ಆತ ಪ್ರೀತಿಸಿದ ಹುಡುಗಿಯನ್ನು ಮನೆಯವರು ನಾನಾ ಕಾರಣಗಳಿಂದ ನಿರಾಕರಿಸಿದರೆಂದು ಕೋಪಗೊಂಡು ಮನೆ ಬಿಟ್ಟು ಹೋಗುತ್ತಾನೆ. ಅಧ್ಯಾತ್ಮ ವಲಯದತ್ತ ಆಕರ್ಷಿಸಲ್ಪಟ್ಟು ವಿವಿಧ ಧರ್ಮ, ಮತಗಳ ಮೊರೆ ಹೋಗುತ್ತಾನೆ. ಆದರೆ ಎಲ್ಲಾ ಮತಗಳ ಹಿಂಬಾಲಕರು ದೇವರೇ ಭಯಗೊಳ್ಳುವಷ್ಟು ಪ್ರಚಂಡರಾದ್ದರಿಂದ ಅವೆಲ್ಲವನ್ನೂ ತ್ಯಜಿಸಿ, ಬಿಳಿ ವಸ್ತ್ರಧಾರಣೆಯ ಮಾಡಿ ಸನ್ಯಾಸಿಯಾಗುತ್ತಾನೆ. ತನ್ನ ಬಳಿಗೆ ಬಂದ ಜನರೆಲ್ಲರಿಗೆ ‘ಅಭ್ಯಾಸೇಪ್ಯಾ ಸಮಾರ್ತೋಸಿ ಸತ್ಕರ್ಮ ಪರಮೋಭವ’ ಎಂದು ಕೆಲಸದ ಮಹತ್ವದ ಬಗ್ಗೆ ಹೇಳುತ್ತಾ ಅವರಿಗೆ ಹತ್ತಿರವಾಗುತ್ತಾನೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ರೋಹಿತ್ ಪದಕಿ ನಿರ್ದೇಶನದ ‘ದಯವಿಟ್ಟು ಗಮನಿಸಿʼ ಸಿನಿಮಾದ ವಿಶ್ಲೇಷಣೆ
ಸಂಚಾರಿ ಸಂಚಾರಿ
ನಿನ್ನ ದಾರಿ ಎಲ್ಲಿಂದ ಶುರು
ಎಲ್ಲಿ ಕೊನೆ ಸಂಚಾರಿ….
ನಿನ್ನ ಬಳಿ ಬರಲು ಕಾದಿರುವೆ
ಉತ್ತರ ಕೊಡು ನೀನು….
-ರೋಹಿತ್ ಪದಕಿ
ಬದುಕೊಂದು ಹುಡುಕಾಟ. ಎಲ್ಲರ ಬದುಕಿನಲ್ಲಿ ಕಳ್ಳತನವೊಂದು ನಡೆದಿರುತ್ತದೆ. ಪ್ರೀತಿ, ನೆಮ್ಮದಿ, ಸ್ವಾತಂತ್ರ್ಯ ಹೀಗೆ ಹಲವು ಸಂಗತಿಗಳನ್ನು ಕಳೆದುಕೊಂಡಿರುತ್ತಾರೆ. ಹುಡುಕಾಟ ನಿರಂತರವಾಗಿ ಜಾರಿಯಲ್ಲಿರುತ್ತದೆ. ಕೊನೆಯಿಲ್ಲದ ತಲಾಶೆಯದು. ಅನುದಿನವೂ ಬೆಳಕು ಕತ್ತಲನ್ನು ಹುಡುಕುವಂತೆ, ಪ್ರಿಯತಮನ ಕಣ್ಣು ತನ್ನ ಹೃದಯವ ಹುಡುಕುವಂತೆ, ತಂಗಾಳಿಯು ಚಾಮರದಂತೆ ಕೈ ಬೀಸುವ ಮರಗಳ ಹುಡುಕುವಂತೆ, ಬದುಕೆಂಬ ಪಯಣ ಸಾಗುತ್ತದೆ ಅನಂತ ಮೈಲುಗಲ್ಲುಗಳ ಪರ್ಯಂತರ ಒಳಗವಿತಿರುವ ಆತ್ಮದ ಮಾತು ಕೇಳಿಸಿಕೊಳ್ಳಲು. ಹೀಗೆ ಬದುಕೆಂಬ ವಿಶಾಲ ನದಿಯೊಂದು ಕಡಲ ಹುಡುಕುವ ಕಥಾನಕವೇ ರೋಹಿತ್ ಪದಕಿಯವರ ‘ದಯವಿಟ್ಟು ಗಮನಿಸಿ’.
