ಇಡೀ ಭಾರತ ದೇಶದಲ್ಲಿ ಸಂಪನ್ನರೆಂದರೆ ಯಾರು? ಎಂದು ಯಾರಾದರೂ ಕೇಳಿದರೆ ನಾನಂತೂ ಕನ್ನಡಿಗರೇ ಎಂದು ಕೇಕೆ ಹಾಕಿ ಹೇಳಬಲ್ಲೆ. ಏಕೆಂದರೆ ಕನ್ನಡಿಗರಷ್ಟು ಸಂಪನ್ನರು ಮತ್ತು ಸಹೃದಯಿಗಳು ಭಾರತದ ಇತರೆ ರಾಜ್ಯಗಳಲ್ಲಿ ಇಲ್ಲ. ಇಂದು ಯಾವುದೇ ರಾಜ್ಯದ, ಯಾವುದೇ ಭಾಷೆಯ ಮಂದಿ ಕರ್ನಾಟಕದಲ್ಲಿ ಬಂದು ನೆಲೆಸಬಹುದು. ಕರ್ನಾಟಕದಲ್ಲಿ ಉದ್ಯೋಗ, ವ್ಯಾಪಾರ ಮಾಡಿಕೊಂಡು ನೆಮ್ಮದಿಯಿಂದ ಜೀವಿಸಬಹುದು. ಎರಡ್ಮೂರು ತಲೆಮಾರುಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ ಕಲಿಯದೆ ಸುಖವಾಗಿ ಜೀವನ ನಡೆಸಬಹುದು.   ಕನ್ನಡಿಗರು ಎಷ್ಟು ಸಂಪನ್ನ ಮಂದಿಯೆಂದರೆ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಬದಲು ತಾವೇ ಅವರ ಭಾಷೆ ಕಲಿತು, ಅವರೊಂದಿಗೆ ಅದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ. ವಿಕಾಸ ಹೊಸಮನಿ ಬರಹ ನಿಮ್ಮ ಓದಿಗೆ

 

ಸಂಪನ್ನರು ಅಂದರೆ ಯಾರು? ಸಾಮಾನ್ಯವಾಗಿ ಒಳ್ಳೆಯವರು, ಸಜ್ಜನರು ಎಂಬ ಪದಗಳಿಗೆ ಸಮಾನಾರ್ಥಕ ಪದವಾಗಿ ಸಂಪನ್ನರು ಎಂಬ ಪದ ಬಳಕೆಯಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಸಂಪನ್ನರು ಎಂಬ ಪದ ವ್ಯಾಪಕವಾಗಿ ಉಪಯೋಗಿಸಲ್ಪಡುತ್ತಿದೆ. ಸಂಪನ್ನರು ಎಂದು ಕರೆಸಿಕೊಳ್ಳುವುದು ಉತ್ತರ ಕರ್ನಾಟಕದಲ್ಲಿ ಪ್ರತಿಷ್ಠೆಯ ಸಂಗತಿ. ನಮ್ಮ ಉತ್ತರ ಕರ್ನಾಟಕದ ಮಂದಿ ಸಂಪನ್ನರೆಂದು ಕರೆಸಿಕೊಳ್ಳಲು ಹಂಬಲಿಸುತ್ತಾರೆ. ಏಕೆಂದರೆ ಉತ್ತರ ಕರ್ನಾಟಕದಲ್ಲಿ ಸಂಪನ್ನರೆಂದು ಕರೆಸಿಕೊಳ್ಳುವುದು ‘ಪದ್ಮಶ್ರೀ’, ‘ಪದ್ಮಭೂಷಣ’ ಮತ್ತು ‘ಪದ್ಮವಿಭೂಷಣ’ ಪ್ರಶಸ್ತಿ ಪಡೆಯುವುದಕ್ಕಿಂತಲೂ ಹೆಚ್ಚು ಕಷ್ಟ!

ಸಂಪನ್ನರು ಎಂದರೆ ಕೇವಲ ಒಳ್ಳೆಯವರು ಮತ್ತು ಸಜ್ಜನರು ಎಂಬ ಅರ್ಥ ಮಾತ್ರವಲ್ಲ, ಈ ಪದಕ್ಕೆ ಇನ್ನೂ ಹಲವು ಅರ್ಥಗಳಿವೆ. ಸಂಪನ್ನರೆಂದರೆ ಮುಗ್ಧರು, ಯಾರ ತಂಟೆಗೂ ಹೋಗದವರು, ಕೈಲಾಗದವರು, ಸುಲಭವಾಗಿ ಮೋಸ ಹೋಗುವವರು, ಟೋಪಿ ಹಾಕಿಸಿಕೊಳ್ಳುವವರು, ಗರ್ಲ್ ಫ್ರೆಂಡುಗಳಿಲ್ಲದ ಹುಡುಗರು , ಒಬ್ಬಳೇ ಹೆಂಡತಿಯಿರುವವರು, ಮದುವೆಗೆ ಮುಂಚೆ ತಂದೆ-ತಾಯಿಗೆ ವಿಧೇಯರಾಗಿರುವವರು, ಮದುವೆಯ ನಂತರ ಹೆಂಡತಿಗೆ ವಿಧೇಯರಾಗಿರುವವರು, ಆಫೀಸಿನಲ್ಲಿ ಮೇಲಧಿಕಾರಿಗಳಿಗೆ ವಿಧೇಯರಾಗಿರುವವರು, ಕನ್ನಡ ಸಿನಿಮಾಗಳನ್ನು ಸಿನಿಮಾ ಮಂದಿರಕ್ಕೇ ಹೋಗಿ ನೋಡುವವರು, ಬೈಕ್ ಅಥವಾ ಸ್ಕೂಟಿ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಬಳಸುವವರು, ಸರ್ಕಾರಕ್ಕೆ ಸರಿಯಾಗಿ ತೆರಿಗೆ ಕಟ್ಟುವವರು, ಲಂಚ ಪಡೆಯದವರು, ಪರರ ಸ್ವತ್ತು, ಪರರ ದುಡ್ಡು ಮತ್ತು ಪರರ ಹೆಂಗಸರರ ಮೇಲೆ ಕಣ್ಣು ಹಾಕದವರು ಎಂಬ ಹತ್ತು ಹಲವು ಅರ್ಥಗಳಿವೆ. ಕೆಲವು ಸದ್ಗುಣಗಳನ್ನು ಆರೋಪಗಳೆಂದೂ ಬಗೆಯುವುದುಂಟು.

ಸಾಮಾನ್ಯವಾಗಿ ಸಂಪನ್ನರನ್ನು ಎಲ್ಲರೂ ಗೌರವಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಸಂಪನ್ನರಿಗೆ ತಮ್ಮದೇ ಆದ ಸಾಮಾಜಿಕ ಮೌಲ್ಯವಿದೆ. ಹತ್ತು ಹಲವು ಕಾರ್ಯಕ್ರಮಗಳಿಗೆ  ಇಂತಹ ಸಂಪನ್ನರಿಗೆ ಬುಲಾವುಗಳು ಬರುತ್ತಿರುತ್ತವೆ. ಸಂಪನ್ನರು ಇಂತಹ ಬುಲಾವುಗಳನ್ನು ತುಂಬ ಪ್ರೀತಿಯಿಂದ ಸ್ವೀಕರಿಸಿ ಅಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಕೈಲಾದದ್ದನ್ನು ಮಾಡಿ ಅದು ಸಂಪನ್ನಗೊಳ್ಳುವಂತೆ ನೋಡಿಕೊಳ್ಳುತ್ತಾರೆ. ಸಂಪನ್ನರಾದ ಮೇಲೆ ಅಷ್ಟೂ ಮಾಡದಿದ್ದರೆ ಹೇಗೆ?

