ಅವನ ಕಾವ್ಯ ಸಮಕಾಲೀನ ವಿಮರ್ಶಕರನ್ನು ಮತ್ತು ಓದುಗರನ್ನು ಅಷ್ಟಾಗಿ ಪ್ರಭಾವಿಸದಿದ್ದರೂ, ಆನಂತರದ ಕಾಲದಲ್ಲಿ ಕೀಟ್ಸನ ಪ್ರಸಿದ್ಧಿ ಸದಾ ಹೆಚ್ಚುತ್ತಲೇ ಹೋಯಿತು. ಬದಲಾದ ಕಾವ್ಯಾಸಕ್ತಿ, ರುಚಿ, ಸಂದರ್ಭಗಳ ಹೊರತಾಗಿಯೂ ಕೀಟ್ಸನ ಪ್ರಮುಖ ರಚನೆಗಳು ಇಂದಿಗೂ ಅಸಂಖ್ಯ ಓದುಗರ ನೆಚ್ಚಿನ ಕವನಗಳಾಗಿವೆ. ಕಾವ್ಯದ ವ್ಯಾಖ್ಯೆ ಈ ಮಧ್ಯೆ ಹಲವು ಸಲ ಬದಲಾಗಿದ್ದರೂ ಸಹ, ಕೀಟ್ಸ್ ಬರೆಯುತ್ತಿದ್ದ ನುಡಿಗಟ್ಟು, ಉಕ್ತಿಶೈಲಿಗಳು ಇಂದು ಚಾಲ್ತಿಯಲ್ಲಿಲ್ಲದಿದ್ದರೂ ಕೂಡ, ಕೀಟ್ಸನ ಕಾವ್ಯ ಪ್ರದರ್ಶಿಸುವ ತೀವ್ರತೆ ಮತ್ತು ಪ್ರಾಮಾಣಿಕತೆ ಅವನ ಕಾವ್ಯವನ್ನು ಕಾಲಾತೀತಗೊಳಿಸಿದೆ.
ಕಮಲಾಕರ ಕಡವೆ ಬರೆಯುವ ಅಂಕಣ
ಇಪ್ಪತ್ತೈದರ ಎಳೆಪ್ರಾಯದಲ್ಲಿ ಮೃತ್ಯುವಶನಾಗಿರದಿದ್ದರೆ, ಇಂಗ್ಲೀಷ್ ಕವಿ ಜಾನ್ ಕೀಟ್ಸ್ ಬರೆಯಬಹುದಾಗಿದ್ದ ಮೇರುಕೃತಿಗಳು, ಏರಬಹುದಾಗಿದ್ದ ಎತ್ತರ, ಸಾಧಿಸಬಹುದಾಗಿದ್ದ ಭವ್ಯತೆಯನ್ನು ಕ್ಷಣಮಾತ್ರಕ್ಕಾದರೂ ಕಲ್ಪಿಸಿಕೊಳ್ಳದೇ ಕೀಟ್ಸನ ಕವನಗಳನ್ನು ಯಾರೂ ಓದಿರಲಾರರು. ವಿಶ್ವದುದ್ದಕ್ಕೂ ಅಪಾರ ಮನ್ನಣೆ, ಆದರ ಗಳಿಸಿರುವ ಕವಿ ಜಾನ್ ಕೀಟ್ಸ್ ಮೃತ್ಯುವಶನಾಗಿ ಇದೇ ಫೆಬ್ರವರಿ 23ನೇ ತಾರೀಕಿಗೆ ಎರಡು ನೂರು ವರುಷಗಳು.
