ನಾವು ಅದೆಷ್ಟು ತೀವ್ರವಾಗಿ ಅತ್ತಿದ್ದೇವೆ, ಒಬ್ಬರನ್ನೊಬ್ಬರು ಹಂಬಲಿಸಿದ್ದೇವೆ, ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎನಿಸುವಷ್ಟು ಹಚ್ಚಿಕೊಂಡಿದ್ದೇವೆ. ಜೊತೆಯಲ್ಲಿರುವಂತೆ ಭ್ರಮಿಸಿದ್ದೇವೆ. ಭ್ರಮೆಯಿಂದ ತಿಳಿದೆದ್ದು ವಿಹ್ವಲಗೊಂಡಿದ್ದೇವೆ. ಅದೊಂದು ದಿನ ನಡುರಾತ್ರಿ, ಒಂದು ಕನಸು ಅರಳತೊಡಗಿತ್ತು; ನೈಜವೆನಿಸುವಷ್ಟೇ ಸಹಜವಾಗಿ. ನಾವಿಬ್ಬರೂ ಎರೆಡು ಪುಟ್ಟ ಗಿಳಿಗಳಂತೆ ಒಟ್ಟೊಟ್ಟಾಗಿ ಒತ್ತಿಕೊಂಡು ಕೂತು, ನಿಂತು, ಮಲಗಿ ಆಟವಾಡುತ್ತಿದ್ದೆವು. ಮುದ ಮತ್ತು ಮುಗ್ಧ… ಯಾರ ಸಂಚೋ ತಿಳಿಯದು. ಕನಸು ಒಡೆಯಿತು. ಕಣ್ಣು ತೆರೆದಾಗ ನೀನಿಲ್ಲ. ಎಂಥ ಭ್ರಮನಿರಸನವಾಗಿರಬಹುದು ಯೋಚಿಸು. ಈಗ ಸ್ವಲ್ಪ ಸಮಯದ ಮೊದಲಷ್ಟೇ ಜೊತೆಯಲ್ಲಿದ್ದೆ. ಆದರೀಗ ಇಲ್ಲ…
ಆಶಾ ಜಗದೀಶ್ ಬರೆಯುವ “ಆಶಾ ಲಹರಿ” ಅಂಕಣದ ಹೊಸ ಬರಹ

“ಕುಛ್ ತೊ ಲೋಗ್ ಕಹೇಂಗೇ
ಲೋಗೋಂ ಕಾ ಕಾಮ್ ಹೆ ಕಹನಾ
ಛೋಡೋ ಬೆಕಾರ್ ಕೀ ಬಾತೋಂ ಮೆ
ಕಹೀ ಬೀತ್ ನಾ ಜಾಯೆ ರೈನಾ…”

