ಆಕಾಶದ ಒಂದು ಭಾಗದಲ್ಲಿ ಮೋಡ ದಟೈಸಿ ಒಂದೆರಡು ಹನಿ ಕೂಡ ಉದುರಿತು! ಉಸುಕಿನಲ್ಲಿ ನಡೆದಾಡಿದೆ. ಮಳೆ ಹನಿ ಬೀಸುವ ಗಾಳಿಯನ್ನು ತಂಪು ಮಾಡಿದ್ದರಿಂದ ತುಸು ಹಿತವೆನಿಸಿತು. ಆ ತುದಿ ಮುಟ್ಟುವಷ್ಟರಲ್ಲಿ ಇಡೀ ಮೈ ಹಸಿಯಾಗಿತ್ತು. ಈ ನಡುವೆ ಮೋಡಗಳು ಕರಗಿ ಆಕಾಶ ಶುಭ್ರಗೊಂಡು, ನಕ್ಷತ್ರಗಳು ಕಾಣಿಸಿಕೊಂಡವು. ಇಡೀ ವಾತಾವರಣವು ಆಹ್ಲಾದಕರವಾಯಿತು. ಆ ಗಳಿಗೆಯಲ್ಲಿ ಎಲ್ಲವೂ ಕ್ಷುಲ್ಲಕವಾಗಿ ಕಂಡವು… ಮಾಲಾಳ ಮೇಲೆ ಕೈ ಎತ್ತಬಾರದಿತ್ತು. ಎಷ್ಟು ನೊಂದುಕೊಂಡಳೋ? ಮಕ್ಕಳು ಉಂಡವೋ ಇಲ್ಲವೋ? ಮನೆಯತ್ತ ಸಾಗಲು ದಾಪುಗಾಲಿಟ್ಟೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವ ನಾರಾಯಣ ನಾಯಕ ಕತೆ “ಮಣ್ಣಿನ ದೋಣಿ” ನಿಮ್ಮ ಓದಿಗೆ

ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವ ಪೂರ್ವ ಯೋಜನೆಯೇನೂ ಇರಲಿಲ್ಲ. ಅದ್ಯಾವುದೋ ಗಳಿಗೆಯಲ್ಲಿ ಆಕಸ್ಮಿಕವಾಗಿ ಹೊರಬಂದ ಮಾತೇ ಗಟ್ಟಿಯಾಯಿತು. ಅದೆಲ್ಲ ಶುರುವಾದದ್ದು ಒಂದು ಸಣ್ಣ ವಿಷಯಕ್ಕೆ.

ಆಫೀಸಿನಿಂದ ಎಂದಿನಂತೆ ತಡವಾಗಿ ಬಂದವನು ಆಯಾಸದಿಂದ ಡ್ರೆಸ್ ಕೂಡ ಬದಲಿಸದೇ ಸೋಫಾ ಮೇಲೆ ಕುಸಿದು ‘ಒಂದು ಕಪ್ ಚಾ ಬೇಕಾಗಿತ್ತು’ ಎಂದೆ. ಯಾಕೋ ಸುಸ್ತು. ಏನೋ ಅಸ್ವಸ್ಥತೆ. ಇದು ಇತ್ತೀಚೆಗೆ ಮಾಮೂಲಾಗಿಬಿಟ್ಟಿದೆ. ಒಂದೆರಡು ವರ್ಷಗಳ ಹಿಂದಿನವರೆಗೂ ಸರಿಯಾಗಿ ಸಂಜೆ ಏಳು ಹದಿನೆಂಟರ ಬೋರಿವಲಿ ಫಾಸ್ಟ್ ಹಿಡಿದು ಎಂಟು ಇಪ್ಪತ್ತೆರಡಕ್ಕೆ ಮಲಾಡ್ ಸ್ಟೇಶನ್ ಇಳಿದು ಶೇರ್ ರಿಕ್ಷಾ ಕ್ಯೂನಲ್ಲಿ ಅರ್ಧ ತಾಸು ನಿಲ್ಲುವ ತಾಳ್ಮೆಯೂ ಇತ್ತು, ಮನೆ ತಲುಪಿ ಹೆಂಡತಿ ಮಕ್ಕಳೊಂದಿಗೆ ಹೊತ್ತು ಕಳೆಯಲು ಸಾಕಷ್ಟು ಶಕ್ತಿಯೂ ಇರುತ್ತಿತ್ತು. “ಬೆಂಛೋದ್! ಮುಂಬೈ ಭಾಗದೌಡ್ ಜಿಂದಗಿ ಸಾಕಾಗಿದೆ. ಲೋಕಲ್ ಟ್ರೇನ್‌ನಲ್ಲಾದ ನೈನ್/ಇಲೆವೆನ್ ಸರಣಿ ಬಾಂಬ್ ಸ್ಪೋಟದ ನಂತರವಂತೂ ಎಲ್ಲವೂ ಅಸ್ತವ್ಯಸ್ತವಾಗಿದೆ’ ಎಂದು ನನ್ನಷ್ಟಕ್ಕೇ ನಾನು ಗೊಣಗಿಕೊಳ್ಳುವುದಿದೆ. ‘ಅಯ್ಯೋ ಬಿಡಿ, ಸ್ಪೋಟದ ಮರುದಿನವೇ ಮುಂಬೈ ನಾರ್ಮಲ್ ಆಗಿದೆ, ನಿಮ್ಮದು ಜೀವಮಾನದ ಅಸ್ವಸ್ಥತೆ ‘ ಎಂದು ಮಾಲಾ ಅಣಕಿಸುವುದೂ ಇದೆ.

ಆದರೂ ಆಗಾಗ ಫ್ಲಾಶ್ ಬ್ಯಾಕ್ ಮೂಡಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸತ್ಯವೇ! ಅಂದು ಪ್ಲಾಟ್ ಫಾರ್ಮ್‌ನಲ್ಲಿ ಓಡೋಡುತ್ತಾ ಬರುತ್ತಿರುವಾಗಲೇ ಸಂಜೆ ಏಳು ಹದಿನೆಂಟರ ಟ್ರೇನ್ ಹೊರಟೇಬಿಟ್ಟಿತ್ತು. ಫಸ್ಟ್ ಕ್ಲಾಸ್ ಬೋಗಿ ಮುಟ್ಟುವಷ್ಟರಲ್ಲಿ ಟ್ರೇನ್ ವೇಗ ಹೆಚ್ಚಿಸಿಕೊಂಡಿದ್ದರಿಂದ ಪಕ್ಕದ ಜನರಲ್ ಬೋಗಿ ಹತ್ತಿದ್ದೆ. ಮಧ್ಯದ ಜಾಳಿಗೆ ಕಿಟಕಿಯಿಂದ ದಿನವೂ ನನ್ನ ಜತೆಯಲ್ಲಿ ಪ್ರಯಾಣಿಸುವ ಗೆಳೆಯ ಶಿವಕುಮಾರ್‌ಗೆ ಕೈ ಮಾಡಿದ್ದೆ. ರಶ್ ಹೆಚ್ಚಾದ್ದರಿಂದ ಮುಂದಿನ ಸ್ಟೇಷನ್‌ನಲ್ಲಿಳಿದು ಫಸ್ಟ್ ಕ್ಲಾಸ್ ಬೋಗಿ ಹತ್ತುವ ಪ್ರಯತ್ನ ಬೇಡ ಅನ್ನಿಸಿ ಅಲ್ಲೇ ಕೂತಿದ್ದೆ. ಸರಿಯಾಗಿ ಸಂಜೆ ಏಳು ಮೂವತ್ತಾರಕ್ಕೆ ಟ್ರೇನ್ ಬಾಂದ್ರಾ ಸ್ಟೇಶನ್ ತಲುಪಿತೋ ಇಲ್ಲವೋ ಅಷ್ಟರಲ್ಲಿ ಶಿವಕುಮಾರ್ ಇರುವ ಬೋಗಿಯಲ್ಲಿ ಭಯಂಕರ ಸ್ಫೋಟ! ಚೀರಾಟ, ನರಳಾಟ, ರೋದನಗಳ ನಡುವೆ ಆಘಾತದಿಂದ ಸುಧಾರಿಸಿಕೊಂಡು ನಾನು ಸುರಕ್ಷಿತವಾಗಿರುವುದನ್ನು ಅಂಥ ಸನ್ನಿವೇಶದಲ್ಲೂ ಸಂಭ್ರಮಿಸಿದ್ದೆ. ಛೆ! ಗೆಳೆಯ ಶಿವಕುಮಾರ? ಛಿದ್ರಗೊಂಡ ಭೋಗಿಯೊಳಗೆ ಅವನನ್ನು ಹುಡುಕಾಡಿದ್ದೆ. ಸದಾ ನೈಕಿ ಶೂಸ್ ಧರಿಸುತ್ತಿದ್ದ ಅವನ ಕಾಲೊಂದು ತುಂಡಾಗಿ ಹಳಿಗಳ ಮಧ್ಯೆ ಕಣ್ಣಿಗೆ ಬಿದ್ದು, ದಿನವೂ ಲೇಸ್ ಕಟ್ಟುವಾಗ ಬಿಚ್ಚುವಾಗ ಆ ದೃಶ್ಯವೇ ನೆನಪಾಗುವುದು!

ಒತ್ತೊತ್ತಿ ಬರುವ ಅಂಥ ಘೋರ ಚಿತ್ರಗಳಿಂದ ತಪ್ಪಿಸಿಕೊಳ್ಳಲು ಕಿಟಕಿಯಾಚೆ ನೋಡಿದೆ. ದೀರ್ಘ ನೋಟಕ್ಕೆ ಎತ್ತರದ ಕಟ್ಟಡಗಳು ಅಡ್ಡ ನಿಂತಿವೆ. ಆಳಕ್ಕೆ ಉಸಿರೆಳೆದುಕೊಂಡು ಉಸಿರಿನ ಮೇಲೆ ಗಮನ ಕೇಂದ್ರೀಕರಿಸಲು ಪ್ರಯತ್ನಿಸಿದೆ. ತಕ್ಷಣಕ್ಕೆ ಶಮನ ದಕ್ಕಲಿಲ್ಲ. ಚೂರು ಚಹ ಹೀರಿದರೆ ಮನಸ್ಸು ಒಂದಿಷ್ಟು ಹಗುರಾದೀತು. ಒಂದು ಕಪ್ ಚಹ ಮಾಡ್ಲಿಕ್ಕೆ ಒಂದು ವರ್ಷ ತಗೋಳ್ತಾಳಲ್ಲ ಇವಳು ಎಂದು ತಾಳ್ಮೆಗೆಟ್ಟು ‘ಬೇಗ್ ತಾರೆ ಮಾರಾಯ್ತಿ’ ಎಂದು ಕೂಗಿದೆ; ಕಿವಿಯಲ್ಲಿ ಇಯರ್ ಫೋನಿಟ್ಟು ಎಫ್.ಎಂ. ರೇಡಿಯೋದಿಂದ ಹಾಡು ಕೇಳುತ್ತಿದ್ದಳು. ಬೇರೆಯದೇ ಲೋಕದಲ್ಲಿ ನನ್ನ ಮಾತು ಕೇಳಲೇ ಇಲ್ಲ ಎನ್ನೋ ರೀತಿಯಲ್ಲಿ ಚಹ ತಂದು ಕೈಗಿತ್ತಳು. ಏನೋ ಹುರುಪಿನಲ್ಲಿ ಬಾಯೊಳಗೆ ಎಂಥದೋ ಜಗಿಯುತ್ತ ‘ಅಪ್ಪ ಬಂದಿದ್ದರು’ ಎಂದಳು. ತಕ್ಷಣ ಪಿತ್ತ ಕೆಣಕಿದವನಂತೆ, ‘ನೋಡು ನಿಮ್ಮ ಅಪ್ಪ ಅಲ್ಲ ಅವರ ಅಪ್ಪ ಬಂದ್ರೂ ಈ ಸಲ ದೀಪಾವಳಿ ಹಬ್ಬಕ್ಕೆ ಊರಿಗೇ ಹೋಗೋದು, ತಿಳಿತಾ?’ ಎಂದೆ. ಒಂದು ಕ್ಷಣ ಅವಕ್ಕಾದರೂ ‘ಯಾಕೆ ಕಿರಚಾಡ್ತೀರಿ, ಊರಿಗೇ ಹೋಗಿ ಮತ್ತೆಲ್ಲೋ ಹೋಗಿ ನಂಗೇನು? ಊರಂತೆ ಊರು, ಊರಲ್ಲೇನುಂಟೋ ….’ ಎಂದಳು.

