ನನಗೆ ಕಾಲವೇ ನಿಂತಂತಾಗಿ ಬಿಟ್ಟಿತ್ತು. ಕೈಕಾಲುಗಳೆಲ್ಲ ತಣ್ಣಗೆ. ಅಣ್ಣನ ಸಾವು ಕಣ್ಣಿಗೆ ಚಿತ್ರ ಕಟ್ಟಿದಂತಾಯಿತು. ಇವನೇನಾಗಿ ಹೋದ? ಮೂರುವರೆ ಲಕ್ಷಕ್ಕೆ ಸಾಯುವಂಥವನಾ? ನಾವ್ಯಾರು ಇರಲಿಲ್ಲವೇ ಅವನಿಗೆ? ಯಾರನ್ನು ನೆನಪಿಸದಷ್ಟು ಬ್ಯಾಂಕಿನ ಕಿರುಕುಳವಿತ್ತಾ? ಆಡಳಿತ ಯಂತ್ರ ಅಧಿಕಾರ ವರ್ಗ ರೈತರ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೇ? ರಾಜ್ಯದಲ್ಲಿ ಅದೆಷ್ಟು ರೈತರ ಸಾವುಗಳು? ಅವರ ಕುಟುಂಬಗಳಿಗೆ ಯಾರು ದಿಕ್ಕು? ನಮ್ಮ ಅಣ್ಣನ ಮಕ್ಕಳಿಗೆ ಬ್ಯಾಂಕ್ ಕೆಲಸ ಕೊಟ್ಟೀತಾ? ಸಾಲವನ್ನು ಮನ್ನಾ ಮಾಡೀತಾ? ಪರಿಹಾರ ಸಿಗಬಹುದಾ? ಇವೆಲ್ಲಾ ಆದರೂ ಆಗಬಹುದು. ನಮ್ಮಣ್ಣನ ಜೀವ ತಂದು ಕೊಡುವರಾ?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸೋಮು ಕುದರಿಹಾಳ ಕತೆ “ಕರಕಲಾದ ಅನ್ನದಗುಳು” ನಿಮ್ಮ ಓದಿಗೆ

ಸಂಭ್ರಮದಿಂದ ಹೊಸ ವರ್ಷವನ್ನು ಸ್ವಾಗತಿಸಲು ತೆರೆದಿಟ್ಟಿದ್ದ ಮನದ ಬಾಗಿಲೊಳಗೆ ಅಣ್ಣನ ಸಾವಿನ ಸೂತಕ ನುಗ್ಗಿಬಿಟ್ಟಿತು. ಅಪ್ಪಾಜಿ ಫೋನ್ ಮಾಡಿ “ನಿಮ್ಮಣ್ಣ ಹೋಗಿಬಿಟ್ಟ, ಯಾವ ಬಸ್ಸು ಸಿಗುತ್ತೋ ಅದಕ್ಕೆ ಹತ್ತಿಬಿಡು. ಆದರೆ ಒಂದು ಮಾತು. ಸಾವಿನ ದಾರಿ ದೂರ ಅಂತಾರೆ ಹುಷಾರಾಗಿ ಬಾ” ಅಳುತ್ತಲೇ ಮಾತನಾಡುತ್ತಿದ್ದರು. ಅಪ್ಪಾಜಿಯ ಹೆಂಗರುಳು, ತನ್ನವರಿಗಾಗಿ ಸದಾ ಮಿಡಿಯುವ ಹೃದಯ, ತನ್ನ ಅಣ್ಣನ ಮೇಲಿದ್ದ ಪ್ರೀತಿ ಮತ್ತು ತನ್ನಣ್ಣ ಸಾಯುವಾಗ ಕೈಯಲ್ಲಿ ಕೈಯಿಟ್ಟು ನನ್ನ ಮಗನನ್ನು ನಿನ್ನ ಮಡಿಲಿಗೆ ಹಾಕ್ತಿದ್ದೀನಿ ಅವನ ಕೈ ಬಿಡಬೇಡ ಎಂದು ಗುಟುಕರಿಸಿದ್ದ ಕೊನೆಯ ಜೀವಜಲದ ಮಾತು ಅಪ್ಪಾಜಿಯನ್ನು ಅತೀವ ದುಃಖಕ್ಕೀಡು ಮಾಡಿತ್ತು. “ಅಳಬೇಡಿ. ಸಮಾಧಾನವಾಗಿರಿ. ನಾನು ಈವಾಗ ಹೊರಟರೆ ಮನೆ ತಲುಪುವಷ್ಟು ಬಸ್ಸಿನ ಅನುಕೂಲಗಳಿಲ್ಲ. ರಾತ್ರಿ ಎರಡು ಗಂಟೆಗೆ ಬಿಟ್ಟರೆ ಬೆಳಿಗ್ಗೆ ಆರು ಗಂಟೆಗೆ ಮನೆಗೆ ಬರ್ತೀನಿ” ಎಂದು ಹೇಳಿದ್ದನ್ನು ಅಪ್ಪಾಜಿ ಕೇಳಿಸಿಕೊಂಡಂತೆ ನನಗನಿಸಲಿಲ್ಲ. ಅಪ್ಪಾಜಿಯ ಅಳು ಮತ್ತು ಮಾತು ಮುಂದುವರಿದೇ ಇದ್ದವು. “ಎರಡು ಮುತ್ತಿನಂಥ ಮಕ್ಕಳಿಗೆ ಅನ್ಯಾಯ ಮಾಡಿಬಿಟ್ಟ. ಹಾಳಾದವನು ಎಲ್ಲರಿಗೂ ಮೋಸ ಮಾಡಿಬಿಟ್ಟ.” ನಾನೇ ಫೋನ್ ಕಟ್ ಮಾಡಿ ಅಪ್ಪಾಜಿಯ ಮಾತು ನಿಲ್ಲುವಂತೆ ಮಾಡಿದೆ. ಆದರೆ ಅಳು ನಿಲ್ಲುವುದಿಲ್ಲ ಎಂಬುದು ಸತ್ಯವೇ ಸರಿ.

