ಮಲ್ಲಾಡಿಹಳ್ಳಿಯ ಇಂಗ್ಲೀಷ್ ಮೀಡಿಯಂಗೆ ಸೀಟು ಸಿಕ್ಕಿದೆ ಎಂಬ ಪೋಸ್ಟ್ ಕಾರ್ಡ್ ಮನೆಗೆ ತಲುಪಿದಾಗ ನಾನು ಸಿಕ್ಕಾ ಪಟ್ಟೆ ಖುಷಿಯಾಗಿದ್ದೆ. ಮುಂದೆ ಬರಬಹುದಾದ ಹಾಸ್ಟೆಲ್ಲಿನ ಕಷ್ಟದ ದಿನಗಳ ಅರಿವು ನನಗಿರಲಿಲ್ಲವಾದ್ದರಿಂದ ನಾನು ಹಾಸ್ಟೆಲ್ ಸೇರೋಕೆ ಉತ್ಸುಕನಾಗಿದ್ದೆ. ಮಲ್ಲಾಡಿಹಳ್ಳೀಗೆ ಅಡ್ಮಿಷನ್‌ಗೆ ಹೋದಾಗ ಅಲ್ಲಿಗೆ ದಾಖಲಾಗಲು ಬಂದ ಅಪ್ಲಿಕೇಷನ್‌ಗಳಲ್ಲಿ ಅತೀ ಹೆಚ್ಚಿನ ಅಂಕಗಳು ನನ್ನವೇ ಇದ್ದುದ್ದರಿಂದ ಅಲ್ಲಿಯ ಮೇಷ್ಟ್ರು ನನ್ನನ್ನು ವಿಚಿತ್ರವಾಗಿ ನೋಡಿದರು. ಕಾರಣವಿಷ್ಟೇ. ಕೆಲವರು ಈ ಶಾಲೇಲಿ ಸೀಟು ಬೇಕೆಂದು ಪ್ರೈಮರಿಯಲ್ಲಿ ಹೆಚ್ಚು ಮಾರ್ಕ್ಸ್ ಹಾಕಿಸಿಕೊಂಡು ಬರುತ್ತಿದ್ದರಂತೆ!!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಹದಿನಾಲ್ಕನೆಯ ಕಂತು ನಿಮ್ಮ ಓದಿಗೆ

ಏನೇ ಹೇಳಿ.. ಮಕ್ಕಳಿಗೆ ಶಾಲೆಯಲ್ಲಿ‌ ಇತರೇ ವಿಷಯಗಳಿಗಿಂತ ಪಿ.ಇ ಕ್ಲಾಸು ಅಂದ್ರೆ ಸಾಕು ಪಂಚಪ್ರಾಣ! ಪ್ರೈಮರಿಯಲ್ಲಿ ನಮಗೂ ಸಹ ಇದೇ ರೀತಿ ಅನಿಸುತ್ತಿತ್ತು. ನಾವೂ ಸಹ ಆಟದ ಪಿರಿಯಡ್‌ನಲ್ಲಿ‌ ನಮ್ಮ ಶಾಲೆಯಲ್ಲಿ ಫೀಲ್ಡ್ ಇಲ್ಲದಿದ್ರೂ ಚಿಕ್ಕ ಚಿಕ್ಕ ಆಟ ಆಡಿ ಎಂಜಾಯ್ ಮಾಡ್ತಿದ್ವಿ… ಸ್ವಾತಂತ್ರ್ಯ ದಿನಾಚರಣೆ, ರಿಪಬ್ಲಿಕ್ ಡೇ ಬಂದ್ರೆ ಸಾಕು ನಾವು ಖುಷಿಯಿಂದ ಬ್ಯಾಂಡ್ ಸೆಟ್, ಬೀಗಲ್ಸ್ ತೆಗೆದುಕೊಂಡು ಹೋಗಿ ಪ್ರಾಕ್ಟೀಸ್ ಮಾಡ್ತಿದ್ವಿ. ನಮ್ಮ ಪ್ರೈಮರಿ ಶಾಲೆಯಲ್ಲಿ ಆಗ‌ ಬ್ಯಾಂಡ್ ಸೆಟ್ಟಿನ ಚಿಕ್ಕ ಡ್ರಂಗಳು ಇಲ್ಲದಿದ್ದರೂ ಸಹ ದೊಡ್ಡ ಡ್ರಂ ಬಾರಿಸುತ್ತ, ಬೀಗಲ್ಸ್‌ಗಳನ್ನು ಊದುತ್ತಿದ್ವಿ. ಆಗ ರಾಷ್ಟ್ರೀಯ ಹಬ್ಬಗಳಂದು ನಾವು ಬೆಳಿಗ್ಗೆ ಏಳು ಗಂಟೆಗೆಲ್ಲಾ ಶಾಲೆಗೆ ಹೋಗ್ತಿದ್ವಿ. ಅದಕ್ಕೂ ಮುನ್ನಾ ದಿನ ನಮ್ಮ ಬುಡೆನ್ ಸಾಬ್ ಮೇಷ್ಟ್ರು ಝಂಡಾಗೀತೆ, ವಂದೇ‌ಮಾತರಂ ಗೀತೆ ಪ್ರಾಕ್ಟೀಸ್ ಮಾಡಿಸ್ತಾ ಇದ್ರು. ಬಾವುಟ ಕಟ್ಟೋಕೆ ಒಬ್ಬ ಹುಡುಗನನ್ನು ಧ್ವಜ ಕಂಬದ ಮೇಲೆ ಹತ್ತಲು ತಿಳಿಸಿ ಬಾವುಟದ ಹಗ್ಗ ಕಟ್ಟಲು ಹೇಳ್ತಾ ಇದ್ರು. ಇದಕ್ಕೆ ಸಣ್ಣೀರ, ಕೆಲವೊಮ್ಮೆ ಮಂಜ (ಕುರಿ ಮಂಜ) ಆಯ್ಕೆ ಆಗುತ್ತಿದ್ದ. ಇವನಿಗೇಕೆ ಹೀಗೆ ಕರೀತ ಇದ್ವಿ ಅಂದ್ರೆ ಅವನು ಅವನ ಮನೆಯಲ್ಲಿ ಕುರಿಗಳನ್ನು ಸಾಕಿದ ವಿಷಯವನ್ನು ನಮಗೆ ಹೇಳಿದ್ದರಿಂದ, ಮಂಜುನಾಥ ಅನ್ನೋರು ಇಬ್ರು ಇದ್ದಿದ್ರಿಂದ ಇವನಿಗೆ ‘ಕುರಿ ಮಂಜ’ ಅಂತಾ ಅಡ್ಡ ಹೆಸರು ಇಟ್ಟಿದ್ವಿ!

