ನಾವು ತಿನ್ನುವ ಆಹಾರದ ಬಗ್ಗೆ ಬೆಳೆದ ಪ್ರಜ್ಞೆಯಿಂದ ಒಂದಷ್ಟು ಕಂಪೆನಿಗಳು ಹೊಸ ರೀತಿಯಲ್ಲಿ ಲಾಭಮಾಡಿಕೊಳ್ಳಲಾರಂಭಿಸಿದ್ದು ಒಂದೆಡೆಯಾದರೆ, ಮತ್ತೊಂದಷ್ಟು ಜನ ತೀರಾ ಮತ್ತೊಂದು ಹಾದಿಯಲ್ಲಿ ಯೋಚಿಸಲಾರಂಭಿಸಿದ್ದರು. ನಾವು ತಿನ್ನುವ ತರಕಾರಿಗಳನ್ನು ನಾವೇ ಬೆಳೆದುಕೊಂಡರೆ ಹೇಗೆ? ಹೀಗಂದುಕೊಂಡ ಬಹುತೇಕ ಜನರು ಇದ್ದದ್ದು ಬೆಂಗಳೂರಿನಂಥ ಮಹಾನಗರಗಳಲ್ಲಿ. ಬೆಂಗಳೂರಿನಲ್ಲಿ ಮನೆ ಕಟ್ಟಲಿಕ್ಕೆ ಒಂದು ಸೈಟು ಹಿಡಿಯಲಿಕ್ಕೇ ಸಾಕಷ್ಟು ಒದ್ದಾಡಬೇಕಾದಾಗ ಇನ್ನು ನಮ್ಮ ತರಕಾರಿಗಳನ್ನು ಬೆಳೆದುಕೊಳ್ಳುವುದಾದರೂ ಹೇಗೆ ಅನ್ನುವ ಜಿಜ್ಞಾಸೆಯ ಸಮಯದಲ್ಲೇ ಕೆಲವೊಂದಷ್ಟು ಜಾಣರು ಟೆರೆಸ್‌ ಗಾರ್ಡನಿಂಗ್‌ ಆರಂಭಿಸಿಯೇ ಬಿಟ್ಟರು.
ರೂಪಶ್ರೀ ಕಲ್ಲಿಗನೂರ್‌ ಬರಹ

ಕುಟುಂಬದ ಸ್ನೇಹಿತರೊಬ್ಬರು ನಾವು ಭೇಟಿಯಾದಾಗ, ಮಾತನಾಡುತ್ತ ಆಡುತ್ತಾ.. ಊಟದ ವಿಷಯ ಬಂದಾಗಲೆಲ್ಲ ಸಸ್ಯಾಹಾರ ಈಗಿನ ದಿನಗಳಲ್ಲಿ ಏಕೆ ಸೂಕ್ತವಲ್ಲ.. ಸಸ್ಯಾಹಾರಕ್ಕಿಂತ ಮಾಂಸಾಹಾರವೇ ಯಾವ ರೀತಿಯಲ್ಲಿ ಸೂಕ್ತ… ಎಂಬುದರ ಬಗ್ಗೆ ಮಾತನಾಡುತ್ತಿರುತ್ತಾರೆ. ಕೃಷಿಗೆ ಬೇಕಾದ ಎಲ್ಲ ಪೂರಕ ವಸ್ತುಗಳ ಮಾರಾಟಗಾರರಾಗಿರುವ ಅವರು ರೈತರು ಹೇಗೆ ತಪ್ಪುತಪ್ಪಾಗಿ, ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಕ್ರಿಮಿನಾಶಕಗಳನ್ನು ಸೊಪ್ಪು-ತರಕಾರಿಗಳಿಗೆ ಬಳಸುತ್ತಿದ್ದು, ಅದರಿಂದ ಮುಂದೆ ಸಸ್ಯಾಹಾರವನ್ನೇ ಅವಲಂಬಿಸುವವರ ಆರೋಗ್ಯದ ಮೇಲೆ ಏನೆಲ್ಲ ಪರಿಣಾಮ ಉಂಟಾಗಬಹುದು ಎಂಬುದನ್ನು ನಮಗೆ ತಿಳಿಸುವುದು ಅವರ ಈ ಮಾತುಗಳ ಉದ್ದೇಶ…

