ಈಗಲೂ ರಾತ್ರಿ ಎರಡೂವರೆ, ನಾಲ್ಕುಗಂಟೆಗೆಲ್ಲ ಒಮ್ಮೊಮ್ಮೆ ಎಚ್ಚರವಾದಾಗ ನಾನು ಆವತ್ತು ಎದೆ ಕಲ್ಲು ಮಾಡಿಕೊಂಡು ನಡೆದು ಬಂದುಬಿಟ್ಟ ಕ್ಷಣ ನೆನಪಾಗಿ ಇನ್ನು ಮಲಗುವುದು ಸಾಧ್ಯವೇ ಇಲ್ಲ ಎಂದು ಎದ್ದು ಕೂರುತ್ತೇನೆ. ಆವತ್ತು ನಾನು ಆ ಭಟ್ಟನ ಮಾತು ಕೇಳಿ ತಿರುಗಿ ನೋಡದೇ ಬಂದು ಬಿಡಬಾರದಾಗಿತ್ತು. ಅಷ್ಟು ಹತ್ತಿರದಿಂದ ಅಮ್ಮ, ಸುಚೀ, ಅಮ್ಮಿ ಮೂವರೂ ಸ್ಪಷ್ಟವಾಗಿ ನನ್ನನ್ನು ಕರೆದಿದ್ದು ಖಂಡಿತಾ ಸುಳ್ಳಲ್ಲ, ಭ್ರಮೆಯಲ್ಲ. ಅವರು ನನಗೆ ಮರಳಿ ಸಿಗುತ್ತಿದ್ದರೋ ಇಲ್ಲವೋ ಆ ಪ್ರಶ್ನೆ ಬೇರೆ. ಆದರೆ ಒಮ್ಮೆ ಹೊರಳಿ ನೋಡಿದ್ದರೆ ನನ್ನ ಗಂಟೇನು ಹೋಗುತ್ತಿತ್ತು?
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ನರೇಂದ್ರ ಪೈ ಕತೆ “ಭೇಟಿ” ನಿಮ್ಮ ಓದಿಗೆ

“ಹೇಗೆ ಹೊರಡಬಹುದೋ ಅಂವ?” ದೊಡ್ಡಪ್ಪ ತನ್ನ ಕೃಶವಾದ ಶರೀರವನ್ನು ಬಗ್ಗಿಸಿ ಹೊರಗಿಣುಕಿ ಕೇಳಿದ. ನಾನು ಮೊಣಕಾಲೂರಿ ಕುಳಿತೇ ಇದ್ದೆ. ಅಷ್ಟು ದೂರದಲ್ಲಿ ಹಣೆ ತುಂಬ ನೆರಿಗೆ ತುಂಬಿ ಅಕ್ಕ ಕುಳಿತಿದ್ದಳು.

