ಹೆಜ್ಜೆಯಿಡಲೂ ಎಲ್ಲರೂ ಭಯಬೀಳುತ್ತಿದ್ದ ಕಾಡಿನ ಆ ಅಭೇಧ್ಯ ಕಣಿವೆಗೆ ಅವನು ಹೊಸದೇ ಆದ ಒಂದುದಾರಿ ಮಾಡಿಕೊಂಡು ಬಂದಾಗ, ಅಲ್ಲಿ ಕೆನೆಗಟ್ಟಿದ್ದ ಸೌಂದರ್ಯಕ್ಕೆ ಮಾರುಹೋಗಿದ್ದ. ಅಲ್ಲೇನಿದೆ ಕೇವಲ ಮರ, ಗಿಡ, ಬಳ್ಳಿ, ವಿಷಜಂತುಗಳು, ಕ್ರೂರಪ್ರಾಣಿಗಳು, ರಕ್ತ ಹೀರುವ ಜಿಗಣಿಗಳು ಎನ್ನುತ್ತಿದ್ದವರ ಮಧ್ಯದಲ್ಲಿದ್ದಾಗ ಇಂತಹಕಡೆ ಸೌಂದರ್ಯ ಕಾಣಲು ಬೇರೆಯದೇ ಆದ ಕಣ್ಣಗಳಿರಬೇಕು. ಅಂತಹ ಮನಃಸ್ಥಿತಿ ಇರಬೇಕು. ಅವು ಅವನಿಗಿದ್ದವು. ಅಲ್ಲಿ ಅವನು ಸ್ವರ್ಗವನ್ನೇ ಕಂಡಿದ್ದ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವಗೌಡ ಎಂ.ಜೆ. ಮೇಲೂರು ಕತೆ “ಸ್ವೇದಗಂಧಿ”

ಬೆಳಗಿನಿಂದಲೂ ಅವನು ಆ ಕಣಿವೆಯಲ್ಲಿ ಅಲೆಯುತ್ತಿದ್ದುದು ಅವಳಿಗಾಗಿ. ಫೆಬ್ರವರಿಯ ಚುರುಗುಟ್ಟುವ ಬಿಸಿಲಲ್ಲಿ, ಎಲೆಗಳುದುರಿ ಬೋಳಾಗಿದ್ದ ಮರಗಳ ಕಾಡಿನಲ್ಲಿ ಅವನಿಗೆ ಸುಧಾರಿಸಿಕೊಳ್ಳಲು ನೆರಳೂ ಇರಲಿಲ್ಲ. ಕಳೆದ ಮಳೆಗಾಲದಲ್ಲಿ ಅವಳು ಇದೇ ಕಾಡಿನಲ್ಲಿ ಸಿಕ್ಕ ಸ್ಥಳದ ಗುರುತೂ ಈಗ ಸರಿಯಾಗಿ ಗೊತ್ತಾಗುತ್ತಿರಲಿಲ್ಲ. ಆದರೆ ಅವಳು ನೀಡಿದ್ದ ಆಶ್ವಾಸನೆಯಂತೂ ಒಂದು ಚೂರೂ ಬಾಡದೆ ನೆನಪಿದೆ. “ನೀನು ಯಾವಾಗಲಾದರೂ ಬಾ… ಬೆಳಗಿನಿಂದ ಸಂಜೆಯವರೆಗೂ ಮಾತ್ರವಲ್ಲ ದಿನದ ಇಪ್ಪತ್ನಾಲ್ಕು ಘಂಟೆಗಳೂ ನಾನು ಇಲ್ಲಿಯೇ ಅಡ್ಡಾಡುತ್ತಿರುತ್ತೇನೆ. ಕೊನೆಯವರೆಗೂ…” ಅವನೆದೆಯ ಮೇಲೆ ಮುಖವಿಟ್ಟು ಉಸುರಿದ್ದಳು. ಹಾಗೆಂದು ಅವಳು ಹೇಳಿದ್ದರೂ, ಕಾರಣಾಂತರಗಳಿಂದ ತಕ್ಷಣ ಬರಲಾಗಿರಲಿಲ್ಲ. ಆದರೆ ಪ್ರತಿದಿನವೂ ಅವಳು ನೆನಪಾಗುತ್ತಿದ್ದಳು. ಅವಳ ದೇಹದ ಬೆವರಿನ ವಾಸನೆ ಇನ್ನೂ ಹಸಿಹಸಿಯಾಗಿ ನೆನಪಿಗೆ ಬರುತ್ತಿತ್ತು. ಬೆವರೇ ಬಾರದ ಜನಗಳ ಮಧ್ಯೆ ಇದ್ದೂ ಇದ್ದೂ ಜೀವನದಲ್ಲಿ ಒಮ್ಮೆ ಅನುಭವಿಸಿದ ಬೆವೆತ ದೇಹದ ಸ್ಪರ್ಶ ಸುಖ ಅವನನ್ನು ಪರವಶಗೊಳಿಸಿತ್ತು. ಆ ಸುವಾಸನೆ ಅವನಿಗೆ ಹೊಸತೊಂದು ಲೋಕದದರ್ಶನವನ್ನೇ ಮಾಡಿಸಿಬಿಟ್ಟಿತ್ತು.

