ಲೇಖಕಿ ಉಮಾರಾವ್ ಇದೀಗ ತಾನೆ ಹತ್ತು ದಿನಗಳ ಈಜಿಪ್ಟ್ ಪ್ರವಾಸ ಮುಗಿಸಿ ಬಂದಿದ್ದಾರೆ. ಕನ್ನಡ ನಾಡಲ್ಲಿ ಕಾಲಿಟ್ಟ ಮೇಲೂ ‘ಈಜಿಪ್ತ್’ ಎನ್ನುವ ಭೂತ ಅವರನ್ನು ಬಿಟ್ಟ ಹಾಗೆ ಕಾಣಿಸುತ್ತಿಲ್ಲ. ‘ವಿಚಿತ್ರ ರೀತಿಯ, ಹಲವಾರು ಕಾಲದ ಪ್ರತಿಮೆಗಳು ನನ್ನೊಳಗೆ ಗುದ್ದಾಡಿ ವಿಚಿತ್ರ ಬಣ್ಣಗಳು, ಭಾವನೆಗಳನ್ನು ಒಟ್ಟಿಗೆ ಸೃಷ್ಟಿಸುತ್ತಿವೆ. ಎಲ್ಲೆಲ್ಲೂ ಸುತ್ತುವರಿದು ಆವರಿಸಿದ ಅರಬ್ ಸಂಗೀತ ನೋವಿನೆಳೆಗಳನ್ನು ಮಿಡಿಯುತ್ತಾ ಕಾಡುತ್ತಿದೆ. ಎಲ್ಲೋ ಒಂದು ಕಡೆ ನನಗೆ ಈ ಜಾಲದಿಂದ ಹೊರಗೆ ಬರಲೂ ಇಷ್ಟವಿಲ್ಲೆಂದು ತಿಳಿದು ನಗುವೂ ಬರುತ್ತಿದೆ’ ಎಂದು ಒಂದು ರೀತಿ ದಿವ್ಯ ಲಹರಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಕೆಂಡಸಂಪಿಗೆಯಲ್ಲಿ ಇನ್ನು ಮುಂದೆ ಕೆಲವು ವಾರಗಳ ಕಾಲ ಉಮಾರಾವ್ ಬರೆಯುವ ಈಜಿಪ್ಟ್ ಪ್ರವಾಸ ಕಥನಗಳು ಕಾಣಿಸಿಕೊಳ್ಳಲಿವೆ.
ಪ್ಲೇನ್ ನೆಲಮುಟ್ಟಿದ ಕೂಡಲೇ ಕೈರೋ ಏರ್ಪೋರ್ಟ್ ಕೂಡ ಮುಂಬೈಯಂತೆ ಎಂದು ಅನ್ನಿಸಿದ್ದು ಕೆಲವೇ ನಿಮಿಷಗಳು. ಅದೇ ಕ್ಯೂ, ಗೊಡವೆ ಇಲ್ಲದ ನುಗ್ಗಾಡುವ ಜನ, ಗಲಾಟೆ, ತಿಂಡಿ ತಿನಿಸಿನ ಹಾವಳಿ, ಕೊಳಕು ಬಾತ್ರೂಮುಗಳು, ಜೋರಾದ ಸಂಗೀತ. ಆದರೆ ನಮ್ಮ ಗುಂಪಿನ ಹನ್ನೆರಡು ಹೆಂಗಸರು ಮಿನಿ ಬಸ್ಸಲ್ಲಿ ಹತ್ತಿ ಕೂತು ಊರೊಳಗೆ ಸಾಗಿದಂತೆ ಬೇರೆಯೆ ದೃಶ್ಯಗಳು ಎದುರಾಗಿದ್ದವು. ಫಳಿಚ್ ಎಂತಿದ್ದ ಬಿಸಿಲಲ್ಲಿ ಅರಬ್ ಕಂಟ್ರಾಕ್ಟರ್ ರೋಡ್, ಅಗ್ರಿಕಲ್ಚರಲ್ ವರ್ಕ್ಸ್ ರೋಡ್ ರೀತಿಯ ರಸ್ತೆಯ ಹೆಸರುಗಳ ಹಿಂದೆ ಸಾಲು ಸಾಲು ೪-೬ ಮಹಡಿ ವಸತಿ ಕಟ್ಟಡಗಳು. ಒಂದಕ್ಕೂ ಗಾರೆ ಕೆಲಸ ಮಾಡಿರಲಿಲ್ಲ, ಸುಣ್ಣ ಬಳಿದಿರಲಿಲ್ಲ. ಚಾವಣಿ ಸಮನಾಗಿ ಇರಲಿಲ್ಲ. ಇಲ್ಲಿಂದ ಮುಂದೆ ಸಾಗಿ ಕಿಲೋಮೀಟರುಗಳು ಉರುಳಿದಂತೆ ಸಮತಟ್ಟಾಗಿ ಸಾಗುತ್ತಿದ್ದ ರಸ್ತೆಯ ಮೇಲೆ ನೀಲಿ ಆಗಸದ ಮೇಲೆ ಸಂಜೆಗೆಂಪು ಬೆರೆತಿತ್ತು. ಜೊತೆಗೆ ಗಾಳಿಯ ಜೊತೆಗೆ ಸ್ವಲ್ಪ ಚಳಿ.
ಲ್ಯಾಂಡ್ಸ್ಕೇಪ್ ಬದಲಾಗಿ ಎದುರಾದದ್ದು ಗೋರಿಗಳ ಸಾಲುಗಳು. ಅಂದರೆ ಅಲ್ಲಿ ಕಾಣುತ್ತಿದ್ದುದು ಗೋರಿಗಳ ನಡುವೆ ಮನೆಗಳೇ, ಮನೆಗಳ ನಡುವೆ ಗೋರಿಗಳೇ ಏನೂ ತಿಳಿಯದು. ಸುಮಾರು ನಾಲ್ಕು ಮೈಲುಗಳ ಉದ್ದಕ್ಕೂ, ಕಣ್ಣು ಕಾಣುವವರೆಗೂ ಅದೇ ಗೋರಿಗಳು, ಗೋರಿಗಳು, ಗೋರಿಗಳು. ಅಲ್ಲಲ್ಲಿ ಒಣಗಿ ಹಾಕಿದ್ದ ಒಂದು ಗುಲಾಬಿ ಶಾಲು, ಒಂದು ನೀಲಿ ಕುರ್ತಾ, ಒಂದು ಬಿಳಿ ಪೈಜಾಮ-ಶರಟು. ಹಾಗಾದರೆ ಈಗ ಅಲ್ಲಿ ಜನ ಜೀವಿಸುತ್ತಲೂ ಇದ್ದಾರೆ. ‘ದಿಸ್ ಈಸ್ ದ ಸಿತಿ ಆಫ್ ಡೆದ್. ಮೊದಲು ಪ್ರತಿಯೊಂದು ಮನೆಯೂ ಅವರ ಕುಟುಂಬದ ಗೋರಿಗಳಿಗೆ ಮೀಸಲಾಗಿದ್ದುವು. ಆದರೆ ಈಗ ವಸತಿ ಕಷ್ಟ, ದುಬಾರಿ. ಹಾಗಾಗಿ ಬಡ ಕಾರ್ಮಿಕರು ಕಿಕ್ಕಿರಿದ ಊರಿಂದ ದೂರವಾಗಿ ಇಲ್ಲಿಯೂ ವಾಸಿಸುತ್ತಾರೆ.’ ನಮ್ಮ ಗೈಡ್ ರಿಮಾನ್ ಹೇಳುತ್ತಿದ್ದ. ಚಳಿ ಹೆಚ್ಚಾಗಿತ್ತು. ಕತ್ತಲು ಕವಿದಿತ್ತು.
ಮತ್ತೆ ಅರಬ್ ಸಂಗೀತದ ಹೊನಲಿನಲ್ಲಿ ಅಲ್ ಖಲೀಲಿ ಬಜಾರ್. ನಮ್ಮ ಕ್ರಾಫರ್ಡ್ ಮಾರ್ಕೆಟ್ನಂತೆ ಕಾಣುವ ಕಿಕ್ಕಿರಿದ ಓಣಿಗಳ ಪುಟ್ಟಪುಟ್ಟ ಅಂಗಡಿಗಳಲ್ಲಿ ತರಹೇವಾರಿ ವ್ಯಾಪಾರ. ‘ನಮಸ್ತೆ, ಯೂ ಇಂಡಿಯನ್? ಅಮಿತಾಬ್ ಬಚ್ಚನ್! ವಿ ಲವ್ ಇಂದಿಯಾ!’
ಮಾತು ಮಾತಿಗೂ ಮೈ ಕೈ ಮುಟ್ಟುವ, ಮುಖ ಹತ್ತಿರ ತಂದು ಮಾತಾಡುವ ಸೇಲ್ಸ್ ಮನ್ ಗಳು. ನಮ್ಮ ಗುಂಪಿನಲ್ಲಿ ‘ಈಜಿಪ್ಶಿಯನ್’ ನಂತೆ ಕಾಣುತ್ತಿದ್ದ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರಿಗೆ ಒಬ್ಬನ ಸವಾಲು – ‘ಐ ಗಿವ್ ಯೂ ಥೌಜಂಡ್ ಕ್ಯಾಮಲ್ಸ್, ಮ್ಯಾರಿ ಮಿ?!’
‘ಮದಾಮ್, ಮದಾಮ್’ ಎಂದು ಸುತ್ತುವರಿದ ಉದ್ದ ನಿಲುವಂಗಿಯ ಮಾರಾಟಗಾರರ ನಡುವೆ ಬೇರೆ ಬೇರೆ ಗಾತ್ರದ ಪಿರಮಿಡ್ಡುಗಳು, ರಾಣಿಯರ ಅತ್ತರು, ರಾಶಿ ರಾಶಿ ಹಾಕಿದ ಅದೃಷ್ಟ ತರುವ ಜೀರುದುಂಬಿಗಳು, ಪಪೈರಸ್ನಲ್ಲಿ ಬಿಡಿಸಿದ ಚಿತ್ರಗಳಲ್ಲಿ ನಗ್ನ ಕಪ್ಪು ಸೇವಕಿಯರ ನಡುವೆ ತುತನ್ ಖಮಾನ್, ಮೈತುಂಬಾ ಆಭರಣ ಧರಿಸಿ ಕೂತ ಕಪ್ಪು ಬೆಕ್ಕು…
‘ಐ ವಾಂಟ್ ಟು ಬೈ ಅ ಸ್ವಿಮ್ ಸೂಟ್ ಯಾರ್’ ಈ ಧ್ವನಿ ಬಂದಿದ್ದು ಗಂಡ ಮಕ್ಕಳಿಂದ ‘ಹಾಲಿಡೆ’ ಗಾಗಿ ದಿಲ್ಲಿಯಿಂದ ಬಂದಿದ್ದ ಫೈನಾನ್ಶಿಯಲ್ ಅನಲಿಸ್ಟ್ ಇಂದ. ಮಾರಾಟಗಾರ ಧೃಡವಾಗಿ ತಲೆ ಅಲ್ಲಾಡಿಸಿದ. ‘ನೊ ಸ್ವಿಮ್ ಸೂತ್ ಇನ್ ಕೈರೋ’. ಮತ್ತೆ ದೂರದ ರೆಸ್ಟೊರೆಂಟ್ ನಿಂದ ಕರೆ ‘ಮದಾಮ್, ಸಾಶಾ?!'(ಹುಕ್ಕ)
ಇದೆಲ್ಲದರ ನಡುವೆಯೇ ಹತ್ತಿರವೇ ಇದ್ದ ಗಮಲಿಯಾದ ಕಿರಿದಾದ ಓಣಿಯೊಂದರಲ್ಲಿ ನಮ್ಮ ಮೆಚ್ಚಿನ ಕಾದಂಬರಿಕಾರ ನಗೀಬ್ ಮೆಹ್ಫೂಜ ಜನ್ಮ ತಾಳಿದ ಸ್ಥಳ ನಿದ್ದೆ ಹೋಗಿತ್ತು. ಅಂತೆಯೇ ಮಣ್ಣು ಕಲ್ಲುಗಳ ರಾಶಿಗಳ ನಡುವೆ ತಮ್ಮ ಆಭರಣ, ಆಯುಧ, ಸಿಂಹಾಸನ, ಅಷ್ಟೈಶ್ವರ್ಯ, ನೆಚ್ಚಿನ ಗುಲಾಮರೊಂದಿಗೆ ನಿರ್ಲಿಪ್ತರಾಗಿ ಸಹಸ್ರಾರು ವರ್ಷಗಳಿಂದ ಮತ್ತೊಮ್ಮೆ ಏಳಲು ಕಾಯುತ್ತಾ ಫೇರೋಗಳು ಎದೆ ಮೇಲೆ ಕೈ ಮಡಚಿ ಮಲಗಿದ್ದರು….. ನಾಸೆರ್ ನ ದೂರ ದೃಷ್ಟಿಯಿಂದ ತಡೆಹಿಡಿಯಲ್ಪಟ್ಟ ನೈಲ್ ಆಗಾಗ ತುಂಬಿ ಹರಿದು ಪ್ರತಿಭಟಿಸುತ್ತಲೇ ಇತ್ತು…
ಫೇರೋಗಳ ನಾಡಿನಲ್ಲಿ ೨- ಈಜಿಪ್ಟಿಗೆ ಹೊರಟ ಹನ್ನೆರಡು ಹೆಂಗಸರು
ನಾವು ಹನ್ನೆರಡು ಹೆಂಗಸರು ಈಜಿಪ್ಟ್ ಪ್ರವಾಸಕ್ಕೆ ಹೊರಟು ನಿಂತಿದ್ದೆವು. ಬೇರೆಬೇರೆ ವಯಸ್ಸಿನ, ಬೇರೆಬೇರೆ ಆಸಕ್ತಿಗಳ, ಬೇರೆಬೇರೆ ಕ್ಷೇತ್ರಗಳಲ್ಲಿ ದುಡಿಯುವ, ಬೇರೆಬೇರೆ ರಾಜ್ಯಗಳಿಂದ ಬಂದ ಹನ್ನೆರಡು ಜನರನ್ನು ಒಂದು ಮಾಡಿದ್ದು ತಿರುಗಾಟದ ಹುಚ್ಚು. ಇದನ್ನು ಏರ್ಪಾಟು ಮಾಡಿದವರು ವಿಮೆನ್ ಆನ್ ವಾನ್ಡರ್‌ಲಸ್ಟ್ ಎಂಬ ಸಂಸ್ಥೆ. ಬೆಂಗಳೂರಿನಿಂದ ಸಾಫ್ಟ್ವೇರ್ ಎಂಜಿನಿಯರ್ ಚಿತ್ರಾ, ಹೈದರಾಬಾದಿನಿಂದ ರಿಸರ್ವ್ ಬ್ಯಾಂಕ್ ಆಫೀಸರ್ ಪಾರ್ವತಿ, ಮುಂಬೈಯಿಂದ ವಜ್ರ ವ್ಯಾಪಾರಿಯ ಹೆಂಡತಿ ಕಲ್ಪನಾ ಮತ್ತು ಮಲ್ಟಿ ನ್ಯಾಶನಲ್ ಸಂಸ್ಥೆಯೊಂದರ ಮುಖ್ಯಸ್ಥೆ ಹೀರೂ ಬಂದಿದ್ದರು. ದೆಹಲಿಯಿಂದ ಫೈನ್ಯಾನ್ಶಿಯಲ್ ಕನ್ಸಲ್ಟೆಂಟ್ ಸೋಹಿನಿ, ಡಾಬುರ್ ನಲ್ಲಿ ದುಡಿಯುತ್ತಿದ್ದ ಬಂಗಾಲಿ ಟೀನಿ ಮತ್ತು ಪಂಜಾಬಿ ಪೂನಮ್, ಆಸ್ಟ್ರೇಲಿಯನ್ ಹೈಕಮಿಶನ್ ನಲ್ಲಿದ್ದ ಸಿಮ್ರತ್, ಐಟಿ ಕಂಪನಿಯಲ್ಲಿ ಫೈನಾನ್ಸ್ ಮ್ಯಾನೇಜರ್ ಆಗಿದ್ದ ಸೀಮಾ, ಸಿಸ್ಟಮ್ಸ್ ಅನೆಲಿಸ್ಟ್ ಆಗಿದ್ದ ಮನ್ ಪ್ರೀತ್ ಮುಂತಾದವರಿದ್ದರು. ಹಾಗಾಗಿ ಈಜಿಪ್ಟ್ ನಲ್ಲಿ ತಿರುಗುವ ಜೊತೆಗೆ ಇಷ್ಟೊಂದು ವೈಖರಿಯ ಬೇರೆ ಬೇರೆ ವ್ಯಕ್ತಿಗಳ ಜೊತೆ ಸಮಯ ಕಳೆಯುವುದು ನನಗೆ ಇನ್ನೊಂದು ರೀತಿಯ ‘ಟ್ರ್ಯಾವಲ್’ ಎನ್ನಿಸಿತು. ಇದರಲ್ಲಿ ಯುವ ಚೆಲುವೆಯರು, ರಜಾ ಕೂಡಿ ಹಾಕಿ ಸ್ಕೂಲಿಗೆ ಹೋಗುವ ಮಕ್ಕಳನ್ನು ಮನೆಯವರಿಗೆ ಕೊಂಚ ದಿನ ಒಪ್ಪಿಸಿ ತಮಗಾಗಿ ಅಮೂಲ್ಯ ಅವಕಾಶವನ್ನು ಸೃಷ್ಟಿಸಿಕೊಂಡ ತಾಯಿಯರು, ಮದುವೆ ಮಕ್ಕಳ ಹಂಗೇ ಬೇಡವೆಂದು ಒಂಟಿಯಾಗಿ ತಮ್ಮ ಗುರಿ ಸಾಧಿಸುವ ಹಂಬಲದಲ್ಲಿರುವ ‘ಸಿಂಗಲ್ ವಿಮೆನ್’, ಮಕ್ಕಳು ದೊಡ್ಡವರಾಗಿ ಜವಾಬ್ದಾರಿ ಮುಗಿದು ಹಾಯಾಗಿ ತಮ್ಮ ಹುಚ್ಚುಗಳ ಬೆನ್ನಟ್ಟುವ ನನ್ನಂಥವರು ಎಲ್ಲರೂ ಇದ್ದರು. ಗುರುತಿಸಲು ಸುಲಭವಾಗುವಂತೆ ‘ವಾವ್’ಹೇಳಿದ ಗುಲಾಬಿ ಬಣ್ಣದ ಟಾಪ್ ತೊಟ್ಟು ದೆಹಲಿ ಏರ್ಪೋರ್ಟಿನಲ್ಲಿ ಸೇರಿದ ನಮಗೆಲ್ಲಾ ಈ ಪ್ರಯಾಣದಲ್ಲಿ ಒಂದು ಬೋರಿಂಗ್ ಮುಮೆಂಟೂ ಇರುವುದಿಲ್ಲ ಎನ್ನುವುದು ಖಾತ್ರಿಯಾಯಿತು.