‘ಹೌದೌದು ಊರೆಲ್ಲೇನುಂಟು, ಮಣ್ಣು!’ ಎಂದೆ. ಊರೆಲ್ಲೇನುಂಟಂತೆ, ಎಲ್ಲ ಇರೋದು ಇವಳಪ್ಪನ ಮನೆಯಲ್ಲೇ.

‘ಆ ಮಣ್ಣೇ ನಂಗಿಷ್ಟ ತಿಳಿತಾ?’ ಎಂದೆ. ‘ಇಷ್ಟ ಆದ್ರೆ ಹೋಗಿ ಅದ್ನೇ ತಿನ್ರೀ’ ಎಂದಳು. ನನ್ನ ಕೋಪ ನೆತ್ತಿಗೇರಿತು. ‘ಬಾಯ್ಮುಚ್ಚು’ ಎಂದು ಕೈ ಎತ್ತಿದೆ. ಪರಿಸ್ಥಿತಿ ವಿಪರೀತಕ್ಕೆ ಹೋಗಿತ್ತು. ಕಾರ್ಟೂನ್ ನೋಡುತ್ತಿದ್ದ ಮಕ್ಕಳು ಇಂಥ ಮಹಾಸ್ಪೋಟವನ್ನು ನಿರೀಕ್ಷಿಸಿರಲಿಲ್ಲ. ಮನೆಯಿಡೀ ಮನಸುಗಳು ಛಿದ್ರವಾಗಿ ಬಿದ್ದಂತೆ ಅನಿಸಿ ಕದ ಕುಟ್ಟಿ ಹೊರಬಿದ್ದೆ.

ಸಮುದ್ರ ತೀರಕ್ಕೆ ಬರದೇ ಅದೆಷ್ಟೋ ದಿನಗಳಾಗಿತ್ತು. ನೀರು ಸ್ವಲ್ಪ ಹಿಂದಕ್ಕೆ ಸರಿದಿದೆ. ದಡದುದ್ದಕ್ಕೂ ಚೆಲ್ಲಿರುವ ಪ್ಲಾಸ್ಟಿಕ್ ಕಸ ಕಡ್ಡಿ ರಾಶಿ, ಅರೆಗತ್ತಲಲ್ಲಿ ಅಲ್ಲಲ್ಲಿ ಒತ್ತಿ ಕೂತಿರುವ ಜೋಡಿಗಳು. ಕಿರು ತೆರೆಗಳು ದಡಕ್ಕೆ ದೂಡುವ ಎಂಥದೋ ಆಕೃತಿಗಳು ಅರೆ ಬೆಳಕಿನಲ್ಲಿ ವಿಷಾದ ಹುಟ್ಟಿಸುತ್ತಿವೆ. ಕಾಲುಗಳು ಹೂತು ಹೋದವನಂತೆ ಅಲ್ಲೇ ಕೂತಿದ್ದೇನೆ. ರಾತ್ರಿಯಾದದ್ದರಿಂದ ಎಲ್ಲರೂ ಎದ್ದೆದ್ದು ಹೋಗುತ್ತಿದ್ದಾರೆ. ನನಗೇನಾಗಿದೆ ಇಂದು? ಈ ತಳಮಳ, ಸಂಕಟ, ವಿಕ್ಷಿಪ್ತತೆ ಯಾಕೆ ಕರುಳನ್ನು ಬಗೆಯುತ್ತಿದೆ?

ಬೆಳಿಗ್ಗೆ ಎಂದಿನಂತೆಯೇ ಎದ್ದು ಹತ್ತಿರದ ಪಾರ್ಕ್ಗ್ ಹೋಗಿ ಸಣ್ಣ ವಾಕ್ ಮಾಡಿರುವೆ. ಯೋಗಾಸನ ಮಾಡಿರುವೆ. ಪ್ರಾಣಾಯಾಮಗಳನ್ನೂ ಅಭ್ಯಾಸ ಮಾಡಿದ್ದೇನೆ. ಆಫೀಸ್‌ನಲ್ಲಿ ಕೂಡ ಅಂಥದ್ದೇನಾಗಿಲ್ಲ. ನಾನು ತಯಾರಿಸಿದ ಪ್ರೊಜೆಕ್ಟ್ ರಿಪೋರ್ಟ್ನ ಬಾಸ್ ಮೆಚ್ಚಿ ಈ ಸಲ ಟೀಮ್ ಲೀಡರ್ ಆಗೋದು ಖಾತ್ರಿ ಅನ್ನೋ ಥರದ ಮಾತುಗಳನ್ನು, ನಾನು ನಂಬೋದಿಲ್ಲ ಎಂದು ಗೊತ್ತಿದ್ದರೂ, ಹೇಳಿದ್ದಾನೆ. ಐನ ಗಳಿಗೆಯಲ್ಲಿ ತನ್ನವರಿಗೇ ಪ್ರೊಮೋಶನ್ ನೀಡುವುದು ಎಂಬುದು ನನಗೆ ತಿಳಿದಿದ್ದರೂ ‘ತುಂಬಾ ಸಂತೋಷ ಸರ್’ ಎಂದು ಹೇಳಿ ಮನಸ್ಸಲ್ಲೇ ‘ಸುಳ್ಳು ಬೊಗಳಬೇಡ ಮಾರ್ವಾಡಿ ನನ್ಮಗನೆ’ ಅಂದುಕೊಂಡಿದ್ದೇನೆ. ಲಂಚ್ ಹೊತ್ತಿಗೆ ಮೋನಿಕಾಳನ್ನು ಕರೆದರೆ ‘ಸಾರಿ ಸರ್, ಚವ್ಹಾಣ್ ಸರ್ ಹೊಸ ಕಾರ್ ತಗಂಡ್ರಲ್ಲ ಗ್ರ್ಯಾಂಡ್ ಹೋಟಲ್‌ನಲ್ಲಿ ಟ್ರೀಟ್ ಕೊಡಸ್ತಾರೆ ಸರ್’ ಎಂದು ಹೊಟ್ಟೆಯುರಿಸಲು ನೋಡಿದ್ದಾಳೆ. ‘ಪ್ಲೀಸ್ ಕ್ಯಾರಿ ಆನ್ ಬೇಬಿ’ ಎಂದು ಬೆನ್ನು ತಟ್ಟಿ ಮನಸಲ್ಲಿ ‘ಹಾಳಾಗ್ ಹೋಗು’ ಅಂದ್ಕೊಡಿದ್ದೇನೆ. ಇಂಥ ಸಿಲ್ಲೀ ಸಂಗತಿಗಳೇ…

ಆಕಾಶದ ಒಂದು ಭಾಗದಲ್ಲಿ ಮೋಡ ದಟೈಸಿ ಒಂದೆರಡು ಹನಿ ಕೂಡ ಉದುರಿತು! ಉಸುಕಿನಲ್ಲಿ ನಡೆದಾಡಿದೆ. ಮಳೆ ಹನಿ ಬೀಸುವ ಗಾಳಿಯನ್ನು ತಂಪು ಮಾಡಿದ್ದರಿಂದ ತುಸು ಹಿತವೆನಿಸಿತು. ಆ ತುದಿ ಮುಟ್ಟುವಷ್ಟರಲ್ಲಿ ಇಡೀ ಮೈ ಹಸಿಯಾಗಿತ್ತು. ಈ ನಡುವೆ ಮೋಡಗಳು ಕರಗಿ ಆಕಾಶ ಶುಭ್ರಗೊಂಡು, ನಕ್ಷತ್ರಗಳು ಕಾಣಿಸಿಕೊಂಡವು. ಇಡೀ ವಾತಾವರಣವು ಆಹ್ಲಾದಕರವಾಯಿತು. ಆ ಗಳಿಗೆಯಲ್ಲಿ ಎಲ್ಲವೂ ಕ್ಷುಲ್ಲಕವಾಗಿ ಕಂಡವು… ಮಾಲಾಳ ಮೇಲೆ ಕೈ ಎತ್ತಬಾರದಿತ್ತು. ಎಷ್ಟು ನೊಂದುಕೊಂಡಳೋ? ಮಕ್ಕಳು ಉಂಡವೋ ಇಲ್ಲವೋ? ಮನೆಯತ್ತ ಸಾಗಲು ದಾಪುಗಾಲಿಟ್ಟೆ.
ಬಾಗಿಲು ತೆರೆದೇ ಇತ್ತು. ಹಾಲ್‌ಗೆ ಬಂದರೆ ಯಾರು ಕಾಣ್ತಿಲ್ಲ. ಗಾಬರಿಯಾಗಿ ಬೆಡ್ ರೂಂಗೆ ಓಡಿದೆ. ಮಕ್ಕಳು ಮಲಗಿವೆ. ಇವಳೂ ಅಲ್ಲೇ ಮಲಗಿದ್ದಾಳೆ. ಮೈ ಉರಿಯಿತು. ನನ್ನ ತಲೆಯಲ್ಲಿ ಘೋರ ಸಂಘರ್ಷ ತುಂಬಿರುವಾಗ ಹೇಗೆ ಇವಳು ಆರಾಮವಾಗಿ ಮಲಗಿದ್ದಾಳೆ! ನಿಜಕ್ಕೂ ಮಲಗಿದ್ದಾಳೋ ನಟನೆಯೋ ನೋಡಲು ಹತ್ತಿರ ಹೋದೆ. ಪ್ರಶಾಂತ ಮುಖ ಹೊತ್ತು ಮಲಗಿದ್ದಾಳೆ, ಮಕ್ಕಳಂತೆ… ಹಗುರ ಚಾದರ ಬಿಡಿಸಿ ಮೈ ಮೇಲೆ ಹಾಕಿ ಹೊರಬಂದು ಕತ್ತಲಲ್ಲಿ ಕೂತೆ. ಕುಳಿತುಕೊಳ್ಳಲಾಗದೆ ಮಲಗಿದೆ. ನಿದ್ದೆ ಬಾರದು, ಹೊರಳಾಡಿದೆ. ದುಃಖ ಉಮ್ಮಳಿಸಿತು. ಎದ್ದು ಹೊರ ಬಂದೆ. ಕೋಟಿ ಜನರನ್ನು ತುಂಬಿಕೊಂಡಿರುವ ಈ ಮುಂಬಯಿ ನಗರದಲ್ಲಿ ಕಾಡಿದ ಒಂಟಿತನದಿಂದ ಭಯವಾಯಿತು. ಈ ಅಪರಾತ್ರಿಯಲ್ಲಿ ಎಲ್ಲಿ ಹೋಗಲಿ? ಯಂಕ್ಟಣ್ಣನನ್ನು ಬಿಟ್ಟು ಯಾರಿದ್ದಾರೆ? ಟ್ಯಾಕ್ಸಿಯಲ್ಲಿ ಕೂತು ‘ಅಂಧೇರಿ ವೆಸ್ಟ್’ ಎಂದೆ.