ಜನ ಸಾವಿರ ಮಾತನಾಡಬಹುದು. ಅವರು ಬೇರುಗಳೇ ಇಲ್ಲದೆ ಮಾತನಾಡುತ್ತಿದ್ದಾರೆ ಅಂತ ನಿನಗೂ ಗೊತ್ತು ಮತ್ತು ನನಗೂ. ನಾವು ಇಂದು ಏನಾಗಿದ್ದೇವೋ ಅದು ನಮ್ಮ ನಡುವಿನ ರಹಸ್ಯ. ಮುಂದೆ ಏನಾಗುತ್ತೇವೋ ಅದು ಕಾಲದ ರಹಸ್ಯ. ಅದನ್ನು ಊಹಿಸಲಿಕ್ಕೆ ಇವರಾದರೂ ಯಾರು?! ಆದರೂ ನಾವು ಇವರ ಚುಚ್ಚು ಮಾತುಗಳಿಗೆ ಬಲಿಯಾಗುತ್ತಿದ್ದೇವೆ, ಅನುಕ್ಷಣ ಘಾಸಿಗೊಳ್ಳುತ್ತಿದ್ದೇವೆ. ಪ್ರತಿರೋಧಿಸಲು ಹೊರಡುತ್ತೇವೆ, ಮರುಕ್ಷಣವೇ ಬಾಯ್ತೆರೆಯಲಾರದೆ ಹೋಗುತ್ತೇವೆ. ನಮ್ಮನ್ನು ಪ್ರೀತಿಸುವವರಿಗೆ ನಮ್ಮ ವಿವರಣೆಗಳನ್ನು ಕೇಳುವ ವ್ಯವಧಾನವಿರುತ್ತದೆ. ಆದರೆ ನಮ್ಮನ್ನು ಟೀಕಿಸುವವರಿಗೆ ನಮ್ಮ ಯಾವ ವಿವರಣೆಗಳೂ ಬೇಕಿರುವುದಿಲ್ಲ. ನಾವು ಏನೇ ಹೇಳಿದರೂ ಅದನ್ನವರು ಒಪ್ಪಲು ತಯಾರಿರುವುದಿಲ್ಲ. ಮತ್ತೆ ಒಪ್ಪಿಸಲು ಹೊರಡುವ ಸಾಹಸವಾನ್ನಾದರೂ ಯಾಕೆ ಮಾಡಬೇಕು… ಅಷ್ಟಕ್ಕೂ ಒಪ್ಪಿಸದಿದ್ದರೆ ಏನಾಗುತ್ತದೆ?! ಹಾಗೆ ಒಪ್ಪಿಸುತ್ತಾ ಹೊರಟರೆ ಬಹುಶಃ ನಮ್ಮ ಆಯುಷ್ಯದ ಬಹುಪಾಲು ಅದರಲ್ಲೇ ಕಳೆದುಹೋಗಬಹುದು. ಪ್ರತಿಫಲವಾದರೂ ಶೂನ್ಯವಾಗಿರಬಹುದು. ನಾವು ನಾವಾಗಿದ್ದರೆ ಸಾಲದಾ… ಯಾರಾದರೂ ಏನಾದರೂ ಅಂದುಕೊಳ್ಳಲಿ.. ಅದು ಅವರ ಆಯ್ಕೆ… ನಮ್ಮ ಬದುಕು ನಮ್ಮ ಆಯ್ಕೆ ಅಲ್ಲವಾ… ನಮ್ಮ ಬದುಕಿನ ಆಗು ಹೋಗುಗಳು ನಮ್ಮವು ಮಾತ್ರ. ಅದರಿಂದ ನೋವಾಗುವುದಿದ್ದರೆ, ನಮ್ಮಷ್ಟು ತೀವ್ರವಾಗಿ ನೋಯುವವರು ಬೇರೆ ಯಾರೂ ಇರಲು ಸಾಧ್ಯವಿಲ್ಲ. ಈ ನಿರ್ಧಾರ ನಮ್ಮನ್ನು ಅದೆಷ್ಟು ಕಾಡಿದೆ?! ನೆಮ್ಮದಿ ಇಲ್ಲದ ರಾತ್ರಿಗಳ ಕರುಣಿಸಿದೆ. ನಮ್ಮ ಪ್ರಕ್ಷುಬ್ಧ ಮನಸಿನ ತೊಳಲಾಟಕ್ಕೆ ಮೋಹದ ಅಥವಾ ವ್ಯಾಮೋಹದ ಹಣೆಪಟ್ಟಿ ಹಚ್ಚಲು ಸಾಧ್ಯವಾ…

ನಾನು ‘ಸರಿ’ ಎಂದಾಗ ‘ಹಾಗಾದರೆ ನಾವು ತಪ್ಪಾ?’ ಎಂದು ಕೇಳಿದ್ದಾರೆ ಜನ. ನಾನು ‘ಸತ್ಯ’ ಎಂದಾಗ ‘ಹಾಗಾದರೆ ನಾವು ಸುಳ್ಳಾ’ ಎಂದು ಕೇಳಿದ್ದಾರೆ ಜನ. ಆದರೆ ನಾನು ‘ಸರಿ’ ಎಂದರೆ ‘ನಾನು ಸರಿ’ ಎಂದಷ್ಟೇ, ವಿರುದ್ಧವಾಗಿ ಯಾರಾದರೂ ತಪ್ಪು ಎಂತಾದರೂ ಯಾಕೆ ಆಗಬೇಕು… ಒಬ್ಬರು ಸರಿ ಎಂದಾಗ ಮತ್ತೊಬ್ಬರು ತಪ್ಪು ಎಂದು ಆಗಲೇಬೇಕಾ… ನಾನು ‘ಸರಿ’ ಎಂದು ಹೇಳುವಾಗ ಸರಿಯ ಬಗ್ಗೆ ಮಾತ್ರ ಮಾತನಾಡುತ್ತಿರುವೆ ಎಂದಷ್ಟೇ ಮಾತಿದೆ ಹೊರತು ಯಾರಾದರೂ ತಪ್ಪು ಎನ್ನುವ ಪ್ರಶ್ನೆಯೇ ಇಲ್ಲ. ಆದರೆ ಯಾರೂ ಹಾಗೆ ತಿಳಿಯಲೇ ಇಲ್ಲ. ನಾವು ನಮ್ಮ ನಮ್ಮ ನೋವಿನ ನಡುವಿನಲ್ಲಿ ಸಿಕ್ಕು ಹೊರಬರಲಾರದೆ ಒದ್ದಾಡುತ್ತಿರುವಾಗಲೂ ಸೇಡಿನ ದೃಷ್ಟಿಗಳು ನಮ್ಮನ್ನು ಮತ್ತಷ್ಟು ತೀವ್ರವಾಗಿ ಇರಿಯುತ್ತಲೇ ಹೋದವೇ ಹೊರತು ನಾವು ಕೊನೆಯವರೆಗೂ ಹಂಬಲಿಸಿದ ಸಣ್ಣ ಕರುಣೆಯ ನೋಟ ಮಾತ್ರ ನಮ್ಮದಾಗಲೇ ಇಲ್ಲ…

ಅದೊಂದು ಪರೀಕ್ಷೆಯಾಗಿತ್ತು ಕಾಣುತ್ತದೆ. ನಮ್ಮ ಸಹನೆಯ, ಗಟ್ಟಿತನದ, ಪ್ರೇಮದ ಆಳದ ಪರೀಕ್ಷೆಯಾಗಿತ್ತು ಅನಿಸುತ್ತದೆ. ಮತ್ತೆ ಆ ಪರೀಕ್ಷೆಯನ್ನು ನಾವು ನಮಗೆ ಅರಿವಿಲ್ಲದೆಯೇ ಪಾಸು ಮಾಡಿದ್ದೇವೆ. ಮರುಕ್ಷಣವೇ ಕರುಣೆಯ ಕ್ಷಿತಿಜವೊಂದು ಸೃಷ್ಟಿಯಾಯಿತು. ಅದು ಸಾಮಾನ್ಯ ಜನರ ಛತ್ರಿಯಷ್ಟು ಸಣ್ಣ ಪ್ರಮಾಣದ್ದಲ್ಲ. ಅದು ನಮ್ಮ ಬದುಕನ್ನೇ ಸಲಹುವಷ್ಟು ಅಗಾಧವಾಗಿತ್ತು.

ನಾವು ಅದೆಷ್ಟು ತೀವ್ರವಾಗಿ ಅತ್ತಿದ್ದೇವೆ, ಒಬ್ಬರನ್ನೊಬ್ಬರು ಹಂಬಲಿಸಿದ್ದೇವೆ, ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎನಿಸುವಷ್ಟು ಹಚ್ಚಿಕೊಂಡಿದ್ದೇವೆ. ಜೊತೆಯಲ್ಲಿರುವಂತೆ ಭ್ರಮಿಸಿದ್ದೇವೆ. ಭ್ರಮೆಯಿಂದ ತಿಳಿದೆದ್ದು ವಿಹ್ವಲಗೊಂಡಿದ್ದೇವೆ. ಅದೊಂದು ದಿನ ನಡುರಾತ್ರಿ, ಒಂದು ಕನಸು ಅರಳತೊಡಗಿತ್ತು; ನೈಜವೆನಿಸುವಷ್ಟೇ ಸಹಜವಾಗಿ. ನಾವಿಬ್ಬರೂ ಎರೆಡು ಪುಟ್ಟ ಗಿಳಿಗಳಂತೆ ಒಟ್ಟೊಟ್ಟಾಗಿ ಒತ್ತಿಕೊಂಡು ಕೂತು, ನಿಂತು, ಮಲಗಿ ಆಟವಾಡುತ್ತಿದ್ದೆವು. ಮುದ ಮತ್ತು ಮುಗ್ಧ… ಯಾರ ಸಂಚೋ ತಿಳಿಯದು. ಕನಸು ಒಡೆಯಿತು. ಕಣ್ಣು ತೆರೆದಾಗ ನೀನಿಲ್ಲ. ಎಂಥ ಭ್ರಮನಿರಸನವಾಗಿರಬಹುದು ಯೋಚಿಸು. ಈಗ ಸ್ವಲ್ಪ ಸಮಯದ ಮೊದಲಷ್ಟೇ ಜೊತೆಯಲ್ಲಿದ್ದೆ. ಆದರೀಗ ಇಲ್ಲ ಎಂದರೆ ಮನಸ್ಸು ಒಪ್ಪುತ್ತದೆಯೇ. ಅಂದು ನಿನಗೆ ಆ ಸರಹೊತ್ತಿನಲ್ಲಿಯೇ ಕಾಲ್ ಮಾಡಿದ್ದೆ. ಅತ್ತಲಿಂದ ನೀನೂ ಬಿಕ್ಕಿದ್ದು