ಇಂದು ನಮ್ಮ ಮುಂದಿರುವ ಕಾವ್ಯದ ರೂಪ ಹಲವಾರು ಸ್ಥಿತ್ಯಂತರಗಳಿಗೆ ಒಳಪಟ್ಟು ನಮ್ಮ ಮುಂದೆ ನಿಂತಿದೆ. ಹಳೆಯದನ್ನು ತಿರಸ್ಕರಿಸಿ, ಮುರಿದು ಕಟ್ಟುವ ಪ್ರಕ್ರಿಯೆಗೆ ಹೆಚ್ಚಾನು ಹೆಚ್ಚು ಒಳಪಟ್ಟಿರುವುದು ಕಾವ್ಯ ಪ್ರಕಾರವೇ. ಮಾತ್ರೆಗಳಂತೆ ಲೆಕ್ಕಹಾಕಿ ಬರೆಯುತ್ತಿದ್ದಲ್ಲಿಂದ ನವೋದಯ, ನವ್ಯ, ದಲಿತ, ಬಂಡಾಯ, ಎಡ, ಬಲ ಎಂಬಲ್ಲಿಯವರೆಗೂ ನಾನಾ ಪಂಥ ಪಂಗಡಗಳನ್ನು ಹಾಯ್ದು ಬಂದಿದೆ ಕವಿತೆ.
ಆಶಾ ಜಗದೀಶ್  ಬರೆಯುವ ಪಾಕ್ಷಿಕ ಅಂಕಣ

 

ಕವಿತೆ ಕವಿತೆ..
ನೀನೇಕೆ ಪದಗಳಲಿ ಅವಿತೆ…

ನೋವು ನಲಿವು ಒಲವಿಗೂ ಹಾಡಾಗಿ ಜೊತೆಯಾದ ಕವಿತೆಗಳ ಪಡೆಗೆ ವಿರಾಮವೇ ಇಲ್ಲ. ಕವಿತೆಗಳು ಉಲಿವ ಮೆಲುದನಿಗೆ ಎದೆ ನೇವರಿಸುವ ಶಕ್ತಿ, ಪ್ರೇಮ ನಿವೇದನೆಯ ಹಿಂದಿನ ನಾಟಕ ಸೂತ್ರಧಾರಿ, ಹೊಸ ಹಕ್ಕಿಯ ಮೊದಲ ಕೂಗು, ಆಗ ತಾನೇ ಅರಳಿದ ಹೂವಿನ ಎದೆ ಬನಿ, ಈಗಿನ್ನೂ ಹಾಲು ಕುಡಿದು ಮುಗಿಸಿದ ಮಗುವಿನ ಹಸಿದುಟಿ, ಹಾಲೂಡಿಸಿದ ತಾಯ ನಿರಾಳತೆ……

ಕವಿತೆ ಹುಟ್ಟಲು ಕಾರಣ ಬೇಕಿಲ್ಲ. ಕೆಲವೊಮ್ಮೆ ಕಾರಣ ಇರುವುದೂ ಇಲ್ಲ. ಇಟ್ಟುಕೊಂಡು ಬರೆಯಲು ಹೊರಟ ಕಾರಣ ಬರೆದು ಮುಗಿಯುವ ಹೊತ್ತಿಗೆ ಬದಲಾಗಿರುತ್ತದೆ. ಉತ್ತರ ಬರೆದು ಮುಗಿದ ಮೇಲೆ ಪ್ರಶ್ನೆ ಪತ್ರಿಕೆಯೇ ಬದಲಾದಂತೆ, ಬಲೆಯೊಳಗಿನ ಹಕ್ಕಿ ಬಲೆಯ ಬಂಧನ ತೊರೆದು ಸ್ವಚ್ಛಂದತೆಯ ತೆಕ್ಕೆಗೆ ಹಾರಿದಂತೆ…

