ಮುಕಾಂಬಿಕಮ್ಮ ಇದ್ದುದರಲ್ಲೇ ಅಚ್ಚುಕಟ್ಟಾಗಿ ಸಂಸಾರ ನಡೆಸಿಕೊಂಡು ಬಂದ ನಿತ್ಯಸಂತೋಷಿ ಜೀವ. ಬೆಳಗ್ಗೆ ಐದುಗಂಟೆಗೆ ಅವರ ಮನೆಗೆಲಸದಚಕ್ರ ಸುತ್ತಲಾರಂಭಿಸಿದರೆ ನಿಂತು ಅಡ್ಡವಾಗುವುದು ಮಧ್ಯಾಹ್ನ ಎರಡುಗಂಟೆಗೆ. ಮತ್ತೆ ಐದುಗಂಟೆಗೆ ಎದ್ದು ಸುತ್ತತೊಡಗಿದರೆ ನಿಲ್ಲುವುದು ರಾತ್ರಿ ಒಂಭತ್ತು ಗಂಟೆಗೆ. ‘ಮುಕಾಂಬಮ್ಮನಂತೆ ಮನೆಯನ್ನು ಒಪ್ಪ ಓರಣವಾಗಿ ಇಟ್ಕೊಳ್ಳುವವರು ಹೊಸನಗರದಲ್ಲೇಕೆ? ಇಡೀ ಭೂಮಂಡಲದಲ್ಲೂ ಭೂತಕನ್ನಡಿ ಹಿಡ್ಕೊಂಡು ಹುಡುಕಿದ್ರೂ ಸಿಗಲಾರರು’ಎಂದು ಮಂದಿ ನೆಂಟರಿಷ್ಟರು ಹಾಡಿಹೊಗಳಿದ್ದರಿಂದ ಕೋಡುಬೆಳೆದು ಅದಕ್ಕೆ ಬದ್ಧರಾಗಿ ಒಗ್ಗಿಬಿಟ್ಟಿದ್ದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾತ್ಯಾಯಿನಿ ಕುಂಜಿಬೆಟ್ಟು ಬರೆದ ಕತೆ “ಮೇಷ್ಟ್ರಮನೆ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ನೇಸರನು ಈಗಷ್ಟೇ ಪಡುಕಡಲಿನಲಿ ಮಿಂದು ಒದ್ದೆಯಲೇ ಎದ್ದುಬಂದನೋ ಎಂಬಂತೆ ಕೆಂಪಗೆ ಮೂಡಿನಲಿ ಮೈಮರೆತು ನಿಂತಿದ್ದ. ಅವನ ಮೈಯಿಂದ ನೀರಹನಿಗಳು ಇಬ್ಬನಿಗಳಾಗಿ ಪಟಪಟನೆ ಉದುರತೊಡಗಿದ್ದವು.
“ಎಲ್ಲಿ ಹೋಯ್ತಪ್ಪ ಇವರ ಸವಾರಿ! ರೈಲ್ವೇ ಸ್ಟೇಷನೇನು ಮಹಾ ದುರ್ಗದಲ್ಲಿದೆಯ! ಅಬ್ಬಬ್ಬಾ ಅಂದ್ರೆ ಬಾಯಿಯಿಂದ ಕಿವಿಗಿರುವಷ್ಟೇ ಕೂಗಳತೆಯದಾರಿ. ವೇಳೆಗೆ ಸರಿಯಾಗಿ ಸಿಳ್ಳು ಕೇಳಿಸುತ್ತಲೇ ಇರುತ್ತದೆ! ಇವರು ಮನೆಬಿಟ್ಟು ಆಗಲೆ ಅರ್ಧಗಂಟೆಯಾಗ್ತಾ ಬಂತು. ಏನ್ಕತೆ!” ಮನಸ್ಸು ಗುಣಿಸಿದ್ದನ್ನೇ ಗೊಣಗುತ್ತ ಹೊಸ್ತಿಲಿನಿಂದ ಹೆಜ್ಜೆಹೊರಗಿಟ್ಟ ನೇಹಳ ಕೆಮರಾಕಂಗಳನ್ನು ಪಿಕುಪಿಕು ಉಲಿಯುತ್ತ ಜುಟ್ಟುಪಿಕಳಾರವೊಂದು ತನ್ನತ್ತಲೇ ಸೆಳೆದುಕೊಂಡಿತು.
ಪಾಗರದ ಮೇಲೆ ಆಕೆ ಚೆಲ್ಲಿದ್ದ ಅಕ್ಕಿಕಾಳುಗಳನ್ನು ಒಂದೊಂದಾಗಿ ಪುಟ್ಟಕೊಕ್ಕಿನಲ್ಲಿ ಕುಕ್ಕಿಕಬಳಿಸುವ ಮಹತ್ತರ ಕಾಯಕದ ಎಡೆಎಡೆಯಲ್ಲೆ ಹೊರಲೋಕಕೆ ನಿಲುಕದ ಅದ್ಯಾವುದೋ ಸೂಕ್ಷ್ಮಸದ್ದು ತನಗೆ ಮಾತ್ರ ಕೇಳಿಸುತ್ತಿದೆಯೇನೋ ಎಂಬ ಗುಂಗಲ್ಲಿ ಕಪೋಲವನು ಓರೆಮಾಡುತ್ತ ಮೈಯೆಲ್ಲ ಕಿವಿಯಾಗುತ್ತಿತ್ತದು. ಅದರ ಬಲಕೆನ್ನೆಯೊಳಗಿಂದ ತೂರಿದ ಬಾಲರವಿ ಎಡಕೆನ್ನೆಯೊಳಗಿಂದ ಹೊರಬಂದು ಇರ್ಕೆನ್ನೆಗಳಲ್ಲಿ ಕೆಂಪುಹವಳದ ಉಂಗುರುಗಳನ್ನು ಮೂಡಿಸಿದ್ದ. ಎವೆಯಿಕ್ಕದೆ ಅದನ್ನೆ ಅವಲೋಕಿಸುತ್ತಿದ್ದ ಅವಳಿಗದು ಯಾರದ್ದೋ ಬರವನು ಕಾಯುತ್ತಿರುವಂತೆ ತೋರಿತು.
ನೋಡನೋಡ ಪಾಗರಕಂಟಿದಂತಿದ್ದ ರೆಂಜೆಯ ಮರದಿಂದ ಪುರ್ರನೆ ಕೆಳಹಾರಿ ಗೆಣತಿಗಂಟಿಕೊಂಡಿತದರ ಗೆಣೆಕಾರ. ತಾವರೆ ಮೊಗ್ಗುಬಿಟ್ಟಿದ್ದ ನೀರಮರಿಗೆಯೊಳಗೆ ಪುಳಕ್ಕನೆ ಮುಳುಗಿ, ಹೂಬಿಸಿಲಲಿ ಫಳಕ್ಕನೆ ಬೆಳಗಿ, ಮೈಗಂಟಿದ ರೆಕ್ಕೆಗಳನ್ನು ಪಟಪಟನೆ ಕೊಡವಿ ಮತ್ತೆಮತ್ತೆ ಮುಳುಗೇಳುವ ಕಾಯಕದಲಿ ಕಾಯಮರೆತು ಕಾವ್ಯವಾದವವು, ನೇಹಳ ಹೃದಯದಹಾಳೆಯಲಿ.“ಅರೆಅರೆ ಭಾಪುರೇ! ಕಣ್ಣಿಗೆ ಕಾಡಿಗೆ ಹಚ್ಚಿದವರ್ಯಾರು? ಕೆನ್ನೆಗೆ ಕೆಂಪುಬಳಿದವರ್ಯಾರು? ಈ ದಿಗಿಣತದಿಗಿಣ ಕುಣಿತವೆಲ್ಲಿ ಕಲಿತಿರಿ ಬಣ್ಣದವೇಷಗಳೇ? ಹೆಬ್ಬೆರಳು ಗಾತ್ರದ ಒಡಲಲಿ ಎಲ್ಲಿ ಅಡಗಿತ್ತೀ ಲವಲವಿಕೆಯಕಡಲು? ರವಿ ಕಾಣದ್ದನ್ನು ಕವಿ ಕಂಡ!” ಕವಿ ವಿಸ್ಮಯದ ಪಿಸುಮಾತುಗಳ ಚೆಲ್ಲುತ್ತ ಅ ಅಮೃತ ಕ್ಷಣಗಳ ಭಾವಗಳನು ಅಮರಚಿತ್ರವಾಗಿಸುವ ಉತ್ಕಟತೆಯಲಿ ಕೆಮರಾತರಲೆಂದು ಕಳ್ಳಹೆಜ್ಜೆಗಳನು ಒಳಗಿಟ್ಟಳು.
ಆಕೆ ಹೊರಬರುವಷ್ಟರಲ್ಲಿ ಇದುವರೆಗೆ ಕಂಡದ್ದು ಕನಸೋ ಎಂಬಂತೆ ಅಲ್ಲಿಂದ ಮಾಯವಾಗಿದ್ದವವು. ಆದರೆ ರೆಂಜೆಮರದ ಟೊಂಗೆಟೊಂಗೆಗಳಲೂ ಟಿಂಗ್‌ಟಿಂಗ್ ತಂತಿನುಡಿಸಿದಂತೆ ಪಿಕ್‍ವಿವ್.. ಅವೇಕ್‌ವಿವ್.. ವಿವೇಕ್‌ವಿವ್.. ಕಿವಿಗೆ ನನಸಾಗಿತ್ತು ಹಕ್ಕಿಹಾಡು, ಹಕ್ಕುಹಾಡು. ಕಾರಿನಿಂದಿಳಿದು ಮಾತಿಗೆಮಾತು ಪೋಣಿಸುತ್ತ ಎಣೆಹಕ್ಕಿಗಳಂತೆ ಬರುತ್ತಿರುವ ಅತ್ತೆ-ಮಾವ ಆಕೆಯ ಕೆಮರಾದಲ್ಲಿ ಸೆರೆಯಾದರು, ಕೆಮರಾ ಕಂಡದ್ದೇ ಪುಂಗಿ ಬಂದಾಗಿ ಕಣ್ಣಲ್ಲೇ ನೇಹಳನ್ನು ದೂರಿತಾಜತೆ.
“ವಾರೆವ್ಹಾ ಸುಬ್ರಹ್ಮಣ್ಯ ಜೋಡಿ! ಈ ಎಪ್ಪತ್ತುಗಳನ್ನು ಕಂಡರೆ ಇಪ್ಪತ್ತೂ ನಾಚಬೇಕು” ಮನದಲೇ ಅಂದುಕೊಂಡು, “ಬನ್ನಿಬನ್ನಿ ಆರಾಮಾ?” ಎನ್ನುತ್ತ ಅತ್ತೆಯ ಕೈಯಲ್ಲಿ ತೂಗಾಡಲು ಬಿಂಕಬಿಗುಮಾನದಲ್ಲಿ ಬಿಗುವಾಗಿದ್ದ ಮಣಭಾರ ತೂಕದ ಬ್ಯಾಗನ್ನು ಸಲೀಸಾಗಿ ಹೊತ್ತೊಯ್ದಳು ನೇಹ.
“ನಿಂಗೇನು ಕಾರಿಂದ ಇಳಿಯಲು ಇನ್ನೂ ಗಳಿಗೆ ಬರಲಿಲ್ವ ಮಾರಾಯ? ಈ ಮೊಬೈಲೆಂಬುದನ್ನು ಯಾವ ನರರಕ್ಕಸ ಸ್ರಿಷ್ಟಿ ಮಾಡಿದನೋ ಭಗವಂತಾ! ಉಣ್ಣುವಾಗ, ತಿನ್ನುವಾಗ, ಮಲಗುವಾಗ, ಹೇಲುವಾಗ! ಕೈಗೊಂದು ಕಿವಿಗೊಂದು ಅಂಟಿಸಿಕೊಳ್ಳಿಯಂತೆ ನೋಡುವ! ರಾಮ ರಾಮಾ!” ಡ್ರೈವಿಂಗ್ ಸೀಟ್‌ನಿಂದ ಇಳಿಯದ ಮಗನತ್ತ ಚೂಪು ಬಾಣವೆಸೆದು ತಮ್ಮ ಆಗಮನಕೆ ಮೆರುಗಿಲ್ಲವೆಂಬ ಭಾವದಲಿ ನರಳುತ್ತ ದುರ್ದಾನ ತೆಗೆದುಕೊಂಡವರಂತೆ ಒಳನಡೆದರು ಮುಕಾಂಬಿಕಮ್ಮ. ಅದ್ಯಾವುದೂ ತನಗೆ ನಾಟಿಯೇ ಇಲ್ಲವೆಂಬಂತೆ ಅವ ವಾಟ್ಸಪ್‌ನೊಳಗೇ ಮುಳುಗಿಬಿಟ್ಟಿದ್ದ.
ಉಸ್ಸಪ್ಪ! ಎನ್ನುತ್ತ ಸೋಫಾದಲ್ಲಿ ಕುಂಡೆಯೂರುತ್ತ, “ಈ ಸರ್ತಿ ಟ್ರೈನಲ್ಲಿ ಬಂದದ್ದಕ್ಕೆ ಆರಾಮಾಯ್ತು ಕಣೇ ನೇಹ”ಎಂದರು ಮುಕಾಂಬಿಕಮ್ಮ. ಅವರ ಬೆನ್ನಲ್ಲೆ ಒಳಬಂದಿದ್ದ ವಿಷ್ಣುರಾಯರು ಮೂಗರಳಿಸಿ, “ತಿಂಡಿ ಮಾಡಿದ್ದಿಯೇನೆ?” ಎನ್ನುತ್ತ ಅಡುಗೆ ಮನೆಯತ್ತ ಹೊರಳಿದ್ದಾರೋ ಇಲ್ವೋ! ಅವರತ್ತ ಜೀರಿಗೆ ಮೆಣಸಂಥ ಚುರುಕು ನೋಟಬೀರಿ, “ಸ್ವಲ್ಪ ತಡ್ಕೊಳ್ಳಿ! ನಿಮ್ಮದೇನು ಹೊಟ್ಟೆಯೋ ಕನ್ನಂಬಾಡಿ ಕಟ್ಟೆಯೋ? ತಿನ್ನಲಿಕ್ಕೇನಾದ್ರು ಸಿಗ್ಲಿಲ್ಲಾಂದರೆ ನಾಲಗೆಯನ್ನೇ ಜಗಿವ ಆಸೆಬುರುಕ ಆಸಾಮಿಯಿದು!” ಎಂದರು. “ಛೆ! ಎಂಥ ಅತ್ತೆ ನೀವು? ಪಾಪ! ಹಸಿವಾಗಿದೆ ಅವರಿಗೆ! ಪ್ರಯಾಣಮಾಡಿ ಬಂದದ್ದಲ್ವ?” ಎಂದವಳೆ, “ನೀವು ಕೈಕಾಲು ತೊಳ್ಕೊಂಡ್ಬನ್ನಿ ಮಾವ, ಉಪ್ಪಿಟ್ಟು ಮಾಡಿದ್ದೇನೆ”ಎಂದಳು ನೇಹ.
“ಯೇ! ಯೇ! ಸ್ವಲ್ಪ ಸುಮ್ನಿರ್ತೀಯ ನೀನು? ಹಸಿವಾ ಮತ್ತೆಂತದ್ದ? ಇವರ ಹೊಟ್ಟೆಯಲೇನು ಬಂಡಿಭೀಮ ಕೂತಿದ್ದಾನ? ಆ ಸುಖಸಾಗರ ಹೋಟೇಲಲ್ಲಿ ನಾಕು ಇಡ್ಲಿ ಎರಡು ವಡೆ ಒಂದ್ಲೋಟ ಚಾ ಸಮಾರಾಧನೆಯಾಗಿಯೆ ಬಂದದ್ದು! ಸಮಾತಿಂದು ಇನ್ನೂ ಅರ್ಧಗಂಟೆಯೂ ಕಳೆದಿಲ್ಲ, ಹಸಿವಂತೆ ಹಸಿವು! ಇವ್ರೊಬ್ರಿಗೆ ಮಾತ್ರ ಹೊಟ್ಟೆಯಿರೋದು ಪ್ರಪಂಚದಲ್ಲಿ! ನಾವೆಲ್ಲ ಅಡಿಕೆಹಾಳೆ ಕಟ್ಕೊಂಡಿದ್ದೇವೆ ನೋಡು! ವಯಸ್ಸಾಗ್ತಾ ಆಗ್ತಾ ಭಾರೀ ವಿಚಿತ್ರವಾಗಿ ಆಡ್ತಾರೆ ಇವ್ರು!” ಎಂದರು.
