ಕರುಳಬಳ್ಳಿಯನ್ನು ಕಡಿಯುವ ತಾಯಿ ಜಗದಲ್ಲುಂಟೆ? ಡಿ ವಿ ಜಿ ಅವರು ಒಂದುಕಡೆ ಹೇಳುತ್ತಾರೆ “ಕೊಲೆಗಡುಕ ಹುಲಿ ಸಲುಹದೇನ್ ಮರಿಗಳನು”. ಕ್ರೂರಪ್ರಾಣಿ, ಇತರ ಪ್ರಾಣಿಗಳನ್ನು ಕೊಂದು ತಿನ್ನುವ ಹುಲಿ ತನ್ನ ಮರಿಗಳ ವಿಚಾರ ಬಂದಾಗ ಎಷ್ಟು ಮುತುವರ್ಜಿ ವಹಿಸಿ ಸಲುಹಿ ಬೆಳೆಸುತ್ತದೆಯಲ್ಲವೆ? ಪ್ರಾಣಿಗಳೇ ಹೀಗೆಂದ ಮೇಲೆ ಇನ್ನೂ ವಿವೇಚನಾ ಶಕ್ತಿಯುಳ್ಳ ಮನುಷ್ಯ ಹೇಗೆ? ಇಲ್ಲಿ ಮಗು ನೀನು ಕರುಳಬಳ್ಳಿಯನ್ನು ಕಡಿಯಲು ಇಷ್ಟಪಡುವುದಿಲ್ಲ; ಬದಲಿಗೆ ಒಲವೂಡುತ್ತಿರುವೆ ಎನ್ನುತ್ತಿದೆ. ನಿನ್ನ ಒಡಲು ನನಗೆ ರಕ್ಷೆಗೂಡು. ಆ ಗೂಡಲ್ಲಿ ಬೆಚ್ಚಗೆ ಕುಳಿತಿರುವೆ ನಾನು. ನನಗೆ ಹೊರ ಪ್ರಪಂಚವ ನೋಡುವ ಬಯಕೆ ನನ್ನನ್ನು ಹೊರಗೆ ದೂಡು ಎಂದು ಮಗು ಕೇಳಿಕೊಳ್ಳುತ್ತಿದೆ.
ತಾಯಿಯ ಕುರಿತಾದ ಕವಿತೆಗಳ ಕುರಿತು ಮನು ಗುರುಸ್ವಾಮಿ ಬರಹ

ಆಧುನಿಕ ಕನ್ನಡ ಕಾವ್ಯದಲ್ಲಿ ಹೆತ್ತವ್ವನ ಬಗ್ಗೆ ಹಲವು ಕವಿತೆಗಳಿದ್ದರೂ, ತಕ್ಷಣಕ್ಕೆ ನೆನಪಿಗೆ ಬರುವುದೇ ಪಿ.ಲಂಕೇಶರ ‘ಅವ್ವ’ ಕವಿತೆ. “ನನ್ನವ್ವ ಫಲವತ್ತಾದ ಕಪ್ಪು ನೆಲ” ಎಂದೇ ಕವಿತೆ ಆರಂಭಿಸುವ ಲಂಕೇಶ್ ಹೆತ್ತವ್ವನ ಮಹತ್ವವೇನು ಎಂಬುದನ್ನು ಇಡೀ ಪದ್ಯದ ಉದ್ದಗಲಕ್ಕೂ ಪ್ರಸುತಪಡಿಸುತ್ತಾ ಬರುತ್ತಾರೆ. ಅವರ ಪ್ರಕಾರ ಅವ್ವ “ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು” ಆಕೆಗೆ ತನ್ನ ಮಕ್ಕಳ ಮೇಲೆ ಅಪಾರ ಪ್ರೀತಿ. ಮಕ್ಕಳೊದ್ದರೆ ಅದು ಅವಳಿಗೆ ಅವಮಾನವಲ್ಲ; ರೋಮಾಂಚನ.

ಅವ್ವ ತುಂಬಾ ಶ್ರಮಜೀವಿ “ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿ” ಹೊಲಗದ್ದೆಗಳ ನೋಡಿಕೊಂಡು ದುಡಿದವಳು. ಚಿಂದಿ ಸೀರೆಯಲ್ಲೇ ತನ್ನೆಲ್ಲಾ ಯೌವ್ವನವನ್ನು ಕಳೆದವಳು. ಇಂದು ಮುದುಕಿ ನನ್ನವ್ವ ಹಿಂದೆ ಎಷ್ಟೋ ಬಾರಿ ಅತ್ತು ಕರೆದಿದ್ದಾಳೆ ಎನ್ನುವ ಕವಿ, ಅದಕೆ ಕಾರಣವನ್ನೂ ನೀಡಿದ್ದಾನೆ.
“ಎಷ್ಟೋ ಸಲ ಈ ಮುದುಕಿ ಅತ್ತಳು
ಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ” ಎಷ್ಟೋಂದು ಸೂಕ್ಷ್ಮವಾದ ವಿಚಾರ. ನಮ್ಮ ನಿಮ್ಮ ಜೀವನದಲ್ಲೂ ಇಂತಹ ಘಟನೆಗಳು ನಡೆದಿರಬಹುದು. ಆದರೆ ಇಲ್ಲಿ ಕವಿ ಹೇಳುತ್ತಿರುವುದು ತನ್ನ ಹಡೆದವ್ವನ ಕಷ್ಟಕಾರ್ಪಣ್ಯಗಳ ಬಗ್ಗೆ.

ಅದಿರಲಿ ಲಂಕೇಶ್ ತನ್ನ ತಾಯಿಯನ್ನು ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳುವುದಿಲ್ಲ. ತನ್ನವ್ವನಿಗೆ ತನ್ನದೇ ಆದ ವ್ಯಕ್ತಿತ್ವ ಇದೆ ಎನ್ನುವ ಕವಿ ಅದನ್ನು ಹೀಗೆ ನಿರೂಪಿಸಿದ್ದಾರೆ:
ಸತಿ ಸಾವಿತ್ರಿ, ಜಾನಕಿ, ಊರ್ಮಿಳೆಯಲ್ಲ;
ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ
ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ
ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ
ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ.

ಮುಂದೆ ಕವಿ ತನ್ನ ತಾಯಿ “ಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು” ಎನ್ನುತ್ತಾರೆ. ಈ ಸಾಲನ್ನು ಗಮನಿಸಿದಾಗ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ “ಸಣ್ಣ ಸಂಬಳದ ದೊಡ್ಡ ಗಂಡನನ್ನು ಸಾಕುವ ಹೆಣ್ಣಿನ ಕಷ್ಟ; ಸಾಕಿ ಬೈಸಿಕೊಳ್ಳೋ ಅನಿಷ್ಟ” ಎಂಬ ಸಾಲುಗಳೂ ನೆನಪಿಗೆ ಬರುತ್ತದೆ.

ಅವ್ವನಿಗೆ ಎರಡೂ ವಿಚಾರಕ್ಕೆ ಕೋಪ ಬರುತ್ತದೆ. ಒಂದು ಮಗ ಕೆಟ್ಟರೆ, ಮತ್ತೊಂದು ಗಂಡ ಬೇರೆ ಕಡೆ ಹೊರಟರೆ ಎಂಬುದಾಗಿ ಕವಿ ಅಭಿಪ್ರಾಯಿಸಿದ್ದಾರೆ. ನನ್ನವ್ವನಿಗೆ ಭಗವದ್ಗೀತೆಯ ಅವಶ್ಯಕತೆ ಇಲ್ಲ; ಏಕೆಂದರೆ ಹೊಟ್ಟೆಪಾಡಿಗಾಗಿ ಬದುಕಿರುವ ಅವ್ವ ಕಾಳುಕಡ್ಡಿಗೆ, ದುಡಿಮೆಗೆ, ತನ್ನ ಮಕ್ಕಳಿಗಾಗಿ ಬದುಕಿದ್ದಾಳೆ. ಒಂದು ಸೂರು, ಒಂದಿಡಿ ಅನ್ನ, ಅಥವಾ ಒಂದು ರೊಟ್ಟಿ, ಹಚಡನಷ್ಟೇ ಬಯಸುವ ಅವ್ವ ತನ್ನ ಸರಿಸಮಾನರ ಮುಂದೆ ತಲೆಯೆತ್ತಿ ನಡೆಯಲು ಇಷ್ಟಪಡುತ್ತಾಳೆ.

