ಬೇಗುವಳ್ಳಿ ಮನೆಯಿಂದ ಹೊರಡುವ ಮೊದಲ ದಿನ ರಾತ್ರಿ ನಾವು ಮನೆಯ ಹೊರಗಿನ ವೆರಾಂಡದಲ್ಲಿಯೇ ಮಲಗಿದ್ದೆವು. ಮನೆ ಬಿಡಲು ಬೆಳಿಗ್ಗೆ ಬೇಗನೆ ಮುಹೂರ್ತವಿತ್ತು, ಅದಕ್ಕಾಗಿ ರಾತ್ರಿಯೇ ಮನೆಯಿಂದ ಹೊರಗೆ ಇರುವಂತೆ ವ್ಯವಸ್ಥೆ ಮಾಡಿದ್ದರೆಂದು ನನಗೆ ನೆನಪು. ಇಂಥ ಸಂದರ್ಭದಲ್ಲಿ ಮನೆಯವರಿಗೆ ಬೇಸರ ಮಾಡುವುದು ಬೇಡವೆಂದು ಅನಂತಮೂರ್ತಿ ಇದನ್ನು ಮೌನವಾಗಿ ಒಪ್ಪಿದ್ದರು.
ಡಾ. ಪೃಥ್ವೀರಾಜ ಕವತ್ತಾರು ನಿರೂಪಣೆಯ ಎಸ್ತರ್ ಅನಂತಮೂರ್ತಿಯವರ ಆತ್ಮಕತೆ ‘ನೆನಪು ಅನಂತ’ ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

 

“ಆ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾದ ಬಳಿಕ, ನಾನು ಅವನ ಮನೆಗೆ ಹೋದರೆ ಹೊಟೇಲಿನಿಂದ ಊಟ ತರಿಸಿ ಕೊಡುತ್ತಾನೇನು! ಏನು ಬೇಕಾದರೂ ಮಾಡಿಕೊಳ್ಳಲಿ, ನನ್ನ ಶ್ರಾದ್ಧ ಒಂದು ಮರೆಯದೆ ಮಾಡಿದರೆ ಅಷ್ಟೇ ಸಾಕು” ಎಂದು ಅನಂತಮೂರ್ತಿಯವರ ಅಪ್ಪ ಅವರ ಗೆಳೆಯರೊಂದಿಗೆ ಹೇಳಿಕೊಂಡಿದ್ದರಂತೆ. ನಮ್ಮ ಮದುವೆಯಾಗಿ, ಅನಂತಮೂರ್ತಿಯವರ ಮನೆಯವರು ಮನಸ್ಸು ಮುರಿದುಕೊಳ್ಳುವಂತಾಗಿ, ನಾವು ನಮ್ಮಷ್ಟಕ್ಕೇ ಮೈಸೂರಿನ ಒಂಟಿಕೊಪ್ಪಲಿನಲ್ಲಿ ಸಂಸಾರ ಹೂಡಿದ್ದೆವು. ಅಂತರ್ಜಾತೀಯ ವಿವಾಹವಾದವರ ಮೇಲೆ ಅವರ ಕುಟುಂಬದವರಿಗೆ ಮುನಿಸು ಇರುತ್ತದೆ; ಆದರೆ, ಒಂದು ಮಗುವಾದದ್ದೇ ಅದು ಕರಗಿಹೋಗುತ್ತದೆ. ನಮ್ಮಲ್ಲಿಯೂ ಹಾಗೇ ಆಯಿತು. ಶರತ್ ಹುಟ್ಟಿದ್ದ. ಅನಂತಮೂರ್ತಿಯವರಿಗೆ ಬ್ರಿಟಿಷ್ ಕೌನ್ಸಿಲ್‍ನ ಕಾಮನ್‍ವೆಲ್ತ್ ಸ್ಕಾಲರ್ ಶಿಪ್  ಬೇರೆ ಬಂದಿತ್ತು. ಇಂಥ ಸಂದರ್ಭದಲ್ಲಿ ಅನಂತಮೂರ್ತಿಯವರ ತೀರ್ಥಹಳ್ಳಿಯ ಮನೆ ಬಾಗಿಲು ನಮಗಾಗಿ ತೆರೆದಿತ್ತು.

