ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಒಂದು ರೀತಿಯ ಶಿಸ್ತು, ಒಪ್ಪ ಓರಣ ಎದ್ದು ಕಂಡರೆ ಯಶವಂತಪುರದ ಮಾರುಕಟ್ಟೆ ಒಂದು ರೀತಿ ಅವ್ಯವಸ್ಥೆ ಮತ್ತು ಕೊಳಕು. ಅಲ್ಲಿನ ಶಿಸ್ತು ಒಪ್ಪ ಓರಣ ಇಲ್ಲಿ ಮಿಸ್ಸಿಂಗ್. ಆದರೂ ಎರಡೂ ಮಾರುಕಟ್ಟೆ ನೋಡಿರುವ ನನ್ನಂತಹವರಿಗೆ ಮಲ್ಲೇಶ್ವರದ ಮಾರುಕಟ್ಟೆ ಅಷ್ಟಾಗಿ ಹಿಡಿಸದು. ಕಾರಣ ಎರಡೂ ಮಾರುಕಟ್ಟೆ ನೋಡಿರುವುದು ಮತ್ತು ಬೆಲೆ ಇಲ್ಲಿ ಮುಖ್ಯ ಪಾತ್ರ. ಇದೇ ರೀತಿಯ ಪರಿಸ್ಥಿತಿ ನಾನು ನೋಡಿರುವುದು ಎಂದರೆ ಗಾಂಧಿ ಬಝಾರ್ ಮಾರುಕಟ್ಟೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೆರಡನೆಯ ಕಂತು ನಿಮ್ಮ ಓದಿಗೆ

ಮಲ್ಲೇಶ್ವರದ ಕತೆ ಹೇಳುತ್ತಿದ್ದೆ. ಯಾರ್ಯಾರು ಬಂದ್ರು ಅಂದರೆ… ಲಾ ಕಾಲೇಜು ಆಯ್ತಾ, ನಡುವೆ gas ಕಾಲೇಜು ಬಂತಾ, ಉಮರ್ಜಿ ಸಾರ್ ಬಂದರೆ, ಕಾಲೇಜಿನ ಪ್ರಿನ್ಸಿಪಾಲ್ ಆಗಿದ್ದ ಮುನಿಗವಿಯಪ್ಪ ಅವರ ಕೊಲೆ ಆದದ್ದು ಬಂತು.

ಮೈಸೂರು ಲ್ಯಾಂಪ್ಸ್ ಬೆಳೆದ ಮತ್ತು ಕಣ್ಣು ಮುಚ್ಚಿದ ದಾರುಣ ಕತೆ ಹೇಳಿದೆ. ಶಿಲ್ಪ ಕಲಾವಿದ ಶ್ರೀ ವೆಂಕಟಪ್ಪ ಬಂದ ನಂತರ ಅವರ ಶಿಷ್ಯ ಗಣ ಬಂದಾಯಿತು. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಬಗ್ಗೆ ಹೇಳಿದೆ. ಅವರು ದಿಡೀರ್ ನಿರ್ಧಾರಕ್ಕೆ ಹೆಸರುವಾಸಿ. ಅವರ ಕಾಲದಲ್ಲೇ ಬೆಂಗಳೂರು ಬಸ್ ಸ್ಟ್ಯಾಂಡ್ ನಿರ್ಮಾಣ ಆಗಿದ್ದು, ಹಲವು ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಮಂಜೂರಾತಿ ಪಡೆದದ್ದು ಹಾಗೂ ಮೈಸೂರು ಕಲಾ ಭವನ್ ಹಾಗೂ ಬೆಂಗಳೂರಿನ ಚೌಡಯ್ಯ ಹಾಲ್ ಹೆಸರು ಮಾಡಿದ್ದು.. ಹೀಗೆ ಒಂದು ವರ್ಣರಂಜಿತ ಬದುಕು ಅವರದ್ದು. ಅನಂತ್ ನಾಗ್ ಬಂದರು; ಇವರು ನಟಿಸಿದ ಯಾವುದೇ ಚಿತ್ರ ತಗೊಳ್ಳಿ ಅದು ನಟನೆ ಅನಿಸದು… ಪಾತ್ರದೊಳಗೆ ಹೊಕ್ಕುತ್ತಾರೆ. ಹಂಸಗೀತೆ ಚಿರಕಾಲ ನೆನಪಿನಲ್ಲಿ ಉಳಿಯುವ ಚಿತ್ರ. ಸರೋಜಾದೇವಿ ಬಂದರು(ಇವರಂತೂ ಹಲವು ಭಾಷೆಗಳ ತಾರೆ. ಕಿತ್ತೂರು ಚೆನ್ನಮ್ಮ ಚಿತ್ರದ ಅವರ ಪಾತ್ರ ಮತ್ತು “ತನು ಕರಗದವರಲ್ಲಿ ಮನ ಕರಗದಯ್ಯಾ” ಹಾಡು ಇನ್ನೂ ಸಾವಿರ ವರ್ಷ ಇರುವ ನಟನೆ), ಜಿ ಪೀ ರಾಜರತ್ನಂ ಬಂದರು (ಹೇಳಕೊಳ್ಳಾಕ್ಕೆ ಒಂದೂರು.. ಪ್ರತಿದಿನ ಕಿವಿಯಲ್ಲಿ ಗುಂಯ್ ಗುಡುವ ಹಾಡು), ಸರ್ ಸಿ ವಿ ರಾಮನ್ ಆಯ್ತು, ಅವರಿಗೆ ಪಟ್ಟೆ ನಾಮ ಹಾಕಿದ ಗೋಪಾಲರಾವ್ ಕತೆ ಹೇಳಿದೆ. ಜನತಾ ಬಜಾರ್ ಬಂತು, ಅಲ್ಲಿನ ಆಗಿನ ಯುವ ನೇತಾರ ಸೋಮಣ್ಣ ಬಂದರಾ……

