ಅಂಧರಾಗಿದ್ದರಿಂದ ಬಹುಶಃ ಅವರಿಗೆ ಕನ್ ಫ್ಯೂಸ್ ಆಗಿರಬಹುದು ಎಂದು ‘ಅಲ್ಲ ಸರ್ ಗೇಟ್ ಈ ಕಡೆ ಇದೆ ನೀವು ವಿರುದ್ಧ ದಿಕ್ಕಿನಲ್ಲಿ ಕೈ ತೋರುತ್ತಿದ್ದೀರಲ್ಲʼ ಎಂದೆ. ಆಗ ಅವರು ನಕ್ಕು ತಮ್ಮ ಕೈಯಲ್ಲಿನ ವಾಕಿಂಗ್ ಸ್ಟಿಕ್ ಓಪನ್ ಮಾಡಿ ಬನ್ನಿ ನನ್ನ ಹಿಂದೆ ಎಂದು ಮುಂದೆ ನಡೆದರು. ನಾನು ಆ ಅಂಧ ವ್ಯಕ್ತಿಯನ್ನು ಅನಿವಾರ್ಯವಾಗಿ ಅಪನಂಬಿಕೆಯಿಂದ ಹಿಂಬಾಲಿಸತೊಡಗಿದೆ. ಎದುರಿನ ರೂಮುಗಳ ಎಡಕ್ಕೆ ನಮ್ಮ ಕಣ್ಣಿಗೆ‌ ಮರೆಯಲ್ಲಿದ್ದ ದಿಕ್ಕಿನಲ್ಲಿ ತಿರುಗಿದಾಗ ಅವರು ಮಾತನಾಡುತ್ತಿದ್ದ ಗೇಟ್ ಕಂಡಿತು. ನನ್ನ ಮನದಲ್ಲಿ ಅವರ ಕುರಿತು ಯೋಚಿಸುತ್ತಿದ್ದ ಭಾವ ಅವರು ಅಂಧರೆಂದುಕೊಂಡು ಮನದೊಳಗೆ ಮೂಡಿದ್ದ ಅಸಡ್ಡೆಯ ಭಾವ ಸರ್ರನೆ ಇಳಿಯಿತು.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರಹ ನಿಮ್ಮ ಓದಿಗೆ

ಬೆಳಿಗ್ಗೆ 6-30 ಆಗಿತ್ತು ನಾನು ಕಲ್ಬುರ್ಗಿ ತಲುಪಿದಾಗ. ಈ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿರುವುದರಿಂದ ಇಲ್ಲಿಗೆ ಬರುವಂತಾಯಿತು. ಇಲ್ಲದಿದ್ದರೆ ನಮ್ಮ ವಿಭಾಗದ ಆಯುಕ್ತರ ಕಚೇರಿ ಕಲಬುರ್ಗಿಯಲ್ಲಿದ್ದರೂ ನಾವು ಅವರ ಕಚೇರಿಗೆ ಭೇಟಿ ನೀಡುವುದು 3-4 ವರ್ಷಗಳಿಗೊಮ್ಮೆ. ಬೇಕಾದರೆ ಆಯುಕ್ತರೇ ಬರಲಿ ನಮ್ಮನ್ನು ನೋಡಲು ಎಂಬ ಉಡಾಫೆ ನಮ್ಮದು.  ಲಾಡ್ಜ್‌ನಲ್ಲಿ ಸ್ನಾನಾದಿಗಳನ್ನು ಮುಗಿಸಿ ಅದೇ ಸ್ಟೇಷನ್ ರಸ್ತೆಗೆ ಸಂಪರ್ಕಿಸುವ ಸರ್ಕಲ್‌ನಲ್ಲಿ ಸ್ವಲ್ಪ ಹೊಟ್ಟೆ ತುಂಬಿಸಿದೆ. ಅಲ್ಲಿಂದಲೇ ಐವಾನ್ ಶಾಹಿ ರೋಡ್ ಆರಂಭವಾಗುತ್ತದೆ. ನನಗೆ ಈ ಆರಂಭದ ತುದಿಯ ಪರಿಚಯ ಮಾತ್ರ ನೆನಪಿತ್ತು, ಅಭಿಮನ್ಯು ಚಕ್ರವ್ಯೂಹದ ಗುಟ್ಟು ತಿಳಿದಂತೆ. ಯಾರನ್ನೂ ಕೇಳದೆ ಆ ದಾರಿ ಹಿಡಿದೆ… ಹತ್ತು ನಿಮಿಷ ನಡೆದ ನಂತರ ರಸ್ತೆ ಕವಲೊಡೆಯಿತು. ನನ್ನ ನೆನಪಿನಂಗಳದಲ್ಲಿ ಇದರ ಕುರಿತು ದಾಖಲಾಗಿರುವುದು ನೆನಪಾಯಿತು.  ಆದರೆ ಈ ಎರಡರಲ್ಲಿ ಯಾವುದು ಆಯುಕ್ತರ ಕಚೇರಿಗೆ ಎನ್ನುವುದು  ಸರಿಯಾಗಿ ನೆನಪಾಗಲಿಲ್ಲ. ಆದದ್ದಾಗಲಿ ಸಮಯವಿದೆ ಎಂದು ಅಲ್ಪ ಸ್ವಲ್ಪ ನೆನಪಿದೆ ಎಂಬ ಸೊಕ್ಕಿನಿಂದಲೇ ಬಲಗಡೆ ಹೊರಳಿದೆ. ಅಲ್ಲಿಂದ ಐದು ನಿಮಿಷ ನೇರವಾಗಿ ಚಲಿಸಿದೆ ಆದರೆ ದೂರದಲ್ಲಿ ಮುಖ್ಯ ರಸ್ತೆ ಕಾಣಬೇಕಾದ ಜಾಗದಲ್ಲಿ ಕಾಂಪೌಂಡಿನ ಅಡ್ಡ‌ಗೋಡೆ ಕಾಣುತ್ತಿತ್ತು. ಛೇ ಹಾದಿ ತಪ್ಪಿದೆ ಎಂದು ನನ್ನ ನಾ ಬೈದುಕೊಳ್ಳುತ್ತಾ ಪಕ್ಕದಲ್ಲಿಯೇ ನಿಂತಿದ್ದ ಹುಡುಗನನ್ನು ಕೇಳಿದೆ ‘ಅಪ್ಪಿ(ನಮ್ಮ ಕಡೆ ತನಗಿಂತ ಕಿರಿಯರನ್ನು ಹಿರಿಯರು ಸಂಬೋಧಿಸುವಂತೆ) ಇಲ್ಲಿ ಕಮೀಷನರ್ ಆಫೀಸ್ ಎಲ್ಲಿದೆ’ ಎಂದೆ. ಅವನು ಬಲಗಡೆ ಕೈ ತಿರುಗಿಸುತ್ತಾ ಮುಂದೆ ಹೋಗಿ ಲೆಫ್ಟ್ ತಿರುಗಿ ಎಂದ. ನಾನು ಸ್ವಲ್ಪ ಶಾಕ್ ಆಗಿ ಕೈ ಸನ್ನೆ ಸರಿ ಎಂದು ಭಾವಿಸಲೇ ಅಥವಾ ಅವನ ಮಾತನ್ನು ಸರಿ ಎಂದು ಭಾವಿಸಲೇ ಎಂದು‌. ನಾನು ಅವನಂತೆಯೇ ಕೈ ಮಾಡಿ ರೈಟ್ .. ಎಂದೆ ಇಲ್ಲ ಇಲ್ಲ ಲೆಫ್ಟ್‌ ಎಂದ. ಸರಿ ಎಂದು ಅವನು ಹೇಳಿದ ದಿಕ್ಕಿನಲ್ಲಿಯೇ ಚಲಿಸಿ ಎಡಕ್ಕೆ ತಿರುಗಿದಾಗ ಐವಾನ್ ಶಾಹಿ ಗೆಸ್ಟ್ ಹೌಸ್ ಕಾಣುತ್ತಿತ್ತು. ಖುಷಿಯಾಯಿತು. ಅದನ್ನು ದಾಟಿ ಬಲಕ್ಕೆ ಮುಂದೆಲ್ಲೊ ತಿರುವಿದೆ ಎಂಬುದನ್ನು ನೆನಪು ಮಾಡಿಕೊಳ್ಳುತ್ತಾ  ಮುಂದೆ ಚಲಿಸಿದೆ.