ಸಂಪ್ರದಾಯಸ್ಥ ಬ್ರಾಹ್ಮಣರ ಮನೆ ಹೇಗಿರುತ್ತದೆ ಎಂಬುದು ನನಗೆ ಮೊದಲಬಾರಿಗೆ ಅನುಭವವಾಗಿತ್ತು. ನನಗೆ ಅವರ ಅಡುಗೆ ಮನೆಗೆ ಪ್ರವೇಶವಿರಲಿಲ್ಲ. ನಮಗಾಗಿ ಪ್ರತ್ಯೇಕ ಕೊಠಡಿಯನ್ನು ಕೊಟ್ಟಿದ್ದರು. ಮಗುವಿಗೆ ಆಗಾಗ ಬಿಸಿನೀರು, ಹಾಲು ಮಾಡಬೇಕಲ್ಲ, ಅದಕ್ಕೊಂದು ಸ್ಟವ್ ಕೊಟ್ಟಿದ್ದರು. ನಮ್ಮ ಮದುವೆಯ ಬಗ್ಗೆ ಬೇಸರದಿಂದ ಮಾತನಾಡಿಕೊಂಡಿದ್ದ ಅನಂತಮೂರ್ತಿಯವರ ತಂದೆ ನನ್ನನ್ನು ಪ್ರೀತಿಯಿಂದ ಮಾತನಾಡಿಸಿದರು. ಅವರು ನನ್ನ ಜೊತೆಗೆ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದುದು ನನಗೆ ಸೋಜಿಗದ ಸಂಗತಿಯಾಗಿತ್ತು! ನಮ್ಮ ಮನೆಯಿದ್ದುದು ಬೇಗುವಳ್ಳಿ ಎಂಬಲ್ಲಿ- ಶಿವಮೊಗ್ಗ ತೀರ್ಥಹಳ್ಳಿಯ ಮಧ್ಯೆ. ಆ ದಿನ ಸಂಜೆ ನನ್ನ ಮಾವ ತೀರ್ಥಹಳ್ಳಿಗೆ ಹೋಗಿ ನನಗೊಂದು ಸೀರೆಯನ್ನು ಮತ್ತು ಮಗುವಿಗೆ ಒಂದು ಉಡುದಾರವನ್ನು ತಂದುಕೊಟ್ಟರು. ಕ್ರಿಶ್ಚಿಯನ್ನಳನ್ನು ಮದುವೆಯಾದರೆ ನೇಣು ಹಾಕಿಕೊಳ್ಳುತ್ತೇನೆ ಎಂದಿದ್ದ ನನ್ನ ಅತ್ತೆಯೂ ನನ್ನನ್ನು ವಾತ್ಸಲ್ಯದಿಂದ ನೋಡಿಕೊಂಡರು. ಮುಖ್ಯವಾಗಿ ನಮಗೊಂದು `ಗಂಡುಮಗು’ವಾದದ್ದು ಮನೆಮಂದಿಯ ಬೇಸರವನ್ನೆಲ್ಲ ದೂರವಾಗಿಸಿತ್ತು! ಅನಂತಮೂರ್ತಿಯವರಿಗೆ ಇಂಗ್ಲೆಂಡ್‌ಗೆ ಹೋಗುವ ಅವಕಾಶ ದೊರೆತದ್ದು ಕೂಡ ಮನೆಯವರಲ್ಲಿ ಸಂತೋಷ ಉಂಟುಮಾಡಿತ್ತು.

ಒಂದು ಸಂಗತಿಯನ್ನು ನೆನೆದಾಗ ನಗುಬರುತ್ತದೆ. ಕೆಲವೊಮ್ಮೆ ನಮ್ಮೊಳಗೆ ಪ್ರತ್ಯೇಕತೆಯ ಪ್ರಜ್ಞೆ ಹೇಗಿರುತ್ತದೆಂದರೆ ಏನು ಮಾಡಿದರೂ ಅದರ ಬಗ್ಗೆ ಸಂದೇಹ ಬರುವಂತಿರುತ್ತದೆ! ಅವರು ಕೊಟ್ಟ ಹಾಲನ್ನು ಬಿಸಿಮಾಡಿ ಕುಡಿಯಲು ಕೊಟ್ಟ ಕೆಲವೇ ಕ್ಷಣದಲ್ಲಿ ಮಗು ಹಸಿವೆಯಿಂದ ಅಳುತ್ತಿದ್ದ. ಆಮೇಲೆ ತಿಳಿಯಿತು, ಅವರು ಹಾಲಿಗೆ 50 ಶೇ. ನೀರು ಸೇರಿಸಿಕೊಡುತ್ತಿದ್ದಾರೆಂದು! ನಾನು ಇದನ್ನು ಅನಂತಮೂರ್ತಿಯೊಂದಿಗೆ ಹೇಳಿ ಜಗಳ ಮಾಡಿದೆ. ಅವರೂ ಒಳಗೆ ಹೋಗಿ ಅಮ್ಮನೊಂದಿಗೆ ಜಗಳವಾಡಿರಬೇಕು. ನೀರನ್ನು ಸಮಪ್ರಮಾಣದಲ್ಲಿ ಸೇರಿಸದೆ ಹಾಲು ಕುಡಿಯಲು ಕೊಟ್ಟರೆ ಅದು ಮಗುವಿನ ಜೀರ್ಣಶಕ್ತಿಗೆ ಒಳ್ಳೆಯದಲ್ಲವೆಂದೂ ಮಗುವಿನ ಆರೋಗ್ಯದೃಷ್ಟಿಯಿಂದ ಮನೆಯವರು ಹಾಗೆ ಮಾಡಿದ್ದಾರೆಂದೂ ಆಮೇಲೆ ನನಗೆ ಗೊತ್ತಾಯಿತು.