****
“ಇಲ್ಲಿ ದೆಹಲಿಯವರದೇ ಮೆಜಾರಿಟಿ”
“ಈಗ ಪರಿಚಯ ಮಾಡಿಕೊಳ್ಳೋಣ”
ಪರಿಚಯಗಳಾದವು.
“ಈಗ ಇಲ್ಲಿ ನಾವು ಕೆಲವರು ದೆಹಲಿಯಲ್ಲಿ ಕೆಲಸ ಮಾಡ್ತಾ ಇದೀವಿ ಅಷ್ಟೆ. ನಾವು ಪರ್ಮನೆಂಟ್ ಡೆಲ್ಲಿವಾಲಾಗಳಲ್ಲ. ಐ ಅಯಾಮ್ ಅ ಬಾಂಗ್!.”
‘ನಾನು ಚಂಡೀಘಡದವಳು. ಕೆನಡಾದಲ್ಲಿ ಹದಿನೈದು ವರ್ಷ ಕಳೆದು ಇತ್ತೀಚೆಗೆ ಡೆಲ್ಲಿಗೆ ಬಂದೆ.’
‘ನಾನು ಪಕ್ಕಾ ಡೆಲ್ಲಿವಾಲಿ. ನನ್ನ ಅಮ್ಮ ಲಾಹೋರಿನವಳು. ದೇಶ ವಿಭಜನೆಯಾದಾಗ ಇಲ್ಲಿಗೆ ಬಂದವಳು. ಅಮ್ಮ ಇವತ್ತಿಗೂ ತನ್ನ ಬರ್ತ್ ಪ್ಲೇಸ್ ಎಂದು ಬರೆಯಬೇಕಾದ ಕಡೆ ಲಾಹೋರ್, ಇಂಡಿಯಾ ಎಂದೇ ಬರೀತಾಳೆ. ಲಾಹೋರ್ ಬಗ್ಗೆ ಮಾತಾಡೋಕೆ ಹೋದರೆ ತುಂಬಾ ಭಾವುಕಳಾಗ್ತಾಳೆ.’
‘ನಮ್ಮ ತಂದೆ, ತಾಯಿನೂ ಮೊದಲು ಆ ಕಡೆ ಪಂಜಾಬಿನಲ್ಲಿದ್ದವರೇ. ನಾವು ಸರ್ದಾರ್ ಗಳು. ಅದಕ್ಕೇ ನನಗೆ ಅಮ್ಮನ ಜೊತೆ ಪಂಜಾ ಸಾಹಿಬ್ ಯಾತ್ರೆ ಮಾಡಿ ಬರಬೇಕೆಂಬುದು ಕನಸು. ವೀಸಾ ಸಿಗಬೇಕು..’
‘ಪಂಜಾ ಸಾಹಿಬ್? ಕೇಳೇ ಇರಲಿಲ್ಲ.’
‘ಅಲ್ಲಿ ಒಂದು ಬಂಡೆಯ ಮೇಲೆ ನಮ್ಮ ಗುರು ನಾನಕ್ ಜೀಯ ಹಸ್ತದ ಗುರುತಿದೆ. ಹಿಂದೊಮ್ಮೆ ಅವರು ದೇಶ ದೇಶ ತಿರುಗಾಡಿಕೊಂಡು ಆ ಸ್ಥಳದತ್ತ ಬರುತ್ತಿದ್ದರಂತೆ. ಸ್ವಲ್ಪ ದೂರ ಗುಡ್ಡದ ಮೇಲೆ ಕಂಧಾರಿ ಎಂಬ ಸೂಫಿ ಸಂತರು ಡೇರಾ ಹಾಕಿಕೊಂಡಿದ್ದರಂತೆ. ನಾನಕರ ಪ್ರಖ್ಯಾತಿ ಕೇಳಿ ಅಸೂಯೆಗೊಂಡಿದ್ದ ಅವರು, ಇವರನ್ನು ಕಂಡು ಒಂದು ಬಂಡೆಯನ್ನು ಉರುಳಿಸಿದರಂತೆ. ನಮ್ಮ ಗುರೂಜಿ ಅದನ್ನು ಒಂದು ಕೈಯಿಂದಲೇ ತಡೆದು ನಿಲ್ಲಿಸಿದರಂತೆ. ಆ ಗುರುತು ಇನ್ನೂ ಇದೆ. ನಂತರ ಕಂಧಾರಿ ಬಾಬಾ ಅವರೂ ನಾನಕ್ ಜೀ ಅವರ ಶಿಷ್ಯರಾದರಂತೆ’
‘ನೀನು ಪ್ಲ್ಯಾನ್ ಹಾಕು. ನಾನೂ ಬರ್ತೀನಿ..’
‘ಹೋದ ತಿಂಗಳು ತಾನೇ ಚೈನಾಗೆ ಹೋಗಿ ಬಂದಿದೀನಿ, ಸ್ವಲ್ಪ ದಿನ ಕಾಯಬೇಕು. ಛುಟ್ಟಿ ನಹೀಂ ಹೈ’
‘ನೀನು ಪುಣ್ಯವಂತೆ. ಗಂಡನನ್ನು ಒಪ್ಪಿಸಬೇಕಾಗಿಲ್ಲ, ಅದು ಸುಲಭವಲ್ಲ..’
‘ಪಾಪ, ಎಲ್ಲಾ ಗಂಡಂದಿರೂ ಹಾಗೇನಿರುವುದಿಲ್ಲ.’
‘ಸುಮ್ಮನಿರು.ಆಲ್ ಹಸ್ಬೆಂಡ್ಸ್ ಆರ್ ಎಮ್ಸೀಪೀಸ್!’
*****
ದೆಹಲಿಯಿಂದ ಟೇಕಾಫ್ ಆದ ವಿಮಾನ ಮೊದಲು ಇಳಿದಿದ್ದು ಬಹ್ರೇನ್ ನಲ್ಲಿ. ಹೊರನೋಟಕ್ಕೆ ಎಲ್ಲಾ ಅಂತರರಾಷ್ಟ್ರೀಯ ನಿಲ್ದಾಣಗಳಂತೆಯೇ ಇದ್ದ ಅಲ್ಲಿ ,ಒಳಗೆ ಬರುತ್ತಲೇ ಕಣ್ಣು ಕೋರೈಸುವ ದೀಪಗಳ ನಡುವಿದ್ದ ಡ್ಯೂಟಿ ಫ್ರೀ ಸ್ಟೋರುಗಳು ಮದ್ಯ, ಚಾಕೊಲೇಟು, ಆಟದ ಸಾಮಾನು, ದುಬಾರಿ ಬ್ರಾಂಡುಗಳ ಬಟ್ಟೆ, ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ಗಳು ಮುಂತಾದುವನ್ನು ಪ್ರದರ್ಶಿಸುತ್ತಿದ್ದುವು. ಒಂದು ಕಡೆ ಫುಡ್ ಕೋರ್ಟ್ ಜಗತ್ತಿನ ಎಲ್ಲಾ ತಿನಿಸುಗಳನ್ನು ಪ್ರದರ್ಶಿಸುತ್ತಾ ಎಲ್ಲರ ಬಾಯಲ್ಲಿ ನೀರೂರಿಸಲು ಪ್ರಯತ್ನಿಸುತ್ತಿತ್ತು. ಜೊತೆಗೆ ಮಿಂಚುವ ಚಿನ್ನ, ಹವಳ, ನೀಲಮಣಿ, ಪಚ್ಚೆಯ ಆಭರಣಗಳ ಅಂಗಡಿಗಳು ಹೊಂಗೂದಲಿನ ಬಿಳಿಯರನ್ನು, ಶ್ರೀಮಂತ ಶೇಖ್ ಗಳ ಮಡದಿಯರನ್ನು ಆಕರ್ಷಿಸಲು ಹರ ಸಾಹಸ ಮಾಡುತ್ತಿದ್ದವು. ಎದುರು ಸ್ಟೋರ್ ನಲ್ಲಿ ಹ್ಯಾಪಿ ಕ್ರಿಸ್ಮಸ್ ಎಂದು ಹಿಮದ ಗುಡ್ಡೆಯ ಮೇಲೆ ಕ್ರಿಸ್ಮಸ್ ಟ್ರೀ ಪಕ್ಕ ನಿಂತ ಸ್ಯಾಂಟಾ ಕ್ಲಾಸ್ ಕೈ ಬೀಸುತ್ತಿದ್ದ. ನವೆಂಬರ್ ನಲ್ಲೇ ಅಲ್ಲಿಗೆ ಉತ್ಸಾಹದಿಂದ ಹಾಜರಾದ ಸಾಂಟಾನನ್ನು ನೋಡಿ ಆಶ್ಚರ್ಯವೆನ್ನಿಸಿತು. ಅದೆಲ್ಲದರ ನಡುವೆ ಬೇರೆ ಕಡೆಯ ಏರ್ಪೋರ್ಟ್ ಗಳಿಗಿಂತ ಕಂಡುಬಂದ ವ್ಯತ್ಯಾಸವೆಂದರೆ ಒಂದು ಬದಿ ಇದ್ದ ‘ಪ್ರಾರ್ಥನಾ ಕೋಣೆ’.
ಹೀಗೆ ಸುತ್ತಾಡುತ್ತ ಹೋದಂತೆ, ನನ್ನನ್ನು ಅಲ್ಲಿ ಹಿಡಿದು ನಿಲ್ಲಿಸಿದ್ದು ಒಂದು ಅಂಗಡಿ. ಅಲ್ಲಿ ಹಿಂದಿಯಲ್ಲಿ ಸ್ಪಷ್ಟವಾಗಿ ಮಾತಾಡುತ್ತಿದ್ದ ಮಾರಾಟಗಾರ ಎಲ್ಲಿಯವರೆಂದು ನಾವು ಕೇಳಿದಾಗ ತಾನು ಶ್ರೀಲಂಕಾದಿಂದ ಬಂದವನೆಂದು ಹೇಳಿದ. ಸ್ಥಳೀಯ ಮಿಠಾಯಿಗಳು, ಕರಕುಶಲ ಸಾಮಾನುಗಳು, ಬಾಟಲಿಗಳಲ್ಲಿ ಬಣ್ಣಬಣ್ಣದ ಮರಳು ತುಂಬಿಸಿ ಮಾಡುವ ಚಿತ್ತಾರದ ವಸ್ತುಗಳು, ಸಾಬೂನು-ಸಾಂಬ್ರಾಣಿ-ಪೂಜಾ ಸಾಮಗ್ರಿಗಳು, ‘ಸಾಶಾ’ಗೆ (ಅಂದರೆ ಹುಕ್ಕಾ) ತುಂಬಿಸುವ ವಿಶೇಷ ತಂಬಾಕು, ಅಲ್ಲಿಯೇ ಬೆಳೆಯುವ ಖರ್ಜೂರ, ಜೊತೆಗೆ ಬಾದಾಮಿ, ಅಖ್ರೋಟು, ಪಿಸ್ತಾ ಸೇರಿಸಿ ಮಾಡಿದ ತಿನಿಸುಗಳು, ಹುರಿದ ಸೂರ್ಯಕಾಂತಿಯ ಬೀಜ, ಕುಂಬಳಕಾಯಿ ಬೀಜ ಮತ್ತಿತರ ವಸ್ತುಗಳಿಂದ ತುಂಬಿತ್ತು. ಯಾವುದೇ ಹೊತ್ತಿನಲ್ಲೂ ವಿಚಿತ್ರ ತಲ್ಲಣ ಮೂಡಿಸುವ ಅರಾಬಿಕ್ ಸಂಗೀತ ಅಲ್ಲಿಂದ ಹರಿದು ಬರುತ್ತಿತ್ತು.
ಮೂರು ನಾಲ್ಕು ಗಂಟೆಗಳು ಕೈರೋ ಪ್ಲೇನಿಗಾಗಿ ಕಾಯಬೇಕಾಗಿದ್ದರಿಂದ ನಮಗೆ ಸರಿ ಹೊಂದಬಹುದಾದದ್ದು ಏನಾದರೂ ತಿನ್ನಲು ಸಿಗುವುದೇ ಎಂದು ನಾವು ಸಸ್ಯಾಹಾರಿಗಳು ಹುಡುಕುತ್ತಾ ಹೊರಟೆವು. ಕೊನೆಗೂ ಸೇಫ್ ಎನ್ನಿಸಿದ್ದು ಅಲ್ಲಿದ್ದ ಮಕ್ದೊನಾಲ್ಡ್ಸ್ ನಲ್ಲಿ ಪೊಟ್ಯಾಟೋ ಫ್ರೈಸ್ ತಿನ್ನುವುದು. ಅದನ್ನೇ ಕೊಂಡು, ಆ ಚಿಕ್ಕ ಜಾಗದಲ್ಲಿ ಉಳಿದಿದ್ದ ಖಾಲಿ ಕುರ್ಚಿಗಳನ್ನು ಆರಿಸಿ ಒಟ್ಟಿಗೆ ಹಾಕಿ ಕುಳಿತೆವು. ಒಂದಷ್ಟು ಮಕ್ಕಳು ಕೈತುಂಬಾ ಅದೇ ಕೊಂಡ ಟೆಡ್ಡಿ ಬೇರ್ ಹಿಡಿದುಕೊಂಡು ಕೋನ್ ಐಸ್ ಕ್ರೀಮ್ ತಿನ್ನುತ್ತಾ ಗಲಾಟೆ ಮಾಡುತ್ತಿದ್ದರು.
ಹಾಗೇ ಕೂತು ಹೋಗಿ ಬರುವವರನ್ನು ನೋಡುತ್ತಿದ್ದಾಗ ಇದೆಲ್ಲಾ ತಳ್ಳಿಕೊಂಡು ಬೇರೆಯೇ ಜನಪ್ರವಾಹ ಹರಿದು ಬರತೊಡಗಿತು. ಅಚ್ಚ ಬಿಳಿ ಬಟ್ಟೆ ಉಟ್ಟು ಮಣಿಮಾಲೆ ಕೈಯಲ್ಲಿ ಹಿಡಿದು ಸುತ್ತಮುತ್ತ ತಿರುಗಿಯೂ ನೋಡದೆ ಗಂಭೀರವಾಗಿ ಸಾಲುಸಾಲು ಹಜ್ ಯಾತ್ರಿಗಳು ಅಲ್ಲೇ ಇದ್ದ ಪ್ರಾರ್ಥನಾ ಕೋಣೆಯಿಂದ ಹೊರಬೀಳುತ್ತಿದ್ದರು. ಹಣ್ಣು ಹಣ್ಣು ಮುದುಕಿಯರನ್ನು ಕೈಹಿಡಿದು ಮಕ್ಕಳು ಕರೆದುಕೊಂದು ಹೋಗುತ್ತಿದ್ದರು. ಅಲ್ಲಿ ನಿಂತಿದ್ದ ಏರ್ ಲೈನ್ ಸ್ಟಾಫ್ ನವನು ಅವರಿಗೆ ಪ್ರೀತಿಯಿಂದ ಬೇಗ ಬೇಗ ಹೋಗಿ, ಈ ಫ್ಲೈಟ್ ತಪ್ಪಿದರೆ ಮತ್ತೆ ಕಾಯಬೇಕು ಎಂದು ಅವರ ಗೇಟುಗಳಿಗೆ ಕೊಂಡು ಹೋಗಿಬಿಡುತ್ತಿದ್ದ. ಆಗ ಬಂದ ಗುಂಪು ಕರ್ನಾಟಕಾ ಹಜ್ ಗ್ರೂಪ್ ಎಂಬ ಫಲಕ ಹಿಡಿದಿದ್ದು ಕಂಡು ಖುಶಿಯಾಯಿತು. ಅವರನ್ನು ಕಳಿಸಿ ನಮ್ಮ ಹತ್ತಿರ ಬಂದ ಏರ್ಲೈನ್ ನವನು ‘ಇಂಡಿಯಾ? ಎಂದ. ‘ನೀವೆಲ್ಲಿಯವರು’ ಎಂದಿದ್ದಕ್ಕೆ ನಗುತ್ತಾ ‘ಪಾಕಿಸ್ತಾನ್ ಇರಬಹುದು, ಬಾಂಗ್ಲಾದೇಶ್ ಇರಬಹುದು’ ಎಂದು ಇಂಗ್ಲೀಷಿನಲ್ಲಿ ತಮಾಶೆ ಮಾಡಿದ. ಆಮೇಲೆ ‘ಮಂಗಳೂರ್, ಬಾಂಬೆ ಎರಡೂ ಕಡೆ ನಮ್ಮವರು ಇದ್ದಾರೆ’ ಎಂದ. ಕನ್ನಡ ಬರುತ್ತಾ ಎಂದಿದ್ದಕ್ಕೆ, ‘ಕನ್ನಡ, ತುಳು ,ಹಿಂದಿ, ಮರಾಠಿ, ಇಂಗ್ಲಿಷ್, ಅರಾಬಿಕ್ ಎಲ್ಲಾ…’ ಎಂದು ನಕ್ಕ. ‘ಬಾಂಬೇಲಿ ನಮ್ಮ ಬಿಸಿನೆಸ್ ಉಂಟು, ಹೊಟೇಲ್ ಉಂಟು’ ಎಂದು ವಿವರ ಕೊಟ್ಟ. ಕನ್ನಡ ಕೇಳಿ ಖುಶಿಯಾಯಿತು.
