ಒಮ್ಮೆ ನಾವಿಬ್ಬರೂ ಮಾತನಾಡುವ ಪ್ರಸಂಗ ಬಂದಾಗ ನಾನು ನನ್ನ ಕುಲದ ಬಗ್ಗೆ ಹೇಳಿದೆ; ಆ ಸಾಂಪ್ರದಾಯಿಕ ಬೇಲಿಯನ್ನು ಹಾರಬೇಕೆಂಬ ಆಸೆಯನ್ನು ತೋಡಿಕೊಂಡೆ. ಬಿಸಿ ರಕ್ತ, ವಿಚಾರವಂತಿಕೆಯ ಮೆದುಳು ಅವನಿಗೆ ಬಲ ತುಂಬಿತ್ತು. ಊರಿನ ಹಿರೀಗೌಡನಾದರೋ ಸರ್ವಾಂಗ ಸುಂದರಿ-ತೊಳೆದ ಮುತ್ತಿನಂತಿದ್ದ ನನ್ನನ್ನು ನೋಡಿ ಜೊಲ್ಲು ಸುರಿಸಿದ್ದು ತಿಳಿದ ದಿನ ಮೈಮೇಲೆ ಹಾವು-ಚೇಳು ಹರಿದಂತಾಗಿತ್ತು. ಬಣ್ಣದ ನೀರನ್ನು ನನ್ನ ಮೈ ಮೇಲೆ ಸುರಿಸಿ ಮುತ್ತು ಕಟ್ಟಿಸುವ ಮೊದಲು ನನ್ನ-ಅವನೊಡನೆ ನಾನು ಊರು ಬಿಟ್ಟು ಹೊರಟಾಗಿತ್ತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಶುಭಶ್ರೀ ಪ್ರಸಾದ್ ಕತೆ “ನಾ ಸಾಯಬೇಕು…” ನಿಮ್ಮ ಓದಿಗೆ

“ಓಯ್.. ಓಹೊಯ್ .. ನೋಡ್ರೋ ಅವಳನ್ನ. . . ಹೇಗೆ ಬಟ್ಟೆ ಇಲ್ಲದೆ ರಸ್ತೇಲಿ ಓಡಿ ಹೋಗ್ತಾ ಇದಾಳೆ. .” ಅನ್ನೋ ಶಬ್ದಗಳು, ವಿಚಿತ್ರ ನೋಟ, ಅಸಹ್ಯ ನಗು ನನ್ನ ಬೆನ್ನನ್ನು ಚುಚ್ಚುತ್ತಿದ್ದರೆ, ಭೂಮಿ ಬಾಯ್ತೆರೆದು ನುಂಗಬಾರದೇ ಅಂತ ಅನಿಸುತ್ತಿದೆ. ನನಗೆ ಎರಡು ನಿಮಿಷ ಸಮಯ ಕೊಟ್ಟಿದ್ದರೆ ಸಾಕಿತ್ತು, ಸ್ವಲ್ಪ ವಿಷವನ್ನಾದರೂ ಕುಡಿದುಬಿಡುತ್ತಿದ್ದೆ. ಆದರೆ ಈ ಜನ ನನ್ನನ್ನು ಹುಟ್ಟುಡುಗೆಯಲ್ಲಿ ಓಡಿಸಿದರಲ್ಲಾ… ನಾ ಏನು ಮಾಡಲಿ..? ಅಳುವನ್ನೂ ಮೀರಿದ ಅಸಹಾಯಕತೆ ನನ್ನನ್ನು ಆವರಿಸುತ್ತಿತ್ತು. ಮೈನ ಮುಂಭಾಗವನ್ನು ಕೈಯಿಂದ ಮುಚ್ಚಿಕೊಂಡರೆ ಹಿಂದೆ ಬೆತ್ತಲಾಗುತ್ತಿತ್ತು. ನನ್ನ ಕೈ ಎಷ್ಟು ಚಿಕ್ಕದು ಎಂಬ ಅರಿವು ನನಗೆ ಇಂದೇ ಆಗಿದ್ದು. ಕಟ್ಟಿದ್ದ ಜಡೆಯನ್ನು ಬಿಚ್ಚಿ ಬೆನ್ನ ಹಿಂದೆ ಹರವಿದೆ. ನೀಳಜಡೆ ನನ್ನ ಅರ್ಧ ಮಾನ ಮುಚ್ಚಿತು. ಆದರೂ ತುಸುವಾದರೂ ಹಾಯೆನಿಸುವ ಸಂದರ್ಭವೇ.. ? ಹೆಣ್ಣು ಜೀವವೇ ಛೀ.. ಅನಿಸಿತು.

ನನ್ನ ಕಥೆ ನನ್ನ ಕಣ್ಣ ಮುಂದೆಯೇ ಹಾದು ಹರಿಯತೊಡಗಿತು . . . . . . .