ಉತ್ತರ ಕರ್ನಾಟಕದಲ್ಲಿ ಮಾಸ್ತರ ಮತ್ತು ಹಳೆ ಮೈಸೂರು ಹಾಗೂ ಕರಾವಳಿ ಭಾಗದಲ್ಲಿ ಮೇಷ್ಟ್ರು ಎಂದು ಕರೆಸಿಕೊಳ್ಳುವ ಶಿಕ್ಷಕರೆಲ್ಲ ಒಂದು ಕಾಲದಲ್ಲಿ ಸಂಪನ್ನರು ಎಂಬ ಖ್ಯಾತಿ ಪಡೆದಿದ್ದರು. ಬಹುಶಃ ಆ ಜಮಾನಾದಲ್ಲಿ ಸಂಪನ್ನ ಮಂದಿಯೇ ಶಿಕ್ಷಕರಾಗುತ್ತಿದ್ದರು ಎನ್ನಿಸುವುದು. ಸೇವೆಯೇ ಮುಖ್ಯ ಧ್ಯೇಯವಾದ ಮತ್ತು ಅತಿ ಕಡಿಮೆ ಸಂಬಳದ ಶಿಕ್ಷಕ ಕೆಲಸಕ್ಕೆ ಸಂಪನ್ನರಲ್ಲದೆ ಬೇರಾರು ಸೇರಬೇಕು? ಇಂತಹ ಸಂಪನ್ನ ಶಿಕ್ಷಕರ ಕುರಿತು ಕನ್ನಡದಲ್ಲಿ “ಸ್ಕೂಲ್ ಮಾಸ್ಟರ್”, “ಬೆಂಕಿಯ ಬಲೆ” ಸೇರಿದಂತೆ ಹಲವು ಸಾರ್ಥಕ ಚಿತ್ರಗಳು ಬಂದಿವೆ.

ಆ ಜಮಾನಾದ ಶಿಕ್ಷಕರು ನಿಜವಾಗಿಯೂ ಸಂಪನ್ನರಾಗಿದ್ದರು! ಆದರೆ ಅದೇ ಮಾತನ್ನು ನಮ್ಮ ಜಮಾನಾದ ಶಿಕ್ಷಕರ ಕುರಿತು ಹೇಳುವುದು ಕಷ್ಟ. ಈಗಲೂ ಸಂಪನ್ನರಿದ್ದಾರೆ ಆದರೆ ಅಂತಹವರ ಸಂಖ್ಯೆ ಕಡಿಮೆ. ಒಂದು ಜಮಾನಾದಲ್ಲಿ ಸರಸ್ವತಿ ಆಲಯಗಳಾಗಿದ್ದ ಶಿಕ್ಷಣ ಸಂಸ್ಥೆಗಳು ಇಂದು ಲಕ್ಷ್ಮೀ ನಿಲಯಗಳಾಗಿವೆ. ಸರಸ್ವತಿ ಮತ್ತು ಲಕ್ಷ್ಮೀ ಎಂದಾದರೂ ಒಟ್ಟಿಗಿರಲು ಸಾಧ್ಯವೇ? ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಂಪನ್ನರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.

ಸಾಮಾನ್ಯವಾಗಿ ಪ್ರಥಮ ದರ್ಜೆ ಮತ್ತು ಪ್ರಥಮ ಶ್ರೇಯಾಂಕದಲ್ಲಿ ಪಾಸಾಗುವವರು ಸಂಪನ್ನ ವಿದ್ಯಾರ್ಥಿಗಳಾಗಿರುತ್ತಾರೆ. ಇಂತಹ ಸಂಪನ್ನ ವಿದ್ಯಾರ್ಥಿಗಳು ಸಾಮಾನ್ಯವಾಗಿ ಎಲ್ಲರಿಗೂ ಬೇಕಾದವರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುವವರು. ಇಂತಹ ಮುಂದಿನ ಸಾಲಿನ ಸಂಪನ್ನ ವಿದ್ಯಾರ್ಥಿಗಳಿಂದ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳುವ ಸಾಮಾನ್ಯ ವಿದ್ಯಾರ್ಥಿಗಳಿಗೆ ತುಂಬ ತೊಂದರೆಯಾಗುತ್ತದೆ. ತೀರ ಸಣ್ಣ ಪುಟ್ಟ ವಿಷಯಗಳಿಗೂ ಹಿಂದಿನ ಸಾಲಿನ ವಿದ್ಯಾರ್ಥಿಗಳನ್ನು ಮುಂದಿನ ಸಾಲಿನ ವಿದ್ಯಾರ್ಥಿಗಳೊಂದಿಗೆ ಹೋಲಿಸಲಾಗುವುದರಿಂದ ಮುಂದಿನ ಸಾಲು ಮತ್ತು ಹಿಂದಿನ ಸಾಲಿನ ವಿದ್ಯಾರ್ಥಿಗಳ ನಡುವೆ ಒಂದು ಸೂಕ್ಷ್ಮವಾದ ಅಸಹನೆ ಇದ್ದೇ ಇರುತ್ತದೆ.

ರಾಜೀವ ದೊಡ್ಡಮನಿ ಮತ್ತು ಪ್ರಶಾಂತ ಕಲ್ಗುಡಿ ಒಂದೇ ಶಾಲೆ, ಒಂದೇ ಕಾಲೇಜು ಮತ್ತು ಒಂದೇ ವಿಶ್ವವಿದ್ಯಾಲಯದಲ್ಲಿ ಓದಿ ಬೆಳೆದ ಮಿತ್ರರು. ಅವರ ಉದಾಹರಣೆ ನೋಡೋಣ. ಇಬ್ಬರ ನಡುವಿನ ವ್ಯತ್ಯಾಸವೆಂದರೆ ದೊಡ್ಡಮನಿ ಸಂಪನ್ನ ಹುಡುಗ ಆದರೆ ಕಲ್ಗುಡಿ ಸ್ವಲ್ಪ ಉಢಾಳ ಹುಡುಗ. ಧಾರವಾಡದಲ್ಲಿ ಎಂ.ಎ. ಓದುವಾಗ ಇಬ್ಬರೂ ಮಾಳಮಡ್ಡಿಯ ಶ್ರೀದೇವಿ ಎಂಬ ಹುಡುಗಿಯನ್ನು ಪ್ರೀತಿಸಿದ್ದರು. ಇಬ್ಬರೂ ಒಂದೇ ಹುಡುಗಿಯನ್ನು ಪ್ರೀತಿಸಿ ಇಬ್ಬರ ನಡುವೆ ವೈಮನಸ್ಯ ಉಂಟಾಗಿ ದೋಸ್ತಿ ಮುರಿಯುವ ಹಂತಕ್ಕೆ ಹೋಗಿತ್ತು. ದುರದೃಷ್ಟವಶಾತ್ ಶ್ರೀದೇವಿಗೆ ಇವರಿಬ್ಬರೂ ತನ್ನನ್ನು ಪ್ರೀತಿಸುವ ವಿಚಾರ ತಿಳಿದಿರಲಿಲ್ಲ. ಜಾಣೆಯಾದ ಶ್ರೀದೇವಿ ಪುಣೆಯಲ್ಲಿ ಇಂಜಿನಿಯರನಾದ ಮುಕುಂದ ಎಂಬ ಹುಡುಗನನ್ನು ಮದುವೆಯಾಗಿ ಹೋದಳು. ಶ್ರೀದೇವಿಯ ಪ್ರೇಮದ ಸಲುವಾಗಿ ವೈರಿಗಳಾಗಲು ಹೊರಟಿದ್ದ ದೊಡ್ಡಮನಿ ಮತ್ತು ಕಲ್ಗುಡಿ ಅದೇ ಶ್ರೀದೇವಿಯ ಅಗಲಿಕೆಯ ಕಾರಣದಿಂದಾಗಿ ಮತ್ತೆ ಮಿತ್ರರಾದರು.