ಕೇಳಿಸಿ ಮತ್ತಷ್ಟು ಹನಿಗಳು ದಿಂಬನ್ನು ಒದ್ದೆಯಾಗಿಸಿದ್ದವು. ಅದು ನಿಷ್ಕಲ್ಮಷ, ಶುಭ್ರ ಭಾವ. ಅಲ್ಲಿ ಒಂದು ಕಪ್ಪು ಚುಕ್ಕಿಯನ್ನಿಡಲು ಯಾರಿಗಾದರೂ ಹೇಗೆ ಸಾಧ್ಯ. ಕುಂದನ್ನೇ ಹುಡುಕುವ ಜಗತ್ತು ವಕ್ರತೆಯ ಸೌಂದರ್ಯವನ್ನು ಅರಿಯಲಾರದು… ತನ್ನ ನಿಷ್ಠುರ ನೀತಿಗೆ ಕಟ್ಟು ಬೀಳಿಸುವ ಸಲುವಾಗಿ ಕತ್ತು ಕುಯ್ಯಲು ನಿಲ್ಲುವ ಜಗತ್ತಿನ ಮುಂದೆ ಮಂಡಿಯೂರಲು ಯಾಕೋ ಹೃದಯ ಒಪ್ಪುತ್ತಿಲ್ಲ. ಹೃದಯ ಯಾವತ್ತಾದರೂ ತಪ್ಪಾಗಿ ಗ್ರಹಿಸಲು ಸಾಧ್ಯವಾ…

“ಕುಛ್ ರೀತ್ ಜಗತ ಕೀ ಐಸೀ ಹೈ
ಹರ್ ಏಕ್ ಸುಬಹ್ ಕೀ ಶಾಮ್ ಹುಯೀ
ತೂ ಕೌನ್ ಹೈ ತೆರಾ ನಾಮ್ ಕ್ಯಾ
ಸೀತಾ ಭೀ ಯಹಾ ಬದನಾಮ್ ಹುಯೀ
ಫಿರ್ ಕ್ಯೂ ಸಂಸಾರ್ ಕೀ ಬಾತೋಂ ಸೆ
ಭೀಗ್ ಗಯೇ ತೆರೆ ನೈನಾ”

ಪ್ರೇಮದ ಪಾವಿತ್ರ್ಯಕ್ಕೆ ನಿರೂಪಣೆಯ ಅಗತ್ಯವಿಲ್ಲ. ಜಗದ ಚೌಕಟ್ಟಿಗೆ ಸರಿ ಹೊಂದಿಸಲು ಹೆಣಗಾಡಬೇಕಾದ ದರ್ದೂ ಇಲ್ಲ. ಯಾಕಾದರೂ ವಿವರಿಸಬೇಕು ನಾವು. ನಮ್ಮ ಆಂತರ್ಯದ ಲವಲೇಶವನ್ನೂ ಅರಿಯಲು ಸಾಧ್ಯವಿಲ್ಲದವರಿಗೆ ಅರ್ಥ ಮಾಡಿಸುವ ಸಲುವಾಗಿ ಕಾಲಹರಣ ಮಾಡುವಷ್ಟು ಸಮಯವಾದರೂ ನಮಗಿದೆಯೇ…

ಒಬ್ಬರು ಸರಿ ಎಂದಾಗ ಮತ್ತೊಬ್ಬರು ತಪ್ಪು ಎಂದು ಆಗಲೇಬೇಕಾ… ನಾನು ‘ಸರಿ’ ಎಂದು ಹೇಳುವಾಗ ಸರಿಯ ಬಗ್ಗೆ ಮಾತ್ರ ಮಾತನಾಡುತ್ತಿರುವೆ ಎಂದಷ್ಟೇ ಮಾತಿದೆ ಹೊರತು ಯಾರಾದರೂ ತಪ್ಪು ಎನ್ನುವ ಪ್ರಶ್ನೆಯೇ ಇಲ್ಲ. ಆದರೆ ಯಾರೂ ಹಾಗೆ ತಿಳಿಯಲೇ ಇಲ್ಲ.

