ಆ ಫೋಟೊ ನೋಡಿದ ತಕ್ಷಣವೇ ಅವಳಿಗೆ ಅದು ಕಂಡಿತು. ಆ ಫೋಟೋದಲ್ಲಿನ ಸ್ಪಷ್ಟತೆ, ಅದರಲ್ಲೂ ಫ್ರಾಂಕ್ಲಿನ್‌ಳಂತಹ ಅನುಭವ-ಪಾಂಡಿತ್ಯ ಎರಡೂ ಇದ್ದ ಮೇಧಾವಿಗೆ, ಒಂದರೆ ಕ್ಷಣ ಅವಳ ಉಸಿರುಗಟ್ಟಿಸಿರಬಹುದು. ಆ ಫೋಟೋ ಮುಖಾಂತರ, ಡಿಎನ್‌ಎ ಗಟ್ಟಿದನಿಯಲ್ಲಿ, ಖಡಾಖಂಡಿತವಾಗಿ ಸಾರುತ್ತಿತ್ತು: “ನಾನೊಂದು ಸುರುಳಿ!”. ಪೈಥಾಗೊರಾಸನಿಂದ ಹಿಡಿದು, ಕೊನೆಗೂ ಡಾರ್ವಿನ್ನನವರೆಗೆ ಸಾವಿರಾರು ವರ್ಷಗಳ ಸಿದ್ಧಾಂತಗಳ, ಮೆಂಡೆಲ್-ಮಾರ್ಗನ್ ಅಂತಹವರ ಪ್ರಯೋಗಗಳ ಗುರಿಯ ಸ್ವರೂಪದ ದರ್ಶನವಾಗಿತ್ತು. ವಾಟ್ಸನ್ ಮುಂದೊಮ್ಮೆ ಹೇಳಿದಂತೆ, “ಜೀವನದ ರಹಸ್ಯದ ಕೀಲಿ” ಕೈಗೆ ಸಿಕ್ಕಿತ್ತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು”ಯಲ್ಲಿ ಹೊಸ ಬರಹ
ಇಸವಿ 1928. “ಜೀನ್” ಎಲ್ಲೆಡೆ ಇದ್ದೂ — ಬಟಾಣಿಯಲ್ಲಿ, ನೊಣದಲ್ಲಿ, ಇಲಿಯಲ್ಲಿ, ಕಡೆಗೆ ನಮ್ಮಲ್ಲೂ — ಯಾರ ಕಣ್ಣಿಗೂ ಕಂಡಿರಲಿಲ್ಲ. ಮಹಾ ಪ್ರಚಂಡ ಥಾಮಸ್ ಹಂಟ್ ಮಾರ್ಗನ್ ಮತ್ತು ಅವನ ಶಿಷ್ಯರು ದಶಕಗಳ ಕಾಲ, ಕಳಿತು-ಕೊಳೆತ ಬಾಳೆಹಣ್ಣುಗಳಿಂದ ನಾರುವ ಕೊಠಡಿಯೊಂದರಲ್ಲಿ ಕುಳಿತು, ಕೋಟ್ಯಂತರ ನೊಣಗಳನ್ನು ಬೆಳೆಸಿ-ಬಳಸಿ ಆ ಭೂತವನ್ನು ಜೀವಕೋಶದ ದಾರಗಳಲ್ಲಿ ಕಟ್ಟಿಹಾಕಿದ್ದರು. ಅವರ ಅಧ್ಯಯನ-ಪ್ರಯೋಗಗಳು, ದಾರದಂತಹ ಕ್ರೋಮೋಸೋಮ್‍ಗಳಲ್ಲಿ ಪೋಣಿಸಿದಂತೆ ಕಾಣುವ “ಮಣಿ”ಗಳು ನೊಣದ ಕಣ್ಣಿನ ಬಣ್ಣದಿಂದ ಹಿಡಿದು ಅದರ ರೆಕ್ಕೆಯ ಗಾತ್ರವನ್ನೂ ನಿರ್ಧರಿಸುವುದನ್ನು ತೋರಿಸಿಕೊಟ್ಟಿದ್ದವು. ಆದರೆ, “ಜೀನ್” ಎನ್ನುವುದು “ಮಣಿ”ಯೇ ಅಥವಾ “ದಾರ”ವೇ? ಅದು ಯಾರಿಗೂ ಗೊತ್ತಿರಲಿಲ್ಲ. ದಶಕಗಳ ಅವರ ಪ್ರಯೋಗಗಳು ಜೀನ್ ಒಂದರ ಅಡ್ರೆಸ್ ಅನ್ನು ಬಯಲಿಗೆ ತಂದಿದ್ದವೇ ಹೊರತು, ಅದರ ಮುಖವನ್ನಲ್ಲ.
ಇತ್ತ ಅಮೆರಿಕದಲ್ಲಿ ಮಾರ್ಗನ್ ಮತ್ತು ಅವನ ಶಿಷ್ಯರು ನೊಣಗಳ ಜೀವಕೋಶದಲ್ಲಿ ಜೀನ್‌ಗಳನ್ನು ಹುಡುಕುತ್ತಿದ್ದರೆ, ಅತ್ತ, ಅಟ್ಲಾಂಟಿಕ್ ಸಾಗರದಾಚೆ, ದೂರದ ಲಂಡನ್ನಿನಲ್ಲಿ ಫ್ರೆಡೆರಿಕ್ ಗ್ರಿಫಿತ್ ತನ್ನ ಪ್ರಯೋಗಾಲಯದಲ್ಲಿ ಕುಳಿತು ಜೀವ ಉಳಿಸುವ ಸೆಣೆಸಾಟದಲ್ಲಿ ತಲ್ಲೀನನಾಗಿದ್ದ. ಅವನು ಸೆಣೆಸುತ್ತಿದ್ದುದು ನ್ಯೂಮೋಕಾಕಸ್ ಎಂಬ ಬ್ಯಾಕ್ಟೀರಿಯಾಗಳ ವಿರುದ್ಧ. Antibiotics ಇನ್ನೂ ಪ್ರಚಲಿತವಿಲ್ಲದ ಆ ಕಾಲದಲ್ಲಿ, ಈ ಬ್ಯಾಕ್ಟೀರಿಯಾಗಳು ತಗುಲಿದವೆಂದರೆ ನ್ಯುಮೋನಿಯಾದಿಂದ ಸಾವು ಎನ್ನುವುದು ಗ್ಯಾರಂಟಿ ಎಂಬಂತಾಗಿತ್ತು. ಗ್ರಿಫಿತ್, ತನ್ನ ಪ್ರಯೋಗಾಲಯದಲ್ಲಿ ಈ ಬ್ಯಾಕ್ಟೀರಿಯಾಗಳ ಆಕ್ರಮಣದ ವಿರುದ್ಧ ಸೆಣೆಸುವ ರಣನೀತಿಯ ತಯಾರಿಯಲ್ಲಿ ನಿರತನಾಗಿದ್ದ. “ಜೀನ್”ಗಳು, “ವಂಶವಾಹಿಕತೆ” ಇತ್ಯಾದಿಗಳ ಬಗೆಗೆ ಯೋಚಿಸಲೂ ಅವನಿಗೆ ಸಮಯವಿರಲಿಲ್ಲ.
ಅವನ ಮೈಕ್ರೋಸ್ಕೋಪಿನಲ್ಲಿ, ಎರಡು ತರಹದ ನ್ಯೂಮೋಕಾಕಸ್ ಬ್ಯಾಕ್ಟೀರಿಯಾಗಳು ಕಂಡಿದ್ದವು. ಒಂದು ಬ್ಯಾಕ್ಟೀರಿಯಾ ತನ್ನ ಮೈಮೇಲೆ ನುಣುಪಾದ ಕೋಟೊಂದನ್ನು ಹೊದ್ದಿದ್ದರೆ, ಇನ್ನೊಂದರ ಹೊರಮೈ ಒರಟು. ಇಲಿಗಳ ಮೇಲೆ ಮಾಡಿದ ಸರಳ ಪ್ರಯೋಗವೊಂದು ನುಣುಪು ಮೈಯ್ಯಿನ ಬ್ಯಾಕ್ಟೀರಿಯಾಗಳ ಅಪಾಯವನ್ನು ಎತ್ತಿ ತೋರಿಸಿತು; ನುಣುಪು ಮೈಯಿನ ಬ್ಯಾಕ್ಟೀರಿಯಾಗಳನ್ನು ಆರೋಗ್ಯವಂತ ಇಲಿಗಳಿಗೆ ಇಂಜೆಕ್ಟ್ ಮಾಡಿದಾಗ, ಆ ಇಲಿಗಳು ನ್ಯುಮೋನಿಯಾ ತಗಲಿ ಮೃತಪಟ್ಟವು. ಆದರೆ, ಒರಟು ಬ್ಯಾಕ್ಟೀರಿಯಾಗಳಿಂದ ನ್ಯುಮೋನಿಯಾ ಬರಲಿಲ್ಲ. ಆ ಪ್ರಯೋಗವನ್ನು ಅವನು ಮತ್ತಷ್ಟು ಮುಂದುವರೆಸಿದಾಗ, ಅವನಿಗೆ ಅತ್ಯಾಶ್ಚರ್ಯವೊಂದು ಕಾದಿತ್ತು.

ಅವನು ಗಾಜಿನ ಬೀಕರ್ ಒಂದರಲ್ಲಿ ನುಣುಪು ಬ್ಯಾಕ್ಟೀರಿಯಾಗಳನ್ನು ಬಿಸಿ ಮಾಡಿ ಕೊಂದ. ಆ ಸತ್ತ ಬ್ಯಾಕ್ಟೀರಿಯಾಗಳನ್ನು ಆರೋಗ್ಯವಂತ ಇಲಿಗಳಿಗೆ ಇಂಜೆಕ್ಟ್ ಮಾಡಿದಾಗ, ಅವನೆಣಿಸಿದಂತೆಯೇ ಆ ಇಲಿಗಳಿಗೆ ನ್ಯುಮೋನಿಯಾ ಬರಲಿಲ್ಲ. ಆದರೆ, ಸತ್ತ ಆ ನುಣುಪು ಬ್ಯಾಕ್ಟೀರಿಯಾಗಳ ಶವಗಳನ್ನು ಬದುಕಿರುವ ಒರಟು ಬ್ಯಾಕ್ಟೀರಿಯಾಗಳೊಂದಿಗೆ ಮಿಶ್ರ ಮಾಡಿ ಇಲಿಗಳಿಗೆ ಇಂಜೆಕ್ಟ್ ಮಾಡಿದ ಕೂಡಲೇ, ಆ ಇಲಿಗಳು ನ್ಯುಮೋನಿಯಾಗೆ ತುತ್ತಾದವು. ಆ ಇಲಿಗಳ ರಕ್ತದ ಹನಿಯೊಂದನ್ನು ಮೈಕ್ರೋಸ್ಕೋಪಿನಲ್ಲಿಟ್ಟು ನೋಡಿದಾಗ ನುಣುಪು ಬ್ಯಾಕ್ಟೀರಿಯಾಗಳು ಹರಿದಾಡುತ್ತಿರುವುದು ಕಂಡುಬಂತು; ಸತ್ತ ಶವಗಳ ನುಣ್ಣನೆಯ ಕೋಟನ್ನು ಒರಟು ಬ್ಯಾಕ್ಟೀರಿಯಾಗಳು ಹೊದ್ದಿದ್ದವು! ಮತ್ತಷ್ಟು ಅಧ್ಯಯನ ನಡೆಸಿದಾಗ ಇನ್ನೊಂದು ವಿಷಯ ಹೊರಬಿತ್ತು; ನುಣುಪು ಮೈಯಿನ ಸತ್ತ ಬ್ಯಾಕ್ಟೀರಿಯಾಗಳು, ಅತ್ಯಾಶ್ಚರ್ಯಕರವಾಗಿ ನುಣುಪು ಕೋಟು ಮಾಡಿಕೊಳ್ಳುವ ಮಾಹಿತಿಯನ್ನು ಒರಟು ಮೈಯಿನ ಬ್ಯಾಕ್ಟೀರಿಯಾಗಳಿಗೆ ತಲುಪಿಸಿದ್ದವು. ಬ್ಯಾಕ್ಟೀರಿಯಾಗಳ ವಿರುದ್ಧ ಯುದ್ಧ ಮಾಡುತ್ತಿದ್ದವನಿಗೆ, ಅಕಸ್ಮಾತ್ ಆಗಿ ಜೀನ್ ಒಂದು ಕೆಲಸ ಮಾಡುವುದು ಕಣ್ಣಿಗೆ ಬಿದ್ದಿತ್ತು. ಗ್ರಿಫಿತ್ ಅದನ್ನು “ಪರಿವರ್ತಕ ಸಿದ್ಧಾಂತ” (“ಟ್ರಾನ್ಸ್‌ಫಾರ್ಮಿಂಗ್ ಪ್ರಿನ್ಸಿಪಲ್”) ಎಂದು ಕರೆದ.