ಸರಕಾರಿ ನೌಕರಿಯಲ್ಲಿದ್ದ ನನಗೆ ಮತ್ತು ನನ್ನಂಥವರಿಗೆ ಇಂಥಹ ಕಠಿಣ ಸ್ಥಿತಿಗಳು ಆಘಾತಕ್ಕೀಡು ಮಾಡುತ್ತವೆ. ಮನೆಯಲ್ಲಾಗುವ ಸಾವು ನೋವು, ದುಃಖದುಮ್ಮಾನ, ಕಷ್ಟಕಾರ್ಪಣ್ಯಗಳಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ನಮ್ಮ ಅವಶ್ಯಕತೆ ಬಹಳಷ್ಟು ಇದ್ದಾಗಲೂ ದೂರದಲ್ಲಿರುವ ಕಾರಣದಿಂದ ಏನೂ ಮಾಡಲಾಗದ ಅಸಹಾಯಕ ಸ್ಥಿತಿ. ಇದ್ದಲ್ಲಿಂದಲೇ ಏನನ್ನಾದರೂ ಮಾಡಹೊರಟರೆ ಫೋನ್ ಮೂಲಕ ಮಾತನಾಡಬಹುದೇ ಹೊರತು ಬೇರೆ ದಾರಿಗಳಿರುವುದಿಲ್ಲ. ಎಷ್ಟೋ ಸಲ ಹೆತ್ತವರ ಬಂಧುಗಳ ಸಂಕಟಕ್ಕೆ ಆಸರೆಯಾಗದಿದ್ದರೆ ಈ ಕೆಲಸವಾದರೂ ಏಕೆ ಬೇಕು ಅನ್ನಿಸುವದುಂಟು. ಅಪ್ಪಾಜಿಯ ಮಾತುಗಳಿಂದ ಹೃದಯ ನಿಂತಂತಾಗಿತ್ತು. ಎಲ್ಲ ಸಾವುಗಳಾದಾಗಲೂ ಬರುವ ಒಂದೇ ಮಾತು ‘ಹೋದೋರು ಹೋಗಿಬಿಟ್ರು. ಉಳಿದವರನ್ನಾದರೂ ನೋಡಿಕೊಳ್ಳಿ,’ ಅಣ್ಣನ ಮಕ್ಕಳಿಬ್ಬರಲ್ಲಿ ಒಬ್ಬ ಅತ್ತಿಗೆಯ ತವರು ಸಂಬಂಧಿ ಮನೆಯಲ್ಲಿ ಮತ್ತೊಬ್ಬ ದೂರದೂರಿನ ಹಾಸ್ಟೆಲ್‌ನಲ್ಲಿ ಎಸ್ಸೆಸ್ಸೆಲ್ಸಿ ಆಸುಪಾಸಿನ ಶಿಕ್ಷಣ ಪಡೆಯುತ್ತಿದ್ದರು. ಅಪ್ಪಾಜಿ ಹೇಳಿದಂತೆ ನಿಜಕ್ಕೂ ಅನ್ಯಾಯವಾಗಿದ್ದು ಆ ಎರಡು ಮಕ್ಕಳಿಗೆ ಬದುಕಿನ ಮೊದಲ ಹೆಜ್ಜೆ ತುಳಿಯುತ್ತಿದ್ದವರಿಗೆ ಅಪ್ಪನ ಸಾವು ಹೇಗೆ ಘಾಸಿಗೊಳಿಸಬಹುದು ಎಂಬುದನ್ನು ಊಹಿಸದಾದೆ.