ಅಕ್ಟೋಬರ್ 1795ರಲ್ಲಿ ಜನಿಸಿ ಫೆಬ್ರವರಿ 1821ರಲ್ಲಿ ಕ್ಷಯರೋಗದಿಂದಾಗಿ ಮೃತಪಟ್ಟ ಕೀಟ್ಸ್ ವಿಶ್ವಕಾವ್ಯದ ಚಿರಯುವಕ. ಮಾನವ ಜೀವನದ ಕ್ಷಣಿಕತೆಯನ್ನು ಅತೀವ ವಿಷಾದದಿಂದ ಧ್ಯಾನಿಸುವ, ಅದಕ್ಕೆ ಪರ್ಯಾಯವಾಗಿ ಚಿರಸ್ಥಾಯಿ ಸೌಂದರ್ಯವನ್ನು ಕಲೆ, ನಿಸರ್ಗಗಳಲ್ಲಿ ಕಾಣುವ ಕೀಟ್ಸ್, ಇಂಗ್ಲೀಷ್ ರೋಮ್ಯಾಂಟಿಸಿಸಮ್ ಪರಂಪರೆಯ ಅಜರಾಮರ ಕವಿಗಳಲ್ಲೊಬ್ಬ.
ಇಪ್ಪತ್ತೈದು ವರುಷ, ನಾಲ್ಕು ತಿಂಗಳ ಎಳೆಪ್ರಾಯದಲ್ಲಿ ಕೀಟ್ಸ್ ವಿಧಿವಶನಾದಾಗ ಇಂಗ್ಲೆಂಡಿನಲ್ಲಿ ಅವನಿನ್ನೂ ಕವಿಯಾಗಿ ಪ್ರಸಿದ್ಧಿ ಪಡೆದಿರಲಿಲ್ಲ. ಅವನ ಜೀವಿತಾವಧಿಯಲ್ಲಿ ಆದರಕ್ಕಿಂತ ಅನಾದರವೇ ಹೆಚ್ಚು ಬಂದಿತ್ತು ಅವನ ಕವನಗಳ ಪಾಲಿಗೆ. ಆದರೂ, ಅವನ ಮರಣದ ಎರಡೇ ತಿಂಗಳಿನ ನಂತರ ಅವನ ಕುರಿತಾಗಿ ಶೆಲ್ಲಿ ಎಂಬ ಇನ್ನೋರ್ವ ಯುವ ಕವಿ “ಅಡೋನೀಸ್” ಎಂಬ ಸ್ತುತಿಗೀತವನ್ನು ಬರೆಯುವುದರ ಮೂಲಕ ಕೀಟ್ಸನ ಮರಣೋತ್ತರ ಜನಪ್ರಿಯತೆ ಮೊದಲಾಯಿತು. ಮುಂದಿನ ದಶಕಗಳಲ್ಲಿ ಅವನ ಕೀರ್ತಿ ವೃದ್ಧಿಸುತ್ತ ಹೋಗಿ, ಇಂಗ್ಲೀಷ್ ಭಾಷೆಯ ಒಟ್ಟಾರೆ ಕಾವ್ಯ ಪರಂಪರೆಯ ಅತಿ ಮುಖ್ಯ ಹೆಸರುಗಳಲ್ಲಿ ಒಂದೆಂದು ಪರಿಗಣಿಸುವಷ್ಟು ಎತ್ತರಕ್ಕೆ ಬೆಳೆಯಿತು.
