ಅವನ ಅತ್ಯಂತ ಸಂತೋಷದ ಸಂಗತಿಯೆಂದರೆ ಪುರೋಹಿತರ ಮಾತುಗಳನ್ನು ಆಲಿಸುವುದಾಗಿತ್ತು. ಬೇರೆ ಹುಡುಗರ ಜತೆ ಹೋಗಿ ಆಡುವುದು ಬಿಟ್ಟು. ಅವನೆಷ್ಟೇ ಮೃದುವಾಗಿದ್ದರೂ ಆ ಹುಡುಗರಿಗೆ ಅವನ ಬಗ್ಗೆ ಸಂದೇಹ ಇತ್ತು; ಅವನು ಯಾವುದಾದರೊಂದು ಪವಿತ್ರ ಪ್ರದೇಶದಲ್ಲಿ ನೆಲೆಗೊಂಡು, ಚಲಿಸದೆ ಅಥವಾ ಮಾತಾಡದೆ, ದೇವರುಗಳ ಮೂಲ ಮತ್ತು ವಿಶ್ವದ ಸ್ಥಿರತತ್ವ ಮುಂತಾದ ಸಂಗತಿಗಳ ಕುರಿತಾದ ಕೊನೆಯಿಲ್ಲದ ಚರ್ಚೆಗಳನ್ನು ಆಲಿಸುತ್ತಿದ್ದ. ಎಂಟನೇ ವಯಸ್ಸಿಗೇ ಅವನು ವಸ್ತುಗಳ ಮತ್ತು ಮನುಷ್ಯರ ನಡುವೆ ಭೇದಗಳನ್ನು ಮಾಡಬಲ್ಲವನಾಗಿದ್ದ.

 (ಫ್ರೆಂಚ್ ಕಾದಂಬರಿಕಾರ ಜಾನ್ ದ ಓರ್ಮೆನ್ಸನ The Glory of the Empire  ಕೃತಿಯ ಕೆಲವು ಪುಟಗಳು)

ಫಿಲೋಕ್ರೆಟಿಸ್ ಒಬ್ಬ ಗ್ರೀಕನಾಗಿದ್ದ. ಮುರ್ಸಾ ಎಂಬಲ್ಲಿ ಅವನ ಜನನವಾಯಿತು, ಪರ್ಗಮಮ್ ಮತ್ತು ಎಫೀಸಸ್ ನಡುವೆ. ಅವನು ಕುರೂಪಿಯಾಗಿದ್ದ. ಅವನ ತಾಯಿ ಬೆಸ್ತಳಿದ್ದಳು. ಬಂದರಿನ ಸೇತುವಿನ ಬಳಿ ಅವಳು ಮೂವತ್ತು ವರ್ಷ ಕಾಲ ಮೀನು ಮಾರುತ್ತ ಬಂದಿದ್ದಳು. ಒಂದೋ ಎರಡೋ ಡಜನು ದೋಣಿಗಳು ಸೂರ್ಯನು ಉದಿಸುವ ಮುನ್ನ ಹೊರಟು ಅರ್ಧ ದಿನವೋ, ಒಂದು ವಾರವೋ, ಒಂದೆರಡು ತಿಂಗಳು ಕೂಡಾ ಕಿನಾರೆಯ ಉದ್ದಕ್ಕೆ ಅಥವಾ ಸಮುದ್ರದ ಮಧ್ಯಕ್ಕೆ ಸಾಗಿ ಹಿಡಿದು ತಂದ ಮೀನುಗಳು ಅವು. ಕೆಲವು ದೋಣಿಗಳು ಮರಳುತ್ತಿರಲೇ ಇಲ್ಲ. ಇನ್ನು ಕೆಲವು ಅದ್ಭುತವಾದ ಮತ್ಸ್ಯಸಂಪತ್ತಿನೊಂದಿಗೆ ಮರಳಿ ಹೇರಳ ಹಣ ಗಳಿಸುತ್ತಿದ್ದುವು. ಆದರೆ ಇದು ಯಾವುದರಿಂದಲೂ ಅಲ್ಫ್ರಾನಿಯಾಳಿಗೆ ಏನೂ ಲಾಭವಿರಲಿಲ್ಲ. ಜೀವನವೆಲ್ಲಾ ದರಿದ್ರಳಾಗಿರುವುದು ಅವಳಿಗೆ ಬಗೆದಿತ್ತು. ತಾನು ಮೀನು ಮಾರುತ್ತಿದ್ದ ಮರದ ಡಾಬಾ ಕೂಡಾ ಅವಳ ಸ್ವಂತದ್ದಾಗಿರಲಿಲ್ಲ, ಹಾಗೂ ಅವಳು ಗಾಳಿ ಮಳೆ ಸುಡು ಬಿಸಿಲಲ್ಲಿ ಅಲ್ಲಿ ಅವಳ ಕೊಳೆವ ಸಾಧನಗಳ ಹಿಂದೆ ನಿಂತಿರುತ್ತಿದ್ದುದು ತನಗೋಸ್ಕರವಾಗಿಯೂ ಆಗಿರಲಿಲ್ಲ. ಅವೆಲ್ಲವೂ ಅವಳು ಮುಖ ಕೂಡಾ ನೋಡಿರದ ಇಬ್ಬರು ಮೂವರು ವ್ಯಾಪಾರಿಗಳಿಗೆ ಸೇರಿದ್ದಾಗಿದ್ದುವು, ಹಾಗೂ ಅವರು ಅವಳಿಗೆ ತಮ್ಮ ಜಿಪುಣ ಸಂಪಾದನೆಯಿಂದ ದೇಹ ಮತ್ತು ಪ್ರಾಣ ಒಂದಾಗಿರಿಸುವಷ್ಟು ಏನೋ ಸ್ವಲ್ಪ ಪ್ರತಿ ತಿಂಗಳು ಕೊಡುತ್ತಿದ್ದರು.