ಬಹಳಷ್ಟು ಜನ ಹದಿಹರೆಯದಲ್ಲಿಯೇ ಕವಿತೆ ಬರೆಯಲು ಶುರು ಮಾಡಿರುತ್ತಾರೆ. ಬಹಳಷ್ಟು ಬರಹಗಾರರೂ ನಂತರ ತಮ್ಮ ಶಕ್ತಿ ಏನೆಂದು ಕಂಡುಕೊಂಡು ಮುಂದುವರಿಯುತ್ತಾರಾದರೂ ಮೊದಲಿಗೆ ತಮ್ಮ ಬರಹ ಯಾನವನ್ನು ಕವಿತೆಯಿಂದಲೇ ಶುರುಮಾಡಿರುತ್ತಾರೆ. ಏಕೆ ಎನ್ನುವ ಕಾರಣದ ಬೆನ್ನತ್ತಿದರೆ ಸಿಗುವ ಉತ್ತರ ಆ ವಯಸ್ಸೇ ಹಾಗಿರುತ್ತದೆ. ಭಾವನೆಗಳಿಗೆ ವಶವಾಗುವ ಬುದ್ಧಿಯ ಮಾತನ್ನು ಅಷ್ಟಾಗಿ ಕೇಳದ ಹಂತವದು. ಅದು ಕವಿಯಲ್ಲದವನೂ ಕವಿಯಾಗುವ ಹಂತ. ದೈಹಿಕ ಬದಲಾವಣೆ, ಹಾರ್ಮೋನುಗಳ ವ್ಯತ್ಯಯ ಮತ್ತು ವಿರುದ್ಧ ಲಿಂಗಿಗಳೆಡೆಗಿನ ಅಕರ್ಷಣೆ ಪ್ರೇಮದ ಮುಸುಕು ಹೊದ್ದು ಕವಿತೆಯಾಗಿ ಹುಟ್ಟುವ ಕಾಲ. ಪ್ರೇಮ ಎಂತವರನ್ನೂ ಮೃದುವಾಗಿಸುತ್ತದೆ. ಕಾವ್ಯ ಉಕ್ಕುವ ಭಾವಗಳ ಕೈ ಹಿಡಿದು ನಡೆಸಿಕೊಂಡು ಹೊರತರುತ್ತದೆ. ಆ ಹಂತದಲ್ಲೇ ಎಲ್ಲರೂ ಒಂದಲ್ಲ ಒಂದು ಬಾರಿ ಕಾವ್ಯದೊಂದಿಗೆ ಒಂದಷ್ಟು ದಿನವಾದರೂ ಸರಿ ಫ್ಲರ್ಟ್ ಮಾಡಲು ತಯಾರಾಗಿಬಿಟ್ಟಿರುತ್ತಾರೆ! ಕೂತರೂ ನಿಂತರೂ ಉಂಡರೂ ಉಟ್ಟರೂ ಅದಕು ಇದಕು ಎಲ್ಲಕ್ಕೂ ಕಾವ್ಯವೇ ದಿಕ್ಕು ಎನ್ನುವ ಹಾಗೆ…

ಆದರೆ ನಾವು ಮಾಡಿದೆವು ಎನ್ನುವುದಕ್ಕಿಂತಲೂ ಕವಿತೆಯೆ ನಮ್ಮೊಂದಿಗೆ ಫ್ಲರ್ಟ್ ಮಾಡಲು ತೊಡಗಿರುತ್ತದೆ ಎನ್ನುವುದು ಯಾರಿಗೂ ತಿಳಿಯುವುದೇ ಇಲ್ಲ…! ಬರೀ ಫ್ಲರ್ಟೇ ಅಲ್ಲ ಲವ್ವು, ಡೇಟಿಂಗು, ಲೀವಿನ್ ರಿಲೇಶನ್ನು ಅಂತ ಎಲ್ಲವನ್ನೂ ಮುಗಿಸಿಬಿಡುತ್ತದೆ ಕವಿತೆ. ಅದೆಷ್ಟೋ ಪ್ರೇಮ ಕವಿತೆಗಳು ಹುಟ್ಟಿದ ಸಂದರ್ಭದಲ್ಲಿ ನಾವು ಹುಟ್ಟೇ ಇರಲಿಲ್ಲವಂತೆ. ಆದರೆ ಎಷ್ಟೆಲ್ಲಾ ಜನರೇಶನ್ ಗಳ ಜೊತೆ ಹಿತವಾದ ನಿರುಪದ್ರವಿ ಆಟವಾಡುತ್ತಾ ನಡೆಯುತ್ತವೆ ಈ ಕವಿತೆಗಳು…