ಅಲೆಯುತ್ತಿದ್ದವನ ಕಣ್ಣುಗಳು ಕಾಲುದಾರಿಯಗುಂಟ ಅಲ್ಲಲ್ಲಿ ಸಗಣಿ ಉಂಡೆಗಳನ್ನು ಹಿಂಗಾಲುಗಳಿಂದ ತಳ್ಳುತ್ತಾ.. ತಳ್ಳುತ್ತಾ ಸಾಗಿಸಿಕೊಂಡು ಹೋಗುತ್ತಿದ್ದ ಓಡುಹುಳುಗಳನ್ನು ಗಮನಿಸುತ್ತಲೇ, ಎಲ್ಲಾದರೂ ಹಾವುಗಳಿದ್ದಾವು ಎಂಬಂತೆ ದಾರಿ ಪಕ್ಕದ ಪೊದೆಗಳತ್ತಲೂ ಸರಿದಾಡುತ್ತಿದ್ದವು. ಉದುರಿದ್ದ ಒಣ ಎಲೆಗಳ ಮಧ್ಯೆ ಅಲ್ಲಲ್ಲಿ ಎಷ್ಟೋ ಹಾವುಗಳು ತಣ್ಣಗೆ ಮಲಗಿದ್ದರೂ, ಆಯಾಸ ನೀರಡಿಕೆಯಿಂದಾಗಿ ಸುಸ್ತಾಗಿದ್ದ ಅವನ ಕಣ್ಣುಗಳು ಅವನ್ನು ಗುರುತಿಸುವಲ್ಲಿ ಅವನಿಗೆ ಮೋಸ ಮಾಡಿದ್ದವು. ಅದೂ ಅಲ್ಲದೆ ಅವನ ಗಮನವೆಲ್ಲಾ ಇದ್ದದ್ದು ಸ್ವೇದಗಂದಿಯನ್ನು ಹುಡುಕುವ ಕಡೆಗೆ. ಅವಳಿಗಾಗಿ ಅವನು ತನ್ನ ಸರ್ವಸ್ವವನ್ನೂ ತೊರೆದು ಬಂದಿದ್ದ..!

ಹೆಜ್ಜೆಯಿಡಲೂ ಎಲ್ಲರೂ ಭಯಬೀಳುತ್ತಿದ್ದ ಕಾಡಿನ ಆ ಅಭೇಧ್ಯ ಕಣಿವೆಗೆ ಅವನು ಹೊಸದೇ ಆದ ಒಂದುದಾರಿ ಮಾಡಿಕೊಂಡು ಬಂದಾಗ, ಅಲ್ಲಿ ಕೆನೆಗಟ್ಟಿದ್ದ ಸೌಂದರ್ಯಕ್ಕೆ ಮಾರುಹೋಗಿದ್ದ. ಅಲ್ಲೇನಿದೆ ಕೇವಲ ಮರ, ಗಿಡ, ಬಳ್ಳಿ, ವಿಷಜಂತುಗಳು, ಕ್ರೂರಪ್ರಾಣಿಗಳು, ರಕ್ತ ಹೀರುವ ಜಿಗಣಿಗಳು ಎನ್ನುತ್ತಿದ್ದವರ ಮಧ್ಯದಲ್ಲಿದ್ದಾಗ ಇಂತಹಕಡೆ ಸೌಂದರ್ಯ ಕಾಣಲು ಬೇರೆಯದೇ ಆದ ಕಣ್ಣಗಳಿರಬೇಕು. ಅಂತಹ ಮನಃಸ್ಥಿತಿ ಇರಬೇಕು. ಅವು ಅವನಿಗಿದ್ದವು. ಅಲ್ಲಿ ಅವನು ಸ್ವರ್ಗವನ್ನೇ ಕಂಡಿದ್ದ.