ನನ್ನದು ದೇವದಾಸಿ ಕುಟುಂಬ. ತಲೆತಲಾಂತರದರಿಂದಲೂ ದೇವದಾಸಿಯರಾಗಿ ಎಲ್ಲಮ್ಮನಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಊರಿನ ಹಿರಿಯರ ಕಣ್ಣು ಯೌವ್ವನ ತುಂಬಿದ ನಮ್ಮ ಹೆಣ್ಣುಮಕ್ಕಳ ಮೇಲೆ ಬೀಳುವುದೇ ತಡ, ದೇವಸ್ಥಾನದ ಪೂಜಾರಪ್ಪಂಗೆ ಕನಸಿನಲ್ಲಿ ದೇವಿ ಬಂದ್ಬಿಡ್ತಾಳೆ. ಮುಂದೆ ನಡ್ಯೋದೆಲ್ಲಾ ದೇವರ ಹೆಸರಿನಲ್ಲಿ ಊರ ದೊಡ್ಡವರ ಸೇವೆ.

ನಂಗೆ ಇದೆಲ್ಲಾ ಸೇರ್ತಾ ಇರ್ಲಿಲ್ಲ. ಹಠ ಮಾಡಿ ಶಾಲೆಗೆ ಹೋಗಿ ಓದು ಬರಹ ಕಲಿತೆ. ನಾಲ್ಕಾರು ಪುಸ್ತಕ ಓದಿದೆ. ತಪ್ಪು ಸರಿಗಳ ಬಗ್ಗೆ ನನ್ನ ತಲೆಯಲ್ಲು ಹುಳ ಕೊರೆಯುತ್ತಿತ್ತು. ನನ್ನೂರಿನ ತುಂಬೆಲ್ಲ ದೇವದಾಸೀ ಮಕ್ಕಳೇ. ಅಪರಿಚಿತ ಗಂಡು ಹೆಣ್ಣು ಕೂಡುವುದು ತಪ್ಪೆಂದು ಅವರಿಗೆ ಅನಿಸುವುದೇ ಇಲ್ಲ. ಕಂಡ ಕಂಡಲ್ಲಿ, ಬೇಲಿ, ಪೊದೆ, ದೇವಸ್ಥಾನದ ಹಿಂಭಾಗ, ಊರ ಹೊರಗಿನ ಬಯಲು.. ಹೀಗೆ ಎಲ್ಲೆಲ್ಲೂ ಅವರದ್ದೇ ದರ್ಬಾರು. ಅಸಹ್ಯವೆನುವುದು ಅವರಿಗೆ ತಿಳಿದೇ ಇಲ್ಲವೆನಿಸುತ್ತದೆ. ಅಂಥ ಹುಡುಗಿಯರ ಗರ್ಭ ಇಳಿಸುವಂಥ ಮದ್ದು ಕೊಡುವ ತಾಯವ್ವನಿಗೆ ಯಾವಾಗಲೂ ಕೈ ತುಂಬ ಕೆಲಸ.

ಕಥೆ ಕಾದಂಬರಿಗಳನ್ನು ಓದುತ್ತಿದ್ದ ನನಗೆ ಇದಕ್ಕಿಂತ ಬೇರೆ ಪ್ರಪಂಚ ಇದೆ; ನಾನು ಆ ಹೊಸ ಪ್ರಪಂಚದಲ್ಲಿ ಬಾಳಬೇಕೆಂಬ ಹೊಸ ಚಿಗುರು ಮೊಳೆಯುತ್ತಿತ್ತು. ಅದಕ್ಕೆ ಸರಿಯಾಗಿ ಒಂದು ಸಲ ಊರಿನ ಜಾತ್ರೆಯಲ್ಲಿ ಒಂದು ಹುಡುಗನ ಪರಿಚಯವಾಯಿತು. ಅವನು ತುಂಬಾ ಓದಿಕೊಂಡವನು. ವಿಚಾರವಂತ ಅಂತ ಹೆಸರು ಪಡೆದಿದ್ದನಂತೆ. ಆಗೀಗ ನನ್ನೂರಿನ ಅವನ ಗೆಳೆಯನೊಬ್ಬನನ್ನು ನೋಡಲು ಬರುತ್ತಿದ್ದ. ಕಣ್ಣು ಕಣ್ಣು ಕಲೆತು ಪ್ರೀತಿ ಮೊಳೆಯಿತು.