ನನ್ನ ಗೆಳೆಯರೊಬ್ಬರು ಹೇಳುತ್ತಿದ್ದರು. ಅವರು ಹದಿಹರೆಯದಲ್ಲಿದ್ದಾಗ ತಮ್ಮ ಬರಹಗಳನ್ನು ಒಬ್ಬ ಖ್ಯಾತ ಬರಹಗಾರರಲ್ಲಿಗೆ ಒಯ್ದು ತೋರಿಸಿ ಹೇಗಿವೆ ಎಂದು ಕೇಳಿದ್ದರಂತೆ. ಅದಕ್ಕೆ ಆ ಮಹಾಶಯರು “ಈ ವಯಸ್ಸಿನಲ್ಲಿ ಎಲ್ಲರೂ ಕವಿಗಳಾಗಿಬಿಡ್ತಾರಪ್ಪಾ… ಹಾಗಾಗಿ ಇನ್ನೊಂದೈದಾರು ವರ್ಷ ಬಿಟ್ಟು ಬಂದು ನನ್ನ ನೋಡು. ಆಗಲೂ ನೀನು ಬರೀತಾ ಇದ್ರೆ ಅವುಗಳ ಬಗ್ಗೆ ಮಾತಾಡೋಣ” ಅಂದಿದ್ರಂತೆ. ಇದು ಹದಿಹರೆಯದ ವಯಸ್ಸಿನ ಮಹಿಮೆಯೇ ಸರಿ. ಇದೊಂದು ರೀತಿಯ ಪೂರ್ವಪ್ರಾಥಮಿಕ ಪಾಠಶಾಲೆ, ಮೊದಮೊದಲ ಪಟ್ಟುಗಳ ಕಲಿಯಬಹುದಾದ, ತಾಲೀಮು ನಡೆಸಬಹುದಾದ ಅಂಕಣ. ಹೃದಯದೊಳಗಿನ ಮಿಡಿತದಷ್ಟು ಸಹಜವಾಗಿ ಕಾವ್ಯ ಬೆರೆತು ಹೋಗಬೇಕು. ಇದಕ್ಕೆ ಪಂಡಿತ ಪಾಮರರೆಂಬ ಭೇದವಿಲ್ಲ.

ಯಾವ ಪಾಂಡಿತ್ಯವಿರದ ಕಾಡು ಹಕ್ಕಿ ತನಗೆ ಒಲಿದಂತೆ ಉಲಿಯುವುದಿಲ್ಲವೇ. ಇಲ್ಲಿ ಕಾವ್ಯದ ಓದು, ಇತಿಹಾಸ, ವರ್ತಮಾನ, ಭವಿಷ್ಯ ಯಾವೊಂದರ ಕಿಂಚಿತ್ ತಿಳುವಳಿಕೆಯಿಲ್ಲದೆಯೂ, ಅಸಲಿಗೆ ಕಾವ್ಯದ ಒಡಲಿಗೆ ಬೀಳುವ ಕನಸು ಬೀಳದೆಯೂ ಅದರ ಒಡಲಿಗೆ ಬೀಳುವುದು ಸಾಧ್ಯ ಮತ್ತದು ಎಷ್ಟೊಂದು ಅಚ್ಚರಿಗೆ ಕಾರಣವಾಗುತ್ತದೆ!

“ಜಗದೊಲವಿನ ನಂಟತನ ಲಭಿಸಿತು
ಅದಕಾಗಿಯೆ ಕಾವ್ಯಕೆ ನಮನ”

ಯಾರೋ ಎಲ್ಲಿಯವರೋ ಎಂತವರೋ ಹೇಗಿರುವವರೋ… ಒಟ್ಟಿನಲ್ಲಿ ಸಾಹಿತ್ಯ ಎನ್ನುವ ಲೇಬಲ್ ಹಚ್ಚಿಕೊಂಡಾಕ್ಷಣ ನಾವೆಲ್ಲ ಒಂದು ಎನ್ನುವ ಭಾವ. ಕಾವ್ಯ ಕುಟುಂಬದ ಸದಸ್ಯರು ಎಂದೆನಿಸುವಷ್ಟು ಆಪ್ತ ಸಂಬಂಧಗಳು, ಅನುಬಂಧಗಳು, ಪ್ರೀತಿ…. ಇದೆಲ್ಲವೂ ಇಲ್ಲಿ ಸಿಗಲಿಕ್ಕೆ ಪುಣ್ಯ ಮಾಡಿರಬೇಕು ಎಂದೆನಿಸುವಂತೆ ಮಾಡಿಬಿಡುತ್ತದೆ ಕವಿತೆ. ಬರೀ ಕೈಲೊಂದು ಕವಿತೆ ಹಿಡಿದು ಯಾವುದೋ ದೂರದ ಜಾಗಕ್ಕೆ ಹೋಗುವುದು, ಯಾರೋ ಅಪರಿಚಿತರು ತೋರುವ ಅನನ್ಯ ಪ್ರೀತಿ ಗೌರವ ಆದರವನ್ನು ಪಡೆಯುವುದು ಇದೆಲ್ಲವೂ ಯಾವಜನ್ಮದ ಮೈತ್ರಿಯೋ ಈ ಜನ್ಮದಲಿ ಬಂದು ನನಸಾದ ಘಳಿಗೆಗಳು…