‘ಥೋ ನೀನೊಬ್ಬ ಮಳ್ಳ, ತಮ್ಮ’ ಎಂದ ಯಂಕ್ಟಣ್ಣ. ಅಷ್ಟರಲ್ಲೆ ಮೂರ್ನಾಲ್ಕೂ ಪೆಗ್ ಒಳಗೆ ಇಳಿದಿತ್ತು. ‘ಅಲ್ವೋ, ಅದೇ ದೊಡ್ಡ ತಪ್ಪು. ಹೆಂಡ್ತಿ ನಿಂಗೆ ಗೆಳತಿಯಂತೆ, ಪ್ರೇಯಸಿಯಂತೆ, ತಾಯಿಯಂತೆ ಈ ಎಲ್ಲ ನಾಟಕದ ಪಾರ್ಟ ಹಾಕ್‌ಬೇಕ್ ಅಂತ ನೀ ಆಸೆ ಪಟ್ರೆ ಅದ್ ಆಗ್‌ಹೋಗೂ ವಿಷ್ಯ ಅಲ್ವೋ ಮಾರಾಯ, ತಲೆ ಖರ್ಚ್ ಮಾಡೋ’ ಎಂದು ಮತ್ತೆರಡು ಪೆಗ್ ಸುರುವಿದ.

ಯಂಕ್ಟಣ್ಣಂದೂ ನಂದೂ ಒಂದೇ ಊರು. ಅವನದ್ದೇ ಒಂದು ದೊಡ್ಡ ಕಥೆ. ಬಹಳ ಹಿಂದೆ ಊರು ಬಿಟ್ಟು ಮುಂಬಯಿಗೆ ಅದ್ಹೇಗೋ ಬಂದು, ಅಲ್ಲಿ, ಇಲ್ಲಿ ಕೆಲ್ಸ ಮಾಡ್ತ ರಾತ್ರಿ ಕಾಲೇಜಿನಲ್ಲಿ ಕಲ್ತು ಮೇಲೆ ಮೇಲೆ ಬಂದವನು. ಈಗ ಅಂಧೇರಿಯಲ್ಲೊಂದು ಬಾರು, ಚೆಂಬೂರಿನಲ್ಲೆರಡು ಹೋಟೆಲುಗಳ ಮಾಲೀಕ. ವಾಪಿಯಲ್ಲಿಯೊಂದು ಫೆಕ್ಟರಿ ಸಹ ಇದೆ. ಅರವತ್ತು ವರ್ಷ ಸಮೀಪದ ಯಂಕ್ಟಣ್ಣ ಇಡೀ ಬಂಗಲೆಯಲ್ಲಿ ಒಬ್ಬನೇ ಇರ್ತಾನೆ. ಅವನಿಗೆ ಗುಜರಾಥಿ ಹೆಣ್ಣೊಬ್ಬಳ ಜೊತೆ ಮದುವೆಯಾಗಿತ್ತಾದರೂ ಯಾವುದೋ ಕಾರಣಕ್ಕೆ ಕೆಲವೇ ವರ್ಷಗಳಲ್ಲಿ ಡೈವರ್ಸ್ ಕೂಡ ಆಯ್ತಂತೆ.

ಡೊಂಬಿವಲಿಯಲ್ಲಿರುವ ಅವನ ಫ್ಲ್ಯಾಟ್‌ನಲ್ಲಿ ಮರಾಠಿ ಹೆಂಗಸೊಬ್ಬಳನ್ನು ಇಟ್ಟುಕೊಂಡಿದ್ದಾನೆಂದು ಹಲವರು ಹೇಳುತ್ತಾರೆ. ನಾನು ಮುಂಬಯಿಗೆ ಬಂದಾಗ ನನಗೆ ಕೆಲಸ ಕೊಡಿಸುವಲ್ಲಿ ಸಹಾಯ ಮಾಡಿದ್ದ. ಅಲ್ಲದೇ ಮಾಲಾಳ ತಂದೆಗೆ (ಅವರದೂ ಹೊಟಲ್ ಬಿಸಿನೆಸ್ಸುಂಟು) ನನ್ನನ್ನು ಪರಿಚಯಿಸಿ ನಮ್ಮ ನೆಂಟಸ್ತಿಕೆಗೂ ಕಾರಣನಾಗಿದ್ದ. ಊರವನು ಎಂಬ ಕಾರಣಕ್ಕೆ ನಾನೆಂದರೆ ಅವನಿಗೆ ಬಹಳ ಇಷ್ಟ. ನಾನು ಸಿಕ್ಕಾಗಲೆಲ್ಲ ಊರಿನ ಭಾಷೆಯಲ್ಲಿ ಮಾತಿಗೆ ಕೂತವೆಂದರೆ ಹೊತ್ತು ಹೋದದ್ದೆ ತಿಳೀತಿರಲಿಲ್ಲ.

‘ಮುಂಬಯಿಯಲ್ಲುಳ್ದು ಈ ಥರ ಸೆಂಟಿಮೆಂಟಲ್ ಆಗ್ ಬ್ಯಾಡ್ವೊ ತಮ್ಮ. ಅಣ್ಣನ್ ನೋಡು, ಹ್ಯಾಂಗೆ ಮಜ್ದಲ್ಲಿಂವೆ, ಹೋ ಹೋ ಹೋ’ ಎಂದು ದೊಡ್ಡಕ್ಕೆ ನಕ್ಕ. ನಗುತ್ತಲೇ ಇದ್ದ. ‘ಸಾಕಮಾಡೋ ಯಂಕ್ಟಣ್ಣ, ತಲಿಗೆ ತಾಗ್ತೋ ಏನೋ?’ ಎಂದೆ. ನಕ್ಕು ನಕ್ಕು ಥಂಡಾದ. ‘ಅರೆ! ಕಣ್ಣಲ್ಲಿ ನೀರು?’ ಎಂದೆ. ಆರು ಅಡಿ ಎತ್ತರದ, ಆತ್ಮ ವಿಶ್ವಾಸ ತುಂಬಿ ತುಳುಕುವ ಯಂಕ್ಟಣ್ಣನ ಕಣ್ಣಲ್ಲಿ ನೀರು! ‘ಏಳ್ ಯಂಕ್ಟಣ್ಣ, ಮನಿಕಾ ಹೋಗ’ ಎನ್ನುತ್ತ ಏಳಿಸಲು ನೋಡಿದೆ. ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದು ‘ನೀ ಊರಿಗೆ ಹೋದ್ರೆ ಅಣ್ಣಂದುಂದ್ ಕೆಲ್ಸ ಮಾಡಬೇಕಲ್ಲೋ’ ಎನ್ನುತ್ತಾ ಅಲ್ಲೇ ತಲೆಯೂರಿದ.

*****

ಗೋಕರ್ಣ ರೋಡ್ ಸ್ಟೇಶನ್ ನಲ್ಲಿ ದೊಡ್ಡಣ್ಣನ ಮಗ ಮಂಜು ಬಂದು ನಿಂತಿದ್ದ. ‘ಏನೋ ಮಂಜು, ಮೀಸೆ ಬಂದ್ ಬಿಡ್ತಲ್ಲೋ?’ ಎಂದೆ. ‘ಬಾಬಣ್ಣ ತಾ, ಬ್ಯಾಗ್ ನಂಕೋಡ್ ತಾ’ ಎಂದು ಕೊಡುವ ಮೊದಲೇ ಕಸಕೊಂಡು ಹೆಗಲಿಗೇರಿಸಿದ. ‘ಕೊಂಕಣ ರೈಲಾದದ್ದು ಎಂತ ಆರಾಂ ಮಾರಾಯ… ಅದ್ಸರಿ, ಇಲ್ಲಿಂದ್ ಹ್ಯಾಂಗ್ ಹೋಗೂದೋ?’ ಎಂದೆ. ‘ಮಾದನಗೇರಿ ಶೆಟ್ರ ಕಾರ್ ಬಾಡಿಗೆಗೆ ತಂದಿ’ ಅಂದ.

ಎತ್ತರ ಸ್ತರದಲ್ಲಿರುವ ಮಕ್ಕಿ ಗದ್ದೆಗಳನ್ನೆಲ್ಲ ಕೊಯ್ದಾಗಿತ್ತು. ಅಂಗಳ, ಕಳದಲ್ಲೆಲ್ಲ ಕುತ್ರಿ ಹಾಕಿದ್ದರು. ಹೊಂಡದ ಗದ್ದೆಗಳಲ್ಲಿ ನಂಬರ್ ತಳಿ ಭತ್ತ ಬೆಳೆದು ನಿಂತಿತ್ತು. ‘ಹಬ್ಬದ ಪಾಡ್ಯಕ್ಕೆ ಕತ್ತಿ ಹಾಕೂದೇ?’ ಅಂದ ಮಾಬ್ಲಣ್ಣ. ಇಡೀ ಅಂಗಳವನ್ನು ಸಗಣಿಯಿಂದ ಸಾರಿಸಿದ್ದಳು ಮಂಕಾಳಕ್ಕ. ಕಳದಲ್ಲಿಯ ಹುಲ್ಲು, ಅಂಗಳ ಸಾರಿಸಿದ ಸಗಣಿ, ತುಳಸೀ ಮನೆಯಲ್ಲಿಟ್ಟ ಗೊಂಡೆ ಹೂ, ತೆಣೆ ಮೇಲೆ ಹೊಯ್ದಿಟ್ಟ ಭತ್ತದ ರಾಶಿ ಇಲ್ಲೆಲ್ಲ ಸುಳಿಯುತ್ತಿದ್ದ ಗಾಳಿ ತರುತ್ತಿದ್ದ ವಾಸನೆಗೆ ಮೂಗೊಡ್ಡಿದೆ. ‘ಮಿಂದಕಂಡೇ ಬಂದ್ ಬಿಡಿ, ನಾಣ್‌ಗೀಲೆ ಬಿಸಿ ನೀರ್ ಕಾಯ್ಸಿಕ್ಕಿ’ ಎಂದಳು ಮಂಕಾಳಕ್ಕ. ‘ಬಾಬಣ್ಣ ಬಡ್ಕಾಗ್ ಹೋಗ್ಯಲ್ಲೋ’ ಎಂದಳು, ದೊಡ್ಡಪ್ಪನ ಮಗಳು ಜಯಲಕ್ಷ್ಮೀ, ಮೂರನೇ ಬಾಳಂತನಕೆ ಬಂದವಳು. ‘ಕೊಟ್ಟೆ ರೊಟ್ಟಿ ತಿಂದರೆ ಎಲ್ಲ ಸಮ ಆಗೂದ’ ಎಂದಾಗ ಎಲ್ರೂ ನಕ್ಕರು. ‘ಹ ಹ ಸಣ್ಣಿರುವಾಗೆ ಕೊಟ್ಟಿರೊಟ್ಟಿ ಕಾಯ್ ಹಾಲು ಅಂದ್ರೆ ಜೇಂವಾ ಬಿಡ್ತದ’ ಅದೆಲ್ಲಿಂದಲೋ ಬಂತು ಮಾತು. ಗೋಡೆಯ ಆ ಕಡೆಯಿಂದ ಬಂದ ಧ್ವನಿ ದೊಡ್ಡವ್ವಿಯದು ಎಂದು ತಿಳಿಯಲು ಹೊತ್ತು ಹಿಡಿಯಿತು. ಕಣ್ಣು ಮಂದಾಗಿ ಹೆಚ್ಚು ತಿರುಗಾಡಲು ಆಗದ ಅವಳನ್ನು ಅಲ್ಲೇ ಹೋಗಿ ಮಾತಾಡಿಸಿದೆ. ಮನೆಯನ್ನೇ ತೊಟ್ಟಿಲಾಗಿಸಿ ಬಹಳ ದಿನಗಳ ನಂತರ ಬಂದ ನನ್ನನ್ನು ಎಲ್ಲರೂ ತೂಗುತ್ತಿರುವಂತೆ ಅನಿಸಿತು. ದೊಡ್ಡವ್ವಿಯ ಮಡಿಲಲ್ಲಿ ಹಾಗೇ ಒರಗಿದೆ.

