ಕುರ್ಚಿ ಅಡಿಗಳಲ್ಲಿ, ನೆಲ ಮತ್ತು ಚಾಪೆಯ ಸ್ಥಳಗಳನ್ನು ಗುಡಿಸಿ ಸ್ವಚ್ಛಗೊಳಿಸುವುದೆಂದರೆ ಬರೋಬ್ಬರಿ ಎರಡು ಗಂಟೆಗಳ ಕೆಲಸ. ನನ್ನ ಎಳೆ ರಟ್ಟೆಯಲ್ಲಿದ್ದ ಶಕ್ತಿಯೆಲ್ಲವೂ ಸೋರಿ ಹೋದಂತೆ ಅನಿಸುತ್ತಿತ್ತು. ನಟಿ ಫ್ಲೋರಿನಾ ಬಾಯಿಯವರದ್ದೇ ಮೇಲುಸ್ತುವಾರಿ. ‘ಇನ್ನೂ ಆಗಿಲ್ಲವಾ?’ ಎಂದು ಅಧಿಕಾರ ಸಾಧಿಸುವ ಮಾತುಗಳನ್ನೇ ಪ್ರಶ್ನೆಯಾಗಿ ಕೇಳುತ್ತಿದ್ದರು. ಅಂದಹಾಗೆ, ಇದೆಲ್ಲದರ ನಡುವೆ ಅವರ ಸಾಕಿದ ಮಗಳು ದೂರದ ಹಾಸ್ಟೆಲ್‌ನಲ್ಲಿ ಓದುತ್ತಿದ್ದಳು. ರಜೆಗೆಂದು ಬಂದಾಗ ನನ್ನನ್ನು ಕಂಡಳು. ಆಡಲು ಜೊತೆಯಾಗುತ್ತಾಳೆ ಎಂದುಕೊಂಡಿದ್ದಳೋ ಏನೊ, ಅದಕ್ಕಾಗಿ ನನ್ನ ಬರುವಿಕೆಯನ್ನೇ ದೂರದಲ್ಲೇ ನಿಂತು ಕಾಯುತ್ತಿದ್ದಳು.
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಒಂಭತ್ತನೆಯ ಕಂತು
ಹೂವಿನ ಹಡಗಲಿ ಪಂಪನ ಗೌಡರ ಕಂಪೆನಿಯಲ್ಲಿ ಆದ ಘಟನೆಯನ್ನು ನಾನಷ್ಟೇ ಅಲ್ಲ, ನನ್ನವ್ವ ಇದ್ದಿದ್ದರೂ ಮರೆಯುತ್ತಿರಲಿಲ್ಲವೇನೊ. ಕಂಪೆನಿಯ ಶಿಸ್ತಿನ ಜಗತ್ತಿನಲ್ಲಿ ಹೇಗಿರಬೇಕೆಂದು ಅವ್ವ ತಿಳಿಯದಾದಳು. ತಲೆ ಮೇಲೆ ಸೆರಗು ಹೊದ್ದು, ಒಂದು ಮಾತಾಡಿದರೆ ಕಮ್ಮಿ ,ಎರಡು ಆಡಿದರೆ ಹೆಚ್ಚು ಎನ್ನುವಂತಿದ್ದ ಅವಳು ಬಣ್ಣದ ಲೋಕವನ್ನು ಬೆರಗುಗಣ್ಣಿನಿಂದ ನೋಡುತ್ತಲೇ ಕಳೆದಳು. ಜೊತೆಯಲ್ಲಿ ಒಂದು ವರ್ಷದ ತಮ್ಮ ಬೇರೆ. ಇದ್ದ ಪರಿಸರ ದಿನೇದಿನೇ ಉಸಿರುಗಟ್ಟಿಸುವಂತಾದಾಗ ಕಂಪೆನಿ ತೊರೆಯುವುದೊಂದೆ ಪರಿಹಾರವೆನಿಸಿತು. ಮನೆ ಕಳ್ಳತನ ಆದಾಗಿನಿಂದ ಚೈತನ್ಯ ಕುಂದಿಸಿಕೊಂಡಿದ್ದ ಅವ್ವನಿಗೆ ನನ್ನ ಬಗೆಗಿನ ತಾತ್ಸಾರ ಇನ್ನಷ್ಟು ಹೆಚ್ಚಾಗತೊಡಗಿತು.
ಊರಿಗೆ ಮರಳಿದ್ದೇನೊ ಹೌದು, ಆದರೆ ಕಂಪೆನಿಯ ಕನವರಿಕೆ, ನಾಟಕದ ಯೋಚನೆಯೇ ನನ್ನನಾವರಿಸಿತ್ತು. ಹಾರಾಡುತ್ತಿದ್ದ ಹಕ್ಕಿಯನ್ನು ತಂದು ಪಂಜರದಲ್ಲಿಟ್ಟಂತಹ ಸ್ಥಿತಿ. ಎಂಟರ ಹುಡುಗಿಗೆ ಹೀಗೆಲ್ಲ ಯೋಚಿಸಲು ಸಾಧ್ಯನಾ ಅಂತ ಭಾವಿಸಬಹುದು. ಬದುಕು ಅಂದರೆ ಏನೆಂದೇ ಅರಿಯದ ವಯಸ್ಸು, ನಿಜ. ರಂಗದ ಮೇಲೆ ಪಾತ್ರವಾಗಿ ನಿಲ್ಲುವುದಷ್ಟೇ ಮುಖ್ಯವಾಗಿತ್ತು ನನಗೆ. ಆ ಕಂಪೆನಿಯಿಂದ ಬಂದ ಮೇಲೂ ಭಾನಾಪುರ ಲಕ್ಷ್ಮೀದೇವಿ ಮನೆಗೆ ಹೋಗುವುದನ್ನು ನಿಲ್ಲಿಸಿರಲಿಲ್ಲ. ಆವತ್ತು ಹೀಗೆ ‘ನಾಟಕ ಮಾಡ್ಬೇಕು, ನಾನೂ ಬಣ್ಣ ಹಚ್ಬೇಕು’ ಅಂತೆಲ್ಲ ಆಸೆ ವ್ಯಕ್ತಪಡಿಸಿದೆ. ಪ್ರತಿದಿನದ ನನ್ನ ವರಾತ ಕೇಳಿ ಕೇಳಿ, ಕಂಪೆನಿ ಬಗ್ಗೆ ನನಗಿರುವ ಆಸಕ್ತಿ ಅವಳಿಗೆ ಅರ್ಥವಾಗಿರಬೇಕು. ‘ನೀನು ಅಷ್ಟರಮಟ ನಾಟಕ ಮಾಡ್ಲೇಬೇಕು ಅಂತಿದ್ರೆ, ಗದಗಿಗೆ ಹೋಗು. ಅಲ್ಲಿ ಪಟ್ಟದಕಲ್ನಾಗ ಕಂಪೆನಿ ಐತಿ. ಅಲ್ ಸೇರ್ಕೋಬೋದವ್ವ’ ಅಂದೇಬಿಟ್ಟಳು. ಪ್ರವಾಹದ ಸೆಳೆತಕ್ಕೆ ಸಿಕ್ಕವರಿಗೆ ಹುಲುಕಡ್ಡಿ ಸಿಕ್ಕರೂ ಬದುಕುವ ಆಸೆ ಮತ್ತೆ ಹುಟ್ಟುತ್ತದಲ್ಲಾ, ಅವಳ ಮಾತು ಕೇಳುತ್ತಿದ್ದಂತೆ ನನಗೂ ಅದೇ ಭಾವ. ಸರಿ ಇನ್ನೇನು, ಹೇಗೆ ಹೊರಡುವುದೆಂದು ಮನಸ್ಸು ಯೋಚಿಸಲು ಶುರುವಿಟ್ಟಿತು.