ಇದು ಅಂಥಾಲಜಿ ವಿಭಾಗಕ್ಕೆ ಸೇರುವ ಕಥಾನಕ. ಅಂಥಾಲಜಿ ಎಂದರೆ ಒಂದು ಚಿತ್ರದೊಳಗೆ ಹಲವು ಕಥಾನಕಗಳಿರುತ್ತದೆ. ಒಂದಕ್ಕೊಂದು ಸಂಬಂಧಿಸಿದ್ದಿರಬಹುದು ಅಥವಾ ವಿಭಿನ್ನ ಕಥೆಗಳ ಸಂಗಮವಾಗಿರಬಹುದು. 70 ರ ದಶಕದಲ್ಲಿ ಪುಟ್ಟಣ್ಣ ಕಣಗಾಲ್ ‘ಕಥಾ ಸಂಗಮ’ ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಮೊದಲ ಪ್ರಯತ್ನವನ್ನು ಮಾಡಿದ್ದರು. ಅದೇ ತೆರನಾದ ಸಾಹಸವನ್ನು ರಿಷಭ್ ಶೆಟ್ಟಿ ಯವರು ಮತ್ತದೇ ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಚಿತ್ರವಾಗಿಸಿದರು. ಅಂತಹುದೇ ಶೈಲಿಯ ಆದರೆ, ಸಂಧಿಸುವ ಬಿಂದುವೊಂದಿರುವ ಕಥನವೇ ‘ದಯವಿಟ್ಟು ಗಮನಿಸಿ’.
*****
ಅಧ್ಯಾಯ 1: ‘ಆವರ್ತ’
ಜಯಂತ ಕಾಯ್ಕಿಣಿಯವರ ‘ಕನ್ನಡಿ ಇಲ್ಲದ ಊರಿನಲ್ಲಿ’ ಸಣ್ಣ ಕಥೆಯಿಂದ ಈ ಭಾಗವನ್ನು ಆಯ್ದುಕೊಳ್ಳಲಾಗಿದೆ. ಸತ್ಯನಾರಾಯಣ ಆತನ ಹೆಸರು. ವಯಸ್ಸು ಅಪರಾಹ್ನ ಸಮೀಪಿಸುತ್ತಿದ್ದರೂ, ಮದುವೆಯ ಕರೆಯೋಲೆ ನೀಡಲು ಸಾಧ್ಯವಾಗಿರಲಿಲ್ಲ. ತನ್ನೊಂದಿಗಿದ್ದವರು ಮದುವೆಯಾಗಿ ಉಪದೇಶಗಳ ಹಾರವನ್ನೇ ನೀಡುತ್ತಿದ್ದರೂ ಸತ್ಯನಾರಾಯಣ ಸದಾ ಗೊಂದಲದಲ್ಲೇ ಇರುತ್ತಿದ್ದ. ಅದೊಂದು ದಿನ ಅನಿರೀಕ್ಷಿತವೆಂಬoತೆ ವಯೋವೃದ್ಧರೊಬ್ಬರು ಬಂದು ತನ್ನ ಮಗಳನ್ನು ಮದುವೆಯಾಗುವಂತೆ ಬೇಡಿಕೆಯಿಟ್ಟರು. ಈ ಹಠಾತ್ ಬೇಡಿಕೆಯಿಂದ ಆತ ಗಲಿಬಿಲಿಗೊಂಡರೂ ಕೊನೆಗೂ ಮದುವೆಯಾಗುವ ಯೋಗ ಒದಗಿತಲ್ಲಾ ಎಂದು ಮನಸ್ಸು ಅರಳಿತು. ಕಾಣುವ ಕನಸಲೂ ಭಾವಿ ಪತ್ನಿಯ ಪ್ರವೇಶವಾಯಿತು. ಆದರೆ ಇನ್ನೇನು ಮದುವೆಯಾಗಲು ಕೆಲವೇ ಹೆಜ್ಜೆಗಳು ಬಾಕಿ ಎನ್ನುವಷ್ಟರಲ್ಲಿ ಹುಡುಗಿ ಮನೆಬಿಟ್ಟು ಓಡಿ ಹೋಗುತ್ತಾಳೆ. ನವಿಲುಗರಿ ಮರಿ ಹಾಕುವುದೆಂದು ಕಾಯುತ್ತಿದ್ದ ಸತ್ಯನಾರಾಯಣನ ಕಾಯುವಿಕೆ ಮತ್ತಷ್ಟು ಮುಂದುವರೆಯುತ್ತದೆ. ಅಂತ್ಯ ಮರೀಚಿಕೆ ಎನ್ನುವಷ್ಟು.