ಹೀಗೆ ದುಡಿದು, ದಣಿದು, ಸಾಕಿ ಬೆಳೆಸಿದ ಅವ್ವ ಮನೆಯಿಂದ ಹೊಲಕ್ಕೆ ಹೋದಂತೆ ಸಾವಿನತ್ತ ಮುಖಮಾಡಿ ತಣ್ಣನೆಯ ಮಾತುಗಳೊಂದಿಗೆ ಮರೆಯಾದದ್ದಕ್ಕೆ ಕವಿ ಕಣ್ಣೀರಿನ ವಿದಾಯವನ್ನು ಹೇಳುತ್ತಾ, ಕವಿತೆಯ ಮೂಲಕ ಮೆಚ್ಚುಗೆಯ ನುಡಿಗಳನ್ನಾಡುತ್ತಾ ತನ್ನನ್ನು ಹೆತ್ತದಕ್ಕೆ, ಸಾಕಿದ್ದಕ್ಕೆ ಈ ಕವಿತೆಯ ಮೂಲಕವೇ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.

ಲಂಕೇಶ್‌ರ ಅವ್ವ ಸಾಮಾನ್ಯಳು; ಅಸಮಾನ್ಯಳು! ಅವಳು ಕನ್ನಡ ಕಾವ್ಯದ ಪುಟಗಳಲ್ಲಿ ಅಮರವಾಗಿ ಉಳಿದಿದ್ದಾಳೆ. ಆಕೆಯ ಅಸ್ತಿತ್ವವನ್ನು ಲಂಕೇಶ್ ಅಷ್ಟೇ ನವಿರಾಗಿ ಕವಿತೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಬಹುಶಃ ಲಂಕೇಶರ ಅವ್ವಳಂತೆ ಇಂದು ನಮ್ಮ ನಿಮ್ಮ ಮನೆಯಲ್ಲೂ ಇಷ್ಟೇ ತ್ಯಾಗಮಯಿಯಾದ ಅವ್ವ ಇದ್ದಾಳೆ. ಅವಳ ಶ್ರಮವನ್ನು ನಾವು ಗೌರವಿಸಬೇಕಾಗಿದೆ.

ಮುಂದೆ ಬಿ ಆರ್ ಲಕ್ಷ್ಮಣರಾವ್ ಅವರ ಒಂದು ಕವಿತೆಯನ್ನು ಇಲ್ಲಿ ಗಮನಿಸಬಹುದು: ‘ಅಮ್ಮ ನಿನ್ನ ಎದೆಯಾಳದಲ್ಲಿ’. ತನ್ನ ತಾಯಿಯ ಗರ್ಭದಲ್ಲಿರುವ ಮಗುವೊಂದು ತನ್ನ ತಾಯಿಯ ಒಡಲು ತನಗೆ ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ಹೇಳುತ್ತಾ ಹೊರಟಿದೆ:
ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು
ಕಡಿಯಲೊಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಭುವಿಯ ಮಾಯೆ

ಕರುಳಬಳ್ಳಿಯನ್ನು ಕಡಿಯುವ ತಾಯಿ ಜಗದಲ್ಲುಂಟೆ? ಡಿ ವಿ ಜಿ ಅವರು ಒಂದುಕಡೆ ಹೇಳುತ್ತಾರೆ “ಕೊಲೆಗಡುಕ ಹುಲಿ ಸಲುಹದೇನ್ ಮರಿಗಳನು”. ಕ್ರೂರಪ್ರಾಣಿ, ಇತರ ಪ್ರಾಣಿಗಳನ್ನು ಕೊಂದು ತಿನ್ನುವ ಹುಲಿ ತನ್ನ ಮರಿಗಳ ವಿಚಾರ ಬಂದಾಗ ಎಷ್ಟು ಮುತುವರ್ಜಿ ವಹಿಸಿ ಸಲುಹಿ ಬೆಳೆಸುತ್ತದೆಯಲ್ಲವೆ? ಪ್ರಾಣಿಗಳೇ ಹೀಗೆಂದ ಮೇಲೆ ಇನ್ನೂ ವಿವೇಚನಾ ಶಕ್ತಿಯುಳ್ಳ ಮನುಷ್ಯ ಹೇಗೆ? ಇಲ್ಲಿ ಮಗು ನೀನು ಕರುಳಬಳ್ಳಿಯನ್ನು ಕಡಿಯಲು ಇಷ್ಟಪಡುವುದಿಲ್ಲ; ಬದಲಿಗೆ ಒಲವೂಡುತ್ತಿರುವೆ ಎನ್ನುತ್ತಿದೆ. ನಿನ್ನ ಒಡಲು ನನಗೆ ರಕ್ಷೆಗೂಡು. ಆ ಗೂಡಲ್ಲಿ ಬೆಚ್ಚಗೆ ಕುಳಿತಿರುವೆ ನಾನು. ಇನ್ನೆಷ್ಟು ದಿನ ಹೀಗೆ ಇರಬೇಕು? ನನಗೆ ಹೊರ ಪ್ರಪಂಚವ ನೋಡುವ ಬಯಕೆ ನನ್ನನ್ನು ಹೊರಗೆ ದೂಡು ಎಂದು ಮಗು ಕೇಳಿಕೊಳ್ಳುತ್ತಿದೆ:

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಅಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ
ಓಟ ಕಲಿವೆ, ಒಳನೋಟ ಕಲಿವೆ
ನಾ ಕಲಿವೆ ಊರ್ಧ್ವ ಗಮನ
ಓ ಅಗಾಧ ಗಗನ

ಕವಿತೆ ಮುಂದುವರಿದಿದಂತೆ, ಹೊರಗೆ ಬಂದ ಮೇಲೆ ತಾನು ಇಡೀ ಬ್ರಹ್ಮಾಂಡವನ್ನೇ ಒಂದು ಸುತ್ತು ಹಾಕಿ ಬರುತ್ತೇನೆ. ಆದರೆ ನಿನ್ನ ಪ್ರೆಮವನ್ನು ಎಂದೂ ಮರೆಯುವುದಿಲ್ಲ. ನಿನ್ನ ಮಡಿಲಿಗೆ ಮತ್ತೆ ಬರುತ್ತೇನೆ. ನಿನ್ನ ಮೂರ್ತ ಪ್ರೇಮವೇನಿದೆಯೋ ಅದನ್ನು ಪಡೆದುಕೊಳ್ಳುತ್ತೇನೆ ಎಂದಿದೆ. ಒಟ್ಟಾರೆಯಾಗಿ ಬಿ ಆರ್ ಲಕ್ಷ್ಮಣರಾವ್ ಅವರ ಈ ಕವಿತೆಯೂ ಸಹ ಲಂಕೇಶ್ ಅವರ ಅವ್ವ ಕವಿತೆಯಂತೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡ ಕವಿತೆ. ಈ ಕವಿತೆಯನ್ನು ಓದುವಾಗ ಮಾಲತಿ ಪಟ್ಟಣಶೆಟ್ಟಿಯವರ ‘ನಾ ಬರೀ ಭ್ರೂಣವಲ್ಲ’ ಕವಿತೆ ನೆನಪಿಗೆ ಬರುತ್ತದೆ. ಭ್ರೂಣಾವಸ್ಥೆಯಲ್ಲಿರುವ ಹೆಣ್ಣು ಮಗುವು ತನ್ನ ತಾಯಿಯೊಂದಿಗೆ ನಡೆಸುವ ಆಪ್ತಸಂವಾದವನ್ನು ವ್ಯಕ್ತಪಡಿಸುವ ಈ ಕವಿತೆ ಅತ್ಯಂತ ಮನೋಜ್ಞವಾದ ನೆಲೆಯಲ್ಲಿ ಚಿತ್ರಿತವಾಗಿದೆ.

“ಅಮ್ಮ ನಿನ್ನ ಎದೆಯಾಳದಲ್ಲಿ ಕವಿತೆಯಲ್ಲಿನ ಮಗು ತನ್ನ ತಾಯಿಯ ರಕ್ಷೆಗೂಡಲ್ಲಿ ಬೆಚ್ಚಗಿರುವೆ” ಎಂದು ಭಾವಿಸಿರುವಂತೆಯೇ ‘ನಾ ಬರೀ ಭ್ರೂಣವಲ್ಲ’ ಕವಿತೆಯಲ್ಲಿನ ಮಗುವು ಕೂಡ ತನ್ನ ತಾಯಿಯ ಗರ್ಭದಲ್ಲಿ ತನಗೆ ಸುರಕ್ಷತೆ ಇದೆಯೆಂದು ಭಾವಿಸಿದೆ. ಆದರೆ ತನ್ನ ತಾಯಿಯೇ ತನ್ನ ಅಸ್ತಿತ್ವವನ್ನು ನಿರಾಕರಿಸುವ, ಲಿಂಗತಾರತಮ್ಯ ಧೋರಣೆಯಡಿ ತನ್ನನ್ನು ನಿರ್ಲಕ್ಷಿಸುವ ಪರಿಯಿಂದ ಮಗು ಇಲ್ಲಿ ಆತಂಕಕ್ಕೆ ಈಡಾಗಿದೆ. “ತಾಯಿಯ ಎದೆಯಾಲೆ ನಂಜಾಗಿ ಕೊಲುವೆಡೆ ಇನ್ಯಾರಿಗೆ ದೂರುವೆ” ಎಂಬ ಬಸವಣ್ಣನವರ ಮಾತು ನಾ ಬರೀ ಭ್ರೂಣವಲ್ಲ ಕವಿತೆಯ ಆಶಯಕ್ಕೆ ಹೊಂದಿಕೊಳ್ಳುತ್ತದೆ ಎನ್ನಬಹುದು.

ಅವ್ವನಿಗೆ ಎರಡೂ ವಿಚಾರಕ್ಕೆ ಕೋಪ ಬರುತ್ತದೆ. ಒಂದು ಮಗ ಕೆಟ್ಟರೆ, ಮತ್ತೊಂದು ಗಂಡ ಬೇರೆ ಕಡೆ ಹೊರಟರೆ ಎಂಬುದಾಗಿ ಕವಿ ಅಭಿಪ್ರಾಯಿಸಿದ್ದಾರೆ. ನನ್ನವ್ವನಿಗೆ ಭಗವದ್ಗೀತೆಯ ಅವಶ್ಯಕತೆ ಇಲ್ಲ; ಏಕೆಂದರೆ ಹೊಟ್ಟೆಪಾಡಿಗಾಗಿ ಬದುಕಿರುವ ಅವ್ವ ಕಾಳುಕಡ್ಡಿಗೆ, ದುಡಿಮೆಗೆ, ತನ್ನ ಮಕ್ಕಳಿಗಾಗಿ ಬದುಕಿದ್ದಾಳೆ.

ಮುಂದೆ ‘ಎಂ ಆರ್ ಕಮಲ’ ಅವರ ‘ಅಮ್ಮ ಹಚ್ಚಿದೊಂದು ಹಣತೆ’ ಕವಿಯೂ ಕೂಡ ಇಲ್ಲಿ ಪ್ರಸ್ತುತವೆನಿಸುತ್ತದೆ. ಅಮ್ಮ ಹಚ್ಚಿರುವ ಹಣತೆ ಸಾಮಾನ್ಯವಾದ ಹಣತೆಯಲ್ಲ ಅದು ಮನಕೆ ಮಬ್ಬು ಕವಿಯದಂತೆ, ಅಂಧಕಾರ ಆವರಿಸಿದಂತೆ ಕಾಯ್ದಿಡುವ ಹಣತೆ. ಕತ್ತಲಲ್ಲಿ ದಿಕ್ಕು ತಪ್ಪುವ ದೋಣಿಗೆ ತೀರವೆಲ್ಲಿದೆ ಎಂಬುದನ್ನು ತೋರುವ ಹಣತೆ. ಅಂತರಂಗದಲ್ಲಿರುವ ನೂರಾರು ಕತ್ತಲೆಯ ಕೋಣೆಯಲ್ಲಿ ನಾದದ ಬೆಳಕನ್ನು ತುಂಬಿ ಅಜ್ಞಾನದಿಂದ ಸುಜ್ಞಾನದ ಕಡೆಗೆ ನಡುಸುವಂತಹ ಹಣತೆಯೊಂದನ್ನು ಅಮ್ಮ ಹಚ್ಚಿದ್ದಾಳೆ ಎಂಬುದಾಗಿ ಕವಯಿತ್ರಿ ಹೇಳುತ್ತಿದ್ದಾಳೆ. ಇಲ್ಲಿ ತಾಯಿಯಾದವಳ ಕರ್ತವ್ಯವೇನೆಂದರೆ, ತನ್ನ ಮಕ್ಕಳ ಬದುಕನ್ನು ಸುಜ್ಜಾನದಿಂದ ಬೆಳಗಿಸುವುದೇ ಆಗಿದೆ.