ಅಣ್ಣ ವಯಸ್ಸಾದವನಲ್ಲ, ಆರೋಗ್ಯ ಕೆಟ್ಟವನಲ್ಲ. ದುಶ್ಚಟಗಳಿರಲಿಲ್ಲ. ಯಾರೊಂದಿಗೂ ಹೊಡೆದಾಡಿ-ಬಡಿದಾಡುವವನಲ್ಲ. ಮತ್ತೆ ಹೇಗೆ ಸತ್ತ? ನನಗೆ ಉತ್ತರದ ಅವಶ್ಯಕತೆಯಿತ್ತು. ಅಪ್ಪಾಜಿಯೊಬ್ಬರನ್ನು ಬಿಟ್ಟು ನನ್ನ ತಮ್ಮ ಮತ್ತು ಚಿಕ್ಕಪ್ಪನ ಮಕ್ಕಳಿಗೆ ಫೋನ್ ಮಾಡಿದರೆ ಎಲ್ಲರ ಫೋನ್‌ಗಳು ದುಃಖತಪ್ತ ಕಾರ್ಯನಿರತ. ನಾನು ಚಡಪಡಿಸತೊಡಗಿದೆ. ಸ್ವಲ್ಪ ಸಮಯದಲ್ಲಿಯೇ ದಿನಪತ್ರಿಕೆ ವರದಿಗಾರನಾಗಿದ್ದ ಸ್ನೇಹಿತ ಫೋನ್ ಮಾಡಿದ. “ನಿಮ್ಮಣ್ಣ ನೇಣು ಹಾಕಿಕೊಂಡು ಸತ್ತಿದ್ದಾನೆ. ಕೃಷಿ ಅಭಿವೃದ್ಧಿ ಬ್ಯಾಂಕಿನಲ್ಲಿ ಸಾಲ ಇತ್ತಂತೆ ವಾರದ ಹಿಂದೆ ವಸೂಲಾತಿ ನೋಟೀಸ್ ಬಂದಿತ್ತಂತೆ. ಹಾಗಾಗಿ ನಾಲ್ಕು ದಿನಗಳಿಂದ ಅದೇ ನೋವಿನಲ್ಲಿದ್ದನಂತೆ. ಸಂಜೆ ಆರು ಘಂಟೆಗೆ ದುರ್ಘಟನೆ ನಡೆದಿದೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಡಿ ಇದೆ. ನಾನು ಈವಾಗ ಸ್ಟೇಷನ್‌ಗೆ ಹೋಗ್ತಾ ಇದೀನಿ. ಅಲ್ಲಿ ನಿಮ್ಮ ಮನೆಯವರೆಲ್ಲರೂ ಇದ್ದಾರೆ. ಅವರ್ಯಾರು ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ನನಗೆ ಬೇಕಾದ ಮಾಹಿತಿ ಕೊಡು ನಾನು ಎಲ್ಲಾ ಪತ್ರಿಕೆಗಳಿಗೆ ಸುದ್ದಿ ಕಳಿಸಬೇಕು” ಶುದ್ದ ವರದಿಗಾರನಂತಿದ್ದ ಗೆಳೆಯನ ಮಾತುಗಳನ್ನು ಕೇಳಿ ನಿಂತಲ್ಲಿಯೇ ಕುಸಿದುಬಿಟ್ಟೆ. ಅಗತ್ಯ ಮಾಹಿತಿಗಳನ್ನು ಹೇಳಿ ಸ್ವಲ್ಪ ಸಮಯದ ನಂತರ ಟಿವಿ ಯಲ್ಲಿ ಬ್ರೇಕಿಂಗ್ ನ್ಯೂಸ್…….

“ರಾಜ್ಯದಲ್ಲಿ ಮತ್ತೋರ್ವ ರೈತನ ಆತ್ಮಹತ್ಯೆ”
“ಬ್ಯಾಂಕಿನಿಂದ ಕಿರುಕುಳ ತಾಳಲಾರದೆ ಮನನೊಂದ ರೈತ”
“ನೇಣು ಬಿಗಿದುಕೊಂಡು ಆತ್ಮಹತ್ಯೆ”
“ಆಡಳಿತ ಮತ್ತು ಅಧಿಕಾರ ವರ್ಗ ಸ್ಥಳಕ್ಕೆ ಬರುವಂತೆ ಸಂಬಂಧಿಗಳ ಆಗ್ರಹ”

ನೇಣು ಹಾಕಿಕೊಂಡು ಸತ್ತನೇ ನಮ್ಮಣ್ಣ? ಸಾಲವಾದರೂ ಎಷ್ಟಿತ್ತು? ಸತ್ತದ್ದು ಎಲ್ಲಿ? ನೇಣು ಸಂಕಟ ಯಾರಿಗೂ ಕೇಳಿಸದಷ್ಟು ದೂರದ ಏಕಾಂತದ ಸ್ಥಳವೆಲ್ಲಿ ಸಿಕ್ಕಿತು? ನನ್ನೆಲ್ಲಾ ಪ್ರಶ್ನೆಗಳಿಗೂ ನನ್ನ ತಮ್ಮನ ಮಾತುಗಳು ಉತ್ತರವಾಗಿದ್ದವು. “ಬೆಳಿಗ್ಗೆ ಅಣ್ಣ ಅತ್ತಿಗೆ ಹೊಲಕ್ಕೆ ಹೋಗಿದ್ರಂತೆ ಭತ್ತ ಕೊಯ್ಯುವಾಗ ಸಾಲ ಹೇಗೆ ತೀರಿಸಲಿ? ಮಕ್ಕಳ ತಲೆ ಮೇಲೆ ಸಾಲದ ಹೊರೆ ಹೊರಿಸಿದೆ. ವಾರದೊಳಗೆ ಸಾಲ ಕಟ್ಟಬೇಕು ಇಲ್ಲದಿದ್ದರೆ ಹೊಲ ಹರಾಜು ಹಾಕ್ತಾರೆ. ಹೊಲ ಹೋದರೆ ನನ್ನ ಜೀವ ಇಟ್ಕಳಲ್ಲ ನಾನು. ಕೂಲಿ ಮಾಡಿ ಕೂಡಿಸಿಟ್ಟು ನಮ್ಮಜ್ಜ ಮಾಡಿದ್ದ ಆಸ್ತಿ ನಾನು ಹಾಳ್ ಮಾಡಿಬಿಟ್ಟೆ ಅಂತಿದ್ನಂತೆ. ಮಧ್ಯಾಹ್ನ ಇಬ್ಬರೂ ಕುತ್ಕಂಡು ಊಟ ಮಾಡಿದ್ದಾರೆ. ‘ನಾನು ಹೋಗ್ತಿನಿ ಸಾಯಂಕಾಲ ಬಾ’ ಅಂತಾ ಅತ್ತಿಗೆಯನ್ನು ಬಿಟ್ಟು ಹೋಗಿದ್ದಾನೆ. ಅಕ್ಕಪಕ್ಕದ ಮನೆಯವರು ಹೊರಗೆ ಕುಂತಿದ್ರಂತೆ, ಅವನಿಗೆ ಅವಕಾಶ ಸಿಕ್ಕಿಲ್ಲ. ಹುಲ್ಲು ಕೊಯ್ಯೋಕೆ ಹೋದಂತೆ ಮಾಡಿ ಹಗ್ಗ ತಗಂಡು ಹೋಗಿದ್ದಾನೆ. ಊರಿನ ಹೊರವಲಯದಲ್ಲಿ ಮರಗಳ ಹತ್ರ ಹೋಗಿ ನಿಲ್ತಾ ಇದ್ನಂತೆ. ಯಾರಾದ್ರು ಕಂಡ ತಕ್ಷಣ ಹುಲ್ಲು ಕೋಯ್ಯೋನಂತೆ, ಅವರು ದೂರಾದಾಗ ಹುಲ್ಲು ಬಿಸಾಕಿ ಬೇರೆ ಬೇರೆ ಕಡೆ ಓಡಾಡಿದ್ದಾನೆ. ಅವನ ಸಾವು ಅಲ್ಲಿರಲಿಲ್ಲವೇನೋ? ಮತ್ತೂ ಮನೆಗೆ ಬಂದು ಅಡುಗೆ ಮನೆಯಲ್ಲಿ ಮಜ್ಜಿಗೆ ಕಂಬದ ತೊಲೆಗೆ ಹಗ್ಗ ಕಟ್ಟಿ ಅನಾಹುತ ಮಾಡ್ಕೊಂಡಿದಾನೆ. ಸಂಜೆ ಅತ್ತಿಗೆ ಹೊಲದಿಂದ ಬಂದು ಜನರನ್ನು ಕೂಡಿಸಿದ್ದಾಳೆ. ನೇಣು ಹಾಕಿಕೊಂಡವರು ಯಾರಾದ್ರು ಬದುಕ್ತಾರಾ? ಆದರೆ ಆಕೆಗೆ ಅದೇನು ತಿಳೀತೋ ತಾಳಿ ಮೇಲಿನ ಆಸೆಗೋ ನನ್ನ ಗಂಡನನ್ನು ಬದುಕಿಸಿರಿ ಅಂತಾ ಆಸ್ಪತ್ರೆಗೆ ಕರೆದುಕೊಂಡು ಬಂದಿದಾರೆ. ಪೋಲಿಸ್ ಕೇಸ್ ಆಗಿದೆ. ರೈತ ಸಂಘದವರು ಇದಾರೆ, ಮಾತಾಡಬೇಕಂತೆ”

“ಅವನು ನಿಮಗೆ ಹೇಗೆ ಅಣ್ಣಾನೋ ನನಗೂ ಅಣ್ಣಾನೇ ನ್ಯಾಯ ಸಿಗೋವರೆಗೂ ನಾವು ಬಿಡಲ್ಲ. ಕೇವಲ ಮೂರುವರೆ ಲಕ್ಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಬ್ಯಾಂಕ್‌ಗಳು ಕಿರುಕುಳ ಕೊಡುವುದನ್ನು ನಾವು ಸಹಿಸಲ್ಲ. ನಾವು ಇಡೀ ರಾತ್ರಿ ಆಸ್ಪತ್ರೆಯಲ್ಲೇ ಕಾಯ್ತೀವಿ. ಸರ್ಕಾರ ರೈತರಿಗೆ ಅನ್ಯಾಯ ಮಾಡ್ತಾ ಇದೆ. ರೈತನ ಸಣ್ಣ ಸಣ್ಣ ಸಾಲಗಳಿಗೂ ವಸೂಲಾತಿ, ಜಪ್ತಿ, ಜಮೀನು ಹರಾಜು, ವಾಯಿದೆ ಕಾಯಿದೆಗಳನ್ನು ಹೇರ‍್ತಿದ್ದಾರೆ. ನಾಳೆ ಬ್ಯಾಂಕ್ ಮ್ಯಾನೇಜರ್ ತಹಶೀಲ್ದಾರ್, ಡಿ.ಸಿ. ಪಿ.ಎಸ್.ಐ. ಎಲ್ಲರೂ ಬರಬೇಕು. ನಮ್ಮ ರೈತನ ಸಾಲ ಮನ್ನಾ ಮಾಡಬೇಕು. ಐದು ಲಕ್ಷ ಪರಿಹಾರ ಕೊಡಬೇಕು, ಅಲ್ಲಿಯವರೆಗೂ ನಾವು ಬಿಡಲ್ಲ, ಬ್ಯಾಂಕಿನವರು ನಮ್ಮಣ್ಣನ ಜೀವ ತೆಗೆದುಕೊಂಡ್ರು!”.

