ತುಪ್ಪದಿಟ್ಟು ತೀರಿ ಹೋದಾಗಲೂ ಅವಳು ಗಂಡನೆಂದು ನಾಲ್ಕುಹನಿ ಕಣ್ಣೀರು ಹಾಕಲಿಲ್ಲ ಎಂದು ಊರಿನವರು ಈಗಲೂ ಆಡಿಕೊಳ್ಳುವುದೂ ಇದ್ದೇ ಇದೆ. ಅಲ್ಲದೆ ಕೂದಲು ನರೆಯುವ ಹೊತ್ತಿನಲ್ಲೂ ಕರಿಟ್ಟನ ಬೆನ್ನುಜ್ಜುವವಳು ಲೋಲಿಯೇ ಎಂದು ಕೆಲ ಅವಳ ಸಮಕಾಲೀನ ಹೆಂಗಸರು ಮುಖ ತಿರುಗಿಸಿದ್ದೂ ಇದೆ. ಆದರೆ ಲೋಲಿ ಮಾತ್ರ ತನ್ನ ಭಾವ ದೇವರೆಂದು ಅವನಿಲ್ಲದಿದ್ದರೆ ಈ ಮನೆ ಎಂದೋ ಸರ್ವನಾಶವಾಗಿ ಬಿಡುತ್ತಿತ್ತೆಂದೂ, ಮನೆಗೆ ಕೊಡಲಿ ಮಿತ್ತಾದ ಗಂಡನ ಹಾವಳಿಯಿಂದ ತಾನು ಪಟ್ಟ ಪರಿಪಾಟಲುಗಳನ್ನೆಲ್ಲಾ ಹೇಳುತ್ತಾ ಗಂಡ ತೀರಿ ಹೋದ ಮೇಲೆ ಹೆಣ್ಣೆಂಗಸು ಹೇಗೆ ತಾನೇ ಮನೆಯೊಗೆತನ ಮಾಡುತ್ತಾಳೆ?
ಪ್ರಶಾಂತ್‌ ಬೆಳತೂರು ಬರೆದ ಈ ಭಾನುವಾರದ ಕತೆ “ಹಂದಿಕಾಳನ ಸಿಂಗಿಯೂ..ಮತ್ತವನ ರಾಜಪರಿವಾರವೂ..!” ನಿಮ್ಮ ಓದಿಗೆ

ತನ್ನ ಪೂರ್ವಿಕರನ್ನು ರಾಜಪರಿವಾರದವರೆಂದು ನಾವು ಅವರ ವಂಶದ ಕುಡಿಗಳೆಂದು ಹೇಳಿಕೊಂಡು ಹೆಮ್ಮೆಯಿಂದ ಬೀಗುತ್ತಾ ತಿರುಗುವ ನಮ್ಮ ಸಿಂಗಿಯ ಪೂರ್ವದ ಇತಿಹಾಸವನ್ನೊಮ್ಮೆ ಕೆದಕಿದರೆ ಅಲ್ಲೊಂದು ಅಚ್ಚರಿಯ ನಿಜಕತೆಯೊಂದು ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಅವನು ಮೂಲತಃ ಇಟ್ನಾ ಗ್ರಾಮಕ್ಕೆ ಸೇರಿದವನೆಂದು ತಿಳಿಯುತ್ತದೆ. ಊರ ಜನರ ಬಾಯಲ್ಲಿ ಉಳಿದು ಬಂದ ವಾಡಿಕೆಯ ಕತೆಯಂತೆ ಈ ಸಿಂಗಿಯ ನೈಜವಾದ ತಾತನ ನಾಮಧೇಯ ಕಾಳನಾಯಕ. ಆದರೆ ಅದನ್ನು ಅಪ್ಪಿತಪ್ಪಿಯೂ ಒಪ್ಪದಿರುವ, ಹಾಗೂ ಈ ನಿಜ ಸಂಗತಿಯನ್ನು ಸಾರಾಸಗಟಾಗಿ ತಳ್ಳಿ ಹಾಕುವ ಸಿಂಗಿಗೆ ಬಾಯಿತಪ್ಪಿ ಯಾರಾದರೂ ಕಾಳನಾಯಕನ ಮೊಮ್ಮಗನೆಂದು ಬಿಟ್ಟರೆ, ಎಲ್ಲಿಲ್ಲದ ಸಿಟ್ಟು ಒತ್ತರಿಸಿ ಬಂದು ದೊಡ್ಡ ರಂಪ ಮಾಡಿಬಿಡುತ್ತಾನೆ. ಹೀಗಾಗಿ ಸಲುಗೆಗಾಗಿಯೂ ಕೂಡ ಇವನೆದುರಿಗೆ ಯಾರೂ ಕಾಳನಾಯಕನ ಮೊಮ್ಮಗನೆಂದು ಕರೆಯುವುದಿಲ್ಲ. ಬದಲಿಗೆ ಅವನೇ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಇವನ ತಾತ ಬೆಳತೂರಿನ ರಾಜಪರಿವಾರಕ್ಕೆ ಸೇರಿದ ಸಿದ್ದನಾಯಕನೆಂದು ಈಗ ಎಲ್ಲೆಲ್ಲೂ ಪ್ರತೀತಿ..!

ಇದಕ್ಕೆ ಮುಖ್ಯ ಕಾರಣವೆಂದರೆ ತನ್ನದೇ ಸಹಕೋಮಿನ ನಾಯಕ ಜನಾಂಗಕ್ಕಿಂತಲೂ ಒಂದು ಕೈ ಮೇಲಾದವರೆಂದು ಕರೆದುಕೊಳ್ಳುವ ಈ ರಾಜಪರಿವಾರದ ಮನೆತನಗಳು ಅಧಿಕೃತವಾಗಿ ಬೆಳತೂರಿನಲ್ಲಿ ಇವರೊಬ್ಬರದೇ ಆಗಿದ್ದರಿಂದ ಹಾಗೂ ಮೇಲಾಗಿ ಮಿಕ್ಕ ಬಹುಸಂಖ್ಯಾತ ನಾಯಕ ಸಮುದಾಯವನ್ನು ತಮ್ಮ ಸರಿಸಮಕ್ಕೆ ತೆಗೆದುಕೊಳ್ಳಬಾರದೆಂಬ ನಂಬಿಕೆಗಳು ಈ ಮನೆತನಕ್ಕೆ ಇದ್ದುದ್ದರಿಂದಲೋ ಏನೋ ಸಹಜವಾಗಿ ಸಿಂಗಿಗೆ ತನ್ನ ರಾಜಪರಿವಾರದ ಮೇಲೆ ಹೆಮ್ಮೆಯ ಭಾವ ಹಾಗೂ ಒಂದು ರೀತಿಯ ಬಿಗುಮಾನ. ಆದರೆ ವಾಸ್ತವವಾಗಿ ಪರಿಶೀಲಿಸುವುದಾದರೆ ಇಟ್ನಾ ಗ್ರಾಮದ ಕಾಳನಾಯಕನೇ ಇವನ ಅಸಲಿ ಪೂರ್ವಿಕ. ಹಿಂದೆ ಈ ಕಾಳನಾಯಕ ಹಂದಿ ಬೇಟೆಯಲ್ಲಿ ಬಹು ನಿಸ್ಸೀಮನಾಗಿದ್ದು ಹಂದಿಯ ಹೆಜ್ಜೆ ಗುರುತುಗಳ ಜಾಡು ಹಿಡಿದು ಎಂತಹ ಬಲಿಷ್ಠ ಹಂದಿಗಳನ್ನಾದರೂ ಏಕಾಂಗಿಯಾಗಿ ಬೇಟೆಯಾಡಿಬಿಡುತ್ತಿದ್ದ ಸಾಹಸದ ಪರಿಯನ್ನು ಕಣ್ಣಾರೆ ಕಂಡು ಹಾಡಿ ಹೊಗಳುತ್ತಿದ್ದ ಜನರ ಪರಿಣಾಮದಿಂದಾಗಿ ಈ ಕಾಳನಾಯಕ ಸುತ್ತಮುತ್ತಲ ಹಳ್ಳಿಯವರ ಬಾಯಿಗಳಲ್ಲಿ ಹಂದಿಕಾಳನೆಂದೇ ಪ್ರಸಿದ್ಧಿ ಪಡೆದಿದ್ದ. ಅಲ್ಲದೇ ಇಟ್ನಾ ಗ್ರಾಮದಲ್ಲಿ ನಾಲ್ಕಾರು ಜನ ಕಾಳನಾಯಕನೆಂದೇ ಹೆಸರಿಟ್ಟುಕೊಂಡಿದ್ದರಿಂದ ಸುಲಭವಾಗಿ ಗುರುತಿಸಲು ಅನ್ವರ್ಥವೆಂಬಂತೆ ಈ ಹಂದಿಕಾಳನೆಂಬ ಹೆಸರು ಹೆಚ್ಚು ಪ್ರಚಲಿತದಲ್ಲಿತ್ತು. ದುರಾದೃಷ್ಟವಶಾತ್ ಮಳೆಗಾಲದ ಒಂದು ದಿನ ದೊಡ್ಡಬೆಟ್ಟದ ತಪ್ಪಲಿನಲ್ಲಿ ಹಂದಿಬೇಟೆಗಾಗಿ ಬಲೆಬೀಸಿದ್ದ ಈ ಹಂದಿಕಾಳ ತನ್ನ ಸಂಗಡಿಗರೊಂದಿಗೆ ಭರ್ಜರಿಯಾದ ನಾಲ್ಕು ಹಂದಿಗಳ ಬೇಟೆಯಾಡಿ ಅವುಗಳನ್ನು ಐದು ಮೈಲು ದೂರದ ತನ್ನೂರಿಗೆ ಹೊತ್ತು ತರುವಾಗ ಆಯಾಸದಿಂದ ಎದೆನೋವೆಂದು ಕ್ಷಣಕಾಲ ಕೆಳಗೆ ಕೂತದ್ದು ಬಿಟ್ಟರೆ ಮತ್ತೆ ಮೇಲೇಳಲೇ ಇಲ್ಲ. ಹೀಗೆ ತನ್ನ ಮೂವತ್ತಾರರ ಪ್ರಾಯಕ್ಕೆ ಅಚಾನಕ್ಕಾಗಿ ಸಂಭವಿಸಿದ ಎದೆನೋವಿನಿಂದಾಗಿ ಇಹಲೋಕ ತ್ಯಜಿಸಿದ ಹಂದಿಕಾಳನ ನಿಮಿತ್ತ ಇಪ್ಪತ್ತೈದರ ಪ್ರಾಯದ ಅವನ ಹೆಂಡತಿ ಚಿಕ್ಕಂಕಿಯು ತನಗಿದ್ದ ನಾಲ್ಕು ವರ್ಷದ ಮಗ ಕರಿನಾಯಕನೊಂದಿಗೆ ತನ್ನ ತವರೂರಾದ ಬೆಳತೂರಿಗೆ ಬಂದು ನೆಲೆಸಿದಳು.

ಹೀಗೆ ಅವಳು ಗಂಡನ ಮನೆಯಾದ ಇಟ್ನಾವನ್ನು ತೊರೆದು ಬೆಳತೂರಿಗೆ ಬಂದು ನೆಲೆಸಲು ಮುಖ್ಯವಾಗಿ ಎರಡು ಕಾರಣಗಳಿದ್ದವು. ಮೊದಲನೇಯದು ಹಂದಿಕಾಳ ಅಥವಾ ಈ ಕಾಳನಾಯಕ ತೀರಿಹೋದ ಮೇಲೆ ಅವನಿಗೆ ಸೇರಿದ್ದ ಎರಡಂಕಣದ ಮನೆಯಲ್ಲಿ ಮೈದುನರು ಪಾಲು ಕೊಡಲು ಒಪ್ಪದೇ ಹೋದದ್ದು ಒಂದು ಕಾರಣವಾದರೆ ಮತ್ತೊಂದು ಬೆಳತೂರಿನಲ್ಲಿ ಚಿಕ್ಕಂಕಿಯ ಅಪ್ಪನ ಹೂವಿನ ವ್ಯಾಪಾರ ಜೋರಾಗಿ ಅವನ ವಹಿವಾಟು ಮೈಸೂರು, ಮಂಡ್ಯ, ಹಾಸನಗಳಿಗೆಲ್ಲಾ ವಿಸ್ತರಿಸಿ ಕೈ ತುಂಬಾ ದುಡ್ಡು ಗಳಿಸಿ ಮೂರು ಎಕರೆ ಗದ್ದೆಯನ್ನು ಸಂಪಾದಿಸಿದ್ದು ಹಾಗೂ ಅದರಲ್ಲಿ ಒಂದು ಎಕರೆಯನ್ನು ಗಂಡನನ್ನು ಕಳೆದುಕೊಂಡ ತನ್ನ ಮಗಳು ಚಿಕ್ಕಂಕಿಗೆ ಬಳುವಳಿಯಾಗಿ ಕೊಡುವ ದೊಡ್ಡ ಮನಸು ಮಾಡಿದ್ದರಿಂದ ಗಂಡ ತೀರಿ ಹೋದ ಆರೇ ತಿಂಗಳಿಗೆ ಚಿಕ್ಕಂಕಿ ತನ್ನ ತವರೂರಾದ ಬೆಳತೂರನ್ನು ಸೇರಿಕೊಂಡಳು. ಮುಂದೆ ಅದೇ ಊರಿನಲ್ಲಿ ಸುಂದರವಾಗಿದ್ದ ತನ್ನದೇ ಪ್ರಾಯದ ರಾಜಪರಿವಾರದ ಸಿದ್ದನಾಯಕನ ಮನೆಗೆ ಹೂವು ಕೊಡುವ ನೆವದಲ್ಲಿ ನಿತ್ಯ ಹೋಗಿಬರುತ್ತಿದ್ದ ಚಿಕ್ಕಂಕಿಯ ಮೈಮಾಟದ ವೈಯಾರಕ್ಕೆ ಮನಸೋತ ಸಿದ್ದನಾಯಕನು ತನ್ನ ಎರಡನೇ ಹೆಂಡತಿಯಾಗಿ ಇವಳನ್ನು ಕೂಡಾವಳಿ ಮಾಡಿಕೊಂಡ. ಹೀಗೆ ಕೂಡಾವಳಿಯಾದ ಚಿಕ್ಕಂಕಿಯು ಹಂದಿಕಾಳನಿಗೆ ಹುಟ್ಟಿದ್ದ ನಾಲ್ಕು ವರ್ಷದ ಮಗ ಕರಿನಾಯಕನೊಂದಿಗೆ ರಾಜಪರಿವಾರದ ಹತ್ತೂರಿನ ಮುಖ್ಯಸ್ಥನಾದ ಸಿದ್ದನಾಯಕನ ಬೆಚ್ಚಗಿನ ಹತ್ತಂಕಣದ ಮನೆಸೇರಿಕೊಂಡಳು.

ಇದಾದ ಎರಡು ವರ್ಷದ ಬಳಿಕ ಚಿಕ್ಕಂಕಿಯು ಸಿದ್ದನಾಯಕನಿಗೆ ಗರ್ಭವಾಗಿ ಮತ್ತೊಂದು ಗಂಡು ಮಗುವಿಗೆ ಜನ್ಮವಿತ್ತಳು. ಥೇಟು ಸಿದ್ದನಾಯಕನ ಪ್ರತಿರೂಪದಂತಿದ್ದ ಆ ಗಂಡು ಮಗು ಹಾಗೂ ತನ್ನ ಹಿರಿಯ ಹೆಂಡತಿ ಚೆನ್ನಾಜಿಗೆ ಎರಡು ಹೆಣ್ಣೆಯಾಗಿದ್ದರಿಂದ ಸಿದ್ದನಾಯಕನಿಗೆ ಈ ಮಗುವಿನ ಮೇಲೆ ವಿಶೇಷ ಪ್ರೀತಿ ಮೂಡಿತು. ಇವನು ತನ್ನ ನಂತರದ ಸಮಸ್ತ ಆಸ್ತಿಗೆ ವಾರಸುದಾರನೆಂದೇ ತಿಳಿದು ಅವನ ಬೆಳವಣಿಗೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದು ಒಂದು ಕಡೆಯಾದರೆ ಮತ್ತೊಂದು ಕಡೆ ತನ್ನ ಹುಟ್ಟಲ್ಲದ ಮಗ ಕರಿನಾಯಕನ ಮೇಲೆ ಏನೋ ಒಂದು ರೀತಿಯ ಅಸಡ್ಡೆ, ನಿರ್ಲಕ್ಷ್ಯ, ಇಲ್ಲದ ವೈಮನಸ್ಸು ಮೂಡತೊಡಗಿ ಅವನನ್ನು ಕಡೆಗಣಿಸಲು ಶುರುಮಾಡಿದ. ಚಿಕ್ಕಂಕಿ ಕೂಡ ಇದನ್ನು ವಿರೋಧಿಸುವ ಧೈರ್ಯ ಮಾಡಲಿಲ್ಲ. ಹೀಗಾಗಿ ಈ ತಾರತಮ್ಯ ಧೋರಣೆಗಳು ಬೆಳೆದು ಕರಿನಾಯಕನಿಗೆ ಉಣ್ಣುವುದರಿಂದ ಉಡುವವರೆಗೂ ನಿಕೃಷ್ಟವಾಗಿ ಮನೆಯ ಆಳಿನಂತೆ ನಡೆಸಿಕೊಂಡರೆ ಸಿದ್ದನಾಯಕನಿಗೆ ಹುಟ್ಟಿದ ಕೆಂಪನಾಯಕನಿಗೆ ಎಲ್ಲಿಲ್ಲದ ಅತೀವ ಪ್ರೀತಿ ಕಾಳಜಿಗಳನ್ನು ತೋರುತ್ತಿದ್ದದ್ದು ಮಾತ್ರ ಕರಿನಾಯಕನ ಬಾಲ್ಯದ ಕಣ್ಣುಗಳಲ್ಲಿ ಅಚ್ಚೊತ್ತಿ ಅದನ್ನು ಖಂಡಿಸುವ ಧೈರ್ಯ ಸಾಲದೆ ಒಳಗೊಳಗೆ ಹಲ್ಲುಕಚ್ಚಿ ಸಹಿಸಿಕೊಂಡು ಮಗ್ಗುಲ ಹಾವಾಗಿ ಬೆಳೆಯುತ್ತಾ ಹೋದ. ಇತ್ತ ಇಂತಹ ಭೇದಭಾವದ ನೀತಿಗಳನ್ನು ಹತ್ತಿರದಿಂದ ಕಣ್ಣಾರೆ ಕಂಡವರು ಇದನ್ನು ಗುಟ್ಟಾಗಿ ಆಡಿಕೊಳ್ಳಲು ಶುರುಮಾಡಿ ಕರಿನಾಯಕನಿಗೆ ಅನ್ವರ್ಥವಾಗಿ “ಕರಿಟ್ಟು” ಎಂದು ಕೆಂಪನಾಯಕನಿಗೆ “ತುಪ್ಪದಿಟ್ಟು” ಎನ್ನುವ ಹೆಸರುಗಳು ಚಾಲ್ತಿಗೆ ಬಂದು ಅವರ ನಿಜನಾಮಗಳು ಕ್ರಮೇಣ ಜನರ ಬಾಯಿಗಳಿಂದ ಹಿನ್ನೆಲೆಗೆ ಸರಿದುಹೋದವು.

ಪರಂತು ಮುಂದೆ ಈ ಕರಿಟ್ಟು ಮತ್ತು ತುಪ್ಪದಿಟ್ಟು ಎಂಬ ಅಣ್ಣತಮ್ಮಂದಿರು ಯೌವ್ವನಕ್ಕೆ ಕಾಲಿರಿಸಿದ್ದನ್ನು ಕಂಡ ಸಿದ್ದನಾಯಕನು ತನ್ನ ಸಕಲ ಸಂಪತ್ತುಗಳಲ್ಲಿ ಅರ್ಧಭಾಗ ತನ್ನ ಹುಟ್ಟಲ್ಲದ ಈ ಕರಿಟ್ಟನ ಪಾಲಿಗೆ ಹೋಗಿಬಿಡುತ್ತದಲ್ಲ ಎಂಬ ದುರಾಲೋಚನೆಯಿಂದ ಒಂದು ನಡುಮಧ್ಯಾಹ್ನ ಇದ್ದಕ್ಕಿದ್ದಂತೆ ಮಂಚದ ಮೇಲೆ ಕುಣಿಯತೊಡಗಿದ್ದನ್ನು ಕಂಡು ಇಡೀ ಊರೇ ಸಿದ್ದನಾಯಕನ ದೊಡ್ಡ ಮನೆಯಂಗಳದ ಮುಂದೆ ದೌಡಾಯಿಸಿ ಹೀಗೆ ಕುಣಿಯುತ್ತಿರುವ ಉರಿದುರಿದು ಚೀತ್ಕರಿಸುತ್ತಿರುವ ಕಾರಣವನ್ನು ಕೇಳಲಾಗಿ.. “ಆಗ ತನ್ನ ಮೇಲೆ ಆವಾಹಿಸಿಕೊಂಡಿರುವ ಮನೆ ದೇವರಾದ ಮಲೆಮಹದೇಶ್ವರನು ರಾತ್ರಿ ಕನಸಿನಲ್ಲಿ ಬಂದು ಸುಖ ಸಂಪತ್ತು ಹೆಚ್ಚಾಗಿ ನನ್ನ ಸೇವೆ ಮರೆತೆಯಾ? ಎಂದು ಪ್ರಶ್ನಿಸಿದನಂತೆ. ಇದಕ್ಕೆ ಉತ್ತರವಾಗಿ ತಾನು ಮರೆತಿಲ್ಲವೆಂದು ಎಷ್ಟೇ ವಿನಂತಿಸಿಕೊಂಡರು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವೆಂಬಂತೆ ಊರಿನಲ್ಲಿ ಮಹದೇಶ್ವರನ ಗುಡಿಯೊಂದನ್ನು ಕಟ್ಟಿ ನಿನ್ನ ಗಂಡು ಮಕ್ಕಳಿಂದ ವಾರಕ್ಕೆರಡು ಬಾರಿ ಗಂಧದಕಡ್ಡಿ ಕರ್ಪೂರ ಹಚ್ಚಿ ತುಪ್ಪದ ಜ್ಯೋತಿ ಬೆಳಗಬೇಕೆಂದು, ಕಾರ್ತೀಕ ಮಾಸದಲ್ಲಿ ಹುಲಿವಾಹನದ ಮೇಲೆ ನನ್ನನ್ನು ಕೂರಿಸಿ ಊರತುಂಬಾ ಮೆರವಣಿಗೆ ಮಾಡಿಸುವ ಕಾಯಕವನ್ನು ನಿನ್ನ ಮನೆಯ ಹೆಮ್ಮಗನು ಹೆಂಗಸರ ನೆರಳು ಸೋಕದಂತೆ ಮಹದೇಶ್ವರನ ಗುಡ್ಡನಾಗಿ ನನ್ನ ಸೇವೆ ಮಾಡಬೇಕೆಂದು, ಹಾಗೆ ಮಾಡಿದರೆ ತಲಾತಲಾಂತರಕ್ಕೂ ನಿನ್ನ ಕುಟುಂಬವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತೇನೆಂದು ಹೇಳಿ ಮಹದೇಶ್ವರನು ಅದೃಶ್ಯವಾದ ಕನಸನ್ನು ವಿವರಿಸುತ್ತಾ ಮಂಚದ ಮೇಲೆ ಕುಣಿದು ಕುಪ್ಪಳಿಸಿ ಮೂರ್ಛೆ ಹೋದವನಂತೆ ಅಂಗಾತ ಬಿದ್ದ ಸಿದ್ದನಾಯಕನನ್ನು ಕಂಡ ಊರಿನವರು ಇದು ಸಾಕ್ಷಾತ್ ಮಲೆಮಹದೇಶ್ವರನೇ ಅವನ ಮೈ ಮೇಲೆ ಆವಾಹಿಸಿದ್ದನೆಂದು ನಂಬಿ ಚಾಚೂ ತಪ್ಪದಂತೆ ಊರಾಚೆಯ ಮೂಡಣ ದಿಕ್ಕಿಗೆ ಮಲೆಮಹದೇಶ್ವರನ ಗುಡಿಯನ್ನು ಹಾಗೂ ಮನೆಗೆ ಹೆಮ್ಮಗನಾದ ಕರಿಟ್ಟನನ್ನು ಮಹದೇಶ್ವರನ ಗುಡ್ಡನನ್ನಾಗಿ ಮಾಡಿ ಅವನು ಮದುವೆಯಾವುದನ್ನು ಸರಾಗವಾಗಿ ತಪ್ಪಿಸಿ ನಿರುಮ್ಮಳನಾದ ಸಿದ್ದನಾಯಕ ಮರುವರ್ಷವೇ ತನ್ನ ಹುಟ್ಟಿನ ಏಕೈಕ ಕುಡಿಯಾದ ಕೆಂಪನಾಯಕನಿಗೆ ಹೆಬ್ಬಲಗುಪ್ಪೆಯ ತೆಂಗಿನ ತೋಟದ ಸಾಹುಕಾರನಾದ ಕ್ಯಾತನಾಯಕನ ಮಗಳು ಲೋಲಿಯೊಂದಿಗೆ ವಿವಾಹ ಏರ್ಪಡಿಸಿ ವರದಕ್ಷಿಣೆಯ ನೆವದಲ್ಲಿ ಎರಡು ಎಕರೆ ತೆಂಗಿನ ತೋಟವನ್ನು ಕಸಿದುಕೊಂಡು ಹಿಗ್ಗುತ್ತಿರುವಾಗಲೇ ಅವನ ಕೊನೆಯ ದಿನಗಳು ಸಮೀಪಿಸಿವೆ ಎಂದು ಯಾರೂ ಕೂಡ ಊಹಿಸಿರಲಿಲ್ಲ.

ಸೊಸೆಯನ್ನು ಮನೆ ತುಂಬಿಸಿಕೊಂಡು ಮೂರು ತಿಂಗಳಾಗಿದ್ದವು ಅಷ್ಟೇ; ಹೀಗಿರುವಾಗ ಒಂದು ಮುಸ್ಸಂಜೆ ಹೊಳೆಯ ಹಾದಿಯಲ್ಲಿ ಎಂದಿನಂತೆ ತನ್ನ ಬಹಿರ್ದೆಸೆ ಮುಗಿಸಿಕೊಂಡು ಮನೆಗೆ ನಡೆದು ಬರುತ್ತಿದ್ದ ಸಿದ್ದನಾಯಕ ಕಲ್ಲೊಂದು ಎಡವಿ ಮುಗ್ಗರಿಸಿ ಬಿದ್ದದ್ದೆಷ್ಟೋ ಅಷ್ಟೇ.. ಅವನ ಪ್ರಾಣಿಪಕ್ಷಿ ಹಾರಿಹೋಗಿತ್ತು. ಊಟದ ಹೊತ್ತು ಬರುವವರೆಗೂ ಅವನ ಮನೆಯವರಿಗೂ ಕೂಡ ಸಿದ್ದನಾಯಕನ ನೆನಪಾಗಿರಲಿಲ್ಲ. ಯಾವಾಗ ಲೋಲಿಯು “ಮಾವನವರು ಸಂಜೆ ಹೊಳೆಯ ಕಡೆ ಹೋಗಿ ಬರುತ್ತೇನೆಂದು ಹೋದವರು ಇಷ್ಟೊತ್ತಾದರೂ ಬರಲೇ ಇಲ್ಲವಲ್ಲ” ಎಂದಾಗ ಚಿಕ್ಕಂಕಿ ಮತ್ತು ತುಪ್ಪದಿಟ್ಟು ದಿಗಿಲುಗೊಂಡು ಮನೆಯ ಹೊಸ್ತಿಲು ದಾಟಬೇಕೆನುವಷ್ಟರಲ್ಲಿ ಹತ್ತಾರು ಜನರ ಗುಂಪು ಸಿದ್ದನಾಯಕನ ಹೆಣವನ್ನು ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ಮನೆಯ ಅಂಗಳಕ್ಕೆ ತಂದಿದ್ದರು. ಹೀಗೆ ಸಿದ್ದನಾಯಕ ಸಹಜ ಸಾವಿನಿಂದ ತೀರಿಹೋದರು ಕೆಲ ಜನರು ಮಾತ್ರ ಇದು ಕರಿಟ್ಟನ ಕೈವಾಡವೆಂದೂ, ಅವನಿಗೆ ಇವನ ಮೇಲೆ ಬಹಳ ಜಿದ್ದಿತ್ತೆಂದೂ ಆ ಜಿದ್ದಿಗಾಗಿಯೇ ಇವನು ಹೊಳೆಯ ಹಾದಿಯಲ್ಲಿ ಅಡ್ಡಗಟ್ಟಿ ಸಿದ್ದನಾಯಕನ ಬೀಜ ಉದುರುವ ಹಾಗೆ ಕಾಲಿನಿಂದ ಒಂದೇ ಏಟಿಗೆ ಒದ್ದು ಸಾಯಿಸಿದನೆಂಬ ವದಂತಿಗಳು ಕೂಡ ಅಲ್ಲಲ್ಲಿ ಹರಡಿದ್ದವು. ಆದರೆ ಈ ವದಂತಿಯನ್ನು ಊರಿನವರು ಅಷ್ಟಾಗಿ ನಂಬದಿದ್ದ ಕಾರಣ ಇದು ಕೆಲವೇ ದಿನಗಳಲ್ಲಿ ಅಂತರ್ಧಾನವಾಯಿತು..!