ಬೇಗುವಳ್ಳಿ ಮನೆಯಿಂದ ಹೊರಡುವ ಮೊದಲ ದಿನ ರಾತ್ರಿ ನಾವು ಮನೆಯ ಹೊರಗಿನ ವೆರಾಂಡದಲ್ಲಿಯೇ ಮಲಗಿದ್ದೆವು. ಮನೆ ಬಿಡಲು ಬೆಳಿಗ್ಗೆ ಬೇಗನೆ ಮುಹೂರ್ತವಿತ್ತು, ಅದಕ್ಕಾಗಿ ರಾತ್ರಿಯೇ ಮನೆಯಿಂದ ಹೊರಗೆ ಇರುವಂತೆ ವ್ಯವಸ್ಥೆ ಮಾಡಿದ್ದರೆಂದು ನನಗೆ ನೆನಪು. ಇಂಥ ಸಂದರ್ಭದಲ್ಲಿ ಮನೆಯವರಿಗೆ ಬೇಸರ ಮಾಡುವುದು ಬೇಡವೆಂದು ಅನಂತಮೂರ್ತಿ ಇದನ್ನು ಮೌನವಾಗಿ ಒಪ್ಪಿದ್ದರು.

ಅನಂತಮೂರ್ತಿ ಬೆಂಗಳೂರಿನಲ್ಲಿ ವಿಮಾನ ಹಿಡಿದು ಮುಂಬಯಿ ಮೂಲಕ ಹೋಗುವವರಿದ್ದರು. ಅವರ ವಿದೇಶ ಪ್ರಯಾಣಕ್ಕೆ ಶುಭ ಹಾರೈಸಲು ತಂದೆ, ತಾಯಿ ಸೇರಿದಂತೆ ಮನೆಯವರೆಲ್ಲ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅದೇ ದಿನ ಸಂಜೆ ನಾನು ರೈಲಿನಲ್ಲಿ ಮುಂಬಯಿಗೆ ಪ್ರಯಾಣಿಸುವವಳಿದ್ದೆ. ಮುಂಬಯಿ ಬಂದರಿನಲ್ಲಿ ಇಂಗ್ಲೆಂಡ್‌ಗೆ ತೆರಳಲು ಹಡಗು ಹಿಡಿಯಬೇಕಿತ್ತು. ಬೆಂಗಳೂರಿನ ರೈಲು ನಿಲ್ದಾಣಕ್ಕೆ ನನ್ನನ್ನು ಬೀಳ್ಕೊಡಲು ಅನಂತಮೂರ್ತಿಯವರ ತಂದೆ, ತಾಯಿ, ಮನೆಯವರೆಲ್ಲ ಬಂದಿದ್ದರು. ನನ್ನ ಅಪ್ಪ, ಅಮ್ಮ ನನ್ನ ಜೊತೆಯೇ ಮುಂಬಯಿಗೆ ಬರುವವರಿದ್ದರು. ಮುಂಬಯಿಯಲ್ಲಿ ಅನಂತಮೂರ್ತಿಯವರ ಗೆಳೆಯ, ವರ್ಲ್ಡ್‌ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ವಿ. ಎಸ್. ರಾಘವ ಮತ್ತು ಎಚ್. ವೈ. ಶಾರದಾಪ್ರಸಾದರ ಸಹೋದರ ಜೊತೆಯಾಗಿ ಒಂದು ಫ್ಲ್ಯಾಟ್‌ನಲ್ಲಿ ಇದ್ದರು. ಮೊದಲೇ ಮಾತನಾಡಿದಂತೆ ನಾವು ಅಲ್ಲಿ ಇಳಿದುಕೊಂಡೆವು. ಅದು ಮುಂಬೈಯ ಯಾವ ಪ್ರದೇಶವೆಂದು ನನಗೀಗ ನೆನಪಿಲ್ಲ. ಮರುದಿನ ರಾಘವ ಅವರು ನನ್ನನ್ನು ವಿಸಾ ಕಚೇರಿಗೆ ಕರೆದೊಯ್ದು ಪ್ರಯಾಣದ ವಿಧಿವಿಧಾನಗಳು ಸುಗಮಗೊಳ್ಳಲು ಸಹಾಯ ಮಾಡಿದರು.