ಒಂದೆರೆಡು ಸಲ ಅವರ ಮಾತುಗಳಲ್ಲಿದ್ದ ಕಾಳಜಿಯ ಕುರಿತು ಪ್ರಶಂಸಿಸಿ, ಒಪ್ಪಿಕೊಳ್ಳುತ್ತಲೇ ಹೇಗೆ ನಾವು ನಮ್ಮ ಆಹಾರ ಪದ್ಧತಿಯನ್ನು ಬಿಡಲಾಗುವುದಿಲ್ಲ ಎಂಬುದರ ಬಗ್ಗೆಯೂ ಬಿಸಿಬಿಸಿ ಚರ್ಚೆ ಮಾಡಿದ್ದೆವು. ಆ ಎಲ್ಲ ಮಾತುಕತೆಗಳ ಪರಿಣಾಮವಾಗಿಯೂ ಹಾಗೇ ಬೆಂಗಳೂರಿನಲ್ಲೊಮ್ಮೆ ನಾವೇ ನಮ್ಮ ಟೆರೆಸ್ಸಿನ ಮೇಲೆ ಒಂದಷ್ಟು ಸೊಪ್ಪುಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ, ನಮ್ಮ ಓಡಾಟಗಳಲ್ಲಿ ಇದು ಸಾಧ್ಯವಾಗುವುದಿಲ್ಲ ಎಂತಲೂ ಕೈಬಿಟ್ಟ ಅನುಭವವಿತ್ತು. ಹಾಗಾಗಿ ಇಲ್ಲಿ ಊರಿಗೆ ಬಂದಮೇಲೆ ನಮ್ಮ ಸುತ್ತಮುತ್ತ ಸಹಜವಾಗಿ ಬೆಳೆಯುವ ಹಲವಾರು ಗಿಡಗಳ ಸೊಪ್ಪು, ದಂಟುಗಳನ್ನು ಬಳಸಿ, ಪಲ್ಯ, ಚಟ್ನಿ, ವಿವಿಧ ಸಾರುಗಳನ್ನು ಮಾಡಬಹುದಲ್ಲ ಎನ್ನುವುದು ತಿಳಿದ ನಂತರ, ಅದದೇ ಕ್ಯಾರೆಟ್ಟು, ಬೀಟ್ರೂಟು, ಕ್ಯಾಬೇಜ್‌, ಕಾಪ್ಸಿಕಮ್ಮುಗಳ ಆಚೆ, ನಮ್ಮದೇ ನೆಲದ ಸಸ್ಯಗಳಿಂದ ಅಡುಗೆ ಮಾಡಿಕೊಳ್ಳುವುದರಲ್ಲಿ ಎಂಥ ಸುಖವಿದೆ ಅನ್ನುವುದು ತಿಳಿಯಿತು. ಯಾಕೆಂದರೆ ಈಗೆಲ್ಲ ಮಾರ್ಕೆಟ್ಟಿನ ಸಿಗುವ ಹಣ್ಣು/ತರಕಾರಿಗಳ ಬಣ್ಣ/ರೂಪಗಳೆಲ್ಲ ಚಿತ್ರವಿಚಿತ್ರವಾಗಿದೆ. ಸಾಕಷ್ಟು ಅಸಹಜ ಎನ್ನಿಸುವ ರೀತಿಯಲ್ಲಿ ಬೆಳೆದ ಅವುಗಳನ್ನು ಹಿಡಿದು ನೋಡಲೇ ಭಯವಾಗುವುದು. ಅಂಥದ್ದರಲ್ಲಿ, ಮನೆಗೆ ತಂದು ಬೇಯಿಸಿಕೊಂಡು ತಿನ್ನುವುದಾದರೂ ಹೇಗೆ? ಹಾಗಂತ ಕೆಲವರನ್ನು ಬಿಟ್ಟರೆ ನಾವು ತಿನ್ನುವ ಎಲ್ಲ ಆಹಾರವನ್ನು ನಾವೇ ಬೆಳೆದುಕೊಳ್ಳಲೂ ಸಾಧ್ಯವಿಲ್ಲ… ಹಾಗಾಗಿ ಈ ಸಲ ಆ ಸ್ನೇಹಿತರು ಸಿಕ್ಕಾಗ ಹೀಗೆ ನಮ್ಮ ಸುತ್ತಮುತ್ತಲೇ ಲಭ್ಯವಿರುವ ಸಸ್ಯಗಳ ಜೊತೆಗೆ ನಮಗೆ ಬೇಕಾದ ತರಕಾರಿಗಳನ್ನು ಮನೆಯ ಹಿಂಭಾಗದಲ್ಲಿಯೇ ಬೆಳೆಸಲು ನಿರ್ಧರಿಸಿದ್ದನ್ನು ಅವರಿಗೆ ತಿಳಿಸಿದ್ದೇ ಅವರ ಈ ಸಲದ ಸಸ್ಯಾಹಾರದ ಕುರಿತು ಸಂಭಾಷಣೆ ಮೊಟಕುಗೊಂಡಿತ್ತು.

