ಯಾವುದೇ ಮನೆ, ಕಾಂಕ್ರೀಟ್ ಕಾಡಿನ ಕಟ್ಟಡಗಳಿಲ್ಲದ, ಒಂದು ಪ್ರಶಾಂತವಾದ ಜಾಗ. ಆದರೆ ಅಲ್ಲಿಗೆ ಹೋಗಿ ತಲುಪುವುದು ಸ್ವಲ್ಪ ಕಷ್ಟದ ಕೆಲಸ. ಹತ್ತು ಕಿಲೋಮೀಟರು ದೂರದವರೆಗೆ ನಿಮ್ಮ ವಾಹನಗಳಲ್ಲಿ ಹೋಗಿ, ಅಲ್ಲಿಂದ ಮುಂದೆ ಅದಕ್ಕೆಂದೇ ಬಾಡಿಗೆ ಇರುವ ಕೆಲವು ಫೋರ್ ವ್ಹೀಲ್ ಜೀಪ್‌ಗಳಲ್ಲಿ ಮಾತ್ರ ಹೋಗಬಹುದು. ಓರೆ ಕೋರೆ, ನೀರು ಹರಿದು, ಅರ್ಧ ಹಾಳಾದ ರಸ್ತೆಯಲ್ಲಿ ಹೋಗುವುದೇ ಒಂದು ಸಾಹಸ ಕ್ರೀಡೆ ಅರ್ಥಾತ್ ಅಡ್ವೆಂಚರ್. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಅಡಿ ಮೇಲೆ ಇರುವ ಸ್ಥಳ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

 

ನಾನು ಒಬ್ಬ ವೈದ್ಯ. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ ನಂತರ ಸ್ವಯಂ ನಿವೃತ್ತಿ ತೆಗೆದು ಕೊಂಡು, ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಾ, ಒಂದು ಸಣ್ಣ ಕ್ಲಿನಿಕ್ ನಡೆಸುತ್ತಾ ಇದ್ದೆನೆ.

ಕೊಡಗು ಮತ್ತು ಅದರ ಮುಖ್ಯ ಪಟ್ಟಣ ಮಡಿಕೇರಿಯನ್ನು ನೋಡಿದವರಿಗೆ ಮಾತ್ರ ಅದು ಏನು, ಹೇಗಿದೆ ಎಂಬುದು ಗೊತ್ತು. ಇಲ್ಲಿನ ಪ್ರಕೃತಿ ಸೌಂದರ್ಯ, ನೈಸರ್ಗಿಕ ತಾಣಗಳು ನೋಡಲು ಬಹಳ ಸುಂದರ. ಇಲ್ಲಿ ಹರಿಯುವ ನದಿ, ತೊರೆಗಳು, ಬೆಟ್ಟಗುಡ್ಡಗಳ ಸಾಲು, ಸದಾ ಹಸಿರಿನಿಂದ ಕೂಡಿರುವ ಕಾಫಿ ತೋಟಗಳು, ಅದರ ಮಧ್ಯೆ ಕರಿ ಮೆಣಸಿನ ಬಳ್ಳಿಗಳು ಹಬ್ಬಿರುವ ಅನೇಕ ಮರಗಳು, ದೂರದಲ್ಲಿ ಅಲ್ಲೊಂದು ಇಲ್ಲೊಂದು ಮನೆಗಳು. ಎಲ್ಲವೂ ನೋಡುಗರ ಮನಸ್ಸಿಗೆ ಮುದ ನೀಡುತ್ತದೆ. ಆದರೆ ಮಳೆಗಾಲ ಬಂತೆಂದರೆ ಇಲ್ಲಿನ ಚಳಿಯನ್ನು ತಡೆದುಕೊಳ್ಳುವುದು ಸಾಧಾರಣ ಸಾಮಾನ್ಯರಿಗೆ ಆಗದಿರುವ ಕೆಲಸ. ಬೆಚ್ಚನೆಯ ಉಡುಪನ್ನು ಧರಿಸದೆ, ಮಳೆಗಾಲದ ಬಟ್ಟೆಗಳು ಇಲ್ಲದೆ ಹೊರಗೆ ಹೋಗುವುದು ಬಹಳ ಕಷ್ಟದ ಕೆಲಸ. ಮಳೆಗಾಲದ ಮಳೆಯನ್ನು ತಡೆಯಲು ಕೊಡೆ ಇಲ್ಲದೆ ಮನೆಯಿಂದ ಅಡಿ ಇಡುವಂತಿಲ್ಲ. ಅದರಲ್ಲೂ ಬೀಸುವ ಗಾಳಿ ಎಲ್ಲಿಂದ, ಎತ್ತಣಿಂದ ಬೀಸುತ್ತದೆ ಎನ್ನುವುದು ಊಹಿಸುವುದು ಕಷ್ಟ. ಅದು ಕ್ಷಣಕ್ಷಣಕ್ಕೆ ದಿಕ್ಕು ಬದಲಾಯಿಸುತ್ತಿರುತ್ತದೆ. ಪೂರ್ವದಿಂದ ಬರುವ ಮಳೆಯನ್ನು ತಡೆಯಲು ಪಶ್ಚಿಮಕ್ಕೆ ಹಿಡಿದ ಕೊಡೆಯನ್ನು ಒಮ್ಮೆಗೆ ಹಿಂದೆಯಿಂದ ಬಂದ ಗಾಳಿ, ಮುಂದಕ್ಕೆ ತಿರುಗಿಸಿ ಬಿಟ್ಟಿರುತ್ತದೆ. ಕೊಡೆಯನ್ನು ಸರಿಮಾಡುವ ಆ ಸ್ವಲ್ಪ ಸಮಯದ ಒಳಗೇ ನಾವು ತೊಯ್ದು ತೊಪ್ಪೆಯಾಗಿ ಇರುತ್ತೇವೆ.