ಹೊರಗಿನಿಂದ ಉತ್ತರವಿಲ್ಲ. ಬಹುಶಃ ದೊಡ್ಡಪ್ಪನಿಗೆ ಹೊರಗಿನಿಂದ ಏನೋ ಸನ್ನೆ ಮಾಡಿರಬೇಕು, ಕಣ್ಣು ಪಿಳಿಪಿಳಿ ಮಾಡುತ್ತ ನಿಂತ. ನಂತರ ನಿಧಾನವಾಗಿ ಬಾಗಿಲಿನ ದಾರಂದವನ್ನೇ ಬಿಗಿಯಾಗಿ ಹಿಡಿದು ನಡುಗುವ ಹೆಜ್ಜೆಯಿಡುತ್ತ ತಾನೇ ಹೊರಗೆ ಹೋದ. ಹೊರಗೆ ತಗ್ಗಿಸಿದ ದನಿಯಲ್ಲಿ ಅಸ್ಪಷ್ಟವಾಗಿ ಏನೋ ಮಾತನಾಡಿಕೊಂಡ ಶಬ್ದವಷ್ಟೇ ಕೇಳಿಬರುತ್ತಿತ್ತು. ಚಿಕ್ಕಪ್ಪ, ಅವನ ಮಕ್ಕಳು ಎಲ್ಲ ಇರಬೇಕು ಅಲ್ಲಿ. ತುಂಬ ಹೊತ್ತಿನ ನಂತರ ಒಳಬಂದ ದೊಡ್ಡಪ್ಪ, ತೀರಾ ಹತ್ತಿರ ಬಂದು, “ನೀನು ಹೊಟ್ಟೆಗೆ ಏನಾದರೂ ತಗೊಳ್ಳುವುದು ಒಳ್ಳೇದು, ಅಲ್ಲಿ ತುಂಬ ತಡವಾಗಬಹುದು, ದೂರವಿದೆ ಅದು” ಎಂದ. ನಾನು “ಏನೂ ಬೇಡ, ನಂಗೇನೂ ತಿನ್ನಬೇಕು ಅನಿಸ್ತಿಲ್ಲ” ಎಂದೆ. ಒಂದು ಕ್ಷಣ ಹಾಗೇ ನಿಂತ ದೊಡ್ಡಪ್ಪ ನಿಧಾನವಾಗಿ ಅಕ್ಕ ಕುಳಿತಲ್ಲಿಗೆ ಹೋದ.

*****

ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ಪೈರು ಬೆಳೆದು ನಿಂತಿತ್ತು. ದೂರದಲ್ಲಿ ಎತ್ತರದ ದಿನ್ನೆಗಳು, ಅಲ್ಲಿ ಒಂದೆರಡು ಮರ, ಮೇಯುತ್ತಿರುವ ದನಗಳು ಕಾಣಿಸುತ್ತಿದ್ದವು. ಗದ್ದೆಯ ಅಂಚುಕಟ್ಟಿನ ಉದ್ದಕ್ಕೂ ಭಟ್ಟರ ಹಿಂದೆ ಮಾತಿಲ್ಲದೆ ಸಾಗುತ್ತಿದ್ದೆ. ಮೇಲೆ ಸುಡುವ ಬಿಸಿಲು. ಇನ್ನೆಲ್ಲೊ ಮೋಡದ ನೆರಳು ಹಾಸಿದಂತಿರುವುದು ಕಂಡರೂ ಅದು ನಮಗೆ ಸಿಗಲಿಲ್ಲ. ಗದ್ದೆ ಮುಗಿದದ್ದೇ ಅಡಿಕೆ ಮರ ಹಾಸಿದ ಸಂಕವನ್ನು ಹೆದರುತ್ತಲೇ ದಾಟಿ ಆಚೆ ಸೇರಿಕೊಂಡೆ. ಅಲ್ಲಿಂದ ಏರು ಹಾದಿ. ಸಾಕಷ್ಟು ಮರಗಳು ಬೆಳೆದು ನಿಂತಿದ್ದರೂ ನಮ್ಮ ಹಾದಿಗೆ ನೆರಳು ಬೀಳುತ್ತಿರಲಿಲ್ಲ. ಎರಡು ದಿನಗಳ ಹಿಂದೆ ನಾನೂ, ಅಕ್ಕ ಇಲ್ಲಿಗೆ ಹೊರಟಾಗಿನಿಂದ ಸರಿಯಾಗಿ ನಿದ್ದೆ, ಆಹಾರವಿಲ್ಲದೆ ಬಳಲಿದ್ದೆ. ಇಲ್ಲಿಗೆ ಒಂದು ಭೇಟಿ ಸಲ್ಲಲೇಬೇಕು ಎಂದು ಯಾರೋ ಒತ್ತಾಯ ಮಾಡಿ ಹೇಳಿದ್ದನ್ನು ಅಕ್ಕ ತುಂಬ ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಬರಲೇ ಬೇಕಾಯ್ತು. ಬಸ್ಸಿಳಿದ ಮೇಲೂ ಎರಡು ಗಂಟೆಯಷ್ಟು ನಡಿಗೆ. ಹೋಗಲಿ ಎಂದರೆ ಒಂದೂ ಮರದ ನೆರಳಿಲ್ಲದ ಬೋಳು ಗುಡ್ಡೆ, ಇಲ್ಲವೇ ಗದ್ದೆಗಳ ಸಾಲು. ನಡೆದೂ ನಡೆದು ಇಲ್ಲಿಗೆ ತಲುಪಿದರೆ, “ಅಲ್ಲಿಗೆಲ್ಲ ಈಗ ಯಾರು ಕರೆದುಕೊಂಡು ಹೋಗುವವರು ಮಾರಾಯ, ಅಪ್ಪಾಭಟ್ಟರು ಸತ್ತು ಐದು ವರ್ಷವೇ ಆಯಿತು, ಅವರ ಮಕ್ಕಳೆಲ್ಲ ಈಗ ಎಲ್ಲೆಲ್ಲಿಗೋ ಹೋಗಿ ಸೆಟ್ಲ್ ಆಗಿದ್ದಾರೆ. ಒಬ್ಬ ಇದ್ದಾನೆ ಊರಲ್ಲಿ. ಅವನ್ನೇ ಕೇಳಿ ನೋಡ್ಬೇಕು. ನೀನು ಹೀಗೆ ನಿಂತಕಾಲಲ್ಲಿ ಹೋಗ್ತೇನೆಂದರೆ ಆಗ್ಲಿಕ್ಕಿಲ್ಲ ಮಾತ್ರ” ಎಂದುಬಿಟ್ಟ ದೊಡ್ಡಪ್ಪ.