*****

ಬೆಂಗಳೂರು ಉದ್ಯೋಗಕ್ಕೆ ಎಷ್ಟು ಹೆಸರು ವಾಸಿಯೋ, ಅಷ್ಟೇ ತರಾವರಿ ಊಟ/ ತಿಂಡಿಗಳಿಗೆ ಹೆಸರುವಾಸಿ. ಅಲ್ಲಿನ ಕೆಲವು ನಗರಗಳು ಊಟ ತಿಂಡಿಗೆಂದೇ ಸಾಕಷ್ಟು ಫೇಮಸ್ಸು. ಬೆಳಗ್ಗೆ ತಿಂಡಿಗೆ ಬರುವವರದ್ದು ಒಂದು ವರ್ಗವಾದರೆ, ಸಂಜೆಗೆ ಬರುವವರದ್ದು ಒಂದು ವರ್ಗ. ಹೊಟೇಲು, ಸಣ್ಣಸಣ್ಣ ತಿಂಡಿಯಂಗಡಿಗಳಿಂದ ಹಿಡಿದು ತಳ್ಳುವ ಗಾಡಿಯಲ್ಲೂ ತಿಂಡಿ/ಊಟಗಳು ಲಭ್ಯ. ನಮ್ಮಲ್ಲಿ ಮಾತಿದೆಯಲ್ಲ… ಒಂದು ಹೊತ್ತು ತಿಂದವನು ಯೋಗಿ, ಎರಡು ಹೊತ್ತು ತಿಂದವನು ಭೋಗಿ, ಮೂರು ಹೊತ್ತು ತಿಂದವನನ್ನು ಎತ್ಕೊಂಡುಹೋಗಿ… ಎಂದು… ಆ ಮಾತಿನ ಮರ್ಮವನ್ನು ಬೆಂಗಳೂರಿನಂಥ ಮಹಾನಗರಗಳಲ್ಲಿ ವಾಸಿಸುವವರು ಮರೆತೇ ಹೋಗಿದ್ದಾರೆನ್ನಿಸುತ್ತೆ. ಅಲ್ಲಿಯ ಆಕರ್ಷಣೆ ಅಂಥದ್ದು. ಅಗತ್ಯವಿಲ್ಲದಿದ್ದರೂ ಬಟ್ಟೆ/ ಸಾಮಾನುಗಳನ್ನು ಹೆಚ್ಚುವರಿಯಾಗಿ ಖರೀದಿ ಮಾಡುವಂತೆಯೇ, ನೂರಾರು ತಿಂಡಿಯಂಗಡಿಗಳ ವಿಳಾಸಗಳು ನಮ್ಮ ತಲೆಯಲ್ಲಿರುವಾಗ ಸಣ್ಣದೊಂದು ಬೇಸರಕ್ಕೂ… ಮಾಡಲು ಕೆಲಸವಿಲ್ಲದಾದಾಗಲೂ ನಮ್ಮ ನೆಚ್ಚಿನ ತಿಂಡಿಯಂಗಡಿ ನಮ್ಮತ್ತ ಕೈಬೀಸಿ ಕರೆಯುತ್ತಿರುತ್ತದೆ. ಅಷ್ಟೇ ಏಕೆ ಹೊರಗೆ ಹೋಗಲು ಮೂಡು ಇಲ್ಲದಿದ್ದರೂ ತೊಂದರೆ ಇಲ್ಲ… ಸ್ವಿಗ್ಗಿ, ಝೊಮಾಟೋಗಳು ಮನೆ ಬಾಗಿಲಿಗೇ ನಮ್ಮಿಷ್ಟದ ಆಹಾರವನ್ನು ತಂದುಕೊಟ್ಟು ನಮ್ಮ ಹಸಿವನ್ನೋ, ಬಯಕೆಯನ್ನೋ ಸುಲಭವಾಗಿ ನೀಗಿಸಿಬಿಡುತ್ತದೆ. ಹಾಗಾಗಿ ಈಗೆಲ್ಲ ಆಹಾರದ ಗುಣಮಟ್ಟಕ್ಕಿಂತ ನಾಲಿಗೆಯ ರುಚಿಗೇ ಹೆಚ್ಚು ಮಹತ್ವ ಬಂದಿದೆಯಾದ್ದರಿಂದ ಈಗೆಲ್ಲ ಹತ್ತು ಹಲವು ಕಾಯಿಲೆಗಳು ಸಣ್ಣವಯಸ್ಸಿನಲ್ಲೇ ನಮ್ಮ ಬೆನ್ನಟ್ಟಿಸಿಕೊಂಡು ಬಂದು, ಇನ್ನಿಲ್ಲದಂತೆ ಕಾಡುತ್ತಿವೆ.