ಫೇರೋಗಳ ನಾಡಿನಲ್ಲಿ ೩: ಮಮ್ಮಿ ನೋಡಲು ಬಂದ ಪುಟ್ಟ ಹೆಂಗಸರು
ಬಸ್ಸು ಓಡುತ್ತಿತ್ತು. ಅಂದು ಗೀಜಾ ಪಿರಮಿಡ್ಡುಗಳನ್ನು ನೋಡುವ ಉತ್ಸಾಹ ನಮ್ಮೆಲ್ಲರಲ್ಲಿ ತುಂಬಿತ್ತು. ಏರ್ ಕಂಡೀಶನ್ಡ್ ಕಿಟಕಿಯಾಚೆ ನೀಲ ಮುಗಿಲು. ಕೆಳಗೆ ಮಣ್ಣು ಬಣ್ಣದ ಕುಂಚ.
ಮಣ್ಣು ಬಣ್ಣದ ಕಟ್ಟಡಗಳು, ಅದೇ ಬಣ್ಣದ ನೆಲ. ಧೂಳು ಸೃಷ್ಟಿಸಿದ ಮಬ್ಬು. ನಡುವೆ ನೇರವಾಗಿ ಏರು ತಗ್ಗಿಲ್ಲದೆ ಓಡುತ್ತಿರುವ ಕಪ್ಪು ರಸ್ತೆ. ದಾರಿಯುದ್ದಕ್ಕೂ ನಡು ನಡುವೆ ಎದ್ದು ನಿಂತ ಮಸೀದಿಯ ಗೋಪುರಗಳ ನಡುವೆ ಗಾರೆ ಸುಣ್ಣ ಕಾಣದ ಐದಾರು ಮಹಡಿಯ ವಸತಿ ಕಟ್ಟಡಗಳು. ಎಲ್ಲ ಕೆಲಸಗಾರರು ಇದ್ದಕ್ಕಿದ್ದಂತೆ ತಮ್ಮ ಸಲಕರಣೆಗಳನ್ನು ಅಲ್ಲೇ ಬಿಟ್ಟು ನಡೆದು ಬಿಟ್ಟಂತೆ. ಆದರೆ ಕಿಟಕಿಗಳ ಮೂಲಕ ಹಾರಾಡುವ ಬಣ್ಣ ಬಣ್ಣದ ಪರದೆಗಳು, ಮೇಲೆ ಟೀವಿ ಡಿಶ್ ಗಳು,. ತೂಗಾಡುತ್ತಿರುವ ವಿದ್ಯುತ್ ವಯರ್ ಗಳು ಇಲ್ಲಿ ಜನ ವಾಸಿಸುತ್ತಿರುವುದನ್ನು ಸಾರಿ ಹೇಳುತ್ತಿದ್ದುವು.
ಗೈಡ್ ಹೇಳುವಂತೆ ಇದು ಅಗ್ಗವಾಗಿ ಬದುಕಲು ಆ ದೇಶದಲ್ಲಿ ಜನ ಕಂಡು ಕೊಂಡಿರುವ ಒಂದು ಉಪಾಯ. ಈಜಿಪ್ತಿನಲ್ಲಿ ಅರೆಬರೆ ಕಟ್ಟಿದ, ಫಿನಿಶ್ ಮಾಡದ ಮನೆಗಳಿಗೆ ತೆರಿಗೆ ನೀಡಬೇಕಾಗಿಲ್ಲವಂತೆ. ಹಾಗಾಗಿ ಕೆಳವರ್ಗದ ಜನ ಇಂತಹ ಮನೆಗಳಿಗೆ ಶರಣು ಹೋಗಿದ್ದಾರಂತೆ. ನಮ್ಮಲ್ಲಿ ಲಕ್ನೋ ಚಿಕನ್ ಕಸೂತಿಯ ರೆಡಿಮೇಡ್ ಪೈಜಾಮಾ, ಕುರ್ತಾ ಮಾರುವ ಬಡ ಕುಶಲಕರ್ಮಿಗಳು ಸರ್ಕಾರದ ರೂಲ್ಸಿನಂತೆ ತಮ್ಮ ಸರಕು ಹೊಲೆಯದ ಬಟ್ಟೆಯ ವಿಭಾಗದಲ್ಲಿ ಬರುವಂತೆ ಮಾಡಲು ಅದಕ್ಕೆ ಗುಂಡಿ, ಲಾಡಿಗಳನ್ನು ಹಾಕದೆ ,ಡಬಲ್ ಸ್ಟಿಚಿಂಗ್ ಮಾಡದೆ ಮಾರಾಟಮಾಡಿ ತೆರಿಗೆ ಉಳಿಸುವ ಉಪಾಯ ನೆನಪಾಯಿತು.
ಗೀಜಾ ಪಿರಮಿಡ್ಡುಗಳು ನಮ್ಮ ಮನಸ್ಸಿನಲ್ಲಿ ಮೂಡಿದ್ದಂತೆ ಕೈರೋದಿಂದ ನೂರಾರು ಮೈಲು ದೂರವೇನೂ ಇರಲಿಲ್ಲ. ಬೆಳಗಾಗೆದ್ದು ದಾರಿಯುದ್ದಕ್ಕು ಬಲಬದಿಯಲ್ಲಿಯೇ ಓಡುವ ಸಾಲುಸಾಲು ಹೊಳೆಯುವ ಮಿನಿ ಬಸ್ಸುಗಳ ಜೊತೆಗೆ ನಾವೂ ಸೇರಿಕೊಂಡಿದ್ದೆವು. ಅಲ್ಲಿಯವರ ಟೊಯೋಟಾ, ಫೋರ್ಡ್, ಫಿಯಟ್ ಎಲ್ಲ ಕಾರುಗಳೂ ಒಂದಿಷ್ಟು ಏಟುತಿಂದು, ಮಂಕಾದ ಪೇಂಟ್ ಧರಿಸಿ, ಅಮೆರಿಕಾದಲ್ಲಿ ಬಳಸಿ ಎಸೆದ ಮೇಲೆ ಇಲ್ಲಿ ಬಂದು ಸೇರಿದಂತಿದ್ದವು. ರಸ್ತೆ ಪಕ್ಕದಲ್ಲೇ ತಮ್ಮ ಚೀಲಗಳೊಂದಿಗೆ ಕತ್ತೆಯ ಮೇಲೆ ಹೋಗುವ ಉದ್ದ ನಿಲುವಂಗಿಯ ಸ್ಥಳೀಯರು ನಾವು ಚಿಕ್ಕಂದಿನಲ್ಲಿ ಓದುತ್ತಿದ್ದ ಚಂದಮಾಮ ಚಿತ್ರಗಳಿಂದ ನೇರವಾಗಿ ಇಳಿದು ಬಂದಂತಿದ್ದರು. ಗೈಡ್ ಮೊದಲೇ ಹೇಳಿದ್ದಂತೆ ಬಸ್ಸು ಮೊದಲು ಪ್ರಖ್ಯಾತ ಪಪೈರಸ್ ಮೇಲೆ ಬಿಡಿಸಿದ ವರ್ಣಚಿತ್ರಗಳ ಒಂದು ಅಂಗಡಿಯ ಮುಂದೆ ನಿಂತಿತು.
ಜಗತ್ತಿನ ಮೊದಲ ಕಾಗದ ಮಾಡಿದ ಹೆಗ್ಗಳಿಕೆ ಈಜಿಪ್ಶಿಯನ್ನರಿಗೆ ಸೇರಿದ್ದು. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಇವರು ಈ ಒರಟಾದ ಕಾಗದವನ್ನು ಯಶಸ್ವಿಯಾಗಿ ತಯಾರಿಸಿದ್ದರು.
ನೈಲ್ ನದಿಯ ಸುತ್ತಮುತ್ತ ಬೆಳೆಯುವ ಪಪೈರಸ್ ಗಿಡದ ತಿರುಳು ತೆಗೆದು, ಅದನ್ನು ಹಿಂಡಿ, ಉಳಿದ ಪದಾರ್ಥವನ್ನು ಚೆನ್ನಾಗಿ ಒತ್ತಿ ಈ ಕಾಗದವನ್ನು ತಯಾರಿಸುತ್ತಾರೆ. ಇದನ್ನು ಸಾವಿರಾರು ವರ್ಷಗಳು ಚಿತ್ರಲಿಪಿಯಲ್ಲಿ(ಹೈರೋಗ್ಲಾಪಿಕ್ಸ್) ಬರೆಯುತ್ತಿದ್ದ ಪತ್ರಗಳಿಗಾಗಿ, ದಾಖಲೆಗಳಿಗಾಗಿ, ಲೇಖನಗಳಿಗಾಗಿ, ಕಲಾಕೃತಿಗಳಿಗಾಗಿ ಉಪಯೋಗಿಸುತ್ತಿದ್ದರು. ಅಂಗಡಿಯವ ನಮ್ಮನ್ನು ಮೊದಲು ಅಲ್ಲಿನ ವಿಶೇಷವಾದ ಕೆಂಪು ಬಣ್ಣದ ದಾಸವಾಳದ ತಂಪು ಪಾನೀಯ ಕೊಟ್ಟು ಸ್ವಾಗತಿಸಿದ. ಅದು ಮಿನರಲ್ ವಾಟರ್ ನಿಂದಲೇ ಮಾಡಿದ್ದು, ಸೇಫ್! ಎಂದು ಹೇಳಲು ಮರೆಯಲಿಲ್ಲ. ನಂತರ ಅಲ್ಲೇ ಇಟ್ಟುಕೊಂಡಿದ್ದ ಮಶೀನ್ ತೆಗೆದು, ಕಿತ್ತು ತಂದಿದ್ದ ಪಪೈರಸ್ ಗಿಡಗಳನ್ನು ಬಳಸಿ ಪೇಪರ್ ತಯಾರಿಕೆ ವಿವರ ತೋರಿಸಿದ. ನಾವು ಕೇಳಿದ ಪ್ರಶ್ನೆಗಳಿಗೆಲ್ಲಾ ಸಹನೆ ಕಳೆದುಕೊಳ್ಳದೆ ಉತ್ತರಿಸಿದ. ಆಮೇಲೆ ಅವನ ಅಂಗಡಿಯ ತುಂಬಾ ಇದ್ದ ನೂರಾರು ಚಿತ್ರಗಳನ್ನು ನಮಗೆ ತೋರಿಸಿ ಬೇಕಾದವರು ಕೊಳ್ಳಬಹುದೆಂದು ಹೇಳಿದ. ಒತ್ತಾಯವೇನೂ ಮಾಡಲಿಲ್ಲ. ಅವನ ಆದರ ಕಂಡು ಖುಶಿಯಾದರೂ, ನಮ್ಮ ಅರ್ಬನ್ ಮೈಂಡ್ ಇದೂ ಅವನ ಮಾರ್ಕೆಟಿಂಗ್ ತಂತ್ರವಿರಬಹುದೆಂದು ಆನುಮಾನಿಸಿತು. ಈಜಿಪ್ತಿನ ಪುರಾಣಗಳು, ದಂತಕತೆಗಳು, ಇತಿಹಾಸ, ನಂಬಿಕೆಗಳು, ಅಲ್ಲದೆ ಬೇರೆ ಬೇರೆ ಭಾಷೆಗಳನ್ನು ಚಿತ್ರಲಿಪಿಯಲ್ಲಿ ಅರ್ಥೈಸುವ ಸುರುಳಿಗಳು ತುಂಬಾ ಆಕರ್ಷಕವಾಗಿದ್ದವು. ಅಲ್ಲಿ ದುಬಾರಿಯೆನ್ನಿಸುವ ಚಿತ್ರಗಳು ಹೊರಗಡೆ ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ಕಾಲು ಪಾಲು ಬೆಲೆಗೆ ಸಿಕ್ಕುತ್ತಿದ್ದವು. ಆದರೆ ಅವುಗಳು ಬಾಳೆ ಎಲೆಯಿಂದ ತಯಾರಿಸಿದ ಪಪೈರಸ್ ನಿಂದ ಮಾಡಿದ ನಕಲಿ ಮಾಲೆಂದು ಅಲ್ಲಿ ಗೈಡ್ ರಿಮೋನ್ ನಿಂದ ತಿಳಿದು ಬಂತು. ‘ನಿಮ್ಮ ಮನೆಗಾಗಿ ಈ ಅಂಗಡಿಯಲ್ಲಿ ಕೊಳ್ಳಿ. ಆಫೀಸಲ್ಲಿ ಗಿಫ್ಟ್ ಕೊಡೋಕೆ ಬೇಕಾದರೆ ಬನಾನಾ ಪಪೈರಸ್ ತಗೊಂಡು ಹೋಗಿ’ ಎಂದು ಅವನು ಕಿವಿ ಮಾತನ್ನೂ ಹೇಳಿದ! ಸುಮಾರು ಐದು ಸಾವಿರ ವರ್ಷಗಳ ಹಿಂದೆ ನಿರ್ಮಿಸಿದ್ದೆಂದು ಹೇಳಲಾಗುವ ಈ ಮೂರು ಪಿರಮಿಡ್ಡುಗಳ ಎದುರು ಅಚಲವಾಗಿ ಅಡ್ಡಾಗಿರುವ ಸ್ಫಿನ್ಕ್ಸ್. ಇಲ್ಲಿ ಅತ್ಯಂತ ಮುಖ್ಯವಾದದ್ದೆಂದು ಗುರುತಿಸಲಾಗಿರುವುದು ಖುಫು ಪಿರಮಿಡ್. ಇದರಲ್ಲಿ ಫೇರೋ ಖುಫುನ ಗೋರಿಯಿದ್ದು ಇದು ಎಲ್ಲಕ್ಕಿಂತ ಬೃಹತ್ ಪ್ರಮಾಣದ್ದಾಗಿದೆ. ಇಂದಿಗೂ ಜಗತ್ತಿನ ಏಳು ಅಚ್ಚರಿಗಳಲ್ಲಿ ಒಂದಾಗಿರುವ ಇದು ಜನ್ಮತಾಳಿದ್ದು ಈಜಿಪ್ತಿನ ಸಾಮ್ರಾಜ್ಯ ಸಮೃದ್ಧಿಯ ಉತ್ತುಂಗದಲ್ಲಿದ್ದಾಗ. ೨.೩ ಮಿಲಿಯನ್ ಭಾರೀ ಕಲ್ಲುಗಳನ್ನು ಸೇರಿಸಿ, ಪ್ರಮಾಣದಲ್ಲಿ ಚಾಚೂ ತಪ್ಪದೆ ಕಟ್ಟಲು ಇಲ್ಲಿ ಲಕ್ಷಾಂತರ ಕಾರ್ಮಿಕರ ಬಳಕೆಯಾಗಿದೆ. ಕೆಲವು ವಿದ್ವಾಂಸರ ಪ್ರಕಾರ ಇವರು ನೆರೆ ರಾಷ್ಟ್ರಗಳಿಂದ ತಂದ ಗುಲಾಮರಾಗಿದ್ದರು. ಕೆಲವರ ಪ್ರಕಾರ ಇವರೆಲ್ಲ ಕಟ್ಟುವ ಕಲೆಯಲ್ಲಿ ನುರಿತವರಾಗಿದ್ದು, ಇದನ್ನು ಅವರು ದೇವರ ಸಮಾನನೆಂದು ನಂಬಿದ್ದ ತಮ್ಮ ರಾಜನಿಗಾಗಿ ಭಕ್ತಿ ಶ್ರದ್ಧೆ ಗಳಿಂದ ಕಟ್ಟಿದ್ದು.
ಪುರಾತನ ಈಜಿಪ್ತಿನಲ್ಲಿ ದೇವತೆಗಳು ವಾಸಿಸುವ ಮೇಲಿನ ಲೋಕದ ಪಯಣಕ್ಕೆ ಮೊದಲ ಮೆಟ್ಟಿಲು ಸಾವೆಂಬ ನಂಬಿಕೆಯಿತ್ತು. ಆ ಪಿರಮಿಡ್ಡುಗಳಲ್ಲಿ ಮಣ್ಣಾದ ಸಾಮ್ರಾಟರು, ನೇರವಾಗಿ ಅದರ ತುದಿಯ ಮೇಲೆ ಬೀಳುವ ಸೂರ್ಯ ರಶ್ಮಿಯನ್ನು ಏಣಿಯಂತೆ ಬಳಸಿ ಸ್ವರ್ಗಾರೋಹಣ ಮಾಡುವರೆಂಬ ನಂಬಿಕೆಯೂ ಇತ್ತು. ಏನಾದರೂ, ಅಂತಹ ಪುರಾತನ ಕಾಲದಲ್ಲಿ ನಿರ್ಮಾಣವಾದ ಇದು ಇಂದಿನ ವಿಜ್ಞಾನಿಗಳಿಗೂ ತಮ್ಮ ತಾಂತ್ರಿಕ ಪರಿಪೂರ್ಣತೆಯಿಂದ ಅಚ್ಚರಿ ಮೂಡಿಸುತ್ತಲೇ ಇವೆ. ಇದನ್ನು ನೋಡುತ್ತಾ ಹೋದಂತೆ ಚ್ಯಾರಿಯಟ್ಸ್ ಆಫ್ ಗಾಡ್ಸ್ ಪುಸ್ತಕ ನೆನಪಾಗಿ, ಎಲ್ಲೋ ಈ ಅದ್ಭುತದ ಸೃಷ್ಟಿಯಲ್ಲಿ ಅನ್ಯಲೋಕ ಜೀವಿಗಳ ಕೈಚಳಕ ಇದ್ದರೂ ಇರಬಹುದೆಂಬ ಅನುಮಾನ ಗಾಢವಾಗುತ್ತದೆ.
