ಸಂವಿಧಾನದ ಪ್ರಕಾರ ಟರ್ಕಿ ಜಾತ್ಯತೀತ ರಾಷ್ಟ್ರವಾಗಿದ್ದರೂ, ಅನುದಿನದ ಬದುಕಿನಲ್ಲಿ ಅದು ಪಾಲನೆಯಾಗುತ್ತಿಲ್ಲ. ಶಾಲೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಬೋಧಿಸಲಾಗುತ್ತಿದೆ. ಧರ್ಮವನ್ನು ಮಕ್ಕಳಿಗೆ ಕಲಿಸುವುದಕ್ಕಾಗಿಯೇ ಪಠ್ಯಕ್ರಮವನ್ನು ರೂಪಿಸಲಾಗಿದೆ. ಟರ್ಕಿಯಲ್ಲಿರುವ ಹೆಚ್ಚಿನ ಜನರು ಮುಸ್ಲಿಂ ಧರ್ಮಕ್ಕೆ ನಿಷ್ಠರಾಗಿದ್ದು, ಇಸ್ಲಾಂ ಜಗತ್ತು ಸ್ಥಾಪನೆಯಾಗಬೇಕೆಂಬ ಆಶಯವನ್ನು ಇಟ್ಟುಕೊಂಡಿದ್ದಾರೆ. ಈ ಬಗೆಯ ಅತಿರೇಕದ ಮನಃಸ್ಥಿತಿಯನ್ನು ಹೊಂದಿರದ, ಜಾತ್ಯತೀತ ನಿಲುವಿಗೆ ಬದ್ಧರಾಗಿರುವ ಜನರೂ ಟರ್ಕಿಯಲ್ಲಿದ್ದಾರೆ ಎನ್ನುವುದೇ ತುಸು ಸಮಾಧಾನ ಮೂಡಿಸುವ ಸಂಗತಿಯಾಗಿದೆ.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ “ಟರ್ಕಿ” ಕುರಿತ ಬರಹ ನಿಮ್ಮ ಓದಿಗೆ
ಏಷ್ಯಾ ಮತ್ತು ಯುರೋಪ್ ಎರಡು ಖಂಡಗಳಿಗೂ ಸೇರಿದ ದೇಶ ಟರ್ಕಿ. ಟರ್ಕಿಯ ಬಹುಪಾಲು ಭಾಗ ಏಷ್ಯಾದಲ್ಲಿದ್ದರೆ, ಸ್ವಲ್ಪ ಭಾಗ ಮಾತ್ರ ಯುರೋಪ್ ಖಂಡದಲ್ಲಿದೆ. ಪೂರ್ವ-ಪಶ್ಚಿಮಗಳ ಸಂಗಮವಾಗಿ ಟರ್ಕಿಯನ್ನು ಗುರುತಿಸುವುದಕ್ಕೆ ಏನೂ ಅಡ್ಡಿಯಿಲ್ಲ. ಟರ್ಕಿಶ್ ಸಂಸ್ಕೃತಿಯೆಂದರೆ ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗಳೆರಡರ ಮಿಶ್ರಣ. ಟರ್ಕಿಯ ಆಹಾರ ಪದ್ಧತಿ, ಕಲೆಗಳು, ಜೀವನಶೈಲಿ ಎಲ್ಲದರ ಮೇಲೆಯೂ ಪೌರ್ವಾತ್ಯ ಮತ್ತು ಪಾಶ್ಚಾತ್ಯ ಎರಡೂ ಸಂಸ್ಕೃತಿಗಳ ಪ್ರಭಾವವಿದೆ. ಶ್ರೀಮಂತ ಸಾಂಸ್ಕೃತಿಕ ಪರಂಪರೆಯಿರುವ ದೇಶವಿದು. ಸಂಸ್ಕೃತಿಯ ನೆಲೆಯಿಂದ ಮಹತ್ವಪೂರ್ಣವೆನಿಸುವ ಹಲವು ಪ್ರದೇಶಗಳು ಇಲ್ಲಿವೆ. ಇಸ್ತಾಂಬುಲ್ ಸುತ್ತಲಿನ ಐತಿಹಾಸಿಕ ಪ್ರದೇಶಗಳು, ಹತ್ತೂಶಾದ ಹಳೆಯ ಹಿಟೈಟ್ ರಾಜಧಾನಿ, ಡಿವ್ರಿಕಿಯ ಗ್ರೇಟ್ ಮಸೀದಿ, ನೆಮ್ರುತ್ ಡಾಗ್ ಮತ್ತು ಕ್ಸಾಂಥೋಸ್ ಲೆಟೂನ್, ಸಫ್ರಾನ್ಬೋಲು ಮೊದಲಾದವುಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿ ಮಾನ್ಯತೆ ಪಡೆದಿವೆ. ಗೊರೆಮ್ ರಾಷ್ಟ್ರೀಯ ಉದ್ಯಾನವನ ಮತ್ತು ಕಪಾಡೋಸಿಯಾದ ರಾಕ್ ಸೈಟ್‌ಗಳು ವಿಶಿಷ್ಟ ಭೌಗೋಳಿಕ ಪ್ರದೇಶಗಳು. ಪ್ರಪಂಚದ ಅತ್ಯಂತ ಹಳೆಯ ಮತ್ತು ದೊಡ್ಡ ಮಾರುಕಟ್ಟೆಯಿರುವುದು ಟರ್ಕಿಯ ಇಸ್ತಾಂಬುಲ್ ನಗರದಲ್ಲಿ. ಪ್ರತೀದಿನ ನಾಲ್ಕು ಲಕ್ಷದಷ್ಟು ಜನರು ಈ ಮಾರುಕಟ್ಟೆಗೆ ಬರುತ್ತಾರೆ. ಸುಮಾರು ನಾಲ್ಕು ಸಾವಿರದಷ್ಟು ಅಂಗಡಿಗಳು ಈ ಮಾರುಕಟ್ಟೆಯಲ್ಲಿವೆ. ಇಸ್ಲಾಂ ಪ್ರಾಬಲ್ಯದ ದೇಶವಾಗಿರುವ ಟರ್ಕಿಯಲ್ಲಿ ಪ್ರಪಂಚದ ಅತೀ ಹಳೆಯ ಚರ್ಚ್ ಇದೆ. ಆಂಟಿಯೋಕ್ ಎನ್ನುವ ಪ್ರದೇಶದಲ್ಲಿ ಇರುವ ಸೇಂಟ್ ಪೀಟರ್ ಚರ್ಚ್ ಈ ರೀತಿಯಲ್ಲಿ ಖ್ಯಾತಿ ಗಳಿಸಿದೆ. ಈ ಚರ್ಚ್‌ಅನ್ನು ಸ್ಥಾಪಿಸಿದವರು ಯೇಸುವಿನ ಶಿಷ್ಯ ಸೇಂಟ್ ಪೀಟರ್ ಎನ್ನುವ ನಂಬಿಕೆಯಿದೆ.