ಕನ್ನಡದಂತಾ ಹೊನ್ನಾಡುವ ನುಡಿ
ನಾಲಿಗೆಗೇರಿದ್ದು
ಕುಮಾರವ್ಯಾಸ ಪಂಪ ಕುವೆಂಪು
ಬಂಧುಗಳಾದದ್ದು….

ಅದೆಷ್ಟು ಮುದ್ದಾದ ಸಾಲುಗಳು… ಕಾವ್ಯ ಹತ್ತಿರವಾಗುವುದೇ ಹೀಗೆ. ತನ್ನೊಳಗೆ ಸೆರೆ ಹಿಡಿದಿಟ್ಟುಕೊಳ್ಳುವ ಇಂತಹ ಹಲವಾರು ಸಾಲುಗಳು ಅದೆಷ್ಟೇ ಹಳತಾದರೂ ಸೆಳೆತದ ಗುಣ ಕಳೆದುಕೊಳ್ಳುವುದಿಲ್ಲ.

ಮನುಷ್ಯನ ಭಾವಕೋಶದ ವ್ಯಾಪ್ತಿ ಪುಟ್ಟದು ನಿಜ. ಆದರೆ ಅದು ತಾಯ ಗರ್ಭದಲ್ಲಿ ಮಗು ಅನುಭವಿಸುವಂತಹ ಬೆಚ್ಚನೆ ಸ್ಪಂದನವನ್ನು ಬಯಸುತ್ತದೆ. ತನ್ನೆಲ್ಲ ನವರಸ ಭಾವಗಳಿಗೂ ಕಾವ್ಯ ನಿಡುದಾರಿ ನೀಡುವ ಪರಿಚಾರಕನಾಗುತ್ತದೆ, ಹೆಗಲ ಮೇಲೆ ಕೈ ಹಾಕಿ ನಡೆಸುವ ಜೊತೆಗಾರನಾಗುತ್ತದೆ. ಒಮ್ಮೊಮ್ಮೆ ಗೆಳೆಯ ಒಮ್ಮೊಮ್ಮೆ ಸಖ… ಒಮ್ಮೊಮ್ಮೆ ಅನುರಾಗಿ ಒಮ್ಮೊಮ್ಮೆ ವಿರಾಗಿ…

“ಅಗಣಿತ ತಾರಾ ಗಣಗಳ ನಡುವೆ ನಿನ್ನನೇ ನೆಚ್ಚಿಹೆ ನಾನು” ಎಂದು ಅವ ತನ್ನವಳನ್ನು ಹಾಡಿ ಹೊಗಳಿ ಮರುಳು ಮಾಡಲು ಕವಿತೆ ಬೇಕು. “ನನ್ನ ಇನಿಯನ ನೆಲೆಯ ಬಲ್ಲೆಯೇನೇ , ಹೇಗೆ ತಿಳಿಯಲಿ ಅದನು ಹೇಳೆ ನೀನೆ ” ಎಂದು ಗೆಳತಿಯಲ್ಲಿ ತೋಡಿಕೊಳ್ಳಲು ಅವಳಿಗೆ ಕವಿತೆ ಬೇಕು. “ಆ ಸಂಜೆ ಬರಬಾರದೆ ನೀ ನನ್ನೊಡನೆ ಇರಬಾರದೇ” ಎಂಬ ಸಂಜೆಯ ರಾಗಕೆ ಕವಿತೆ ಬೇಕು, “ನೀನಿಲ್ಲದೆ ನನಗೇನಿದೆ” ಎನ್ನುವ ಶರಣಾಗತಿಗೆ ಕವಿತೆ ಬೇಕು, “ನನ್ನ ಹೃದಯವ ನಿನಗೆ ನೀಡಿದೆ ಒಲವೊಂದೆ ನಿನ್ನಿಂದ ಬಯಸಿದೆ ತಪ್ಪೆಲ್ಲ ನನ್ನದೇ ಇಬ್ಬನಿ ಹನಿಯನು ಮುತ್ತೆಂದು ನಾ ಭ್ರಮಿಸಿದೆ” ಎನ್ನುವ ಮರುಗುವಿಕೆಗೆ ಕವಿತೆ ಬೇಕು, “ಹೇಳಿ ಹೋಗು ಕಾರಣ ಹೋಗುವಾ ಮೊದಲು” ಎನ್ನುವ ಪರಿತ್ಯಕ್ತ ಭಾವಕ್ಕೆ ಕವಿತೆ ಬೇಕು.