ಆಹಾರ ತಜ್ಞರ ಪ್ರಕಾರ ನಾವು ತಿನ್ನುವ ಆಹಾರ ಆದಷ್ಟೂ ಸರಳವಾಗಿ ಮತ್ತೂ ಸತ್ವಭರಿತವಾಗಿರಬೇಕು. ಹಣ್ಣು ತರಕಾರಿ ಅಥವಾ ಕಾಳುಗಳನ್ನು ಪ್ರೋಸೆಸ್‌ ಮಾಡಿದಷ್ಟೂ ಅವುಗಳ ಸತ್ವ ಕ್ಷೀಣಿಸುತ್ತಾ ಹೋಗುತ್ತದೆ. ಹಾಗಾಗಬಾರದು. ಊಟ ಬರೀ ನಾಲಗೆಗಲ್ಲ. ಅಥವಾ ಕೇವಲ ಹೊಟ್ಟೆ ತುಂಬಿಸಿಕೊಳ್ಳಲೂ ಅಲ್ಲ… ಅದು ನಮ್ಮ ದೇಹದ ಬೆಳವಣಿಗೆಗೆ ಪೂರಕವಾಗಿರಬೇಕು.

ಸುಮಾರು ಒಂದೈವತ್ತು-ಎಪ್ಪತ್ತು ವರ್ಷಗಳ ಹಿಂದೆಲ್ಲ ಜನರ ಊಟದ ಕ್ರಮ ಈಗಿನಂತಿರಲಿಲ್ಲವಂತೆ. ಈಗ ನಾವು ತೂಕ ಇಳಿಸಿಕೊಳ್ಳುವ ಸಲುವಾಗಿ ಅನುಸರಿಸುವ intermittent fasting ನಮ್ಮ ಹಿರೀಕರಿಂದ ಕಲಿತ ಪಾಠ. ಬೆಳಗ್ಗೆ ಒಂದು ಊಟ ಸಂಜೆಗೊಂದು ಊಟ ಅಷ್ಟೇ. ಹಿಂದೆ ಶ್ರಮದ ಜೀವನ ನಡೆಸುವಾಗಲೇ ಎರಡು ಹೊತ್ತಿನ ಊಟ ಸಾಕಾಗುತ್ತಿತ್ತು ಎಂದರೆ, ಈಗ ಲ್ಯಾಪ್‌ಟಾಪ್‌ನಲ್ಲಿ ಕುಟ್ಟುತ್ತಾ ಇಡೀ ದಿನ ಕಳೆಯುವಂಥ ಜೀವನಶೈಲಿಯನ್ನು ಹೊಂದಿರುವ ನಮಗೆ ನಾಲ್ಕು ಹೊತ್ತಿನ ಊಟ ನಿಜಕ್ಕೂ ಆರೋಗ್ಯಕರವಲ್ಲ.