ಅದಾದರೋ ಇಪ್ಪತ್ತು ದಿನಗಳ ಪ್ರಯಾಣ! ಅಷ್ಟು ದಿನಗಳ ಕಾಲ ಊರು ಬಿಟ್ಟಿರಬೇಕು. ಊರು ಮಾತ್ರವಲ್ಲ, ನೆಲವನ್ನೇ ಬಿಟ್ಟು ನೀರಿನಲ್ಲಿ ತೇಲುತ್ತಿರಬೇಕು! ದೂರದಲ್ಲಿ ನಿಶ್ಚಲವಾಗಿ ನಿಂತಿದ್ದ ಹಡಗು ನನ್ನನ್ನು ಆವರಿಸಿಕೊಳ್ಳಲಿರುವ ಬೇರೊಂದೇ ಜಗತ್ತಿನ ಹಾಗೆ ಕಂಡಿತು. ಹಡಗು ಮತ್ತು ನೆಲದ ನಡುವಿನ ಸಂಪರ್ಕ ಸೇತುವಿನಲ್ಲಿ ಹೆಜ್ಜೆ ಇಡುತ್ತ ಒಮ್ಮೆ ಅಪ್ಪ, ಅಮ್ಮನತ್ತ ನೋಡಿದೆ. ಎಲ್ಲರನ್ನೂ ಬಿಟ್ಟುಹೋಗುತ್ತಿದ್ದೇನೆ ಅಂತನ್ನಿಸಿ ಸಹಜವಾಗಿಯೇ ಅಳು ಬಂದುಬಿಟ್ಟಿತ್ತು. ಮಗುವನ್ನು ಎತ್ತಿಕೊಂಡು ಎದೆಗವಚಿಕೊಳ್ಳುತ್ತ ಹಡಗಿನೊಳಗೆ ಪ್ರವೇಶಿಸಿದೆ.

(ಮಗ ಶರತ್, ಬಿ.ಕೆ. ಚಂದ್ರಶೇಖರ್ ಮತ್ತು ರಾಮಚಂದ್ರ ಶರ್ಮರ ಜೊತೆಯಲ್ಲಿ ಒಂದು ಚಿತ್ರ)

ಕ್ರಿಶ್ಚಿಯನ್ನಳನ್ನು ಮದುವೆಯಾದರೆ ನೇಣು ಹಾಕಿಕೊಳ್ಳುತ್ತೇನೆ ಎಂದಿದ್ದ ನನ್ನ ಅತ್ತೆಯೂ ನನ್ನನ್ನು ವಾತ್ಸಲ್ಯದಿಂದ ನೋಡಿಕೊಂಡರು. ಮುಖ್ಯವಾಗಿ ನಮಗೊಂದು `ಗಂಡುಮಗು’ವಾದದ್ದು ಮನೆಮಂದಿಯ ಬೇಸರವನ್ನೆಲ್ಲ ದೂರವಾಗಿಸಿತ್ತು! ಅನಂತಮೂರ್ತಿಯವರಿಗೆ ಇಂಗ್ಲೆಂಡ್‌ಗೆ ಹೋಗುವ ಅವಕಾಶ ದೊರೆತದ್ದು ಕೂಡ ಮನೆಯವರಲ್ಲಿ ಸಂತೋಷ ಉಂಟುಮಾಡಿತ್ತು.

ಶರತ್‌ಗಿನ್ನೂ ಹತ್ತು ತಿಂಗಳು. ಆಗಷ್ಟೇ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡಲು ಕಲಿಯುತ್ತಿದ್ದ. ಊರು, ಸಂಬಂಧ, ಹಡಗು, ಸಮುದ್ರ, ಅಗಲುವಿಕೆ, ಪ್ರಯಾಣ- ಇಂತಹ ಯಾವುದೇ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಖುಷಿಯಿಂದ ಪುಟಪುಟನೆ ಓಡಾಡಲು ತವಕಿಸುತ್ತಿದ್ದ ಅವನನ್ನು ನೋಡುತ್ತ ನಾನು ಕೂಡಾ ಏಕಾಕಿತನವನ್ನು ಮರೆಯಲು ಪ್ರಯತ್ನಿಸಿದೆ.
ಹಡಗು ಓಲಾಡುತ್ತ ಹೊರಟಿತು.