ಮುಂದೆ ಸಿದ್ದನಾಯಕನ ಸಾವಿನ ನಂತರ ಅವನ ಮನೆಯ ಚಿತ್ರಣವೇ ಹಂತ- ಹಂತವಾಗಿ ಬದಲಾಗುತ್ತಾ ಹೋಯಿತು..! ಅವನು ಬದುಕಿದ್ದಾಗ ಮನೆಯಲ್ಲಿನ ಒಂದು ಹುಲ್ಲುಕಡ್ಡಿಯು ಅಲ್ಲಾಡದ ಹಾಗೆ ಯಜಮಾನಿಕೆ ಮಾಡುತ್ತಿದ್ದ. ಹೆಂಡತಿ ಮಕ್ಕಳು ಅವನು ಹಾಕಿದ ಗೆರೆಯನ್ನು ದಾಟದಂತೆ ಹದ್ದುಬಸ್ತಿನಲ್ಲಿಟ್ಟಿದ್ದ. ಆದರೀಗ ಮೂಗುದಾರ ಕಿತ್ತುಕೊಂಡು ಅಂಕೆ-ಶಂಕೆಗಳಿರದ ಊರ ಗೂಳಿಯಂತಾಗಿ ಕೊಬ್ಬಿದ ತುಪ್ಪದಿಟ್ಟು ಸಿರಿವಂತಿಕೆಯ ದರ್ಪದಲ್ಲಿ ಮೆರೆಯತೊಡಗಿದ. ತನ್ನ ಹೆತ್ತವ್ವ ಚಿಕ್ಕಂಕಿಗಾಗಲೀ ಹಾಗೂ ಒಂದು ಕಾಲದಲ್ಲಿ ಮನೆಯೊಡತಿಯಾಗಿದ್ದ ಚೆನ್ನಾಜಿಗಾಗಲೀ ಕವಡೆಕಾಸಿನ ಕಿಮ್ಮತ್ತು ಕೊಡದೆ ಮೂಲೆಗುಂಪು ಮಾಡಿದ. ಅಲ್ಲದೇ ಅಣ್ಣನಾದ ಕರಿಟ್ಟನಿಗೆ ಕಿಂಚಿತ್ತೂ ವಿಧೇಯತೆ ತೋರದ ತುಪ್ಪದಿಟ್ಟು ಅವನನ್ನು ಹೊಲಮನೆಯ ಕೆಲಸಕ್ಕೆ ಮಾತ್ರ ಸಿಮೀತಗೊಳಿಸಿದ್ದ. ಹೆಂಡತಿ ಲೋಲಿಯ ಮೇಲೂ ಅಷ್ಟೇನೂ ಪ್ರೀತಿಯಿರದ ಇವನು ಅವಳೊಂದಿಗೆ ಬೇಕಾಬಿಟ್ಟಿಯಾಗಿ ಸಂಸಾರ ನಡೆಸುತ್ತಾ ಅವಳ ದೇಹ ಸೌಂದರ್ಯದ ಮೇಲೆ ನಿರಾಸಕ್ತಿ ಹೊಂದಿದ್ದ. ಇದಕ್ಕೆಲ್ಲ ಮುಖ್ಯ ಕಾರಣ ತುಪ್ಪದಿಟ್ಟು ಪೇಟೆಯ ರುಚಿಯನ್ನು ಮೈಗತ್ತಿಸಿಕೊಂಡು ಜೂಜಾಡಲು ಶುರುಮಾಡಿದ್ದು, ವೇಶ್ಯೆಯರ ಸಂಗ ಮಾಡಿದ್ದು, ಸಿಗರೇಟು ಮತ್ತು ಕುಡಿತದ ಚಟಗಳನ್ನು ಅಂಟಿಸಿಕೊಂಡು ವಾರವಾದರೂ ಮನೆಗೆ ಬರದೇ ಅಲೆಯುತ್ತಿದ್ದದ್ದು ಮುಖ್ಯ ಕಾರಣವಾಗಿದ್ದವು. ಅಲ್ಲದೇ ರಸಿಕ ಶಿಖಾಮಣಿ ಮಹಾನ್ ಕಚ್ಚೆಹರುಕನಾಗಿದ್ದ ತುಪ್ಪದಿಟ್ಟು ಕೆಲ ಊರಿನ ಗೌಡತಿಯರಿಗೆ ಖಾಯಂ ಮಿಂಡನಾಗಿ ಅವರ ತಲೆಯ ಮೇಲೆ ತನ್ನೆಲ್ಲಾ ಸಂಪತ್ತುಗಳನ್ನು ಸುರಿಯುತ್ತಿದ್ದದ್ದು ಕೂಡ ಎಗ್ಗಿಲ್ಲದೆ ನಡೆದಿತ್ತು. ಹೀಗೆ ಇವನ ವಿಲಾಸಯುತ ವೈಭೋಗದ ಚಟಗಳಿಗಾಗಿ ತನ್ನಪ್ಪ ಮಾಡಿಟ್ಟಿದ್ದ ಮುಕ್ಕಾಲು ಭಾಗದ ಸಂಪತ್ತನ್ನು ಕೇವಲ ಹತ್ತು ವರ್ಷಗಳಲ್ಲಿ ಕರಗಿಸಿಬಿಟ್ಟಿದ್ದ. ಇದನ್ನೆಲ್ಲಾ ನೋಡಿ ಬೇಸತ್ತ ಚೆನ್ನಾಜಿಯು ತನ್ನ ಹೆಣ್ಣು ಮಕ್ಕಳ ಮನೆ ಸೇರಿಕೊಂಡರೆ, ಚಿಕ್ಕಂಕಿ ಮಾತ್ರ ಮಗನ ದುರ್ಗುಣಗಳನ್ನು ಮೂಲೆಯಲ್ಲಿ ಕೂತು ಶಪಿಸುತ್ತಾ ನೊಂದುಕೊಂಡು ಹಾಸಿಗೆ ಹಿಡಿದು ಅಸುನೀಗಿದಳು.

ಒಂದು ಕಾಲಕ್ಕೆ ಆಳುಕಾಳುಗಳನ್ನು ತುಂಬಿಕೊಂಡು ತುಳುಕಾಡುತ್ತಿದ್ದ ಹತ್ತಂಕಣದ ಸಿದ್ದನಾಯಕನ ಮನೆ ಈಗ ಯಾವ ಸದ್ದುಗಳೂ ಇಲ್ಲದೆ ಬಣಗುಡುತ್ತಿತ್ತು. ಹೋದ ಕಡೆಯಲ್ಲೆಲ್ಲ ವಾರವಾದರೂ ಬಾರದ ಗಂಡನಿಗಾಗಿ ಕಾದು ಕಾದು ಮಂಕಾದ ಲೋಲಿಯ ಒಂಟಿತನ, ಅಕಸ್ಮಾತ್ ಮನೆಗೆ ಬಂದ ದಿನವಾದರೂ ಅವಳ ಹಾಸಿಗೆಯಲ್ಲಿ ಮಲಗದೆ ನಿರ್ಲಕ್ಷ್ಯ ವಹಿಸುತ್ತಿದ್ದ ಗಂಡನ ನಡವಳಿಕೆಗಳಿಗೆ ಬೇಸತ್ತು ಅವಳ ಹೆಣ್ತನ ನರಳುವಾಗ ಅವಳ ಕಣ್ಣು ಅರಳಿದ್ದು ತನ್ನ ಭಾವನಾದ ಕರಿಟ್ಟನ ಕಡೆಗೆ. ಈ ಕರಿಟ್ಟನು ಭಾರೀ ಮುಗ್ಧನೇನಲ್ಲ, ದೇವರಗುಡ್ಡನೆಂದು ಸಭ್ಯನಂತೆ ಊರಿನವರೆದುರು ಓಡಾಡಿಕೊಂಡಿದ್ದರು ಗುಟ್ಟಾಗಿ ನಾಲ್ಕಾರು ಹೆಣ್ಣುಗಳೊಂದಿಗೆ ಸಂಬಂಧ ಹೊಂದಿದ್ದ. ಹೊಲಮನೆಯ ಬಗ್ಗೆ ನಿರ್ಲಕ್ಷ್ಯ ಹೊಂದಿದ್ದ ತಮ್ಮ ತುಪ್ಪದಿಟ್ಟನಿಗೆ ಆರುಕಾಸಿಗೆ ಮೂರು ಕಾಸಾಯಿತೆಂದು ಅರ್ಧಕರ್ಧ ಸುಳ್ಳು ಲೆಕ್ಕ ಹೇಳಿ ನಂಬಿಸಿ ಭಾರೀ ಪ್ರಾಮಾಣಿಕನಂತೆ ಅವನೆದುರು ನಡೆದುಕೊಳ್ಳುತ್ತಿದ್ದ ಕರಿಟ್ಟನೂ ತಮ್ಮನ ಈ ದೀರ್ಘ ಅನುಪಸ್ಥಿತಿಯ ಲಾಭವೆಂಬಂತೆ ತನ್ನ ನಾದಿನಿ ಲೋಲಿಯೊಂದಿಗೆ ಗುಪ್ತ ಸಂಬಂಧವೊಂದನ್ನು ಇಟ್ಟುಕೊಂಡ ಫಲವಾಗಿ ತುಪ್ಪದಿಟ್ಟು ಪೇಟೆಯೆಲ್ಲಾ ತಿರುಗಿ ಹದಿನೈದು ದಿನಕ್ಕೊಮ್ಮೆ ಮನೆಗೆ ಬಂದರು ಸಲೀಸಾಗಿ ಒಂದು ಗಂಡು ಮಗುವಿನ ನಾಮಮಾತ್ರ ತಂದೆಯಾದನು. ಆ ಗಂಡು ಮಗುವೇ ನಮ್ಮ ಸಿಂಗಿ..!

ಭೇದಭಾವದ ನೀತಿಗಳನ್ನು ಹತ್ತಿರದಿಂದ ಕಣ್ಣಾರೆ ಕಂಡವರು ಇದನ್ನು ಗುಟ್ಟಾಗಿ ಆಡಿಕೊಳ್ಳಲು ಶುರುಮಾಡಿ ಕರಿನಾಯಕನಿಗೆ ಅನ್ವರ್ಥವಾಗಿ “ಕರಿಟ್ಟು” ಎಂದು ಕೆಂಪನಾಯಕನಿಗೆ “ತುಪ್ಪದಿಟ್ಟು” ಎನ್ನುವ ಹೆಸರುಗಳು ಚಾಲ್ತಿಗೆ ಬಂದು ಅವರ ನಿಜನಾಮಗಳು ಕ್ರಮೇಣ ಜನರ ಬಾಯಿಗಳಿಂದ ಹಿನ್ನೆಲೆಗೆ ಸರಿದುಹೋದವು.