೧೯೨೮ರಲ್ಲಿ ಗ್ರಿಫಿತ್ ತನ್ನ ಅಧ್ಯಯನವನ್ನು ಪ್ರಕಟಿಸಿದ ನಂತರ, ಒಂದು ದಶಕಕ್ಕೂ ಹೆಚ್ಚು ಕಾಲ, ಈ ಪರಿವರ್ತಕ ತತ್ವದ ರಹಸ್ಯದ ಕುರಿತ ಚರ್ಚೆ ಒಳಗೊಳಗೇ ಕಾವೇರಿ, ೧೯೪೦ರ ಹೊತ್ತಿಗೆ ಹೊಗೆಯಾಡಲು ಪ್ರಾರಂಭವಾಯಿತು.
ಕ್ರೋಮೋಸೋಮುಗಳು ಎರಡು ವಸ್ತುಗಳಿಂದ ಮಾಡಲ್ಪಟ್ಟಿವೆ: ಪ್ರೋಟೀನ್ ಮತ್ತು ಡಿಎನ್‌ಎ (ಡಿಯಾಕ್ಸಿರೈಬೋನ್ಯೂಕ್ಲಿಯಿಕ್ ಆಮ್ಲ). ಪ್ರೋಟೀನ್‌ಗಳು ಅಪಾರ ವೈವಿಧ್ಯಮಯ, ಕ್ರಿಯಾತ್ಮಕವಾಗಿ ಸಂಕೀರ್ಣ ಮತ್ತು ಜೀವ ರಚನೆಯ ಮೂಲ ವಸ್ತುಗಳು. ಹೀಗಾಗಿ, ಆ ಕಾಲದಲ್ಲಿ ಅವು ವಿಜ್ಞಾನಿಗಳ ಆಕರ್ಷಣೆಯ ಕೇಂದ್ರಗಳಾಗಿದ್ದವು. ಇದಕ್ಕೆ ವಿರುದ್ಧವಾಗಿ, ಡಿಎನ್‌ಎ ಒಂದು ನೀರಸ ಮತ್ತು ಪುನರಾವರ್ತಿತವಾಗುವ “ಪೆದ್ದು ಅಣು” ವಿನಂತೆ (“stupid molecule”) ಹಲವರಿಗೆ ಕಂಡರೆ, ಇನ್ನೂ ಹಲವರು ಅದೊಂದು ಕೇವಲ “ಅಟ್ಟಣೆ” (scaffold) ಮಾತ್ರ ಎಂದೇ ಭಾವಿಸಿದ್ದರು. ಹೀಗಾಗಿ, ಜೀವ-ಜೀವನದ ವೈವಿಧ್ಯತೆಯ ಸೂತ್ರಧಾರಿಯಾದ ಜೀನ್ ಖಂಡಿತವಾಗಿ ಪ್ರೋಟೀನ್‌ನಿಂದಲೇ ಮಾಡಲ್ಪಟ್ಟಿದೆ ಎಂಬ ಅಭಿಪ್ರಾಯ ಅಂದಿನ ವಿಜ್ಞಾನಿಗಳಲ್ಲಿ ಸಾರ್ವತ್ರಿಕವಾಗಿತ್ತು.
ಎಲ್ಲರೂ ನಂಬಿದ್ದ ಈ ಮೂಲಭೂತ ನಂಬಿಕೆಗೆ ಸವಾಲು ಹಾಕಲು ಧೈರ್ಯ ಮಾಡಿದ ಮೊದಲ ವ್ಯಕ್ತಿ ಎಂದರೆ, ಆಸ್ವಾಲ್ಡ್ ಏವೆರಿ. ನ್ಯೂಯಾರ್ಕಿನ ರಾಕ್‌ಫೆಲ್ಲರ್ ಇನ್‌ಸ್ಟಿಟ್ಯೂಟ್‌ನಲ್ಲಿ ಬ್ಯಾಕ್ಟೀರಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಅವನು, ಸುಮಾರು 15 ವರ್ಷಗಳ ಕಾಲ, ತನ್ನ ಸಹೋದ್ಯೋಗಿಗಳಾದ ಕಾಲಿನ್ ಮ್ಯಾಕ್ಲಿಯೋಡ್ ಮತ್ತು ಮ್ಯಾಕ್ಲಿನ್ ಮೆಕಾರ್ತಿ ಅವರೊಂದಿಗೆ ಕೈಜೋಡಿಸಿ ಎಲ್ಲವೂ ಪ್ರೋಟೀನ್‌ನಲ್ಲಿಯೇ ಇದೆ ಎನ್ನುವ ಭೂತೋಚ್ಚಾಟನೆಯ ಕಾರ್ಯದಲ್ಲಿ ತೊಡಗಿಕೊಂಡ. ಏವೆರಿ ಮತ್ತು ಅವನ ತಂಡ ಗ್ರಿಫಿತ್‌ನ ಪರಿವರ್ತಕ ತತ್ವದ ಪ್ರಯೋಗಗಳನ್ನು ಮುಂದುವರೆಸಿ, ಅತಿ ಸೂಕ್ಷ್ಮ ಜೀವರಾಸಾಯನಿಕ ಪ್ರಯೋಗಗಳ ಮೂಲಕ, ಆ “ತತ್ವ” ದಲ್ಲಿನ ಪ್ರತಿಯೊಂದು ಅಂಶವನ್ನೂ ತೆಗೆದುಹಾಕಲು ಪ್ರಾರಂಭಿಸಿದರು. ನುಣುಪು ಬ್ಯಾಕ್ಟೀರಿಯಾಗಳನ್ನು ಸುಟ್ಟ ನಂತರ ಉಳಿದಿದ್ದ ವಸ್ತುವಿನಲ್ಲಿ ಅವರು ಮುಖ್ಯವಾಗಿ ಮೂರು ಬಗೆಯ ರಾಸಾಯನಿಕಗಳನ್ನು ಗಮನಿಸಿದರು. ಒಂದು, ಪ್ರೋಟೀನ್‌ಗಳು. ಎರಡು, ಆರ್‌ಎನ್‌ಎ (ರೈಬಾಕ್ಸಿ ನ್ಯೂಕ್ಲಿಕ್ ಆಮ್ಲ). ಮತ್ತು ಮೂರು, ಡಿಎನ್‌ಎ. ಪ್ರೋಟೀನ್‌ಗಳನ್ನು ನಾಶ ಪಡಿಸಿದಾಗಲೂ, ಪರಿವರ್ತಕ ತತ್ವ ಹಾಗೆಯೇ ಮುಂದುವರೆಯಿತು, ಪ್ರೋಟೀನ್ ಇಲ್ಲದೆಯೂ, ಕೋಟು ತಯಾರಿಸುವ ಮಾಹಿತಿ ಒರಟು ಬ್ಯಾಕ್ಟೀರಿಯಾಗಳಿಗೆ ತಲುಪಿ, ಅವು, ನುಣುಪು ಬ್ಯಾಕ್ಟೀರಿಯಾಗಳಾಗಿ ಇಲಿಗಳನ್ನು ಕೊಂದವು. ಆರ್‌ಎನ್‌ಎ ನಾಶ ಮಾಡಿದಾಗಲೂ, ಪರಿವರ್ತನೆಯ ಪ್ರಕ್ರಿಯೆ ನಿಲ್ಲಲ್ಲಿಲ್ಲ. ಆದರೆ, ಡಿಎನ್‌ಎ ನಾಶಪಡಿಸುತ್ತಿದ್ದಂತೆ, ಪರಿವರ್ತನೆ ಸಂಪೂರ್ಣವಾಗಿ ನಿಂತುಹೋಯಿತು. ೧೯೪೪ರಲ್ಲಿ ಏವೆರಿ ಹಲವು ವರ್ಷಗಳ ತನ್ನ ಪ್ರಯೋಗಗಳ ಫಲಿತಾಂಶವನ್ನು ಪ್ರಕಟಿಸಿದ: “ಜೀನ್‌ಗಳು ಡಿಎನ್‌ಎ ಇಂದಲೇ ಮಾಡಲ್ಪಟ್ಟಿವೆ”
ಆದರೆ, ನಮ್ಮನ್ನು ನಾವಾಗಿಸುವ ಸೂತ್ರಧಾರಿಯಾದ ಜೀನ್, ಡಿಎನ್‌ಎ ಅಂತಹ “ಪೆದ್ದು ಅಣು”ವಿನಿಂದ ಮಾಡಲ್ಪಟ್ಟಿದೆ ಎಂಬ ಸತ್ಯವನ್ನು ಒಪ್ಪಲು ಬಹು ಮಂದಿ ವಿಜ್ಞಾನಿಗಳು ಸಿದ್ಧರಿರಲಿಲ್ಲ. ಅವರಲ್ಲಿ ಬಹುಮಂದಿ ಏವೆರಿಯ ಪ್ರಯೋಗಗಳಲ್ಲೇ ಏನೋ ತಪ್ಪಿರಬಹುದು ಎಂದರೆ, ಇನ್ನೂ ಹಲವರು “ಬ್ಯಾಕ್ಟೀರಿಯಾಗಳಂತಹ ಸರಳ ಜೀವಿಯೊಂದರ ಜೀನ್ ಡಿಎನ್‌ಎ ಇಂದ ಮಾಡಿರಬಹುದಾದರೂ, ಇಡೀ ವೈವಿಧ್ಯಮಯ ಜೀವಿಗಳ ಅದರಲ್ಲೂ ಮನುಷ್ಯರೂ ಸೇರಿದಂತೆ ಸಂಕೀರ್ಣ ಪ್ರಾಣಿಗಳ ಜೀನ್ ಡಿಎನ್‌ಎ ಇಂದಲೇ ಮಾಡಲ್ಪಟ್ಟಿರುವುದು ಸಾಧ್ಯವೇ ಇಲ್ಲ” ಎಂದು ಏವೆರಿಯ ಸಂಶೋಧನೆಯನ್ನು ಪಕ್ಕಕ್ಕಿಟ್ಟರು; ಎಷ್ಟೋ ಮಂದಿ ವಿಜ್ಞಾನಿಗಳು ಅವನ ಅಧ್ಯಯನವನ್ನು ಓದಲೂ ಸಿದ್ಧರಿರಲಿಲ್ಲ. ಇವೆಲ್ಲಾ ಏವೆರಿಗೆ ದುಃಖ ತಂದಿರಬಹುದಾದರೂ, ಆಶ್ಚರ್ಯ ತಂದಿರಲಾರದು; ಎಲ್ಲವೂ ಪ್ರೋಟೀನಿನಲ್ಲೇ ಇದೆ ಎಂಬ ಭಾವನೆಯಿದ್ದ ಆ ಯುಗದಲ್ಲಿ, ಪ್ರಪಂಚ, ಡಿಎನ್‌ಎಯ ಮಹತ್ವವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ.
*****

(ರ್ವಿನ್ ಚಾಗಾರ್ಫ್)
ಡಿಎನ್‌ಎದ ಮಹತ್ವದ ಕುರಿತು ಮನವರಿಸುವಲ್ಲಿ ಏವೆರಿ ವಿಫಲನಾದರೂ, ಅವನು ಅದರ ಬೀಜವನ್ನು ಬಿತ್ತಿದ್ದ. ವಿಜ್ಞಾನಿಗಳಲ್ಲಿ ಕೆಲವರಾದರೂ ಈ “ಪೆದ್ದು ಅಣು” ಕನಿಷ್ಠ ಇನ್ನೊಮ್ಮೆ ನೋಡುವುದಕ್ಕೆ ಲಾಯಕ್ಕು ಎಂದು ಭಾವಿಸಿದರು. ಅಂತಹವರಲ್ಲಿ ಆಸ್ಟ್ರಿಯಾ ಸಂಜಾತ ವಿಜ್ಞಾನಿ ಎರ್ವಿನ್ ಚಾಗಾರ್ಫ್ ಸಹ ಒಬ್ಬ. ಅಪ್ರತಿಮ ಪಂಡಿತನೆಂದೇ ಹೆಸರಾದ ಚಾಗಾರ್ಫ್, ಯೆಹೂದಿ ಕುಟುಂಬಕ್ಕೆ ಸೇರಿದವನು. ಯೂರೋಪಿನಲ್ಲಿ ಮನೆ ಮಾಡಿದ್ದ ಧಾರ್ಮಿಕ ವೈಷಮ್ಯ, ಮೊದಲನೇ ಮಹಾಯುದ್ಧದ ಸಮಯದಲ್ಲಿ ಅವನ ಕುಟುಂಬವನ್ನು ತಟ್ಟಿ, ಇಡೀ ಕುಟುಂಬ ತಮ್ಮ ಗಂಟು-ಮೂಟೆ ಕಟ್ಟಿ ವಲಸೆ ಹೋಗಬೇಕಾಯಿತು. ಆಗ ಅವನಿಗೆ ಇನ್ನೂ ಸುಮಾರು ಹತ್ತು ವರ್ಷ. ೧೯೩೦ರ ದಶಕದಲ್ಲಿ, ಹಿಟ್ಲರ್ ಮತ್ತು ಅವನ ನಾಜ಼ಿ ಸಿದ್ಧಾಂತ ಮೇಲೇರಿ ಯೆಹೂದಿಗಳ ವಿರುದ್ಧದ ವೈಷಮ್ಯ ಮತ್ತಷ್ಟು ಹೆಚ್ಚಿ, ಚಾಗಾರ್ಫ್ ಯೂರೋಪನ್ನೇ ತೊರೆದು ಅಮೆರಿಕಕ್ಕೆ ಬರುವಂತಾಯಿತು. ಇಂತಹ ಜೀವನಾನುಭವಗಳು ಅವನನ್ನು ಒಂದು ರೀತಿಯಲ್ಲಿ ದಾರ್ಶನಿಕನ ನಿರ್ಲಿಪ್ತತೆಯೆಡೆಗೆ ದೂಡಿದವು. ತನ್ನ ಆತ್ಮಚರಿತ್ರೆಯಲ್ಲಿ ಚಾಗಾರ್ಫ್ ತನ್ನನ್ನು ತಾನೇ “ಎಲ್ಲರಿಂದ ಓಡಿ ಹೋಗುವವನು” ಎಂದೇ ಬಣ್ಣಿಸಿಕೊಳ್ಳುತ್ತಾನೆ. ಅವನ ಬರಹಗಳಲ್ಲಿ, ಕಹಿ, ವ್ಯಂಗ್ಯ, ವಿಜ್ಞಾನದ ಗುರಿಗಳ ಬಗೆಗೆ ಬೇಸರ ಎಲ್ಲವನ್ನೂ ಕಾಣಬಹುದು. ಅವುಗಳೊಂದಿಗೆ, ವೈಚಾರಿಕತೆಯ ಬಗೆಗೆ ಅವನಿಗಿದ್ದ ಆಳವಾದ ಪ್ರೇಮ ಸಹ. ಇಂತಹ ಮನಸ್ಥಿತಿಯೇ ಅವನನ್ನು ಎಲ್ಲರೂ “ಪೆದ್ದು ಅಣು” ಎಂದು ಕರೆದಿದ್ದ ಡಿಎನ್‌ಎಯ ಅಧ್ಯಯನದ ಎಡೆಗೆ ತಳ್ಳಿರಬೇಕು.