ವಿಶ್ವಮಾನ್ಯ ಕವಿಗಳಲ್ಲಿ ಗಣಿಸಲಾಗುವ ಕೀಟ್ಸ್ ತನ್ನೆಲ್ಲ ಕವಿತೆಗಳನ್ನು ಬರೆದದ್ದು ಕೇವಲ ಆರು ವರ್ಷಗಳಲ್ಲಿ. 1816ರಲ್ಲಿ ಅವನು ತನ್ನ ಮೊದಲ ಕವನವನ್ನು ಪ್ರಕಟಿಸಿದ್ದ. ಅವನ ಜೀವಿತಾವಧಿಯಲ್ಲಿ ಮೂರು ಸಂಕಲನಗಳನ್ನು ಪ್ರಕಟಿಸಿದ್ದರೂ, ಪತ್ರಿಕೆಗಳಲ್ಲಿ ಅವನ ಸಂಕಲನಗಳನ್ನು ತೀವ್ರವಾಗಿ ವಿಮರ್ಶಿಸಿ, ಹೀಯಾಳಿಸಲಾಗಿತ್ತು. ತನ್ನ ಕಾವ್ಯಕ್ಕೆ ಮನ್ನಣೆ ಸಿಗಲೆಂದು ಬಹಳ ಬಯಸಿದ್ದ ಕೀಟ್ಸ್ ಮಿತ್ರರಿಗೆ ಬರೆದ ಪತ್ರಗಳಲ್ಲಿ ಅಂತಹ ಮನ್ನಣೆ ತಾನು ಸತ್ತ ನಂತರವೇ ಬರಲಿದೆ ಎಂದು ಸಹ ಖೇದದಿಂದ ನಮೂದಿಸಿದ್ದ. ಕೀಟ್ಸನಷ್ಟು ಎಳೆಪ್ರಾಯದಲ್ಲಿ ಬೇರಿನ್ಯಾವ ಇಂಗ್ಲೀಷ್ ಕವಿಯೂ ಕೂಡ ಅಷ್ಟು ಪ್ರಬುದ್ಧ ಕಾವ್ಯ ಬರೆದಿರಲಿಲ್ಲ; ಅಷ್ಟು ಎಳೆಪ್ರಾಯದಲ್ಲಿ ಮರೆಯಾಗಿದ್ದರೆ ಬೇರಿನ್ಯಾವ ಕವಿಯೂ ಇಷ್ಟು ಹೆಸರುವಾಸಿಯೂ ಆಗುತ್ತಿರಲಿಲ್ಲ.
ವೈದ್ಯವೃತ್ತಿಯ ತರಬೇತು ಪಡೆದಿದ್ದರೂ, ಕೀಟ್ಸ್ ಕಾವ್ಯದ ಸೆಳೆತಕ್ಕೆ ಸಿಕ್ಕು ಬರಹಗಾರನಾಗುವ ಹಂಬಲದ ಹಿಂದೆ ಬಿದ್ದ. ಅವನ ಕಾವ್ಯ ಸಮಕಾಲೀನ ವಿಮರ್ಶಕರನ್ನು ಮತ್ತು ಓದುಗರನ್ನು ಅಷ್ಟಾಗಿ ಪ್ರಭಾವಿಸದಿದ್ದರೂ, ಆನಂತರದ ಕಾಲದಲ್ಲಿ ಕೀಟ್ಸನ ಪ್ರಸಿದ್ಧಿ ಸದಾ ಹೆಚ್ಚುತ್ತಲೇ ಹೋಯಿತು. ಬದಲಾದ ಕಾವ್ಯಾಸಕ್ತಿ, ರುಚಿ, ಸಂದರ್ಭಗಳ ಹೊರತಾಗಿಯೂ ಕೀಟ್ಸನ ಪ್ರಮುಖ ರಚನೆಗಳು ಇಂದಿಗೂ ಅಸಂಖ್ಯ ಓದುಗರ ನೆಚ್ಚಿನ ಕವನಗಳಾಗಿವೆ. ಕಾವ್ಯದ ವ್ಯಾಖ್ಯೆ ಈ ಮಧ್ಯೆ ಹಲವು ಸಲ ಬದಲಾಗಿದ್ದರೂ ಸಹ, ಕೀಟ್ಸ್ ಬರೆಯುತ್ತಿದ್ದ ನುಡಿಗಟ್ಟು, ಉಕ್ತಿಶೈಲಿಗಳು ಇಂದು ಚಾಲ್ತಿಯಲ್ಲಿಲ್ಲದಿದ್ದರೂ ಕೂಡ, ಕೀಟ್ಸನ ಕಾವ್ಯ ಪ್ರದರ್ಶಿಸುವ ತೀವ್ರತೆ ಮತ್ತು ಪ್ರಾಮಾಣಿಕತೆ ಅವನ ಕಾವ್ಯವನ್ನು ಕಾಲಾತೀತಗೊಳಿಸಿದೆ. ಹಾಗಾಗಿಯೇ ಪ್ರಿ-ರ್ಯಾಫೆಲೈಟ್ ಎಂಬ ಕಾವ್ಯ ಪರಂಪರೆಗೆ ಪ್ರೇರಣೆಯಾಗಿದ್ದ ಕೀಟ್ಸ್. ತಮ್ಮ ಸಾಹಿತ್ಯಸೃಷ್ಟಿಗೆ ಕೀಟ್ಸನ ಓದು ಮಹತ್ತರ ಪಾತ್ರ ವಹಿಸಿತು ಎಂದಿದ್ದಾರೆ ಇಂಗ್ಲೀಷಿನ ಆಲ್ಬರ್ಟ್ ಟೆನಿಸನ್, ಸ್ಪ್ಯಾನಿಷ್ ಸಾಹಿತ್ಯಕಾರ ಬೋರ್ಹೆಸ್, ಐರಿಷ್ ಕವಿ ಶೀಮ್ಸ್ ಹೀನಿಯಂಥ ಹಲವು ಗಣ್ಯಲೇಖಕರು.