ಅದೇ ಮಾಯಾಲೋಕದಲ್ಲಿ ಮುಳುಗಿ, ಬಿಸಿಲಿನ ಧಗೆ, ಸೆಖೆಗಳೂ ಗಮನಕ್ಕೆ ಬರದೆ ಬಿಟ್ಟ ಕಣ್ಣು ಬಿಟ್ಟ ಬಾಯಾಗಿ ನಾವು ನಿಂತಿದ್ದಾಗ ಆ ಧ್ಯಾನಸ್ಥ ಸ್ಥಿತಿಯಿಂದ ನಮ್ಮನ್ನು ಹೊರತೆಗೆದವರು ಒಂಟೆ ಮಾಲೀಕರು ಮತ್ತು ಕುದುರೆ ಗಾಡಿಯವರು. ಇದೇ ಪಿರಮಿಡ್ಡುಗಳ ಹಿಂದೆ ಸುತ್ತಿ ಹೋದರೆ ಮತ್ತೆ ಆರು ಪಿರಮಿಡ್ಡುಗಳು ಕಾಣಿಸುತ್ತವೆಯೆಂದು, ಒಂಭತ್ತು ಪಿರಮಿಡ್ಡುಗಳನ್ನು ಒಟ್ಟಿಗೆ ನೋಡಲು ಬದುಕಿನಲ್ಲಿ ಒಮ್ಮೆ ಬಂದಿರುವ ಅವಕಾಶ ಕಳೆದುಕೊಳ್ಳ ಬಾರದೆಂದೂ, ಇದಕ್ಕೆಲ್ಲ ಕೇವಲ ೩೦ ಡಾಲರ್ ಎಂದೂ ಪುಸಲಾಯಿಸ ತೊಡಗಿದರು. ೩೦ ಈಜಿಪ್ಶಿಯನ್ ಪೌಂದಲ್ಲ, ದಾಲರ್ ಎಂದು ಗಟ್ಟಿ ಮಾಡಿಸಿದರು. ಮಾರು ಹೋಗಿದ್ದ ನಮ್ಮಲ್ಲಿ ಕೆಲವರು ಕುದುರೆ ಗಾಡಿ ಹತ್ತಿ, ಕೆಲವರು ಬಣ್ಣ ಬಣ್ಣದ ಸುಂದರ ಕಸೂತಿಯ ಹೊದಿಕೆ ಹೊದ್ದು ಅರಾಮಾಗಿ ಮೆಂತೆ ಸೊಪ್ಪು ಮೇಯುತ್ತಾ ಕೂತಿದ್ದ ಬಡಪಾಯಿ ಒಂಟೆಗಳನ್ನು ಎಬ್ಬಿಸಿ ಏರಿದೆವು. ತೊಡೆ ಬೆನ್ನುಗಳಿಗೆ ಆಗುತ್ತಿದ್ದ ಯಾತನೆ ಹಲ್ಲು ಕಚ್ಚಿ ಸಹಿಸಿಕೊಂಡು ಅತ್ತ ಸವಾರಿ ಹೋದಾಗ ಕಂಡು ಬಂದ ದೃಶ್ಯ ಖಂಡಿತ ೩೦ ಡಾಲರ್ ಗೆ ತಕ್ಕುದಾಗಿರಲಿಲ್ಲ! ಆ ಅಗಾಧ ಪಿರಮಿಡ್ಡುಗಳ ಎದುರುಮಣ್ಣಿನ ಗುಪ್ಪೆಗಳಂತೆ ಕಾಣುತ್ತಿದ್ದ ಮಿಕ್ಕ ವನ್ನು ನೋಡಿ ಅಯ್ಯೋ ಪಾಪ ಎನ್ನಿಸಿತು. ಅವು ಯಾರವೆಂದು ಒಂಟೆಯವನನ್ನು ಕೇಳಿದಾಗ ತನ್ನ ಅಜ್ಞಾನ ತೋರಿಸಿಕೊಳ್ಳಲು ಇಷ್ಟವಿಲ್ಲದೆ ಅವನು ‘ಮದಾಮ್, ಅಗ ಪಾಪ ಅವರ ಸೇವಕರಿಗೂ ರಾಜರು ಸಣ್ಣಪುಟ್ಟ ಪಿರಮಿಡ್ಡುಗಳನ್ನು ಮಾಡಿಸುತ್ತಿದ್ದರಲ್ಲಾ’ ಎನ್ನುತ್ತಾ ತನ್ನ ಒಂಟೆಗೆ ಮತ್ತಷ್ಟು ಮೆಂತೆ ಸೊಪ್ಪು ತಿನ್ನಿಸುವುದರಲ್ಲಿ ಮಗ್ನನಾದಂತೆ ನಟಿಸಿದ.
ಒಂಟೆಗಳಿಂದ ಇಳಿದು ಮನಸ್ಸಿಗೆ ಬಂದಷ್ಟು ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದಾಗಲೇ, ಅಲ್ಲಿದ್ದ ಪ್ರೊಫೆಶನಲ್ ಕ್ಯಾಮರಾಧಾರಿಗಳಿಗೆ ಮರುಳಾಗಿ, ಅಂಗೈಯಲ್ಲಿ ಪಿರಮಿಡ್ ಹಿಡಿದು, ಮುಂಗೈ ಮೇಲೆ ಸ್ಫಿನ್ಕ್ಸ್‌ಕೂಡಿಸಿಕೊಂಡು ಚಿತ್ರ ತೆಗೆಸಿಕೊಂಡೂ ಆಯಿತು.
******
ಆಗ ನನ್ನ ಗಮನ ಸೆಳೆದವರು ಅಲ್ಲೇ ಕಲ್ಲುಗಳ ಮೇಲೆ ಕೂತಿದ್ದ ಹನ್ನೆರಡು ಹದಿಮೂರು ವರ್ಷದ ೧೫-೨೦ ಮುದ್ದು ಹುಡುಗಿಯರು. ಜೀನ್ಸ್-ಟೀ ಶರಟು ಹಾಕಿ ತಲೆಯಮೇಲೆ ಬಣ್ಣ ಬಣ್ಣದ ಮುಸುಕು ಹೊದ್ದು ಕುಲು ಕುಲು ನಗುತ್ತಾ ಸಾವಿರಾರು ಬಿಳಿಯರ ನಡುವೆ ಬೇರೆಯಾಗಿ ಕಾಣುತ್ತಿದ್ದ ನಮ್ಮನ್ನೇ ನೋಡಿ ಮಾತಾಡಿಕೊಳ್ಳುತ್ತಿದ್ದರು. ಅವರೊಡನೆ ಮಾತಾಡಲು ಮಾಡಿದ ಪ್ರಯತ್ನ ವ್ಯರ್ಥವಾಯಿತು. ಅವರಿಗೆ ಅರಾಬಿಕ್ ಬಿಟ್ಟು ಯಾವ ಭಾಷೆಯೂ ಅರ್ಥವಾಗುತ್ತಿರಲಿಲ್ಲ. ನಾನು ಸ್ಕೂಲ್? ಎಂದಾಗ ಉತ್ಸಾಹದಿಂದ ತಲೆ ಹಾಕಿದ್ದು ನೋಡಿ ಯಾವುದೋ ಶಾಲೆಯಿಂದ ಟ್ರ್ರಿಪ್ಪಿನಲ್ಲಿ ಬಂದಿದ್ದಾರಿಂದು ಅರ್ಥವಾಯಿತು. ಸನ್ನೆಯಲ್ಲಿಯೇ ಅವರ ಒಪ್ಪಿಗೆ ಪಡೆದು ಫೊಟೋ ತೆಗೆದುಕೊಂಡು, ಅವರಿಗೆ ತೋರಿಸಿದಾಗ ಆಶ್ಚರ್ಯದಿಂದ ಕಣ್ಣರಳಿಸಿ ಮತ್ತೂ ಖುಷಿಯಾದರು. ಮತ್ತೆ ಅವರು ಅನುಮಾನಿಸುತ್ತಲೇ ಏನೋ ಕೇಳಲು ಪ್ರಯತ್ನ ಮಾಡಿದಾಗ, ಮೊದಲು ಫೋಟೊ ಕಾಪಿ ಎಂದುಕೊಂಡ ನನಗೆ ನಂತರ ಅವರು ಕೇಳುತ್ತಿರುವುದು ಕುಡಿಯುವ ನೀರು ಎಂದು ಸ್ಪಷ್ಟವಾಯಿತು. ನನ್ನಲ್ಲಿ ಉಳಿದಿದ್ದ ಅರ್ಧ ಬಾಟಲ್ ನೀರು ಕೊಟ್ಟಕೂಡಲೆ ಎಲ್ಲರೂ ಒಂದೊಂದು ಗುಟುಕು ಹಂಚಿಕೊಂಡು, ಥಾಂಕ್ಸ್,ಇಂದಿಯ? ಎಂದು ಕೇಳುತ್ತಾ ಮತ್ತೆ ಕುಲುಕುಲು ನಕ್ಕರು.
ಅವರ ಮುಗ್ಧ ನಗುವಿನ ಲಹರಿಯಲ್ಲಿ ತೇಲಿ ಹೋಗುತ್ತಿದ್ದ ನನಗೆ ಆಗ ಇದ್ದಕ್ಕಿದ್ದಂತೆ ಹೋದ ವರ್ಷ ನೋಡಿದ ಇರಾನಿಯನ್ ಸಿನೆಮಾದ ಒಂದು ದೃಶ್ಯ ನೆನಪಾಯಿತು. ಸಿನಿಮಾದ ಹೆಸರು ‘ದ ಡೇ ಐ ಬಿಕೇಮ್ ಅ ವುಮನ್’. ಆ ಚಿತ್ರದ ಮೊದಲ ಭಾಗ ಹೀಗಿದೆ. ಹವಾ ಎಂಬ ಎಳೆಯ ಹುಡುಗಿಗೆ ಅವತ್ತು ೯ನೇ ವರ್ಷದ ಹುಟ್ಟುಹಬ್ಬ. ಆಗ ಅವಳ ಅಮ್ಮ ಮತ್ತು ಅಜ್ಜಿ ಅವಳನ್ನು ಕೂಡಿಸಿಕೊಂಡು ನೀನಿವತ್ತು ಹೆಂಗಸಾಗಿದ್ದೀಯಾ ಎಂದು ಹೇಳುತ್ತಾರೆ. ಇನ್ನು ಮೇಲೆ ನಿನ್ನ ಬೆಸ್ಟ್ ಫ್ರೆಂಡ್ ಆಗಿರುವ ಪಕ್ಕದ ಮನೆಯ ಹುಡುಗನೊಂದಿಗೆ ಆಟ ಆಡುವ ಹಾಗಿಲ್ಲ ಎಂದೂ ಹೇಳುತ್ತಾರೆ. ಇವತ್ತಿನಿಂದ ನೀನು ಮನೆಯಿಂದ ಹೊರಗೆ ಹೋಗುವಾಗ ಚಾದೋರ್(ಮುಸುಕು) ಹಾಕಿಕೊಳ್ಳಬೇಕು ಎಂದು ತಿಳಿಸುತ್ತಾರೆ. ಅವಳ ಎದುರಿಗೆ ಬಿಸಿಲಿನಲ್ಲಿ ಒಂದು ಕೋಲು ನೆಡುತ್ತಾರೆ. ಹವಾ ನಡು ಮಧ್ಯಾಹ್ನದಲ್ಲಿ ಹುಟ್ಟಿರುವುದರಿಂದ , ಆ ಕೋಲಿನ ನೆರಳು ಕಾಣೆಯಾಗುವ ವರೆಗೂ ಅವಳು ತನ್ನ ಗೆಳೆಯನೊಂದಿಗೆ ಆಟವಾಡಬಹುದೆಂದು ಗಡುವು ಕೊಡುತ್ತಾರೆ…
ಆ ಕ್ಷಣ ಅಲ್ಲಿ ಕೂತ ಎಲ್ಲಾ ಹುಡುಗಿಯರಲ್ಲಿ ಹವಾ ಕಂಡಂತಾಗಿ ಎದೆ ತುಂಬಾ ನೋವಿನೆಳೆಗಳು ಹರಿದಾಡಿ, ಕತ್ತಲು ತುಂಬಿ , ಆ ಬೃಹತ್ ಪಿರಮಿಡ್ಡುಗಳು, ಅದರೊಳಗೆ ಚಿನ್ನದ ಮುಸುಕು ಹೊದ್ದು ಸ್ವರ್ಗಾರೋಹಣಕ್ಕಾಗಿ ಕಾಯುತ್ತಾ ಮಲಗಿರುವ ಫೇರೋ, ಜೇಬಿನ ತುಂಬಾ ಡಾಲರ್ ತುಂಬಿಸಿಕೊಳ್ಳುತ್ತಿದ್ದ ಒಂಟೆಯ ಅರಬ್ಬರು, ಬೀನ್ ದೇರ್ , ಡನ್ ಇಟ್ ಎಂದು ಎಲ್ಲರಿಗೂ ತೋರಿಸಬೇಕು ಎಂದು ತಮ್ಮ ಫೋಟೋಗಳನ್ನು ಒಬ್ಬರಿನ್ನೊಬ್ಬರಿಂದ ಕ್ಲಿಕ್ಕಿಸಿಕೊಳ್ಳುತ್ತಿದ್ದ ಗೆಳತಿಯರು, ಬೆನ್ನಿನ ಮೇಲೆ ತರಚಿ ತರಚಿ ಆದ ಗಾಯದ ನೋವು ತಡೆಯಲಾರದೆ ಅಸಹಾಯಕತೆಯಿಂದ ದೂರದಲ್ಲಿ ಕೆನೆಯುತ್ತಿರುವ ಒಂಟೆ….ಎಲ್ಲವನ್ನು ಮರೆ ಮಾಡಿದವು.
ಫೇರೋಗಳ ನಾಡಿನಲ್ಲಿ ೪: ಸಾವಿರ ಒಂಟೆಗೆ ಆಗುವೆಯಾ ಮದುವೆ?
ಊಟಕ್ಕಾಗಿ ಖಾನ್ ಅಲ್ ಖಲೀಲಿ ಬಜಾರಿಗೆ ಹೊಂದಿಕೊಂಡಂತೆಯೇ ಇದ್ದ ಅಲ್ ಶೇಖ್ ಶಬಾನ್ ಕಫೆಗೆ ಬಂದಿದ್ದೆವು. ೧೯೧೯ರಿಂದ ಇಲ್ಲಿ ಬೇರು ಬಿಟ್ಟಿದ್ದ ಪುರಾತನ ರೆಸ್ಟುರಾ ಇದು. ಹೊರಗಡೆ ಹಾಕಿದ್ದ ಕುರ್ಚಿಗಳು ದಣಿದಿದ್ದ ನಮ್ಮನ್ನು ಆಕರ್ಷಿಸಿದ್ದವು. ಏನು ತಿನ್ನಬೇಕೆಂದು ಅರ್ಥವಾಗದೆ ತಡಕಾಡುತ್ತಿದ್ದ ನಮಗೆ ಗೈಡ್ ರಿಮೋನ್ ಸಹಾಯಕ್ಕೆ ಬಂದ. ಸಸ್ಯಾಹಾರಿಗಳಾಗಿದ್ದವರಿಗೆ ಹೆಚ್ಚು ಆಯ್ಕೆ ಇರಲಿಲ್ಲ. ಫಿಲಾಫಲ್ ಎಂಬ ಪೀಟಾ ಬ್ರೆಡ್ಡಿನೊಳಗೆ ತರಕಾರಿ, ಕರಿದ ಆಲೂಗಡ್ಡೆ ಎಲ್ಲಾ ತುಂಬಿದ್ದ ಬರ್ಗರ್ ನಂಥಾ ತಿನಿಸಿನ ಜೊತೆಗೆ ದಾಸವಾಳದ ಶರಬತ್ತು. ಸುತ್ತಲೂ ಸಾಲುಸಾಲಾಗಿದ್ದ ಅಂಗಡಿಗಳು, ಹೋಟಲ್ಲುಗಳು, ಪಕ್ಕದಲ್ಲೆ ಖಲೀಲಿ ಮಾರುಕಟ್ಟೆಗೆ ಹೋಗುವ ದಾರಿ. ಜನಸಂದಣಿ.