ಸಾಮಾನ್ಯವಾಗಿ ಸಂಪನ್ನರು ಒಂದು ಒಳ್ಳೆಯ ಉದ್ಯೋಗ ಸಂಪಾದಿಸಿ, ಒಳ್ಳೆಯ ಮನೆತನದ ಹುಡುಗಿಯನ್ನು ಮದುವೆಯಾಗಿ ಆರಕ್ಕೇರದ ಮೂರಕ್ಕಿಳಿಯದ, ಒಂದು ತರಹದ ಮಧ್ಯಮ ಮಾರ್ಗದ ಜೀವನ ನಡೆಸುತ್ತಾರೆ. ದೊಡ್ಡಮನಿಯದು ಸಹ ಇದೇ ಕಥೆ. ದೊಡ್ಡಮನಿ ಎಂ.ಎ., ಪಿ.ಹೆಚ್.ಡಿ. ಮಾಡಿ ತನ್ನಂತೆಯೇ ಸಂಪನ್ನಳಾದ ಮತ್ತು ಎಂ.ಎ. ಮಾಡಿದ ಪೂಜಾ ಎಂಬ ಹುಡುಗಿಯನ್ನು ಮದುವೆಯಾಗಿ ತಕ್ಕಮಟ್ಟಿಗೆ ಸುಖವಾಗಿದ್ದಾನೆ. ಇದರಲ್ಲೇನೂ ವಿಶೇಷವಿಲ್ಲ ಆದರೆ ಉಢಾಳನೆಂದು ಖ್ಯಾತಿ ಪಡೆದ ಕಲ್ಗುಡಿಯ ಜೀವನ ವರ್ಣರಂಜಿತವಾದುದು.

ಹತ್ತು ಹಲವು ಯತ್ನಗಳ ನಂತರ ಎಂ.ಎ. ಪಾಸಾದ ಕಲ್ಗುಡಿಗೆ ಎಲ್ಲೂ ನೌಕರಿ ಸಿಗಲಿಲ್ಲ. ನೂರಾರು ಜನ ಎಂ.ಎ., ಪಿ.ಹೆಚ್.ಡಿ. ಮಾಡಿದ ಪ್ರಬಲ ಪ್ರತಿಸ್ಪರ್ಧಿಗಳೊಂದಿಗೆ ಪೈಪೋಟಿ ಮಾಡಲಾಗದೆ ಕಲ್ಗುಡಿ ನೌಕರಿಯ ಆಸೆಯನ್ನು ಬಿಟ್ಟು ಹಣ್ಣಿನ ವ್ಯಾಪಾರ ಮಾಡಲು ತೊಡಗಿದ. ಅಲ್ಲೂ ಅವನ ನಸೀಬು ಕೈಕೊಟ್ಟಿತು. ನೌಕರಿಯಿಲ್ಲದ, ನಿರ್ದಿಷ್ಟ ವರಮಾನವಿಲ್ಲದ ಕಲ್ಗುಡಿಗೆ ಯಾರೂ ಕನ್ಯಾ ಕೊಡಲು ತಯಾರಿರಲಿಲ್ಲ. ಹತ್ತು ಹಲವು ಸ‌ಮಸ್ಯೆಗಳಿಂದ ಕಂಗೆಟ್ಟಿದ್ದ ಕಲ್ಗುಡಿ ಕೊನೆಯ ಪ್ರಯತ್ನವೆಂದು ರಾಜಕೀಯಕ್ಕೆ ಧುಮುಕಬೇಕೆಂದು ನಿರ್ಧರಿಸಿದ.

ರಾಜಕೀಯಕ್ಕೆ ಇಳಿದದ್ದೇ ತಡ ಕಲ್ಗುಡಿಯ ಅದೃಷ್ಟ ಖುಲಾಯಿಸಿತು. ಕಲ್ಗುಡಿ ಮೊದಲು ನಗರಸಭೆಯ ಸದಸ್ಯನಾದ, ಮುಂದೆ ನಗರಸಭೆಯ ಅಧ್ಯಕ್ಷನಾದ. ಆ ಕ್ಷೇತ್ರದ ಶಾಸಕನಿಗೆ ಗಂಡುಮಕ್ಕಳಿರಲಿಲ್ಲ. ಕಲ್ಗುಡಿಯ ರಾಜಕೀಯ ಬುದ್ಧಿ ಮತ್ತು ಚಾಣಾಕ್ಷತನವನ್ನು ಕಂಡು ಮೆಚ್ಚಿದ ಶಾಸಕ ತನ್ನ ಏಕೈಕ ಪುತ್ರಿಯಾದ ಭಾರ್ಗವಿಯನ್ನು ಕಲ್ಗುಡಿಗೆ ಕೊಟ್ಟು ಮದುವೆ ಮಾಡಿದ. ಶಾಸಕನ ಅಳಿಯನಾದ ನಂತರ ಕಲ್ಗುಡಿ ಇನ್ನಷ್ಟು ಬಲಿಷ್ಠನಾದ. ಸದ್ಯ ಕಲ್ಗುಡಿ ಮಹಾಶಯ ತಾನೂ ಶಾಸಕನಾಗುವ ಹವಣಿಕೆಯಲ್ಲಿದ್ದಾನೆ.

ಒಂದು ವೇಳೆ ಕಲ್ಗುಡಿ ಸಂಪನ್ನನಾಗಿದ್ದರೆ ರಾಜಕೀಯದಲ್ಲಿ ಯಶಸ್ವಿಯಾಗಲು ಸಾಧ್ಯವಿತ್ತೇ? ಎಂಬ ಪ್ರಶ್ನೆಗೆ ಇಲ್ಲವೆಂಬುದೇ ಸೂಕ್ತ ಉತ್ತರ. ಏಕೆಂದರೆ ಕಲ್ಗುಡಿ ಸಂಪನ್ನನಾಗಿದ್ದರೆ ಬಹಳ ಮಾಡಿ ಒಂದು ನೌಕರಿ ಪಡೆಯಬಹುದಿತ್ತು ಮತ್ತು ಒಂದು ಮದುವೆಯಾಗಬಹುದಿತ್ತೇ ಪರಂತು ಹೆಚ್ಚೇನೂ ಮಾಡಲು ಸಾಧ್ಯವಿರಲಿಲ್ಲ. ಈ ಸಂಪನ್ನತೆಯು ಕೆಲವೊಮ್ಮೆ ಉಲ್ಟಾ ಅರ್ಥವನ್ನು ತನಗೆ ತಾನೇ ಪಡೆದುಕೊಂಡುಬಿಡುತ್ತದೆ.

