ಮಧ್ಯಾಹ್ನದ ಊಟಕ್ಕೆ ಆರಾಮಾಗಿ ಮನೆಗೆ ಹೋಗಿ ಬರಬಹುದಿತ್ತು. ಕೆಲವು ಮಕ್ಕಳ ತಾಯಂದಿರು ಮಾತ್ರ ಪ್ರತಿದಿನ ತಮ್ಮ ಮಕ್ಕಳ ಡಬ್ಬಿ ಹಿಡಿದು ಮಧ್ಯಾಹ್ನ ಶಾಲೆಗೆ ಬಂದು ತಿನ್ನಿಸಿ ಹೋಗುತ್ತಿದ್ದರು. ಒಂದು ಮಳೆಮಧ್ಯಾಹ್ನ ನನ್ನ ಅಮ್ಮನೂ ಡಬ್ಬಿ ತಂದು, ತಿನ್ನುವವರೆಗೂ ಜೊತೆಯಿದ್ದು ಹೋದಾಗ ಒಂದು ಬಗೆಯ ಜಂಬ. ಸಂತೋಷ. ನನ್ನ ಗೆಳತಿಯೊಬ್ಬಳನ್ನು ಕೇಳಿದ್ದೆ, “ಇವತ್ತು ನಮ್ಮಮ್ಮ ಬಂದಿದ್ರು. ನೋಡಿದ್ಯೇನೇ?” ಅವಳು ಅಷ್ಟೇ ಸಹಜವಾಗಿ, “ಎಷ್ಟು ಜೋರು ಮಳೆ ಬಂದರೂ ನಮ್ಮಮ್ಮ ಬರಲ್ಲ ಕಣೆ. ನಾನು ಹುಟ್ಟಿದಾಗಲೇ ಅವರು ಸತ್ತೋದ್ರು. ಅದಕ್ಕೆ ನಮ್ಮಜ್ಜಿನೇ ಊಟ ತರೋದು ಯಾವಾಗಲೂ” ಅಂದಿದ್ದಳು.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

ಜೂನ್ ಜುಲೈ ತಿಂಗಳ ಮಳೆಯೆಂದರೆ ಬಾಲ್ಯದ ದಿನಗಳ ನೆನಪನ್ನು ಮೊಗೆಮೊಗೆದು ತರುವ ರಾಯಭಾರಿ. ಧೋ ಸುರಿಯುವ ಮಳೆ, ಮಣ್ಣಿನ ರಸ್ತೆಗುಂಟ ಹರಿಯುವ ಕೆನ್ನೀರು, ಬೆಳಗಿನ ಸಮಯದಲ್ಲೂ ದೀಪವುರಿಸುವ ಮನೆಗಳ ಅರೆತೆರೆದ ಬಾಗಿಲು, ಮನೆಯ ಮುಂದಿನ ಸಜ್ಜದ ಕೆಳಗೆ ಗಾಳಿಗಾದರೂ ಆರಲೆಂದು ಹರಹಿದ ಬಟ್ಟೆಗಳು, ಕೊಠಡಿಯೊಳಗೆ ಕಳೆದುಹೋಗುವ ಆಟದ ಪಿರಿಯಡ್, ಕೊಡಗಿನ ಮಕ್ಕಳಿಗೆ ಸಿಗುವ ಮಳೆರಜೆ ನಮಗೇಕಿಲ್ಲ ಎನ್ನುವ ಹೊಟ್ಟೆಕಿಚ್ಚು, ಬಣ್ಣಬಣ್ಣದ ಕೊಡೆ, ರೈನ್‌ಕೋಟೆಂಬ ದೊಗಲೆ ಪ್ಲಾಸ್ಟಿಕ್ ಚೀಲ, ಸೊರಗುಟ್ಟುವ ಮೂಗು, ಮನೆ ತಲುಪಿದರೆ ಸಿಗುವ ಘಮ್ಮನೆ ಕಾಫಿಸ್ವಾಗತ… ಒಂದು ಮತ್ತೊಂದು ಇನ್ನೊಂದು ಎಂದು ಪೋಣಿಸುತ್ತಾ ಮೈದೆಳೆಯುವ ಮೈಸೂರು ಮಲ್ಲಿಗೆಯಷ್ಟೇ ಸೊಗಸಾದ ನೆನಪಿನ ದಿಂಡು.

