ನಾವು ಅಲ್ಲಿಗೆ ಹೋಗಿ ತಾಸು ಹೊತ್ತಿನ ಮೇಲೆ ಒಂದೊಂದೇ ಆನೆಗಳು ಮೆಲ್ಲಗೆ ತಮ್ಮ ಮೇಲೆ ನಿಂತಿದ್ದ ಎರಡು-ಮೂರು ಜನ ಹಾಗೂ ಮಾವುತರೊಟ್ಟಿಗೆ, ದೇವಸ್ಥಾನದ ಒಳಗೆ ಹೊರಡಲಾರಂಭಿಸಿದವು. ಆಗ ನಮಗೆ ಮೂರ್ನಾಲ್ಕು ಆನೆಗಳನ್ನು ಹತ್ತಿರದಿಂದಲೇ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು. ಇನ್ನೇನು ಆ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಾಗ, ನಾವು ಮೆಲ್ಲನೆ ಅಲ್ಲಿಂದ ಹೊರಟು, ಕಾಂಪೌಂಡ್‌ನ ಇನ್ನೊಂದು ಬದಿಗೆ ಬಂದು, ಆನೆಗಳ ಸಾಲು ನಿಂತಿದ್ದಲ್ಲಿಗೆ ಹೋದಾಗ, ಅಲ್ಲಿ ಆಗಲೇ ಜನರ ಗುಂಪು ಮೆಲ್ಲನೆ ಕರಗಲಾರಂಭಿಸಿದ ಕಾರಣ, ಅಲ್ಲಿ ಇನ್ನೊಂದಷ್ಟು ಹತ್ತಿರದಿಂದ ಆನೆಗಳನ್ನು ಕಾಣಲು ಸಿಕ್ಕಿತು.
ಕೇರಳದ ತ್ರಿಶ್ಶೂರ್ ಪೂರಂ ಕುರಿತು ತಮ್ಮ ಅನುಭವಗಳನ್ನು ಬರೆದಿದ್ದಾರೆ ರೂಪಶ್ರೀ ಕಲ್ಲಿಗನೂರ್
ಸಮಯ ರಾತ್ರಿ ಮೂರು ಗಂಟೆಯಾಗಿರಬೇಕು. ಪ್ರಯಾಣದಲ್ಲಿ ಜೋರು ನಿದ್ದೆ ಹೋದವಳಿಗೆ ಏನೋ ಜೋರು ಸದ್ದು ಕೇಳಿಸಿತು. ಕಣ್ಬಿಟ್ಟು, ಆತುಕೊಂಡಿದ್ದ ಬಸ್ಸಿನ ಕಿಟಕಿಯತ್ತ ಕಣ್ಣು ಹೊರಳಿಸಿದರೆ ಧಾರಾಕಾರ ಮಳೆ.. ಬಸ್ಸು ಆಗ ಕ್ಯಾಲಿಕಟ್ ತಲುಪಿತ್ತಷ್ಟೇ. ವಾಚಿನ ಮೇಲೆ ಬೆರಳಾಡಿಸಿ ಸಮಯ ನೋಡಿಕೊಂಡರೆ ಬಸ್ಸು ತ್ರಿಶ್ಶೂರ್ ತಲುಪಲು ಇನ್ನೂ ಮೂರ್ನಾಲ್ಕು ಗಂಟೆಯಾದರೂ ಬೇಕಿದೆ ಎಂದು ತಿಳಿದು, ನಡು ರಾತ್ರಿಯಲ್ಲೂ… ತ್ರಿಶ್ಶೂರ್ ಪೂರಂ ಕತೆ ಅಷ್ಟೇನಾ ಹೇಗೆ… ಅಂತಂದುಕೊಳ್ಳುತ್ತಿರುವಾಗಲೆ ಮತ್ತೊಂದು ನಿದ್ದೆಗೆ ನಾನು ಜಾರಿಯಾಗಿತ್ತು.
ಬೆಳಗ್ಗೆ 6:30 ರ ಹೊತ್ತಿಗೆ ನಾವು ತ್ರಿಶ್ಶೂರ್ ತಲುಪಿದ್ದೆವು. ಎರಡು ಮೂರು ದಿನಗಳಿಂದ ಅಲ್ಲೆಲ್ಲ ಜೋರು ಮಳೆಯಾದ್ದರಿಂದ ತ್ರಿಶ್ಶೂರ್ ತೊಯ್ದು ತೊಪ್ಪೆಯಾದಂತೆ ಕಾಣಿಸುತ್ತಿತ್ತು. ನಾವು ತಂಗಲಿದ್ದ ಹೋಟೆಲ್ ಹುಡುಕೋಣವೆಂದು ಫೋನ್ ತೆಗೆದು ನೋಡಿದರೆ, ಮಳೆಗೆ ನೆಟ್ವರ್ಕ್ ಕೂಡ ತೀರ ಕಡಿಮೆಯಿತ್ತು. ಎಲ್ಲಿ ನೋಡಿದರೂ ನಮ್ಮಂತೆಯೆ ಹೆಗಲಿಗೆ ಒಂದೆರೆಡು ಬ್ಯಾಗುಗಳನ್ನ ಏರಿಸಿಕೊಂಡು ಆಕಡೆ ಈ ಕಡೆ ಎಂದು ತಿರುಗಾಡುತ್ತಿದ್ದ ಯುವಕ-ಯುವತಿಯರೇ ಕಾಣಿಸುತ್ತಿದ್ದರು. ಜೊತೆಗೆ ಸ್ಥಳೀಯ ಜನದಷ್ಟೇ ಪೋಲೀಸರ ಓಡಾಟವೂ ನಡೆಯುತ್ತಿತ್ತು. ರಾತ್ರಿಯ ಮಳೆಯಿನ್ನೂ ಸಂಪೂರ್ಣವಾಗಿ ನಿಂತಿರಲಿಲ್ಲ. ಹನಿ ಸಣ್ಣಗೆ ಜಿನುಗುತ್ತಲೇ ಇತ್ತು. ಛತ್ರಿ ಏರಿಸಬೇಕೋ ಬೇಡವೋ ಎನ್ನುವ ಗೊಂದಲದಲ್ಲಿದ್ದೆ ನಾನು. ಅದರ ನಡುವೆ ನೆಟ್ವರ್ಕ್ ಸಮಸ್ಯೆಯಿಂದ ಮ್ಯಾಪ್ ಸರಿಯಾಗಿ ಕೆಲಸ ಮಾಡದೇ ನಮ್ಮ ಲಾಡ್ಜ್ ಸಿಗುವುದು ಅಷ್ಟು ಸುಲಭ ಎನ್ನಿಸಲಿಲ್ಲ. ಹಾಗಾಗಿ ಆಟೋ ಹಿಡಿದು, ಒಂಚೂರು ಸುತ್ತಾಡಿ, ಹಾಗೂ ಹೀಗೂ ಲಾಡ್ಜ್ ತಲುಪಿದೆವು.
ರಸ್ತೆಯಲ್ಲಿ ಸಿಕ್ಕ ಒಂದಿಬ್ಬರನ್ನು ಕೇಳಿಯಾದ ಮೇಲೆ ಅವತ್ತು ಏಳು ಗಂಟೆಗೆಲ್ಲ ಪೂರಂ ಶುರುವಾಗಲಿದೆಯೆನ್ನುವ ಮಾಹಿತಿ ಸಿಕ್ಕಿತಾದರೂ, ನಮಗೆ ರೂಂ ಸಿಗುವುದು ತಡವಾಗಿ, ತಿಂಡಿ ತಿಂದು, ಸಿದ್ಧವಾಗಿ ದೇವಸ್ಥಾನದ ಬಳಿ ತೆರಳುವಷ್ಟರಲ್ಲಿ ಹತ್ತು ಗಂಟೆ ಆಗಿ ಹೋಗಿತ್ತು. ಲಾಡ್ಜ್‌ನಿಂದ ಸುಮಾರು ಮುಕ್ಕಾಲು ಕಿ.ಮೀ. ಇದ್ದ ದೇವಸ್ಥಾನಕ್ಕೆ ಅಲ್ಲಿಲ್ಲಿ ಸಿಕ್ಕ ಪೋಲೀಸರನ್ನು ದಾರಿ ಕೇಳಿಕೊಂಡು ಹೊರಟೆವು.