ಡಿಎನ್‌ಎ ನಿಜಕ್ಕೂ ವಂಶವಾಹಿಯೇ ಆಗಿದ್ದರೆ, ಅದು ಮಾಹಿತಿಯಿಂದ ಸಮೃದ್ಧವಾಗಿರಲೇಬೇಕೆನ್ನುವುದು ಚಾರ್ಗಾಫ್‌ನ ತರ್ಕ. ಅವನ ಅಧ್ಯಯನ-ಪ್ರಯೋಗಗಳು ಈ ತರ್ಕಕ್ಕೆ ಸಾಕ್ಷ್ಯವನ್ನು ದೊರಕಿಸಿದವು. ಡಿಎನ್‌ಎ ಮುಖ್ಯವಾಗಿ ಅಡೆನೈನ್ (A), ಥೈಮಿನ್ (T), ಗ್ವಾನೈನ್ (G), ಮತ್ತು ಸೈಟೋಸಿನ್ (C) ಎಂಬ ನಾಲ್ಕು ಬೇಸ್ (ನೈಟ್ರೋಜೆನ್ ಇರುವ ಕ್ಷಾರ)ಗಳಿಂದ ಮಾಡಲ್ಪಟ್ಟಿವೆ. ಚಾರ್ಗಾಫ್‌ನ ಪ್ರಯೋಗಗಳು, ಈ ಬೇಸ್‌ಗಳ ಕುರಿತು ಸರಳವೂ ಸುಂದರವೂ ಆದ ಸತ್ಯವೊಂದನ್ನು ಹೊರಹಾಕಿದವು. ಈ ನಾಲ್ಕು ಬೇಸ್‌ಗಳು ನಾಲ್ಕು ಅಕ್ಷರಗಳಂತೆ ಕೆಲಸ ಮಾಡುತ್ತವೆ; ಮನುಷ್ಯರ ಭಾಷೆಗಳಲ್ಲಿನ ಕೆಲವೇ ಅಕ್ಷರಗಳು ಪದಪುಂಜಗಳಾಗಿ, ವಾಕ್ಯಗಳಾಗಿ, ಪುಟಗಳಾಗಿ, ಪುಸ್ತಕಗಳಾಗಿ, ಸಂಪುಟಗಳಾಗಿ ನಮ್ಮೆಲ್ಲಾ ಅನಿಸಿಕೆಗಳಿಗೆ ರೂಪ ನೀಡುವಂತೆ, ಡಿಎನ್‌ಎದ ಈ ನಾಲ್ಕು ಬೇಸ್‌ಗಳು ಸಹ ಜೀವ ರಾಶಿಯ ವೈವಿಧ್ಯತೆಯ ಮಾಹಿತಿಯನ್ನು ರೂಪಿಸುವ ಅಕ್ಷರಗಳು. ನಮ್ಮ ಭಾಷೆಗಳಿಗೆ ವ್ಯಾಕರಣ ಇರುವಂತೆಯೇ, ಡಿಎನ್‌ಎದ ಈ ನಾಲ್ಕು ಅಕ್ಷರಗಳ ಭಾಷೆಗೂ ಒಂದು ವ್ಯಾಕರಣವಿದೆ. ಉದಾಹರಣೆಗೆ, ಡಿಎನ್‌ಎದ ಪರಿಭಾಷೆಯಲ್ಲಿ, “ಪದ” (ಕೋಡಾನ್)ವೊಂದರಲ್ಲಿ ಯಾವಾಗಲೂ ಮೂರೇ “ಅಕ್ಷರ” (ಬೇಸ್)ಗಳು ಇರುತ್ತವೆ; “AUG”, “GGC”, ಹೀಗೆ. ಕೋಡಾನ್‌ಗಳಿಂದ ರೂಪಗೊಳ್ಳುವ “ವಾಕ್ಯ” (ಸೀಕ್ವೆನ್ಸ್)ಗಳಲ್ಲಿ ಪದ-ಪದಗಳ ನಡುವೆ ಯಾವುದೇ ಖಾಲೀ ಜಾಗವಾಗಲೀ, ಕಾಮಾ ಅಥವಾ ಇನ್ನಾವುದೇ ಪಂಕ್ಚುಯೇಷನ್ ಸೂಚಕಗಳಾಗಲಿ ಇರುವುದಿಲ್ಲ. ಬದಲಿಗೆ, ಕೆಲವೊಂದು ಕೋಡಾನ್‌ಗಳು ಆದಿ ಮತ್ತು ಅಂತ್ಯ ಸೂಚಕಗಳಾಗಿ ಕೆಲಸಮಾಡುತ್ತವೆ. (“AUG” ಆದಿ ಸೂಚಕವಾದರೆ, “UAA”, “UAG” ಮತ್ತು “UGA” ಅಂತ್ಯ ಸೂಚಕಗಳು). ಒಟ್ಟಿನಲ್ಲಿ, ಚಾರ್ಗಾಫ್ ತನ್ನ ಅಧ್ಯಯನಗಳ ಮೂಲಕ — ಅವನು ತನ್ನೊಂದು ಬರಹದಲ್ಲಿ ಹೇಳಿದಂತೆ — ಕ್ರೋಮೋಸೋಮುಗಳ “ಆ ಕರಿ ದಾರಗಳಲ್ಲಿ ಜೀವಶಾಸ್ತ್ರದ ವ್ಯಾಕರಣ”ವನ್ನೇ ಕಂಡಿದ್ದ.
೧೯೫೦ರ ದಶಕದ ಆದಿ ಭಾಗದ ವೇಳೆಗೆ, “ಜೀವಶಾಸ್ತ್ರದ ವ್ಯಾಕರಣ”ವೇನೋ ಕಂಡಿತ್ತು. ಆದರೆ, ಡಿಎನ್‌ಎ ಅಣುವಿನ ಭೌತಿಕ ವಿನ್ಯಾಸ ಮಾತ್ರ ಇನ್ನೂ ರಹಸ್ಯವಾಗಿಯೇ ಉಳಿದಿತ್ತು. ಸಾವಿರಾರು ವರ್ಷಗಳ ತಡಕಾಟ-ಹುಡುಕಾಟಗಳ ನಂತರವೂ, ನಮ್ಮನ್ನು ನಾವಾಗಿಸುವ ಆ ಕಣಗಳು ಹೇಗಿರುತ್ತವೆ ಎಂದು ಯಾರೂ ಕಂಡಿರಲಿಲ್ಲ; ಅವು ಯಾವ ನಿಯಮಗಳಡಿಯಲ್ಲಿ ಕೆಲಸ ಮಾಡುತ್ತವೆ ಎಂಬುದಷ್ಟೇ ಗೊತ್ತಾಗಿತ್ತು. ಆದರೂ ಚಾರ್ಗಾಫ್‌ನ ಸಂಶೋಧನೆಯಿಂದಾಗಿ, “ಜೀನ್” ಎಂಬ ಈ ಗುಹ್ಯಾತಿಗುಹ್ಯ ಕಣವನ್ನು ನೋಡುವ ಕ್ಷಣ ದೂರವಿಲ್ಲ ಎನ್ನುವ ಭಾವನೆ ಹಲವರಲ್ಲಿ ಮೂಡಿ, ವಿಜ್ಞಾನಿಗಳ ನಡುವೆ ಮಹತ್ವಾಕಾಂಕ್ಷೆ, ಪಾಂಡಿತ್ಯ, ಅಹಂಕಾರ, ಅಸೂಯೆ ತುಂಬಿದ್ದ ಸ್ಪರ್ಧೆಯೊಂದಕ್ಕೆ ಕಾರಣವಾಯಿತು. ಜೀನ್‌ನ ಭೌತಿಕ ರೂಪವನ್ನು ಬಯಲಿಗೆಳೆಯುವ ಈ ರೇಸಿನಲ್ಲಿ, ಹಲವು ದೇಶಗಳ ಎಷ್ಟೋ ಮಂದಿ ವಿಜ್ಞಾನಿಗಳಿದ್ದರೂ, ಮುಂಚೂಣಿಯಲ್ಲಿದ್ದವರು ಮಾತ್ರ ಮೂರೇ ತಂಡಗಳು: ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಲಿನಸ್ ಪಾಲಿಂಗ್ ಮತ್ತು ಅವನ ತಂಡ, ಲಂಡನ್ನಿನ ಕಿಂಗ್ಸ್ ಕಾಲೇಜಿನ ಮಾರಿಸ್ ವಿಲ್ಕಿನ್ಸ್ ಮತ್ತು ರೋಸಾಲಿಂಡ್ ಫ್ರಾಂಕ್ಲಿನ್, ಕೊನೆಯದಾಗಿ ಕೇಂಬ್ರಿಜ್ ಯೂನಿವರ್ಸಿಟಿಯ ಜೇಮ್ಸ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್.
*****
ನಾವು ಕೆಮಿಸ್ಟ್ರಿ ಅಧ್ಯಯನ ಮಾಡುವಾಗ, ರಾಸಾಯನಿಕ ಅಣುಗಳನ್ನು ಬಹುಮಟ್ಟಿಗೆ ಅವುಗಳ ಕೆಮಿಕಲ್ ಫಾರ್ಮುಲಾಗಳ ಮೂಲಕವೇ ಗುರುತಿಸುತ್ತೇವೆ. ಉದಾಹರಣೆಗೆ ನೀರು-H2O, ಬೆಂಜ಼ೀನ್-C6H6 ಹೀಗೆ. ಆದರೆ, ಈ ಅಣುಗಳು, ಎಲ್ಲ ಭೌತಿಕ ವಸ್ತುಗಳಂತೆ, ಮೂರು ಆಯಾಮಗಳಿರುವ ವಸ್ತುಗಳು. ಅವುಗಳಿಗೆ, ಕೆಮಿಕಲ್ ಫಾರ್ಮುಲಾ ಇರುವಂತೆಯೇ ಒಂದು ರೂಪ ಸಹ ಇರುತ್ತದೆ. ಒಂದು ರಾಸಾಯನಿಕ ಅಣುವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕೆಂದರೆ, ಅದರ ಕೆಮಿಕಲ್ ಫಾರ್ಮುಲಾ ತಿಳಿದಿದ್ದರೆ ಸಾಲದು, ಅದರ ರೂಪ ಸಹ ತಿಳಿದಿರಬೇಕು. (ಉದಾಹರಣೆಗೆ ಎಥನಾಲ್ ಮತ್ತು ಡೈಮೀಥೈಲ್ ಈತರ್ ಎರಡರ ಫಾರ್ಮುಲಾ ಒಂದೇ – C2H6O. ಆದರೆ, ಆ ಅಣುಗಳ ರೂಪ ಮಾತ್ರ ಬೇರೆ ಬೇರೆ; ಪಕ್ಕದ ಚಿತ್ರ ನೋಡಿ. ಈ ರೂಪವೇ ಅದರ ಜೈವಿಕ ಪರಿಣಾಮಗಳನ್ನೂ ರೂಪಿಸುತ್ತದೆ. ಎಥನಾಲ್ ನಾವು ಕುಡಿಯಲು ಸಾಧ್ಯವಿರುವ ಆಲ್ಕೋಹಾಲ್ ಆದರೆ, ಡೈಮೀಥೈಲ್ ಈತರ್ ಹತ್ತಿಕೊಂಡು ಉರಿಯುವ ಒಂದು ಅನಿಲ). ಜೀವ ಶಾಸ್ತ್ರದ ವಿಷಯದಲ್ಲಂತೂ, ಅಣುಗಳ ರೂಪ ಅತಿಮುಖ್ಯ. ಆ ಅಣುವಿನ ಕೆಮಿಕಲ್ ಕಂಪೋಸಿಷನ್ ಜೊತೆಗೆ, ಅದರ ೩ಡಿ ರೂಪ ಸರಿಯಾಗಿ “ಫಿಟ್” ಆದರೆ ಮಾತ್ರ ಅದು ಕೆಲಸ ಮಾಡುತ್ತದೆ. ಹೀಗಾಗಿ ಬಯೋ-ಫಿಸಿಕ್ಸ್, ಬಯೋ-ಕೆಮಿಸ್ಟ್ರಿ ಇತ್ಯಾದಿ ವೈಜ್ಞಾನಿಕ ರಂಗಗಳಲ್ಲಿ, ಅಣುವಿನ ರೂಪವನ್ನು ಗ್ರಹಿಸುವುದು ಅತ್ಯಂತ ಮುಖ್ಯವಾಗುತ್ತದೆ.