ಒಮ್ಮೆ ನಾವಿಬ್ಬರೂ ಮಾತನಾಡುವ ಪ್ರಸಂಗ ಬಂದಾಗ ನಾನು ನನ್ನ ಕುಲದ ಬಗ್ಗೆ ಹೇಳಿದೆ; ಆ ಸಾಂಪ್ರದಾಯಿಕ ಬೇಲಿಯನ್ನು ಹಾರಬೇಕೆಂಬ ಆಸೆಯನ್ನು ತೋಡಿಕೊಂಡೆ. ಬಿಸಿ ರಕ್ತ, ವಿಚಾರವಂತಿಕೆಯ ಮೆದುಳು ಅವನಿಗೆ ಬಲ ತುಂಬಿತ್ತು. ಊರಿನ ಹಿರೀಗೌಡನಾದರೋ ಸರ್ವಾಂಗ ಸುಂದರಿ-ತೊಳೆದ ಮುತ್ತಿನಂತಿದ್ದ ನನ್ನನ್ನು ನೋಡಿ ಜೊಲ್ಲು ಸುರಿಸಿದ್ದು ತಿಳಿದ ದಿನ ಮೈಮೇಲೆ ಹಾವು-ಚೇಳು ಹರಿದಂತಾಗಿತ್ತು. ಬಣ್ಣದ ನೀರನ್ನು ನನ್ನ ಮೈ ಮೇಲೆ ಸುರಿಸಿ ಮುತ್ತು ಕಟ್ಟಿಸುವ ಮೊದಲು ನನ್ನ-ಅವನೊಡನೆ ನಾನು ಊರು ಬಿಟ್ಟು ಹೊರಟಾಗಿತ್ತು. ಅಪ್ಪ ಅಮ್ಮ ಇಲ್ಲದ ಅವನು ನನ್ನಲ್ಲೇ ತನ್ನ ಸರ್ವಸ್ವವನ್ನು ಕಂಡ. ನಾನು ದೇವದಾಸಿಯ ಮಗಳು ಎಂಬುದನ್ನು ಎಲ್ಲರಿಂದ ಮುಚ್ಚಿಟ್ಟು ಶಹರದ ಸಮಾಜದಲ್ಲಿ ನನಗೊಂದು ಗೌರವದ ಸ್ಥಾನ ಕಲ್ಪಿಸಿಕೊಟ್ಟ.

ಹಾಲು ಜೇನಿನ ಹಾಗೆ ಜೀವನ ಸುಗಮವಾಗಿ ನಡೆಯುತ್ತಿತ್ತು. ಹದಿಹರೆಯ ದಾಟಿ ಇಪ್ಪತ್ತಕ್ಕೆ ನಾನು ಕಾಲಿಟ್ಟೆ. ಅದ್ಯಾವ ಕೆಟ್ಟ ಘಳಿಗೆ ನನ್ನ ಜೀವನದಲ್ಲಿ ಬಂದಿತೋ ಕಾಣೆ. ಒಂದು ದಿನ ನಾನೂ, ನನ್ನ ಗಂಡನೂ ಕೈ ಕೈ ಹಿಡಿದು ಊರಿನ ತುಂಬ ಓಡಿಯಾಡಿ ಪಾನಿಪೂರಿ ತಿನ್ನುತ್ತ, ಐಸ್‌ಕ್ರೀಮನ್ನು ಬಾಯಲ್ಲೇ ಕರಗಿಸುತ್ತ ನಡೆಯುತ್ತಿದ್ದೆವು. ನನ್ನ ಹಳ್ಳಿಯ ಒಬ್ಬ ನನ್ನನ್ನು ಕಂಡೇಬಿಟ್ಟ. ನಮ್ಮ ಬೆನ್ನ ಹಿಂದೆಯೇ ಬಂದು ನಮ್ಮ ಮನೆಯನ್ನೂ ತಿಳಿದುಬಿಟ್ಟ. ಮರುದಿನ ಬೆಳಿಗ್ಗೆ ನನ್ನ ಗಂಡ ಕೆಲಸಕ್ಕೆ ಹೋದ ಸ್ವಲ್ಪ ಹೊತ್ತಿನಲ್ಲೇ ನನ್ನ ಮನೆಯ ಬಾಗಿಲ ಸದ್ದಾಗಿತ್ತು. ಕದ ತೆರೆದು ನೋಡಿದರೆ ಹಿಂದಿನ ದಿನ ನನ್ನನ್ನು ಕಂಡಿದ್ದ ನನ್ನೂರಿನವ.. ನನ್ನೆದೆ ಪುಕ ಪುಕ ಎಂದಿತ್ತು ‘ಒಳಗೆ ಕರ್ಯಾಣಿಲ್ವಾ?’ ಎನ್ನುವ ಪ್ರಶ್ನೆಗೆ ಉತ್ತರವಾಗಿ ಸೋಫಾದ ಕಡೆ ಕೈ ತೋರಿಸಿದೆ. ಊರಿನ ಅವನನ್ನು ಕಾಣುವ ತನಕ ತಾಯಿ, ಅಜ್ಜಿಯರನ್ನು ಮರೆತೇಬಿಟ್ಟಿದ್ದ ನನಗೆ ಒಮ್ಮೆಲೇ ದುಃಖ ಉಮ್ಮಳಿಸಿದಂತಾಗಿತ್ತು. ನನ್ನ ಕಣ್ಣೀರು ಕಂಡು ಊರಿನವರು ‘ಅದ್ಯಾಕ್ ಅಳ್ತೀ.?’ ಎಂದ. ‘ದ್ಯಾವಣ್ಣಾ ಅವ್ವ ಸಂದಾಗಿದ್ದಾರಾ..?’ ಅಂದೆ. (ಮೊದಲ ಬಾರಿಗೆ ಒಬ್ಬ ಪುರುಷನನ್ನು ನಾನು ಅಣ್ಣ ಅಂದಿದ್ದು. ಯಾಕೆಂದರೆ ನನ್ನೂರಿನಲ್ಲಿ ಎಲ್ಲರನ್ನೂ ಮಾಮ ಎನ್ನುವುದೇ ಹೆಣ್ಣುಗಳಿಗೆ ರೂಢಿ…!) “ಓ ಸಂದಾಗಿದ್ದಾರೆ” ಅಂದ. ಊರಿನ ಎಷ್ಟೋ ವಿಚಾರ ಮಾತನಾಡಿದ ಮೇಲೆ ದ್ಯಾವ ಹೊರಟ. ಗಂಡನಿಗೆ ದ್ಯಾವ ಬಂದು ಹೋದ ವಿಚಾರ ತಿಳಿಸಬೇಕೋ ಬೇಡವೋ ಎನ್ನುವ ವಿಚಾರದಲ್ಲಿ ಮನಸ್ಸು ಡೋಲಾಯಮಾನವಾಯಿತು. ಗಂಡ ಏನಂದುಕೊಳ್ತಾನೋ ಅನ್ನೋ ಭಯದಲ್ಲಿ ವಿಷಯ ಮುಚ್ಚಿಟ್ಟೆ.. ಪಾಪ ಪ್ರಜ್ಞೆ ಕಾಡಿತು..