ನಮ್ಮಲ್ಲಿ ಟೀ ಕಾಫಿ ಕೇಳುವಂತೆ ಅಲ್ಲಿ ‘ಶೀಶಾ?’ ಎಂಬ ಪ್ರಶ್ನೆ. ಹಿಂದೆಯೇ “ಮದಾಮ್, ತ್ರ್ಯ್ ಇತ್ ಸೀ!” ಎಂಬ ಕುಮ್ಮಕ್ಕು. ನಾವು ತಿನಿಸುಗಳಿಗೆ ಆರ್ಡರ್ ಮಾಡುತ್ತಿದ್ದಂತೆಯೇ ನಮ್ಮೆದುರಿಗೆ ಬಂದು ಕೂತಿತು ಅಲ್ಲಿಯ ಶೀಶಾ ಎನ್ನುವ ಹುಕ್ಕಾ. ಅಲ್ಲಿ ಬಂದ ಪಾಶ್ಚಾತ್ಯ ಪ್ರವಾಸಿಗಳು ಅದನ್ನು ಸೇವಿಸಿ ನೋಡದೇ ಹೋಗುವುದಿಲ್ಲ. ನಮ್ಮಲ್ಲಿ ಯಾರಿಗೂ ಅದರ ಬಗ್ಗೆ ಅಂಥಾ ಕುತೂಹಲವಿರಲಿಲ್ಲ. ಹೊಟ್ಟೆ ತುಂಬಿಸಿಕೊಂದು ಮಾರುಕಟ್ಟೆಗೆ ಲಗ್ಗೆ ಹಾಕುವ ಹುರುಪಿನಲ್ಲಿ ನಾವಿದ್ದೆವು.
*****
ಖನ್ ಅಲ್ ಖಲೀಲಿ ಬಜಾರು ಜಗತ್ತಿನಲ್ಲೇ ಪ್ರಸಿದ್ಧವಾದ ಮಾರುಕಟ್ಟೆ. ಸುಮಾರು ೭೦೦ ವರ್ಷಗಳ ಹಿಂದೆ ಇದು ಏಶಿಯಾ, ಉತ್ತರ ಆಫ್ರಿಕಾಗಳಿಂದ ಸಾಂಬಾರ ಪದಾರ್ಥಗಳನ್ನು ಒಂಟೆಗಳ ಮೇಲೆ ಹೊತ್ತು ವ್ಯಾಪಾರಕ್ಕಾಗಿ ಬರುತ್ತಿದ್ದ ವರ್ತಕರ ತಂಗುದಾಣವಾಗಿತ್ತಂತೆ. ಅಲ್ಲಿ ಅವರಿಗೆ, ಅವರ ಒಂಟೆಗಳಿಗೆ ತಂಗಲು, ತಮ್ಮ ಸರಕುಗಳನ್ನು ಮಾರಾಟ ಮಾಡಲು ಎಲ್ಲಾ ವ್ಯವಸ್ಥೆಯೂ ಇತ್ತಂತೆ. ೧೩೮೨ರಲ್ಲಿ ಇದು ಒಂದು ವ್ಯವಸ್ಥಿತ ಮಾರುಕಟ್ಟೆಯಾಗಿ ಪರಿವರ್ತನೆ ಗೊಂಡಿತು. ದೆಹಲಿಯ ಚಾಂದನೀ ಚೌಕ್, ಮುಂಬೈನ ಕ್ರಾಫರ್ಡ್ ಮಾರುಕಟ್ಟೆಯನ್ನು ನೆನಪು ಮಾಡಿಕೊಡುವ ಕಿರಿದಾದ ಗಲ್ಲಿಗಳು. ಉದ್ದಕ್ಕೂ ಚಿಕ್ಕ ಚಿಕ್ಕ ಅಂಗಡಿಗಳು. ಎಲ್ಲದರಿಂದ ಹರಿದು ಬರುತ್ತಿದ್ದ ಅರಬ್ ಸಂಗೀತ. ಎಲ್ಲಾ ಕಡೆಯಿಂದ ಓಡಿ ಬಂದು ಮುತ್ತಿಕೊಳ್ಳುವ ಮಾರಾಟಗಾರರು. ದುಬಾರಿ ಪರ್ಶಿಯನ್ ಕಾರ್ಪೆಟ್ಟುಗಳು, ಗಾಜಿನ ಸ್ಫಿಂಕ್ಸ್ ಗಳು, ಡಬ್ಬದಂತೆ ತೆರೆದುಕೊಳ್ಳುವ ಕಪ್ಪು ಕಲ್ಲಿನ ಪಿರಮಿಡ್ಡುಗಳು, ರಾಣಿಯರ ಮೆಚ್ಚಿನ ಗಂಧದ ಬಣ್ಣಬಣ್ಣದ ಅತ್ತರು ಬಾಟಲುಗಳು, ಯಾವುದೋ ಪಾಶ್ಚಾತ್ಯರ ಮನೆ ಅಲಂಕರಿಸಲು ಕಾದಿರುವ ಮಿರುಗುವ ಶೀಶಾ ಪರಿಕರಗಳು, ಚಿನ್ನ ಬೆಳ್ಳಿ ನೀಲಮಣಿಗಳ ನೆಫೆರೆಟಿಟಿ ಪದಕಗಳು. ಕತ್ತಿನ ತುಂಬಾ ಚಿನ್ನದ ಆಭರಣ ತೊಟ್ಟ ಕರೀ ಬೆಕ್ಕು, ಇದೆಲ್ಲದರ ನಡುವೆ ಕಪ್ಪು ಗುಲಾಮರಿಂದ ಕಾಯಕಲ್ಪ ಮಾಡಿಸಿಕೊಳ್ಳುತ್ತಿರುವ ನಗ್ನ ಫೇರೋಗಳು. ಜೊತೆಗೆ ಪಪೈರಸ್ ಮೇಲೆ ತಾವೇ ದೇವರೆಂದು ಮೆರೆಯುತ್ತಿರುವ ರಾಂಸೇಗಳು.
ಆ ನೂಕುನುಗ್ಗಲಿನಲ್ಲೇ ನಮ್ಮ ಗುಂಪಿನಲ್ಲಿದ್ದ ದೆಹಲಿಯವರು “ಪಿರಮಿಡ್ ತೋ ಟೋಂಬ್ ಹೈ ನ, ಗೋರಿ ನಹೀಂ ಲೇಕೆ ಜಾನಾ ಘರ್ ಮೇಂ ಅಚ್ಛಾ ನಹೀಂ ಹೈ” ಎಂದು ಎಲ್ಲರಿಗೂ ಬುದ್ಧಿವಾದ ಹೇಳಿದರೆ, ಇನ್ನೊಬ್ಬರು “ಮುಝೆ ಸ್ವಿಮ್ ಸೂಟ್ ಖರೀದನಾ ಹೈ ಯಾರ್!” ಎಂದು ಕೂಗಿ “ನೊ ಸ್ವಿಮ್ ಸೂಟ್ ಇನ್ ಕೈರೋ” ಎಂದು ಒಬ್ಬ ಉದ್ದ ನಿಲುವಂಗಿಯ ವೃದ್ಧನಿಂದ ಬೈಯ್ಯಿಸಿಕೊಂಡಳು.
“ಮದಾಮ್, ನಮಸ್ತೇ! ಇಂದಿಯಾ?”
“ವಿ ಲವ್ ಅಮಿತಾಬ್ ಬಚ್ಚನ್!”
“ನಮ್ಮಲ್ಲಿಗೇ ಬನ್ನಿ, ನಮ್ಮಲ್ಲಿಗೇ ಬನ್ನಿ” ಎಂಬ ಒತ್ತಾಯ.
ಜೊತೆಗೆ ಕೆಲವರಿಗೆ “ಯು ಬ್ಯೂತಿಫುಲ್. ಮ್ಯಾರಿ ಮಿ!” ಎಂಬ ಪ್ರಸ್ತಾಪ.
ನಮ್ಮ ಗುಂಪಿನಲ್ಲಿದ್ದ ಸುಂದರ ಎಂಜಿನಿಯರ್ ನೋಡಲು ಈಜಿಪ್ಶಿಯನ್ನಿನಂತಿದ್ದಾಳೆ ಎಂದು ಅಲ್ಲಿಯವರ ಅನಿಸಿಕೆ. ಹಾಗಾಗಿ ಅವಳಿಗೆ ಮದುವೆ ಪ್ರಪೋಸಲ್ ಗಳ ಸುರಿಮಳೆ.! “ಮದಾಮ್, ಐ ಗಿವ್ ಯೂ ಒನ್ ಥೌಸಂಡ್ ಕ್ಯಾಮೆಲ್ಸ್, ವಿಲ್ ಊ ಮ್ಯಾರಿ ಮಿ?!” ಮೊದಲು ತಮಾಶೆ ಎನ್ನಿಸುತ್ತಿದ್ದ ಈ ಸಾಲು ನಂತರ ನಮಗೆ ಕಿರಿಕಿರಿ ಎನ್ನಿಸತೊಡಗಿತು.
ಜೊತೆಗೆ ಅಲ್ಲಾಡದಂತೆ ಮುತ್ತಿಗೆ ಹಾಕಿ, ಬಲವಂತವಾಗಿ ತಮ್ಮ ಅಂಗಡಿಗೆ ಕರೆದುಕೊಂದು ಹೋಗಿ ಮೈ ಮುಟ್ಟಿ ಕೈ ಮುಟ್ಟಿ ಅಲ್ಲಿನ ಬಣ್ಣಬಣ್ಣದ ಸ್ಕಾರ್ಫ್ ಗಳನ್ನು ಪೇಟದಂತೆ ಕಟ್ಟಿಕೊಳ್ಳಲು ಬಲವಂತ ಮಾಡುತ್ತಿದ್ದ ಮಾರಾಟಗಾರರ ವೈಖರಿ ಕೂಡಾ ಅಲ್ಲಿಂದ ಓಡಿಹೋಗಬೇಕೆನ್ನಿಸುವಂತೆ ಮಾಡಿತು. ಆದರೂ ನಮ್ಮ ಜೊತೆಯವರೆಲ್ಲಾ ಆ ಮುತ್ತಿಗೆಯನ್ನು ಭೇದಿಸಿ ಹಲ್ಲು ಕಚ್ಚಿಕೊಂಡು ಮುಂದುವರಿದರು. ನನಗೆ ಸಾಕು ಸಾಕೆನಿಸಿ, ಒಂದೆರಡು ಸುವನಿಯರ್ ಗಳನ್ನು ಕೊಂಡು ಬೆವರು ಒರೆಸಿಕೊಳ್ಳುತ್ತಾ ಅವರಿಂದ ಬಿಡಿಸಿಕೊಂಡು ಬಂದು ನಾವು ಊಟ ಮಾಡಿದ್ದ ರೆಸ್ತುರಾದ ಕುರ್ಚಿಯೊಂದರ ಮೇಲೆ ಕೂತೆ.
ಆದರೆ ಆ ಬಿಡುಗಡೆಯ ಸುಖದೊಂದಿಗೆ ಒಂದು ಸಣ್ಣ ನೋವೂ ಸೇರಿತ್ತು. ಹಾಗೇ ಸ್ವಲ್ಪ ನಡೆದು ಬದಿಸ್ಟಾಂಡ್ ರಸ್ತೆಯ ಹತ್ತಿರ ಗಲ್ಲಿಯಲ್ಲಿ ತಿರುಗಿದರೆ ‘ಎಲ್-ಫಿಶಾವಿ ಕೆಫೆ’ ಸಿಕ್ಕುವುದೆಂದೂ, ಅದನ್ನು ‘ಕೆಫೆ ಆಫ್ ಮಿರರ್ಸ್’ ಎಂದೂ ಕರೆಯುತ್ತಾರೆಂದೂ ಓದಿದ್ದೆ. ಒಂದು ಕಾಲದಲ್ಲಿ ಆ ಸ್ಥಳ ಕೈರೋದ ಕಲಾವಿದರು, ಬರಹಗಾರರು ಸಂಗೀತಗಾರರು ಭೇಟಿ ಮಾಡುವ ಸ್ಥಳವಾಗಿದ್ದು, ನೊಬೆಲ್ ಬಹುಮಾನ ವಿಜೇತ ಬರಹಗಾರ ಮಜ್ಫೂಜ್ ನಗೀಬ್ ನ ಮೆಚ್ಚಿನ ಜಾಗವಾಗಿತ್ತೆಂದೂ ಓದಿದ್ದೆ. ಅಲ್ಲಿ ಹೋಗಲಾಗದ್ದಿದ್ದದು ಬೇಸರ ಮೂಡಿಸಿದರೂ ದಕ್ಕಿದಷ್ಟಕ್ಕೆ ಸಂತೋಷವಗಿರಬೇಕೆಂದು ಫಿಲೋಸೊಫೈಸ್ ಮಾಡಿಕೊಂಡೆ.
ಒಂದು ಬಾಟಲ್ ತಣ್ಣೀರು ಖಾಲಿ ಮಾಡಿದ ಮೇಲೆ ಸ್ವಲ್ಪ ಜೀವ ಬಂದಂತಾಯಿತು. ಪ್ರವಾಸಿಗಳೆಲ್ಲ ಮಾರ್ಕೆಟ್ ಆಕ್ರಮಣ ಮಾಡಿದ್ದರಿಂದ, ಜನ ಹೆಚ್ಚಿರಲಿಲ್ಲ. ರಿಮೋನ್ ಒಬ್ಬನೇ ಶೀಶಾ ಸೇವಿಸುತ್ತಾ ಧ್ಯಾನಸ್ಥನಾಗಿದ್ದ!
******
ಗಾಳಿ ಬೀಸುತ್ತಿತ್ತು. ಅಲ್ಲೇ ಇದ್ದ ಮಸೀದಿಯಿಂದ ಪ್ರಾರ್ಥನೆ ಹರಿದು ಬರುತ್ತಿತ್ತು. ನಾನು ಹೋಗುವ ಬರುವವರನ್ನು ನೋಡುವ ಕಾಯಕದಲ್ಲಿ ತೊಡಗಿದೆ. ನಾಲ್ಕೈದು ಕಪ್ಪು ಹೆಂಗಸರು ಕೈಯ್ಯಲ್ಲಿ ಎತ್ತಿಕೊಂಡ ಮಗುವನ್ನು ತೋರಿಸುತ್ತಾ ಬಿಳಿಯರಿಂದ ಭಿಕ್ಷೆ ಬೇಡುತ್ತಿದ್ದರು. ಬೋಳು ತಲೆಯ .ಪುಟ್ಟ ಹುಡುಗರು ಪಪೈರಸ್ ಕ್ಯಾಲೆಂಡರುಗಳನ್ನು ಮಾರುತ್ತಿದ್ದರು. ಎಲ್ಲೋ ಹಿನ್ನೆಲೆಯಲ್ಲಿ ಕನ್ನಡಿಗಳ ಕೆಫೆಯತ್ತ ಕಾಲು ಹಾಕುತ್ತಿದ್ದ ನಗೀಬನ ಹೆಜ್ಜೆ ಸಪ್ಪಳ ಮೆಲುವಾಗಿ ಕೇಳುತ್ತಿತ್ತು. ಇನ್ನೂ ಪುರಾತತ್ವ ಶಾಸ್ತ್ರಜ್ಝರ ಗುದ್ದಲಿಗೆ ಸಿಕ್ಕದೆ ಭೂಮಿಯಡಿಯಲ್ಲೇ ಉಳಿದಿರುವ ಸಾವಿರಾರು ಧೀರಸೈನಿಕರು, ಕುಶಲ ಕರ್ಮಿಗಳು, ದಣಿದ ಗುಲಾಮರು, ಕಪ್ಪು ಸುಂದರಿಯರು, ನಗ್ನ ಸೇವಕಿಯರು, ಚಾಣಾಕ್ಷ ಮಂತ್ರಿಗಳು ತಮ್ಮ ಬಿಡುಗಡೆಯ ಕ್ಷಣಕ್ಕಾಗಿ ಕಾಯುತ್ತಾ ನಮ್ಮ ಕಾಲಡಿಯಲ್ಲೇ ನಿಶ್ಚಲರಾಗಿದ್ದರು. ಅವರೆಲ್ಲರ ಉಸಿರಿನೊಡನೆ ಬೆರೆತ ಸುಡುತ್ತಿರುವ ಮಾಂಸದ, ಅಪರಿಚಿತ ಧೂಪದ, ವಿಚಿತ್ರ ಸಾಂಬಾರ ಪದಾರ್ಥಗಳ ಮಿಶ್ರವಾಸನೆ ನನ್ನನ್ನು ಸುತ್ತುವರಿದು ಈಜಿಪ್ತ್ ನಿಧಾನವಾಗಿ ಒಳಗಿಳಿಯುತ್ತಿತ್ತು. ಆ ಕ್ಷಣ ಭಾರತ ಮನದಲ್ಲಿ ಮಬ್ಬಾಗಿತ್ತು.
ಫೇರೋಗಳ ನಾಡಿನಲ್ಲಿ ೫: ನೈಲ್ ನದಿಯ ಬೆಳಕಲ್ಲಿ ಬೊಜ್ಜು ನೃತ್ಯ
ಕಣ್ಣುಕಾಣುವವರೆಗೂ ಮರಳುಗಾಡು, ಕಣ್ಣು ಬಿದ್ದಲ್ಲೆಲ್ಲಾ ಗೋರಿಗಳು. ಈ ಬರಡು ನೆಲದ ಮೇಲೆ ಜೀವ ಸೆಲೆಗಾಗಿ ಕಣ್ಣುಗಳು ಅತ್ತಿತ್ತ ಹುಡುಕಿದಾಗ ಛಕ್ಕನೆ ಕಣ್ಣಿಗೆ ಬಿದ್ದು ಆಟವಾಡಿಸಿ, ಮತ್ತೆ ಮರೆಯಾಗಿ, ಕೆಲವು ಕಡೆ ಹೊಳೆಯಾಗಿ, ತಡೆ ಹಾಕಿದೆಡೆ ಬೃಹತ್ ಸರೋವರವಾಗಿ, ಇತ್ತ ಫಳಿಚ್ಚನೆ ಹೊಳೆದು ಕಣ್ಣು ಕೋರೈಸಿ, ಅತ್ತ ದೋಣಿಗಳ ಆಟದ ಮಡಿಲಾಗಿ, ಸುತ್ತು ಬಳಸಿ ಮತ್ತೂ ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ತಾಯಿಯಾಗಿ, ಆದರೂ ಏನೂ ಆಗಿಲ್ಲವೆಂಬಂತೆ ಯುಗ ಯುಗಗಳಿಂದ ಹರಿಯುತ್ತಿರುವ ನೀಲ ನೀರಿನ ನದಿ ನೈಲ್. ಕೈರೋದಲ್ಲಿ ನಾವು ಕಾಲಿಟ್ಟು ಬೇರೆಬೇರೆ ಸ್ಥಳಗಳನ್ನು ಸುತ್ತಿದಂತೆ ಅಲ್ಲಿಲ್ಲಿ ಕಾಣುತ್ತಲೇ ಮೋಡಿ ಹಾಕಿ ಮರೆಯಾಗುತ್ತಲೇ, ಗಾಳಿಯಲ್ಲಿ ತೇಲುತ್ತಲೇ ಇರುವ ಕಾವು ಸಹ್ಯವೆನಿಸುವಂತೆ ಮಾಡುತ್ತಲೇ ಇರುವ ಮಾಟಗಾತಿ.
