ಸರ್ಕಾರಿ ಕೆಲಸ ಬಿಟ್ಟು ಮಗ ತನಗೆ ನಿರಾಸೆ ಮಾಡಿದಾಂತ ಕೊರಗಿ ನನ್ನಪ್ಪ ಸತ್ತನೋ ಅಥವಾ ಎಂದೋ ತೀರಿಕೊಂಡ ಹೆಂಡತಿಯ ನೆನಪು ಕಾಡಿದ್ದು ಹೆಚ್ಚಾಗಿ ಸತ್ತನೋ ಅಥವಾ ಕುಡಿತದ ದಾಸನಾಗಿ ಸತ್ತನೋ ನನಗರ್ಥ ಆಗಲಿಲ್ಲ. ಆದರೂ ಲೋಕಜ್ಞಾನ ಇರೋ ಮಗನ ನಿರ್ಧಾರ ಇಳಿವಯಸ್ಸಿನ ತಂದೇನ ಇಷ್ಟೆಲ್ಲ ಕಂಗೆಡಿಸಲಿಕ್ಕೆ ಸಾಧ್ಯಾನಾ? ಇದಂತೂ ನನಗೆ ಬಗೆಹರೀಲೇ ಇಲ್ಲ.
‘ನಾನು ಮೆಚ್ಚಿದ ನನ್ನ ಕಥೆʼಯ ಸರಣಿಯಲ್ಲಿ ಅಮರೇಂದ್ರ ಹೊಲ್ಲಂಬಳ್ಳಿ ಬರೆದ ಕಥೆ ‘ಯಾಗದ ಕುದುರೆʼ
ಕಥೆಯ ಮುಂಭಾಗ
ನಾಯಕರು ಜೀವ ಹಿಂಡುತ್ತಿದ್ದ ತಮ್ಮ ಮಂಡಿಯ ನೋವಿಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದಾಗ ಮುಖ್ಯ ರಸ್ತೆಯ ತುದಿಯಲ್ಲಿ ಘೋಷಣೆಗಳ ಸದ್ದು ಕೇಳಿಸಿತು. ನಾಯಕರಿಗೆ ಮೆರವಣಿಗೆ, ಗದ್ದಲ, ಜೈಕಾರಗಳ ಕುರಿತು ಈ ವಯಸ್ಸಿನಲ್ಲಿಯೂ ತೀರದ ಸೆಳೆತ. ಹಾಗಾಗಿ ಮನಸ್ಸು ಅದರೆಡೆಗೆ ತವಕಿಸತೊಡಗಿತು. ದಿನಸಿಯನ್ನೂ ಮಾತ್ರೆಗಳನ್ನೂ ತೆಗೆದುಕೊಂಡಿದ್ದಾಗಿದೆ. ಮನೆಗೆ ಹೋದರೆ ಹೊತ್ತು ಕಳೆಯುವುದು ಕಷ್ಟ. ಇದನ್ನಾದರೂ ನೋಡಿದರಾಯಿತು ಎಂದು ಯೋಚಿಸಿ ಮೆರವಣಿಗೆಯ ದಿಕ್ಕಿನೆಡೆಗೆ ಕುಂಟುತ್ತ ಹೊರಟರು.
ಅವರ ನಿರೀಕ್ಷೆ ಸುಳ್ಳಾಗಲಿಲ್ಲ. ಕೆಂಪು ಹಳದಿ ಬಣ್ಣದ ಬಾವುಟ ಹಿಡಿದುಕೊಂಡು ಒಂದಷ್ಟು ಜನ ಇತ್ತ ಕಡೆ ಬರುತ್ತಿದ್ದರು. ಬಾವುಟ, ಘೋಷಣೆ ಇವೆಲ್ಲ ನಾಯಕರಿಗೆ ಹೊಸದಲ್ಲ. ಆದರೆ ಇಂತಹ ಚಟುವಟಿಕೆಗಳಿಂದ ದೂರವುಳಿದು ತುಂಬ ವರ್ಷಗಳಾಗಿದ್ದರಿಂದ ಇತ್ತೀಚೆಗೆ ಏನಾದರೂ ಬದಲಾವಣೆ ಆಗಿದೆಯಾ ಎನ್ನುವ ಕುತೂಹಲವಿತ್ತು. ಗೋಕಾಕ್ ಚಳವಳಿಯ ಕಾಲದಲ್ಲಿ ಪೋಲೀಸರ ಎದುರು ಎದೆ ಸೆಟೆಸಿ ನಿಲ್ಲುತ್ತಿದ್ದ ನಾಯಕರನ್ನು ಮೆಚ್ಚಿಕೊಂಡ ರಾಜಣ್ಣ ಬೆನ್ನು ತಟ್ಟಿ ‘ಈ ಹೋರಾಟದ ಕೆಚ್ಚೇ ನೋಡಿ ತಾಯ್ನಾಡನ್ನು ಉಳಿಸೋದು. ಆದರೆ ಹೋರಾಟ ಅನ್ನೋದು ನಮ್ಮ ಹಕ್ಕೊತ್ತಾಯವೇ ಹೊರತು ಯಾರೊಂದಿಗೂ ಸಂಘರ್ಷವಲ್ಲ’ ಎಂದಿದ್ದರು. ಅವರು ಆಗ ಹೇಳಿದ ವಿವೇಕವನ್ನು ನಾಯಕರು ಯಾವತ್ತೂ ಮರೆಯಲಿಲ್ಲ. ಗೋಕಾಕ್ ಚಳವಳಿಯಲ್ಲಿ ಭಾಗವಹಿಸುವಂತೆ ಚಂದ್ರಶೇಖರ ಪಾಟೀಲರು ರಾಜಣ್ಣನಿಗೆ ಬಹಿರಂಗ ಕರೆ ನೀಡುವ ಮುಂಚೆಯೇ ನಾಯಕರು ರಾಜಣ್ಣನನ್ನು ಭೇಟಿಯಾಗಿ ಅವರು ಹೋರಾಟಕ್ಕಿಳಿದರೆ ಚಳವಳಿಗೆ ಎಂತಹ ಹುಮ್ಮಸ್ಸು ಬರುತ್ತದೆ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿದ್ದರು.
ಮೈಸೂರು ಬ್ಯಾಂಕಿನ ಸರ್ಕಲ್ಲಿನಿಂದ ವಿಧಾನಸೌಧದ ಕಡೆಗೆ ಸಾಗುತ್ತ ಸಾಗರದಂತೆ ಕಾಣುತ್ತಿದ್ದ ಜನರ ನಡುವೆ ರಾಜಣ್ಣನವರು ನಾಯಕರ ಭುಜದ ಮೇಲೆ ಕೈ ಹಾಕಿ ನಡೆಯುತ್ತಿದ್ದರೆ, ನಾಯಕರ ಕಣ್ಣಿನಲ್ಲಿ ಹೆಮ್ಮೆಯ ಪ್ರವಾಹ ಹರಿಯುತ್ತಿತ್ತು. ಆಮೇಲಾಮೇಲೆ ನಡಿಗೆಯಲ್ಲಿ ಸಾಗುವ ಜನ ರಾಜಣ್ಣನನ್ನು ಮುತ್ತಿಕೊಳ್ಳುತ್ತ ಮೆರವಣಿಗೆಗೆ ತೊಡಕಾಗಿ ರಾಜಣ್ಣ ವಾಹನದ ಮೇಲೇರಿ ನಿಂತಿದ್ದರು. ದಿನ ಬೆಳಗಾದರೆ ಬೀದಿ ಬದಿಯ ಹೋರಾಟ ನಡೆಸುತ್ತ, ಹೋರಾಟಗಳಲ್ಲಿ ಪೆಟ್ಟು ತಿನ್ನುತ್ತ, ಪೆಟ್ಟು ಮಾಯುವ ಮುಂಚೆ ಮತ್ತೊಂದು ಹೋರಾಟ ಕಟ್ಟುತ್ತ ಸಾಗಿದ ನಾಯಕರು ಇತರರಂತೆ ರಾಜಣ್ಣನೊಂದಿಗೆ ವಾಹನದ ಮೇಲೇರದೆ ಕಾಲ್ನಡಿಗೆಯಲ್ಲಿಯೇ ಉಳಿದಿದ್ದರು.
ಇವತ್ತಿನ ಮೆರವಣಿಗೆಯ ಘೋಷಣೆಗಳನ್ನು ಕೇಳುತ್ತಿದ್ದರೆ ನಾಯಕರಿಗೆ ಜೀವ ಕುಣಿಯುತ್ತದೆ. ಅವರಿಗೆ ತುಂಬ ಪ್ರಿಯವಾದ ಘೋಷಣೆಗಳವು. ಅವರು ಕೆಲವು ವರ್ಷಗಳಿಂದ ಯಾವ ರ್ಯಾಲಿಗೂ ಮೆರವಣಿಗೆಗೂ ಹೋಗುತ್ತಿಲ್ಲ. ಅವರನ್ನು ಈಗ ಯಾರೂ ಯಾವುದಕ್ಕೂ ಕರೆಯುವುದಿಲ್ಲ. ಕೆಲವೇ ವರ್ಷಗಳ ಹಿಂದೆ ಅಂದಾನಪ್ಪ ನಾಗರಾಜ ನಾಯಕರೆಂದರೆ ನಾಡಿನುದ್ದಕ್ಕೂ ಚಿರಪರಿಚಿತವಾದ ಹೆಸರು. ಮುಖ್ಯಮಂತ್ರಿಯ ಮನೆಗೆ ನೇರ ಪ್ರವೇಶ ಪಡೆಯುತ್ತಿದ್ದವನು ಎಷ್ಟು ಬೇಗ ಅಪ್ರಸ್ತುತವಾಗಿಬಿಟ್ಟೆ, ಅದೆಷ್ಟು ಬೇಗ ಅಜ್ಞಾತವಾಸಕ್ಕೆ ಸರಿದುಬಿಟ್ಟೆ ಎನ್ನುವ ಯೋಚನೆಯಿಂದ ನಾಯಕರಿಗೆ ದಿಗ್ಭ್ರಮೆಯಾಗುತ್ತದೆ. ನಾಯಕರ ಶಿಷ್ಯರು ಅವರನ್ನು ‘ಹುಲಿ ಹುಲಿ ಕಣಣ್ಣಾ ನೀನು’ ಅನ್ನುತ್ತಿದ್ದರು. ಒಟ್ಟಿನಲ್ಲಿ ದೈಹಿಕವಾಗಿ ಹುಲಿಯಂತೆ ದಿಟ್ಟವಾಗಿದ್ದ ನಾಯಕರು ತಮ್ಮ ಸುಡು ಬೆಂಕಿಯಂತಹ ಪ್ರಾಮಾಣಿಕತೆಯಿಂದಲೂ ಹುಲಿಯೆಂದೇ ಪ್ರಖ್ಯಾತರಾಗಿದ್ದರು. ಆದರೆ ಹುಲಿಗೆ ಈಗ ವಯಸ್ಸಾಗಿದೆ. ಅದರ ಹಲ್ಲು ಉಗುರು ಕೂಡ ಮೊಂಡಾಗಿವೆ. ಈಗ ಅದೇನಾದರೂ ಗರ್ಜಿಸಿದರೆ ಯಾವುದೋ ಮುದಿ ಬೆಕ್ಕಿನ ಹತಾಶ ಗುಟುರಿನಂತೆ ಕೇಳುತ್ತದೆ. ಅದು ಅರ್ಥವಾಗಿ ಹುಲಿ ಕೂಡ ಸುಮ್ಮನಾಗಿದೆ. ಆದರೂ ಅದಕ್ಕೆ ತನ್ನ ಹಳೆಯ ಸಾಹಸಗಳ ನೆನಪಿನಿಂದ ಮನಸ್ಸು ಮುದಗೊಳ್ಳುವುದರಿಂದ ಅವುಗಳನ್ನು ಮೆಲುಕು ಹಾಕುತ್ತ ಸುಖಿಸುತ್ತಿರುತ್ತದೆ.
ಮೆರವಣಿಗೆಯಲ್ಲಿ ಎಲ್ಲರ ಕೈಯಲ್ಲಿ ಕೆಂಪು ಹಳದಿ ಬಣ್ಣದ ಬಾವುಟಗಳಿದ್ದವು. ಕೆಲವರ ಹೆಗಲ ಮೇಲೆ ಬಾವುಟದ್ದೇ ಬಣ್ಣದ ಶಾಲು ಕೂಡ ಇತ್ತು. ಅವರನ್ನು ನೋಡುತ್ತಿದ್ದರೆ ನಾಯಕರಿಗೆ ತಾನು ಮೊದಲು ಬಾವುಟ ಹಿಡಿದು ಸಂಭ್ರಮಿಸಿದ ದಿನದ ನೆನಪಾಯಿತು. ಬಾವುಟ ಹಿಡಿದ ಪ್ರತಿಸಲವೂ ಯೋಧನಂತೆ ಎದೆ ಸೆಟೆಸಿ ನಡೆಯುತ್ತಿದ್ದೆ ಎನ್ನುವುದು ಕೂಡ ನೆನಪಾಯಿತು. ಈಗಲೂ ಮೆರವಣಿಗೆಯಲ್ಲಿ ಹರೆಯದ ಹುಡುಗರಿದ್ದಾರೆ. ಅದೇ ಬಣ್ಣದ ಬಾವುಟ ಶಾಲು ಎಲ್ಲವೂ ಇದೆ. ಆದರೆ ಮೆರವಣಿಗೆಯ ಸ್ವರೂಪ ಮಾತ್ರ ಮೊದಲಿನಂತಿಲ್ಲ ಎನ್ನಿಸಿತು, ನಾಯಕರಿಗೆ.