ಅಗತ್ಯವಿಲ್ಲದಿದ್ದರೂ ಬಟ್ಟೆ/ ಸಾಮಾನುಗಳನ್ನು ಹೆಚ್ಚುವರಿಯಾಗಿ ಖರೀದಿ ಮಾಡುವಂತೆಯೇ, ನೂರಾರು ತಿಂಡಿಯಂಗಡಿಗಳ ವಿಳಾಸಗಳು ನಮ್ಮ ತಲೆಯಲ್ಲಿರುವಾಗ ಸಣ್ಣದೊಂದು ಬೇಸರಕ್ಕೂ… ಮಾಡಲು ಕೆಲಸವಿಲ್ಲದಾದಾಗಲೂ ನಮ್ಮ ನೆಚ್ಚಿನ ತಿಂಡಿಯಂಗಡಿ ನಮ್ಮತ್ತ ಕೈಬೀಸಿ ಕರೆಯುತ್ತಿರುತ್ತದೆ. 

ಬೆಂಗಳೂರಿನಲ್ಲಿದ್ದಾಗಲೇ ತರಕಾರಿ ಬೆಳೆಯುವ ಕುರಿತು ಮೊದಲೇ ಹೇಳಿದ ಥರದ ಮಾತುಗಳನ್ನು ನಾನು ಕೇಳುತ್ತಲೇ ಇದ್ದೇನೆ. ತರಕಾರಿ ಬೆಳೆಯುವ ರೈತರು ಹೇಗೆ ಕ್ರಿಮಿನಾಶಕಗಳ ಬಗೆಗೆ ಸರಿಯಾಗಿ ತಿಳಿದುಕೊಳ್ಳದೇ, ಕನಿಷ್ಠ ಆ ಬಾಟಲಿಗಳ ಮೇಲೆ ನಮೂದಿಸಿರುವ ಪ್ರಕಾರವಾಗಿಯೂ ಅದನ್ನು ಬಳಸದೇ ಆ ತರಕಾರಿ ತಿನ್ನುವವರು ಮೆಲ್ಲಗೇ ಸಣ್ಣಸಣ್ಣ ಪ್ರಮಾಣದಲ್ಲಿ ವಿಷವುಣ್ಣುತ್ತಿದ್ದಾರೆ. ಅಲ್ಲದೇ ಕೆಲವು ಜಾಗಗಳಿಂದ ನಮಗೆ ಸರಬರಾಜಾಗುವ ತರಕಾರಿಗಳು ಮೋರಿ ನೀರಿನಲ್ಲಿ ಬೆಳೆಯಲಾಗುತ್ತದೆ ಎನ್ನುವ ಅಪವಾದವೂ ಇದೆ. ಎಲ್ಲೋ ಬೆಳೆದ ತರಕಾರಿಯನ್ನು ನಂಬಿ ನಾವು ನಮ್ಮ ಹೊಟ್ಟೆಗಿಳಿಸಿಕೊಳ್ಳುವುದಾದರೂ ಹೇಗೆ? ನಗರ ಪ್ರದೇಶಗಳಲ್ಲಿರುವವರು ಕೊಂಡುತಂದ ತರಕಾರಿಗಳನ್ನು ಯಾವುದೇ ಕಾರಣಕ್ಕೂ ಹಸಿಯಾಗಿ ತಿನ್ನುವ ಹಾಗೆಯೇ ಇಲ್ಲ. ಸಾಕಷ್ಟು ಕೀಟಗಳನ್ನು ಆಕರ್ಷಿಸುವ ಹೂಕೋಸು, ಎಲೆಕೋಸುಗಳು ಎಲ್ಲರಿಗೂ ಇಷ್ಟ. ಹಾಗಂತ ಹುಳುಗಳು ಅರ್ಧ ತಿಂದುಬಿಟ್ಟ ತರಕಾರಿಯನ್ನು ಕೊಳ್ಳುವವರಾದರೂ ಯಾರು? ಅದರಲ್ಲೂ ಓದಿದ ಜನಕ್ಕೆ ಎಲ್ಲ ಮಾಲೂ ತಾಜಾತಾಜಾ ಕಾಣಬೇಕು… ಹುಳುಕಿನ ಕುರುಹೂ ಇರಬಾರದೆಂದು ಮೂಗು ಮುರಿಯತೊಡಗಿದರೋ ಆಗ ರೈತರೂ ತಮ್ಮ ಹೊಟ್ಟೆ ಹೊರೆದುಕೊಳ್ಳುವ ಸಲುವಾಗಿ ಬೆಳೆಗಳಿಗೆ ಸಾಕಷ್ಟು ಕ್ರಿಮಿನಾಶಕಗಳನ್ನು ಸಿಂಪಡಿಸಿ, ಹುಳುಗಳು ಅವನ್ನು ತಿನ್ನದಂತೆ ಕಾಪಾಡಿಕೊಂಡು ಮಾರುಕಟ್ಟೆಗೆ ಬಿಡಲಾರಂಭಿಸಿದರು.