ಅಂದು ಸಂಜೆ ನಮ್ಮ ಕಾರ್ಯಕ್ರಮದಲ್ಲಿದ್ದುದು ನೈಲ್ ನದಿಯಲ್ಲಿ ಫಲೂಕಾ ಎಂದು ಕರೆಯಲ್ಪಡುವ ದೋಣಿವಿಹಾರ. ನಂತರ ನಮ್ಮ ವಿಹಾರ ನೌಕೆಯಲ್ಲಿ ನುರಿತ ಕಲಾವಿದರಿಂದ ಬೆಲ್ಲಿ ಡಾನ್ಸ್ ಮತ್ತು ಸೂಫಿ ನರ್ತನ. ಈ ಫಲೂಕಾ ಎನ್ನುವುದು ಮರದಲ್ಲಿ ಮಾಡಿರುವ ಹಾಯಿ ದೋಣಿ. ನೂರಾರು ವರ್ಷಗಳಿಂದ ನೈಲ್ ನದಿಯ ಮೇಲೆ ಜನರನ್ನೂ, ಸಾಮಾನು ಸರಂಜಾಮುಗಳನ್ನೂ ಸಾಗಿಸಲು ಬಳಕೆಯಲ್ಲಿದ್ದ ಸೌಕರ್ಯ. ಈಗ ಅವು ಹೆಚ್ಚಾಗಿ ಪ್ರವಾಸಿಗಳನ್ನು ವಿಹಾರಕ್ಕಾಗಿ ಕರೆದುಕೊಂಡು ಹೋಗುವ ದೋಣಿಗಳಾಗಿ ಪರಿವರ್ತನೆಗೊಂಡಿವೆ.
ನಮ್ಮನ್ನು ಹತ್ತಿಸಿಕೊಳ್ಳಲು ನಿಧಾನವಾಗಿ ತೇಲಿಬಂದು ಎದುರು ನಿಂತ ನಮ್ಮ ಫಲೂಕಾ ಆಕರ್ಷಕವಾಗಿತ್ತು. ಬಣ್ಣಬಣ್ಣದ ದೀಪಗಳು, ಬಲೂನುಗಳು, ‘ಐ ಲವ್ ಯೂ’ ಎಂದು ಬರೆದ ಕೆಂಪು ಹೃದಯ ಹಿಡಿದಿರುವ ಟೆಡ್ಡಿ ಬೇರ್, ಅರಾಬಿಕ್ ನಲ್ಲಿ ಕೆಲವು ವಾಕ್ಯಗಳನ್ನು ಬರೆದು ಫ್ರೇಮ್ ಹಾಕಿಸಿದ್ದ ಪಟ, ದೋಣಿಯಿಂದ ಹಾರಾಡುತ್ತಿದ್ದ ಸುಮಾರು ಏಳೆಂಟು ರಾಷ್ಟ್ರಗಳ ಬಾವುಟಗಳು, ಎಲ್ಲದರ ನಡುವೆ ಸಿಗರೇಟು ಸೇದುತ್ತಲೇ ನಮ್ಮೆಲ್ಲರನ್ನೂ ಒಳಬರಲು ಕೈ ಆಡಿಸಿ ಸ್ವಾಗತಿಸುವ ಉದ್ದ ಬೂದು ಬಣ್ಣದ ನಿಲುವಂಗಿಯ ದೋಣಿಯವ. ಇನ್ನೊಂದು ಕಡೆ ಅವನದೇ ಚಿಕ್ಕ ಆಕೃತಿ ಮಾಡಿಟ್ಟಂತೆ ಕಾಣುತ್ತಿದ್ದ ಹತ್ತು ಹನ್ನೆರಡು ವರ್ಷದ ಹುಡುಗ.
ದೋಣಿ ಚಲಿಸಿದಂತೆ ತಣ್ಣನೆಯ ಗಾಳಿ ಬೀಸತೊಡಗಿತು. ಸೂರ್ಯಾಸ್ತದ ಬಣ್ಣಗಳು ಆ ನೀಲ ನೀರಿನಲ್ಲಿ ಪ್ರತಿಫಲಿಸಿ ಮಾಂತ್ರಿಕ ವಾತಾವರಣ ಸೃಷ್ಟಿಸಿದವು. ದೂರದಲ್ಲಿ ಕದಲದೆ ನಿಂತಿದ್ದ ಹತ್ತಾರು ಹಾಯಿದೋಣಿಗಳು ಇಡೀ ದೃಶ್ಯಕ್ಕೆ ಒಂದು ರೀತಿಯ ಮಾಯೆಯ ಮುಸುಕು ಹಾಕಿದವು. ಅರಬ್ಬೀ ಸಂಗೀತ ಅಲೆಅಲೆಯಾಗಿ ಹರಿದು ಬರತೊಡಗಿತು. ಸಾವಿರಾರು ವರ್ಷಗಳ ಇತಿಹಾಸ ಕಂಡೂ ಕಾಣದಂತೆ, ನೆನಪಿನ ಹಂಗಿಲ್ಲದ ನೈಲ್ ಆ ಕ್ಷಣ ಸೂರ್ಯಾಸ್ತ ಸವಿಯುತ್ತಾ ತನ್ನ ಪಾಡಿಗೆ ತಾನು ಹರಿಯುತ್ತಿತ್ತು.
ಇದುವರೆಗೂ ದೋಣಿಯ ಮುಂಭಾಗದಲ್ಲಿದ್ದ ಚಿಕ್ಕ ಹುಡುಗ ನಮ್ಮೆಡೆಗೆ ಬಂದು ಕೂತುಕೊಂಡ. ಸಹಜವಾಗಿ ನಮಗೆ ಅ ಹುಡುಗನ ಬಗ್ಗೆ ಹೆಚ್ಚು ಕುತೂಹಲ ಉಂಟಾಯಿತು. ತನ್ನ ಹೆಸರು ಅಹಮದ್ ಎಂದೂ ಸ್ಕೂಲಿನಲ್ಲಿ ಓದುತ್ತಿರುವೆನೆಂದೂ, ಬೆಳಿಗ್ಗೆ ಸ್ಕೂಲಿಗೆ ಹೋಗಿ ಸಂಜೆ ಇಲ್ಲಿ ಕೆಲಸ ಮಾಡುವೆನೆಂದೂ, ಆ ದೋಣಿ ತನ್ನ ಚಿಕ್ಕಪ್ಪನದೆಂದೂ, ಅವನಿಗೆ ಸಹಾಯವಾಗಲೆಂದು ತಾನೂ ಜೊತೆಗೆ ಬರುತ್ತೇನೆಂದೂ, ಇಲ್ಲಿಂದ ವಾಪಸ್ಸು ಹೋದಮೇಲೆ ಎಲೆಕ್ಟ್ರಿಕ್ ದೀಪವೂ ಇಲ್ಲದ ತಮ್ಮ ಮನೆಯಲ್ಲಿ ಮಂದ ಬೆಳಕಿನಲ್ಲಿ ಪಾಠ ಓದಿಕೊಳ್ಳುವೆನೆಂದೂ ಹೇಳಿದ. ಭಾಷೆ ಬರದಿದ್ದರೂ ನಾವೆಲ್ಲರೂ ಅವನನ್ನು ಮೆಚ್ಚುತ್ತಿರುವುದು ನಮ್ಮ ಚೆಹರೆಯಿಂದಲೇ ಅವನಿಗೆ ತಿಳಿದಿರಬೇಕು. ಚಾಲಾಕು ಹುಡುಗ! ಸ್ವಲ್ಪ ಧೈರ್ಯ ತಂದುಕೊಂಡು ಪಕ್ಕದಲ್ಲೇ ಕೂತಿದ್ದ ಸುಮಾರು ೫೦ ವರ್ಷದ ಬ್ಯಾಂಕ್ ಆಫೀಸರ್ ಹತ್ತಿರ ಬಂದು ನಕ್ಕ. ಅವಳಿಗೂ ತುಂಬಾ ಖುಶಿಯಾಯಿತು. ‘ಚೆನ್ನಾಗಿ ಓದು. ಒಳ್ಳೆ ಕೆಲಸ ಸಿಗುತ್ತೆ’ ಎಂದು ಅವನಿಗೆ ಅರ್ಥವಾಗುವಂತೆ ಹೇಳಲು ಪ್ರಯಾಸ ಪಟ್ಟಳು. ಕೈಯ್ಯಿಗೆ ಒಂದಷ್ಟು ಈಜಿಪ್ಶಿಯನ್ ಪೌಂಡುಗಳನ್ನು ತುರುಕಿ, ‘ಇದರಲ್ಲಿ ಪುಸ್ತಕ ತಗೋ’ ಎಂದಳು. ಇದುವರೆಗೂ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದ ಹುಡುಗ, ‘ಮ್ಯಾರ್ರಿ ಮಿ!? ಹೌ ಮೆನಿ ಕ್ಯಾಮೆಲ್ಸ್?’ ಎಂದ. ಕೂಡಲೇ ಎಲ್ಲರಿಗೂ ಶಾಕ್ ಆಯಿತು. ಅವಳು ಕೋಪದಿಂದ ‘ದಿಸ್ ಈಸ್ ಡಿಸ್ಗಸ್ಟಿಂಗ್! ಇಲ್ಲಿ ಜನಕ್ಕೆ ಏನಾಗಿದೆ? ಇವನ ವಯಸ್ಸು ನೋಡು. ಇವನ ಮಾತು ನೋಡು. ಹೆಂಗಸರನ್ನು ನೋಡಿದರೆ ಮದುವೆ ಮಾತು ಬಿಟ್ಟರೆ ಇನ್ನೇನೂ ಇಲ್ಲವೆ?! ’ ಎಂದು ಕೂಗಾಡಿದಳು. ಯಾರೋ ‘ಅವನಿಗೇನು ಗೊತ್ತು? ಇಲ್ಲಿ ದೊಡ್ಡವರೆಲ್ಲ ಹಾಗೆ ಕೇಳುವುದು ನೋಡಿ ಅದೇ ತಾನೂ ಮಾಡಬೇಕು ಅಂದು ಕೊಂಡಿದ್ದಾನೆ’ ಎಂದು ಅವಳಿಗೆ ಸಮಾಧಾನ ಮಾಡಿದರು. ಅಥವಾ ಬ್ರಿಟಿಷರು ಸಂಭಾಷಣೆ ಶುರು ಮಾಡುವಾಗ ಹವಾಮಾನದ ಬಗ್ಗೆ ಮಾತಾಡುವಂತೆ, ಇಲ್ಲಿ ಈ ರೀತಿ ಮದುವೆ ಬಗ್ಗೆ ಮಾತಾಡಬೆಕು ಅಂದು ಕೊಂಡಿದ್ದಾನೇನೋ’ ಎಂದು ಇನ್ಯಾರೊ ಜೋಕ್ ಮಾಡಿದರು! ಆಗ, ಅವನೂ ನಮ್ಮ ಜೊತೆ ಸೇರಿಕೊಂಡು ತನಗೂ ಅರ್ಥವಾದಂತೆ ಜೋರಾಗಿ ನಗತೊಡಗಿದ.
******
ಅಂದು ಸಂಜೆ ನಮ್ಮ ಕ್ರೂಸ್ ನಲ್ಲಿ ಎಲ್ಲೆಲ್ಲೂ ಬೆಲ್ಲಿ ಡಾನ್ಸಿಂಗ್ ನೋಡುವ ಉತ್ಸಾಹ. ಭಾರತದಲ್ಲಿ ಅಷ್ಟು ಸುಲಭವಾಗಿ ನೋಡಲು ಸಿಗದ, ಮೋಡಿ ಹಾಕುವ ಅಂಗ ಸೌಷ್ಟವ ಉಳ್ಳ ಯುವತಿಯರು ಮಾಡುವ ಈ ಜಗದ್ವಿಖ್ಯಾತ ಮಾದಕ ನೃತ್ಯ ನೋಡಲು ನಾವೆಲ್ಲ ಕಾದು ಬಿಟ್ಟಿದ್ದೆವು. ಉತ್ತರ ಈಜಿಪ್ತಿನ ಹಲವಾರು ರೀತಿಯ ಜಾನಪದ ನೃತ್ಯಗಳ ಶೈಲಿ ಸೇರಿ ಈ ರೂಪ ತಾಳಿತೆಂದು ಹೇಳುವ ಈ ಪ್ರದರ್ಶನಕ್ಕೆ ಅಲ್ಲಿ ‘ರಕ್ಸ್ ಶಾರ್ಕಿ’ ಎಂದು ಹೆಸರು. ಹಿಂದೆ ಫೇರೋಗಳ ಎದುರು ವಿಶಾಲ ಪ್ರಾಂಗಣಗಳಲ್ಲಿ, ಮೊದಲು ಕೊನೆಯಿಲ್ಲದ ಮರಳುಗಾಡಿನ ನಡುವೆ ಬೀಡುಬಿಟ್ಟ ದಣಿದ ವರ್ತಕರ ಮನರಂಜನೆಗಾಗಿ ಬೆಳದಿಂಗಳ ರಾತ್ರಿಗಳಲ್ಲಿ ಲಾವಣ್ಯಮಯಿ ಕಪ್ಪು ನರ್ತಕಿಯರು ನೀಡುತ್ತಿರಬಹುದಾದ ಪ್ರದರ್ಶನ ನೆನೆಸಿಕೊಂದು ನಾವೆಲ್ಲಾ ರೋಮಾಂಚಿತರಾಗಿದ್ದೆವು.
ಅಂದು ಸಂಜೆ ಕಾರ್ಯಕ್ರಮಕ್ಕೆ ಬರುವ ಹೆಂಗಸರಿಗೆ ಸ್ಥಳೀಯ ಉಡುಪುಗಳು ನೌಕೆಯ ಅಂಗಡಿಗಳಲ್ಲೇ ಬಾಡಿಗೆಗೆ ಪಡೆಯುವ ಸೌಕರ್ಯವಿತ್ತು. ಹೆಂಗಸರಿಗೆ ‘ಗಲಬಿಯಾ’ ಎಂಬ ಕಸೂತಿ ಮಾಡಿದ ಉದ್ದ ನಿಲುವಂಗಿ ತೊಟ್ಟು ಪಾರ್ಟಿಗೆ ಬರಲು ವಿಶೇಷ ಆಹ್ವಾನವಿತ್ತು. ಪಾಶ್ಚಾತ್ಯ ದೇಶಗಳ ಹೊಂಗೂದಲಿನ ಹೆಂಗಸರು ಜಗಮಗ ಹೊಳೆಯುವ ಉಡುಗೆಗಳಲ್ಲಿ ಹಾಜರಾಗಿದ್ದರು. ಡೊಳ್ಳು ಹೊಟ್ಟೆಯ ಮಧ್ಯವಯಸ್ಕರಂತೂ ಕೈಯ್ಯಲ್ಲಿ ಮದ್ಯ ಹಿಡಿದು ಕಾದು ಬಿಟ್ಟಿದ್ದರು. ನಮ್ಮ ಗುಂಪಿನಲ್ಲೂ ಕೆಲ ‘ಸಾಹಸಮಯಿಗಳು’ ಅವಳು ಕರೆದರೆ ಜೊತೆಗೆ ನರ್ತಿಸಲು ತಯಾರಾದರು. ಅದರೊಲ್ಲಬ್ಬರಿಗೆ ಬೋಳು ತಲೆಯ ಚೀಫ್ ಶೆಫ್ ನಿಂದ ಜೊತೆಗೆ ನರ್ತಿಸಲು ಅಹ್ವಾನವೂ ಬಂತು. ಇದರಲ್ಲಿ ಗಮನ ಸೆಳೆದವರು ನಮ್ಮ ಕ್ರೂಸಲ್ಲೇ ಇದ್ದ ಅಮೆರಿಕಾದಿಂದ ಬಂದಿದ್ದ ಕೆಲವು ಹದಿಹರೆಯದ ವಿದ್ಯಾರ್ಥಿಗಳು. ಅವರು ಇದೆಲ್ಲದಕ್ಕೂ ಗಮನ ಕೊಡದೆ ನಿರ್ಲಿಪ್ತರಾಗಿ ಕಾರ್ಡ್ಸ್ ಆಡುತ್ತಾ ಕುಳಿತಿದ್ದರು.