ಹೀಗೆ.. ನಮ್ಮ ಸಿಂಗಿಯ ಹುಟ್ಟಿಗೆ ಅಂಟಿಕೊಂಡು ಬಂದಿದ್ದ ಪೂರ್ವದ ಘಟನಾವಳಿಗಳ ಬಗ್ಗೆ ಲವಲೇಶವೂ ಅರಿಯದ ಸಿಂಗಿ ಮಾತ್ರ ತಾನು ರಾಜಪರಿವಾರದ ಸಿದ್ದನಾಯಕನ ಏಕೈಕ ಕುಡಿ ತುಪ್ಪದಿಟ್ಟು ಕೆಂಪನಾಯಕನಿಗೆ ಹುಟ್ಟಿದ ಒಬ್ಬನೇ ಮಗನೆಂದು ನಂಬಿ ಗರ್ವದಿಂದ ಬೀಗುತ್ತಾನೆ. ಒಂದು ಕಾಲಕ್ಕೆ ನೂರಾರು ಎಕರೆ ಆಸ್ತಿ ಹೊಂದಿದ ತನ್ನ ರಾಜಪರಿವಾರದ ಮನೆತನ ತನ್ನಪ್ಪನ ದುಶ್ಚಟಗಳಿಂದ ಕರಗಿ ಹೋಗಿದ್ದನ್ನು ನೆನೆದುಕೊಂಡು ತನ್ನ ತಾತ ಸಿದ್ದನಾಯಕನನ್ನು ಹಾಡಿ ಹೊಗಳುವ, ಹಾಗೂ ತನ್ನ ನಾಮಮಾತ್ರ ಅಪ್ಪನಾದ ತುಪ್ಪದಿಟ್ಟನ್ನು ಹತ್ತಾರು ಜನರ ಸಮ್ಮುಖದಲ್ಲಿ ನಿತ್ಯ ಬೈಯ್ಯುತ್ತಲೇ ನೂರಾರು ಬಾರಿ ಸ್ಮರಿಸಿಕೊಳ್ಳುವುದು ಸಿಂಗಿಯ ಮೂಲತಃ ಸಾಮಾನ್ಯ ಗುಣವಾದ್ದರಿಂದ ಎದುರಿಗೆ ಯಾರೇ ಸಿಗಲಿ ಅವರಿಗೆ ತನ್ನ ರಾಜಪರಿವಾರದ ಮನೆತನದ ವಿಲಾಸಯುತ ವೈಭೋಗದ ಅವರ ಜೀವನವನ್ನು, ಅವರಿಗಿದ್ದ ಆಸ್ತಿಯನ್ನು, ಆಳು-ಕಾಳುಗಳನ್ನು, ಹಾಗೂ ತನ್ನ ತಾತನಾದ ಸಿದ್ದನಾಯಕನ ಮಾತನ್ನು ಹತ್ತೂರಿನ ಜನರು ದಾಟದೇ ಇದ್ದದ್ದನ್ನು, ಅವನ ಕಾಲಾನಂತರ ಮಕ್ಕಳಾದ ಕರಿನಾಯಕ ಮತ್ತು ಕೆಂಪನಾಯಕನ ಕಾಲಕ್ಕೆ ಅರ್ಥಾತ್ ಕರಿಟ್ಟು ಮತ್ತು ತುಪ್ಪದಿಟ್ಟು ಕಾಲಕ್ಕೆ ಅದು ಕರಗುತ್ತಾ ಹೋದದ್ದು, ಹೀಗೆ ಹೇಳುತ್ತಲೇ ಭಾವುಕನಾಗಿ ಬಿಡುವ ಸಿಂಗಿಯ ಪಾಲಿಗೆ ಉಳಿದಿರುವ ಆಸ್ತಿಯೆಂದರೆ ನಾಲ್ಕು ಅಂಕಣದ ಮನೆ ಮತ್ತು ಎರಡು ಎಕರೆ ಗದ್ದೆ ಮಾತ್ರ. ಈ ಎರಡು ಎಕರೆ ಗದ್ದೆಯೂ ಪ್ರಾಯಶಃ ಸಿಂಗಿಗೆ ದಕ್ಕುತ್ತಿರಲಿಲ್ಲ.. ದೇವರದಯೆ ಎಂಬಂತೆ ತನ್ನ ದುಶ್ಚಟಗಳ ಫಲವಾಗಿ ಹಲವು ಕಾಯಿಲೆಗಳಿಗೆ ತುತ್ತಾಗಿದ್ದ ತುಪ್ಪದಿಟ್ಟಿನ ಆಸ್ಪತ್ರೆಯ ಚಿಕಿತ್ಸೆಗಾಗಿ ಇದನ್ನು ಮಾರಿಬಿಡುವ ಯೋಚನೆಯಲ್ಲಿದ್ದ ಕರಿಟ್ಟನು ಮುಂಗಡವಾಗಿ ಹುನುಗನಹಳ್ಳಿಯ ಜವರೇಗೌಡರಿಂದ ಒಂದಷ್ಟು ಹಣ ಪಡೆದಿದ್ದನು. ಆದರೆ ಆಸ್ಪತ್ರೆಗೆ ಹೊರಡುವ ಮಾರ್ಗಮಧ್ಯದಲ್ಲಿಯೇ ತುಪ್ಪದಿಟ್ಟು ಕಣ್ಮುಚ್ಚಿದ್ದರಿಂದ ಆ ಹಣ ಮತ್ತೆ ಜವರೇಗೌಡರ ಕೈ ಸೇರಿ ಈ ಎರಡು ಎಕರೆ ಗದ್ದೆ ಕೊನೆಪಕ್ಷ ಉಳಿದುಕೊಳ್ಳುವಂತಾಯಿತು. ರಟ್ಟೆಯಲ್ಲಿ ಶಕ್ತಿ ಇರುವ ತನಕ ದುಡಿದು ಮುಕ್ಕಾಗಲಿಕ್ಕೆ ಜನಿಸಿದವನಂತಿದ್ದ ಕರಿಟ್ಟನು ಗಟ್ಟಿಮುಟ್ಟಾದ ದೃಢಕಾಯ ಹೊಂದಿದವನಾಗಿದ್ದು ಕಷ್ಟಕಾಲದಲ್ಲಿ ಲೋಲಿಯ ಬೆಂಗಾವಲಿಗೆ ನಿಂತಿದ್ದರಿಂದ, ಅವಳ ಬೇಕು- ಬೇಡಗಳನ್ನು ಕೇಳುತ್ತಿದ್ದವನಾದ್ದರಿಂದ ಲೋಲಿಗೆ ಗಂಡನ ಮೇಲೆ ಯಾವ ಪ್ರೀತಿ ಮಮಕಾರವೂ ಉಳಿದಿರಲಿಲ್ಲ.

ತುಪ್ಪದಿಟ್ಟು ತೀರಿ ಹೋದಾಗಲೂ ಅವಳು ಗಂಡನೆಂದು ನಾಲ್ಕುಹನಿ ಕಣ್ಣೀರು ಹಾಕಲಿಲ್ಲ ಎಂದು ಊರಿನವರು ಈಗಲೂ ಆಡಿಕೊಳ್ಳುವುದೂ ಇದ್ದೇ ಇದೆ. ಅಲ್ಲದೆ ಕೂದಲು ನರೆಯುವ ಹೊತ್ತಿನಲ್ಲೂ ಕರಿಟ್ಟನ ಬೆನ್ನುಜ್ಜುವವಳು ಲೋಲಿಯೇ ಎಂದು ಕೆಲ ಅವಳ ಸಮಕಾಲೀನ ಹೆಂಗಸರು ಮುಖ ತಿರುಗಿಸಿದ್ದೂ ಇದೆ. ಆದರೆ ಲೋಲಿ ಮಾತ್ರ ತನ್ನ ಭಾವ ದೇವರೆಂದು ಅವನಿಲ್ಲದಿದ್ದರೆ ಈ ಮನೆ ಎಂದೋ ಸರ್ವನಾಶವಾಗಿ ಬಿಡುತ್ತಿತ್ತೆಂದೂ, ಮನೆಗೆ ಕೊಡಲಿ ಮಿತ್ತಾದ ಗಂಡನ ಹಾವಳಿಯಿಂದ ತಾನು ಪಟ್ಟ ಪರಿಪಾಟಲುಗಳನ್ನೆಲ್ಲಾ ಹೇಳುತ್ತಾ ಗಂಡ ತೀರಿ ಹೋದ ಮೇಲೆ ಹೆಣ್ಣೆಂಗಸು ಹೇಗೆ ತಾನೇ ಮನೆಯೊಗೆತನ ಮಾಡುತ್ತಾಳೆ? ಆಗೆಲ್ಲಾ ತನ್ನ ಭಾವನಾದ ಕರಿನಾಯಕನು ನನ್ನ ಬೆನ್ನಿಗೆ ನಿಲ್ಲದಿದ್ದರೆ ತನ್ನ ಪಾಡೇನು? ಅವನು ಹೇಗೋ ಆ ಕಷ್ಟಕಾಲದಲ್ಲಿ ಮುಂದೆ ನಿಂತು ಚೂರು ಪಾರು ಆಸ್ತಿಯನ್ನಾದರೂ ಉಳಿಸಿ ತನಗಿರುವ ಈ ಒಂದೇ ಒಂದು ಗಂಡಿನ ಬದುಕಿಗಾದರೂ ದಾರಿ ಮಾಡಿದನೆಂದು ನೆನೆಯುತ್ತಾ ಎದುರಿಗಿದ್ದವರ ಮುಂದೆ ಹನಿಗಣ್ಣಾಗುವುದು ಲೋಲಿಯ ಮಾಮೂಲಿ ಕತೆ..!