“ಇನ್ನೂ ತುಂಬ ದೂರವಾ” ಎಂದೆ.

“ಇಲ್ಲೇ ಎಲ್ಲೋ ಕಾಣ್ತೆ. ನಾನೂ ಬಪ್ಪುದು ಭಾರೀ ಅಪ್ರೂಪ. ಹಾದಿ ತಪ್ಪಿತಾ ಅನ್ನಿಸ್ತು”

“ಅಯ್ಯೊ ಹೌದಾ…!”

“ಇಲ್ಲ, ಹಾಂಗೇನಿಲ್ಲ, ಇಲ್ಲೆ ಎಲ್ಲೊ ಇಪ್ಪುದದು”

ಅಂತೂ ಕೆರೆಯ ಬುಡ ತಲುಪಿದಾಗ ಸಾಕಷ್ಟು ಹೊತ್ತಾಗಿತ್ತು. ಪಾಚಿಗಟ್ಟಿದ ನೀರಿನಲ್ಲೇ ಭಟ್ಟರು ಕಾಲು ತೊಳೆದುಕೊಂಡರು. ನಾನು ಇಳಿಯಲು ಹೋದರೆ, “ಮಾರಾಯ್ರೆ, ನೀವು ಬರಬೇಡಿ, ಇದು ಎಲ್ಲಿ ಜಾರ್ತದೊ ಹೇಳಲಾಗ. ನೀವು ಅಲ್ಲೆ ನಿಲ್ಲಿ” ಎಂದರು.

ಕುರುಚಲು ಕಾಡು ಮುಗಿದು ಗದ್ದೆ ಬಯಲು ಬರತೊಡಗಿತ್ತು. ಒಂದು ಗದ್ದೆಯ ನಟ್ಟ ನಡುವೆ ಸುಮಾರು ಏಳೆಂಟು ಮೆಟ್ಟಿಲುಗಳ ಎತ್ತರದ ಪ್ರಾಂಗಣದ ಮೇಲೆ ತೀರಾ ಪುಟ್ಟ ದೇವಸ್ಥಾನ. ಭಟ್ಟರು ಮೆಟ್ಟಿಲು ಹತ್ತಿ, ಕಿಲುಬು ಹಿಡಿದ ಚಿಲಕ ಸರಿಸಿ ಕರ‍್ರೆನ್ನುವ ಬಾಗಿಲನ್ನು ಅಗಲಕ್ಕೆ ತೆರೆದು “ಬನ್ನಿ ಬನ್ನಿ” ಎಂದು ಕರೆದರು.