ಈಗಿನ ಕಾಲದ ಹುಡುಗರಿಗೆ ಜವಾಬ್ದಾರಿಯ ಗುಣವಿಲ್ಲ ಎಂದು ನಾಯಕರಿಗೂ ಎಷ್ಟೋ ಸಲ ಅನ್ನಿಸಿತ್ತು. ಆದರೆ ಈ ಹುಡುಗರ ಚೈತನ್ಯ ನೋಡಿದರೆ ಯೌವನವೇ ಹಾಗಲ್ಲವೇ? ಈ ವಯಸ್ಸಿನಲ್ಲಿ ನೆಲ ಕಾಣೋದು ದೇಶ ಕಾಣೋದು ಅಂದರೆ ಒಂಥರಾ ಅಸಹಜ ಅಲ್ಲವೇ ಅನ್ನಿಸಿ ತಮ್ಮ ಹರೆಯದ ದಿನಗಳ ಹುಚ್ಚಾಟಗಳ ನೆನಪಾಗಿ ನಕ್ಕರು. ಹೊಸ ಪೀಳಿಗೆಯ ಬಗ್ಗೆ ಹಾಗೆಲ್ಲ ಆತಂಕ ಪಡುವಂತದ್ದೇನಿಲ್ಲ. ಹೊಸ ಕಾಲಮಾನ ಅವರ ಆದ್ಯತೆಗಳನ್ನು ಬದಲಾಯಿಸಿರಬಹುದು. ಆದರೆ ಕಾಲವೇ ಅವರಿಗೆ ವಿವೇಕಗಳನ್ನೂ ಕಲಿಸುತ್ತದೆ ಎಂದು ಯೋಚಿಸುತ್ತಿದ್ದ ನಾಯಕರಿಗೆ, ಮೆರವಣಿಗೆಯಲ್ಲಿ ಯಾರಾದರೂ ತಮ್ಮನ್ನು ಗುರುತಿಸಲಿ, ಮಾತಾಡಿಸಲಿ ಎಂದು ಆಸೆಯಾಯಿತು. ಆದರೆ ನಾಯಕರನ್ನು ಯಾರಾದರೂ ಮಾತಾಡಿಸುವುದಿರಲಿ, ಯಾರೂ ಅವರ ಗುರುತು ಕೂಡ ಹಿಡಿಯಲಿಲ್ಲ. ತಡೆಯಲಾಗದ ಸಂಕಟ ನಾಯಕರನ್ನು ಕವಿದುಕೊಂಡಿತು. ತಮ್ಮಿಂದ ದೂರವಾಗುತ್ತಿದ್ದ ಮೆರವಣಿಗೆಯನ್ನು ಮಂಕು ಬಡಿದವರಂತೆ ನೋಡುತ್ತ ಇದ್ದುಬಿಟ್ಟರು. ಆಗ ಇದ್ದಕ್ಕಿದ್ದಂತೆ ತನ್ನನ್ನು ಯಾರೋ ಎಳೆಯುತ್ತಿದ್ದಾರೆ ಎನ್ನಿಸಿತು. ಅದು ಯಾರು ಏನು ಎತ್ತ ಎಂದು ಅರ್ಥವಾಗುವಷ್ಟರಲ್ಲಿ ಅವರು ಅಲ್ಲಿನ ಬೇಕರಿಯೊಂದರಲ್ಲಿ ಇದ್ದರು. ಗಾಬರಿಯಿಂದ ಅವರ ಮೈ ನವಿರಾಗಿ ಕಂಪಿಸುತ್ತಿತ್ತು. ಮನಸ್ಸು ಸಹಜ ಸ್ಥಿತಿಗೆ ಬಂದ ನಂತರ ತಮ್ಮ ದಿನಸಿಯ ಚೀಲ, ಔಷಧಿ ಮತ್ತು ಮಾತ್ರೆಗಳ ಕವರು ಇವೆಲ್ಲ ಅವರಿಗೆ ನೆನಪಾದವು. ಅವು ಏನಾದವೆಂದು ತನ್ನಂತೆ ಬೇಕರಿಗೆ ತೂರಿಕೊಂಡಿದ್ದವರನ್ನು ಕೇಳಿದರು. ಆದರೆ ಅವರಿಗೂ ಅದರ ಬಗ್ಗೆ ಗೊತ್ತಿರಲಿಲ್ಲ.
ಅಷ್ಟರಲ್ಲಿ ಬೇಕರಿಯ ಹುಡುಗ ಚಡಪಡಿಸುತ್ತ ನಿಂತಿದ್ದ ನಾಯಕರನ್ನು ನೋಡಿ ‘ಸ್ವಾಮಿ, ನೀವಲ್ಲೇ ಇದ್ದಿದ್ರೆ ಪೋಲೀಸ್ರು ನಿಮ್ಮ ಬುರುಡೇಗೆ ನೀರು ಕಾಯಿಸಿರೋರು. ತಲೆ ಕೆಟ್ಟವರಂಗೆ ಅಲ್ಲೇ ನೋಡ್ತಾ ನಿಂತಿದ್ರಲ್ಲ ಯಾಕೆ? ಇದ್ಯಾವುದೋ ಬಡಪಾಯಿ ಅನ್ಯಾಯವಾಗಿ ಪೆಟ್ಟು ತಿಂತದೇಂತ ತಕ್ಷಣ ನಿಮ್ಮನ್ನ ಒಳಕ್ಕೆ ಎಳ್ಕೊಂಡೆ. ನಿಮ್ಮ ಬ್ಯಾಗು ಅಲ್ಲೇ ಎಲ್ಲೋ ಇರ್ತದೆ. ಗಲಾಟೆ ಎಲ್ಲಾ ತಣ್ಣಗಾಗಲಿ ಇರಿ. ನಿಮ್ಮ ಪ್ರಾಣಕ್ಕಿಂತ ಬ್ಯಾಗೇನು ಹೆಚ್ಚಲ್ವಲ್ಲ ಯಜಮಾನ್ರೆ?’ ಎನ್ನುತ್ತ ಅರ್ಧ ತೆರೆದಿದ್ದ ಅಂಗಡಿಯ ಶಟರನ್ನು ಪೂರ್ತಿ ಕೆಳಗೆಳೆದ. ಕೆಳಗಿಳಿಯುತ್ತಿದ್ದ ಶಟರಿನ ಸಂದಿಯಿಂದ ಮುಚ್ಚುತ್ತಿರುವ ಅಂಗಡಿಗಳು, ಚೆಲ್ಲಾಪಿಲ್ಲಿಯಾದ ಮೆರವಣಿಗೆ, ದಿಕ್ಕಾಪಾಲಾಗಿ ಓಡುತ್ತಿರುವ ಜನ, ಲಾಠಿ ಹಾಗು ಬಂದೂಕು ಹಿಡಿದ ಪೋಲೀಸರು, ಕಾಲ್ತುಳಿತಕ್ಕೆ ಸಿಕ್ಕಿದ ಬಾವುಟಗಳು- ಸಿನಿಮಾ ದೃಶ್ಯಗಳಂತೆ ನಾಯಕರ ಕಣ್ಣೆದುರು ಸರಿದುಹೋದವು. ಒಳಗೆ ಕತ್ತಲಾದ್ದರಿಂದ ಬೇಕರಿಯ ಹುಡುಗ ಲೈಟ್ ಹಾಕಿದ.
ಆಗ ಅಲ್ಲಿದ್ದವರೆಲ್ಲ ನಾಯಕರಿಗೆ ಸ್ಪಷ್ಟವಾಗಿ ಕಾಣಿಸಿದರು. ಆಗ ನಾಯಕರಂತೆಯೇ ಅಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿಯೊಬ್ಬ ನಾಯಕರನ್ನೇ ದಿಟ್ಟಿಸುತ್ತ ‘ನಿಮ್ಮನ್ನೆಲ್ಲೋ ನೋಡಿದ್ದೀನಿ. ಎಲ್ಲೀಂತ ಹೊಳೀತಾನೇ ಇಲ್ಲವಲ್ಲ, ಎಲ್ಲಿರಬೋದು?’ ಎಂದು ತಲೆ ಕೆರೆದುಕೊಳ್ಳುತ್ತ ಪೇಚಾಡತೊಡಗಿದ. ಆತ ತುಂಬ ಹೊತ್ತು ಹಾಗೆ ಯೋಚಿಸುತ್ತಲೇ ಇದ್ದ. ಆತನಿಗೆ ನೆನಪಾಗಲಿ ಎಂದು ನಾಯಕರು ಹಾರೈಸತೊಡಗಿದರು. ಆದರೆ ನೆನಪಾಗಲಿಲ್ಲವೇನೋ ಆತ ಬೇಸರದಿಂದ ತುಟಿ ಕೊಂಕಿಸುತ್ತ ಸುಮ್ಮನಾದ. ನೆನಪಾಗದಿದ್ದರೆ ತಮ್ಮನ್ನೇ ಒಂದು ಮಾತು ಕೇಳಬಹುದಿತ್ತಲ್ಲ ಅನ್ನಿಸಿತು. ತಾವೇ ಹೇಳಲೆತ್ನಿಸಿದರು ಕೂಡ. ಆದರೆ ಸಂಕೋಚದಿಂದ ಮಾತೇ ಹುಟ್ಟಲಿಲ್ಲ. ತುಂಬ ಹೊತ್ತಿನವರೆಗೆ ಅವರು ತಮ್ಮ ಹಳೆಯ ದಿನಗಳನ್ನು ಮಗುಚುತ್ತ ಬೇಕರಿಯಲ್ಲಿ ನಿಂತಿದ್ದರು.
ಬೇಕರಿಯ ಹುಡುಗ ಶಟರನ್ನು ಮೇಲೆತ್ತಿ ಹೊರಗಿಣುಕಿ ನೋಡಿ, ‘ಎಲ್ಲರೂ ಹೋಗಿ ಸ್ವಾಮಿ, ಇನ್ನೇನೂ ತೊಂದರೆ ಇಲ್ಲ’ ಅಂದ. ನಾಯಕರು ನಿಧಾನವಾಗಿ ಹೊರಗೆ ಬಂದರು. ಅಷ್ಟರಲ್ಲಿ ಜನರ ಓಡಾಟಕ್ಕೆ ಸ್ವಲ್ಪ ನಿರಾತಂಕ ಭಾವ ಬಂದಂತಿತ್ತು. ಅಂಗಡಿಗಳ ಬಾಗಿಲನ್ನು ಕೂಡ ಅರೆಬರೆಯಾಗಿ ತೆರೆದು ವ್ಯಾಪಾರ ನಡೆಸಲಾಗುತ್ತಿತ್ತು. ಒಂದೆರಡು ಪೋಲೀಸು ವ್ಯಾನುಗಳೂ ಅಲ್ಲಿದ್ದವು. ಕಾರ್ಯಕರ್ತರು ಬೀಳಿಸಿಹೋಗಿದ್ದ ಬಾವುಟಗಳು ರಸ್ತೆಯ ಧೂಳಿನಲ್ಲಿ ಚೆಲ್ಲಾಡಿದ್ದವು.
ತಮ್ಮ ಮುಕ್ಕಾಲುಪಾಲು ಆಯುಷ್ಯವನ್ನು ಈ ಬಾವುಟಗಳೊಂದಿಗೆ ಕಳೆದಿದ್ದ ನಾಯಕರಿಗೆ ಅವುಗಳನ್ನು ಇಂಥ ದುಸ್ಥಿತಿಯಲ್ಲಿ ನೋಡಬೇಕಾಯಿತಲ್ಲ ಎಂದು ಸಂಕಟವಾಯಿತು. ಒಮ್ಮೆ ಹೀಗೆ ಒಂದು ಜಾಥಾದಲ್ಲಿ ಗಲಾಟೆಯಾಗಿ ಪೋಲೀಸರ ಹೊಡೆತಕ್ಕೆ ಹೆದರಿ ಎಲ್ಲರೂ ಓಡುತ್ತಿದ್ದರೆ, ನಾಯಕರ ಗಮನ ಮಾತ್ರ ಮಣ್ಣು ಪಾಲಾಗುತ್ತಿದ್ದ ಬಾವುಟವನ್ನು ಎತ್ತಿಕೊಳ್ಳುವುದರ ಕಡೆಗಿತ್ತು. ಆಗ ಪ್ರಭಾಕರ ರೆಡ್ಡಿ ತಮ್ಮ ತಲೆಯಲ್ಲಿ ಲಾಠಿ ಏಟಿನಿಂದ ಎದ್ದ ಬೋರೆಯನ್ನು ಉಜ್ಜಿಕೊಳ್ಳುತ್ತ ‘ನಾಯಕರೇ ಇಷ್ಟೊಂದು ಮೈ ಮರೆತುಬಿಟ್ರೆ ಹ್ಯಾಗೆ? ನಾವು ಜೀವಂತವಾಗಿ ಇದ್ದರೇನೆ ಅಲ್ವಾ ನಮ್ಮ ಹೋರಾಟ ನಡೆಯೋದು?’ ಎಂದು ರೇಗುತ್ತ ತಲೆಯಿಂದ ರಕ್ತ ಸುರಿಯುತ್ತಿದ್ದ ನಾಯಕರನ್ನು ಆಸ್ಪತ್ರೆಗೆ ಸೇರಿಸಿದ್ದರು.