ನನಗೆ ಕಾಲವೇ ನಿಂತಂತಾಗಿ ಬಿಟ್ಟಿತ್ತು. ಕೈಕಾಲುಗಳೆಲ್ಲ ತಣ್ಣಗೆ. ಅಣ್ಣನ ಸಾವು ಕಣ್ಣಿಗೆ ಚಿತ್ರ ಕಟ್ಟಿದಂತಾಯಿತು. ಇವನೇನಾಗಿ ಹೋದ? ಮೂರುವರೆ ಲಕ್ಷಕ್ಕೆ ಸಾಯುವಂಥವನಾ? ನಾವ್ಯಾರು ಇರಲಿಲ್ಲವೇ ಅವನಿಗೆ? ಯಾರನ್ನು ನೆನಪಿಸದಷ್ಟು ಬ್ಯಾಂಕಿನ ಕಿರುಕುಳವಿತ್ತಾ? ಆಡಳಿತ ಯಂತ್ರ ಅಧಿಕಾರ ವರ್ಗ ರೈತರ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೇ? ರಾಜ್ಯದಲ್ಲಿ ಅದೆಷ್ಟು ರೈತರ ಸಾವುಗಳು? ಅವರ ಕುಟುಂಬಗಳಿಗೆ ಯಾರು ದಿಕ್ಕು? ನಮ್ಮ ಅಣ್ಣನ ಮಕ್ಕಳಿಗೆ ಬ್ಯಾಂಕ್ ಕೆಲಸ ಕೊಟ್ಟೀತಾ? ಸಾಲವನ್ನು ಮನ್ನಾ ಮಾಡೀತಾ? ಪರಿಹಾರ ಸಿಗಬಹುದಾ? ಇವೆಲ್ಲಾ ಆದರೂ ಆಗಬಹುದು. ನಮ್ಮಣ್ಣನ ಜೀವ ತಂದು ಕೊಡುವರಾ?

ಕರೆಂಟ್ ಹೋಗಿ ಒಂದು ಸೆಕೆಂಡ್ ಬಿಟ್ಟು ಮತ್ತೆ ಬಂತು. ಜೋರು ಜೋರು ಕೂಗಾಟ ‘ಹ್ಯಾಪಿ ನ್ಯೂ ಇಯರ್’ ಆಕಾಶದಲ್ಲಿ ಮುಗಿಲುಬಾಣದ ಚಿತ್ತಾರ ಕೃತಕ ನಕ್ಷತ್ರಗಳಂತೆ ಕ್ಷಣ ಮಿಂಚಿ ಮಾಯವಾಗುತ್ತಿದ್ದವು. ಸತ್ತವರೆಲ್ಲ ನಕ್ಷತ್ರವಾಗ್ತಾರಂತೆ ಎಂಬ ನಂಬಿಕೆಯಂತೆ ಮಿಂಚಿಮಾಯವಾದ ನಕ್ಷತ್ರದಂತೆ ನಮ್ಮಣ್ಣ ಸತ್ತವನು ಮತ್ತೆ ಬದುಕಲಿಲ್ಲವೇಕೆ? ರೈತರೊಂದಿಗೆ ಆಟವಾಡುವ ವಿದ್ಯುತ್ ಮಂಡಳಿ ಅದೆಷ್ಟು ಕರಾರುವಕ್ಕಾಗಿ ಹೊಸ ವರ್ಷವನ್ನು ಸ್ವಾಗತಿಸಿತು. ರೈತನ ಹಿತ ಕಾಪಾಡುವ ನಿಟ್ಟಿನಲ್ಲಿ ಹೀಗೆ ಕೆಲಸ ಮಾಡಿದ್ದರೆ ರೈತರೇಕೆ ವಿಷದ ಬಾಟಲಿಗೆ ನಾಲಿಗೆ ಚಾಚಿ ಸಾವನ್ನು ನೆಕ್ಕುತ್ತಿದ್ದರು? ಮನೆಯ ತೊಲೆ ನಾಗೊಂದಿಗೆಗಳಿಗೇಕೆ ಆತ್ಮದ ರಕ್ತತರ್ಪಣವೀಯುತ್ತಿದ್ದರು? ಸ್ನೇಹಿತರ ನ್‌ಕಾಲ್‌ಗಳು, ಮೆಸೇಜ್‌ಗಳು ಶುಭಾಶಯ ಕೋರತೊಡಗಿದವು. ಯಾರಿಗೂ ವಿಷಾದದ ಕುರುಹು ತೋರಗಾಣದಂತೆ ಪ್ರತಿಕ್ರಿಯಿಸಿದೆ, ನನ್ನ ಸಂಕಟದಿಂದೇಕೆ ಅವರು ಹೊಸ ವರ್ಷದ ಸಂತೋಷ ಕಳೆದುಕೊಳ್ಳಬೇಕು. ಏನೇ ಆಗಲಿ ಯಾವುದಕ್ಕೂ ಅಂತ್ಯವೇ ಇಲ್ಲ. ಒಂದೇ ಸೆಕೆಂಡಿನಲ್ಲಿ ಒಂದು ವರ್ಷ ಸತ್ತು ಮತ್ತೊಂದು ವರ್ಷ ಹುಟ್ಟುತ್ತದೆಯಲ್ಲ ಇದೆಂಥಾ ಕಾಲದ ಕೈವಾಡ. ಸಾವಿಗೂ ಕೂಡ ಕಾಲವೇ ಅಧಿಪತಿ. ಆತ್ಮವೂ ಸೆಕೆಂಡಿನಲ್ಲಿಯೇ ಸತ್ತು ಹುಟ್ಟಬೇಕಿತ್ತು ಕೆಲವು ಅಂತರಪಿಶಾಚಿಯಾಗಿ ಅಲೆಯುತ್ತವಂತೆ ಆತ್ಮಗಳು. ನಮ್ಮಣ್ಣನೂ ಹಾಗೆಯೇ ಆಗಲಿ. ಬ್ಯಾಂಕಿನವರನ್ನು ಮಂತ್ರಿಗಳನ್ನು ಕಾಡಲಿ ಅವನಂತೆ ಸತ್ತ ಎಲ್ಲ ರೈತರ ಆತ್ಮಗಳಿಗೂ ಶಾಂತಿ ಸಿಗುವಂತೆ ಮಾಡಲಿ.