ಮಾರನೇ ದಿನದ ಬೆಳಿಗ್ಗೆ ತಮ್ಮನನ್ನು ನನ್ನ ಕೈಗೊಪ್ಪಿಸಿದ ಅವ್ವ ಸಂಜೆ ಆರರ ಹೊತ್ತಿಗೆ ಬರುವೆನೆಂದು ಹೊರಟೇ ಹೋದಳು. ನಾನೋ ನರಪೇತಲ ಹುಡುಗಿ! ತೆಳ್ಳಗಿನ ಶರೀರದವಳಾಗಿದ್ದೆ. ಬೆಳಗಿನಿಂದ ಸಂಜೆಯವರೆಗೆ ತಮ್ಮನನ್ನು ನೆಲಕ್ಕೆ ಬಿಡದಂತೆ ಹೊತ್ತು ಕೂರುವುದಕ್ಕಾಗಲಿ, ಕೆಳಬಿಟ್ಟರೂ ಬರೀ ಒಂದಲ್ಲ, ಎರಡೂ ಕಣ್ಣುಗಳನ್ನು ಅವನೆಡೆಗೇ ಇಟ್ಟು, ಅವನ ತುಂಟಾಟಗಳನ್ನು ಗಮನಿಸುವಷ್ಟು ತ್ರಾಣವಾಗಲಿ ಇರಲಿಲ್ಲ. ಅವನ ಆರೈಕೆ ಮಾಡುವಷ್ಟು ಮಾಡಿದೆ. ಅವನೇಕೋ ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾನೆ ಎಂದೆನಿಸಿತು. ಎಲ್ಲಿತ್ತೋ ಸಿಟ್ಟು, ಚಿವುಟಿ ಬಿಟ್ಟೆ. ನೋವಿನಿಂದ ಚೀರಾಡತೊಡಗಿದ. ಮಗುವಿನ ಅಳುವನ್ನು ಹೇಗೆ ನಿಲ್ಲಿಸಬೇಕೆಂದು ನಾನು ಕಲಿತಿರಲಿಲ್ಲವಲ್ಲಾ, ಬೈಯುತ್ತಲೇ ಇದ್ದೆ; ಸನ್ನಿವೇಶ ಹದಗೆಡುತ್ತಲೇ ಇತ್ತು. ‘ಎಷ್ಟೂಂತ ಕೂಗಾಡ್ತಿ!’ ಎಂದು ಹೊಡೆದಿದ್ದಷ್ಟೇ, ಅವ್ವ ಎದುರು ನಿಂತಿದ್ದಳು. ಒಂದಷ್ಟು ತಿಂಗಳಿಂದ ನನ್ನ ಬದುಕನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈಗ ಮುಂದೇನಾಗಿರಬಹುದು ನೀವೇ ಊಹಿಸಿ.
ಅಬ್ಬಬ್ಬಾ ಎಂದರೆ ಇನ್ನೇನಾಗಿರಬಹುದು ಹೇಳಿ, ಬಾಸುಂಡೆ ಬರುವಷ್ಟು ರುಚಿಯಾದ ಪೆಟ್ಟು ತಿಂದೆ. ಏಟು ತಿಂದು, ಅತ್ತಾಗೆಲ್ಲ ಲಕ್ಷ್ಮೀದೇವಿಯವರ ಮನೆಯೆಡೆಗೆ ಮನಸ್ಸು ಸೆಳೆಯುತ್ತಿತ್ತು. ಚಿಕ್ಕವರಿರುವಾಗ ಮಕ್ಕಳ ಕಣ್ಣಿಗೆ ನೆರೆಮನೆಯವರೇ ಆಪ್ತರೆನಿಸಿಬಿಡುತ್ತಾರಂತೆ. ಅವ್ವ ಕ್ರೂರವಾಗಿ ನನ್ನೊಡನೆ ವರ್ತಿಸುತ್ತಿದ್ದಾಳೆಂದೂ ಅಪ್ಪನಿಗೆ ಹೇಳೋಣವೆಂದರೆ ಅವರಿಬ್ಬರ ನಡುವಿನ ಜಗಳಕ್ಕೆ ನಾನು ಕಾರಣವಾಗಬಾರದೆಂದೂ ಅನಿಸಿತ್ತು. ಹಾಗಾಗಿ ನನ್ನ ಅಸಹಾಯಕತೆಯನ್ನು ಅವಳಲ್ಲಿ ಹೇಳಿಕೊಂಡು ಹಗುರಾದೆ. ಗದಗಿಗೆ ಹೋಗಲೇಬೇಕೆಂದು ನಾನು ತೀರ್ಮಾನವನ್ನು ಕೈಗೊಂಡಿದ್ದೇ ಆಗ. ಯಾರಿಗೂ ತಿಳಿಯದಂತೆ ಹೊರಡುವುದೆಂದರೆ ಸಾಮಾನ್ಯದ ಮಾತೇ? ಮನಸ್ಸಲ್ಲಿ ವಿಶ್ವಾಸವಿದ್ದರೂ ಕೈಯಲ್ಲಿ ಕಾಸಿರಬೇಕಲ್ಲ, ಬಿಡಿಗಾಸೂ ಇರಲಿಲ್ಲ. ನೀನೇ ಗತಿಯೆಂದು ಆಗಸಕ್ಕೆ ಕೈ ಮುಗಿದರೆ, ದೇವರು ದಾರಿ ಕೆಳಗಿದೆ ಎಂದು ಸೂಚನೆ ಕೊಟ್ಟಂತೆ. ಕಾಲಿನಲ್ಲಿದ್ದ ಬೆಳ್ಳಿ ಕಡಗ ಮತ್ತು ಕಾಲ್ಗೆಜ್ಜೆ ಬದುಕಿನ ಪಯಣಕ್ಕೆ ಹಸಿರು ನಿಶಾನೆ ತೋರಿತ್ತು. ಸುಲಭಕ್ಕೆ ಬಿಡಿಸಲೊಲ್ಲದ ಕಡಗ, ಕಡೆಗೂ ಸುತುಳಿ ಹಗ್ಗದಿಂದ ಬಾಗಿತು. ಅಷ್ಟು ಭಾರದ ಕಡಗ ಮತ್ತು ಕಾಲ್ಗೆಜ್ಜೆಗೆ ‘ಮೂವತ್ತು ರೂಪಾಯಿ ಕೊಡ್ರಿ ಸಾಕು’ ಎಂದು ಬೇಡಿದ್ದೆ!
ಹೊರಡಲು ಎಲ್ಲಾ ತಯಾರಿಯನ್ನೂ ಮಾಡಿಕೊಂಡೆ. ಅಂದು ಮಧ್ಯಾಹ್ನದ ಹೊತ್ತಿನ ಊಟವನ್ನು ನನ್ನ ತಮ್ಮನಿಗೆ ಊಟ ತಿನ್ನಿಸಿ, ಮನೆಯಲ್ಲೇ ಕೂರಿಸಿದ್ದೆ. ಪಕ್ಕದ ಮನೆಯವರಲ್ಲಿ, ‘ನಮ್ ಮೇಷ್ಟ್ರು ಕರೀತಿದಾರೆ. ನಾ ಹೋಗ್‌ಬರ್ತೇನಿ. ಮನ್ಯಾಗ ತಮ್ ಅದಾನ. ಸೊಲ್ಪ್ ನೋಡ್ಕೊಳ್ರಿ’ ಎಂದು ಅಳುತ್ತಲೇ ಕಾಲು ಕಿತ್ತಿದ್ದೆ. ಹಾಗಿದ್ದ ನನ್ನ ತಮ್ಮನನ್ನು ನೋಡಿದ್ದು ಅದೇ ಕೊನೇ ಬಾರಿ. ರೈಲ್ವೇ ಸ್ಟೇಷನ್‌ಗೆ ಬಂದೆ. ಇನ್ನು ಬುದ್ಧಿ ಮೂಡದ ವಯಸ್ಸಿನಲ್ಲಿ ಕಾಲಿಗೆ ಚಕ್ರ ಕಟ್ಟಿದ್ದು ತಂದೆ ತಾಯಿಯೇ. ಮಧ್ಯಾಹ್ನ ಒಂದೂವರೆ ಹೊತ್ತಿಗೆ ಗದಗಿಗೆ ಹೋಗುವ ರೈಲಿತ್ತು. ಸುತ್ತಮುತ್ತ ಯಾರೊಬ್ಬರಿಗಾದರೂ ನಾನು ಕಂಡರೆ ಭವಿಷ್ಯವೇ ಮಾಯವಾಗಿ ಹೋಗುತ್ತಿತ್ತು. ಇದಕ್ಕೆಂದೇ ನಾನು ರೈಲಿನ ಶೌಚಾಲಯದೊಳಕ್ಕೇ ಕೂತೆ. ಉತ್ಪ್ರೇಕ್ಷೆ ಎನಿಸಬಹುದು, ಆರಾಮಾಗಿ ರೈಲಿನಲ್ಲಿ ಕೂತು ಹೋಗುವುದನ್ನು ಬಿಟ್ಟು ಇವರಿಗಿದು ಬೇಕಿತ್ತಾ? ಎಂದೂ ಭಾವಿಸಬಹುದು ನೀವು. ತಪ್ಪೇನಿಲ್ಲ, ಆದರೆ ನಟಿಯಾಗಬೇಕೆಂಬ ನನ್ನ ಹುಚ್ಚುತನದ ಪರಮಾವಧಿ ಎಲ್ಲಾ ಸಂದರ್ಭಗಳಲ್ಲಿ ಕೈಹಿಡಿದು ನಿಂತಿತ್ತು. ಆವತ್ತೇನಾದರೂ ಯಾರಾದರೂ ನನ್ನ ಗುರುತಿಸಿ, ವಿಷಯ ಮುಟ್ಟಿಸಿದ್ದರೆ ನನ್ನ ಆಸೆಗೆ ತರ್ಪಣ ಬಿಡಬೇಕಿತ್ತು. ಹಾಗಾಗಿ ಎರಡು ಊರು ಕಳೆದ ಮೇಲೆ, ಸೀಟಿನಲ್ಲಿ ಕೂತೆ. ಗದಗ ತಲುಪುವ ಹೊತ್ತಿಗೆ ಬೆಳಕೆಲ್ಲವೂ ಕರಗುತ್ತಾ ಇರುಳೇರುತ್ತಿದ್ದ ಹೊತ್ತು. ಅಂದರೆ ಏಳು ಗಂಟೆಯಾಗಿರಬಹುದು. ಗದಗ ನನಗೆ ಹೊಸತೇನೂ ಅಲ್ಲ. ಈ ಹಿಂದೆ ಅಪ್ಪ ಹೂ ತರಲು ಕಳುಹಿಸುತ್ತಿದ್ದದ್ದರಿಂದ ಗದಗವೂ ಅಪರಿಚಿತ ಅಂತೇನೂ ಅನಿಸಲಿಲ್ಲ. ಇಳಿದೊಡನೆ, ‘ನಾಟ್ಕದ ಕಂಪೆನಿ ಎಲ್ಲಿದೆ? ಇಲ್ಲಿ ನಾಟ್ಕದ್ ಕಂಪೆನಿ ಎಲ್ ಹಾಕಿದಾರೆ?’ ಎಂದು ಕೇಳುತ್ತಾ ನಡೆದೆ. ಆ ವಯಸ್ಸಿಗಾಗಲೇ ರಂಗಭೂಮಿ ನನ್ನಲ್ಲಿ ಮೂಡಿಸಿದ್ದ ಆತ್ಮವಿಶ್ವಾಸದ ಪರಿ ನೋಡಿ!

ಅಂತೂ ಅವರಿವರು ಕೊಟ್ಟ ವಿಳಾಸ ಹಿಡಿದು, ಕಂಪೆನಿ ಟೆಂಟ್ ಕಟ್ಟಿದ ಸ್ಥಳವನ್ನು ಪತ್ತೆ ಮಾಡಿಯೇ ಬಿಟ್ಟೆ. ಈ ಹುಡುಕುವ ಕಾರ್ಯಕ್ರಮದಲ್ಲಿ ಒಂದು ಗಂಟೆ ಕಳೆದಿರಬಹುದೆಂದು ಲೆಕ್ಕವಿಟ್ಟುಕೊಂಡರೂ ಎಂಟಾಗಿರಬಹುದು. ಇನ್ನೂ ಕಲಾವಿದರ್ಯಾರೂ ಬಂದಿರಲಿಲ್ಲ. ದೇವರ ಪೂಜೆ ನಡೆದು, ಊದುಬತ್ತಿಯನ್ನು ಹಚ್ಚಿ, ಮನಸ್ಸು ಪ್ರಫುಲ್ಲಗೊಳ್ಳುವಂತಹ ಸಂಗೀತವಿತ್ತು. ಹೋದ ಮೇಲೆ ಮುಂದೇನು