ಲಾಕ್ಡೌನ್ ನಿಂದಾಗಿ ಅನೇಕ ಸಮಯದವರೆಗೆ ಜನರ ಓಡಾಟ ಕಮ್ಮಿ ಇದ್ದು, ಅದನ್ನು ಸಡಿಲಿಸಿದಂತೆ ಜನರ ಚಿತ್ತ ಕೊಡಗಿನತ್ತ ಹೊರಳಿ ಇಲ್ಲಿಗೆ ಬರಲು ತೊಡಗಿದರು.

ಮಳೆಗಾಲದ ಸಮಯ….

ಕ್ಲಿನಿಕ್ ನಲ್ಲಿ ರೋಗಿಗಳನ್ನು ಪರೀಕ್ಷೆಮಾಡುತ್ತಾ ಕುಳಿತಿದ್ದೆ. ದಡ ಬಡ ಎಂದು ಒಬ್ಬ ಹುಡುಗ, ಇನ್ನೊಂದು ಹುಡುಗಿ, ಬಾಗಿಲನ್ನು ತಳ್ಳಿಕೊಂಡು ಒಳ ನುಗ್ಗಿದರು. ಆ ಮಳೆ, ಚಳಿಯಲ್ಲಿಯೂ ಅವರಿಬ್ಬರೂ ಬೆವರುತ್ತಿದ್ದರು. ಮುಖದ ಪೂರ್ತಿ ಗಾಬರಿಯ ಚಿನ್ಹೆ ಆವರಿಸಿತ್ತು. ಅವರಲ್ಲಿ ಒಬ್ಬರು ಬೆಳ್ಳನೆಯ, ಸ್ವಲ್ಪ ದಡೂತಿಯಂತಿರುವ ಉತ್ತರ ಭಾರತದ ಹುಡುಗಿ, ಜೊತೆಯಲ್ಲಿದ್ದವನು ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗದಲ್ಲಿದ್ದ ಹುಡುಗ.

ಏನು ಎಂದೆ?

ಹುಡುಗಿಯ ಕೈ ಅವಳ ಹೊಟ್ಟೆಯ ಭಾಗ ತೋರಿಸಿತು.

ಬೆಳ್ಳಗಿನ ಡ್ರೆಸ್, ಸಂಪೂರ್ಣ ರಕ್ತಮಯ. ಗಾಬರಿಯಿಂದ ಮಾತೇ ಹೊರಡುತ್ತಿಲ್ಲ. ಕಷ್ಟಪಟ್ಟು ಹಿಂದಿಯಲ್ಲಿ ಹೇಳಲು ತೊಡಗಿದರು.

ಏನು ಆಯ್ತು ಅಂತ ಗೊತ್ತಾಗುತ್ತಿಲ್ಲ.

ಮಾಂದಲಪಟ್ಟಿಗೆ ಪ್ರವಾಸಕ್ಕೆಂದು ಹೋಗಿದ್ದೆವು, ಅಲ್ಲಿಂದ ಬರುವಾಗ ಹೀಗೆ ಆಗಿದೆ ಅನ್ನುತ್ತಿದ್ದಾರೆ.