1819ರ ಮೇ ತಿಂಗಳಿನಲ್ಲಿ ಕೀಟ್ಸ್ ತನ್ನ ನಾಲ್ಕು ಪ್ರಸಿದ್ಧ “ಓಡ್”ಗಳನ್ನು ರಚಿಸಿದ. ನೋವು ಮತ್ತು ನಲಿವು, ಪ್ರೀತಿ ಮತ್ತು ಸಂಕಟ, ಸುಖ ಮತ್ತು ಸಾವುಗಳ ನಡುವಿನ ಬೇರ್ಪಡಿಸಲಾಗದ ಬಂಧದ ಕುರಿತು ಧ್ಯಾನಿಸುವ ಕವಿತೆಗಳಿವು. ಯಾತನೆ ಎಂದರೇನೆಂದು ಸ್ವಾನುಭವದಿಂದ ಅರಿತಿದ್ದ ಕೀಟ್ಸ್, ಕವಿಯ ಕಾಯಕ ಗಾಯಕ್ಕೆ ಮುಲಾಮು ಹಚ್ಚುವುದು ಎಂದು ನಂಬಿದ್ದ. ಕೀಟ್ಸನ ಕಾವ್ಯದಲ್ಲಿ ಕಾಲ್ಪನಿಕ ವಿಶ್ವ ಈ ಬೇನೆಬವಣೆಗಳನ್ನು, ಈ ಮರ್ತ್ಯತೆಯನ್ನು ಮೀರಿದ್ದು – “ಆಲಿಸಿದ ಗೀತೆಗಳು ಮಧುರ, ಆಲಿಸಿಲ್ಲದವು ಅತಿ ಮಧುರ”.
ಇಪ್ಪತ್ತೈದು ವರುಷ, ನಾಲ್ಕು ತಿಂಗಳ ಎಳೆಪ್ರಾಯದಲ್ಲಿ ಕೀಟ್ಸ್ ವಿಧಿವಶನಾದಾಗ ಇಂಗ್ಲೆಂಡಿನಲ್ಲಿ ಅವನಿನ್ನೂ ಕವಿಯಾಗಿ ಪ್ರಸಿದ್ಧಿ ಪಡೆದಿರಲಿಲ್ಲ. ಅವನ ಜೀವಿತಾವಧಿಯಲ್ಲಿ ಆದರಕ್ಕಿಂತ ಅನಾದರವೇ ಹೆಚ್ಚು ಬಂದಿತ್ತು ಅವನ ಕವನಗಳ ಪಾಲಿಗೆ.