( ಜಾನ್ ದ ಓರ್ಮೆನ್ಸನ್ (Jean d`Ormesson)

ಸುಖವೆಂದರೇನೆಂದೇ ಅವಳಿಗೆ ಗೊತ್ತಿರಲಿಲ್ಲ, ಆದರೆ ಅವಳೆಂದೂ ಆ ಬಗ್ಗೆ ಹಳವಳಿಸಿದವಳಲ್ಲ. ಅವಳು ತುಂಬಾ ಧಾರ್ಮಿಕಳಿದ್ದಳು, ಹಾಗೂ ಎಲ್ಲವನ್ನೂ ದೇವರಿಗೆ ಬಿಟ್ಟಿದ್ದಳು, ಹಾಗೂ ಹೊಸ ತಿಂಗಳಲ್ಲಿ, ಇಲ್ಲವೇ ಪ್ರತಿ ಋತುವಿನ ಆದಿಯಲ್ಲಿ, ಅಥವಾ ಬಿರುಗಾಳಿಯ ನಂತರ, ಅವಳು ದೇವಾಲಯಗಳ ಹೊರಗೆ ಅಪರೂಪದ ಸಸ್ಯಗಳನ್ನೋ ಅಥವಾ ಅಗರುಬತ್ತಿಗಳನ್ನೋ ಉರಿಸುತ್ತಿದ್ದಳು. ತನ್ನ ಜೀವನದಲ್ಲಿ ಎರಡು ಬಾರಿ ಅವಳು ಸೂರ್ಯ ಮತ್ತು ಚಂದ್ರಗ್ರಹಣಗಳನ್ನು ಕಂಡಿದ್ದಳು, ಭಯದಿಂದಲೂ ಬೆರಗಿನಿಂದಲೂ, ಮತ್ತು ಈ ಗ್ರಹಗಳು ಮತ್ತೆ ಮೊದಲಿನಂತಾದಾಗ, ಜಗತ್ತನ್ನು ಸಾಗಲು ಬಿಡುವ ದೇವರುಗಳಿಗೆ ಕೃತಜ್ಞತೆ ಅರ್ಪಿಸಲು ಆಸ್ತಿಕರ ಜತೆ ಹೋಗಿದ್ದಳು.

ಪೆಡಂಬೂತಗಳು ಮತ್ತು ಅದ್ಭುತಗಳ ಕುರಿತು ಮಾತಾಡುತ್ತಿದ್ದ ನಾವಿಕರ ಮಾತಿಗೆ ಅವಳು ಕಿವಿಗೊಡುತ್ತಿದ್ದಳು, ಹಾಗೂ ಸ್ವಲ್ಪ ಕನಸು ಕಾಣುತ್ತಿದ್ದಳು, ನಿಡು ಸುಯ್ಯುತ್ತಿದ್ದಳು. ಮತ್ತು ಅಲ್ಲಿ ಪ್ರತಿದಿನ ಯಾರು ಏನೆಂದು ಗೊತ್ತಿಲ್ಲದ ಗುಂಪುಗಳಿಗೆ ಮೀನು ಮಾರುವ ಅವಳನ್ನು ಅವಳ ಗಿರಾಕಿಗಳು ಕಾಣುತ್ತಿದ್ದರು; ಇಂಥ ಗುಂಪುಗಳ ಸಂತೋಷದ, ಗಲಾಟೆಯ ಚೈತನ್ಯವೇ ಮುರ್ಸಾಕ್ಕೆ ಅದರ ಉಮೇದು ಮತ್ತು ಉಲ್ಲಾಸದ ಪ್ರಸಿದ್ಧಿಯನ್ನು ತಂದು ಕೊಟ್ಟುದು, ಇದೇ ಪ್ರಯಾಣಿಕರನ್ನೂ ವ್ಯಾಪಾರಿಗಳನ್ನೂ ಅಲ್ಲಿಗೆ ಸೆಳೆಯುತ್ತಿದ್ದುದು.

ಒಂದು ಸಾಯಾಹ್ನ ತೀರದಲ್ಲಿ ಬಿರುಗಾಳಿ ಬೀಸುತ್ತಿದ್ದ ವೇಳೆ, ಡೆಲೋಸ್ ನಿಂದ ಒಂದು ಮೀನು ದೋಣಿ ಬಂದು ಮುರ್ಸಾದ ಬಂದರಿನಲ್ಲಿ ಆಶ್ರಯ ತೆಗೆದುಕೊಂಡಿತು. ಅಲ್ಲಿ ಅದು ಹವೆ ಚೆನ್ನಾಗಲು ಕೆಲವು ದಿನಗಳ ಕಾಲ ತಂಗಬೇಕಾಯಿತು. ದೋಣಿಯ ಚಾಲಕ ಸಿಬ್ಬಂದಿ ಈ ಬಲವಂತ ವಿಶ್ರಾಂತಿಯ ಉಪಯೋಗ ಪಡೆದುಕೊಂಡು ದೋಣಿಯ ಸೆರೆಗಳಿಗೆ ಎಣ್ಣೆ ಸವರಿ ಅದನ್ನು ಸರಿಪಡಿಸುವ ಕೆಲಸದಲ್ಲಿ ತೊಡಗಿದರು, ಯಾಕೆಂದರೆ ದೋಣಿ ಸಾಕಷ್ಟು ಜರ್ಜರಿತ ಪಡೆದಿತ್ತು; ಅಲ್ಲದೆ ಅವರು ತಮ್ಮ ಹಣವನ್ನೂ ಖರ್ಚುಮಾಡಿದರು, ಬೇಟೆ, ಆಟ ಮತ್ತು ಕುಡಿತದಲ್ಲಿ. ಅವರು ಸಿರಿಯಾ, ಫಿನೀಶಿಯಾ, ಮತ್ತು ಕ್ರೀಟಿನಿಂದ ಬಂದವರಾಗಿದ್ದರು, ಹಾಗೂ ದಾರಿಯಲ್ಲಿ ಸೈಪ್ರಸ್ ಮತ್ತು ರ್ಹೋಡ್ಸ್ ಗೂ ಹೋಗಿದ್ದರು. ಕೆಲವರು ಮಾಲ್ಟಾ ಮತ್ತು ಕಾರ್ತೇಜ್ ನ ತನಕವೂ ಹೋಗಿದ್ದರು, ಅಥವಾ ಸಾರ್ಡೀನಿಯಾ ಮತ್ತು ಬಲಿಯಾರಿಕ್ಸ್ ವರೆಗೂ.