ಗದಗ ಜಿಲ್ಲೆಯ ಕಡಕೋಳ ಎಂಬ ಗ್ರಾಮದಲ್ಲಿ ಬಸವಣ್ಣಿಯೆಂಬ ಮಾಸ್ತರನಿದ್ದಾನೆ. ಇವನು ಊರಲ್ಲೆಲ್ಲ ಸಂಪನ್ನನೆಂದೇ ಖ್ಯಾತಿ ಪಡೆದಿದ್ದ. ಊರಿನ ಪ್ರತಿಯೊಂದು ಕಾರ್ಯಗಳಲ್ಲೂ ಇವನ ಅಭಿಪ್ರಾಯ ಕೇಳುವಷ್ಟು ಊರವರಿಗೆ ಬೇಕಾಗಿದ್ದ. ಕಡಕೋಳದ ಬಹುತೇಕ ಎಲ್ಲ ಸಂಘ-ಸಂಸ್ಥೆಗಳಲ್ಲೂ ಈ ಸಂಪನ್ನ ಮಹಾಶಯ ಗೌರವಾಧ್ಯಕ್ಷ, ಕಾರ್ಯಾಧ್ಯಕ್ಷ, ಕಾರ್ಯದರ್ಶಿ ಅಥವಾ‌ ಖಜಾಂಚಿಯಾಗಿದ್ದ. ಇವನಿಗೆ ಅಪಾರ ಖ್ಯಾತಿ ತಂದುಕೊಟ್ಟದ್ದು ಮಾತ್ರ ಈತ ಏಕಪತ್ನಿ ವ್ರತಸ್ಥ ಮತ್ತು ಹೆಂಡತಿಗೆ ವಿಧೇಯನಾಗಿರುವವನು ಎಂಬ ಸಂಗತಿ. ಈತ ಪ್ರತಿಯೊಂದು ಕೆಲಸವನ್ನೂ ಪತ್ನಿ ಶಾಂತಮ್ಮನನ್ನು ಕೇಳಿಯೇ ಮಾಡುತ್ತಿದ್ದ. ಪುರುಷ ಸ್ವಾತಂತ್ರ್ಯದ ಪ್ರತಿಪಾದಕರಾದ ಊರಿನ ಹಲವು ಗಂಡಸರಿಗೆ ಬಸವಣ್ಣಿಯ ಕುರಿತು ತೀವ್ರ ಅಸಮಾಧಾನವಿದ್ದರೂ ಸಹ ಅವನು ಸಂಪನ್ನನೆಂದು ಸುಮ್ಮನಿದ್ದರು.

ಬಸವಣ್ಣಿ ಮಾಸ್ತರ ತುಂಬ ಚೆನ್ನಾಗಿ ವಚನಗಳನ್ನು ವಿವರಿಸಿ ಹೇಳುತ್ತಿದ್ದ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ, ದಾಸಿಮಯ್ಯ ಸೇರಿದಂತೆ ಹತ್ತು ಹಲವು ವಚನಕಾರರ ಅಸಂಖ್ಯ ವಚನಗಳು ಅವನಿಗೆ ಕಂಠಪಾಠವಾಗಿದ್ದವು. ಇಂತಹ ಬಸವಣ್ಣಿ ಮಾಸ್ತರ ಎಲ್ಲರೊಂದಿಗೂ ತುಂಬ ಆದರದಿಂದ ನಡೆದುಕೊಳ್ಳುತ್ತಿದ್ದ. ಚಹದಂಗಡಿಗೆ ಹೋದರೂ ಸಹ ಚಹ ಕುಡಿದು ಬರುತ್ತಿದ್ದನೇ ಹೊರತು ಊರಿನಲ್ಲೆಲ್ಲ ಸುಂದರಿ ಎಂದು ಖ್ಯಾತಿ ಪಡೆದಿದ್ದ ಚಹದಂಗಡಿಯ ರತ್ನಳನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಬೀಡಿ, ಸಿಗರೇಟು ಸೇದುತ್ತಿರಲಿಲ್ಲ, ಸಾರಾಯಿ ಕುಡಿಯುತ್ತಿರಲಿಲ್ಲ. ಇಂತಿಪ್ಪ ಬಸವಣ್ಣಿ ಮಾಸ್ತರ ಸಂಪನ್ನ ಮನುಷ್ಯ ಎಂದು ಖ್ಯಾತಿ ಪಡೆದದ್ದರಲ್ಲಿ ಅಚ್ಚರಿಯೇನಿದೆ?

ಬಸವಣ್ಣಿ ಮಾಸ್ತರ ಪ್ರತಿ ತಿಂಗಳ ಕೊನೆಯಲ್ಲಿ ಮಾತ್ರ ಎರಡ್ಮೂರು ದಿನ, ಒಮ್ಮೊಮ್ಮೆ ನಾಲ್ಕೈದು ದಿನ ನಾಪತ್ತೆಯಾಗುತ್ತಿದ್ದ. ಊರಿಗೆ ಮರಳಿ ಬಂದ ನಂತರ ಊರವರಿಗೆಲ್ಲ ಯಾವುದಾದರೂ ತೀರ್ಥ ಕ್ಷೇತ್ರದ ಹೆಸರು ಹೇಳಿ ಅಲ್ಲಿಗೆ ಹೋಗಿ ದೇವರ ದರ್ಶನ ಮಾಡಿ ಬಂದೆ ಎಂದು ಹೇಳುತ್ತಿದ್ದ. ಹೀಗೆ ಪ್ರತಿ ಬಾರಿ ಹೋಗಿ ಬಂದಾಗಲೂ ಮಂಡಕ್ಕಿ, ಖಾರಾಡಾಣಿ ಮತ್ತು ಮೈಸೂರು ಪಾಕನ್ನು ದೇವರ ಪ್ರಸಾದವೆಂದು ಹಂಚುತ್ತಿದ್ದ. ಊರಜನ ಇವನ ದೈವಭಕ್ತಿಯನ್ನು ನೋಡಿ “ಹೋಗೋs ಶಾಣ್ಯಾs ನಮ್ಮ ಬಸವಣ್ಣಿ ಮಾಸ್ತರಂದರs ಸಂಪನ್ನೊರಳಗs… ಸಂಪನ್ನs… ಮನಷಾs ಅದಾನs…” ಎಂದು ಹೊಗಳಿ, ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದರು.