“ಏಕೆ ನೆನಪಾಗಿ ಕಾಡುವೆ, ಬಿಡು ನನ್ನನ್ನು ನನ್ನ ಪಾಡಿಗೆ” ಎನ್ನುವ ಆರೋಪಕ್ಕೆ ಕವಿತೆ ಬೇಕು, “ಮತ್ತದೆ ಬೇಸರ ಅದೆ ಸಂಜೆ ಅದೆ ಏಕಾಂತ” ಎಂಬ ವಿರಹಕ್ಕೆ ಒಂಟಿತನಕ್ಕೆ ಕವಿತೆ ಬೇಕು, “ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೇ” ಎನ್ನುವ ತನ್ನೊಂದಿಗಿನ ತಕರಾರಿಗೂ ಕವಿತೆ ಬೇಕು, “ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸು “ಎನ್ನುತ್ತಾ ಸಂಭ್ರಮದ ಭಾಗವಾಗುವಾಗಲಿಕ್ಕೂ ಕವಿತೆ ಬೇಕು. “ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ” ಎನ್ನುವ ದಾಂಪತ್ಯಗೀತೆಗೂ ಕವಿತೆ ಬೇಕು. “ಸ್ನೇಹ ಅತಿ ಮಧುರ ಸ್ನೇಹ ಅದು ಅಮರ” ಎಂದು ಸ್ನೇಹವನ್ನು ಚಿರವಾಗಿಸಲಿಕ್ಕು ಕವಿತೆ ಬೇಕು. “ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು….” ಎನ್ನುವ ಕವಿತೆಯ ಸಾಲುಗಳ ಹಾಗೆ ಕವಿತೆ ಅದಕು ಇದಕು ಎದಕೂ ಆಗಿ ನಿಲ್ಲುತ್ತದೆ.

ಅದೆಷ್ಟೋ ಪ್ರೇಮ ಕವಿತೆಗಳು ಹುಟ್ಟಿದ ಸಂದರ್ಭದಲ್ಲಿ ನಾವು ಹುಟ್ಟೇ ಇರಲಿಲ್ಲವಂತೆ. ಆದರೆ ಎಷ್ಟೆಲ್ಲಾ ಜನರೇಶನ್ ಗಳ ಜೊತೆ ಹಿತವಾದ ನಿರುಪದ್ರವಿ ಆಟವಾಡುತ್ತಾ ನಡೆಯುತ್ತವೆ ಈ ಕವಿತೆಗಳು…

ಅವನ ಕರೆಗೆ ಅವಳ ತ್ವರೆಗೆ ಎರೆಡು ದಡಗಳ ನಡುವೆ ಸುಂದರ ಸೇತುವೆಯಾದ ಕವಿತೆಗಳು ಅನುಪಸ್ಥಿತಿಯನ್ನು ಎಚ್ಚರಿಸಬಲ್ಲಷ್ಟು ತೀವ್ರವಾಗಿ ಹಿಡಿದು ಬಿಡುತ್ತವೆ… ಮತ್ತದರಿಂದ ಬಿಡಿಸಿಕೊಳ್ಳುವುದು ಕಷ್ಟವೇ…