ಈಗ ಕೆಲ ಊರಿನ ಹೆಸರು, ರಸ್ತೆ ಹೆಸರು,ಪಟ್ಟಣದ ಬಡಾವಣೆಗಳಿಗೆ ಯಾವ ರೀತಿ ಶಾರ್ಟ್ ಹೆಸರಿನಿಂದ ಹೇಳ್ತಾರೋ ಅದೇ ರೀತಿ ನಾವೂ ನಮ್ ಕ್ಲಾಸ್ ಮೇಟ್ ಹೆಸರುಗಳನ್ನು ಚಿಕ್ಕದಾಗಿ ಕರೆಯುತ್ತಾ ಇದ್ವಿ. ಉದಾಹರಣೆಗೆ ಪ್ರಕಾಶನಿಗೆ ಪಕ್ಕಿ, ಪ್ರದೀಪನಿಗೆ ಪದ್ದ, ಶ್ರೀನಿವಾಸನಿಗೆ ಸೀನ, ಪರಮೇಶನಿಗೆ ಪರ್ಮಿ, ಪ್ರಶಾಂತನಿಗೆ‌ ಪಚ್ಚಿ ಎಂತಲೂ ಕರೀತಾ ಇದ್ವಿ. ಮೇಷ್ಟ್ರುಗಳಿಗೆ ಮಾತ್ರ ಅವರ ಹೆಸರನ್ನು ಫುಲ್ ಹೇಳಿ ಕೊನೆಗೆ ‘ಮೇಷ್ಟ್ರು’ ‘ಮೇಡಂ’ ಅಂತಾ ಹೇಳ್ತಿದ್ವಿ. ಅಯ್ಯೋ ವಿಷಯ ಎಲ್ಲೆಲ್ಲಿಗೋ ಹೋಯ್ತಲ್ಲ ಅಂದ್ಕೋಬೇಡಿ. ಆಗ ಶಾಲೆಯಲ್ಲಿ ನಡೆಯುವ ದಿನಾಚರಣೆಗಳಂದು ನಾವು ಊರ ತುಂಬಾ ಮೆರವಣಿಗೆ ಹೋಗ್ತಾ ಇದ್ವಿ. ಬೀಗಲ್ಸ್ ಬ್ಯಾಂಡ್ ಸೆಟ್ ಸದ್ದು, ಕೂಗುವ ಜೈಕಾರಗಳು, ರಾಷ್ಟ್ರೀಯ ಹಾಡುಗಳು ಈ ಮೆರವಣಿಗೆಗೆ ಸಾಥ್ ನೀಡಿ ಅದರ ರಂಗನ್ನು ಹೆಚ್ಚಿಸುತ್ತಿದ್ದವು.

