ಒಂದು ಬದಲಾವಣೆ ರಂಗಭೂಮಿಯಲ್ಲಿ ಬರಬೇಕು ಎಂದು ಆಗ್ರಹಿಸುವಾಗ ನಾವು ಆಯ್ಕೆ ಮಾಡಿಕೊಳ್ಳುವ ನಾಟಕಗಳ ಕಥಾವಸ್ತು ಯಾವುದು ಮತ್ತು ಅದು ಹೇಗಿರಬೇಕು ಅನ್ನೋದು ಮುಖ್ಯ ಆಗುತ್ತದೆ. ಸೈದ್ಧಾಂತಿಕವಾಗಿ ಮತ್ತು ಪ್ರಾಯೋಗಿಕವಾಗಿ ನಾವು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೇವೋ, ಅದು ಪ್ರೇಕ್ಷಕರಿಗೆ ಅರ್ಥ ಆಗಬೇಕಾಗಿದೆ. ಸಾಮಾನ್ಯವಾಗಿ ನಾವು ಮಾಡುವ ಎಲ್ಲಾ ನಾಟಕಗಳು ಪ್ರೇಕ್ಷಕರಿಗೆ ಅರ್ಥ ಆಗುವುದಿಲ್ಲ. ಯಾಕಂದ್ರೆ ಒಂದೇ ತರಹದ ಪ್ರೇಕ್ಷಕ ಸಮುದಾಯ ನಾಟಕ ನೋಡಲು ಬರುವುದಿಲ್ಲ.’ರಂಗಭೂಮಿಯಲ್ಲಿ ಮರುಚಿಂತನೆ’ ಕುರಿತು ಗೌರಿ ಅದಮ್ಯ ಬರೆದ ಅನಿಸಿಕೆ ಇಲ್ಲಿದೆ:

 

ಥಿಯೇಟರ್ ಅಥವಾ ರಂಗಭೂಮಿ ಅಂದುಕೂಡಲೆ ನನಗೆ ನೆನಪಾಗುವುದು ಪ್ರೇಕ್ಷಕ ಸಮುದಾಯವನ್ನು ಆಟದ ಮೂಲಕ ಅಥವಾ ನಾಟಕದ ಮೂಲಕ ಹಿಡಿದಿಟ್ಟುಕೊಳ್ಳುವ ಪ್ರಬಲ ಮಾಧ್ಯಮ ಎಂಬುದಾಗಿ. ನಾಟಕ ನೋಡುತ್ತ ಅದರ ಘಮವನ್ನ ಅನುಭವಿಸುತ್ತಿದ್ದ ನನ್ನಂತಹ ಎಷ್ಟೋ ಜನರು, ಮುಂದೆ ಅದೇ ರಂಗಭೂಮಿಯ ಭಾಗಗಳಾಗಿ ನಾಟಕಗಳಲ್ಲಿ ಅಭಿನಯಿಸಲು ಶುರುಮಾಡಿದಾಗ ರಂಗಭೂಮಿಯ ಇನ್ನೊಂದು ಮಗ್ಗುಲು ನಮಗೆ ನಿಧಾನಕ್ಕೆ ಅರಿವಾಗುತ್ತ ಹೋಗತ್ತದೆ. ಒಂದು ನಾಟಕ ಕಟ್ಟುವ ಪ್ರಕ್ರಿಯೆಯಲ್ಲಿ ಅದರ ಬಗ್ಗೆ ಯಾವ ಸುಳಿವು ಇರದ, ನಾಟಕವನ್ನು ಒಂದು ಪ್ಯಾಷನ್ ಅಂತ ನೋಡುವ ಯುವ ಸಮುದಾಯಕ್ಕೆ, ಒಂದು ನಾಟಕ ಕಟ್ಟುವಿಕೆಯ ಜೊತೆಗೆ ಎರಡು ಪಾತ್ರಗಳ ಮುಖಾಮುಖಿಯಲ್ಲಿ ಘಟಿಸುವ ಭಾವಗಳು, ಆ ಪಾತ್ರದೊಟ್ಟಿಗೆ ನಾಟಕವನ್ನ ನೋಡುವ ಒಳನೋಟದ ಜೊತೆಗೆ ಗೊತ್ತಿದ್ದೊ, ಗೊತ್ತಿಲ್ಲದೆಯೊ ನಮ್ಮೊಳಗೆ ಬರುವ ಒಂದು ಗಂಭೀರತೆ, ಈ ಗಂಭೀರತೆಯಿಂದ ನಾವು ಸಮಾಜವನ್ನ ನೋಡುವ ದೃಷ್ಠಿಕೋನ ಎಲ್ಲವನ್ನೂ ಬದಲಾಯಿಸುವ, ಸರಿ-ತಪ್ಪುಗಳ ಆಯ್ಕೆಯನ್ನು ನಮಗೆ ಬಿಡುವ ತಾಕತ್ತು ರಂಗಭೂಮಿಗಿದೆ.