ಊಟದ ಸಮಯ. ದೀಪಗಳು ಜಗಮಗಿಸುತ್ತಿದ್ದುವು. ಸಂಗೀತ ಜೋರಾಗಿ ಬೆಲ್ಲಿ ಡಾನ್ಸರ್ ಬರುವ ಗಳಿಗೆ ಸಮೀಪಿಸಿದಂತೆ ಎಲ್ಲರ ಕುತೂಹಲ ಹೆಚ್ಚಾಯಿತು. ಕೊನೆಗೆ ತೆಳ್ಳನೆಯ ಮುಸುಕೆಳೆದು ಹಾವಭಾವ ಮಾಡುತ್ತಾ ಬಂದವಳು ಹಾಲಿನ ನಡುವೆ ಬಂದು ನಿಂತು ನರ್ತಿಸ ತೊಡಗಿದಳು. ಸಂಗೀತ ತಾರಕಕ್ಕೇರಿ ಅವಳು ಮುಸುಕು ತೆಗೆದೆಸೆದಾಗ ಜನ ಚಪ್ಪಾಳೆ ತಟ್ಟಲು ಶುರು ಮಾಡಿದರು. ಅವಳು ತನ್ನ ಅಂಗಾಂಗಗಳನ್ನು ಕುಲುಕಿಸುತ್ತಾ, ಪ್ರೇಕ್ಷಕರನ್ನು ಕೆಣಕುತ್ತಾ ನರ್ತಿಸತೊಡಗಿದಳು. ಆದರೆ ಏನನ್ನೋ ನಿರೀಕ್ಷಿಸಿದ್ದ ನಮಗೆ ಆ ಮಧ್ಯವಯಸ್ಸಿನ ತಿಂದುಂಡು ಬೊಜ್ಜು ಬೆಳೆಸಿ ಮುಖದ ತುಂಬಾ ಬಣ್ಣ ಬಳಿದು ಬೆವರುತ್ತ ನರ್ತಿಸುತಿದ್ದ ಹೆಂಗಸನ್ನು ಕಂಡು ನಿರಾಸೆ, ಅನುಕಂಪ ಎಲ್ಲ ಒಟ್ಟಿಗೆ ಹುಟ್ಟಿಕೊಂಡವು. ಅವಳು ಕೈ ಹಿಡಿದು ಎಳೆದುಕೊಂಡು ಹೋದಾಗ ಕೆಲವರು ಅವಳೊಡನೆ ಮನಸ್ಸಿಲ್ಲದ ಮನಸ್ಸಿನಿಂದ ನರ್ತಿಸಿದರು. ಇದೆಲ್ಲ ಪಿಚ್ಚೆನಿಸಿದರೂ ಇನ್ನು ಸೂಫಿ ನರ್ತಕ ಬರುವುದಿತ್ತಾದ್ದರಿಂದ ಅವನಿಗಾಗಿ ಕಾಯುತ್ತಾ ಕುಳಿತೆವು. ಟೀವಿ ಸಿನಿಮಾಗಳಲ್ಲಿ ನೋಡಿದ್ದಂತೆ ಬಿಳೀ ಬಟ್ಟೆಯ, ಉದ್ದ ಟೋಪಿಯ ದರವೇಶಿಗಳು ತಿರುಗಿತಿರುಗಿ ಮೈಮರೆತು ಇಹವನ್ನು ಮೀರುವ ಮೈ ಜುಂ ಎನ್ನಿಸುವ ಪ್ರಯತ್ನವನ್ನು ನೋಡಲು ತೂಕಡಿಸುತ್ತಲೇ ಕಾದಿದ್ದೆವು.
ಈ ನರ್ತಕಿ ನಿರ್ಗಮಿಸುತ್ತಲೇ ಅವನ ಆಗಮನವೂ ಆಯಿತು. ಅವನು ವೇಗವಾಗಿ ತಿರುಗುತ್ತಾ ಅನೇಕ ಚಮತ್ಕಾರಗಳನ್ನು ಮಾಡುತ್ತ ಎಲ್ಲರ ಗಮನ ಸೆಳೆದರೂ ಅದರಲ್ಲಿ ಒಂದು ಸರ್ಕಸ್ ಟ್ರಿಕ್ಕಿಗಿಂತ ಹೆಚ್ಚಿನದೇನೂ ನಮಗೆ ಕಾಣಿಸಲಿಲ್ಲ. ಖಂಡಿತ ಅದು ಸ್ಪಿರಿಚುಯಲ್ ಆಗಿರಲಿಲ್ಲ. ಅದು ತನ್ನನ್ನು ಮೀರುವ ಪ್ರಯತ್ನವಾಗಿರದೆ ಕೇವಲ ಹೊಟ್ಟೆಪಾಡಿಗಾಗಿ ಅಭ್ಯಸಿಸಿದ ಕಲೆಯೆನ್ನುವುದು ನಮ್ಮ ಅನುಭವಕ್ಕೆ ಬರುತ್ತಿತ್ತು.
ಕೊನೆಗೆ ಇಬ್ಬರೂ ಸಲಾಮು ಹಾಕುತ್ತ ಟಿಪ್ಪುಗಳನ್ನು ಸ್ವೀಕರಿಸುತ್ತ ಸಿಗರೇಟಿನ ಹೊಗೆ ತುಂಬಿದ ಹಾಲಿನ ಸುತ್ತಾ ಬಂದಾಗ ಅವರು ಹತ್ತಿರದಿಂದ ಇನ್ನೂ ಢಾಳಾಗಿ ಕರುಣಾಜನಕವಾಗಿ ಕಾಣುತ್ತಿದ್ದರು. ಬೆವರುತ್ತಿದ್ದ ಅವರ ಮುಖಗಳಿಂದ ಮೇಕಪ್ಪು ಇಳಿಯುತ್ತಿತ್ತು. ಸಂಸ್ಕೃತಿಯ ಹೆಸರಿನಲ್ಲಿ ಕಲೆಯ ಬಳಕೆ ಎಲ್ಲಾ ಕಡೆ ಆದಂತೆಯೇ ಈಜಿಪ್ತಿನಲ್ಲೂ ಆಗುತ್ತಿತ್ತು. ಅದು ಹಲವರಿಗೆ ಜೀವನೋಪಾಯವನ್ನೂ ಒದಗಿಸುತ್ತಿತ್ತು.
ದೀಪಗಳು ಮಂದವಾಗಿ ನಾವೆಲ್ಲ ನಮ್ಮ ನಮ್ಮ ಕ್ಯಾಬಿನ್ನುಗಳತ್ತ ಕಾಲು ಹಾಕಿದೆವು. ರಾತ್ರಿ ಕನಸಿನ ತುಂಬಾ ಹಿಂದಿನ ದಿನ ನೋಡಿದ್ದ ಸಾವಿನ ಊರಲ್ಲಿ ಗೋರಿಗಳ ನಡುವೆ ಮನೆ ಮಾಡಿರುವ ಸಂಸಾರಗಳು. ಅಲ್ಲಿನ ಹೆಂಗಸರು ಮನೆಗೆಲಸ ಮುಗಿದ ಮೇಲೆ ಮಂಕು ಬೆಳಕಿನಲ್ಲಿ ರಾತ್ರಿಯೆಲ್ಲಾ ಕೂತು ಮಕ್ಕಳನ್ನು ತೂಗುತ್ತಲೇ ಈ ಬೆಲ್ಲಿ ಡಾನ್ಸರ್ ಗಳ ಮಾದಕ ಮೇಲುಡುಗೆ ಗಳಿಗೆ ಬಣ್ಣ ಬಣ್ಣದ ದಾರದ, ಹೊಳೆಯುವ ಚಮಕಿಯ ಕಸೂತಿಯ ಕೆಲಸ ಮಾಡುವುದು. ಮಾರನೆಯ ದಿನ ಗಂಡ ಮಾರ್ಕೆಟ್ಟಿಗೆ ಹೋಗಿ ಸವನಿರ್‌ಶಾಪುಗಳಲ್ಲಿ ಹೇರಳವಾಗಿ ಪಾಶ್ಚಾತ್ಯ ಪ್ರವಾಸಿಗಳು ಕೊಳ್ಳುವ ಈ ಸರಕನ್ನು ತಲುಪಿಸಿ ಸಂಸಾರಕ್ಕಾಗಿ ಅಂದಿನ ರೇಶನ್ ತರುವುದು…ಎಲ್ಲಾ ತೇಲಿ ಬರುತ್ತಲೇ ಇತ್ತು. ನಮ್ಮ ನೌಕೆ ದಡ ಹಿಡಿದು ಅಲ್ಲಾಡದೆ ನಿಂತಿತ್ತು. ನೈಲ್ ಕೂಡಾ ಕತ್ತಲಲ್ಲಿ ಕರಗಿತ್ತು.
ಹಮಾಮಿನಲ್ಲಿ ಅಹಂ ಬ್ರಹ್ಮಾಸ್ಮಿ
ಅಸ್ವನ್ ನಲ್ಲಿ ನೈಲ್ ನದಿಗೆ ಅಣೆಕಟ್ಟು ಕಟ್ಟಿದ್ದು ಈಜಿಪ್ಟಿನ ಅಧ್ಯಕ್ಷನಾಗಿದ್ದ ನಾಸ್ಸರ್ ಕಾಲದ ಅದ್ಭುತ ಯೋಜನೆ. ಸುಮಾರು ೪ ಕಿಮೀ ಉದ್ದ, ೧೧೧ ಮೀಟರುಗಳು ಎತ್ತರವಿರುವ ಈ ಆಣೆಕಟ್ಟಿನ ಫಲವಾಗಿ ನಾಸೆರ್ ಸರೋವರ ಸೃಷ್ಟಿಯಾಯಿತು. ನೀರಿಗಾಗಿ ಬಾಯಿಬಾಯಿ ಬಿಡುತ್ತಿದ ಮರಳುಗಾಡಿನಲ್ಲಿ ಲಕ್ಷಾಂತರ ಎಕರೆಗಳು ಹಸಿರಾಗಿದ್ದುವು. ಆದರೆ, ಜೊತೆಗೇ ಇಲ್ಲಿದ್ದ ನಾಲ್ಕು ರಾಮ್ಸೇಗಳು ಮತ್ತು ರಾಣಿ ನೆಫೆರೆಟೆರರಿಯ ಬೃಹತ್ ಮೂರ್ತಿಗಳನ್ನು ಹೊಂದಿದ, ಇಂದು ಜಗತ್ತಿನ ಅತಿ ಭವ್ಯ ಸ್ಮಾರಕಗಳಲ್ಲಿ ಒಂದಾದ ೩೦೦೦ ವರ್ಷಗಳ ಹಿಂದಿನ ಫಿಲೇ ಮತ್ತು ಅಬು ಸಿಂಬಲ್ ಮಂದಿರಗಳು ನೀರಲ್ಲಿ ಮುಳುಗಲಿದ್ದುವು. ಆದರೆ ಅಲ್ಲಿನ ಸರ್ಕಾರ ಇದರ ಕೈ ಬಿಡಲಿಲ್ಲ. ಯುನೆಸ್ಕೋ ಸಹಾಯದಿಂದ ಇವನ್ನು ತಜ್ಞರ ನೇತೃತ್ವದಲ್ಲಿ ಸುಮಾರು ೨.೩ ಮಿಲಿಯನ್ ಕಲ್ಲಿನ ತುಂಡುಗಳನ್ನಾಗಿ ಒಡೆಸಿ ,ಅದು ಅದಲು ಬದಲಾಗದಂತೆ ಪ್ರತಿಯೊಂದಕ್ಕೂ ನಂಬರ್ ಮಾಡಿ ಹತ್ತಿರದಲ್ಲೇ ಸ್ವಲ್ಪ ಎತ್ತರದಲ್ಲಿದ್ದ ಸ್ಥಳದಲ್ಲಿ ಮತ್ತೆ ಕಟ್ಟಿದ್ದಾರೆ. ಇದಕ್ಕೆ ಭೇಟಿ ಕೊಟ್ಟಾಗ ಇದನ್ನು ಸ್ಥಳಾಂತರ ಗೊಳಿಸಿರುವ ವಿಷಯ ಎಲ್ಲೂ ಅನುಮಾನವೂ ಬರುವುದಿಲ್ಲ!
*******
ಅಲ್ಲಿಂದ ನಮ್ಮ ಲಕ್ಷರಿ ಕ್ರೂಸ್ ಶುರುವಾಯಿತು. ಎಲ್ಲಾ ಅನುಕೂಲಗಳನ್ನು ಹೊಂದಿ, ಫೈವ್ ಸ್ಟಾರ್ ಹೋಟೆಲಿನಂತಿದ್ದ ಹಡಗಿನಲ್ಲಿ ಒಂದೊಂದು ಕ್ಯಾಬಿನ್ ನಲ್ಲಿ ಇಬ್ಬಿಬ್ಬರಿಗೆ ಸ್ಥಳ ಕೊಟ್ಟಿದ್ದರು. ನಮ್ಮ ಗುಂಪಿನಲ್ಲಿದ್ದ ಹನ್ನೆರಡು ಜನ, ಜೊತೆಗಿದ್ದ ಬೇರೆಬೇರೆ ದೇಶದ ನೂರಾರು ಪ್ರಯಾಣಿಕರು. ಊಟ, ತಿಂಡಿ, ಮನರಂಜನೆಯ ಸಮಯದಲ್ಲಿ ಒಟ್ಟಿಗೆ ಸೇರಿದಾಗ ಆಗುತ್ತಿದ್ದ ಮಾತುಕತೆ , ಸಣ್ಣ ಪುಟ್ಟ ಘರ್ಷಣೆಗಳು ತುಂಬಾ ಸ್ವಾರಸ್ಯಕರವಾಗಿರುತ್ತಿದ್ದುವು.
ನನ್ನ ಜೊತೆಗಿದ್ದಾಕೆ ತುಂಬಾ ಸ್ನೇಹಮಯಿ, ಮಾತುಮಾತಿಗೂ ಸೂಕ್ತವಾದ ಜೋಕುಗಳನ್ನು ಹೇಳಿ ಎಲ್ಲರನ್ನೂ ನಗಿಸುವಾಕೆ. ಆದರೆ ಅವಳಲ್ಲಿ ಒಂದು ವಿಚಿತ್ರ ಅಭ್ಯಾಸವಿತ್ತು. ತಾನು ಏನೇನು ಕೆಲಸ ಮಾಡಿಕೊಳ್ಳುತ್ತಿದ್ದರೂ ಜೊತೆಗೆ ಅದನ್ನು ಗಟ್ಟಿಯಾಗಿ ಇಂಗ್ಲಿಷಿನಲ್ಲಿ ಹೇಳಿ ಕೊಳ್ಳುತ್ತಿದ್ದಳು.
ಅಂದರೆ ಬೆಳಗಾಗೆದ್ದು ಹೊರಗೆ ಹೊರಟಿದ್ದರೆ – “ಸೊ ಮೈ ಬ್ರೇಕ್ಫಸ್ಟ್ ಇಸ್ ಡನ್. ಟಾಬ್ಲೆಟ್ಸ್ ಆರ್ ಟೇಕೆನ್. ವೇರ್ ಈಸ್ ಮೈ ರೆಡ್ ಚುಡಿದಾರ್. ಓಹ್ ಐ ಅಮ್ ವೇರಿಂಗ್ ಇಟ್. ಬ್ಯಾಗ್ ಇಸ್ ವಿದ್ ಮಿ. ಮನಿ ಇಸ್ ಇನ್ಸೈಡ್ ದ ಬ್ಯಾಗ್. ಪಾಸ್ಪೋರ್ಟ್ ಇಸ್ ಇನ್ ದ ವೇಸ್ಟ್ ಬೆಲ್ಟ್ಸೋ. ವಿ ಆರ್ ರೆಡಿ ಟು ಗೋ……” ಹಾಗೆ.
ಸುತ್ತಾಡಿ ದಣಿದು ರೂಮಿಗೆ ಬಂದ ತಕ್ಷಣ ಬ್ಯಾಗ್ ಹಾಸಿಗೆ ಮೇಲೆಸೆದು,ಮಂಡಿ ಸವರುತ್ತಾ- “ಅಮ್ಮಯ್ಯಾ! ಐ ಆಮ್ ನಾಟ್ ಕಾಲಿಂಗ್ ಔಟ್ ಫಾರ್ ಮೈ ಮದರ್, ಜಸ್ಟ್ ಆಫರಿಂಗ್ ಸೊಲೇಸ್ ಟು ಮೈ ಸೆಲ್ಫ್. ಅಹ್ಮ್… ವಿ ಹ್ಯಾವ್ ಟು ಸೆಟ್ ದ ಅಲಾರ್ಮ್ ಫಾರ್ ಟುಮಾರೋ…. ದ ಕಾನ್ವಾಯ್ ಈಸ್ ಲೀವಿಂಗ್ ಎಟ್ ಟೂ. ಟೂ ಅರ್ಲಿ, ಬಟ್ ವಾಟ್ ಟು ಡೂವಿ. ಆರ್ ಇನ್ ಅ ಫಾರಿನ್ ಕಂಟ್ರಿ….” ಹಾಗೆ.
ಮೊದಲು ಸ್ವಾರಸ್ಯ ಎನ್ನಿಸುತ್ತಿದ್ದ ಅವಳ ಅಭ್ಯಾಸ ಬರಬರುತ್ತಾ ಕಿರಿಕಿರಿ ಯಾಗ ತೊಡಗಿತು. ಆದರೆ ಅದೆಲ್ಲಾ ಸಹಯಾತ್ರೆಯ ಜೊತೆಗೆ ಬರುವ ಕೋಟಲೆಗಳು ತಾನೇ, ಮಾಡುವುದಾದರೂ ಏನು.