ಕಾಣಲಾಗದ್ದನ್ನು ಕಾಣುವುದು ಹೇಗೆ? ಈ ಪ್ರಶ್ನೆ ವಿಜ್ಞಾನದಲ್ಲಿ ಹಲವು ಬಾರಿ ಏಳುತ್ತದೆ. ಉದಾಹರಣೆಗೆ ಬ್ಲ್ಯಾಕ್‌ಹೋಲ್ ಅಥವಾ ಕೃಷ್ಣರಂಧ್ರ. ಕೃಷ್ಣರಂಧ್ರ ಅನಂತದ ಮಹಾಕಾಯಗಳಲ್ಲಿ ಒಂದು. ಕೃಷ್ಣರಂಧ್ರದ ಗುರುತ್ವಾಕರ್ಷಣೆ ಎಷ್ಟಿರುತ್ತದೆಂದರೆ, ಅದರ ಹೆಸರೇ ಸೂಚಿಸುವಂತೆ, ಅದರಿಂದ ಬೆಳಕೂ ಸಹ ಹೊರಬರುವುದಿಲ್ಲ. ಬೆಳಕು ಹೊರಬರದಿದ್ದರೆ, ಅದನ್ನು ಕಾಣುವುದಾದರೂ ಹೇಗೆ? ಫೋಟೋ ತೆಗೆಯುವುದಾದರೂ ಹೇಗೆ? ಕೃಷ್ಣರಂಧ್ರದಂತಹ ಮಹಾಕಾಯ ಅಂತಹದೊಂದು ಸವಾಲೊಡ್ಡಿದರೆ, ಡಿಎನ್‌ಎ ತರಹದ ಸೂಕ್ಷ್ಮಾತಿ ಸೂಕ್ಷ್ಮ ಅಣುಗಳೂ ಸಹ ಅಂತಹುದೇ ಸವಾಲನ್ನು ಒಡ್ಡುತ್ತವೆ. ಡಿಎನ್‌ಎ ಅಣುವಿನ ಡಯಾಮೀಟರ್ ಸುಮಾರು ೨ ನ್ಯಾನೋಮೀಟರ್ ಅಷ್ಟೇ. ಆದರೆ, ಕಣ್ಣಿಗೆ ಕಾಣುವ ಬೆಳಕಿನ ತರಂಗಾಂತರ ಸುಮಾರು ೪೦೦-೭೦೦ ನ್ಯಾನೋಮೀಟರ್‌ಗಳು. ಹೀಗಾಗಿ ಡಿಎನ್‌ಎಯನ್ನು ಕಣ್ಣಿನಿಂದ ನೋಡುವ ಅಥವಾ ಫೋಟೋ ತೆಗೆಯುವ ಪ್ರಯತ್ನಗಳು ಗಾಳಿಯನ್ನು ಜರಡಿಯಲ್ಲಿ ಹಿಡಿಯುವ ಪ್ರಯತ್ನದಂತೆ ವ್ಯರ್ಥ.
ಹಾಗಿದ್ದರೆ, ಕೃಷ್ಣರಂಧ್ರ, ಅಣುಗಳ ಭೌತಿಕ ರೂಪವನ್ನು ಕಾಣುವುದು ಸಾಧ್ಯವೇ ಇಲ್ಲವೇ?

ಸಾಧ್ಯವಿದೆ. ಅವು ಮೂಡಿಸುವ ನೆರಳುಗಳನ್ನು ಗಮನಿಸಿ. ಪ್ರತಿಬಾರಿ ನೀವು ಕೃಷ್ಣರಂಧ್ರದ “ಫೋಟೋ” ನೋಡಿದಾಗಲೂ, ನೀವು ನೋಡುತ್ತಿರುವುದು, ಅದು ಅದರ ಹಿಂದಿನಿಂದ ಬರುತ್ತಿರುವ ಬೆಳಕನ್ನು ತಡೆದು ಮೂಡಿಸಿರುವ ಕತ್ತಲೆಯನ್ನು ಮಾತ್ರ! ಅಥವಾ ಆ ಕೃಷ್ಣರಂಧ್ರದ ಕುರಿತು ಎಲ್ಲಾ ಮಾಹಿತಿಗಳನ್ನೂ ಕಲೆಹಾಕಿ ಕಂಪ್ಯೂಟರ್ ಮಾಡೆಲಿಂಗ್ ಮೂಲಕ ಸೃಜಿಸಿರುವ ಚಿತ್ರ!!
*****
ಲಿನಸ್ ಪಾಲಿಂಗ್, ೨೦ನೆಯ ಶತಮಾನ ಕಂಡ ಅಪ್ರತಿಮ ವಿಜ್ಞಾನಿಗಳ ಮೊದಲ ಸಾಲಿನಲ್ಲಿ ನಿಲ್ಲುವವನು. ಕೆಮಿಸ್ಟ್ರಿ ವಿಷಯದಲ್ಲಂತೂ ಅವನೇ ನಂಬರ್ ೧ ಎಂದರೂ ತಪ್ಪಾಗಲಾರದು. ೧೯೨೦-೩೦ರ ದಶಕಗಳಲ್ಲಿ, ಭೌತಶಾಸ್ತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆಗಳಿಗೆ ಕಾರಣವಾಗಿದ್ದ ಕ್ವಾಂಟಮ್ ಮೆಕಾನಿಕ್ಸ್ ಅನ್ನು ಕೆಮಿಸ್ಟ್ರಿಗೆ ಮೊದಲ ಬಾರಿಗೆ ಅನ್ವಯಿಸಿದವನೇ ಪಾಲಿಂಗ್. ಅವನು ಎರಡು ನೊಬೆಲ್ ಪ್ರಶಸ್ತಿಗಳಿಗೆ ಭಾಜನನಾದವನೂ ಸಹ; ಒಂದು ಕೆಮಿಸ್ಟ್ರಿಗೆ. ಇನ್ನೊಂದು, ಜಾಗತಿಕ ಶಾಂತಿಗಾಗಿ ದಶಕಗಳ ಕಾಲ ಅಣ್ವಸ್ತ್ರಗಳ ವಿರುದ್ಧ ಹೋರಾಡಿ ಗಳಿಸಿದ ಶಾಂತಿ ಪ್ರಶಸ್ತಿ.
೧೯೫೦ರ ದಶಕದ ಆದಿಯಲ್ಲಿ ಅವನಿಗೆ ನೊಬೆಲ್ ಪ್ರಶಸ್ತಿ ಸಂದಿರಲಿಲ್ಲವಾದರೂ — ಕೆಮಿಸ್ಟ್ರಿ ನೊಬೆಲ್ ಅವನಿಗೆ ದೊರಕಿದ್ದು ೧೯೫೪ರಲ್ಲಿ — ಅವನ ಕೀರ್ತಿ-ಪ್ರತಿಷ್ಠೆಗಳು ವೈಜ್ಞಾನಿಕ ರಂಗದಲ್ಲಿ ಜಗದ್ವಿಖ್ಯಾತವಾಗಿದ್ದವು. “ಜೀನ್”ಗಳ ಭೌತಿಕ ರೂಪವನ್ನು ಹೊರಗೆಡುವ ಸ್ಪರ್ಧೆಯಲ್ಲಿ ಯಾರು ಗೆಲ್ಲಬಹುದೆಂಬ ಪ್ರಶ್ನೆಯನ್ನು ಹಾಕಿದ್ದರೆ, ಆ ಕಾಲದ ಬಹುತೇಕ ವಿಜ್ಞಾನಿಗಳು “ಲಿನಸ್ ಪಾಲಿಂಗ್” ಎನ್ನುತ್ತಿದ್ದರೆನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕಣ್ಣಿಗೆ ಕಾಣದ, ಫೋಟೋ ತೆಗೆಯಲಾಗದ ಜೀನ್ ಅಥವಾ ಡಿಎನ್‌ಎ ಅಣುವಿನ ಭೌತಿಕ ರೂಪವನ್ನು ಹೊರಗೆಡುವುದಾದರೂ ಹೇಗೆ? ಈ ಯುಗದಲ್ಲಿ, ಅದಕ್ಕೆ ಒಂದು ಸರಳ ಉತ್ತರವಿದೆ: ಕಂಪ್ಯೂಟರ್ ಸಾಫ್ಟ್‌ವೇರ್ ಮತ್ತು ೩-ಡಿ ಗ್ರಾಫಿಕ್ಸ್ ಬಳಸಿ ಅದರ ಭೌತಿಕ ರೂಪವನ್ನು ತೆರೆಯ ಮೇಲೆ ಕಾಣಬಹುದು. ವಾಸ್ತವದಲ್ಲಿ, ಇಂದು ಚಲನಚಿತ್ರ ರಂಗದಲ್ಲಿ ‘ಕಾಂತಾರ’ ಇತ್ಯಾದಿ ಸಿನೆಮಾಗಳಲ್ಲಿ ಬಳಸುವ 3D Computer Generated Imagery ಅಥವಾ ಸಿಜಿಐ, ಮೊದಲು ಬಳಕೆಗೆ ಬಂದದ್ದೇ ಅಣುಗಳ ರೂಪಗಳನ್ನು ಹೀಗೆ ಮಾಡೆಲ್ ಮಾಡಿ ಪರದೆಯ ಮೇಲೆ ತೋರಿಸಲು.
ಆದರೆ, ೧೯೫೦ರ ದಶಕದಲ್ಲಿ, ಇಂತಹ ತಂತ್ರಜ್ಞಾನ ಇನ್ನೂ ಇದ್ದಿರಲಿಲ್ಲ. ಹೀಗಾಗಿ, ಪಾಲಿಂಗ್‌ನಂತಹ ವಿಜ್ಞಾನಿಗಳು ಅಣುವೊಂದರ ರೂಪವನ್ನು ಕಂಡುಕೊಳ್ಳ ಬೇಕಿದ್ದರೆ, ತಮ್ಮೆಲ್ಲಾ ವೈಜ್ಞಾನಿಕ ಮತ್ತು ಗಣಿತದ ಜ್ಞಾನವನ್ನೆಲ್ಲಾ ಬಳಸಿ ಆ ಅಣು ಹೇಗಿರಬಹುದೆಂದು ಊಹೆ ಮಾಡಿ ಅದರ ಪ್ರತಿಮೆಯನ್ನು ಲೋಹದ ವೈರುಗಳು, ಪ್ಲಾಸ್ಟಿಕ್ ಮಣಿಗಳು, ಇತ್ಯಾದಿಗಳಿಂದ ತಮ್ಮ ಕೈಯಾರೆ ನಿರ್ಮಿಸಬೇಕಿತ್ತು. (ಈಗ ಇಂತಹ ಮಾಡೆಲ್‌ಗಳನ್ನು ನಿರ್ಮಿಸಲು ಬೇಕಿರುವ ಬಿಡಿ ಭಾಗಗಳು ಸುಲಭವಾಗಿ ಸಿಗುತ್ತವೆ. ಆದರೆ, ೧೯೫೦ರ ದಶಕದಲ್ಲಿ, ಆ ಬಿಡಿ ಭಾಗಗಳನ್ನೂ ವಿಜ್ಞಾನಿಗಳೇ ಸೃಷ್ಟಿಸಿಕೊಳ್ಳಬೇಕಿತ್ತು) ಹೀಗೆ ನಿರ್ಮಿಸಿದ ಪ್ರತಿಮೆಯ ರೂಪವೊಂದು, ವೈಜ್ಞಾನಿಕವಾಗಿ ಸರಿಯೆಂದು ಸಾಬೀತಾದರೆ ಮಾತ್ರ ಆ ರೂಪವೇ ಆ ಅಣುವಿನ ಬಾಹ್ಯ ರೂಪವೆಂದು ಒಪ್ಪಲಾಗುತ್ತದೆ.