ನಾಯಕರು ನೋಯುತ್ತಿದ್ದ ಮಂಡಿಯ ಮೇಲೆ ಕೈಯೂರಿ ಪ್ರಯಾಸದಿಂದ ಬಗ್ಗಿ ಅಲ್ಲಿ ಬಿದ್ದಿದ್ದ ಒಂದೆರಡು ಬಾವುಟಗಳನ್ನು ತೆಗೆದು ಅಂಗಡಿಯೊಂದರ ಕಟ್ಟೆಯ ಮೇಲಿಟ್ಟರು. ಆಗ ಪುಟ್ಟ ಹುಡುಗನೊಬ್ಬ ದೊಡ್ಡ ಗಾತ್ರದ ಪುಸ್ತಕದ ಬ್ಯಾಗನ್ನು ಹೊತ್ತು ಆತುರಾತುರವಾಗಿ ಆ ದಾರಿಯಲ್ಲಿ ಬಂದ. ನಾಯಕರು ಅವನನ್ನು ಕರೆದರು. ಅವನು ‘ಏನು ಅಂಕಲ್?’ ಎನ್ನುತ್ತ ಬಂದ. ನಾಯಕರು ಅವನ ಎದೆಯ ಮೇಲಿದ್ದ ಬ್ಯಾಡ್ಜ್ ನೋಡಿದರು. ಯಾವುದೋ ಇಂಗ್ಲಿಷ್ ಸ್ಕೂಲಿನ ಹುಡುಗ. ‘ಸ್ಕೂಲಿಲ್ವಾ ಕಂದ’ ಎಂದು ಮುದ್ದು ಮುದ್ದಾಗಿದ್ದ ಅವನನ್ನು ಕೇಳಿದರು. ‘ಇತ್ತು ಅಂಕಲ್. ಅದೇನೋ ಗಲಾಟೆ ಆಯ್ತಂತಲ್ಲ. ಅದಕ್ಕೇ ಬೇಗ ಮನೆ ಸೇರ್ಕೊಳ್ಳಿ ಅಂತ ಕಳಿಸಿದ್ರು’ ಎಂದ. ಹೊಳೆಯುತ್ತಿದ್ದ ಅವನ ಚೆಂದದ ಕಣ್ಣು ನೋಡಿ ನಾಯಕರಿಗೆ ಖುಷಿಯಾಗಿ ತಮ್ಮಲ್ಲಿನ ಒಂದು ಬಾವುಟವನ್ನು ಅವನಿಗೆ ಕೊಟ್ಟರು. ಅವನು ಬಾವುಟ ಪಡೆದು ‘ಥ್ಯಾಂಕ್ಯೂ ಅಂಕಲ್’ ಎನ್ನುತ್ತ ಅದನ್ನು ಮೇಲೆತ್ತಿ ಹಿಡಿದು ಆಡಿಸುತ್ತ ಹೊರಟ. ಅವನಲ್ಲಿರುವ ಬಾವುಟ ನೋಡಿ ಪೋಲೀಸರು ಹೊಡೆದುಬಿಟ್ಟಾರೆಂದು ನಾಯಕರಿಗೆ ಆತಂಕವಾಯಿತು. ತುಂಬಾ ಹೊತ್ತಿನ ತನಕ ಆ ಹುಡುಗ ಹೋಗುವುದನ್ನೇ ನೋಡುತ್ತಿದ್ದು ಅವನು ಕಣ್ಮರೆಯಾದ ಮೇಲೆ ನಿಸೂರಾದರು.
ಆನಂತರ ನಾಯಕರಿಗೆ ತಮ್ಮ ಮಾತ್ರೆಗಳ ಕವರು ಮತ್ತು ದಿನಸಿಯ ಚೀಲ ನೆನಪಾಯಿತು. ಅಲ್ಲಿ ಸುತ್ತೆಲ್ಲ ಕಣ್ಣು ಹಾಯಿಸಿದರು. ಮಾತ್ರೆಗಳ ಕವರು ಎಲ್ಲೂ ಕಾಣಲಿಲ್ಲ. ದಿನಸಿಯ ಚೀಲ ಮಾತ್ರ ರಸ್ತೆಯ ಬದಿಯಲ್ಲಿ ಅಷ್ಟಗಲ ಬಾಯಿ ತೆರೆದುಕೊಂಡು ಅನಾಥ ಶವದಂತೆ ಬಿದ್ದಿತ್ತು. ಅದರ ಮೇಲೆ ಯಾರ್ಯಾರೋ ತುಳಿದು ಏನೇನೋ ಹೊಲಸೆಲ್ಲ ಮೆತ್ತಿಕೊಂಡಿತ್ತು. ಆಗ ತಾನೇ ಅಲ್ಲಿಗೆ ಬಂದ ಬಡಕಲು ನಾಯಿಯೊಂದು ಆ ಚೀಲವನ್ನು ಮೂಸುತ್ತಿತ್ತು. ನಾಯಕರು ಕುಂಟುತ್ತ ಅಲ್ಲಿಗೆ ಧಾವಿಸಿ ಬರುವಷ್ಟರಲ್ಲಿ ಅದು ಚೀಲದ ಮೇಲೆ ಉಚ್ಚೆ ಮಾಡಿ ಮುಗಿಸಿತ್ತು.
ಹೀಗೆಲ್ಲ ಆಗಿ ಬೆಳಿಗ್ಗೆ ಮನೆ ಬಿಟ್ಟಿದ್ದ ಅಂದಾನಪ್ಪ ನಾಗರಾಜ ನಾಯಕ್ ಉರುಫ್ ಎ. ಎನ್. ನಾಯಕರು ಮುಖ್ಯ ಬೀದಿಯಿಂದ ಒಂದು ಕಿಲೋಮೀಟರ್ ದೂರದಲ್ಲಿದ್ದ ತಮ್ಮ ಮನೆಗೆ ಹಿಂದಿರುಗಿದಾಗ ಬಹಳ ಹೊತ್ತೇ ಆಗಿಬಿಟ್ಟಿತ್ತು.
ನಾಯಕರು ಹೇಳಿದ್ದು – 1
ನನಗೆ ಈ ಬಾವುಟ ಈ ಹೋರಾಟಗಳ ನಂಟು ಅಂಟಿದ್ದು ಒಂದು ವಿಶಿಷ್ಟ ಸನ್ನಿವೇಶದಲ್ಲಿ. ಸುಮಾರು ಐವತ್ತು ವರ್ಷಗಳ ಹಿಂದಿನ ಕಥೆ ಅದು. ನಾನು ಕಲಿತ ಸರ್ಕಾರಿ ಶಾಲೆ ಇದ್ದಿದ್ದು ನಮ್ಮ ಮನೆಗೆ ಕೂಗಳತೆ ದೂರದಲ್ಲಿ. ನನಗೆ ಸ್ಕೂಲು ಅಂದರೆ ಹೆದರಿಕೆಯಿಂದ ಜೀವ ಬಾಯಿಗೆ ಬರ್ತಿತ್ತು. ಎಲ್ಲ ಹಳ್ಳಿ ಮಕ್ಕಳ ಹಾಗೆ ನನಗೂ ಇಂಗ್ಲಿಷು, ಗಣಿತ ಅಂದರೆ ವಿಪರೀತ ಎನ್ನುವಷ್ಟು ಭಯ. ಸಾಲದೂಂತ ಆ ಗಣಿತದ ಮೇಡಂ ಸರಿಯಾಗಿ ಲೆಕ್ಕ ಮಾಡದವರನ್ನ ಕ್ಲಾಸಿನ ತುಂಬ ಅಟ್ಟಾಡಿಸಿಕೊಂಡು ಹೊಡೀತಿದ್ದರು. ಇನ್ನು ಇಂಗ್ಲಿಷಿನ ಮೇಷ್ಟರ ಕೈಗೆ ಬೆತ್ತ ಬಂದ್ರೆ ಸಾಕು ಹುಡುಗರಿಗೆ ಎಲ್ಲಾ ಆಗಿ ಬಿಡ್ತಿತ್ತು. ಪಾಪ ಅವರಿಬ್ರೂ ಒಳ್ಳೆಯವರೇ ಇರ್ಬೇಕು. ನಾನೇ ದಡ್ಡನಾಗಿದ್ದೆ ಅನ್ನಿಸ್ತದೆ.
ಅವತ್ತೊಂದು ದಿನ ಮೊದಲನೇ ಪೀರಿಯಡ್ಡೇ ಇಂಗ್ಲಿಷ್ ಇತ್ತು. ಪೆಟ್ಟು ಬೀಳೋದಂತೂ ಗ್ಯಾರಂಟಿ ಅಂತ ಗೊತ್ತಿತ್ತು. ಸ್ಕೂಲಿಗೆ ಹೋಗದಿದ್ದರೆ ಆ ಕನ್ನಡ ಪಂಡಿತರು ಬೆಳಿಗ್ಗೇನೆ ಮನೆ ಮುಂದೆ ಹಾಜರಾಗ್ತಾರೆ. ಸ್ಕೂಲಿಗೆ ಹೋಗಿಲ್ಲಾಂತ ಗೊತ್ತಾದ್ರೆ ಅಪ್ಪ ದನಕ್ಕೆ ಬಡಿದಂಗೆ ಬಡೀತಾನೆ. ನನಗಿಂತ ದನ ಮೇಯಿಸೋ ಹುಡುಗರೇ ವಾಸಿ. ಕೆರೆ ಕುಂಟೇಲಿ ಈಜ್ಕೊಂಡು ಮರದ ನೆರಳಲ್ಲಿ ನಿದ್ದೆ ಹೊಡ್ಕೊಂಡು ಎಷ್ಟೊಂದು ಸುಖವಾಗಿರ್ತಾರೆ ಎಂದು ಬೈದುಕೊಂಡೇ ಸ್ಕೂಲಿಗೆ ಹೊರಟಿದ್ದೆ. ಹಾಗೇನೆ ಸ್ಕೂಲಿಂದ ಪಾರಾಗೋದಕ್ಕೆ ಅಸಂಖ್ಯ ಒಳ ದಾರಿಗಳನ್ನೂ ಯೋಚಿಸ್ತಿದ್ದೆ. ಆಗ ಆ ದಾರೀಲಿ ಯಾರೋ ಒಂದಷ್ಟು ಜನ ಹಳದಿ ಕೆಂಪಿನ ಬಾವುಟ ಹಿಡ್ಕೊಂಡು ಬಂದ್ರು. ನಾನು ಅವರನ್ನೇ ನೋಡ್ತಾ ನಿಂತ್ಕೊಂಡೆ. ಬಾವುಟ ಹಿಡಿದ ಜನಕ್ಕೆ ಏನನ್ನೋ ಕೂಗಿ ಹೇಳ್ತ ಒಬ್ಬರು ಬರ್ತಿದ್ರು. ರಸ್ತೆ ಬದೀಲಿ ನಿಂತಿದ್ದೆನಲ್ಲ ನಾನು. ಹೆಗಲಿನಲ್ಲಿ ಸ್ಕೂಲಿನ ಬ್ಯಾಗು ಬೇರೆ ನೇತಾಡ್ತಿತ್ತಲ್ಲ. ಲೀಡರಿನ ಹಾಗಿದ್ದ ಆ ವ್ಯಕ್ತಿ ನನ್ನನ್ನು ನೋಡಿದ್ರು. ಎಲ್ಲರೂ ಸ್ಕೂಲಿಗೆ ಓಡೋ ಹೊತ್ತಲ್ಲಿ ರಸ್ತೆ ಬದೀಲಿ ನಿರುಮ್ಮಳವಾಗಿ ನಿಂತಿದ್ದೆನಲ್ಲ ನಾನು. ಅವರಿಗೆ ವಿಚಿತ್ರವಾಗಿ ಕಂಡಿರಬೇಕು.
‘ಯಾಕೋ ಮರಿ ಇಲ್ಲಿ ನಿಂತಿದ್ದೀಯ? ಶಾಲೇಗೆ ಹೋಗ್ಲಿಲ್ವಾ?’ ಅಂತ ಕೇಳಿದ್ರು. ನನಗೆ ಭಯ ಆಯ್ತು. ಅಪ್ಪನಿಗೆ ಗೊತ್ತಿರೋರಾದ್ರೆ ನನಗಿವತ್ತು ಗ್ರಾಚಾರ ಬಿಟ್ಟೋಗ್ತದೆ ಅಂತನ್ನಿಸ್ತು. ಹೆದರಿಕೆಯಿಂದ ಪಿಳಿಪಿಳೀಂತ ಕಣ್ಣು ಬಿಟ್ಟುಕೊಂಡು ಅಮಾಯಕನಂಗೆ ನೋಡ್ತಾ ನಿಂತು ಬಿಟ್ಟೆ. ಹಾಗೆ ನೋಡ್ತಿದ್ದಾಗಲೇ ಇವರು ಅಪ್ಪನಿಗೆ ಪರಿಚಯದವರಲ್ಲ ಅನ್ನಿಸಲು ಶುರುವಾಯ್ತು. ಅಷ್ಟರಲ್ಲಿ ಅವರಿಗೆ ಏನನ್ನಿಸಿತೋ ‘ಶಾಲೇಗೆ ಹೋಗ್ಬೇಕಪ್ಪ ಮರಿ. ಹಾಗೆಲ್ಲ ತಪ್ಪಿಸ್ಕೋಬಾರ್ದು’ ಅಂದ್ರು. ಸ್ಕೂಲು ತಪ್ಪಿಸಿಕೊಳ್ಳೋ ದಾರಿ ಹುಡುಕ್ತಿದ್ದೋನು ನಾನು. ಇಂಥಾ ಉಪದೇಶ ಬೇಕಾಗಿತ್ತ ನನಗೆ. ‘ಇವತ್ತು ಸ್ಕೂಲಿಗೆ ರಜಾ ಕೊಟ್ರು’ ಎಂದು ಸಲೀಸಾಗಿ ಒಂದು ಸುಳ್ಳು ಒಗೆದೆ. ಅವರಿಗೆ ಅನುಮಾನ ಬಂದಿರ್ಬೇಕು. ‘ಎಲ್ಲರಿಗೂ ಸ್ಕೂಲಿದೆ ಇವತ್ತು. ನಿಂಗೇನು ವಿಶೇಷ?’ ಅಂತ ಕೇಳಿದ್ರು. ‘ಇಲ್ಲಣ್ಣ ದೇವ್ರಾಣೆ ರಜಾ’ ಅಂತ ನಿಜದ ತಲೆಯ ಮೇಲೆ ಹೊಡೆದಂತೆ ಹೇಳಿದೆ. ಇರಬಹುದೇನೋ ಎಂದು ಅವರು ಸುಮ್ಮನಾದರು. ಆಮೇಲೆ ನಾನು ಅವರೆದುರು ಹಲ್ಲು ಕಿಸಿಯುತ್ತ ‘ಮೆರವಣಿಗೇಲಿ ನಾನೂ ಬರ್ಲೇನಣ್ಣ?’ ಅಂದೆ. ಅವರಿಗೆ ಇದ್ಯಾವುದು ಪಿಳ್ಳೆ ಅನ್ನಿಸಿತೇನೋ ಒಂದರೆಗಳಿಗೆ ನನ್ನನ್ನೇ ನೋಡಿ ‘ಆಯ್ತು ಬಾ’ ಎಂದವರೇ ‘ರೀ ಕೆಂಚಪ್ಪ ಇವನಿಗೊಂದು ಬಾವುಟ ಕೊಡ್ರಿ’ ಎಂದು ಯಾರಿಗೋ ಹೇಳಿ ‘ಹೋಗು ಸಾಲಲ್ಲಿ ಸೇರ್ಕೋ. ಮೆರವಣಿಗೆ ಮುಗಿದ ಮೇಲೆ ಅಲ್ಲೊಂದು ಸಭೆ ಇದೆ. ಅದು ಮುಗಿಯೋವರ್ಗೂ ಇರ್ಬೇಕು. ಅದಾದ ಮೇಲೆ ಒಟ್ಟಿಗೆ ಊಟ ಮಾಡೋಣ’ ಅಂತ ಹೇಳಿ ಹೋದ್ರು.