******
ನಮ್ಮ ಜೊತೆಗಿದ್ದ ಒಬ್ಬ ಪಂಜಾಬಿ ಸಾಫ್ಟ್ ವೇರ್ ಎಂಜಿನಿಯರ್ ಕೈರೋಗೆ ಕಾಲಿಟ್ಟಾಗಿನಿಂದ, ‘ಇಲ್ಲಿ ಟರ್ಕಿಶ್ ಹಮಾಮ್ ಎಲ್ಲಿದೇಂತ ತಿಳ್ಕೋಬೇಕು. ನಾನು ಟರ್ಕಿಗೆ ಹೋಗಿದ್ದಾಗ, ಭೇಟಿ ಕೊಟ್ಟಿದ್ದೆ. ಅನ್ ಎಕ್ಸ್ಪೀರಿಯನ್ಸ್ ಯು ಶುಡ್ ನಾಟ್ ಮಿಸ್’ ಎಂದು ಜಪಿಸುತ್ತಿದ್ದಳು. ಅವಳು ತಾನು ಟರ್ಕಿ ನೋಡಿದ್ದೇನೆಂದೂ, ತಾನು ತುಂಬಾ ಅಡ್ವೆಂಚರಸ್ ಎಂದು ತೋರಿಸಿಕೊಳ್ಳಲು ಹಾಗೆ ಹೇಳಿಕೊಳ್ಳುತ್ತಾಳೆಂದು ಕೆಲವರೆಂದರೆ, ನಿಜವಾಗಿ ಅದು ಮರೆಯಲಾಗದಂಥಾ ಅನುಭವ ಇರಬಹುದೆಂಬುದು ಕೆಲವರ ಅನಿಸಿಕೆಯಾಗಿತ್ತು.
ಅಂದು ಸಂಜೆ ನಾವೆಲ್ಲ ಊರು ಸುತ್ತಿ ದಣಿದು ಬಂದು ಡೆಕ್ ಮೆಲೆ ಕೂತು ವೈನ್ ಹೀರುತ್ತಿದ್ದಾಗ ಮತ್ತೆ ಅವಳ ಟರ್ಕಿಶ್ ಹಮಾಮ್ ಕತೆ ಶುರುವಾಯಿತು. ಅದೇನು ಅಷ್ಟೊಂದು ಸ್ಪೆಶಲ್ ಅನುಭವ ಹೇಳೂಂತ ಎಲ್ಲರೂ ದುಂಬಾಲು ಬಿದ್ದೆವು. ಅದಕ್ಕೇ ಕಾಯುತ್ತಿದ್ದಂತೆ ಅವಳು ಶುರು ಮಾಡಿದಳು.
“ನಾವು ಅಲ್ಲಿಗೆ ಹೋದವರೂ ಬರೀ ಹೆಂಗಸರ ಗುಂಪೇ. ಇಸ್ತಾಂಬುಲ್ ನಲ್ಲಿ ಒಂದು ಫೇಮಸ್ ಟರ್ಕಿಶ್ ಹಮಾಮ್ ಗೆ ಹೋದೆವು. ಏನು ಎಕ್ಸ್ಪೆಕ್ಟ್ ಮಾಡಬೇಕೂಂತ ಗೊತ್ತಿರಲಿಲ್ಲ. ಅದೊಂದು ತುಂಬಾ ಲಕ್ಷೂರಿಯಸ್ ಸ್ನಾನಗೃಹ. ಹೆಂಗಸರಿಗೇ ಸೆಪರೇಟ್ ವಿಂಗ್. ಎಲ್ಲಾ ಕಡೆ ಅಮೃತಶಿಲೆ. ಸುಗಂಧ ಚೆಲ್ಲುವ ಮೊಂಬತ್ತಿಗಳು. ಒಳ್ಳೆಯ ಮಾದಕ ಸಂಗೀತ.
ಮೊದಲು ಹೊರಗಡೆ ಇದ್ದ ರೂಮಿಗೆ ನಮ್ಮನ್ನು ಕಳಿಸಿದರು. ಅಲ್ಲಿ ಬಂದ ಹುಡುಗಿ ನಮಗೆ ಬಟ್ಟೆ ಕಳಚಿ, ಒಳಗೆ ಬರಬೇಕೆಂದು ಹೇಳಿ ಒಂದು ದೊಡ್ಡ ಟವಲ್ ಅನ್ನೂ ,ಮೃದು ಚಪ್ಪಲಿಗಳನ್ನು ಕೊಟ್ಟು ಹೋದಳು. ನಾವು ಅಧೀರರಾಗಿ ಅವಳು ಹೇಳಿದಂತೆ ಮಾಡಿ ಟವಲ್ ಸುತ್ತಿಕೊಂದು ಒಳಗೆ ನಡೆದು ಸ್ನಾನದ ಕೊಳದ ಪಕ್ಕದಲ್ಲಿದ್ದ ಅಮೃತಶಿಲೆಯ ಬೆಂಚಿನ ಮೇಲೆ ಕೂತೆವು. ಮುಂದೇನಾಗುತ್ತದೆಯೋ ಎಂದು ಆತಂಕದಲ್ಲೇ ಕಾದೆವು. ಆಗ ಇದ್ದಕ್ಕಿದ್ದಂತೆ ಅತ್ತಲಿಂದ ಪೂರ್ತಿ ಬೆತ್ತಲಾಗಿದ್ದು, ಕೇವಲ ಒಂದು ಥಾಂಗ್ ಧರಿಸಿದ್ದ ಒಬ್ಬ ದೊಡ್ಡ ಸೈಜಿನ ಹೆಂಗಸು ದೊಡ್ಡ ಗಂಟಲಿನಲ್ಲಿ ‘ಹಾಯ್ ಗರ್ಲ್ಜ್’ ಎನ್ನುತ್ತಲೇ ನಮ್ಮತ್ತ ನಡೆದು ಬಂದಳು. ಒಬ್ಬೊಬ್ಬರ ಹತ್ತಿರ ಬಂದವಳೆ ಸರಕ್ ಸರಕ್ ಎಂದು ನಮ್ಮ ಟವಲುಗಳನ್ನು ಕಿತ್ತೆಸೆದಳು. ಆ ಕ್ಷಣ ನಮಗಾದ ಶಾಕ್ ಅಷ್ಟಿಷ್ಟಲ್ಲ. ‘ಇನ್ ಅ ಸೆಕಂಡ್ ವಿ ಅರ್ ಆಲ್ ಸ್ಟಾರ್ಕ್ ನೇಕೆಡ್!’ ಆಗ ‘ಗೆಟ್‌ಇಂಟು ದ ವಾಟರ್’ ಎಂದು ಅಜ್ಞಾಪಿಸಿದಳು. ಆಮೇಲೆ ಮತ್ತಷ್ಟು ಹುಡುಗಿಯರು ಬಂದರು. ನಂತರ ಎಲ್ಲಾ ಅಹ್ಲಾದಕರವಾಗಿತ್ತು. ಮಸಾಜ್ ಸ್ನಾನ ಎಲ್ಲಾ ಅದ್ಭುತವಾಗಿತ್ತು. ಆದರೆ, ಅವಳು ಟವಲ್ ಕಿತ್ತುಕೊಂಡ ಕ್ಷಣ.. ಈಗಲು ಮರೆಯೋಕೆ ಸಾಧ್ಯವಿಲ್ಲ” ಎಂದು ಬಿದ್ದು ಬಿದ್ದು ನಕ್ಕಳು. ನಮ್ಮೆಲ್ಲರಿಗೂ ನಗು ತಡೆಯಲಾಗಲಿಲ್ಲ.
ಆದರೆ ಆ ಹಟಾತ್ ಕ್ರಿಯೆಗೆ ಕಾರಣ ಏನು? ಎಂಬ ಚರ್ಚೆ ಶುರುವಾಯಿತು.
‘ಸಂಕೋಚ ಹೋಗಲಾಡಿಸೋಕೆ ಇರಬೇಕು. ಎಲ್ಲ ಒಟ್ಟಿಗೆ ಬೆತ್ತಲಾದರೆ ಇನ್ಹಿಬಿಶನ್ಸ್ ಗಾನ್!’ ಎಂದು ಒಬ್ಬರೆಂದರೆ, ‘ನನಗನ್ನಿಸೋದು ಅದು ಸ್ಪಿರಿಚುಯಲ್ ಅಂತ. ನೋಡು, ಒಂದು ಕ್ಷಣದಲ್ಲಿ ಅಹ್! ಎಲ್ಲಾ ಕಳೆದು ಹೋಯ್ತಲ್ಲಾ “ಎಂದು ಇನ್ಯಾರೊ ಅಂದಾಗ ಗಂಭೀರವಾಗಿ ಮಿಕ್ಕವರು ತಲೆದೂಗಿದೆವು.
ಅಷ್ಟು ಹೊತ್ತಿಗೆ ಊಟದ ಹೊತ್ತಾಗಿತ್ತು. ಅಹಂ ಬ್ರಹ್ಮಾಸ್ಮಿ ಎನ್ನುತ್ತಾ ಎಲ್ಲರೂ ಹಗುರಾಗಿ ಎದ್ದೆವು.
******
ನಮಗೆ ಕ್ರೂಸ್ ನಲ್ಲಿ ಒಂದು ಬೆಂಗಳೂರಿನ ಕುಟುಂಬದ ಪರಿಚಯವಾಯಿತು. ತುಂಬಾ ಸುಸಂಸ್ಕೃತ, ಸ್ನೇಹಮಯಿ ಕುಟುಂಬ. ಗಂಡ, ಹೆಂಡತಿ, ಮಗಳು, ಅಳಿಯ , ಮೊಮ್ಮಕ್ಕಳು ಎಲ್ಲಾ ಬಂದಿದ್ದರು. ಆತನ ಹೆಸರು ಮೂಸಾ. ಆತ ಬೆಂಗಳೂರಿನಲ್ಲಿ ನೂರು ವರ್ಷಕ್ಕೂ ಹೆಚ್ಚು ಕಾಲದಿಂದ ಬುಸಿನೆಸ್ ಇಟ್ಟುಕೊಡಿದ್ದವರು. ಬೆಂಗಳೂರನ್ನು ಪ್ರಾಣಕ್ಕಿಂತಾ ಹೆಚ್ಚು ಪ್ರೀತಿಸುವ, ಹೆಮ್ಮೆ ಪಡುವ ಹಳೇ ಬೆಂಗಳೂರಿಗರು. ನಮ್ಮ ‘ವಿಮೆನ್ಸ್ ಗ್ರೂಪ್’ ಕಂಡು ಖುಶಿಯಾದ ಅವರು ನಾನು ಬೆಂಗಳೂರಿನವಳೆಂದು ತಿಳಿದು, ‘ಕನ್ನಡದಲ್ಲಿ ಮಾತಾಡಬಹುದಾ.. ನೋಡಿ ನಮ್ಮವರು ಸಿಕ್ರೆ ಎಷ್ಟು ಖುಶಿ’ ಎಂದು ರೋಮಾಂಚನ ಗೊಂಡರು. ವಿಶೇಷವಾಗಿ ವೆಜಿಟೇರಿಯನ್ ಅಡಿಗೆಗಳು ಯಾವುದೆಂದು ನನಗಾಗಿ ಪರಿಚಯ ಮಾಡಿಕೊಟ್ಟರು.
ಮಾರನೆಯ ದಿನ ರಾತ್ರಿ ಊಟಕ್ಕೆ ಬಂದಾಗ ಮೂಸಾ ಅವರು ಸ್ವಲ್ಪ ಬೇಸರದಲ್ಲಿದ್ದಂತೆ ಕಂಡಿತು. ಆಮೇಲೆ ನನ್ನ ಹತ್ತಿರ ಬಂದು ‘ನೋಡಿ, ನಿಮ್ಮ ಗುಂಪಿನವರು ಹೇಗೆ ಬೆಂಗಳೂರನ್ನು ಬೈದು ಕೊಳ್ತಾರೆ. ನಿನ್ನೆ ಎಲ್ಲಾ ನೋಡ್ತಿದ್ದೆ. ಆಲ್ ದ ಟೈಮ್ ದೆ ಆರ್ ಬ್ಯಾಂಗಳೂರ್ ಬ್ಯಾಶಿಂಗ್. ನೀವು ಹೇಳಬೇಕು. ಸುಮ್ಮನೆ ಇರೋದು ತಪ್ಪು ಎಂದರು. ಆಗ ನನ್ನ ಪಕ್ಕದಲ್ಲಿದ್ದ ದೆಹಲಿಯಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ, ಅಲ್ಪಸ್ವಲ್ಪ ಕನ್ನಡ ಅರ್ಥವಾಗುತ್ತಿದ್ದಾಕೆ, ‘ನಾವು, ಹೇಳೊದರಲ್ಲಿ ಏನು ತಪ್ಪಿದೆ. ಬ್ಯಾಂಗಲೂರ್ ಇಸ್ ಹಾರಿಬಲ್. ಸೋ ಮಚ್ ಟ್ರಾಫಿಕ್.ಸೋಮಚ್ ಪೊಲ್ಲ್ಯೂಶನ್’ ಎಂದು ಮುಂದುವರಿಯುವ ಮೊದಲು ಆತ ‘ಅದು ನೀವೆಲ್ಲಾ ಬಂದ ಮೇಲೆ ಅಗಿದ್ದು. ಮೊದಲು ನಮ್ಮ ಬೆಂಗಳೂರು ಸ್ವರ್ಗದ ಹಾಗಿತ್ತು. ಎಷ್ಟು ತಂಪಾಗಿತ್ತು. ಎಷ್ಟು ಹಸಿರಾಗಿತ್ತು. ನಮ್ಮ ಮನೆಗಳಲ್ಲಿ ಫ್ಯಾನುಗಳಿರಲಿಲ್ಲ. ಈಗ ನೋಡಿ ಭಾರತದವರೆಲ್ಲಾ ಬೆಂಗಳೂರಿಗೇ ಬರಬೇಕು. ಇನ್ನೇನಾಗುತ್ತೆ. ಇಷ್ಟೊಂದು ಜನರನ್ನು ತಡೆಯುವ ಶಕ್ತಿ ಬೆಂಗಳೂರಿಗಿಲ್ಲಪ್ಪ’ ಎಂದರು.
‘ಆದರೆ ನಾವು ಎಷ್ಟೊಂದು ದುಡ್ಡು ತಂದಿದ್ದೇವೆ ನಿಮ್ಮ ಬೆಂಗಳೂರಿಗೆ’ ಎಂದು ಕೊಂಕಾಗಿ ದೆಹಲಿಯವರಂದಾಗ ಆತನ ಮೈಯ್ಯುರಿದು ಹೋಯಿತು. ‘ಯಾರಿಗೆ ಬೇಕ್ರೀ ನಿಮ್ಮ ದುಡ್ಡು? ನೀವು ಬರೋದೂ ಬೇಕಿಲ್ಲ, ನಿಮ್ಮ ದುಡ್ಡೂ ಬೇಕಿಲ್ಲ.. ನಾವು ನಮ್ಮ ಮರಗಳನ್ನು ಕಡಿಯುವುದೂ ಬೇಕಿಲ್ಲ. ಒಂದೊದು ಮರ ಉರುಳಿದಾಗ ಹೇಗೆ ಹೊಟ್ಟೆಉರಿದುಹೋಗುತ್ತೆ. ಹೇಗಾಗಿಹೋಯ್ತಲ್ಲ ನಮ್ಮ ಬೆಂಗಳೂರು’ ಎಂದವರೇ ಅಲ್ಲಿಂದ ನಿಧಾನವಾಗಿ ನಡೆದು ಹೋದರು. ಸ್ವಲ್ಪ ಹೊತ್ತು ಮೌನ ಆವರಿಸಿತ್ತು.
ಅದೇಕೋ ಅಂದು ಟೇಬಲ್ ತುಂಬಿದ್ದ ಸಿಹಿ ತಿಂಡಿ, ಐಸ್ ಕ್ರೀಮ್, ಫ್ರೂಟ್ ಸಲಾಡ್ ಗಳ ಡೆಸರ್ಟ್ ಗಳು ತುಂಬಿದ್ದ ಟೇಬಲ್ಲಿನತ್ತ ಹೋಗಲು ಮನಸ್ಸಾಗಲಿಲ್ಲ. ಸಾಲುಸಾಲಾಗಿ ನ್ಯಾಶನಲ್ ಕಾಲೇಜು ರಸ್ತೆಯಲ್ಲಿ ಉರುಳಿ ಮಲಗಿದ್ದ ಶತಾಯುಶಿ ಮರಗಳ ಚಿತ್ರ ಕಣ್ಮುಂದೆ ಕಟ್ಟುತ್ತಲೇ ಇತ್ತು.
ಖ್ಯಾತ ಕಥೆಗಾರ್ತಿ ಮತ್ತು ಅಂಕಣಗಾರ್ತಿ. ಹುಟ್ಟಿದ್ದು ಮತ್ತು ಈಗ ಇರುವುದು ಬೆಂಗಳೂರು.
‘ಅಗಸ್ತ್ಯ , ಕಡಲ ಹಾದಿ, ಸಿಲೋನ್ ಸುಶೀಲ ಕಥಾ ಸಂಕಲನಗಳು. ‘ನೂರು ಸ್ವರ’ ಕಾದಂಬರಿ. ‘ಮುಂಬೈ ಡೈರಿ’ ಅಂಕಣ ಬರಹಗಳ ಸಂಕಲನ. ‘ರಾಕೀ ಪರ್ವತಗಳ ನಡುವೆ ಕ್ಯಾಬರೆ’ ಪ್ರವಾಸ ಕಥನ.
‘ಬಿಸಿಲು ಕೋಲು’, ಖ್ಯಾತ ಸಿನೆಮಾ ಛಾಯಾಗ್ರಾಹಕ ವಿ. ಕೆ ಮೂರ್ತಿಯವರ ಜೀವನ ಚರಿತ್ರೆ.