ಒಂದೆರಡು ದಿನದಲ್ಲೇ ಮಕ್ಕಳು ಹೊಂದಿಕೊಂಡರು. ಮಗನು ಕೇರಿ ಮಕ್ಕಳೊಂದಿಗೆ ಅಂಟು ಮಣ್ಣು ತಂದು ಬಲೀಂದ್ರನ ಮೂರ್ತಿ ಮಾಡಬೇಕಾದರೆ ಸೊಂಟ ಬಗ್ಗಿದ ಗೊಂಬೆ ಮಾಡಿ ‘ಇದು ಸಾತಜ್ಜಿ’ ಎಂದಾಗ ಎಲ್ಲರೂ ನಕ್ಕರು. ಸಾತಜ್ಜಿ ಸೊಪ್ಪು ಬೇರು ಅರೆದ ಕಂಯ್ ಮದ್ದು ಮಗನು ಕುಡಿಯದಿರಲು ಆಕೆ ಕೋಲ್ ಬಡಿಯುತ್ತ ‘ಗುಲಾಮ ಬಾ’ ಅನ್ನುತ್ತಾ ಅಟ್ಟಿಸಿಕೊಂಡು ಹೋಗಿ, ಇವನು ಇಡೀ ಕೇರಿ ಸುತ್ತುವ, ಸಾತಜ್ಜಿಯೂ ಅವನ ಹಿಂದೇ ದಂಟೂರುತ್ತ ಹೋಗುವ ದೃಶ್ಯಕ್ಕೆ ಎಲ್ಲರೂ ನಕ್ಕೂ ನಕ್ಕೂ ಕೇರಿಗೆ ಕೇರಿಯೇ ಕುಲುಕಾಡಿತು. ‘ಬಾಬಣ್ಣ ನಿನ್ನ ಮಗ ನಿನ್ನಂಗಲ್ಲ, ಹರಾಮಿಯಾಗ್ವ’ ಎಂದಳು ಪಾರು, ಮಾಬ್ಲಣ್ಣನ ಎರಡನೇ ಮಗಳು.

ಮಗಳು ಮಂಕಾಳಕ್ಕನಿಗೆ ರಂಗೋಲಿ ಹಾಕುವುದು, ನೀರ್ ತುಂಬೊ ದಿನ ಹಂಡೆಗೆ ಕಟ್ಟಲು ಹೂ ಹಿಂಡಲಕಾಯಿ ಸೇರಿಸಿ ಮಾಲೆ ಕಟ್ಟುವದು, ದೇವರ ದೀಪಕ್ಕೆ ಬತ್ತಿ ಜೋಡಿಸುವುದು, ದನಗಳಿಗೆ ಕಟ್ಟಲು ಅರಿಶಿನೆಲೆಯಲ್ಲಿ ತಿಂಬೆಲೆ ಅಡಕೆ ಹೋಳು ಸೇರಿಸಿ ಗಂಟುಕಟ್ಟೂದು ಇಂಥದಕ್ಕೆಲ್ಲ ನೆರವಾಗಿ ‘ನನ್ನ ಮಗಳೇ ಗರತಿ’ ಎಂದು ಹೊಗಳಿಸಿಕೊಂಡಳು.

ದೊಡ್ಡ ಹಬ್ಬದ ದಿನ ತುಳಸಿ ಪೂಜೆ, ಭೋರಜ್ಜಿ ಪೂಜೆ ಆದ ಮೇಲೆ ಅಂಗಳದಲ್ಲಿ ರಂಗೋಲಿ ಬಳಿದು ಕಣಗಳಲ್ಲಿಟ್ಟ ಹಿಂಡಲಕಾಯಿ ಮೆಟ್ಟಲು ಮಕ್ಕಳಲ್ಲಿ ಸ್ಪರ್ಧೆಯೇ ನಡೆಯಿತು. ಅತ್ತಿಗೆ ಅವಳ ಮದುವೆಗೆ ತಂದ, ಇನ್ನೂ ಕಾಯ್ದಿಟ್ಟುಕೊಂಡ ರೇಶಿಮೆ ಸೀರೆ ಉಟ್ಟು, ಕುತ್ತಿಗೆಗೆ ಪವನಸರ, ಬಾಜುಬಂದಿ, ಕಿವಿಗೆ ಬಟ್ಟು ಎಲ್ಲ ಧರಿಸಿ ಹಣೆಯ ಮೇಲೆ ಇಷ್ಟಗಲ ಕುಂಕುಮ ಇಟ್ಟುಕೊಂಡು ಎಲ್ಲರ ಕಾಲಿಗೂ ನೀರು ಹಾಕಿ ಆರತಿ ತೋರಿಸಿ ಹಾಡು ಹೇಳಿದಳು. ಮಂಕಾಳಕ್ಕನೂ ದನಿಗೂಡಿಸಿದಳು. ದೊಡ್ಡಣ್ಣ ಆರತಿ ತಟ್ಟೆಯಲ್ಲಿ ಬೆರಳದ್ದಿ ಎಲ್ಲರ ಹಣೆಗೆ ತಿಲಕ ಇಟ್ಟ. ಮಕ್ಕಳು ಹಿರಿಯರೆಲ್ಲರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು. ನನ್ನ ಮಗ ಸಾತಜ್ಜಿಯ ಕಾಲಿಗೆ ದೂರದಿಂದಲೇ ಅಡ್ಡ ಬಿದ್ದಂತೆ ನಟಿಸಿ ಎಲ್ಲರಲ್ಲಿ ನಗೆ ಉಕ್ಕಿಸಿದ. ಅದಾದ ನಂತರ ಎಲ್ಲ ಪೂಜಾ ಸಾಮಗ್ರಿಗಳೊಂದಿಗೆ ಕೊಟ್ಟಿಗೆಗೆ ಹೋಗಿ ದನಗಳಿಗೆ ಪೂಜೆ ಮಾಡಿದರು. ಮಂಜು ದನಗಳ ಕೊಂಬಿಗೆ ಬಣ್ಣ ಬಡಿದು ಶೃಂಗಾರ ಮಾಡಿದ್ದ. ಹೊಸ ದಾಂಬು ಹಾಕಿ, ಹೂ ಮಾಲೆ ಕಟ್ಟಿ, ಮೈಮೇಲೆ ಮುದ್ರೆಯೊತ್ತಿ ಆರತಿ ತೋರಿಸಿ ಅಕ್ಷತೆ ಬೀರಿದ ಮೇಲೆ ಕಣ್ಣಿ ಕಳಚಲಾಯಿತು. ಮಕ್ಕಳು ದ್ಯಾಂವಟಿ, ತಾಳ ಬಾರಿಸಿದಾಗ ಬೆಚ್ಚಿದ ದನಕರುಗಳು ನೆಗೆಯುವುದು, ಓಡುವುದು, ಛಂಗರಿಯುವುದು ನೋಡುತ್ತಿರುವಂತೆಯೇ ಕೇರಿಗೆ ಕೇರಿಯೇ ಹೋಹೋ… ಎಂದಿತು.

ಬೆಲ್ಲ ಹಾಕಿ ಕಲಸಿದ ಅವಲಕ್ಕಿ ತಿಂದಾದ ಮೇಲೆ ನಾನು ಅಟ್ಟ ಏರಿದೆ. ಅದು ನನ್ನ ಇಷ್ಟದ ಜಾಗ. ಅಲ್ಲಿಂದ ಕಾಣುವ ಬಯಲು, ಕೆರೆ, ಅಂಚಿನ ಗುಡ್ಡ ಎಲ್ಲ ನೆನಪುಗಳನ್ನು ಬೆಳಗುವವು. ಕಾಲೇಜು ದಿನಗಳಲ್ಲಿ ಇಲ್ಲೇ ಕೂತು ಬರೆಯುತ್ತಿದ್ದುದು. ತಟ್ಟನೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಕವನವೊಂದು ನೆನಪಾಗಿ ಅದೆಲ್ಲಾದರೂ ಸಿಕ್ಕೀತೇ… ಎಂದು ನಾಗಂದಿಯ ಮೇಲೆ ಕಣ್ಣಾಡಿಸಿದೆ. ಕೆಮೆಸ್ಟ್ರಿ, ಫಿಸಿಕ್ಸ್, ಹಿಸ್ಟರಿ ಪುಸ್ತಕಗಳ ನಡುವೆ ಎಲ್ಲಾದರೂ ಇದ್ದೀತು. ಸುಮಾರು ಇಪ್ಪತ್ತು ವರ್ಷಗಳಷ್ಟು ಹಿಂದೆ ಬರೆದದ್ದು. ಆ ಪತ್ರಿಕೆಯ ಪ್ರತಿಯನ್ನು ಕಾದಿರಿಸಿದ್ದು ನೆನಪಿದೆ. ಯಾಕೋ ಅದನ್ನು ಮತ್ತೊಮ್ಮೆ ಓದಬೇಕು, ಅಕ್ಷರಗಳಲ್ಲಿ ಘನಕೀಕೃತಗೊಂಡ ಆ ಭಾವನೆಗಳನ್ನು ನೇವರಿಸಬೇಕು ಅನಿಸಿತು. ಆ ಪುಲಕದ ಕ್ಷಣಗಳ ನೆನಪಿನ ತುದಿ ಮೀಟಿದರೆ ನಿಷ್ಕರುಣಿ ಮಹಾನಗರದಲ್ಲಿ ಬತ್ತಿಹೋದ ಜೀವಸೆಲೆ ಮತ್ತೆ ಒಸರೀತು. ಎಲ್ಲಿ ಮಾಯವಾದವು ಆ ಮುಗ್ಧ, ನಲಿವ ಭಾವನೆಗಳು? ಮುಂಬಯಿಯ ಲೋಕಲ್ ಟ್ರೇನುಗಳ ಅಡಿ ಸಿಕ್ಕು ಅಂಗಾತ ಮಲಗಿ ಹಳಿಗಳಾದವೆ? ಅಥವಾ ದೈತ್ಯ ಕಟ್ಟಡಗಳ ಇಕ್ಕಟ್ಟಿನಲ್ಲಿ ಉಸಿರುಗಟ್ಟುವ ಗಾಳಿಯಾದವೆ? ಅಥವಾ ಮತಲಬಿ ಸಂಬಂಧಗಳ ಮೇಕಪ್ಪಿನಲ್ಲಿ ಕಿತ್ತು ಹೋದವೆ?

ಹುಡುಕಾಡಿದರೂ ಕವನ ಎಲ್ಲೂ ಸಿಗಲಿಲ್ಲ. ಮಾಲಾ ಅಟ್ಟ ಏರಿ ಬಂದವಳು. ‘ಏನ್ರೀ ಇದು ಪುಸ್ತಕದ ರಾಶಿ ಹಾಕ್ಕೊಂಡು ಕೂತಿರಿ? ಏನ್ ಹುಡುಕುತ್ತಿದ್ದೀರಿ?’ ಎಂದಳು. ನನ್ನ ಭಾರವಾದ ಮೌನ ಕಂಡು ಅವಳಿಗೇನನಿಸಿತೋ ‘ನಾನಾದ್ರೂ ಹುಡುಕುತ್ತೇನೆ, ಏನದು ಹೇಳಿ ‘ ಎಂದಳು. ‘….ನನ್ನ ಪ್ರಥಮ ಪ್ರೇಮ’ ಎನ್ನುತ್ತ ಮೆಟ್ಟಿಲಿಳಿದು ಕೆಳಗೆ ಬಂದೆ.