ಅನಂತ್ ನಾಗ್ ಮನೆ ಸಮೀಪವೇ ಶ್ರೀಮತಿ ನೀಳಾದೇವಿ ಅವರ ಮನೆ. ಆಗಿನ ಜನಪ್ರಿಯ ಕಾದಂಬರಿಗಾರ್ತಿ ಇವರು. ಸುಮಾರು ಬಡ್ಡಿಂಗ್ ಸಾಹಿತಿ ಹೆಣ್ಣುಮಕ್ಕಳು ಇವರ ಮನೆಗೆ ಸಾಹಿತ್ಯದ ಮಾರ್ಗದರ್ಶನಕ್ಕೆ ಬರುತ್ತಿದ್ದರು. ಅನಂತ್ ನಾಗ್ ಮನೆ ಸಹ ಅಲ್ಲೇ ಇದ್ದದ್ದರಿಂದ ಹುಡುಗಿಯರು ಅನಂತ್ ನಾಗ್ ನೋಡಲು ಬರ್ತಾರೆ ಎನ್ನುವ ಕೊಂಕು ಮಾತಿತ್ತು. ಇದು ಬರೇ ತಮಾಷೆ ಅಂತ ಕೆಲವರು. ಇದಕ್ಕೆ ಪುರಾವೆ ಅಂದರೆ ಈಗ ತಾಯಿ ಪಾತ್ರ ನಿರ್ವಹಿಸುವ ಹಿರಿಯ ತಾರೆ ಒಬ್ಬರು ತೀರಾ ಈಚೆಗೆ ಒಂದು ಸಂದರ್ಶನದಲ್ಲಿ ಅವರು ಚಿಕ್ಕವರಿದ್ದಾಗ ಅನಂತ್ ನಾಗ್ ಅವರ ಫ್ಯಾನ್ ಆಗಿದ್ದು, ಅವರ ಕಾಲೇಜ್ ನೋಟ್ ಬುಕ್ ಒಳಗಡೆ ಅನಂತ್ ನಾಗ್ ಫೋಟೋ ಮುಚ್ಚಿಟ್ಟುಕೊಂಡು ಆಗಾಗ ಅದನ್ನು ನೋಡಿ ಮೈ ಮರೆಯುತ್ತಾ ಇದ್ದದ್ದನ್ನು ನೆನೆಸಿಕೊಂಡರೇ!

ಹದಿನೈದನೇ ಕ್ರಾಸಿಗೆ ಬಂದರೆ ಸರ್ ಸಿವಿ ರಾಮನ್ ಅವರ ನೆನಪು ಬರಲೇಬೇಕು. ನನಗಿಂತ ಸ್ವಲ್ಪ ದೊಡ್ಡವರು ರಾಮನ್ ಅವರನ್ನು ಭೇಟಿ ಮಾಡಿದ, ಅವರ ಜತೆ ಕೆಲಸ ಮಾಡಿದ ಪುಣ್ಯವಂತರು. ನಮ್ಮ ದೊಡ್ಡ ಅಣ್ಣ ಅವರನ್ನು ತುಂಬಾ ಹತ್ತಿರದಿಂದ ನೋಡಿದ ಅವನ ಅನುಭವ ತುಂಬಾ ಸಲ ಹೇಳಿದ್ದ.