ಇಂದೇನಿದೆ ಅಲ್ಲಿ…? ಎಲೆಗಳುದುರಿ ಬೋಳಾದ ಮರಗಳು ಕಣ್ಣು ಹಾಯಿಸಿದಲ್ಲೆಲ್ಲಾ ನಿರಾಸೆಯನ್ನೇ ಹೊತ್ತು ನಿಂತಂತೆ, ಹಸಿರಾಗಿದ್ದ ನೆಲವೆಲ್ಲಾ ಒಣ ಎಲೆಗಳಿಂದ ತುಂಬಿ ಕೆಂಡದ ಮೇಲಿನ ಬೂದಿಯಂತೆ… ತಣ್ಣನೆ ಸ್ಪಟಿಕ ಶುಭ್ರ ನೀರಿನಿಂದ ತುಂಬಿದ್ದ ಕೊಳ… ಅದರಾಚೆಗೆ ಹರಿಯುತ್ತಿದ್ದ ಹೊಳೆ ಎಲ್ಲವೂ… ಎಲ್ಲವೂ ಒಣಗಿ… ನಾನಂದು ಬಂದಿದ್ದು ಇದೇ ಸ್ಥಳಕ್ಕಾ..? ಎಂದು ಅವನು ಅನುಮಾನ ಪಡುವಂತೆ ಮಾಡುತ್ತಿತ್ತು.

ಆದರೂ ಅವನ ಮನಸ್ಸಿಗೆ ಚೆನ್ನಾಗಿ ಗೊತ್ತಿದೆ. “ನಾನಂದು ಬಂದಿದ್ದ ಸ್ಥಳ ಇದೇ. ಇಲ್ಲೇ ನಾನು ಅವಳನ್ನು ಕಂಡದ್ದು, ಮಾತಾಡಿದ್ದು, ಪ್ರೀತಿಸಿದ್ದು, ಮೈಮರೆತದ್ದು ಎಲ್ಲವೂ ಇಲ್ಲಿಯೇ… ಆದರೆ ಈ ಸ್ಥಳ ಮಾತ್ರ ಹಿಂದಿನಂತಿಲ್ಲ… ಅವಳೂ ಕಾಣುತ್ತಿಲ್ಲ…”

ಅಂದು ಇಲ್ಲಿಂದ ಹೋಗುವಾಗ ಎಷ್ಟೊಂದು ಭಾರವಾದ ಹೃದಯದಿಂದ ಹೋಗಿದ್ದ. ಹೋದವನೇ ನಗರದ ಎಲ್ಲಾ ಗೆಳೆಯರನ್ನು ಪಾರ್ಟಿಗೆ ಕರೆದಿದ್ದ. ತನ್ನ ಸಾಹಸವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದ. ತಾನು ಕಂಡುಕೊಂಡ ಸ್ವರ್ಗದಲ್ಲಿ ಅವಳೊಂದಿಗೆ ಶಾಶ್ವತವಾಗಿ ಬದುಕಲು ಹೋಗುತ್ತಿರುವುದಾಗಿ ಪ್ರಕಟಿಸಿದ. ಅವನ ಶಾಶ್ವತದ ಕಲ್ಪನೆಗೆ ಕಾಲದ ಎಲ್ಲೆಯಿರಲಿಲ್ಲ. ವಾಸ್ತವವಾಗಿ ಅದಿತ್ತು! ಕೆಲ ಸ್ನೇಹಿತರು ಅಭಿನಂದಿಸಿ ಇಂತಹದೊಂದು ನಿರ್ಧಾರ ನಮ್ಮಿಂದ ಸಾಧ್ಯವಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿಕೊಂಡರು. ಮತ್ತೆ ಕೆಲವರು ಇವನಿಗೆ ತಲೆಕೆಟ್ಟಿದೆ ಅಂತ ಅವನ ಹಿಂದೆ ಮಾತಾಡಿಕೊಂಡರು. ಒಬ್ಬಿಬ್ಬರು ಮಾತ್ರ ತುಂಬಾ ನಾಜೂಕಾಗಿ ಆ ಹೊಸದಾರಿಯ ವಿವರಗಳನ್ನು ಪಡೆದುಕೊಂಡರು.