ನಾಲ್ಕು ಪುಟ್ಟ ಪುಟ್ಟ ಕವನಗಳು ಯಾರಾದರನ್ನೂ ಕವಿಯ ಪಟ್ಟಕ್ಕೆ ಏರಿಸಿದ್ದರೆ ಅದು ಕೀಟ್ಸ್. ಅಪ್ರತಿಮ ಕಾವ್ಯಾತ್ಮಕತೆಯ ಈ ನಾಲ್ಕು “ಓಡ್”ಗಳು: “ಓಡ್ ಟು ನೈಟಿಂಗೇಲ್”, “ಓಡ್ ಟು ಗ್ರೀಶಿಯನ್ ಅರ್ನ್”, “ಓಡ್ ಟು ಆಟಂ” ಮತ್ತು “ಓಡ್ ಟು ಮೆಲಂಕಲಿ”. ನೈಟಿಂಗೇಲ್ ಪದ್ಯ ಶುರುವಾಗುವ ಬಗೆ ಹೀಗೆ:
ಎದೆಯಲ್ಲಿ ನೋವು, ಅರಿವನಾವರಿಸಿದೆ ಮರೆವು
ನಾನು ನಂಜು ಸೇವಿಸಿಹೆನೋ ಅನ್ನುವಂತೆ
ಅಥವಾ ಕ್ಷಣಹಿಂದೆ ಅಫೀಮಿನ್ನು ಉಂಡಂತೆ
ವಿಸ್ಮೃತಿಯತ್ತ ನಿಧಾನ ಜಾರುತಿರುವೆ
ನಿನ್ನ ಬಾಳನು ಕಂಡು ಅಸೂಯೆಯಿಂದಲ್ಲ
ನಿನ್ನ ಹರುಷದಲ್ಲಿ ಒಂದಾದ ಹರುಷವಿದು
ಮರದಮೇಲಿರುವ ಹಗುರಹೆಕ್ಕೆಯ ಅಪ್ಸರೆಯರಂತ
ನೀನು, ಇರುವೆ ಯಾವುದೋ ಗಿಡಗಂಟಿಯ ಹಸಿರಲ್ಲಿ
ಹಲವು ನೆರಳುಗಳ ಇಂಪು ಗೂಡಿನಲ್ಲಿ
ಹಾಡುತ್ತಿರುವೆ ಕೊರಳ ತೆರೆದ ನಿರಾಳತೆಯಲ್ಲಿ
ಗಿಡವೊಂದರಲ್ಲಿ ಎಲೆ ಹೊಮ್ಮಿದಂತೆ ಸಹಜವಾಗಿ ಮೂಡದಿದ್ದರೆ ಅದು ಕವಿತೆಯೇ ಅಲ್ಲವೆಂದು ಘೋಷಿಸಿದ ಕೀಟ್ಸ್, ಸತತ ಬದಲಾವಣೆಗಳ ಭೌತಿಕ ವಾಸ್ತವದ ನಡುವೆ ಸ್ಥಿರತೆಗಾಗಿ ಹಂಬಲಿಸುತ್ತಾನೆ – ಅದನ್ನು ಅವನು ಕಾಣುವುದು ಚಿರಸ್ಥಾಯಿ ಸೌಂದರ್ಯದ ರೂಪದಲ್ಲಿ. ಅದು ನಿಸರ್ಗವಿರಬಹುದು, ಅದು ಕಲೆಯೂ ಇರಬಹುದು. “ಚೆಲುವು ಎಂದೆಂದಿಗೂ ನಲಿವು” ಎಂದು ಹೇಳುವ ಕೀಟ್ಸನನ್ನು ಕಾವ್ಯ ಮತ್ತು ಕಲ್ಪಿತ ಸೌಂದರ್ಯದ ಮೂರ್ತ ಸಂಕೇತವೆಂದು ಭಾವಿಸುವವರೂ ಇದ್ದಾರೆ. ಒಲುಮೆಯ ಪಾವಿತ್ರ್ಯ ಮತ್ತು ಕಲ್ಪನೆ ಸೃಷ್ಟಿಸುವ ಸತ್ಯದ ಕುರಿತು ಅಪಾರ ಭರವಸೆ ಇಟ್ಟುಕೊಂಡಿದ್ದ ಕೀಟ್ಸನ ಮರೆಯಲಾರದ ಸಾಲು: “ಸೌಂದರ್ಯವೇ ಸತ್ಯ; ಸತ್ಯವು ಸುಂದರ”. ಈ ಸಾಲಿನಿಂದ ಅಂತ್ಯವಾಗುವ ಕೀಟ್ಸನ ಅತ್ಯಂತ ಜನಪ್ರಿಯ ಕವನ “ಓಡ್ ಟು ಗ್ರೀಶಿಯನ್ ಅರ್ನ್”ನ ಮೊದಲ ಚರಣ ನೋಡಿ:
ಕೆಡಿಸಿರದ ನಿಶ್ಚಲ ಸೌಮ್ಯತೆಯ ಮದುಮಗಳೇ
ಶಾಂತಿ ಮತ್ತು ಮಂದ ಕಾಲದ ದತ್ತು ಮಗುವೇ
ವನಾವೃತ ಇತಿಹಾಸಕಾರ, ಪುಷ್ಫಭರಿತ ಚರಿತೆಯ
ಪ್ರಾಸಪದ್ಯಕ್ಕಿಂತಲೂ ಸೊಗಸಾಗಿ ಹೀಗೆಯೇ ಹೇಳುವೆ ನೀನು:
ಟೆಂಪೆಯ ಅಥವಾ ಆರ್ಕೆಡಿಯ ಕಣಿವೆಗಳಲ್ಲಿ
ನಿನ್ನ ರೂಪವನ್ನು ಆವರಿಸಿಹ ಈ ಪರ್ಣಾವೃತ ಕತೆಯನ್ನು:
ಯಾರಿವರು, ದೇವರೋ, ಜನರೋ, ಈರ್ವರಿಹರೋ ?