“ಆ ಇಡ್ಲಿಯೋ! ಅದ್ರ ಆಕಾರವೋ! ನನ್ನ ಅಂಗೈಯಷ್ಟೂ ದೊಡ್ಡದಿರ್ಲಿಲ್ಲ! ಒಂದೇಬಾಯಿಗೆ ನಾಲ್ಕು ತಿನ್ನಬಹುದು ನೇಹ! ನಂಗೆ ಡಯಾಬಿಟೀಸಿದೆ, ಹಸಿವು ತಡ್ಕೊಳ್ಳಿಕ್ಕಾಗೊಲ್ಲ! ಈ ಕೊಟ್ಟಿಗೆಲ್ಲಿ ಗೊತ್ತಾಗ್ಬೇಕು ಇವೆಲ್ಲ?” ಮುಖ ಸಣ್ಣದು ಮಾಡ್ಕೊಂಡರು ರಾಯರು. “ಆಹಾಹ! ನಿಮ್ಮೊಬ್ರಿಗೇ ಡಯಾಬಿಟೀಸಿರೋದು! ನನ್ನ ಹಿರೇಯಕ್ಕನಿಗೂ ಉಂಟು! ಅವ್ಳು ನಿಮ್ಹಾಗೆ ಅತಿರೇಕ ಮಾಡ್ತಾಳ? ಅವಳ ಶಿಸ್ತುನೋಡಿ ಒಂಚೂರು ಕಲಿಯಿರಿ ನೀವು! ಅಲ್ಲ ಕಣೇ, ಹುಳಿಮಾಡಿಟ್ಟು ಬಂದ್ರೆ ನಾನು ಸ್ನಾನಕ್ಕೆ ಹೋಗುದನ್ನೇ ಕಾದು ಉಂಡೆಬೆಲ್ಲ ಎತ್ತಿಹಾಕ್ತಾರೆ ಗೊತ್ತಾ? ಸ್ವಲ್ಪ ತಡ್ಕೊಳ್ಲಿ! ಈಗ್ಲೆ ಕೊಡ್ಬೇಡ, ಏನಾಗ್ತದೇಂತ ನಾನಿವತ್ತು ನೋಡಿಯೇ ಬಿಡ್ತೇನೆ!” ಎಂದು ಮೂತಿಯುದ್ದ ಮಾಡಿದ್ರು ಮುಕಾಂಬಿಕಮ್ಮ.
ರಾಯರು, “ಇವ್ಳು ನನ್ಹೆಂಡ್ತಿಯಲ್ಲ ಕಣೇ! ಆಜನ್ಮ ವೈರಿ!” ಎನ್ನಲಿಕ್ಕಿಲ್ಲ, “ನೋಡಿದ್ಯೇನೆ ನೇಹ? ಎಲುಬಿಲ್ಲದ ನಾಲಗೆ ಹೇಗೆಬೇಕಾದ್ರೂ ಹೊರಳುತ್ತೆ! ನಿನ್ನೆನಿನ್ನೆ! ನೀನು ನನ್ನ ಗ್ರಿಹಲಕ್ಶ್ಮಿ ಕಣೇ ಮುಕಾಂಬು! ನೀನು ಕಾಲಿಟ್ಟಗಳಿಗೆಯಲ್ಲೆ ಆ ಧನಲಕ್ಶ್ಮಿ ನನ್ಮನೇಲಿ ಕಾಲ್ಮುರ್ಕೊಂಡು ಬಿದ್ಬಿಟ್ಲು ಅಂತಿದ್ರು! ನಿನ್ನೆಯ ಲಕ್ಷ್ಮಿ ಇವತ್ತು ಎಷ್ಟುಬೇಗ ವೈರಿಯಾಗ್ಬಿಟ್ಟೆ ನೋಡು!” ಕತ್ತುಕೊಂಕಿಸಿ ಕಣ್ಣೆತ್ತಿ ನುಡಿದಾಗ ನೇಹಗೂ ನಗುಬಂತು. ಬಾಯಿ ಬೊಂಬಾಯಿಯಾದರೂ ಹೊತ್ತುಹೊತ್ತಿಗೆ ಏನೇನುಬೇಕೋ ಅವೆಲ್ಲವನ್ನು ಕೇಳುವಮುನ್ನವೆ ತಂದಿಟ್ಟು, ಜೋಪಾನ ಗಂಡನನ್ನು ಸಾಕಿದವರು ಈ ಮುಕಾಂಬಿಕಮ್ಮ. “ಇವರ ಗಂಡನಾಗಲು ನೀವು ಪುಣ್ಯಮಾಡಿರ್ಬೇಕು” ಎಂದು ನೇಹಳೇ ಎಷ್ಟೋಬಾರಿ ಅಂದದ್ದುಂಟು.
“ಲಕ್ಷ್ಮಿಯಲ್ಲ ಕಣೇ ನೀನು, ಲಕ್ಷ್ಮಿಚೇಳು! ಕಟುಂಕಟುಂ ಕುಟುಕ್ತಿರ್ತೀಯಲ್ಲ ಹಗಲೂ-ಇರುಳೂ ಕತ್ತೆಲೌಡಿ!” ಎಂದವರೇ, “ನೇಹ ಸ್ವಲ್ಪ ಟೀ ಮಾಡು, ಇಷ್ಟೇಇಷ್ಟು ಸಕ್ಕರೆಹಾಕು!” ಹೆಬ್ಬೆರಳು ತೋರುಬೆರಳನು ಮುಟ್ಟಿಯೂ ಮುಟ್ಟದಂತೆ ಜೋಡಿಸಿ ಸನ್ನೆ ಮಾಡುತ್ತ ನುಡಿದರು. “ಆಹಾಹ! ನೆಂಟರಮನೆಗೆ ಹೋಗ್ಲಿ, ಹೋಟೇಲಿಗೆ ಹೋಗ್ಲಿ! ಸ್ವ…ಲ್ಪ ಸಕ್ಕರೆ ಅಂತಾರೆ! ತಂದಿಟ್ಟು ಪುರ್ಸೊತ್ತೂ ಇಲ್ಲ, ಹಲ್ಲುಕಿರೀತಾ ಮತ್ತೆಕರೆದು ಪುನಹ ಒಂದಷ್ಟು ಸಕ್ಕರೆ ಹಾಕಿಸ್ಕೊಂಡು ಕಲಡಿಸಿ ಎತ್ತಿ-ಇಳ್ಸಿ ಚಪ್ಪರಿಸಿ ಕುಡಿತಾರೆ. ನೀನು ಸಕ್ಕರೆ ಮುಟ್ಟಿಸ್ಬೇಡ ನೇಹ! ಕುಡೀದೆ ಎಲ್ಲಿ ಹೋಗ್ತಾರೇಂತ ನೋಡಿಯೆಬಿಡ್ತೇನೆ!” ಎಂದವರೇ ಉಪ್ಪಿಟ್ಟು ಸ್ವಾಹದಲ್ಲಿ ಮೈಮರೆತರು ಮುಕಾಂಬಿಕಮ್ಮ.
ಕೈತೊಳ್ಕೊಂಡು, “ಚೇತು ಎಲ್ಲಿ ನೇಹ? ಇನ್ನೂ ಎದ್ದಿಲ್ವೇನೇ?” ಎನ್ನುತ್ತಲೇ ಬೆಡ್‌ರೂಮ್ ಹೊಕ್ಕರು ಮುಕಾಂಬಿಕಮ್ಮ. “ಅವನಾ ಸೋಂಬೇರಿ ಸದಾಶಿವ! ದಿನಾ, “ಆಗ್ಲೇ ಏಳುಗಂಟೆಯಾಯ್ತು ಏಳೋ ಮಗನೇ!” ಎಂದ್ರೂ ಏಳಲ್ಲ, ಇನ್ನು ಇವತ್ತು ಭಾನುವಾರ! ಇಷ್ಟುಬೇಗ ಏಳ್ತಾನ?” ಎಂದಳು ನೇಹ ನಸುನಕ್ಕು. “ಅಪ್ಪೂ! ಕಂದಾ! ಏಳು ಮರೀ! ಯಾರ್ಬಂದಿದ್ದಾರೆ ನೋಡೋ! ನಾನು, ನಿನ್ನಜ್ಜಿ ಕಣೋ!” ಮಾತು ಮುಗಿವಮೊದಲೇ ದಿಡ್ಕ ಎದ್ದುಕೂತ ಚೇತು. ಕಣ್ಣುಜ್ಜಿಕೊಳ್ತಾ“ಅಜ್ಜೀ.. !” ಎಂದು ಕೂಗುಹಾಕಿ ಓಡಿಬಂದು ಆಕೆಯ ಕತ್ತಿಗೆ ತೂಗುಬಿದ್ದ. “ಬೇಡ ಕಣೋ ಹುಚ್ಮುಂಡೇಗಂಡ! ವಯಸ್ಸಾದ್ಮೇಲೆ ಹೂಕೂಡ ಭಾರಕಣೋ ತಲೆಹರಟೆ!” ಎಂದು ನುಡಿಯುತ್ತಲೇ ಹತ್ತುವರ್ಷದ ಗೋಣಕಂಜಿಯನ್ನು ಪಚಪಚನೆ ಮುದ್ದಿಸಿದರು ಅಜ್ಜಿ.
ಹಲ್ಲುಜ್ಜುವ ಗೋಜಿಗೇ ಹೋಗದೆ ಮುದ್ದಿನ ಮೊಮ್ಮಗ, “ನಂಗೇನು ತಂದಿದ್ದೀ ತಿಂಡಿ?” ಎನ್ನುತ್ತ ಹಾಲ್‌ನಲ್ಲಿ ಮೂಲೆಯಲಿಟ್ಟಿದ್ದ ಬ್ಯಾಗ್‌ನತ್ತಲೇ ಬಿಟ್ಟಬಾಣದಂತೆ ಗುರಿಯಿಟ್ಟು ಓಡಿದ. “ಏ ಏ ಏ! ತಡಿಯೋ ಮಾರಾಯಾ! ಬಟ್ಟೆಬರೆ ಕಿತ್ತುಹಾಕ್ಬೇಡ! ಉಪ್ಪಿನಕಾಯಿಜಾಡಿಯಿದೆ, ಒಡಿಬೇಡ ಚೇತೂ!” ಎಂದು ಅವನ ಬೆನ್ನಲೇ ಗಡಿಬಿಡಿಯಲ್ಲಿ ಧಾವಿಸಿ ಬ್ಯಾಗಿನ ನಿಗದಿತ ಜಾಗಕ್ಕೇ ಕೈತುರುಕಿ ಚಕ್ಕುಲಿ, ಕೋಡುಬಳೆ, ಮೈಸೂರ್‌ಪಾಕ್‌ನ ಸ್ಟೀಲ್‌ಡಬ್ಬಗಳನ್ನು ಎತ್ತಿಕೆಳಗಿಟ್ಟರು. ಮೊಮ್ಮಗ ಕಾಗೆಯಂತೆ ಹೊತ್ಕೊಂಡು ಅಡುಗೆಮನೆಗೇ ಸೀದ ಓಡಿಹೋದ. ಪ್ಲೇಟಿಗೆ ಸುರಿದುಕೊಂಡು ತಂದು ಸೋಫಾದ ಮೇಲಿಟ್ಟು, ಬಚ್ಚಲಿಗೆ ಓಡಿಹೋಗಿ ಕ್ಷಣಮಾತ್ರದಲ್ಲಿ ಹಲ್ಲುಜ್ಜುವ ನಾಟಕವಾಡಿ ಬಂದು ಕರ್‍ಕುರ್ ತಿನ್ನತೊಡಗಿದ.
ಮುಕಾಂಬಿಕಮ್ಮ ಒಳಗಿಣುಕಿದಾಗ ರಾಯರು ಇನ್ನೂ, ‘ಸೊರ್ ಹಾ! ಸೊರ್ ಹಾ!’ ಸದ್ದಿನೊಂದಿಗೆ ಏದುಬ್ಬಸಬಿಡುತ್ತ ಚಾ ಹೀರುತಿದ್ದರು. ಅವರನ್ನೆ ದುರುಗುಟ್ಟಿ ನೋಡುತ್ತ, “ನೋಡ್ನೋಡ್ ಕುಡಿಯೋದ್ನೋಡ್ ಕೋಣ ಕಲಗಚ್ಚು ಕುಡ್ದ್ ಹಾಗೆ! ಸದ್ದುಮಾಡದೆ ಮೆತ್ತಗೆ ಕುಡಿಲಿಕ್ಕೇನು ದಾಡಿ ನಿಮ್ಗೆ?” ಎಂದದ್ದೇ ತಡ, “ಲೇಲೇ ಹರಕು ನಾಲಗೆಯವ್ಳೇ! ಏನೋ ಹೋಗ್ಲಿಪಾಪಾಂತ ಸುಮ್ಮನಿದ್ರೆ ಹಿಡ್ದದ್ದಕ್ಕೆ ಮುಟ್ಟಿದ್ದಕ್ಕೆಲ್ಲ ಹೇಳ್ಲಿಕ್ಕೆ ಬರ್ತೀಯಲ್ಲೇ ಕತ್ತೆ ಬಡವಿ! ಯಾವ ಗಳಿಗೇಲಿ ನಿನ್ನಪ್ಪ ಅಮ್ಮ ನಿಂಗೆ ಹೆಸರಿಟ್ರೇ ಅಮ್ಮಾ ಮೂಕಾಂಬಾ? ದಳಬಾಯಿ! ಬೊಂಬಾಯಿ! ನಿಂಗಿಂತ ಆ ನತ್ತಲ್ ಬಾಯಮ್ಮನೇ ನೂರುಪಾಲು ಮೇಲುಕಣೇ ಪಾಪಿ!” ಸಿಡಿದರು ರಾಯರು. “ಆಹಾಹ! ಅವ್ಳನ್ನೆ ಕುತ್ತಿಗೆಗೆ ಕಟ್ಕೊಳ್ಳಿ! ಬೇಡ ಅಂದವರ್ಯಾರು?…” ಅರ್ಧದಲ್ಲೇ ಕದನ ಕುತೂಹಲರಾಗದ ಜಗಳಬಂಧಿ ಕಟ್ಟಾಯಿತು ನಮನನ ಒಡ್ಡೋಲಗದಿಂದ. “ಪಪ್ಪ..! ಕೂಡ್ಲೆ ಹೊರಡಿ ಪಪ್ಪ! ನಾವೀಗ್ಲೆ ಹೊಸನಗರಕ್ಕೆ ಹೋಗ್ಬೇಕು.”
“ಏನು! ತಮಾಷೆ ಮಾಡ್ತಿದ್ದೀಯ ನಮೂ? ಹಿಮ್ಮಡಿಯಿನ್ನೂ ನೆಲದಲ್ಲಿ ಸರಿಯಾಗಿ ಊರಿಲ್ಲ, ಹೊಸನಗರಕ್ಕ?” ಎಂದರು ರಾಯರು ಪಿಳಿಪಿಳಿ ಕಣ್ಣುಬಿಡುತ್ತ.
“ಪಕ್ಕದ್ಮನೆ ನೀರಜಮ್ಮ ಫೋನ್ ಮಾಡಿದ್ರು ಪಪ್ಪ! ನಗರದ ನಮ್ಮನೇಲಿ ಕಳ್ಳತನವಾಗಿದೆಯಂತೆ, ನಿಂತಕಾಲಲ್ಲಿ ಕೂಡ್ಲೆ ಹೊರಟುಬನ್ನಿ ಅಂದ್ರು ಪಪ್ಪ!” ಎಂದ ನಮನ್.
“ಅಯ್ಯೋ ದೇವ್ರೇ..! ಏನಾಯ್ತಪ್ಪಾ ಶಿವನೇ..! ನನ್ ಬೆಳ್ಳಿ ಬಂಗಾರ ಎಲ್ಲ ಹೋಯ್ತಲ್ಲೋ ಪರಮಾತ್ಮಾ! ಏನ್ ಮಾಡ್ಲಿಯೋ ನಮೂ..?” ಚೇಳುಕಡಿದವರಂತೆ ದನಿ ತೆಗೆದರು ಮುಕಾಂಬಿಕ.
“ಲೇಲೇಲೇ..! ಕತ್ತೆಲೌಡಿ! ನಿಂಗುಂಟಲ್ಲ, ಏನ್ ಮಾಡ್ತೇನೆ ನೋಡು! ಎಷ್ಟು ಸರ್ತಿ ಹೇಳಿಲ್ಲ ನಿಂಗೆ, ಮನೆಯಲ್ಲಿ ಏನೂ ಇಡ್ಬೇಡಂತ! ಭಾಷೆಯುಂಟ ನಿಂಗೆ? ಬಾಯಿತೆಗೆದ್ರೆ ಸಾಕು, ಎಲ್ಲ ನಿಂಗೇ ಗೊತ್ತಿರೋ ತರಹ ನಿನ್ ಮೂಗಿನ್ ನೇರಕ್ಕೇ ಮಾತಾಡ್ತೀಯಲ್ಲ? ಈಗ ನೋಡು! ಎಲ್ಲ ಲಗಡಿತೆಗೆದ್ಯಲ್ಲೇ ಬಿಕನಾಸಿ?” ಗುಡುಗುತ್ತ ಎಂಜಲು ಕೈಯ್ಯಲ್ಲೇ ಏರಿಬಂದರು ರಾಯರು. ನಡುವೆ ನಾರದನಂತೆ ಬಂದ ನಮನ್, “ಪಪ್ಪ ಇನ್ನಾದ್ರೂ ನಾಟಕ ನಿಲ್ಸಿ ಬೇಗ ಹೊರಡ್ತೀರ? ಕೋಳಿ ಜಗ್ಳ ನೋಡಿನೋಡಿ ಬೇಜಾರು ಬಂತು! ಹೊತ್ತುಗೊತ್ತು ಸಮಯಸಂದರ್ಭದ ಪರಿಜ್ಞಾನ ಒಂಚೂರಾದ್ರು ಬೇಕು ಮನುಷ್ಯನಿಗೆ! ನೇಹ ಹೊರಡು ನೀನು! ಚೇತು ಬರುವುದು ಬೇಡ, ನಿನ್ನ ಅಣ್ಣನಿಗೆ ಫೋನ್ ಮಾಡು! ಅವ್ರ ಮನೇಲಿ ಬಿಟ್ಟು ಹೋಗುದೇ ಒಳ್ಳೇದು”ಎಂದ ಚಿಂತೆ ಹೊತ್ತು.