ಆದರೆ ಒಂದು ಕಾಲದಲ್ಲಿ ಬಸವಣ್ಣಿಯ ಶಿಷ್ಯನಾದ ಟಾಂಟಾಂ ಡ್ರೈವರ್ ಕಲ್ಲೇಶಿಗೆ ಮಾತ್ರ ಬಸವಣ್ಣಿಯನ್ನು ಕಂಡರಾಗುತ್ತಿರಲಿಲ್ಲ. “ಈ ಸಂಪನ್ನs ಮಾಸ್ತರನ ಕೈಯ್ಯಾಗs ಕಲ್ತಿದ್ದs ದೊಡ್ಡ ತಪ್ಪಾದಂಗಾತುs. ಇಲ್ಲಂದ್ರ ನಾ ಯಾಕs ಟಾಂಟಾಂ ಡ್ರೈವರ್ ಆಗತಿದ್ಯಾs? ನಾನೂ ಒಂದು ಸರ್ಕಾರಿ ನೌಕರಿ ಹಿಡಿದು ನೋಡಾಕ ಚೆಂದs ಕೆಂಪಗಿರೂs ಹುಡುಗಿನ್ನ ಲಗ್ನಾಗಿ ಆರಾಮ ಹುಬ್ಬಳ್ಯಾಗ ಇರತಿದ್ಯಾs…” ಎಂದು ಅವರಿವರ ಬಳಿ ಗೋಳಾಡುತ್ತಿದ್ದ. ಇಂತಹ ಕಲ್ಲೇಶಿ ವಿಶ್ವಪ್ರಯತ್ನ ಪಟ್ಟು ಬಸವಣ್ಣಿ ಮಾಸ್ತರನ ರಹಸ್ಯ ಪತ್ತೆ ಹಚ್ಚಿದ.
ವಾಸ್ತವವಾಗಿ ಬಸವಣ್ಣಿ ಮಾಸ್ತರ ಏಕಪತ್ನಿ ವ್ರತಸ್ಥನಾಗಿರಲಿಲ್ಲ. ಬಾಗಲಕೋಟೆ ಕಡೆಯ ಹಳ್ಳಿಯೊಂದರಲ್ಲಿ ಅವನ ಎರಡನೆಯ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದರು. ಈ ಮಹಾಶಯನಿಗೆ ಇಬ್ಬರು ಪತ್ನಿಯರು ಮತ್ತು ನಾಲ್ಕು ಜನ ಹೆಣ್ಣು ಮಕ್ಕಳಿದ್ದರು. ಈ ಎರಡನೆಯ ಸಂಸಾರವನ್ನು ನೋಡಲೆಂದೇ ಪ್ರತಿ ತಿಂಗಳು ಬಸವಣ್ಣಿ ಮಾಸ್ತರ ನಾಪತ್ತೆಯಾಗುತ್ತಿದ್ದ. ಬಸವಣ್ಣಿ ಮಾಸ್ತರನ ನಿಜ ಸ್ವರೂಪ ತಿಳಿದ ನಂತರ ಊರವರೆಲ್ಲ ಅವನಿಗೆ ಛೀಮಾರಿ ಹಾಕಿದರು. ಕಡಕೋಳದ ಮಂದಿ ಕಲ್ಲೇಶಿಯ ಪತ್ತೇದಾರಿಕೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದರು. ಯಾವಾಗ ಬಸವಣ್ಣಿ ಮಾಸ್ತರನ ಬಣ್ಣ ಬಯಲಾಯಿತೋ ಅವನ ಸಾಮಾಜಿಕ ಮೌಲ್ಯ ಕುಸಿಯಿತು. ಮುಂದೆ ಒಂದೇ ವರ್ಷದಲ್ಲಿ ಆತ ವರ್ಗ ಮಾಡಿಸಿಕೊಂಡು ಹೋದ. ಬಸವಣ್ಣಿ ಮಾಸ್ತರನ ಪ್ರಕರಣವಾದ ನಂತರ ಕಡಕೋಳದ ಮಂದಿ ನಿಜವಾಗಿ ಸಂಪನ್ನರಾದ ವ್ಯಕ್ತಿಗಳನ್ನೂ ಸಹ ಅನುಮಾನದಿಂದ ನೋಡತೊಡಗಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಮದುವೆಯ ವಿಷಯ ಬಂದಾಗ ಈ ಸಂಪನ್ನ ವ್ಯಕ್ತಿತ್ವಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡಲಾಗುತ್ತದೆ. ತಾವು ಸಂಪನ್ನರಾಗಿರದಿದ್ದರೂ ಪರವಾಗಿಲ್ಲ. ತಾವು ಮದುವೆಯಾಗಲಿರುವವರು ಸಂಪನ್ನರಾಗಿರಬೇಕೆಂದು ಪ್ರತಿಯೊಬ್ಬ ಹುಡುಗ/ಹುಡುಗಿ ಅಪೇಕ್ಷಿಸುತ್ತಾರೆ. ವಿವಾಹಾಕಾಂಕ್ಷಿಗಳಾದ ಪ್ರತಿಯೊಬ್ಬರಿಗೂ ತಮ್ಮ ಬಾಳಸಂಗಾತಿಯ ಕುರಿತು ಕೆಲವು ಆಸೆ ಮತ್ತು ಕನಸುಗಳಿರುತ್ತವೆ. ಅದರಲ್ಲಿ ಪ್ರಮುಖವಾದದ್ದೆ ಸಂಪನ್ನ ವ್ಯಕ್ತಿತ್ವ. ಮದುವೆಯ ಸಂದರ್ಭದಲ್ಲಿ ಹುಡುಗಿಯರ ವಿಷಯದಲ್ಲಂತೂ ಸಂಪನ್ನ ವ್ಯಕ್ತಿತ್ವ ಬಹುಮುಖ್ಯ ಪಾತ್ರ ವಹಿಸುತ್ತದೆ.

ನಮ್ಮ ದೇಶದಲ್ಲಂತೂ ವಿವಾಹವೆಂದರೆ ಅದೊಂದು ಮಹತ್ಕಾರ್ಯವೆಂಬ ಭಾವನೆಯಿದೆ. ಹೆಣ್ಣು ಅಥವಾ ಗಂಡಿನ ಕಡೆಯವರಲ್ಲಿ ಯಾರು ಹೆಚ್ಚು ಸಂಪನ್ನರೋ ಅವರ ತಲೆಗೇ ಟೋಪಿ ಬೀಳುತ್ತದೆ. ನಾನು ಅನೇಕ ಮದುವೆಗಳಿಗೆ ಹೋಗಿದ್ದೇನೆ. ಯಾವುದೇ ಮದುವೆಗೆ ಹೋದರೂ ವಧು-ವರರನ್ನು ಅಭಿನಂದಿಸಿ, ಉಡುಗೊರೆ ಕೊಟ್ಟು, ಫೋಟೋ ತೆಗೆಸಿಕೊಂಡು, ಊಟ ಮಾಡಿ, ಮದುವೆ ಮನೆಯಲ್ಲಿ ತುಂಬ ಸಡಗರದಿಂದ ಓಡಾಡಿಕೊಂಡಿರುವ ಹರೆಯದ ಚೆಲುವೆಯರನ್ನು ನೋಡಿ ಕಣ್ಣಿಗೆ ತಂಪು ಮಾಡಿಕೊಂಡು ಬರುತ್ತೇನೆ.

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ನಡೆಯುವ ವಿವಾಹಗಳಲ್ಲಿ ಟೋಪಿ ಬೀಳುವುದು ಕನ್ಯಾಪಿತೃಗಳಿಗೇ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಮದುವೆ ಮನೆಯಲ್ಲಿ ವಧು-ವರರು, ಬೀಗರು, ಬಂಧುಗಳು ಮತ್ತು ಸ್ನೇಹಿತರು ತುಂಬ ಸಂತೋಷದಲ್ಲಿರುತ್ತಾರೆ. ಅದರಲ್ಲೂ ಗಂಡಿನ ಕಡೆಯವರು ತುಂಬ ಆಢ್ಯತೆಯಿಂದ ಬೀಗುತ್ತಿರುತ್ತಾರೆ. ಈ ಸಂತೋಷ ಸಂಭ್ರಮಕ್ಕೆ ಅಹರ್ನಿಶಿ ದುಡಿದ ಒಬ್ಬ ಸಂಪನ್ನ ವ್ಯಕ್ತಿ ಮಾತ್ರ ವೇದಿಕೆಯ ಮೇಲೆ ಬರುವುದಿಲ್ಲ. ಅವನದೇನಿದ್ದರೂ ನಿರ್ಮಾಪಕ ಮತ್ತು ನಿರ್ದೇಶಕನ ಪಾತ್ರ ಆ ವ್ಯಕ್ತಿಯೇ ಕನ್ಯಾಪಿತೃ!

ದುರದೃಷ್ಟವಶಾತ್ ಶ್ರೀದೇವಿಗೆ ಇವರಿಬ್ಬರೂ ತನ್ನನ್ನು ಪ್ರೀತಿಸುವ ವಿಚಾರ ತಿಳಿದಿರಲಿಲ್ಲ. ಜಾಣೆಯಾದ ಶ್ರೀದೇವಿ ಪುಣೆಯಲ್ಲಿ ಇಂಜಿನಿಯರನಾದ ಮುಕುಂದ ಎಂಬ ಹುಡುಗನನ್ನು ಮದುವೆಯಾಗಿ ಹೋದಳು. ಶ್ರೀದೇವಿಯ ಪ್ರೇಮದ ಸಲುವಾಗಿ ವೈರಿಗಳಾಗಲು ಹೊರಟಿದ್ದ ದೊಡ್ಡಮನಿ ಮತ್ತು ಕಲ್ಗುಡಿ ಅದೇ ಶ್ರೀದೇವಿಯ ಅಗಲಿಕೆಯ ಕಾರಣದಿಂದಾಗಿ ಮತ್ತೆ ಮಿತ್ರರಾದರು.

ನಾನು ಮತ್ತು ನನ್ನ ಮಿತ್ರ ಡಾ.ನಾಗರಾಜ ಯಾವುದೇ ಮದುವೆಗೆ ಹೋದರೂ ಉಡುಗೊರೆ, ಫೋಟೋ, ಊಟ ಮತ್ತು ಸುಂದರ ಹುಡುಗಿಯರಿಗಷ್ಟೇ ಸೀಮಿತವಾಗುವ ವ್ಯಕ್ತಿಗಳಲ್ಲ. ಯಾರದೇ ಮದುವೆಯಾದರೂ ಸರಿ ನಾವಿಬ್ಬರೂ ಮುದ್ದಾಮಾಗಿ ಕನ್ಯಾಪಿತೃವನ್ನು ಹುಡುಕಿಕೊಂಡು ಹೋಗಿ ಅಭಿನಂದಿಸುತ್ತೇವೆ. ನಾಗರಾಜನಂತೂ ಇನ್‌ಕಂ ಟ್ಯಾಕ್ಸ್ ಅಧಿಕಾರಿಯಂತೆ ಕನ್ಯಾಪಿತೃ ಯಾವ ಯಾವ ಕಾರ್ಯಕ್ಕೆ ಎಷ್ಟೆಷ್ಟು ವೆಚ್ಚ ಮಾಡಿದರೆಂದು ಕೂಲಂಕುಷವಾಗಿ ವಿಚಾರಿಸುತ್ತಾನೆ.

ಕನ್ಯಾಪಿತೃ ತಾನು ಮಗಳ ಮದುವೆಗೆ ಪಟ್ಟ ಕಷ್ಟದ ಕುರಿತು ವಿವರಿಸುವಾಗ ಕೆಟ್ಟ ಮುಖ ಮಾಡಿಕೊಂಡು, “ಛೇ… ಛೇ… ಹಿಂಗಾಗಬಾರದಾಗಿತ್ತು ತಗೀರಿs… ಇದಂತೂ ಭಾಳಾತs ಯಜಮಾನ್ರs…” ಎಂದೆಲ್ಲ ಹೇಳುತ್ತ ಆಪ್ತ ಸ್ನೇಹಿತನಂತೆ ಮರುಕ ವ್ಯಕ್ತಪಡಿಸುತ್ತಾನೆ. ನನ್ನ ಮತ್ತು ಡಾ. ನಾಗರಾಜನ ದೃಷ್ಟಿಯಲ್ಲಿ ಮದುವೆ ಮನೆಯಲ್ಲಿ ಯಾರಿಗಾದರೂ ‘ಸಂಪನ್ನ ವ್ಯಕ್ತಿ’ ಎಂಬ ಬಿರುದು ಸಲ್ಲುವಂತಿದ್ದರೆ ಅದು ಕನ್ಯಾಪಿತೃವಿಗೇ ಸಲ್ಲಬೇಕು. ಏಕೆಂದರೆ ಖಂಡಿತವಾಗಿಯೂ ಕನ್ಯಾಪಿತೃವಿಗೆ ಆ ಅರ್ಹತೆಯಿದೆ.

ಕಲ್ಯಾಣ ಕರ್ನಾಟಕದ ಹಿರಿಯ ಲೇಖಕರಾದ ಮೈಲಾರಿಯವರು ಸಂಪನ್ನ ಸ್ವಭಾವದ ವ್ಯಕ್ತಿ. ಅವರು ಹೆಚ್ಚು ಬರೆದವರಲ್ಲ ಆದರೂ ಸಹ ಅವರ ಕೆಲವು ಕೃತಿಗಳು ಓದುಗರ ಮತ್ತು ವಿಮರ್ಶಕರ ಗಮನ ಸೆಳೆದಿವೆ. ಮೈಲಾರಿಯವರ ಒಂದು ಬೃಹತ್ ಕಾದಂಬರಿ ಇತ್ತೀಚೆಗೆ ಪ್ರಕಟವಾಗಿದೆ. ಸಹಜವಾಗಿಯೇ ಅವರಿಗೆ ತಮ್ಮ ಕಾದಂಬರಿಯ ಬಗೆಗೆ ಅಪಾರ ಮೋಹ ಮತ್ತು ನಿರೀಕ್ಷೆಗಳಿವೆ. ಮೈಲಾರಿಯವರಿಗೆ ತಮ್ಮ ಕಾದಂಬರಿ ಶ್ರೇಷ್ಠ ಕೃತಿಯೆಂಬ ಮುಗ್ಧ ಭ್ರಮೆ ಮತ್ತು ತಮ್ಮ ಕಾದಂಬರಿಗೆ ರಾಷ್ಟ್ರಮಟ್ಟದ ಪುರಸ್ಕಾರ ಲಭಿಸಬೇಕೆಂಬ ಅದಮ್ಯ ಆಸೆಯಿದೆ.