ಟರ್ಕಿಯಲ್ಲಿ ಯುವಜನತೆ ಅಧಿಕ ಸಂಖ್ಯೆಯಲ್ಲಿದ್ದಾರೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ 48 ಶೇಕಡಾದಷ್ಟು ಜನರು ನಲುವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರು. 24 ಶೇಕಡಾ ಜನರು 15ರಿಂದ 29 ವರ್ಷ ವಯಸ್ಸಿನವರು. ಅತೀ ಹೆಚ್ಚು ಯುವಜನತೆಯನ್ನು ಹೊಂದಿರುವ ದೇಶಗಳಲ್ಲಿ ಟರ್ಕಿಯೂ ಒಂದಾಗಿದೆ. ವೃದ್ಧರ ಸಂಖ್ಯೆ ಒಂಭತ್ತು ಶೇಕಡಾದಷ್ಟು ಮಾತ್ರ. ಈಗ ಟರ್ಕಿಯ ಬಹುಜನರು ಸೇವಾ ಕ್ಷೇತ್ರದಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಆದರೆ ಮೂಲತಃ ಟರ್ಕಿಯು ಕೃಷಿ ಪ್ರಧಾನವಾದ ದೇಶ. ಟರ್ಕಿಯ ಜನಸಂಖ್ಯೆಯ ಬಹುಪಾಲು ಜನರ ಮುಖ್ಯ ಉದ್ಯೋಗ ಕೃಷಿಯಾಗಿತ್ತು. ಕೆಲವು ದಶಕಗಳ ಹಿಂದಿನವರೆಗೂ ದೇಶದ ಅರ್ಧ ಭಾಗದಷ್ಟು ಭೂಮಿ ಕೃಷಿಗೆ ಮೀಸಲಾಗಿತ್ತು. ಅನೇಕ ಕೃಷಿ ವ್ಯವಸ್ಥೆಗಳು ಹುಟ್ಟಿಕೊಂಡದ್ದು ಟರ್ಕಿಯಲ್ಲಿ ಎಂಬ ನಂಬಿಕೆ ಇತಿಹಾಸಕಾರರದ್ದು. 11,000 ವರ್ಷಗಳಷ್ಟು ಹಿಂದೆಯೇ ಕೃಷಿಯು ಟರ್ಕಿಯಲ್ಲಿ ಹುಟ್ಟಿಕೊಂಡಿತು ಎಂಬ ಅಭಿಪ್ರಾಯವೂ ಇದೆ. ಕೃಷಿಗೆ ಅತ್ಯಂತ ಸೂಕ್ತವಾದ ರಾಷ್ಟ್ರವಾಗಿದೆ ಟರ್ಕಿ. ಇಲ್ಲಿರುವ ಫಲವತ್ತಾದ ಮಣ್ಣು, ಬೆಳೆಗಳನ್ನು ಬೆಳೆಸುವುದಕ್ಕೆ ಅನುಕೂಲಕರವಾಗಿರುವ ಉತ್ತಮ ಹವಾಮಾನ, ಆಹಾರ ಉತ್ಪಾದನೆಗೆ ಪೂರಕವಾಗಿರುವ ಮಳೆ ಇವೆಲ್ಲವೂ ಸಹ ಕೃಷಿ ಚಟುವಟಿಕೆ ಕೈಗೊಳ್ಳುವುದಕ್ಕಾಗಿ ನಿಸರ್ಗವೇ ಟರ್ಕಿ ದೇಶಕ್ಕೆ ನೀಡಿರುವ ಕೊಡುಗೆಯಾಗಿದೆ.
ಟರ್ಕಿಯ ಸ್ವಾತಂತ್ರ್ಯ ಹೋರಾಟವೆಂದರೆ ಅದು ಪರಂಪರೆ ಮತ್ತು ಪ್ರಗತಿಯ ನಡುವಿನ ಸಂಘರ್ಷ. ಒಟ್ಟೋಮನ್ ಪೂರ್ವ ಟರ್ಕಿಶ್ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಬೇಕು, ದೇಶ ಪ್ರಗತಿ ಹೊಂದುವಂತಾಗಬೇಕು ಎಂಬ ಆಶಯವನ್ನು ಇಟ್ಟುಕೊಂಡವರು ಪ್ರಭುತ್ವದ ವಿರುದ್ಧ ಸಿಡಿದುನಿಂತರು. ರಾಷ್ಟ್ರೀಯತೆಯ ಪ್ರಜ್ಞೆ ಟರ್ಕಿಯ ಜನರಲ್ಲಿ ಮೂಡತೊಡಗಿದಾಗ ಜಗತ್ತಿನಲ್ಲಿ ಮೊದಲ ಮಹಾಯುದ್ಧಕ್ಕೆ ವೇದಿಕೆ ಸಿದ್ಧವಾಗಿತ್ತು. ಟರ್ಕಿಯಲ್ಲಿ ಒಟ್ಟೋಮನ್ ಸಾಮ್ರಾಜ್ಯವು ಆಳ್ವಿಕೆ ನಡೆಸುತ್ತಿತ್ತು. ಒಟ್ಟೋಮನ್ ಸರ್ಕಾರದ ಮೂವತ್ತಾರನೆಯ ಮತ್ತು ಕೊನೆಯ ಸುಲ್ತಾನನೆಂದು ಗುರುತಿಸಿಕೊಂಡ ಆರನೇ ಮೆಹ್ಮದ್ ಅಧಿಕಾರದಲ್ಲಿದ್ದ. ಮೊದಲ ಮಹಾಯುದ್ಧದಲ್ಲಿ ಟರ್ಕಿಯ ಪಾತ್ರ ಪ್ರಧಾನವಾಗಿತ್ತು. ಪ್ರಪಂಚದ ಪ್ರಮುಖ ರಾಷ್ಟ್ರಗಳ ವಿರೋಧ ಕಟ್ಟಿಕೊಂಡಿತ್ತು. ಈ ಅಂಶ ಟರ್ಕಿಯಲ್ಲಿ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸಿತು. ಕೆಮಾಲಿಸ್ಟ್ ಎಂದು ಗುರುತಿಸಿಕೊಂಡವರ ಗುಂಪು ಒಟ್ಟೋಮನ್ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನಿಸತೊಡಗಿತು. ಕೆಮಾಲಿಸ್ಟ್ ಎಂದು ಹೆಸರು ಬಂದದ್ದು ಗುಂಪಿನ ನಾಯಕರಾಗಿದ್ದ ಮುಸ್ತಫಾ ಕೆಮಾಲ್ ಅವರಿಂದ. ಇವರು ಒಟ್ಟೋಮನ್ ಸಾಮ್ರಾಜ್ಯದಲ್ಲಿಯೇ ಸೇವೆ ಸಲ್ಲಿಸುತ್ತಿದ್ದ ಯಶಸ್ವಿ ಅಧಿಕಾರಿ. ಮೊದಲ ಮಹಾಯುದ್ಧದ ಸಮಯದಲ್ಲಿ ಇವರು ಒಟ್ಟೋಮನ್ ಸರ್ಕಾರದ ವಿರುದ್ಧವೇ ಜನರನ್ನು ಸಂಘಟಿಸುವುದಕ್ಕೆ ಆರಂಭಿಸಿದರು. ಸರ್ಕಾರ ವಿರೋಧಿ ನೀತಿ ಅಂಗೀಕೃತವಾಯಿತು. ಮೂಲಭೂತ ಕಾನೂನು ಸಿದ್ಧವಾಯಿತು. ರಾಷ್ಟ್ರದ ಹೆಸರನ್ನು ಟರ್ಕಿ ಎಂದು ನಿರ್ಧರಿಸಿ, ಅಧಿಕಾರವನ್ನು ಮುಸ್ತಫಾ ಕೆಮಾಲ್ ನೇತೃತ್ವದ ಕಾರ್ಯಕಾರಿ ಮಂಡಳಿಗೆ ವಹಿಸಲಾಯಿತು. ಮೊದಲ ಮಹಾಯುದ್ಧದಲ್ಲಿ ಗ್ರೀಕರು ಮತ್ತು ಟರ್ಕಿಯವರ ಸಂಘರ್ಷ ಕೊನೆಗೊಂಡದ್ದು 1923ರ ಲೌಸನ್ನೆ ಒಪ್ಪಂದದ ಮೂಲಕ. ಇದರ ಆಧಾರದಲ್ಲಿ ಟರ್ಕಿಯ ಗಡಿ ನಿರ್ಧರಿಸಲ್ಪಟ್ಟಿತು. ಗ್ರೀಕ್ ತನ್ನ ವಶದಲ್ಲಿದ್ದ ಟರ್ಕಿಶ್ ದ್ವೀಪಗಳನ್ನು ಹಿಂದಿರುಗಿಸಿತು.