ಮೇಷ್ಟ್ರುಗಳು ಅಂದ್ರೆ ಆಗ ವಿಶೇಷ ಗೌರವವನ್ನು ನಾವಷ್ಟೇ ಕೊಡುತ್ತಿದ್ದುದಲ್ಲದೇ ಇಡೀ‌ ಊರವರು ಗೌರವ ಕೊಡ್ತಾ ಇದ್ರು. ಊರೊಳಗೆ ಬಂದು ಅಪ್ಪಿತಪ್ಪಿ‌ ಮೇಷ್ಟ್ರು/ಮೇಡಂ ಕುಡಿಯಲು ನೀರು ಕೇಳಿದರೆ ಮಜ್ಜಿಗೆಯನ್ನೇ ಕೊಡ್ತಾ ಇದ್ವಿ! ಜನಗಣತಿಗೆ ಮೇಷ್ಟ್ರು ನಮ್ಮ ಮನೆಗೆ ಬಂದಾಗ ನಮಗೆ ಮನೆಯಲ್ಲಿ‌ ಹಬ್ಬದ ಸಂಭ್ರಮದಂತೆ ನಾವು ಖುಷಿ ಪಡ್ತಾ ಇದ್ವಿ. ಅವರನ್ನು ನಾನಂತೂ ದೈವಾಂಶ ಸಂಭೂತರ ರೀತಿ ನೋಡ್ತಾ ಇದ್ದೆ. ಕೆಲವರ ಮನೆ ತೋರಿಸಲು ಅವರ ಜೊತೆ ನಾನೂ ಹೋಗುತ್ತಿದ್ದೆ. ಶಿಕ್ಷಕರ ಜೊತೆ ಮಕ್ಕಳ ಗಣತಿಗೂ ಸಹ ಹೋಗಿದ್ದಿದೆ. ಅವರ ಜೊತೆ ಮಾತ‌ನಾಡುವುದೇ ನಮಗೆ ಹೆಮ್ಮೆಯ ಸಂಗತಿಯಾಗಿತ್ತು. ಮೇಷ್ಟ್ರು ಎಷ್ಟೋ ದೂರದಲ್ಲಿ ಬರುತ್ತಿದ್ದರೂ ನಾವೆಲ್ಲ ಗಪ್ ಚುಪ್ ಆಗುತ್ತಿದ್ದೆವು. ಆಗೆಲ್ಲ ಶಿಕ್ಷಕರಿಂದ ಮಕ್ಕಳಿಗೆ‌ ಅವರು ತಪ್ಪು‌ ಮಾಡಿದರೆ, ಸರಿಯಾಗಿ ಓದದಿದ್ದರೆ ರೂಲರ್‌ನಿಂದ ಹೊಡೆತಗಳು ಬೀಳುತ್ತಿದ್ದವು. ಅದರಲ್ಲೂ ನಮ್ಮ ಶಾಲೆಯಲ್ಲಿ ಆಗ ಒಂದು ವಿಶೇಷ ರೀತಿಯ ಶಿಕ್ಷೆ ಇತ್ತು. ಅದು ಹೇಗೆಂದರೆ ಮೇಷ್ಟ್ರು ಬಂದು ತಪ್ಪು ಮಾಡಿದವನ ಕಡೆ ಕೈತೋರಿಸಿ ‘ತೊಟ್ರೋ ಅವನಿಗೆ’ ಅಂದ ಕೂಡಲೇ ಹುಡುಗರೆಲ್ಲ ಸೇರಿಕೊಂಡು ಅವನನ್ನು ಮಧ್ಯದಲ್ಲಿ ಹಾಕಿಕೊಂಡು ಕೈಯಲ್ಲಿ ಬಾರಿಸ್ತಾ ಇದ್ವಿ. ಮೇಷ್ಟ್ರು ಸಾಕು ಅನ್ನೋ ತನಕ ಹೊಡೆದು ಅವರು ‘ಸಾಕು’ ಅಂದ ಕೂಡಲೇ ನಿಲ್ಲಿಸ್ತಾ ಇದ್ವಿ. ಬಹುಷಃ ಈ ತರಹದ ಶಿಕ್ಷೆ ಎಲ್ಲೂ ಕೊಡೋದಿಲ್ಲವೇನೋ! ಈ ತರಹದ ಶಿಕ್ಷೆ ನಾವು ಓದುವಾಗ ನಮ್ಮ ಶಾಲೆಯಲ್ಲಿ ಸರಿಸುಮಾರು 30 ವರ್ಷದ ಹಿಂದಿತ್ತು!!! ‘ದಂಡಂ ದಶ ಗುಣಂ’ ಎಂದು ನಂಬಿದ್ದ ಕಾಲವದು. ಒಂದೊಮ್ಮೆ‌ ಮೇಷ್ಟ್ರು ಹೊಡೆದಾಗ ‘ಹೊಡೆದ್ರು’ ಅಂತಾ ಮನೇಲಿ ದೂರನ್ನೂ ಸಹ ಹೇಳಂಗಿರಲಿಲ್ಲ. ಒಂದೊಮ್ಮೆ ಹೇಳಿದ್ರೆ ಅವರತ್ರಾನೂ ಏಟು ತಿನ್ನ ಬೇಕಾದ್ದರಿಂದ ಯಾರೂ ಬಾಯ್ಬಿಡ್ತಾ ಇರಲಿಲ್ಲ. ಮೇಷ್ಟ್ರು ಹೊಡೆಯೋದು ಮಕ್ಕಳು ಒಳ್ಳೆಯದ್ಕೇ, ‘ಮೇಷ್ಟ್ರೇ ಎಷ್ಟು ಬೇಕಾದರೂ ಹೊಡೀರಿ. ಮಕ್ಕಳಿಗೆ ಹೊಡೆದ್ರೂ ಸಮಸ್ಯೆಯಿಲ್ಲ. ಅವರಿಗೆ ನಾಲ್ಕಕ್ಷರ ಕಲಿಸಿದರೆ ಸಾಕು’ ಅಂತಾ ಹೇಳ್ತಾ ಇದ್ರು!!