ಮಣಿಗದ್ದೆ ಕಡೆ ಹೋಗಿ ಬರೋಣ ಅನಿಸಿತು. ಮನೆಯ ಪಶ್ಚಿಮ ದಿಕ್ಕಿಗೆ ಸುಮಾರು ಒಂದು ಮೈಲಿ ದೂರದಲ್ಲಿದೆ. ಅದು ಗದ್ದೆ, ತೋಟ, ಬೇಣ ಎಲ್ಲ ಇರುವ ಜಾಗ. ಹತ್ತಿರ ತಲಪುತ್ತಿದ್ದಂತೆಯೇ ಏನೋ ಬೋಳು ಬೋಳಾಗಿ ಕಾಣಿಸಿತು. ಅರೇ! ಮಲ್ಲಿಗೆ ಮರ ಎಲ್ಲೋಯ್ತು? ನೇರವಾಗಿದ್ದ ಮೂರಪ್ಪಿಗೂ ಮಟ್ಟದ ಮಾವಿನ ಮರವದು. ಹಣ್ಣು ಸಣ್ಣಿದ್ದರೂ ರುಚಿ ಇತ್ತು. ಮುಂಚೆ ಅದಕ್ಕೆ ಮಲ್ಲಿಗೆ ಬಳ್ಳಿ ಹಬ್ಬಿತ್ತಂತೆ, ಅದಕ್ಕೇ ಮಲ್ಲಿಗೆ ಮರ ಅಂತ ಹೆಸರು ಬಂತು ಅಂತ ಸಾತಜ್ಜಿ ಹೇಳ್ತಿದ್ದಳು. ನಾವು ಸಣ್ಣಿರುವಾಗ ಈ ಮರದ ತಂಪಲ್ಲೇ ಗುಂಪಾಗಿರುತ್ತಿದ್ದೆವು, ಮರದ ಸುತ್ತಲೂ ಸಮತಟ್ಟಾದ ಜಾಗವಿತ್ತಾದರಿಂದ ಅದೇ ಆಟದ ಮೈದಾನವಾಗಿತ್ತು. ಪ್ರತಿ ವರ್ಷ ಕಬ್ಬಿನ ಗಾಣ ಹಾಕೋದು ಈ ಮರದ ಕೆಳಗೆ ಆಗಿತ್ತು. ಆಲೆಮನೆ ಶುರುವಾಯ್ತು ಅಂದ್ರೆ ಇಪ್ಪೀ ರಾಶಿಯೇ ನಮ್ಮ ಸಿಂಹಾಸನ. ಅಲ್ಲಿ ಕೇಳಿದ ಕಥೆಗಳು, ಹಾಡುಗಳು, ಹಗರಣಗಳು ಅದೆಷ್ಟೋ! ಅಂಥ ಆ ಮರ ಎಲ್ಲೋಯ್ತು? ಕೆಳಗೆ ದೊಡ್ಡಣ್ಣ ದೇವು ಗೌಡನ ಹತ್ತಿರ ಏನೋ ಮಾತಾಡ್ತಿದ್ದ. ಅಲ್ಲಿಗೆ ಹೋಗಿ ‘ಮಲ್ಲಿಗೆ ಮರಕ್ಕೆ ಏನಾಯ್ತಣ್ಣ?’ ಎಂದೆ.

‘ಅದ್ರ ಮಾಲಕಿಗೆ ಕುಟ್ಟೆ ಕಡಸ್ ಹಾಕ್ದೆ’ ಅಂದ. ನನ್ನ ಹೊಟ್ಟೆಯಲ್ಲಿ ಕರಗಸ ಹಾದಂತಾಯಿತು. ‘ಅಂಥ ಚಂದದ ಮರ ಕಡಸೋಕೆ ಏನಾಗಿತ್ತು? ನಂಗೊಂದ್ ಮಾತ ಕೇಳಬೇಕಲ್ಲ?’ ಅಂದೆ. ನನ್ನ ಸಿಟ್ಟು ಎಷ್ಟೇ ತಡಕೊಂಡರೂ ಮಾತಿನಲ್ಲಿ ಹೊರಬಿತ್ತು.

‘ಅಲ್ವೋ, ಆ ಹುಳಿ ಅಪ್ಪಿ ಮರ ಕಡಸುಕೆ ನಿನ್ನ ಕೇಳಬೇಕಾಗತ್ತೇನೋ? ದೊಡ್ಡದೇ ಆಯ್ತಲ್ಲ ತಮ್ಮ. ನೀನ ಬಾಳ ಕಾಲದ ನಂತ್ರ ಊರಿಗೆ ಬಂದಗೇ ನಂಗುತ್ತಾಯ್ತ, ಪಾಲು ಕೇಳೂಕೆ ಬಂದವ ಅಂದೆ’ ಎಂದ. ನಾನು ಶಾಕ್ ಆಗಿ ಏನೋ ಹೇಳಲು ನೋಡುತ್ತಿರುವಂತೆಯೇ ‘ನೋಡ ಆ ಮರದ ದುಡ್ಡು ನಾನೇನ್ ತಿಂದ್ ಬಿಡ್ಲಲ್ಲ. ಅಲ್‌ನೋಡ್, ಆ ತೆಂಗಿನ ತ್ವಾಟ ಮಾಡಸ್ದೆ. ಬಾವಿಗೆ ಪಂಪ್ ಹಾಕಸ್ದೆ. ನಿಮ್ಮ ಮಾಬ್ಲಣ್ಣನ ಎರಡನೇ ಮಗಳಿಗೆ ಎರಡೆಳೆ ಚಿನ್ನದ ಸರ ಮಾಡ್ಸ್ ಹಾಕ್ದೆ. ನೀ ಏನ್ ನಮ್ಮ ಕಷ್ಟ ಸುಖ ಕೇಳೂಕ್ ಬಂದ್ಯಾ?’ ಅಂದ.

ನನಗೆ ದುಃಖ ಉಮ್ಮಳಿಸಿ ‘ಅದ್ಕಲ್ಲಣ್ಣ …..’ ಅಂದು ಮುಂದೆ ಮಾತೇ ಹೊರಡದೇ ಅಲ್ಲಿಂದ ಜಾಗಬಿಟ್ಟು ಬೇಲಿ ದಾಟಿ ಬೇಣದ ಹಾದಿಯಲ್ಲಿ ಬಿರುಸಾಗಿ ನಡೆದು ಕಟ್ಟೆ ಕಡೆಹೋಗಿ ಇಳ್ಳೀ ಮರದ ಕೆಳಗೆ ಮಲಗಿಬಿಟ್ಟೆ.

ತಿರುಗಿ ಬರುವಾಗ ತಲೆ ವಿಪರೀತ ಸಿಡಿಯುತ್ತಿದ್ದರಿಂದ ಇವಳಿಗೆ ಒಂದ್ ಕಪ್ ಚಹ ಮಾಡು ಎಂದು ಹೇಳಿ ಅಟ್ಟ ಏರಿ ಕಿಟಕಿಗೆ ಎದುರಾಗಿ ಕೂತೆ. ಚಹ ತಂದವಳು ಇಲ್ಲೇ ಕೊಡು ಎಂದರೂ ಅಲ್ಲೇ ಟೇಬಲ್ ಮೇಲಿಟ್ಟು ಕೆಳಗಿಳಿದು ಹೋದಳು. ಏನಾಯ್ತವಳಿಗೆ? ಎದ್ದು ಚಾ ತರಲು ಹೋದಾಗ ಟೇಬಲ್ ಮೇಲೇನೋ ಕಾಗದ. ತಿಳಿ ನೀಲಿ ಕಾಗದದ ಮೇಲೆ ಕಡು ನೀಲಿ ಬಣ್ಣದ ಮುದ್ದಾದ ಅಕ್ಷರಗಳು! ಕಣ್ಣಾಡಿಸಿದೆ. ಕೊನೇ ಎರಡು ಸಾಲುಗಳ ಮೇಲೆ ಕಣ್ಣು ಸ್ಥಿರವಾಯಿತು.

ಎಲ್ಲೇ ಇರಲಿ, ಹೇಗೇ ಇರಲಿ
ನಿಮ್ಮ ನಗುವಿನಲಿ ನನ್ನ ನೆನಪಿರಲಿ
-ರೇಣು

ಹೆಸರಿನ ಅಡಿಯಲ್ಲಿ ಪುಟ್ಟ ಮಿಂಚುವ ನವಿಲು ಗರಿ ಅಂಟಿಸಿದೆ. ಯಾರ ಕವನದ ಸಾಲುಗಳಿವು? ಯಾರು ಮಾರಾಯ ಈ ರೇಣು? ಆ ಕ್ಷಣ ಆ ಕಾಗದ ಅದೇನೋ ಅಮೂಲ್ಯವಾದದ್ದೆನಿಸಿತು. ಕಿಟಕಿಯಾಚೆ ಕಾಣುವ ಬಯಲಲ್ಲಿ ಕೂತ ಬೆಳ್ಳಕ್ಕಿಗಳು ರೇಣುವಿನ ಚಿತ್ರ ಬಿಡಿಸಿದವು.

ಆಗಷ್ಟೇ ಎಂ.ಎಸ್ಸಿ ಮುಗಿಸಿ ಹಾವೇರಿಯ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿದ್ದ ದಿನಗಳು. ಸೂರ್ಯಕಾಂತಿಯ ಸವರತ್ತ ಬೀಸುವ ಚುಮು ಚುಮು ತಂಗಾಳಿಯ ಹಿತ ನೀಡುವ ಪರಿಸರದ ನಡುವೆ ಕೆಮಿಸ್ಟ್ರಿಯನ್ನು ರಮ್ಯಗೊಳಿಸಿ ಪಾಠ ಮಾಡುವ ಹುರುಪು. ಬಿ.ಎಸ್ಸಿ ಎರಡನೇ ವರ್ಷದ ಆ ಹುಡುಗಿ, ಹೌದು ಅವಳೇ ರೇಣು, ಕೋಲು ಜೀವದವಳು. ದೇಹದಲ್ಲಿ ಸರಿ ಉಬ್ಬು ತಗ್ಗುಗಳಿಲ್ಲದ್ದಿದ್ದರೂ ಚಿಮ್ಮುವ ಉತ್ಸಾಹ. ಲ್ಯಾಬ್‌ನಲ್ಲಿ ಓಡಾಡುತ್ತಿದ್ದರೆ ಇಡೀ ವಾತಾವರಣಕ್ಕೇ ಜೀವ ತುಂಬುತ್ತಿದ್ದಳು. ರೇಣುವಿನ ಗೆಳತಿ ವಿದ್ಯಾ ಪಾಟೀಲ ನಿಜಕ್ಕೂ ಚಂದ ಇದ್ದಳು. ಅವಳ ಸೌಂದರ್ಯದ ಬಗ್ಗೆ ತರುಣ ಉಪನ್ಯಾಸಕರ ನಡುವೆ ಒಗ್ಗರಣೆ ಅವಲಕ್ಕಿ ಜತೆಗೆ ಚಾ ಕುಡಿವ ಹೊತ್ತಲ್ಲಿ ಗರಂಗರಂ ಚರ್ಚೆ ಕೂಡ ನಡೀತಿತ್ತು. ಉತ್ತಮವಾಗಿ ಪಾಠಮಾಡಿ ಅವಳನ್ನು ಇಂಪ್ರೆಸ್ ಮಾಡುವ ಆ ಚಟದಿಂದ ನನಗೂ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಆದರೆ ಅದು ಹ್ಯಾಗ್ರಿ ಇದು ಹ್ಯಾಗ್ರಿ ಎಂದು ಹಜಾರ ಡೌಟ್‌ಗಳನ್ನಿಟ್ಟುಕೊಂಡು ಬರುವ ರೇಣುಗೆ ಅವಳ ಧ್ವನಿ ಅಣಕಿಸಿ ರೇಗಿಸುವುದು ಮಜವಾಗುತ್ತಿತ್ತು. ಕೋಪಿಸಿಕೊಳ್ಳುವಳು. ಮಾತು ಬಿಡುವಳು. ಮತ್ತೆ ಬರುವಳು. ಅದೇ ಮಿಂಚುವ ಕಣ್ಣುಗಳೊಂದಿಗೆ. ಜೀವ ತುಂಬುವ ನಡಿಗೆಯೊಂದಿಗೆ.