ಒಬ್ಬ, ಇತರರಿಗಿಂತಲೂ ಹೆಚ್ಚು ಒರಟನೂ ಮ್ಲಾನವದನನೂ ಆಗಿದ್ದವನು, ಡೆಲ್ಫಿಯಿಂದ ಬಂದಿದ್ದ. ಅವನು ಕೆಟ್ಟ ದಿನಗಳಿಗೆ ಇಳಿದಿದ್ದ ಕಾಲಜ್ಞಾನಿಯೂ ದೇವದಾಸಿಯೂ ಆಗಿದ್ದ ಒಬ್ಬಾಕೆಯ ಮಗ. ತನ್ನ ಒಂಭತ್ತನೇ ವಯಸ್ಸಿಗೆ ಅವನು ಕಡಲಿಗೆ ಇಳಿದಿದ್ದ, ಮತ್ತು ಈಗ ಹದಿನೈದು ವರ್ಷಗಳ ಕಾಲ ಬಂದರಿನಿಂದ ಬಂದರಿಗೆ, ಸಮುದ್ರದಿಂದ ಸಮುದ್ರಕ್ಕೆ ಸಂಚರಿಸುತ್ತಾ ಬಂದಿದ್ದ. ಅವನಿಗೆ ಯಾವುದರಲ್ಲೂ ವಿಶ್ವಾಸವಿರಲಿಲ್ಲ, ಮತ್ತು ಅವನು ಏನನ್ನೂ ಬಯಸುತ್ತಿರಲಿಲ್ಲ. ಹೆಚ್ಚು ಮಾತಾಡುತ್ತಿರಲಿಲ್ಲ, ಮತ್ತು ದೂರದ ಸಮುದ್ರಗಳ ಹಾಗೂ ಅಪರಿಚಿತ ತೀರಗಳ ಕನಸು ಕಾಣುವಂತೆ ತೋರುತ್ತಿದ್ದ. ಅವನಿಂದ ಹೊರಸೂಸುತ್ತಿದ್ದ ಉನ್ಮಾದ ಮತ್ತು ಕಹಿಯ ಮಿಶ್ರಣ ಅಲ್ಫ್ರಾನಿಯಾಳನ್ನು ನಿಬ್ಬೆರಗಾಗಿಸಿತು. ಬಂದರದಲ್ಲೇ ಅವಳು ತನ್ನನ್ನು ಅವನಿಗೆ ಅರ್ಪಿಸಿಬಿಟ್ಟಳು, ಯಾಕೆಂದರೆ ಅವನೂ ಅವಳಂತೆಯೇ ಬಡವನೂ ಒಂಟಿಯೂ ಆಗಿದ್ದ. ಹಾಗೂ ಕಾಮವೆಂದರೇನು ಎನ್ನುವುದು ಅವಳಿಗೆ ಗೊತ್ತಾಯಿತು. ಅವರು ಐದೋ ಆರೋ ಸಲ ದೋಣಿಯಲ್ಲಿ ಇಲ್ಲವೇ ದೇವಾಲಯಗಳ ಹಿಂದೆ, ಬಯಲಲ್ಲಿ ಒಂದಾದರು. ಆಮೇಲೆ ಸೂರ್ಯ ಕಾಣಿಸಲು ಸುರುವಾದ, ಸಮುದ್ರ ಶಾಂತವಾಯಿತು, ಹಾಗೂ ಆ ಮನುಷ್ಯ ತನ್ನ ಸಂಗಡಿಗರ ಜತೆ ಹಾಯಿ ಬಿಡಿಸಿ ಹೊಸ ಬಂದರುಗಳು ಮತ್ತು ಚಂಡಮಾರುತಗಳ ಕಡೆಗೆ ತೆರಳಿದ.

ಅಲ್ಫ್ರಾನಿಯಾ ಕರುಬಲಿಲ್ಲ. ಅವನು ಯಾವ ವಚನಗಳನ್ನೂ ಕೊಟ್ಟಿರಲಿಲ್ಲ, ಮತ್ತು ಅವರ ದರಿದ್ರ ಬದುಕಿನಲ್ಲಿ ಸುಖವೆನ್ನುವುದು ಒಂದು ಚಿಕ್ಕ ವಿರಾಮ ಮಾತ್ರವೇ ಎನ್ನುವುದು ಅವಳಿಗೆ ಗೊತ್ತಿತ್ತು. ಅವಳು ಮೀನು ಮಾರುವ ತನ್ನ ಕಸುಬಿಗೆ ಮರಳಿದಳು; ಆದರೆ ಈಗ ಅವಳಿಗೆ ನೆನಪುಗಳೂ ಅಸ್ಪಷ್ಟವೂ ಪ್ರಕಾಶಮಾನವೂ ಆದ ಸ್ಪಪ್ನಗಳಿದ್ದುವು. ಅವಳು ತಾಳ್ಮೆಯ ವಿರಕ್ತ ಭಾವದಲ್ಲಿ ಕಡಲಿನ ಕಡೆಗೆ ನೋಡುವಳು; ಅವಳು ಖಿನ್ನಳಾಗಿದ್ದುದೇ ಕಡಿಮೆ; ಕೆಲವು ಸಲ ಅವಳು ಸಂತೋಷದಿಂದ ಸಹಾ ಇರುತ್ತಿದ್ದಳು. ಒಂದು ಮುಂಜಾನೆ ಅವಳಿಗೆ ಕಾಲು ಕುಸಿದಂತಾಗಿ ಕ್ಷಣ ಕಾಲ ಮೂರ್ಛೆ ತಪ್ಪಿದಳು. ಕೆಲವೇ ತಿಂಗಳ ನಂತರ ಅವಳು ಮಗನೊಬ್ಬನಿಗೆ ಜನ್ಮವಿತ್ತಳು.