ಹೋದೆ ಹೋದೆ ಏನೋ ಬದಲಾವಣೆಯಾಗಿದೆ ಕಾಂಪೌಂಡು ಎತ್ತರಿಸಿದ್ದಾರೆ ಎನ್ನುತ್ತಾ ಮುಂದೆ ಚಲಿಸಿದೆ. ನಾನಂದುಕೊಂಡಂತೆ ಕಮೀಷನರ್ ಆಫೀಸ್ ಬರಲೇ ಇಲ್ಲ. ಈ ಹುಡುಗನ ಲೆಫ್ಟ್ ರೈಟ್‌ನಲ್ಲಿ ನನ್ನ ದಾರಿ ತಪ್ಪಿತು ಎಂದು ಆ ಹುಡುಗನನ್ನು ಬೈದುಕೊಳ್ಳುತ್ತಾ ಮನುಷ್ಯರಾರಾದರೂ ಕಾಣುತ್ತಾರ ಎಂದು ಅತ್ತಿತ್ತ ಹಿಂದೆ ಮುಂದೆ ನೋಡುತ್ತಾ, ಮುಂದೆ ಹೋದೆ ಹಿಂದೆ ಹೋದರೆ ಮತ್ತೆ ಅರ್ಧ ಕಿಲೋ ಮೀಟರ್ ಚಲಿಸಬೇಕಲ್ಲ ಎಂದು. ಪಕ್ಕದಲ್ಲಿ ಶಾಲೆಯ ರೀತಿಯ ಆದರೆ ಮಕ್ಕಳ ಧ್ವನಿಯಿರದ ಕಟ್ಟಡದೊಳಗೆ ಒಂದಿಬ್ಬರು ಕಂಡಿದ್ದರಿಂದ ಒಳಗೆ ಹೋದೆ. ಇಬ್ಬರೂ ಫೋನಿನಲ್ಲಿ ತಲ್ಲೀನ…. ನನ್ನೆಡೆಗೆ ನೋಡುತ್ತಿಲ್ಲ. ಏನ್ ಮಾಡೋದು ಎಂದು ಕೆಮ್ಮಿದೆ. ಊಹುಂ ನನ್ನೆಡೆ ತಲೆಯೂ ಎತ್ತಲಿಲ್ಲ. ಕೊನೆಗೆ ಆದದ್ದಾಗಲಿ ಎಂದು ‘ಸಾರ್ ಇಲ್ಲಿ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆದಿದೆಯಲ್ಲಾ ಆಯುಕ್ತರ ಕಚೇರಿ ಎಲ್ಲಿದೆʼ ಎಂದೆ. ಪಾಪ ಆಪ್ತತೆಯಿಂದ ಅವರು ‘ಈ ಕಟ್ಟಡ ಅಂಧರ ಶಾಲೆ ಈ ಕಟ್ಟಡದ ಹಿಂಭಾಗಕ್ಕೆ ಕೈ ತೋರಿಸಿ ಈ ಗೇಟಿನಿಂದ ಹೋಗಿ ಬಲಕ್ಕೆ ತಿರುಗಿ ಸರ್ ಹತ್ತಿರ ಇದೆʼ ಎಂದರು.

ನಾನು ಬಂದ ಗೇಟಿನ ಎದುರಿನ ರೂಮುಗಳ ಕಡೆ ಕೈ ತೋರಿಸಿ ಈ ಗೇಟಿನಿಂದ ಎನ್ನುತ್ತಿರುವುದನ್ನು ನೋಡಿ ಮತ್ತೆ ನನಗೆ ತಲೆ ಗಿರ್ ಎಂದಿತು. ಅವರು ಅಂಧರಾಗಿದ್ದರಿಂದ ಬಹುಶಃ ಅವರಿಗೆ ಕನ್ ಫ್ಯೂಸ್ ಆಗಿರಬಹುದು ಎಂದು ‘ಅಲ್ಲ ಸರ್ ಗೇಟ್ ಈ ಕಡೆ ಇದೆ ನೀವು ವಿರುದ್ಧ ದಿಕ್ಕಿನಲ್ಲಿ ಕೈ ತೋರುತ್ತಿದ್ದೀರಲ್ಲʼ  ಎಂದೆ. ಆಗ ಅವರು ನಕ್ಕು ತಮ್ಮ ಕೈಯಲ್ಲಿನ ವಾಕಿಂಗ್ ಸ್ಟಿಕ್ ಓಪನ್ ಮಾಡಿ ಬನ್ನಿ ನನ್ನ ಹಿಂದೆ ಎಂದು ಮುಂದೆ ನಡೆದರು. ನಾನು ಆ ಅಂಧ ವ್ಯಕ್ತಿಯನ್ನು ಅನಿವಾರ್ಯವಾಗಿ ಅಪನಂಬಿಕೆಯಿಂದ  ಹಿಂಬಾಲಿಸತೊಡಗಿದೆ.   ಎದುರಿನ ರೂಮುಗಳ ಎಡಕ್ಕೆ ನಮ್ಮ ಕಣ್ಣಿಗೆ‌ ಮರೆಯಲ್ಲಿದ್ದ ದಿಕ್ಕಿನಲ್ಲಿ ತಿರುಗಿದಾಗ ಅವರು ಮಾತನಾಡುತ್ತಿದ್ದ ಗೇಟ್ ಕಂಡಿತು. ನನ್ನ ಮನದಲ್ಲಿ ಅವರ ಕುರಿತು ಯೋಚಿಸುತ್ತಿದ್ದ ಭಾವ ಅವರು ಅಂಧರೆಂದುಕೊಂಡು ಮನದೊಳಗೆ ಮೂಡಿದ್ದ ಅಸಡ್ಡೆಯ ಭಾವ ಸರ್ರನೆ ಇಳಿಯಿತು.