ಸೆರಗಲ್ಲಿ ಕಣ್ಣೊರೆಸಿಕೊಳ್ಳುತ್ತ ಹೊರಬಂದ ಅತ್ತೆಯನ್ನು ಕಂಡು ನೇಹಳ ಎದೆಕರಗಿತು. “ಅತ್ತೆ ಮನಸ್ಸಿಗೆ ಹಚ್ಕೋಬೇಡಿ, ಬಂಗಾರ ಮುಖ್ಯವಲ್ಲ ಬದುಕು ಮುಖ್ಯ. ನಮ್ಮ ಈ ಕಾಯವನ್ನೇ ಆ ಯಮರಾಯ ಒಂದಲ್ಲ ಒಂದುದಿನ ಹೊತ್ಕೊಂಡು ಹೋಗ್ತಾನಂತೆ, ಇನ್ನು ಚಿನ್ನವೇನು ಮಹಾ!” ಎಂದಳು ತನ್ನ ಬೋಳುಕೈಗಳನ್ನು ತಿರುವುತ್ತ. ಒಂದೆಳೆ ಕರಿಮಣಿಸರ ಹಾಗು ಇದ್ದೂ ಇಲ್ಲದಂತೆ ಕಿವಿಗಳಲ್ಲಡಗಿರುವ ಟಿಕ್ಕಿ ಬಿಟ್ರೆ ಮತ್ಯಾವ ಒಡವೆಗಳನ್ನೂ ಆಕೆ ಧರಿಸಿದ್ದನ್ನು ಮುಕಾಂಬಿಕಮ್ಮ ಇದುವರೆಗೆ ಕಂಡದ್ದಿಲ್ಲ. ಮದುವೆಗೆಂದೇ ತವರುಮನೆಯವರು ಮುತುವರ್ಜಿಯಿಂದ ಮಾಡಿಸಿದ್ದ ಒಡವೆಗಳು ಮರುದಿನವೇ ಬ್ಯಾಂಕ್‌ಲಾಕರೆಂಬ ಲಾಕಪ್ಪಲ್ಲಿ ಕೈದಿಗಳಾಗಿದ್ದವು.
“ಹೌದು ಕಣೇ ನೇಹ! ಬಿದ್ದು ಹೋಗುವ ಈ ದೇಹಕ್ಕೆ ಬಂಗಾರವ ಮತ್ತೆಂತದ್ದ?” ಎಂದು ವೇದಾಂತ ನುಡಿದರಾದರೂ ಅದರ ಆಳದಲ್ಲಿದ್ದ ನಿರಾಶೆಗೆ ಮನಕಲಕಿ, “ಉಡುಪಿಯ ಮುಖ್ಯಪ್ರಾಣದೇವರಿಗೆ ರಂಗಪೂಜೆ ಮಾಡಿಸ್ತೇನೆಂದು ಹರಕೆಹೇಳಿ ಅತ್ತೆ! ಅವ ನಂಬಿದವರ ಕೈಬಿಡಲಾರ”ಎಂದಳು ನೇಹ ಅವರಲ್ಲಿ ಧೈರ್ಯ ತುಂಬಲು.
ಅದುವರೆಗೂ ಇದ್ಯಾವುದಕ್ಕೂ ಸಂಬಂಧವೇ ಇಲ್ಲದವನಂತೆ ಬ್ಯಾಗ್ ತಡಕಾಡುವುದರಲ್ಲೇ ಮಗ್ನನಾಗಿದ್ದ ಚೇತನ್ ಆಟದ ಸಾಮಾನು ಸಿಕ್ಕ ಸಂಭ್ರಮದಲ್ಲಿ ಕುಣಿದಾಡುತ್ತ, “ಅಜ್ಜಿ ಅಜ್ಜಿ, ಬೇಜಾರು ಮಾಡ್ಕೋಬೇಡ ಅಜ್ಜಿ! ನಿನ್ನ ಚಿನ್ನ ಮನೆಯಲ್ಲೆ ಇರ್ತದೆ ಎಲ್ಲೂ ಓಡಿಹೋಗಲ್ಲ ಆಯ್ತಾ!” ಎಂದದ್ದೇ ತಡ, ಮತ್ತೆ ಪ್ರಾಣಬಂದವರಂತೆ ಅವನನ್ನು ಬಾಚಿ ತಬ್ಬಿಕೊಂಡು, “ನೀನು ಹೇಳಿದ್‌ಹಾಗೆ ಆಗ್ಲಿ ಕಂದ! ನಿನ್ ಬಾಯಿಗೆ ಸಕ್ಕರೆ ಹಾಕ್ತೇನೆ ಮಗನೇ!” ಎಂದು ವಿಶ್ವಾಸ ತುಂಬಿದ ಮುದ್ದುಮುಖವನ್ನು ಪಚಪಚ ಮುದ್ದಿಸಿದರು. “ಸಕ್ಕರೆಯಂತೆ ಸಕ್ಕರೆ! ಹೋಗಜ್ಜಿ ನೀನು! ನಿನ್ನ ಸಕ್ಕರೆ ತಿಂದೆ ಅಜ್ಜನಿಗೆ ಡಯಾಬಿಟೀಸ್ ಬಂದದ್ದು! ನಂಗೆ ಗೋಬಿಮಂಚೂರಿ ಬೇಕು ಗೋಬಿಮಂಚೂರಿ!” ಎಂದು ಜಿಂಕೆಯಂತೆ ನೆಗೆಯುತ್ತ ನಕ್ಕ ಆ ಕೀಟಲೆಪುಟ್ಟ.
ವಿಷ್ಣುಮೂರ್ತಿರಾಯರೀಗ ಎಪ್ಪತ್ತರ ಹೊಸ್ತಿಲಲ್ಲಿ ನಿಂತಿದ್ದಾರೆ. ಶಿಕ್ಷಕ ವೃತ್ತಿಯಿಂದ ತಾವು ನಿವೃತ್ತರಾಗುವ ಹೊತ್ತಿಗೆ ಸರಿಯಾಗಿಯೇ ತಮ್ಮ ಗಂಡುಮಕ್ಕಳಿಬ್ಬರೂ ಒಳ್ಳೆಯ ದಡಸೇರಿ ಸಂಸಾರಿಗಳಾಗಿ ಒಂದೊಂದು ಗಂಡು ಸಂತಾನ ಪಡೆದು ಬಾಳಸಾಗರದಲ್ಲಿ ಹಾಯಾಗಿ ಹಾಯಿದೋಣಿ ಸವಾರಿ ಮಾಡುತ್ತಿರುವುದು ಇಳಿವಯಸ್ಸಿನಲ್ಲಿ ಸಾರ್ಥಕತೆ ಮೂಡಿಸಿದ ಸಂಗತಿ. ಸಾಲದ್ದಕ್ಕೆ ಈ ನೇಹ ತಮ್ಮ ಸೋದರಸೊಸೆಯೇ ಎಂಬ ತುಂಬು ಸಮಾಧಾನ, ಸಲಿಗೆ. ಆದರೆ ತಾರುಣ್ಯದ ತುಂಬು ಹೊತ್ತಲ್ಲಿ ತಮ್ಮ ಸ್ವಂತ ಗಳಿಕೆಯಲ್ಲಿ ಹೊಟ್ಟೆಬಟ್ಟೆಕಟ್ಟಿ ಅಷ್ಟಿಷ್ಟು ಕೂಡಿಟ್ಟು, ಹೊಸನಗರದಲ್ಲಿ ಕಟ್ಟಿಸಿದ ಕನಸಿನ ಮನೆಯನ್ನು ತೊರೆದು ಮಕ್ಕಳಜೊತೆ ಉಡುಪಿಯಲ್ಲೋ ಬೆಂಗಳೂರಲ್ಲೋ ಶಾಶ್ವತವಾಗಿ ನೆಲೆಯೂರುವುದು ಮನಕೆ ಒಗ್ಗದಮಾತು. ಅಬ್ಬಬ್ಬಾ ಅಂದ್ರೆ ಒಂದೆರಡು ತಿಂಗಳು, ಅದಕ್ಕಿಂತ ಒಂದು ನಿಮಿಷವೂ ಮಕ್ಕಳಮನೆಯಲ್ಲಿ ಇದ್ದು ಗೊತ್ತಿಲ್ಲ. ಹಿರಿಮಗ ನವೀನನಿರುವುದು ಬೆಂಗಳೂರಲ್ಲಿ. ಅಲ್ಲಿಗೆ ಹೋದಾಗೆಲ್ಲ ರಾಯರೂ ಅವರ ಅಣ್ಣ-ತಮ್ಮಂದಿರೂ ಮಾತಾಡಿಕೊಂಡು ಸಂಸಾರಸಮೇತ ಕಾಶಿಗೋ ರಾಮೇಶ್ವರಕ್ಕೋ ಯಾತ್ರೆ ಹೋಗುವುದುಂಟು. ಈ ಸಾರಿಯೂ ಆಂಧ್ರಯಾತ್ರೆ ಮುಗಿಸಿಕೊಂಡು ಒಂದೆರಡುದಿನ ಬೆಂಗಳೂರಲ್ಲಿದ್ದು, ಉಡುಪಿಗೆ ಬಂದಿದ್ದಷ್ಟೆ! ಗಟ್ಟಿಯಾಗಿ ಪಾದವಿನ್ನೂ ಊರಿಲ್ಲ, ತಮ್ಮ ಜೀವದಜೀವ ಭಾವದಭಾವವಾಗಿ ಬೆರೆತುಹೋಗಿದ್ದ ಮನೆಗೆ ಕಳ್ಳರು ಹೊಕ್ಕಿರುವ ವಾರ್ತೆ ದಂಗುಬಡಿಸಿತ್ತು.
“ಕೊನೆಯುಸಿರಿರುವವರೆಗೆ ಉಳಿವಂತಹ ನೋವು ಕೊಡಬೇಡ ದೇವರೇ! ಜೀವನದ ಈ ತಂಪು ಇಳಿಹೊತ್ತಲ್ಲಿ ಬಿಸಿಲಿಗೆ ದೂಡಬೇಡ ಭಗವಂತ!” ಮುಪ್ಪಾದ ಹೆಣ್ಣುಜೀವ ಮತ್ತೆಮತ್ತೆ ಪ್ರಾರ್ಥಿಸುತಿತ್ತು.
“ಅಮ್ಮ ಎಷ್ಟಿತ್ತಮ್ಮ ಚಿನ್ನ? ಎಲ್ಲಿಟ್ಟಿದ್ದೆ?” ಕೇಳಿದ ನಮನ್, ಡ್ರೈವಿಂಗ್ ಮಾಡುತ್ತ. “ಅತ್ತೆ ಸ್ವಲ್ಪ ತಡೀರಿ, ನಾನು ಬರ್ಕೊಳ್ತೇನೆ! ಯಾವುದಕ್ಕೂ ಪೋಲೀಸರು ಕೇಳಿದ್ರೆ ಲೀಸ್ಟ್ ಬೇಕಾಗಬಹುದು”ಎಂದಳು ಮುಂದಾಲೋಚನೆಯಲ್ಲಿ ನೇಹ.
“ಬೆಂಡೋಲೆ ಎರಡು ಜತೆ, ಕೊತ್ತಂಬರಿಸರ ಒಂದು, ಮುತ್ತಿನ ಪೆಂಡೆಂಟ್‌ನ ಮುತ್ತಿನ ಸರ ಒಂದು, ಹರಳಿನ ಪೆಂಡೆಂಟ್‌ನ ಒಂದೆಳೆ ಚೈನು ಒಂದು, ಹವಳದ ಬೋಳುಸರ ಒಂದು, ಡಿಸ್ಕೊಚೈನು ಒಂದು…!” ಪಟ್ಟಿ ಹನುಮಂತನ ಬಾಲದಂತೆ ಬೆಳೀತಿದ್ದಂತೆ ಎದೆಧಸಕ್ಕೆಂದಿತು ಮಗನಿಗೆ! ಸುಮಾರು ಮುನ್ನೂರು ಗ್ರಾಂ ಚಿನ್ನ! ಈಗಿನ ಬೆಲೆ ಸಾಧಾರಣವಲ್ಲ, ಅಸಾಧಾರಣ! ಒಂಬತ್ತರಿಂದ ಹತ್ತುಲಕ್ಷ! ಇನ್ನು ಬೆಳ್ಳಿಯ ಕಾಲುದೀಪ, ಹರಿವಾಣ, ಲೋಟ, ತಂಬಿಗೆ, ಕುಂಕುಮಭರಣಿ, ಚಮಚ… ಸೇರ್ಸಿದ್ರೆ ಹನ್ನೆರಡು ಲಕ್ಷವಾದ್ರು ಆದೀತು! ಎಣಿಸಿಗುಣಿಸಿ ತಾಳೆಹಾಕಿ ಮುಖಕಳೆಗುಂದಿತು.
“ಅದ್ರೊಟ್ಟಿಗೆ ಹನ್ನೆರಡು ಸಾವಿರ ಕ್ಯಾಶಿಟ್ಟಿದ್ದೆ ಕಣೋ ನಮೂ”ಎಂದ ಬಾಯಿಯಿನ್ನೂ ಮುಚ್ಚಿಲ್ಲ, ಸರ್ಕ ಪಿತ್ತನೆತ್ತಿಗೇರಿತು ರಾಯರಿಗೆ! ನಿಂಗೇ ನಿಂಗೇ ನಿಂಗೇ..! ಹಾಕ್ತೇನೆ ನೋಡು ಹುಚ್ಮುಂಡೆ..! ಕ್ಯಾಶ್ ನಂಗೆ ಕೊಡ್ಬಾರ್ದಿತ್ತ ನೀನು? ಬ್ಯಾಂಕಲ್ಲಿ ಹಾಕಿದ್ರೆ ಬಡ್ಡಿಬರ್ತಿತ್ತು. ಮನೇಲಿಟ್ರೆ ಇಟ್ಟಲ್ಲೆ ಮೊಟ್ಟೆಯಿಡ್ತದ ದುಡ್ಡು? ಹಡಬೆ ಎಲ್ಯಾದ್ರು!”
“ಆಹಾಹಾ, ಮೇಷ್ಟ್ರ ಬಾಯಲ್ಲಿ ಬರುವ ಬೈಗುಳವೇ? ಕೇಳಿದ್ರೆ ನಾಯಿಕೂಡ ಹೇಲುಬಿಟ್ಟು ಓಡೀತು! ಎಂಥ ಮಾವ ನೀವು!”
ಅವಳ ಶಿಸ್ತುನೋಡಿ ಒಂಚೂರು ಕಲಿಯಿರಿ ನೀವು! ಅಲ್ಲ ಕಣೇ, ಹುಳಿಮಾಡಿಟ್ಟು ಬಂದ್ರೆ ನಾನು ಸ್ನಾನಕ್ಕೆ ಹೋಗುದನ್ನೇ ಕಾದು ಉಂಡೆಬೆಲ್ಲ ಎತ್ತಿಹಾಕ್ತಾರೆ ಗೊತ್ತಾ? ಸ್ವಲ್ಪ ತಡ್ಕೊಳ್ಲಿ! ಈಗ್ಲೆ ಕೊಡ್ಬೇಡ, ಏನಾಗ್ತದೇಂತ ನಾನಿವತ್ತು ನೋಡಿಯೇ ಬಿಡ್ತೇನೆ!” ಎಂದು ಮೂತಿಯುದ್ದ ಮಾಡಿದ್ರು ಮುಕಾಂಬಿಕಮ್ಮ.
“ಅಲ್ಲ ಕಣೇ, ಸ್ವಲ್ಪವಾ! ಹನ್ನೆರಡು ಸಾವಿರ ರೂಪಾಯಿ ಕ್ಯಾಶ್! ಬೈಯದೆ ಪೂಜೆ ಮಾಡ್ಬೇಕಿತ್ತ ನಾನು? ಎದೆಮೇಲೆ ಕಲ್ಲು ಎತ್ತಿಟ್ಟ ಹಾಗಾಗಿದೆ ನಂಗೆ! ನಿಮಗೆ ಹೆಂಗ್ಸ್ರಿಗೆ ಎಲ್ಲಿ ಗೊತ್ತಾಗ್ಬೇಕು ನಮ್ ಕಷ್ಟ?”