ಹದಿನಾಲ್ಕನೇ ಅಡ್ಡರಸ್ತೆ ಅಂದರೆ ಶೇಷಗಿರಿ ರಾವ್ ಅವರ ನೆನಪು ಬರಲೇ ಬೇಕು. ಜತೆಗೆ ಶ್ರೀ ಎಚ್ ವಿ ನಂಜುಂಡಯ್ಯ ಅವರು. ಶೇಷಗಿರಿ ರಾವ್ ಅವರು ಸಾಹಿತಿಗಳು. ಶ್ರೀ ಎಚ್ ವಿ ನಂಜುಂಡಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು, ಮೂರು ಬಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು. ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇಷ್ಟೇ ಆಗಿದ್ದರೆ ಇವರೂ ಸಹ ಕಾಲದ ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದರೋ ಏನೋ. ಮಲ್ಲೇಶ್ವರದ ಹೃದಯ ಭಾಗದಲ್ಲಿನ ತಮ್ಮ ಮನೆಯನ್ನು ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ದಾನ ಮಾಡಿದರು. ಇಂದು ಆ ಜಾಗದಲ್ಲಿ ಮಹಿಳಾ ಕಾಲೇಜು, ದೊಡ್ಡ ಸಭಾಂಗಣ ಮುಂತಾದ ಹೈ ಟೆಕ್ ಕಾಲೇಜಿಗೆ ಬೇಕಾದ ಎಲ್ಲವೂ ಇದೆ. ಬೆಂಗಳೂರಿನ ಹೊರವಲಯದ ವಿದ್ಯಾರಣ್ಯಪುರ ಅಂತಹ ಕಡೆಯೇ ಮೂವತ್ತು ನಲವತ್ತರ ಸೈಟು ಎರಡು ಕೋಟಿಗೆ ಮಾರಾಟ ಆಗಬೇಕಾದರೆ ಇಲ್ಲಿ ಮಲ್ಲೇಶ್ವರದಲ್ಲಿ ಈ ಕಾಲೇಜಿನ ವಿಸ್ತಾರವಾದ ಜಾಗ ಅದೆಷ್ಟು ಕೋಟಿ ಬಾಳುತ್ತೆ ಎನ್ನುವುದು ನನ್ನಂತಹವರ ಊಹೆಗೆ ನಿಲುಕದ್ದು. ಇಂತಹ ವ್ಯಕ್ತಿಯ ಒಂದು ಪ್ರತಿಮೆ ಕಾಲೇಜಿನ ಮುಂಭಾಗದಲ್ಲಿ ಇರಬೇಕಿತ್ತು ಎಂದು ನನಗೆ ಆ ರಸ್ತೆಯಲ್ಲಿ ಹಾದುಹೋಗುವಾಗಲೆಲ್ಲಾ ಅನಿಸಿದೆ, ಮನಸ್ಸು ಹುಳ್ಳ ಹುಳ್ಳಗೆ ಆಗಿದೆ (ಇದೇ ಭಾವನೆ ಕೆ ಸಿ ಜನರಲ್ ಆಸ್ಪತ್ರೆ ಎದುರು ಹಾಯುವಾಗ ಹುಟ್ಟುತ್ತದೆ). ನಮ್ಮ ಸರ್ಕಾರದ ಕೃತಜ್ಞತೆ ಎಷ್ಟಿದೆ ಎಂದರೆ ಒಂದು ರಸ್ತೆಗೆ ಇವರ ಹೆಸರು ಇಟ್ಟು ತನ್ನನ್ನೇ ಮರೆತಿದೆ. ಇದು ನಮ್ಮ ಕೃತಘ್ನ ಮನೋಭಾವ. ಹೀಗೆ ಮತ್ತಿಬ್ಬರು ನನ್ನ ನೆನಪಿಗೆ ಬರುತ್ತಾರೆ. ಕಮ್ಯುನಿಸ್ಟ್ ನಾಯಕ ಮತ್ತು ತೊಂಭತ್ತರ ದಶಕದವರೆಗೂ ಹಲವು ಕಾರ್ಖಾನೆಗಳ ಟ್ರೇಡ್ ಯೂನಿಯನ್ ನಾಯಕ ಶ್ರೀ ಎಂ ಎಸ್ ಕೃಷ್ಣನ್ ಅವರದ್ದು. ತಮ್ಮ ಪೂರ್ವಿಕರ ಒಂದು ದೊಡ್ಡ ಆಸ್ತಿಯನ್ನು ಅವರು ಸಾರ್ವಜನಿಕ ಉಪಯೋಗಕ್ಕೆ ಎಂದು ಒಂದು ದಾನಪತ್ರ ಮಾಡಿದರು, ಅಲ್ಲಿ ಒಂದು ಕಲ್ಯಾಣ ಮಂಟಪ ನಿರ್ಮಾಣವಾಯಿತು. ಮತ್ತೊಬ್ಬರು bel ಕಾರ್ಖಾನೆಯ ಕಾರ್ಮಿಕ ಪರಮೇಶ್ವರ ಅವರು. ಮೂಲ ಕೇರಳದ ಅವರೂ ಸಹ ಕೃಷ್ಣನ್ ಅವರಂತೆ ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದ್ದರು. ಅವರ ಸ್ವಂತ ಮನೆಯನ್ನು ಪಾರ್ಟಿಗೆ ದಾನ ಮಾಡಿದರು. ಇಂತಹ ಮೇರು ವ್ಯಕ್ತಿತ್ವ ಹೊಂದಿರುವವರನ್ನು ನೋಡಿದಾಗ ಕೇಳಿದಾಗ ನನಗೆ ನಾವುಗಳು ಎಷ್ಟು ಕುಬ್ಜರು, ಎಂತಹ ಲಿಲ್ಲಿಪುಟ್‌ಗಳು ಅನಿಸುತ್ತೆ. ಮಾರನೇ ನಿಮಿಷ ಜೇಬಲ್ಲಿನ ದುಡ್ಡು ನೆನೆದು ಎದುರಿನ ಭಿಕ್ಷುಕನನ್ನು ನಿರ್ಲಕ್ಷಿಸಿ ಹೋಟೆಲ್ ನುಗ್ಗುತ್ತೇನೆ!