ನೋಡು ಅಲ್ಕೊಂದು ಹಕ್ಕಿಯಿದೆ. ಅದು ನಮ್ಮ ಕಣ್ಣಿಗೆ ಬಿದ್ದ ಮಾತ್ರಕ್ಕೆ ಅದರ ಇರುವಿಕೆ ನಮಗೆ ತಿಳಿದದ್ದು. ಆ ಹಕ್ಕಿ ಒಂಚೂರೂ ತನ್ನಿರುವಿಕೆಯನ್ನು ತೋರಿಸುವ ಪ್ರಯತ್ನ ಮಾಡಿರಲೇ ಇಲ್ಲ. ಅದು ಅದೆಷ್ಟು ಮುದ್ದಾಗಿದೆ ನೋಡು… ಪ್ರಕೃತಿಯ ಮೂಲ ಧಾತುವೇ ಅದು ಎನ್ನುವಷ್ಟು. ಪಲ್ಟಿ ಹಾಕುತ್ತದೆ, ಗರಿಬಿಚ್ಚಿ ನರ್ತಿಸುತ್ತದೆ, ತನ್ನ ಶಕ್ತಿ ಮೀರಿ ಹಾರುತ್ತದೆ, ಹುಳುವನ್ನು ಹೆಕ್ಕುತ್ತದೆ, ನಾಳೆಗೆಂದು ಒಂದು ಪುಟ್ಟ ಗೂಡು, ಹೊಟ್ಟೆಗೊಂದು ಸತ್ತ ಹುಳು, ತನ್ನ ದನಿಗೆ ದನಿ ಸೇರಿಸಲೆಂದೊಂದು ಪರಿವಾರ ಅಷ್ಟೇ… ನಾರಿನ ಹಾಸಿಗೆಯ ತುಂಬಾ ಸಣ್ಣ ಸಣ್ಣ ಕನಸುಗಳನ್ನು ಜತನವಾಗಿ ಹೆಣೆಯುತ್ತದೆ. ಎದೆಯ ಬೆಳಗಲೊಂದು ಮಿಂಚು ಹುಳುವನ್ನು ತಂದಿಟ್ಟುಕೊಳ್ಳುತ್ತದೆ. ಅದು ಅದರ ಬದುಕುವ ರೀತಿ. ಸಹಜ ಕ್ರಿಯೆ. ಅದಕ್ಕೆ ತನ್ನ ಯಾವ ಕ್ರಿಯೆಯೂ ವಿಶೇಷವೆನಿಸುವುದಿಲ್ಲ. ಹಾಗಾಗಿ ಅದರ ಬಗ್ಗೆ ಒಂಚೂರೂ ಅಹಂಕಾರವಿಲ್ಲ ಆ ಹಕ್ಕಿಗೆ. ನಾನು ನನ್ನಿಂದ ನನಗಾಗಿ ಎನ್ನುವ ಆತ್ಮಭಂಜನವಾದರೂ ಅದಕ್ಕೆ ಹೇಗೆ ಸಾಧ್ಯ. ಒಂದು ದಿನ ಇದ್ದಕ್ಕಿದ್ದಂತೆ ಇಲ್ಲವಾಗುತ್ತದೆ ಒಂದು ಸಣ್ಣ ಅನುಕಂಪವನ್ನೂ ನಿರೀಕ್ಷಿಸದೆ….
ನಾವಾದರೂ ನಮ್ಮ ಕಿವಿಗಳನ್ನು ಬೇಡದ ಶಬ್ದಕ್ಕೆ ಕಿವುಡಾಗಿಸಿ ಈ ಹಕ್ಕಿಯಂತೆ ಬದುಕಲಾರೆವಾ…

“ಹಮ್ಕೊ ಜೊ ತಾನೆ ದೇತೆ ಹೈ
ಹಮ್ ಖೋಯೇ ಹೈ ಇನ್ ರಂಗರಲಿಯೋಂ ಮೆ
ಹಮನೆ ಉನಕೊ ಭೀ ಛುಪ ಛುಪಕೆ
ಆತೆ ದೇಖಾ ಇನ್ ಗಲಿಯೋಂ ಮೆ
ಯೆ ಸಚ್ ಹೈ ಝೂಠೀ ಬಾತ್ ನಹೀ
ತುಮ್ ಬೋಲೋ ಯೆ ಸಚ್ ಹೈ ನಾ…”

ಜನ ಮರೆಯುತ್ತಾರೆ ತಾವೂ ಒಂದೊಮ್ಮೆ ಇವೇ ಕಾಲು ಕಚ್ಚುವ ಚಪ್ಪಲಿಗಳ ತೊಟ್ಟು ಓಡಾಡಿದ್ದನ್ನು. ಅವರ ಅವೇ ಕಡಲಿನಗಲದ ಕಣ್ಣುಗಳು ಸುನಾಮಿಯಂತೆ ಉಕ್ಕಿ ಹರಿದದ್ದನ್ನು. ಅಥವಾ ಅವರ ಆ ನೋವು ಹಿಂಸಾರಸಿಕತನವಾಗಿ ಮಾರ್ಪಟ್ಟಿದೆಯಾ… ಇನ್ನೊಬ್ಬರ ನೋವು ನಮ್ಮ ನಗುವಿಗೆ ಕಾರಣವಾಗುವಂತಹ ದುರಂತ ಈ ಜಗದಲ್ಲಿ ಮತ್ತೊಂದು ಘಟಿಸಲು ಸಾಧ್ಯವೇ ಇಲ್ಲ ನೋಡು…

ಅಂದು ನಿನಗೊಂದು ಪತ್ರ ಬರೆದಿದ್ದೆ. ನನ್ನ ರಕ್ತದಲ್ಲಿ. ನನ್ನ ಪ್ರೇಮದ ಉತ್ಕಟತೆಯ ಮಟ್ಟದ ಅರಿವಾಗಲಿ ನಿನಗೆ ಎಂದು. ನಾನು ರಾಧೆಯಲ್ಲ. ನಿನ್ನನ್ನು ದೂರ ಮಾಡಿಕೊಂಡು ಬದುಕುವುದು ನನಗೆ ಸಾಧ್ಯವಿಲ್ಲ. ನಿನ್ನ ದಾರಿಗೆ ನಿನ್ನನ್ನು ಹೋಗಗೊಟ್ಟು ನಾನಿಲ್ಲಿ ಪ್ರೀತಿಸುತ್ತಲೇ ಉಳಿಯುವುದೆಂದರೆ ಬೆಂಕಿಯನ್ನು ಬೆನ್ನಟ್ಟುವ ಪತಂಗದಂತೆ. ಆದರೆ ಅದು ಸಾವಿನ ಮಾರ್ಗ ಎಂದಾದರೆ ನನಗೆ ಯಾವ ಅಭ್ಯಂತರವೂ ಇಲ್ಲ. ನೀನಿಲ್ಲದೆ ಬದುಕುವುದಕ್ಕಿಂತ ಸಾವಿನ ವಿವಶತೆಯೇ ವಾಸಿ. ಸಾವಿನ ಆನಂತರ…

ಅದೊಂದು ಊಹೆ ಮಾತ್ರ. ಸತ್ತು ಮರಳಿ ಬರುವಂತಿದ್ದಿದ್ದರೆ ಬಹುಶಃ ಸಾವಿನಾನಂತರದ ಎಲ್ಲ ರಹಸ್ಯಗಳೂ ರಹಸ್ಯವಾಗಿ ಉಳಿಯುತ್ತಿರಲಿಲ್ಲ. ಅದೊಂದು ಜಿಜ್ಞಾಸೆಯೇ ಮನುಷ್ಯನನ್ನು ಬದುಕುವಂತೆ, ಸಾವನ್ನ ಎದುರಿಸುವಂತೆ ಪ್ರೇರೇಪಿಸುತ್ತಲೇ ಬಂದಿದೆ.