ಇವೆಲ್ಲ ಅಲ್ಲಿಗೇ ಮುಗಿದಿತ್ತು. ಯಾಕೆಂದರೆ ಕೆಲ ದಿನಗಳಲ್ಲಿ ನಾನು ಹಾವೇರಿಗೆ ವಿದಾಯ ಹೇಳಿ ಮುಂಬಯಿಗೆ ಬಸ್ಸು ಹತ್ತಿದ್ದೆ. ವಿದ್ಯಾರ್ಥಿಗಳು ನೊಂದುಕೊಂಡಿದ್ದರು. ಸುದ್ದಿ ಗೊತ್ತಾಗಿ ರೇಣು ಸಣ್ಣ ಮೋರೆ ಮಾಡಿಕೊಂಡು ಆಗಾಗ ಸ್ಟಾಫ್ ರೂಮ್‌ನ ಕಿಟಕಿಯಲ್ಲಿ ಕಾಣುವಳು. ಹೊಳೆವ ಕಣ್ಣುಗಳಲ್ಲಿ ನೀರ ಹನಿ ತುಳುಕಿಸುತ್ತಾ ಏನೋ ಹೇಳಬೇಕೆಂದು ಪ್ರಯತ್ನಿಸುತ್ತಿದ್ದವಳಿಗೆ ‘ಈ ನಿನ್ನೆರಡು ಕಣ್ಣುಗಳನ್ನು ಕಿತ್ತೊಯ್ತೇನೆ ನೆನಪಿಗೆ’ ಎಂದಿದ್ದೆ. ‘ಆತರಿ, ನಿಮ್ಮ್ ಮುಗುಳ್ನಗು ನಂಗ್ ಕೊಟ್ ಹೋಗ್ರೀ’ ಎಂದಿದ್ದಳು.

ಹಾಗಂದಿದ್ದಳೆ? ನಾನು ಇದ್ದದ್ದು ಇಲ್ಲದ್ದನ್ನು ನೆನಸಿಕೊಂಡು ಸುಖ ಪಡುತ್ತಿದ್ದೇನೆಯೇ? ಪರವಾಗಿಲ್ಲ. ಈ ಎಳೆ ಹಿಡಿದು ಹೀಗೇ ಮುಂದುವರಿದರೆ ಈಗಲೂ ಒಂದು ಪುಟ್ಟ ಪ್ರೇಮ ಕಥೆ ಬರೆಯಬಲ್ಲೆ ಎನಿಸಿ ಮನಸು ಹಿಗ್ಗಿತು.

ಅಲ್ಲಲ್ಲಿ ತುಂಡು ಮೋಡಗಳು ಕಪ್ಪುಗಟ್ಟಿದ್ದವು. ಮಳೆ ಬರುವ ಲಕ್ಷಣ ಕಾಣಿಸಿತು. ಅಟ್ಟದ ಮೇಲಿಂದ ಮಳೆ ನೋಡುವುದು ಎಂಥ ಚಂದ. ಮಕ್ಕಳನ್ನು ಮೇಲೆ ಕರೆದೆ. ನನ್ನ ದನಿಯ ಹುರುಪು ನನಗೇ ಅಪರಿಚಿತ ಎನಿಸಿತು. ಗುಡ್ಡದ ಸಾಲುಗಳಲ್ಲಿ ಕಾಲು ಕೊಟ್ಟ ಮಳೆ ಬಯಲಿಗಿಳಿದು ಧಾರೆಯಾಗಿ ಓಡಿ ಬರುತ್ತಿತ್ತು. ಅಲ್ಲಿ ಸುರಿವ ಸದ್ದು ಮಳೆಗಿಂತ ಮೊದಲೇ ತಲುಪಿ ಅಲೌಕಿಕ ಅನುಭವ ನೀಡುತ್ತಿತ್ತು.

ಬಂದ ವೇಗದಲ್ಲೇ ಮಳೆ ಹೋಗೇ ಬಿಡ್ತು. ‘ಗದ್ದೆ ಕುಯ್ಯುವವವ್ರಿಗೆ ತ್ರಾಸ ಕುಡೂಕ್ ಬಂತ, ಕಾಡಮಳೆ’ ಕೆಳಗೆ ಸಾತಜ್ಜಿ ಗೊಣಗಿಕೊಂಡಳು. ಝಗ್ಗನೆ ಬೀರಿದ ಬಿಸಿಲಲ್ಲಿ ಕಂಚಿ ನೀರು ಮುತ್ತಾಗಿ ಉದುರುತ್ತಿತ್ತು. ಮಕ್ಕಳೆಲ್ಲ ಕೆಳಗಿಳಿದು ಅಂಗಳದ ನೀರಲ್ಲಿ ಪಚಪಚ ಆಟ ಶುರು ಮಾಡಿದ್ದರು. ನನ್ನ ಮಗಳ ಕೈಯಲ್ಲಿ ನೀಲಿ ಕಾಗದದ ದೋಣಿ. ಹಿತ್ತಲ ಕಡೆಗೆ ಹರಿಯುತ್ತಿದ್ದ ನೀರಲ್ಲಿ ತೇಲಿ ಬಿಟ್ಟಳು. ಕಾಗದದಲ್ಲಿಯ ರೇಣುವಿನ ಅಕ್ಷರಗಳು ಜೀವ ತಾಳಿ ಬಿಡಿ ಹೂಗಳಾಗಿ ತೇಲುತ್ತಾ ಸಂಜೆಯ ಇಳಿ ಬಿಸಿಲಿನಲ್ಲಿ ಹೊಳೆಯುತ್ತಿವೆ…

ಹೊರ ಜಗುಲಿಯ ಕಟಾಂಜನ ಹಿಡಿದು ನಿಂತವನಿಗೆ ಯಾರೋ ಸನಿಹ ನಿಂತಂತೆ ಅನಿಸಿ ತಿರುಗಿದರೆ ಮಾಲಾ! ಸೂರ್ಯನ ಕಿರಣಗಳು ಅವಳ ಮುಖವನ್ನು ಅಂದವಾಗಿಸಿವೆ. ಮೌನವಾಗಿ ನಿಂತ ಅವಳ ಸೊಂಟದ ಸುತ್ತ ಕೈ ಬಳಸಿ ‘ಯಾರ ನೆನಪಲ್ಲಿ ತೇಲುತ್ತಿರುವೆ ಪ್ರಿಯೇ?’ಎಂದೆ. ಅವಳೂ ಅಷ್ಟೇ ನಾಟಕೀಯವಾಗಿ ‘ನನಗೆ ಸದಾ ನಿನ್ನದೇ ಚಿಂತೆ ನಲ್ಲ’. ಎಂದಳು. ಇಬ್ಬರೂ ನಕ್ಕೆವು. ಇನ್ನಷ್ಟು ಹತ್ತಿರ ಸರಿದು ಅವಳ ಗಲ್ಲ ಮೇಲೆತ್ತಿದೆ. ‘ಏನು, ಮೂಡ್‌ನಲ್ಲಿದ್ದೀರಿ?’ ಎಂದಳು. ‘ಈ ಮಣ್ಣಿಗೇ ಅಂಥ ಗುಣ ಉಂಟು ಚಿನ್ನ’ ಎಂದು ಕೆನ್ನೆ ತಟ್ಟಿದೆ. ‘ನೀವು ಹೀಗೇ ಇರೋದಾದ್ರೆ ನಾನೂ ಈ ಮಣ್ಣಲ್ಲೇ ಇರ್ತೀನಿ, ಮತ್ತೆ ನಿಮ್ಮ ಗಂಟು ಮುಖ ನೋಡಲು ನಂಗೆ ಮನಸ್ಸಿಲ್ಲ’ ಅಂದಳು. ‘ನಂದು ಗಂಟು ಮುಖ? ನಿನ್ನ ಮುಖ ನೋಡ್ಕಂಡಿಯಾ ಕನ್ನಡೀಲಿ?’ ಎಂದೆ.

‘ಮತ್ತೇನ್ರಿ? ಗಳಿಗೊಂದು ಮೂಡ್ ನಿಮ್ದು! ನಿಮ್ಮ ಮೂಡ್ ಇರೋ ಹಾಗೆ ಉಳಿದವ್ರೂ ಇರಬೇಕೆಂದು ಬಯಸ್ತೀರಿ. ಅದು ಹೇಗೆ ಸಾಧ್ಯ ಹೇಳ್ರಿ?’ ಎಂದಳು.

‘ಸಾಕ್ ಸಾಕು, ಇಲ್ಲೂ ಮತ್ತೆ ಜಗಳ ಬೇಡ. ಸಮಾಧಾನಕ್ಕೆ ಸಮುದ್ರವೂ ಹತ್ತಿರ ಇಲ್ಲ. ಯಂಕ್ಟಣ್ಣನ ಪಾನಕನೂ ಇಲ್ಲ’ ಎಂದೆ. ಗಟ್ಟಿಯಾಗಿ ನಕ್ಕೆವು. ಕೆಳಗೆ ಮಕ್ಕಳೆಲ್ಲ ಕಾಗದದ ದೋಣಿಯನ್ನು ಆಚೆ ಮುಟ್ಟಿಸುವ ಹಟ ತೊಟ್ಟಿದ್ದರು.

*****

ಹಬ್ಬದ ಗೌಜಿ ಎಲ್ಲ ತೀರಿ ಎಲ್ಲರೂ ಹೊಂಡದ ಗದ್ದೆಗಳಲ್ಲಿ ಬೆಳೆದು ನಿಂತ ನಂಬರ್ ತಳಿಯನ್ನು ಕೊಯ್ಯಲು ಹಣಕಿದ್ದರು. ತಾರಿಬಾಗ್ಲ ಕಡೆಗೆ ಹೊರಟಿದ್ದೆ. ಅಲ್ಲಿ ತಾರಿದಾಟಲು ಅಂಬೇರ ಗೋಯ್ದನಿಗೆ ದೋಣಿ ತರಲು ಕೂ ಹಾಕುವುದು, ಅಂಬೇರ ಹಿತ್ಲ, ಗಂಗಾವಳಿ ನದಿ ತಿರುಗುವ ಮಡಿ ನೀರಲ್ಲಿ ಮೀನು ಹಿಡಿಯಲು ಪಾತಿ ದೋಣಿ ಮೇಲೆ ಕೂತಿರುವ ದೃಶ್ಯ ಎಲ್ಲ ನೆನೆಯುತ್ತ ನಡೆಯುತ್ತಿದ್ದೆ. ಯಂಕ್ಟಣ್ಣನಿಗೂ ಈ ಜಾಗ ತುಂಬಾ ಇಷ್ಟವಾದದ್ದು. ಊರು ಬಿಟ್ಟು ಮುಂಬಯಿಗೆ ಬರುವಾಗ ತಾರಿ ದಾಟಿ ತಿರುಗಿ ನಿಂತು ಕೊನೆಯ ಬಾರಿ ಊರು ನೋಡಿದ್ದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿರುತ್ತಾನೆ.
ಬುಗುರಿ ಮರದ ಬುಡಕ್ಕಿರುವ ಜಟಕವನ್ನು ಸುತ್ತಾಕಿ ದಣಪೆ ದಾಟುವಾಗ ಗಾವಂಕರ ರಾಮಚಂದ್ರಣ್ಣ ಸಿಕ್ದ. ‘ತಮ್ಮ ಎತ್ಲಾಗೋ? ನೀ ಬಂದದ್ದ ಸುದ್ದಿಯಾಗತ ಬಾರೋ ಮನಿಗೆ’ ಎಂದ. ಹೆಸರು ರಾಮಚಂದ್ರನೋ ರಾಮಕೃಷ್ಣನೋ ಸಮ ನೆನಪಾಗದೇ ಅಣ್ಣ ‘ಹ್ಯಾಂಗಿವೆ?’ ಅಂದೆ. ಮಜಬೂತ ಆಳಾಗಿದ್ದ ರಾಮಚಂದ್ರಣ್ಣನ ದೇಹದ ಮೇಲೆ ಕಾಲ ಉರುಳಿದ ಗುರುತುಗಳು ಅಚ್ಚೊತ್ತಿವೆ. ‘ಇಂವೆ ಹಿಂಗೆ’ ಅಂದ. ಮಾತಿನಲ್ಲಿ ದುಃಖದ ಹೊರೆ ಇಟ್ಟುಕೊಂಡವನಂತೆ ಕಂಡ.

‘ಹುಲಿಯಾಗಿದ್ದಣ್ಣ ಮಕ್ಕಳ ಕಾಲ್ದಲ್ಲೆ ಬಾಯ್ಮುಚ್ಕಂಡಿರು ಪರಿಸ್ಥಿತೆ’ ಎಂದು ಅಲ್ಲೆ ಪಾಗಾರಕ್ಕೆ ಆಧರಿಸಿಕೊಂಡ.