ಮಲಯಾಳಂ ಭಾಷೆಯಲ್ಲಿ ಪೂರಂ ಎಂದು ಕರೆಯಲಾಗುವ ಈ ತ್ರಿಶ್ಶೂರ್ ನ ಜಾತ್ರೆಗೆ ಜಗತ್ ಪ್ರಸಿದ್ಧಿ ಇದೆ. ಸುತ್ತಲ ಊರು, ಜಿಲ್ಲೆಗಳಷ್ಟೇ ಅಲ್ಲದೇ ಬೇರೆಬೇರೆ ದೇಶಗಳಿಂದಲೂ ಈ ಜಾತ್ರೆಯನ್ನು ನೋಡಲು ಜನರ ದಂಡು ಬರುತ್ತದೆ. ಈ ಆಚರಣೆ ನಡೆಯೋದು ತ್ರಿಶ್ಶೂರಿನ ವಡಕ್ಕುನ್ನಾಥನ್ ಅಂದರೆ ಶಿವನ ದೇವಸ್ಥಾನದ ಆವರಣದಲ್ಲಿ. ವಡಕ್ಕುನ್ನಾಥನ್ ದೇಗುಲದ ಆವರಣ ಬಹಳವೇ ವಿಶಾಲವಾಗಿದ್ದು ನಾಲ್ಕು ದಿಕ್ಕಿನಲ್ಲೂ ಜಾತ್ರೆಯ ಒಂದೊಂದು ಭಾಗ ಅಲ್ಲಲ್ಲಿ ನಡೆಯುತ್ತವೆ.
ನಾವು ಹತ್ತುಗಂಟೆಯ ಹೊತ್ತಿಗೆ ವಡಕ್ಕುನ್ನಾಥನ್ ದೇವಾಲಯ ತಲುಪಿದಾಗ ಅದಾಗಲೇ ಲಕ್ಷದಷ್ಟು ಜನ ಅಲ್ಲಿ ನೆರೆದು, ಸಂಭ್ರಮದಿಂದ ಆಚೀಚೆ ಓಡಾಡುತ್ತಿದ್ದರು. ಅಲ್ಲಿದ್ದ ಗೇಟಿನಿಂದ ಒಂದು ಇನ್ನೂರು ಮೀಟರ್ ದೇವಸ್ಥಾನದ ಆವರಣದೊಳಗೆ ನಡೆದರೆ, ದೇವಸ್ಥಾನದ ಮುಂಭಾಗದಲ್ಲೇ ಗಿಜಿಗಿಜಿ ಎನ್ನುವ ಜನಸ್ತೋಮ, ಒಬ್ಬರಿಗೊಬ್ಬರು ಅಂಟಿಕೊಂಡು ನಿಂತಿರುವುದನ್ನ ನೋಡಿಯೇ ನಾನು ದಂಗಾಗಿಹೋಗಿದ್ದೆ. ಸಾಮಾನ್ಯವಾಗಿ ನಾವು ಜನಜಂಗುಳಿ ಇರುವ ಸ್ಥಳಗಳಲ್ಲಿ ಓಡಾಡುವುದು ಕಡಿಮೆಯೇ ಆದರೂ ಇದೊಂದು ಜಾತ್ರೆ ನಮ್ಮನ್ನು ಬಹಳ ವರ್ಷದಿಂದ ಕೈ ಬೀಸಿ ಕರೆಯುತ್ತಲೇ ಇತ್ತು. ಹಾಗಾಗಿ ಗಟ್ಟಿ ಮನಸ್ಸು ಮಾಡಿ ಹೊರಟು ಬಂದಿದ್ದೆವು.
ದೇವಸ್ಥಾನದ ಎದುರುಗಡೆಯೇ ಇನ್ನೊಂದು ಆವರಣವಿದ್ದು ಅಲ್ಲೇ ಜನರೆಲ್ಲ ನೆರೆದದ್ದು. ಅದರ ಕೊನೆಗೆ, ಅಂದರೆ ದೇವಸ್ಥಾನಕ್ಕೆ ಮುಖಮಾಡಿಕೊಂಡು ಹದಿನೈದು ಆನೆಗಳ ಸಾಲು ನಿಂತಿದ್ದು ಅರ್ಧಂಬಂರ್ಧ ಕಾಣುತ್ತಿತ್ತು. ಇವೇ ಆನೆಗಳನ್ನ ಕಣ್ತುಂಬಿಕೊಳ್ಳಲೆಂದೇ ನಾವು ಇಷ್ಟು ದೂರ ಬಂದದ್ದರಿಂದ, ಆ ಗದ್ದಲವೂ ಕಣ್ಣಿಗೆ ಬಿದ್ದ ಆನೆಗಳೂ ರೋಮಾಂಚನ ಹುಟ್ಟಿಸಿದವು. ಆದರೂ ಜನರ ನೂಕುನುಗ್ಗಲಿನಲ್ಲಿ ಆನೆಗಳ ಸಂಪೂರ್ಣ ಚಿತ್ರಣ ನಮಗೆ ಕಾಣಸಿಗಲು ಹರಸಾಹಸ ಪಡಬೇಕಾಯ್ತು. ಮತ್ತೆ ಇಂಥ ಸಂದರ್ಭಗಳಿಗೆ ನಾವು ಒಂದಷ್ಟು ಸಿದ್ಧವಾಗೇ ಬಂದದ್ದರಿಂದ, ಜನರ ನಡುವೆ ತೂರಿಕೊಂಡು, ಅದಾಗಲೇ ತುಂಬಿಹೋಗಿದ್ದ, ಅಲ್ಲಿದ್ದ ಅಗಲವಾದ ಕಟ್ಟೆಯ ಮೇಲೆ ಹತ್ತಿ ಅದು ಹೇಗೋ ಜಾಗ ಹೊಂದಿಸಿಕೊಂಡು, ಜನರ ನಡುವೆ ತೂರಿಕೊಂಡು ಅತ್ತಿತ್ತ ಕಣ್ಣಾಯಿಸಲು ನೋಡಿದರೆ, ನನ್ನ ಮುಂದಿದ್ದ ಜನರ ಭುಜಗಳನ್ನು ಬಿಟ್ಟರೆ ನನಗೆ ಬೇರೇನೂ ಕಾಣುತ್ತಿಲ್ಲ…! ೫.೧ ಅಡಿಯ ನಾನು, ಜನರ ನಡುವೆ ತೂರಿಕೊಂಡು, ಕಾಲು ಕಿ.ಮಿ. ದೂರದಲ್ಲಿರುವ ಆನೆಯ ಸಾಲನ್ನು ನೋಡಲು ಬಂದಿರುವೆನಲ್ಲ ಎಂದು ನನ್ನ ಬಗ್ಗೆ ನಗುವೂ, ಕನಿಕರವೂ ಒಟ್ಟಿಗೇ ಆಯ್ತು. ಆಮೇಲಾಮೇಲೆ.. ಜನ ಆಚೀಚೆ ಚೂರುಚೂರೇ ಸರಿದಾಡಿದಂತೆ ಆನೆಗಳ ಸಾಲು ಕಂಡು ನಿಜಕ್ಕೂ ನಾವು ತ್ರಿಶ್ಶೂರ್ ಪೂರಂಗೆ ಬಂದೇಬಿಟ್ಟೆವಾ ಅನ್ನಿಸಿ ಮನಸ್ಸೆಲ್ಲ ಖುಷಿಯಾಯಿತು. ಆನೆಗಳ ಸಾಲಿನ ಮುಂದೆ ತಾಳ, ಕಹಳೆ, ಟ್ರಂಪೆಟ್, ಥಿಮಿಲ ಮತ್ತು ಚಂಡೆ ವಾದ್ಯದ ಮೇಳ ನಿರಂತರವಾಗಿ ನಡೆಯುತ್ತಲೇ ಇತ್ತು. ಆ ಮೇಳದ ಮುಂದೆ, ಮೇಳದ ತಾಳಕ್ಕೆ ತಕ್ಕಂತೆ, ಯುವಕರು ಮುದುಕರು ಎನ್ನದೇ ಜನರು ಕುಣಿಯುತ್ತಿದ್ದುದನ್ನು ನೋಡಿಯೇ ನನ್ನ ಮನಸ್ಸು ಅರಳಿತು… ಅದೊಂದು ನೋಡಲೇಬೇಕಾದ ಕ್ಷಣ. ಬದುಕು ನಮಗೆ ಏನೆಲ್ಲ ಕೊಡುತ್ತದೆ… ಏನೆಲ್ಲವನ್ನು ಕಿತ್ತುಕೊಳ್ಳುತ್ತದೆ.. ಆದರೆ ನಾವು ಆ ಎಲ್ಲ ಸವಾಲುಗಳಿಗೆ ಬೆನ್ನೊಡ್ಡಿ ಬದುಕನ್ನು ಸಂಭ್ರಮಿಸಬೇಕು… ಅದೇ ಸಾಗರದಲ್ಲೇ ಈಜಬೇಕಲ್ಲವಾ ಅಂತನ್ನಿಸಿ, ನನ್ನ ಕೈಕಾಲುಗಳೂ ಆ ತಾಳಕ್ಕೆ ಕುಣಿಯಲಾರಂಭಿಸಿದವು. ಅದೊಂದು ದಿವ್ಯ ಅನುಭೂತಿ… ಸಂತೆಯಲ್ಲಿ ನಿಂತು ನಮ್ಮದೇ ಲೋಕದಲ್ಲಿ ಚಂಡೆಯ ನಾದಕ್ಕೆ ಮೈಮನಸ್ಸುಗಳನ್ನು ಕುಣಿಸುವುದು…