ಅದು ನೆನಪಾದರೆ ಇವತ್ತಿಗೂ ರೋಮಾಂಚನದಿಂದ ನನ್ನ ಮೈ ಜುಮ್ಮಂತದೆ. ನನ್ನ ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟ ಬಾವುಟಾನ ಅವತ್ತು ನಾನು ಹಿಡಿದಿದ್ದೆ. ಅದು ನೆನಪಾದರೆ ಇನ್ನೊಂದು ಕಾರಣಕ್ಕೆ ಸಂಕಟ ಕೂಡ ಆಗ್ತದೆ. ಯಾಕೇಂದ್ರೆ ರಾಮಮೂರ್ತಿ ಅದರ ಹಿಂದಿನ ದಿನ ತೀರಿಕೊಂಡಿದ್ರು. ರಾಮಮೂರ್ತಿ ನಾಡಿನ ಪರವಾದ ಹೋರಾಟ ಕಟ್ಟಿದೋರು. ಮುಖ್ಯವಾಗಿ ನಾಡಿಗೆ ಬಾವುಟಾನ ರೂಪಿಸಿಕೊಟ್ಟೋರು ಎಂದೆಲ್ಲ ಒಳ್ಳೊಳ್ಳೆ ಮಾತನ್ನು ಭಾಷಣದಲ್ಲಿ ಕೃಷ್ಣರಾಯರು ಹೇಳಿದ್ದರು. ಆದರೆ ರಾಮಮೂರ್ತಿ ತಮ್ಮ ತೋಟದಲ್ಲಿ ಬಾವಿ ತೋಡಿಸುವಾಗ ಅದರ ದಡ ಕುಸಿದು ಮಣ್ಣಿನಡಿಯಲ್ಲಿ ಸಿಲುಕಿ ತಮ್ಮಿಬ್ಬರು ಮಕ್ಕಳ ಸಮೇತ ಸತ್ತುಹೋದ್ರಂತೆ. ಅದನ್ನೆಲ್ಲ ಹೇಳ್ತಿದ್ದಾಗ ದುಃಖ ತಡೀಲಾಗದೆ ಕೃಷ್ಣರಾಯರು ಬಿಕ್ಕಿ ಬಿಕ್ಕಿ ಅಳ್ತಿದ್ರು. ಅವರು ಚಿಕ್ಕ ಮಕ್ಕಳಂಗೆ ಅಳ್ತಿದ್ರೆ ಸಭೇಲಿದ್ದೋರೆಲ್ಲ ಸ್ಥಬ್ಧವಾಗಿ ಬಿಟ್ಟಿದ್ರು.
ನಮ್ಮದು ಸಣ್ಣ ಹಳ್ಳಿ. ಕಾಡೇನಳ್ಳಿ ಅಂತ. ನಾವು ಬೆಂಗಳೂರಿಗೆ ಬಂದು ಅದಾಗಲೇ ಹತ್ತು ವರ್ಷ ಆಗಿತ್ತು. ಈ ಮೆರವಣಿಗೆ ಗಲಾಟೆ ಇವೆಲ್ಲ ನಮಗಿಲ್ಲಿ ಹೊಸದೇನಲ್ಲ. ಬೇಕಾದಷ್ಟು ನೋಡ್ತಿದ್ದಿವಿ. ಆದರೆ ಇವೆಲ್ಲ ಯಾಕಾಗ್ತವೆ, ಯಾರು ಮಾಡ್ತಾರೆ ಅನ್ನೋದು ಮಾತ್ರ ಅರ್ಥ ಆಗ್ತಿರಲಿಲ್ಲ ಅಷ್ಟೆ. ಅವತ್ತು ಕೂಡ ಹಾಗೇನೆ. ರಾಮಮೂರ್ತಿ ಸಾವಿನ ವಿಚಾರ ಬಿಟ್ಟರೆ ಉಳಿದ ದೊಡ್ಡ ದೊಡ್ಡ ವಿಚಾರಗಳೆಲ್ಲ ನನಗೆ ಅರ್ಥ ಆಗ್ಲಿಲ್ಲ. ಆದರೆ ಒಂದು ನಾಡಿನ ಚರಿತ್ರೇಲಿ ಇಂತಹ ಸಾವು ನೋವಿನ ಮಹತ್ವ ಏನೂಂತ ಅರ್ಥ ಆಗಿದ್ದು ನಾನೇ ಅಂತಹ ಹೋರಾಟಕ್ಕಿಳಿದ ಮೇಲೆ.
ಆದರೆ ಅವತ್ತಿನಿಂದ ನಾಲ್ಕು ವಿಷ್ಯ ನನ್ನ ಮನಸ್ಸಿಗಿಳಿದು ಗಟ್ಟಿಯಾಗಿ ಕೂತುಬಿಟ್ಟಿದೆ.
ಅದರಲ್ಲಿ ಒಂದನೇದು, ಆ ಕೃಷ್ಣರಾಯರು ಅವತ್ತಷ್ಟೇ ತೀರ್ಕೊಂಡಿದ್ದ ರಾಮಮೂರ್ತಿ ಕತೆಯನ್ನ ಹೇಳಿದ್ದು. ಏನು ಆ ರಾಮಮೂರ್ತಿ ಬದುಕಿನ ಕೆಚ್ಚು. ಅಬ್ಬಬ್ಬಾ ನಮ್ಮಂತೋರಿಂದ ನಮ್ಮಪ್ಪರಾಣೆ ಆಗಲ್ಲ. ಇವತ್ತಂದ್ರೆ ಇವತ್ತಿನ ತನಕ ಆ ರಾಮಮೂರ್ತಿ ನೆನಪಾದ್ರೆ ಸಾಕು ನನ್ನ ಮೈ ತಂತಾನೆ ಬಾಗಿಬಿಡ್ತದೆ.
ಎರಡನೇದು, ಮೆರವಣಿಗೆ ಪಕ್ಕದಲ್ಲಿ ಗಾರೆ ಮೇಸ್ತ್ರಿಯಂಗೆ ಕಾಣ್ತಿದ್ದ ಕೃಷ್ಣರಾಯರು ತಾವೇನು ಅನ್ನೋದನ್ನ ಆಮೇಲೆ ತೋರಿಸಿದ್ರು. ಎಂಥಾ ಅಲಸಿಯಾಗಿದ್ರೂ ಸ್ವಾರ್ಥಿ ಆಗಿದ್ರೂ ಅವೆಲ್ಲವನ್ನೂ ಕಿತ್ತು ಮೂಲೆಗೆಸೆದು ಅವರ ಬೆನ್ಹತ್ತಬೇಕು. ಅಂತಾ ಶಕ್ತಿ ಇತ್ತು ಆ ಮನುಷ್ಯನ ಮಾತಿಗೆ.
ಮೂರನೇದು, ನಾನು ಬಾವುಟ ಹಿಡ್ಕೊಂಡು ಕಿರುಚಾಡ್ಕೊಂಡು ಮೆರವಣಿಗೇಲಿ ಹೋಗ್ತಾ ಇದ್ದಿದ್ದನ್ನ ಅದ್ಯಾರು ನನ್ನಪ್ಪನಿಗೆ ಹೇಳಿದ್ರೋ ಗೊತ್ತಿಲ್ಲ. ಸ್ಕೂಲಿಗೆ ಹೋಗಿ ಭಾರೀ ಸುಸ್ತಾದವನಂಗೆ ಮುಖ ಮಾಡ್ಕೊಂಡು ಮನೇಗ್ಬಂದೆ. ನನ್ನ ಸಾಚಾತನಾನ ಸಾಬೀತು ಮಾಡೋಕೆ ನಾನು ಮಾಡಿದ ಅವತಾರ ನೋಡಿಯೇ ನಾನು ಸ್ಕೂಲಿಗೆ ಹೋಗಿಲ್ಲ ಅನ್ನೋದು ನನ್ನಪ್ಪಂಗೆ ಗ್ಯಾರಂಟಿ ಆಗಿತ್ತು. ಅವತ್ತು ನನಗೆ ಎಂಥಾ ಒದೆ ಬಿತ್ತೂಂದ್ರೆ ಸುತ್ತಲ ನಾಲ್ಕು ಮನೆಗಳೋರು ಈ ಅಂದಾನಪ್ಪ ಮಗನ್ನ ಕೊಂದೇ ಹಾಕಿಬಿಟ್ಟ ಅನ್ನೋತರಹ ಗಾಬರಿ ಮಾಡ್ಕೊಂಡು ನನ್ನನ್ನ ನನ್ನಪ್ಪನಿಂದ ಬಿಡಿಸ್ಕೊಳ್ಳೋಕೆ ಮುಗಿಬಿದ್ದು ಬಂದ್ರು. ಅವರ ಮುಂದೆ ನನ್ನಪ್ಪ ನನಗೊಬ್ಬನಿಗೇ ಅಲ್ಲ ಮಂಗಳಾರತಿ ಮಾಡಿದ್ದು.
ಅದು ಯಾರ್ಯಾರಿಗೋ ಬಯಸದೇ ಬಂದ ಭಾಗ್ಯ. ನಾನು ಯಾರ ಜೊತೆ ಹೋಗಿದ್ದೆ, ಯಾಕೆ ಹೋಗಿದ್ದೆ, ಕರ್ಕೊಂಡು ಹೋದೋರು ಯಾರು ಎಂತದ್ದೂ ಗೊತ್ತಿಲ್ಲ ನನ್ನಪ್ಪಂಗೆ. ಯಾರ್ಯಾರನ್ನೋ ಯಾವ್ಯಾವುದನ್ನೋ ಕಲ್ಪಿಸಿಕೊಂಡು ನನ್ನಪ್ಪ ಬೈದಿದ್ದು ಇದೆಯಲ್ಲ. ಆಹಾ ಎಂಥ ಕನ್ನಡ ಸ್ವಾಮಿ ಅದು. ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್’ ಅಂತಾನಲ್ಲ ಶ್ರೀವಿಜಯ. ಹಾಗಿತ್ತು ನೋಡಿ ಅದರ ಸೊಗಸು. ನನ್ನಪ್ಪನ ಭಾಷಾ ಪ್ರಯೋಗಾನ ಅವತ್ತೇನಾದ್ರೂ ಕೇಳಿಬಿಟ್ಟಿದ್ರೆ ಪಂಪನೂ ಇಲ್ಲ ರನ್ನನೂ ಇಲ್ಲ. ನನ್ನಪ್ಪನ ಬೈಗುಳ ಕಾವ್ಯದ ಮಣ್ಣಿನ ವಾಸನೆ ಮೂಸಿ ನಮ್ಮ ಕವಿಗಳೆಲ್ಲ ಅಡ್ಡಡ್ಡ ಬಿದ್ದುಬಿಡ್ಬೇಕು. ಹಂಗಿತ್ತು ಅದರ ಗಮಲು.
ನಾಲ್ಕನೇದು, ಈ ಅಪ್ಪ ಮಕ್ಕಳ ರಗಳೇಲಿ ವಿಶೇಷವೇನೂ ಇಲ್ಲಾಂತ ಜನರೆಲ್ಲ ಬೇಜಾರು ಮಾಡ್ಕೊಂಡು ಹೋದ್ರು. ನಾನು ಹೆದರ್ಕೊಂಡು ಮೂಲೇಲಿ ಮುದುಡ್ಕೊಂಡಿದ್ದೆ. ನನ್ನ ಹತ್ರಕ್ಕೆ ಬಂದ ಅಪ್ಪನನ್ನು ನೋಡಿ ಮತ್ತೆ ಹೊಡೀತಾನೆ ಅಂದ್ಕೊಂಡೆ. ಅಪ್ಪ ಹಾಗೇನೂ ಮಾಡ್ಲಿಲ್ಲ. ನನ್ನನ್ನ ಎದೆಗೆ ಅವಚಿಕೊಂಡು ಗೊಳೋಂತ ಅತ್ತ. ಏನೂ ಅರೀದ ನನ್ನ ಮುಂದೆ ತನ್ನ ಕಷ್ಟ ಹೇಳ್ಕೊಂಡ. ತಬ್ಬಿಕೊಂಡಿದ್ದ ಅಪ್ಪನ ಕಣ್ಣೀರು ನನ್ನ ಕಿವಿ ಮೇಲೆ ಬಿತ್ತು. ಆಗ ನನಗೆ ಸತ್ತುಹೋದ ರಾಮಮೂರ್ತಿ ನೆನಪಾದ್ರು. ‘ಅಪ್ಪಾನೂ ಸತ್ತುಹೋಗ್ತಾನ?’ ಎಂದು ಹೆದರಿದೆ. ಅಪ್ಪನ ಸಾವಿನ ಭಯ ಎದೆಗೆ ಆಳವಾಗಿ ಹೊಕ್ಕಿಬಿಟ್ಟಿತು. ಅದಾದ ಮೇಲೆ ನಾನು ಮನಸಿಟ್ಟು ಓದಿದೆ. ಆದರೆ ನಾನು ಕಾಲೇಜಿನಲ್ಲಿ ಓದ್ತಿರುವಾಗ ಕಾಲರಾ ಬಂದು ಅಮ್ಮ ಸತ್ತು ಹೋದಳು. ಅವಳ ಸಾವಿನಿಂದ ಅಪ್ಪ ತತ್ತರಿಸಿಬಿಟ್ಟ. ಆದರೆ ಅಪ್ಪ ದುಃಖ ತೋರಿಸ್ಕೊಂಡಿದ್ದು ಸ್ವಲ್ಪ ದಿನ ಅಷ್ಟೆ. ನನಗಾಗಿ ತನ್ನೆಲ್ಲ ದುಃಖಾನ ನುಂಗಿ ಅಪ್ಪ ಮೇಲೆದ್ದುಬಿಟ್ಟ. ಯಾಕೇಂದ್ರೆ ನಾನು ಅಪ್ಪನ ಬದುಕಾಗಿದ್ದೆ. ಅವನ ಕನಸು ಕೂಡ ನಾನೇ ಆಗಿದ್ದೆ.