ಹಡಗಿನೊಳಗಿನದ್ದು ಬೇರೆಯೇ ಜಗತ್ತು. ಎರಡು-ಮೂರು ದಿನ ಕಳೆಯುವಷ್ಟರಲ್ಲಿ ನಾನು ಆ ಜಗತ್ತಿಗೆ ಹೊಂದಿಕೊಂಡೆ. ಏನೋ ಕೆಲಸದ ಮೇಲೆ ಇಂಗ್ಲೆಂಡಿಗೆ ಹೊರಟಿದ್ದವರೊಬ್ಬರು; ವಿಜ್ಞಾನಿಯಿರಬೇಕು, ನನಗೂ ಶರತ್‌ಗೂ ಸ್ನೇಹಿತರಾದರು. ಶರತ್ `ಮಾಮಾ’ ಎಂದು ಕರೆಯುತ್ತ ಅವರನ್ನು ಹಚ್ಚಿಕೊಂಡುಬಿಟ್ಟ.

ಹಡಗಿನೊಳಗೆ ನಿತ್ಯೋತ್ಸವ. ಅವರಿವರೊಂದಿಗೆ ಹರಟೆ, ಹೊರಾಂಗಣ-ಒಳಾಂಗಣದ ಆಟಗಳು, ಸಿನೆಮಾ ವೀಕ್ಷಣೆ… ಹೀಗೆ ಹತ್ತು ಹಲವು ವಿಷಯಗಳೊಂದಿಗೆ ಒಂದಷ್ಟು ಮಂದಿ ಸಡಗರ ಪಡುತ್ತಿದ್ದರೆ ಸೀ-ಸಿಕ್‌ನೆಸ್‌ನಿಂದಾಗಿ ವಾಂತಿಯ ಸಂವೇದನೆ, ತಲೆಭಾರ, ಹೊಟ್ಟೆನೋವು ಇತ್ಯಾದಿಗಳಿಂದ ಬಳಲುವ ಮತ್ತೊಂದಿಷ್ಟು ಮಂದಿ ಹ್ಯಾಪ್‌ಮೋರೆ ಮಾಡಿಕೊಂಡು ಕುಳಿತಿರುವುದನ್ನು ನೋಡುತ್ತಿದ್ದೆ. ನೋವು-ನಲಿವುಗಳ ಲೌಕಿಕದ ಬದುಕು ಹಡಗಿನೊಳಗೂ ಇರುವಂತೆ ನನಗೆ ತೋರಿತು.

ಶಿಪ್‌ನೊಳಗೆ ಮೇಲೆ, ಕೆಳಗಿನ ಡೆಕ್‌ಗಳಿರುತ್ತಿದ್ದವು. ನಮ್ಮದು ಲೋವರ್ ಡೆಕ್. ಒಮ್ಮೆ ಸೆಕೆ ತಡೆದುಕೊಳ್ಳಲಾರದೆ, ಹೊರಗಿನ ಗಾಳಿ ಬರಲೆಂದು ಅಲ್ಲಿದ್ದ ಕಿಟಕಿಯೊಂದನ್ನು ತೆರೆದಿದ್ದೆ. ಕೆಲವು ಕ್ಷಣ ಕಳೆದಿರಬಹುದು. ನೌಕೆಯ ವಾಚ್‍ಮನ್ ಒಬ್ಬ ನನ್ನತ್ತ ಧಾವಿಸಿ ಬಂದು ಲೋವರ್ ಡೆಕ್‌ನ ಕಿಟಕಿ ತೆರೆಯಬಾರದೆಂದೂ, ಹಡಗು ಕೆಳಗೆ ತಗ್ಗಿದರೆ ನೀರು ಒಳ ಬರುವ ಸಾಧ್ಯತೆ ಇದೆಯೆಂದೂ ಎಚ್ಚರಿಸಿದರು. ನಾನು ಕಿಟಕಿಯ ಬಾಗಿಲು ತೆರೆದ ಸೂಚನೆ ಹಡಗಿನ ಕಂಟ್ರೋಲ್ ರೂಮಿಗೆ ತಲುಪಿರಬೇಕು ಎಂದು ಊಹಿಸಿದೆ. ನನಗೆ ಇವೆಲ್ಲ ಹೇಗೆ ಗೊತ್ತಾಗಬೇಕು!

ಮತ್ತೊಂದು ಸಲ ಹೀಗಾಯಿತು. ನನಗೆ ಚೆನ್ನಾಗಿ ನಿದ್ರೆ ಬಂದಿತ್ತು. ಹಡಗಿನ ಓಲಾಟದಿಂದಲೋ ಏನೋ ಶರತ್ ಮಂಚದಿಂದ ಕೆಳಗೆ ಬಿದ್ದುಬಿಟ್ಟಿದ್ದ. ಅದೃಷ್ಟವಶಾತ್ ಏನೂ ಅಪಾಯವಾಗಿರಲಿಲ್ಲ.

ಯಾವುದಾದರೂ ಬಂದರಿನಲ್ಲಿ ನಮ್ಮ ಹಡಗು ಲಂಗರು ಹಾಕುವಾಗ ನಾನು ಫೋನ್ ಮೂಲಕ ಅನಂತಮೂರ್ತಿಯವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೆ. ಕೆಲವೊಮ್ಮೆ ಫೋನ್ ಸಿಕ್ಕುತ್ತಿತ್ತು, ಕೆಲವೊಮ್ಮೆ ಇಲ್ಲ. ಹಾಗೊಮ್ಮೆ ನಮ್ಮ ಶಿಪ್ ನಿಂತ ತಾಣ ಯೆಮನ್ ಬಂದರು ಅಂತ ಗೊತ್ತಾಯಿತು. ಅನಂತಮೂರ್ತಿಗೇನಾದರೂ ಗಿಫ್ಟ್ ಖರೀದಿಸಿ ಒಯ್ಯೋಣ ಅಂತನ್ನಿಸಿತು. ಹಾಗೆ, ಕೆಳಗಿಳಿದು ಸುತ್ತಾಡಿ ಒಂದು ರೋಲೆಕ್ಸ್ ವಾಚ್ ಕೊಂಡುಕೊಂಡೆ. ಆಗ ಹಡಗಿನಲ್ಲಿ ನಮಗೆ ಐದು ಪೌಂಡ್ ಇಟ್ಟುಕೊಳ್ಳಲು ಮಾತ್ರ ಅನುಮತಿ ಇತ್ತು. ನಾನು ರೋಲೆಕ್ಸ್ ವಾಚ್‌ಗೆ ನಾಲ್ಕು ಪೌಂಡುಗಳನ್ನು ಕೊಟ್ಟಿದ್ದು. ಆಮೇಲೆ ನನ್ನಲ್ಲಿದ್ದುದು ಒಂದೇ ಪೌಂಡು. ಹಡಗಿನಲ್ಲಿ ತಪಾಸಣೆಯೇನಾದರೂ ಆಗಿ ತೊಂದರೆಯಾಗುವುದು ಬೇಡವೆಂದು ನನ್ನಷ್ಟಕ್ಕೆ ಭಾವಿಸಿ ವಾಚ್‌ನ್ನು ಯಾರಿಗೂ ತಿಳಿಯದಂತೆ ಮುಚ್ಚಿಟ್ಟಿದ್ದೆ.

ಹಡಗಿನಿಂದಿಳಿದು ಬರ್ಮಿಂಗ್‌ಹ್ಯಾಮ್‌ನ ಮನೆಗೆ ಹೋದ ಮೇಲೆ, ಸರ್ಪ್ರೈಸ್ ಕೊಡಲೆಂದು ಅನಂತಮೂರ್ತಿಯವರ ಕೈ ಎಳೆದು ವಾಚ್ ಕಟ್ಟಿದೆ. ಅವರಿಗೆ ತುಂಬ ಸಂತೋಷವಾಯಿತು. ಆ ವಾಚ್ ತುಂಬ ಸಮಯ ಅವರ ಕೈಯಲ್ಲಿತ್ತು. ನನಗೂ ಅದರ ಜೊತೆಗೆ ಒಂದು ರೀತಿಯ ಸೆಂಟಿಮೆಂಟ್ಸ್ ಬೆಳೆದು ಬಿಟ್ಟಿತ್ತು. ಇಂಗ್ಲೆಂಡ್‌ನಿಂದ ಮರಳಿ ಬಂದ ಬಳಿಕವೂ ಅವರು ಹೊರಗೆ ಹೋಗುವಾಗಲೆಲ್ಲ ಅದನ್ನು ಕೈಗೆ ಕಟ್ಟಿಕೊಳ್ಳುತ್ತಿದ್ದರು. ಒಮ್ಮೆ ಆಚಾರ್ಯ ಅಂತನ್ನುವ ಗೆಳೆಯರೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಬರುತ್ತಿದ್ದಾಗ ಅಪಘಾತವಾಗಿ ಕೈಯ ಮೂಳೆ ಮುರಿತವಾಗಿ, ತರಚಿದ ಗಾಯಗಳಾದವು. ಅವರನ್ನು ತತ್‌ಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾನೂ ಆಸ್ಪತ್ರೆಗೆ ಹೋದೆ. ಅವರ ಕೈಗೆ ಬ್ಯಾಂಡೇಜ್ ಪಟ್ಟಿ ಕಟ್ಟಿದ್ದರು. ನಾನು ಇದಕ್ಕಿದ್ದಂತೆ ಏನನ್ನೋ ನೆನಪಿಸಿಕೊಂಡವಳಂತೆ, `ವಾಚ್ ಎಲ್ಲಿ?’ ಕೇಳಿದೆ. ತನ್ನ ಕೈಯಲ್ಲಿ ವಾಚ್ ಇಲ್ಲದಿರುವುದನ್ನು ಆಗಷ್ಟೇ ತಿಳಿದುಕೊಂಡವರಾಗಿ, `ಸ್ಕೂಟರ್ ಉರುಳುವ ರಭಸಕ್ಕೆ ಎಲ್ಲೋ ಕೈಯಿಂದ ಕಳಚಿ ಬಿದ್ದಿರಬೇಕು. ಗೊಂದಲದಲ್ಲಿ ಗೊತ್ತಾಗಲಿಲ್ಲ’ ಎಂದರು. ಅನಂತಮೂರ್ತಿಯವರನ್ನು ಸೇರಿಕೊಳ್ಳುವ ತವಕದ ನನ್ನ ಹಡಗಿನ ಪ್ರಯಾಣವನ್ನು ನೆನಪಿಸಿ ಕಾಲವನ್ನು ಹಿಂದಕ್ಕೊಯ್ಯಲು ನೆಪವಾಗುತ್ತಿದ್ದ ವಾಚ್ ಕಳೆದುಹೋಗಿದೆ ಎಂದು ತಿಳಿದಾಗ ಮನಸ್ಸಿಗೆ ನೋವಾಯಿತು. ಇವರು ಸ್ಕೂಟರ್ ಅಪಘಾತದಲ್ಲಿ ಹೆಚ್ಚು ತೊಂದರೆಯಾಗದೆ ಪಾರಾದರಲ್ಲ ಎಂಬ ಸಮಾಧಾನದ ಮುಂದೆ ಆ ನೋವು ಗೌಣವಾಯಿತು.