ತಕ್ಷಣಕ್ಕೆ ಅಕ್ಷರ ಸೋಕಿಸಿಕೊಂಡ ಚಿತ್ರಗಳು ಇವು. ಕೆಲವು ನೆನಪುಗಳು ಮಾತ್ರ ಬರಿಯ ಚಿತ್ರವಾಗಿ ಅಲ್ಲ. ಒಂದಿಡೀ ಘಟನೆಯಾಗಿ ಪ್ರತಿಬಾರಿ ನೆನಪಾದಾಗಲೂ ಒಂದೊಂದು ಬಣ್ಣ, ಭಾವದಲ್ಲಿ ನವನವೀನ. ಕೆಲಿಡಿಯೋಸ್ಕೋಪ್‌ನಂತೆ ವಿವಿಧ ವಿನ್ಯಾಸಗಳಲ್ಲಿ ಬೇರೆ ಬೇರೆ ಅರ್ಥ ಹೊಳೆಸುತ್ತದೆ.

ಐದಾರು ವರ್ಷದ ಪುಟ್ಟ ಹುಡುಗಿಯಾಗಿದ್ದಾಗಿನ ಮಾತು. ನಮ್ಮ ಶಾಲೆ ಮನೆಯಿಂದ ಇನ್ನೂರು ಮೀಟರ್ ದೂರದಲ್ಲಿತ್ತು‌. ಬೆಳಿಗ್ಗೆ ಹತ್ತರಿಂದ ನಾಲ್ಕು ಗಂಟೆಯವರೆಗೆ ಶಾಲಾ ಅವಧಿ. ಮಧ್ಯಾಹ್ನದ ಊಟಕ್ಕೆ ಆರಾಮಾಗಿ ಮನೆಗೆ ಹೋಗಿ ಬರಬಹುದಿತ್ತು. ಕೆಲವು ಮಕ್ಕಳ ತಾಯಂದಿರು ಮಾತ್ರ ಪ್ರತಿದಿನ ತಮ್ಮ ಮಕ್ಕಳ ಡಬ್ಬಿ ಹಿಡಿದು ಮಧ್ಯಾಹ್ನ ಶಾಲೆಗೆ ಬಂದು ತಿನ್ನಿಸಿ ಹೋಗುತ್ತಿದ್ದರು. ಮನೆ ಹತ್ತಿರವಿದ್ದ ನಮಗೆಲ್ಲಾ ಈ ಮುಚ್ಚಟೆ ದೊರೆಯುತ್ತಿದ್ದುದ್ದು ಜೋರುಮಳೆ ಬಂದಾಗ ಮಾತ್ರ. ಒಂದು ಮಳೆಮಧ್ಯಾಹ್ನ ನನ್ನ ಅಮ್ಮನೂ ಡಬ್ಬಿ ತಂದು, ತಿನ್ನುವವರೆಗೂ ಜೊತೆಯಿದ್ದು ಹೋದಾಗ ಒಂದು ಬಗೆಯ ಜಂಬ. ಸಂತೋಷ. ನನ್ನ ಗೆಳತಿಯೊಬ್ಬಳನ್ನು ಕೇಳಿದ್ದೆ, “ಇವತ್ತು ನಮ್ಮಮ್ಮ ಬಂದಿದ್ರು. ನೋಡಿದ್ಯೇನೇ?” ಅವಳು ಅಷ್ಟೇ ಸಹಜವಾಗಿ, “ಎಷ್ಟು ಜೋರು ಮಳೆ ಬಂದರೂ ನಮ್ಮಮ್ಮ ಬರಲ್ಲ ಕಣೆ. ನಾನು ಹುಟ್ಟಿದಾಗಲೇ ಅವರು ಸತ್ತೋದ್ರು. ಅದಕ್ಕೆ ನಮ್ಮಜ್ಜಿನೇ ಊಟ ತರೋದು ಯಾವಾಗಲೂ” ಅಂದಿದ್ದಳು. ಮುಂದೇನಾಯ್ತು ನೆನಪಿಲ್ಲ. ಆದರೆ ಈ ಘಟನೆ ಮನಸ್ಸಿನ ಎದುರು ನಿಂತಾಗ, ಆ ಗೆಳತಿಯ ಬದುಕು ಸಹನೀಯ, ಸುಂದರವಾಗಿತ್ತು