ಸಂಪನ್ನರಾದ ಮೈಲಾರಿಯವರು ತೀರ ಮುಗ್ಧರಂತೆ, ತಮ್ಮ ಕಾದಂಬರಿ ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಬೇಕು ಎಂದು ಸುಲಭವಾಗಿ ಹೇಳುತ್ತಾರೆ. ಆದರೆ ಇದು ಎಷ್ಟು ಕಷ್ಟ ಎಂಬ ಕಲ್ಪನೆ ಅವರಿಗಿಲ್ಲ. ಮೈಲಾರಿಯವರ ಸಾಹಿತಿ ಮಿತ್ರರು ಅವರ ಮಾತುಗಳನ್ನು ಕೇಳಿ, “ಛೇ… ಛೇ… ಸಂಪನ್ನ ಮನಷಾs ಏನೇನೋ ಆಸೆ ಇಟಗೊಂಡಾರs ಖರೇs… ಆದರs ಇದೆಲ್ಲಾ ಆಗೂs ಹೋಗೂs ಮಾತಲ್ಲ ತಗೀರಿs…” ಎಂದು ಸಹನಾಭೂತಿ ವ್ಯಕ್ತಪಡಿಸುತ್ತಾರೆ. ಪಾಪ, ಸಂಪನ್ನರಾದ ಮೈಲಾರಿಯವರು ಮಾತ್ರ  ಆಸೆ ಮತ್ತು ನಿರೀಕ್ಷೆಯನ್ನು ಮಾತ್ರ ಇನ್ನೂ ಬಿಟ್ಟಿಲ್ಲ.

ಸಾಹಿತ್ಯಾಸಕ್ತಿಯ ದೆಸೆಯಿಂದಾಗಿ ಇತ್ತೀಚೆಗೆ ನನಗೆ ಶಂಕರಗೌಡರೆಂಬ ಹಿರಿಯರೊಬ್ಬರ ಪರಿಚಯವಾಯಿತು. ನಿವೃತ್ತ ಶಿಕ್ಷಕರಾದ ಗೌಡರು ಕೂಡ ಸಂಪನ್ನರು. ತುಂಬ ಚೆನ್ನಾಗಿ ಕನ್ನಡ ಸಾಹಿತ್ಯವನ್ನು ಓದಿಕೊಂಡಿರುವ ಗೌಡರಿಗೆ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಒಳ್ಳೆಯ ಪರಿಪಾಠವಿದೆ. ಗೌಡರು ಯಾವುದೇ ಹೊಸ ಕೃತಿ ಬಂದರೂ ಅದನ್ನು ಓದಿ ನನ್ನೊಂದಿಗೆ ಚರ್ಚಿಸುತ್ತಾರೆ. ಸಮಕಾಲೀನ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಕುರಿತು ತುಂಬ ಸ್ವಾರಸ್ಯಕರವಾಗಿ ಹರಟೆ ಹೊಡೆಯುತ್ತಾರೆ. ಗೌಡರಂತಹ ಸಾಹಿತ್ಯಾಭಿರುಚಿಯಿರುವ ವ್ಯಕ್ತಿಗಳು ಸಿಗುವುದು ಇತ್ತೀಚೆಗೆ ಅಪರೂಪವಾಗುತ್ತಿದೆ.

ದಾವಣಗೆರೆಯ ಸಂಪನ್ನ ಹುಡುಗನಾದ ಕುಮಾರನ ಪ್ರೇಮಕಥೆ ಕೇಳಿ. ಡಿಜಿಟಲ್‌ ಯುಗದಲ್ಲಿ ಸಂಪನ್ನತೆ ಎನ್ನುವುದು ಹೊಸ ಆಯಾಮ ಪಡೆದುಕೊಂಡಂತೆ ಕಾಣುತ್ತದೆ. ಓದು, ಬರಹ ಮತ್ತು ಸಂಶೋಧನೆ ಎಂದು ತನ್ನ ಪಾಡಿಗೆ ತಾನು ಪಿ.ಹೆಚ್.ಡಿ. ಮಾಡಿಕೊಂಡಿದ್ದ ಕುಮಾರನಿಗೆ ಬೆಂಗಳೂರಿನ ಹುಡುಗಿಯಾದ ನೀತಾ ಅಂತರ್ಜಾಲ ತಾಣದಲ್ಲಿ ಭೇಟಿಯಾದಳು. ಫೋನ್ ಕರೆಗಳು, ವಾಟ್ಸಪ್ ಮತ್ತು ಟೆಲಿಗ್ರಾಂ ಚಾಟುಗಳ ಮೂಲಕ ಮಾತುಕತೆ ಆರಂಭವಾಯಿತು. ನೀತಾಳದು ತುಂಬ ಮಧುರ ಧ್ವನಿ. ಅವಳ ಜೇನಿನಂತಹ ಧ್ವನಿಗೇ ಕುಮಾರ ಮಾರು ಹೋಗಿದ್ದ. ಕೆಲವೇ ದಿನಗಳಲ್ಲಿ ಈ ಆನ್‌ಲೈನ್ ಸ್ನೇಹ ಬಲಿತು ಪ್ರೇಮವಾಗಿ ಮಾರ್ಪಟ್ಟಿತು. ಕುಮಾರ ಪ್ರೇಮದಲ್ಲಿ ಎಷ್ಟೊಂದು ಅಂಧನಾಗಿದ್ದನೆಂದರೆ ನೀತಾ ಕೇಳಿದಾಗಲೆಲ್ಲ ಅವಳಿಗೆ ಫೋನ್ ಪೇ, ಗೂಗಲ್ ಪೇ ಮೂಲಕ ಹಣ ಪಾವತಿಸುತ್ತಲೇ ಹೋದ.

ಕೊನೆಗೊಂದು ದಿನ ಕುಮಾರ ನೀತಾಳನ್ನು ನೇರವಾಗಿ ಭೇಟಿಯಾಗುವ ಅಪೇಕ್ಷೆ ವ್ಯಕ್ತಪಡಿಸಿದಾಗ ನೀತಾ ತಾನು ಕೆಲಸ ಮಾಡುವ ಕಂಪನಿಯ ವಿಳಾಸ ನೀಡಿದಳು. ಒಂದು ಶುಕ್ರವಾರ ಸಂಜೆ ಐದು ಗಂಟೆಗೆ ಕಂಪನಿಯ ಆಫೀಸಿನ ಹತ್ತಿರ ಭೇಟಿಯಾಗುವುದಾಗಿ ತಿಳಿಸಿದಳು. ಕುಮಾರ ನೀತಾಳನ್ನು ಭೇಟಿಯಾದಾಗ ಆಘಾತ ಕಾದಿತ್ತು. ಇವನೊಂದಿಗೆ ಫೋನಿನಲ್ಲಿ ಮಾತಾಡಿದ, ವಾಟ್ಸಪ್ ಮತ್ತು ಟೆಲಿಗ್ರಾಂಗಳಲ್ಲಿ ಚಾಟು ಮಾಡಿದ ನೀತಾ ಬೇರೆಯೇ ಹುಡುಗಿಯಾಗಿದ್ದಳು. ಅಸಲಿಗೆ ಕುಮಾರನಿಗೆ ಮೋಸ ಮಾಡಿದ ನೀತಾ ಈಗ ಭೇಟಿಯಾದ ಹುಡುಗಿಯ ಗೆಳತಿಯಾಗಿದ್ದಳು. ನೀತಾ ಹತ್ತು ಹಲವು ಹುಡುಗರೊಂದಿಗೆ ಫೋನ್, ಈಮೇಲ್, ವಾಟ್ಸಪ್ ಮತ್ತು ಟೆಲಿಗ್ರಾಂಗಳಲ್ಲಿ ಚಾಟು ಮಾಡುತ್ತಾ ಪ್ರೇಮದ ಜಾಲ ಬೀಸಿ ಹಣ ಕೀಳುತ್ತಿದ್ದಳು.  ಡಿಜಿಟಲ್‌ ವಿಚಾರಕ್ಕೆ ಬಂದಾಗʻಸಂಪನ್ನತೆʼಯು ಇನ್ನಷ್ಟು ಬಲಿಯಬೇಕಾಗುತ್ತದೆ ಎಂದು ಅನಿಸಿತು.