ಹಸುಳೆಯಾಗಿದ್ದ ಕಾಲದಿಂದಲೂ ಫಿಲೋಕ್ರೆಟಿಸ್ ಕುರೂಪಿಯೂ ಒಬ್ಬ ಕನಸುಗಾರನೂ ಆಗಿದ್ದ. ಅವನ ಕೆಲಸಗಳು ಬಡ್ಡು ಬಡ್ಡಾಗಿದ್ದುವು, ದೃಷ್ಟಿ ಅಷ್ಟೇನೂ ಚೆನ್ನಾಗಿರಲಿಲ್ಲ, ಹಾಗೂ ಅವನು ಭವಿಷ್ಯದ ಬಗ್ಗೆ ಏನೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಗೆಲ್ಲುವುದು, ಮೊದಲು ಬರುವುದು ಅವನ ಮಟ್ಟಿಗೆ ಅನಾಸಕ್ತಿಯ ಸಂಗತಿಗಳಾಗಿದ್ದುವು. ಇತರರಷ್ಟು ವೇಗವಾಗಿ ಅವನಿಗೆ ಈಜಲು, ಓಡಲು ಬರುತ್ತಿರಲಿಲ್ಲ; ಭಯಪಡಲು ಅವನಿಗೆ ಸಂಕೋಚವೇನೂ ಅನಿಸುತ್ತಿರಲಿಲ್ಲ; ಮತ್ತು ಮಗುವಾಗಿದ್ದಾಗಿಂದಲೇ ಅವನಿಗೆ ಹಣ ಮತ್ತು ಪ್ರಸಿದ್ಧಿ ಎಂದರೆ ದ್ವೇಷ. ಅವನ ತಾಯಿಯ ಬಗ್ಗೆ ಆದರವಿದ್ದ ಕೆಲವು ಪುರೋಹಿತರು ದೇವಾಲಯಗಳ ಆಚೀಚೆ ಅವನಿಗೆ ಕೆಲವು ಸಣ್ಣ ಪುಟ್ಟ ಚಾಕರಿಗಳನ್ನು ಕೊಡಮಾಡಿದರು, ಅದು ಅವನಿಗೊಂದು ಜೀವನೋಪಾಯ ಒದಗಿಸಿತು. ಅವನಿಗೆ ಆರೋ ಏಳೋ ವರ್ಷಗಳಾದಾಗ, ಅವನು ಭಕ್ತರ ಕಸ ಗುಡಿಸುವುದು, ವಿಶಿಷ್ಟ ಸಂಜೆ ಸಮಾರಂಭಗಳಲ್ಲಿ ಬೆಳಕು ಹಚ್ಚುವುದು ಮುಂತಾದವನ್ನು ಮಾಡುತ್ತಿದ್ದ. ಅವನು ಗಂಟೆಗಟ್ಟಲೆ ಹೊತ್ತು ದೇವಾಲಯಗಳ ಸೋಪಾನಗಳ ಮೇಲೆ ಕೂತಿರುತ್ತಿದ್ದ, ಚಲನೆಯಿಲ್ಲದೆ ಮತ್ತು ಸುಮ್ಮನೆ ಶೂನ್ಯವನ್ನು ದೃಷ್ಟಿಸುತ್ತ. ಯಾರಾದರೂ ಆರಾಧಕರೋ ದಾರಿಹೋಕರೋ “ಏನು ಯೋಚಿಸ್ತಾ ಇದ್ದೀ?” ಎಂದು ಕೇಳಿದರೆ, ಸುಮ್ಮನೆ ನಸುನಗುತ್ತಿದ್ದ ಮಾತ್ರ. ಹಲವರು ಅವನನ್ನು ಮಂದಬುದ್ಧಿ ಅಥವಾ ಏನೋ ಕೊರತೆಯುಳ್ಳವ ಎಂದು ತಿಳಿದುಕೊಂಡಿದ್ದರು, ಮತ್ತು ಹಾಗೆ ಅಂದುಕೊಳ್ಳುವುದು ಸುಲಭವೇ ಆಗಿತ್ತು.

ಅವನ ಅತ್ಯಂತ ಸಂತೋಷದ ಸಂಗತಿಯೆಂದರೆ ಪುರೋಹಿತರ ಮಾತುಗಳನ್ನು ಆಲಿಸುವುದಾಗಿತ್ತು. ಬೇರೆ ಹುಡುಗರ ಜತೆ ಹೋಗಿ ಆಡುವುದು ಬಿಟ್ಟು, ಅವನೆಷ್ಟೇ ಮೃದುವಾಗಿದ್ದರೂ ಆ ಹುಡುಗರಿಗೆ ಅವನ ಬಗ್ಗೆ ಸಂದೇಹ ಇತ್ತು; ಅವನು ಯಾವುದಾದರೊಂದು ಪವಿತ್ರ ಪ್ರದೇಶದಲ್ಲಿ ನೆಲೆಗೊಂಡು, ಚಲಿಸದೆ ಅಥವಾ ಮಾತಾಡದೆ, ದೇವರುಗಳ ಮೂಲ ಮತ್ತು ವಿಶ್ವದ ಸ್ಥಿರತತ್ವ ಮುಂತಾದ ಸಂಗತಿಗಳ ಕುರಿತಾದ ಕೊನೆಯಿಲ್ಲದ ಚರ್ಚೆಗಳನ್ನು ಆಲಿಸುತ್ತಿದ್ದ. ಎಂಟನೇ ವಯಸ್ಸಿಗೇ ಅವನು ವಸ್ತುಗಳ ಮತ್ತು ಮನುಷ್ಯರ ನಡುವೆ ಭೇದಗಳನ್ನು ಮಾಡಬಲ್ಲವನಾಗಿದ್ದ. ಅವನು ಹಲವರನ್ನು ತಿರಸ್ಕರಿಸಿದ್ದ, ಆದರೆ ಆರಾಧಿಸಿದಾಗ ಅವನು ಅವನ ವಯಸ್ಸಿಗೆ ಅಪರೂಪವಾದ ರೀತಿಯಲ್ಲಿ ಆರ್ತತೆಯಿಂದಲೂ ನಿಷ್ಠೆಯಿಂದಲೂ ಆರಾಧಿಸುತ್ತಿದ್ದ.

ಆ ಕಾಲದಲ್ಲಿ, ಹಲವಾರು ಮೂಡಲ ಮತ್ತು ಭೂಮಧ್ಯದ ಪಟ್ಟಣಗಳಂತೆಯೇ, ಮುರ್ಸಾ ಕೂಡಾ ಇಬ್ಭಾಗವಾಗಿತ್ತು, ಹರ್ಮೆನೈಡೀಸ್ ಮತ್ತು ಪರಾಕ್ಲಿಟರ್ಸ್ ನಡುವಣ ಪ್ರಖ್ಯಾತ ಜಗಳದಿಂದ; ಆಗಿನ ಕಾಲಕ್ಕಾಗಲೇ ಅದು ದೂರವೂ ಹಳತೂ ಆಗಿತ್ತಾದರೂ ಸಹಾ. ಓದುಗರು ಪ್ರಾಯಶಃ ನೆನಪಿಗೆ ತಂದುಕೊಳ್ಳಬಹುದು, ನಗರದ ಸ್ವರ್ಣಯುಗದಲ್ಲಿ ಈ ಇಬ್ಬರು ತತ್ವಜ್ಞಾನಿಗಳು ವಹಿಸಿದ ಪಾತ್ರವನ್ನು. ಅವರು ಸ್ಥಾಪಿಸಿದ ಪಂಥಗಳು ಹಲವು ಏರಿಳಿತಗಳನ್ನು ಕಂಡಿದ್ದುವು, ಹಲವು ಅವತಾರಗಳನ್ನು ತಳೆದಿದ್ದುವು ಹಾಗೂ ಇನ್ನೂ ಅಸ್ತಿತ್ವದಲ್ಲಿದ್ದುವು; ಅಷ್ಟೇ ಅಲ್ಲ, ಅವು ಬೆಳವಣಿಗೆಗೊಂಡಿದ್ದುವು ಹಾಗೂ ಹರಡಿದ್ದುವು ಕೂಡಾ. ಲೆಕ್ಕವಿಲ್ಲದಷ್ಟು ಪಂಥಗಳೂ ಪಂಗಡಗಳೂ ಬೇರೆ ಬೇರೆ ಚಿಂತಕರ ಮತ್ತು ಪದ್ಧತಿಗಳ ನಡುವಣ ಸಂಬಂಧಗಳನ್ನು ಕ್ಲಿಷ್ಟಗೊಳಿಸಿದ್ದುವು, ಮತ್ತು ಅವರ ಕಾದಾಟಗಳು, ಅವರ ಪರಸ್ಪರ ಸಮ್ಮತಿಗಳು ಮತ್ತು ವಿರೋಧಗಳು, ಹಾಗೂ ಜಗತ್ತಿನ ಇತಿಹಾಸದ ಕುರಿತಾದ ಮತ್ತು ದೇವತೆಗಳು ಮತ್ತು ಮನುಷ್ಯರ ಸಂಬಂಧಗಳ ಬಗೆಗಿನ ಅವರ ಸಿದ್ಧಾಂತಗಳು ಸಾಕಷ್ಟು ದೊಡ್ಡದಾದ ಸಾಹಿತ್ಯ ರಾಶಿಗೆ ಕಾರಣವಾಗಿದ್ದುವು. ವಸ್ತುಗಳ ಪ್ರಕೃತಿಭಾವ ಮತ್ತು ಆತ್ಮದ ಭವಿಷ್ಯವನ್ನು ವಿವರಿಸುವ ಪಠ್ಯಗಳನ್ನು, ಅವುಗಳಲ್ಲಿ ಹಲವು ಪರಸ್ಪರ ವಿರುದ್ಧವಾದ ವಾದವಿವಾದಗಳಿದ್ದರೂ, ಕೆಲವು ಪುರೋಹಿತರ ಸಹಾಯದಿಂದ ಫಿಲೋಕ್ರೆಟಿಸ್ ಓದಲು ಕಲಿತಿದ್ದ. ಮುಕ್ತ ಇಚ್ಛಾಶಕ್ತಿ, ಮೋಕ್ಷ, ಅಸ್ಮಿತೆ ಮತ್ತು ಪ್ರತ್ಯೇಕತೆ, ಏಕ ಮತ್ತು ಅನೇಕ, ಮಿಶ್ರ, ಮಧ್ಯಸ್ಥಿಕೆ, ಪೂರ್ವಪಕ್ಷ ಉತ್ತರಪಕ್ಷ, ವಿಶ್ವಾತ್ಮಕ ಸಾಂಗತ್ಯ ಮುಂತಾದ ವಿಚಾರಗಳು ಅವನಿಗೆ ಇತರ ಹುಡುಗರಿಗೆ ಚಿಣ್ಣಿ ದಾಂಡುಗಳು ಪರಿಚಯವಿರುವಷ್ಟೇ ಪರಿಚಯವಿದ್ದುವು.