ಟರ್ಕಿಯಲ್ಲಿದ್ದ ಹದಿಮೂರು ಲಕ್ಷದಷ್ಟು ಗ್ರೀಕರು ತಮ್ಮ ದೇಶ ಸೇರಿಕೊಂಡರು. ನಾಲ್ಕು ಲಕ್ಷದಷ್ಟು ಟರ್ಕಿಯವರು ಗ್ರೀಕ್‌ನಿಂದ ಸ್ವದೇಶಕ್ಕೆ ಮರಳಿದರು. ಹೊಸ ಆಡಳಿತ ವ್ಯವಸ್ಥೆ ರೂಪುಗೊಳ್ಳಬೇಕಾದರೆ ಒಟ್ಟೋಮನ್ ಸುಲ್ತಾನರ ಆಳ್ವಿಕೆ ಕೊನೆಗಾಣಬೇಕಿತ್ತು. ಈ ಸನ್ನಿವೇಶವನ್ನು ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸಿದ ಮುಸ್ತಫಾ ಕೆಮಾಲ್ ಸುಲ್ತಾನನನ್ನು ರದ್ದುಗೊಳಿಸಲು ಟರ್ಕಿಯ ಅಸೆಂಬ್ಲಿಯನ್ನು ಪ್ರೇರೇಪಿಸಿದರು. ಆರನೇ ಮೆಹ್ಮದ್ ಟರ್ಕಿಯನ್ನು ಬಿಟ್ಟುಹೋದ. ಅಂತಿಮವಾಗಿ 1923ರ ಅಕ್ಟೋಬರ್ 29ರಂದು ಟರ್ಕಿಯನ್ನು ಗಣರಾಜ್ಯವೆಂದು ಘೋಷಿಸಲಾಯಿತು. ಮುಸ್ತಫಾ ಕೆಮಾಲ್ ಅಧ್ಯಕ್ಷರಾಗಿ ಆಯ್ಕೆಯಾದರು. ಇದರ ಬೆನ್ನಲ್ಲೇ ಒಟ್ಟೋಮನ್ ರಾಜವಂಶಕ್ಕೆ ಸೇರಿದ ಎಲ್ಲರೂ ಟರ್ಕಿಯಿಂದ ಗಡಿಪಾರು ಮಾಡಲ್ಪಟ್ಟರು. ಏಪ್ರಿಲ್ 20, 1924ರಂದು ಪೂರ್ಣ ಗಣರಾಜ್ಯವನ್ನು ಅಂಗೀಕರಿಸಲಾಯಿತು. ಆರಂಭದಲ್ಲಿ ಇಸ್ಲಾಮನ್ನು ರಾಜ್ಯಧರ್ಮವಾಗಿ ಸ್ವೀಕರಿಸಲಾಗಿತ್ತು. ಆದರೆ ಕೆಲವೇ ಸಮಯದಲ್ಲಿ ಟರ್ಕಿ ಜಾತ್ಯತೀತ ರಾಷ್ಟ್ರವಾಗಿ ಸಂವಿಧಾನಾತ್ಮಕ ಮಾನ್ಯತೆ ಗಳಿಸಿಕೊಂಡಿತು.
ಟರ್ಕಿಯ ಗ್ರಾಮೀಣ ಪ್ರದೇಶಗಳು ಈಗಲೂ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯನ್ನೇ ನೆಚ್ಚಿಕೊಂಡಿವೆ. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಿದೆ. ತಲೆಮಾರುಗಳ ನಡುವಿನ ಅಂತರ, ಆಸ್ತಿಗಾಗಿ ಕಲಹ, ಪುತ್ರ ಸಂತಾನ ಇಲ್ಲದಿರುವುದು ಈ ಕಾರಣಗಳಿಂದಾಗಿ ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದು ಕುಟುಂಬದಲ್ಲಿ ಹೆಚ್ಚೆಂದರೆ ಐದು ಅಥವಾ ಆರು ಜನರು ಇರುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಮದುವೆಯು ಅದ್ಧೂರಿಯಾಗಿದ್ದು, ಹಲವು ದಿನಗಳವರೆಗೆ ನಡೆಯುತ್ತದೆ. ವರದಕ್ಷಿಣೆ ಮೊದಲಾದ ಸಾಮಾಜಿಕ ಪಿಡುಗುಗಳೂ ಸಹ ಸಹಜ ಆಚರಣೆಯ ನೆಪದಲ್ಲಿ ನಡೆದುಹೋಗುತ್ತವೆ. ಕೆಲವು ಕಡೆಗಳಲ್ಲಿ ವಧುದಕ್ಷಿಣೆಯೂ ಸಹ ಕಂಡುಬರುತ್ತದೆ. ಹುಡುಗಿಯರ ಸಂಖ್ಯೆ ಕಡಿಮೆ ಇರುವ ಸಮುದಾಯಗಳಲ್ಲಿ ಈ ಬಗೆಯ ಆಚರಣೆಯಿದೆ. ಆದರೆ ನಗರ ಪ್ರದೇಶಗಳ ವಿದ್ಯಾವಂತರು ವಿವೇಚನಾಪೂರ್ಣವಾಗಿದ್ದು, ಅಲ್ಲಿ ವರದಕ್ಷಿಣೆಯೂ ಇರುವುದಿಲ್ಲ; ವಧುದಕ್ಷಿಣೆಯೂ ಇರುವುದಿಲ್ಲ. ಗಂಡು ಹೆಣ್ಣು ಪರಸ್ಪರ ಇಷ್ಟಪಟ್ಟರೆ ಮಾತ್ರ ಮದುವೆಯಾಗುವ ಕಡೆಗೆ ಆಸಕ್ತಿ ತೋರಿಸುತ್ತಾರೆ. ಉಳಿದ ಯಾವ ವಿಷಯಗಳ ಬಗ್ಗೆಯೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.