ಇಡೀ ಭಾರತ ದೇಶದಲ್ಲಿ ಸಂಪನ್ನರೆಂದರೆ ಯಾರು? ಎಂದು ಯಾರಾದರೂ ಕೇಳಿದರೆ ನಾನಂತೂ ಕನ್ನಡಿಗರೇ ಎಂದು ಕೇಕೆ ಹಾಕಿ ಹೇಳಬಲ್ಲೆ. ಏಕೆಂದರೆ ಕನ್ನಡಿಗರಷ್ಟು ಸಂಪನ್ನರು ಮತ್ತು ಸಹೃದಯಿಗಳು ಭಾರತದ ಇತರೆ ರಾಜ್ಯಗಳಲ್ಲಿ ಇಲ್ಲ. ಇಂದು ಯಾವುದೇ ರಾಜ್ಯದ, ಯಾವುದೇ ಭಾಷೆಯ ಮಂದಿ ಕರ್ನಾಟಕದಲ್ಲಿ ಬಂದು ನೆಲೆಸಬಹುದು. ಕರ್ನಾಟಕದಲ್ಲಿ ಉದ್ಯೋಗ, ವ್ಯಾಪಾರ ಮಾಡಿಕೊಂಡು ನೆಮ್ಮದಿಯಿಂದ ಜೀವಿಸಬಹುದು. ಎರಡ್ಮೂರು ತಲೆಮಾರುಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ ಕಲಿಯದೆ ಸುಖವಾಗಿ ಜೀವನ ನಡೆಸಬಹುದು. ಇದು ಕರ್ನಾಟಕದಲ್ಲಿ ಮಾತ್ರ ಸಾಧ್ಯ!

ಕನ್ನಡಿಗರು ಎಷ್ಟು ಸಂಪನ್ನ ಮಂದಿಯೆಂದರೆ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಬದಲು ತಾವೇ ಅವರ ಭಾಷೆ ಕಲಿತು, ಅವರೊಂದಿಗೆ ಅದೇ ಭಾಷೆಯಲ್ಲಿ ವ್ಯವಹರಿಸುತ್ತಾರೆ. ಕನ್ನಡಿಗರು ತುಂಬ ಸಂಪನ್ನರು ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬೇಕೇ? ಇಂದು ಕರ್ನಾಟಕದ ಗಡಿ ಭಾಗಗಳಲ್ಲಿ ಮಾತ್ರವಲ್ಲ ಕನ್ನಡ ನಾಡಿನ ಎಲ್ಲೆಡೆಯೂ ಅನ್ಯ ಭಾಷಿಕರು ಬಂದು ನೆಲೆಗೊಂಡು ಬದುಕು ಕಟ್ಟಿಕೊಂಡಿದ್ದಾರೆ.

ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲ ಖ್ಯಾತಿ ಪಡೆದ ಬೆಂಗಳೂರು ನಿಜವಾದ ಅರ್ಥದಲ್ಲಿ ಜಾಗತಿಕ ನಗರ. ಬಹುಶಃ ಭಾರತದ ಎಲ್ಲ ರಾಜ್ಯಗಳ, ಎಲ್ಲ ಭಾಷೆಗಳ ಮಂದಿಯೂ ಬೆಂಗಳೂರಿನಲ್ಲಿದ್ದಾರೆ. ವಿಶೇಷವಾಗಿ ತಮಿಳರು, ಮಲಯಾಳಿಗಳು ಮತ್ತು ತೆಲುಗರಿಗೆ ಬೆಂಗಳೂರು ತವರು ಮನೆಯಿದ್ದಂತೆ. ಬಹುಶಃ ಈ ಮೂರು ಭಾಷೆಗಳನ್ನಾಡುವ ಮಂದಿಯ ಸಂಖ್ಯೆ ಕನ್ನಡಿಗರಿಗಿಂತ ಹೆಚ್ಚಾದರೂ ಅಚ್ಚರಿಯಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಕನ್ನಡಿಗರ ಸಹೃದಯತೆ ಮತ್ತು ಸಂಪನ್ನತೆಯೇ ಕನ್ನಡಿಗರ ದೌರ್ಬಲ್ಯವಾಗಿರುವುದು ವಿಪರ್ಯಾಸದ ಸಂಗತಿ. ಕನ್ನಡಿಗರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

ಈಗೀಗಂತೂ ಸಂಪನ್ನರು ಯಾರು? ಸಂಪನ್ನರಂತೆ ನಟಿಸುವವರು ಯಾರು? ಎಂದು ಕಂಡು ಹಿಡಿಯುವುದೇ ಕಷ್ಟ. ಉತ್ತರ ಕರ್ನಾಟಕದವನೂ, ಸಂಪನ್ನ ಹುಡುಗನೂ ಆದ ನಾನು ಹೊಸ ಹೊಸ ಮಂದಿಯೊಂದಿಗೆ ನಾನಾಗಿಯೇ ಮಾತಾಡಿ ಸ್ನೇಹ ಮಾಡಿಕೊಳ್ಳುತ್ತೇನೆ. ಇಂತಹ ಸಂದರ್ಭಗಳಲ್ಲಿ ವಿವಿಧ ರೀತಿಯ, ವಿವಿಧ ಭಾಗದ, ವಿಭಿನ್ನ ಮನೋಭಾವದ ಮಂದಿಯೊಂದಿಗೆ ಸ್ನೇಹವಾಗಿದೆ. ಒಳ್ಳೆಯ ಮಂದಿಯ ಸ್ನೇಹ ನಿಜಕ್ಕೂ ನನಗೆ ಸಾಕಷ್ಟು ಸಂತೋಷ ನೀಡಿದೆ. ಅದೇ ರೀತಿ ಕೆಟ್ಟ ಮಂದಿಯ ಸ್ನೇಹ ನನಗೆ ಸಾಕಷ್ಟು ದುಃಖ ಸಹ ನೀಡಿದೆ. ʻಸಂಪನ್ನತೆʼಯೇ ನನಗೆ ಮುಳುವಾಯಿತೇ ಎಂದು ಆಗಾಗ ಅನಿಸಿದ್ದಿದೆ. ಆದರೆ ಏಷ್ಟೋ ಅನುಭವಗಳು ನನಗೆ ಕೆಲವು ಒಳ್ಳೆಯ ಪಾಠಗಳನ್ನು ಕಲಿಸಿವೆ. ಜೀವನದಲ್ಲಿ ಒಳ್ಳೆಯದಿರುವಂತೆ ಕೆಟ್ಟದ್ದೂ ಇರುವುದು ಸಹಜ. ಇತ್ತೀಚೆಗಂತೂ ಸಂಪನ್ನ ಮಂದಿಯ ಸ್ನೇಹ ಸಿಗುವುದು ದುರ್ಲಭವಾಗುತ್ತಿದೆ. ಏನೇ ಆದರೂ ಸಂಪನ್ನ ಮಂದಿಯ ವಿಷಯದಲ್ಲಿ ನನಗೆ ತುಂಬ ವಿಶ್ವಾಸವಿದೆ. ಸಂಪನ್ನರ ಸ್ನೇಹವನ್ನು ಯಾವತ್ತೂ ಸ್ವಾಗತಿಸುತ್ತೇನೆ.