ಯಾವಾಗ ನಾವು ತಿನ್ನುವ ಹಣ್ಣು/ತರಕಾರಿಗಳ ಎಲ್ಲಿಂದ ಬರುತ್ತವೆ? ಹೇಗೆಲ್ಲ ಬೆಳೆಯಲಾಗುತ್ತದೆ? ಎಲ್ಲೆಲ್ಲಿ ನಾವು ತಿನ್ನುವ ಹಣ್ಣುಗಳನ್ನು ಅನಾಯಾಸವಾಗಿ ಏನೋ ಪುಡಿ ಹಾಕಿ ಹಣ್ಣುಮಾಡಿ, ಆ ವಿಷಪೂರಿತ ಹಣ್ಣುಗಳನ್ನು ನಮಗೆ ದಾಟಿಸಲಾಗುತ್ತದೆ ಅನ್ನುವ ಅರಿವು ಸಿಗುತ್ತಿದ್ದಂತೆಯೇ, ಒಂದಷ್ಟು ಜನ ತಾವು ಕೊಳ್ಳುವ ಹಣ್ಣು/ತರಕಾರಿಗಳ ಬಗೆಗೆ ಎಚ್ಚರಿಕೆ ವಹಿಸತೊಡಗಿದರು.

ಈ ಬಗ್ಗೆ ಪ್ರಜ್ಞೆ ಬರತೊಡಗಿದ ದಿನಗಳಲ್ಲಿ ಆರ್ಗಾನಿಕ್‌ (organic/ ಸಾವಯವ) ಲೇಬಲ್‌ ಅಂಟಿಸಿಕೊಂಡು ಹಲವು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಜಾಗ ಪಡೆಯಲಾರಂಭಿಸಿದವು. ಹಣ್ಣು, ತರಕಾರಿಯಷ್ಟೇ ಅಲ್ಲದೇ ಆರ್ಗಾನಿಕ್‌ ಬೆಲ್ಲ, ಆರ್ಗಾನಿಕ್ ಬೇಳೆ ಕಾಳುಗಳ ಜೊತೆಗೆ ಅಷ್ಟೂ ವರ್ಷ ಮೂಲೆಗೆ ಸೇರಿದ್ದ ನಮ್ಮ ಭಾರತದ ಬೆಳೆಗಳಾದ ಸಿರಿ ಧಾನ್ಯಗಳೂ ಜನರ ಮನೆಗಳಲ್ಲಿ ಜಾಗಪಡೆಯತೊಡಗಿದವು. ಸತ್ಯವೇನೆಂದರೆ ಇವುಗಳಲ್ಲಿ ಯಾವು ನಿಜವಾಗಿಯೂ ಸಾವಯವ ಪದ್ಧತಿಯಲ್ಲಿ ಬೆಳೆಯಲಾಗಿರುವಂಥವು ಎಂದು ಯಾರಿಗೂ ಸ್ಪಷ್ಟವಿಲ್ಲ ಮತ್ತು ಅದನ್ನು ಪ್ರತಿನಿತ್ಯ ಕೂಲಂಕುಷವಾಗಿ ಗಮನಿಸಿಕೊಂಡು ಕೊಳ್ಳುವ ವ್ಯವಧಾನ/ಸಮಯ ಎರಡೂ ಜನರಲ್ಲಿ ಇಲ್ಲ. ಅದೇ ಮಾರುಕಟ್ಟೆಯ ತಂತ್ರ. ಹಾಗಾಗಿ ಕೆಲವು ಕಂಪೆನಿಗಳು ಅದದೇ ರೈತರಿಂದ ತರಕಾರಿಗಳನ್ನು ಕೊಂಡು ಅದಕ್ಕೆ ತಮ್ಮ ಆರ್ಗಾನಿಕ್‌ ಲೆಬಲ್‌ ಅಂಟಿಸಿ ಮಾರಾಟಮಾಡತೊಡಗಿದರು.