ನಾಯಕರು ಹೇಳಿದ್ದು – 2
ನಾನು ಕೆಲಸಕ್ಕೆ ಸೇರಿದಾಗ ಅಪ್ಪ ಅದೆಷ್ಟು ಖುಷಿ ಪಟ್ಟಿದ್ದ ಅಂದ್ರೆ ನನ್ನ ಒಂದು ತಿಂಗಳ ಸಂಬಳದಷ್ಟು ಹಣಕ್ಕೆ ಮುಂಚಿತವಾಗೀನೇ ಸಾಲ ಮಾಡಿ ನೆಂಟರಿಗೆ, ಮನೆ ಅಕ್ಕಪಕ್ಕದೋರಿಗೆ ಸಾಕು ಸಾಕೆನ್ನುವಷ್ಟು ಬಾಡಿನೂಟ ಹಾಕಿದ್ದ. ಅವತ್ತು ಅಪ್ಪನ ಸಂತೋಷ ಮುಖ್ಯ ಅನಿಸಿತ್ತು ನನಗೆ. ಎದುರು ಮಾತಾಡದೆ ಅಪ್ಪ ಹೇಳಿದ್ದೆಲ್ಲ ಮಾಡಿದ್ದೆ. ಅದಾದ ಎರಡು ವರ್ಷಕ್ಕೆಲ್ಲ ಅಪ್ಪ ನನಗೆ ತನ್ನ ತಂಗಿ ಮಗಳು ಸುಮಿತ್ರಳನ್ನು ತಂದು ಮದುವೆ ಮಾಡಿದ್ದ. ಆ ದಿನಗಳಲ್ಲಿ ಅಪ್ಪನ ಕಣ್ಣಲ್ಲಿ ನೆಮ್ಮದಿ ಇತ್ತು. ಅದೆಲ್ಲ ಸಂತೋಷ ಕೆಲವು ವರ್ಷ ಮಾತ್ರ ಇತ್ತು ಅಷ್ಟೆ.
ಅದೇಕೋ ಚಿಕ್ಕಂದಿನಲ್ಲಿ ನಾನು ಹಿಡಿದ ಬಾವುಟ ನನ್ನ ಕನಸಿನಲ್ಲಿ ದಿನಾಲೂ ಸುಳೀತಿತ್ತು. ಆಗಾಗ ರ್ಯಾಲಿ ನೋಡೋದಕ್ಕೆ, ಜಾಥಾ ನೋಡೋದಕ್ಕೆ ಹೋಗ್ತಿದ್ದೆ. ಆಗ ಚಳವಳಿಗಳಲ್ಲಿ ಇದ್ದವರು ಮೈಯಲ್ಲಿ ಆವೇಶ ಹೊಕ್ಕವರಂಗೆ ಬುಸುಗುಟ್ಟೋದನ್ನು ನೋಡ್ತಿದ್ದೆ. ಹಾಗೆಯೇ ಹೋರಾಟದಲ್ಲಿ ಎಲ್ಲವನ್ನೂ ಕಳ್ಕೊಂಡು ಬೀದಿಗೆ ಬೀಳ್ತಿದ್ದವರನ್ನೂ ನೋಡ್ತಿದ್ದೆ. ಕ್ರಮೇಣ ನನ್ನ ಬದುಕಿಗೆ ಯಾರ್ಯಾರೋ ಪ್ರವೇಶ ಮಾಡಿದ್ರು. ಕೃಷ್ಣರಾಯರಂತೂ ಎದೆ ಒಳಗಿನ ಚಿತ್ರವಾಗಿ ಕೂತುಬಿಟ್ಟಿದ್ರು. ಶ್ರೀರಾಂಪುರದ ಬ್ರಿಡ್ಜಿನ ಮೇಲೆ ರೈಲು ತಡೆ ಸತ್ಯಾಗ್ರಹ ಮಾಡೋವಾಗ ಗೋವಿಂದರಾಜು ರೈಲಿಗೆ ಸಿಕ್ಕಿ ಸತ್ತು ಹೋದ. ಅವನ ಸಾವಿನಿಂದ ಅವನ ಕುಟುಂಬ ತಲ್ಲಣಿಸಿದ್ದನ್ನು ನೋಡಿದ ಮೇಲಂತೂ ನನ್ನಿಂದ ಸುಮ್ಮನಿರಲಾಗಲಿಲ್ಲ. ಆದರೆ ಸರ್ಕಾರಿ ಉದ್ಯೋಗ ನನ್ನ ಕೈಯನ್ನು ಕಟ್ಟಿ ಹಾಕ್ತಿತ್ತು. ಹೋರಾಟದ ಹಂಬಲ ತಡೀಲಾಗದೆ ಕೆಲಸಕ್ಕೆ ರಾಜೀನಾಮೆ ಕೊಟ್ಟೆ.
ನಾನು ಕೆಲಸ ಬಿಟ್ಟಿದ್ದಕ್ಕೆ ಅಪ್ಪ ನಮ್ಮಿಬ್ಬರ ವಯಸ್ಸನ್ನೆ ಮರೆತವನಂಗೆ ಕೂಗಾಡಿದ್ದ. ಚಿಕ್ಕಂದಿನಲ್ಲಿ ನಾನು ಶಾಲೆ ತಪ್ಪಿಸಿಕೊಂಡಿದ್ದಕ್ಕೆ ಎಂತಾ ಹುಯಿಲೆಬ್ಬಿಸಿದ್ದನಲ್ಲ. ಅದೇ ಈಗಲೂ ಆಯ್ತು. ಸುತ್ತಲ ನಾಲ್ಕಾರು ಮನೆಯವರು ಜಮಾಯಿಸಿದ್ರು. ಚಿಕ್ಕೋನಿದ್ದಾಗ ಶಾಲೆ ತಪ್ಪಿಸಿದ್ದಕ್ಕೆ ನನ್ನನ್ನು ಎದೆಗಪ್ಪಿಕೊಂಡು ಅತ್ತು ದಾರಿಗೆ ತಂದಿದ್ದ ಅಪ್ಪ. ಈಗ ಹಾಗೇನೂ ಮಾಡಲಿಲ್ಲ. ಗಂಟಲ ತನಕ ಕುಡಿದು ಬಂದು ನಡು ರಾತ್ರಿಯವರೆಗೆ ರೋಧಿಸಿದ್ದ. ಆಮೇಲೆ ದಿನಾ ಮೈಮೇಲೆ ಜ್ಞಾನ ಉಳಿಯದಷ್ಟು ಕುಡೀತಿದ್ದ. ಮನೆ ಜಗುಲಿಯ ಮೇಲೆ ಅಸ್ತವ್ಯಸ್ತವಾಗಿ ಮಲಗಿ ತನ್ನ ಗೋಳನ್ನು ಹತ್ತು ವರ್ಷಗಳ ಹಿಂದೇನೆ ಸತ್ತುಹೋಯ್ತಲ್ಲ ನನ್ನಮ್ಮ, ಆ ನನ್ನಮ್ಮನಿಗೆ ಹೇಳಿಕೊಳ್ತಿದ್ದ. ನನಗೇಂತ ಎಲ್ಲ ಸಂಕಟಾನೂ ನುಂಗಿಕೊಂಡಿದ್ದ ಅಪ್ಪ ಈಗ ಎಲ್ಲವನ್ನೂ ಕಾರಿಕೊಳ್ತಿದ್ದ. ಎರಡು ಮಕ್ಕಳ ತಂದೆ ನಾನು. ಆದ್ರೂ ನನ್ನ ಬಗ್ಗೆ ಅಪ್ಪನಿಗಿದ್ದ ಪ್ರೀತಿ ನನ್ನನ್ನ ಬೆಚ್ಚಿ ಬೀಳಿಸಿತ್ತು.
ಅದಾದ ಆರು ತಿಂಗಳಿಗೆ ನನ್ನಪ್ಪ ಮಲಗಿದ್ದಲ್ಲೇ ಜೀವ ಬಿಟ್ಟಿದ್ದ. ಸರ್ಕಾರಿ ಕೆಲಸ ಬಿಟ್ಟು ಮಗ ತನಗೆ ನಿರಾಸೆ ಮಾಡಿದಾಂತ ಕೊರಗಿ ನನ್ನಪ್ಪ ಸತ್ತನೋ ಅಥವಾ ಎಂದೋ ತೀರಿಕೊಂಡ ಹೆಂಡತಿಯ ನೆನಪು ಕಾಡಿದ್ದು ಹೆಚ್ಚಾಗಿ ಸತ್ತನೋ ಅಥವಾ ಕುಡಿತದ ದಾಸನಾಗಿ ಸತ್ತನೋ ನನಗರ್ಥ ಆಗಲಿಲ್ಲ. ಆದರೂ ಲೋಕಜ್ಞಾನ ಇರೋ ಮಗನ ನಿರ್ಧಾರ ಇಳಿವಯಸ್ಸಿನ ತಂದೇನ ಇಷ್ಟೆಲ್ಲ ಕಂಗೆಡಿಸಲಿಕ್ಕೆ ಸಾಧ್ಯಾನಾ? ಇದಂತೂ ನನಗೆ ಬಗೆಹರೀಲೇ ಇಲ್ಲ. ಅಜ್ಜನ ಸಾವಿನಿಂದ ನನ್ನ ಮಕ್ಕಳು ಕಂಗಾಲಾಗಿಬಿಟ್ರು. ಅವರ ಕಣ್ಣಲ್ಲಿ ಉಕ್ಕುತಾ ಇದ್ದ ಪ್ರಶ್ನೆಗೆ ನನ್ನಲ್ಲಿ ಯಾವ ಉತ್ತರಾನೂ ಇರ್ಲಿಲ್ಲ. ಅದಕ್ಕೆ ಆ ಮಕ್ಕಳ ಕಣ್ತಪ್ಪಿಸಿ ಓಡಾಡ್ತಿದ್ದೆ. ಇವೆಲ್ಲಕ್ಕಿಂತ ಮುಖ್ಯವಾದದ್ದು ಅಂದರೆ, ನನ್ನ ಹದಿನಾಲ್ಕನೇ ವಯಸ್ಸಲ್ಲಿ ನಾನು ಹಿಡಿದ ಬಾವುಟ ನನ್ನಿಡೀ ಬದುಕಿನ ವ್ಯಸನವಾಗಿ ಮಾರ್ಪಟ್ಟಿದ್ದನ್ನು ಅನಕ್ಷರಸ್ಥನಾದ ನನ್ನಪ್ಪನಿಗೆ ಅರ್ಥ ಮಾಡಿಸೋದಕ್ಕೆ ನನ್ನಿಂದ ಆಗಲೇ ಇಲ್ಲವಲ್ಲ ಅನ್ನೋ ವೇದನೆ ಇವತ್ತಿಗೂ ನನ್ನನ್ನ ಬೆನ್ಹತ್ತಿ ಕಾಡ್ತಿದೆ. ಅದರಿಂದ ನಾನು ಹೇಗೆ ಪಾರಾಗ್ಲಿ?’
ನಾಯಕರು ಹೇಳಿದ್ದು – 3
ಇವತ್ತಿನ ಮೆರವಣಿಗೆ, ಆ ಗಲಾಟೆ ಇದೆಲ್ಲದರಿಂದ ಮನಸ್ಸು ತುಂಬ ಕದಡಿತ್ತು. ನೆನ್ನೆ ಅರ್ಧಕ್ಕೆ ಓದಿ ನಿಲ್ಲಿಸಿದ್ದ ಸುಬ್ಬರಾಯರ
‘ದುರ್ಗಾಸ್ತಮಾನ’ ಕಾದಂಬರೀನ ಕೈಗೆತ್ತಿಕೊಂಡೆ. ಆಗ ಯಾರೋ ಮನೆಗೆ ಬಂದಂಗಾಯ್ತು.
‘ಯಾರು?’ ಅಂದೆ.
‘ನಾಯಕರ ಮನೇ ಇದೇನಾ?’ ಅನ್ನೋ ಪ್ರಶ್ನೆ ಅತ್ತಲಿಂದ ಬಂತು.
‘ಹೌದು. ಯಾಕೆ? ನಿಮಗ್ಯಾರು ಬೇಕು?’ ಅನ್ನುತ್ತ ಎದ್ದು ಬಂದೆ.
ಮುಖ್ಯಮಂತ್ರಿಯ ಮನೆಗೆ ನೇರ ಪ್ರವೇಶ ಪಡೆಯುತ್ತಿದ್ದವನು ಎಷ್ಟು ಬೇಗ ಅಪ್ರಸ್ತುತವಾಗಿಬಿಟ್ಟೆ, ಅದೆಷ್ಟು ಬೇಗ ಅಜ್ಞಾತವಾಸಕ್ಕೆ ಸರಿದುಬಿಟ್ಟೆ ಎನ್ನುವ ಯೋಚನೆಯಿಂದ ನಾಯಕರಿಗೆ ದಿಗ್ಭ್ರಮೆಯಾಗುತ್ತದೆ.