ಮಾಂದಲಪಟ್ಟಿ ಎನ್ನುವುದು ಮಡಿಕೇರಿಯ ಹತ್ತಿರ ಇರುವ ಒಂದು ನೈಸರ್ಗಿಕ ಸುಂದರವಾದ ತಾಣ. ಸುತ್ತಲೂ ಬೆಟ್ಟ ಗುಡ್ಡಗಳಿಂದ ತುಂಬಿರುವ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಒಂದು ಪ್ರವಾಸ ಕೈಗೊಳ್ಳುವ ಸ್ಥಳ. ಕನ್ನಡದ ಗಾಳಿಪಟ ಎಂಬ ಚಿತ್ರದ ಹೆಚ್ಚಿನ ಅಂಶಗಳನ್ನು ಅಲ್ಲಿಯೇ ಚಿತ್ರೀಕರಣ ಮಾಡಿ, ಆ ಸ್ಥಳಕ್ಕೆ ಮುಗಿಲಪೇಟೆ ಎಂಬ ನಾಮಕರಣ ಕೂಡ ಮಾಡಿದ್ದರು. ಆ ಚಿತ್ರ ಬಿಡುಗಡೆ ಆದದ್ದೇ ತಡ, ಅನೇಕರು ಮಡಿಕೇರಿಗೆ ಬಂದು, ಮುಗಿಲಪೇಟೆಯ ಹೆದ್ದಾರಿ ಯಾವುದು ಎಂದು ಎಲ್ಲರನ್ನು ಕೇಳುವುದು ಸಾಮಾನ್ಯವಾಗಿತ್ತು. ಅಷ್ಟು ಪ್ರಖ್ಯಾತಿ ಪಡೆದು ಬಿಟ್ಟಿತ್ತು ಆ ಸ್ಥಳ. ಯಾವುದೇ ಮನೆ, ಕಾಂಕ್ರೀಟ್ ಕಾಡಿನ ಕಟ್ಟಡಗಳಿಲ್ಲದ, ಒಂದು ಪ್ರಶಾಂತವಾದ ಜಾಗ. ಆದರೆ ಅಲ್ಲಿಗೆ ಹೋಗಿ ತಲುಪುವುದು ಸ್ವಲ್ಪ ಕಷ್ಟದ ಕೆಲಸ. ಹತ್ತು ಕಿಲೋಮೀಟರು ದೂರದವರೆಗೆ ನಿಮ್ಮ ವಾಹನಗಳಲ್ಲಿ ಹೋಗಿ, ಅಲ್ಲಿಂದ ಮುಂದೆ ಅದಕ್ಕೆಂದೇ ಬಾಡಿಗೆ ಇರುವ ಕೆಲವು ಫೋರ್ ವ್ಹೀಲ್ ಜೀಪ್‌ಗಳಲ್ಲಿ ಮಾತ್ರ ಹೋಗಬಹುದು. ಓರೆ ಕೋರೆ, ನೀರು ಹರಿದು, ಅರ್ಧ ಹಾಳಾದ ರಸ್ತೆಯಲ್ಲಿ ಹೋಗುವುದೇ ಒಂದು ಸಾಹಸ ಕ್ರೀಡೆ ಅರ್ಥಾತ್ ಅಡ್ವೆಂಚರ್. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಅಡಿ ಮೇಲೆ ಇರುವ ಸ್ಥಳ. ಕೊರೆಯುವ ಚಳಿಯ ತಾಣ, ಜೊತೆಗೆ ಬೀಸುವ ತಂಗಾಳಿಯಂತೂ ಬಹಳ ಮುದ ನೀಡುತ್ತದೆ.

ಮೊದ ಮೊದಲು ಅಲ್ಲಿನ ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದಾಗ ಆ ಸುಂದರ ಪ್ರಕೃತಿಯಲ್ಲಿ ನಮ್ಮನ್ನು ನಾವು ಮರೆತು, ಕಳೆದು ಹೋಗುತ್ತಿದ್ದೆವು. ಪ್ರಕೃತಿ ಪ್ರಿಯರಿಗೂ, ಛಾಯಾಗ್ರಾಹಕರಿಗೂ ಹೇಳಿ ಮಾಡಿಸಿದ ಸ್ಥಳ. ಸುತ್ತಲೂ ಹಸಿರಿನಿಂದ ಕೂಡಿದ ಈ ಸ್ಥಳ ಏಕಾಂತತೆಯ ಮತ್ತು ಶಾಂತಿಯ ಒಂದು ತಾಣ. ಇಲ್ಲಿನ ತಾಪಮಾನ ಸಾಧಾರಣ ಹದಿನೈದರಿಂದ ಇಪ್ಪತೈದು ಡಿಗ್ರಿಯ‌ವರೆಗೆ ಇರುತ್ತದೆ. ಚಾರಣ ಪ್ರಿಯರಿಗೆ ಇಲ್ಲಿ ಟ್ರೆಕ್ಕಿಂಗ್ ಹೋಗಲು ಬಹಳಷ್ಟು ದಾರಿಗಳಿವೆ. ತಾಕತ್ತಿದ್ದರೆ ಹೆಜ್ಜೆ ಹಾಕಲು ಬೆಟ್ಟಗಳ ಸಾಲು ಕಾಯುತ್ತಾ ಇದೆ.