ನಾವು ತಿನ್ನುವ ಆಹಾರದ ಬಗ್ಗೆ ಬೆಳೆದ ಪ್ರಜ್ಞೆಯಿಂದ ಒಂದಷ್ಟು ಕಂಪೆನಿಗಳು ಹೊಸ ರೀತಿಯಲ್ಲಿ ಲಾಭಮಾಡಿಕೊಳ್ಳಲಾರಂಭಿಸಿದ್ದು ಒಂದೆಡೆಯಾದರೆ, ಮತ್ತೊಂದಷ್ಟು ಜನ ತೀರಾ ಮತ್ತೊಂದು ಹಾದಿಯಲ್ಲಿ ಯೋಚಿಸಲಾರಂಭಿಸಿದ್ದರು. ನಾವು ತಿನ್ನುವ ತರಕಾರಿಗಳನ್ನು ನಾವೇ ಬೆಳೆದುಕೊಂಡರೆ ಹೇಗೆ? ಹೀಗಂದುಕೊಂಡ ಬಹುತೇಕ ಜನರು ಇದ್ದದ್ದು ಬೆಂಗಳೂರಿನಂಥ ಮಹಾನಗರಗಳಲ್ಲಿ. ಬೆಂಗಳೂರಿನಲ್ಲಿ ಮನೆ ಕಟ್ಟಲಿಕ್ಕೆ ಒಂದು ಸೈಟು ಹಿಡಿಯಲಿಕ್ಕೇ ಸಾಕಷ್ಟು ಒದ್ದಾಡಬೇಕಾದಾಗ ಇನ್ನು ನಮ್ಮ ತರಕಾರಿಗಳನ್ನು ಬೆಳೆದುಕೊಳ್ಳುವುದಾದರೂ ಹೇಗೆ ಅನ್ನುವ ಜಿಜ್ಞಾಸೆಯ ಸಮಯದಲ್ಲೇ ಕೆಲವೊಂದಷ್ಟು ಜಾಣರು ಟೆರೆಸ್‌ ಗಾರ್ಡನಿಂಗ್‌ ಆರಂಭಿಸಿಯೇ ಬಿಟ್ಟರು. ಈರುಳ್ಳಿ, ಆಲೂಗಡ್ಡೆ, ಟೊಮೇಟೋ, ಹಸಿಮೆಣಸಿನಕಾಯಿ, ಮೆಂತ್ಯ, ಪುದೀನ, ಕೊತ್ತಂಬರಿ, ಕರಬೇವು… ಹೀಗೆ ಏನೆಲ್ಲವನ್ನು ಬೆಳೆಯಬಹುದೋ ಅವೆಲ್ಲ ತರಕಾರಿಗಳನ್ನೂ ತಮ್ಮ ಟೆರೆಸ್ಸಿನ ಮೇಲೆ ಬೆಳೆಯಲಾರಂಭಿಸಿದರು. ಹೀಗೆ ಜನರೂ ಇದರ ಮೇಲೆ ಆಸಕ್ತಿ ಬೆಳೆತೊಡಗಿದ್ದೇ, ಕೃಷಿ ಸಂಬಂಧಿ ಕಂಪೆನಿಗಳು ಗಿಡಗಳನ್ನು ಬೆಳೆಯಲು ಬೇಕಾದ ಗ್ರೋ ಬ್ಯಾಗ್ಸ್‌, ಕಾಂಪೋಸ್ಟ್‌, ಟ್ರೇಗಳು, ಬೀಜಗಳು ಮತ್ತು ಬೇಕಾದ ಇನ್ನಿತರೆ ಸಾಮಗ್ರಿಗಳನ್ನು ಮಾರಾಟ ಮಾಡತೊಡಗಿದರು. ಇವು ತಮ್ಮದೇ ಟೆರೆಸ್ಸಿನಲ್ಲಿ ತಮ್ಮಿಷ್ಟದ ತರಕಾರಿ ಬೆಳೆಯುವ ಮನಸ್ಸು ಮಾಡಿದ್ದ ಉದ್ಯೋಗಸ್ಥರಿಗೆ ಸಾಕಷ್ಟು ಅನುಕೂಲವಾಯಿತು. ತಾವೇ ಅಂಗಡಿಗೆ ಹೋಗಿ ಏನೆಲ್ಲ ಬೇಕು/ಬೇಡ ಎಂದು ಕೇಳಿಕೊಂಡು ಹೊತ್ತು