ತನ್ನ ಸೆಕ್ರೇಟರಿಯನ್ನು ಕರೆದು, ತನ್ನ ಉದ್ದಿಮೆ, ಮನೆ, ಕಾರು ಹೀಗೆ ಎಲ್ಲಾ ಬಂಧನಗಳನ್ನು ಕಳಚಿ ಯಾವುದಾದರೂ ಅನಾಥಾಲಯಗಳಿಗೋ, ವೃದ್ಧಾಶ್ರಮಗಳಿಗೋ ಕೊಟ್ಟುಬಿಡುವ ವ್ಯವಸ್ಥೆ ಮಾಡು ಎಂದಿದ್ದ. ಆಗ ಬಿತ್ತು ನೋಡಿ ಜೇನುಗೂಡಿಗೆ ಕಲ್ಲು..! ಊರಿನಿಂದ ಧಾವಿಸಿ ಬಂದ ಅವರಪ್ಪ, ಅಣ್ಣ, ತಮ್ಮಂದಿರು, ಗಂಡಂದಿರ ಮನೆಯಿಂದ ಓಡೋಡಿ ಬಂದ ಅಕ್ಕಂದಿರು ಎಲ್ಲರೂ ಇವನನ್ನು ಮೊದಲಿನ ಸ್ಥಿತಿಗೆ ತರಲು ಹೆಣಗಾಡಿದರು. ಚಿಕ್ಕಂದಿನಿಂದ ಇವನ ಅಲೆಮಾರಿತನವನ್ನು ಕಂಡಿದ್ದ ಅವರಮ್ಮ ಮಾತ್ರ, ಇದುವರೆವಿಗೂ ಅವನಿಗೆ ಮದುವೆ ಮಾಡದಿರುವುದಕ್ಕೆ ಗಂಡನನ್ನು ಬೈದುಕೊಂಡರೂ… ಈಗಿನ ಅವನ ನಿರ್ಧಾರ ಬದಲಿಸುವ ಪ್ರಯತ್ನ ಮಾಡಲಿಲ್ಲ. ಅವನು ಒಂದು ಹೆಣ್ಣಿಗಾಗಿಯೇ ಹೋಗುತ್ತಿದ್ದಾನೆಂದು ಅವನ ಗೆಳೆಯರಿಂದ ತಿಳಿದು ಸಮಾಧಾನ ಪಟ್ಟಿದ್ದಳು.