ಒಂದು ಮುಂಜಾನೆ, ಯಾವುದೋ ಒಂದು ಪವಿತ್ರ ಕ್ರಿಯಾವುಧಿಗಾಗಿ ತಯಾರಿಗಳು ನಡೆಯುತ್ತಿದ್ದ ವೇಳೆ, ಆಗ ಹನ್ನೆರಡು ವರ್ಷಗಳಾಗಿದ್ದ ಫಿಲೋಕ್ರೆಟಿಸ್ ದೇಶದ ಎಲ್ಲೆಡೆಗಳಿಂದ ಪುರೋಹಿತರು ಬಂದು ಸೇರಿದ್ದ ಪ್ರಾಂಗಣವೊಂದನ್ನು ಪ್ರವೇಶಿಸುವುದರಲ್ಲಿ ಯಶಸ್ವಿಯಾದ; ಜನರಿಗೆ ಕಾಣಿಸಿಕೊಳ್ಳುವ ಮೊದಲು ಆ ಪುರೋಹಿತರು ಅಲ್ಲಿ ಖಾಸಗಿಯಾಗಿ ಸಭೆ ಸೇರಿದ್ದರು. ಸಾಮ್ರಾಟ ಬೇಸಿಲ್ ಕಳಿಸಿಕೊಟ್ಟಿದ್ದ ಒಬ್ಬ ಯುವ ಪುರೋಹಿತನ ಮಾತುಗಳನ್ನು ಫಿಲೋಕ್ರೆಟಿಸ್ ಪರವಶತೆಯಿಂದ ಕೇಳಿದ; ಈ ಪುರೋಹಿತನು ಮನುಷ್ಯನ ಅದೃಷ್ಟ ಮತ್ತು ಆತ್ಮಗೌರವದ ಬಗ್ಗೆ ಮಾತಾಡುತ್ತಿದ್ದ. ಮಾತಾಡಿ ಮುಗಿದ ಕೂಡಲೇ ಅವನು ಈ ಹುಡುಗನಿಗೆ ಹೇಳಿಕಳಿಸಿದ. ಮುರ್ಸಾದ ಒಬ್ಬ ವೃದ್ಧ ಪುರೋಹಿತ ಹುಡುಗನನ್ನು ಕರೆದುಕೊಂಡು ಬಂದು ಯುವ ಪುರೋಹಿತನ ಕಿವಿಯಲ್ಲಿ ಈ ಹುಡುಗ ಒಂದು ತರದ ಹೆಡ್ಡನೆಂದೂ, ಕೇವಲ ದಯೆಯಿಂದ ಮಾತ್ರವೇ ಅವರು ಅವನನ್ನು ದೇವಾಲಯದ ಒಳಗೆ ಬಿಡುತ್ತಿದ್ದುದು ಎಂದೂ ಪಿಸುಗುಟ್ಟಿದ. ಯುವ ಪುರೋಹಿತ ಅಸಹನೆಯ ಸನ್ನೆ ಮಾಡಿ, ತಮ್ಮಿಬ್ಬರನ್ನೂ ಬಿಟ್ಟು ಹೋಗುವಂತೆ ಹೇಳಿದ.

ಅವನು ಕರುಣೆಯಿಂದ ಅಂದ: “ಮಗೂ, ನೀನು ನನ್ನ ಮಾತನ್ನು ಆಲಿಸುತ್ತಿದ್ದೆ, ಮತ್ತು ನಾನು ನಿನ್ನನ್ನು ನೋಡುತ್ತಿದ್ದೆ. ಮತ್ತು ನನಗನಿಸುತ್ತದೆ, ನನ್ನ ಮಾತಿಗಿಂತ ನಿನ್ನ ಮುಖವೇ ಹೆಚ್ಚು ಹೇಳುತ್ತಿತ್ತು ಎಂದು.”

“ಸ್ವಾಮಿ, ನನಗೆ ಎಲ್ಲಕ್ಕಿಂತ ಮಾತುಗಳೆಂದರೆ ಇಷ್ಟ, ನಿಮ್ಮ ಮಾತುಗಳು ನನ್ನ ಕಿವಿಗೆ ಸಂಗೀತದಂತೆ ಇದ್ದುವು, ಜೇನಿನಂತೆ. ನೀವು ಮಾತಾಡಿದಿರಿ, ನನಗೆ ಅರ್ಥವಾಯಿತು,” ಎಂದು ತೊದಲಿದ ಫಿಲೋಕ್ರೆಟಿಸ್.