೧೯೫೦ರ ಆದಿಯಲ್ಲಿ ಲಿನಸ್ ಪಾಲಿಂಗ್ ಮತ್ತು ಆತನ ತಂಡದವರು ಜೀನ್/ಡಿಎನ್‌ಎ ಅಣುವಿನ ಅಂತಹ ಪ್ರತಿಮೆಯೊಂದನ್ನು ನಿರ್ಮಿಸುವ ಕಾರ್ಯದಲ್ಲಿ ತೊಡಗಿಕೊಂಡರು. ವೈಜ್ಞಾನಿಕ ಪಾಂಡಿತ್ಯದಲ್ಲಿ ಪಾಲಿಂಗ್ “ನಂಬರ್ ೧” ಆಗಿದ್ದರಿಂದ, ಸಹಜವಾಗಿಯೇ ಆ ಸ್ಪರ್ಧೆಯಲ್ಲಿ ಅವರೇ ಮೊದಲಿಗರಾಗಬಹುದೆಂದು ಇಡೀ ವೈಜ್ಞಾನಿಕ ಜಗತ್ತು ಭಾವಿಸಿತ್ತು.

ಅದರಂತೆಯೇ, ೧೯೫೩ರ ಫೆಬ್ರವರಿಯಲ್ಲಿ, ಪಾಲಿಂಗ್ ಮತ್ತು ಅವರ ತಂಡದವರು ಪ್ರಪ್ರಥಮ ಬಾರಿಗೆ ಅಂತಹದೊಂದು ಪ್ರತಿಮೆಯನ್ನು ರೂಪಿಸಿರುವುದಾಗಿ ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕ PNASನಲ್ಲಿ ಪ್ರಕಟಿಸಿದರು.
*****
ಅತ್ತ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪಾಲಿಂಗ್ ಮತ್ತು ಅವರ ತಂಡ ಜೀನ್ ಮಾಡೆಲ್ ನಿರ್ಮಾಣದಲ್ಲಿ ತೊಡಗಿದ್ದರೆ, ಇತ್ತ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಮಾರಿಸ್ ವಿಲ್ಕಿನ್ಸ್ ಜೀನ್‌ನ ಸ್ವರೂಪವನ್ನು ಬಯಲಿಗೆಳೆಯಲು ಇನ್ನೊಂದು ರೀತಿಯ ಯತ್ನದಲ್ಲಿ ತೊಡಗಿದ್ದ. ಹೌದು, ಈ ಡಿಎನ್‌ಎ ಅಣುಗಳು ನಮ್ಮ ಕಣ್ಣಿಗೆ ಕಾಣುವ ಬೆಳಕಿನ ತರಂಗಾಂತರಕ್ಕಿಂತ ಸಣ್ಣವು; ಬೆಳಕಿನ ಜರಡಿಯಲ್ಲಿ ಅವನ್ನು ಹಿಡಿಯಲಾಗುವುದಿಲ್ಲ. ಆದರೆ, ಎಕ್ಸ್-ರೇ ವಿಕಿರಣಗಳ ತರಂಗಾಂತರ (ಸುಮಾರು ೦.೨ ನ್ಯಾನೋಮೀಟರ್), ಅಣುವಿನ ಡಯಾಮೀಟರ್‌ಗಿಂತ ಹತ್ತರಷ್ಟು ಕಡಿಮೆ. ಹೀಗಾಗಿ, ಡಿಎನ್‌ಎ ದ ಎಕ್ಸ್-ರೇ ಚಿತ್ರ ತೆಗೆದರೆ ಹೇಗೆ? ಇದು ವಿಲ್ಕಿನ್ಸ್‌ನ ಆಲೋಚನೆಯಾಗಿತ್ತು.
ಮಾರಿಸ್ ವಿಲ್ಕಿನ್ಸ್ ವಾಸ್ತವದಲ್ಲಿ ಒಬ್ಬ ಭೌತಶಾಸ್ತ್ರಜ್ಞ. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ, ಅಮೆರಿಕನ್ನರು ಅಣುಬಾಂಬ್ ನಿರ್ಮಿಸುತ್ತಿದ್ದಾಗ ‘ಮನ್‌ಹಟನ್ ಪ್ರಾಜೆಕ್ಟ್’ ಎಂದೇ ಹೆಸರಾಗಿದ್ದ ಆ ಪ್ರಯತ್ನದಲ್ಲಿ ತೊಡಗಿದ್ದ ವಿಜ್ಞಾನಿಗಳಲ್ಲಿ ಅವನೂ ಒಬ್ಬ. ಆದರೆ, ಹಿರೋಷಿಮಾ-ನಾಗಸಾಕಿ ಮಾರಣಹೋಮಗಳನ್ನು ಕಂಡ ನಂತರ, ಎಷ್ಟೋ ಮಂದಿ ವಿಜ್ಞಾನಿಗಳು ಅಣು-ಭೌತಶಾಸ್ತ್ರದಿಂದಲೇ ದೂರ ಸರಿದರು. ವಿಲ್ಕಿನ್ಸ್ ಸಹ ಅಂತಹವರ ಸಾಲಿಗೆ ಸೇರಿದವನು; ಭೌತಶಾಸ್ತ್ರದ ಅಣುಬಾಂಬ್ ಬಿಟ್ಟು, ಜೀವಶಾಸ್ತ್ರದ ಒಳಗುಟ್ಟನ್ನು ಹೊರಗೆಳೆಯಲು ಬಂದವನು.
ಎಕ್ಸ್ ರೇ ವಿಕಿರಣಗಳು, ಡಿಎನ್‌ಎ ಅಂತಹ ಅಣುಗಳಿಗೆ ಬಡಿದಾಗ ಅವು ವಿವಿಧ ದಿಕ್ಕಿಗೆ ಚದುರಿ ಎಕ್ಸ್-ರೇ ಫಿಲ್ಮ್ ಮೇಲೆ ಕಲೆಗಳನ್ನು ಮೂಡಿಸುತ್ತವೆ. ಇಂತಹ ಕಲೆಗಳು, ಆ ಅಣುವಿನ ಬಾಹ್ಯ ಸ್ವರೂಪ-೩ಡಿ ಆಕಾರದ ಬಗೆಗೆ ಸುಳಿವುಗಳನ್ನು ನೀಡುತ್ತವೆ. ಆ ಸುಳಿವುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಗಣಿತದ ಲೆಕ್ಕಾಚಾರಗಳನ್ನು ಬಳಸಿ “ಇಂತಹ ಕಲೆಗಳನ್ನು ಮೂಡಿಸಲು ಈ ಅಣು ಹೀಗಿರಲೇ ಬೇಕು” ಎಂದು ಊಹೆ ಮಾಡಬಹುದು. ಇದನ್ನು “ಎಕ್ಸ್-ರೇ ಕ್ರಿಸ್ಟಲೋಗ್ರಫಿ” ಎಂದು ಕರೆಯಲಾಗುತ್ತದೆ. ಎಕ್ಸ್-ರೇ ಕ್ರಿಸ್ಟಲೋಗ್ರಫಿ ಅತ್ಯಂತ ಕಷ್ಟದ ಕೆಲಸ; ಗಣಿತದ ನೈಪುಣ್ಯತೆಯ ಜೊತೆಗೆ, ಕೆಮಿಸ್ಟ್ರಿ-ಫಿಸಿಕ್ಸ್ ಗಳಲ್ಲಿ ಪಾಂಡಿತ್ಯವೂ ಇರಬೇಕು; ಅಪಾರ ಸಹನೆ ಮತ್ತು ಅಗಾಧ ಕಾಲ್ಪನಿಕ ಶಕ್ತಿಯೂ ಬೇಕು; ಸದಾ ಏಕಾಂತವನ್ನು ಬಯಸುವ ಅಂತರ್ಮುಖಿ ವ್ಯಕ್ತಿತ್ವದವನಾದ ವಿಲ್ಕಿನ್ಸ್ ಅಂತಹ ಪ್ರತಿಭಾವಂತನಿಗೆ ಹೇಳಿ ಮಾಡಿಸಿದಂತಹ ಕೆಲಸ.
೧೯೫೧ರಲ್ಲಿ, ವಿಲ್ಕಿನ್ಸ್ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ, ಈ ಯತ್ನದಲ್ಲಿ ಕೈ ಜೋಡಿಸಲು ಸುಮಾರು ೩೦ ವರ್ಷದ ತರುಣಿಯೊಬ್ಬಳನ್ನು ಅದೇ ಪ್ರಯೋಗಶಾಲೆಗೆ ನೇಮಿಸಲಾಯಿತು. ಅವಳೇ, ರೋಸಲಿಂಡ್ ಫ್ರಾಂಕ್ಲಿನ್. ಈ ಪ್ರಯತ್ನದಲ್ಲಿ ವಿಲ್ಕಿನ್ಸ್ ಒಂದಿಗೆ ಫ್ರಾಂಕ್ಲಿನ್ “ಕೈ-ಜೋಡಿಸಿದಳು” ಎನ್ನುವುದಕ್ಕಿಂತ “ಅವರಿಬ್ಬರೂ ಕೈ-ಕೈ ಮಿಲಾಯಿಸಿದರು” ಎನ್ನುವುದೇ ಸೂಕ್ತವೆನ್ನಿಸುತ್ತದೆ.

(ರೋಸಲಿಂಡ್ ಫ್ರಾಂಕ್ಲಿನ್)
ಫ್ರಾಂಕ್ಲಿನ್ ಸಹ, ವಿಲ್ಕಿನ್ಸ್ ನಂತೆಯೇ, ಭೌತಶಾಸ್ತ್ರದಿಂದ ಜೀವಶಾಸ್ತ್ರದ ಕಡೆಗೆ ಬಂದವಳು. ವಿಲ್ಕಿನ್ಸ್‌ನ ಪ್ರಯೋಗಶಾಲೆ ಸೇರುವ ಮುನ್ನವೇ ಅಣುಗಳ ಎಕ್ಸ್-ರೇ ಕ್ರಿಸ್ಟಲೋಗ್ರಫಿಯಲ್ಲಿ ತನ್ನ ಛಾಪನ್ನು ಮೂಡಿಸಿದ್ದವಳು. ವಿಲ್ಕಿನ್ಸ್ ಮೌನಿ-ಅಂತರ್ಮುಖಿಯಾದರೆ, ಅವನಂತೆಯೇ ಮಹಾಪ್ರತಿಭಾವಂತೆಯಾಗಿದ್ದ ಫ್ರಾಂಕ್ಲಿನ್, ನಿರ್ಭಿಡೆಯಿಂದ ಮಾತನಾಡುವ ಸ್ವತಂತ್ರ ಪ್ರವೃತ್ತಿಯವಳು. ವಿಲ್ಕಿನ್ಸ್, ಎಲ್ಲವನ್ನೂ ಸಂಶಯದಿಂದ ನೋಡಿದರೂ ಯಾವುದಕ್ಕೂ ಬಾಯಿಬಿಡದ ವ್ಯಕ್ತಿಯಾಗಿದ್ದರೆ, ಫ್ರಾಂಕ್ಲಿನ್ ತಾನು ಕಂಡ ವಿಚಾರಗಳ ಕುರಿತು ಆ ಕ್ಷಣವೇ ಕಡ್ಡಿ ಮುರಿದಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಸ್ವಭಾವದವಳು. ಹೀಗಾಗಿ, ಫ್ರಾಂಕ್ಲಿನ್, ಕಿಂಗ್ಸ್ ಕಾಲೇಜಿನ ಪ್ರಯೋಗಶಾಲೆಯಲ್ಲಿ ವಿಲ್ಕಿನ್ಸ್‌ನ ಜೊತೆಗೂಡಿದ ಮೇಲೆ ಅವರಿಬ್ಬರೂ ಕೈಗೂಡಿಸುವ ಬದಲು ಕೈ-ಕೈ ಮಿಲಾಯಿಸಿದ್ದೇ ಹೆಚ್ಚು.
ಅವರ ಸ್ವಭಾವಗಳ ಅಂತರದ ಜೊತೆಗೆ, ಆ ಪ್ರಯೋಗ ಶಾಲೆಯ ಮುಖ್ಯಸ್ತನಾಗಿದ್ದ ಸರ್ ಜಾನ್ ರಾಂಡಲ್ ಮಾಡಿದ ಎಡವಟ್ಟು ಸಹ ವಿಲ್ಕಿನ್ಸ್-ಫ್ರಾಂಕ್ಲಿನ್ ನಡುವಿನ ಅಂತಃಕಲಹಕ್ಕೆ ಕಾರಣವಾಯಿತು. ಫ್ರಾಂಕ್ಲಿನ್ ಆ ಪ್ರಯೋಗಶಾಲೆಗೆ ನೇಮಕವಾದಾಗ, ವಿಲ್ಕಿನ್ಸ್ ರಜೆಯಲ್ಲಿದ್ದ. ಫ್ರಾಂಕ್ಲಿನ್ ನೇಮಕಾತಿಯ ಕುರಿತು ರಾಂಡಲ್ ವಿಲ್ಕಿನ್ಸ್‌ಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಆ ಪ್ರಯೋಗಶಾಲೆಯ ಉಪನಿರ್ದೇಶಕನಾಗಿದ್ದ ವಿಲ್ಕಿನ್ಸ್, ಫ್ರಾಂಕ್ಲಿನ್ ಕ್ರಿಸ್ಟಲೋಗ್ರಫಿ ಕಾರ್ಯದಲ್ಲಿ ತನ್ನ ಸಹಾಯಕಿಯಾಗಿ ಸೇರಿದ್ದಾಳೆ ಎಂದೇ ಭಾವಿಸಿದ್ದ. ಆದರೆ, ವಾಸ್ತವದಲ್ಲಿ, ರಾಂಡಲ್ ಕ್ರಿಸ್ಟಲೋಗ್ರಫಿಯಲ್ಲಿ ಸ್ವತಂತ್ರವಾಗಿ ಪ್ರಯೋಗಗಳನ್ನು ಮಾಡಲು ಅವಳನ್ನು ನೇಮಕ ಮಾಡಿದ್ದ. ಈ ವಿಚಾರದ ಬಗೆಗೆ ಅಂತರ್ಮುಖಿಯಾದ ವಿಲ್ಕಿನ್ಸ್ ಸ್ಪಷ್ಟೀಕರಣವನ್ನು ಕೇಳಲೂ ಇಲ್ಲ, ಅಂತಹ ಸ್ಪಷ್ಟೀಕರಣವನ್ನು ರಾಂಡಲ್ ಕೊಡಲೂ ಇಲ್ಲ. ಇಷ್ಟರ ಮಧ್ಯೆ, ರಾಂಡಲ್ ಕ್ರಿಸ್ಟಲೋಗ್ರಫಿಯಲ್ಲಿ ವಿಲ್ಕಿನ್ಸ್‌ಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ರೇಮಂಡ್ ಗಾಸ್ಲಿಂಗ್ ಎಂಬ ವಿದ್ಯಾರ್ಥಿಯನ್ನು, ಫ್ರಾಂಕ್ಲಿನ್‌ಳ ಸಹಾಯಕನಾಗಿ ವರ್ಗಾವಣೆ ಮಾಡಿದ್ದ. ಇದು, ವಿಲ್ಕಿನ್ಸ್-ಫ್ರಾಂಕ್ಲಿನ್ ನಡುವಿನ ಶೀತಲ ಸಮರವನ್ನು ಮತ್ತಷ್ಟು ತೀವ್ರಗೊಳಿಸಿ, ವೈಜ್ಞಾನಿಕ ಇತಿಹಾಸವನ್ನೇ ಬದಲಿಸಿತು.
*****
ಕಿಂಗ್ಸ್ ಕಾಲೇಜು ಸೇರಿದ ಮೇಲೆ ರೋಸಾಲಿಂಡ್ ಫ್ರಾಂಕ್ಲಿನ್, ವಿಲ್ಕಿನ್ಸ್‌ನ ತಕರಾರಿನ ಬಗೆಗೆ ತಲೆ ಕೆಡಿಸಿಕೊಳ್ಳಲಿಲ್ಲ. ವಿಲ್ಕಿನ್ಸ್‌ನ ಪ್ರಯೋಗಶಾಲೆಯ ಪಕ್ಕದಲ್ಲಿಯೇ ತನ್ನದೇ ಒಂದು ಸ್ವತಂತ್ರ ಪ್ರಯೋಗಶಾಲೆಯನ್ನು ಪ್ರಾರಂಭಿಸಿ, ತನ್ನ ಹೊಸ ಸಹಾಯಕ ರೇಮಂಡ್ ಗಾಸ್ಲಿಂಗ್ ಒಂದಿಗೆ ಎಕ್ಸ್-ರೇ ಕ್ರಿಸ್ಟಲೋಗ್ರಫಿಯಲ್ಲಿ ಕಾರ್ಯಪ್ರವೃತ್ತಳಾದಳು.
ಎಕ್ಸ್-ರೇ ತೆಗೆಯಲು ಡಿಎನ್‌ಎ ಅಣುಗಳ ಸ್ಯಾಂಪಲ್ಲುಗಳು ಎರಡು ವಿಧದಲ್ಲಿ ದೊರಕುತ್ತವೆ. ಒಂದು ಒಣ ಸ್ಫಟಿಕದಂತಹ ‘ಎ’ ಸ್ಯಾಂಪಲ್ಲಾದರೆ, ಇನ್ನೊಂದು, ತೇವಮಯವಾದ ನಾರಿನಂತಿರುವ ‘ಬಿ’ ಸ್ಯಾಂಪಲ್ಲು.
ಎಕ್ಸ್-ರೇ ಕ್ರಿಸ್ಟಲೋಗ್ರಫಿಯ ತಾಂತ್ರಿಕ ಕೌಶಲ್ಯದಲ್ಲಿ ಫ್ರಾಂಕ್ಲಿನ್‌ಳನ್ನು ಮೀರಿಸುವವರಿರಲಿಲ್ಲ. ಡಿಎನ್‌ಎ ಅಣುವಿನ ಎಕ್ಸ್-ರೇ ಚಿತ್ರವನ್ನು ಅತ್ಯಂತ ನಿಖರವಾಗಿ ತೆಗೆಯಲು ಹೊಸ ಮೈಕ್ರೋ ಕ್ಯಾಮೆರಾವನ್ನೇ ಅವಳು ತನ್ನ ಪ್ರಯೋಗಶಾಲೆಯಲ್ಲಿ ನಿರ್ಮಿಸಿ ಅದರ ಸಹಾಯದಿಂದ ಆ ಕಾಲಕ್ಕೆ ಜಗತ್ತು ಕಂಡಿದ್ದ ಅತ್ಯುತ್ತಮ ಎಕ್ಸ್ ರೇ ಚಿತ್ರಗಳನ್ನು ತೆಗೆಯಲಾರಂಭಿಸಿದಳು. ಈ ಚಿತ್ರಗಳನ್ನು ತೆಗೆಯಲು ಅವಳು ‘ಎ’ ಸ್ಯಾಂಪಲ್ ಬಳಸಿದರೆ, ಪಕ್ಕದ ಪ್ರಯೋಗಶಾಲೆಯಲ್ಲಿ ವಿಲ್ಕಿನ್ಸ್ ‘ಬಿ’ ಸ್ಯಾಂಪಲ್ ಬಳಸಿ ತನ್ನ ಪ್ರಯತ್ನಗಳನ್ನು ಮುಂದುವರೆಸಿದ್ದ.
ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಇಬ್ಬರು ಮಹಾ ಪ್ರತಿಭಾವಂತ ವಿಜ್ಞಾನಿಗಳು ಕೈ ಜೋಡಿಸಿ ಕೆಲಸ ಮಾಡುವ ಬದಲು ಶೀತಲ ಸಮರದಲ್ಲಿ ತೊಡಗಿದ್ದರೆ, ಲಂಡನ್ನಿಗೆ ಅಷ್ಟೇನೂ ದೂರವಿಲ್ಲದ ಕೇಂಬ್ರಿಜ್ ಯೂನಿವರ್ಸಿಟಿಯಲ್ಲಿ ಇಬ್ಬರು ಮಾತಿನ ಮಲ್ಲ ಮಹಾ ಕಿಲಾಡಿಗಳು ಡಿಎನ್‌ಎದ ಬಾಹ್ಯಸ್ವರೂಪವನ್ನು ಹೊರಗೆಡುವ ಸ್ಪರ್ಧೆಯಲ್ಲಿ ತಾವೂ ತೊಡಗಿಕೊಂಡಿದ್ದರು. ವಿಲ್ಕಿನ್ಸ್-ಫ್ರಾಂಕ್ಲಿನ್ ಸಂಬಂಧ ಎಣ್ಣೆ-ಸೀಗೆಕಾಯಿಯಾಗಿದ್ದರೆ, ಇವರಿಬ್ಬರು ಚಡ್ದಿ ದೋಸ್ತುಗಳಂತೆ ಸದಾ ನಗುತ್ತಾ ತಮಾಷೆ ಮಾಡುತ್ತಾ ಗಳಸ್ಯ-ಕಂಠಸ್ಯರಾಗಿದ್ದರು. ವಂಶವಾಹಿಕತೆಯ ಮಹಾ ರಹಸ್ಯವನ್ನು ಭೇದಿಸಲು ತಮ್ಮ ಕಲ್ಪನಾ ಶಕ್ತಿ, ಥಿಯರೆಟಿಕಲ್ ಜ್ಞಾನ, ಕೆಲ ಕಾರ್ಡ್‌ಬೋರ್ಡ್ ತುಂಡುಗಳು ಮತ್ತು ತುಕುಡು ವೈರುಗಳಷ್ಟೇ ಸಾಕು ಎಂದು ನಂಬಿದ್ದವರು ಅವರು: ಜೇಮ್ಸ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್.
ಅಮೆರಿಕದಲ್ಲಿ ಹುಟ್ಟಿ ಬಾಲ್ಯದಿಂದಲೂ ಅತಿ ಪ್ರತಿಭಾವಂತನಾಗಿದ್ದ ಜೇಮ್ಸ್ ವಾಟ್ಸನ್‌ಗೆ ಎಲ್ಲದರಲ್ಲೂ ಆತುರ. ಬಾಲ್ಯದಲ್ಲೇ ಕಾಲೇಜು ಮೆಟ್ಟಿಲೇರಿ, ಹದಿಹರೆಯುವ ಮುನ್ನವೇ ‘ಪ್ರಾಡಿಜಿ’ ಎಂದು ಹೆಸರಾಗಿದ್ದ ಅವನು, ಖ್ಯಾತ ಭೌತ ಶಾಸ್ತ್ರಜ್ಞ ಎಡ್ವಿನ್ ಶ್ರೋಡಿಂಗರ್ ಬರೆದಿದ್ದ “ವಾಟ್ ಈಸ್ ಲೈಫ್?” ಎನ್ನುವ ಪುಸ್ತಕದಿಂದ ಪ್ರಭಾವಿತನಾಗಿ ಪ್ರಾಣಿಶಾಸ್ತ್ರದ ಅಧ್ಯಯನವನ್ನು ಬಿಟ್ಟು ಡಿಎನ್‌ಎದ ಒಳ ಮರ್ಮವನ್ನು ಅರಿಯುವ ಸಾಹಸಕ್ಕೆ ಕೈಹಾಕಿದ್ದವನು. (ಆ ಪುಸ್ತಕದಲ್ಲಿ, ಶ್ರೋಡಿಂಗರ್, ಇಡೀ ಜೀವ ಜಗತ್ತಿನ ರಹಸ್ಯವನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ‘ಜೀನ್’ ಎಂಬ ರಾಸಾಯನಿಕದ ಕುರಿತು ಮನಮುಟ್ಟುವಂತೆ ಬರೆದಿದ್ದಾನೆ. ಈ ಒಂದು ಪುಸ್ತಕದಷ್ಟು ಪ್ರಭಾವಶಾಲಿ ಪುಸ್ತಕ ವಿಜ್ಞಾನದ ಇತ್ತೀಚಿನ ಇತಿಹಾಸದಲ್ಲಿ ಇನ್ನೊಂದಿರಲಿಕ್ಕಿಲ್ಲ; ಎಷ್ಟೋ ಮಂದಿ ನೊಬೆಲ್ ಪ್ರಶಸ್ತಿ ವಿಜೇತರು ಆ ಪುಸ್ತಕ ತಮ್ಮ ಮೇಲೆ ಬೀರಿದ ಪ್ರಭಾವದ ಬಗೆಗೆ ಹೇಳಿಕೊಂಡಿದ್ದಾರೆ. ಮಾರಿಸ್ ವಿಲ್ಕಿನ್ಸ್ ಸಹ, ಅಣು-ಭೌತಶಾಸ್ತ್ರವನ್ನು ಬಿಟ್ಟು ಜೀನ್ ಕಡೆಗೆ ಗಮನ ಹರಿಸಲು ಆ ಒಂದು ಪುಸ್ತಕ ಕಾರಣವಾಯಿತು ಎಂದಿದ್ದಾನೆ)
ವಾಟ್ಸನ್ ಅಮೆರಿಕದವನಾದರೆ, ಫ್ರಾನ್ಸಿಸ್ ಕ್ರಿಕ್ ಒಬ್ಬ ಬ್ರಿಟಿಷ್ ಸಂಜಾತ ಭೌತ ಶಾಸ್ತ್ರಜ್ಞ. ಎರಡನೇ ಮಹಾಯುದ್ಧದ ನಂತರ, ವಿಲ್ಕಿನ್ಸ್ ನಂತೆಯೇ ಅವನೂ ಸಹ ಭೌತಶಾಸ್ತ್ರವನ್ನು ಬಿಟ್ಟು ಜೀವಶಾಸ್ತ್ರದ ಅಧ್ಯಯನದೆಡೆಗೆ ಕಾಲಿಟ್ಟವನು. ಯಾವುದನ್ನೂ ಒಪ್ಪದ, ಎಲ್ಲವನ್ನೂ ಪ್ರಶ್ನಿಸುವ ಮನೋಭಾವದವನು.