ಈ ನಿಟ್ಟಿನಲ್ಲಿ ನಾವು ಯಾವ ರೀತಿಯ ನಾಟಕಗಳನ್ನ ಕಟ್ಟುತ್ತೇವೆ, ಆ ನಾಟಕದ ಜೊತೆಗೆ ನಮ್ಮೊಳಗೆ ಯಾವುದರ ಬಗ್ಗೆ ತಲ್ಲಣಗಳು ಶುರುವಾಗುತ್ತವೆ, ಯಾವುದು ಸರಿ, ಯಾವುದು ತಪ್ಪು ಅಂತ ಗೊತ್ತಾದಮೇಲೂ ತಪ್ಪನ್ನ ತಪ್ಪು ಅಂತ ಹೇಳುವುದಕ್ಕೆ ನಮ್ಮಿಂದ ಸಾಧ್ಯ ಆಗುತ್ತದೆಯೇ ಅನ್ನೋದನ್ನು ಗಮನಿಸಬೇಕು. ಪ್ರಸ್ತುತ ಕೋವಿಡ್ ಮಹಾಸೋಂಕಿನಿಂದಾಗಿ, ನಮ್ಮ ಎಷ್ಟೋ ಜನ ಸಹನಟರನ್ನ, ರಂಗಕರ್ಮಿಗಳನ್ನ ನಾವು ಕಳ್ಕೊಂಡಿದ್ದೇವೆ. ರಂಗಭೂಮಿಯನ್ನೆ ನಂಬಿಕೊಂಡಿದ್ದವರು ಅವರು. ನಮ್ಮೊಳಗೂ ಕೊರೋನ ಮೂರನೆ ಅಲೆಯ ಅವ್ಯಕ್ತ ಭಯವನ್ನು ಹುಟ್ಟಿಕೊಂಡಿದೆ. ಈ ಭಯವು ಹೆಚ್ಚಳವಾಗಲು ನಮ್ಮನ್ನ ಆಳುವ ವರ್ಗದಿಂದ ಹಿಡಿದು ಎಲ್ಲರೂ ಕಾರಣರಾಗಿದ್ದಾರೆ.
ಈತರಹದ ಸನ್ನಿವೇಷದಲ್ಲಿ ಮನುಷ್ಯರು ಮನುಷ್ಯರನ್ನ ಮನುಷ್ಯರನ್ನಾಗೆ ನೋಡುವ ಪ್ರಕ್ರಿಯೆಯ ಮೂಲಕ ಎಲ್ಲರಲ್ಲೂ ಸಹಜ ಜೀವಪ್ರೀತಿಯನ್ನು ಉದ್ದೀಪಿಸುವ ಕೆಲಸ ಆಗಬೇಕಾಗಿದೆ. ಈ ಪ್ರೀತಿಯ ಮೂಲಕವೇ ನಾವು ಸಮಾಜವನ್ನು ನೋಡಬೇಕು. ಈ ರೀತಿಯಲ್ಲಿ ಸಮಾಜವನ್ನು ನೋಡುವ ಪ್ರಕ್ರಿಯೆ ರಂಗಭೂಮಿಯಿಂದ, ರಂಗಭೂಮಿಗೆ ಬರುವ ಯುವ ಸಮುದಾಯದಿಂದ ಶುರುವಾಗಬೇಕಾಗಿದೆ ಎನ್ನುವುದು ನನ್ನ ಅನಿಸಿಕೆ.