ಧರ್ಮದ ನೆಲೆಗಟ್ಟಿನಿಂದ ನೋಡಿದರೆ ಟರ್ಕಿಯಲ್ಲಿ ಇಸ್ಲಾಂ ಆಚರಣೆಗಳೇ ಪ್ರಧಾನವಾಗಿವೆ. ದೇಶದ 99 ಶೇಕಡಾದಷ್ಟು ಜನರು ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಟರ್ಕಿಯಲ್ಲಿ 80,000ಕ್ಕೂ ಹೆಚ್ಚು ಮಸೀದಿಗಳಿವೆ. ಈ ಮಸೀದಿಗಳನ್ನು ಕೇವಲ ಪ್ರಾರ್ಥನಾ ಸ್ಥಳಗಳಾಗಿ ಮಾತ್ರವಲ್ಲ, ಇಸ್ಲಾಮಿಕ್ ಕಲಾಶೈಲಿಯ ಪ್ರತಿಬಿಂಬಗಳಾಗಿ ಕಾಣಬಹುದು. ಸೆಲಿಮಿಯೆ ಮಸೀದಿ, ಸುಲೇಮಾನಿಯೆ ಮಸೀದಿ, ನೀಲಿ ಮಸೀದಿ ಎಂದು ಪ್ರಸಿದ್ಧವಾಗಿರುವ ಸುಲ್ತಾನಹ್ಮೆತ್ ಮಸೀದಿ, ಕೊಕಾಟೆಪೆ ಮಸೀದಿಗಳು ಇವುಗಳಲ್ಲಿ ಅತ್ಯಂತ ಖ್ಯಾತಿವೆತ್ತ ಮಸೀದಿಗಳು. ಪುರುಷರು ಮತ್ತು ಮಹಿಳೆಯರು ಮುಸ್ಲಿಂ ಧರ್ಮಕ್ಕೆ ಬದ್ಧರಾಗಿರಬೇಕು. ದಿನಕ್ಕೆ ಐದು ಬಾರಿ ನಮಾಜ಼್ ಮಾಡಬೇಕು. ರಂಜಾನ್ ತಿಂಗಳಲ್ಲಿ ಉಪವಾಸ ಕಡ್ಡಾಯ. ಸಾಧ್ಯವಾದರೆ, ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೆಕ್ಕಾಗೆ ಭೇಟಿ ನೀಡಬೇಕು. ಹೀಗೆ ಕೆಲವು ಧಾರ್ಮಿಕ ನಿಯಮಾವಳಿಗಳನ್ನು ಟರ್ಕಿಯಲ್ಲಿ ಕಾಣಬಹುದು. ಕ್ರಿಶ್ಚಿಯನ್ ಮತ್ತು ಜುದಾಯಿಸಂ ಧರ್ಮಗಳೂ ಟರ್ಕಿಯಲ್ಲಿ ಕಂಡುಬರುತ್ತವೆ.
ಸಂವಿಧಾನದ ಪ್ರಕಾರ ಟರ್ಕಿ ಜಾತ್ಯತೀತ ರಾಷ್ಟ್ರವಾಗಿದ್ದರೂ, ಅನುದಿನದ ಬದುಕಿನಲ್ಲಿ ಅದು ಪಾಲನೆಯಾಗುತ್ತಿಲ್ಲ. ಶಾಲೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಬೋಧಿಸಲಾಗುತ್ತಿದೆ. ಧರ್ಮವನ್ನು ಮಕ್ಕಳಿಗೆ ಕಲಿಸುವುದಕ್ಕಾಗಿಯೇ ಪಠ್ಯಕ್ರಮವನ್ನು ರೂಪಿಸಲಾಗಿದೆ. ಟರ್ಕಿಯಲ್ಲಿರುವ ಹೆಚ್ಚಿನ ಜನರು ಮುಸ್ಲಿಂ ಧರ್ಮಕ್ಕೆ ನಿಷ್ಠರಾಗಿದ್ದು, ಇಸ್ಲಾಂ ಜಗತ್ತು ಸ್ಥಾಪನೆಯಾಗಬೇಕೆಂಬ ಆಶಯವನ್ನು ಇಟ್ಟುಕೊಂಡಿದ್ದಾರೆ. ಈ ಬಗೆಯ ಅತಿರೇಕದ ಮನಃಸ್ಥಿತಿಯನ್ನು ಹೊಂದಿರದ, ಜಾತ್ಯತೀತ ನಿಲುವಿಗೆ ಬದ್ಧರಾಗಿರುವ ಜನರೂ ಟರ್ಕಿಯಲ್ಲಿದ್ದಾರೆ ಎನ್ನುವುದೇ ತುಸು ಸಮಾಧಾನ ಮೂಡಿಸುವ ಸಂಗತಿಯಾಗಿದೆ.
ಜಗತ್ಪ್ರಸಿದ್ಧ ಚಿತ್ರ ಕಲಾವಿದ ಲಿಯೋನಾರ್ಡೋ ಡಾ ವಿಂಚಿ ಮತ್ತು ಟರ್ಕಿಯ ಮಧ್ಯೆ ಸಂಬಂಧ ಕಲ್ಪಿಸುವ ದಂತಕಥೆಯೊಂದಿದೆ. ಟರ್ಕಿಯ ಸುಲ್ತಾನನಾಗಿದ್ದ ಎರಡನೇ ಬೆಯಾಜಿದ್ ಕ್ರಿ.ಶ. 1502ರಲ್ಲಿ ಇಸ್ತಾಂಬುಲ್‌ನಲ್ಲಿ ಸೇತುವೆಯನ್ನು ನಿರ್ಮಿಸಲು ನಿರ್ಧರಿಸಿದ. ಅದರ ವಿನ್ಯಾಸವನ್ನು ಚಿತ್ರಿಸಿಕೊಡುವಂತೆ ಲಿಯೊನಾರ್ಡೊ ಡಾ ವಿಂಚಿಯನ್ನು ಕೇಳಿಕೊಂಡ. ಲಿಯೋನಾರ್ಡೋ ಅವರು ಮೂರು ಜ್ಯಾಮಿತಿಯ ತತ್ವಗಳ ಆಧಾರದ ಮೇಲೆ ರೇಖಾಚಿತ್ರಗಳನ್ನು ತಯಾರಿಸಿಕೊಟ್ಟರು. ಈ ರೇಖಾಚಿತ್ರದ ಆಧಾರದಲ್ಲಿಯೇ ಸೇತುವೆಯೇನಾದರೂ ನಿರ್ಮಾಣವಾಗಿದ್ದರೆ ವಿಶ್ವದ ಅತೀ ದೊಡ್ಡ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಆದರೆ ಸುಲ್ತಾನನಿಗೆ ವಿನ್ಯಾಸ ಇಷ್ಟವಾಗಲಿಲ್ಲ. ಇದರಿಂದಾಗಿ ವಿಂಚಿಯ ಕಲ್ಪನೆಯಂತೆ ಸೇತುವೆ ನಿರ್ಮಾಣಗೊಳ್ಳಲಿಲ್ಲ. ಪ್ರತೀ ಕ್ರಿಸ್‌ಮಸ್‌ಗೆ ಭೇಟಿ ನೀಡುವ ಸಾಂತಾ ಕ್ಲಾಸ್ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಸಾಂತಾ ಕ್ಲಾಸ್ ಎಂದು ಪ್ರಸಿದ್ಧರಾದವರು ಸೇಂಟ್ ನಿಕೋಲಸ್. ಇವರು ಹಿಂದಿನ ಏಷ್ಯಾ ಮೈನರ್ ಅನ್ನುವ ಪ್ರದೇಶದಿಂದ ಬಂದವರು. ಹಿಂದಿನ ಏಷ್ಯಾ ಮೈನರ್ ಪ್ರದೇಶವೇ ಈಗಿನ ಟರ್ಕಿ ದೇಶ.