ಹಾಗಂದ ಮಾತ್ರಕ್ಕೆ ಕವಿತೆ ನನಗೆ ಗೊತ್ತು ಎಂದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಕಾವ್ಯವೆಂದರೇನು? ನಿಜಕ್ಕೂ ಗೊತ್ತಿಲ್ಲ. ಕಾವ್ಯವೆಂದರೇನೆಂದು ಬಲ್ಲವರಿಂದ ತಿಳಿದು ನಾನಾ ಗ್ರಂಥಗಳನ್ನು ತಟ್ಟಿ ತಡವಿ ಒಳಗೊಂದಷ್ಟು ಇಳಿ ಬಿಟ್ಟುಕೊಂಡು, ಒಂದಷ್ಟು ಜೀರ್ಣವಾಗಿ ಇನ್ನೊಂದಿಷ್ಟು ಅಜೀರ್ಣವಾಗಿ, ದಕ್ಕಿದಷ್ಟನ್ನು ಮನೋಗತಿಸಿಕೊಂಡು “ಸರಿ ಎಲ್ಲ ತಿಳಿದಾಯಿತಲ್ಲ ಇನ್ನು ಬರೆದು ಬಿಡುವೆನೊಂದು ಕವಿತೆ ಶುದ್ಧವಾಗಿ…. ” ಎಂದು ಹೊರಟಾಗ ಬರೆದ ಪುಟವೂ ಶೂನ್ಯವಾದಂತೆ, ಅಕ್ಷರಗಳೆಲ್ಲ ಮಾಯವಾಗಿ, ಬರಿದೆ ಬಿಳಿ ಹಾಳೆ ಅಣಕಿಸಿದಂತೆ, ನಿರುಪಾಯವಾಗಿ ಕೂತುಬಿಡುವಂತ ಪ್ರಸಂಗಗಳು ಅನೇಕ ಬಂದು ನಿಂತು ಹೊರಟು ಹೋಗಿವೆ. ನಿಜಕ್ಕೂ ಕವಿತೆ ಸುಲಭವಲ್ಲ…

ಕಾವ್ಯದ ಮೂಲ ಸೆಲೆ ಯಾವುದು ಹೇಗೆ ಹುಟ್ಟುತ್ತದೆ ಯಾವುದು ಕಾವ್ಯ ಎನ್ನುವ ಪ್ರಾಥಮಿಕ ಕುತೂಹಲದೊಟ್ಟಿಗೆ ಅವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೋ ಸಿಗುವುದಿಲ್ಲವೋ… ಅದೇ ಅಸಂತುಷ್ಟ ಸ್ಥಿತಿಯಲ್ಲಿ ಯಾವ ಹಿಡಿತಕ್ಕೂ ಸಿಗದೆ ಕಾವ್ಯ ತಾನು ಹೊರ ಬರುವ ದಾರಿಯನ್ನು ತಾನೇ ಕಂಡುಕೊಳ್ಳುತ್ತದೆ. ಸ್ವತಃ ಕವಿಯೇ ಅದನ್ನು ನಂಬಲಾರ, ಕಾವ್ಯವೆಂದು ಹೇಳಲಾರ. ಇದು ಒಂದು ರೀತಿ ಬರಹವನ್ನು ಶುರುಮಾಡುವ ಎಲ್ಲರ ಪಾಡೂ ಸಹ. ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾರದ ಸ್ಥಿತಿಗೆ ತಲುಪಿದಾಗ ತನಗೇ ಗೊತ್ತಿಲ್ಲದೆ ಯಾವೊಂದು ಪೂರ್ವ ತಯಾರಿಯಿಲ್ಲದೆ ಬರಹಗಾರ ಬರೆಯತೊಡಗುತ್ತಾನೆ.

ಅದು ತಪಸ್ಸು. ಧ್ಯಾನಸ್ಥ ಸ್ಥಿತಿಯಲ್ಲಿ, ಪೂರ್ಣ ಶರಣಾಗತಿಯಲ್ಲಿ ಒಲಿಯುವಂಥದ್ದು. ಎಷ್ಟೋ ಬಾರಿ ಈಗ ಹಿಡಿದೆ, ಇನ್ನೇನು ಕೈಗೆ ಸಿಕ್ಕೇ ಬಿಟ್ಟಿತು ಎಂದುಕೊಂಡಾಗಲೂ ಕೈಯಿಂದ ಮೀನಿನಷ್ಟೇ ನಯವಾಗಿ ನುಣುಚಿಕೊಂಡು ಬಿಡುತ್ತದೆ. ಇನ್ನು ಕೆಲವೊಮ್ಮೆ ತನ್ನನ್ನು ತಾನೇ ನಮ್ಮ ಕೈಯಿಂದ ರೂಪಿಸಿಕೊಳ್ಳುವಂತೆ ಹಠಾತ್ತನೆ ಮೈತಳೆದು ನಿಂತುಬಿಡುತ್ತದೆ ಕವಿತೆ. ನಾನು ರೂಪಿಸಿದೆ ಎನ್ನುವ ಅಹಂ ಕಳೆದು ಅದಾಗಲೇ ಇದ್ದದ್ದನ್ನು ಈಗ ನಾನು ಕಂಡುಕೊಂಡಿದ್ದೇನಷ್ಟೇ ಎನ್ನುವ ವಿನಯವಂತಿಕೆ ಮೂಡುವಂತೆ ಮಾಡುತ್ತದೆ ಕವಿತೆ.