ದ್ಯಾವ ಮತ್ತೊಂದೆರಡು ಬಾರಿ ಬಂದು ಹೋದ. ನನ್ನ ಅವ್ವ ನನ್ನ ಬಾಳನ್ನು ಕೇಳಿ ಸಂತೋಷಪಟ್ಟದ್ದು ತಿಳಿದು ಮನಸ್ಸು ಹಗುರಾಯಿತು. ‘ಚದ್ಯ ನನ್ಮಗ್ಳು ನಮ್ಮಂಗಾಗ್ದೇ ಸಂಸಾರಗಿತ್ತಿ ಆದ್ಳಲ್ಲಾ. ಯಾರಿಗ್ ಬೇಕು ಇಂಥ ಹೊಲಸು ಜೀವ್ನ’ ಅಂತ ಅಂದ್ರಂತೆ ಅಮ್ಮ. ಅಮ್ಮನ ಸಂಕ್ಟ, ನೋವು ನಂಗೆ ಯಾವಾಗ್ಲೂ ತಿಳೀತಿತ್ತು.

ನಂಗೂ ಒಂದ್ಸಲ ಅಮ್ಮನ್ನ ನೋಡ್ಬೇಕು ಅಂತ ಆಸೆ ಆಗ್ತಿತ್ತು. ಆದ್ರೆ ಆ ಊರಿಗೆ ಹೋಗೋದು ನನ್ ಗಂಡಂಗೆ ಇಷ್ಟ ಇಲ್ಲ ಅನ್ನೋದು ನಂಗೆ ತಿಳಿದಿತ್ತು. ಬಹುಶಃ ನಾ ಹೋದ್ರೆ ಈ ಊರಿನಲ್ಲಿ ಯಾರ್ಗಾದ್ರೂ ನಾ ದೇವದಾಸಿ ಮಗಳು ಅನ್ನೋದು ಗೊತಾಗತ್ತೆ ಅನ್ನೋ ಭಯ ಇರಬಹುದು.

ಈ ನಡುವೆ ನಮ್ ಪಕ್ಕದ್ಮನೆ ಸೋಮಪ್ಪನ ಹೇಣ್ತಿ ಗೌರಮ್ಮ ತೀರ್ಕೊಂಡಳು. 50 ವರ್ಷದ ದಾಂಪತ್ಯ ಅವರದು. ಸೋಮಪ್ಪನ ಒದ್ದಾಟ ಸಂಕಟ ನೋಡೋಕಾಗ್ತಿರ್ಲಿಲ್ಲ. ‘ದಿನಾ ಮನೆಗೆ ಬಂದ ತಕ್ಷಣ ಗೌರಿ, ಗೌರಮ್ಮ ಅಂತ ಕರೀತಿದ್ದೆ. ಇನ್ಮೇಲೆ ಯಾರನ್ನ ಹಾಗೆ ಕರೀಲಿ, ಕರೀದೆ ಹೇಗೆ ಇರಲಿ? ನನ್ನ ಕಷ್ಟದ ಕಾಲದಲ್ಲಿ ನನ್ನ ಕೈ ಹಿಡಿದೋಳು. ಒಂದಿನಾ ನನ್ ಮೇಲೆ ಗೊಣಗಲಿಲ್ಲ; ನಾನೇ ಬೈದ್ರೂ ಅದು ತನ್ ಮೇಲೆ ಮಲ್ಲಿಗೆ ಹೂ ಸುರಿದ ಹಾಗೆ ಅಂತಿದ್ದ ಗೌರಮ್ಮನಂಥ ಹೆಂಡತಿ ನನ್ನ ಬಿಟ್ಟು ಹೊರಟು ಹೋದಳಲ್ಲಾ. . ಕೊನೆಗೆ ಒಂದ್ ನಾಲಕ್ ಮಾತ್ ನಂಜೊತೆ ಆಡಿದ್ರೂ, ಅಥ್ವಾ ನನ್ನ ಬೈದಿದ್ರೂ ನನ್ ಜೀವಕ್ಕೆ ಸಮಾಧಾನ ಆಗ್ತಿತ್ತು. ಮೌನವಾಗಿ ಹೋಗಿಬಿಟ್ಳಲ್ಲಾ.’ ಅಂತ ಗೋಳಾಡೋದನ್ನು ಕಂಡಾಗ ನನಗೆ ದಾಂಪತ್ಯದ ಮಹತ್ವ ತಿಳಿಯತೊಡಗಿತು. ಗಂಡ ಹೆಂಡಿರ ಸಾಂಗತ್ಯ ದೈಹಿಕ ವ್ಯಾಪಾರವನ್ನೂ ಮೀರಿದ ಪ್ರೀತಿ, ತುಡಿತ, ಮಿಡಿತ. ಅದು ಮನೋಸಾಂಗತ್ಯ ಎನ್ನುವ ಅರಿವಾದಾಗ ನನ್ನ ಗಂಡನೊಡನೆ ಇನ್ನೂ ಹೆಚ್ಚಿನ ಒಲವಿಂದ ದಾಂಪತ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕೆನ್ನುವ ಆಶಯ ಬಲವಾಯಿತು.