ನಾವು ಅಲ್ಲಿಗೆ ಹೋಗಿ ತಾಸು ಹೊತ್ತಿನ ಮೇಲೆ ಒಂದೊಂದೇ ಆನೆಗಳು ಮೆಲ್ಲಗೆ ತಮ್ಮ ಮೇಲೆ ನಿಂತಿದ್ದ ಎರಡು-ಮೂರು ಜನ ಹಾಗೂ ಮಾವುತರೊಟ್ಟಿಗೆ, ದೇವಸ್ಥಾನದ ಒಳಗೆ ಹೊರಡಲಾರಂಭಿಸಿದವು. ಆಗ ನಮಗೆ ಮೂರ್ನಾಲ್ಕು ಆನೆಗಳನ್ನು ಹತ್ತಿರದಿಂದಲೇ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿತು. ಇನ್ನೇನು ಆ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಾಗ, ನಾವು ಮೆಲ್ಲನೆ ಅಲ್ಲಿಂದ ಹೊರಟು, ಕಾಂಪೌಂಡ್‌ನ ಇನ್ನೊಂದು ಬದಿಗೆ ಬಂದು, ಆನೆಗಳ ಸಾಲು ನಿಂತಿದ್ದಲ್ಲಿಗೆ ಹೋದಾಗ, ಅಲ್ಲಿ ಆಗಲೇ ಜನರ ಗುಂಪು ಮೆಲ್ಲನೆ ಕರಗಲಾರಂಭಿಸಿದ ಕಾರಣ, ಅಲ್ಲಿ ಇನ್ನೊಂದಷ್ಟು ಹತ್ತಿರದಿಂದ ಆನೆಗಳನ್ನು ಕಾಣಲು ಸಿಕ್ಕಿತು. ಆಗ ಆನೆಗಳ ಸಿಂಗಾರ, ಆನೆ ಮೇಲೆ ಕುಳಿತಿದ್ದ ಜನರ ಹಾವಭಾವಗಳು ಮತ್ತು ಆನೆಗಳು ಅದೆಷ್ಟು ಸೂಕ್ಷ್ಮವಾಗಿ ತಮ್ಮ ಮುಂದೆ ನಡೆಯುತ್ತಿದ್ದ ಲಕ್ಷಲಕ್ಷ ಜನರಿಂದ ತುಂಬಿ ತುಳುಕುತ್ತಿದ್ದ ಈ ಜಾತ್ರೆಯನ್ನು ಸಮಾಧಾನದಿಂದ ನೋಡುತ್ತಿವೆಯಲ್ಲ ಎಂದು ಅಚ್ಚರಿಯಾಯಿತು.
ಅಲ್ಲಿನ ಕಾರ್ಯಕ್ರಮ ಮುಗಿದದ್ದೇ ದೇವಸ್ಥಾನದ ಆವರಣದಲ್ಲಿ ಒಂದಷ್ಟು ಹೊತ್ತು ಅಲ್ಲಿ ಇಲ್ಲಿ ಎಂದು ಓಡಾಡಿದೆವು. ಮುಂದಿನ ಕಾರ್ಯಕ್ರಮ ಏನು ಎತ್ತ ಎಂದು ಎಲ್ಲೂ ಮಾರ್ಗ ಸೂಚಿ ಇದ್ದದ್ದು ಕಂಡಿರಲಿಲ್ಲ. ಹಾಗಾಗಿ ಆದಷ್ಟೂ ಸ್ಥಳೀಯ ಹಿರಿಕ ಜನರನ್ನು ಹುಡುಕಿ ಮಾಹಿತಿ ಕೇಳಿಕೊಳ್ಳುತ್ತಿದ್ದೆವು. ಅದರಲ್ಲೂ ಖತಿತತೆಗಾಗಿ ಕನಿಷ್ಠ ಇಬ್ಬರಲ್ಲಿ ವಿಚಾರಿಸುತ್ತಿದ್ದೆವು.
ಹಾಗೆ ಮುಂದಿನ ಕಾರ್ಯಕ್ರಮ ಎರಡು ಗಂಟೆಗೆ, ಅಲ್ಲೇ ಇನ್ನೊಂದು ದಿಕ್ಕಿನ ಗೇಟಿನ ಮುಂದೆ ಅಂತ ತಿಳಿದು ಆದಷ್ಟೂ ಅದೇ ಜಾಗದಲ್ಲಿ ಸ್ಥಳಾವಕಾಶ ನೋಡಿಕೊಂಡು ನಿಂತುಕೊಂಡೆವು. ಗೇಟಿನ ಎದುರುಗಡೆಯ ರಸ್ತೆಯ ಕೊನೆಗೆ ಆನೆಯ ಸಾಲು ನಿಂತದ್ದು ಕಾಣಿಸಿ, ಅದು ಗೇಟಿನತ್ತ ಬರಬಹುದೆಂದುಕೊಂಡು ಕಾಯಲಾರಂಭಿಸಿದರೆ ಎಷ್ಟು ಹೊತ್ತಾದರೂ ಆನೆಗಳು ಒಂದಿಷ್ಟೂ ಅಲುಗಾಡುತ್ತಿರುವಂತೆ ಕಾಣಲಿಲ್ಲ. ಮತ್ತೆ ಈ ಕಾರ್ಯಕ್ರಮ ಶುರುವಾದರೆ ಏನಿಲ್ಲವೆಂದರೂ ಸಾಕಷ್ಟು ಸಮಯ ಅಲ್ಲೇ ಕಳೆಯಬೇಕಾಗುತ್ತದೆ ಎನ್ನುವುದು ಅದಾಗಲೇ ತಿಳಿದಿತ್ತು. ಹಾಗಾಗಿ ಬೆಳಗ್ಗಿನ ತಿಂಡಿ ಸರಿಯಾಗಿ ಆಗಿಲ್ಲದೇ ಇದ್ದಿದ್ದರಿಂದ, ಒಂದಷ್ಟು ಏನನ್ನಾದರೂ ಹೊಟ್ಟೆಗೆ ಹಾಕಿಕೊಳ್ಳಬೇಕೆಂದು ಅನ್ನಿಸಿ ದೇವಸ್ಥಾನದ ಎದುರಿಗಿದ್ದ ಒಂದಷ್ಟು ಅಂಗಡಿಗಳತ್ತ ಓಡಾಡಿ, ಅಲ್ಲಿಯೇ ಸಿಕ್ಕ ಹೊಸ ಹೋಟೆಲ್ ನಲ್ಲಿ ಬ್ರೆಡ್ ಹಾಗೂ ಬಾಳೆಹಣ್ಣು ಬಜ್ಜಿಯನ್ನು ಹೊಟ್ಟೆಗಿಳಿಸಿಕೊಂಡು, ಟೀ ಕುಡಿದು, ಮತ್ತೆ ಗೇಟಿನತ್ತ ಹೋಗಿ ಆನೆಗಳ ಬರುವಿಕೆಗೆ ಕಾಯುತ್ತ ನಿಂತೆವು. ಅದಾಗಲೇ ಒಂದಷ್ಟು ಜನ ಗೇಟಿನ ಬಳಿ ನೆರೆಯಲಾರಂಭಿಸಿದ್ದರು. ದೂರದಲ್ಲಿ ಆನೆಗಳ ಸಾಲು ಒಂದಿಂಚು ಕದಲಿರಬಹುದು ಎನ್ನಿಸಿದಂತಾಗಿ, ಕಾಯುವಿಕೆಗೆ ಒಂದಷ್ಟು ಭರವಸೆ ಬಂದಿತ್ತು. ಆದರೂ ತಾಸುಗಟ್ಟಲೇ ಕಾದಮೇಲೆಯೆ ಗೇಟಿನ ಬಲಭಾಗದಿಂದ ನಾಲ್ಕು ಆನೆಗಳು ಒಂದೊಂದಾಗಿ ಬಂದು, ರಸ್ತೆಗೆ ಅಡ್ಡಲಾಗಿ ನಿಂತುಕೊಂಡವು. ಅವು ಬಂದು ಏನಿಲ್ಲವೆಂದರೂ ಅರ್ಧ ಮುಕ್ಕಾಲು ತಾಸಿನ ನಂತರ, ಎದುರುಗಡೆಯಿಂದ ಮೂರು ಆನೆಗಳು ಬಂದು, ಈ ನಾಲ್ಕು ಆನೆಯನ್ನು ಸೇರಿಕೊಂಡು ಒಂದಷ್ಟು ಹೊತ್ತು ನಿಂತುಕೊಂಡ ಸಮಯ ನಾವು ಅವುಗಳಿಗೆ ಸಾಕಷ್ಟು ಸಮೀಪದಲ್ಲಿದ್ದೆವು. ಹಾಗಾಗಿ ಅದೊಂದು ರೋಮಾಂಚಕ ಅನುಭೂತಿ. ಅಲ್ಲಿ ನಿಂತು ಒಂದಷ್ಟು ಹೊತ್ತಾದ ಮೇಲೆ, ಒಂದೊಂದೇ ಆನೆಗಳು, ಗೇಟಿನ ಬಲಭಾಗದ ರಸ್ತೆಯಲ್ಲಿ ನಡೆದುಕೊಂಡು ದೇವಸ್ಥಾನಕ್ಕೆ ತೆರಳಿದವು.