‘ಮಗಳ ಬಾವಿಕೇರಿಗೆ ಲಗ್ನ ಮಾಡ್ಕುಟ್ಟದೆ. ನಮ್ಮ ಹಣೇಬರ ನೆಟ್ಟಗಿಲ್ಲ. ಸಂಬಂಧ ಸರಿಬರ್ದೇ ಗಂಡನ ಮನಿ ಬಿಟ್ಟ್ ಬಂದುಳ್ಕಂಡಿದ. ಹಿರಿಮಗ ಲಗ್ನ ಆದದ್ದೇ ಬ್ಯಾರೆ ಆದಾ. ಕಿರಿ ಮಗ ಬಿ.ಎ. ಮಾಡ್ಕಂಡೆ ಪೋಲಿ ತಿರ್ಗತ್ಯಾ… ನೌಕರೀನೂ ಇಲ್ಲ. ಇತ್ಲಾಗೆ ಗದ್ದಿ ಕೆಲಸಾನೂ ಮಾಡುದಿಲ್ಲ’ ಅಂದು ದುಖಃದ ಕತೆಯನ್ನು ಬಿಚ್ಚಿದ.

‘ತಮ್ಮ, ಅಂವಗೆ ಮುಂಬಯಿಲ್ಲೆ ಏನಾದ್ರೂ ಕೆಲ್ಸ ಕುಡ್ಸುಕಾಗುದೆ, ಮಾತ್ರ ನೋಡ’ ಅಂದ.

ನನಗೆ ಏನು ಹೇಳೋದೋ ತಿಳಿಯಲಿಲ್ಲ. ನನ್ನ ಮೌನ ಕಂಡು ‘ನಿಮ್ಮ ಮನಿಲ್ಲುಳುದ ಬ್ಯಾಡ್ವಾ, ಬ್ಯಾರೇ ಉಳೀಲೆ’ ಅಂದ. ‘ಅದಕ್ಕಲ್ಲ ರಾಮಚಂದ್ರಣ್ಣ, ಅದಕ್ಕಲ… ಮುಂಬಯಿ ಜೀವನ ಯಾರಿಗೂ ಬ್ಯಾಡ್ವೊ’ ಎಂದೆ.

‘ಮತ್ತೆ ಹಿಂಗೇ ಖಾಲಿ ತಿರ್ಗುದೇ ಲೈಕಂತೀ?’ಅಂದ.

‘ಆಯ್ತಾಯ್ತು ರಾಮಚಂದ್ರಣ್ಣ, ಯಂಕ್ಟಣ್ಣನಿಗೆ ಹೇಳ್ ಎಲ್ಲಾದ್ರೂ ಸೇರ್ಸೂಕಾತಿದೋ ನೋಡ್ವ’ ಎಂದು ಸಮಾಧಾನಿಸಲು ನೋಡಿದೆ.

‘ಯಾವ ಯಂಕ್ಟಣ್ಣ? ಕೆಳಮನಿ ಯಂಕ್ಟ? ಆ ಬೋಳಿಮಗ್ನ ನೌಕರೀ ಬ್ಯಾಡ್ವೋ. ನನ್ ಮಗ ಇಲ್ಲೇ ಭಿಕ್ಕಿ ಬೇಡದ್ರೂ ಅಡ್ಡಿಲ್ಲ. ಅಂವನ ಹಲ್ಕಟಗಿರಿ ನಿಂಗುತ್ತಿಲ್ಲ?’ ಅಂದ.

‘…………..’

‘ಗುಣವಂತನ ಮಗಳಿಗೆ ಹೊಟ್ಟಿ ಮಾಡ್ ರಾತ್ರೋರಾತ್ರಿ ಓಡೋದ್ ಫಟಿಂಗ್ ಅಂವ ‘.

‘ಯಂ……… ಕ್ಟ……… ಣ್ಣ !?’

‘ಅಂವ ನಿಂಗೇನೋ ದೊಡ್ ಮನಸ್ಯ ಆಗರ‍್ವಾ. ಒಬ್ಬ ಹೆಣ್ಣಿನ ಜನ್ಮನೇ ಹಾಳಮಾಡ್ದ ನೀಚ. ಅದ್ಕೇ ಊರ್ ಬಿಟ್ಟಾಗಿಂದೆ ಪರತ ಮೊಕ ತೋರಸಿಲ್ಲ ಅಂವ. ಶೆಶ್ಯೆ….. ಅಂತವ್ನ ಉಪಕಾರ ಬ್ಯಾಡಾ ನಂಗೆ’ ಎನ್ನುತ್ತ ಹೊರಟೇ ಹೋದ.

ನಾನು ತಾರಿಬಾಗ್ಲ ತಲುಪಲಿಲ್ಲ.

*****

ಸಾತಜ್ಜಿ ಚಿಪ್ಪಿಕಲ್ಲು ಬೆರಕೆ ಹಾಕಿ ಮಾಡಿದ ಬಸಲೆ ಸೊಪ್ಪಿನ ಹುಳ್ಗ, ಬಿಸಿ ಗಂಜಿ ಸೊರಸೊರ ಉಂಡು ಪೂರ್ತಿ ಈ ಮಣ್ಣಿಗೆ ಸೇರಿದ ಭಾವನೆಯಿಂದ ತೃಪ್ತನಾದೆ. ಖುರ್ಚಿಯಲ್ಲಿ ಕೂತವನಿಗೆ ಕೂರು ಒತ್ತಿಬರುವ ಪರಿಯನ್ನು ಆನಂದಿಸುತ್ತಿರಲು ಯಾರೋ ‘ಕಬ್ಬಿನ ಗದ್ದೆಗೆ ದನ ಹೊಕ್ಕವಲ್ಲೋ, ಬರ‍್ರೋ’ ಎಂದು ಕೂಗಿದ್ದು ಗಕ್ಕನೆ ಎದ್ದು ಕುಳ್ಳಿಸಿತು. ಲುಂಗಿ ಸಮ ಮಾಡಿಕೊಳ್ಳುತ್ತ ಅಟ್ಟದಿಂದ ದಡದಡ ಇಳಿದು ಅಂಗಳಕ್ಕೆ ಬಂದು ‘ಅಲ್ಲೆಲ್ಲೋ ಗದ್ದೆಗೆ ದನ ಹೊಕ್ಕವಂತಲ್ಲೋ’ ಎಂದೆ. ಆರಾಣೆ ಬಿಸಿಲ ಝಳಕ್ಕೆ ಯಾರೂ ಲಕ್ಷ್ಯ ಕೊಟ್ಟಂತೆ ಕಾಣಲಿಲ್ಲ. ಹಿಂದಾದರೆ ಇಂಥ ಸುದ್ದಿ ಊರಿಗೆ ಊರನ್ನೇ ಅಲುಗಾಡಿಸುತ್ತಿತ್ತು. ನಾನು ದಣಪೆ ದಾಟಿ ರಸ್ತೆಗಿಳಿದು ಮುರ್ಕಿಯಲ್ಲಿರುವ ಅಂಗಡಿಯಲ್ಲಿ ಕೂತವರಿಗೆ ‘ಅಲ್ಲೆಲ್ಲೋ ಕಬ್ಬಿನ ಗದ್ದೆಗೆ ದನ ಹೊಕ್ಕವಂತಲ್ರೋ, ಮಾತ್ರ ಹೋಗ್ರೋ’ ಎಂದೆ. ಸಿಗರೇಟ್ ಧಂ ಎಳೆಯುತ್ತಿದ್ದ ಸೀತಾರಾಮ, ಕವಳ ಹಾಕುತ್ತಿದ್ದ ತಿಪ್ಪಣ್ಣ, ಕೋಲ್ಡ್ ಕುಡಿತಿದ್ದ ಕಮಲಾಕರ ಎಲ್ಲರೂ ಹೋ ಹೋ ಹೋ ಎಂದು ದೊಡ್ಡಕ್ಕೆ ನಕ್ಕರು.

ಇದುವರೆಗೆ ಗುಟಕಾ ಪ್ಯಾಕ್‌ಗಳ ಮಾಲೆಗಳ ಹಿಂದೆ ಅದೃಶ್ಯರಾಗಿದ್ದ ಅಂಗಡಿ ಶೆಟ್ರು ‘ಊರಲ್ಲಿ ಕಬ್ಬು ನೇಡೂದ್ ಬಿಟ್ಟು ಇಪ್ಪತ್ತು ವರ್ಷಾಯ್ತು, ದನ ಹುಕ್ಕುದು ಹ್ಯಾಂಗೆ?’ ಅಂದ್ರು. ‘ಮತ್ಯಾರೋ ಹಂಗೆ ಕೂಗದ್ರಲ್ರಿ ಶೆಟ್ರೆ’ ಎಂದೆ. ‘ ಅವ್ನು ಗುಬ್ಬಿ ಮನೆ ಗಣಪತಿ. ಅಂವನ ತಲಿ ಸಮ ಇಲ್ದೆ ಸುಮಾರ ವರ್ಷಾಯ್ತು. ಹತ್ತಿಪ್ಪತ್ತ ವರ್ಷದ ಹಳೆ ಮಾತೆ ಯಾವಾಗೂ ಹೇಳ್ಕಂತೆ ತಿರ್ಗತ್ಯ’ ಅಂದರು.

‘ಮೊನ್ನೆ ಶಾಲೆ ಕಾರ್ಯಕ್ರಮಕ್ಕೆ ನಿಮಗೆ ಕರೆದಾಗೂ ನಮ್ಮಂಗಡಿಯಿಂದ ಅತಿಥಿಗಳಿಗೆ ಕೋಲ್ಡ ಡ್ರಿಂಕ್ಸ್ ತರಿಸಿದ್ದು ನೋಡಿ ‘ಇದೆಲ್ಲ ಬಿಡಿ, ಮನೆಗೆ ಬಂದವ್ರಿಗೆ ಬೆಲ್ಲ ನೀರು ಕೊಡಿ’ ಅಂತ ಭಾಷಣ ಮಾಡಿದ್ರಿ ಅಂತೆ, ಊರಲ್ಲಿ ಕಬ್ಬು ಬೆಲ್ಲ ಹೋಗಿ ಹತ್ತಿಪ್ಪತ್ತು ವರ್ಷಾಯ್ತು. ಯಾವ ಕಾಲದಲ್ಲಿದ್ದೀರಿ ನೀವು? ಕಾಲ ಮುಂಬೈನಲ್ಲಿ ಮಾತ್ರ ಬದಲಾಗ್ತದೆ ಅಂತ ತಿಳಿದ್ರೋ?”ಎಂದಾಗ ಎರಡನೇ ರೌಂಡು ನಗು ಶುರುವಾದ್ದರಿಂದ ಹಗುರ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಅಲ್ಲೆಲ್ಲೋ ಗುಬ್ಬಿ ಮನೆ ಗಣಪತಿ ಮತ್ತೇನೋ ಕೂಗುತ್ತಿರುವುದು ಪ್ರೇತ ಧ್ವನಿಯಂತೆ ಕೇಳಿಸಿ ಭಯವಾಗಿ ಮನೆಯತ್ತ ಬಿರಬಿರನೆ ಹೆಜ್ಜೆ ಹಾಕಿದೆ.