ಇದು ಯಾವ ಬಗೆಯ ಮನುಜರು, ದೈವಗಳು, ಮಹಿಳೆಯರು,
ಬೆನ್ನಟ್ಟುವ ಎಂಥ ಹುಚ್ಚಾಟ, ಪಾರಾಗಲು ಎಂಥ ಹೋರಾಟ?
ಯಾವ ಬಗೆಯ ಗಂಟೆ ಜಾಗಟೆಗಳು? ಎಂಥ ಉನ್ಮಾದದ ಅಬ್ಬರ?
ಬ್ರಿಟೀಷ್ ಕಾವ್ಯದಲ್ಲಿ ಈಗ ಅತಿ ಹೆಚ್ಚು ಅಧ್ಯಯನ ಮಾಡಲಾಗುತ್ತಿರುವ ಕವಿಗಳಲ್ಲಿ ಒಬ್ಬನಾದ ಕೀಟ್ಸ್ 1814ರಲ್ಲಿ ತನ್ನ ಮೊಟ್ಟ ಮೊದಲ ಕವನ ಬರೆದು ಕಾವ್ಯಕ್ಷೇತ್ರದಲ್ಲಿ ಅಂಬೆಗಾಲಿಡುತ್ತಾನೆ. ಕೀಟ್ಸನ ಅಂತಿಮ ಸಂಕಲನ ಪ್ರಕಟವಾಗಿದ್ದು 1820ರಲ್ಲಿ. ಇಷ್ಟು ಕಡಿಮೆ ಕಾಲಾವಧಿಯಲ್ಲಿ ಅವನು ಬರೆದ ಕಾವ್ಯ ಮತ್ತು ಪತ್ರಗಳಲ್ಲಿ, ಅವನ ಪ್ರಸಿದ್ಧಿಗೆ ಒಂದು ಪುಟ್ಟ ಬರಹಗಳ ಗುಚ್ಚ ಕಾರಣ. ಅದರಲ್ಲೂ, “ಓಡ್” ರಚನೆಗಳಲ್ಲಿ ಅವನು ಸಾಧಿಸುವ ಆಂತರ್ಯದ ತೀವ್ರತೆ, ಉಕ್ತಿಯ ಮಾಧುರ್ಯ, ವಿವರಗಳ ಖಚಿತತೆ, ಕೀಟ್ಸನನ್ನು ಕೇವಲ ಇಂಗ್ಲೀಷಿನ ಮಾತ್ರವಲ್ಲ, ಜಗತ್ತಿನ ಶ್ರೇಷ್ಠ ಕವಿಗಳ ಸಾಲಿಗೆ ಸೇರಿಸಿವೆ.