ಮತ್ತೊಂದು ಬಾರಿ ದ್ಯಾವ ಬಂದಾಗ ಅವ್ವನಿಗೆ ಆರಾಮವಿಲ್ಲವೆಂದು ತಿಳಿದು ಮನ ಕಲಕಿತು. ಎಷ್ಟಾದರೂ ಹೆತ್ತವ್ವ.. ಕರುಳು ಚುರ್ ಎನ್ನದೇ.? ಗಂಡ ಮನೆಗೆ ಬರೋದ್ರೊಳಗೆ ವಾಪಸ್ ಬರುವ ಇರಾದೆಯಿಂದ ಹಳ್ಳಿಗೆ ಹೊರಟೇಬಿಟ್ಟೆ… ವಿಧಿಯಾಟ. . . . ದ್ಯಾವನ ಕೂಡ ನಾ ಹೋಗೋದು ಕಂಡ ಗಂಡ ಅನುಮಾನಗೊಂಡು ಅಕ್ಕ ಪಕ್ಕದವರಲ್ಲಿ ವಿಚಾರಿಸಿದನಂತೆ. ಒಬ್ಬ ಮನುಷ್ಯ ಆಗೀಗ ಬಂದು ಹೋಗ್ತಾ ಇರ್ತಾನೆ ಎನ್ನುವ ಸುದ್ದಿ ನನ್ನ ಗಂಡನ ಕಿವಿಗೆ ಬಿತ್ತಂತೆ. ಕೆರಳಿ ಕೆಂಡವಾದ ನನ್ನ ಗಂಡ ನನ್ನ ಹಳ್ಳಿಗೆ ಮಟಮಟ ಮಧ್ಯಾಹ್ನ ಬಂದ. ನನ್ನವ್ವನನ್ನು ಕಂಡು ‘ತಾಯಿಯಂತೆ ಮಗಳು, ನೂಲಿನಂತೆ ಸೀರೆ.. ನಿನ್ನಂಗೇ ನಿನ್ ಮಗ್ಳೂ ದಾರಿ ಬಿಟ್ಟವ್ಳೆ. ಹಲ್ಕಾ ಕೆಲ್ಸ ಮಾಡಿದ ಅವ್ಳು ನಿನ್ ಮನ್ಯಾಗೇ ಇರ್ಲಿ’ ಅಂದುಬಿಟ್ಟ. ನಾ ಎಷ್ಟೆಷ್ಟೋ ಬಗೆಯಲ್ಲಿ ಸಮಜಾಯಿಷಿ ನೀಡಿದೆ; ಕಾಲು ಹಿಡಿದೆ, ಕಣ್ಣೀರು ಕರೆದೆ. ಅನುಮಾನಗೊಂಡ ಮನಸ್ಸು ಬಿಸಿನೀರಿನ ಹಬೆಗೆ ಒಡ್ಡಿಕೊಂಡ ಕನ್ನಡಿಯ ಹಾಗೆ, ಪ್ರತಿಬಿಂಬ ಸ್ಪಷ್ಟವಾಗಿ ಕಾಣುವುದಿಲ್ಲ. ‘ಹುಟ್ಟುಗುಣ ಸುಟ್ಟರೂ ಹೋಗಲ್ಲ’ ಎಂದು ಹಂಗಿಸಿ ನನ್ನ ಗಂಡ ನನ್ನನ್ನು ಬಿಟ್ಟು ಹೊರಟೇಹೋದ.

ಸುಖಸಂಸಾರದ ಕನಸು ನುಚ್ಚುನೂರಾಯಿತು. ದೇವದಾಸಿಯ ಮಗಳಾದ ತಪ್ಪಿಗೆ ನನಗೇಕೆ ಇಂಥ ಶಿಕ್ಷೆ ಎನ್ನುವ ದುಃಖದಲ್ಲಿ ಇಡೀ ರಾತ್ರಿ ಕಣ್ಣೀರುಗರೆದೆ.