ಗದ್ದೆ ಮುಗಿದದ್ದೇ ಅಡಿಕೆ ಮರ ಹಾಸಿದ ಸಂಕವನ್ನು ಹೆದರುತ್ತಲೇ ದಾಟಿ ಆಚೆ ಸೇರಿಕೊಂಡೆ. ಅಲ್ಲಿಂದ ಏರು ಹಾದಿ. ಸಾಕಷ್ಟು ಮರಗಳು ಬೆಳೆದು ನಿಂತಿದ್ದರೂ ನಮ್ಮ ಹಾದಿಗೆ ನೆರಳು ಬೀಳುತ್ತಿರಲಿಲ್ಲ. ಎರಡು ದಿನಗಳ ಹಿಂದೆ ನಾನೂ, ಅಕ್ಕ ಇಲ್ಲಿಗೆ ಹೊರಟಾಗಿನಿಂದ ಸರಿಯಾಗಿ ನಿದ್ದೆ, ಆಹಾರವಿಲ್ಲದೆ ಬಳಲಿದ್ದೆ. ಇಲ್ಲಿಗೆ ಒಂದು ಭೇಟಿ ಸಲ್ಲಲೇಬೇಕು ಎಂದು ಯಾರೋ ಒತ್ತಾಯ ಮಾಡಿ ಹೇಳಿದ್ದನ್ನು ಅಕ್ಕ ತುಂಬ ಗಂಭೀರವಾಗಿ ತೆಗೆದುಕೊಂಡಿದ್ದರಿಂದ ಬರಲೇ ಬೇಕಾಯ್ತು.

ನಾನೂ ಮೆಟ್ಟಿಲು ಹತ್ತಿ ಮೇಲೆ ಹೋದೆ. ಒಳಗೆ ಕವಿದ ಕತ್ತಲಲ್ಲಿ ಪುಟ್ಟ ದೇವರ ಮಂಟಪ, ಅಲ್ಲಿ ಇಂಥದೇ ಎಂದು ವಿವರಿಸಲಾಗದ ಆಕೃತಿಯ ಶಿಲೆ. ಅದರ ಮೇಲೆ ಕುಂಕುಮ, ಅರಿಶಿನ, ಬಳೆಗಳು, ಕೆಂಪು ಬಟ್ಟೆ, ಒಣಗಿದ ಹೂವುಗಳು.

ಸ್ಥಳ ಶುದ್ಧಿ, ಒಂದು ದೀಪ. ಕ್ಷಣಕಾಲ ಪ್ರಾರ್ಥನೆ.

ಹುಬ್ಬಿನಲ್ಲೇ ಹೊರಡು ಎಂದು ಭಟ್ಟರು ಎದ್ದರು.