ಈ ತರಹದ ಒಂದು ಬದಲಾವಣೆ ರಂಗಭೂಮಿಯಲ್ಲಿ ಬರಬೇಕು ಅನ್ನುವಾಗ ನಾವು ಆಯ್ಕೆ ಮಾಡಿಕೊಳ್ಳುವ ನಾಟಕಗಳ ಕಥಾವಸ್ತು ಯಾವುದು ಅನ್ನೋದು ಬಹಳ ಮುಖ್ಯ ಆಗುತ್ತದೆ. ಪ್ರಾಕೃತಿಕವಾಗಿ ಮತ್ತು ಪ್ರಾಯೋಗಿಕವಾಗಿ ( ಥಿಯರಿ ಮತ್ತು ಪ್ರಾಕ್ಟಿಕಲ್ ) ನಾವು ಏನನ್ನು ಹೇಳಲು ಪ್ರಯತ್ನಿಸುತ್ತಿದ್ದೇವೋ, ಅದು ಪ್ರೇಕ್ಷಕರಿಗೆ ಅರ್ಥ ಆಗಬೇಕಾಗಿದೆ. ಸಾಮಾನ್ಯವಾಗಿ ನಾವು ಮಾಡುವ ಎಲ್ಲಾ ನಾಟಕಗಳು ಪ್ರೇಕ್ಷಕರಿಗೆ ಅರ್ಥ ಆಗುವುದಿಲ್ಲ. ಯಾಕಂದ್ರೆ ಒಂದೇ ತರಹದ ಪ್ರೇಕ್ಷಕ ಸಮುದಾಯ ನಾಟಕ ನೋಡಲು ಬರುವುದಿಲ್ಲ. ಯಾವುದಾದರು ಒಂದು ನಾಟಕವನ್ನ ಉದಾಹರಣೆ ಅಂತ ತಗೊಂಡಾಗ ಆ ನಾಟಕದಲ್ಲಿ ಭಾವನಾತ್ಮಕ ದೃಶ್ಯಗಳು ಕೆಲವು ಪ್ರೇಕ್ಷಕ ವರ್ಗಕ್ಕೆ ಇಷ್ಟ ಆದ್ರೆ ರೋಚಕ ದೃಶ್ಯಗಳು ಇನ್ನೊಂದಷ್ಟು ಪ್ರೇಕ್ಷಕರಿಗೆ ಇಷ್ಟ ಆಗತ್ತದೆ, ಮತ್ತೊಂದಷ್ಟು ಜನರಿಗೆ ನಾಟಕಕ್ಕೆ ಬಳಸಿರುವ ರಂಗಸಜ್ಜಿಕೆ, ವಸ್ತ್ರವಿನ್ಯಾಸ, ನಾಟಕಕ್ಕೆ ನಾವು ಕೊಡುವ ಬೆಳಕಿನ ವಿನ್ಯಾಸ, ಸಂಗೀತ, ಕಥಾವಸ್ತು ಹೀಗೆ ಒಟ್ಟು ನಾಟಕದ ಪೂರಕ ಅಂಶಗಳು ಇಷ್ಟ ಆಗತ್ತವೆ. ಈ ತರಹದ ಪ್ರೇಕ್ಷಕರನ್ನ ಹಿಡಿದಿಡುವ ಜವಾಬ್ದಾರಿ ರಂಗದ ಮೇಲೆ ಪಾತ್ರಧಾರಿಗಳಾಗಿವ ನಟರದ್ದು ಎಷ್ಟಿರುತ್ತದೋ, ಆ ಪಾತ್ರಧಾರಿಗಳೊಟ್ಟಿಗೆ ಇಡೀ ನಾಟಕವನ್ನು ಕಟ್ಟುವ ನಿರ್ದೇಶಕರ ಜವಾಬ್ದಾರಿ ಕೂಡ ಅಷ್ಟೇ ಇರತ್ತೆ..