“ಮಾವ! ಹನ್ನೆರಡು ಸಾವಿರ ಕ್ಯಾಶ್ ದೊಡ್ಡದಾ, ಹನ್ನೆರಡು ಲಕ್ಷ ಬೆಲೆಬಾಳುವ ಬಂಗಾರ ದೊಡ್ಡದ?” ನೇಹ ಅರ್ಥಮಾಡಿಸಲು ಪ್ರಯತ್ನಿಸಿದಳಾದರೂ ‘ಹೇಳ್ ನಿನ್ ಬಾಯೆ, ಕೇಳ್ ನನ್ ಕುಂಡೆ’ ಎಂಬಂತೆ ಪದೇಪದೇ ಹೇಳಿದ್ದನ್ನೇ ಹೇಳುವ ಚೊರೆಪಟ್‌ಕಿಸಿಬಾಯಿದಾಸರಾದರು. ನೇಹಳಿಗೆ ಅಯ್ಯೋ! ಅನಿಸಿ, “ಎಷ್ಟು ಮುಗ್ಧ ಜೀವವಪ್ಪಾ ಇದು! ದೇವರೇ ಇವರ ಖುಶಿಗೆ ಕಲ್ಲುಬೀಳದಿರಲಿ” ಎಂದು ಪ್ರಾರ್ಥಿಸಿ, ನಮನನ ಕಿವಿಬಳಿಯೂ ಅದನ್ನೆ ಉಸುರಿದಳು.
ರಾಯರಿಗೆ ನಿತ್ಯ ಮುಂಜಾನೆಯಿಂದ ರಾತ್ರಿ ಮಲಗುವವರೆಗೂ ಹತ್ತು-ಹದಿನೈದು ಬಾರಿಯಾದರೂ ಪರ್ಸ್‌ನಿಂದ ನೋಟುಗಳನ್ನು ಹೊರತೆಗೆದು ಎಣಿಸದಿದ್ದರೆ ಉಂಡ ಅನ್ನ ಜೀರ್ಣವಾಗದೆಂಬುದು ಇವರಾರಿಗೂ ತಿಳಿಯದ ಹೊಸ ಸಂಗತಿಯೇನಲ್ಲ. ಎಣಿಸಿದ್ದನ್ನೇ ಎಣಿಸಿಎಣಿಸಿ ಲೆಕ್ಕಮರೆತು ಪೇಚಿಗೊಳಗಾಗುವುದು ನೇಹಳಿಗೊಂದು ಮಜಭೂತಾದ ವಿಷಯ.
ಐದು ರುಪಾಯಿ ನೋಟು ಮಿಸ್ಸಾದರೂ ಸಾಕು, ಮಿಸೆಸ್ ಹಿಂದೆ -ಮುಂದೆ ಹಾಲಿನ ಪರಿಮಳ ಹಿಡಿದ ಕಳ್ಳಬೆಕ್ಕಿನಂತೆ ಸುಳಿದುಸುತ್ತಿ ಅವರು ಕದ್ದಿಲ್ಲದಿದ್ದರೂ, “ಹೌದು ನಾನೇ ತೆಗೆದವಳು! ಏನೀಗ?” ಎನ್ನುವವರೆಗೂ ಕಾಡದೆ ಸಮಾಧಾನವಿಲ್ಲ ಈ ಮಿಸ್ಟರ್ಗೆ. ಆದರೆ ಐನೂರೋ ಸಾವಿರವೋ ಕಾಣೆಯಾದರೆ ಈ ಆಸಾಮಿಗೆ ಗೊತ್ತೂ ಆಗುದಿಲ್ಲ, ಬೋದಾಳ! ಎಂಬುದನ್ನು ಅತ್ತೆ ಸಮಾ ಉಪ್ಪುಹುಳಿಖಾರ ಮಸಾಲೆಬೆರೆಸಿ ಎಷ್ಟುಸರ್ತಿ ತನ್ನಲ್ಲಿ ಹೇಳಿಲ್ಲ!
“ಅಮ್ಮ, ಬೆಳ್ಳಿಬಂಗಾರ ಎಲ್ಲ ಗೋದ್ರೆಜಲ್ಲಿಟ್ಟು ಬೀಗ ಹಾಕಿ ಬಂದಿದ್ದೇ ಆದ್ರೆ, ಅದ್ರ ಆಸೆ ಬಿಟ್ಟು ಬಿಡಿ! ಈಗಿನ ಕಳ್ಳರಿಗೆ ಲಾಕರ್ ಒಡೆಯುದೆಂದರೆ ನೀರುಕುಡಿದಷ್ಟೇ ಸುಲಭ!” ಎಂದ ನಮನ್. “ಗೋದ್ರೆಜಲ್ಲಿ ಇಡ್ಲಿಕ್ಕೆ ನಂಗೇನು ಮಂಡೆಸಮ ಇಲ್ವನ? ನನ್ನ ಬಂಗಾರ ಬೆಳ್ಳಿ ಎರಡನ್ನೂ ಬೇರೆಬೇರೆಯಾಗಿ ಹಳೇ ರೇಷ್ಮೆಸೀರೆ ತುಂಡುಗಳಲ್ಲಿ ಗಂಟುಕಟ್ಟಿ, ಹಳೆ ಕಬ್ಬಿಣದ ಪೆಟ್ಟಿಗೇಲಿ ತುಂಬಿಸಿ, ಅದರ ಮೇಲೆ ಹೊಸಾ ರೇಷ್ಮೆಸೀರೆಗಳನ್ನು ಚಂದಮಡಚಿಟ್ಟು, ಬಾಯಿಮುಚ್ಚಿ ಬೀಗಹಾಕಿದ್ದೇನೆ ಗೊತ್ತಾ?” ಎಂದರು ಮುಕಾಂಬಿಕಮ್ಮ.
“ಅಯ್ಯಯ್ಯಾ! ಆ ಲಟಾರಿ ಪೆಟ್ಟಿಗೆಯಲ್ಲಾ? ಹಾಗಾದ್ರೆ ತುಳಸಿ ನೀರೊ ಎಳ್ಳುನೀರೊ ಬಿಟ್ಟುಬಿಡಿಯಮ್ಮ! ಎಲ್ಲ ಮುಗೀತು.” ಎಂದ ನಮನ್. “ಲಟಾರಿ ಪೆಟ್ಟಿಗೆ ಅನ್ಲಿಕ್ಕೆ, ಅದೇನು ನಿನ್ ಮೂಗಿಂದ ಉದುರಿದ್ದ? ನನ್ ಮದುವೇಲಿ ತವ್ರುಮನೆಯವ್ರು ಕೊಟ್ಟದ್ದಾಯ್ತ ಮಗಾ!”
“ಹೌದೌದು! ನಿನ್ನ ತವರುಮನೆಯವರು ಕೊಟ್ಟದ್ದೂಂತ ಕಳ್ರು ಅದನ್ನು ಬಿಟ್ಟು ಹೋಗ್ತಾರೆ! ಇದೊಳ್ಳೆ ಕತೆ ನಿಂದು!” ಚಿಂತೆಯಲ್ಲೂ ಜೋರಾಗಿ ನಕ್ಕ ನಮನ್.
“ಹೋಗೋ..! ನಗ್ಲಿಕ್ಕೆ ನನ್ ಮೂತಿಲೇನು ಕೋತಿ ಕುಣೀತಿದೆಯ? ಎಷ್ಟು ಚೆನ್ನಾಗಿದೆಯದು! ನೀಲಿ ಪೈಂಟಿನ ಪೆಟ್ಟಿಗೆ! ತವರಿನ ಬಳುವಳಿಯದು, ಹಗುರ ಮಾಡ್ಬೇಡ ನೀನು! ನನ್ ಕೈಗೆ ಬಂದು ನಿನ್ನಣ್ಣನಷ್ಟು ವಯಸ್ಸಾಯ್ತು ಅದಕ್ಕೆ! ನಂಗೆ ನನ್ನಮ್ಮ, ನನ್ನಮ್ಮಂಗೆ ಅವರಮ್ಮ, ಅವರಮ್ಮಂಗೆ ಅವರಮ್ಮ..! ಒಂದು ದೊ…ಡ್ಡ ಪರಂಪರೆಯೇ ಇದೆ ಆಯ್ತ ಅದಕ್ಕೆ! ಅಮ್ಮನ ಆಶೀರ್ವಾದ ಅದು!”
“ಒಳ್ಳೆ ಅಮ್ಮ ನೀನು! ನಿನ್ನಮ್ಮನ ಆಶೀರ್ವಾದ ಇದೆ, ಅದಕ್ಕೆ ಅಂಗಳದಲ್ಲಿಟ್ರೂ ಕಳ್ರು ಒಯ್ಯಲ್ಲ ಅದನ್ನು! ಸರಿಬಿಡು, ನಿನ್ ಕುದ್ರೆಗೇ ಮೂರುಕಾಲು.”
“ಅಂಗಳದಲ್ಲಾ? ಎಷ್ಟು ಜೋಕೆ ಜೋಪಾನ ಮಾಡಿ ಮುಚ್ಚಿಟ್ಟಿದ್ದೇನೇಂತ ನಿಂಗೇನ್ಗೊತ್ತು? ನಮ್ಮ ಬೆಡ್‌ರೂಂನ ಮಂಚದಡಿ ಬೀಗ ಕಾಣಿಸದಂತೆ ಗೋಡೆಕಡೆಗೆ ತಿರುಗಿಸಿ, ತಳ್ಳಿ, ಮಲಗಿಕೊಂಡೇ ಅದರತ್ರ ಆ ಸಪೂರಸಂಧಿಯಲಿ ಹೊರಳಿ, ಕರಿಕಂಬಳಿಯನ್ನು ಅದ್ರ ಮೇಲೆ ಹೊದ್ದು, ಹೊರಬರ್ಬೇಕಾದ್ರೆ! ಅಮ್ಮನ ಹೊಟ್ಟೆಯೊಳಗೆ ಮತ್ತೊಮ್ಮೆ ಹೊಕ್ಕು ಹೊರಬಂದ ಹಾಗಾಯ್ತು ನೋಡು!” ಎಂದರು ತಾವೇ ಜಾಣೆ ಎಂಬಂತೆ!
ಮರದ ಮುಚ್ಚಿಗೆಯ ಬೆಡ್‌ರೂಮ್ ಅದು. ಹಾಡುಹಗಲಲ್ಲೂ ಬ್ಯಾಟರಿ ಹಿಡ್ಕೊಂಡೇ ಓಡಾಡುವಷ್ಟು ನಡುರಾತ್ರಿಯ ಕಪ್ಪುಕತ್ತಲನ್ನು ಬಳಿದುಕೊಂಡೇ ಇದ್ದು, ಚಳಿಗಾಲದಲ್ಲಿ ಕಂಬಳಿಹೊದ್ದು ಗಟ್ಟಿಮಲಗಲು ಹೇಳಿಮಾಡಿಸಿದಂತೆ ಬೆಚ್ಚಗಿತ್ತು. ಅಂತಹ ಕಗ್ಗತ್ತಲ ಕೋಣೆಯಲ್ಲಿ ಕಡುನೀಲಿಬಣ್ಣದ ಪೆಟ್ಟಿಗೆಯನ್ನು ಹಗಲು ಹೊತ್ತಲ್ಲಿ ಮಂಚದ ಮೇಲಿಟ್ಟರೆ ಹಗಲುಗಳ್ಳರಿಗೇ ಕಾಣಿಸ್ಲಿಕ್ಕಿಲ್ಲ, ಇನ್ನು ಕ್ವಾಟಿನಡಿ ಕರಿಕಂಬಳಿ ಹೊದೆಸಿಟ್ಟರೆ ರಾತ್ರಿಕಳ್ಳರಿಗೆ ಸಿಗುವುದುಂಟೆ? ಎಂದು ಅವರು ನಂಬಿದ್ದರಲ್ಲೇನು ಉತ್ಪ್ರೇಕ್ಷೆ ಕಾಣಿಸಲಿಲ್ಲ ಅವನಿಗೆ.
‘ಕಳ್ಳರು ಲೈಟ್‍ಹಾಕಿ ಕದಿವಷ್ಟು ಮೂರ್ಖರಿರಲಿಕ್ಕಿಲ್ಲ! ಆದರೆ ಕನಿಷ್ಟಪಕ್ಷ ಬ್ಯಾಟ್ರಿಯಿಲ್ಲದೆ ನುಸುಳ್ಲಿಕ್ಕಿಲ್ಲ!’ ಎಂಬ ಆಲೋಚನೆ ಬಂದು, “ಆದ್ರೂ ಅಮ್ಮ! ಐದು ಬಾಗಿಲುಗಳ ಬೀಗಮುರಿದ ಕಳ್ಳರಿಗೆ, ನಿನ್ನ ಓಬೀರಾಯನಕಾಲದ ಹಳೆಪೆಟ್ಟಿಗೆ.. ಅದ್ರ ಬೀಗ.. ದೊಡ್ಡ ಸಂಗತಿಯೇನಲ್ಲಬಿಡು! ಆಸೆ ಇಟ್ಕೊಬೇಡಮ್ಮ, ನಿಂಗೆ ಹೊಸ ಒಡವೆ ನಾನು ಮಾಡ್ಸಿಕೊಡ್ತೆನೆ”ಎಂದ ಎದೆತುಂಬಿ.
“ಅಯ್ಯೋ ರಾಮ ರಾಮಾ! ಐದೂ ಬೀಗ ಒಡೆದ್ರ ಆ ಹರಾಮ್ಕೋರ ಕಳ್ಮುಂಡೇಗಂಡ ಮಕ್ಳು. ಮೊನ್ನೆಮೊನ್ನೆ ಸಾಗ್ರದಿಂದ ಹೊಸಾಬೀಗ ಕೊಂಡುತಂದದ್ದು ಇವ್ಳ ರಗಳೆಗೆ!” ಸಟ್‍ಸಟ್‍ಸಟಾಲ್ ಸಿಡಿಲಿನಂತೆ ಸಿಡಿದ ರಾಯರು ಅಲ್ಲಿಂದ ಮತ್ತೆ ಅದೇ ಹನ್ನೆರಡುಸಾವಿರ ಕ್ಯಾಶ್ ಕೌಂಟರ್‌ಗೇ ಮರಳಿದರು. “ಇವ್ರಿದ್ದಾರಲ್ಲ? ಎಂಜಲುಕೈಲಿ ಕಾಗೆ ಓಡಿಸಿದವ್ರಲ್ಲ! ಚಾ ಸೋಸಿ ಚಾಪುಡಿಯನ್ನು ಎಸೀಲಿಕ್ಕೆ ಹೊರಟ್ರೆ, ‘ಇರ್ಲಿಇರ್ಲಿ, ನಾಳೆಗಾಯ್ತು’ಅಂತಾರೆ! ನಿಮ್ಮ ಬೀಗಕ್ಕೆ ಕಲ್ಲುಬೀಳ!” ಎನ್ನುತ್ತಿದ್ದಂತೆ “ತೆಪ್ಪಗೆ ಕೂತ್ಕೊ ಮನೆಹಾಳಿ! ನಿನ್ನಿಂದಲೇ, ನಿನ್ನಿಂದಲೇ ಇಷ್ಟೆಲ್ಲ ಆದದ್ದು!” ಎಂದು ಗುಟುರುಹಾಕಿ ಮತ್ತೆ ಕ್ಯಾಶೆತ್ತಿದರು.
‘ನಿನ್ನಿಂದಲೇ.. ನಿನ್ನಿಂದಲೇ.. ಮನೆಯಿಂದು ಹಾಳಾಗಿದೆ…! ನೀಕೊಟ್ಟ ಪ್ರೀತಿಯ ಚಕ್ರಸರ..! ಕೈತಪ್ಪಿ ಕಳ್ಳರ ಪಾಲಾಗಿದೆ..!’ ನೇಹ ಸೋದರಮಾವನೆಂಬ ಸಲಿಗೆಯಲ್ಲಿ ಹಾಡು ಗುನುಗಿದವಳು, ನಮನ್ ಬಿರುಗಣ್ಣು ಬಿಟ್ಟದ್ದನ್ನು ಕಂಡು ಗಂಭೀರೆಯಾದಳು.
ಮುಕಾಂಬಿಕಮ್ಮ ಇದ್ದುದರಲ್ಲೇ ಅಚ್ಚುಕಟ್ಟಾಗಿ ಸಂಸಾರ ನಡೆಸಿಕೊಂಡು ಬಂದ ನಿತ್ಯಸಂತೋಷಿ ಜೀವ. ಬೆಳಗ್ಗೆ ಐದುಗಂಟೆಗೆ ಅವರ ಮನೆಗೆಲಸದಚಕ್ರ ಸುತ್ತಲಾರಂಭಿಸಿದರೆ ನಿಂತು ಅಡ್ಡವಾಗುವುದು ಮಧ್ಯಾಹ್ನ ಎರಡುಗಂಟೆಗೆ. ಮತ್ತೆ ಐದುಗಂಟೆಗೆ ಎದ್ದು ಸುತ್ತತೊಡಗಿದರೆ ನಿಲ್ಲುವುದು ರಾತ್ರಿ ಒಂಭತ್ತು ಗಂಟೆಗೆ. ‘ಮುಕಾಂಬಮ್ಮನಂತೆ ಮನೆಯನ್ನು ಒಪ್ಪ ಓರಣವಾಗಿ ಇಟ್ಕೊಳ್ಳುವವರು ಹೊಸನಗರದಲ್ಲೇಕೆ? ಇಡೀ ಭೂಮಂಡಲದಲ್ಲೂ ಭೂತಕನ್ನಡಿ ಹಿಡ್ಕೊಂಡು ಹುಡುಕಿದ್ರೂ ಸಿಗಲಾರರು’ಎಂದು ಮಂದಿ ನೆಂಟರಿಷ್ಟರು ಹಾಡಿಹೊಗಳಿದ್ದರಿಂದ ಕೋಡುಬೆಳೆದು ಅದಕ್ಕೆ ಬದ್ಧರಾಗಿ ಒಗ್ಗಿಬಿಟ್ಟಿದ್ದರು.