ಅಧ್ಯಾಯ 2: ಅಸ್ತಿತ್ವ
ಆತನೊಬ್ಬ ವೃತ್ತಿಪರ ಕಳ್ಳ. ಅಷ್ಟೇ ಅಲ್ಲ, ಯಾರಾದರೂ ದೊಡ್ಡ ಖದೀಮರು ಮಾಡಿದ ತಪ್ಪು ಕೆಲಸದ ಬದಲಿಗೆ ಪ್ರಾಕ್ಸಿಯಾಗಿ ಆತ ಜೈಲು ಸೇರುತ್ತಿದ್ದ. ಅವಳು ಶಿಕ್ಷಕಿ. ಅವಳ ಮೇಲೆ ಇವನಿಗೆ ಒಲವು. ಅವಳಿಗಾಗಿ ಹಾಡುತ್ತಾನೆ. ನರ್ತಿಸುತ್ತಾನೆ. ನೆರಳಿನಂತೆ ಅವಳ ನಗುವ ಹಿಂಬಾಲಿಸುತ್ತಾನೆ. ‘ಮರೆತೇ ಹೋದೆನು ಹೊರಟ ಕಾರಣ ನಿನ್ನಯ ಮಿಂಚಿನ ದಾಳಿಯಲಿ, ಕ್ಷಮಿಸು ನನ್ನನು ತಪ್ಪು ನಿನ್ನದೇ, ಬಿದ್ದರೆ ನಿನ್ನದೆ ತೋಳಿನಲಿ’ ಎನ್ನುತ್ತಾ ಒಲವಿನ ಮಳೆಯಂತೆ ಮರಳಿ ಮರಳಿ ಜಾರಿ ಬೀಳುತ್ತಾನೆ. ಇನ್ನೇನು ತನ್ನ ಪ್ರೀತಿಯನ್ನು ಅವಳಿಗೆ ಹೇಳಬೇಕು ಎನ್ನುವಷ್ಟರಲ್ಲಿ ಪೊಲೀಸರು ಪ್ರಾಕ್ಸಿಗೆಂದು ಕರೆದುಕೊಂಡು ಹೋಗುತ್ತಾರೆ. ಕೈಯಲ್ಲಿ ಹಿಡಿದ ಗುಲಾಬಿ ಅನಾಥವಾಗುತ್ತದೆ. ಸೆಲ್ಲಿನ ವಾಸ ಮುಗಿಸಿ ಮರಳುವಾಗ ಅವಳ ಮದುವೆಯ ಕಾಗದ ಗೆಳೆಯನ ಕೈಯಲ್ಲಿರುತ್ತದೆ. ಹೃದಯ ಪ್ರಜ್ಞೆ ತಪ್ಪುತ್ತದೆ. ಬದುಕು ತನ್ನ ಅಸ್ತಿತ್ವವ, ಶಾಲೆಯ ಲಾಂಗ್ ಬೆಲ್ಲಿನಂತೆ ಮತ್ತೆ ಮತ್ತೆ ಪ್ರಶ್ನಿಸುತ್ತದೆ.