ಕಾಲ ಬದಲಾಗಿದೆ ಈಗ. ಅಪ್ಪಿತಪ್ಪಿ ಕೂಡ ಮಕ್ಕಳನ್ನು ಹೊಡೆಯೋ ಹಾಗಿಲ್ಲ. ಬಯ್ಯುವ ಹಾಗೂ ಇಲ್ಲ. “ಮಕ್ಕಳನ್ನು ಹೊಡೆದು ಬೆಳೆಸಬೇಕಂತೆ, ನುಗ್ಗೀ ಗಿಡ ತರದು ಬೆಳೆಸಬೇಕಂತೆ” ಎನ್ನೋ‌ ಮಾತು ಈಗಿನ ಕಾಲದವರಿಗೆ ಅನ್ವಯ ಆಗೋಲ್ಲ. ಹಿಂದೆ ‘ಮಕ್ಕಳಿರಲವ್ವ ಮನೆ ತುಂಬಾ’ ಅಂತ ಮನೆ ತುಂಬಾ ಮಕ್ಕಳನ್ನು ಮಾಡ್ಕೊಳ್ತಾ ಇದ್ರು. ಈಗೇನಿದ್ರೂ ಒಬ್ರು ಅಥವಾ ಇಬ್ರು. ಅದ್ಕೆ ಪ್ರೀತಿಯಿಂದ ಸೂಕ್ಷ್ಮವಾಗಿ ಬೆಳೆಸ್ಬೇಕು ಅಂತಾ ಹೆತ್ತವರೇ ಹೇಳ್ತಾರೆ!!

ನಾನು ಏಳನೇ ಕ್ಲಾಸಿನಲ್ಲಿ ಚೆನ್ನಾಗಿ ಓದಿ ಉತ್ತಮ ಅಂಕದೊಂದಿಗೆ ಪಾಸ್ ಆಗಿದ್ದೆ. ಆಗೆಲ್ಲಾ ಚಿಕ್ಕ ತರಗತಿಯವರಿಗೂ ಫೇಲ್ ಮಾಡುವ ಪದ್ಧತಿ ಇತ್ತು. ನಮ್ಮ ಕ್ಲಾಸಲ್ಲಿ ಒಬ್ಬನ‌ನ್ನೂ ಫೇಲ್ ಮಾಡಿದ್ಕೆ ಅವನ ಅಜ್ಜಿ ಬಂದು ಮೇಷ್ಟ್ರು ಗಳಿಗೆ ‘ಪಾಸ್ ಮಾಡಿ’ ಅಂತಾ ಅಳ್ತಾ, ಬೇಡ್ಕೊಳ್ತಾ ಮೇಷ್ಟ್ರ ಕಾಲು ಹಿಡಿಯೋಕೆ ಹೋಗಿದ್ರು! ಆಗ ರಿಸಲ್ಟ್ ಹೇಳಬೇಕಾದ್ರೆ ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ಅಂತಾ ಹೇಳಿ ಜಸ್ಟ್ ಪಾಸ್ ಆದವ್ರಿಗೆ ನಮ್ಮ ಮೇಷ್ಟ್ರು ಒಬ್ಬರು ‘ಗಾಂಧೀ ಕ್ಲಾಸ್’ ಅಂತಾ ಹೇಳ್ತಾ ಇದ್ರು. ನನಗೆ ಯಾಕೆ ಹಾಗೆನ್ನುತ್ತಾರೆ ಅಂತಾ ಅರ್ಥ ಆಗಿರಲಿಲ್ಲ.

ಏಳನೇ ಕ್ಲಾಸ್ ತನಕ ನಮ್ಮಜ್ಜಿ ಮನೇಲಿ ಓದಿ ಎಂಟನೇ ತರಗತಿಗೆ ಎಲ್ಲಿಗೆ ಸೇರಿಸಬೇಕು? ಎಂದು ನಮ್ಮನೆಯವರು ಯೋಚನೆ ಮಾಡ್ತಾ ಇರಬೇಕಾದ್ರೆ ಅವರಿಗ್ಯಾರು ಐಡಿಯಾ ಕೊಟ್ಟರೋ ನನ್ನನ್ನು ಇಂಗ್ಲೀಷ್ ಮೀಡಿಯಂ ಸೇರಿಸಬೇಕು ಅಂತಾ! ನನಗೆ ತಿಳಿಯದಂತೆ ಮಲ್ಲಾಡಿಹಳ್ಳಿ ಶಾಲೆಯ ಅರ್ಜಿ ತಂದು ಹಾಕಿದ್ದಾರೆ. ನಾನು ಅಲ್ಲೇ ಓದಬೇಕು, ಇಲ್ಲೇ ಓದಬೇಕು ಎಂಬ ಹಠ ಹಿಡಿದಿರಲಿಲ್ಲ. ಎಲ್ಲಿ ಬೇಕಾದ್ರೂ ಓದ್ತಿದ್ದೆ. ಆದ್ರೆ ನಾನು ಹೆಚ್ಚು ಅಂಕ ಪಡೆದಿದ್ದರಿಂದ ಮನೆಯವರೇ ಬೇರೆ ಕಡೆ ಸೇರಿಸಬೇಕು ಅಂತಾ ತೀರ್ಮಾನ ಮಾಡಿ ಅಲ್ಲಿಗೆ ಅರ್ಜಿ‌ ಹಾಕಿದ್ದಾರೆ. ಮಲ್ಲಾಡಿಹಳ್ಳಿಯ ಇಂಗ್ಲೀಷ್ ಮೀಡಿಯಂಗೆ ಸೀಟು ಸಿಕ್ಕಿದೆ ಎಂಬ ಪೋಸ್ಟ್ ಕಾರ್ಡ್ ಮನೆಗೆ ತಲುಪಿದಾಗ ನಾನು ಸಿಕ್ಕಾ ಪಟ್ಟೆ ಖುಷಿಯಾಗಿದ್ದೆ. ಮುಂದೆ ಬರಬಹುದಾದ ಹಾಸ್ಟೆಲ್ಲಿನ ಕಷ್ಟದ ದಿನಗಳ ಅರಿವು ನನಗಿರಲಿಲ್ಲವಾದ್ದರಿಂದ ನಾನು ಹಾಸ್ಟೆಲ್ ಸೇರೋಕೆ ಉತ್ಸುಕನಾಗಿದ್ದೆ. ನಾನು ಇಂಗ್ಲೀಷ್ ಮೀಡಿಯಂ ಅಂತಾ ‘ಗಾಳಿ ಊದಿದ ಬಲೂನಿನಂತೆ’ ಉಬ್ಬಿ ಹೋಗಿದ್ದೆ. ಮಲ್ಲಾಡಿಹಳ್ಳೀಗೆ ಅಡ್ಮಿಷನ್‌ಗೆ ಹೋದಾಗ ಅಲ್ಲಿಗೆ ದಾಖಲಾಗಲು ಬಂದ ಅಪ್ಲಿಕೇಷನ್‌ಗಳಲ್ಲಿ ಅತೀ ಹೆಚ್ಚಿನ ಅಂಕಗಳು ನನ್ನವೇ ಇದ್ದುದ್ದರಿಂದ ಅಲ್ಲಿಯ ಮೇಷ್ಟ್ರು ನನ್ನನ್ನು ವಿಚಿತ್ರವಾಗಿ ನೋಡಿದರು. ಕಾರಣವಿಷ್ಟೇ. ಕೆಲವರು ಈ ಶಾಲೇಲಿ ಸೀಟು ಬೇಕೆಂದು ಪ್ರೈಮರಿಯಲ್ಲಿ ಹೆಚ್ಚು ಮಾರ್ಕ್ಸ್ ಹಾಕಿಸಿಕೊಂಡು ಬರುತ್ತಿದ್ದರಂತೆ!!!

ಮೇಷ್ಟ್ರು ಎಷ್ಟೋ ದೂರದಲ್ಲಿ ಬರುತ್ತಿದ್ದರೂ ನಾವೆಲ್ಲ ಗಪ್ ಚುಪ್ ಆಗುತ್ತಿದ್ದೆವು. ಆಗೆಲ್ಲ ಶಿಕ್ಷಕರಿಂದ ಮಕ್ಕಳಿಗೆ‌ ಅವರು ತಪ್ಪು‌ ಮಾಡಿದರೆ, ಸರಿಯಾಗಿ ಓದದಿದ್ದರೆ ರೂಲರ್‌ನಿಂದ ಹೊಡೆತಗಳು ಬೀಳುತ್ತಿದ್ದವು. ಅದರಲ್ಲೂ ನಮ್ಮ ಶಾಲೆಯಲ್ಲಿ ಆಗ ಒಂದು ವಿಶೇಷ ರೀತಿಯ ಶಿಕ್ಷೆ ಇತ್ತು. ಅದು ಹೇಗೆಂದರೆ ಮೇಷ್ಟ್ರು ಬಂದು ತಪ್ಪು ಮಾಡಿದವನ ಕಡೆ ಕೈತೋರಿಸಿ ‘ತೊಟ್ರೋ ಅವನಿಗೆ’ ಅಂದ ಕೂಡಲೇ ಹುಡುಗರೆಲ್ಲ ಸೇರಿಕೊಂಡು ಅವನನ್ನು ಮಧ್ಯದಲ್ಲಿ ಹಾಕಿಕೊಂಡು ಕೈಯಲ್ಲಿ ಬಾರಿಸ್ತಾ ಇದ್ವಿ. 

ಆಗಿನ ಕಾಲಕ್ಕೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಶಾಲೆ ಅಂದ್ರೆ ತುಂಬಾನೆ ಹೆಸರು ಮಾಡಿತ್ತು. ಇದಕ್ಕೆ ಕಾರಣ ಅಲ್ಲಿನ‌ ಶಿಸ್ತು, ಯೋಗ, ಶಿಕ್ಷಣ. ಇದು‌ ಮಠದ ಶಾಲೆ. ಆಶ್ರಮದ ಹೆಸರು ‘ಅನಾಥಸೇವಾಶ್ರಮ ವಿಶ್ವಸ್ತ ಸಮಿತಿ’ ಎಂದು. ಇದರಲ್ಲಿ ಆಗ ರಾಘವೇಂದ್ರ ಸ್ವಾಮೀಜಿ ಹಾಗೂ ಸೂರ್ ದಾಸ್ ಜೀ ಎಂಬ ಸ್ವಾಮೀಜಿಗಳಿದ್ದರು. ಇತರೆ ಸ್ವಾಮೀಜಿಗಳಂತೆ ಇವರು ಕಾವೀಧಾರಿಗಳಾಗಿರಲಿಲ್ಲ. ಬದಲಿಗೆ ಶ್ವೇತವಸ್ತ್ರಧಾರಿಗಳಾಗಿರುತ್ತಿದ್ರು.. ರಾಘವೇಂದ್ರ ಸ್ವಾಮೀಜಿಗಳು ಯೋಗ‌ಪಟು, ಆಯುರ್ವೇದ ವೈದ್ಯರು, ಕವಿಗಳು, ಲೇಖಕರು… ಹೀಗೆ ‘ಆಡು ಮುಟ್ಟದ ಸೊಪ್ಪಿಲ್ಲ ಅವರಿಗೆ ತಿಳಿಯದ ವಿಷಯವಿಲ್ಲ’ ಎಂಬಂತೆ ಇದ್ದರು. ಅವರ ಕಾವ್ಯ‌ನಾಮ ‘ತಿರುಕ’. ಅವರ ಬಳಿ ಯೋಗ ಕಲಿಯಲು ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಬಂದಿದ್ದರು. ರೋಗಿಗಳಿಗೆ ಔಷಧ ಕೊಡುತ್ತಿದ್ದರು ಅದೂ ಉಚಿತವಾಗಿ! ಔಷಧಕ್ಕಾಗಿ ಎಲ್ಲಾ ಕಡೆಗಳಿಂದಲೂ ಆಶ್ರಮಕ್ಕೆ ಬರುತ್ತಿದ್ದರು. ಇದರ ಜೊತೆಯಲ್ಲಿ ಹೆಚ್ಚೇನೂ ಶುಲ್ಕವಿಲ್ಲದ ಈ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಸರ್ವತೋಮುಖ ಬೆಳವಣಿಗೆಗೆ ಒತ್ತು‌ ಕೊಡುತ್ತಿದ್ದರಿಂದ ಇಂತಹ ಶಾಲೆಗೆ ನಾನು ಸೇರಿದ್ದು ನನ್ನ ಸುಕೃತವೇ ಸರಿ.

ಇಂಗ್ಲೀಷ್ ಮೀಡಿಯಂಗೆ ಸೇರಿದ ನಂತರ ಮಲ್ಲಾಡಿಹಳ್ಳಿಯಿಂದ ನನ್ನ ಹುಟ್ಟಿದೂರು ಹತ್ತಿರವಿದ್ದುದರಿಂದ ಹಾಸ್ಟೆಲ್ ಸೀಟು ಕೊಡೋಕೆ ಅವರು ಹಿಂದೇಟು ಹಾಕಿದರು. ಆಗ ನಮ್ಮಜ್ಜಿ ಊರ ಹೆಸರು ಹೇಳಿ ಸೇರಿಸಿಕೊಳ್ಳಿ ಎಂದಾಗ ಅವರು ಊಟಕ್ಕೆ ಮೆಸ್ ಸೇರಿಕೊಳ್ಳಿ ಎಂದು ಒತ್ತಾಯ ಹಾಕಿದರು. ಇಲ್ಲಿ ಎರಡು ರೀತಿಯ ಊಟದ ವ್ಯವಸ್ಥೆ ಇತ್ತು. ಜನರಲ್ ಹಾಸ್ಟೆಲ್ ಅಂದರೆ ಇಲ್ಲಿ ರಾಗಿಮುದ್ದೆ ಊಟ, ಮೆಸ್ ಊಟ ಅಂದರೆ ಚಪಾತಿ ಊಟ. ಜನರಲ್ ಆಗಿ ಹೇಳಬೇಕೆಂದರೆ ಸ್ಥಿತಿವಂತರು ಮೆಸ್ ಸೇರಿದರೆ, ಬಡವರು ಜನರಲ್ ಹಾಸ್ಟೆಲ್ ಸೇರುತ್ತಿದ್ದರು. ಇನ್ನು ಊಟದ ವಿಷಯಕ್ಕೆ ಬಂದರೆ ಬೆಳಗ್ಗೆ ರಾಗಿಮುದ್ದೆ ಊಟ, ಮಧ್ಯಾಹ್ನ ಸ್ವಲ್ಪವೇ ತಿಂಡಿ ಹಾಗೂ ರಾತ್ರಿ ರಾಗಿಮುದ್ದೆ ಊಟ ಇತ್ತು. ಹೊಟ್ಟೆ ತುಂಬುವಷ್ಟು ಮುದ್ದೆ ತಿನ್ನಬಹುದಿತ್ತು. ಆದರೆ ಅನ್ನವನ್ನು ತುಂಬಾ ಲಿಮಿಟ್ ಆಗಿ ಹಾಕ್ತಾ ಇದ್ರು. ಮೆಸ್‌ನಲ್ಲಿ ಬೆಳಗ್ಗೆ ತಿಂಡಿ ಜೊತೆಗೆ ಬಾದಾಮಿ ಹಾಲು, ಮಧ್ಯಾಹ್ನ ಚಪಾತಿ ಊಟ, ರಾತ್ರಿ ಅನ್ನ ಸಾಂಬಾರ್ ಊಟ ಇಋುತ್ತಿತ್ತು. ಮೆಸ್ಸಿನ ಶುಲ್ಕ ಹೆಚ್ಚು ಇತ್ತು. ಜನರಲ್ ಹಾಸ್ಟೆಲ್ಲಿನ‌ ಶುಲ್ಕ ತುಂಬಾ ಕಡಿಮೆ ಇತ್ತು. ನಮ್ಮ ಮನೆಯಲ್ಲಿ ಬಡತನವಿದ್ದ ಕಾರಣ ನನ್ನನ್ನು ಜನರಲ್ ಹಾಸ್ಟೆಲ್ಲಿಗೆ ಸೇರಿಸಿದರು. ಆದರೆ ನನ್ನ ಪ್ರೈಮರಿ ಫ್ರೆಂಡ್ಸ್ ಪ್ರದೀಪ, ಸುನೀಲ್‌ನನ್ನು‌ ಅವರ ಮನೆಯಲ್ಲಿ ಮೆಸ್ಸಿಗೆ ಸೇರಿಸಿದರು. ಊಟ ಬೇರೆ ಬೇರೆಯಾದರೂ ಇಬ್ಬರಿಗೂ ವಸತಿ ಒಂದೇ ಕಡೆ ಇತ್ತು. ಆದರೆ ಹೆಣ್ಮಕ್ಕಳಿಗೆ ಮಾತ್ರ ಮೆಸ್ ಊಟದ ವ್ಯವಸ್ಥೆ ಇರಲಿಲ್ಲ.

ನಾವು ಪ್ರೈಮರಿ ಫ್ರೆಂಡ್ಸ್ ಒಂದೇ ರೂಮಿನಲ್ಲಿ ಇದ್ದೆವು. ಒಂದು ಚಿಕ್ಕ ರೂಮಿನಲ್ಲಿ ಹತ್ತರಿಂದ ಹನ್ನೊಂದು ಮಕ್ಕಳು, ದೊಡ್ಡ ರೂಮಿನಲ್ಲಿ‌ ಮೂವತ್ತರಿಂದ ನಲವತ್ತು ಮಕ್ಕಳು! ನಾವು ಇದ್ದಾಗ ಸರಿಸುಮಾರು 28 ರೂಮುಗಳು ಇದ್ದ ನೆನಪು. ನನ್ನದು ಎಂಟನೇ ಕ್ಲಾಸ್‌ನಲ್ಲಿ ಎಂಟನೇ ರೂಮು. ನಾವು ಹಾಸ್ಟೆಲ್‌ನಲ್ಲಿ ಟ್ರಂಕಿನಲ್ಲಿ ನಮ್ಮ ಪುಸ್ತಕ ಬಟ್ಟೆಗಳನ್ನಿಟ್ಟುಕೊಳ್ಳುತ್ತಿದ್ದೆವು. ನಮ್ಮ ಟ್ರಂಕಿನ ಅಳತೆಯಷ್ಟೇ ನಮಗೆ ಜಾಗ. ಅಷ್ಟೇ ಜಾಗದಲ್ಲಿ ಚಾಪೆ ಮಡಚಿಕೊಂಡು ಮಲಗಬೇಕಿತ್ತು. ನಮ್ಮ ಜಾಗ ಅಷ್ಟೇ. ನಾವು ನೀರಲ್ಲಿ ಅದ್ದಿದ ಚಾಕ್ ಪೀಸಿನಿಂದ ನಮ್ಮ ಜಾಗದಷ್ಟಕ್ಕೆ ಗೆರೆ ಕೊರೆದುಕೊಳ್ಳುತ್ತಿದ್ದೆವು. ಇನ್ನು ನೀರಿನ ಸಮಸ್ಯೆಯೂ ಆಗಾಗ್ಗೆ ಇರುತ್ತಿತ್ತು. ಆಗ ನಮ್ಮ ರೂಮಲ್ಲಿದ್ದ ಬೆಂಗಳೂರಿನಿಂದ ಬಂದಿದ್ದ ಹರೀಶ ತುಂಬಾ ಅಶಿಸ್ತಿನಿಂದ ಇರುತ್ತಿದ್ದ. ಕೆಲವೊಮ್ಮೆ ರಾತ್ರಿ ವೇಳೆ ಮಲಗಿದ್ದಾಗ ಮೂತ್ರ ವಿಸರ್ಜನೆ ಮಾಡಿಕೊಳ್ತಾ ಹಾಗೇ ಮಡಚಿಟ್ಟುಕೊಂಡು ರೂಮಿನ ವಾಸನೆಯನ್ನ ಬದಲಿಸಿದ್ದ! ಓದುವುದರಲ್ಲಿ ತುಂಬಾ ನೆಗ್ಲೆಕ್ಟ್ ಮಾಡ್ತಿದ್ದ. ಒಮ್ಮೆ ಅವರ ತಂದೆ ಬಂದಾಗ ಈ ಬಗ್ಗೆ ತಿಳಿಸಿದಾಗ ಒಂದೆರಡು ತಿಂಗಳಲ್ಲಿ ಅವರು ಅವನ ಟಿಸಿ ತೆಗೆದುಕೊಂಡು ಹೋದರು. ನಮ್ಮ ರೂಮಲ್ಲಿ ರಾಯಚೂರಿನಿಂದ ಗೋವಿಂದ, ಮಂಜುನಾಥ, ಅಶೋಕ್ ಮೇಟಿ, ರಾಣೆಬೆನ್ನೂರಿನಿಂದ ಬಂದವನೊಬ್ಬನಿದ್ದ. ನಾನು ಏನೋ ಅಂದಿದ್ದಕ್ಕೆ ಅವನು ಶಾಲೆಯಿಂದ ಬರುವಷ್ಟರಲ್ಲಿ ನನ್ನ ಟ್ರಂಕನ್ನು ತುಳಿದು ಹಾಳು ಮಾಡಿದ್ದ! ತುಂಬಾ ಟೊಣಪನಾಗಿದ್ದ ಅವನಿಗೆ ಬಿಪಿ ಜಾಸ್ತಿ ಇತ್ತು ಅಂತ ಅನಿಸುತ್ತೆ. ಸಣ್ಣ ಮಾತಿಗೂ ಕೋಪಿಸಿಕೊಂಡು ಜಗಳವಾಡುತ್ತಿದ್ದ. ಅವನೂ ಸಹ ಎಂಟನೇ ತರಗತಿಯ ಮಧ್ಯವಾರ್ಷಿಕ ರಜೆ ಬರುವಷ್ಟರೊಳಗೆ ಟಿಸಿ ತೆಗೆದುಕೊಂಡು ಹೋಗಿದ್ದ.