ಮಾಡಬೇಕೆಂದು ಭಾನಾಪುರದ ಲಕ್ಷ್ಮೀದೇವಿ ನೀಲಿನಕ್ಷೆಯನ್ನೇ ತಯಾರಿಸಿಕೊಟ್ಟಿದ್ದಳು. ಅವಳೂ ಈ ಕಂಪೆನಿಯೊಂದಿಗೆ ಒಡನಾಡಿದ್ದರಿಂದ ಮಾಲೀಕರ ಕುರಿತು ತಿಳಿದಿದ್ದಳು. ಹಾಗಾಗಿ ಅಲ್ಲಿದ್ದವರಲ್ಲಿ ಕಂಪೆನಿ ಮಾಲೀಕರನ್ನು ಕಾಣಬೇಕೆಂದೆ. ಎಂಟೂವರೆ ಒಂಬತ್ತು ಗಂಟೆಯೊಳಗೆ ಬರುತ್ತಾರೆಂದರು. ಮುಂದುವರೆದು, ಯಾವ ಊರೆಂದು ವಿಚಾರಿಸಿದರು. ನಾನೇನು ಬಲುಜಾಣೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಹೀಗೆಲ್ಲ ಗೂಢಾಚಾರಿಕೆ ನಡೆಸುತ್ತಿದ್ದರೆ ಚಳ್ಳೆಹಣ್ಣು ತಿನ್ನಿಸುವ ವಿದ್ಯೆ ನನಗೆ ಸಿದ್ಧಹಸ್ತ. ಊರು ಕೊಪ್ಪಳ ಎಂದೆ. ಇನ್ನು ಭರ್ಜರಿಯಾಗಿ ನೀವಲ್ಲಿ ಹುಡುಕಾಡಬಹುದು. ಎಂದು ಒಳಗೊಳಗೆ ನಕ್ಕೆ.
ಮಾಲೀಕರು ಬಂದದ್ದನ್ನು ಕಂಡೊಡನೆ ಕಾಲಿಗೆರಗಿದೆ. ‘ಏಳವ್ವಾ..’ ಎಂದು ಎದ್ದು ನಿಲ್ಲಿಸಿದರು. ಪಟ್ಟದಕಲ್ಲಿನ ಬಸಯ್ಯ ಸ್ವಾಮೀಜಿಗಳು ಕಂಪೆನಿಯ ಮಾಲೀಕರಾಗಿದ್ದರು. ಬಂದ ವಿಷಯದ ಕುರಿತು ಕೇಳಿದಾಗ, ‘ನಂಗ್ಯಾರು ದಿಕ್ಕಿಲ್ಲ. ನಾನೂ ಪಾರ್ಟ್ ಮಾಡ್ಬೇಕ್ರಿ. ನಿಮ್ ಕಂಪೆನ್ಯಾಗ ಸೇರಸ್ಕೊಳ್ರಿ’ ಎಂದು ಅಲವತ್ತುಕೊಂಡೆ. ಸಮಾಧಾನಪಡಿಸಿ, ಹತ್ತಿರಕ್ಕೆ ಕರೆದು ತೊಡೆಯ ಮೇಲೆ ಕೂರಿಸಿಕೊಂಡರು. ‘ಅವ್ವ, ಅಪ್ಪ ಯಾರೂ ಇಲ್ವಾ?’ ಎಂದು ಮತ್ತೆ ಕೇಳಿದ ಪ್ರಶ್ನೆಗೆ, ಇಲ್ಲ ಎಂಬ ಸಿದ್ಧ ಉತ್ತರವನ್ನು ನೀಡಿದೆ. ಬೋರ್ಡಿಂಗ್ ಮನೆಗೆ ತೆರಳಿ ಊಟ ಮಾಡಿಸುವಂತೆ ಕೆಲಸಗಾರರೊಬ್ಬರಿಗೆ ಹೇಳಿದರು. ಊಟ ತಿಂದು, ಆ ದಿನದ ನಾಟಕವನ್ನೂ ಕಣ್ತುಂಬಿಕೊಂಡೆ. ಅವರ ಅಂತಃಕರಣಕ್ಕೆ ಶರಣಾಗಿ, ಮನದುಂಬಿ ಅವರನ್ನು ‘ಅಪ್ಪ’ ಎಂದು ಕರೆದೆ.