ಸೂರ್ಯ ಇಳಿದು ಹೋಗುವ ಹೊತ್ತಿಗೆ ಅವನಿಗೆ ಭಣಗುಡುತ್ತಿದ್ದ ಆ ಕಣಿವೆಯಲ್ಲಿ ಹೊಸ ಟಾರು ರಸ್ತೆಯೊಂದು ಕಣ್ಣಿಗೆ ಬಿತ್ತು. ವಿಶಾಲ ನಿರ್ಜನ ಕಂದು ಕಣಿವೆಯಲ್ಲಿ ಕಪ್ಪನೆ ಉಬ್ಬು ತಗ್ಗುಗಳಿಲ್ಲದ ಸಪಾಟಾದ ರಸ್ತೆ, ಅವನಂದು ಇಲ್ಲಿಗೆ ಬಂದಾಗ ತುಳಿದಿದ್ದ ಹಾದಿಯ ಹೊಸ ರೂಪವಾಗಿತ್ತು. ಯುಗಾಂತರಗಳಿಂದ ಇಲ್ಲಿ ಕೆನೆಗಟ್ಟಿ ಕೂತಿದ್ದ ಅನರ್ಘ್ಯ ನಿಧಿಯೆಲ್ಲವನ್ನೂ ಹೀರಿ ಇನ್ನೆಲ್ಲಿಗೋ ಸಾಗಿಸುವ ಉದ್ದನೆಯ ಒಂದು ಕಪ್ಪು ಕೊಳವೆಯಂತೆ ಅದು ಅವನಿಗೆ ಕಂಡಿತ್ತು. ಅವನು ತುಳಿದು ಕಂಡುಕೊಂಡಿದ್ದ ಕಾಲುಹಾದಿಯೂ ಅದರೊಳಗೆಲ್ಲೋ ತೂರಿಹೋಗಿತ್ತು. ಈಗವನು ನಿಜಕ್ಕೂ ಗಾಬರಿ ಬಿದ್ದ. ಈ ಹಾದಿಯಗುಂಟ ನಡೆದು ಅವಳೂ ಈ ರಸ್ತೆಯ ಆ ಕೊನೆ ಸೇರಿರಬಹುದೇ.. ಎಂಬ ಊಹೆಯಿಂದಲೇ ನಡುಗಿಹೋದ. ಕತ್ತಲಾಗುತ್ತಿದ್ದುದರಿಂದ ಅನಿವಾರ್ಯವಾಗಿ ಅದೇ ರಸ್ತೆಯಲ್ಲಿ ಹೆಜ್ಜೆ ಹಾಕಿದ. ತನ್ನದೇ ನಗರದ ಹೊರವಲಯದ ಒಂದು ಭವ್ಯ ಬಂಗಲೆಯ ಮುಂದಿನ ಹುಲ್ಲುಹಾಸಿನಂಚಿನವರೆಗೂ ಅದು ಅವನನ್ನು ಕರೆತಂದಿತ್ತು.

ಹಾರ್ನ್ ಮಾಡುತ್ತಾ ಎದುರಿನಿಂದ ತೇಲಿದಂತೆ ಬಂದು ಇವನ ಮುಂದೆಯೇ ವೇಗವಾಗಿ ಸಾಗಿಹೋದ ಆ ಕಾರಿನ ಹಿಂದಿನ ಸೀಟಿನಲ್ಲಿ ಅವಳು ಕೂತಿದ್ದುದು ಅವನಿಗೆ ಸ್ಪಷ್ಟವಾಗಿ ಕಾಣಿಸಿತು. ಕಾರಿನ ವೇಗಕ್ಕೆ ತೆರೆದ ಕಿಟಕಿಯಿಂದ ಒಳ ನುಗ್ಗುತ್ತಿದ್ದ ಗಾಳಿಗೆ ಹಾರಾಡುತ್ತಿದ್ದ ಕೂದಲನ್ನು ಬಳ್ಳಿಯಂತಹ ತನ್ನ ಕೈಗಳಿಂದ ಹಿಂದೆ ತಳ್ಳುತ್ತಾ ಕಣ್ಣು ಮುಚ್ಚಿ ಕೂತಿದ್ದ ಅವಳನ್ನು ಸವರಿದ ಗಾಳಿ ಬಂದು ಇವನನ್ನು ತಟ್ಟಿದಾಗ, ಅರಿವಾಯಿತು…, ಇವನನ್ನು ಪರವಶಗೊಳಿಸಿದ, ಎಲ್ಲ ತ್ಯಾಗಕ್ಕೂ ಪ್ರೇರೇಪಿಸಿದ ಆ ಸುವಾಸನೆ… ಬೆವರಿನ ವಾಸನೆ, ಈಗ ಅವಳ ಮೈಯಿಂದ ಬರುತ್ತಿಲ್ಲ..!

(ರಾಜೀವಗೌಡ ಎಂ.ಜೆ. ಮೇಲೂರು)

ಹೆತ್ತವರಿಗೆ ಹೆಗ್ಗಣ ಮುದ್ದು…
ನಿಜವಾಗಲೂ ನನಗೆ ತುಂಬಾ ಕಷ್ಟವಾದ ಪ್ರಶ್ನೆ ಇದು. ನನ್ನ ಕತೆ ನನಗೆ ಯಾಕೆ ಇಷ್ಟವಾಗಬೇಕು..? ಅದು ಇಷ್ಟವಾಗಬೇಕಿರುವುದು ಬೇರೆಯವರಿಗೆ. ನಾನು ಬರೆದ ಎಲ್ಲಾ ಕತೆಗಳೂ ನನಗೆ ಇಷ್ಟವೆ. ನಮ್ಮ ಮಕ್ಕಳು ನಮಗೆ ಇಷ್ಟವಾದಂತೆ.