ಬೆಚ್ಚನೆಯ ಉಡುಪನ್ನು ಧರಿಸದೆ, ಮಳೆಗಾಲದ ಬಟ್ಟೆಗಳು ಇಲ್ಲದೆ ಹೊರಗೆ ಹೋಗುವುದು ಬಹಳ ಕಷ್ಟದ ಕೆಲಸ. ಮಳೆಗಾಲದ ಮಳೆಯನ್ನು ತಡೆಯಲು ಕೊಡೆ ಇಲ್ಲದೆ ಮನೆಯಿಂದ ಅಡಿ ಇಡುವಂತಿಲ್ಲ. ಅದರಲ್ಲೂ ಬೀಸುವ ಗಾಳಿ ಎಲ್ಲಿಂದ, ಎತ್ತಣಿಂದ ಬೀಸುತ್ತದೆ ಎನ್ನುವುದು ಊಹಿಸುವುದು ಕಷ್ಟ.

ಈಗಂತೂ ಅಲ್ಲಿ ಬಹಳ ಪ್ರವಾಸಿಗರ ಪಟಾಲಂ ಇರುತ್ತದೆ. ಎಲ್ಲೆಡೆಯೂ, ಇಲ್ಲಿನ ನೀಲಕುರುಂಜಿ ಹೂವಿನದ್ದೇ ಸುದ್ದಿ. ಈ ಹೂವು ದಕ್ಷಿಣ ಭಾರತದ ಶೋಲಾ ಅರಣ್ಯಗಳಲ್ಲಿ ಮಾತ್ರ ಕಾಣ ಬರುತ್ತದೆ. ಸ್ಟ್ರೋಬೀಲಂಥಸ್ ಕುಂಟಿಯಾನ ಇದರ ಜೈವಿಕ ಹೆಸರು. ಈ ಹೂವು ಹನ್ನೆರೆಡು ವರ್ಷಕ್ಕೊಮ್ಮೆ, ಅಪರೂಪಕ್ಕೆ ಮಾತ್ರ ಅರಳುತ್ತದೆ ಮತ್ತು ತಮಿಳುನಾಡಿನ ಊಟಿಯ ಸಮೀಪವಿರುವ ಬೆಟ್ಟವನ್ನು ಈ ಹೂವಿನ ಬಣ್ಣಕ್ಕಾಗಿಯೆ ನೀಲಗಿರಿ ಬೆಟ್ಟ ಎಂಬ ಹೆಸರಿನಿಂದ ಕರೆಯುತ್ತಾರೆ. ಈ ಗಿಡ ಒಂದರಿಂದ ಎರಡು ಅಡಿ ಎತ್ತರ ಬೆಳೆದು, ಎಲ್ಲಾ ಗಿಡಗಳಲ್ಲಿ ಒಟ್ಟಿಗೇ ಹೂವು ಆಗುತ್ತದೆ. ಈ ಹೂವನ್ನು ಸುಬ್ರಹ್ಮಣ್ಯ ಅಥವಾ ಕಾರ್ತಿಕೇಯನಿಗೆ ಸಮರ್ಪಿಸಲು, ತಮಿಳು ನಾಡಿನ ಕೊಡೈಕೆನಾಲ್ ನಲ್ಲಿ ಕುರುಂಜಿ ಆಂಡವನ್ ದೇವಾಲಯವೇ ಕಟ್ಟಿದ್ದಾರೆ. ಅಲ್ಲಿನ ದೇವರ ಹೆಸರು ಕುರುಂಜಿ ಮಾಲಾ. ಇವು ಅರಳುವ ಸಮಯ ಸಾಧಾರಣವಾಗಿ ಅಗೋಸ್ತು. ಆದರೂ ಕೆಲವೊಮ್ಮೆ ಅಕ್ಟೋಬರ್ ವರೆಗೆ ಕೂಡಾ ಕಾಣಬಹುದು. ಇಡೀ ಬೆಟ್ಟಗಳ ಸಾಲು ನೀಲಿ ಹೂವುಗಳಿಂದ ಆವೃತವಾದಾಗ, ಅದು ಬಹಳ ಸುಂದರವಾಗಿ ಕಾಣುತ್ತದೆ. ಅದನ್ನು ನೋಡಿ, ಕಣ್ ತುಂಬಿಕೊಂಡು, ಛಾಯಾಗ್ರಹಣ ಮಾಡಲು ಈ ಲಾಕ್ ಡೌನ್ ಕಾಲದಲ್ಲೂ ಅನೇಕ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ.