ಹದಿಮೂರನೇ ಅಡ್ಡರಸ್ತೆ ಅಂದರೆ MLA ಕಾಲೇಜು. ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಶನ್ ಕಾಲೇಜು ಮತ್ತು ಕಲಾವಿದೆ ವಸುಂಧರಾ ದಾಸ್ ಅವರ ವಾಸಸ್ಥಳ. ನಟಿ, ಗಾಯಕಿ, ಬರಹಗಾರ್ತಿ ಆಗಿ ಇವರು ಬಹು ಪ್ರತಿಭೆಯ ಗಣಿ. ನಾಲ್ಕೈದು ಭಾಷೆಗಳಲ್ಲಿ ನಟಿಸಿರುವ ಅಪೂರ್ವ ಪ್ರತಿಭೆ.

ಹನ್ನೆರಡನೇ ಅಡ್ಡರಸ್ತೆ ಅಂದರೆ ನವರಸ ನಾಯಕ ಜಗ್ಗೇಶ್ ಹುಟ್ಟಿ ಬೆಳೆದ ರೊಮ್ಯಾನ್ಸ್ ಮಾಡಿದ ಸ್ಥಳ. ಅವರ ನಟನಾ ಚಾತುರ್ಯದ ಜತೆ ಜತೆಗೆ ಅವರಲ್ಲಿ ಮೆಚ್ಚಿದ ಒಂದು ದೊಡ್ಡ ಗುಣ ಅಂದರೆ ಅವರು ಪ್ರೀತಿಸಿದ ಹುಡುಗಿಯನ್ನು ಕೋರ್ಟ್ ಮೆಟ್ಟಿಲು ಏರಿ ಪಡೆದದ್ದು. ಇದರ ಒಂದು ಕತೆ ಸಂಕ್ಷಿಪ್ತ ರೂಪದಲ್ಲಿ.. ಜಗ್ಗೇಶ್ ಹೈಸ್ಕೂಲ್ ಹುಡುಗಿಯನ್ನು ಲವ್ ಮಾಡ್ತಾರೆ. ಹುಡುಗಿ ರೆಸ್ಪಾಂಡ್ ಮಾಡುತ್ತೆ. ಹುಡುಗಿ ಅಪ್ಪನಿಗೆ ಇದು ಗೊತ್ತಾಗಿ ಪೊಲೀಸ್ ಸ್ಟೇಶನ್‌ಗೆ ಕೇಸು ಹೋಗುತ್ತೆ. ಪೊಲೀಸು ಜಗ್ಗೇಶ್‌ರನ್ನು ಚೆನ್ನಾಗಿ ರಿಪೇರಿ ಮಾಡ್ತಾರೆ. ಆದರೂ ಪ್ರೇಮದ ಗಂಟು ಇನ್ನೂ ಗಟ್ಟಿ ಆಗುತ್ತೆ. ಹುಡುಗಿ ಅಪ್ಪ ಅಪ್ರಾಪ್ತ ವಯಸ್ಸಿನ ಮಗಳ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಅಂಟಿಸಿಕೊಂಡು ಕೋರ್ಟ್ ಮೆಟ್ಟಿಲು ಹತ್ತುತ್ತಾರೆ. ಕೇಸು ಸುಪ್ರೀಂ ಕೋರ್ಟ್‌ಗೆ ಬಂದು ಒಂದು ಕೋಟಿಯಲ್ಲಿ ಒಂದು ಎಂದು ಅನಿಸುವ ತೀರ್ಪು ಬರುತ್ತೆ. ಹುಡುಗಿ ಇನ್ನೂ ವಯಸ್ಕಳು ಅಲ್ಲದಿದ್ದರೂ ಪ್ರೇಮಿಗಳಿಬ್ಬರು ಒಬ್ಬರನ್ನೊಬ್ಬರು ಬಿಟ್ಟು ಇರಲಾರದ ಪ್ರೇಮ ಬಂಧನದಲ್ಲಿ ಸಿಲುಕಿ ಇರುವುದರಿಂದ ಕೆಲವು ಕಂಡೀಶನ್ ಹಾಕಿ ಇವರ ಮದುವೆಗೆ ಒಪ್ಪಿಗೆ ಕೊಡುತ್ತೆ. ಇದು ಟೀವಿಯಲ್ಲಿ ಜಗ್ಗೇಶ್ ವಿವರಿಸಿದ್ದು ಮತ್ತು ಈ ತೀರ್ಮಾನ ಕೊಟ್ಟವರು ಕರ್ನಾಟಕದ ಜಡ್ಜ್ ಒಬ್ಬರು ಎನ್ನುವುದು ಒಂದು ವಿಶೇಷ. ಥೇಟ್ ಸಿನಿಮಾ ಕತೆ ಇದ್ದಹಾಗಿದೆ ತಾನೇ, ಸಿನೆಮಾಕ್ಕೆ ಈ ರೀತಿಯ ಕತೆಗಳೇ ಪ್ರೇರಕ!

ಹದಿನಾಲ್ಕನೇ ಕ್ರಾಸ್‌ನ ಸೇವಾಸದನ ಮಲ್ಲೇಶ್ವರದ ಸಾಂಸ್ಕೃತಿಕ ಲೋಕದ ಹೆಗ್ಗುರುತು. ಇಲ್ಲೊಂದು ಸುಸಜ್ಜಿತ ಸಭಾಂಗಣ ಇದ್ದು ಲಲಿತಕಲೆಗಳ ಪ್ರದರ್ಶನಕ್ಕೆ ಇದರ ಉಪಯೋಗ ನಡೆಯುತ್ತಿದೆ. ನೃತ್ಯ ನಾಟಕ ಮತ್ತು ವಿಶೇಷ ಸೆಮಿನಾರ್‌ಗಳಿಗೆ ಈ ಸಭಾಭವನ ಹೇಳಿ ಮಾಡಿಸಿದ ಹಾಗಿದೆ. ಸದಾ ಗಿಜಿಗುಡುವ ಜೇನುಗೂಡನ್ನು ನೆನಪಿಗೆ ತರುವ ವಾತಾವರಣ ಇಲ್ಲಿಯದು.