ಮೊದಲನೆಯದಾಗಿ ನಾನು ಮಹಾ ಸೋಮಾರಿ..! ನನ್ನ ತಲೆಯಲ್ಲಿರುವ ಕತೆಗಳನ್ನೆಲ್ಲಾ ಬರೆದು ಬಿಟ್ಟಿದ್ದರೆ.., ಇಷ್ಟೊತ್ತಿಗೆ ಕನಿಷ್ಟ ಹತ್ತಾದರೂ ಉದ್ಗ್ರಂಥಗಳಾಗುತ್ತಿದ್ದವೋ ಏನೋ..!? ಒಂದು ಕತೆ ಬರೆಯಲು ನಾನು ಒಂದೆರಡಾದರೂ ವರ್ಷಗಳನ್ನು ತೆಗೆದುಕೊಂಡಿರುತ್ತೇನೆ. ನನ್ನ ಮನೆಯ ನನ್ನ ಟೇಬಲ್ಲಿನ ಡ್ರಾವರ್‌ನಲ್ಲಿ ಕನಿಷ್ಟ ಐದಾರು ಕತೆಗಳು ಸಮಾನಾಂತರವಾಗಿ ಬೆಳೆಯುತ್ತಿರುತ್ತವೆ. ಬರೆದಾಗಿದೆ ಎಂದುಕೊಂಡ ಮೇಲೂ ಆಗಾಗ ಅವು ತನ್ನ ಮೈಮೇಲೆ ಹೊಸ ಚಿಗುರನ್ನು, ರೆಂಬೆ ಕೊಂಬೆಗಳನ್ನು ಮೂಡಿಸಿಕೊಳ್ಳುತ್ತಾ.. ಕೆಲವೊಮ್ಮೆ ಇರುವ ರೆಂಬೆ ಕೊಂಬೆಗಳನ್ನು ಕಡಿಸಿಕೊಳ್ಳುತ್ತಾ ಬೋಡಾಗುತ್ತಲೇ ಇರುತ್ತವೆ. ಯಾವಾಗಲೋ ತೀರದ ಒತ್ತಡಕ್ಕೆ ಸಿಕ್ಕು ಡ್ರಾವರಿನ ಕತ್ತಲ ಮೂಲೆಯಿಂದೆದ್ದು ಯಾವುದಾದರೂ ಪತ್ರಿಕೆಗಳ ಸಂಪಾದಕರ ಸಮ್ಮುಖಕ್ಕೆ ಹಾರಿದಾಗ ಮಾತ್ರ ಅವುಗಳ ಚಲನೆ ನಿಂತು ಬಿಡುತ್ತದೆ. ಬೆಳಕು ಕಾಣುವ ಅದೃಷ್ಟವಿದ್ದ ಕತೆಗಳು ನಂತರ ಓದುಗರ ವಾಚನಕ್ಕೆ ಸಿಕ್ಕುತ್ತವೆ. ಅವುಗಳಲ್ಲಿ ನಿಜವಾದ ಅಂತಃಸತ್ವವಿದ್ದರೆ ಉಳಿದಿರುತ್ತವೆ ಅನ್ನುವ ನಂಬಿಕೆ ನನ್ನದು.