ಎನ್ನಲು ಪುರಾವೆ ಹುಡುಕಲು ಹವಣಿಸುತ್ತದೆ. ಆಕೆಯ ತಂದೆ ಬೇರೊಂದು ಮದುವೆಯಾಗಿದ್ದರು. ಆಕೆಗೂ ಹೆಣ್ಣುಮಗುವಿತ್ತು. ಇಪ್ಪತ್ತು ವರ್ಷಗಳ ಕಾಲ ಈ ಮಗಳನ್ನು ತಿರುಗಿಯೂ ನೋಡದ ಆತ, ಆಮೇಲೆ ಮಗಳೇ ಎನ್ನುತ್ತಾ ಪ್ರೀತಿ ತೋರಲು ಶುರುವಿಟ್ಟರು. ಹೀಗೆ ಒಂದೊಂದೇ ಸಂಗತಿಗಳು ಜಿಟಿಜಿಟಿ ಮಳೆಯಂತೆ ಎಡೆಬಿಡದೆ ನೆನಪಾಗಿ ಮನಸ್ಸು ಹಸಿ. ಬುದ್ಧಿಯಿಲ್ಲದ ವಯಸ್ಸಿನಲ್ಲಿ ನಮ್ಮ ಅಪ್ಪ ಅಮ್ಮನ ಕಥೆಗಳನ್ನು ರಂಜನೀಯವಾಗಿ ಹೇಳುವ ಭರದಲ್ಲಿ ಅವಳನ್ನು ನೋಯಿಸಿರಬಹುದೇ? ಇಪ್ಪತ್ತು ವರ್ಷಗಳ ಮೇಲೆ ಬಂದ ಅಪ್ಪನನ್ನು ಒಪ್ಪಲೋ ಬೇಡವೋ ಎನ್ನುವ ಸಂದಿಗ್ಧದಲ್ಲಿ ಅವಳ ಜೊತೆ ಯಾರಿದ್ದರು? ನಮ್ಮ ಬದುಕಿನ ಓಟದಲ್ಲಿ ಮರೆತೇ ಹೋದ ಅವಳ ಕಥೆ ನೆನಪಾದಾಗ ಯಾಕಿಷ್ಟು ಕಾಡಬೇಕು? ನಮ್ಮನ್ನು ಕಾಡುವುದು ಕುತೂಹಲವೋ? ಕಾಳಜಿಯೋ? ಕರುಣೆಯೋ?

ಮತ್ತೊಂದು ನೆನಪಿದೆ. ಶಾಲೆ ಆಗ ಮನೆಯಿಂದ ಹದಿನೈದು ನಿಮಿಷದ ದಾರಿ. ಶಾಲೆಯಿಂದ ಹೊರಟಾಗ ಸಣ್ಣಗೆ ಹನಿಯುತ್ತಿದ್ದ ಮಳೆ, ಒಂದೆರಡು ನಿಮಿಷದಲ್ಲಿ ಬಿರುಸಾಗಿ ಎದುರಿನ ದಾರಿಯೂ ಕಾಣದಷ್ಟು ಜೋರಾಗಿ ಸುರಿಯತೊಡಗಿತ್ತು. ನನ್ನೊಂದಿಗೆ ನನಗಿಂತ ಒಂದು ವರ್ಷ ಚಿಕ್ಕವಳಿದ್ದ ಗೆಳತಿ. ಇಬ್ಬರೂ ತೊಯ್ದು ತೊಪ್ಪೆಯಾಗಿದ್ದೆವು. ಹೆಜ್ಜೆ ಕಿತ್ತಿಡುವುದೂ ಕಷ್ಟವೆನಿಸುವ ಮಣ್ಣು ರಸ್ತೆ. ಅಲ್ಲೊಂದು ಒಂಟಿ ಹುಣಸೆಮರ. ನಾವಿಬ್ಬರೂ ಹೇಗೋ ಅದರಡಿಯಲ್ಲಿ ಮುದುರಿಕೊಂಡು ನಿಂತೆವು. ಮಳೆ ಬರುವಾಗ ಮರದ ಕೆಳಗೆ ನಿಲ್ಲಬಾರದು. ಸಿಡಿಲು ಹೊಡೆಯುವ ಅಪಾಯವಿರುತ್ತದೆ. ಕೊಂಬೆ ಮುರಿದು ತಲೆ ಮೇಲೆ ಬಿದ್ದರೇನು ಮಾಡುವಿರಿ? ಎಂದು ಎಚ್ಚರಿಸುತ್ತಿದ್ದ ಶಿಕ್ಷಕರ ಮಾತು ರಿಂಗಣಿಸುತ್ತಿತ್ತು. ಈ ಮಳೆಯಲ್ಲಿ ನಿಜಕ್ಕೂ ಸಾಯುವುದೇ ಸತ್ಯವೆನಿಸಿ, ಇಬ್ಬರೂ ಒಬ್ಬರಿಗೊಬ್ಬರು ಧೈರ್ಯ ಹೇಳುತ್ತಾ, ಹೇಗಾದರೂ ಬದುಕಬೇಕು ಎಂದು ಪ್ರಾರ್ಥಿಸುತ್ತಾ ನಿಂತಿದ್ದೆವು. ಹತ್ತಿರದಲ್ಲೇ ಮನೆಗಳಿದ್ದವು. ಗೇಟು ತೆಗೆದು ಕಾಂಪೌಂಡಿನೊಳಗೆ ನಿಲ್ಲಬಹುದಿತ್ತು. ಆದರೆ ಅಷ್ಟು ಹೊತ್ತಿಗಾಗಲೇ ಅಪರಿಚಿತರ ಬಗ್ಗೆ, ಗಂಡಸರ ಬಗ್ಗೆ ನಮಗಿದ್ದ ಭಯ, ಸಣ್ಣಪುಟ್ಟ ಮುಜುಗರದ ಪ್ರಕರಣಗಳ ಕೆಟ್ಟ ನೆನಪು ಒಂಟಿಮರದ ಕೆಳಗೆ ನಿಂತು ಸತ್ತರೂ ಪರವಾಗಿಲ್ಲ. ಅಲ್ಲಿ ಮಾತ್ರ ಹೋಗುವುದು ಬೇಡ ಎನ್ನುವಂತೆ ಮಾಡಿತ್ತೇನೋ… ಸ್ಪಷ್ಟವಾಗಿ ತಿಳಿದಿಲ್ಲ. ಆದರೆ ನಮಗೆ ಅಂತಹ ಭಯಗಳು ಇದ್ದವೆಂಬುದು ಖಚಿತವಾಗಿ ನೆನಪಿದೆ.

ಇವೆಲ್ಲ ಇಪ್ಪತ್ತು- ಇಪ್ಪತ್ತೈದು ವರ್ಷದ ಹಿಂದಿನ ಘಟನೆಗಳು. ಅದನ್ನು ನೆನಪು ಮಾಡಿಕೊಂಡು, ಅದರ ಆಳಕ್ಕಿಳಿದು ಬಗೆದು ನೋಡಿದರೂ, ಬೇರೆ ಬೇರೆ ದೃಷ್ಟಿಯಿಂದ ಅಳೆದು ಸುರಿದು ನಿರ್ಣಯಕ್ಕೆ ಬಂದರೂ ಸಾಧಿಸುವುದು ಏನೂ ಇಲ್ಲ. ಹಾಗಿದ್ದೂ ಒಮ್ಮೆ ನೆನಪಾದರೆ ಹಾಗೆಯೇ ಒದರಿಕೊಂಡು ಹೋಗಲು ಅಸಾಧ್ಯ. ನೆನಪುಗಳೆಲ್ಲವೂ ರಮ್ಯವಾಗಿಯೇ ಇರಬೇಕೆಂದಿಲ್ಲ ಅಲ್ಲವೇ? ಹಾಗೆ ನೋಡಿದರೆ, ಎದೆ ಹಿಂಡುವ ನೆನಪುಗಳೇ ಹೆಚ್ಚು ಗಾಢ. ಶೋಕ, ವಿಷಾದಗಳಷ್ಟು ಗಾಢವಾಗಿ ಆನಂದ, ಸಂತೋಷಗಳು ಬರೆಸಿಕೊಳ್ಳುವುದಿಲ್ಲ. ಅಕ್ಷರಗಳು ಮುಲಾಮಿನಂತೆ ಕೆಲಸ ಮಾಡುವುದೂ ಕಾರಣವಿರಬಹುದೆ?