ಹತ್ತನೇ ಅಡ್ಡ ರಸ್ತೆ ಅಂದರೆ ಸಂಗೀತದ ನಿನಾದ ಸದಾ ಕಿವಿಗೆ ಬೀಳುವ ಕಿನ್ನರ ಲೋಕ. ಇಲ್ಲೇ ಚಿಂತಲಪಲ್ಲಿ ಕುಟುಂಬದ ಪ್ರಖ್ಯಾತರು ಹಲವಾರು ದಶಕಗಳಿಂದ ಸಂಗೀತ ಹಾಡುತ್ತಾ ಕಲಿಸುತ್ತಾ ಮಲ್ಲೇಶ್ವರಕ್ಕೆ ಒಂದು ಐಡೆಂಟಿಟಿ ತಂದಿದ್ದಾರೆ. ಬೆಂಗಳೂರಿನ ಸಂಗೀತ ವಲಯದಲ್ಲಿ ಚಿಂತಲಪಲ್ಲಿ ಕುಟುಂಬ ವಿಶೇಷ ಮನ್ನಣೆ ಗಳಿಸಿದೆ.

ಎಂಟನೇ ಅಡ್ಡ ರಸ್ತೆ ಅಂದರೆ ಆಗ ಅದೊಂದು ಮಾಯಾ ಲೋಕ. ಸುತ್ತ ಮುತ್ತ ಹತ್ತು ಹದಿನೈದು ಕಿಮೀ ದೂರದ ನಿವಾಸಿಗಳನ್ನು ಅವೆನ್ಯೂ ರೋಡಿನ ನಂತರ ಅಗಾಧವಾಗಿ ಆಕರ್ಷಿಸುತ್ತಿದ್ದ ಸ್ಥಳ ಅಂದರೆ ಇದು. ಹಬ್ಬ ಹರಿದಿನ ಅಂದರೆ ಇಡೀ ರಸ್ತೆಯಲ್ಲಿ ಜನವೋ ಜನ. ಬೇಕಿದ್ದು ಬೇಡವಾದ್ದು ಎಲ್ಲವೂ ಒಂದೇ ರಸ್ತೆಯಲ್ಲಿ ಸಿಗುತ್ತಿದ್ದ ಜಾಗ ಇದು. ಇಲ್ಲೇ ನಮ್ಮ ಅಣ್ಣನ ಹಲ್ಲಿನ ಕ್ಲಿನಿಕ್ ಇತ್ತು. ಅದರಿಂದ ಕೆಲಸ ಇರಲಿ ಇಲ್ಲದಿರಲಿ ಈ ರಸ್ತೆಗೆ ವಾರಕ್ಕೊಮ್ಮೆ ಆದರೂ ನಮ್ಮ ವಿಸಿಟ್ ಇದ್ದೇ ಇರುತ್ತಿತ್ತು. ಅಲ್ಲೊಂದು ಮಹಡಿ ಮೇಲೆ ವೈಶಾಲಿ ಎನ್ನುವ ಹೋಟೆಲ್. ಅದರಲ್ಲಿ ಪೇಪರ್ ದೋಸೆ ತುಂಬಾ ಚೆನ್ನಾಗಿ ಇರುತ್ತಿತ್ತು. ಆಗ ನಾಲ್ಕು ವರ್ಷದ ನನ್ನ ಮಗಳು ಮತ್ತು ಆರರ ನನ್ನ ಮಗ ಈ ಪೇಪರ್ ದೋಸೆಗೆ ಫಿದಾ ಆಗಿದ್ದರು. ಮೆಟ್ಟಿಲು ಹತ್ತಿ ಒಳ ಹೊಕ್ಕ ಕೂಡಲೇ ಎರಡು ಪೇಪರ್ ಮಸಾಲೆ ಅಂತ ಮಾಣಿ ಕೂಗು ಹಾಕುವರು ಮತ್ತು ನಮಗೆ ಸ್ಥಳ ಮಾಡಿ ಕೂಡಿಸುತ್ತಿದ್ದರು. ಪೇಪರ್ ದೋಸೆ ಎರಡು ಮೂರು ಅಡಿಗೂ ಮೀರಿ ಉದ್ದ. ಅದನ್ನು ಇಬ್ಬರು ಮಾಣಿಗಳು ಆಕಡೆ ಈಕಡೆ ಕೈ ಮೇಲೆ ಇಟ್ಟುಕೊಂಡು ತರುತ್ತಾ ಇದ್ದರು. ಹೊಟೆಲ್‌ನಲ್ಲಿ ಕೂತ ಎಲ್ಲರೂ ಈ ದೃಶ್ಯ ಕಣ್ಣು ತುಂಬಿಸಿಕೊಳ್ಳುವರು. ನಮಗೆ ಒಂದು ರೀತಿ ಮುಜುಗರ. ಆದರೆ ಮುಜುಗರ ಅಂತ ದೋಸೆ ಬಿಡುಕ್ಕೆ ಆಗುತ್ತದೆಯೇ? ಮುಜುಗರ ನಿಧಾನಕ್ಕೆ ಅಭ್ಯಾಸವೂ ಆಯಿತು. ಆರೇಳು ವರ್ಷ ಈ ಹೊಟೆಲ್ ಇತ್ತು. ನಂತರ ಕಾಲಗರ್ಭದಲ್ಲಿ ಸೇರಿತು! ಎಂಟನೇ ಕ್ರಾಸ್‌ನ ವಹಿವಾಟು ಈಗ ಸಂಪೂರ್ಣ ಮಲ್ಲೇಶ್ವರಕ್ಕೆ ಹಬ್ಬಿ ಹೋಗಿದೆ.