ವಸ್ತುವಿನ ವಿಷಯಕ್ಕೆ ಬಂದಾಗ ಭೂವ್ಯೋಮಾದಿ ಪ್ರತಿಯೊಂದೂ ಕಾವ್ಯದ ಪರಿಕರವಾಗಿ ನಿಲ್ಲುತ್ತವೆ. ಸುಪ್ತ ಸೃಜನಶೀಲ ಮನಸ್ಸಿನ ಅವ್ಯಕ್ತ ಭಾವದ ಅಭಿವ್ಯಕ್ತಿಯಾಗಿರುವ ಕಾವ್ಯ ತನ್ನ ನಿರಾಳತೆಗೆ ಬೇಕಾದ ವಸ್ತುವನ್ನು ತೆರೆದಿಟ್ಟ ಮುಕ್ತ ಮನಸಿನಾಳದಿಂದ ತಾನೇ ಕಂಡುಕೊಳ್ಳುತ್ತದೆ ಕೂಡ.

ಕಾವ್ಯ ಬರಿದೆ ಪ್ರತಿಭೆಯ ಬೆಡಗಲ್ಲ. ಇಂದು ಹಲವು ಪೀಳಿಗೆಯ ಕವಿಗಳನ್ನು ನೋಡುವಾಗ ಇವರೆಲ್ಲ ಏಕೆ ಬರೆಯುತ್ತಾರೆ? ಬರಿ ಹೆಸರಿಗಾಗಿಯಾ? ಸಾಧನೆಗಾಗಿಯಾ? ಹಪಾಹಪಿಗಾಗಿಯಾ? ಕೌಶಲ ಮೆರೆಯಲಿಕ್ಕಾ? ಇಂತಹ ಪೇಲವ ಪ್ರಶ್ನೆಗಳಲ್ಲದೆ ಇನ್ನಾವುದೋ ಮಹತ್ತರ ಕಾರಣವಿದೆ ಅನಿಸುತ್ತದೆ. ಕೆಲವರಿಗೆ ಕಾವ್ಯವೆಂದರೆ ಅವಶ್ಯಕತೆ, ಮತ್ತೆ ಕೆಲವರಿಗೆ ಅನಿವಾರ್ಯತೆ, ಕೆಲವರಿಗೆ ನಿರಾಳತೆ ಇನ್ನು ಕೆಲವರಿಗದು ಆತ್ಮದ ತುರ್ತು. ಇನ್ನು ಬರೆಯದೆ ಇರಲಾರೆ ಎನಿಸಿದ ಒತ್ತಡದಲ್ಲಿಯೆ ಬಹಳ ಸಾರಿ ಬರೆಯ ತೊಡಗುತ್ತಾರೆ. ಬೇರೆ ಯಾವುದೇ ಶುಷ್ಕಕಾರಣಕ್ಕಾಗಿ ಬರೆಯುವುದು ಜೀವವಿಲ್ಲದ ದೇಹದಂತಾಗಿಬಿಡುತ್ತದೆ.