ಕಥೆಯನ್ನ ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ನಮ್ಮ ಮುಂದೆ ಸವಾಲುಗಳಿವೆ ಎಂದು ನನಗೆ ಅನಿಸುತ್ತದೆ. ಕೋವಿಡ್ ಸೋಂಕಿನ ಭಯಕ್ಕಿಂತ ಮೊದಲು ತೀರಾ ಸಹಜವಾಗಿ ನಡೆಯುತ್ತಿದ್ದ ರಂಗಭೂಮಿ ಕೋವಿಡ್ ನ ನಂತರ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಮೊದಲಿನಷ್ಟೆ ಜನ ಈಗ ರಂಗಮಂದಿರಕ್ಕೆ ಬಂದು ನಾಟಕ ನೋಡಲು ಶುರುಮಾಡಿದ್ದಾರೆ. ಅವರಿಗೆ ಈಗ ನಾವು ಯಾವ ತರಹದ ವಸ್ತು ವಿಷಯವನ್ನ ಹೇಳಲಿದ್ದೇವೆ ಅನ್ನೋದು ಮುಖ್ಯ ಆಗುತ್ತದೆ. ರಂಗಭೂಮಿ ಮನೊರಂಜನೆಯ ಮಾಧ್ಯಮವೇ ಆದರೂ ಕೇವಲ ಮನೊರಂಜನೆಯ ದೃಷ್ಟಿಕೋನ ಒಂದನ್ನೇ ಇಟ್ಟುಕೊಂಡು ನಾಟಕ ಕಟ್ಟುವುದಕ್ಕೆ ಆಗುವುದಿಲ್ಲ. ಸತ್ಯವನ್ನ ರಂಜನಾತ್ಮಕವಾಗಿ ಹೇಳೋಕೆ ಆಗಲ್ಲ, ಆದರೆ ರಂಗದಲ್ಲಿ ಯಾರಾದರೂ ಪಾತ್ರಧಾರಿ ಅದನ್ನು ಹೇಳಿದಾಗ, ಪ್ರೇಕ್ಷಕರಲ್ಲಿ ಯಾರಿಗೇ ಆದರೂ, ‘ಹೌದು ಆ ಪಾತ್ರಧಾರಿ ಹೇಳ್ತಿರೋದು ನಿಜ’ ಅಂತ ಅನ್ನಿಸುತ್ತದಲ್ಲ ಆಗ ಅಲ್ಲೊಂದು ಸಾರ್ಥಕತೆ ಹುಟ್ಟುತ್ತದೆ. ಹಾಗೆಂದು ಎಲ್ಲಾ ಪ್ರೇಕ್ಷಕರನ್ನ ಮೆಚ್ಚಿಸಬೇಕು ಎಂದೇನೂ ಅಲ್ಲ, ಆದರೆ ಅವರೊಳಗೆ ಹೊಸ ಹೊಳಹುಗಳನ್ನ ಹೊಳೆಯಿಸುವಾಗ, ಪ್ರೇಕ್ಷಕ ಸಮುದಾಯದಲ್ಲೊಂದು ಪ್ರಶ್ನೆ ಹುಟ್ಟಿದಾಗ ನಿರ್ದೇಶಕರು ಏನನ್ನ ಹೇಳೋಕೆ ಹೊರಟಿದಾರೆ ಅನ್ನೋದು ಅರ್ಥ ಆಗುತ್ತದೆ.