 ಅವರು ಗೇಟಿನ ಹೊರ ಬಂದು ‘ಮುಂದೆ ಸ್ಟೇಡಿಯಂ ಕಾಣಿಸುತ್ತಿದೆಯಲ್ಲಾ ಸರ್‌ʼ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸುತ್ತಿರುವವರ ರೀತಿಯಲ್ಲಿ ಕೇಳಿದರು…  ‘ಕಾಣುತ್ತಿದೆ ಹೇಳಿʼ ಎಂದೆ ‘ಅದರ ಮುಂದಿನ ಸಿ.ಸಿ ರೋಡ್ ಹಿಡಿದು ಬಲಕ್ಕೆ ಹೋಗಿ, ಅಲ್ಲಿ ಹೋಟೇಲಿದೆ. ನಿಮ್ಮ ಶಿಕ್ಷಕರು ಅಲ್ಲಿಯೇ ಇರುತ್ತಾರೆʼ ಎಂದರು. ನಾನು ಅವರು ಹೇಳಿದಂತೆ ಸಿ.ಸಿ.ರೋಡ್ ಬಳಸಿ ಆಯುಕ್ತರ ಕಚೇರಿ ತಲುಪಿದಾಗ ಎಂಟು ಮುಕ್ಕಾಲು. ಇನ್ನೂ ಸಮಯವಿತ್ತು. ಇನ್ನೂ ಕೌನ್ಸಿಲಿಂಗ್‌ ತಡವಿದ್ದುದರಿಂದ ಮತ್ತೆ ಹೋಟೇಲ್‌ ಕಡೆ ನಡೆದೆ.

ಹೋಟೇಲಿನಲ್ಲಿ ಕುಳಿತು ಚಹಾ ಕುಡಿಯುತ್ತಾ ಯೋಚಿಸತೊಡಗಿದೆ ಕುರುಡರು ಯಾರು ಎಂದು…?  ನನಗಿನ್ನೂ ನೆನಪಿದೆ, ಹೆಚ್. ಎಲ್‌ ನಾಗೇಗೌಡರ  ಜಾನಪದ ಲೋಕದ ಪಕ್ಕದ ಅಂಧರ ಶಾಲೆಗೆ ಭೇಟಿ ನೀಡಿದ ಅನುಭವ.  ಮಕ್ಕಳು ಕತ್ತಲೆಯ ಮೂಲೆ ಮೂಲೆಗಳಲ್ಲಿ ಕುಳಿತು ಪುಸ್ತಕದ ಮೇಲೆ ಬೆರಳಾಡಿಸುತ್ತಾ ಓದುತ್ತಿದ್ದುದು. ಆ ಕ್ಷಣಕ್ಕೆ ಸ್ವಲ್ಪ ಶಾಕ್‌ ಆಯಿತಾದರೂ  ಅಬ್ಬಾ ಇವರಿಗೆ ಬೆರಳುಗಳೇ ಕಣ್ಣುಗಳು, ಒಮ್ಮೊಮ್ಮೆ ಮೈಯೆಲ್ಲಾ ಕಣ್ಣು.   ಬೆಳಕಿನ ಅವಶ್ಯಕತೆಯೇ ಇಲ್ಲ.  ತಲೆಯ ತುಂಬಾ ಈ ಅಂಧರ ಶಾಲೆ, ಮತ್ತು ಆ ಅನುಭವ ನನ್ನ ಕಣ್ಣ ಮುಂದೆ ಸುಳಿಯುತ್ತಲೇ ಇತ್ತು.  ಕೌನ್ಸಲಿಂಗ್ ಆಯಿತು… ನನ್ನ ಜಿಲ್ಲೆಯಲ್ಲಿ ಸ್ಥಳ ದೊರೆಯದ್ದರಿಂದ ವಾಪಸಾಗುತ್ತಿದ್ದೇನೆ. ಆದರೆ ಪ್ರಶ್ನೆ ತಲೆ ತಿನ್ನುತ್ತಲೇ ಇದೆ “ಯಾರು ಕುರುಡರು?..” ಎಂದು.