ಇದಾದ ಮೇಲೆ ಮುಂದಿನ ಕಾರ್ಯಕ್ರಮ ಕೊಡಮ್ಮಾಟಂ ಎಂದು ತಿಳಿಯಿತು. ಒಂದೂವರೆ ದಿನ ನಡೆಯುವ ತ್ರಿಶ್ಶೂರ್ ಪೂರಂನ ಮುಖ್ಯ ಕಾರ್ಯಕ್ರಮ ಇದು. ಕೊಡಮ್ಮಾಟಂ ಎಂದರೆ ಕೊಡೆಗಳನ್ನು ಬದಲಾಯಿಸುವುದು ಎಂದು. ಎರಡು ಬದಿ, ತಲಾ ಹದಿನೈದು ಆನೆಗಳು ನಿಂತು, ಬಣ್ಣಬಣ್ಣದ ಕೊಡೆಗಳನ್ನು ಪ್ರದರ್ಶಿಸುವುದು ರೂಢಿ. ಅದು ಎಷ್ಟು ಗಂಟೆಗೆ ನಡೆಯಬಹುದೆಂದು ನಮಗೆ ಸರಿಯಾಗಿ ಮಾಹಿತಿ ಸಿಗಲಿಲ್ಲ. ಆಗ ಗಂಟೆ ಎರಡಾಗಿದ್ದಿರಬೇಕಷ್ಟೇ.. ನೋಡನೋಡುತ್ತಲೆ ಮೆಲ್ಲಗೆ, ದೇವಸ್ಥಾನದ ಮುಂಭಾಗದ—? ಗೇಟಿನ, ಅಗಲವಾದ ರಸ್ತೆಯ ಇಕ್ಕೆಲಗಳಲ್ಲಿ ಜನಸಂದಣಿ ಸೇರಲಾರಂಭಿಸಿತ್ತು. ದೇವಸ್ಥಾನದ ಮುಂಭಾಗದ ರಸ್ತೆಯಿಂದ ಕಾಲು ಕಿಮಿ ಆಚೆಗೆ. ಅಲ್ಲಾಗಲೇ ಜನ ತುಂಬಿ ತುಳುಕುತ್ತಿದ್ದರು. ನಾವು ಏನಾಗುತ್ತಿದೆಯಿಲ್ಲಿ ಎಂದು ನೋಡುವಷ್ಟರಲ್ಲಾಗಲೇ ಎಲ್ಲ ಕಡೆಯೂ ಜನ ಕಿಕ್ಕಿರಿದು ತುಂಬಿಯಾಗಿತ್ತು. ಅರೆರೆ… ಏನಿದು.. ನಾವು ನಿಲ್ಲೋದಾದ್ರೂ ಎಲ್ಲಿ.. ಏನು ಕತೆ ಎಂದು ನೋಡುತ್ತಲೇ ರಸ್ತೆಯ ಆ ಎರಡೂ ಬದಿಯಲ್ಲಿ ಎಲ್ಲಾದರೂ ನಿಲ್ಲಲು ಜಾಗ ಸಿಕ್ಕಬಹುದ ಎಂದು ನೋಡುತ್ತ, ಜನರ ಸಂದಣಿಯನ್ನು ಸೀಳಿಕೊಂಡು ಮುಂದೆ ಮುಂದೆ ಹೋಗತೊಡಗಿದೆವು. ಊಹೂಂ… ರಸ್ತೆ, ಫುಟ್‌ಪಾತುಗಳ ಇಂಚಿಂಚೂ ಮನುಷ್ಯರಿಂದ ತುಂಬಿ ಹೋಗಿತ್ತು. ಹಾಗೇ ಮುಂದುವರೆದಂತೆ, ಒಂದು ಕಡೆ ಕುಟುಂಬದೊಟ್ಟಿಗೆ ನಿಂತಿದ್ದ ಹುಡುಗನೊಬ್ಬ, ನಮ್ಮನ್ನು ಕಂಡು, “ಇಲ್ಲಿ ಒಬ್ಬರು ನಿಲ್ಲೋಕೆ ಜಾಗವಿದೆ ಬನ್ನಿ” ಎಂದು ಫುಟ್‌ಪಾತ್‌ನ ಅಂಚನ್ನು ತೋರಿಸಿ ಕೈಬೀಸಿದ. ಅದೇ ಪುಣ್ಯ ನಮಗೆ ಸಿಕ್ಕಿದ್ದು. ನಾನು ಫುಟ್‌ಪಾತ್ ಮೇಲೆ ನಿಂತು, ಫುಟ್‌ಪಾತಿಗೆ ಹಾಕಲಾಗಿದ್ದ, ಕಂಬಿಗೆ ಒರಗಿಕೊಂಡು ನಿಂತರೆ, ವಿಪಿನ್, ಫೋಟೋಗ್ರಫಿ ಮಾಡುವ ಸಲುವಾಗಿ ಕೆಳಗೆಯೇ, ನಿಂತು ಫೋಟೋ ತೆಗೆಯಲು ಸೂಕ್ತ ಜಾಗ ಹುಡುಕಿಕೊಂಡು ನಿಂತಿದ್ದರು.
ಜನ ಆಚೀಚೆ ಚೂರುಚೂರೇ ಸರಿದಾಡಿದಂತೆ ಆನೆಗಳ ಸಾಲು ಕಂಡು ನಿಜಕ್ಕೂ ನಾವು ತ್ರಿಶ್ಶೂರ್ ಪೂರಂಗೆ ಬಂದೇಬಿಟ್ಟೆವಾ ಅನ್ನಿಸಿ ಮನಸ್ಸೆಲ್ಲ ಖುಷಿಯಾಯಿತು. ಆನೆಗಳ ಸಾಲಿನ ಮುಂದೆ ತಾಳ, ಕಹಳೆ, ಟ್ರಂಪೆಟ್, ಥಿಮಿಲ ಮತ್ತು ಚಂಡೆ ವಾದ್ಯದ ಮೇಳ ನಿರಂತರವಾಗಿ ನಡೆಯುತ್ತಲೇ ಇತ್ತು.
ಅಬ್ಬಾ… ಕಾಯುವಿಕೆಯ ಮಹಾ ಕಾರ್ಯಕ್ರಮ ಶುರುವಾದದ್ದು ಇಲ್ಲಿಂದಲೇ. ಕೊಡಮ್ಮಾಟ್ಟಂ ಇಂತಿಷ್ಟೇ ಹೊತ್ತಿಗೆ ಶುರುವಾಗುತ್ತದೆ ಎಂದು ಯಾರಿಗೆ ಗೊತ್ತಿತ್ತೋ… ಆ ದೇವರಿಗೇ ಗೊತ್ತು. ಅರ್ಧ… ಮುಕ್ಕಾಲು… ಒಂದು ಗಂಟೆ… ಊಹೂಂ… ದೇವಸ್ಥಾನದತ್ತಲೇ ಎಲ್ಲರ ಕಣ್ಣು. ಊಹೂಂ… ಒಂದಾನೆಯ ಸುಳಿವೂ ಇಲ್ಲ. ಅಲ್ಲಿ ಬಂದು ನಿಲ್ಲಬೇಕಿದ್ದ ಆನೆಯ ಸಾಲಿಗೆ ಕಾದದ್ದೇ ಬಂತು. ನಾವು ನಿಂತುಕೊಂಡು ಒಂದುತಾಸಿನ ಮೇಲೆ, ಒಂದೆರೆಡು ಲಾರಿಗಳು ದೇವಸ್ಥಾನದ ಮುಂದೆ ನಿಂತುಕೊಂಡವು. ಆಗ ಕೊಡಮಾಟ್ಟಂಗೆ ಬೇಕಿದ್ದ ಕೊಡೆಗಳನ್ನು ಇಳಿಸುವ ಕಾರ್ಯ ಆರಂಭವಾಯ್ತು..! ಒಂದು.. ಎರಡು… ನೂರು.. ಇನ್ನೂರು. ಏನಿಲ್ಲವೆಂದರೂ ಕೊಡೆಗಳನ್ನು ಇಳಿಸಲೇ ಒಂದು ತಾಸು ಸಮಯ ಹಿಡಿದುಬಿಟ್ಟಿತು. ಹಾಗಾಗಿ ಅದೂ ಒಂದು ಕಾರ್ಯಕ್ರಮದಂತೆಯೇ ಭಾಸವಾಯ್ತು!
