತ್ತಿದ್ದ. ನನ್ನ ಅಂತರಾತ್ಮ ನನ್ನನ್ನು ಕೊಟ್ಟ ಕುದುರೆಯನೇರಲರಿಯದ ಕೈಲಾಗದವ ನೀನು ಎಂದು ನಿತ್ಯ ಚುಚ್ಚುತ್ತಲೇ ಇತ್ತು. ಈ ಕಥೆಗೆ ಒಂದಿಷ್ಟು ಕಲ್ಪನೆಯನ್ನು ಬೆರೆಸಿ, ಪಾತ್ರಗಳ ಸ್ವಭಾವ, ಜಾತಿ ಮತ್ತು ವೃತ್ತಿಗಳನ್ನು ಬದಲಿಸಿ ಒಂದು ವಿಷಾದದ ರಾತ್ರಿಯಲ್ಲಿ ಒಂದೇ ಸಿಟ್ಟಿಂಗಿನಲ್ಲಿ ಕಥೆ ಬರೆದು ಮುಗಿಸಿದೆ. ಆ ವರ್ಷದ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ ವಿದ್ಯಾರ್ಥಿ ವಿಭಾಗದ ಬಹುಮಾನವನ್ನು ತಂದಿತ್ತ ಈ ಕಥೆ ನನಗೆ ಕಥೆಗಾರನೆಂಬ ಅಧಿಕೃತ ಮುದ್ರೆಯನ್ನೊತ್ತಿದ ಮೊದಲ ಕಥೆ.
ಈ ಕಥೆ ನನಗೆ ಇಷ್ಟವಾಗುವುದು ಏಕೆಂದು ಯೋಚಿಸಿ ನೋಡಿದಾಗ ಇದರ ಮುಗ್ಧತೆ ಮತ್ತು ಪ್ರಾಮಾಣಿಕತೆಗಳು ನನ್ನ ಕಣ್ಮುಂದೆ ಬರುತ್ತವೆ. ಮುಂದೆ ಬರೆದ ಕಥೆಗಳಲ್ಲಿ ಒಂದು ಬಗೆಯ ಎಚ್ಚರವಿದ್ದರೆ ಇದರಲ್ಲಿ ತನ್ಮಯತೆ ಇದೆ. ತನ್ನೊಳಗನ್ನು ತಾನು ಸೀಳಿಕೊಂಡು ನೋಡುವ ಈ ಅತ್ಯುಗ್ರವಾದ ಆತ್ಮಛೇದಕ ನೋಟ ನನಗೆ ಮುಂದೆಂದೂ ಸಾಧ್ಯವಾಗಲಿಲ್ಲ. ಹಾಗೆಯೇ ಈ ಕಥೆಯ ಸಾಂದ್ರಗುಣ ಇದು ಇಷ್ಟವಾಗಲು ಇರುವ ಮತ್ತೊಂದು ಮುಖ್ಯ ಕಾರಣ. ಹಲವು ಸಲ ಇದನ್ನು ಹಲವು ಬಗೆಯಲ್ಲಿ ಪರಿಷ್ಕರಿಸಲು ಸಾಧ್ಯವಿದೆಯೇ ಎಂದು ಪ್ರಯತ್ನಿಸಿ ಸೋತಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳಲಾಗದೆ ವಾಪಸು ಬರುವ ಕಥಾನಾಯಕ ಬಸ್ಟ್ಯಾಂಡಿನಲ್ಲಿ ತನಗೆ ಎದುರಾಗುವ ಎರಡೂ ಕಾಲಿರದ ಭಿಕ್ಷುಕನನ್ನು ನೋಡಿದ ಮೇಲೆ ತನ್ನೆರಡೂ ಕಾಲುಗಳನ್ನು ನೋಡಿಕೊಳ್ಳುವ ದೃಶ್ಯವೇ ನನಗೆ ಹಲವು ಸಲ ನಿಜ ಜೀವನದಲ್ಲಿ ಪ್ರಾಣಪೋಷಣೆ ಮಾಡಿದೆ. ನಮ್ಮ ಮಕ್ಕಳೇ ಮುಂದೆ ನಮಗೆ ಬುದ್ಧಿಮಾತು ಹೇಳುವಂತೆ ಈ ನನ್ನ ಪಾತ್ರವು ಗುರುವಾಗಿ ನನ್ನನ್ನು ಪೊರೆದಿದೆ. ಬದುಕೆಂಬ ಸಾಲಿಯಲ್ಲಿ ಇಂಥ ಮಾಸ್ತರರು ಆಗಾಗ ಎದುರಾಗುತ್ತಿದ್ದರೆ ನನ್ನೊಳಗಿನ ಕಥೆಗಾರ, ಅದಕ್ಕಿಂತ ಮುಖ್ಯವಾಗಿ ನನ್ನೊಳಗಿನ ಮನುಷ್ಯ ಜೀವಂತವಾಗಿರುತ್ತಾನೆ. ಹಾಗಾದಾಗ ಮಾತ್ರ ಮೊಸಳೆ ಬಾಯೊಳಗೆ ಕೂತು ಅದರ ಹಲ್ಲುಗಳ ಸ್ವಚ್ಛಗೊಳಿಸುವ ಹಕ್ಕಿಯ ನಿರುಮ್ಮಳದಂತೆ ಸಾವಿನ ದವಡೆಯಲ್ಲಿದ್ದೂ ಈ ಬದುಕು ಸುಂದರವೂ ಸಹನೀಯವೂ ಆಗಲು ಸಾಧ್ಯವಾಗುತ್ತದೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