ಆತ ನನ್ನನ್ನ ನೋಡಿದ ಕೂಡಲೇ ‘ಅರೆ ಅಣ್ಣ ಹೇಗಿದ್ದೀರಿ?’ ಎನ್ನುತ್ತ ಒಳಗೆ ಬಂದೇ ಬಿಟ್ಟ.
ಯಾರೋ ನನಗೆ ಬೇಕಾದವರೇ ಇರ್ಬೇಕು ಅಂತನ್ನಿಸ್ತು. ಬಿಸಿಲಿನ ಹೊತ್ತು ಸುಸ್ತಾಗಿರ್ತದೆ ಅನ್ನಿಸಿ ‘ನೀರು ಬೇಕಾ?’ ಅಂತ ಕೇಳಿದೆ.
‘ಊನಣ್ಣ ಕೊಡಿ. ತುಂಬ ದಾಹ ಆಗ್ತಿದೆ’ ಅಂದ. ನೀರು ತಂದು ಕೊಟ್ಟೆ.
‘ಬೆಂಗಳೂರು ಏನಣ್ಣ ಸೈತಾನ್ ತರ ಬೆಳೆದ್ಬಿಟ್ಟಿದೆ. ಆ ಮೆರವಣಿಗೇದು ಬೇರೆ ಗಲಾಟೆ ಆಯ್ತಲ್ಲ. ನನಗೆ ಇನ್ನಷ್ಟು ಕಷ್ಟ ಆಗಿಬಿಡ್ತು ನೋಡಿ.’ ಎಂದು ಹೇಳುತ್ತ ಅಲ್ಲಿದ್ದ ಪೇಪರ್ ತಗೊಂಡು ಗಾಳಿ ಬೀಸಿಕೊಂಡ. ಮಾತಾಡಿದ ರೀತಿ ನೋಡಿ ಬಂದಿದ್ದು ಯಾರೆಂದು ಗೊತ್ತಾಯ್ತು ನನಗೆ.
‘ನೀನು ಅಫ್ಜಲ್ ಅಲ್ವೇನಯ್ಯಾ?’ ಅಂದೆ.
‘ಹೌದಣ್ಣ ಅಫ್ಜಲ್ಲಾನೇ. ಅಂತೂ ನನ್ನ ನೆನಪಾಯ್ತಲ್ಲ’ ಅವನ ಮಾತಲ್ಲಿ ಖುಷಿ ಕಾಣಿಸ್ತು.
‘ಇಲ್ಲಪ್ಪ ನಂಗೆ ನೆನಪಿದೆ. ನಿನಗೇ ನನ್ನ ನೆನಪಿಲ್ಲ ಅಷ್ಟೆ. ಎಷ್ಟು ವರ್ಷ ಆಯ್ತು ನಿನ್ನ ನೋಡಿ’ ನಯವಾಗಿ ಆಕ್ಷೇಪಿಸಿದೆ.
‘ಏನಣ್ಣ ನಿಮ್ಮನ್ನ ಮರಿಯೋದಾ? ಹೀಗೇ ಇರ್ತದಲ್ಲ ಬದುಕಿನ ಜಂಜಾಟ. ಅಣ್ಣ ಈ ಫೋಟೋ ನೋಡಿ. ಇವನ್ನೆಲ್ಲ ನಿಮಗೇಂತ ತಂದಿದ್ದೀನಿ’ ಎನ್ನುತ್ತ ತನ್ನ ಚೀಲದಿಂದ ಒಂದಷ್ಟು ಫೋಟೋ ತೆಗೆದ.
ನಾನು ಹೋರಾಟಗಳಲ್ಲಿ ಭಾಗಿಯಾಗಿದ್ದಾಗಿನ ಪೋಟೋಗಳವು. ನನ್ನ ಮನಸ್ಸನ್ನು ಆದ್ರವಾಗಿಸಿದ ಅವುಗಳನ್ನು ಮೃದುವಾಗಿ ನೇವರಿಸ್ತ ‘ನಿನಗೆಲ್ಲಿ ಸಿಕ್ತಪ್ಪ ಅಫ್ಜಲ್ ಈ ಫೋಟೋ?’ ಎಂದೆ.
‘ನನ್ನ ಚಿತ್ರದುರ್ಗದ ಸ್ನೇಹಿತನ ಮನೇಲಿತ್ತಣ್ಣ. ನಿಮ್ಮ ಜೊತೇಲಿದ್ದರಲ್ಲ ಶಾಂತವೀರಯ್ಯ. ಅವರ ಮಗಾನೆ ಇವನು. ಶಾಂತವೀರಯ್ಯನೋರು ತೀರ್ಕೊಂಡು ನಾಲ್ಕು ವರ್ಷ ಆಯ್ತಂತೆ. ಅವರ ಮನೇಲಿದ್ದ ಈ ಫೋಟೋನೆಲ್ಲ ನಿಮಗೆ ಕೊಡೂಂತ ಕೊಟ್ಟ. ನಾನೂ ನಿಮ್ಮನ್ನ ನೋಡ್ಬೇಕೂಂತ ತುಂಬಾ ದಿನಗಳಿಂದ ತವಕಿಸ್ತಾ ಇದ್ದೆ. ಈ ನೆಪದಲ್ಲಾದ್ರೂ ಬರುವಂಗಾಯ್ತು ನೋಡಣ್ಣ.’ ಎಂದ ಅಫ್ಜಲ್.
ಶಾಂತವೀರ ತೀರಿಕೊಂಡಿದ್ದನ್ನು ಕೇಳಿ ತುಂಬಾ ಸಂಕಟ ಆಯ್ತು. ಇತ್ತೀಚೆಗೆ ನನಗೆ ಅವನ ಸಂಪರ್ಕಾನೇ ಇರಲಿಲ್ಲ.
‘ಭಾರೀ ದೊಡ್ಡ ಮನುಷ್ಯ ಕಣಯ್ಯ ಶಾಂತವೀರ. ಅದೆಷ್ಟು ರಕ್ತ ಬಸಿದಿದ್ದಾನೋ ಈ ಹೋರಾಟಗಳಿಗೆ. ಯಾವುದಾದರೂ ಮೆರವಣಿಗೆಗೋ ರ್ಯಾಲಿಗೋ ನಾನು ಹಣ ಹೊಂದಿಸೋಕಾಗದೆ ಪೇಚಾಡ್ತಿದ್ದರೆ ಅವನು ಸದ್ದಿಲ್ಲದೆ ಎಲ್ಲ ವ್ಯವಸ್ಥೆಯನ್ನೂ ಮಾಡಿ ‘ಏ ನಾಯಕ. ನೀನು ನಾಯಕನಂಗೇ ಇರ್ಬೇಕು ಕಣಲೇ’ ಅಂತಿದ್ದ. ಅವತ್ತು ಮೈಸೂರು ರಸ್ತೇಲಿ ಜಾಥಾ ಮಾಡಿದೆವಲ್ಲ. ಅದೆಲ್ಲ ಅವನದೇ ಶ್ರಮ. ಅವಾಗ ನೀವೆಲ್ಲ ಬಿಸಿರಕ್ತದ ಹುಡುಗರು. ಆ ಮೈಸೂರು ರಸ್ತೆ ಜಾಥಾಕ್ಕೆ ನಿಮ್ಮನ್ನೆಲ್ಲ ಯಾಕೆ ಕರ್ಕೊಂಡು ಹೋಗಿದ್ದೆ ಅನ್ನೋದು ನಿಮಗ್ಯಾರಿಗೂ ಗೊತ್ತಿರ್ಲಿಲ್ಲ ಅಲ್ವಾ? ಪಾಪ, ನಿಮ್ಮನ್ನು ಕೂಡ ಪೋಲೀಸರು ಹೊಡೆದರೂಂತ ಕಾಣ್ತದೆ. ನಿನಗೂ ಅವೊತ್ತು ಪೆಟ್ಟಾಯ್ತೇನಯ್ಯಾ?’ ಎಂದು ಕಕ್ಕುಲಾತಿಯಿಂದ ಕೇಳಿದೆ.
‘ಹೋಗ್ಲಿ ಬಿಡು. ಅವತ್ತು ನಿಮಗೆಲ್ಲ ಏನು ತೊಂದರೆ ಆಯ್ತೋ ಅಂತ ಆತಂಕ ಪಟ್ಟಿದ್ದೆ’ ಅಂದೆ.
‘ಆದರೆ ಅವತ್ತು ನಿಮಗೇನಾಯ್ತು ಅನ್ನೋದನ್ನೂ ನೋಡದೇನೆ ನಾವು ಬಂದು ಬಿಟ್ಟೆವಲ್ಲ. ಅದು ನೆನಪಾದ್ರೆ ಈಗಲೂ ನಾಚ್ಕೆ ಆಗ್ತದಣ್ಣ’ ಅಫ್ಜಲ್ ಪಶ್ಚಾತ್ತಾಪ ಪಟ್ಟ.
‘ಆಯ್ತು ಬಿಡಯ್ಯಾ ಅಫ್ಜಲ್. ಅದ್ರಲ್ಲಿ ನಿಮ್ಮದೇನೂ ತಪ್ಪಿಲ್ಲ. ಯಾಕೇಂದ್ರೆ ನಿಮ್ಮನ್ನ ಜೊತೇಲಿ ಕರ್ಕೊಂಡು ಹೋಗೋವಾಗ ಯಾಕೆ ಹೋಗ್ತಿದ್ದೀವಿ. ಅದರಿಂದೇನಾಗುತ್ತೆ ಅನ್ನೋದನ್ನ ನಾನು ನಿಮಗೆ ಹೇಳ್ಬೇಕಾಗಿತ್ತು. ಹೋರಾಟದ ಉದ್ದೇಶ ಏನು, ಅದರ ಪರಿಣಾಮ ಏನು ಅನ್ನೋದು ದಂಡನಾಯಕನಿಗೆ ಮಾತ್ರ ಗೊತ್ತಿದ್ರೆ ಸಾಲದಲ್ವಾ? ಅವನಿಗಷ್ಟೇ ಗೊತ್ತಿದ್ರೆ ಏನಾಗ್ತದೆ ಹೇಳು? ಮುಂದಿರೋ ಅವನು ಕೆಳಗೆ ಬಿದ್ದಾಂದ್ರೆ ಹಿಂದಿರೋ ಸೈನಿಕರೆಲ್ಲ ದಿಕ್ಕಾಪಾಲಾಗ್ತಾರೆ. ಹೋರಾಟದ ಉದ್ದೇಶಾನ ಅವನು ಎಲ್ಲರಿಗೂ ಅರ್ಥ ಮಾಡಿಸಿರ್ಬೇಕು. ಹಾಗೇನೆ ಹಠಾತ್ತಾಗಿ ಬರೋ ಹಿನ್ನಡೇನ ಎದುರಿಸೋದು ಹ್ಯಾಗೆ ಅಂತಾನೂ ಅವರಿಗೆ ಕಲಿಸಿರ್ಬೇಕು. ನಾನು ನಿಮಗೆ ಯಾವುದನ್ನೂ ಸರಿಯಾಗಿ ಹೇಳಿರ್ಲಿಲ್ಲ. ಸರಿಯಾಗಿ ಕಲಿಸಿರ್ಲಿಲ್ಲ. ನನ್ನ ಹಿಂದೆ ಹುಂಬ ಧೈರ್ಯದ ಹುಡುಗರಿದ್ರೆ ಅಷ್ಟೇ ಸಾಕೂಂತ ಯೋಚಿಸ್ದೆ. ಆದ್ರೂ ಆ ಪೋಲೀಸ್ರು ಅವತ್ತು ಅದ್ಯಾಕಷ್ಟು ಕ್ರೂರವಾಗಿ ಆಡಿದ್ರೋ ಗೊತ್ತಿಲ್ಲ. ಯಾವುದೋ ಜನ್ಮದ ಸೇಡು ತೀರಿಸ್ಕೊಳ್ಳೋರ ಥರಾ ಹೊಡುದ್ರು ಕಣಪ್ಪ. ಇರ್ಲಿ ಬಿಡು, ಪಾಪ ಅವರ ಅನಿವಾರ್ಯತೆ ಏನಿರ್ತದೋ ಏನೋ. ಅವರ ಕರ್ತವ್ಯ ಅವರು ಮಾಡಿರ್ತಾರೆ. ಆದರೆ ನಾನು ಆಸ್ಪತ್ರೇಲಿ ಎರಡು ತಿಂಗಳಿರಬೇಕಾಯ್ತು ಕಣಯ್ಯಾ’. ಎನ್ನುವಾಗ ಆ ನೆನಪಿನಿಂದಲೇ ನನ್ನ ಬೆನ್ನಹುರಿಯಲ್ಲಿ ನೋವು ಹರಿದಿತ್ತು.
‘ಅಣ್ಣ ನಿಮ್ಮ ಕಾಲಿಗೇನಾಯ್ತು?’ ಅಂದ ಅಫ್ಜಲ್. ನಾನೇನೂ ಉತ್ತರಿಸಲಿಲ್ಲ.
‘ಯಾಕಣ್ಣ? ಹೇಳಲಿಕ್ಕೆ ಇಷ್ಟ ಇಲ್ವಾ?’ ಅಂದ ಅಫ್ಜಲ್.