“ನಿನಗೆ ಅರ್ಥವಾದ್ದೇನು ಹೇಳಬಹುದೇ?” ಮುಗುಳುನಗುತ್ತ, ಹುಡುಗನ ತಲೆಗೂದಲು ನೇವರಿಸುತ್ತ ಪುರೋಹಿತ ಕೇಳಿದ.

ಅವನು ಕೆಟ್ಟ ದಿನಗಳಿಗೆ ಇಳಿದಿದ್ದ ಕಾಲಜ್ಞಾನಿಯೂ ದೇವದಾಸಿಯೂ ಆಗಿದ್ದ ಒಬ್ಬಾಕೆಯ ಮಗ. ತನ್ನ ಒಂಭತ್ತನೇ ವಯಸ್ಸಿಗೆ ಅವನು ಕಡಲಿಗೆ ಇಳಿದಿದ್ದ, ಮತ್ತು ಈಗ ಹದಿನೈದು ವರ್ಷಗಳ ಕಾಲ ಬಂದರಿನಿಂದ ಬಂದರಿಗೆ, ಸಮುದ್ರದಿಂದ ಸಮುದ್ರಕ್ಕೆ ಸಂಚರಿಸುತ್ತಾ ಬಂದಿದ್ದ.

“ಆಕಾಶ ತೆರೆದು ಅದರಲ್ಲಿ ಬರೆದಿದ್ದ ವಸ್ತು ತತ್ವಗಳು ನನ್ನ ಮುಂದೆ ಬಿಚ್ಚಿದಂತೆ ತೋರಿತು ನನಗೆ, ಸೂರ್ಯನ ಸುತ್ತಣ ನಕ್ಷತ್ರಗಳಂತೆ. ನೀವು ಸೌಂದರ್ಯದ ಬಗ್ಗೆ ಮತ್ತು ಮನುಷ್ಯರ ಆತ್ಮಗೌರವದ ಬಗ್ಗೆ ಮಾತಾಡಿದಿರಿ, ನನಗೆ ಅಳಬೇಕೆಂದೆನಿಸಿತು.”

“ಎಷ್ಟು ವರ್ಷ ನಿನಗೆ?” ಪುರೋಹಿತ ಕೇಳಿದ.
“ಹನ್ನೆರಡು, ಸ್ವಾಮಿ.”
“ದೊಡ್ಡವನಾದ ಮೇಲೆ ಏನು ಮಾಡಬೇಕೆಂದಿರುವಿ?”
“ನಿಮ್ಮಂತೆ ಕಲೀಬೇಕು, ನಿಮ್ಮಂತೆ ತಿಳೀಬೇಕು.”
“ನನಗೇನೂ ಗೊತ್ತಿಲ್ಲ,” ಎಂದ ಪುರೋಹಿತ. ಅವನೀಗ ನಗುತ್ತಿರಲಿಲ್ಲ.
“ಕಲೀಬೇಕೆಂದು ನನಗೆ ಆಸೆ,” ಎಂದಿತು ಮಗು.

“ನೀನು ಮಾತು ಕಲಿತು, ನಿನಗೆ ಗೊತ್ತಿಲ್ಲದ್ದನ್ನ ಮುಚ್ಚಿಡಲು ಬಯಸುವಿಯಾ? ವಾದಿಸಿ, ನಂಬಿಸಿ ಇತರರಿಗಿಂತ ಒಂದು ತೂಕ ಹೆಚ್ಚೆಂದು ಎನಿಸಿಕೊಳ್ಳಲು ಬಯಸುವಿಯಾ? ಹಾಗಿದ್ದರೆ ನಾನು ನಿನಗೆ ಕಲಿಸುವೆ.”

“ಓ, ಇಲ್ಲ, ನನ್ನ ಸ್ವಾಮಿ!” ಹುಡುಗ ತಡವಿಲ್ಲದೆ ನುಡಿದ. “ನನಗೆ ನಂಬಿಸಬೇಕೆಂದೋ ಇತರರಿಗಿಂತ ಒಂದು ತೂಕ ಹೆಚ್ಚೆನಿಸಬೇಕೆಂದೋ ಇಲ್ಲ. ಎಷ್ಟರ ವರೆಗೆ ತಿಳೀಬಹುದು ಎಂದು ನಾನು ತಿಳಿಯುವುದಷ್ಟೇ ನನಗೆ ಸಾಕು.”

ಪುರೋಹಿತ ಹುಡುಗನ ಮುಖ ನೋಡಿ ಅವನ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡ.

“ನೀನು ನಿಜಕ್ಕೂ ಬಯಸುವುದು ಅದನ್ನೇ ಏನು?”
“ಅಷ್ಟೆ” ಎಂದ ಹುಡುಗ.
“ಅದರರ್ಥ ಸಂಕಟಪಡುವುದು ಸಹಾ,” ಎಂದ ಪುರೋಹಿತ.

“ಸಂಕಟಪಡುವುದು?” ಎಂದ ಹುಡುಗ. “ತಿಳಿಯದೆ ಇರುವುದೂ ಸಂಕಟಪಡುವುದೇ. ನಾನು ತಿಳಿದು ಸಂಕಟಪಡಲು ಬಯಸುವೆ, ತಿಳಿಯದೆ ಸಂಕಟಪಡುವುದಕ್ಕಿಂತ.”

“ನಿನಗೆ ಒಂದು ಮಾತ್ರ ತಿಳಿಯುವುದು, ನಿನಗೇನೂ ತಿಳಿದಿಲ್ಲ ಎನ್ನುವುದು.”
“ಅದು ತಾನಾಗಿಯೇ ಒಂದು ಜ್ಞಾನ,” ಎಂದ ಹುಡುಗ.
ಪುರೋಹಿತ ಒಂದು ಕ್ಷಣ ಮತಾಡದೆ ಇದ್ದ.
“ನನಗೊಬ್ಬ ಮಗನಿರುತ್ತಿದ್ದರೆ ಅವ ನಿನ್ನಂತಿರಲು ನಾನು ಬಯಸುತ್ತಿದ್ದೆ,” ಎಂದ.