ತಾಸಿನ ಮೇಲೆ ಕೊಡೆ ಇಳಿಸುವ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ನಿಂತು ನಿಂತು ಕಾಲುಗಳು ಮೆಲ್ಲಗೆ ಬಳಲಲಾರಂಭಿಸಿದ್ದವು. ಇನ್ನು ಶುರುವಾಗಬಹುದ… ನಾಲ್ಕು ಗಂಟೆಗಾದರೂ ಎಂದು ಜನಜಂಗುಳಿಯಲ್ಲಿ, ಕಂಬಿಯನ್ನು ಹಿಡಿದುಕೊಂಡು ನಿಂತೇನಿಂತೆವು… ನಿಂತೇ ನಿಂತೆವು… ಆಗಲೂ ಅಷ್ಟೇ… ದೇವಸ್ಥಾನದ ಮುಂದೆ ಒಂದು ಕಿಲೋಮೀಟರಿಗೂ ಹೆಚ್ಚು ವಿಸ್ತಾರದ ರಸ್ತೆಯ ತುಂಬ ಜನಸ್ತೋಮ ಕಿಕ್ಕಿರಿದು ಕಾಯುವಿಕೆಯಲ್ಲಿ ತೊಡಗಿಕೊಂಡಿದ್ದರೆ, ದೇವಸ್ಥಾನ ಮಾತ್ರ, ತಾನಿನ್ನೂ ಯಾವುದಕ್ಕೂ ಸಿದ್ಧವಿಲ್ಲ ಎಂಬಂತೆ ನಿಂತುಕೊಂಡಿತ್ತು. ಅಷ್ಟರಲ್ಲಿ ಅಲ್ಲೆಲ್ಲೋ ಮೂರ್ಛೆಬೀಳುತ್ತಿದ್ದ ಹುಡುಗಿಯೊಬ್ಬಳನ್ನು ಅವಳ ಕುಟುಂಬದವರು ಕೈಹಿಡಿದುಕೊಂಡು ನಡೆಸಿಕೊಂಡು ಬಂದದ್ದೇ, ನನಗೆ ಕೈಬೀಸಿದ ಹುಡುಗ ಅವರಿಗೂ ಜಾಗ ಕೊಟ್ಟು, ಅವಳನ್ನು ಉಪಚರಿಸಲು ಅನುವುಮಾಡಿಕೊಟ್ಟ. ಸೆಖೆ ಮತ್ತು ಜನಜಂಗುಳಿಯಿಂದಾಗಿ ಉಸಿರುಗಟ್ಟಿದಂತಾಗಿಯೋ ಅಥವಾ ಇನ್ನಿತರೆ ಕಾರಣಗಳಿಗಾಗಿ ಅಲ್ಲಲ್ಲಿ ಹೀಗೆ ಮೂರ್ಛೆ ಬೀಳುವ ಜನರನ್ನೂ ಈ ಜಾತ್ರೆಯಲ್ಲಿ ಕಂಡೆವು.
ಗಂಟೆ ೫ಕ್ಕೆ ತಲುಪುವ ಹೊತ್ತಿಗೆ, ಛತ್ರಿಗಳನ್ನು ಹೊತ್ತುಕೊಂಡು ಬಂದಿದ್ದ ಲಾರಿಗಳೆಲ್ಲ ಮೆಲ್ಲನೆ ತಾವು ಬಂದ ದಾರಿಯಲ್ಲೆ ವಾಪಸ್ಸಾಗುವಾಗ, ಕಾದೂ ಕಾದೂ ಬೆಂಡಾಗಿದ್ದ ದೇಹಕ್ಕೂ ಮನಸ್ಸಿಗೂ, ಒಂಚೂರು ಆಶಾದಾಯಕ ಚೈತನ್ಯ ಬಂದಿತು. ಅದಾಗ್ಯೂ ಮತ್ತಷ್ಟು ಹೊತ್ತು ಕಾಯಿಸಿದಮೇಲೆಯೇ ದೇವಸ್ಥಾನದ ಒಳಗಿನಿಂದ ಒಂದು ಆನೆ ಬಂದದ್ದೇ, ಎಲ್ಲರಲ್ಲೂ ಜೀವಕಳೆ ಉಕ್ಕಿ ಓ…. ಎಂದು ಕೂಗತೊಡಗಿದರು…
ಹಾಗೆ ಒಂದಾನೆಯಾದಮೇಲೆ ಒಂದಾನೆಯಂತೆ ಒಟ್ಟು ಹದಿನೈದು ಆನೆಗಳ ಎರಡು ಸಾಲು, ಒಂದು ದೇವಸ್ಥಾನದ ಬಾಗಿಲಿಗೆ ಮತ್ತೊಂದು ಅದರಿಂದ ಇನ್ನೂರು ಮೀಟರ್ ದೂರಕ್ಕೆ ಅದಕ್ಕೆ ಮುಖ ಮಾಡಿಕೊಂಡು ನಿಂತಿತು. ಹಾಗೆ ಅವುಗಳ ಸಾಲಾಗಿ ನಿಂತು ಕೊಡಮಾಟ್ಟಂ ಆರಂಭವಾಗಿ, ಬಣ್ಣ ಬಣ್ಣದ ಛತ್ರಿಗಳನ್ನು ಕಂಡಾದ ನಂತರ, ಇನ್ನು ನಿಲ್ಲಲು ಸಾಧ್ಯವೇ ಇಲ್ಲ ಎನ್ನಿಸಿ, ಜನಜಂಗುಳಿಯನ್ನು ಇಷ್ಟೀಷ್ಟೇ ಸರಿಸಿಕೊಂಡು ಜಾತ್ರೆಯಿಂದ ಹೊರನಡೆಯಲಾರಂಭಿಸಿದೆವು. ದೇವಸ್ಥಾನದ ಎದುರುಗಡೆಯಿದ್ದ ರಸ್ತೆಯ ಒಂದು ಕಿಮಿವರೆಗೂ ಜನರು ರಸ್ತೆ, ಫುಟ್‌ಪಾತು ಹಾಗೂ ಆಚೀಚೆ ಇದ್ದ ಅಂಗಡಿಗಳ ಸಾಲಿನ ಮೇಲೆ ಕೆಳಗೆಲ್ಲ ಕಿಕ್ಕಿರಿದು ನಿಂತದ್ದು ನೋಡಿಯೇ ನಮಗೆ ತಲೆತಿರುಗಿದಂತಾಯ್ತು. ಇಷ್ಟು ದೂರ ನಿಂತುಕೊಡಿರುವ ಇವರಿಗೆ ಏನು ಕಾಣಲು ಸಾಧ್ಯ? ಅಂತ ನಿಜಕ್ಕೂ ಪರಮಾಶ್ಚರ್ಯವಾಯಿತು. ಹಾಗೆಯೇ, ಅದೇ ರಸ್ತೆಯ ಪ್ಯಾರಲಲ್ ರಸ್ತೆಯಲ್ಲಿ ನಡೆಯುತ್ತ, ಹೋಟೆಲ್‌ವೊಂದನ್ನು ಹುಡುಕಿಕೊಂಡು, ಪರಾಟ ಗ್ರೀನ್ ಪೀಸ್ ಕರಿ ತಿಂದು ರೂಮು ತಲುಪುವಷ್ಟರಲ್ಲಿ, ಸಾಕುಸಾಕು ಎನ್ನಿಸಿಹೋಗಿತ್ತು.
ಈ ಪೂರಂನ ಇನ್ನೊಂದು ಮುಖ್ಯ ಕಾರ್ಯಕ್ರಮ ಎಂದರೆ ಬೃಹತ್ ಗಾತ್ರದಲ್ಲಿ ಪಟಾಕಿ ಹೊಡೆಯೋದು. ಆದರೆ ಆ ಕಾರ್ಯಕ್ರಮವನ್ನು ರಾತ್ರಿ ಮೂರು ಗಂಟೆಗೆ ಹಮ್ಮಿಕೊಳ್ಳಲಾಗಿತ್ತು. ಆದರೇನಂತೆ ಬಂದದ್ದೇ ಇದೆಯಲ್ಲ. ಹೋಗಿ ಬಂದರಾಯ್ತು ಎಂದು ಅಲಾರಾಂ ಇಟ್ಟುಕೊಂಡು ನಿದ್ದೆಗೆ ಜಾರುವಾಗ, ಬೆಳಗ್ಗೆ 10ರಿಂದ 6ರ ವರೆಗೂ ನಿಂತುಕೊಂಡು, ಓಡಾಡಿದ್ದರಿಂದ ಬಳಲಿಕೆ ಅನ್ನಿಸಿ, ರಾತ್ರಿ ಮಳೆ ಬಂದ್ರೆ ಮತ್ತೆ ಅಲ್ಲಿಗೆ ನಡೆದುಹೋಗೋ ಪ್ರಮೇಯ ಬರದೇಇರಬಹುದು ಎಂದುಕೊಂಡು ನಿದ್ರೆಗೆ ಜಾರಿದ್ದೆ. ನಡುರಾತ್ರಿ ಎರಡು ಗಂಟೆಗೆ ಅಲಾರಾಂ ಬಡಿಕೊಂಡ ಸದ್ದಿಗೆ ಎದ್ದು, ಮೆಲ್ಲಗೆ ಕಿಟಕಿಗಳ ಕರ್ಟನ್ ತೆಗೆದು ಹೊರಗೆ ಕಣ್ಣಾಯಿಸಿದರೆ, ರಸ್ತೆಯಲ್ಲಿ ಒಂದು ಮಟ್ಟಿಗೆ ಜನಸಂಚಾರ ಇದ್ದಹಾಗೆ ಕಂಡಿತಾದರೂ, ಮಳೆ ಸುರಿಯುವುದು ಕಂಡಿತ್ತು. ಮಳೆಯಲ್ಲಿ ಪಟಾಕಿ ಹೊಡೆಯುವವರಾದ್ರೂ ಯಾರು? ಬದುಕಿದೆಯಾ ಬಡಜೀವವೆ ಎಂದುಕೊಂಡು, ರಗ್ಗೆಳೆದುಕೊಂಡು ಮತ್ತೆ ನಿದ್ದೆಗೆ ಜಾರಿದೆ.
ಕೇರಳದ ಆಹಾರದಲ್ಲಿ ಅಕ್ಕಿಯ ಬಳಕೆಯೇ ಹೆಚ್ಚು, ಬಿಟ್ಟರೆ ಪರೋಟ್ಟಕ್ಕೆ ಮೈದಾ ಬಳಕೆ ಮಾಡುತ್ತಾರೆ. ಇಲ್ಲಿ ತೆಂಗನ್ನು ಹೇರಳವಾಗಿ ಬೆಳೆಯುವುದರಿಂದ ಎಲ್ಲ ಅಡುಗೆಯಲ್ಲೂ ತೆಂಗಿನಕಾಯಿಯ ಬಳಗ್ಗೆ ಕಡ್ಡಾಯವಾಗಿ ಇರುತ್ತೆ. ಜೊತೆಗೆ ತೆಂಗಿನೆಣ್ಣೆ ಒಗ್ಗರಣೆ ಹಾಕಿಮಾಡಿದ ಪಲ್ಯಗಳು ನಿಜಕ್ಕೂ ಬಹಳ ಆರೋಗ್ಯಕಾರಿ ಹಾಗೂ ರುಚಿಯಾಗಿಯೂ ಇರುತ್ತದೆ. ಈಗಾಗಲೇ ಪರೋಟ-ಕಡ್ಲೆಕರಿ, ಪರೋಟ-ಎಗ್‌ಕರಿ, ಪತ್ತಲ್- ಕಡ್ಲೆಕರಿ, ಕುತ್ತಿಪುಟ್ಟು, ನೂಲ್‌ಪುಟ್ಟುಗಳನ್ನೆಲ್ಲ ತಿಂದು ಅದರ ರುಚಿ ಗೊತ್ತಿರುವ ನಾವು, ಬೆಳಗ್ಗೆ ಅಂಥ ತಿಂಡಿಗಳನ್ನು ಹುಡುಕಿದರೆ, ನಾವು ಹೋಗಿದ್ದಲ್ಲಿ ಅದ್ಯಾವುದು ಸಿಗಲೇಇಲ್ಲ. ಹುಡುಕಿಕೊಂಡು ಹೋಗಿ ತಿಂದುಬರುವಷ್ಟು ಸಮಯವಿಲ್ಲದ್ದರಿಂದ, ಹತ್ತಿರದಲ್ಲೇ ಸಿಕ್ಕ ಹೋಟೆಲ್‌ನಲ್ಲಿ ತಿಂಡಿ ಮುಗಿಸಿಕೊಂಡು, ಇವತ್ತಿನ ಕಾರ್ಯಕ್ರಮ ಏನಿರಬಹುದೆಂದುಕೊಳ್ಳುತ್ತಲೇ ಎರಡನೆಯ ದಿನ ಮತ್ತೆ ವಡಕ್ಕುನ್ನಾಥನ್ ದೇವಸ್ಥಾನದತ್ತ ಹೆಜ್ಜೆ ಹಾಕುತ್ತ ಹೋದೆವು.
ವಡಕ್ಕುನ್ನಾಥನ್ ದೇವಸ್ಥಾನ ಇನ್ನೇನು ನೂರುಮೀಟರ್ ಇದೆ ಅನ್ನುವಾಗ ನಮಗೆ ಅಚ್ಚರಿಯೋ ಅಚ್ಚರಿ. ದೇವಸ್ಥಾನದ ಆವರಣದಲ್ಲಿ ಅದಾಗಲೇ ಹದಿನೈದು ಆನೆಗಳು, ರಸ್ತೆಗೆ ಬೆನ್ನುತೋರಿಸಿ ಸಾಲಾಗಿ ನಿಂತುಕೊಂಡಿದ್ದನ್ನು ನೋಡಿ, ಆನೆಗಳು ಇಷ್ಟು ಹತ್ತಿರದಲ್ಲಿ ನೋಡಲು ಸಿಕ್ಕವಲ್ಲಾ ಎಂದು ಖುಷಿಯಲ್ಲಿ ತೇಲಾಡಲಾರಂಭಿಸಿದೆವು. ನಾವು ದೇವಸ್ಥಾನದ ಆವರಣಕ್ಕೆ ಕಾಲಿಟ್ಟಾಗ, ಸಿಂಗರಿಸಿಕೊಂಡು ನಿಂತ ಆನೆಗಳು, ಅವುಗಳ ಮೇಲೆ ಮೂರು ಜನ, ಕೆಳಗೆ ಆಯಾ ಆನೆಗಳ ಮಾವುತರು ಹಾಗೂ, ಅಲ್ಲಲ್ಲಿ ಚದುರಿನಿಂತ ಪೋಲೀಸರು ಕಂಡರು. ಅವರಿಂದ ಮುಂದೆ ಹೋಗಿ ನಿಂತುಕೊಂಡರೆ ಪಕ್ಕದಲ್ಲೇ ಆನೆಗಳ ಸಾಲು! ನಾವು ಈ ಪ್ರವಾಸವನ್ನು ಕೈಗೊಂಡಾಗ, ಈ ಆನೆಗಳನ್ನು ಇಷ್ಟು ಹತ್ತಿರದಿಂದ ನೋಡಲು ಸಾಧ್ಯವಾಗಬಹುದೆಂಬ ಸಣ್ಣ ಕಲ್ಪನೆಯೂ ನಮಗಿರಲಿಲ್ಲ. ಆದರೆ ಇವತ್ತು ಬೆಳಗ್ಗೆ ಒಂಭತ್ತು ಗಂಟೆಗೆ, ನೆನ್ನೆ ನಡೆದಿದ್ದ ಕಾರ್ಯಕ್ರಮದಂತೆಯೇ, ಆನೆಗಳ ಮುಂದೆ ವಾದ್ಯಗಳ ಮೇಳ ಜೋರು ದನಿಯಲ್ಲಿ ತಾಳಹಾಕುವಾಗ, ನೆನ್ನೆಯಷ್ಟಲ್ಲದಿದ್ದರೂ ಸಾವಿರಾರು ಜನ ಮೇಳದ ಹಿಂದೆಮುಂದೆ, ಅಕ್ಕ-ಪಕ್ಕ ನಿಂತುಕೊಂಡು ಆನೆಗಳನ್ನು ನೋಡುತ್ತ ನಿಂತುಕೊಂಡಿದ್ದರು. ಈಗ ಬರೀ ಒಂದು ಇಪ್ಪತ್ತು ಮೀಟರ್‌ನ ಅಂತರದಲ್ಲಿ ನಿಂತುಕೊಂಡು ಆನೆಗಳನ್ನು ನೋಡುವ ಅವಕಾಶ ಸಿಕ್ಕಿತ್ತು. ಪ್ರಾಣಿಗಳಲ್ಲೇ ತುಂಬಾ ಮುದ್ದಾದ ಜೀವಿಇದು. ದೈತ್ಯ ದೇಹದ ಈ ಪ್ರಾಣಿಯ ಮುಂದೆ, ಅದನ್ನೊಳಗೊಂಡ ಈ ಸಂಭ್ರಮವೆಲ್ಲ ಅವುಗಳಿಗೆ ಏನನ್ನಿಸುತ್ತಿರಬಹುದೆಂದು ಮನಸ್ಸು ಲೆಕ್ಕ ಹಾಕುತ್ತಿತ್ತು. ಕೇರಳದಲ್ಲಿ ಆನೆಗಳನ್ನು ಹೀನಾಯವಾಗಿ ನಡೆಸಿಕೊಳ್ಳುವ ಬಗ್ಗೆ ಡಾಕ್ಯುಮೆಂಟರಿಯನ್ನೊಮ್ಮೆ ನೋಡಿದ್ದೆವು. ಅದು ಇಲ್ಲಿ ಬಂದಾಗಿನಿಂದಲೂ ಮನಸ್ಸಲ್ಲಿ ಇದ್ದೇ ಇತ್ತು. ದೈತ್ಯ ದೇಹದಲ್ಲಿ ಪುಟ್ಟ ಹೃದಯ, ಎಲ್ಲಕ್ಕಿಂತ ಪುಟ್ಟಪುಟ್ಟ ಕಣ್ಣುಗಳ ಈ ಪ್ರಾಣಿಯನ್ನೂ ಮನುಷ್ಯ ತನ್ನಾಟಗಳಿಗೆ ಪಳಗಿಸಿಕೊಳ್ಳುತ್ತಾನಲ್ಲ ಎನ್ನಿಸಿತು. ಎಲ್ಲ ಆನೆಗಳ ಕೊರಳಲ್ಲೂ ದಪ್ಪದಪ್ಪದ ಚಿನ್ನದ ಸರಗಳು.. ಸಮೃದ್ಧವಾದ ಕಾಡು, ಅಲ್ಲದೇ ಅದರ ಬಳಗವನ್ನು ಬಿಟ್ಟರೆ ಇದಕ್ಕೆ ಬೇರೆ ಯಾವುದೂ ಬೇಡವೇ ಬೇಡ. ಈ ಸಿಂಗಾರ, ಸಂಭ್ರಮ ಎಲ್ಲ ನಮಗಾಗಿಯಷ್ಟೇ… ನಮ್ಮನ್ನು ಎಂಟರ್‌ಟೇನ್ ಮಾಡಲು ಅದು ಏನೆಲ್ಲ ಕಸರತ್ತುಗಳನ್ನು ಕಲಿತುಕೊಂಡು ಬಂದು, ನಮ್ಮ ಆಟಗಳನ್ನು ನೋಡುತ್ತ ನಿಂತುಕೊಂಡಿದೆಯಲ್ಲ ಅಂತ ವಿಷಾದವೂ ಅನ್ನಿಸಿತು.
ಆಮೇಲೆ ಸ್ವಲ್ಪ ಹೊತ್ತು ಮೇಳದ ಹಿಂದೆ ನಿಂತು, ಅದರ ತಾಳ ಮೇಳವನ್ನು ಆನಂದಿಸುತ್ತಿರುವಾಗಲೇ, ನಮಗೂ ಹಾಗೂ ಆನೆಗಳ ಸಾಲಿಗೂ ಬೆನ್ನುಮಾಡಿ ನಿಂತಿದ್ದ ಮೇಳ ಮೆಲ್ಲಗೆ ನಮ್ಮಕಡೆ ಮುಖ ಮಾಡಿ ನಿಂತದ್ದಲ್ಲದೇ, ನಮ್ಮ ಕಡೆಗೇ ಚಲಿಸಲಾರಂಭಿಸಿತು. ಇದೇನೀದು ಎಂದು ನೋಡುತ್ತಿರುವಾಗಲೇ ಪೋಲೀಸರು ಅಲ್ಲಿ ನಿಂತಿದ್ದ ನಮಗೆ ಮುಂದೆ ಮುಂದೆ ಹೋಗಲು ಸೂಚಿಸಲಾರಂಭಿಸಿದ್ದರು. ಅದೊಂದು ಮೆರವಣಿಗೆಯಲ್ಲಿ ಪಾಲ್ಗೊಂಡ ಅನುಭವ ನನಗೆ. ಜಾತ್ರೆ ನೋಡಲು ಬಂದ ನಾವು ಸಾಲಿನಲ್ಲಿ ಮುಂದಿದ್ದರೆ, ನಮ್ಮ ಹಿಂದೆಯೇ ಇಡೀ ಮೇಳ… ಅದರ ಹಿಂದೆಯೇ ಹದಿನೈದು ಆನೆಗಳ ಸಾಲು! ಅಬ್ಬಾ.. ಅದೊಂದು ರೋಮಾಂಚನಕಾರಿ ಕ್ಷಣ… ಹಾಗೇ ಒಂದಷ್ಟು ಮುಂದೆ ಹೋದರೆ ಅಲ್ಲಿಯೇ ದೇವಸ್ಥಾನದ ಆವರಣದ ಮುಖ್ಯ ಬಾಗಿಲ ಮುನ್ನ ಇನ್ನೊಂದು ಆವರಣ. ಈಗ ಅಲ್ಲಿ ಜನರೆಲ್ಲ ನೆರೆಯಲಾರಂಭಿಸಿದರು. ಜನರು ಸೇರುತ್ತಿದ್ದುದನ್ನು ನೋಡಿಯೇ ಇಲ್ಲೀಗ ಕಾರ್ಯಕ್ರಮ ಎಂದು ತಿಳಿಯಿತು. ಮೆಲ್ಲ ಮೆಲ್ಲನೇ… ಮೆಲ್ಲ ಮೆಲ್ಲನೇ.. ಒಂದೊಂದೇ ಆನೆಗಳು ಬಂದು ಸಾಲಾಗಿ ಆ ಆವರಣದ ಕಾಂಪೌಂಡಿನ ಬಳಿ ಬಂದು ನಿಲ್ಲುವ ಮುಂಚೆ ಮೇಳವೂ ಬಂದು ಅಲ್ಲಿ ನಿಂತಾಗಿತ್ತು.. ನೆನ್ನೆಯಿಂದ ಇಡೀ ಕಾರ್ಯಕ್ರಮದ ಜೊತೆಜೊತೆಗೇ ನಡೆಯುತ್ತಿದ್ದ ಪಂಚವಾದ್ಯ ಮೇಳದ ಸದ್ದಿನ ನಡುವೆಯೇ ಅಲ್ಲಿಯೇ ಕೊಡಮಾಟ್ಟಂ ಶುರುವಾಗಿಬಿಟ್ಟಿತು… ಸಿಂಗರಿಸಿದ ಬಣ್ಣ ಬಣ್ಣದ ಕೊಡೆಗಳನ್ನ ಒಂದೊಂದನ್ನೇ ಒಂದೊಂದನ್ನೇ ಎತ್ತಿ ತಿರುಗಿಸುತ್ತ ತೋರಿಸುವ ಕಾರ್ಯಕ್ರಮ ಅದು. ಒಂದಾದ ಮೇಲೊಂದರಂತೆ ಬೇರೆ ಬೇರೆ ಬಣ್ಣದ ಕೊಡೆಗಳನ್ನು ಹಿಂದಿನಿಂದ ಸಹಾಯಕರು, ಆನೆಯ ಮೇಲೆ ಕುಳಿತವರ ಕೈಗೆ ಹಸ್ತಾಂತರಿಸಿದರೆ, ಆನೆಯ ಮೇಲೆ ಕುಳಿತವರು, ಅದನ್ನು ಎತ್ತಿಹಿಡಿದು ತಿರುಗಿಸುತ್ತಾ, ಜನರ ಮುಂದೆ ಪ್ರದರ್ಶಿಸುತ್ತಾರೆ. ಪ್ರತಿಯೊಂದು ಸಲ ಬೇರೆಬೇರೆ ವೈಯಾರದ ಕೊಡೆಗಳು ಬಂದಾಗಲೂ ಜನರ ಹರ್ಷೋದ್ಘಾರ… ನಡುವೆ ನಿಂತ ದೇವಸ್ಥಾನದ ಆನೆಗೆ ಮಾತ್ರ ಪ್ರತಿಸಲವೂ ಬೇರೆ ಬಣ್ಣದ ಕೊಡೆ.
ಹೀಗೆ ಇದೂ ಸತತ ಎರಡು ತಾಸಿಗೂ ಹೆಚ್ಚು ಕಾಲ ನಡೆದ ನಂತರ, ದೇವಸ್ಥಾನದ ಮುಖ್ಯ ಆನೆ ದೇವಸ್ಥಾನದ ಒಳಗೆ ತೆರಳಿದ ಮೇಲೆ, ಬೇರೆ ಬೇರೆ ಕಡೆಯಿಂದ ಬಂದಿದ್ದ ಹದಿನಾಲ್ಕು ಆನೆಗಳನ್ನು ಮೆಲ್ಲಗೆ, ಅವುಗಳ ಲಾರಿಯಿದ್ದ ಕಡೆಗೆ ಕರೆದೊಯ್ಯುವ ಸಿದ್ಧತೆ ನಡೆಯಲಾರಂಭಿಸಿತು.