‘ಹಾಗೇನಿಲ್ಲ ಕಣಯ್ಯ ಅಫ್ಜಲ್. ಅಪ್ಪ ತೀರಿಕೊಂಡನಲ್ಲ. ಆಗ ನನ್ನ ಆತ್ಮವಿಶ್ವಾಸಾನೇ ಉಡುಗೋಯ್ತು. ಅದಾದ ಐದು ವರ್ಷಕ್ಕೆ ಸುಮಿತ್ರಾನೂ ಹೋಗಿಬಿಟ್ಳು. ನಾನು ಇನ್ನಷ್ಟು ಕಂಗೆಟ್ಟುಬಿಟ್ಟೆ. ನನ್ನಿಬ್ಬರು ಮಕ್ಕಳು ತಬ್ಬಲಿಗಳಾಗಿಬಿಟ್ರು ಅಂದ್ಕೊಂಡೆ. ಆಗ ನನ್ನ ಮಗಳು ಚೆನ್ನಮ್ಮನಿಗೆ ಬರೀ ಒಂಬತ್ತು ವರ್ಷ. ಆ ಹೆಸರೇ ಅವಳಿಗೆ ಆ ಶಕ್ತಿ ಕೊಟ್ಟಿತ್ತೇನೊ ಗೊತ್ತಿಲ್ಲ. ಎಳೆಯ ತಮ್ಮನನ್ನ ಬೆನ್ನಿಗೆ ಹಾಕ್ಕೊಂಡು ಸಾಕೋದಕ್ಕೆ ಶುರು ಮಾಡಿದ್ಲು. ಆ ಪುಟ್ಟ ಜೀವಕ್ಕೇ ಅಂಥ ಚೈತನ್ಯ ಇದೆ ಅಂದ್ಮೇಲೆ ನಾನ್ಯಾಕೆ ಸೋತು ಮೂಲೇಗೆ ಕೂರ್ಬೇಕು ಅನ್ನಿಸ್ತು. ಅದೇ ದಿನಗಳಲ್ಲಿ ದೊಡ್ಡದೊಂದು ಹೋರಾಟಾನ ನಾನು ಸಂಘಟಿಸಿಬೇಕಾಯ್ತು. ನಿನಗೂ ಅದು ಗೊತ್ತಿರ್ಬೇಕು. ತೊಂಬತ್ತರ ದಶಕದ ಆಸುಪಾಸಿನಲ್ಲಾಯ್ತು ಅದು. ಆಗ ಬಿದ್ದ ಹೊಡೆತ ಇದೆಯಲ್ಲ. ಅದು ನನ್ನನ್ನ ಮಕಾಡೆ ಮಲಗಿಸಿ ಬಿಡ್ತು ನೋಡು’ ಅಂದೆ.
‘ಪೇಪರಿನಲ್ಲಿ ಬಂದಿತ್ತಣ್ಣ. ನಿಮ್ಮ ಬಗ್ಗೆ ಏನೇನೋ ಬರೆದಿದ್ರು. ಆದರೂ ಈ ಪೇಪರಿನವರು ಯಾವತ್ತು ತಾನೇ ನಮ್ಮಂತೋರ ಬಗ್ಗೆ ಒಳ್ಳೆ ಮಾತಾಡಿದ್ದಾರೆ ಹೇಳಣ್ಣ?’ ಅಂದ ಅಫ್ಜಲ್.
‘ಅವರ ಮೇಲೆ ಕೋಪ ಮಾಡ್ಕೊಂಡ್ರೆ ಏನು ಪ್ರಯೋಜನ ಅಫ್ಜಲ್? ನನಗೇ ಸ್ವಲ್ಪ ಮುಂದಾಲೋಚನೆ ಇರ್ಬೇಕಾಗಿತ್ತು ಅಷ್ಟೆ. ಅವತ್ತು ನಮ್ಮ ಮೆರವಣಿಗೇನ ಹಾಳು ಮಾಡ್ಬೇಕೂಂತ ಏನೋ ಸಂಚು ನಡೀತಂತೆ. ಅಂತಾದ್ದನ್ನೆಲ್ಲ ನಾವು ಗಮನಿಸ್ಬೇಕು ಅಲ್ವಾ? ನಾಯಕನಾದೋನಿಗೆ ಮೈಯೆಲ್ಲ ಕಣ್ಣಿರಬೇಕೂಂತ ಅದಕ್ಕೆ ನಾನು ಹೇಳಿದ್ದು. ಅವತ್ತಿನ ಮೆರವಣಿಗೇಲಿ ಕಾಲೇಜು ವಿದ್ಯಾರ್ಥಿಗಳೇ ಜಾಸ್ತಿ ಇದ್ರು. ನಮ್ಮ ಮೆರವಣಿಗೆ ಮಾರ್ಕೆಟ್ಟಿನ ಹತ್ತಿರಕ್ಕೆ ಬಂತು. ಅದ್ಯಾರು ಅದೆಲ್ಲಿಂದ ನಮ್ಮ ಮೆರವಣಿಗೆ ಮೇಲೆ ಕಲ್ಲೆಸೆದ್ರೋ ಗೊತ್ತಿಲ್ಲ. ಆಮೇಲೆ ಅದರ ಹಿಂದೇನೆ ಬಾಟ್ಲಿಗಳೂ ತೂರಿ ಬರೋದಕ್ಕೆ ಶುರುವಾಯ್ತು. ನೋಡ್ತಾ ಇದ್ದ ಹಾಗೇನೆ ಅಲ್ಲಿ ರಣರಂಗ ಸೃಷ್ಟಿ ಆಗೋಯ್ತು. ನಮ್ಮ ಮೆರವಣಿಗೇಲಿ ಇದ್ದೋರೆಲ್ಲ ಹಳ್ಳಿಗಳಿಂದ ಕಾಲೇಜು ಓದಿಗೇಂತ ಬಂದಿದ್ದ ಹುಡುಗರು ಪಾಪ. ನನಗೆ ಅವರ ಬಗ್ಗೆ ಆತಂಕ ಆಯ್ತು. ಆ ಕೂಗಾಟ ಚೀರಾಟಗಳ ಮಧ್ಯೆ ಆ ಹುಡುಗರನ್ನ ಕಾಪಾಡಿಕೊಳ್ಳೋಕೆ ಏನ್ಮಾಡೋದು ಅಂತಾನೇ ನನಗೆ ತೋಚಲಿಲ್ಲ. ನಾನು ಹಾಗೆ ಚಡಪಡಿಸ್ತಾ ಇದ್ದಾಗಲೇ ನನ್ನ ಕಾಲಿಗೆ ಬಲವಾದ ಏಟು ಬಿತ್ತು. ಜೀವ ತತ್ತರಿಸಿ ಹೋಯ್ತು. ಅಯ್ಯಪ್ಪಾ ಅಂತ ಅಲ್ಲೇ ಕೂತುಬಿಟ್ಟೆ. ಆಮೇಲೆ ನನ್ನ ತಲೇಗೂ ಎರಡೇಟು ಬಿತ್ತು.
‘ಅಣ್ಣಾ ಬಿದ್ರು ಕಣಲೇ’ ಅಂತ ಯಾರೋ ಕಿರಿಚಿದ್ದು ಮಾತ್ರ ಕೇಳಿಸಿತು ಅಷ್ಟೆ. ಆಮೇಲೆ ಏನಾಯ್ತೂಂತ ನನಗೆ ಗೊತ್ತಾಗ್ಲಿಲ್ಲ. ಎಚ್ಚರ ಆದಾಗ ನೋಡಿದ್ರೆ ಆಸ್ಪತ್ರೇಲಿದ್ದೆ. ವಾರ್ಡಿನ ಹತ್ತಿರ ಪೋಲೀಸರ ಕಾವಲಿತ್ತು. ಏನಾಯ್ತೂಂತ ಅವರನ್ನೇ ಕೇಳಿದೆ.
‘ಗೋಲೀಬಾರ್ ಆಯ್ತು. ಗೋಲಿಬಾರ್ ನಲ್ಲಿ ಮೂವರು ಕಾಲೇಜು ಹುಡುಗರು ಸತ್ತು ಹೋದ್ರು. ನೂರಾರು ಜನ ಆಸ್ಪತ್ರೇಲಿದ್ದಾರೆ’ ಅಂದ್ರು.
ಅವತ್ತೆಲ್ಲ ಬೆಂಗಳೂರು ಹತ್ತಿ ಉರೀತಂತೆ. ಆ ಗಲಾಟೇಲಿ ನನ್ನ ಕಾಲು ಶಾಶ್ವತವಾಗಿ ಕುಂಟಾಯ್ತು. ಅದನ್ನು ಹೇಗೋ ಸಹಿಸಿಕೊಂಡಿದ್ದೀನಿ. ಅವತ್ತಿನ ನಮ್ಮ ಹೋರಾಟಕ್ಕೆ ಗೆಲುವು ಕೂಡ ಸಿಕ್ತು. ಆದರೆ ಅಮಾಯಕರು ಜೀವ ಕಳ್ಕೋಬೇಕಾಯ್ತು. ಅವತ್ತವತ್ತಿಗೆ ದುಡಿದು ತಿನ್ನೋ ಜನ ನರಳಬೇಕಾಯ್ತು. ಅದನ್ನ ತಿಳ್ಕೊಂಡ್ರೆ ಇವತ್ತಿಗೂ ಸಂಕಟ ಆಗ್ತದೆ ಕಣಯ್ಯಾ. ನೀನು ನಂಗೆ ತಮ್ಮ ಇದ್ದಂಗೆ ಕಣಯ್ಯ ಅಫ್ಜಲ್. ನಿನ್ನ ಮುಂದೆ ಇವೆಲ್ಲ ಹೇಳಿದ್ರೆ ಮನಸ್ಸು ನಿರಾಳ ಆಗ್ತದೇಂತ ಹೇಳ್ತಿದ್ದೀನಿ. ಬೇಸರ ಮಾಡ್ಕೋಬೇಡಪ್ಪ’ ಅಂದೆ. ‘ಅಯ್ಯೋ ನೀವ್ಯಾಕಣ್ಣ ಹಂಗೆಲ್ಲ ಮಾತಾಡ್ತೀರಿ. ನಾಡೂಂತ ಭಾಷೇಂತ ಹೋರಾಡೋ ನಮ್ಮಂತೋರನ್ನ ತುಚ್ಚವಾಗಿ ನೋಡೋ ಜನಾನೇ ಜಾಸ್ತಿ. ದುಃಖಾನ ನಾವೇ ಒಬ್ಬರಿಗೊಬ್ಬರು ಹೇಳ್ಕೊಂಡಿಲ್ಲಾಂದ್ರೆ ಹೇಗಣ್ಣ’ ಅಂದ.
‘ಸಂಘಟನೆ ಬೆಳೆಸಲಿಕ್ಕೆ ಆಮೇಲೆ ನನ್ನಿಂದಾಗಲಿಲ್ಲ. ಹದಿನೈದು ವರ್ಷ ಆಯ್ತು ಅನ್ಸುತ್ತೆ ನಾನು ಸಂಘಟನೆ ಬಿಟ್ಟು. ಅಷ್ಟರಲ್ಲಿ ಮೈ ತುಂಬ ಸಾಲ ಮಾಡ್ಕೊಂಡಿದ್ದೆ. ಈಗಲೂ ಮನೆ ಹತ್ರ ಹಳೇ ಸಾಲಗಾರರು ಬಂದು ರಂಪ ಮಾಡ್ತಾರೆ. ಆಮೇಲೆ ನನ್ನ ಸ್ಥಿತಿ ನೋಡಿ ಮರುಗಿ ಅವರೇ ಏನಾದ್ರೂ ಹಣ್ಣು ಮತ್ತೊಂದು ಕೊಟ್ಟು ಹೋಗ್ತಾರೆ. ನಾನು ಬೇಕಾದಷ್ಟು ದುಡ್ಡು ಮಾಡಿದ್ದೀನೀಂತ ಯಾವುದೋ ಪತ್ರಿಕೇಲಿ ಬರೆದಿದ್ದನ್ನ ಮಗಳು ಚೆನ್ನಮ್ಮಾನೂ ಓದಿದ್ದಳೂಂತ ಕಾಣ್ತದೆ. ಸಂಕಟ ತಡೀಲಿಕ್ಕಾಗದೆ ಒಂದು ದಿನ ‘ಇದೆಲ್ಲ ನಿಜಾನೇನಪ್ಪ’ ಅಂತ ಕೇಳಿದ್ಲು. ಅವಳ ಅಮಾಯಕತನ ನೋಡಿ ನಾನು ಸುಮ್ಮನೆ ನಕ್ಕುಬಿಟ್ಟೆ.
‘ಅಲ್ಲಾಪ್ಪ ನೀನು ನಾಡನ್ನ ಉಳಿಸ್ತೀನಿ ಹೋರಾಟ ಮಾಡ್ತೀನೀಂತ ಹೋಗಿ ಸರ್ಕಾರಿ ಕೆಲಸ ಬಿಟ್ಟೆ. ನಿನ್ನ ಕೊರಗಲ್ಲೇ ಅಜ್ಜಾನೂ ಸತ್ತುಹೋದ್ರು. ಸಂಘಟನೇಗೇಂತ ಮಾಡಿದ ಸಾಲ ತೀರಿಸೋದಕ್ಕೆ ಅಜ್ಜನ ಮನೇನ ಮಾರಿಬಿಟ್ಟೆ. ಸಾಲದೂಂತ ಕಾಲು ಬೇರೆ ಮುರ್ಕೊಂಡೆ. ಅಮ್ಮ ಆಸ್ಪತ್ರೇಲಿದ್ದಾಗ ಕೈಯಲ್ಲಿ ಬಿಡಿಗಾಸೂ ಇಲ್ಲದೆ ಅಮ್ಮನ್ನ ಶಾಶ್ವತವಾಗಿ ಕಳ್ಕೋಬೇಕಾಯ್ತು. ನೀನು ಹೀಗೆ ಕುಂಟ್ಕೊಂಡು ಕೋರ್ಟಿಗೆ ಅಲೀತಿರ್ತೀಯ. ನಿನ್ನ ಮಕ್ಕಳು ಮೊಮ್ಮಕ್ಕಳು ಗತಿಗೆಟ್ಟವರಂಗೆ ಬದುಕ್ತಿದ್ದೀವಿ. ಒಂದು ಕಾಲದಲ್ಲಿ ಎಷ್ಟೆಲ್ಲ ಖ್ಯಾತಿಯಿತ್ತು ನಿಂಗೆ. ಇವತ್ತು ನಿನ್ನನ್ನ ಯಾವೂರು ದಾಸ ಅಂತ ಕೇಳೋರಿಲ್ಲ. ಇವರಿಗೆ ಹೇಗಪ್ಪಾ ಮನಸಾಗುತ್ತೆ ಹೀಗೆಲ್ಲ ಬರಿಯೋದಿಕ್ಕೆ’ ಎಂದಿದ್ದಳು.