ಹೀಗೆ ಈ ರಾಜಪರಿವಾರದ ಹತ್ತಂಕಣದ ಮನೆಯ ಕತೆಯು ಕೊರಗುತ್ತಾ… ಕರಗುತ್ತಾ.. ಸಿಂಗಿಯ ಕಾಲಕ್ಕೆ ನಾಲ್ಕಂಕಣದ ಸಾಮಾನ್ಯ ಮನೆಯಾಗಿ ಉಳಿದುಕೊಂಡಿತ್ತು..! ಈ ನಾಲ್ಕಂಕಣದ ಮನೆಯನ್ನು ಮತ್ತೆ ತನ್ನ ಹಳೆಯ ವೈಭೋಗದ ಹತ್ತಂಕಣಕ್ಕೆ ವಿಸ್ತರಿಸಬೇಕೆಂಬ ಹಾಗೂ ತನ್ನ ಮನೆತನವು ಕಳೆದುಕೊಂಡ ಆಸ್ತಿಯನ್ನೆಲ್ಲಾ ಮರಳಿ ಪಡೆಯಬೇಕೆಂಬ ಹಟ ಸಿಂಗಿಯೊಳಗೆ ಇದುದ್ದರಿಂದಲೇ ಪಟ್ಟು ಬಿಡದ ಭಗೀರಥನಂತೆ ಮೊದಲಿಗೆ ಒಂದು ಸಣ್ಣ ಮೊತ್ತದಲ್ಲಿ ಹತ್ತಿ ವ್ಯಾಪಾರವನ್ನು ಆರಂಭಿಸಿ ಅದರಿಂದ ಬಂದ ಸ್ವಲ್ಪ ಲಾಭದಲ್ಲಿ ಕಿರಾಣಿ ಅಂಗಡಿಯೊಂದನ್ನು ಮಾಡಿ ಆ ಅಂಗಡಿಯ ವ್ಯವಹಾರ ನೋಡಿಕೊಳ್ಳಲು ಶುರು ಮಾಡಿದ ಮೇಲೆ ಅದರಲ್ಲಿ ಒಂದಷ್ಟು ನಿಗದಿತವಾಗಿ ಬಂದ ಲಾಭದ ಹಣವನ್ನೆಲ್ಲಾ ಶೇಖರಿಸುತ್ತಾ ಹೋಗಿದ್ದರಿಂದ ಅದು ಎರಡೇ ವರ್ಷಕ್ಕೆ ದೊಡ್ಡಗಂಟಾಯಿತು. ಈ ಗಂಟಿನಲ್ಲಿ ಮರುವರ್ಷ ಟನ್ನುಗಟ್ಟಲೇ ಹತ್ತಿಯನ್ನು ಅರ್ಧಂಬರ್ಧ ಬೆಲೆಗೆ ದಲ್ಲಾಳಿಗಳನ್ನು ಮುಂದಿಟ್ಟುಕೊಂಡು ಖರೀದಿಸಿ ಹಾಗೂ ಕ್ವಿಂಟಾಲುಗಟ್ಟಲೇ ಹತ್ತಿ ತೂಗುವಾಗ ಎದುರಿಗಿರುವವರ ಕಣ್ತಪ್ಪಿಸಿ ಕೆಜಿಗಟ್ಟಲೇ ಹತ್ತಿಯನ್ನು ಗುಳುಂ ಮಾಡುವ ತಳಕುಬಳುಕಿನ ಕಲೆಯನ್ನು ಸಿಂಗಿ ಕಲಿತಿದ್ದರಿಂದ ಈ ಬಾರಿ ಅದನ್ನು ದುಪ್ಪಟ್ಟು ಬೆಲೆಗೆ ಕೊಯಮತ್ತೂರಿನ ಬಟ್ಟೆ ಅಂಗಡಿ ಸಾಹುಕಾರನಿಗೆ ಮಾರಿ ಲಕ್ಷಾಂತರ ರೂಪಾಯಿಗಳು ಲಾಭವಾಗಿ ಬಂದದ್ದರಿಂದ ಸಿಂಗಿಯ ಸಂತಸಕ್ಕೆ ಪಾರವೇ ಇರಲಿಲ್ಲ..! ಅಲ್ಲದೇ ಆ ವರ್ಷ ಸಿಂಗಿ ಸಾಗರೆಯ ನೀಲಮ್ಮನನ್ನು ಮದುವೆಯಾಗಿ ಮನೆ ತುಂಬಿಸಿಕೊಂಡಿದ್ದರಿಂದ ಕೆಲವರು ಇದು ನೀಲಮ್ಮನ ಕಾಲ್ಗುಣವೆಂದು, ಅವಳು ಮಹಾಲಕ್ಷ್ಮಿಯಾಗಿ ಈ ಮನೆಗೆ ಮತ್ತೆ ತಿರುಗಿ ಬಂದಳೆಂದು ಜನ ಮಾತಾಡುವುದನ್ನು ಕೇಳಿಸಿಕೊಳ್ಳುವಾಗ ಸಿಂಗಿಯ ಮುಖದಲ್ಲೊಂದು ಸಾರ್ಥಕತೆ ಕಾಣುತ್ತದೆ..! ಆದರೆ ನಮ್ಮ ಸಿಂಗಿ ಇಷ್ಟಕ್ಕೆ ತೃಪ್ತಿಪಟ್ಟುಕೊಂಡು ಜೀವನ ಮಾಡುವ ಜಾಯಮಾನದವನಾಗಿರಲಿಲ್ಲ. ಅವನಿಗೆ ಆಸ್ತಿ ಹಣವೆಂದರೆ ಮೊದಲಿನಿಂದಲೂ ಒಂದು ರೀತಿಯ ವ್ಯಾಮೋಹ ಇದ್ದುದ್ದರಿಂದ ಹಗಲಿರುಳು ಅದರ ಧ್ಯಾನವನ್ನೇ ಜಪಿಸುತ್ತಿದ್ದ. ಲಕ್ಷಾಂತರ ರೂಪಾಯಿಗಳನ್ನು ಬೀರು ತುಂಬಾ ತುಂಬಿಟ್ಟಿದ್ದ ಸಿಂಗಿಗೆ ಮಂಚಳ್ಳಿಯ ಅವನ ಹಳೆಯ ಸಂಬಂಧಿಕರೊಬ್ಬರು ಮಗಳ ಮದುವೆಗೆಂದು ಹಣಕಾಸನ್ನು ಸಾಲದ ರೂಪದಲ್ಲಿ ಕೇಳಿದಾಗ ಅದನ್ನು ಹಾಗೆ ಕೊಡಲೊಪ್ಪದ ಸಿಂಗಿಯು ಅವರಿಗಿದ್ದ ಐದು ಎಕರೆ ಗದ್ದೆಯ ಮೇಲೆ ಕಣ್ಣಿಟ್ಟು ಅದನ್ನು ಎರಡು ಲಕ್ಷರೂಪಾಯಿಗಳಿಗೆ ಭೋಗ್ಯ ಮಾಡಿಕೊಂಡ. ನಂತರದ ವರ್ಷಗಳಲ್ಲಿ ಅದನ್ನು ಅರ್ಧಂಬರ್ಧ ಬೆಲೆಗೆ ಖರೀದಿಸಿ ತೆಂಗಿನ ತೋಟ ಮಾಡಿಕೊಂಡ. ಸಾಲದ್ದಕ್ಕೆ ರಾಜಕೀಯ ರೈತ ಮುಖಂಡರ ಜೊತೆ ಸೇರಿ ಹಸಿರು ಶಾಲು ಹೊದ್ದು ರೈತಪರ ಹೋರಾಟಗಳೆಂದು ಮುನ್ನೆಲೆಗೆ ಬಂದ ನಮ್ಮ ಸಿಂಗಿಯು ಸಣ್ಣಪುಟ್ಟ ಕಾಂಟ್ರ್ಯಾಕ್ಟ್ ಕೆಲಸಗಳನ್ನು ಗುತ್ತಿಗೆ ಪಡೆದು ಅದರಲ್ಲೂ ಒಂದಷ್ಟು ಹಣ ಮಾಡಿಕೊಂಡ. ಹೀಗೆ ಸಿಂಗಿಯು ತಾತನಷ್ಟು ವೈಭವದ ಆಸ್ತಿಯನ್ನು ಮಾಡಲಾಗದಿದ್ದರೂ ತಕ್ಕಮಟ್ಟಿಗೆ ಊರಿನ ಗಟ್ಟಿಕುಳವೆನ್ನುವಷ್ಟರ ಮಟ್ಟಿಗೆ ವಹಿವಾಟು ಹೊಂದುತ್ತಿದ್ದ ಪುನರ್ ಅಭ್ಯುದಯದ ಕಾಲದಲ್ಲಿ ಅವನ ಮನಸ್ಸನ್ನು ಕೊರೆಯಲು ಶುರುಮಾಡಿದ ವಿಷಯವೆಂದರೆ ತಾನು ಮದುವೆಯಾಗಿ ಎಂಟು ವರ್ಷವಾದರೂ ತನಗೆ ಮಕ್ಕಳಾಗದೇ ಹೋದದ್ದು.. ಹಾಗೂ ತನ್ನ ರಾಜಪರಿವಾರದ ವಂಶದ ಕುಡಿಯು ತನ್ನ ತಲೆಮಾರಿಗೆ ಕೊನೆಗೊಳ್ಳುತ್ತದೆಂಬ ದಿಗಿಲು ಹೆಚ್ಚಾಗಿ ಕಾಡತೊಡಗಿದ್ದರಿಂದ ಮಕ್ಕಳ ಫಲಕ್ಕಾಗಿ ಹಲವು ದೇವರುಗಳಿಗೆ ಹರಕೆ ಹೊತ್ತುಕೊಂಡ. ಕೊನೆಗೆ ತನ್ನ ರಾಜಪರಿವಾರದ ಮನೆದೇವರಾದ ಮಲೆಮಹದೇಶ್ವರನ ಸನ್ನಿಧಿಗೆ ಸಕುಟುಂಬ ಸಮೇತನಾಗಿ ಪೂಜೆ ಸಲ್ಲಿಸಿ ಇಷ್ಟಾರ್ಥ ನೆರವೇರಿಸಿರುವಂತೆ ಕೇಳಿಕೊಂಡು ಬಂದ.!

ಆದರೆ ಇವ್ಯಾವುವೂ ಫಲಿಸಲಿಲ್ಲ. ಇತ್ತ ತಾನು ಬದುಕಿರುವಾಗಲೇ ಮೊಮ್ಮಗನನ್ನು ನೋಡಬೇಕೆಂಬ ಹಂಬಲ ಹೊತ್ತ ಲೋಲಿಗೂ ದೊಡ್ಡ ನಿರಾಸೆಯಾಗಿ ನೋವಿನಿಂದ ದಿನೇ ದಿನೇ ಕೃಶವಾಗತೊಡಗಿ ತನಗಿದ್ದ ಅಸ್ತಮಾದ ಕಾಯಿಲೆಯಿಂದಾಗಿ ಕಾಲವಾದಳು. ಫಲಿಸದ ಮಕ್ಕಳಿಗಾಗಿ ಮಾಡಬಾರದ್ದೆಲ್ಲವನ್ನೂ ಮಾಡಿದ ಸಿಂಗಿಗೆ ರೋಸಿ ಹೋಗಿ ಹೆಂಡತಿ ನೀಲಮ್ಮನ ಮೇಲೆ ವಿನಾಕಾರಣ ಉರಿದುರಿದು ಬೀಳುತ್ತಿದ್ದ. ಹತ್ತು ವರ್ಷವಾದರೂ ಒಂದು ಮಗುವನ್ನೆತ್ತು ಕೊಡದ ಗೊಡ್ಡಿಯೆಂದು ಹೀಯಾಳಿಸಿ ಅವಳ ಮೇಲಿದ್ದ ತನ್ನ ಹಿಂದಿನ ಪ್ರೀತಿಯನ್ನು ಕಳೆದುಕೊಳ್ಳತೊಡಗಿದ್ದ. ಇದಕ್ಕೆ ಕಾರಣವೆಂಬಂತೆ ನೀಲಮ್ಮನು ಆಗಾಗ ಅನಾರೋಗ್ಯಕ್ಕೆ ತುತ್ತಾಗಿ ಇವನ ಸಂಭೋಗಕ್ಕೆ ಸರಿಯಾಗಿ ಸಹಕರಿಸಲಾಗದೆ ಇದ್ದುದು ಕೂಡ ಒಂದು ಬಹುಮುಖ್ಯ ಕಾರಣವಾಗಿತ್ತು.