ನಮ್ಮ ಹಡಗು ಈಜಿಪ್ತ್‌ನ ತೀರದಲ್ಲಿ ಸಾಗುತ್ತಿತ್ತು. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರವನ್ನು ಸೇರಿಸಲು ಕೃತಕವಾದ ಸ್ಯೂಯೆಜ್ ಕಾಲುವೆಯನ್ನು ನಿರ್ಮಿಸಲಾಗುತ್ತಿದ್ದು ಅದರ ಮೂಲಕ ನಮ್ಮ ಹಡಗು ಕೂಡ ಹಾದುಹೋಗುತ್ತಿತ್ತು. ಬಹುಶಃ ಆಗಿನ್ನೂ ಅದು ನಿರ್ಮಾಣ ಹಂತದಲ್ಲಿರಬೇಕು, ಹಡಗುಗಳ ದಟ್ಟಣೆಯೂ ಇದ್ದಿರಬೇಕು, ನಮ್ಮ ಹಡಗು ಒಂದು ದಿನ ಅಲ್ಲಿ ತಂಗಬೇಕಾಯಿತು. ನಾನು ಮಗುವನ್ನು ಎತ್ತಿಕೊಂಡು ಈಜಿಪ್ತ್‌ನ ನೆಲದಲ್ಲಿ ಕೆಲ ಕ್ಷಣ ಓಡಾಡಿ ಮರಳಿ ಬಂದೆ. ಸ್ಯೂಯೆಜ್ ಕಾಲುವೆಯಲ್ಲಿ ಒಂದು ದಿನವಿಡೀ ತಿರುಗಾಡಿಸುವ ಪ್ಯಾಕೇಜ್ ಇತ್ತು. ಇಡೀ ದಿನ ಹಡಗನ್ನು ಬಿಟ್ಟು ಹೋಗುವುದಕ್ಕೆ ಮನಸ್ಸು ಹಿಂಜರಿಯಿತು, ಆ ಪ್ಯಾಕೇಜ್‌ಗೆ ತೆರಬೇಕಾದಷ್ಟು ಹಣವೂ ನನ್ನಲ್ಲಿರಲಿಲ್ಲ. ನಾನು ಮಗುವಿನೊಂದಿಗೆ ಹಡಗಿನೊಳಗಿದ್ದುಕೊಂಡೇ ದಿನ ಕಳೆದೆ. ಅವನು ಅತ್ತಾಗಲೆಲ್ಲ ಡೆಕ್ ಮೇಲೆ ಕೂರಿಸಿ ಸಮುದ್ರವನ್ನು ತೋರಿಸಿದರೆ ಸಾಕು, ಶಾಂತವಾಗಿ ಬಿಡುತ್ತಿದ್ದ.