ಮುಂದಿನ ಕವಿತೆಯಾದ ಆರೀಫ್ ರಾಜಾ ಅವರ ‘ಹೊಲಿಗೆ ಯಂತ್ರದ ಅಮ್ಮಿ’ಯಲ್ಲಿ ಕವಿ ಧರ್ಮಾಂಧತೆ, ವೈಷಮ್ಯ ವಾತಾವರಣದ ನಡುವೆ ಒಬ್ಬ ತಾಯಿಗಿರುವ ಶಕ್ತಿ, ಸಾಮರ್ಥ್ಯ, ಕೌಶಲಗುಣಗಳು, ಆಕೆಯ ವ್ಯಕ್ತಿತ್ವ ಮೊದಲಾದವುಗಳ ಚರ್ಚಿಸಲಾಗಿದೆ.

ರೊಟ್ಟಿ ಪಾಲು ಮಾಡಿದಂತೆ ಬಟ್ಟೆ ಗಡಿ ಕೊರೆದು
ಕತ್ತರಿಸುವ ಅಮ್ಮಿ ತುಂಡು ತುಂಡು ಸೇರಿಸಿ
ಹೊಲಿದು ಒಂದು ಮಾಡುತ್ತಾಳೆ.
ಒಂದು ಕೈಯಲ್ಲಿ ಕತ್ತರಿ:
ಮುಖವಾಡ ಒಡೆದು ಬಯಲಾಗಲು
ಮತ್ತೊಂದು ಕೈಯಲ್ಲಿ ಸೂಜಿ;
ಲೋಕ ಮಾನ ಕಾಪಾಡಲು

ಇಲ್ಲಿ ಆರೀಫ್ ರಾಜಾ ಅಮ್ಮಿ ಕೇವಲ ತನ್ನೊಂದು ಮಗುವಿನ ಬಗ್ಗೆ ಚಿಂತಿಸುತ್ತಿಲ್ಲ. ಜಗದ ಮಾನವನ್ನು ಕಾಪಾಡುವುದೂ ಆಕೆಯ ಕರ್ತವ್ಯವಾಗಿದೆ. ಇದೆ ಕಾರಣಕ್ಕಾಗಿ ಆಕೆ ಕತ್ತರಿ, ಬಟ್ಟೆ, ಸೂಜಿ ಹಿಡಿದು ನಿಂತಿದ್ದಾಳೆ.

ಚಿಂದಿಮನಸುಗಳನ್ನು ಜೋಡಿಸಲು ಅವಳ ಬಳಿ ಸೂಜಿ ಇದೆ. ಗೋಲವಿಶ್ವವನ್ನು ಕಂಡು ದಾರಿ ಸಾಗಿಸಲು ಆಕೆಯ ಬಳಿ ರಾಟೆ ಇದೆ. ಲೋಕದ ವಿಕಾರವಾದ ಮನಸ್ಥಿತಿಗಳನ್ನು ಕುಡಿದು ಹಾಕಲು ಆಕೆಯ ಬಳಿ ಕತ್ತರಿ ಇದೆ. ಆಕೆ ಎಲ್ಲರಂತೆ ಸಾಮಾನ್ಯವಾದ ತಾಯಿಯಲ್ಲ:

ಕಟ್ಟಿಕೊಂಡ ಗಂಡನನ್ನು ಹೊಟ್ಟೆಯ ಮಗುವಿನಂತೆ ಸಾಕಿ
ಹೊಲಿಗೆ ಯಂತ್ರದ ಕೂಡ ಕಾಲು ಶತಮಾನ ಕಳೆದ
ನನ್ನ ಅಮ್ಮಿಗೆ ನಮಾಜ್ ಎಂದರೆ ಜುಮ್ಮಾ (ಶುಕ್ರವಾರ ದಿನ.)
ಈದ್ (ಹಬ್ಬ) ಎಂದರೆ ದೂದ್ ಖುರ್ಮಾ (ಶ್ಯಾವಿಗೆ ಪಾಯಸಕ್ಕೆ ಸೀಮಿತ.)
ಆಕೆ ರಟ್ಟೆ ನೋವು ಬರುವತನಕ ರಾಟೆ ತಿರುಗಿಸುತ್ತಾಳೆ. ಆರು ಮಕ್ಕಳ ಹಸಿವು ನಿಗಿಸುತ್ತಾಳೆ. ಆಕೆಗೆ,
ಕರುಳ ಕುಡಿಗಳೆಂದರೆ ಕನಸುಗಣ್ಣು,
ಮರುಭೂಮಿಯಲ್ಲೂ ಸಿಗುವ ಹಸಿರುಮಣ್ಣು.