ಮತ್ತೊಮ್ಮೆ ತಮ್ಮನಿಗೆ ಫೋನ್ ಮಾಡಿ ನಾನು ಬರುವುದನ್ನು ತಿಳಿಸಿ ಬಸ್ ಹತ್ತಿಕೊಂಡೆ, ದಾರಿಯುದ್ದಕ್ಕೂ ಹಳ್ಳಿ ನಗರಗಳ ರಸ್ತೆಗಳ ಮೇಲಿದ್ದ ಹೊಸ ವರ್ಷದ ಸಂತೋಷ ನನ್ನ ಕಿವಿ ತಾಕಲೇ ಇಲ್ಲ. ನಾನು ಆಸ್ಪತ್ರೆ ತಲುಪಿದಾಗ ಮುಂಜಾವು. ಶವಾಗಾರದ ಕಿಟಕಿಯಲ್ಲಿ ನೋಡಿದೆ ನಮ್ಮಣ್ಣ ತಣ್ಣಗೆ ಮಲಗಿದ್ದ. ಕಣ್ಣು ಚಳ್ಳೆಂದವು. ಹಿಂದೆಯೇ ಇದ್ದ ವರದಿಗಾರ ಸ್ನೇಹಿತ, ಖಾಸಗೀ ಸುದ್ದಿವಾಹಿನಿಯ ಜಿಲ್ಲಾ ವರದಿಗಾರ, ರೈತ ಸಂಘದವರು ಮತ್ತು ನನ್ನ ಅಣ್ಣ ತಮ್ಮಂದಿರು ಚರ್ಚಿಸಿ ನಿರ್ಧಾರಕ್ಕೆ ಬಂದೆವು. ರಿಜರ್ವ್ ಪೋಲಿಸ್ ವ್ಯಾನ್ ಸ್ಥಳೀಯ ಪೋಲಿಸ್ ಸಿಬ್ಬಂದಿ ಬಹಳ ಆರಾಮಾಗಿ ಕುಳಿತಿದ್ದರು. ಅದು ಅವರ ದೃಷ್ಠಿಯಲ್ಲಿ ‘ಹೆಣ ಕಾಯುವ ಕೆಲಸ’ ಬಹು ಜವಾಬ್ದಾರಿಯಿಂದ ಆ ಕೆಲಸ ಮಾಡುತ್ತಾರವರು. ಸುಮಾರು ಹತ್ತು ಹತ್ತೂವರೆಗೆ ನಮ್ಮ ಅಕ್ಕಪಕ್ಕದೂರಿನ ರೈತಬಂಧುಗಳು ಆಸ್ಪತ್ರೆಯ ಮುಂದೆ ಜಮಾಯಿಸಿದರು. ಬ್ಯಾಂಕ್ ಮ್ಯಾನೇಜರ್, ತಹಶೀಲ್ದಾರ್ ಮತ್ತು ಪಿ.ಎಸ್.ಐ. ಬರುವವರೆಗೂ ಪೋಸ್ಟ್‌ಮಾರ್ಟಮ್ ಮಾಡಲು ಬಿಡುವುದಿಲ್ಲ ಎಂಬ ಪಟ್ಟು ಹಿಡಿದರು. ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ನನ್ನ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ನನಗೆ ಪೋಲಿಸನವರ ವರ್ತನೆ ಪ್ರತಿಕ್ರಿಯೆ ತೀರ ಅಮಾನವೀಯವಾಗಿ ನಾಚಿಕೆಗೇಡಾಗಿ ಕಂಡಿತು. ವೃತ್ತಿ ಧರ್ಮವೆಂದರೆ ಇದೇನಾ? ಸಬೂಬು ಹೇಳಿ ಸಮಯ ಕಳೆಯುತ್ತಿದ್ದರು. ಒಂದು ಅನಿಸಿಕೆ ಪ್ರಕಾರ ‘ಇವರೆಷ್ಟು ಹೊತ್ತು ಇದನ್ನೆಲ್ಲಾ ಮಾಡಿಯಾರು? ನಾವೆಷ್ಟು ನೋಡಿಲ್ಲ ಇಂಥವನ್ನೆಲ್ಲ’ ಎಂಬುದನ್ನು ಅರ್ಥೈಸುತ್ತಿತ್ತು ಅವರ ನಡವಳಿಕೆ. ಯಾರಿಗೋ ಫೋನ್ ಮಾಡುವರು ಹತ್ತು ನಿಮಿಷ ಇನ್ನೈದು ನಿಮಿಷ ದಾರಿಯಲ್ಲಿದ್ದಾರೆ. ಬರ್ತಾ ಇದಾರೆ ಇಂಥ ಉಡಾಪೆಯ ಮಾತುಗಳನ್ನು ಹೇಳುತ್ತಲೇ ಬಹಳ ನಿರ್ಲಕ್ಷ್ಯದಿಂದ ನಡೆದುಕೊಂಡರು. ಆದರೆ ರೈತ ಸಂಘಟನೆಯವರು ತಹಶೀಲ್ದಾರ ಕಛೇರಿಯತ್ತಲೇ ಹೊರಟಾಗ ಅದರ ಬಿಸಿ ಸೋಕಿತು. ಎರಡು ಗಂಟೆಯ ಹೊತ್ತಿಗೆ ತಹಶೀಲ್ದಾರ, ಬ್ಯಾಂಕ್ ಮ್ಯಾನೇಜರ್ ಪ್ರತಿಭಟನಾಕಾರರಂತೆ ಕಂಡ ನಮ್ಮೆಲ್ಲರ ಮುಂದೆ ಸಾಲ ಮನ್ನಾ ಮತ್ತು ಪರಿಹಾರ ಭರವಸೆ ನೀಡಿ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿ ನುಣುಚಿಕೊಂಡರು. ಆದರೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರಿಂದ ಎಂಥದೋ ನಂಬಿಕೆಯಿತ್ತು.

ಎಲ್ಲಾ ಮುಗಿದಂತಾದ ಮೇಲೆ ಪೋಲೀಸರು ಆಸ್ಪತ್ರೆ ಬಳಿ ತುಂಬಾ ಹೊತ್ತು ನಿಲ್ಲಲು ಅವಕಾಶ ನೀಡಲಿಲ್ಲ. ತಾವೇ ಖುದ್ದಾಗಿ ಹೆಣ ಸುಡುವವರೆಗೂ ಕಾವಲು ನಿಂತಿದ್ದರು. ದುಃಖ ಸಂಕಟ ನೋವುಗಳು ಅಧಿಕಾರ ದರ್ಪದ ಖಾಕಿಯ ವ್ಯಾಪ್ತಿಯೊಳಗೆ ಬರುವುದಿಲ್ಲವೇನೋ? ರೂಲ್ಸ್‌ಗಳು ಕಣ್ಣೀರು ಹಾಕದಂತೆ ಅವರನ್ನು ತಡೆಯುತ್ತವೆ. ಆದರೆ ಅವರಿಗೆ ಮತ್ತು ಅವರ ಮನೆಯವರಿಗೆ ಅವು ಅನ್ವಯಿಸುವುದಿಲ್ಲ ಅನಿಸುತ್ತಿತ್ತು. ಅಲೆಗ್ಸಾಂಡರ್ ತಾನು ಸತ್ತಾಗ ತನ್ನ ಒಂದು ಕೈ ಹೊರಗಿಟ್ಟು ಮುಚ್ಚುವಂತೆ ಹೇಳಿದ್ದನಂತೆ ನಮ್ಮಣ್ಣ ಅರ್ಧ ಸುಟ್ಟಾಗ ಆತನ ಎರಡು ಕೈಗಳು ಮೇಲಕ್ಕೆದ್ದವು ಮತ್ತು ಬರಿದಾಗಿದ್ದವು.

*****

ಗಂಟಲಲ್ಲಿ ಸಿಲುಕಿಕೊಂಡ ಅನ್ನದಗುಳಿನಂತಹ ಎರಡು ಮಾತುಗಳು..
ಬಹಳ ವರ್ಷಗಳಿಂದ ರೈತರ ಸಾವುಗಳನ್ನು ತಡೆಯಲು ಯಾರಿಂದಲೂ ಆಗುತ್ತಿಲ್ಲ. ಸ್ವತಃ ಸಾವೂ ಕೂಡ ನಿಷ್ಕರುಣಿ. ಪತ್ರಿಕಾ ಮಾಧ್ಯಮದಲ್ಲಿ ಒಂದು ನಂಬಿಕೆ ಇದೆಯಂತೆ. ಸಾವಿನ ಸುದ್ದಿಯಿಲ್ಲದೆ ಪತ್ರಿಕೆ ಮುದ್ರಣವಾಗುವಂತಿಲ್ಲ ಎಂಬುದು. ಪ್ರತಿ ದಿನವೂ ಒಂದಲ್ಲ ಒಂದು ಸಾವಿನ ಸುದ್ದಿ ಪ್ರಕಟಿಸಲೇಬೇಕು. ಸುದ್ದಿವಾಹಿನಿಗಳು ಕೂಡ ಈ ನಂಬಿಕೆಯನ್ನು ಸೂರ್ಯನಿಯಮದಂತೆ ಪಾಲಿಸುತ್ತವೆ. ಸಾವಿನ ಸುದ್ದಿಯನ್ನೋ ಅಪಘಾತದ ಸುದ್ದಿಯನ್ನೋ ತನ್ನ ದಿನದ ಮೊದಲ ಪ್ರಸಾರದಲ್ಲಿ ಬಿತ್ತರಿಸುತ್ತವೆ. . ಎಷ್ಟೊಂದು ಸಂಕಟವೆಂದರೆ ಪ್ರದಿದಿನದ ಬೆಳಗಿಗೆ ಪತ್ರಿಕೆಯ ಪುಟ ಬಿಡಿಸಿದರೆ ರೈತನೊಬ್ಬನ ಸಾವಿನ ಸುದ್ದಿ ಕಣ್ತುಂಬಿಕೊಳ್ಳುತ್ತದೆ. ಟಿವಿಗಳಲ್ಲಿ ರೈತನ ಸಾವಿನ ಕುರಿತು ‘ವಿಶೇಷ ಕಾರ್ಯಕ್ರಮ’ಗಳು ನಡೆಯುತ್ತವೆ.