ಹದ್ದು ಎಷ್ಟೇ ಮೇಲೆ ಹಾರಾಡ್ತಾ ಇದ್ದರೂ ನೆಲದ ಮೇಲಿನ ತನ್ನ ಬೇಟೆಯನ್ನು ಹೇಗೆ ಕಂಡು ಹಿಡಿಯತ್ತೋ ಹಾಗೆ ಊರಿನ ಹಸಿದ ಬೇಟೆ ನಾಯಿಗಳು ನನ್ನತ್ತ ಕಣ್ಣು ಹಾಕಿದವು. ನಾ ದೇವದಾಸೀ ಪದ್ಧತಿಯನ್ನು ಮುರಿದ ತಪ್ಪಿಗೆ ಊರಲ್ಲಿ ಮಳೆ ಬೆಳೆ ಸರಿಯಾಗುತ್ತಿಲ್ಲ. ಬಣ್ಣದ ನೀರನ್ನು ಗೊಜ್ಜಿಸಿಕೊಂಡು ದೇವದಾಸಿಯಾಗು ಎನ್ನುವ ಯಾರ ಮಾತಿಗೂ ನಾ ಜಗ್ಗಲಿಲ್ಲ. ಕೊನೆಗೆ ತಮ್ಮ ಆಸೆ ತೀರಿಸಿಕೊಳ್ಳುವ ಸಲುವಾಗಿ ಎಲ್ಲರೂ ಪಿತೂರಿ ಮಾಡಿ ಊರಿನ ಎಲ್ಲಮ್ಮನ ಗುಡಿ ಪೂಜಾರಪ್ಪನ ಕಿವಿ ಊದಿದರು. ದೇವೀ ಗುಡಿಯ ಮುಂದಿನ ಚಾವಡಿಯಲ್ಲಿ ಊರಿಗೆ ಊರೇ ಸೇರಿತು. ನಾ ತಗ್ಗಿಸಿದ ತಲೆ ಎತ್ತಲಿಲ್ಲ. ಯಾವ ಊರಿನ, ಸಂಪ್ರದಾಯದ ಗೊಡವೆ ಬೇಡ ಎಂದು ಆಚೆ ಜಿಗಿದಿದ್ದೆನೋ ಅದೇ ಊರಿನ ಅದೇ ಹಸಿದ ಕಣ್ಣುಗಳ ಮುಂದೆ ತಲೆ ಎತ್ತುವುದು ನನ್ನಿಂದಾಗಲಿಲ್ಲ. ‘ದೇವದಾಸಿಯಾಗೋಕೆ ಒಪ್ತೀಯೋ ಅಥ್ವಾ ದೇವರ ಶಿಕ್ಷೆಗೆ ಒಪ್ತೀಯೋ.?’ ಅನ್ನೋ ಪೂಜಾರಪ್ಪನ ಮಾತಿಗೆ ಪ್ರತಿಯಾಗಿ ಶಿಕ್ಷೆಗೆ ಒಪ್ಪಿಗೆ ಸೂಚಿಸಿದೆ. ಶಿಕ್ಷೆ ಏನಿರಬಹುದೆಂಬ ಕಲ್ಪನೆಯೂ ಇರದ ನಾನು ನನ್ನ ತಲೆಯ ಮೇಲೆ ನಾನೇ ಚಪ್ಪಡಿ ಎಳೆದುಕೊಂಡೆ. ‘ಮೈ ಮೇಲಿನ ಬಟ್ಟೆ ಕಳಚಿ ಊರಿನಿಂದ ಹೊರಗೆ ಕಾಡಿಗೆ ಹೋಗಬೇಕು’ ಎನ್ನುವ ಹಿರೀಕರ ಮಾತಿಗೆ ಬೆಚ್ಚಿದೆ. ಬಹುಶಃ ಇಂಥ ಶಿಕ್ಷೆಯಿಂದ ನಾ ಹಿಂಜರಿದು ಬಸವಿಯಾಗಲೆಂಬುದೇ ಅವರ ಉದ್ದೇಶವಿತ್ತೇನೋ… ನಾ ಏನೂ ಹೇಳಲಾರದೆ ಕಣ್ಣು ತುಂಬಿ ನಿಂತೆ.

ಊರಿನ ಯಾವ ಹೆಣ್ಣುಗಳೂ ನನಗೆ ಸಹಾಯ ಮಾಡುವ ಧೈರ್ಯ ತೋರಲಿಲ್ಲ. ಗಂಡುಗಳ ವಿಷಯ ಹೇಳೋದೇ ಬೇಡ. ‘ಹೂಂ.. ತೆಗೀರೀ. ಅಟ್ಟಿರೀ..’ ಎನ್ನುವ ಆರ್ಭಟ ಕೇಳಿ ಊರಿನ ವೃದ್ಧ ದೇವದಾಸಿ ನನ್ನ ಬಟ್ಟೆಗೆ ಕೈ ಹಾಕಿದಳು. ಸೂರ್ಯ ಕೂಡ ನಾಚಿದವನಂತೆ ಮೋಡ ಮುಸುಕಿತು. ಆದರೆ ಊರ ಗಂಡಸರಿಗೆ ಯಾವ ನಾಚಿಕೆಯೂ ಇಲ್ಲದೆ ಬಿಟ್ಟ ಕಣ್ಣು ಬಿಟ್ಟಂತೆ ಬಾಯ್ಬಿಟ್ಟು ನಿಂತಿದ್ದರು. ನನ್ನ ಅವಸ್ಥೆ ನೋಡಿ ಅನೇಕ ಹೆಣ್ಣುಗಳು ಕಣ್ತಗ್ಗಿಸಿದರು.