ಆದರೆ ನಿಜಕ್ಕೂ ಈಗ ಇಲ್ಲಿರುವ ಹೂವು ನೀಲಕುರುಂಜಿ ಅಲ್ಲ. ಅದು ಗುರ್ಜಿ ಹೂವು ಅಥವಾ ಕಾವ್ರಿ ಹೂವು. ಸ್ಟ್ರೋಬಿಲೆಂತಸ್ ಸಿಸಿಲಸ್ ಎಂಬ ಒಂದು ಪ್ರಬೇಧ. ನೋಡಲೂ ನೀಲ ಕುರುಂಜಿಯಂತೆ ಕಂಡು, ಬೆಟ್ಟವೆಲ್ಲ ಹಬ್ಬಿದಾಗ, ಕಾಣುವುದು ಬಹಳ ಸುಂದರ ದೃಶ್ಯ. ಆದರೆ ತಪ್ಪು ತಿಳುವಳಿಕೆಯಿಂದ ಇದನ್ನು ನೀಲ ಕುರುಂಜಿ ಎಂದೇ ಎಲ್ಲರೂ ಭಾವಿಸಿದ್ದರು.

ಜನ ಸಂದಣಿ ಜಾಸ್ತಿ ಇದ್ದಾಗ, ಪ್ರವಾಸಕ್ಕೆ ಬಂದ ಕೆಲವರು ಮತ್ತು ಇಲ್ಲಿನ ಮೂಲ ನಿವಾಸಿಗಳ ಮಧ್ಯೆ ಅಪರೂಪಕ್ಕೆ ಒಮ್ಮೆ ಎಂಬಂತೆ ಸಣ್ಣಪುಟ್ಟ ಹೊಡೆದಾಟಗಳು ಆಗುವುದು ಉಂಟು. ಪ್ರವಾಸಕ್ಕೆಂದು ಬರುವ ಪಡ್ಡೆ ಹುಡುಗ, ಹುಡುಗಿಯರು ಇಲ್ಲಿ ಮೋಜು-ಮಸ್ತಿ ಮಾಡುತ್ತಾ, ಬ್ರಾಂಡಿ ಬಾಟಲಿಗಳನ್ನು ಖಾಲಿ ಮಾಡಿ, ಅಲ್ಲೇ ಇರುವ ಕಲ್ಲುಗಳಿಗೆ ಜೋರಾಗಿ ಎಸೆದು, ಅದರಿಂದ ಬರುವ ಟಲ್ ಎಂಬ ಶಬ್ದ ಕೇಳಿ, ಕೇಕೆ ಹಾಕಿ ನಗುತ್ತಾರೆ. ತಿಂದು, ಕುಡಿದ ಎಲ್ಲಾ ಪ್ಲಾಸ್ಟಿಕ್ ಬಾಟಲಿ ಮತ್ತು ಇತರ ಕಸವನ್ನು ಅಲ್ಲೇ ಹಾಕುವುದು ಹೆಚ್ಚಿನವರ ಕೆಲಸ. ಇದನ್ನ ಕಂಡ ಕೆಲವು ಜೀಪ್ ಚಾಲಕರು ಅಥವಾ ಸ್ಥಳದಲ್ಲೇ ಇರುವ ಮೂಲ ನಿವಾಸಿಗಳು ಇಂತಹ ಪಡ್ಡೆಗಳನ್ನು ವಿಚಾರಿಸುವಾಗ, ಕುಡಿದ ಮತ್ತಿನಲ್ಲಿ ಅವರಿಗೇ ಹಿಂದೆ ಮಾತನಾಡಿ, ರೋಪ್ ಹಾಕಿದಾಗ ಕೆಲವೊಮ್ಮೆ ಸಾಧಾರಣ ಜಗಳಗಳು ಆಗಿದ್ದು ಉಂಟು. ಈ ಜೋಡಿಯಲ್ಲೂ ಹಾಗೆ ಏನಾದರೂ ಸಣ್ಣ ಮಟ್ಟಿನ ಹೊಡೆದಾಟ ಆಗಿ ಶರೀರದಲ್ಲಿ ಎಲ್ಲಾದರೂ ಗಾಯ ಆಗಿದೆಯೋ ಎಂಬುದು, ನನಗೆ ಬಂದ ಮೊದಲ ಸಂಶಯ.