ಸಂಪಿಗೆ ರಸ್ತೆಯಲ್ಲಿ ಹಬ್ಬದ ಹಿಂದಿನ ದಿವಸ ಹೋದರೆ ಕಾಲಿಡಲು ನಿಮಗೆ ಜಾಗ ಇರಲ್ಲ ಮತ್ತು ರಾತ್ರಿ ಸುಮಾರು ಹೊತ್ತಿನವರೆಗೆ ಈ ಗಿಜಿ ಗಿಜಿ ಇರುತ್ತೆ. ರಸ್ತೆಯನ್ನು ಸಹ ಆಕ್ರಮಿಸುವ ವ್ಯಾಪಾರಿಗಳು ಬಸ್ಸು ಕಾರು ಮತ್ತಿತರ ವಾಹನಗಳ ಸರಾಗ ಚಲನೆಗೆ ಸಾಕಷ್ಟು ತೊಂದರೆ ಕೊಡುತ್ತಿದ್ದರೂ ಯಾರೂ ಕೋಪ ತಾಪ ಮಾಡಿಕೊಳ್ಳರು.

ಎಂಟನೇ ಕ್ರಾಸ್ ಬಗ್ಗೆ ನನ್ನ ತಲೆ ತುಂಬಿ ತುಳುಕುವಷ್ಟು ಸರಕು. ಮೊದಲು ಎಂಟನೇ ಕ್ರಾಸಿನ ತರಕಾರಿ ಮಾರ್ಕೆಟ್. ಮೊದಲು ಇಲ್ಲೇ ಸುಮಾರು ತರಕಾರಿ ಅಂಗಡಿಯವರ ಅಂಗಡಿ. ಮಲ್ಲೇಶ್ವರ ಮಾರ್ಕೆಟ್ ಶುರು ಆದನಂತರ ಕೆಲವರು ಅಲ್ಲಿ ಹೋದರೂ ಮಿಕ್ಕವರು ಇಲ್ಲೇ. ಮಲ್ಲೇಶ್ವರ ಅಂದರೆ ಒಂದು ಕಾಲದಲ್ಲಿ ಬ್ರಾಹ್ಮಣರು ಮೆಜಾರಿಟಿ ಇದ್ದರು. ಮಲ್ಲೇಶ್ವರ ಸ್ಥಾಪನೆ ಆಗಿದ್ದು ೧೮೮೯. ಬೆಂಗಳೂರಿಗೆ ಪ್ಲೇಗ್ ಮಹಾಮಾರಿ ಬಂದು ಈ ಸ್ಥಳವನ್ನು ಯೋಜಿಸಿದರು. ೧೮೯೨ ರೂಪುಗೊಂಡು ೧೮೯೫ ರ ಲ್ಲಿ ನಗರ ಮುನಿಸಿಪಾಲಿಟಿಗೆ ವಹಿಸಲಾಯಿತು. ಎರಡು ಮೂರು ವರ್ಷದ ಹಿಂದೆ ಮಲ್ಲೇಶ್ವರ ತನ್ನ ನೂರಾ ಇಪ್ಪತ್ತೈದನೇ ಹುಟ್ಟು ಹಬ್ಬ ಆಚರಿಸಿತು.