91ರಲ್ಲಿ ಘಟಿಸಿದ್ದ ರೈಲು ದುರಂತದ ಸ್ಥಳಕ್ಕೆ 93ರಲ್ಲಿ ಹೋಗಿದ್ದೆ. ಅಪಘಾತದಲ್ಲಿ ನುಜುಗುಜ್ಜಾಗಿ ರೈಲ್ವೇಹಳಿಗಳ ಪಕ್ಕದಲ್ಲಿ ಪೊದೆಗಳಡಿ ಮುಚ್ಚಿಹೋಗಿದ್ದ ರೈಲುಡಬ್ಬಿಯೊಂದರ ಮುಂದೆ ಅನ್ಯ ಮನಸ್ಕನಾಗಿ ಕೂತಿದ್ದ ಒಬ್ಬ ಮುದುಕ ನನ್ನಲ್ಲೊಂದು ಕತೆ ಹುಟ್ಟುಹಾಕಿದ್ದ. ಬಹುಶಃ ಎರಡು ಮೂರು ವರ್ಷದಲ್ಲಿ ಕತೆ ಬರೆದು ಮುಗಿಸಿದ್ದೆ. ಆದರೆ ಎಲ್ಲಿಗೂ ಕಳಿಸಿರಲಿಲ್ಲ. ಏಕೆಂದರೆ ಅದೊಂದು ಕತೆ ಎನಿಸಿಕೊಳ್ಳಬಹುದೆಂಬ ಬಗ್ಗೆ ನನಗೆ ಅಷ್ಟೊಂದು ವಿಶ್ವಾಸವಿರಲಿಲ್ಲ. ಆದರೆ 2006ರಲ್ಲಿ ಮಯೂರಕ್ಕೆ ಕಳಿಸಿದ್ದೆ. ಅದು ಅಲ್ಲಿ ಪ್ರಕಟವಾಗಿಬಿಡಬೇಕೆ..? ಅದೇ ಸಮಯಕ್ಕೆ ನನಗೆ ಪರಿಚಿತವಾಗಿದ್ದ ಓರ್ವ ಗೆಳೆಯ “ಏನ್ ಸಾರ್.. ನನ್ನ ಬಗ್ಗೆಯೇ ಕತೆ ಬರೆದುಬಿಟ್ಟಿದ್ದೀರಲ್ಲ..” ಅಂತ ಆಕ್ಷೇಪಿಸಿಬಿಡುವುದೇ..! ಎಲ್ಲ ಕತೆಗಳೂ ಹೀಗೆಯೇ ಅನಿಸುತ್ತದೆ. ಒಂದೆಡೆ ಅದು ಕತೆಯಾದರೆ.., ಮತ್ತೊಂದೆಡೆ ಅದು ವಾಸ್ತವವಾಗಿರುವ ಸಾಧ್ಯತೆಯೂ ಇರುತ್ತದೆ.
ಕತೆ ಬರೆಯುವ ವಿಷಯದಲ್ಲಿ(ಬದುಕಿನ ಎಲ್ಲ ವಿಷಯಗಳಲ್ಲೂ ಅಂತ ನನ್ನನ್ನು ಹತ್ತಿರದಿಂದ ಬಲ್ಲವರು ನೀಡುವ ಕಾಂಪ್ಲಿಮೆಂಟು..) ಇಷ್ಟೊಂದು ಸೋಮಾರಿಯಾದ ನಾನು, ಕೆಲವೊಮ್ಮೆ ಒಂದರ್ಧ ಗಂಟೆಯಲ್ಲೂ ಕತೆ ಬರೆದು ಮುಗಿಸಿದ್ದಿದೆ. ಏನೋ ಒಂದು ವಿಚಾರ ಮನಸ್ಸಲ್ಲೇ ಸುತ್ತುತ್ತಾ ಸುತ್ತುತ್ತಾ ಯಾವುದೋ ಒಂದು ಘಳಿಗೆಯಲ್ಲಿ ಒಂದು ರೂಪ ಪಡೆದು ಅವತರಿಸಿಬಿಟ್ಟಿರುತ್ತದೆ. ಹಾಗೆ ಬರೆದ ನಾಲ್ಕೈದು ಕತೆಗಳಲ್ಲಿ ಈ ‘ಸ್ವೇದಗಂಧಿ’ ಮೊದಲನೆಯದು ಎಂಬುದಷ್ಟೆ ಈ ಕ್ಷಣಕ್ಕೆ ಈ ಕತೆ ನನಗಿಷ್ಟವಾದದ್ದು ಎನ್ನಲು ಸಿಗುತ್ತಿರುವ ಮೊದಲ ಮತ್ತು ಕೊನೆಯ ಕಾರಣ ಅಷ್ಟೆ.