ಇಂತಹ ಸ್ಥಳಕ್ಕೆ ಹೋಗಿ ಬಂದ ಈ ಹುಡುಗಿಗೆ ಏನು ಆಗಿರಬಹುದು ಎಂದು ನೋಡೋಣ ಅಂತ ಬಟ್ಟೆ ಮೇಲೆ ಸರಿಸಿ ನೋಡಿದರೆ ಹೊಟ್ಟೆಯ ಅಂಶ ಎಲ್ಲಾ ರಕ್ತಮಯ. ಮೊದಲೇ ಬೆಳ್ಳಗಿನ ಹುಡುಗಿ, ಬಿಳೀ ಟಾಪ್, ಸಾಮಾನ್ಯವಾದ ನೋಡುಗರ ಕಣ್ಣಿಗೆ ಇದು ಬಹಳ ಸೀರಿಯಸ್ ಕೇಸ್. ಎಲ್ಲಿ ಗಾಯ ಆಗಿದೆ, ಎಲ್ಲಿಂದ ರಕ್ತ ಬರುತ್ತಿದೆ ಅಂತ ಮೇಲ್ನೋಟಕ್ಕೆ ಕಾಣುತ್ತಿಲ್ಲ.

ಗಾಯ ಎಲ್ಲಿದೆ ಎಂದು ನಾವು ಹುಡುಕಲೇ ಬೇಕು. ಯಾಕೆಂದರೆ ಕೆಲವೊಮ್ಮೆ ಗಾಯ ನೋಡದೆ ಇದ್ದು, ಹಿಮೋಫಿಲಿಯಾ ಅಂಥ ರಕ್ತಸ್ರಾವ ಆಗುವ ರೋಗಗಳೇನಾದರು ಆ ವ್ಯಕ್ತಿಗೆ ಇದ್ದರೆ, ಅಥವಾ ಆಸ್ಪಿರಿನ್ ಅಂಥ ಮಾತ್ರೆಗಳನ್ನು ಸೇವಿಸುತ್ತಿರುವ ವ್ಯಕ್ತಿಗಳ, ರಕ್ತ ಹೆಪ್ಪುಗಟ್ಟದೆ ಆ ಗಾಯದಿಂದ ಹೊರ ಬರುವ ರಕ್ತ ಸದ್ಯಕ್ಕೆ ನಿಲ್ಲದೆ, ರಕ್ತ ಹೀನತೆಯಾಗಿ ಅವರ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಅಂಥ ಗಾಯಗಳನ್ನು ಹುಡುಕಿ ಅದನ್ನು, ಹೊಲೆದು ಬಿಡಬೇಕು.

ಹತ್ತಿಯಲ್ಲಿ, ಹೊಟ್ಟೆಯ ಭಾಗವನ್ನು ಸಂಪೂರ್ಣ ಒರೆಸಿ ನೋಡಿದರೇ ಗಾಯ ಎಲ್ಲೂ ಕಾಣುತ್ತಾ ಇಲ್ಲ.
ಗಾಯ ಕಾಣುತ್ತಿಲ್ಲ, ನಾನು ಬಿಡುತ್ತಿಲ್ಲ. ಹಿಂದೆ ಮುಂದೆ ಎಲ್ಲೂ ಗಾಯವೇ ಇಲ್ಲ. ಮೊದಲೇ ಹೇಳಿದ್ದೆ ಹೆಂಗಸು ಸ್ವಲ್ಪ ದಡೂತಿ ಅಂಥ. ಹೊಟ್ಟೆ ಸುತ್ತಾ ಎರಡು ಮೂರು ಕೊಬ್ಬಿನ ಚಕ್ರಗಳು!. ನಿಧಾನಕ್ಕೆ ಟೈರ್ ಗಳನ್ನ ಸರಿಸಿ, ಅಲ್ಲಲ್ಲಿ ಹುಡುಕಿದಾಗ, ದಪ್ಪ ಹೊಟ್ಟೆಯ ತೀರಾ ಒಳಗೆ ಹುದುಗಿದ್ದ ಹೊಕ್ಕಳಿನ ಮತ್ತೂ ಅದರ ಇನ್ನೂ ಒಳ ಭಾಗದಲ್ಲಿ ಇತ್ತು, ಒಂದು ರಕ್ತ ಜಿನುಗುವ ಸಣ್ಣ ಗಾಯ.

ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನನ್ನ ತಲೆಗೆ ಆಗಲೇ ಇದು ಏನು ಎಂಬುದು ಗೊತ್ತಾಗಿ ಹೋಗಿತ್ತು. ಆದರೆ ನಾನು ಹೇಳಿದರೂ ಅವರು ನಂಬಬೇಕಲ್ಲಾ. ಅದರಲ್ಲೂ ಹಳ್ಳಿಯ ಕಷ್ಟ, ತೊಂದರೆ ಏನು ಅಂತ ಹೇಳಿದರೆ ಪೇಟೆಯ ಜನಕ್ಕೆ ಸುಲಭವಾಗಿ ಅರ್ಥ ಆಗುವುದು ಸ್ವಲ್ಪ ಅಷ್ಟಕ್ಕೆ ಅಷ್ಟೇ.

ಟಾಪ್ ತೆಗೆದು ಜೋರಾಗಿ ಜಾಡಿಸಲು ಹೇಳಿದೆ. ಅವಳಿಗೋ ಮುಜುಗರ. ನಮ್ಮಲಿದ್ದ ಸಿಸ್ಟರನ್ನು ಕರೆದು, ಸಹಾಯ ಮಾಡಲು ಹೇಳಿದೆ.

ಮೈಯ ಮೇಲೆ ಒಂದು ಗೌನ್ ಹಾಕಿ, ಟಾಪ್ ತೆಗೆದು, ಅದನ್ನು ಜೋರಾಗಿ ಜಾಡಿಸುವಾಗ, ನೆಲಕ್ಕೆ ಟಪ್ ಅಂತ ಬಿತ್ತು, ಗಾಯದ ರೂವಾರಿ.

ಅದುವೇ ರಕ್ತ ಹೀರಿ, ದಪ್ಪವಾಗಿದ್ದ, ಒಂದು ಜಿಗಣೆ ಅಥವಾ ಉಂಬಳ …

*****

ಜಿಗಣೆಯ ಬಗ್ಗೆ ಮಾಹಿತಿ ಇಲ್ಲದ, ಬಯಲು ಸೀಮೆ ಮತ್ತು ಪಟ್ಟಣದ ಕೆಲವರಿಗಾಗಿ ಮಾತ್ರ ಈ ಕೆಳಗಿನ ವಿವರಣೆ. ಇದು ಭಾರತ, ಶ್ರೀಲಂಕಾ, ಮೈನ್ಮಾರ್ ಅಂತಹ ಉಷ್ಣ ಪ್ರದೇಶದಲ್ಲಿ ಕಂಡುಬರುವ ಒಂದು ಎರೆ ಹುಳದಂತಹ ಜೀವಿ. ಕೊಳ ಮತ್ತು ಜೌಗು ಪ್ರದೇಶದಲ್ಲಿ ಇದರ ಜೀವನ. ದೇಹದ ಎರಡೂ ತುದಿಗಳಲ್ಲಿರುವ ಹೀರು ಬಟ್ಟಲುಗಳ ನೆರವಿನಿಂದ ಇದು ದೇಹವನ್ನು ಕುಣಿಕೆಯಂತೆ ಬಾಗಿಸಿ ಚಲಿಸುತ್ತದೆ. ಬೇಸಿಗೆಯಲ್ಲಿ ಒಣಗಿದ ಕಡ್ಡಿಗಳಂತೆ ಅನೇಕ ತಿಂಗಳು ಬಿದ್ದಿರುವ ಇವುಗಳು, ಮಳೆಯಾದಂತೆ ಎಚ್ಚರಗೊಳ್ಳುತ್ತವೆ. ಇವು ವಾಸಿಸುವ ನೆಲೆಯ ಪಕ್ಕದಲ್ಲಿ ಬರುವ ಮನುಷ್ಯ, ಪ್ರಾಣಿಗಳ ರಕ್ತವನ್ನು ಹೀರಿ ಇವು ಬದುಕುತ್ತವೆ. ಇವುಗಳಲ್ಲಿ ವಿವಿಧ ಪ್ರಭೇದಗಳು ಇದ್ದು, ಮಲೆನಾಡಿನಲ್ಲಿ ಕಾಣ ಬರುವುದು ಹಿರುಡಿನೇರಿಯ ಗ್ರ್ಯಾನುಲೋಸಾ ಎಂಬ ಪ್ರಭೇದ. ರಕ್ತ ಹೀರುವುದಕ್ಕೆ ಎರಡೂ ಕಡೆ ಹೀರು ಬಟ್ಟಲುಗಳು ಇವೆ. ಇದಕ್ಕೆ ಅತಿಥೇಯಗಳು ಸಿಕ್ಕುವುದು ಅಪರೂಪವಾದ್ದರಿಂದ, ಸಿಕ್ಕಿದಾಗ ಆದಷ್ಟು ಹೆಚ್ಚು ರಕ್ತವನ್ನು ಹೀರಿಕೊಂಡು ಕೂಡಿಟ್ಟುಕೊಳ್ಳುತ್ತದೆ.