ಟರ್ಕಿಯಲ್ಲಿ ಭಾಷೆಗೆ ಸಂಬಂಧಿಸಿದ ನಿರ್ಬಂಧವಿದೆ. ಮೂವತ್ತಕ್ಕೂ ಹೆಚ್ಚು ಜನಾಂಗೀಯ ಭಾಷೆಗಳಿದ್ದರೂ ಟರ್ಕಿಶ್ ಭಾಷೆಯೇ ಅಲ್ಲಿ ಪಾರಮ್ಯ ಮೆರೆಯುತ್ತಿದೆ. ಉಳಿದ ಅಷ್ಟೂ ಭಾಷೆಗಳಿಗೆ ಯಾವ ಪ್ರಾಮುಖ್ಯತೆಯೂ ಇಲ್ಲ. ಟರ್ಕಿಯ ಸಂವಿಧಾನದ ಪ್ರಕಾರ, ಟರ್ಕಿಶ್ ಅಲ್ಲಿಯ ಏಕೈಕ ಅಧಿಕೃತ ಭಾಷೆಯಾಗಿದೆ. ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಟರ್ಕಿಶ್ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ ಕಲಿಸುವಂತಿಲ್ಲ ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಎಂಭತ್ತು ಮಿಲಿಯನ್‌ಗಿಂತಲೂ ಹೆಚ್ಚು ಜನರು ಟರ್ಕಿಶ್ ಭಾಷೆಯನ್ನು ಬಳಸುತ್ತಿದ್ದಾರೆ. ಅನೇಕ ಇತರ ಭಾಷೆಗಳು ಅಸ್ತಿತ್ವದಲ್ಲಿವೆ. ಕುರ್ದಿಷ್, ಅರೇಬಿಕ್, ಜಝಾಕಿ, ಕುರ್ಮಾಂಜಿ, ಬಾಲ್ಕನ್ ಭಾಷೆಗಳು, ಕಾಪ್ಟಿಕ್, ಅರ್ಮೇನಿಯನ್, ಗ್ರೀಕ್, ಯಹೂದಿ ಭಾಷೆಗಳನ್ನು ಮಾತನಾಡುವವರೂ ಇದ್ದಾರೆ. ಭಾಷಾ ಅಲ್ಪಸಂಖ್ಯಾತರು ತಮ್ಮ ಭಾಷೆಗಳನ್ನು ಮಾತನಾಡಲು ಮುಕ್ತ ಅವಕಾಶವಿಲ್ಲದ ಕಾರಣ ಹದಿನೈದು ಭಾಷೆಗಳು ಪ್ರಸ್ತುತ ಅಳಿವಿನಂಚಿನಲ್ಲಿವೆ.
1925ನೇ ಇಸವಿಗೂ ಮೊದಲು ಟರ್ಕಿಯಲ್ಲಿ ಪುರುಷರು ಫೆಜ್ ಮತ್ತು ಟರ್ಬನ್‌ಗಳನ್ನು ಧರಿಸುತ್ತಿದ್ದರು. ಇವೆರಡೂ ಸಹ ವಿಶೇಷವಾಗಿ ಮುಸ್ಲಿಂ ಜನಾಂಗದವರು ಧರಿಸುವ ಟೋಪಿಯಾಗಿದೆ. ಫೆಜ್ ಎನ್ನುವುದು ಕೆಂಪು ಬಣ್ಣದಲ್ಲಿರುವ, ಕಪ್ಪನೆಯ ದಾರಗಳನ್ನು ಇಳಿಬಿಟ್ಟ ರೀತಿಯಲ್ಲಿರುವ ಟೋಪಿ. ಆದರೆ ಅಲ್ಲಿಯ ಸರ್ಕಾರ ಇವುಗಳೆರಡನ್ನೂ ನಿಷೇಧಿಸಿದೆ. ಮುಸ್ಲಿಮರು ಪ್ರತ್ಯೇಕವಾಗಿ ಕಾಣಿಸಿಕೊಳ್ಳದೆ ದೇಶದ ಎಲ್ಲರೂ ಒಂದೇ ರೀತಿಯಾಗಿ ಕಾಣಿಸಲಿ ಎನ್ನುವ ಸದ್ಭಾವನೆ ಇದರ ಹಿನ್ನೆಲೆಯಲ್ಲಿದೆ. ಈಗ ಗ್ರಾಮೀಣ ಭಾಗದ ಜನರು ಮಾತ್ರ ಬಟ್ಟೆಯ ಟೋಪಿಗಳಿಂದ ತಮ್ಮ ತಲೆಯನ್ನು ಮುಚ್ಚಿಕೊಳ್ಳುತ್ತಾರೆ. ಟರ್ಕಿಶ್ ಬ್ಯಾಗಿ ಪ್ಯಾಂಟ್‌ಗಳು ಒಂದು ಕಾಲಕ್ಕೆ ತೀರಾ ಪ್ರಸಿದ್ಧವಾಗಿದ್ದವು. ಈ ಪ್ಯಾಂಟ್‌ಗಳಲ್ಲಿ ಒಂದೇ ಸಲಕ್ಕೆ ನಾಲ್ಕು ಕಾಲುಗಳನ್ನು ಇಡಬಹುದು. ಅಷ್ಟು ಅಗಲ. ಆದರೆ ಈಗ ಇಂತಹ ಪ್ಯಾಂಟುಗಳನ್ನು ಟರ್ಕಿಯ ಹಳ್ಳಿಗಾಡಿನ ಜನರು ಮಾತ್ರ ಬಳಸುತ್ತಿದ್ದಾರೆ. ಕಮ್ಮರ್‌ಬಂಡ್, ಬಣ್ಣಬಣ್ಣದ ಶಿಫ್ಟ್, ವೇಸ್ಟ್ಕೋಟ್ ಮೊದಲಾದವು ಟರ್ಕಿಯಲ್ಲಿ ಕಂಡುಬರುವ ಉಡುಪುಗಳು. ಇಸ್ಲಾಂ ಸಂಸ್ಕೃತಿ ಇದ್ದರೂ ಸಹ ಟರ್ಕಿಯಲ್ಲಿ ಮಹಿಳೆಯರು ಮುಸುಕು ಧರಿಸುವುದಿಲ್ಲ. ಆದರೆ ದೊಡ್ಡ ಸ್ಕಾರ್ಫ್‌ನಿಂದ ತಮ್ಮ ತಲೆ ಮತ್ತು ಬಾಯಿಯನ್ನು ಮುಚ್ಚಿಕೊಳ್ಳುತ್ತಾರೆ.
ಸಬಾಹ್, ಹುರಿಯೆಟ್, ಮಿಲಿಯೆಟ್, ಜಮಾನ್ ಎನ್ನುವ ಪತ್ರಿಕೆಗಳು ಟರ್ಕಿಯಲ್ಲಿ ಪ್ರಸಿದ್ಧವಾಗಿದ್ದು, ಇವುಗಳು ನೆಲೆಗೊಂಡಿರುವುದು ಇಸ್ತಾಂಬುಲ್‌ನಲ್ಲಿ. ನಾಲ್ಕು ರೇಡಿಯೋ ಚಾನೆಲ್‌ಗಳು ಮತ್ತು ಐದು ದೇಶೀಯ ದೂರದರ್ಶನ ಚಾನೆಲ್‌ಗಳಿವೆ. ಅಂತಾರಾಷ್ಟ್ರೀಯ ದೂರದರ್ಶನ ಚಾನೆಲ್ ಇರುವುದು ಒಂದೇ ಒಂದು. ಮಾಧ್ಯಮಗಳನ್ನು ಸರ್ಕಾರ ನಿಯಂತ್ರಿಸುತ್ತದೆ. ಎಡಪಂಥೀಯ ವಿಚಾರಧಾರೆಗಳನ್ನು ಪತ್ರಿಕೆ, ರೇಡಿಯೋ, ಟಿ.ವಿ.ಗಳಲ್ಲಿ ಹರಡುವುದಕ್ಕೆ ನಿರ್ಬಂಧವಿದೆ.