ಪೌರಾಣಿಕ ಔನ್ನತ್ಯಗಳಿಲ್ಲದ ಸೆಕ್ಯುಲರ್ ವಿಶ್ವದಲ್ಲಿ, ಮಾನವನ ಆಂತರ್ಯದ ಬಯಕೆ-ಬಾಧೆಗಳಲ್ಲಿ ಬೆರಗನ್ನು ಕಾಣಲೆತ್ನಿಸುವ ಕಾವ್ಯ ಕೀಟ್ಸನದು. ಕಾಲದ ವ್ಯಂಗ್ಯವೆನ್ನೋಣವೇ, ಎಳೆಪ್ರಾಯದಲ್ಲಿಯೇ ವಿಧಿವಶನಾದ ಈ ತರುಣ, ಮರಣೋತ್ತರ ಅಮರನಾಮನಾಗುತ್ತಾನೆ. ಪಾಶ್ಚಾತ್ಯ ಕಾವ್ಯ ಪ್ರಕಾರಗಳಲ್ಲಿ ಒಂದಾದ “ಓಡ್” ರಚನೆಗಳಲ್ಲಿ ಅತಿಶ್ರೇಷ್ಟವೆಂದು ಇಂದಿಗೂ ಪ್ರಸಿದ್ಧವಿರುವ “ಓಡ್ ಟು ನೈಟಿಂಗೇಲ್”, “ಓಡ್ ಟು ಆಟಂ”, “ಓಡ್ ಟು ಗ್ರೀಸಿಯನ್ ಅರ್ನ್”ಗಳಂತಹ ಕಾಲಾತೀತ ಕಾವ್ಯ ನಮ್ಮೆದುರಿಟ್ಟು ಮರೆಯಾಗುತ್ತಾನೆ. ಕೆಲವೇ ಕೆಲವು ಶ್ರೀಮಂತ, ಪ್ರಭಾವಿ, ಖಚಿತ ವಿವರಗಳ ಕವನಗಳನ್ನು ಬರೆದ ಕೀಟ್ಸನನ್ನು ಶೇಕ್ಸಪಿಯರನೊಂದಿಗೆ ಹೋಲಿಸಲಾಗುತ್ತದೆ ಎಂದರೆ ಅವನ ಎತ್ತರ ಅರಿವಾಗುತ್ತದೆ.
ಪ್ರತಿಯೊಬ್ಬ ಕವಿಯ ಸುಪ್ತಪ್ರಜ್ಞೆಯಲ್ಲೂ ಮುನ್ನಿನೆಲ್ಲ ಕಾವ್ಯವನ್ನು ದಹಿಸಿ, ಭೂತದ ಹೊರೆಯಿಂದ ಮುಕ್ತವಾದ ಬಾನಿನಲ್ಲಿ ಹಾರುವ ಹಂಬಲ ಇರುತ್ತದೆ. ಎಷ್ಟರ ಮಟ್ಟಿಗೆ ಅದು ಸಾಧ್ಯವೋ ಅಷ್ಟು ಪ್ರತಿಭೆ ಕವಿಯದು. ಪರಂಪರೆಯು ತನ್ನನ್ನು ಕಬಳಿಸದಂತೆ ನಡೆಸುವ ಹೋರಾಟವೇ ಕವಿಯ ಅನನ್ಯತೆಯನ್ನು ರೂಪಿಸುತ್ತದೆ. ಅಂತಹ ಅನನ್ಯತೆಯನ್ನು ದರ್ಶಿಸುವ ವಿಶಿಷ್ಟ ಕವಿಯಾಗಿದ್ದ ಜಾನ್ ಕೀಟ್ಸ್ ಕೊನೆಯುಸಿರೆಳೆಯುವ ಮುನ್ನ ತನ್ನ ಗೆಳೆಯ ಜೋಸೆಫ್ ಸೆವರ್ನನಿಗೆ ಸೂಚಿಸಿದ್ದಂತೆ ಅವನ ಗೋರಿಯ ಮೇಲೆ ಬರೆದ ಸಾಲು: “ಇಲ್ಲಿ ಮಲಗಿರುವಾತನ ಹೆಸರನ್ನು ನೀರಲ್ಲಿ ಬರೆಯಲಾಗಿತ್ತು”.
#tellkamalakar@gmail.com
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.
ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.
ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