ನಮ್ಮೊಳಗೂ ಕೊರೋನ ಮೂರನೆ ಅಲೆಯ ಅವ್ಯಕ್ತ ಭಯವನ್ನು ಹುಟ್ಟಿಕೊಂಡಿದೆ. ಈ ಭಯವು ಹೆಚ್ಚಳವಾಗಲು ನಮ್ಮನ್ನ ಆಳುವ ವರ್ಗದಿಂದ ಹಿಡಿದು ಎಲ್ಲರೂ ಕಾರಣರಾಗಿದ್ದಾರೆ. ಈತರಹದ ಸನ್ನಿವೇಷದಲ್ಲಿ ಮನುಷ್ಯರು ಮನುಷ್ಯರನ್ನ ಮನುಷ್ಯರನ್ನಾಗೆ ನೋಡುವ ಪ್ರಕ್ರಿಯೆಯ ಮೂಲಕ ಎಲ್ಲರಲ್ಲೂ ಸಹಜ ಜೀವಪ್ರೀತಿಯನ್ನು ಉದ್ದೀಪಿಸುವ ಕೆಲಸ ಆಗಬೇಕಾಗಿದೆ.

ನಾಟಕ ಕಟ್ಟೋದು ಅಂತ ಬಂದಾಗ ರಂಗದ ಮೇಲೆ ತರುವ ನಾಟಕಗಳ ಜೊತೆಗೆ ಬೀದಿ ನಾಟಕಗಳ ಪಾತ್ರ ಕೂಡ ಇಲ್ಲಿ ಮುಖ್ಯ, ನಿಜ ಅರ್ಥದಲ್ಲಿ ಹೇಳುವುದಾದರೆ ಜನಸಾಮಾನ್ಯರಿಗೆ ಆಳುವ ವರ್ಗಗಳಿಂದ ತೊಂದರೆ ಆಗುತ್ತಿದ್ದಾಗ, ಬೆಲೆ ಏರಿಕೆಗಳಾದಾಗ, ಸಮಾಜದ ನೈತಿಕ ಸ್ವಾಸ್ಥ್ಯ ಹಾಳಾದಾಗ ಅದನ್ನ ಪ್ರಬಲವಾಗಿ ಖಂಡಿಸುತ್ತ ಬಂದದ್ದೆ ಬೀದಿ ನಾಟಕಗಳು. ಖಂಡಿಸುವುದರ ಜೊತೆಗೆ ಸಾಮಾಜಿಕವಾಗಿ – ಶೈಕ್ಷೇಣಿಕವಾಗಿ – ಆಗೋಗ್ಯದ ದೃಷ್ಟಿಯಿಂದ ನಮ್ಮಲ್ಲಿ ಜಾಗೃತಿಯನ್ನ ಮೂಡಿಸುತ್ತಿದ್ದದ್ದು ಕೂಡ ಬೀದಿ ನಾಟಕಗಳೆ. ಇವತ್ತು ಕೂಡ ನಾವು ಬೀದಿ ನಾಟಕವನ್ನ ಪ್ರಬಲವಾಗಿ ಬಳಸಿಕೊಳ್ಳಬಹುದು. ಈಗ ಸಮಾಜದಲ್ಲಿ ಉಂಟಾಗುತ್ತಿರುವಂತಹ ತಲೆ ತಗ್ಗಿಸುವಂತ ಘಟನೆಗಳ ವಿರುದ್ಧ ಧ್ವನಿ ಎತ್ತಬಹುದು..