ಪಾಶ್ಚಾತ್ಯ ಕಲಾ ಪ್ರಕಾರಗಳು ಟರ್ಕಿಯ ಸಾಂಪ್ರದಾಯಿಕ ಜಗತ್ತನ್ನು ಪ್ರವೇಶಿಸಿದ್ದು ಇಪ್ಪತ್ತನೇ ಶತಮಾನದಲ್ಲಿ. ಇದರ ಪರಿಣಾಮವಾಗಿ ಅನೇಕ ಸಾಹಿತಿಗಳು, ಕಲಾವಿದರು ಮತ್ತು ಸಂಗೀತಗಾರರು ಸಾಂಪ್ರದಾಯಿಕ ಇಸ್ಲಾಮಿಕ್ ಪದ್ಧತಿಗಳನ್ನು ತ್ಯಜಿಸಿದರು. ಆದರೆ ಹಲವರು ಪರಂಪರೆ ಮತ್ತು ಪಾಶ್ಚಾತ್ಯ ಶೈಲಿಗಳೆರಡನ್ನೂ ಒಗ್ಗೂಡಿಸುವ ಪ್ರಯತ್ನ ನಡೆಸಿದ್ದಾರೆ. ಈ ಕಾರಣದಿಂದಾಗಿ ಆಧುನಿಕ ಸಾಹಿತ್ಯ ರಚನೆಗಳಲ್ಲಿ ಸ್ಥಳೀಯ ಭಾಷೆಯ ಬಳಕೆ ಕಂಡುಬರುತ್ತದೆ. ದೃಶ್ಯ ಕಲೆಗಳಲ್ಲಿ ಹಳ್ಳಿಯ ಸೊಗಡಿನ ಚಿತ್ರಣ ಕಾಣಸಿಗುತ್ತದೆ. ಜನಪ್ರಿಯತೆಯ ಜೊತೆಗೆ ರಾಷ್ಟ್ರೀಯ ಹಿತಾಸಕ್ತಿಗಳನ್ನೂ ಇರಿಸಿಕೊಳ್ಳಲಾಗಿದೆ. ಜಾನಪದ ಲಾವಣಿಗಳು ಹೊಸ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಪಾಶ್ಚಾತ್ಯ ಶೈಲಿಯ ರಂಗಮಂದಿರಗಳು, ಆರ್ಕೆಸ್ಟ್ರಾಗಳು ಅಭಿವೃದ್ಧಿ ಹೊಂದುತ್ತಿವೆ. ಟರ್ಕಿಯ ಜಾನಪದ ವಾದ್ಯಗಳಾಗಿ ಡ್ರಮ್ಸ್, ತುತ್ತೂರಿ, ಕೊಳಲು, ತಂಬೂರಿ, ವಯೋಲ್ಸ್ ಮತ್ತು ಸಿಂಬಲ್ಸ್ ಇವುಗಳನ್ನು ಗುರುತಿಸಬಹುದು. ಶ್ಯಾಡೋ ಪ್ಲೇ ಪ್ರಸಿದ್ಧವಾಗಿದೆ. ಒರ್ಟಾ ಒಯುನು ಎನ್ನುವುದು ಹಾಸ್ಯ ಪ್ರಧಾನವಾಗಿರುವ ರಂಗಪ್ರಕಾರವಾಗಿದೆ. ಟರ್ಕಿಯ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರಕಿದ್ದು 2006ರಲ್ಲಿ. ಕಾದಂಬರಿಕಾರ ಒರ್ಹಾನ್ ಪಾಮುಕ್ ಅವರಿಗೆ ನೋಬೆಲ್ ಗೌರವ ಒಲಿದುಬಂದಿತ್ತು. ಈ ಮೂಲಕ ಟರ್ಕಿಶ್ ಸಾಹಿತ್ಯ ಜಾಗತಿಕ ಮನ್ನಣೆಗೆ ಪಾತ್ರವಾಯಿತು. ಇಸ್ತಾಂಬುಲ್‌ನಲ್ಲಿರುವ ಅಕಾಡೆಮಿ ಆಫ್ ಫೈನ್ ಆರ್ಟ್ಸ್, ಅಂಕಾರಾದಲ್ಲಿರುವ ನ್ಯಾಷನಲ್ ಫೋಕ್‌ಲೋರ್ ಆರ್ಗನೈಜೇ಼ಶನ್, ಇಸ್ತಾಂಬುಲ್‌ನ ಫೋಕ್‌ಲೋರ್ ಸೊಸೈಟಿ ಮೊದಲಾದವು ಸಂಸ್ಕೃತಿ ಬೆಳವಣಿಗೆಯ ಉದ್ದೇಶ ಹೊತ್ತ ಸಂಸ್ಥೆಗಳು. ಅಂಕಾರಾ, ಇಸ್ತಾಂಬುಲ್ ಮತ್ತು ಇಜ್ಮಿ಼ರ್‌ನಲ್ಲಿ ವಸ್ತುಸಂಗ್ರಹಾಲಯಗಳಿವೆ. ಇಸ್ತಾಂಬುಲ್‌ನಲ್ಲಿ ಟರ್ಕಿಶ್ ಆ್ಯಂಡ್ ಇಸ್ಲಾಮಿಕ್ ಆರ್ಟ್ ಮ್ಯೂಸಿಯಂ ಇದೆ. ರಾಷ್ಟ್ರೀಯ ಗ್ರಂಥಾಲಯವಿರುವುದು ಅಂಕಾರಾದಲ್ಲಿ.
ಪುರುಷರು ಮತ್ತು ಮಹಿಳೆಯರು ಮುಸ್ಲಿಂ ಧರ್ಮಕ್ಕೆ ಬದ್ಧರಾಗಿರಬೇಕು. ದಿನಕ್ಕೆ ಐದು ಬಾರಿ ನಮಾಜ಼್ ಮಾಡಬೇಕು. ರಂಜಾನ್ ತಿಂಗಳಲ್ಲಿ ಉಪವಾಸ ಕಡ್ಡಾಯ. ಸಾಧ್ಯವಾದರೆ, ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಮೆಕ್ಕಾಗೆ ಭೇಟಿ ನೀಡಬೇಕು. ಹೀಗೆ ಕೆಲವು ಧಾರ್ಮಿಕ ನಿಯಮಾವಳಿಗಳನ್ನು ಟರ್ಕಿಯಲ್ಲಿ ಕಾಣಬಹುದು. ಕ್ರಿಶ್ಚಿಯನ್ ಮತ್ತು ಜುದಾಯಿಸಂ ಧರ್ಮಗಳೂ ಟರ್ಕಿಯಲ್ಲಿ ಕಂಡುಬರುತ್ತವೆ.
ಟರ್ಕಿಯ ಗ್ರಾಮೀಣ ಪ್ರದೇಶಗಳಲ್ಲಿ ಪುರುಷರು ಮತ್ತು ಮಹಿಳೆಯರು ತಮ್ಮದೇ ಆದ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಅಲ್ಲಿಯ ಪುರುಷರು ಕೃಷಿಗೆ ಸಂಬಂಧಪಟ್ಟ ಕೆಲಸಗಳನ್ನು ನಿರ್ವಹಿಸುತ್ತಾರೆ. ಮಹಿಳೆಯರು ಮನೆಯ ಒಳಗಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ. ಮಹಿಳೆಯರು ಪುರುಷರಿಗೆ ಮೀಸಲಾದ ಕೆಲಸಗಳನ್ನು ಮಾಡಬಹುದು. ಆದರೆ ಪುರುಷರು ಮಹಿಳೆಯರ ಕೆಲಸಗಳನ್ನು ಯಾವ ಕಾರಣಕ್ಕೂ ಮಾಡುವುದಿಲ್ಲ. ಇದರಿಂದಾಗಿ ಮಹಿಳೆಯರ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ಪುರುಷರು ಮಹಿಳೆಯರ ಮೇಲೆ ಹೆಚ್ಚು ಅವಲಂಬಿತರಾಗುವಂತಾಗಿದೆ. ಆದರೆ ನಗರ ಪ್ರದೇಶಗಳಲ್ಲಿ ಇಂತಹ ಲಿಂಗಾಧಾರಿತ ನಿರ್ಬಂಧಗಳು ಇಲ್ಲ. ಅವರು ತಮ್ಮ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. 1930ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ಇದಾಗಿ ಐದೇ ವರ್ಷಗಳಲ್ಲಿ ಅಲ್ಲಿನ ಮಹಿಳೆಯರು ಸಂಸತ್ ಪ್ರವೇಶಿಸಿದರು. 1990ರ ಹೊತ್ತಿಗೆ ದೇಶದ ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದವರು ಒಬ್ಬ ಮಹಿಳೆ. ಇಂದು ಕಲೆ, ವಿಜ್ಞಾನ, ಸಮಾಜಸೇವೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಟರ್ಕಿಯ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ.
ಟರ್ಕಿಯ ಜನರು ಬಿಳಿಯ ಬದನೆ, ಆಲಿವ್ ಮತ್ತು ಮೊಸರನ್ನು ಅಧಿಕ ಪ್ರಮಾಣದಲ್ಲಿ ಸೇವಿಸುತ್ತಾರೆ. ಕಡಲೆಯನ್ನು ಸುಟ್ಟು ಅಥವಾ ಪುಡಿಮಾಡಿ ತಿನ್ನುತ್ತಾರೆ. ಮಾಂಸಾಹಾರದಲ್ಲಿ ಕುರಿಮರಿಯ ಮಾಂಸ ಪ್ರಧಾನವಾಗಿದೆ. ಆಹಾರ ಸೇವನೆಗೂ ಮೊದಲು ಹಸಿವನ್ನು ಹೆಚ್ಚುಗೊಳಿಸುವ ಖಾದ್ಯ ವಿಶೇಷಗಳನ್ನು ಕೊಡುವ ಸಂಪ್ರದಾಯ ಇಲ್ಲಿದೆ. ಈ ಬಗೆಯ ಸಂಪ್ರದಾಯ ಟರ್ಕಿಯಲ್ಲಿ ಮಾತ್ರವಲ್ಲದೆ, ರೊಮೇನಿಯಾ, ಗ್ರೀಕ್, ಅರೇಬಿಯಾ ಮೊದಲಾದ ಇತರ ಮಧ್ಯಪ್ರಾಚ್ಯ ದೇಶಗಳಲ್ಲಿಯೂ ಕಂಡುಬರುತ್ತದೆ. ಇದನ್ನು ಅರೇಬಿಯಾದಲ್ಲಿ ಮಜ್ಜಾ ಎಂದೂ, ಗ್ರೀಕ್‌ನಲ್ಲಿ ಮೆಝೆಥಕಿಯಾ ಎಂದೂ, ರೊಮೇನಿಯಾದಲ್ಲಿ ಮೆಜೆಲಿಕುರಿ ಎಂದೂ ಕರೆಯಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಇದನ್ನು ‘ಅಪೆಟೈಝ಼ರ್’ ಎನ್ನುತ್ತಾರೆ. ಬಕ್ಲಾವಾ, ಬೋಜಾ ಎಂಬೆರಡು ಖಾದ್ಯ ವಿಶೇಷಗಳು ಟರ್ಕಿಯದ್ದು. ಬಕ್ಲಾವಾ ಎನ್ನುವುದು ಫಿಲೋ ಹಿಟ್ಟು ಮತ್ತು ಕಾಳುಗಳಿಂದ ಮಾಡಿದ ಸಿಹಿತಿಂಡಿಯಾದರೆ, ಹುರಿದ ಕಡಲೆ, ಜೋಳ, ಗೋಧಿಯಿರುವ ಮಾಲ್ಟ್ ತರಹದ ಪಾನೀಯವನ್ನು ಬೋಜಾ ಎನ್ನಲಾಗುತ್ತದೆ. ಡಾಲ್ಮಾ ಎನ್ನುವ ಭಕ್ಷ್ಯವು ಟರ್ಕಿಯಲ್ಲಿ ಬಹಳ ಜನಪ್ರಿಯ. ಅಕ್ಕಿ ಮತ್ತು ಮಾಂಸದ ಹೂರಣವನ್ನು ಎಲೆಕೋಸಿನ ಎಲೆಯ ಒಳಗೆ ಇರಿಸಿ ಮಾಡಿದ ವಿಶೇಷ ಆಹಾರವಿದು. ಇದೇ ರೀತಿಯಲ್ಲಿ ಶಿಶ್ ಕಬಾಬ್ ಪ್ರಸಿದ್ಧವಾಗಿದೆ. ಲೋಕಮ್ ಅಥವಾ ಟರ್ಕಿಶ್ ಡಿಲೈಟ್ ಎನ್ನುವುದು ರಸಭರಿತವಾದ ಸಕ್ಕರೆ ಮಿಠಾಯಿಯಾಗಿದೆ. ಟರ್ಕಿಯ ಜನರು ಕಾಫಿಯನ್ನು ಎಷ್ಟು ಇಷ್ಟಪಡುತ್ತಾರೆಂದರೆ ಗಂಡ ಕಾಫಿಯನ್ನು ಕೊಡದಿದ್ದರೆ ಹೆಂಡತಿ ಅವನಿಂದ ಬೇರೆಯಾಗಬಹುದು ಎನ್ನುವ ವಿಚಿತ್ರ ಕಾನೂನು ಈ ದೇಶದಲ್ಲಿತ್ತು. ಕಾಫಿ ಕೊಡದ ಗಂಡನಿಂದ ಹೆಣ್ಣು ವಿಚ್ಛೇದನ ಪಡೆದುಕೊಳ್ಳಬಹುದು ಎನ್ನುವ ನಿಯಮ ಅಸ್ತಿತ್ವದಲ್ಲಿದ್ದದ್ದು ಹಿಂದಿನ ಒಟ್ಟೋಮನ್ ಸಾಮ್ರಾಜ್ಯದ ಕಾಲಘಟ್ಟದಲ್ಲಿ.