ಮಕ್ಕಳು ಅವರ ಅತಿಯಾದ ಕೆಲಸ ಹಾಗು ಸ್ವಚ್ಚತೆಯ ಗೀಳುರೋಗಕ್ಕೆ ಕೆಲವೊಮ್ಮೆ ಬೇಸತ್ತು ಗದರಿ ಕಣ್ಣೀರ ಮೌನವ್ರತಕೆ ಹೆದರಿ ಸುಮ್ಮಗಾಗುತಿದ್ದರು. ‘ಅಮ್ಮನ ಅಸ್ತ್ರ ಹಿಡಿ ಮತ್ತು ಕೈವಸ್ತ್ರ’ ಎಂದು ಗೇಲಿ ಮಾಡುವುದೂ ಉಂಟು.
ಬಾಯಿ ಬಡಬಡ ಆದರೂ ಮುಕಾಂಬಿಕಮ್ಮ ಆಕಳು ಸ್ವಭಾವದವರು. ಮನೆಯಂತೆ ಆಕೆಯ ಮನವೂ ಸ್ವಚ್ಚಕನ್ನಡಿ. ಅವರ ಸೀರೆ, ಒಡವೆ ಹುಚ್ಚುಮಾತ್ರ ಬಹುಪಾಲು ಹೆಂಗಸರದ್ದೆ. ಸಭೆ ಸಮಾರಂಭಗಳಲ್ಲಿ ಎಂಟೂಮಂದಿ ಅಕ್ಕ-ತಂಗಿಯರು ಒಟ್ಟುಸೇರಿದಾಗ ಮಾತಿನವಸ್ತು ಕೂಡ ಇದೇ. ಪ್ರತಿಸಲವೂ ಹೊಚ್ಚಹೊಸದಾಗಿ ಹೊಳೆಯುವ ಅವರ ಕತ್ತು ಮೈಕೈಯ ಚಿನ್ನಚೆಲುವ ಕಂಡು ಮರಳಿ ಗೂಡುಸೇರಿದ ಕೂಡಲೆ ಕನ್ನಡಿಯ ಮುಂದೆನಿಂತು ತಮ್ಮ ಕರಿಮಣಿ, ಒಂದೆಳೆಚೈನು, ಗಾಜಿನ ಬಳೆಗಳನ್ನು ಮುಟ್ಟಿಕೊಂಡು ಒಳಗೊಳಗೇ ಸಂಕಟಪಡುತ್ತ ಹನಿಗಣ್ಣಾಗುತಿದ್ದರು ಬಿಟ್ರೆ, ಇಂತದ್ದು ಬೇಕೆಂದು ಗಂಡನಿಗೆ ಬಾಯ್ಬಿಟ್ಟು ಹೇಳಿದವರೇ ಅಲ್ಲ. ಪಾಪದ ರಾಯರೂ ಮೂಕಾಂಬಿಕೆಯ ಮೂಕಗೋಳನ್ನು ಅರ್ಥಮಾಡಿಕೊಂಡವರೂ ಅಲ್ಲ.
ಮೊದಮೊದಲು ಗಂಡನ ಕಿಸೆಕಳ್ಳತನ ಮಾಡಲು ಕಲಿತು ಚಿಲ್ಲರೆ ಪುಡಿಗಾಸನ್ನು ಕೊತ್ತಂಬರಿ ಡಬ್ಬದಲ್ಲೋ ಜೀರಿಗೆ ಡಬ್ಬದಲ್ಲೋ ಕೂಡಿಟ್ಟು ಸಣ್ಣಪುಟ್ಟ ಒಡವೆಗಳನ್ನು ಮಾಡಿಸಿಕೊಳ್ಳುತಿದ್ದವರು ಇಬ್ಬರೂ ಗಂಡುಮಕ್ಕಳು ಬೆಳೆದು ಕೈಗೆಬಂದ ಬಳಿಕ ಗರಿಗರಿನೋಟುಗಳನ್ನು ಸೀರೆಯಡಿಯೋ ಇಲ್ಲಾ ಅವರದ್ದೇ ಉಚ್ಚಾರದಲ್ಲಿ ಹೇಳುವುದಾದರೆ ಫಿರ್ಜಲ್ಲಿ ಮುಚ್ಚಿಡುವ ಹೊಸಗಾಲಕೆ ತೆರೆದುಕೊಂಡವರು. ರಾಯರು ಬ್ಯಾಂಕಲ್ಲಿ ಎಕೌಂಟ್ ಓಪನ್ ಮಾಡಿ ಗಿಣಿಗೆ ಹೇಳಿದಂತೆ ಹೇಳಿದ್ರೂ ಉಳಿತಾಯಖಾತೆಯಲ್ಲಿ ನಗದು ಇಡಲು ಒಪ್ಪಲಿಲ್ಲ. ತೀರಾ ಇತ್ತೀಚೆಗೆ ಹಳೆಯೊಡವೆಗಳನ್ನು ಮುರಿಸಿ ಇನ್ನಷ್ಟು ಮತ್ತಷ್ಟು ಹೆಚ್ಚೇ ತೂಗುವಂತೆ ಹೊಸವಿನ್ಯಾಸಗಳಿಗೆ ರೂಪಾಂತರಿಸಿಕೊಂಡು ಧರಿಸಲೆಂದೇ ಮದುವೆ, ಮುಂಜಿ, ನಾಮಕರಣ, ಶ್ರಾದ್ಧಗಳಲ್ಲಿ ತಪ್ಪದೆ ಹಾಜರಿ ಹಾಕುತಿದ್ದರು. ಆ ಕಡೆ ಡಿಸ್ಕೋಚೈನನ್ನು ಪರಿಚಯಿಸಿದ ಮೊತ್ತಮೊದಲ ಹೆಂಗಸು ಎಂಬ ರೆಕಾರ್ಡ್ ಕೂಡ ಅವರದ್ದೇಯಂತೆ. ಅವಲಕ್ಕಿಸರದಿಂದ ಡಿಸ್ಕೋಚೈನಿಗೆ ಬದಲಾದ ಆಧುನಿಕ ಮನೋಭಾವದವರು.
ಹೊಟ್ಟೆಬಟ್ಟೆಕಟ್ಟಿ ಮಾಡಿಸಿ ಹಳೇಟ್ರಂಕಿನೊಳಗೆ ಜೋಪಾನ ಮುಚ್ಚಿಟ್ಟು ಇಷ್ಟುವರ್ಷ ಜತನದಿಂದ ಜೋಕೆಯಾಗಿ ಕಾಯ್ದುಕೊಂಡು ಬಂದಿದ್ದ ತಮ್ಮ ಅಮೂಲ್ಯ ಆಸ್ತಿಗೇ ಕನ್ನಹಾಕಹೊರಟ ಕಳ್ಳರಿಗೆ ಎರಡೂ ಕೈಹೊಸಕುತ್ತ ನೆಟಿಗೆಮುರಿಯುತ್ತ ಹಿಡಿಶಾಪ ಹಾಕಿದ್ರು ಮುಕಾಂಬಿಕಮ್ಮ.
“ಪಪ್ಪ.. ನೀವಾದ್ರೂ ಹೇಳ್ಬಾರ್ದಿತ್ತ ಈ ಅಮ್ಮನಿಗೆ? ಒಂದು ಬ್ಯಾಂಕ್ ಲಾಕರ್ ಮಾಡ್ಸಿ ಅಂಥ ನಾನೆಷ್ಟು ಸರ್ತಿ ಹೇಳಿಲ್ಲ ಪಪ್ಪ ನಿಮ್ಗೆ ಈಗ ಅದ್ರ ಫಲ ಅನುಭವ್ಸಿ” ಎಂದು ಮುಖದೊಡ್ಡದು ಮಾಡ್ಕೊಂಡ ನಮನ್. “ಏಏಏಏ, ಹೋಗೋ..! ನಾನು ಮೇಷ್ಟ್ರು ಕಣೋ! ನಂಗೆ ಎಷ್ಟು ಗೌರವವಿದೆ ನನ್ನೂರಲ್ಲಿ! ಇಷ್ಟಕ್ಕೂ ಮೇಷ್ಟ್ರ ಮನೆಗೆ ಕಳ್ಳರು ನುಗ್ಗಿದ ಇತಿಹಾಸ ಕೇಳಿದ್ದುಂಟ ಎಲ್ಲಿಯಾದ್ರೂ? ಅಪ್ಪಿತಪ್ಪಿ ನುಗ್ಗಿದ್ರೂ ಚಿನ್ನಗಿನ್ನ ಕೊಂಡೋಗಿರ್ಲಿಕ್ಕಿಲ್ಲ ಬಿಡು! ಹೋದ್ರೆ ಸಣ್ಣದು ಪುಟ್ಟದು ಏನಾದ್ರು ಹೋದೀತು ಅಷ್ಟೆ! ಅಲ್ಲಾ ಹೋಗಿ ಹೋಗಿ ಕ್ಯಾಶ್..!” ಹಳೆವರಸೆ ಎತ್ತುತ್ತಿದ್ದಂತೆ ನೇಹಗೆ ನಗುತಡೆದುಕೊಳ್ಳಲಾಗಲಿಲ್ಲ.
“ಏನು! ಮೇಷ್ಟ್ರಮನೆಗೆ ಕಳ್ಳರು ಕನ್ನಹಾಕುದಿಲ್ವ? ಯಾವ ಕಾಲದಲ್ಲಿದ್ದೀರಿ ಪಪ್ಪ ನೀವು..!” ಎಂದ ಬೆನ್ನಿಗೇ ನಮನ್ ಕಿಸಕ್ಕನೆನಕ್ಕ.
ಮುಕಾಂಬಿಕಮ್ಮ ಇದ್ದಬದ್ದ ದೇವರಿಗೆಲ್ಲ ಹರಕೆ ಹೇಳಿಕೊಳ್ಳಲಾರಂಭಿಸಿದರು. ಗುಡ್ಡೆಟ್ಟುಗಣಪತಿಗೆ ಆಯಿರ್ಕೊಳಹರಕೆ, ಚಿಕಪೇಟೆಗಣಪತಿಗೆ ಗಣಹೋಮ, ಕಾರ್ಗಾಡಿ ಗಣಪತಿಗೆ ಪಂಚಕಜ್ಜಾಯ… ಹರಕೆಪಟ್ಟಿ ಬೆಳೆಯುತಿದ್ದಂತೆ ಮನೆಯಲ್ಲಿಟ್ಟಿದ್ದ ಚಿನ್ನಕ್ಕಿಂತಲೂ, ಅವು ಉಳಿದ್ರೆ ಮುಂದೆ ಹರಕೆಸಂದಾಯದ ಬಾಬ್ತೇ ಕೈಮೀರಿಹೋದೀತು ಎಂಬ ಭಯದಿಂದ ರಾಯರು, “ಸಾಕು ಸಾಕು ಪುಣ್ಯಾತ್ಗಿತ್ತಿ! ಅವನಿಗೆಂತಕ್ಕೆ ಹೇಳು ಲಂಚ? ಅವ ನಮ್ಮ ಹೃದಯದಲ್ಲೆ ಇದ್ದಾನೆ. ಉಡುಪಿ ಮುಖ್ಯಪ್ರಾಣನಿಗೆ ರಂಗಪೂಜೆ ಮೊದಲು ಹೇಳ್ಕೊಂದಾಗಿದೆಯಲ್ಲ, ಅಷ್ಟು ಸಾಕು! ಚಿಕ್ಕಪೇಟೆಗಣಪತಿ ಹೇಗೂ ಊರ ದೇವ್ರು, ಅವನಿಗೊಂದು ಹಣ್ಣುಗಾಯಿಮಾಡಿಸುವ ಬೇಕಿದ್ರೆ..” ಎಂದರು.
“ಬೇಕಿದ್ರೆ! ಯಾರಿಗೆ ಬೇಕು? ನಮಗಾ? ಅವನಿಗಾ?” ಎನ್ನುತ್ತ ಗಂಡನತ್ತ ಬಿರುನೋಟ ಬೀರಿದರು ಮುಕಾಂಬಿಕಮ್ಮ.
ನಡುನಡುವೆ ಬೆಂಗಳೂರಿಂದ ಹಿರಿಮಗ ನಯನ್ ಹಾಗು ಸೊಸೆ ಮಂದಾರ ಫೋನುಮಾಡಿ ವಿಚಾರಿಸಿಕೊಳ್ಳುತ್ತ ಧೈರ್ಯತುಂಬುತ್ತಲೇ ಇದ್ದುದರಿಂದ ಹೆತ್ತ ಜೀವಗಳಲಿ ಏನೋ ಭದ್ರತಾ ಭಾವ! ಆದರೆ ಪೋಲೀಸರಿಂದ, ಅಕ್ಕಪಕ್ಕದವರಿಂದ, ನೆಂಟರಿಷ್ಟರಿಂದ ಗಡಿಗಡಿ ಬರುತ್ತಲೇ ಇದ್ದ ಕರೆಗಳಿಗೆ ಉತ್ತರಿಸಿ ಉತ್ತರಿಸಿ.. ನಮನನ ಗಂಟಲು ಹೂತುಹೋದಂತಾಗಿತ್ತು. ‘ಬರುತ್ತಿದ್ದೇವೆ, ಇಲ್ಲಿದ್ದೇವೆ, ಅಲ್ಲಿದ್ದೇವೆ, ಬಂದೆವು’ಎನ್ನುತ್ತಲೇ ನಾಕುಗಂಟೆಯ ಪಯಣಕೆ ಅಂತೂಇಂತೂ ಕೊನೆಹಾಡಿದ್ದೂ ಆಯ್ತು.
ಹಾದಿಯ ಪಕ್ಕದಲ್ಲೇ, ಯಾವುದೇ ಕಂಪೌಂಡಿಲ್ಲದ ಬಿಳಿಸುಣ್ಣವೆ ಬಣ್ಣವಾಗಿರುವ ಬೆಂಕಿಪೆಟ್ಟಿಗೆಯಂಥ ಸಾಲುಮನೆಗಳ ನಡುವೆ ತಕ್ಕಮಟ್ಟಿಗೆ ಎತ್ತರದ ಜಾಗದಲ್ಲೆ ನೀಲಿಬಣ್ಣದ ಫ್ರಾಕ್ ಹಾಕಿಕೊಂಡು ಡಿಶ್‌ಕೊಡೆ ಹಿಡ್ಕೊಂಡು ಆಧುನಿಕ ಬೆಡಗಿಯಂತೆ ನಗುತ್ತ ನಿಂತಿತ್ತು ರಾಯರಮನೆ. “ವಿಷ್ಣುಮೇಷ್ಟ್ರ ಮನೆ ಎಲ್ಲಿದೆಯಣ್ಣ?” ಎಂದು ಯಾರೇ ಕೇಳಲಿ, “ಓ ಅಲ್ಲಿ ಕಾಣಿ! ನೀಲಿಬಣ್ಣದ್ಮನೆ..! ಮೇಲೊಂದು ಕೊಡೆ ಕಾಣ್ತಾ ಉಂಟಾ ನಿಮ್ಗೆ..? ನಮ್ಮೂರಲ್ಲಿ ಡಿಶ್ಶಿರೋದು ಮೇಷ್ಟ್ರಮನೇಲಿ ಮಾತ್ರ ಕಣ್ರೀ..!” ಎಂದೇ ಬೆಟ್ಟುಮಾಡಿ ತೋರಿಸಿಯೇ ಅಭ್ಯಾಸ ಊರಜನ್ರಿಗೆ.
ಈ ಗೂಡ ತಳಪಾಯದ ಭದ್ರ ಆಯಕಟ್ಟಲ್ಲಿ ದಂಪತಿಗಳ ಆಯಸ್ಸು ಸವೆದಿದೆ. ಕನಸೂ ಬೆವರೂ ಬೆರೆತು ಗೋಡೆಗಟ್ಟಿಯಾಗಿದೆ. ಕೆಂಪು ಕಾವಿನೆಲದಲ್ಲಿ ಅವರ ಸಾಂಸಾರಿಕ ಪ್ರೀತಿ ಲಕಲಕ ಹೊಳೆಯುತ್ತಿವೆ. ಶಿಕ್ಷಕರಿಗಿದ್ದ ಅನ್ವರ್ಥನಾಮವೇ ಬಡಮೇಷ್ಟ್ರು! ಆ ಕಾಲದಲ್ಲಿ ಸಿಗುತಿದ್ದ ಸಂಬಳದಲ್ಲಿ ಬದುಕುಕಟ್ಟುವುದೇ ಕಷ್ಟ. ಅಂಥದ್ದರಲ್ಲಿ ಸಾಲಸೋಲಮಾಡಿ ಮನೆಕಟ್ಟಿಸಿದ್ದಾರೆಂದರೆ!