ಒಮ್ಮೆ ಒಂದು ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿ ಸಿಂಗಿಯು ಕಾಮದ ಹಸಿವಿನಿಂದ ಅವಳ ದೇಹದ ಮೇಲೆ ಹುಲಿಯಂತೆ ಅಪ್ಪಳಿಸಿ ಘರ್ಜಿಸುತ್ತಿರುವಾಗ ಹೆಣದಂತೆ ಬಿದ್ದುಕೊಂಡ ನೀಲಮ್ಮನನ್ನು ಕಂಡು “ಕುಲಗೆಟ್ಟ ಲೌಡಿ ಹೆಂಗ್ ಮಾಡಿ ಅರೆದ್ರು ಜಗ್ಗಲ್ಲ.. ಎದ್ದೋಗು ಬೋಸುಡಿ ಬೆಳಗಾನಾ ನಿದ್ದ್ಗೆಟ್ರು ನಿನ್ನ ಮಡ್ಲು ತುಂಬ್ನಿಲ್ಲ” ಎಂದು ಅವಮಾನಿಸಿ ಕಳಿಸಿದನೋ ಅಂದಿನಿಂದ ನೀಲಮ್ಮ ಸಿಂಗಿಯ ಹಾಸಿಗೆಯಲ್ಲಿ ಮಲಗುವುದನ್ನು ಬಿಟ್ಟಳು. ಇತ್ತ ಸಿಂಗಿಯು ಹೇಗಾದರೂ ಮಾಡಿ ತನ್ನ ಈ ನಲವತ್ತರ ಪ್ರಾಯದಲ್ಲಿ ಎರಡನೇ ಮದುವೆಯಾಗುವ ನಿರ್ಧಾರ ಮಾಡಿ ಆ ಮೂಲಕ ತನ್ನ ರಾಜಪರಿವಾರದ ವಂಶವನ್ನು ಮುಂದುವರಿಸುವ ಹಂಬಲದಿಂದಾಗಿ ತನಗೆ ತಿಳಿದಿರುವ ಕಡೆ ನಿಸ್ಸಂಕೋಚವಾಗಿ ಗರ್ವದಿಂದ, ಸಿರಿವಂತಿಕೆಯ ದರ್ಪದಿಂದ ಹೆಣ್ಣು ಕೇಳುತ್ತಿದ್ದ ಸಿಂಗಿಗೆ ಹೆಣ್ಣಿನ ಮನೆಯವರು ಎದುರಿನಲ್ಲಿ ಇಷ್ಟ ಕಷ್ಟಗಳನ್ನು ಹೇಳದಿದ್ದರೂ ಅವನು ಅಲ್ಲಿಂದ ಜಾಗ ಖಾಲಿ ಮಾಡಿದ ಮೇಲೆ “ಎಷ್ಟಾದ್ರು ತಿನ್ನಕ್ಕಿಟ್ಟಿಲ್ಲದೆ ಗತ್ಗೆಟ್ಟ್ ನಿಂತಿದ್ದ್ನಲ್ಲಾ ಆ ಕರಿಟ್ಟನ್ಗುಟ್ಟುದ್ ಮಗ್ನಲ್ವಾ ಇವ.. ಅಪ್ಪನ್ಗುಟಿರವ ಆಗಿದ್ರ ಹದ್ವಾದ್ ಬುದ್ಧಿ ಕಲಿತದ್ನಾ.. ಮಿಂಡನ್ಗುಟ್ಟ ಬಡ್ಡಿಮಗನ್ ದೌಲತ್ನೋಡು.. ಹೆಣ್ಬೇಕಂತ ಹೆಣ್ಣು… ಇರದ್ನೆ ಬಿಗಿಯಾಗಿ ಮಸ್ದು ಹುಟ್ಸಕಾಗ್ದೆ ಇದ್ರು.. ನನ್ನ ಮನಾ ಹೊಸಲ್ಗಬಂದನಾ.. ಕೂಳ್ಗೆಟ್ ನನ್ಮಗ” ಎಂದು ಇವನನ್ನು ಹೋದಲೆಲ್ಲಾ ಹಿಂದಿನಿಂದ ಬೈದುಕೊಳ್ಳುತ್ತಿದ್ದದ್ದು ಸಿಂಗಿಯ ಗಮನಕ್ಕೆ ಬಂದರೂ ಅವನು ಅದಕ್ಕೆ ಸೊಪ್ಪು ಹಾಕುತ್ತಿರಲಿಲ್ಲ. ಹೀಗೆ ದಿನಗಳು ಉರುಳುತ್ತಿರುವಾಗಲೇ ನೀಲಮ್ಮನ ಮುಟ್ಟು ನಿಂತು ಬಸುರಾದಳೆಂಬ ಸುದ್ದಿ ತಿಳಿದಾಗ ಬರಸಿಡಿಲೆರಗಿದಂತಾಗಿದ್ದು ಇದೇ ನಮ್ಮ ಸಿಂಗಿಗೆ.

ಮೊದಲು ಇದು ಸುಳ್ಳೆಂದು ಅವಳು ನಾಟಕವಾಡುತ್ತಿದ್ದಳೆಂದೇ ಭಾವಿಸಿದ್ದ ಸಿಂಗಿ ಕ್ರಮೇಣ ಅವಳ ಹೊಟ್ಟೆಯಲ್ಲಿ ಕುಡಿಯೊಂದು ಅರಳುತ್ತಿರುವುದು ಖಾತ್ರಿಯಾದ ಮೇಲೆ ಇನ್ನೂ ತಬ್ಬಿಬ್ಬಾಗಿ ಹೋದ. ಬರೋಬ್ಬರಿ ಮದುವೆಯಾದ ಹದಿನೈದು ವರ್ಷಕ್ಕೆ ತನ್ನ ಹೆಂಡತಿ ಬಸುರಾಗಿರುವುದು ಹಾಗೂ ಮೂರು ವರ್ಷಗಳಿಂದ ಅವಳನ್ನು ತಾನು ಕೂಡದಿದ್ದರೂ ಈ ಪವಾಡವು ಹೇಗೆ ನಡೆಯಲು ಸಾಧ್ಯವಾಯಿತೆಂದು? ತನ್ನ ಹೆಂಡತಿ ಮೇಲೆ ಸಂಶಯಾಸ್ಪದಗೊಂಡು ಇದರ ಗುಟ್ಟನ್ನು ರಟ್ಟು ಮಾಡಬೇಕೆಂದು ತನ್ನ ಅಕ್ಕಪಕ್ಕದ ಮನೆಯವರಿಂದ ಹಿಡಿದು, ಆಗಾಗ ತನ್ನ ಮನೆಗೆ ಬಂದು ಹೋಗುತ್ತಿದ್ದ ಸಂಬಂಧಿಕರನ್ನು, ತನ್ನ ಮನೆಯ ಆಳು-ಕಾಳುಗಳ ಮೇಲೆಲ್ಲಾ ಒಂದು ಸುತ್ತು ಯೋಚಿಸಿ ಹೆಂಡತಿಯ ನಡವಳಿಕೆಗಳ ಮೇಲೆ ಒಂದು ಕಣ್ಣಿಟ್ಟ ಸಿಂಗಿಯು ಈ ಹಿಂದೆ ಮನೆಗೆ ಬರುತ್ತಿದ್ದ ತನ್ನ ವೇಳೆಗಳನ್ನು ಬದಲಾಯಿಸಿ ದಿಢೀರ್ ಭೇಟಿ ಕೊಡುತ್ತಿದ್ದ. ಆದರೆ ಅದರಿಂದ ಯಾವ ಗುಟ್ಟುಗಳು ಬಯಲಾಗಲಿಲ್ಲ. ಸದಾ ತಲೆ ನೋವೆಂದು, ವಾಂತಿಯೆಂದೂ, ಹೊಟ್ಟೆ ನೋವೆಂದು ಮಂಚದ ಕೆಳಗಿನ ಚಾಪೆಯಲ್ಲಿ ಬಿದ್ದಿರುತ್ತಿದ್ದ ನೀಲಮ್ಮನನ್ನು ಗದರಿಸಿ “ಯಾವ್ ಸೂಳ್ಮಗನ್ಗಾ ಬಸ್ರಾದಿಯೇ ಬೋಸುಡಿ” ಎಂದು ಕೇಳುವಷ್ಟು ರೋಷಾವೇಶಗಳು ಸಿಂಗಿಗಿದ್ದರೂ ಅದನ್ನು ಈಗ ಕೇಳಿ ಮತ್ತೊಂದು ಎಡವಟ್ಟಾದರೆ ಅದು ತನ್ನ ಗಂಡಸ್ತನಕ್ಕೆ ಬೀಳುವ ಮೊದಲ ಕೊಡಲಿಪೆಟ್ಟೆಂದು ಭಾವಿಸಿ ಅವಳು ಬಸುರಾದ ಬಗ್ಗೆ ಯಾವುದೇ ಚಕಾರವೆತ್ತದೆ ಹಲ್ಲುಕಚ್ಚಿ ಮೌನವಾದ.

ಹಾಗೆ ಮೂರು ವರ್ಷದ ಹಿಂದೆ ಹೆಂಡತಿಗೆ ಗೊಡ್ಡಿ ಎಂದು ಹಂಗಿಸಿ ಮಾತಾಡಿದ್ದನ್ನು ತುಂಬಾ ಹೊತ್ತು ನೆನಪು ಮಾಡಿಕೊಂಡು ಚಿಂತಿಸುತ್ತಾ ಹೋದಂತೆ ತನ್ನ ಗಂಡಸ್ತನದ ಮೇಲೆಯೇ ಸಂಶಯಗೊಂಡು ಮಂಕಾದ. ಆದರೆ ಊರಿನ ಜನರು ಮಾತ್ರ ಸಿಂಗಿಯ ಕಿರಾಣಿ ಅಂಗಡಿಯಲ್ಲಿ ಕೂತು ಮುಸಿ ನಗುತ್ತಾ ” ಕೊನ್ಗಾಲಕೂ ನಿನ್ ಮನದ್ಯಾವ್ರು ಕಣ್ಬುಟ್ನಾ ಕಣಾ..! ಗಂಡೋ ಹೆಣ್ಣೋ ಯಾವ್ದೋ ಒಂದು ಆಗ್ಲಿ ಆಮೇಕಾ ಹರ್ಕ ತೀರ್ಸುಬುಡು” ಎಂದು ಹೇಳಿದರೆ ಮತ್ತೊಬ್ಬರು “ಬಸ್ರುತನ ಬಾಣ್ತಾನ ಯಲ್ಲೂವೆ ವಸಿ ಕಸ್ಟವ ಸಿಂಗಿ.. ನಿಮ್ಮವ್ವ ಲೋಲಿ ಇದಿದ್ರ ಯಲ್ಲ ಸರಾಗವಾಗಿ ಮಾಡಳು ಕಣಾ..! ಅವರಪ್ಪನ ಮನ್ಗೆ ಕಳ್ಸಬುಡು ಚೊಚ್ಲು ಹೆರ್ಗಾ ಅಲ್ವಾ” ಹೀಗೆ ಬಗೆಬಗೆಯಾದ ಸಲಹೆಗಳನ್ನು ಸಿಂಗಿಗೆ ಹೇಳುತ್ತಿದ್ದದ್ದು ಕಿರಿಕಿರಿ ಎನಿಸಿ ಅವನು ತನ್ನ ಕಿರಾಣಿ ಅಂಗಡಿಯಲ್ಲಿ ಕೂರುವುದನ್ನೇ ತುಂಬಾ ದಿನಗಳ ಕಾಲ ನಿಲ್ಲಿಸಿಬಿಟ್ಟ.! ಹಗಲಿನಲ್ಲಿ ಎಂದೂ ಮಲಗದ ಸಿಂಗಿ ಅಂದು ಹೆಂಡತಿ ಯಾರಿಗೆ ಬಸುರಾಗಿರಬಹುದೆಂದು ಚಿಂತಿಸುತ್ತಾ ಹೋದಂತೆಲ್ಲ ಕಂಗಾಲಾಗಿ ಅದು ಬಿಸಿತುಪ್ಪವಾಗಿ ಪರಿಣಮಿಸಿದ್ದರಿಂದ ಇತ್ತ ನುಂಗಲಾಗದೆ ಅತ್ತ ಉಗುಳಲಾಗದೆ ಹಾಸಿಗೆಯಲ್ಲಿ ವಿಲವಿಲ ಒದ್ದಾಡುತ್ತಿರುವ ಹೊತ್ತಿಗೆ ಹೆಂಡತಿ ನೀಲಮ್ಮನಿಗೆ ಹೊಟ್ಟೆನೋವು ಕಾಣಿಸಿಕೊಂಡು ಚೀರಿದಳು. ಇದರಿಂದ ಅಕ್ಕಪಕ್ಕದ ಮನೆಯವರು ಓಡೋಡಿ ಬಂದು ಅವಳಿಗೆ ಹೆರಿಗೆ ಸಮಯವೆಂದೂ ಅದಕ್ಕಾಗಿ ಕೂಲ್ಯದ ಸೂಲಗಿತ್ತಿ ಸಣ್ಣಮ್ಮನನ್ನು ಕರೆತರುವಂತೆ ಸಿಂಗಿಗೆ ಹೇಳಿದರು ಅದೇಕೊ ಈ ಮಾತುಗಳು ಅವನ ಕಿವಿಗೆ ಬೀಳಲೊಲ್ಲವು. ಕೊನೆಗೆ ತುಂಬಾ ಹೊತ್ತಿನ ನಂತರ ಒಲ್ಲದ ಮನಸ್ಸಿನಲ್ಲಿಯೇ ಸಿಂಗಿ ಕೂಲ್ಯಕ್ಕೆ ಹೋಗಿ ಸೂಲಗಿತ್ತಿಯನ್ನು ಕರೆತರುವ ಹತ್ತು ನಿಮಿಷಕ್ಕೂ ಮೊದಲೇ ನೀಲಮ್ಮ ಗಂಡು ಮಗುವಿಗೆ ಜನ್ಮವಿತ್ತಿದ್ದಳು.