ಟರ್ಕಿಯ ಜನರ ನೆಚ್ಚಿನ ಕ್ರೀಡೆ ಫುಟ್‌ಬಾಲ್. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಈ ಕ್ರೀಡೆಯು ಈ ಪ್ರದೇಶಕ್ಕೆ ಪರಿಚಯಿಸಲ್ಪಟ್ಟಿತು. ಬಂಡಾಯ ಚಟುವಟಿಕೆಗಳಿಗೂ ಫುಟ್‌ಬಾಲ್ ಆಟಕ್ಕೂ ಸಂಬಂಧವಿದೆ ಎಂಬ ತಪ್ಪು ಗ್ರಹಿಕೆಗೆ ಒಳಗಾದ ಒಟ್ಟೋಮನ್ ಆಡಳಿತಗಾರರು ಈ ಆಟವನ್ನು ದೇಶದಲ್ಲಿ ನಿಗ್ರಹಿಸುವ ಪ್ರಯತ್ನ ನಡೆಸಿದರು. ಆದರೆ ಈ ನಿಷೇಧ ಹೆಚ್ಚು ಸಮಯ ಮುಂದುವರಿಯಲಿಲ್ಲ. ಫುಟ್‌ಬಾಲ್ ಬೆಳವಣಿಗೆಗಾಗಿ 1923ರಲ್ಲಿ ರಚನೆಯಾದ ರಾಷ್ಟ್ರೀಯ ಒಕ್ಕೂಟವು ಆ ಬಳಿಕದ ಕಾಲಘಟ್ಟದಲ್ಲಿ ದಿ ಇಂಟರ್‌ನ್ಯಾಶನಲ್ ಫೆಡರೇಶನ್ ಆಫ್ ಫುಟ್‌ಬಾಲ್ ಅಸೋಸಿಯೇಷನ್ ಜೊತೆಗೆ ಸೇರಿಕೊಂಡಿತು. ಟರ್ಕಿ ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊದಲು ಕಾಣಿಸಿಕೊಂಡದ್ದು 1954ರ ವೇಳೆಗೆ. ಟರ್ಕಿಯಲ್ಲಿ ಜನಪ್ರಿಯವಾಗಿರುವ ಇನ್ನೊಂದು ಕ್ರೀಡೆಯೆಂದರೆ ಅದು ಎಣ್ಣೆ ಕುಸ್ತಿ. ಎಣ್ಣೆ ಹಚ್ಚಿಕೊಂಡ ಬಲಾಢ್ಯರು ಒಬ್ಬರು ಇನ್ನೊಬ್ಬರನ್ನು ಮಣಿಸುವ ಛಲ ಹೊತ್ತು ಕುಸ್ತಿ ಆಡುವುದನ್ನು ನೋಡುವುದು ಬಹು ರೋಮಾಂಚಕವಾಗಿರುತ್ತದೆ. ಸುಮಾರು ಅರುವತ್ತು ವರ್ಷಗಳಿಂದ ಟರ್ಕಿಯಲ್ಲಿ ಈ ಕುಸ್ತಿಯ ತರಬೇತಿ ನೀಡಲಾಗುತ್ತಿದೆ. ಟರ್ಕಿ 1908ರಲ್ಲಿಯೇ ಒಲಿಂಪಿಕ್‌ಗೆ ಪದಾರ್ಪಣೆ ಮಾಡಿತ್ತು. ಆ್ಯಥ್ಲೆಟಿಕ್ಸ್, ಬಾಕ್ಸಿಂಗ್, ಜಿಮ್ನ್ಯಾಸ್ಟಿಕ್ ಮೊದಲಾದವುಗಳಲ್ಲಿ ಟರ್ಕಿ ಉತ್ತಮವಾಗಿಯೇ ಗುರುತಿಸಿಕೊಂಡಿದೆ. ಆದರೆ ಹೆಚ್ಚು ಪದಕಗಳು ದೊರೆತಿರುವುದು ಕುಸ್ತಿಯಲ್ಲಿ.
ಪ್ರವಾಸೋದ್ಯಮವು ಟರ್ಕಿಯ ಪ್ರಮುಖ ಆದಾಯ ಮೂಲವಾಗಿದೆ. ಪ್ರವಾಸೋದ್ಯಮದಲ್ಲಿ ಈ ದೇಶ ಜಗತ್ತಿನಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಇಪ್ಪತ್ತೊಂದು ವಿಶ್ವ ಪಾರಂಪರಿಕ ತಾಣಗಳಿದ್ದು, ವಿಶ್ವದೆಲ್ಲೆಡೆಯ ಜನರನ್ನು ಸೆಳೆಯುತ್ತಿವೆ. ಜೊತೆಗೆ ವೈದ್ಯಕೀಯ ಉದ್ದೇಶಗಳನ್ನಿಟ್ಟುಕೊಂಡು ಇಲ್ಲಿಗೆ ಆಗಮಿಸುವ ಪ್ರವಾಸಿಗಳೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವರ್ಷದಲ್ಲಿ ಸುಮಾರು ನೂರು ಕೋಟಿ ಡಾಲರ್‌ಗಳನ್ನು ವೈದ್ಯಕೀಯ ಪ್ರವಾಸೋದ್ಯಮದಿಂದಲೇ ಗಳಿಸುತ್ತಿದೆ ಟರ್ಕಿ. ಇಲ್ಲಿ ಇಪ್ಪತ್ತನೇ ಶತಮಾನದ ಆರಂಭದಿಂದಲೇ ವೇಶ್ಯಾವಾಟಿಕೆಯು ಕಾನೂನುಬದ್ಧಗೊಂಡಿದೆ. ಇದರಿಂದಾಗಿ ಲೈಂಗಿಕ ಪ್ರವಾಸೋದ್ಯಮವೂ ಕೂಡಾ ಪ್ರಮುಖ ಸ್ಥಾನ ಗಳಿಸಿಕೊಂಡಿದೆ.
ಅಭಿವೃದ್ಧಿಯ ಕಡೆಗೆ ಮುಖ ಮಾಡಿರುವ ಟರ್ಕಿ ಬದಲಾಗುತ್ತಿದೆ. ಅಲ್ಲಿಯ ಸಮಾಜ, ಆರ್ಥಿಕತೆ, ಆಡಳಿತ ವ್ಯವಸ್ಥೆ ಈ ಎಲ್ಲದರಲ್ಲಿಯೂ ಗಮನಾರ್ಹವಾದ ಪರಿವರ್ತನೆ ಕಂಡುಬರುತ್ತಿದೆ. ನಗರಗಳಲ್ಲಿ ಉದ್ಯೋಗ ದೊರಕುವ ಸಾಧ್ಯತೆ ಹೆಚ್ಚು. ಹೀಗಾಗಿ ಹಳ್ಳಿಯ ಯುವಕರು ನಗರಗಳತ್ತ ತೆರಳುತ್ತಿದ್ದಾರೆ. ಹೀಗೆ ನಗರಕ್ಕೆ ತೆರಳಿದವರ ಕುಟುಂಬದವರು ಹಳ್ಳಿಯಲ್ಲೇ ಉಳಿದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ. ಕೆಲವು ಕುಟುಂಬಗಳು ಉದ್ಯೋಗ ದೊರೆತ ತಕ್ಷಣ ಹಳ್ಳಿಯನ್ನು ಸಂಪೂರ್ಣವಾಗಿ ತೊರೆದು ನಗರದಲ್ಲಿಯೇ ನೆಲೆ ನಿಲ್ಲುತ್ತಿದ್ದಾರೆ. ಹೀಗೆ ಔದ್ಯೋಗಿಕ ಅವಶ್ಯಕತೆಯು ಟರ್ಕಿಯ ಗ್ರಾಮೀಣ ಸ್ವರೂಪವನ್ನು ಬದಲಾಯಿಸಿದೆ. ಜಾತ್ಯತೀತ ಭಾವನೆ ಅಲ್ಲಲ್ಲಿ ಜಾಗೃತಗೊಳ್ಳುತ್ತಿದೆ. ಆಧುನೀಕರಣವು ಗ್ರಾಮೀಣ ಪ್ರದೇಶಗಳನ್ನೂ ಪ್ರವೇಶಿಸಿದೆ. ಶಿಕ್ಷಣದ ಪರಿಚಯವಾಗುತ್ತಿದೆ. ಇದು ನಿಜಕ್ಕೂ ಸಂತಸದ ಸಂಗತಿ.
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.