ನಿಂತ ಹಡಗಿನ ಸುತ್ತ ವಿವಿಧ ವಸ್ತುಗಳನ್ನು ಮಾರಾಟ ಮಾಡುವ ಬೋಟ್‌ಗಳು ನೆರೆಯುತ್ತಿದ್ದುದನ್ನು ಬೆರಗಿನಿಂದ ನೋಡುತ್ತಿದ್ದೆ. ಹಡಗಿನಲ್ಲಿರುವ ಕೆಲವರು ತಮಗೆ ಬೇಕಾಗಿರುವ ವಸ್ತುಗಳನ್ನು ಹಗ್ಗದ ಮೂಲಕ ಮೇಲೆ ತರಿಸಿಕೊಳ್ಳುತ್ತಿದ್ದರು. ಹಗ್ಗದ ಮೂಲಕವೇ ಅವರಿಗೆ ಹಣವನ್ನೂ ಕೊಡುತ್ತಿದ್ದರು. ಈಗ ಪ್ಲ್ಯಾಟ್ ಮೇಲೆ ವಾಸಿಸುವ ಕೆಲವರು ಹಾಲು, ಮತ್ತಿತರ ಸಾಮಾನುಗಳನ್ನು ಹಗ್ಗದ ಮೂಲಕ ಮೇಲೆ ಎಳೆದುಕೊಳ್ಳುತ್ತಾರಲ್ಲ; ಹಾಗೆ!

ಅದೊಂದು ದಿನ ನಮ್ಮ ಹಡಗು ಇಂಗ್ಲೆಂಡ್‌ನ ಬಂದರು ಸೇರಿತು. ಲಿವರ್‍ಪೂಲ್ ಬಂದರಿನಲ್ಲಿ ಅನಂತಮೂರ್ತಿ ನಮಗಾಗಿ ಕಾದಿದ್ದರು. ಅಲ್ಲಿಂದ ಬರ್ಮಿಂಗ್ ಹ್ಯಾಮ್‌ಗೆ ರೈಲಿನಲ್ಲಿ ಹೋಗಬೇಕಾಗಿತ್ತು. ರೈಲುನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಅನಂತಮೂರ್ತಿ ಊರಿನ ಕ್ಷೇಮಸಮಾಚಾರ ವಿಚಾರಿಸಿದ್ದಲ್ಲದೆ, ಇಂಗ್ಲೆಂಡ್ ದೇಶದ ಜನರ ಜೀವನಶಿಸ್ತಿನ ಬಗ್ಗೆ ಹೇಳುತ್ತಿದ್ದರು. ರೈಲಿನಲ್ಲಿ ಒಂದು ಬೋಗಿಯಿಂದ ಮತ್ತೊಂದಕ್ಕೆ ದಾಟುತ್ತಿರುವಾಗ ನನ್ನ ಕೈಯಲ್ಲಿದ್ದ ಮಗು ಉಚ್ಚೆ ಮಾಡಿದ. ಆಗ ಅನಂತಮೂರ್ತಿ ನನಗೆ ಬೈದು, “ಸಾರ್ವಜನಿಕ ಜಾಗದಲ್ಲಿ ಹೀಗೆ ಮಾಡಿದರೆ ಇಲ್ಲಿ ದಂಡ ಹಾಕುತ್ತಾರೆ. ನಮ್ಮ ದೇಶದ ಹಾಗಲ್ಲ. ಶುಚಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು” ಎಂದರು. ಮುನ್ನೆಚ್ಚರಿಕೆಗಾಗಿ ತಂದಿದ್ದ ವಸ್ತ್ರವನ್ನು ಮಗುವಿಗೆ ರ್ಯಾಪರ್‌ನಂತೆ ಸುತ್ತಿ ತಾನೇ ಮಗುವನ್ನು ಹಿಡಿದುಕೊಂಡರು. ನಮ್ಮ ಊರು, ನಮ್ಮ ರೀತಿ, ನಮ್ಮ ರಿವಾಜು – ಇತ್ಯಾದಿಗಳಿಂದ ತುಂಬಾ ದೂರವಿರುವ ನಾಡಿಗೆ ಬಂದಿದ್ದೇವೆ ಅಂತ ನನಗನ್ನಿಸಿದ ಕ್ಷಣವದು. ಹೊಸ ಬದುಕಿನ ಕಡೆಗೆ ಮನಸ್ಸನ್ನು ಎಳೆದುಕೊಂಡು ಹೋಗುತ್ತಿರುವಂತೆ ರೈಲು ಬರ್ಮಿಂಗ್‌ಹ್ಯಾಮ್‌ನತ್ತ ತೆವಳುತ್ತಿತ್ತು.

(ಪುಸ್ತಕ: ನೆನಪು ಅನಂತ, ಲೇಖಕಿ: ಎಸ್ತರ್‌ ಅನಂತಮೂರ್ತಿ, ನಿರೂಪಣೆ: ಪೃಥ್ವೀರಾಜ ಕವತ್ತಾರು, ಪ್ರಕಾಶಕರು: ಅಕ್ಷರ ಪ್ರಕಾಶನ, ಬೆಲೆ : 150/-)