ರೈತನ ಸಾವಿನಲ್ಲಿ ಸಾಕಷ್ಟು ಹೋರಾಟಗಳು ರಾಜಕೀಯ ಚಟುವಟಿಕೆಗಳು ಕೂಡ ನಡೆಯುತ್ತವೆ. ಆದರೆ ರೈತನ ಸಾವನ್ನು ನಿಲ್ಲಿಸಲಾಗುತ್ತಿಲ್ಲ. ಆತನ ಸಾವಿನ ಕಾರಣಗಳನ್ನು ಪತ್ತೆ ಹಚ್ಚಿ ಆತನ ಸಮಸ್ಯೆಗಳನ್ನು ಪರಿಹರಿಸಿ ಸಾವಿನಿಂದ ದೂರ ಉಳಿದು ಬದುಕಿನತ್ತ ಮುಖ ಮಾಡುವಂತೆ ಮಾಡಲು ಯಾರಿಂದಲೂ ಆಗುತ್ತಿಲ್ಲ. ರೈತನ ಸಾವಿಗೆ ಸರಕಾರ ಪರಿಹಾರ ಒದಗಿಸುತ್ತದೆ ಈಗ ಸಾಲವನ್ನೇ ಮನ್ನಾ ಮಾಡುತ್ತಿದೆ. ಆದರೂ ರೈತರ ಸಾವಿನ ಸರಣಿ ನಿರಂತರ, ನೇಣು ಕುಣಿಕೆಯು ಬೆಸೆದುಕೊಂಡಂತೆ.
ರೈತನ ಆತ್ಮಹತ್ಯೆಗೆ ಕಾರಣ ಹುಡುಕಿದರೆ ಅದು ತತ್‌ಕ್ಷಣದ ನಿರ್ಧಾರವಾಗಿರುವುದಿಲ್ಲ. ಬಹುಕಾಲ ನೊಂದು ನೊಂದು ಆ ನೋವಲ್ಲಿ ಬೆಂದು ಬೆಂದು ಬದುಕಲಾರದೆ ಬಾಡಿಹೋಗುತ್ತದೆ ಜೀವ. ಸಾಲವೋ ಸಂಕಟವೋ ಸುಡುಗಾಡೋ ಏನೇ ಇರಲಿ ಬಹುಬೇಗ ಸ್ಪಂದಿಸಿ ಆತನ ನೋವು ಶಮನ ಮಾಡಬೇಕಾದದ್ದು ಎಲ್ಲರ ಕರ್ತವ್ಯ. ಏಲ್ಲರೂ ಅನ್ನದ ಹಂಗಿನಲ್ಲಿರುವವರೇ ಆಗಿರುವುದರಿಂದ ಆತನ ಋಣ ತೀರಿಸಲಾಗದ್ದು. ಒಂದು ಬೆಳೆಗೆ ರೋಗ ಬಂದಿದೆಯೆಂದರೆ ಆರಂಭದಲ್ಲೇ ರೋಗನಿವಾರಕಗಳನ್ನು ಬಳಸಬೇಕು. ಪರಿಸ್ಥಿತಿ ಹಾಗಿಲ್ಲ. ರೋಗವನ್ನು ಪತ್ತೆಹಚ್ಚಿ ಕಾರಣಗಳನ್ನು ಹುಡುಕಿ ಔಷಧೋಪಚಾರ ಕಂಡುಹಿಡಿಯುವ ಹೊತ್ತಿಗೆ ಗಿಡವೇ ಬಿದ್ದು ಹೋಗಿರುತ್ತದೆ. ಅಂತದೊಂದು ಗಿಡ ನಮ್ಮಣ್ಣ. ಇಡೀ ಮನೆಗೆ ನೆರಳಾಗಿದ್ದವನು ಒಂದು ದಿನ ಇದ್ದಕ್ಕಿದ್ದಂತೆ ಬೇರು ಕಿತ್ತುಕೊಂಡ. ನನ್ನ ಪ್ರತಿ ಹೊಸವರ್ಷವೂ ಸೂತಕದ ನೆನಪಿನಲ್ಲೇ ಆರಂಭವಾಗುತ್ತದೆ. ಇದು ಕಥೆಯಾ..? ಉತ್ತರವಿಲ್ಲ. ಉತ್ತರಿಸುವ ಹೆಣಗಾಟದಲ್ಲಿರುವ ಕಾಲ ಇನ್ನೂ ರೈತರ ಸಾವನ್ನೇ ಸಂಭ್ರಮಿಸುತ್ತಿದೆ.