ಹೊಸಿಲು ದಾಟುತ್ತಲೇ ಭಯವಾಗುವಷ್ಟು ಬಲ ಹಾಕಿ ರಟ್ಟೆ ಹಿಡಿದು “ನೆನಪಿಟ್ಟುಕೊ, ಯಾರೇ ಕರೆದ ಹಾಗೆ ಅನಿಸಿದರೂ ತಪ್ಪಿ ಕೂಡ ತಿರುಗಿ ನೋಡಬಾರದು. ನಿನ್ನ ಮುಂದೆ ನಾನಿರ್ತೇನೆ. ನನ್ನ ಬೆನ್ನನ್ನೇ ನೋಡುತ್ತ ಸರಸರ ಬಂದು ಬಿಡಬೇಕು. ನಿಲ್ಲಬೇಡ. ಅಲ್ಲಿ ನಿನ್ನ ಅಕ್ಕ ಕಾಯ್ತಾ ಇದ್ದಾಳೆ ನೆನಪಿಟ್ಕೊ!” ಎಂದು ರಟ್ಟೆ ಹಿಡಿದ ಜಾಗವನ್ನೇ ಮತ್ತೊಮ್ಮೆ ಬಿಗಿಯಾಗಿ ಹಿಂಡಿ ಕೈಬಿಟ್ಟರು. ಅದೇ ಯಾರೋ ಕರೆದರೋ ಎಂಬಂತೆ ಒಮ್ಮೆಗೇ ದಾಪುಗಾಲು ಹಾಕಿ ಕೆರೆಯ ಕಡೆ ನಡೆದೇ ಬಿಟ್ಟರು. ಹಿಂದೆಯೇ ನಾನು. ಹಿಂದೆಯೂ ಕೆಲವು ಬಾರಿ ನನಗೆ ಹಿಂದಕ್ಕೆ ತಿರುಗಿ ನೋಡದೆ ನಡೆಯುವ ಆದೇಶ ಸಿಕ್ಕಿದಿದೆ. ಅದೇನೂ ಹೊಸದಲ್ಲ. ಆದರೆ ಎರಡು ಹೆಜ್ಜೆ ಇಟ್ಟಿದ್ದೇನೊ ಇಲ್ಲವೊ, ಅತ್ಯಂತ ಸನಿಹದಿಂದ ನನ್ನಮ್ಮ ಎಷ್ಟೊಂದು ಆರ್ತಳಾಗಿ ನನ್ನ ಹೆಸರು ಹಿಡಿದು ಕರೆದಳೆಂದರೆ ನಾನು ಅರೆಕ್ಷಣ ಹೆಜ್ಜೆ ತಡೆದೆ. ಭಟ್ಟರು ದೂರವಾದರು.

ಬಬಾ…

ಸಾವರಿಸಿಕೊಂಡು ಮತ್ತೆ ಹೆಜ್ಜೆ ಇಡಲಿಕ್ಕಿಲ್ಲ, ನನ್ನ ಕೊನೆಯ ಅಕ್ಕ. ಅನುಮಾನವೇ ಇಲ್ಲ, ಆ ಸ್ವರ ಅಷ್ಟೂ ಪರಿಚಿತ ನನಗೆ. ಮತ್ತೆ ಎರಡೇ ಕ್ಷಣದಲ್ಲಿ ಅಮ್ಮಿ.

ಇನ್ನು ಸಾಧ್ಯವೇ ಇಲ್ಲ ನನ್ನಿಂದ ಎಂದು ನಿಂತು ಬಿಟ್ಟೆ. ನನ್ನ ಕಣ್ಣಿಂದ ದಳದಳನೆ ಕಣ್ಣೀರು ಸುರಿಯುತ್ತಿತ್ತು. ಪುಟ್ಟ ಅಮ್ಮಿ ಕೂಡಾ ನನ್ನ ಗುರುತು ಹಿಡಿದು ಮಾಮಾ ಎಂದು ಅಷ್ಟು ಪ್ರೀತಿಯಿಂದ ಕರೆಯುತ್ತಿದ್ದಾಳೆ. ಹೇಗೆ ಹೆಜ್ಜೆ ಎತ್ತಿಡಲಿ?