ಇಂದು ಆ.. ಎಂದು ಬಾಯಿ ತೆರೆದುಕೊಂಡು ಜಾತ್ರೆಯಲ್ಲಿ ಕೈತಪ್ಪಿಸಿಕೊಂಡ ಅನಾಥ ಮಗುವಿನಂತೆ ಅಳುತ್ತ ನಿಂತಿತ್ತು ಮನೆ. ಕಾರಿನಿಂದಿಳಿದು ಅಲ್ಲಿಯವರೆಗಿನ ತಮ್ಮ ಖಾಸಗಿ ಬದುಕೇ ಆ.. ಎಂದು ಬಾಯ್ಬಿಟ್ಟು ಬಟಾಬಯಲಾದ ಹತಾಶೆಯ ಭಾವದಲ್ಲಿ ಸಂತೆಯಲಿ ದೊಂಬರಾಟಕೆ ಸಜ್ಜಾದ ಸಂಸಾರದಂತೆ ಕಂಪೌಂಡಿನ ಹೊರಗೆ ನೆರೆದ ಊರಜನ ಮಂದೆಯ ನಡುವೆ ನಿಂತರು. ತಾವಿಬ್ಬರೂ ಗುಂಡುಕಲ್ಲಿನಂತೆ ಬದುಕಿರುವಾಗಲೇ ಮನೆಯನ್ನು ಆವರಿಸಿಕೊಂಡು ಹೆಪ್ಪುಗಟ್ಟಿದ್ದ ಸಾವಿನ ಮನೆಯ ಸೂತಕಛಾಯೆ ಮೂಕಾಂಬಿಕಮ್ಮನ ಹೃದಯ ಹೊಕ್ಕು ಬಿಸಿಗೆ ಕರಗಿ ಕರುಣವಾಗಿ ಅಳು ಉಕ್ಕಿಬಂದಂತಾಗಿ ಸೆರಗು ಬಾಯಿಗಿಟ್ಟುಕೊಂಡು ತಡೆದುಕೊಂಡರು. ರಾಯರೊಳಗೂ ಮೂಕ ಉಮ್ಮಳ.
ಮನೆಯ ಯಜಮಾನ ಬಾರದೆ ಒಳಪ್ರವೇಶಿಸುವ ಹಾಗಿರಲಿಲ್ಲವಾದುದರಿಂದ ಮನೆಮುಂದೆ ಪೋಲೀಸರು ಗಸ್ತು ಹೊಡೀತ ಸುಸ್ತಾಗಿದ್ದರು. ಆದರೆ ಅವರ ಕಣ್ಣೆದುರೆ ಮರಮಂಗವೊಂದು‘ಈ ನಿಯಮ ಕಟ್ಟುಕಟ್ಟಳೆಗಳೆಲ್ಲ ನರನಿಗೆ ಮಾತ್ರ, ನಮ್ಮ ವಾನರ ಜಾತಿಗಲ್ಲ’, ಪಕೀರನಿಗೆ ಪಿಕಿರಿಲ್ಲವೆಂಬಂತೆ ರಾಜಾರೋಷವಾಗಿ ಮನೆಯೊಳಗೆ ಯಜಮಾನ ಬರುವ ಮುನ್ನವೇ ಹೊಕ್ಕು ಶೇಂಗಾಕಾಳಿನ ಡಬ್ಬಸಹಿತ ಹೊರಬಂದು ತಾನೆ ಯಜಮಾನ ಎಂಬಂತೆ ಜಗಲಿಯಲಿ ಕೂತು ಚಪ್ಪರಿಸುತ್ತ ಪಿಳಿಪಿಳಿ ಕಣ್ಣುಬಿಡುವುದನ್ನೆ ಕಣ್ಣುಬಾಯಿಬಿಟ್ಟು ಮಕ್ಕಳು ಮರಿಗಳು ನೋಡುತಿದ್ದವು. ರಾಯರ ಸಂಸಾರ ಅಂಗಳಕ್ಕೆ ಕಾಲಿಟ್ಟದ್ದೇ ತಡ, ಚಂಗನೆ ನೆಗೆದು ತಾರಸಿಹತ್ತಿ ಮಿಕಿಮಿಕಿ ನೋಡುತ್ತ ಮತ್ತೆ ಶೇಂಗಾ ನುಂಗತೊಡಗಿತು.
ಮಂಗ ಕಂಡರೆ ಸಾಕು ಕಲ್ಲೆಸೆಯುತಿದ್ದ ಮುಕಾಂಬಿಕಮ್ಮ ಇಂದು, ಪಕ್ಕನೆ ಏನೋ ಹೊಳೆದವರಂತೆ, “ಅಕಾ ನೇಹ, ಅದು ಸಾಮಾನ್ಯ ಮಂಗ ಅಲ್ಲ ಕಣೇ! ಹನುಮಂತ..! ಉಡುಪಿ ಮುಖ್ಯಪ್ರಾಣ..” ಎಂದರು ಭಕ್ತಿಯೊಳಗೆ ತಾವೇ ಪರಕಾಯ ಪ್ರವೇಶವಾದವರಂತೆ. ಮುಖದಲ್ಲೀಗ ಭರವಸೆಯ ಹೊಸಕಾಂತಿ. “ಕಾಪಾಡಪ್ಪ ದೇವರೆ”ಎಂದು ಕೈಮುಗಿದವರನ್ನೊಮ್ಮೆ ನೋಡಿ ಮತ್ತೆ ತಿನ್ನುವುದರಲ್ಲೆ ತಲ್ಲೀನವಾಯಿತದು.
ಪೋಲೀಸ್ ಎಸ್.ಐ. ಇವರನ್ನು ಕಂಡದ್ದೇ ಮುಖವರಳಿಸಿಕೊಂಡು, “ಬನ್ನಿ ಬನ್ನಿ! ನೀವಾ ಈ ಮನೆ ಯಜಮಾನ್ರು? ಒಳಹೋಗಿ, ಆದರೆ ತಪ್ಪಿಯೂ ಗೋಡೆಗೀಡೆಮುಟ್ಟಿ ಕಳ್ಳರ ಫಿಂಗರ್‌ಪ್ರೀಂಟ್ ಅಳಿಸ್ಬೇಡಿ”ಎಂದ.
ಬೀಗಮುರಿದು ತೆರೆದುಕೊಂಡಿದ್ದ ಆನೆಬಾಗಿಲನ್ನು ಸಮೀಪಿಸಿ ಹೊಸ್ತಿಲು ದಾಟುತಿದ್ದಂತೆ, ನಮ್ಮದಲ್ಲ ಇನ್ಯಾರದ್ದೋ ಮನೆ ಎಂಬ ಅಪರಿಚಿತಭಾವ. ಚಾವಡಿ, ಪಡಸಾಲೆ, ಮಲಗುವ ಮನೆ, ಅಡುಗೆಮನೆ, ಉಗ್ರಾಣಗಳು ಬೀಗಮುರಿದುಕೊಂಡು ಮೈಮುರಿದು ಆಕಳಿಸುತ್ತ ಸ್ವಾಗತಿಸಿದವು. ಯಜಮಾನಿ ಇರುವಾಗ, ‘ಬಡವ ನೀನು ಮಡಗಿದ್ ಹಾಂಗಿರು’ಎಂಬಂತೆ ಅವಳ ಇಸ್ತ್ರಿ ಶಿಸ್ತಲ್ಲಿ ತಾಲೀಮು ಕೆಲಸಕಾರ್ಯ ನಡೆಸಿ ಮತ್ತೆ ಯಥಾಸ್ಥಾನ ಸೇರಿರುತಿದ್ದ ವಸ್ತುಗಳು ಇಂದು ಎಲ್ಲಿನೋಡಿದರಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡು ಕಾಲಿಡಲು ಎಡೆನೀಡದೆ ತಮ್ಮದೆ ಸಾಮ್ರಾಜ್ಯ ಎಂಬಂತೆ ಸೋಂಬೇರಿಗಳಾಗಿ ಗೊರಕೆ ಹೊಡೆಯುತ್ತಿದ್ದವು. ಅವುಗಳೇ ಕುಡಿದು ಡಿಂಗಾಗಿವೆಯೋ ಎಂಬ ಭ್ರಮೆಹುಟ್ಟಿಸುವಂತೆ ಅಲ್ಲಲ್ಲಿ ಬೀರು ಬಾಟಲಿಗಳು, ಸುಟ್ಟಮೋರೆಯ ಸಿಗರೇಟು, ಬೆಳಕು ನೀಡಿದ ಕರ್ಮಕ್ಕೆಕಣ್ಣೀರು ಹಾಕಿ ಕರಗಿ ಕೆಂಪುನೆಲದಲ್ಲಿ ಅಲ್ಲಲ್ಲಿ ಹೆಪ್ಪುಗಟ್ಟಿದ ಮೇಣದ ಬತ್ತಿಯ ಮೇಣ.. ಮುಂಭಾಗದ ಬೆಡ್‌ರೂಂನಲ್ಲಿ ಗೋದ್ರೆಜ್ ಬೀರುಗಳೆರಡೂ ನಿಂತಲ್ಲೆ ಸತ್ತಂತೆ ಹೆಣಬಾಯಿ ತೆರೆದುಕೊಂಡಿದ್ದವು. ಸೀರೆ, ಕುಪ್ಪಸ, ಅಂಗಿ, ಬನಿಯನ್, ಪಂಚೆ, ಲುಂಗಿ, ಬೈರಸ್‌ಗಳು ದುಶ್ಯಾಸನನ ಕರುಳಿನಂತೆ ಭಯಾನಕವಾಗಿ ಹರಡಿಕೊಂಡಿದ್ದವು.
ಅಡುಗೆಮನೆಗೇ ತಾಗಿದಂತಿದ್ದ ತಮ್ಮ ಕತ್ತಲ ಶಯನಮನೆ ಪ್ರವೇಶಿಸಿ ಸ್ವಿಚ್ ಹಾಕಿದ್ರೆ, ಕರೆಂಟ್ ಎಲ್ಲಿದೆ? ಬೆಳಕನ್ನೇ ಕಳ್ಳರು ದೋಚಿದಂತಿದೆ! ಕರೆಂಟ್ ವಯರ್ ನರನಾಡಿಗಳನ್ನು ಒಂದೂ ಬಿಡದಂತೆ ಕಿತ್ತುಬಿಸಾಕಿದ್ದರು. ಎಲ್ಲ ಬಲ್ಬುಗಳ ಕಣ್ಣೊಡೆದು ಕುರುಡಾಗಿದ್ದವು.
ಅವರ ಬೆನ್ನಲ್ಲೇ ಒಳಬಂದ ಆರಕ್ಷಕ ಇಲಾಖೆಗೆ ಬಿಡಿ, ಅಲ್ಲೇ ಹುಟ್ಟಿಬೆಳೆದು ಉಡುಪಿಯಲ್ಲಿ ನೆಲೆಯೂರಿದ್ದ ನಮನಿಗೂ ಕತ್ತಲಲ್ಲಿ ಕಣ್ಣು ಕಾಣಿಸಲಿಲ್ಲ. “ಅಬ್ಬಾ ಕತ್ತಲೆಯೇ! ಅಲ್ಲ ಕಣ್ರೀ, ಹಚ್ಚಹಗಲಲ್ಲು ಈ ಪಾಟಿ ಕತ್ತಲೆ ಕವಿದಿದ್ಯಲ್ಲ?” ಎನ್ನುತ್ತ ಹೆಜ್ಜೆಯಿಡಲು ತಡಕಾಡಿದರು. ಗೋಡೆಗೆ ಬಳಿದ ಬಣ್ಣ ಯಾವುದು? ಎಂದು ಗುರುತಿಸಲೂ ಸಾಧ್ಯವಾಗದಷ್ಟು ಕತ್ತಲನ್ನುಹೀರಿ ಅದನ್ನೇ ಕಾರಿಕೊಂಡಿತ್ತು ಆ ಕೊಠಡಿ. ಕ್ರಮೇಣ ಕಣ್ಣುಗಳು ಕತ್ತಲಿಗೆ ಹೊಂದಿಕೊಂಡವು.
“ಓಯ್ ಗುರುಸಿದ್ಧಪ್ಪ! ಟಾರ್ಚ್ ತನ್ರೀ!” ಎಂದು ಪೇದೆಯನ್ನು ಕೂಗಿದ ಎಸ್.ಐ. ಪೇದೆ ಬಂದವನೇ ತನ್ನ ಕೈಯಲ್ಲಿದ್ದ ಕರಿಟಾರ್ಚ್‌ನ ಬಿಳಿಲೈಟನ್ನು ಗೋಡೆಗೆ ಹರಿಸಿದ. ಮುಕಾಂಬಿಕಮ್ಮ, “ಮಂಚದಡಿ ಸ್ವಲ್ಪ ಬೆಳಕುಬಿಡ್ರಿ ಸಾರ್”ಎಂದವರೇ ಬೆಳಕಲ್ಲಿ ನೋಡ್ತಾರೆ! ಮಂಚ ಎಲ್ಲಿದೆ? ನಲ್ವತ್ತು ವರ್ಷಗಳಿಂದ ಇಟ್ಟ ಜಾಗದಲ್ಲೆ ಇದ್ದೂ ಇದ್ದೂ ಜಡಹಿಡಿದು ಬೇಜಾರು ಬಂದು ಎತ್ತರವಾದ ಕಬಾಟಿನ ಮುಂದೆ ಮಗ್ಗುಲಿಗೆ ತಿರುಗಿಕೊಂಡೇ ಚತುರ್ಭುಜ ಚಾಚಿ ಯೋಗಾಸನದ ಒಟ್ಟೊಟ್ಟಿಗೇ ಜೀವವೆಳೆಯುತ್ತ ಪ್ರಾಣಾಯಾಮ ಮಾಡುತ್ತಿದೆ! ಮುಕಾಂಬಿಕಮ್ಮನಿಗೆ ಎದೆಧಸಕ್ಕೆಂದಿತು. “ಅಯ್ಯೋ ದೇವರೇ! ನನ್ನ ಮಂಚ ಇಲ್ಲಿತ್ತು, ಅಲ್ಲಿಗೆಳೆದಿವೆ ಪಾಪಿಗಳು! ಇದ್ರ ಕೆಳಗೆ ಆ ಪೆಟ್ಟಿಗೆ ಇಟ್ಟಿದ್ದೆ”ಎಂದು ಕೂಗಿದರು ಹತಾಶೆಯಿಂದ.
“ನಿಮ್ಮ ಮಂಚದ ಮೇಲೆ ಹತ್ತಿ, ಕಬಾಟಿನ ಬೀಗ ಒಡೆದಿವೆ ಆ ಕಳ್ಳಬೋಳೀಮಕ್ಕ್ಳು! ಕಬಾಟಲ್ಲಿ ಏನಿತ್ತಮ್ಮಾ? ಒಡವೆ-ಗಿಡವೆ ಏನಾದ್ರು ಇತ್ತ?” ಎಂದ ಎಸ್.ಐ.
“ಮಂಚದ ಕೆಳಗೆ, ಪೆಟ್ಟಿಗೆಯಲ್ಲಿ ಒಡವೆತುಂಬ್ಸಿ ಇ..ಷ್ಟು ದೊಡ್ಡ ಆನೆಬೀಗ ಹಾಕಿ ಜೋಪಾನ ಇಟ್ಟಿದ್ದೆ ಸಾರ್”ಎನ್ನಲಿಕ್ಕಿಲ್ಲ, “ಹ್ಯಕ್! ಎಂಥ ಜೋಪಾನರೀ ನಿಮ್ದು? ಮಂಚವನ್ನೇ ಎಳೆದವ್ರಿಗೆ ನಿಮ್ ಪೆಟ್ಟಿಗೆ, ಆನೆಬೀಗ ಯಾವ ಲೆಕ್ಕ ಮಾರಾಯ್ರೆ?” ಎಂದು ಹಲ್ಲಿಯಂತೆ ಲೊಚಗುಟ್ಟಿದ ಎಸ್.ಐ.