ವಾಟ್ಸನ್ ಮತ್ತು ಕ್ರಿಕ್‌ರಿಗೆ, ಅಪಾರ ಪಾಂಡಿತ್ಯದ ಜೊತೆಗೆ ತಮ್ಮ ಪಾಂಡಿತ್ಯದ ಬಗೆಗೆ ಅಪಾರ ಆತ್ಮ ವಿಶ್ವಾಸ ಇತ್ತು. ಈ ಆತ್ಮ ವಿಶ್ವಾಸ ಅವರನ್ನು ಕೆಲವೊಮ್ಮೆ ಮುಖಭಂಗಕ್ಕೆ ಗುರಿಮಾಡಿದ್ದೂ ಸಹ ನಿಜ. ೧೯೫೧ರಲ್ಲಿ ಅವರು, ತಮ್ಮ ಮೇಧಾವಿತನ, ಕಲ್ಪನಾಶಕ್ತಿ, ವೈರು-ಕಾರ್ಡ್‌ಬೋರ್ಡ್ ಎಲ್ಲಾ ಬಳಸಿ, ಡಿಎನ್‌ಎ ಅಣುವಿನ ಪ್ರತಿಮೆಯೊಂದನ್ನು ನಿರ್ಮಿಸಿ ತಾವು ಸಾಧಿಸಿದೆವೆಂಬ ಹೆಮ್ಮೆಯಿಂದ ಅದನ್ನು ರೋಸಾಲಿಂಡ್ ಫ್ರಾಂಕ್ಲಿನ್‌ಳಿಗೆ ತೋರಿಸಿದರು. ತನಗನಿಸಿದ್ದನ್ನು ಮುಲಾಜಿಲ್ಲದೆ ಹೇಳುತ್ತಿದ್ದ ಅವಳು, ಅದರಲ್ಲಿನ ತಪ್ಪನ್ನು ತಕ್ಷಣವೇ ಗುರುತಿಸಿ ಅದನ್ನು ಅವರಿಗೆ ಹೇಳಿ, ಬೇರೆ ಮಾತಿಲ್ಲದೆ ಹೊರನಡೆದಳು. ಇದು ಅವರ ಆತ್ಮ ವಿಶ್ವಾಸಕ್ಕೆ ಎಂತಹ ಧಕ್ಕೆ ತಂದಿತೆಂದರೆ, ಕೆಲಕಾಲ ಅವರು ತಮ್ಮ ಅಧ್ಯಯನವನ್ನೇ ನಿಲ್ಲಿಸಬೇಕಾಯಿತು. ಡಿಎನ್‌ಎ ರಹಸ್ಯ ಹೊರಗೆಡುವ ರೇಸಿನಲ್ಲಿ ಅವರು ಹಿಂದೆ ಬಿದ್ದಿದ್ದರು.
*****
ಹೀಗೆ, ೧೯೫೦-೫೧ರಲ್ಲಿ ಪಾಲಿಂಗ್ ಮತ್ತು ತಂಡ ಕ್ಯಾಲಿಫೋರ್ನಿಯಾದಲ್ಲಿ ಥಿಯರಿ ಬಳಸಿ ಡಿಎನ್‌ಎ ಪ್ರತಿಮೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದರೆ, ಕೇಂಬ್ರಿಜ್‌ನಲ್ಲಿ ವಾಟ್ಸನ್-ಕ್ರಿಕ್ ಸಹ ಅದೇ ಪ್ರಯತ್ನದಲ್ಲಿ ತೊಡಗಿದ್ದರು.
ಇನ್ನೊಂದು ಕಡೆ, ಕಿಂಗ್ಸ್ ಕಾಲೇಜಿನಲ್ಲಿ, ಡಿಎನ್‌ಎ ಸ್ವರೂಪವನ್ನು ಅರಿಯಲು ವಿಲ್ಕಿನ್ಸ್ ‘ಬಿ’ ಸ್ಯಾಂಪಲ್ಲುಗಳ ಎಕ್ಸ್-ರೇ ಚಿತ್ರ ತೆಗೆಯುತ್ತಿದ್ದರೆ, ಪಕ್ಕದ ಲ್ಯಾಬಿನಲ್ಲೇ ಫ್ರಾಂಕ್ಲಿನ್ ಮತ್ತು ಅವಳ ಸಹಾಯಕ ಗಾಸ್ಲಿಂಗ್ ‘ಎ’ ಸ್ಯಾಂಪಲ್ಲುಗಳ ಎಕ್ಸ್-ರೇ ತೆಗೆಯುತ್ತಿದ್ದರು.
ಎಲ್ಲವನ್ನೂ ಪ್ರಯೋಗದ ಒರೆಗೆ ಹಚ್ಚಿಯೇ ಒಪ್ಪಿಕೊಳ್ಳುತ್ತಿದ್ದ ಫ್ರಾಂಕ್ಲಿನ್, ಎರಡು ವರ್ಷಗಳ ಕಾಲ ನಿರಂತರವಾಗಿ, ಮತ್ತೆ-ಮತ್ತೆ ‘ಎ’ ಸ್ಯಾಂಪಲ್ಲುಗಳ ಎಕ್ಸ್-ರೇ ತೆಗೆದು, ಹಗಲು-ರಾತ್ರಿಯೆನ್ನದೆ ಆ ಚಿತ್ರಗಳನ್ನು ವಿಶ್ಲೇಷಿಸಿ ತನ್ನೆಲ್ಲಾ ಪಾಂಡಿತ್ಯವನ್ನೂ ಬಳಸಿ “ಡಿಎನ್‌ಎ ಅಣು ಹೀಗಿರಬಹುದೇ?” ಎಂದು ಊಹಿಸುತ್ತಳೇ ಇದ್ದಳು. ಆದರೆ, ಅದು ಯಾರ-ಯಾವ ಊಹೆ-ಪ್ರಯತ್ನಗಳಿಗೂ ಸಿಕ್ಕದೆ ನುಣುಚಿಕೊಳ್ಳುತ್ತಲೇ ಇತ್ತು.

(ವಾಟ್ಸನ್-ಕ್ರಿಕ್)
೧೯೫೨ರ ಆರಂಭದಲ್ಲಿ, ಕೊನೆಗೊಂದು ದಿನ, ಫ್ರಾಂಕ್ಲಿನ್, ಇನ್ನೇನೂ ದಾರಿಗಾಣದೆ, ಒಲ್ಲದ ಮನಸ್ಸಿನಿಂದಲೇ, ಎಂದಿನಂತೆ ‘ಎ’ ಸ್ಯಾಂಪಲ್ ಎಕ್ಸ್-ರೇ ಬದಲು ‘ಬಿ’ ಸ್ಯಾಂಪಲ್ಲಿನ ಎಕ್ಸ್-ರೇ ತೆಗೆಯಲು ನಿರ್ಧರಿಸಿದಳು. ಆ ಸಂಜೆ ಗಾಸ್ಲಿಂಗ್, ಫ್ರಾಂಕ್ಲಿನ್ ನೀಡಿದ ನಿರ್ದೇಶನದಂತೆ ಅದರ ಚಿತ್ರ ತೆಗೆದ ಮತ್ತು ಡೆವೆಲಪ್ ಮಾಡಿದ. ಮಾರನೆಯ ದಿನ ಫ್ರಾಂಕ್ಲಿನ್ ಪ್ರಪ್ರಥಮ ಬಾರಿಗೆ ಆ ಫೋಟೋ ನೋಡಿದಳು. ಫೋಟೋ-೫೧!
ಆ ಫೋಟೊ ನೋಡಿದ ತಕ್ಷಣವೇ ಅವಳಿಗೆ ಅದು ಕಂಡಿತು. ಆ ಫೋಟೋದಲ್ಲಿನ ಸ್ಪಷ್ಟತೆ, ಅದರಲ್ಲೂ ಫ್ರಾಂಕ್ಲಿನ್‌ಳಂತಹ ಅನುಭವ-ಪಾಂಡಿತ್ಯ ಎರಡೂ ಇದ್ದ ಮೇಧಾವಿಗೆ, ಒಂದರೆ ಕ್ಷಣ ಅವಳ ಉಸಿರುಗಟ್ಟಿಸಿರಬಹುದು. ಆ ಫೋಟೋ ಮುಖಾಂತರ, ಡಿಎನ್‌ಎ ಗಟ್ಟಿದನಿಯಲ್ಲಿ, ಖಡಾಖಂಡಿತವಾಗಿ ಸಾರುತ್ತಿತ್ತು: “ನಾನೊಂದು ಸುರುಳಿ!”. ಪೈಥಾಗೊರಾಸನಿಂದ ಹಿಡಿದು, ಕೊನೆಗೂ ಡಾರ್ವಿನ್ನನವರೆಗೆ ಸಾವಿರಾರು ವರ್ಷಗಳ ಸಿದ್ಧಾಂತಗಳ, ಮೆಂಡೆಲ್-ಮಾರ್ಗನ್ ಅಂತಹವರ ಪ್ರಯೋಗಗಳ ಗುರಿಯ ಸ್ವರೂಪದ ದರ್ಶನವಾಗಿತ್ತು. ವಾಟ್ಸನ್ ಮುಂದೊಮ್ಮೆ ಹೇಳಿದಂತೆ, “ಜೀವನದ ರಹಸ್ಯದ ಕೀಲಿ” ಕೈಗೆ ಸಿಕ್ಕಿತ್ತು.
ಫ್ರಾಂಕ್ಲಿನ್‌ಗೆ ಆ ನಿಮಿಷದಲ್ಲಿ ಎಂತಹುದೇ “ಥ್ರಿಲ್” ಆಗಿದ್ದರೂ, ಅವಳು ಹಾರಿ-ಚೀರಾಡುವ ಜಾಯಮಾನದವಳಲ್ಲ. ಬದಲಿಗೆ, ಎಲ್ಲವನ್ನೂ ಇನ್ನಷ್ಟು ನಿಖರತೆಯಿಂದ ಒರೆಗೆ ಹಚ್ಚಿ ನೋಡಿ ನಂತರವೇ ತಾನು ಕಂಡ ದರ್ಶನವನ್ನು ಪ್ರಕಟಿಸುವ ಮನಸ್ಥಿತಿಯುಳ್ಳ ವಿಜ್ಞಾನಿ. ಹೀಗಾಗಿ, ಅವಳು ಮಾಡಿದ್ದಿಷ್ಟೇ: ಆ ಫೋಟೋವನ್ನು ತನ್ನ ಮೇಜಿನ ಡ್ರಾಯರಿನಲ್ಲಿ ಜಾಗರೂಕತೆಯಿಂದ ಇಟ್ಟದ್ದು; ಆ ಫೋಟೋದೊಂದಿಗೆ ಪ್ರಕಟಿಸಲು ಇನ್ನಷ್ಟು ವೈಜ್ಞಾನಿಕ ಸಾಕ್ಷ್ಯಾಧಾರ ಕಲೆ ಹಾಕುವ ಪ್ರಯತ್ನದಲ್ಲಿ ತೊಡಗಿಕೊಳ್ಳುವುದು.
*****
ಜನವರಿ ೧೯೫೩. ವಿಲ್ಕಿನ್ಸ್ ಮತ್ತು ಫ್ರಾಂಕ್ಲಿನ್ ನಡುವಿನ ಸಮರ ತಾರಕಕ್ಕೇರಿತ್ತು. ವಿಲ್ಕಿನ್ಸ್, ಕಿಂಗ್ಸ್ ಕಾಲೇಜಿನ ಇಡೀ ಡಿಎನ್‌ಎ ಪ್ರಾಜೆಕ್ಟ್ — ಅದರ ಒಂದು ಭಾಗವನ್ನು ರೋಸಲಿಂಡ್ ಫ್ರಾಂಕ್ಲಿನ್ ಸ್ವತಂತ್ರವಾಗಿ ಮಾಡುತ್ತಿದ್ದರೂ — ತನ್ನದೆಂದೇ ಭಾವಿಸಿದ್ದ. ಅವನು, ಫೋಟೋ-೫೧ ಅನ್ನು ಫ್ರಾಂಕ್ಲಿನ್‌ಳಿಗೆ ತಿಳಿಸದೆ ವಾಟ್ಸನ್‌ಗೆ ತೋರಿಸಿದ. ಆ ಫೋಟೋ ನೋಡಿದ ಕೂಡಲೇ, ವಾಟ್ಸನ್‌ಗೆ ಎಲೆಕ್ಟ್ರಿಕ್ ಷಾಕ್ ಹೊಡೆದಂತಾಯಿತು. “ಸುರುಳಿ!”
ರೇಸ್‌ನಿಂದ ಹೊರ ಬಿದ್ದಿದ್ದ ವಾಟ್ಸನ್-ಕ್ರಿಕ್, ಸ್ಪರ್ಧೆಗೆ ವಾಪಸಾಗಿದ್ದಲ್ಲದೆ, ಆ ಒಂದೇ ಕ್ಷಣದಲ್ಲಿ ಮುಂಚೂಣಿಗೆ ಬಂದಿದ್ದರು. ಆ ಸುರುಳಿಯ ಪ್ರತಿಮೆಯನ್ನು ನಿರ್ಮಿಸಬೇಕಿತ್ತು ಅಷ್ಟೇ.