*****

ಈಗಲೂ ರಾತ್ರಿ ಎರಡೂವರೆ, ನಾಲ್ಕುಗಂಟೆಗೆಲ್ಲ ಒಮ್ಮೊಮ್ಮೆ ಎಚ್ಚರವಾದಾಗ ನಾನು ಆವತ್ತು ಎದೆ ಕಲ್ಲು ಮಾಡಿಕೊಂಡು ನಡೆದು ಬಂದುಬಿಟ್ಟ ಕ್ಷಣ ನೆನಪಾಗಿ ಇನ್ನು ಮಲಗುವುದು ಸಾಧ್ಯವೇ ಇಲ್ಲ ಎಂದು ಎದ್ದು ಕೂರುತ್ತೇನೆ. ಆವತ್ತು ನಾನು ಆ ಭಟ್ಟನ ಮಾತು ಕೇಳಿ ತಿರುಗಿ ನೋಡದೇ ಬಂದು ಬಿಡಬಾರದಾಗಿತ್ತು. ಅಷ್ಟು ಹತ್ತಿರದಿಂದ ಅಮ್ಮ, ಸುಚೀ, ಅಮ್ಮಿ ಮೂವರೂ ಸ್ಪಷ್ಟವಾಗಿ ನನ್ನನ್ನು ಕರೆದಿದ್ದು ಖಂಡಿತಾ ಸುಳ್ಳಲ್ಲ, ಭ್ರಮೆಯಲ್ಲ.

ಅವರು ನನಗೆ ಮರಳಿ ಸಿಗುತ್ತಿದ್ದರೋ ಇಲ್ಲವೋ ಆ ಪ್ರಶ್ನೆ ಬೇರೆ. ಆದರೆ ಒಮ್ಮೆ ಹೊರಳಿ ನೋಡಿದ್ದರೆ ನನ್ನ ಗಂಟೇನು ಹೋಗುತ್ತಿತ್ತು? ಸಾಯುತ್ತಿದ್ದೆನೆ? ಹೋಗಲಿ ಈ ಜೀವ, ಇನ್ನು ನಾನು ತಾನೇ ಯಾರಿಗೋಸ್ಕರ ಬದುಕಬೇಕು ಎಂದು ದಿನಕ್ಕೆ ಹತ್ತು ಸಲ ಹೇಳುತ್ತ ಬಂದಿದ್ದೆನಲ್ಲ. ಆದರೆ ಆ ಕ್ಷಣ ಎಲ್ಲ ಸುಳ್ಳಾಗಿ ಹೋಯಿತಲ್ಲ.

“ಗೆದ್ದೆ ಕಣಪ್ಪಾ ನೀನು! ಮೋಹವನ್ನ ಜಯಿಸಿಬಿಟ್ಟೆ ನೀನಿವತ್ತು! ಕರೆದಿದ್ದು ಕೇಳಿಸಿತಲ್ಲ, ನಿನ್ನಮ್ಮ, ತಂಗಿ, ಮಗಳು ಕೂಡಾ ಕರೆದಳು, ಹೌದಾ ಅಲ್ಲವಾ? ಹ್ಹಹ್ಹಹ್ಹಹ್ಹಹ….”

ಆವತ್ತು ನಾನೂ ಸುಮ್ಮನಿದ್ದೆ. ಆದರೆ ಅಕ್ಕ ಮಾತ್ರ ಎಲ್ಲ ಕೇಳಿಯಾದ ಮೇಲೆ ಅವರೆಲ್ಲ ಅಷ್ಟು ಕರೆದರೂ ನೀನು ಕೇಳದವನ ಹಾಗೆ ಬಂದುಬಿಟ್ಟೆಯಾ ಮಾರಾಯ ಎಂದು ಕೇಳಿದ ರೀತಿ ಹೇಗಿತ್ತೆಂದರೆ ನನಗೆ ಹೊಟ್ಟೆಗೇ ಚೂರಿಯಿಕ್ಕಿದಂತಾಯಿತು. ಆವತ್ತಿನಿಂದಲೂ ಅಕ್ಕ ನನ್ನ ಜೊತೆ ಮೊದಲಿನಂತಿಲ್ಲ, ನನಗೆ ಗೊತ್ತು. ಇನ್ನೊಮ್ಮೆ ಹೋಗಲೆ, ಅವರು ಇನ್ನೂ ಅಲ್ಲೇ ಇದ್ದರೆ…