ಪೇದೆ, ಬ್ಯಾಟರಿ ಬೆಳಕನ್ನು ಯಥೇಚ್ಚವಾಗಿ ಹರಿಸತೊಡಗಿದ. ಈಗ ಜಿರಲೆಯಂತೆ ಸಲೀಸಾಗಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡತೊಡಗಿದ ಮುಕಾಂಬಿಕಮ್ಮನ ಬಾಡಿದ ಮುಖಕಮಲ ಇದ್ದಕ್ಕಿದ್ದಂತೆ ಹೈವೋಲ್ಟೇಜ್ ಬಲ್ಬಿನಂತೆ ಬೆಳಗಿ ಕೊಠಡಿಯನ್ನು ತುಂಬಿಕೊಂಡಿತು. ಯೋಗಾಸನ ಮಾಡುತಿದ್ದ ಮಂಚದ ಆ ಪಕ್ಕದಲ್ಲಿ ಗತಿಗೋತ್ರವಿಲ್ಲದೆ ಜ್ವರದಲಿ ಮೈಮೇಲೆ ಬೋಧವೇ ಇಲ್ಲದಂತೆ ಕರಿಕಂಬಳಿ ಹೊದ್ದುಕೊಂಡೇ ಬಿದ್ದುಕೊಂಡಿದ್ದ ಪೆಟ್ಟಿಗೆಯನ್ನು ತಾವೇ ಮಗುವನ್ನು ಹೊರಗೆಳೆಯಲು ಪ್ರಯಾಸಪಡುವ ಸೂಲಗಿತ್ತಿಯಂತೆ ಹೊರಗೆಳೆದು ಪಡಸಾಲೆಯ ಹೊರಜಗಕೆ ತಂದಿಟ್ಟು ಕಂಬಳಿಸರಿಸಿದವರ ಬಾಯಿಂದ, “ಅಮ್ಮಾ..!” ಎಂಬ ನೋವಿನ ಉದ್ಗಾರ ಹೊರಟಿತು.
ಮೊದಲೇ ಲೋ ಬಿ.ಪಿ.ಯ ಹೆಂಗಸು! ಸಾಲದ್ದಕ್ಕೆ ನಾಕುತಿಂಗಳ ಹಿಂದಷ್ಟೇ ಯಾಂಜಿಯೊಪ್ಲಾಸ್ಟ್ ಕೂಡ ಮಾಡಿಸಿದೆ. ನಮನ್ ಹೆದರಿ, “ಅಮ್ಮಾ, ಹೋದ್ರೆ ಹೋಗ್ಲಿಬಿಡು. ಮನಸ್ಸಿಗೆ ತಕೋಬೇಡ!” ಎಂದು ಹೆಗಲು ಬಳಸಿದ. “ಅಲ್ಲ ಕಣೋ! ಪೆಟ್ಟಿಗೆಯನ್ನೊಮ್ಮೆ ನೋಡೋ ನಮೂ, ನಜ್ಜುಗುಜ್ಜಾಗಿದೆ! ಕಳ್ಮುಂಡೆಮಕ್ಳು, ಲಗಾಡಿ ತೆಗೆದ್ವು! ನನ್ ತವರುಮನೆ ಪೆಟ್ಟಿಗೆ”ಎಂದು ಸುರ್‍ಸುರ್ ಎನ್ನುವ ಮೂಗು ಕಣ್ಗಳನು ಸೆರಗಿಂದ ಒರೆಸಿಕೊಂಡರು, ಒಡವೆ ಮರೆತಂತಿತ್ತು ಅವರು.
“ಅರೆ! ಬೀಗ ಹಾಗೇ ಇದೆಯಲ್ಲ! ಸರ್ಯಾಗಿ ಒಮ್ಮೆ ನೋಡಿಯಮ್ಮ!” ಎಂದ ಪೇದೆ. ಕುಕ್ಕರುಗಾಲಲ್ಲಿ ಕುಳಿತು ನೋಡ್ತಾರೆ, ಏನಾಶ್ಚರ್ಯ! ಪೆಟ್ಟಿಗೆ ಹಣ್ಣುಗಾಯಿ ನೀರುಗಾಯಿ ಆಗಿದೆ ಬಿಟ್ರೆ, ಬೀಗ ಹೇಗಿತ್ತೋ ಹಾಗೇ ಸುಸ್ಥಿತಿಯಲ್ಲಿ ಗಪ್ಪೆಂದು ಬಾಯ್ಮುಚ್ಕೊಂಡು ಸುತ್ತಲಿದ್ದವರನ್ನೇ ದುರುಗುಟ್ಟಿ ನೋಡುತ್ತಿದೆ! ಪೆಟ್ಟಿಗೆಯ ಬಾಯಿತೆರೆಯದಂತೆ ಬಿಗಿದಿರುವ ತನ್ನ ಬಾಯಿಗೇ, ಬೀಗಹಾಕಿರುವ ಕೀಯೊಡತಿಯ ಒಡತಿಕೀ ಮುಕಾಂಬ ಪಕ್ಕದಲಿದ್ದುದರಿಂದಲೋ ಏನೋ, ಗುರ್ರೆನ್ನದೆ ಗಪ್ಚಿಪ್ ಇದೆ! ‘ಆ ಯಕಶ್ಚಿತ್ ಕಳ್ಳರು ತನ್ನನ್ನು ಮುಟ್ಟಲು ತಾನೇನು ಪುಟ್ಗೋಸಿಯೇ!’ ಎಂಬ ಬೀಗದ ಗತ್ತು ಟ್ರಂಕನ್ನು ಕಳ್ಳರು ತೆರೆದೇ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿತ್ತು. “ಈಗ ಹಳೇಮುಕಾಂಬಿಕಮ್ಮನವರಿಂದ ಹಳೇಟ್ರಂಕಿನ ಉದ್ಘಾಟನೆ”ಎಂದು ನೇಹ ಅನ್ನಲಿಕ್ಕಿಲ್ಲ, ಗೊಳ್ಳೆಂದು ನಗು ಉಕ್ಕಿತು. ಮುಕಾಂಬಿಕಮ್ಮ ತಮ್ಮ ಪರ್ಸಿನಲ್ಲಿದ್ದ ಕೀಯನ್ನು ಹೊರತೆಗೆದು ಬೀಗದೊಳಗೆ ತೂರುತ್ತಿದ್ದಂತೆ ಅದು ಭಾರದನಿಯಲ್ಲಿ ಬಾಯ್ಬಿಟ್ಟು ಅದುವರೆಗಿನ ದೀರ್ಘಬಂಧನದಿಂದ ಶಿಥಿಲವಾದ ದೇಹವನು ಬಲಗುಂದಿ ತೂಗಾಡಿಸತೊಡಗಿತು. ಆಕಾರ ಕಳಕೊಂಡು ಬಹಿರೂಪವಾದರೂ ಅಮ್ರಿತ ಮತಿಯನು ತಬ್ಬಿಕೊಂಡ ಜನ್ನಕವಿಯ ಅಷ್ಟಾವಕ್ರ ಪಾತ್ರದಂತೆ ತನ್ನ ಅರ್ಧ ಅಧೋಭಾಗವನ್ನು ತಬ್ಬಿಕೊಂಡಿದ್ದ ಮುಚ್ಚಳವನ್ನು ಮೇಲೆಳೆದಾಗ ,‘ಜೀವಹೋದರೂ ನಾಬಿಡೆನು’ಎಂಬ ಪ್ರೇಮೋತ್ಕಟತೆಯಲಿ ಇನ್ನಷ್ಟು ಬಿಗಿಯತೊಡಗಿತ್ತದು. ಕೊನೆಗೆ ನಮನನ ಗಂಡುಬಲದ ಎಳೆದಾಟಕೆ ಕೊಂಡಿತಪ್ಪಿ ಕಿರ್ರೆನುತ್ತ ತೆರೆದುಕೊಂಡು ಮುಚ್ಚಳವೇ ಬೇರೆಯಾಗಿ ಯುದ್ಧದಲಿ ಎದುರಾಳಿಯ ಹೊಡೆತಕೆ ಮುಂಡದಿಂದ ಹಾರಿದ ರುಂಡದಂತೆ ದೂರದಲಿ ಶ್ವಾಸಕಡಿದು ಬಿದ್ದುಕೊಂಡಿತು.
ಆ ಹಳೇ ಪೆಟ್ಟಿಗೆ, ಕಂಬಳಿ ಹೊದ್ದಾಗ ಗೂರಲು ರೋಗಿಯಂತೆಯೋ ಅಥವಾ ಕಂಬಳಿ ಸರಿದಾಗ ಏನಕ್ಕೂ ಬಾರದ ಓಬೀರಾಯಜ್ಜನಂತೆಯೋ ಕಂಡಿರಬೇಕು ಕಳ್ಳರಿಗೆ! ಸಾಲದ್ದಕ್ಕೆ ಲಾಕರ್‌ಗಳ ಸಂತೆಯನೆ ತನ್ನೊಳಗೆ ಅದೆಅದೆಯಲ್ಲೂ ಬಚ್ಚಿಟ್ಟುಕೊಂಡ ಗೋದ್ರೆಜ್ಗಳ ಬ್ಯಾಂಕೇ ಆಗಿರುವ ಕೊಠಡಿಯಲ್ಲಿ ಈ ಪೆಟ್ಟಿಗೆ ಬೆಂಕಿಪೆಟ್ಟಿಗೆ ಅನ್ನಿಸಿರಬೇಕು ಆ ಕಳ್ಳರಿಗೆ! ಅದನ್ನು ಹತ್ತಲು-ಇಳಿಯಲು ಸ್ಟೂಲಿನಂತೆ ಬಳಸಿದ್ದರಿಂದ ಏರು-ತಗ್ಗುಗಳಾಗಿ ಮೈಕೈ ಸಾಕಷ್ಟು ಜಕ್ಕಜಕಂ ಆಗಿ ಛಕ್ಕಚಕಂ ದೇಕ್ಲಗಾಡಿ ಹೋಗಿತ್ತದು. ಅದರ ಕಂಠಮಟ್ಟ ಒಡವೆಗಳ ಮೇಲೆ ತಮ್ಮ ರೇಶ್ಮೆಸೀರೆಗಳನ್ನು ಹೊದೆಸಿದ್ದರಿಂದ ಎಷ್ಟೇ ಎಳೆದಾಡಿದರೂ ತನ್ನೊಳಗೆ ಒಡವೆಗಳಿರುವ ಗುಟ್ಟನ್ನು ಕಳ್ಳರಿಗೆ ಬಿಟ್ಟುಕೊಡದೆ ಗೆದ್ದು, ನಿಯತ್ತಿನ ದೇಶಭಕ್ತ ಸೈನಿಕನಂತೆ ಪೋಸ್ ಕೊಟ್ಟಿತ್ತು. ಈಗ ತನ್ನವರಿಂದಲೇ ಖಂಡತುಂಡಾಗಿ ಶಿಥಿಲವಾಗಿ ತನ್ನದೇ ತಿಥಿಕಾಯುತ್ತ ಬಿದ್ದಿತ್ತು. “ನನ್ನ ತವರಿನ ಪೆಟ್ಟಿಗೆ”ಎಂದು ಮತ್ತೆ ಹನಿಗಣ್ಣಾದರು ಅವರು.
“ಲೇಲೇ! ಕ್ಯಾಶ್ ಇದೆಯ ನೋಡು ಮಾರಯ್ತಿ?” ಎಂದು ಹಳೇರಾಗ ವೆತ್ತಿದರು ರಾಯರು. “ಸುಮ್ನಿರಿ ಪಪ್ಪ!” ಎಂದ ನಮನ್ ನಗುತಡೆಯಲಾಗದೆ ಹೊಟ್ಟೆಹಿಡಿದುಕೊಂಡ. ಮುಚ್ಚಿದ್ದ ರೇಶ್ಮೆ ಸೀರೆಸರಿಸಿ, ತಡಕಾಡಿದವರ ಕೈಗೆ ಒಡವೆಗಂಟು ಸಿಕ್ಕಿತು. ಕಂಗಳಲ್ಲಿ ಖುಷಿಯನದಿ. “ಏಏಏಏ! ಕ್ಯಾಶುಂಟಾ ಮೊದಲು ನೋಡೆ ಪುಣ್ಯಾತ್ಗಿತ್ತಿ !” ಎಂದ ರಾಯರನ್ನು ಬೋಳೆಕಣ್ಣಲ್ಲಿ ದಿಟ್ಟಿಸಿ, “ಚಿನ್ನಬೆಳ್ಳಿ ಎಲ್ಲ ಸೇಫ್! ಇನ್ನು ನಿಮ್ಮ ಕ್ಯಾಶಿಗೇನು ಆಗಿರಲ್ಲ ಬಿಡಿ ಪಪ್ಪ!” ಎಂದ ಎದೆಯಿಂದ ಹೊರನೆಗೆಯಲು ಅನುವಾದ ಸಿಟ್ಟನ್ನು ಅಲ್ಲೇ ಅದುಮಿ.
ಹೆಂಡತಿಯ ಕೈಯಿಂದ ನೋಟುಗಳನ್ನು ಗಬಕ್ಕನೆ ಕಾಗೆಯಂತೆ ಕಸಿದುಕೊಂಡು ಅವಳ ಕೆಂಗಣ್ಣನೋಟಕೆ ಕದಲದೆ, “ಇನ್ನ್ಮುಂದೆ ಕಾಸು ಇಟ್ಕೊಂಡ್ರೆ ನೋಡು!” ಎನ್ನುತ್ತ ಪಟಾಪಟ್ ಎಣಿಸಿ ಅಷ್ಟೂ ಮಂದಿಯ ಮುಂದೆ ಪಂಚೆ ಎತ್ತಿ ಮೊಣಗಂಟಿನವರೆಗೆ ಇಳಿದಿದ್ದ ಹಳೆ ಕಪ್ಪುಡ್ರಾಯರ್‌ನ ಕಿಸೆಯಿಂದ ಪರ್ಸ್ ತೆಗೆದು ನೋಟುಗಳನ್ನುತುಂಬಿ ಮತ್ತೆ ಯಥಾಸ್ಥಾನದಲ್ಲಿರಿಸಿ ಪಾದದವರೆಗೆ ಪಂಚೆ ಇಳಿಬಿಟ್ಟರು. ನಮನ್‌ಗೆ ಮುಜುಗರ! ಆಡುವಂತಿಲ್ಲ ಅನುಭವಿಸುವಂತಿಲ್ಲ!
“ಬಾಳ ಗಟ್ಟಿಗಿತ್ತಿ ಕಣ್ರೀ ನೀವು! ಜೋಪಾನವಾಗಿ ಇಟ್ಟಿದ್ದೀರಿ!” ಎಂಬ ಶಹಭಾಸ್‌ಗಿರಿಯ ಬೆನ್ನಲ್ಲೆ, “ಅಲ್ರೀ! ನೀವು ಎಜುಕೇಟೆಡ್ ಮಂದಿ! ಲಕ್ಷಗಟ್ಟಲೆ ನಗನಗದು ಮನೇಲಿ ಇಟ್ಕೋಬಾರ್ದೂಂತ ತಿಳೀವಲ್ದ? ಮೊದ್ಲು ಲಾಕರ್ ಮಾಡ್ಸಿಕೊಡ್ರಿ ಅಮ್ಮಾವ್ರಿಗೆ!” ಎಂಬ ಬುದ್ಧಿಮಾತು ನಮನ್‌ಗೆ.
“ನೀವೆ ಹೇಳಿ ಸಾರ್ ಇವ್ರಿಗೆ! ಯಾರ ಮಾತೂ ಕೇಳಲ್ಲ ಅಂತಾರೆ! ಮೇಷ್ಟ್ರಮನೆಗೆ ಕಳ್ಳರು ಕನ್ನಹಾಕಲ್ಲ ಅಂತಾರೆ ಇವ್ರು!”ಎಂದವಳೆ ನಾಲಗೆ ಕಚ್ಚಿಕೊಂಡಳು ನೇಹ, ತನ್ನ ಗಂಡನ ಮಾನ ಉಳಿಸುವ ಭರಾಟೆಯಲ್ಲಿ ಸೋದರಮಾವನ ಮಾನದ ರಾಟೆ ತಿರುಗಿಸಿದ ಅರಿವಾಗಿ ಮತ್ತೆ ನಗು ಹಾಸಿಕೊಂಡಿತ್ತು. “ಅಲ್ವ ಮತ್ತೆ? ನಾನು ಮೇಷ್ಟ್ರು! ನ್ಯಾಯದ ದುಡ್ಡು ಆದದ್ದಕ್ಕೇ ಉಳ್ಕೊಂಡಿತು!” ಎನ್ನುವಾಗ ಅವರ ಮೊಗದಲ್ಲಿ ಸಂತೃಪ್ತಿ, ಸಾರ್ಥಕಭಾವ.
ಒಡವೆ ಗಂಟನ್ನು ನೇಹ ಬಗಲಲ್ಲಿ ತೂಗುತಿದ್ದ ತನ್ನ ದೊಡ್ಡ ವ್ಯಾನಿಟಿ ಬ್ಯಾಗಲ್ಲಿ ತುಂಬಿ ಮುಂದಕ್ಕೆಳೆದು ಎದೆಗೊತ್ತಿಕೊಂಡಳು. ಬೆಳ್ಳಿಗಂಟನ್ನು ತಾನಿಟ್ಟುಕೊಂಡು ಇಬ್ಭಾಗವಾಗಿದ್ದ ಪೆಟ್ಟಿಗೆಯನ್ನು ತನ್ನತ್ತ ಬಾಚಿಕೊಂಡರು ಮುಕಾಂಬಿಕಮ್ಮ.