ಅಧ್ಯಾಯ 3: ಭ್ರಮೆ
ಆತ ಪ್ರೀತಿಸಿದ ಹುಡುಗಿಯನ್ನು ಮನೆಯವರು ನಾನಾ ಕಾರಣಗಳಿಂದ ನಿರಾಕರಿಸಿದರೆಂದು ಕೋಪಗೊಂಡು ಮನೆ ಬಿಟ್ಟು ಹೋಗುತ್ತಾನೆ. ಅಧ್ಯಾತ್ಮ ವಲಯದತ್ತ ಆಕರ್ಷಿಸಲ್ಪಟ್ಟು ವಿವಿಧ ಧರ್ಮ, ಮತಗಳ ಮೊರೆ ಹೋಗುತ್ತಾನೆ. ಆದರೆ ಎಲ್ಲಾ ಮತಗಳ ಹಿಂಬಾಲಕರು ದೇವರೇ ಭಯಗೊಳ್ಳುವಷ್ಟು ಪ್ರಚಂಡರಾದ್ದರಿಂದ ಅವೆಲ್ಲವನ್ನೂ ತ್ಯಜಿಸಿ, ಬಿಳಿ ವಸ್ತ್ರಧಾರಣೆಯ ಮಾಡಿ ಸನ್ಯಾಸಿಯಾಗುತ್ತಾನೆ. ತನ್ನ ಬಳಿಗೆ ಬಂದ ಜನರೆಲ್ಲರಿಗೆ ‘ಅಭ್ಯಾಸೇಪ್ಯಾ ಸಮಾರ್ತೋಸಿ ಸತ್ಕರ್ಮ ಪರಮೋಭವ’ ಎಂದು ಕೆಲಸದ ಮಹತ್ವದ ಬಗ್ಗೆ ಹೇಳುತ್ತಾ ಅವರಿಗೆ ಹತ್ತಿರವಾಗುತ್ತಾನೆ. ತನ್ನ ನಿಲಯದ ಮುಂದೆ ವೇಶ್ಯೆಯೊಬ್ಬಳಿರುತ್ತಾಳೆ. ಅವಳ ಮೇಲೆ ಸನ್ಯಾಸಿಗೆ ಉತ್ಕಟವಾದ ಕೋಪವಿರುತ್ತದೆ, ಸಮಾಜದ ಸ್ವಾಸ್ತ್ಯ ಹಾಳು ಮಾಡುತ್ತಿದ್ದಾಳೆಂದು. ಆದರೆ ಸನ್ಯಾಸಿಗೆ ಅರಿವೇ ಇರದಂತೆ ಅವಳ ಮೋಹದೊಳಗೆ ಸಿಲುಕಿರುತ್ತಾನೆ. ಕಣ್ರೆಪ್ಪೆ ಮುಚ್ಚಿದರೂ ಅವಳ ಚಿತ್ರಪಟವೇ ಸ್ಮೃತಿ ಪಟಲದಲ್ಲಿ ಅರಳುತ್ತಿರುತ್ತದೆ. ಎಲ್ಲಗಳ ಎಲ್ಲೆ ಮೀರಿ ಬಂದಿರುವೆನೆಂಬ ಭ್ರಮೆ ಸಲಿಲದ ಗುಳ್ಳೆಯಂತೆ ಒಡೆದು ಹೋಗುತ್ತದೆ. ಆತ ಮತ್ತೆ ಸಂಚಾರಿಯಾಗುತ್ತಾನೆ, ಪರಮಾತ್ಮನ ಹುಡುಕುತ್ತಾ.
ಅಧ್ಯಾಯ 4: ಡಿಕ್ರಿ
ಆತ ಸಾಫ್ಟ್ ವೇರ್ ಇಂಜಿನಿಯರ್. ಅವರದ್ದು ಪ್ರೇಮ ವಿವಾಹ. ಪ್ರೀತಿಸುತ್ತಿದ್ದಾಗಿನ ಒಲವು, ಬಾಂಧವ್ಯ, ನಗು ಮದುವೆಯ ನಂತರ ನಾಪತ್ತೆಯಾಗಿದೆ. ಕಾರಣವಿದೆ. ಆತನಿಗೆ ಕೆಲಸವೇ ಪ್ರಧಾನ ಆದ್ಯತೆ. ಅದರಲ್ಲೂ ಕತ್ತಲು ಪೂರ್ಣ ಬಹುಮತ ಸಾಧಿಸುವಲ್ಲಿಯವರೆಗಿನ ಕೆಲಸ. ಒಟ್ಟಿಗೆ ಕುಳಿತು ಊಟ ಮಾಡಲು ಆಗದ ಪರಿಸ್ಥಿತಿ. ಕೊನೆ ಕೊನೆಗೆ ಪತ್ನಿ ಬೇಸತ್ತು ಅವನಿಗೆ ಮನೆಯ ಬಾಗಿಲು ತೆರೆಯದೆ ಆತ ವರಾಂಡದಲ್ಲಿಯೇ ಮಲಗುತ್ತಾನೆ. ಆತನಿಗೆ ಈ ಶ್ವಾನದ ತೆರನಾದ ಬದುಕು ಸಾಕೆನಿಸಿ, ತನ್ನ ರಾಜೀನಾಮೆ ಪತ್ರವ ಎಸೆದು ನಿಲ್ದಾಣದಲ್ಲಿ ಹೊರಡಲು ಅನುವಾಗಿದ್ದ ರೈಲೊಂದರಲ್ಲಿ ಯಾವುದೋ ಸ್ಟೇಷನ್‌ಗೆ ಟಿಕೆಟ್ ಖರೀದಿಸಿ ದಿಕ್ಕು ದೆಸೆಯ ಹಂಗಿಲ್ಲದೆ ಬಂದು ಕುಳಿತುಕೊಳ್ಳುತ್ತಾನೆ. ಭ್ರಮೆಯ ಬಲೆಯೊಳಗೆ ಸಿಲುಕಿದ್ದ ಸನ್ಯಾಸಿ, ಅಸ್ತಿತ್ವವೆಂಬ ಬೆಳಕಿನ ದರ್ಶನವ ಹುಡುಕುವ ಕಳ್ಳ, ಹೊಸ ಪುಟಕ್ಕೆ ಪಾದಾರ್ಪಣೆ ಮಾಡಲು ಹೊರಟ ವೇಶ್ಯೆ, ಖಾಲಿಯಾದ ಕನಸಿನ ಭಾರ ಹೊತ್ತ ಸತ್ಯನಾರಾಯಣ ಎಲ್ಲರೂ ಪಯಣದ ನೆಪದಲ್ಲಿ ಸಂಧಿಸುತ್ತಾರೆ. ವಯಸ್ಸು ಮತ್ತು ಸಂಗಾತಿ, ಕಳೆದುಹೋದ ಪ್ರೀತಿ, ವಾಸ್ತವದ ಹುಡುಕಾಟ, ಮರುಹುಟ್ಟಿನ ತುರ್ತು ಈ ಎಲ್ಲಾ ಭಾವನೆಗಳ ರಂಗು ಚೆಲ್ಲಿದ ಗಾಳಿಪಟವೇ ‘ದಯವಿಟ್ಟು ಗಮನಿಸಿ ‘.
*****
ಮನುಷ್ಯನ ಬದುಕು ಒಂಥರಾ ಅವನ ಮಾತಿನಂತೆಯೇ. ಮಳೆಗಾಲದಲ್ಲಿ ‘ಅಬ್ಬಾ ಮಳೆ’, ಬೇಸಿಗೆಯಲ್ಲಿ ‘ಎಂಥಾ ಬಿಸಿಲು’, ಚಳಿಗಾಲದಲ್ಲಿ ‘ತಾಳಲಾರೆ ಈ ಚಳಿಯ’ ಹೀಗೆ ಒಂದೂ ಸಮಾಧಾನದ ಸನ್ನಿವೇಶ ಎದುರಾಗುವುದೇ ಇಲ್ಲ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಬದುಕು ಸದಾ ತುಡಿಯುತ್ತಲೇ ಇರುತ್ತದೆ. ಊಟದ ರುಚಿಯ ಮೇಲೆ ಅಸಮಾಧಾನ ವ್ಯಕ್ತಪಡಿಸುವವರಿಗೆ ಒಪ್ಪತ್ತಿನ ಅನ್ನಕ್ಕಾಗಿ ಬೆವರಲೇ ಮಿಂದೇಳುವವರು ಕಾಣದಿರುವಂತೆ, ನಮ್ಮ ಬದುಕು ಬದುಕದೆ, ಏಳು ಸಾಗರದ ಆಚೆ ಎಲ್ಲೋ ಅಡಗಿರುವ ರಹಸ್ಯವೆಂಬಂತೆ ಕಾಣುವ ಆಸೆಗಳ ಪೂರೈಸುವ ಮಾಯಕದ ಹುಡುಕಾಟದಲ್ಲೇ ತೊಡಗಿರುತ್ತೇವೆ. ಬೊಗಸೆಯಲ್ಲಿ ಹಿಡಿದ ಮಳೆ ಬಾಯಾರಿಕೆಯ ಇಂಗಿಸಬಹುದು, ಸಾಗರದ ಸಲಿಲವಲ್ಲ ಎಂಬ ಸತ್ಯವೇ ಹುಡುಕಾಟದ ಸಾರ. ಇಲ್ಲಿ ಅದೆಷ್ಟೋ ವಸ್ತುಗಳು ಬಿಟ್ಟು ಹೋಗಿದ್ದರೂ, ಹೊಸ ದಾರಿಯ ಹಿಡಿಯಬೇಕು, ಇಲ್ಲಿಯೇ ಮರಳಿ ಹುಡುಕಬೇಕು ಏಕೆಂದರೆ ಜೀವನ ವೃತ್ತದಂತೆಯೇ. ಸಂಧಿಸಲೇಬೇಕು ಮರಳಿ ಪ್ರಾರಂಭದ ಬಿಂದುವನ್ನು ಎಂದು ತೋರಿಸುವ ಕಥಾನಕವೇ ‘ದಯವಿಟ್ಟು ಗಮನಿಸಿ’. ಆಗಮನ /ನಿರ್ಗಮನದ ಮಧ್ಯಂತರದಲ್ಲಿ ಕೇಳುವ ‘ದಯವಿಟ್ಟು ಗಮನಿಸಿ’ ಬದುಕಿನ ಪಯಣಕ್ಕೊಂದು ಕಹಳೆಯಂತೆ, ರೂಪಕದಂತೆ ಇಲ್ಲಿ ಕಾಣಿಸಿಕೊಂಡಿದೆ ಶಿರೋ ನಾಮೆಯಾಗಿ.
ಚಿತ್ರದ ಸೂತ್ರಧಾರನಾಗಿ ರೋಹಿತ್ ಪದಕಿಯದ್ದು ಮೆಚ್ಚುವಂತಹ ಪ್ರಯತ್ನ. ಒಂದೊಂದು ಪಾತ್ರದ ಕಥೆಯೂ ವಿಭಿನ್ನವಾದರೂ, ಅಂತಿಮ ನಿಲ್ದಾಣ ಹುಡುಕಾಟವೇ ಆಗಿರುವುದು ಕಥನದ ಮುಖ್ಯಾಂಶ. ವಿಶೇಷತಃ ಇಲ್ಲಿನ ಸಂಭಾಷಣೆಗಳು, ಕಡು ವಾಸ್ತವವ ಸಾರುವ ನಗ್ನ ಸತ್ಯಗಳು. ಸತ್ಯನಾರಾಯಣ ಮದುವೆ ಯಾಕೆಂದು ಕೇಳಿದಾಗ ‘ಕಾಮ ಕ್ಷಣಿಕ. ಕರ್ಮ ಶಾಶ್ವತ. ನೋವು, ನಲಿವು, ಪ್ರೀತಿ, ದುಃಖಗಳ ಹಂಚಿಕೊಳ್ಳಲು ನಮ್ಮೆದೆನಿಸುವ ಜೀವವೊಂದಿರಬೇಕು’ ಎಂದು ಆತನ ಗೆಳೆಯ ಹೇಳುವ ಮಾತುಗಳು, ಮತ ಧರ್ಮಗಳ ಕಲಹದ ಬಗ್ಗೆ ಬರುವ ‘When God is silent, his followers will be violent’ ಎಂಬ ಮಾತು, ಹೀಗೆ ಹಲವು ಸಾಲುಗಳು ಮಿಂಚಿನ ಆಗಮನದಂತೆ ಹೊಳೆಯುವಂಥದ್ದು. ಚಿತ್ರದ ಮತ್ತೊಂದು ಹೆಚ್ಚುಗಾರಿಕೆ ಸಂಗೀತ ಮತ್ತು ಛಾಯಾಗ್ರಾಹಣ. ಅರವಿಂದ ಕಶ್ಯಪರ ಕ್ಯಾಮರಾ ದೃಶ್ಯಗಳ ಬಾಚಿದ್ದು, ವಾಸ್ತವಕ್ಕೆ ಕನ್ನಡಿ ಹಿಡಿದಂತೆ. ವಿಶೇಷತಃ ಅವಿವಾಹಿತನೊಬ್ಬನ ಮನೆಯಲ್ಲಿ ಆಲಸ್ಯವೇ ತುಂಬಿ ಬಿದ್ದಿರುವ ವಸ್ತುಗಳು, ಹರಿದ ಬಟ್ಟೆಯ ಗೋಡೆಯ ಮೇಲೆ ಕ್ರಿಕೆಟ್ ಪೋಸ್ಟರ್‌ಗಳು, ಹಳೆಯ ಮರದ ಫ್ರೇಮಿನ ಕನ್ನಡಿ, ಶೇವಿಂಗ್ ಕಿಟ್ಟು, ಉತ್ತರ ಭಾರತದ ರೈಲು ಹಳಿಗಳು, ಪಟ್ಟಣಗಳು ಹೀಗೆ ಎಲ್ಲವೂ ಶಾಲಾ ವಾರ್ಷಿಕೋತ್ಸವಕ್ಕೆ ಬಣ್ಣದ ಬಟ್ಟೆಯ ಹಾಕಿ ತಯಾರಾಗಿರುವ ಮಕ್ಕಳಂತೆ ತೆರೆಯ ಮೇಲೆ ಮೂಡಿವೆ. ಹಿಂದೂಸ್ತಾನಿ, ಶಾಸ್ತ್ರೀಯ ಸ್ಪರ್ಶವಿರುವ ಹಿನ್ನೆಲೆ ಸಂಗೀತ, ದಾಸರ ಕೀರ್ತನೆ, ‘ಮರೆತೇ ಹೋದೆನು ಹೊರಟ ಕಾರಣ’, ‘ಸಂಚಾರಿ ಸಂಚಾರಿ’ ಹಾಡು ಹೀಗೆ ಎಲ್ಲವನ್ನೂ ಪರಿಗಣಿಸಿ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಗಳಿಸಿದ್ದು ಪೂರ್ಣಾಂಕ. ರಾಜೇಶ್ ನಟರಂಗ, ರಘು ಮುಖರ್ಜಿ, ವಸಿಷ್ಟ ಸಿಂಹ, ಅವಿನಾಶ್, ಪ್ರಕಾಶ್ ಬೆಳವಾಡಿ, ಸಂಗೀತಾ ಭಟ್, ಭಾವನಾ ರಾವ್, ಸಂಯುಕ್ತ ಹೊರನಾಡು ಹೀಗೆ ಎಲ್ಲಾ ಕಲಾವಿದರ ಅಭಿನಯವೂ ನೈಜ ಸರಳ ಸುಂದರ. ಒಟ್ಟಾರೆಯಾಗಿ, ಸಾಹಿತ್ಯದಲ್ಲಿ ಮಾತ್ರ ಕಾಣುವ ಸಣ್ಣಕಥೆಗಳು, ಅಧ್ಯಾಯಗಳ ಮೂಲಕ ಕಥೆ ಹೇಳುವಿಕೆಯ ಚಿತ್ರ ರೂಪವೇ ‘ದಯವಿಟ್ಟು ಗಮನಿಸಿ’. ಬದುಕು ಮತ್ತು ಹುಡುಕಾಟವೆಂಬ ಪ್ರಯಾಣಿಕರನ್ನು ಹೊತ್ತ ಬಸ್ಸಿನ ಹೆಜ್ಜೆ ಗುರುತಿನ ಕಥಾನಕವಿದು ಎಂದರೆ ಸಮರ್ಪಕವಾದೀತು.
ಮುಗಿಸುವ ಮುನ್ನ:
ಭೂಮಿಗೆ ಬಿದ್ದ ಪ್ರತಿ ಕಣ್ಣುಗಳು ಹುಡುಕಾಟದಲ್ಲೇ ಇರುತ್ತವೆ. ಅಮ್ಮನನ್ನು ಹುಡುಕುವ ಸಣ್ಣ ಮಗುವಿನಿಂದ ತೊಡಗಿ, ಕೊನೆಯ ಉಸಿರು ಜಾರುವಾಗ ಹತ್ತಿರದ ಜೀವಗಳಿಗೆ ಹುಡುಕುವಲ್ಲಿಯವರೆಗೆ, ಈ ಹುಡುಕಾಟ ಎಂಬುವುದು ಜೀವನದ ಸಹಪಯಣಿಗನಾಗಿದೆ. ಈ ಪ್ರಕ್ರಿಯೆಯಲ್ಲಿ, ತನ್ನೊಳಗೆ ಅಡಗಿರುವ ಆತ್ಮವ ಕಂಡುಹಿಡಿದರೆ ಸಾಕು, ಶ್ರಾವಣದ ಮಳೆಯಂತೆ ಬದುಕು ಸುಂದರ……….
ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು….