ನಂತರದ ನಾಲ್ಕೈದು ದಿನಗಳು ನಿತ್ಯದ ನಿಯತಿಯಲ್ಲಿಯೇ ಕಳೆದವು. ಅವಳು ನಮ್ಮಲ್ಲೇ ಒಬ್ಬಳಂತಾಗಿ ಹೋಗಿದ್ದಳು. ಯಾವ ಜನ್ಮದ ಋಣವೋ ಎಂಬಂತೆ. ಪ್ರತಿ ನಿತ್ಯ ಅವಳನ್ನು, ಅವಳ ಮಕ್ಕಳನ್ನು ನೋಡುವುದು ಅಭ್ಯಾಸವಾಯಿತು. ಇವತ್ತೂ ಎಂದಿನಂತೆಯೇ ಕೋಣೆಯ ಒಳ ಹೋಗಿ ಬಗ್ಗಿ ನೋಡಿದೆ. ಅವಳಾಗಲೀ ಅವಳ ಒಂದೇ ಒಂದು ಕೂಸೇ ಆಗಲೀ ಎಲ್ಲಿಯೂ ಕಾಣಲಿಲ್ಲ… ಮನಸು ಮುದುಡಿ ಕಣ್ಣುಗಳು ತುಂಬಿಕೊಂಡವು. ಒಂದೇ ಒಂದು ಮಾತನ್ನೂ ಹೇಳದೆ ಹೊರಟೇ ಹೋದಳೇ… ಮನೆಯೆಲ್ಲ ಬಣಗುಟ್ಟತೊಡಗಿದೆ.. ಇಂದಿನಿಂದ ಯಾರಿಗೆ ಹಾಲಿಡಲಿ… ಆ ಮುದ್ದು ಮರಿಗಳನ್ನು ಎಲ್ಲಿ ಹುಡುಕಲಿ…
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಬರಹ ನಿಮ್ಮ ಓದಿಗೆ

ಈ ಮೋಡ ಮುಸುಕಿದ ವಾತಾವರಣ, ಈಗಷ್ಟೇ ಬಿದ್ದು ನಿಂತ ಮಳೆ, ಹಸಿ ಮಣ್ಣ ವಾಸನೆ, ತಂಪು ಗಾಳಿ… ಎಲ್ಲೋ ಮಾಯವಾಗಿದ್ದ ಈ ನಂಜುಹುಳು ಅದೆಲ್ಲಿಂದ ಬಂತು, ಅರೆ ಈ ಕಪ್ಪೆ ಇಷ್ಟು ದಿನ ಎಲ್ಲಿತ್ತು… ಎಂಥ ಆಶ್ಚರ್ಯ ಇದು. ರಹಸ್ಯವನ್ನು ಭೇದಿಸುವುದು ಅಸಾಧ್ಯ ಎನಿಸಿದಾಗ ಒಪ್ಪಿಕೊಂಡು ವಿಸ್ಮಯಗೊಳ್ಳುವ ಸುಖವೇ ಚಂದ… ನಾವು ಈ ಭೂಮಿಯ ಮೇಲೆ ನಾವಷ್ಟೇ ಇದ್ದೇವೆ ಎನ್ನುವ ಹಾಗೆ ಬದುಕುತ್ತಿದ್ದೇವೆ. ಆದರೆ ಇಲ್ಲಿರುವ ಪ್ರತಿಯೊಂದು ಜೀವಿಗೂ ನಮ್ಮಷ್ಟೇ ಬದುಕುವ ಮತ್ತು ಭೂಮಿಯನ್ನು ಬಳಸುವ ಹಕ್ಕು ಇದೆ ಎಂಬುದನ್ನು ಮರೆತುಬಿಡುತ್ತೇವೆ. ಅವಾದರೂ ನಮ್ಮಿಂದ ಏನು ತಾನೆ ನಿರೀಕ್ಷಿಸುತ್ತವೆ ಹೇಳಿ… ಹಿಡಿ ಪ್ರೀತಿ ಮತ್ತು ಸಹಬಾಳ್ವೆ ಅಷ್ಟೇ ತಾನೇ… ಪ್ರಾಣಿಗಳನ್ನು ಒಡನಾಡುವ ಕ್ರಮವನ್ನು ನಾವು ಕಲಿಯಬೇಕಿದೆ. ಅದು ನಮ್ಮ ಜೀವನದ ಭಾಗವೂ ಆಗಬೇಕು. ಆದರೆ ಆ ಸೂಕ್ಷ್ಮವನ್ನು ಅತಿ ಅವಶ್ಯಕ ಎಂದುಕೊಳ್ಳುವುದಿಲ್ಲ ನಾವು ಯಾಕೋ… ಒಂದು ಹಿಡಿ ಪ್ರೀತಿಯನ್ನು ಹಂಚುವುದರ ಹೊರತಾಗಿ ನಮ್ಮ ಮನರಂಜನೆಗೆ, ಆಟಕ್ಕೆ, ಕಾಲಹರಣಕ್ಕೆ ಅವುಗಳನ್ನು ಬಳಸಿಕೊಳ್ಳುತ್ತಿರುತ್ತೇವೆ. ಅದಕ್ಕೆ ಪೂರಕ ಎನಿಸುತ್ತಿರುವ ನನ್ನ ಬಾಲ್ಯದ ಘಟನೆಯೊಂದನ್ನು ಇಲ್ಲಿ ನೆನಪಾಗುತ್ತಿದೆ…

ಚಿಕ್ಕವರಿದ್ದಾಗ ಅಪ್ಪ ನೌಕರಿ ಮಾಡುತ್ತಿದ್ದ ಮಲೆನಾಡಿನ ಊರಿಂದ, ಬಯಲು ಸೀಮೆಯ ತಾತನ ಊರಿಗೆ ಬರುವಾಗ ಖುಷಿಯಂತೂ ಇರುತ್ತಿರಲಿಲ್ಲ. ಗೌರ್ಮೆಂಟ್ ಬಸ್ಸಿನಲ್ಲಿ ಇಡೀ ದಿನ ಪ್ರಯಾಣಿಸುವುದೆಂದರೆ ಯಾವ ಮಕ್ಕಳಿಗೆ ಖುಷಿ ಅನಿಸ್ತದೆ ಹೇಳಿ… ನಮಗೂ ಹಾಗೇ… ಮನಸಿಲ್ಲದ ಮನಸಿನಿಂದಲೇ ಪ್ರಯಾಣಿಸುತ್ತಿದ್ದೆವು. ಅದರಲ್ಲೂ ಬಯಲು ಸೀಮೆಯ ಕಡೆಯಿಂದ ಮಲೆನಾಡ ಕಡೆ ಹೋಗುವುದು ಸುಲಭ. ಆದರೆ ಮಲೆನಾಡ ಕಡೆಯಿಂದ ಬಯಲು ಸೀಮೆಯ ಕಡೆ ಪ್ರಯಾಣಿಸುವುದು ಬೇಸರ ಮತ್ತು ಆಯಾಸದ ಕೆಲಸ. ದೈಹಿಕ ಆಯಾಸದ ಜೊತೆಗೆ ಕೂಡಿಕೊಳ್ಳುವ ಮಾನಸಿಕ ಆಯಾಸ ಮತ್ತಷ್ಟು ದಣಿಯುವಂತೆ ಮಾಡಿಬಿಡುತ್ತಿತ್ತು. ಅದೆಲ್ಲ ಮುಗಿಸಿ ಊರನ್ನು ಸೇರುವ ಹೊತ್ತಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಅಲ್ಲಿ ಹೋದರೆ ಮತ್ತೊಂದೇ ರೀತಿಯ ವಾತಾವರಣ. ಬಯಲು ಸೀಮೆಯ ಮಾಳಿಗೆ ಮನೆಗಳೇನಿದ್ದರೂ ಮಳೆಗಾಲ ಮತ್ತು ಚಳಿಗಾಲಕ್ಕೇ ಸರಿ. ಬೇಸಿಗೆ ಕಾಲದಲ್ಲಿ ಹಾಟ್ ಅವೆನ್ ನಂತಾಗುತ್ತಿದ್ದ ಆ ಮನೆಗಳಿಗೆ ಹೊಂದಿಕೊಳ್ಳಲಿಕ್ಕೇ ಒಂದೆರೆಡು ದಿನಗಳು ಬೇಕಾಗುತ್ತಿದ್ದವು. ಅಲ್ಲಿನ ಪರಿಸರ, ಗಿಡ, ಮರ, ಜೀವ ವೈವಿಧ್ಯ ಎಲ್ಲವೂ ವಿಭಿನ್ನ. ಏನೇನೋ ಚಿತ್ರ ವಿಚಿತ್ರದ ಕೀಟಗಳೂ ಕಾಣಸಿಗುತ್ತಿದ್ದವು. ಅವುಗಳಲ್ಲಿ ಈ ಜೀರಂಗಿಗಳು ಬಲು ಆಕರ್ಷಕ. ಅವುಗಳ ಗಾಢ ಸಮುದ್ರ ಹಸಿರಿನ ರೆಕ್ಕೆ ಮತ್ತು ಹೊರಕವಚದ ಬಣ್ಣ, ಗುಯ್ಗುಡುವ ಜೋರು ಶಬ್ಧ ಒಂಥರಾ ಆಕರ್ಷಣೆಯನ್ನು ಹುಟ್ಟಿಸುತ್ತಿತ್ತು. ನನ್ನ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳೆಲ್ಲರೂ ಒಂದೊಂದು ಜೀರಂಗಿಯನ್ನು ಹಿಡಿದುಕೊಂಡು ಬೆಂಕಿಪೊಟ್ಟಣದಲ್ಲಿಟ್ಟು ಅದಕ್ಕೆ ಜಾಲಿ ಸೊಪ್ಪು ಹಾಕಿ ಸಾಕುತ್ತಿದ್ದರು. ಅದು ಮೊಟ್ಟೆ ಇಟ್ಟ ದಿನವಂತೂ ಅವರಿಗೆಲ್ಲ ಹೇಳತೀರದ ಸಂಭ್ರಮ. ಆ ಸುದ್ದಿ ಆ ದಿನದ ಬ್ರೇಕಿಂಗ್ ನ್ಯೂಸ್ ಆಗಿರುತ್ತಿತ್ತು. ನನಗದೆಲ್ಲ ಎಂದೂ ಕಂಡಿರದ ಘಟನೆಯಾಗಿರುತ್ತಿತ್ತು.

ಅವರ ಚಿಕ್ಕಪುಟ್ಟ ಸಂಭ್ರಮಗಳು ಮುದ ಕೊಡುತ್ತಿದ್ದವು. ಆದರೂ ಆ ಜೀರಂಗಿಗಳ ಬಗ್ಗೆ ಪಾಪ ಅಂತಲೂ ಅನಿಸುತ್ತಿತ್ತು. ಅದರಲ್ಲೂ ಅವರು ಅದರ ಕತ್ತಿಗೆ ದಾರ ಕಟ್ಟಿ ಹಾರಿಸುವ ಸ್ಪರ್ಧೆ ಮಾಡುವಾಗ… ಪಾಪದ ಆ ಕೀಟ ತಪ್ಪಿಸಿಕೊಂಡು ಹಾರಿ ಹೋಗಲು ನೋಡುತ್ತಿತ್ತು. ಆದರೆ ಇವರ ಯಮ ಪಾಶದ ಬಿಗಿಯಿಂದ ತಪ್ಪಿಸಿಕೊಳ್ಳಲು ಅದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಮೊದ ಮೊದಲು ಅದನ್ನು ಮುಟ್ಟಲು ಭಯ ಪಡುತ್ತಿದ್ದ ನನ್ನ ಕೈಗೂ ಒಂದು ಪುಟ್ಟ ಜೀರಂಗಿಯನ್ನು ಕೊಟ್ಟು ಧೈರ್ಯ ತುಂಬುತ್ತಿದ್ದರು. ನಾನದರ ಬಣ್ಣದಲ್ಲಿ ಕರಗಿಹೋಗುತ್ತಿದ್ದೆ. ನವಿಲು ಗರಿಯ ಬಣ್ಣ, ಹೊಳಪು ಇದರ ರೆಕ್ಕೆಗಳಿಗೆ ಬಂದದ್ದು ಹೇಗೆ ಎಂದು ನಾನು ಆಶ್ಚರ್ಯಪಡುತ್ತಿದ್ದೆ…

ನಿಸರ್ಗದಲ್ಲಿ ನಮ್ಮನ್ನು ಆಶ್ಚರ್ಯಕ್ಕೆ ದೂಡುವ ಅದೆಷ್ಟೋ ವಿಷಯಗಳಿವೆ ಎಂಬುದು ನನಗೆ ಮನವರಿಕೆಯಾಗತೊಡಗಿತ್ತು. ಬೆಳೆಯುತ್ತಾ ಬೆಳೆಯುತ್ತಾ ಇಂತಹ ಅದೆಷ್ಟೋ ಸಂಗತಿಗಳಿಗೆ ಸಾಕ್ಷಿಯಾದದ್ದಿದೆ. ಮನಷ್ಯನನ್ನೂ ಮೀರಿದ ಸಂಗತಿಯನ್ನು ಪ್ರಾಣಿಗಳಿಂದ ಕಲಿತದ್ದಿದೆ. ಒಮ್ಮೆ ಹಚ್ಚಿಕೊಂಡು ಬಿಟ್ಟರೆ ಪ್ರಾಣಿಗಳೂ ನಮ್ಮನ್ನು ಅದೆಷ್ಟು ಪ್ರೀತಿಸುತ್ತವೆ ಎಂದು ಸೋಜಿಗಪಟ್ಟದ್ದಿದೆ. ನಾಯಿ, ಬೆಕ್ಕು, ಕೋತಿ, ಗಿಳಿ, ಪಾರಿವಾಳ, ಮೊಲ… ಎಲ್ಲವೂ ಅದೆಷ್ಟು ಮುದ್ದು ಮುದ್ದು… ಇತ್ತೀಚೆಗೆ ನಡೆದ ಘಟನೆಯೊಂದನ್ನು ನಾನಿಲ್ಲಿ ಹಂಚಿಕೊಳ್ಳಲೇ ಬೇಕು.

ಅವತ್ತು ಮನೆಗೆ ಬಂದು ಬಾಗಿಲು ತೆರೆದಾಗ ಎದುರಿಗೆ ಕಂಡದ್ದನ್ನು ಕಂಡು ನನ್ನ ಕಣ್ಣನ್ನು ನಾನೇ ನಂಬಲಾಗಲಿಲ್ಲ. ಅದು ತನ್ನದೇ ಮನೆಗೆ ಯಾರೋ ಬಂದರು ಎಂಬಂತೆ ಊರಗಲ ಕಣ್ಣುಬಿಟ್ಟುಕೊಂಡು ನನ್ನನ್ನೇ ನೋಡತೊಡಗಿತ್ತು. ಬೆಳಗ್ಗೆ ಮನೆಯಿಂದ ಹೋಗುವಾಗ ಎಲ್ಲ ಕಿಟಕಿಗಳನ್ನು ಭದ್ರವಾಗಿ ಮುಚ್ಚಿದ್ದೆನಲ್ಲಾ ಇದೆಲ್ಲಿಂದ ಒಳ ಬಂತು ಅನಿಸಿತು… ಉಶ್ ಎಂದು ಹೊರಗೋಡಿಸಿದೆ, ಜೇನುಗಂಣ್ಣಿನ ಅದೇ ಮೈ ಬಣ್ಣದ ಆ ಮುದ್ದಾದ ಬೆಕ್ಕನ್ನು. ಒಂದೇ ನಿಮಿಷಕ್ಕೆ ನೆಗೆದು ಮಾಯವಾಯಿತು. ಮತ್ತೆರೆಡು ದಿನವೂ ಹೀಗೇ ಆಯಿತು. ನಾಲ್ಕನೇ ದಿನ ಅದು ರಾಜಾರೋಷವಾಗಿ ಮುಂಬಾಗಿಲಿನಿಂದಲೇ ಮನೆಯೊಳಗೆ ಬರುವುದನ್ನು ನೋಡಿದೆವು. ಉಶ್ ಎಂದರೂ ಹೋಗದೆ ರೂಮಿನೊಳಗೆ ಹೋಗಿ ಮಾಯವಾಗಿಬಿಟ್ಟಿತು! ಅರೆ ಇದೆಂಥ ಮಾಯೆ! ಎಲ್ಲಿ ಹೋಯಿತು ಈ ಬೆಕ್ಕು ಅಂತ ಕೋಣೆಯ ಇಂಚಿಂಚನ್ನೂ ಹುಡುಕುತ್ತಿರುವಾಗ, ಮಂಚದ ಕೆಳಗೆ ಮೂಲೆಯಲ್ಲಿ ಅದು ಬೀಡುಬಿಟ್ಟಿರುವುದು ಗಂಡನ ಕಣ್ಣಿಗೆ ಬಿತ್ತು. ಅದೂ ಒಂದೇ ಅಲ್ಲ ತನ್ನನ್ನೇ ಹೋಲುವ ಜೇನು ಮೈಬಣ್ಣದ ಮೂಮೂರು ಹಸುಗೂಸುಗಳೊಂದಿಗೆ! ಹಾಯಾಗಿ ಮೈಚೆಲ್ಲಿಕೊಂಡು ತನ್ನ ಮೂರೂ ಮರಿಗಳಿಗೆ ಹಾಲೂಡಿಸುತ್ತಿದೆ. ಯಾವಾಗ ಬಂತು, ಹೇಗೆ ಬಂತು, ಎಲ್ಲಿಂದ ಬಂತು… ಒಂದೂ ತಿಳಿದಿರಲೇ ಇಲ್ಲ! ಮಗಳಿಗೋ ವಿಪರೀತ ಖುಷಿ. ‘ಅಯ್! ನಮ್ಮನೇಗೆ ಬೆಕ್ಕು ಬಂದಿದೆ, ಅದರ ಮರಿಗಳು ಎಷ್ಟು ಮುದ್ದು ಮುದ್ದು ಇವೆ…’ ಅಂತ ಮನೆ ತುಂಬಾ ಕುಣಿದಾಡಿದ್ದಲ್ಲದೆ ತನ್ನೆಲ್ಲ ಗೆಳೆಯ ಗೆಳತಿಯರನ್ನೂ ಕರೆತಂದಳು ತೋರಿಸಲಿಕ್ಕೆ. ಅವರೆಲ್ಲರ ಬೆರಗಿಗೆ ಪಾರವೇ ಇರಲಿಲ್ಲ. ಎಲ್ಲರೂ ಬಂದು ಬಂದು ನೋಡಿ ನೋಡಿ ಪುಳಕಿತರಾದರು. ಸಧ್ಯಕ್ಕೆ ಮಿನಿ ಜೂ಼ನಂತಾದ ಮನೆಯನ್ನು ಸಂಭಾಳಿಸುವುದು ಸ್ವಲ್ಪ ಹೊತ್ತು ಕಷ್ಟವೇ ಆಯಿತು. ‘ಗಲಾಟೆ ಮಾಡ್ಬೇಡಿ ಪಾಪ ಮರಿಗಳು ಹೆದರ್ಕೋತವೆ..’ ಎಂದು ಹೇಳಿದೆ ನೋಡಿ, ಪಿಸುಮಾತು ಜೋರಾಯಿತು. ಕೊನೆಗೂ ಅವರೆಲ್ಲರ ಎಲ್ಲ ಸಂಭ್ರಮ ಮುಗಿದ ಮೇಲೆಯೇ ಮನೆ ತಣ್ಣಗಾದದ್ದು.

ಮಗ ಮಾತ್ರ ಮನೆಗೆ ಬಂದಿರುವುದು ಚಿರತೆಯ ಮರಿಯೇನೋ ಎಂಬಂತೆ ಭಯಪಡತೊಡಗಿದ್ದ. ‘ಅಮ್ಮ ಮೊದ್ಲು ಆ ಬೆಕ್ಕನ್ನ ಮನೆಯಿಂದ ಹೊರಕಳಿಸುʼ ಎನ್ನತೊಡಗಿದ್ದ. ಅದಕ್ಕೆ ಮಗಳು ‘ಅಮ್ಮ ಪಾಪ ಬೇಡ, ಅಮ್ಮ ಪಾಪ ಬೇಡ…’ ಅಂತ ಒಂದೇ ರಗಳೆ. ನನಗೋ ಏನೇನೋ ಆಲೋಚನೆ. ಅದು ರೂಮನ್ನೆಲ್ಲ ಕೊಳಕು ಮಾಡ್ತದೇನೋ, ಮನೆಯೆಲ್ಲ ವಾಸನೆ ತುಂಬಿಕೊಳ್ತದೇನೋ, ಹೊರಹಾಕಿಬಿಡಲಾ? ನಾಯಿ, ಬೆಕ್ಕುಗಳ ಮರಿಗಳನ್ನ ನಾವು ಮನುಷ್ಯರು ಮುಟ್ಟಿದರೆ ಏನಾದರೂ ಆಗುತ್ತದಾ?! ಯಾರನ್ನು ಕೇಳಲಿ?! ಮಗ, ‘ಅಮ್ಮ ಯಾರಾದ್ರೂ ಪ್ರಾಣಿ ದಯಾ ಸಂಘದವರಿಗೋ ಇಲ್ಲ ವೆಟರಿನರಿ ಆಸ್ಪತ್ರೆಯವರಿಗೋ ಹೇಳಾಣಾ…’ ಅಂತ ಐಡಿಯಾ ಬೇರೆ ಕೊಟ್ಟ. ಅದೆಲ್ಲ ಸಂಭವ ಸಾಧ್ಯ ಅನಿಸಲಿಲ್ಲ. ಯಾರನ್ನಾದರೂ ಕೇಳೋಣವೆಂದರೆ, ಅವರೇನಾದರೂ ಬೆಕ್ಕು ಹಾಗೆಲ್ಲ ಮರಿಗಳ ಜೊತೆ ಮನೆಗೆ ಬಂದು ಸೇರಿಕೊಳ್ಳಬಾರದು, ಅದರಿಂದ ಕೆಟ್ಟದಾಗುತ್ತೆ ಅಂತೇನಾದರೂ ಹೇಳಿಬಿಟ್ಟರೆ… ಅಂತೆಲ್ಲ ಯೋಚನೆಗಳು ಮುತ್ತಿಕ್ಕಿದವು.

ಹೀಗಿರುವಾಗಲೇ ಥಟ್ಟನೆ ಅನಿಸಿತು. ನಾನೂ ಎರೆಡು ಮಕ್ಕಳ ತಾಯಾಗಿ, ಮನೆಗೆ ಮರಿಗಳೊಟ್ಟಿಗೆ ಬಂದಿರುವ ಬಾಣಂತಿ ಬೆಕ್ಕಿಗೆ ಒಂಚೂರು ಹಾಲು ಕೂಡ ಕೊಡದೆ, ಏನೋನೋ ಯೋಚಿಸುತ್ತಿರುವೆನಲ್ಲ, ಎಷ್ಟು ಹಸಿದಿದಾಳೋ ಏನೋ, ಮೂರ್‌ಮೂರು ಮಕ್ಕಳಿಗೆ ಬೇರೆ ಹಾಲುಣಿಸಬೇಕು ಅಂತ. ಹಾಗೆ ಅನಿಸಿದ್ದೇ ಮೊದಲು ಹೋಗಿ, ಬಟ್ಟಲು ತುಂಬ ಹಾಲು ತಂದು ಅವಳ ಮುಂದಿಟ್ಟು ಕೋಣೆಯ ಬಾಗಿಲು ಮುಚ್ಚಿ ಅಮ್ಮನಿಗೆ ಕಾಲ್ ಮಾಡಿ, ಬೆಕ್ಕಮ್ಮನ ಎಲ್ಲ ಕತೆ ಹೇಳಿ ಏನು ಮಾಡಲಿ ಎಂದು ಕೇಳಿದೆ. ಅಮ್ಮ, ‘ಹೌದʼ ಅಂತ ನಕ್ಕು, ‘ಇದ್ರೆ ಇರುತ್ತೆ ಬಿಡು, ಅದೇನ್ಮಾಡುತ್ತೆ ಒಂದಿನ ಹೊರಟು ಹೋಗುತ್ತೆ. ಅವು ಒಂದೇ ಜಾಗದಲ್ಲಿ ಇರಲ್ಲ. ಜಾಗ ಬದಲಾಯಿಸ್ತಾ ಇರ್ತವೆ ಅಂದ್ರು…’ ಮನಸಿಗೆ ನಿರಾಳವಾಯ್ತು ಅಮ್ಮನ ಮಾತಿಂದ. ಅಲ್ಲಿ ಈ ವಿಷಯವನ್ನ ಯಾರಿಗೂ ಹೇಳುವುದು ಬೇಡ ಅಂತ ನಿರ್ಧರಿಸಿದೆ. ಸರಿ ಹಾಲು ಕುಡಿದಳಾ ಎಂದು ನೋಡಲು ಹೋದೆ. ಅದಾಗಲೇ ಕುಡಿದು ಮುಗಿಸಿದ್ದಳು. ಬಾಣಂತಿ ಹಸಿವಿನ ಬಗ್ಗೆ ನಮಗಿಂತ ಹೆಚ್ಚು ಇನ್ಯಾರಿಗೆ ತಾನೇ ಗೊತ್ತಿರುತ್ತದೆ ಹೇಳಿ… ಅಂದಿನಿಂದ ಅವಳಿಗೆ ಹಾಲಿಡುವುದು ಅವಳದನ್ನು ಕುಡಿಯುವುದು ನಿರಾತಂಕವಾಗಿ ನಡೆಯಿತು.

ತಣ್ಣನೆ ನೆಲದ ಮೇಲೆ ಮಲಗಿದ ಅವಳು ಮತ್ತು ಅವಳ ಮಕ್ಕಳ ಬಗ್ಗೆ ಪಾಪ ಎನಿಸುತ್ತಿತ್ತು. ಆದರೆ ಹತ್ತಿರ ಹೋಗಲು, ಮರಿಗಳನ್ನು ಮುಟ್ಟಲು ಅವಳ ವ್ಯಘ್ರತೆಯ ಭಯ ಉಂಟಾಗುತ್ತಿತ್ತು. ಅವಳಿಲ್ಲದ ವೇಳೆಯಲ್ಲಿ ಸರಿ, ಅವಳಿದ್ದಾಗ ಮರಿಗಳ ಹತ್ತಿರಕ್ಕೆ ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ ಅವಳು. ಇಂಥವಳನ್ನು ಮನೆಯಿಂದ ಹೊರಹಾಕಲಿ ಹೇಗೆ… ಈ ಮಳೆಗಾಲದಲ್ಲಿ ಮೂಮೂರು ಮರಿಗಳನ್ನ ಕಟ್ಕೊಂಡು ಎಲ್ಲಿ ಅಂತ ಹೋಗ್ತಾಳೆ ಅಂತನಿಸಿ ಏನೂ ಮಾಡದೆ ಉಳಿದೆ.

ನನಗೆ ಸೋಜಿಗವೆನಿಸುತ್ತಿತ್ತು, ಇದು ಅದೆಂಥ ಅದ್ಭುತ ಅಂತ. ತಾಯಿಯಾದ ಪ್ರತಿಯೊಂದು ಜೀವಿಯೂ ತನ್ನ ಮರಿಗಳನ್ನು ಅದೆಷ್ಟು ಜವಾಬ್ದಾರಿ ಮತ್ತು ಮುತುವರ್ಜಿಯಿಂದ ಪಾಲಿಸುತ್ತವೆ! ನಾವು ಮನುಷ್ಯರೇ ಇತ್ತೀಚೆಗೆ ಆ ಜಾವಾಬ್ದಾರಿಯಿಂದ ಒಂದಷ್ಟು ನುಣುಚಿಕೊಳ್ಳುಲು ಪ್ರಯತ್ನಿಸುತ್ತಿದ್ದೇವೆ ಅನಿಸಿತು. ಎದೆ ಹಾಲು ಉಣಿಸದ, ಹಸುಗೂಸುಗಳನ್ನೂ ಮನೆಯ ಹಿರಿಯರಿಗೋ, ಡೇಕೇರುಗಳಿಗೋ ಒಪ್ಪಿಸಿ ಕೆಲಸ, ಕರಿಯರ್ ಅಂತ ಓಡುವ ಅದೆಷ್ಟೋ ಮಂದಿಯನ್ನ ನೋಡುತ್ತಿರುತ್ತೇವೆ. ಮನುಷ್ಯರಿಗೆ ಹೋಲಿಸಿದರೆ ಈ ಪ್ರಾಣಿಗಳು ಅದೆಷ್ಟು ಪ್ರಕೃತಿಯ ಮಾತನ್ನು ಕೇಳುತ್ತಾ ಅದಕ್ಕೆ ಹತ್ತಿರವಾಗಿವೆ ಅನಿಸುತ್ತದೆ.

ಕೊನೆಯ ಒಂದೇ ಒಂದು ಕಿಟಕಿಯನ್ನು ಅವಳಿಗೆ ಬೇಕೆಂದಾಗ ಹೊರ ಹೋಗಲು ಮತ್ತು ಒಳ ಬರಲು ಎಂದು ತರೆದಿಟ್ಟು, ಉಳಿದೆಲ್ಲ ಕಿಟಕಿಗಳನ್ನು ಭದ್ರಪಡಿಸಿ, ಕರ್ಟನ್ ಎಳೆದೆ. ಕೋಣೆಯ ಬಾಗಿಲನ್ನೂ ಹೊರಗಿನಿಂದ ಮುಚ್ಚಿದೆ. ಮನೆಯ ಎಲ್ಲರಿಗೂ ಫರ್ಮಾನು ಬಾಗಿಲು ತೆರೆಯಬಾರದೆಂದು. ಮಗಳ ಬಗ್ಗೆ ಸ್ವಲ್ಪ ನಂಬಿಕೆಯಿರಲಿಲ್ಲ. ಹಾಗಾಗಿ ಆ ಕೋಣೆಗೆ ಬೀಗ ಹಾಕಿಟ್ಟೆ. ಈಗ ತುಸು ನೆಮ್ಮದಿ. ‘ಅಮ್ಮ ಈ ಮನೆಯಲ್ಲಿ ನಾವು ಬಾಡಿಗೆಗೆ ಇದ್ದೀವಿ, ನಮ್ಮ ಮನೆಯಲ್ಲಿ ಈ ಬೆಕ್ಕುಗಳು ಬಾಡಿಗೆಗೆ ಇದಾವಾ ಅಮ್ಮ…’ ಎಂದು ಕೇಳಿದಳು ಮಗಳು. ಅವಳ ಯೋಚನೆಗೆ ನಗು ಬಂತು. ‘ಬಾಡಿಗೆ! ಹೂ ಕಣೇ, ಹೇಳದೆ ಕೇಳದೆ ತನ್ನ ಫ್ಯಾಮಿಲಿನೇ ಕರ್ಕೊಂಡು ಬಂದು ಸೇರ್ಕೊಂಡಿದಾಳಲ್ಲ, ಈ ಬೆಕ್ಕಮ್ಮ, ಇವಳ ಹತ್ರ ಬಾಡಿಗೆ ಇಸ್ಕೊಳೋಣ ಆಯ್ತ…’ ಅಂತಂದು ನಕ್ಕೆ. ಒಂದೆರೆಡು ದಿನ ಕಳೆದ ಮೇಲೆ, ಗೆಳತಿಯೊಬ್ಬಳಲ್ಲಿ ಸಂಕ್ಷಿಪ್ತವಾಗಿ ಈ ವಿಷಯ ಹಂಚಿಕೊಂಡೆ. ಅವಳು ‘ನೀನು ಹೀಗೆ ಹಾಲು ಕೊಡ್ತಾ ಇದ್ದರೆ ಅದೆಲ್ಲಿ ಹೋಗುತ್ತೆ, ಇಲ್ಲೇ ಆರಾಮಾಗಿದೆ ಅಂತ ಇದ್ದು ಬಿಡುತ್ತೆ…’ ಅಂತಂದು ನಕ್ಕಳು. ಇದ್ದರೆ ಇರಲಿ ಬಿಡು ಆಮೇಲೆ ನೋಡಿಕೊಳ್ಳೋಣ ಅಂದುಕೊಂಡೆನೆ ಹೊರತು ಹಾಲು ಕೊಡುವುದನ್ನೂ ನಿಲ್ಲಿಸಲಿಲ್ಲ, ಹೊರಹಾಕುವ ಯೋಚನೆಯನ್ನೂ ಮಾಡಲಿಲ್ಲ.

ನಂತರದ ನಾಲ್ಕೈದು ದಿನಗಳು ನಿತ್ಯದ ನಿಯತಿಯಲ್ಲಿಯೇ ಕಳೆದವು. ಅವಳು ನಮ್ಮಲ್ಲೇ ಒಬ್ಬಳಂತಾಗಿ ಹೋಗಿದ್ದಳು. ಯಾವ ಜನ್ಮದ ಋಣವೋ ಎಂಬಂತೆ. ಪ್ರತಿ ನಿತ್ಯ ಅವಳನ್ನು, ಅವಳ ಮಕ್ಕಳನ್ನು ನೋಡುವುದು ಅಭ್ಯಾಸವಾಯಿತು. ಇವತ್ತೂ ಎಂದಿನಂತೆಯೇ ಕೋಣೆಯ ಒಳ ಹೋಗಿ ಬಗ್ಗಿ ನೋಡಿದೆ. ಅವಳಾಗಲೀ ಅವಳ ಒಂದೇ ಒಂದು ಕೂಸೇ ಆಗಲೀ ಎಲ್ಲಿಯೂ ಕಾಣಲಿಲ್ಲ… ಮನಸು ಮುದುಡಿ ಕಣ್ಣುಗಳು ತುಂಬಿಕೊಂಡವು. ಒಂದೇ ಒಂದು ಮಾತನ್ನೂ ಹೇಳದೆ ಹೊರಟೇ ಹೋದಳೇ… ಮನೆಯೆಲ್ಲ ಬಣಗುಟ್ಟತೊಡಗಿದೆ.. ಇಂದಿನಿಂದ ಯಾರಿಗೆ ಹಾಲಿಡಲಿ… ಆ ಮುದ್ದು ಮರಿಗಳನ್ನು ಎಲ್ಲಿ ಹುಡುಕಲಿ…

ತಮ್ಮನ್ನು ಬರಿಯ ಆಟದ ವಸ್ತುಗಳಂತೆ ಮತ್ತು ತಮ್ಮ ಅವಶ್ಯಕತೆಗಳಿಗೆ ಮಾತ್ರ ಬಳಸಿಕೊಳ್ಳುವ ಮನುಷ್ಯನಲ್ಲೂ ಪ್ರೀತಿ ಹುಟ್ಟಿ ಹೃದಯದ ತಂತಿ ಮಿಡಿಯುವಂತೆ ಮಾಡಿಬಿಡುವ ಈ ಮುಗ್ಧ ಜೀವಿಗಳನ್ನು ಇನ್ನಾದರೂ ಮನಸಿನಾಳದಿಂದ ಪ್ರೀತಿಸಲೇ ಬೇಕು ಎಂಬ ನಿರ್ಧಾರ ಹರಳುಗಟ್ಟುತ್ತಿದೆ…