ತರುವುದಕ್ಕಿಂತ, ಮೊಬೈಲಿನಲ್ಲಿ ತಮಗೆ ಬೇಕಾದ್ದನ್ನು ಖರೀದಿಸಿ, ಅದು ತಮ್ಮ ಮನೆ ಬಾಗಿಲಿಗೇ ಎಲ್ಲವೂ ಬರತೊಡದ್ದೇ, ಲ್ಯಾಪ್‌ಟಾಪ್‌ ಮೇಲೆ ಆಡುವ ಬೆರಳುಗಳು ಮಣ್ಣಿಗೆ ಕೈಯಾಡಿಸತೊಡಗಿದವು. ಇಂಥ ಪ್ರಯತ್ನಕ್ಕೆ ಸಾಕಷ್ಟು ಜನ ಕೈ ಹಾಕಿದ್ದರೂ, ಅದೇ ಉತ್ಸಾಹವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋದವರ ಸಂಖ್ಯೆ ಕಡಿಮೆಯಾದರೂ ಅವರಿಗೆ ತಾವು ತಿನ್ನುವ ಆಹಾರದ ಬಗ್ಗೆ ಅರಿವು ಬಂದದ್ದು ಒಳ್ಳೆಯ ಬೆಳವಣಿಗೆ. ಅದೇ ಸಮಯದಲ್ಲೇ ನಾವೂ ಒಂದಷ್ಟು ಸೊಪ್ಪುಗಳನ್ನು ನಮ್ಮ ಬಳಕೆಗೆ ಬೆಳೆಸಿಕೊಳ್ಳಲು ಪ್ರಯತ್ನಿಸಿ, ಒಂದೆರೆಡು ಬೆಳೆಗೆ ಕೈ ಬಿಟ್ಟಿದ್ದೆವು. ಆದರೀಗ ಹಳ್ಳಿಯ ವಾಸ ಇಂಥ ಯೋಜನೆಗೆ ಪೂರಕವಾಗಿದೆ.

ನೆನ್ನೆ ಸಂಜೆ ಪಕ್ಕದ ಖಾಲೀ ಸೈಟಿನಲ್ಲಿ ಹಾಕಿಕೊಂಡಿದ್ದ ಕುಂಬಳೇಕಾಯಿ ಬಳ್ಳಿಯ ಎಲೆಗಳನ್ನು ಕಿತ್ತುಕೊಂಡು ಬಂದ ನಮ್ಮ ಆಶಕ್ಕ, ಇದನ್ನು ನಾಳೆಗೆ ಪಲ್ಯ ಮಾಡು ರೂಪ ಅಂತ ಕೊಟ್ಟಾಗ ನಿಜಕ್ಕೂ ಆಶ್ಚರ್ಯ ನನಗೆ. ಕುಂಬಳಕಾಯಿ ಎಲೆಯಲ್ಲಿ ಪಲ್ಯ ಮಾಡಬಹುದ? ಹೇಗೆ? ಅಂತ ನಾನು ಕೇಳಿದ್ದಷ್ಟೇ ತಡ. ಅವರು ಕಿತ್ತುಕೊಂಡ ಸೊಪ್ಪನ್ನ ಹಿಡಿದುಕೊಂಡು ಬಂದು, ಕಟ್ಟೆಯ ಮೇಲೆ ಶಿಸ್ತಾಗಿ ಕುಳಿತು, ಕುಂಬಳೆಯ ಎಲೆಯನ್ನು ಎರಡು ಕೈಗಳ ನಡುವಿಟ್ಟು ಉಜ್ಜಲಾರಂಭಿಸಿದರು. ಇದೇಕೆ ಎಂದರೆ, ಅವುಗಳ ಮೇಲಿನ ಸಣ್ಣ ಸಣ್ಣ ಮುಳ್ಳುಗಳನ್ನು ತೆಗೆಯಲಂತೆ… ಹೀಗೆ ಸೊಪ್ಪು ಮತ್ತು ಎಳೆಯ ದಂಟಿನ ಮುಳ್ಳುಗಳನ್ನು ಉಜ್ಜಿ ತೆಗೆದು, ಇಂದು ಬೆಳಗ್ಗೆ ಅಕ್ಕಿ ರೊಟ್ಟಿಗೆ ಪಲ್ಯ ಮಾಡಿ ತಿಂದೆವು… ಆಹಾ…