ಅಷ್ಟೊತ್ತಿಗಾಗಲೇ ಇಂದು ಒಂದು ಗಂಟೆಗೆ ಪಟಾಕಿ ಸಿಡಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದಿತ್ತು. ಸಮಯ ನೋಡಿದರೆ, ೧೧:೩೦ ಅಷ್ಟೇ! ಓಡಾಡಿಕೊಂಡು ಬಂದರಾಯ್ತು ಎಂದು ದೇವಸ್ಥಾನದ ಆವರಣ ಬಿಟ್ಟು ಹೊರಗೆ ಬಂದರೆ, ಜನ ಅದಾಗಲೇ ಫುಟ್‌ಪಾತು, ಅಂಗಡಿಮುಗಟ್ಟುಗಳ ಮೇಲೆ ಕೆಳಗೆ ಜಾಗ ಹಿಡಿದು ನಿಂತಾಗಿತ್ತು… ಅವರನ್ನು ನೋಡಿದ್ದೇ… ಇನ್ನು ಕಥೆ ಮುಗೀತು ಅಂತನ್ನಿಸಿತ್ತು ನನಗೆ. ನೆನ್ನೆ ಇಡೀ ದಿನ ನಿಂತದ್ದಲ್ಲದೇ, ಬೆಳಗ್ಗೆ ಒಂಭತ್ತರಿಂದಲೂ ನಿಂತುಕೊಂಡೇ ಇದ್ದುದರಿಂದ, ಮತ್ತೀಗ ಒಂದುಕಡೆ ಜಾಗಮಾಡಿಕೊಂಡು ನಿಂತು ಮತ್ತೆ ಒಂದೂವರೆತಾಸು ಕಾಯದೇ ಗತಿಯಿಲ್ಲ ಎಂದು ಅರಿವಾಗಿತ್ತು. ತಡವಾದರೆ, ಈಗಿನಷ್ಟು ಜಾಗವೂ ಆಮೇಲೆ ಸಿಗುವುದಿಲ್ಲ ಎಂದು ತಿಳಿದು, ಆವರಣದ ಮುಂದೆಯಿದ್ದ ಫುಟ್‌ಪಾತಿನಲ್ಲಿದ್ದ ಕಡಿಮೆ ಜನರಿದ್ದ ಕಡೆ ಹೋಗಿ, ಜಾಗ ಹಿಡಿದುಕೊಂಡು ನಿಂತೆವು. ಆಗ ಒಳಗಿನಿಂದ ಜನರನ್ನೆಲ್ಲ ದೇವಸ್ಥಾನದ ಹೊರಗೆ ಕಳುಹಿಸುತ್ತಿದ್ದು ಕಾಣಿಸಿತು. ಜನರನ್ನೆಲ್ಲ ಹುಡುಕಿ, ಹೊರಗೆ ಕಳಿಸಿ, ದೇವಸ್ಥಾನದ ಸಮಿತಿಯವರು, ಸ್ವಯಂಸೇವಕರು, ಕೊನೆಗೆ ಪೋಲೀಸರೆಲ್ಲ ಹೊರಗೆ ಬಂದು, ಇನ್ನೇನು ಪಟಾಕಿ ಹೊಡೆತ ಶುರುವಾಗುವ ಹೊತ್ತಿಗೆ ಎರಡು ಗಂಟೆ ಸರಿದುಹೋಗಿತ್ತು. ಅಷ್ಟರಲ್ಲಿ ಅಲ್ಲಿಲ್ಲಿ ತಲೆಸುತ್ತಿ ಬಿದ್ದವರನ್ನು, ಅಲ್ಲೇ ಸಿದ್ಧವಾಗಿ ನಿಂತಿದ್ದ ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಹೋಗಲಾಗುತ್ತಿತ್ತು. ಅಲ್ಲಿನ ಪೋಲೀಸರಂತೂ ಬಹಳ ಚುರುಕು. ರಸ್ತೆಯ ತುಂಬಾ ಅಲ್ಲಲ್ಲಿ ನಿಂತುಕೊಂಡು, ಇಡೀ ಪರಿಸ್ಥಿತಿಯನ್ನು ಕೈಗೆ ತೆಗೆದುಕೊಂಡಿದ್ದರು. ಆಮೇಲೆ ಶುರುವಾಯ್ತು ನೋಡಿ… ಪಟಾಕಿಗಳ ಸಿಡಿತ… ಅಬ್ಬಬ್ಬಾ… ಇದೇ ಮೊದಲು ಇಷ್ಟು ಎತ್ತರದಷ್ಟು ಪಟಾಕಿ ಸಿಡಿತವನ್ನು ನಾನು ಕಂಡದ್ದು. ಸುಮಾರು ನೂರಡಿಯಿದ್ದ ಆ ಸಿಡಿತ, ಆ ಕಡೆಯ ಮರೆಯಿಂದ, ನಮ್ಮ ಮುಂದಿನ ಭಾಗಕ್ಕೆ ಬಂದಾಗ ಕಕ್ಕಾಬಿಕ್ಕಿಯಾಗುವಷ್ಟಿತ್ತು ಅದರ ಅಬ್ಬರ. ಬೆಂಕಿಯ ಜ್ವಾಲೆ ಥೇಟು, ಬೆಳ್ಳಗಿನ ಬೆಳಕಿನಂತೆ ಹೊಳೆಯುತ್ತಿದ್ದರೆ, ಕಣ್ಣಿಗೆ ಆ ದೃಶ್ಯವನ್ನು ಅರಗಿಸಿಕೊಳ್ಳಲೇ ಕಷ್ಟವಾಗಿತ್ತು. ಕಿವಿಯ ಗತಿ.. ಅಧೋಗತಿ…! ನೆಲದಿಂದ ಆಕಾಶದವರೆಗೆ ಸಿಡಿದ ಮಿಂಚಿನ ಪಟಾಕಿಯಂತಿತ್ತದು.
ಅದನ್ನು ನೋಡಿಕೊಂಡು ವಾಪಾಸ್ಸು ರೂಮಿನತ್ತ ಹೆಜ್ಜೆ ಹಾಕುವಾಗ ಸಮಯ ಮೂರುಗಂಟೆಯಾಗಿತ್ತು. ರಸ್ತೆಯಲ್ಲಿ ಸಿಕ್ಕ ಜನರೊಬ್ಬರು ಮಾತಿಗೆ ಸಿಕ್ಕಾಗ, ನೆನ್ನೆ ರಾತ್ರಿ ಮಳೆಯ ಕಾರಣ ಪಟಾಕಿ ಸಿಡಿಸಿಲ್ಲದಾಗಿಯೂ, ಮತ್ತದು ಅವತ್ತೇ ಸಂಜೆ ಆ ಕಾರ್ಯಕ್ರಮ ಇರುವುದು ತಿಳಿಯಿತು. ಅದು ನಾವು ಮಧ್ಯಾಹ್ನ ನೋಡಿದ್ದರ ಎರಡು ಪಟ್ಟು ದೊಡ್ಡದಾಗಿ ಪಟಾಕಿ ಹಾರಿಸುವ ಕಾರ್ಯಕ್ರಮವೆಂದು, ಅದನ್ನು ನೋಡುವ ಮಸ್ಸಿದ್ದರೂ, ಆ ಹೊತ್ತಿಗೆ ಊರಿಗೆ ವಾಪಾಸ್ಸು ಹೊರಡಲು ತಯಾರಾಗಬೇಕಿದ್ದ ಕಾರಣ ಸಂಜೆಗೆ ಅಲ್ಲಿಗೆ ಮತ್ತೆ ತೆರಳಲಾಗಿಲ್ಲ.
(ಫೋಟೋಗಳು: ವಿಪಿನ್ ಬಾಳಿಗ)
ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಾಡೊಳಗ ಕಳದಾವು ಮಕ್ಕಾಳು’ ಮಕ್ಕಳ ನಾಟಕ . ‘ಚಿತ್ತ ಭಿತ್ತಿ’ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.
ಕಣ್ಣಿಗೆ ಕಟ್ಟುವಂತೆ ಮನತುಂಬುವಂತೆ ಪೂರಂ ಕಥನ ದಾಖಲಿಸಿ ನಮಗೆಲ್ಲ ಸಂತಸ ತಂದಿದ್ದಕ್ಕೆ ಧನ್ಯವಾದ. ಅಭಿನಂದನೆ.
Beautiful article.