ಮಗುವನ್ನು ನೋಡಿದವರು “ಎಲ್ಲ ಅವರಪ್ಪ ಸಿಂಗಿ ತರಾನೇ ಕಾಣ್ತಾ ಕಣಾ. ಕೂಸ್ನಲ್ಲಿ ನಮ್ಮ ಸಿಂಗಿನೂ ಹಿಂಗೆ ಸ್ಯಾನೆ ಸಣ್ಕಿದ್ನಾ” ಎನ್ನುವ ಮಾತುಗಳನ್ನು ಕೇಳಿ ಕಣ್ಣೀರು ಜಿನುಗಿಸುತ್ತಾ ಮಗುವನ್ನು ತನ್ನೆರಡು ಅಂಗೈಗಳಿಂದ ಜೋಪಾನವಾಗಿ ಎತ್ತಿಕೊಂಡು ಮುತ್ತಿಟ್ಟು ಅದನ್ನು ಎವೆಯಿಕ್ಕದಂತೆ ನೋಡಿದ. ತುಂಬಾ ಹೊತ್ತಿನ ನಂತರ ಮಲಗಲೆಂದು ಹಾಸಿಗೆಗೆ ಬಂದ ಸಿಂಗಿಗೆ ಏನೇನು ಅರ್ಥವಿಲ್ಲದ ಬದುಕಿದು ಎನಿಸತೊಡಗಿತು. ತಾನು ಇಲ್ಲಿಯವರೆಗೆ ಹೆಮ್ಮೆಪಟ್ಟಿದ್ದ ರಾಜಪರಿವಾರದ ಸಿದ್ದನಾಯಕನ ಕುಡಿಯಾದ ತುಪ್ಪದಿಟ್ಟು ಕೆಂಪನಾಯಕನ ಏಕೈಕ ಮಗನಾದ ಈ ಸಿಂಗಿ ಎಂಬ ಸಿಂಗನಾಯಕನಿಗೆ ಹುಟ್ಟಿದ ಕುಡಿ ನಿಜವಾಗಿಯೂ ನನ್ನದೆಯೇ? ಅಥವಾ ಅನ್ಯರದೇ? ಈ ಹುಟ್ಟುಗಳೆಲ್ಲಾ ಒಗಟುಗಳಾಗಿ ನನಗೇಕೆ ಕಾಡುತ್ತಿವೆ? ಜನರೆಲ್ಲಾ ಹೇಳುತ್ತಿರುವ ಹಾಗೆ ಈಗ ಹುಟ್ಟಿರುವ ಮಗು ನನ್ನಂತೆಯೇ ಇರುವುದು ನಿಜವೇ? ಅವರೆಲ್ಲ ಹೇಳುತ್ತಿರುವುದು ಸತ್ಯವೇ? ಹೀಗೆ ಮಗುವಿನ ಹುಟ್ಟಿನ ಬಗ್ಗೆ ತಲೆಯನ್ನು ಗೊಂದಲದ ಗೂಡು ಮಾಡಿಟ್ಟುಕೊಂಡಿದ್ದ ಸಿಂಗಿಗೆ ಕ್ರಮೇಣ ಬೆಳೆಯುತ್ತಿರುವ ಮಗುವನ್ನು ನೋಡಿದ ಬಹುಪಾಲಿನ ಊರ ಜನರೆಲ್ಲರೂ, ಸಂಬಂಧಿಕರು ಥೇಟು ನಿನ್ನದೇ ಅಚ್ಚು ಎಂದು ಪದೇ ಪದೇ ಹೇಳುತ್ತಿದ್ದದು ಸಿಂಗಿಯ ಮನಸ್ಸಿಗೆ ಮುದ ನೀಡಿ ಅವನ ಸಂಶಯವನ್ನು ಒಂದು ಹಂತಕ್ಕೆ ತಣ್ಣಗಾಗಿಸಿ ಒಳಗೊಳಗೆ ಸಂಭ್ರಮಪಡುವಂತೆ ಮಾಡಿದ್ದರಿಂದ ಮರುವರ್ಷವೇ ಹೆಂಡತಿ ಮತ್ತು ಮಗುವಿನೊಂದಿಗೆ ಮಲೆಮಹದೇಶ್ವರನ ಸನ್ನಿಧಿಗೆ ಹೋಗಿ ದರ್ಶನಪಡೆದು ಮಗುವಿನ ಚೌಲ ಮಾಡಿಸಿ ಅದಕ್ಕೆ ತನ್ನ ರಾಜಪರಿವಾರದ ಹೆಗ್ಗುರುತು ಎನಿಸಿದ್ದ ಅದರ ಮುತ್ತಾತ ಸಿದ್ದನಾಯಕನ ನೆನಪಿಗಾಗಿ ಅದಕ್ಕೆ ಮರಿಸಿದ್ದನಾಯಕನೆಂದು ಹೆಸರಿಟ್ಟು ಬೀಗುತ್ತಾ, ಕಿರಾಣಿ ಅಂಗಡಿಗೆ ಬರುವ ಊರ ಗಿರಾಕಿಗಳೆದುರು ತನ್ನ ಹೆಮ್ಮೆಯ ರಾಜಪರಿವಾರದ ವಂಶದ ಕತೆಯ ಏಳುಬೀಳುಗಳನ್ನು ಗಂಟೆಗಟ್ಟಲೆ ಕೊರೆಯುವ, ಹಾಗೂ ಈಗ ಬೆಳೆಯುತ್ತಿರುವ ತನ್ನ ವಂಶದ ಕುಡಿ ಮರಿಸಿದ್ದನಾಯಕನ ಕಾಲಕ್ಕಾದರೂ ತನ್ನ ತಾತ ಮಾಡಿಟ್ಟಿದ್ದ ಇನ್ನಷ್ಟು ಆಸ್ತಿಯನ್ನು ಸಂಪಾದಿಸಬೇಕೆಂದು ಒಳಗೊಳಗೆ ಲೆಕ್ಕಾಚಾರ ಹಾಕುತ್ತಾ ವ್ಯಾಪಾರದ ಲಾಭ-ನಷ್ಟದ ತೂಗುಯ್ಯಾಲೆಯಲ್ಲಿ ಕೈ ಸುಟ್ಟುಕೊಳ್ಳದಂತೆ ತೂಗಾಡುತ್ತಿರುವ ಸಿಂಗಿ ಒಂದು ಕಡೆಯಾದರೆ.. ಮತ್ತೊಂದು ಕಡೆ ತೊಟ್ಟಿಲಲ್ಲಿ ಎರಡು ವರ್ಷದ ಮರಿಸಿದ್ದನಾಯಕನನ್ನು ತೂಗುತ್ತಿರುವ ನೀಲಮ್ಮನನ್ನು ಮನೆಯ ಜಗುಲಿ ಮೂಲೆಯಿಂದ ಎವೆಯಿಕ್ಕದೆ ನೋಡುವ ಕರಿಟ್ಟನೂ ಈ ಇಳಿವಯಸ್ಸಿನ ಪ್ರಾಯದಲ್ಲೂ ನಿತ್ಯ ಜಳಕ ಮಾಡಿ ತನಗಿರುವ ಬಿಳಿಗೂದಲನ್ನು ಒಪ್ಪ ತೆಗೆದು ಶುಭ್ರವಾದ ಬಿಳಿಬಟ್ಟೆ ತೊಟ್ಟು ಜೇಬಲ್ಲಿರುವ ಮಂಗಳೂರಿನಗಣೇಶ ಬೀಡಿಕಟ್ಟಿನಿಂದ ಬೀಡಿಯೊಂದನ್ನು ತೆಗೆದು “ಕೂಸಾ ಅದೇನಾರಿ ತೂಗ್ದಯೀ ಬಮ್ಮಿ ನಾನಿಲ್ಲ ಅಂದಿದ್ರಾ ಈ ಬಡ್ಡಿಗಂಡೆಲ್ಲಿ ಹುಟ್ತಿತ್ತು..? ಮರಿಸಿದ್ದನಾಯ್ಕನಂತ.. ಮರಿಸಿದ್ದನಾಯ್ಕ..! ನನ್ನ ಗಣಗಂಟ್ವಾ.. ಹುಟ್ಸದವನ್ ಬುಟ್ಬುಟ್ಟು” ಎಂದು ತುಟಿಯಲ್ಲಿ ಕಚ್ಚಿದ್ದ ಬೀಡಿಗೆ ಕಡ್ಡಿಗೀರಿ ಬೆಂಕಿ ಹೊತ್ತಿಸಿಕೊಂಡ…!