ಹೆಣ್ಣಿನ ಜನ್ಮದ ಬಗ್ಗೆಯೇ ಜಿಗುಪ್ಸೆ ಎನಿಸಿತು. ತಿಂಗಳ ಮಗುವಿನಿಂದ ತಲೆ ನಡುಗುವ ವಯಸ್ಸಿನವರೆಗೆ ಅದು ಹೆಣ್ಣಾದರೆ ಸಾಕು ತಮ್ಮ ಭೋಗದ ವಸ್ತುವೆಂದು ಭಾವಿಸುವ ವಿಕೃತ ಮನದವರು ಇರುವ ತನಕ ಹೆಣ್ಣು ಜೀವ ಹುಟ್ಟಲೇಬಾರದು ಎನಿಸುತ್ತದೆ. ಹೆಣ್ಣಿಗೂ ಒಂದು ಜೀವವಿದೆ, ಮನಸ್ಸಿದೆ, ಭಾವನೆಯಿದೆ ಎಂಬುದನ್ನೇ ಮರೆತು ಆಟಿಕೆಯಂತೆ ನಡೆಸಿಕೊಳ್ಳುವ ಸಮಾಜ ಇರುವವರೆಗೆ ನನ್ನಂಥ ಅಬಲೆಗೆ ಬದುಕುವ ಆಸೆ ಬರುವುದೂ ಬೇಡ.. ಹೌದು ‘ನಾ ಸಾಯಬೇಕು…. ನಾ ಸಾಯಬೇಕು’ ಎಂದೆನಿಸಿದ್ದೇ ತಡ ಸಾಯುವ ಮಾರ್ಗ ಯಾವುದು ಎಂಬ ಯೋಚನೆ ಕ್ಷಣಮಾತ್ರದಲ್ಲಿ ನನ್ನ ಮನದಲ್ಲಿ ಹಾದುಹೋಯಿತು.

“ಓಯ್. . ಓಹೊಯ್ .. ನೋಡ್ರೋ ಅವಳನ್ನ. . . ಹೇಗೆ ಬಟ್ಟೆ ಇಲ್ಲದೆ ರಸ್ತೇಲಿ ಓಡಿ ಹೋಗ್ತಾ ಇದಾಳೆ. .” ಅನ್ನೋ ಶಬ್ದಗಳು, ವಿಚಿತ್ರ ನೋಟ, ಅಸಹ್ಯ ನಗು ನನ್ನ ಬೆನ್ನನ್ನು ಚುಚ್ಚುತ್ತಿವೆ. ಏನು ಮಾಡೋಕೂ ಆಗದೆ ಒಮ್ಮೆ ಮಂಡಿಯೂರಿ ಮೈಮುಚ್ಚಿಕೊಳ್ಳಲು ಯತ್ನಿಸಿದೆ. ಆಗದೆ ಎದ್ದು ಹಿಂಸಿಗೆ ಮೈಯೊಡ್ಡುತ್ತ ಓಡತೊಡಗಿದೆ.

ಯಾಕೋ ಈ ಕ್ಷಣ ಅಕ್ಕನ ನೆನಪಾಗುತ್ತಿದೆ.

ನನ್ನಿಚ್ಛೆಯಿಲ್ಲದೆಯೂ ನಾನು ಹೀಗೆ ಬೆತ್ತಲಾಗಿ ರಸ್ತೆಗೆ ಬಂದಿದ್ದೇನೆ. ಆದರೆ ಅಕ್ಕ ದೇಹದ ವ್ಯಾಮೋಹ ತೊರೆದು, ಕೇಶಾಂಬರೆಯಾಗಿ, ಸಮಾಜದ ಕಣ್ಣಲ್ಲಿ ಗಂಡನಾದ ಕೌಶಿಕನನ್ನು ತೊರೆದು, ಶ್ರೀಶೈಲದ ಚನ್ನಮಲ್ಲಿಕಾರ್ಜುನನನ್ನು ತನ್ನ ಮನದಲ್ಲಿ ನೆನೆಯುತ್ತ ನಿರ್ಮೋಹಿಯಾಗಿ ಎಲ್ಲರನ್ನೂ ತೊರೆದಳಲ್ಲಾ. . .

‘ದೇಹ ಉಳ್ಳನ್ನಕ್ಕರ ಲಜ್ಜೆ ಬಿಡದು, ಅಹಂಕಾರ ಬಿಡದು.
ದೇಹದೊಳಗೆ ಮನ ಉಳ್ಳನ್ನಕ್ಕರ ಅಭಿಮಾನ ಬಿಡದು,
ನೆನಹಿನ ವ್ಯಾಪ್ತಿ ಬಿಡದು.
ದೇಹ ಮನವೆರಡೂ ಇದ್ದಲ್ಲಿ ಸಂಸಾರ ಬಿಡದು.
ಸಂಸಾರವುಳ್ಳಲ್ಲಿ ಭವ ಬೆನ್ನ ಬಿಡದು.
ಭವದ ಕುಣಿಕೆಯುಳ್ಳನ್ನಕ್ಕರ ವಿಧಿವಶ ಬಿಡದು.
ಚೆನ್ನಮಲ್ಲಿಕರ‍್ಜುನನೊಲಿದ ಶರಣರಿಗೆ ದೇಹವಿಲ್ಲ, ಮನವಿಲ್ಲ, ಅಭಿಮಾನವಿಲ್ಲ ಕಾಣಾ ಮರುಳೆ.’