‘ಆಯ್ತು ಬರೀಲಿ ಬಿಡು ಮಗಳೆ. ಅವರ ಸಂತೋಷಕ್ಕೆ ನಾವ್ಯಾಕೆ ಅಡ್ಡಿ ಪಡಿಸ್ಬೇಕು’ ಎಂದು ಸಂತೈಸಿದ್ದೆ.
‘ಯಾರ್ಯಾರಿಗೋ ಏನೇನೋ ಅವಾರ್ಡ್ ಕೊಡ್ತಾರಂತೆ. ಎಷ್ಟು ತ್ಯಾಗ ಮಾಡಿದ್ದೀಯ ನೀನು. ನಿನಗ್ಯಾಕಪ್ಪ ಇಲ್ಲ’ ಮತ್ತೆ ಕೇಳಿದ್ದಳು. ನಾನು ಉತ್ತರಿಸದೆ ಸುಮ್ಮನಾಗಿದ್ದೆ.
‘ಕುವೆಂಪು ಹೇಳಿದಂಗೆ ನಾವೆಲ್ಲ ಕಲ್ಪವೃಕ್ಷಕ್ಕೆ ಕೈ ಚಾಚಿದ್ವಿ. ಆದ್ರೆ ಅದು ಇವತ್ತಿಗೂ ಮರೀಚಿಕೆಯಾಗೀನೆ ಉಳಿದುಬಿಟ್ಟಿದೆ. ನಾವೇನು ಮಾಡೋಕಾಗುತ್ತೆ ಹೇಳು? ಆದ್ರೂ ಸಮುದಾಯದ ಒಳಿತಿಗೇಂತ ಸೆಣಸೋವಾಗ ವೈಯಕ್ತಿಕ ಪ್ರತಿಫಲಕ್ಕೆ ಆಸೆ ಪಟ್ಟರೆ ಹೋರಾಟಕ್ಕೆ ಘನತೆ ಇರುತ್ತೇನಯ್ಯ ಅಫ್ಜಲ್?’ ಎಂದೆ.
‘ಖಂಡಿತಾ ಇರೋದಿಲ್ಲಣ್ಣ. ನೀವು ಹೇಳಿದ್ದು ಸರಿ’ ಎಂದ ಅಫ್ಜಲ್. ಆಮೇಲೆ ಮತ್ತೇನೋ ನೆನಪಾದಂತೆ ‘ಅಣ್ಣ ಒಂದೆರಡು ತಿಂಗಳ ಹಿಂದೆ ನೀವು ಟೀವೀಲಿ ಬಂದಿದ್ರಿ ಅಲ್ವೇನಣ್ಣ?’ ಎಂದ.
‘ಬಂದಿದ್ದೆ ಕಣಪ್ಪ. ಅದ್ಯಾವುದೋ ಚಾನೆಲ್ಲಿನೋರು ರಾಜ್ಯೋತ್ಸವದ ದಿನ ಕರೆಸ್ಕೊಂಡಿದ್ರು. ಹಳೆಯ ಬಟ್ಟೆ ಹಾಕ್ಕೊಂಡಿದ್ದೆನಲ್ಲ. ನನ್ನನ್ನು ಚಾನೆಲ್ಲಿನ ವಾಚ್‍ಮನ್ ಏನಂದುಕೊಂಡನೋ ಒಳಕ್ಕೇ ಬಿಡಲಿಲ್ಲ. ವಾಪಸ್ಸು ಹೊರಟಿದ್ದೆ. ಚಿದಾನಂದಮೂರ್ತಿ ನನ್ನನ್ನು ನೋಡಿ ಒಳಕ್ಕೆ ಕರ್ಕೊಂಡೋದ್ರು. ಹೇಗಿದ್ದೋರು ನೀವು ಹೀಗಾಗಿಬಿಟ್ಟಿದ್ದೀರಲ್ಲ ಅಂತ ನನ್ನ ಕುಂಟು ಕಾಲು ನೋಡ್ತಾ ತುಂಬ ನೊಂದುಕೊಂಡ್ರು. ಅವರದೂ ಒಂದು ಸಂಘಟನೆ ಇತ್ತಲ್ಲ. ಈಗ ಎಲ್ಲ ಸಂಘಟನೆಗಳೂ ತಣ್ಣಗಾಗ್ಬಿಟ್ಟಿವೆ ಅನ್ಸುತ್ತೆ. ಅಲ್ಲಯ್ಯ ಅಫ್ಜಲ್ ಇವಕ್ಕೆಲ್ಲ ಏನಾಗಿದೆ ಇವತ್ತು? ಆ ಕೃಷ್ಣಪ್ಪನೋರು, ನಂಜುಂಡಸ್ವಾಮಿ ಇವ್ರೆಲ್ಲ ಸಿದ್ಧಾಂತಾನ ಜನ ಹಿತದ ಜೊತೆಗೆ ಎಷ್ಟೊಂದು ಅದ್ಭುತವಾಗಿ ಬೆಸೀತಿದ್ರು ಅಂತೀಯ? ನಾವೆಲ್ಲ ಬೇರೆ ಬೇರೆ ಚಳವಳೀಲಿ ಇದ್ರೂ ಒಬ್ಬರಿಗೊಬ್ಬರು ಹೆಗಲು ಕೊಡ್ತಿದ್ವಿ. ಒಟ್ಟಿಗೇ ಗೆಲ್ಲತಾ ಇದ್ದಿವಿ. ನಿನಗೆ ನೆನಪಿದೆಯಲ್ಲ? ಬೂಸಾ ಚಳವಳಿ ತುಂಬಾ ಬಿಸಿಯೇರಿದ್ದಾಗ ನಾನು ಬಸವಲಿಂಗಪ್ಪನ ಪರ ದೃಢವಾಗಿ ನಿಂತಿದ್ದೆ. ಯಾರೂ ನನ್ನನ್ನ ಅದರ ಬಗ್ಗೆ ಆಕ್ಷೇಪಿಸಲಿಲ್ಲ. ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಬೆಲೆ ಇತ್ತು ನೋಡು ಆ ಕಾಲದಲ್ಲಿ. ಅವ್ರೆಲ್ಲ ಇವತ್ತು ಇರ್ಬೇಕಾಗಿತ್ತು ಅಫ್ಜಲ್’ ಎನ್ನುತ್ತ ನಾಯಕರು ನಿಟ್ಟುಸಿರುಬಿಟ್ಟರು.
‘ಅಣ್ಣ ಅದ್ಯಾವುದೋ ಟೀವಿ ಕಾರ್ಯಕ್ರಮದ ಬಗ್ಗೆ ಹೇಳ್ತಿದ್ರಿ’ ಎಂದು ನೆನಪಿಸಿದ ಅಫ್ಜಲ್.
‘ಅದರ ಬಗ್ಗೆ ಹೇಳದೇ ಇರೋದೇ ವಾಸಿ ಸುಮ್ನಿರು. ತಿಳ್ಕೊಂಡ್ರೆ ಬೇಸರ ಆಗ್ತದೆ. ಅದರಲ್ಲೊಬ್ಬ ನಿರೂಪಕ ‘ಪಾಪ ನೀವಿಷ್ಟು ಬಡವರ ತರಾ ಕಾಣ್ತಿದ್ದೀರಿ. ನಿಮ್ಮ ಕಾಲದಲ್ಲಿ ನಿಮಗೆ ಒಳ್ಳೇ ಹೆಸರಿತ್ತಂತಲ್ಲ. ಒಂದಷ್ಟು ದುಡ್ಡು ಕಾಸು ಮಾಡ್ಕೋಬಾರದಾಗಿತ್ತ ಯಜಮಾನ್ರೆ? ಅಥ್ವಾ ಚೆನ್ನಾಗಿ ಆಸ್ತಿ ಮಾಡ್ಕೊಂಡು ಏನೂ ಇಲ್ಲಾಂತ ನಾಟಕ ಆಡ್ತಿದ್ದೀರಾ ಹೇಗೆ?’ ಅಂತಾನೆ ಕಣಯ್ಯ ಅಫ್ಜಲ್.
‘ಲಂಕೇಶರಂಥಾ ಲಂಕೇಶರೇ ನಮ್ಮ ಬಗ್ಗೆ ಹೀಗೆಲ್ಲ ಮಾತಾಡ್ತಿರಲಿಲ್ಲ. ಅವ್ರು ನಮ್ಮನ್ನ ಏನೆಲ್ಲ ಖಂಡಿಸಲಿ. ನಮ್ಮ ಬದ್ಧತೇನ ಯಾವತ್ತೂ ಅನುಮಾನಿಸಲಿಲ್ಲ. ಅವರ ಆಫೀಸಿಗೇನಾದ್ರೂ ಹೋದ್ರೆ ಎಷ್ಟು ಪ್ರೀತಿಯಿಂದ ನಡೆಸಿಕೊಳ್ಳೋರು ಗೊತ್ತೇನಯ್ಯ ಅಫ್ಜಲ್? ಅಂಥಾ ಧೀಮಂತರನ್ನೆಲ್ಲ ಇವತ್ತು ನೋಡಲಾದರೂ ಆಗುತ್ತ?’ ಎಂದೆ.
‘ಹೌದು ಕಣಣ್ಣ ನೀವು ಹೇಳಿದ್ದು ನಿಜ’ ಎಂದ ಅಫ್ಜಲ್.
ಅಫ್ಜಲ್ ಊರಿಗೆ ಹೋಗುತ್ತೇನೆಂದು ಹೇಳಿ ಹೋದ ಮೇಲೆ ಹಾಗೇ ಕಾಲು ಚಾಚಿ ಮಲಗಿದೆ. ಏನೇನೋ ನೆನಪು ದಾಳಿಯಿಟ್ಟು ಮನಸ್ಸು ಭಾರವಾಯ್ತು. ಅವಕ್ಕೆಲ್ಲ ಒಂದು ಹೊರ ದಾರಿ ತೋರಿಸಬೇಕಾಗಿತ್ತು. ದೇವರ ಪಟಗಳ ಹಿಂದೆ ಇಟ್ಟಿದ್ದ ಮಾಸಲು ಬಾವುಟಾನ ಎದೆಯ ಮೇಲೆ ಹರವಿಕೊಂಡೆ. ಗುಂಡಿಗೆಯ ಒಳಗೆಲ್ಲ ಬೆಚ್ಚಗಾಯಿತು.
ಕಥೆಯ ಹಿಂಭಾಗ
ನಾಯಕರು ಅವತ್ತು ರಾತ್ರಿಯೇ ತೀರಿಕೊಂಡಿದ್ದರು. ಅವರ ಶವದ ಬಳಿ ಅವರ ಮಕ್ಕಳು ಮೊಮ್ಮಕ್ಕಳನ್ನು ಬಿಟ್ಟರೆ ಬೇರ್ಯಾರೂ ಇರಲಿಲ್ಲ. ಮನೆಯಲ್ಲಿನ ಸೂತಕದ ಮೌನಕ್ಕೆ ಹೆದರಿ ನಾಯಕರ ಅಳಿಯ ಸೂರಿಬಾಬು ಟಿ.ವಿ. ಆನ್ ಮಾಡಿದ್ದ. ಒಂದು ಸುದ್ದಿ ಚಾನೆಲ್ಲಿನಲ್ಲಿ ಸರ್ಕಾರಿ ಕಛೇರಿಗೆ ಕಾಗೆ ಹೊಕ್ಕಿದ್ದರ ಬಗ್ಗೆ ವಿಚಾರವಂತರು, ಜ್ಯೋತಿಷಿಗಳ ಮಧ್ಯೆ ಬಿರುಸಿನ ವಾಗ್ವಾದ ನಡೆಯುತ್ತಿತ್ತು. ಸಿನಿಮಾ ನಟಿಯೊಬ್ಬಳ ಮುರಿದು ಬಿದ್ದ ಮದುವೆಯ ಕುರಿತ ಚರ್ಚೆ ಇನ್ನೊಂದು ಚಾನೆಲ್ಲಿನಲ್ಲಿ ಕಾವೇರಿತ್ತು. ಆದರೂ ಅದರ ನಡುವೆ ಟಿ.ವಿ.ಯವರಿಗೆ ನಾಯಕರ ಸಾವಿನ ವಿಚಾರ ಗೊತ್ತಾಗಿತ್ತು. ಟೀವಿ ಚಾನೆಲ್ಲುಗಳ ದೊಡ್ಡ ಬ್ರೇಕಿಂಗ್ ನ್ಯೂಸ್ ಗಳ ಅಡಿಯಲ್ಲಿ ನಾಯಕರ ಸಾವಿನ ಸುದ್ದಿ ಸಣ್ಣಗಿನ ಸಾಲಾಗಿ ಒಂದೆರಡು ನಿಮಿಷ ಹರಿದಾಡಿ ಸದ್ದಿಲ್ಲದೆ ಮಾಯವಾಯ್ತು.
ನಾಯಕರ ತಲೆ ದಿಂಬಿನ ಅಡಿಯಲ್ಲಿ ಒಂದು ದಿನಚರಿ ಪುಸ್ತಕ, ಒಂದು ಪತ್ರ, ಒಂದು ಬಟ್ಟೆಯ ಚೀಲ ಇದ್ದವು. ಚೀಲದಲ್ಲಿ ನಾಯಕರು ನಾಜೂಕಾಗಿ ಮಡಚಿಟ್ಟ ಕೆಂಪು ಹಳದಿ ಬಣ್ಣದ ಬಾವುಟವಿತ್ತು. ಪತ್ರದಲ್ಲಿ ಪುಡಿ ಸಾಲಗಳ ಉದ್ದನೆಯ ಲೆಕ್ಕವಿತ್ತು. ದಿನಚರಿಯಲ್ಲಿ ಯಾವ ಕೇಸಿಗೆ ಯಾವ ದಿನ ಕೋರ್ಟಿಗೆ ಹೋಗಬೇಕೆನ್ನುವ ವಿವರಗಳಿದ್ದವು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಇದೊಂದು ಉತ್ತಮ ಕಥೆ..
ಲೇಖಕರಿಗೆ ಅಭಿನಂದನೆಗಳು…