ಭಟ್ಟರನ್ನು ಕೇಳಲಾ…

“ಹುಚ್ಚಾ ಹುಚ್ಚಾ! ಅವರೆಲ್ಲ ಏನು ಅಲ್ಲೇ ಕೂತು ನೀನು ಎರಡನೇ ಸರ್ತಿ ಬರಾಂವ ಅಂತ ಕಾಯ್ತಾ ಇರ್ತಾರೆ ಅಂದ್ಕಂಡೇನೊ ಮರ್ಲಾ? ಆವತ್ತೇ ಅವರ ಮೋಹ ಕಳಚಿಬಿತ್ತು. ಅದು ಕಳಚ್ಲಿ ಅಂತಲ್ವೇನಾ ನಿನ್ನ ಕರಕೊಂಡು ಹೋಗಿದ್ದು. ನೀನು ನೋಡಿದ್ರೆ ಹೀಗೆ! ಅಂತರ್ ಪಿಶಾಚಿ!” ಎಂದು ಫೋನು ಕುಕ್ಕಿ ಬಿಟ್ಟರು.

*****

(ನರೇಂದ್ರ ಪೈ)

“ಈ ಕತೆ ನನಗೇಕೆ ಇಷ್ಟ ಎಂದು ಕೇಳಿದರೆ ಏನು ಹೇಳಲಿ? ಇದು ನಿಜವಾಗಿ ನಡೆದಿದ್ದರಿಂದ ಎನ್ನಲೆ? ಇದು ನನಗೆ ನನ್ನ ಬದುಕು, ಭವಿಷ್ಯವನ್ನು ತೆರೆದು ತೋರಿಸಿದ್ದರಿಂದ ಎನ್ನಲೆ? ಅಂತೂ ಇದು ಬರಿಯ ಕತೆಯಲ್ಲ ನನಗೆ. ಇದರೆದುದು ನಾನು ಸದಾ ತಲೆಬಾಗಿದ್ದೇನೆ. ಇದು ನನಗೆ ನನ್ನನ್ನು ತೋರಿಸಿದೆ. ಪ್ರತಿಬಾರಿಯೂ ಈ ಕತೆ ನನಗೆ ಮೊತ್ತ ಮೊದಲ ಬಾರಿ ಓದುತ್ತಿದ್ದೇನೆ ಎಂಬ ಭಾವದಲ್ಲೇ ತೆರೆದುಕೊಂಡಿದೆ. ಇದು ನಾನು ಬರೆದ ಕತೆಯಲ್ಲ, ಅದೇ ನನ್ನಿಂದ ಇದನ್ನು ಬರೆಯಿಸಿಕೊಂಡಿತು ಅಷ್ಟೆ. ಅದಕ್ಕಾಗಿಯೇ ಇದು ನನಗೆ ಇಷ್ಟ, ನನ್ನದಲ್ಲವೆಂದೇ…. ಹೀಗೆ ಹೇಳುತ್ತ ನಾನು ಭಾವುಕನಾಗಿಲ್ಲ, ಅತೀಂದ್ರಿಯದ ಕುರಿತು ಮಾತನಾಡುತ್ತಿಲ್ಲ. ಯಾವುದು ನನ್ನನ್ನು ನನ್ನ ಬದುಕಿನುದ್ದಕ್ಕೂ ಕಾಡುತ್ತ ಬಂತೋ ಅದು ಹೀಗೆ ಕನಸಾಗಿ, ಕತೆಯಾಗಿ, ಕಲ್ಪನೆಯಾಗಿ ಆವಿರ್ಭವಿಸಿದೆ ಅಷ್ಟೇ ಎನ್ನುವುದನ್ನು ಬಲ್ಲೆ. ಆದರೆ ಇದರೆದುದು ನಿಂತಾಗಲೇ ನನಗೆ ಕೆಲವು ಪ್ರಶ್ನೆಗಳು ಸ್ಪಷ್ಟವಾಗಬೇಕಿದೆ ಎನ್ನುವುದು ಕೂಡ ನಿಜ.”