ಇಂದು ನಮ್ಮ ಮುಂದಿರುವ ಕಾವ್ಯದ ರೂಪ ಹಲವಾರು ಸ್ಥಿತ್ಯಂತರಗಳಿಗೆ ಒಳಪಟ್ಟು ನಮ್ಮ ಮುಂದೆ ನಿಂತಿದೆ. ಹಳೆಯದನ್ನು ತಿರಸ್ಕರಿಸಿ, ಮುರಿದು ಕಟ್ಟುವ ಪ್ರಕ್ರಿಯೆಗೆ ಹೆಚ್ಚಾನು ಹೆಚ್ಚು ಒಳಪಟ್ಟಿರುವುದು ಕಾವ್ಯ ಪ್ರಕಾರವೇ. ಮಾತ್ರೆಗಳಂತೆ ಲೆಕ್ಕಹಾಕಿ ಬರೆಯುತ್ತಿದ್ದಲ್ಲಿಂದ ನವೋದಯ, ನವ್ಯ, ದಲಿತ, ಬಂಡಾಯ, ಎಡ, ಬಲ ಎಂಬಲ್ಲಿಯವರೆಗೂ ನಾನಾ ಪಂಥ ಪಂಗಡಗಳನ್ನು ಹಾಯ್ದು ಬಂದಿದೆ ಕವಿತೆ. ಆದರೆ ಇಂದಿಗೂ ನವಿರು ಭಾವಗಳನ್ನು ಅಷ್ಟೇ ಲಾಲಿತ್ಯಪೂರ್ಣವಾಗಿ ಬರೆಯಬೇಕೆನಿಸಿದಾಗ ಕವಿತೆ ಎದುರು ಬಂದು ನುಲಿಯುತ್ತಾ ನಿಲ್ಲುತ್ತದೆ. ಕಾವ್ಯಕ್ಕೆ ಒಪ್ಪಿಸಿಕೊಳ್ಳುವುದೂ ಸಹ ಎಂತ ಸುಖ…

ಇಂದಿನ ದಿನಗಳಲ್ಲಿ ಬರೆಯುತ್ತಿರುವವರೂ ಸಹ ಪ್ರಯೋಗಾತ್ಮಕವಾಗಿ ಕವಿತೆಗಳನ್ನು ಬರೆಯುತ್ತಾ ಕಾವ್ಯದ ಹೊಸ ಸಂವೇದನೆಯನ್ನು ಹುಟ್ಟುಹಾಕುತ್ತಿದ್ದಾರೆ. ಆದರೆ ಕಾವ್ಯವನ್ನು ಅರ್ಥೈಸಿಕೊಳ್ಳದೆ ಬರೆದದ್ದನ್ನೆಲ್ಲಾ ಕಾವ್ಯವೆಂದು ಭ್ರಮಿಸುತ್ತಾ, ಕಾವ್ಯವೇ ಸುಲಭವೆಂದು ದಿಕ್ಕು ತಪ್ಪುತ್ತಾ ತಪ್ಪಿಸುತ್ತಿರುವವರಿಗೂ ಕೊರತೆ ಇಲ್ಲ. ಶಿಶುಗೀತೆಗಳಂತಹ ಪ್ರಾಸ ಪದ್ಯಗಳನ್ನು ಬರೆದು ಕವಿಗಳಾಗಿಬಿಟ್ಟೆವೆಂದು ಭ್ರಮಿಸುವವರ ಸಂಖ್ಯೆಯೂ ದೊಡ್ಡದಿದೆ.

ಆದರೆ ಜಾನಪದ ಕವಿತೆಗಳನ್ನು ನೋಡುವಾಗ ಹೆಸರಿನ ಯಾವ ಆಸೆಯೂ ಇಲ್ಲದೆ ಎಷ್ಟು ಚಂದ ತಮ್ಮ ಭಾವನೆಗಳನ್ನು ಸುಂದರ ಮೆಲುಕುಹಾಕುವಂತ ಹಾಡಿನ ಲಯದಲ್ಲಿ ತಮ್ಮ ನೈಜ ಜೀವನಕ್ಕೆ ಪೂರಕವಾಗಿ ಬಳಸಿಕೊಳ್ಳುವಂತೆ ಕಟ್ಟುತ್ತಾ ಹೋಗುತ್ತಿದ್ದರು ಎಂಬುದು ನಿಜಕ್ಕೂ ಆಶ್ಚರ್ಯ.

ಕಾಡು ಹಕ್ಕಿ ಹೇಗೆ ಹೆಸರಿನ ವ್ಯಾಮೋಹವಿಲ್ಲದೆ ಅಜ್ಞಾತವಾಗುಳಿದು ಹಾಡಿನ ಜಾಡನ್ನು ಹಿಡಿಯುತ್ತದೋ ಹಾಗೆ ಕವಿತೆಯ ಜಾಡಿಗೆ ಸೇರುವುದೂ ಬಿಡುಗಡೆಯ ಹಾದಿಯೇ….