ಮೊನ್ನೆ ಒಂದು ಭೂಕಂಪವಾಯಿತು. ಮರುದಿನ ಬದುಕನ್ನು ಸುಗಮಗೊಳಿಸುತ್ತಿದ್ದವರಿಗೆ, ನೆಲದೊಡಲಿಂದ ಹೊರಬಿದ್ದ ಶವವೊಂದು ಕಾಣಿಸಿತು. ಅದು ಬಹಳ ವಿಚಿತ್ರವಾಗಿತ್ತು. ಅದರ ಕೂದಲು, ಉಗುರುಗಳು ಉದ್ದವಾಗಿ ಬೆಳೆದಿದ್ದವು. ಹಲ್ಲುಗಳೂ ಹಾಗೇ ಇದ್ದವು. ದೇಹ ಕೊಳೆತಿರಲಿಲ್ಲ. ಚರ್ಮ ಕಪ್ಪಾಗಿತ್ತು. ಅದರ ಟೆಸ್ಟ್ ಮಾಡಿದವರು ಇದೊಂದು ಅತ್ಯಂತ ಹಳೆಯ ಶವ, ಬುದ್ಧಿಸ್ಟ್ ಸನ್ಯಾಸಿಯದ್ದು ಎಂದು ಘೋಶಿಸಿ ಅಚ್ಚರಿಪಟ್ಟರು. ಹಿಂದೆ ಬೌದ್ಧ ಸನ್ಯಾಸಿಗಳು ಹೀಗೆ ಅನೇಕ ನಾರು ಬೇರುಗಳನ್ನು ತಿಂದು ದೇಹದ ಎಲ್ಲ ಬಗೆಯ ಫ್ಲುಯಿಡ್‌ಗಳು ಇಂಗುವಂತೆ ಮಾಡಿಕೊಂಡು ಸಾವನ್ನಪ್ಪುತ್ತಿದ್ದರಂತೆ. ಇದರಿಂದಾಗಿ ದೇಹ ಹಲವಾರು ವರ್ಷಗಳಾದರೂ ಕೊಳೆಯುತ್ತಿರಲಿಲ್ಲವಂತೆ. ತಮ್ಮನ್ನು ತಾವೇ ಒಂದು ಬಗೆಯಲ್ಲಿ ಮಮ್ಮಿಫೈ ಮಾಡಿಕೊಳ್ಳುವ ಟೆಕ್ನಿಕ್ ಇದಾಗಿತ್ತು. ಬಹುಶಃ ಸಾವಿನ ನಂತರದ ಬದುಕಿನ ಜಿಜ್ಞಾಸೆಯೇ ಅದರ ಹಿಂದಿದ್ದ ಕಾರಣವಿರಬಹುದು.

ಇವತ್ತು ಹೀಗೆ ನಮ್ಮ ಕೈಗೆ ಸಿಕ್ಕಿರುವ ಹೆಣವೊಂದಿದೆ. ಅದರ ಅಧ್ಯಯನ ಶುರುವಾಗಿದೆ. ನಂತರ ಯಾವುದೋ ಮ್ಯೂಸಿಯಮ್ಮನ್ನು ಸೇರಲಿದೆ. ಅದೆಷ್ಟೋ ಸಾವಿರ ಮಂದಿ ಅದನ್ನು ನೋಡಲಿದ್ದಾರೆ. ಅದರ ಖಾಸಗಿತನ ಇನ್ನು ಮುಂದೆ ಮಾರಾಟದ ವಸ್ತುವಷ್ಟೇ ಆಗಿ ಉಳಿಯಲಿದೆ. ಆ ವ್ಯಕ್ತಿ ಇದನ್ನೆಲ್ಲ ಬಯಸಿದ್ದನಾ?! ಒಂದು ವೇಳೆ ಇಲ್ಲವಾಗಿದ್ದರೆ?! ಅವನ ಕೊಳೆತಿಲ್ಲದ ಹೃದಯದಲ್ಲಿ ಏನಿತ್ತು?! ಆ ಹೃದಯದಲ್ಲಿದ್ದ ಪ್ರೇಮವೂ ಬಹುಶಃ ಹಾಗೇ ಅದರಲ್ಲಿಯೇ ಉಳಿದಿರಬೇಕು.. ಡೀಕೋಡ್ ಮಾಡಲು ಸಾಧ್ಯವಾಯಿತಾ ನಮ್ಮ ವಿಜ್ಞಾನಿಗಳಿಗೆ?!

ಜೀವಂತ ಹೃದಯಗಳನ್ನೇ ಅರಿಯಲಾರದವರು ನಾವು… ಸತ್ತ ಹೃದಯಗಳನ್ನು ಕತ್ತರಿಸಿಯಾದ ಮೇಲಾದರೂ ಏನನ್ನಾದರೂ ಅರಿತೇವಾ….