*****

‘ತುಳಸೀ ಹಬ್ಬಕ್ಕೆ ಇರ್ತೀ ಅಂದಂವ ಇದ್ದಕ್ಕಿದ್ದಂಗೆ ತಯಾರಾಗೇ ಬಿಟ್ಯಲ್ಲೋ’ ಎಂದಳು ಸಾತಜ್ಜಿ. ನಾಗಂದಿ ಮೇಲಿದ್ದ ಸಂದೂಕ ಇಳಿಸಿ ತಡಕಾಡಿ ಅಲ್ಲಿದ್ದ ಕಿಣಿಕಿಣಿ ಮಾಡುವ ಸಣ್ಣ ಗಂಟೆಯೊಂದನ್ನು ನನ್ನ ಮಗನಿಗೆ ನೀಡಿ ಇಬ್ಬರೂ ಕದನ ವಿರಾಮ ಮಾಡಿಕೊಂಡರು. ‘ಆಯ್ತಾರೆ ಕೋಳಿ ಆಸಿ ಮಾಡ್‌ಬೇಕಂತೆ ಇದ್ದದೆ…. ನೀವ್ ಹೋಗೂದೆ ಗುತ್ತಿಲ್ಲ ನಂಗೆ’ ಎಂದು ಮಂಕಾಳಕ್ಕ ವ್ಯಥೆ ಪಟ್ಟಳು. ‘ಹುರಿಯಕ್ಕಿ ಉಂಡಿನಾದ್ರೂ ಮಾಡಕುಡ್ತಿ’ ಎಂದು ಅವಳು ಅಕ್ಕಿ ಬೀಸುವುದೇನು, ಬೆಲ್ಲದ ಹದ ಹಿಡಿಯುವುದೇನು, ಉಂಡಿ ಕಟ್ಟುವದೇನು!

ಕಾರಿನಲ್ಲಿ ಕೂತು ಹೊರಗೆ ದಿಟ್ಟಿಸಿದೆ. ಅಮ್ನೋರ ಮನೆ, ಕರಬಲ ಗಿಡ, ಹಳದಿ ಹೂಗಳು, ಆಚಾರಿ ಮನೆ ಎಲ್ಲಾ ದಾಟಿ ಹೋದವು. ರಸ್ತೆ ಗುಂಟ ಸಾಗುವ ಗಂಗಾವಳಿ. ಅಲ್ಲಿಂದ ಬೀಸುವ ತಂಗಾಳಿ. ಟಾರ್ ರಸ್ತೆ ತಲುಪಿದಾಗ ಕಣ್ಣು ಮಚ್ಚಿದೆ. ಪಕ್ಕದಲ್ಲಿ ಮಾಲಾ ಕೂತಿದ್ದಾಳೆ. ಅಂಗೈಯನ್ನು ಮೆತ್ತಗೆ ಸ್ಪರ್ಶಿಸಿದಂತೆ ಅನಿಸಿತು. ಮಾಲಾಳೋ ಅಥವಾ ಅವಳ ಲೆದರ್ ಬ್ಯಾಗೋ ನೋಡಲಿಲ್ಲ.

ರೈಲು ಸರಿಯಾದ ಸಮಯಕ್ಕೆ ಬಂದಿತ್ತು. ಮಂಜು ಸಾಮಾನೆಲ್ಲ ಒಳಗಿಟ್ಟು ಕೆಳಗಿಳಿದು ಕಿಟಕಿಯಿಂದ ಮುಖ ತೋರಿಸುತ್ತ ‘ಮತ್ತೆ ಬರ್ತಾ ಇರಿ ಬಾಬಣ್ಣ’ ಎಂದು ಮರೆಯಾದ.

ನನ್ನ ಮಗಳು ಮಂಕಾಳಕ್ಕ ಕೊಟ್ಟಿದ್ದ ತುಳಸೀ ಸಸಿಯನ್ನು ಎರಡೂ ಕರಗಳಲ್ಲಿ ಹಿಡಿದು ಅದನ್ನು ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ಹೊತ್ತಿದ್ದಳು.

*****

(ರಾಜೀವ ನಾರಾಯಣ ನಾಯಕ)

ಒಂದು ಕಾಲದಲ್ಲಿ ವಿದ್ಯುತ್ತು, ಬಸ್ ಸಂಚಾರ ಇಲ್ಲದಂಥ ಹಳ್ಳಿಯಲ್ಲಿ ಬಾಲ್ಯ ಕಳೆದು, ಚಿಕ್ಕ ಪಟ್ಟಣ ಮತ್ತು ನಗರಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ನಾನು ಪ್ರಸ್ತುತ ಉದ್ಯೋಗ ನಿಮಿತ್ತ ಮಹಾನಗರವಾಸಿಯಾಗಿರುವೆ. ಇಂಥ ಸಂಚಾರಿ ಬದುಕು ಒಂದು ರೀತಿಯಲ್ಲಿ ಹೊಸ ಅನುಭವಗಳಿಗೆ ತೆರೆದುಕೊಂಡರೂ ಬಾಲ್ಯದ ನಿರುಮ್ಮಳ ಲೋಕ ಮತ್ತು ನಗರದ ಪರಕೀಯತೆಯ ಮುಖಾಮುಖಿಯಲ್ಲಿ ಕಾಡುವುದಿದೆ. ಇಂಥ ಭೌಗೋಳಿಕ ಮತ್ತು ಭಾವಾನಾತ್ಮಕ ಸ್ಥಿತ್ಯಂತರಗಳು ಕತೆಗಳಲ್ಲಿ ವ್ಯಕ್ತಿತ್ವವನ್ನು ಕಟ್ಟುವ ಇಲ್ಲವೇ ಕೆಡಹುವ ಕೆಲಸ ಮಾಡುತ್ತವೆ. ಹಳ್ಳಿ-ನಗರಗಳನ್ನು ಎದುರು ಬದುರು ಕನ್ನಡಿಗಳಂತೆ ಇಟ್ಟು ಅದರ ನಡುವೆ ಕಥಾನಾಯಕ ನಿಂತು ಅನುಭವಗಳ/ ಸಂಬಂಧಗಳ ಮೌಲ್ಯಮಾಪನ ಮಾಡುವ ನನ್ನ ಕತೆ “ಮಣ್ಣಿನ ದೋಣಿ’ ನನಗೆ ಇಷ್ಟವಾದ ಕತೆಗಳಲ್ಲಿ ಒಂದು. ನಗರದ ಆಧುನಿಕ ಪ್ರಜ್ಞೆಯಿಂದ ಮತ್ತೆ ಹಳ್ಳಿಗೆ ಹೋಗುವ ಕಥಾನಾಯಕ ಅಲ್ಲಿನ ಬದುಕನ್ನು ಮೆಚ್ಚುವ, ಬೆಚ್ಚುವ, ಬಾಲ್ಯದ ನೆನಪಿನ ಹಿತ ಅನುಭವಕ್ಕೆ ಹೊರತಾದ ಹೊಸ ಅನುಭವ ಪಡೆಯುವ ಪರಿ ಕತೆಯಲ್ಲಿ ಸಹಜವಾಗಿ ಸಂವೇದನಶೀಲವಾಗಿ ಮೂಡಿಬಂದಿದೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ನಗರ-ಗ್ರಾಮೀಣ ಎಂಬ ನೆಲೆಯ ಅನುಭವಗಳ ಜತೆ ವೈಭವೀಕರಣ ಇಲ್ಲವೆ ತಿರಸ್ಕಾರವಿಲ್ಲದೆ ಒಡನಾಡುವ ಕ್ರಮದಿಂದಾಗಿ ಕತೆ ಓದುಗರಿಗೆ ಕೂಡ ಇಷ್ಟವಾಗುತ್ತದೆ. ಕತೆಯಲ್ಲಿ ವೈಯಕ್ತಿಕ ತಳಮಳಗಳನ್ನು, ಅವ್ಯಕ್ತ ಸಂಕಟಗಳನ್ನು ಪತ್ನಿಯಂಥ ಸಂಬಂಧಗಳಿಗೂ ದಾಟಿಸಲಾಗದ ಆಧುನಿಕ ವಿಪರ್ಯಾಸವು ನಾಜೂಕಾಗಿ ಬೆಸೆದುಕೊಂಡಿರುವುದು ಕತೆಗಾರನಾಗಿ ನನಗೆ ಸಮಾಧಾನ ನೀಡುವ ಅಂಶ. ಕತೆಯ ಸಂಭಾಷಣೆಗಳಲ್ಲಿ ಉತ್ತರ ಕನ್ನಡದ ಭಾಷೆಯನ್ನು ಬಳಸಿಕೊಂಡಿರುವುದರಿಂದ ಇಲ್ಲಿಯ ಮಾತುಗಳು ಧ್ವನಿಪೂರ್ಣತೆಯನ್ನು ಪಡೆದುಕೊಂಡಿವೆ.
ಮಣ್ಣಿನ ದೋಣಿ ಕತೆಯನ್ನು ಓದಿದ ಖ್ಯಾತ ಬರಹಗಾರ ರಹಮತ ತರೀಕೆರೆ ಅವರು “ಇಡೀ ಕತೆ ಆಪ್ತವಾಗಿ ಓದಿಸಿಕೊಂಡು ಹೋಗುತ್ತದೆ. ಬೇರೆಬೇರೆ ಪಾತ್ರಗಳ ಮೂಲಕ ನಾಯಕನ ಅನುಭವವನ್ನು ಬೆಳೆಸುವ ಬದಲಿಸುವ ಮತ್ತು ಅವನನ್ನು ಮೌಲ್ಯಮಾಪನ ಮಾಡುವ ಇಲ್ಲಿನ ವಿಧಾನ ಅಪೂರ್ವವಾಗಿದೆ. ಇದರಿಂದ ಕತೆಗೆ ಅನುಭವವನ್ನು ಅದರ ಬಹುಮುಖತೆಯಲ್ಲಿ ಮತ್ತು ಜಟಿಲತೆಯಲ್ಲಿ ಹಿಡಿಯಲು ಸಾಧ್ಯವಾಗಿದೆ. ಮಡದಿ, ಮಕ್ಕಳು ಮಂಕಾಳಕ್ಕ, ಊರವರು, ಅಣ್ಣ ಕಛೇರಿಯ ಸಹೋದ್ಯೋಗಿಗಳು ಹಲವು ಕಡೆಯಿಂದ ಎಳೆಗಳನ್ನು ತಂದರೂ ಯಾವುದೂ ಭಾರವಾಗದೆ ಅನಗತ್ಯವಾಗದೆ ಜೋಡಿಸಿ ಹೆಣಿಗೆ ಮಾಡಿರುವ ರೀತಿ, ಕತೆಯ ಕುಶಲತೆಗೆ ಸಾಕ್ಷಿ. ನಮ್ಮ ಊರುಗಳಲ್ಲಿ ನಡೆಯುತ್ತಿರುವ ಸಂಕ್ರಮಣವನ್ನು ಹೀಗೆ ಸೂಕ್ಷ್ಮವಾಗಿ ಶೋಧಿಸುವ ಪ್ರಬುದ್ಧ ಕತೆಯನ್ನು ಬರೆದಿರುವುದಕ್ಕಾಗಿ ಅಭಿನಂದಿಸುತ್ತೇನೆ.” ಎಂದು ಬೆನ್ನು ತಟ್ಟುವ ಮಾತನ್ನು ಹೇಳಿದ್ದರು. ತನ್ನ ಇಷ್ಟದ ಕತೆಯ ಸೂಕ್ಷ್ಮಗಳು ಹೀಗೆ ಗುರುತಿಸಲ್ಪಟ್ಟಾಗ ಕತೆಗಾರನಿಗೆ ಆ ಕತೆ ಇನ್ನಷ್ಟು ಆಪ್ತವಾಗುತ್ತದೆ.
ತೀವ್ರ ಗ್ರಾಮೀಣ ಪರಿಸರದ ನನ್ನ ಕತೆಗಳಾದ “ಗುರ್ಬಾಣಕ್ಕಿ’, ‘ಝಕ್ಕುಂ ಜಂಗುಂ ಜೋಹೋಚೋ’, ‘ಬಂದರು” ಮುಂತಾದ ಕತೆಗಳು ನನಗೆ ಆಪ್ತವಾದರೂ ‘ಮಣ್ಣಿನ ದೋಣಿ ‘ ಕತೆಯಲ್ಲಿ ನಗರ ಸಂವೇದನೆಯನ್ನು ಕಸಿ ಮಾಡಿರುವುದರಿಂದ ಇದನ್ನು ನನ್ನ ಇಷ್ಟದ ಕತೆ ಎಂದು ಆಯ್ಕೆ ಮಾಡಿಕೊಂಡಿದ್ದೇನೆ.