ಒಮ್ಮೆ ರಕ್ತ ಹೀರಿದ ಮೇಲೆ ಆರು ತಿಂಗಳ ಕಾಲ ಆಹಾರವನ್ನು ಸೇವಿಸದೇ‌ ಬದುಕಿರಬಹುದು. ರಕ್ತ ಹೀರುವಾಗ ಹೆಪ್ಪುಗಟ್ಟುವುದನ್ನು ತಡೆಯಲು ಜೊಲ್ಲು ಗ್ರಂಥಿಗಳಿಂದ ಹಿರುಡಿನ್ ಎಂಬ ಪದಾರ್ಥವನ್ನು ಸ್ರವಿಸುತ್ತದೆ. ಹಿರುಡೋ ಮೆಡಿಸಿನಾಲಿಸ್ ಎಂಬ ಪ್ರಬೇಧದ ಜಿಗಣೆಗಳನ್ನು ಹುಣ್ಣು, ಕುರು, ಆನೆಕಾಲು, ರಕ್ತ ಹೆಪ್ಪುಗಟ್ಟುವಿಕೆ ಜಾಗದಲ್ಲಿ ಅಲ್ಲಿನ ಕೆಟ್ಟ ರಕ್ತವನ್ನು ಹೀರಲು ಉಪಯೋಗಿಸುತ್ತಾರೆ. ಜಿಗಣೆಗಳಿಂದ ಪ್ರತ್ಯೇಕಿಸಿದ ಕೆಲವು ರಾಸಾಯನಿಕಗಳನ್ನು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಉಪಯೋಗಿಸುತ್ತಾರೆ. ಇವುಗಳು ನಿಮ್ಮ ಕಾಲುಚೀಲ ಅಥವಾ ಪಾದರಕ್ಷೆಯ ಸಂದಿಯಲ್ಲಿ ಮೆತ್ತಗೆ ಸೇರಿಕೊಂಡು ರಕ್ತವನ್ನು ಹೀರುತ್ತಾ ಇರುತ್ತದೆ. ಶರೀರವನ್ನು ಇದು ಹತ್ತುವುದು ಗೊತ್ತಾಗುವುದೇ ಇಲ್ಲ. ಹೆಚ್ಚಾಗಿ ಬೆರಳುಗಳ ಸಂದಿಯಲ್ಲಿ ಕಚ್ಚುವ ಇವುಗಳು, ಕೆಲವೊಮ್ಮೆ ಹೇಳಲಿಕ್ಕೇ ಆಗದ, ಮುಜುಗರವಾಗುವ ಸ್ಥಳಗಳಲ್ಲಿ ಹೋಗಿ ಕಚ್ಚಿ ಬಿಡುತ್ತವೆ!. ತಮಗೆ ಬೇಕಾದಷ್ಟು ರಕ್ತ ಹೀರಿದ ಬಳಿಕ ತನ್ನಷ್ಟಕ್ಕೇ ಕೆಳಗೆ ಬೀಳುತ್ತವೆ.

ಮಲೆನಾಡಿನ ಜನ ಜಿಗಣೆ ಹತ್ತುವುದನ್ನು ತಪ್ಪಿಸಲು, ಲಂಟಾನ ಸೊಪ್ಪಿನ ರಸ, ನಶ್ಯ, ಹುಳಿ ಸೊಪ್ಪು, ಉಪ್ಪು ನೀರು ಕಾಲಿಗೆ ಸವರುತ್ತಾರೆ. ಈ ಜಿಗಣೆಗಳು ಮನುಷ್ಯನಿಗೆ ಉಪದ್ರವಿಗಳಾದ ಗೊಣ್ಣೇ ಹುಳ ಇತ್ಯಾದಿಗಳನ್ನು ಕೂಡಾ ತಿಂದು ಬದುಕುತ್ತವೆ.