(ಡಾ. ಶುಭಶ್ರೀ ಪ್ರಸಾದ್)

ಹೌದು ಅಕ್ಕ ಹೇಳಿದ ಹಾಗೆ ಈ ದೇಹದ ಮೇಲೆ ನಮಗೆ ವ್ಯಾಮೋಹ ಹೋಗದ ಹೊರತು ಭಗವಂತನ ಸಾಕ್ಷಾತ್ಕಾರವಾಗದು. ನಾನು, ನನದು ಎಂಬ ಮಮಕಾರ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೆ ಬೇರೆಯವರ ಮಾತು, ನೋಟ, ಭಾವ ನಮ್ಮನ್ನು ಹಿಂಸಿಸದೆ ಬಿಡದು. ಈ ಕ್ಷಣ ನನ್ನ ಗಂಡನ ನೆನಪಾಗುತ್ತಿದೆ. ದುಃಖ, ಅವಮಾನಗಳ ಜಾಗದಲ್ಲಿ ಅವನ ಬಗೆಗೆ ಕರುಣೆ, ಅನುಕಂಪ ಮೂಡಿತು.

ನನ್ನ ಬೆನ್ನ ಹಿಂದೆ ನಗುತ್ತಿರುವವರ ಕಂಡು ಪಾಪ ಎನಿಸಿತು. ದೇಹವನ್ನು ಭೋಗಿಸುವ, ದೇಹದ ಸೌಂದರ್ಯ ಕಂಡು ಆನಂದಿಸುವ ಅವರ ಬಗೆಗೆ ಯಾವ ತಾತ್ಸಾರವೂ ಮೂಡಲಿಲ್ಲ. ಚರ್ಮ, ರಕ್ತ, ಮಾಂಸ, ಎಲುಬುಗಳಿಂದ ಮಾಡಿದ ಈ ದೇಹದ ಮೇಲೆ ನನಗೆ ಇಷ್ಟೊಂದು ಮೋಹವೇ ಎನಿಸಿ ನಗೆ ಬಂತು. ನನ್ನ ಆತ್ಮವು ನೋವು, ಕ್ರೋಧ, ಮೋಹ, ಅವಮಾನ, ಹಿಂಸೆಗಳ ಹಿಡಿತದಿಂದ ಬಿಡಿಸಿಕೊಳ್ಳತೊಡಗಿತು.

‘ನಾ ಸಾಯಬೇಕು’ ನನ್ನೊಳಗಿನ ‘ನಾ’ ಸಾಯಬೇಕು ಎಂಬ ಭಾವ ಬಲವಾಗತೊಡಗಿತು. ತಲೆಯೆತ್ತಿ ನಡೆದೆ. ಯಾವ ಸಂಕೋಚ, ನಾಚಿಕೆಯೂ ಆವರಿಸಲಿಲ್ಲ. ಬಲವಾದ ಹೆಜ್ಜೆಯೂರಿ ದಿಟ್ಟವಾಗಿ ನಡೆದೆ.

ನಗುತ್ತಿದ್ದ ಜನ ಒಂದು ಕ್ಷಣ ಮೌನವಾಯಿತು. ಮುದುಡಿದ ದೇಹ ಸಲೀಸಾಗಿ, ಬೆತ್ತಲಾಗಿ ನಡೆವುದನ್ನು ಕಂಡು ಅಚ್ಚರಿಗೊಂಡಿತು.

ಊರವರ ಕೇಕೆ, ನಗು, ಆ ನೋಟಗಳಾವುವೂ ನನ್ನ ಬೆನ್ನಿಗೆ ತಿಳಿಯುತ್ತಿಲ್ಲ… ಅವೆಲ್ಲ ಈ ಶರೀರ, ಆತ್ಮವನ್ನು ತಲುಪುತ್ತಿಲ್ಲ.. ನಾ ಹಗುರವಾಗುತ್ತಾ ಹೋದೆ. .

‘ನಾ ಸಾಯಬೇಕು’ ಎಂದು ದಿಗಂಬರೆಯಾಗಿ ನಾನು ಎಂಬ ನನ್ನ ಅಹಮಿಕೆಯು ಕೊಲ್ಲುತ್ತಾ ಎಲ್ಲರಿಗೂ ಬೆನ್ನು ಹಾಕಿ ನಡೆದೆ. ಅವನಲ್ಲದ, ಅವಳಲ್ಲದ, ನಾನಲ್ಲದ ನಾನು ಅಕ್ಕನನ್ನು ಹಿಂಬಾಲಿಸುತ್ತಾ.. ಹಿಂಬಾಲಿಸುತ್ತಾ. ನಡೆಯಹತ್ತಿದೆ… ನಡೆಯುತ್ತಲೇ ಇದ್ದೇನೆ. . . .