ಮುಂದಿನ ಕೆಲ ವಾರಗಳ ಕಾಲ, ವಾಟ್ಸನ್ ಮತ್ತು ಕ್ರಿಕ್ ಹಗಲು-ರಾತ್ರಿ ಎನ್ನದೆ, ಆ ಪ್ರತಿಮೆಯ ನಿರ್ಮಾಣದಲ್ಲಿ ತೊಡಗಿದರು. ಆ ನಿರ್ಮಾಣಕ್ಕೆ, ಇನ್ನಷ್ಟು ವಿವರಗಳು ಬೇಕಾಗಿತ್ತು. ಅವೆಲ್ಲಾ ಫ್ರಾಂಕ್ಲಿನ್ ಬಳಿ ಇತ್ತು; ಅವಳು ಅವನ್ನು ತನ್ನ ಪ್ರಯೋಗ-ಅಧ್ಯಯನಗಳ ಮೂಲಕ ಕಲೆ ಹಾಕಿದ್ದಳು. ವಾಟ್ಸನ್-ಕ್ರಿಕ್ ಕೇಳಿದ್ದರೆ, ಅವಳು ಅವನ್ನು ಕೊಡುತ್ತಿದ್ದಳೋ ಏನೋ, ಆದರೆ, ಆ ಕೊನೆಯ ಹಂತದಲ್ಲಿ ಅವಳನ್ನು ಕೇಳಿ ತಾವು ರೇಸಿನಲ್ಲಿ ಮುನ್ನುಗ್ಗಿರುವ ರಹಸ್ಯವನ್ನು ಬಿಟ್ಟುಕೊಡಲು ಅವರು ಸಿದ್ಧರಿರಲಿಲ್ಲ. ಆದರೆ, ಆ ವಿವರಗಳೂ ಅವರಿಗೆ ದೊರಕಿದವು; ವಾಟ್ಸನ್-ಕ್ರಿಕ್ ಕೆಲಸ ಮಾಡುತ್ತಿದ್ದ ಪ್ರಯೋಗಶಾಲೆಯ ಹಿರಿಯ ಅಧಿಕಾರಿಯೊಬ್ಬ ತನ್ನ ಪ್ರಭಾವ ಬಳಸಿ, ಫ್ರಾಂಕ್ಲಿನ್‌ಗೆ ತಿಳಿಯದಂತೆ ಅವನ್ನು ಪಡೆದು ವಾಟ್ಸನ್-ಕ್ರಿಕ್‌ರಿಗೆ ನೀಡಿದ. ಅವರು, ಡಿಎನ್‌ಎ ಪ್ರತಿಮೆಯ ನಿರ್ಮಾಣ ಮಾಡಿ ಮುಗಿಸಿದರು.
ಫೆಬ್ರುವರಿ ೨೮, ೧೯೫೩ರಂದು, ವಾಟ್ಸನ್-ಕ್ರಿಕ್ ತಾವು ನಿರ್ಮಿಸಿದ್ದ ಮಾಡೆಲ್ ತೋರಿಸಲು ಕಿಂಗ್ಸ್ ಕಾಲೇಜ್ ತಂಡವನ್ನು ಆಹ್ವಾನಿಸಿದರು. ವಿಲ್ಕಿನ್ಸ್ ಬಂದ. ಫ್ರಾಂಕ್ಲಿನ್ ಸಹ ಬಂದಳು.
ಲೋಹದ ವೈರುಗಳಿಂದ ನಿರ್ಮಿಸಿದ್ದ ಆ ಸುಂದರ ಪ್ರತಿಮೆಯನ್ನು ಫ್ರಾಂಕ್ಲಿನ್ ನೋಡಿದಳು: ನಮ್ಮನ್ನು ನಮ್ಮನ್ನಾಗಿಸುವ ಆ ಡಿಎನ್‌ಎ ಅಣು, ಬಲಕ್ಕೆ ಸುರುಳಿ ಸುತ್ತಿದ ಒಂದು ಏಣಿ!
ತಕ್ಷಣವೇ ಅವಳಿಗೆ ಗೊತ್ತಾಯಿತು. ಆ ರೇಸಿನಲ್ಲಿ, ವಾಟ್ಸನ್-ಕ್ರಿಕ್ ಗೆದ್ದಿದ್ದರು. ತಾನು ಫೋಟೋ-೫೧ರಲ್ಲಿ ಕಂಡಿದ್ದ ದರ್ಶನವನ್ನು, ಅವರು ಪ್ರತಿಮೆಯಾಗಿಸಿದ್ದರು.
ಶತ-ಶತಮಾನಗಳಿಂದ ಗುಟ್ಟಾಗಿದ್ದ ವೈಜ್ಞಾನಿಕ ಸತ್ಯವೊಂದನ್ನು — ತಾನು ಕೆಲವೇ ತಿಂಗಳ ಹಿಂದೆ ಕಂಡು ಕೊಂಡಿದ್ದ ಸತ್ಯವನ್ನು — ಅವರು ಹೊರ ತಂದಿದ್ದರು.
ಆದರೆ, ಅವರ ಯಶಸ್ಸಿನ ಹಿಂದಿನ ಸತ್ಯ ಮಾತ್ರ ಅವಳಿಗೆ ತಿಳಿದಿರಲಿಲ್ಲ.
*****
ಏಪ್ರಿಲ್ ೨೫, ೧೯೫೩ರಂದು ಪ್ರತಿಷ್ಠಿತ ವೈಜ್ಞಾನಿಕ ಪತ್ರಿಕೆಯಲ್ಲಿ ನೇಚರ್ ನಲ್ಲಿ, ಮೂರು ಲೇಖನಗಳು ಪ್ರಕಟವಾದವು. ಮೊದಲನೆಯದು, ವಾಟ್ಸನ್-ಕ್ರಿಕ್‌ರ “Molecular Structure of Nucleic Acids: A Structure for Deoxyribose Nucleic Acid” ಎಂಬ ಲೇಖನ. ಎರಡನೆಯದು, ವಿಲ್ಕಿನ್ಸ್ ಮತ್ತು ಸಂಗಡಿಗರು ಬರೆದಿದ್ದ ವಾಟ್ಸನ್-ಕ್ರಿಕ್ರ್‌ರ ಸಂಶೋಧನೆಗೆ ವಿವರಗಳನ್ನು ಒದಗಿಸುವ ಪೂರಕ ಲೇಖನ. ಮೂರನೆಯದು, ವಾಟ್ಸನ್-ಕ್ರಿಕ್‌ರ ಪ್ರತಿಮೆಯ ಸತ್ಯತೆಯನ್ನು ಪ್ರಯೋಗಗಳ ಆಧಾರದೊಂದಿಗೆ ಸ್ಥಾಪಿಸುವ ಫ್ರಾಂಕ್ಲಿನ್ ಮತ್ತು ಗಾಸ್ಲಿಂಗ್ ಬರೆದಿದ್ದ ಲೇಖನ. ಜೊತೆಗೇ, ಫೋಟೋ-೫೧.
ಎರಡು ತಿಂಗಳ ಮುನ್ನ, ಅದೇ ವರ್ಷದ ಫೆಬ್ರವರಿಯಲ್ಲಿ ಲಿನಸ್ ಪಾಲಿಂಗ್ ಮತ್ತು ಸಂಗಡಿಗರು, ಡಿಎನ್‌ಎ ಅಣುವಿನ ರೂಪವನ್ನು ಪ್ರತಿಮೆಯಾಗಿಸಿದ್ದರಲ್ಲಾ?
ಅದು ಸರಿಯಲ್ಲವೆಂದು ಫೋಟೋ-೫೧ ಸಾಕ್ಷ್ಯ ಒದಗಿಸಿತು.
*****
೧೯೬೨ರಲ್ಲಿ ವಾಟ್ಸನ್, ಕ್ರಿಕ್ ಮತ್ತು ವಿಲ್ಕಿನ್ಸ್‌ರಿಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು. ಫ್ರಾಂಕ್ಲಿನ್ ಹೆಸರು ಆ ಪಟ್ಟಿಯಲ್ಲಿ ಇರಲಿಲ್ಲ.
೧೯೫೮ರಲ್ಲಿ, ತನ್ನ ಮೂವತ್ತೇಳನೆಯ ವಯಸ್ಸಿನಲ್ಲಿ ಕ್ಯಾನ್ಸರ್‌ನಿಂದ ಅವಳು — ವಾಟ್ಸನ್-ಕ್ರಿಕ್‌ರ ಯಶಸ್ಸಿನ ಹಿಂದಿನ ಮರ್ಮ ತಿಳಿಯದಯೇ — ಮರಣವನ್ನಪ್ಪಿದ್ದಳು.
ನೊಬೆಲ್ ನೀಡುವುದು ಬದುಕಿರುವವರಿಗೆ ಮಾತ್ರ.
*****
ರೋಸಲಿಂಡ್ ಫ್ರಾಂಕ್ಲಿನ್, ಅವಳ ಪ್ರಯೋಗಗಳು, ಫೋಟೋ-೫೧, ಜೀವನದ ರಹಸ್ಯವನ್ನು ಹೊರ ತೆಗೆಯುವ ಪ್ರಯತ್ನದಲ್ಲಿ ಅವಳ ಕೊಡುಗೆ ಎಲ್ಲವೂ ವಿಜ್ಞಾನದ ಇತಿಹಾಸದ ಪುಟಗಳಲ್ಲಿ ಕೇವಲ ಅಡಿ ಟಿಪ್ಪಣಿಗಳಾದವು.
ವಾಟ್ಸನ್, ೧೯೬೮ರಲ್ಲಿ ತನ್ನ ಆತ್ಮ ಚರಿತ್ರೆಯನ್ನು ಬರೆದ. ಅದರಲ್ಲಿ ಫೋಟೋ-೫೧ ಕುರಿತು ಬರೆಯುತ್ತಾನಾದರೂ, ಅದರ ಮಹತ್ವವನ್ನು ಅಲ್ಲಗೆಳೆಯುತ್ತಾನೆ. ಅಷ್ಟೇ ಅಲ್ಲ, ರೋಸಾಲಿಂಡ್ ಫ್ರಾಂಕ್ಲಿನ್‌ಳ ವೈಜ್ಞಾನಿಕ ಕೊಡುಗೆ ಮತ್ತು ವ್ಯಕ್ತಿತ್ವದ ಬಗ್ಗೆಯೂ ಕೇವಲವಾಗಿ ಬರೆಯುತ್ತಾನೆ.
ಆದರೆ, ಇತ್ತೀಚಿನ ವರ್ಷಗಳಲ್ಲಿ, ವಿಜ್ಞಾನದ ಇತಿಹಾಸಕಾರರು, “ಜಗತ್ತಿನ ಅತ್ಯಂತ ಸುಂದರ ಫೋಟೋ” ಹಿಂದಿನ ಸತ್ಯವನ್ನು ಸ್ಥಾಪಿಸಲೆತ್ನಿಸುತ್ತಿದ್ದಾರೆ.
ಪೈಥಾಗೊರಾಸನ ಪ್ರಮೇಯದಿಂದ ಹಿಡಿದು, ಮಾರ್ಗನ್‌ನ ನೊಣಗಳು, ಫ್ರಾಂಕ್ಲಿನ್‌ಳ ಫೋಟೋವರೆಗಿನ ವಂಶವಾಹಿಯ ಈ ಹುಡುಕಾಟ, ಹಲವಾರು ವೈರುಧ್ಯಗಳ — ಧೃಡ ಪ್ರಯತ್ನ/ಆಕಸ್ಮಿಕ, ಸ್ನೇಹ/ಸಮರ, ಮಹಾನ್ ಒಳನೋಟ/ಪೂರ್ವಾಗ್ರಹ… ಹೀಗೆ — ಕತೆ.

ಜೀವನದ ರಹಸ್ಯವನ್ನು ಹುಡುಕುತ್ತಾ, ಮಾನವರ ಹೃದಯಗಳಲ್ಲಿ ತುಂಬಿರುವ ಸಂಕಲ್ಪ, ಪೈಪೋಟಿ, ಪ್ರತಿಭೆ, ಸಮೀಪದೃಷ್ಟಿ ಎಲ್ಲವನ್ನೂ ಹೊರಹಾಕುವ ಕತೆ ಕೂಡಾ.
ಆದರೆ, ಆ ಕತೆಯ ಅಂತ್ಯದಲ್ಲಿ ಸೃಷ್ಟಿಯಾದ ಆ ಪ್ರತಿಮೆ ಇಡೀ ಜೀವ ಜಗತ್ತಿನ ಕತೆಯನ್ನೇ ಬರೆಯುತ್ತದೆ.

ಶೇಷಾದ್ರಿ ಗಂಜೂರು ಕೆಲ ವರ್ಷಗಳ ಕಾಲ ಬಿಹಾರದ ಕಲ್ಲಿದ್ದಲು ಗಣಿಗಳಲ್ಲಿ ಕೆಲಸಮಾಡಿ, ನಂತರ ದಶಕಗಳ ಕಾಲ ಅಮೆರಿಕದಲ್ಲಿ ನೆಲೆಸಿ, ಈಗ ಸದ್ಯಕ್ಕೆ ಕೆನಡಾದಲ್ಲಿ ಕಾಗ್ನಿಟಿವ್ ಕಾಂಪ್ಯೂಟಿಂಗ್ ವಿಷಯದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ನ್ಯೂರೋಸೈನ್ಸಿನಲ್ಲಿ ಆಸಕ್ತಿಯುಳ್ಳ ವಿಜ್ಞಾನಿ.