ಗ್ರೀನ್ ರೂಂನಲ್ಲಿ ನನಗೆ ಮಲಗಲು ಹಾಸಿಗೆ, ಹೊದಿಕೆ ನೀಡಿದ್ದರು. ನಾಟಕಕ್ಕೆ ಬಳಸುವ ಮಂಚವನ್ನೂ ಕೊಟ್ಟಿದ್ದರು. ಎರಡು ದಿನಗಳು ಹೀಗೇ ಕಳೆಯಿತು. ಅದೊಂದು ದಿನದ ಮುಂಜಾವು. ‘ಏ ಹುಡ್ಗಿ, ಬಾ ಇಲ್ಲಿ’ ಎಂದು ಯಾರೋ ಕರೆದಂತಾಯಿತು, ಹೋದೆ. ಬೋರ್ಡಿಂಗ್‌ನ ಪಕ್ಕದ ಮನೆಯಲ್ಲೇ ಅವರು ಉಳಿದಿದ್ದರೆಂದು ಮತ್ತೆ ತಿಳಿಯಿತು. ‘ನಿನ್ ಹೆಸರೇನು?’ ಎಂದರು. ‘ಮಲ್ಲವ್ವ, ಸರಸ್ವತಿ ಎರಡೂ ಹೆಸರೈತಿ. ಶಾಲ್ಯಾಗ ಮಲ್ಲವ್ವ ಅಂತೈತ್ರಿ’, ಎಂದೆ. ‘ಹ್ಞಂ… ಇಲ್ಲೇನ್ ಮಾಡ್ತಿ?’, ‘ನಾಟ್ಕ ಮಾಡ್ತೀನ್ರಿ’ ಪ್ರಶ್ನೋತ್ತರ ಸಾಗುತ್ತಿತ್ತು. ‘ನಾಟ್ಕ ಮಾಡ್ತೀ? ಪಾರ್ಟ್ ಯಾರ್ ಕೊಡ್ತಾರ? ಮೊದ್ಲು ಕುರ್ಚಿಗುಂಡಿ ಕಸ ಹೊಡಿ. ಆಮೇಲ್ ಪಾರ್ಟು’ ಎಂದು ಹಂಗಿಸಿದ್ದರು. ಅವರು ಬೇರಾರೂ ಅಲ್ಲ, ಇತ್ತೀಚೆಗೆ ವಯೋಸಹಜ ಕಾಯಿಲೆಗಳಿಂದ ತೀರಿಹೋದ ಫ್ಲೋರಿನಾ ಬಾಯಿ. ಕ್ರಿಶ್ಚಿಯನ್ ಸಮುದಾಯದಲ್ಲಿ ಹುಟ್ಟಿ, ಲಿಂಗಾಯತರನ್ನು ಮದುವೆಯಾಗಿ ಆ ಕಾಲಕ್ಕೆ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದರು.
ಸರಿ, ವಹಿಸಿದ ಕೆಲಸವನ್ನು ಮಾಡಲೇಬೇಕು. ರಂಗಭೂಮಿ ಎಂದರೆ ನನ್ನೊಳಗಿನ ‘ನನ್ನ’ನ್ನು ಅಳಿಸುವ ಬಹಳ ದೊಡ್ಡ ಆಧ್ಯಾತ್ಮಿಕ ಜಗತ್ತು. ಪಾತ್ರದೊಳಗೆ ಸಂಪೂರ್ಣವಾಗಿ ಪ್ರವೇಶ ಪಡೆಯುವಾಗ ಅಲ್ಲಿ ಈ ‘ನನ್ನತನ’ಗಳಿದ್ದರೆ ಖಂಡಿತಾ ಸಾಧ್ಯವಾಗುವುದಿಲ್ಲ. ಹಾಗಾಗಿ ರಂಗಭೂಮಿ ನಮ್ಮನ್ನು ಎಲ್ಲ ಅಹಂಕಾರಗಳಿಂದ ಮುಕ್ತವಾಗಿಸುತ್ತದೆ. ಸೇದಿ, ಬಿಸಾಡಿದ ಸಿಗರೇಟು, ಬೀಡಿ ತುಂಡುಗಳು ಕುರ್ಚಿ ಅಡಿಗಳಲ್ಲಿ ಇರುತ್ತಿದ್ದವು. ಒಂದು ರೂಪಾಯಿ ಕೊಟ್ಟರೆ ಕುರ್ಚಿಯಲ್ಲಿ ಕೂತು ನಾಟಕ ನೋಡುವ ಅವಕಾಶ. ಎರಡಾಣೆ ಕೊಟ್ಟರೆ ನೆಲ, ನಾಲ್ಕಾಣೆ ಕೊಟ್ಟರೆ ಚಾಪೆ. ಹೀಗೆ ಕುರ್ಚಿ ಅಡಿಗಳಲ್ಲಿ, ನೆಲ ಮತ್ತು ಚಾಪೆಯ ಸ್ಥಳಗಳನ್ನು ಗುಡಿಸಿ ಸ್ವಚ್ಛಗೊಳಿಸುವುದೆಂದರೆ ಬರೋಬ್ಬರಿ ಎರಡು ಗಂಟೆಗಳ ಕೆಲಸ. ನನ್ನ ಎಳೆ ರಟ್ಟೆಯಲ್ಲಿದ್ದ ಶಕ್ತಿಯೆಲ್ಲವೂ ಸೋರಿ ಹೋದಂತೆ ಅನಿಸುತ್ತಿತ್ತು. ನಟಿ ಫ್ಲೋರಿನಾ ಬಾಯಿಯವರದ್ದೇ ಮೇಲುಸ್ತುವಾರಿ. ‘ಇನ್ನೂ ಆಗಿಲ್ಲವಾ?’ ಎಂದು ಅಧಿಕಾರ ಸಾಧಿಸುವ ಮಾತುಗಳನ್ನೇ ಪ್ರಶ್ನೆಯಾಗಿ ಕೇಳುತ್ತಿದ್ದರು. ಅಂದಹಾಗೆ, ಇದೆಲ್ಲದರ ನಡುವೆ ಅವರ ಸಾಕಿದ ಮಗಳು ದೂರದ ಹಾಸ್ಟೆಲ್‌ನಲ್ಲಿ ಓದುತ್ತಿದ್ದಳು. ರಜೆಗೆಂದು ಬಂದಾಗ ನನ್ನನ್ನು ಕಂಡಳು. ಆಡಲು ಜೊತೆಯಾಗುತ್ತಾಳೆ ಎಂದುಕೊಂಡಿದ್ದಳೋ ಏನೊ, ಅದಕ್ಕಾಗಿ ನನ್ನ ಬರುವಿಕೆಯನ್ನೇ ದೂರದಲ್ಲೇ ನಿಂತು ಕಾಯುತ್ತಿದ್ದಳು. ಆಡುವಷ್ಟು ಬಿಡುವು ದೊರೆಯುತ್ತಲೂ ಇರಲಿಲ್ಲ. ಕೆಲಸ ಮುಗಿಯಿತೆನ್ನುವಾಗ ಮೈಯೆಲ್ಲಾ ಧೂಳು!

ಕುರ್ಚಿ ಸರಿಸಿಟ್ಟು ಒದ್ದಾಡುವುದನ್ನು ನೋಡಲಾರದೆ, ಅಲ್ಲಿದ್ದ ಎಷ್ಟೋ ಕೆಲಸಗಾರರು ನಾವು ಮಾಡುತ್ತೇವೆ, ನೀನು ಹೊರಡಮ್ಮ ಎಂದು ಕಳಿಸಿದ ಪ್ರಸಂಗಗಳೂ ಇವೆ. ಈ ಸವಲತ್ತು ಪಡೆಯುತ್ತಿದ್ದೇನೆ ಎಂದು ಗೊತ್ತಾಗುತ್ತಿದ್ದಂತೆ, ಬಣ್ಣದ ಬಟ್ಟೆ ತೊಳೆಯುವ ಕೆಲಸಕ್ಕೆ ನೇಮಿಸಿದರು. ರಂಗದ ಬೆಳಕಿಗೆ ಮಬ್ಬಾಗಿ ಕಾಣಬಾರದೆಂದು ಹಚ್ಚಿಕೊಂಡ ಬಣ್ಣವನ್ನು ಒರೆಸಿದ ಬಟ್ಟೆಯನ್ನು ತೊಳೆಯುವ ಕೆಲಸ ನನ್ನ ಹೆಗಲೇರಿತ್ತು!
(ಹಿಂದಿನ ಕಂತು: ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….)