ನಾಟಕ ಅಂದಕೂಡಲೇ ಇದೊಂದು ಸಿದ್ಧ ಮಾದರಿಯ ಪಠ್ಯಕ್ರಮ ಅಲ್ಲ, ಇದು ಕೇವಲ ಪ್ರಾಕೃತಿಕ ಅಂಶಗಳನ್ನಷ್ಟೇ ಹೊಂದಿಲ್ಲ. ಇದು ಪ್ರಯೋಗಾತ್ಮಕ ಅಂಶಗಳನ್ನು ಕೂಡ ಒಳಗೊಂಡಿದೆ. ಎರಡನ್ನು ಕೂಡ ಸಮಪ್ರಮಾಣದಲ್ಲಿ ನೋಡಬೇಕಾದ ಅನಿವಾರ್ಯತೆ ಮತ್ತು ಅಗತ್ಯತೆ ಇದೆ. ರಂಗಭೂಮಿಯನ್ನ ಪ್ಯಾಷನ್ ಅಂತ ತೆಗೆದುಕೊಳ್ಳುವ ಯುವ ಸಮುದಾಯ ವೃತ್ತಿ ರಂಗಭೂಮಿಗಿಂತ ಹೆಚ್ಚು ಹವ್ಯಾಸಿ ರಂಗಭೂಮಿಯ ಕಡೆ ಬರುತ್ತಾರೆ. ಅವರಿಗೆ ರಂಗಮಾಧ್ಯಮ ಯಾಕೆ ಇಷ್ಟು ಪ್ರಬಲ ಅನ್ನೋದನ್ನ ಮೊದಲು ಅರ್ಥಮಾಡಿಸ್ಬೇಕು, ಒಂದು ಅಥವಾ ಎರಡು ನಾಟಕಗಳನ್ನು ಮಾಡಿ ನಂತರ ಪರದೆಗಳ ಕಡೆ ಅವರ ಗಮನ ಹರಿಯತ್ತಲ್ಲ, ಈ ಮನಸ್ಥಿತಿಯನ್ನ ಬದಲಾಯಿಸೋಕೆ ಕಷ್ಟ ಆದರೂ, ಈ ಯುವಸಮುದಾಯಕ್ಕೆ ಎಷ್ಟು ಸರಳವಾಗಿ ಸಾಧ್ಯವೊ ಅಷ್ಟು ಸರಳವಾಗಿ ರಂಗಭೂಮಿ ಮತ್ತು ಸಮಾಜದ ನಡುವೆ ಇರುವಂತಹ ಸಂಬಂಧದ ಆಪ್ತತೆಯನ್ನು ಅರ್ಥಮಾಡಿಸ್ಬೇಕು. ಆಗ ರಂಗಭೂಮಿಯನ್ನ ನೋಡುವ ದೃಷ್ಟಿಕೋನವನ್ನ ಬದಲಾಯಿಸಿಕೊಳ್ಳುವುದಕ್ಕೆ ಸಾಧ್ಯ ಇದೆ.

ಇಷ್ಟೆಲ್ಲ ಸಾಧ್ಯತೆಗಳಿರುವ ರಂಗಭೂಮಿಯಲ್ಲೂ ಸಮಸ್ಯೆಗಳಿವೆ, ರಂಗಭೂಮಿಯನ್ನ ಮುಖ್ಯವಾಗಿ ಭಾದಿಸೋದು ಆರ್ಥಿಕ ಹೊಡೆತಗಳು. ಇದು ಕೋವಿಡ್ ನ ನಂತರ ಮತ್ತಷ್ಟು ಹೆಚ್ಚಾಗಿದೆ, ಇದರ ಜೊತೆಗೆಯೇ ಕೇವಲ ರಂಗವನ್ನೆ ನಂಬಿಕೊಂಡು ಬದುಕೋದು ಕಷ್ಟ ಅನ್ನೋ ಮಾತು ಮೊದಲಿಗಿಂತ ಈಗ ಹೆಚ್ಚು ನಿಜ ಅನ್ನಿಸುತ್ತದೆ. ಇದರೊಟ್ಟಿಗೆ ರಂಗಭೂಮಿಯಲ್ಲೆ ಏನನ್ನಾದ್ರು ಸಾಧಿಸ್ಬೇಕು ಅಂತ ಬರುವ ಒಂದಷ್ಟು ಮನಸ್ಸುಗಳಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡುವವರು ಸಿಗಬೇಕಿದೆ. ರಂಗಭೂಮಿಯೆ ಬದುಕು ಅಂತ ಬರುವವರಿಗೆ ಎಲ್ಲವನ್ನೂ ನಕಾರಾತ್ಮಕವಾಗಿ ಅಥವಾ ಸಕಾರಾತ್ಮಕವಾಗಿ ಹೇಳ್ಬೇಕು ಅಂತೇನಿಲ್ಲ, ಆದರೆ ಎರಡನ್ನು ಸಮತೋಲಿತವಾಗಿ ಹೇಳಬೇಕಾಗಿದೆ, ಮುಂದೊಮ್ಮೆ ತೀರಾ ಮುಜುಗರಕ್ಕೆ ಈಡಾಗುವ ಸಂದರ್ಭವನ್ನ ಎದುರಿಸುವಾಗ ಅವರೊಳಗೊಂದು ಸ್ಥೈರ್ಯ ಹುಟ್ಟಬೇಕಾದರೆ ಅವರಿಗೆ ನಕಾರಾತ್ಮಕ ಅಂಶಗಳ ಅರಿವು ಇರಬೇಕು

ಇದರೊಟ್ಟಿಗೆ ಇದು ವೃತ್ತಿ ರಂಗಭೂಮಿ, ಇದು ಹವ್ಯಾಸಿ ರಂಗಭೂಮಿ ಅನ್ನುವ ಅಂತರವು ಇದೆ. ಸಾಧ್ಯವಾದಷ್ಟು ಇವೆರಡರ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ಕೂಡ ಅರ್ಥ ಮಾಡ್ಕೊಬೇಕು. ಜೊತೆಗೆ ನಾವು ಮಾಡುವ ನಾಟಕಗಳು ಪ್ರಸ್ತುತ ಕಾಲಮಾನಕ್ಕೆ ಅನ್ವಯಿಸುತ್ತದೆಯೇ ? ಜನರ ಮೇಲೆ ಇದರ ಪರಿಣಾಮ ಏನು? ನಾಟಕ ಕೇವಲ ಮನೊರಂಜನೆಯಾಗಿ ಮಾತ್ರ ಉಳಿಯಬೇಕೇ ? ಇದು ಪ್ರೇಕ್ಷಕರ ಜೊತೆಗೆ ಪಾತ್ರಧಾರಿಗಳಲ್ಲೂ ಯಾವ ಮಟ್ಟಿನ ಬದಲಾವಣೆಗೆ ಕಾರಣವಾಗ್ತಿದೆ ಅನ್ನುವುದರ ಅರಿವು ಇರಬೇಕು. ಇದೆಲ್ಲಕ್ಕಿಂತಲೂ ಹೆಚ್ಚಾಗಿ ನಿರ್ದೇಶಕರು ನಾಟಕಗಳನ್ನ ಎಷ್ಟು ಸರಳವಾಗಿ, ಸಹಜವಾಗಿ ಕಟ್ತಾರೆ ಅನ್ನೋ ಅಂಶವು ಕೂಡ ಮುಖ್ಯ.


ಒಟ್ಟಾರೆಯಾಗಿ ರಂಗಭೂಮಿಯ ಬಗ್ಗೆ ಮರು ವ್ಯಾಖ್ಯಾನ ರೂಪಿಸಬೇಕು ಅಂದರೆ ಎಲ್ಲರಲ್ಲೂ ಗೌರವ ಮತ್ತೆ ಪ್ರೀತಿಯ ಜೊತೆಗೆ ಆಯ್ಕೆ ಮಾಡಿಕೊಳ್ಳುವ ಕಥಾ ವಸ್ತುಗಳಿಂದ ಹಿಡಿದು ನಾಟಕಗಳನ್ನ ಕಟ್ಟುವ ಪ್ರಕ್ರಿಯೆಯೊಟ್ಟಿಗೆ ಪ್ರೇಕ್ಷಕರಿಗೆ ನಾವು ಅದನ್ನ ಹೇಗೆ ಅರ್ಥಮಾಡಿಸುತ್ತೇವೆ ಅನ್ನೋದು ಕೂಡ ಮುಖ್ಯ ಆಗುತ್ತದೆ. ಹಾಗಾದಾಗ ಮಾತ್ರ ರಂಗಭೂಮಿ ಇನ್ನೂ ಪ್ರಬಲವಾಗಿ ಉಳಿಯತ್ತದೆ.