ಅಜ್ಜಿ ಮನೆಯಲ್ಲಿ ಸುಖವಾಗಿ ಬೆಳೆದಿದ್ದ ನನಗೂ ಹಾಸ್ಟೆಲ್ ವಾತಾವರಣ ಹಾಗೂ ತರಗತಿ ಏಳರವರೆಗೂ ಕನ್ನಡ ಮೀಡಿಯಂನಲ್ಲಿ ಓದಿದ್ದರಿಂದ ಕಷ್ಟವಾಗುತ್ತಿದ್ದ ಇಂಗ್ಲೀಷ್ ಮೀಡಿಯಂ, ನೆನಪಾಗುತ್ತಿದ್ದ ಅಜ್ಜಿ ನನಗೆ ಶಾಲೆಯನ್ನು ಬಿಟ್ಟು ಹೋಗುವಂತೆ ಮಾಡಿ ಒಬ್ಬನೇ ಇದ್ದಾಗ ಸಿಕ್ಕಾಪಟ್ಟೆ ಅಳುತ್ತಿದ್ದೆ. ಮನೆಯಲ್ಲೂ ಟಿಸಿ ತೆಗೆದುಕೊಂಡು ವಾಪಸ್ಸಾಗುವ ಬಗ್ಗೆ ತಿಳಿಸಿದೆ. ಆದರೆ ಅವರ್ಯಾರೂ ನನ್ನ ಮನವಿಗೆ ಸ್ಪಂದಿಸುವ ಮನೋಸ್ಥಿತಿ ತೋರದೇ ಇರುವ ಕಾರಣ ಅನಿವಾರ್ಯವಾಗಿ ನಾನು ಅಲ್ಲೇ ಉಳಿಯಬೇಕಾಯಿತು. ಆದರೆ ಇಂದಿನ ಮಕ್ಕಳಿಗೆ ನಾವು ಅನುಭವಿಸಿದಂತಹ ಕಷ್ಟದ ದಿನಗಳು ಇಲ್ಲ. ಆದರೆ ನನಗೆ ಎಂತಹ ಕಷ್ಟ ಬಂದರೂ ಅದನ್ನು ಎದುರಿಸುವಂತಹ ಮಾನಸಿಕ ಸದೃಢತೆ ಬೆಳೆಸಿದ್ದು ಇದೇ ಆಶ್ರಮ. ಮುಂದೆ ಇದರ ಬಗ್ಗೆ ಸವಿವರವಾಗಿ ತಿಳಿಸುತ್ತೇನೆ. “ಸುಖ ಬೇಕಾದವರು ವಿದ್ಯೆ ತ್ಯಜಿಸಬೇಕಂತೆ, ವಿದ್ಯೆ ಬೇಕಾದವರು ಸುಖ ತ್ಯಜಿಸಬೇಕಂತೆ. ಸುಖ ಬೇಕಾದವನಿಗೆ ವಿದ್ಯೆಯೆಲ್ಲಿ, ವಿದ್ಯೆ ಬೇಕಾದವನಿಗೆ ಸುಖವೆಲ್ಲಿ?” ಎಂದು ತಿಳಿಸುವ ಸಂಸ್ಕೃತ ಶ್ಲೋಕದ ತಾತ್ಪರ್ಯದ ಪ್ರಕಾರ ಮಕ್ಕಳು ತಾತ್ಕಾಲಿಕ ಸುಖಕ್ಕೆ ಮನಸೋಲಬಾರದಾಗಿ ತಿಳಿಸುತ್ತೇನೆ. ಎಂತಹ ಕಷ್ಟ ಬಂದರೂ ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಪೋಷಕರೂ ಕೂಡ ತಮ್ಮ ಮಕ್ಕಳನ್ನು ಈ ರೀತಿ ಬೆಳೆಸಬೇಕು.