ಅಮ್ಮಿ ತನ್ನ ಮಕ್ಕಳ ಬಗ್ಗೆ ಕನಸುಗಳನ್ನು ಕಾಣುತ್ತಿದ್ದಾಳೆ. ಅವರ ಭವಿಷ್ಯದ ಬಗ್ಗೆ ಕನಸುಗಳನ್ನು ಕಟ್ಟಿಟ್ಟುಕೊಂಡಿದ್ದಾಳೆ. ಆಕೆಗೆ ಮಕ್ಕಳ ಮೇಲೆ ಭರವಸೆಯಿದೆ. ತನ್ನ ಮಕ್ಕಳೆಂದರೆ ಮರುಭೂಮಿಯಲ್ಲೂ ಸಿಗುವ ಫಲವತ್ತಾದ ಮಣ್ಣು ಎಂಬುದಾಗಿಯೇ ಆಕೆ ಭಾವಿಸಿದ್ದಾಳೆಂದು ಆರಿಫ್ ರಾಜಾ ಅವರು ಅಭಿಪ್ರಾಯಿಸಿದ್ದಾರೆ.

ಒಟ್ಟಾರೆ, ತಾಯಿಯೇ ಮೊದಲ ದೇವರು ಎಂದು ಭಾವಿಸಿಕೊಂಡಿರುವ ಯುವಸಮೂಹ ಆಕೆಯನ್ನು ಕಲ್ಲೆಂದು ಭಾವಿಸದೆ ಆಕೆಯ ಭಾವನೆಗಳಿಗೂ ಬೆಲೆ ಕೊಡುತ್ತಾ ಬಂದಾಗ ಈ ದೈವ ಕಲ್ಪನೆಗೆ ಅರ್ಥಬರುವುದುಂಟು. ಪ್ರಸ್ತುತ ಕವಿತೆಗಳಲ್ಲಿ ಕವಿಗಳು ತಾಯಿ ಎಂಬುವವಳು ಕೇವಲ ಸಾಮಾನ್ಯ ಹೆಣ್ಣಲ್ಲ; ಆಕೆ ಈ ಲೋಕದ ಕಣ್ಣು ಎಂಬುದನ್ನು ನಿರೂಪಿಸುತ್ತಾ ಬಂದಿದ್ದಾರೆ. ಹೆತ್ತವ್ವನನ್ನು ಪೂಜಿಸುವ ಬದಲು ಗೌರವಿಸುವ ಮಕ್ಕಳು ಇನ್ನೆಲ್ಲೋ ಇರುವ ದೈವಗಳ ಹುಡುಕಿ ಅಲೆವ ಅಗತ್ಯವಿರುವುದಿಲ್ಲ.

ನನ್ನದೇ ಒಂದು ಕವಿತೆಯಲ್ಲಿ “ಅವ್ವ ಒಂದು ಸ್ಫೂರ್ತಿದಾಯಕ ಕಥೆ”ಯಾಗಿದ್ದಾಳೆ.

ಯೌವ್ವನದಲ್ಲಿ ಪ್ರೀತಿ ಹುಟ್ಟಿ
ಒಣಕಲ ಬಡಕಲು ದೇಹಕ್ಕೆ
ಹುಡುಗಿಯೊಬ್ಬಳು ಹೇಸಿ ಮಾನ ಕಳೆದಾಗ
ಜಗ ನಿರ್ಜೀವವೆನಿಸಿದರೂ
ಅವ್ವ ಕಿವಿಯಿಂಡುತ್ತಿದ್ದಳು
ಗೈರುಹಾಜರಿಯಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಳು!

ಒಟ್ಟಾರೆ ವಿ ನಾಗೇಂದ್ರ ಪ್ರಸಾದ್ ಅವರ ಅಭಿಪ್ರಾಯದಂತೆ ಅವ್ವ –
ಪದಗಳಿಗೆ ಸಿಗದ ಗುಣದವಳು;
ಬರೆಯುವುದು ಹೇಗೆ ಇತಿಹಾಸ?
ಬದುಕುವುದಾ ಕಲಿಸೊ ಗುರು ಇವಳು;
ನರಳುವಳೊ ಹೇಗೆ ನವ ಮಾಸ?