ಈ ನಡುವೆ ಪೋಲೀಸರ ಪತ್ತೆ ಕೆಲ್ಸವನ್ನು ಕುತೂಹಲದಿಂದ ಗಮನಿಸುತ್ತ ಅಲೆಯುತಿದ್ದ ನೇಹ ಹೋದ ಕಡೆಯೆಲ್ಲ ಒಬ್ಬಳು ಹೆಂಗಸು ಬಾಲದಂತೆ ಬಿಡದೆ ಹಿಂಬಾಲಿಸುತ್ತ ಒಡವೆ ಎಷ್ಟಿತ್ತು? ಎಲ್ಲಿತ್ತು? ಎಷ್ಟು ಲಕ್ಷದ್ದು? ಎಂದು ಸಿ.ಐ.ಡಿ ಕೆಲಸ ಮಾಡತೊಡಗಿತ್ತು. ಪೋಲೀಸರ ಎಡೆಯಲ್ಲೆ ಒಳನುಸುಳಿದ್ದ ಆಕೆಯನ್ನು ಮನೆಮಂದಿ ಪೋಲೀಸರ ಕಡೆಯವಳಿರಬೇಕೆಂದು ಊಹಿಸಿದರೆ, ಪೋಲೀಸರು ಇದೇ ಮನೆಯವಳಿರಬೇಕೆಂದು ಊಹಿಸಿದ್ದೆ ಅಚಾತುರ್ಯಕೆ ಕಾರಣವಾಗಿತ್ತು. ಎಲ್ಲ ಕೆಲಸಮುಗ್ಸಿ ಪೋಲೀಸರು ಹೋಗಿದ್ರೂ ಮೀನವಾಸನೆ ಹಿಡಿದ ಕಳ್ಳಬೆಕ್ಕಂತೆ ನೇಹಳ ಬಗಲುಚೀಲದ ಹಿಂದೆಯೆ‘ಮಿಯಾವ್’ಎನ್ನುತ್ತ ಸುಳಿಯುತ್ತಲೇ ಇತ್ತು.
ಪಕ್ಕದ್ಮನೆ ರಮೇಶ ಮಿಲಿಟ್ರಿಯಲ್ಲಿದ್ದವ ರಜೆಗೆ ಊರಿಗೆ ಬಂದಿದ್ದ. ಮುಕಾಂಬಿಕಮ್ಮನನ್ನು ಕರೆದು ಗುಟ್ಟಾಗಿ, “ಆ ಹೆಂಗ್ಸು ಯಾರ್ರಿ? ನಿಮ್ ಸೊಸೆಯ ಹಿಂದೆ-ಮುಂದೆ ಆಗಲಿಂದ ಸುತ್ತುತ್ತ ಉಂಟು ನೋಡ್ರಿ! ಮೇಲೆ ನೋಡ್ಲಿಕ್ಕೆ ಪಾಶಾಗಿದ್ರು ಕಳ್ಳಿತರ ಆಡ್ತಿದೆ ಕಣ್ರಿ, ವಿಚಾರ್ಸಿ ಆ ಮಳ್ಳೀನ!” ಎಂದ. “ಯಾರ್ರೀ ನೀವು? ಗುರುತಾಗಿಲ್ಲ ಕಣ್ರೀ ನಿಮ್ದು! ಏನ್ರೀ ಕೆಲ್ಸ ನಿಮ್ಗೆ ಇಲ್ಲಿ?” ಎಂದು ಜೋರುದನಿಯಲ್ಲಿ ಮುಕಾಂಬಿಕಮ್ಮ ದಬಾಯಿಸತೊಡಗಿದ್ದೇ ತಡ, “ನಾನು! ಅದೇ, ನಾನು ಕಣ್ರೀ! ನಿಮ್ ಮೀಷ್ಟ್ರಿಗೆ ಗೊತ್ತು, ಪಕೀರನ ಕಟ್ಟೆಯವ್ಳು ಕಣ್ರೀ!” ಎನ್ನುತ್ತಲೆ ಹೊರಧಾವಿಸಿ ಓಡಿದ ಆಕೆ ಮಂಗಮಾಯ್ಕ! ಆಕೆಯ ಹಿಂದೆಯೆ ರಮೇಶ ಓಡುವಾಗ ಕಾಲಮೀರಿಯಾಗಿತ್ತು, ಬರಿಗೈಲಿ ವಾಪಾಸಾದ. ದಂಗುಬಡಿದು ಬಾಯಿಮೇಲೆ ಕೈಇಟ್ಕೊಂಡಿದ್ದ ನೇಹ ‘ಬ್ಯಾಗಿನಲ್ಲಿ ಒಡವೆಗಂಟು ಇದೆ, ಅದರೊಳಗೆ ಅಸಲಿ ಒಡವೆಯೇ ಇದೆ’ ಎಂಬುದನ್ನು ಮತ್ತೆ ಖಾತ್ರಿಪಡಿಸಿಕೊಂಡಳು.
“ನಮ್ಮ ಕುಲದೇವರು ತಿರುಪತಿ ತಿಮ್ಮಪ್ಪನೇ ಕಾಪಾಡಿದ!” ಎಂದು ದೇವರ ಮಂಟಪಕೆ ಕೈಮುಗಿದು ತುಪ್ಪದ ದೀಪವಿಟ್ಟೂ ಆಯಿತು. ದೇವರ ಬೆಳ್ಳಿಮೂರ್ತಿ ಮುಟ್ಟುವ ಧೈರ್ಯಮಾಡಿರಲಿಲ್ಲ ಆಸ್ತಿಕಕಳ್ಳರು.
ಒಳಗೆ ಹೋಗಿ ಬಂದು ಮಾತಾಡಿಸುವವರ ಸಂಖ್ಯೆ ಬರುಬರುತ್ತ ಕಮ್ಮಿಯಾಗಿ ನಿಂತೇಹೋಯಿತು. “ಅಮ್ಮಯ್ಯ!” ಎಂದು ನಿಟ್ಟುಸಿರಿಟ್ಟ ಮುಕಾಂಬಿಕಮ್ಮ ಪಕ್ಕನೆ ಎಚ್ಚೆತ್ತುಕೊಂಡವರಂತೆ, “ಅಯ್ಯೋ ದೇವ್ರೇ! ಎಲ್ರೂ ಚಪ್ಲಿ ಹಾಕೊಂಡೇ ಒಳಗೆ ಓಡಾಡಿದ್ರಲ್ಲಪ್ಪ ಪರಮಾತ್ಮಾ!” ಎಂದರು ಖೇದದಿಂದ. “ಏನಮ್ಮ ನೀನು! ಕಳ್ರೇನು ಚಪ್ಲಿ ಹೊರಗಿಟ್ಟು ಓಡಾಡಿರ್ತಾರ? ಸ್ವಲ್ಪತಡ್ದು ಆ ಸವಿತಮ್ಮನನ್ನು ಕರೀತೇನೆ, ಬಂದು ಗುಡ್ಸಿ ಸಾರ್ಸಿ ಒರ್ಸಿ ತೊಳ್ದು ಕ್ಲೀನ್ ಮಾಡಿಕೊಡ್ತಾರೆ, ಈ ಕೆಲ್ಸ ನಿನ್ ಮೈಮೇಲೆ ಎಳ್ಕೋಬೇಡ” ಎಂದ. “ಕಳ್ರು ನುಗ್ಗಿದ್ಮನೆ, ಪಂಚಗವಿ ಮಾಡ್ಸ್ಲೇಬೇಕು ಅಲ್ರೀ?” ಎಂದ ಹೆಂಡತಿಯನ್ನೆ ನೋಡ್ತಾ, “ಏನಾಗೊಲ್ಲ! ಅದೆಲ್ಲ ಎಂತಕ್ಕೆ?” ಎನ್ನುತ್ತ ಪಂಚೆಯೆತ್ತಿ ಮತ್ತೆ ಕ್ಯಾಶೆಣಿಕೆ ಶುರುವಾಯ್ತು ರಾಯರಿಂದ.
“ಕೊಡಿ ಇಲ್ಲಿ, ನನ್ ದುಡ್ಡದು!” ಎಂದು ಕೈಚಾಚಿದ್ರೆ, “ಕೊಡ್ತೇನೆ ಕೊಡ್ತೇನೆ! ತೆಪ್ಪಗೆ ಕೂತ್ಕೊ! ನೀನೇನು ಆಫೀಸ್ ಕೆಲ್ಸಕೋಗಿ ಸಂಪಾದ್ನೆ ಮಾಡಿದ್ದ? ನನ್ ಕಿಸೆಕಳ್ಳಿ ನೀನು! ಹೋಗಿಹೋಗಿ ಹನ್ನೆರ್ಡು ಸಾವಿರ ಕ್ಯಾಶ್ ಡಬ್ಬಾ ಪೆಟ್ಗೆಯಲ್ಲಿಟ್ತಾರ ಬುದ್ಧಿಯಿದ್ದವ್ರು! ಇವತ್ತೆ ಮಧ್ಯಾಹ್ನ ಬ್ಯಾಂಕಿಗೆ ಹಾಕ್ತೇನೆ ಎಂದರು ಒಳಗಿಟ್ಟುಕೊಂಡು, ಪಂಚೆ ಇಳಿಬಿಟ್ಟು.
ಪೆಟ್ಟಿಗೆ ನೆನಪಾದದ್ದೇ ತಡ, “ದೇವ್ರೆ ನನ್ ತವರುಮನೇದು! ಅಮ್ಮ ಕೊಟ್ಟದ್ದು! ಅವಳ ಆಶೀರ್ವಾದ! ಅದಕೇ ಒಡವೆ ಉಳೀತು! ಪಂಚಗವಿಯಾಗುವ ಹೊತ್ತಿಗೆ ಮತ್ತೆ ಅದು ಮೊದಲಿನಹಾಗೆ ಆಗಿಯೇ ಅದರ ಗ್ರಿಹಪ್ರವೇಶವಾಗ್ಬೇಕು, ನಿಮ್ ಬ್ಯಾಂಕ್‌ಗೀಂಕ್ ಎಲ್ಲ ಆಮೇಲೆ! ಮೊದ್ಲು ಪೆಟ್ಟಿಗೆ ರಿಪೇರಿ ಮಾಡ್ಸಿತನ್ನಿ! ನಮ್ಮನೆ ಲಕ್ಷ್ಮಿಯಿದು ಅನ್ಲಿಕ್ಕಿಲ್ಲ.” “ಅದು ಲಕ್ಷಿಯಾದ್ರೆ ಮತ್ತೆ ನೀನ್ಯಾರೆ?” ಎಂದರು ರಾಯರು. ಅವರನ್ನೆ ನೋಡುತ್ತ, “ಮಹಾಲಕ್ಷ್ಮಿ!” ಎಂದು ಠೀವಿಯಿಂದ ಒಳನಡೆದ್ರು ಮುಕಾಂಬಿಕಮ್ಮ. ಮುಸಿಮುಸಿನಗುತ್ತ ರಾಯರು ಹೊರನೋಡಿದ್ರೆ, ಮಂಗವೊಂದು ಒಳಬರುವ ಹವಣಿಕೆಯಲ್ಲಿತ್ತು.
*****
ಕತೆಗೆ ಪ್ರೇರಣೆ ಬದುಕು, ಸುತ್ತಲಿನ ಸೌಂದರ್ಯ ಮತ್ತು ಅದಕ್ಕೆ ಬೌದ್ಧಿಕವಾಗಿ ಸ್ಪಂದಿಸುವ ಮನಸ್ಸು. ಕತೆಗೆ ಅನುಭವವೇ ವಸ್ತು. ಅದನ್ನು ಸೂಕ್ಷ್ಮವಾಗಿ ಅತ್ಯಂತ ಸಂಕೀರ್ಣವಾಗಿ ಮೌಖಿಕವಾಗಿ ಹಾಗು ಬರಹರೂಪದಲ್ಲಿ ಕಲಾತ್ಮಕವಾಗಿ ಹೆಣೆಯಲು ಮನುಷ್ಯನಿಗೆ ಭಾಷೆ ಎಂಬ ಮಾಧ್ಯಮವಿದೆ ಎಂಬುದೇ ಮಹತ್ವದ ಸಂಗತಿ.
ಕಳೆದ ಎರಡು ವರ್ಷಗಳ ಹಿಂದೆ ಬಿದನೂರು ನಗರದಲ್ಲಿ ನಡೆದಿದ್ದ ಘಟನೆಯನ್ನೇ ವಸ್ತುವಾಗಿಸಿಕೊಂಡು ರೆಕ್ಕೆ ಪುಕ್ಕ ಕಟ್ಟಿ ಈ ಕತೆಯನ್ನು ಹೆಣೆದಿದ್ದೇನೆ. ನನ್ನ ಅತ್ತೆ-ಮಾವ ಬಿದನೂರು ನಗರದ ತಮ್ಮ ಮನೆಗೆ ಬೀಗ ಹಾಕಿ ಕೆಲ ತಿಂಗಳ ಕಾಲ ಬೆಂಗಳೂರಿನ ಹಿರಿಮಗನ ಮನೆಗೋ ಉಡುಪಿಯ ಕಿರಿಮಗನ ಮನೆಗೋ ಹೋಗಿ ಬರುವುದು ರೂಢಿ. ಮುಗ್ಧತೆಯಲ್ಲೇ ಅದ್ದಿ ತೆಗೆದಂಥ ಜತೆ. ಅತ್ತೆ ತನ್ನ ನಗ- ನಗದನ್ನು ಹಳೆ ಪೆಟ್ಟಿಗೆಯಲ್ಲಿಟ್ಟು ಕರಿಕಂಬಳಿ ಮುಚ್ಚಿ ಕತ್ತಲ ಮುಚ್ಚಿಗೆ ಕೋಣೆಯಲ್ಲಿ ಮಂಚದಡಿ ನೂಕಿ ತಿರುಗಾಡಲು ಹೋಗುತ್ತಿದ್ದರು. ಮನುಷ್ಯತ್ವದಲ್ಲಿ ಅತಿಯಾದ ನಂಬಿಕೆ. ಮಾವನಿಗೆ “ಲಾಕರ್ ಮಾಡಿಸಿ” ಎಂದರೂ “ನಾನು ಮೇಷ್ಟ್ರು. ಮೇಷ್ಟ್ರಮನೆಗೆ ಕಳ್ಳರು ಬರುವುದಿಲ್ಲ, ಪ್ರಾಮಾಣಿಕವಾಗಿ ದುಡಿದು ಗಳಿಸಿದ ಸಂಪತ್ತು ಕಳುವಾಗುವುದಿಲ್ಲ” ಎಂಬ ದೃಢ ನಂಬಿಕೆಯವರು. ಅವರು ನೇರವಾಗಿ ಬೆಂಗಳೂರಿನಿಂದ ಉಡುಪಿಯ ನಮ್ಮ ಮನೆ ಹೊಸ್ತಿಲೊಳಗೆ ಕಾಲಿಟ್ಟದಷ್ಟೇ ‘ನಗರದ ಮನೆಗೆ ಕಳ್ಳರು ನುಗ್ಗಿದ್ದಾರೆ’ ಎಂಬ ವಾರ್ತೆ ಕಿವಿಮುಟ್ಟಿತ್ತು. ಇದನ್ನೇ ಕೇಂದ್ರವಸ್ತುವಾಗಿಸಿಕೊಂಡು ಈ ಕತೆಯನ್ನು ಹೆಣೆಯಲು ಯತ್ನಿಸಿದ್ದೇನೆ.
ಈ ಕತೆ ಬರೆಯಲು ಪ್ರೇರಣೆ ನನ್ನ ಅತ್ತೆ-ಮಾವ. ಬರೆದು ಅವರಿಗೆ ಓದಿ ಹೇಳಿದಾಗ ಹಿರಿಹಿರಿ ಹಿಗ್ಗಿವೆ ಈ ಇಳಿಜೀವಗಳು. ಮತ್ತೆ ಮತ್ತೆ ಓದುತ್ತ, ತಮ್ಮ ನೆಂಟರಿಷ್ಟರಿಗೆಲ್ಲ ಓದಲು ಕೊಟ್ಟು ಖುಷಿ ಪಟ್ಟಿವೆ ಈ ಮುಗ್ಧ ಜೀವಗಳು. ಓದುಗರಿಗೆ ಈ ಕತೆ ಖುಷಿ ನೀಡುತ್ತದೋ ಇಲ್ಲವೋ ಅದು ಬೇರೆ ಮಾತು. ಆದರೆ ಅತ್ತೆ-ಮಾವ ಈ ಕತೆಯ ನಾಯಕ-ನಾಯಕಿಯಾಗಿ ತಮ್ಮನ್ನು ತಾವೇ ಓದುತ್ತ ಖುಷಿಪಟ್ಟ ಕ್ಷಣಗಳು ಕಣ್ಣ ಮುಂದೆ ಬಂದಾಗೆಲ್ಲ ಈ ಕತೆಯನ್ನು ನಾನು ಮತ್ತೆ ಮತ್ತೆ ಇಷ್ಟ ಪಡುತ್ತೇನೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಕಥೆ ಓದ್ತಾ ಓದ್ತಾ ,ಮೂಕಾಂಬಿಕಮ್ಮನವರ ಒಡವೆ ಉಳೀಲಿ ದೇವ್ರೇ ಅನ್ನೋ ಹಾಗೆ ಆಗಿತ್ತು ,ಕ್ಲಾಸ್ ಮೇಡಂ