ಹುಡುಗ ಪುರೋಹಿತನ ಮುಖ ನೋಡಿದ. ಇಬ್ಬರೂ ನಿಶ್ಚಲ ನಿಂತಿದ್ದರು, ಆಮೇಲೆ ಮಗು ಪುರೋಹಿತನ ತೋಳುಗಳಿಗೆ ಬಿದ್ದು ಅಳಲು ಸುರುಮಾಡಿತು. ಬಿಕ್ಕುತ್ತಿದ್ದ ಆ ಚಿಕ್ಕ ಕಾಯವನ್ನು ಪುರೋಹಿತ ತನಗೆ ಒತ್ತಿಕೊಂಡ, ಅವನ ಕಡೆಗಾಗಿ ಮೇಲೆತ್ತಿದ್ದ ಶಿರದ ಜಡೆಗಟ್ಟಿದ ಕಪ್ಪು ಕೂದಲನ್ನು ಮೆಲ್ಲನೆ ತಟ್ಟಿದ. ಹೊರಗೆ ಭಕ್ತರು ಪ್ರಾಂಗಣ ಸುತ್ತುತ್ತ ಪಠಿಸುವ ಮಂತ್ರ ಕೇಳಿಸುತ್ತಿತ್ತು. ಪುರೋಹಿತ ಮಗುವನ್ನು ಕೆಳಗಿಳಿಸಿ ಅವನ ಹಣೆಯನ್ನು ಚುಂಬಿಸಿದ.

“ಬಾ.”

ಮತ್ತು ಅವರಿಬ್ಬರೂ ಒಟ್ಟಿಗೇ ಹೊರ ಹೊರಟರು.

ಜನರ ಗುಂಪು ಅವರಿಗೆ ದಾರಿ ಬಿಟ್ಟುಕೊಟ್ಟಿತು, ಮತ್ತು ಅವರು ಕೈ ಕೈ ಹಿಡಿದು ಪುರೋಹಿತರುಗಳ ಮೊದಲ ಸಾಲನ್ನು ತಲಪಿದಾಗ ಅವರೂ ಇಬ್ಬರಿಗೂ ಜಾಗ ಮಾಡಿಕೊಟ್ಟರು.

“ನನಗೊಬ್ಬ ಶಿಷ್ಯನಿದ್ದಾನೆ,” ಎಂದು ನಗಾಡಿದ ಆ ಯುವ ಪುರೋಹಿತ.

ಫಿಲೋಕ್ರೇಟಸ್ ಗೆ ಸ್ವರ್ಗ ಸಿಕ್ಕಂತಾಯಿತು. ಅವನು ಪುರೋಹಿತನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಅಳುವನ್ನು ಹತ್ತಿಕ್ಕಲು ಸೂರ್ಯನ ಕಡೆ ನೋಡಿದ.

ಮೆರವಣಿಗೆ ಮುಂದುವರಿಯಿತು, ಮಂತ್ರಪಠಿಸುವ ಪುರೋಹಿತರ ಮಾರ್ಗದರ್ಶನದಲ್ಲಿ, ಅವರ ಮಂತ್ರಗಳನ್ನು ಮಂದಿ ಒಕ್ಕೊರಳಲ್ಲಿ ಪುನರುಚ್ಚರಿಸುತ್ತಿದ್ದರು. ಅವರು ವೇದಿಕೆಯ ಬಳಿ ಬಂದರು, ಅಲ್ಲಿ ದೇವರುಗಳಿಗೊಂದು ಬಲಿ ಸಿದ್ಧವಾಗಿತ್ತು, ಅದು ಸಂಕ್ರಮಣವನ್ನು ಮತ್ತು ಬಂಡುಕೋರ ಪಟ್ಟಣವೊಂದರ ಮೇಲೆ ಈಚೆಗೆ ಸಾಧಿಸಿದ ಗೆಲುವನ್ನು ಆಘೋಷಿಸುವುದಕ್ಕೆ. ತೀರಾ ನಿರಭ್ರವಾಗಿದ್ದ ಆಕಾಶದಲ್ಲಿ ಕಣ್ಣು ಕೋರೈಸುವ ಸೂರ್ಯ ಕಾಣಿಸಿದ. ಪುರೋಹಿತರು ಕೆಲವು ಮೆಟ್ಟಲುಗಳನ್ನು ಹತ್ತಿದರು. ವೇದಿಕೆಯ ತಳದಲ್ಲಿ ಒಂದು ಬಿಳಿಯ ಗಡಸು, ಒಂದು ಗಂಡು ಆಡು, ಮತ್ತು ಸಂಕಲೆಯಲ್ಲಿದ್ದ ಆರು ಜನ ಬಂದಿಗಳಿದ್ದರು. ಈ ಬಂದಿಗಳಲ್ಲಿ ಇಬ್ಬರು ನೋಡಲು ಆಕರ್ಷಕರಾಗಿದ್ದರು, ಅವರ ಭಂಗಿಯಲ್ಲಿ ನೆಟ್ಟ ಗರ್ವವಿತ್ತು. ಇನ್ನುಳಿದವರು ಕಷ್ಟ ಕಾರ್ಪಣ್ಯದಿಂದ ಕಂಗೆಟ್ಟುಹೋದವರಂತೆ ಇದ್ದರು, ಅವರು ಭೀತಿ ತುಂಬಿದ ನೋಟದಿಂದ ಆಚೀಚೆ ನೋಡುತ್ತಿದ್ದರು. ಬಲಿ ಕೊಡುವವರು ಎದ್ದು ನಿಂತರು, ಪ್ರತಿಯೊಬ್ಬನೂ ಅರ್ಧದವರೆಗೆ ಬಿಳಿ, ಅರ್ಧದವರೆಗೆ ಕೆಂಪು ಬಟ್ಟೆಗಳನ್ನು ತೊಟ್ಟಿದ್ದರು, ಕೈಯಲ್ಲೊಂದು ಕತ್ತಿಯಿತ್ತು. ಮೃಗಗಳನ್ನೂ ಮನುಷ್ಯರನ್ನೂ ಒಟ್ಟಿಗೇ ಕೊಲ್ಲಲಾಯಿತು, ಮತ್ತು ಅವರ ನೆತ್ತರನ್ನು ಬಲಿ ಕೊಟ್ಟವರ ಹಾಗೂ ಪುರೋಹಿತರ ವಸ್ತ್ರಗಳ ಮೇಲೆ ಹರಿಯಲು ಬಿಡಲಾಯಿತು. ಫಿಲೋಕ್ರೇಟಸ್ ನನ್ನೂ ಆ ನೆತ್ತರು ತೊಯ್ದಿತು. ಅವನು ತಲೆ ತಿರುಗಿಸಿದ, ಹತ್ತಿರ ಇದ್ದ ಆ ಯುವ ಪುರೋಹಿತನ ಕೈಯನ್ನು ಬರಸೆಳೆದುಕೊಂಡ. ಮಂದಿ ಮತ್ತೆ ಮಂತ್ರ ಹೇಳಲು ಸುರುಮಾಡಿದರು.

“ನೆತ್ತರು… ,” ಎಂದ ಹುಡುಗ ಉಬ್ಬಸಪಡುತ್ತ.

“ಧೈರ್ಯ… ,” ಎಂದು ಪುರೋಹಿತ ಮರ್ಮರಿಸಿದ. ಮತ್ತು ತನ್ನ ಕೈಯಲ್ಲಿ ನಡುಗುತ್ತಿದ್ದ ಆ ಸಣ್ಣ ಕೈಯನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡ.

ಎಂಟು ಜನ ಪುರೋಹಿತರು, ಮುಖಗಳನ್ನು ಮುಖವಾಡಗಳಲ್ಲಿ ಮರೆಸಿಕೊಂಡು, ಮತ್ತು ಚಮಚದ ತರದ ಕತ್ತಿಗಳನ್ನು ಕೈಯಲ್ಲಿ ಹಿಡಿದುಕೊಂಡು, ಶವಗಳನ್ನು ಸಮೀಪಿಸಿದರು. ಒಂದುಗೂಡಿ ಅವರು ಎಂಟು ಹೃದಯಗಳನ್ನು ಕಿತ್ತು ತೆಗೆದು ಜನಸಮೂಹದತ್ತ ಬಿಸಾಕಿದರು, ಜನ ಚಪ್ಪಾಳೆ ತಟ್ಟಿ ಆನಂದದಿಂದ ಕೂಗಿದರು.

“ಯಾಕೆ?” ಎಂದಿತು ಮಗು, ಪುರೋಹಿತನ ಮುಖ ನೋಡಿ. “ಯಾಕೆ?”

“ಅದು ಚರಿತ್ರೆಯ ರಹಸ್ಯ,” ಎಂದ ಪುರೋಹಿತ, ಅವನ ಕಡೆಗಾಗಿ ಹತ್ತಿರಕ್ಕೆ ಬಾಗಿ. “ಧರ್ಮ ಅನ್ನೋದು ಚರಿತ್ರೆಯ ರಹಸ್ಯ. ಭವಿಷ್ಯ ವರ್ತಮಾನವನ್ನು ವಿವರಿಸೀತು. ಆದರೆ ಅದನ್ನೆಂದೂ ಅರ್ಥಮಾಡಿಕೊಳ್ಳಲಾರದು. ಬಹುಶಃ ನೀನದನ್ನೆಲ್ಲ ಬದಲಾಯಿಸಬಹುದು. ಆದರೆ ಮುಂದೆ ಇತರರು ಬರುತ್ತಾರೆ, ಅವರ ಪಾಳಿಯಲ್ಲಿ ನಿನ್ನನ್ನು ಅವರು ವಿವರಿಸುತ್ತಾರೆ. ಆದರೆ ಅವರು ನಿನ್ನನ್ನೂ ಸಹಾ ಅರ್ಥಮಾಡಿಕೊಳ್ಳಲಾರರು.”

ನಿಧಾನವಾಗಿ ಕೂಗಾಟ ಮತ್ತು ಉನ್ಮಾದ ನಿಂತಿತು. ಆ ಎಂಟು ಹೃದಯಗಳು ಕೈಯಿಂದ ಕೈಗೆ ದಾಟಿದುವು, ರಕ್ತದ ಕಲೆಯನ್ನು ಎದೆ ಮೇಲೆ, ಹಣೆ ಮೇಲೆ ಕಾಣಬಹುದಾಗಿತ್ತು.

ಇಬ್ಬರು ಇಳಿವಯಸ್ಸಿನವರು ಬಂದು ಸಾಮ್ರಾಟ ಕಳಿಸಿದ ಯುವ ಪುರೋಹಿತನಿಗೆ ವಂದಿಸಿ ನಿಂತರು. ಅವನು ಅವರಿಗೆ ಪ್ರತಿವಂದಿಸಿ ಜನಸಮೂಹದ ಆಘೋಷಕ್ಕೆ ಉತ್ತರವಾಗಿ ಎರಡು ಹೆಜ್ಜೆ ಹಾಕಿ ವೇದಿಕೆಯ ಮುಂದೆ ಬಂದ. ಅವನೊಬ್ಬನೇ ವೇದಿಕೆಯ ಮುಂದೆ ನಿಂತಾಗ ಜನರ ಕೂಗು ಇಮ್ಮಡಿಯಾಯಿತು. ಅವನು ಥೌಮಾಸ್ ನಿಂದ ಒಂದು ಸಂದೇಶ ತಂದಿದ್ದ. ಥೌಮಾಸ್ ನ ಕೀರ್ತಿ ಕ್ಟೆಸಿಫೋನ್ ಇಲ್ಲವೇ ಅಲೆಕ್ಝಾಂಡ್ರಿಯಾದಲ್ಲಿ, ಕೆಸರಾ ಇಲ್ಲವೇ ಬ್ಯಾಬಿಲೋನ್ನಲ್ಲಿ ಇದ್ದಷ್ಟೇ ಮುರ್ಸಾದಲ್ಲೂ ಪ್ರಸಿದ್ಧವಾಗಿತ್ತು. ಗಂಡಸರು, ಹೆಂಗಸರು, ಮಕ್ಕಳಾದಿಯಾಗಿ ಎಲ್ಲರೂ ಚಪ್ಪಾಳೆ ತಟ್ಟಿ, “ಥೌಮಾಸ್… ಥೌಮಾಸ್… ” ಎಂದು ಕೂಗಾಡಿದರು. ಇದರ ಜತೆಗೆ ಇನ್ನೊಂದು ಹೆಸರೂ ಸೇರಿಕೊಂಡಿತು. ಆ ಯುವ ಪುರೋಹಿತನ ಹೆಸರು. ಫಿಲೋಕ್ರೇಟಿಸ್ ಗೆ ಅದು ಸ್ಪಷ್ಟವಾಗದೆ ಅವನು ಕೇಳಿ ನೆನಪಿಟ್ಟುಕೊಳ್ಳಲು ಕಿವಿ ನಿಮಿರಿಸಿ ಆಲಿಸಿದ. ಅವನಿಗೆ ಹೀಗೆ ಗೊತ್ತಾದುದು, ಬಿಸಿಲು ಮತ್ತು ನೆತ್ತರಿನಿಂದ ಮದವೇರಿದ ಆಸ್ತಿಕರ ಅಸಂಖ್ಯ ಕಂಠಗಳಿಂದ, ತನ್ನ ಹೊಸ ಸ್ನೇಹಿತ ಮತ್ತು ರಕ್ಷಕನ ಹೆಸರು. ಗುಂಪು ಕರೆಯುತ್ತಿತ್ತು: “ಥೌಮಾಸ್… ಥೌಮಾಸ್… ” ಹಾಗೂ “ಫೆಬ್ರೀಶಿಯನ್… ಫೆಬ್ರೀಶಿಯನ್… .”