ಮಲ್ಲೇಶ್ವರದ ಅಂದಿನ ಮಾರ್ಕೆಟ್ ಬಗ್ಗೆ ಹೇಳುತ್ತಿದ್ದೆ. ಆಗಲೇ ಹೇಳಿದ ಹಾಗೆ ಬ್ರಾಮಿನ್ಸ್ ಹೆಚ್ಚಿದ್ದ ಜಾಗ ಇದು ಆಗ. ಮಾರ್ಕೆಟ್‌ನಲ್ಲಿ ಈರುಳ್ಳಿ ಬೆಳ್ಳುಳ್ಳಿ ಸಿಗ್ತಾ ಇರಲಿಲ್ಲ. ಕಾರಣ ಅದು ವ್ಯಾಪಾರ ಆಗ್ತಾ ಇರ್ಲಿಲ್ಲ. ಅದೇ ತರಹ ಮಾಂಸ ಮೊಹಮಡನ್ ಬ್ಲಾಕ್‌ನಲ್ಲಿ ಮಾತ್ರ ಸಿಗುವುದು. ಈಗಲೂ ಹಳೇ ಮಲ್ಲೇಶ್ವರದಲ್ಲಿ ಮಾಂಸದ ಅಂಗಡಿ ಕಾಣಿಸದು!
ಹಾಗೇ ಇನ್ನೊಂದು ವಿಶೇಷ ಅಂದರೆ ಬ್ರಾಮಿನ್ಸು ದ್ವಾದಶಿಯ ದಿವಸ ಉಪಯೋಗಿಸುವ ಅಗಸೆ ಸೊಪ್ಪು ಹೇರಳವಾಗಿ ಮಾರಾಟ ಆಗುತ್ತಿತ್ತು. ಈಗಲೂ ಅಗಸೆ ಸೊಪ್ಪು ಬೇಕು ಅಂದರೆ ಅಲ್ಲೇ!

ಕೆಲವು ವೈದ್ಯಕೀಯ ಸೊಪ್ಪು ಸದೆ ಇಲ್ಲೇ ಸಿಗ್ತಾ ಇದ್ದದ್ದು. ವಾಯು ನಾರಾಯಣ ಸೊಪ್ಪು ಮೊದಲು ನಾನು ಇಲ್ಲೇ ನೋಡಿದ್ದು. ಬ್ರಾಮೀನ್ಸ್ ಹೆಚ್ಚು ಉಪಯೋಗಿಸುವ ಕೆಲವು ತರಕಾರಿಗಳು ಇಲ್ಲಿ ಮಾತ್ರ ಲಭ್ಯ ಆಗ. ದೊಣ್ಣೆ ಮೆಣಸಿನಕಾಯಿ, ಬಾಳೆಕಾಯಿ, ಗೆಣಸು, ಸುವರ್ಣ ಗೆಡ್ಡೆ (ಈ ತರಕಾರಿಗಳು ತಿಥಿಗಳಲ್ಲಿ ಉಪಯೋಗ ಆಗುತ್ತೆ. ಇದು ಎಂಬತ್ತರ ಅದಕ್ಕೂ ಮೊದಲಿನ ಕತೆ). ಯಶವಂತಪುರದ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ತರಕಾರಿ ಲಭ್ಯ ಮತ್ತು ಅವು ಮಲ್ಲೇಶ್ವರಕ್ಕಿಂತಲೂ ಕಡಿಮೆ ಬೆಲೆ. ಈಗ ಮಲ್ಲೇಶ್ವರದಲ್ಲಿ ಎಲ್ಲಾ ತರಕಾರಿಗಳು ಸಿಗುತ್ತೆ. ಆದರೆ ನಾನು ಕಂಡಿರೋ ಒಂದು ವಿಚಿತ್ರ ನಿಮ್ಮ ಜತೆ ಹಂಚಿಕೋ ಬೇಕು.

ಮೂಲ ಕೇರಳದ ಅವರೂ ಸಹ ಕೃಷ್ಣನ್ ಅವರಂತೆ ಕಮ್ಯೂನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದ್ದರು. ಅವರ ಸ್ವಂತ ಮನೆಯನ್ನು ಪಾರ್ಟಿಗೆ ದಾನ ಮಾಡಿದರು. ಇಂತಹ ಮೇರು ವ್ಯಕ್ತಿತ್ವ ಹೊಂದಿರುವವರನ್ನು ನೋಡಿದಾಗ ಕೇಳಿದಾಗ ನನಗೆ ನಾವುಗಳು ಎಷ್ಟು ಕುಬ್ಜರು, ಎಂತಹ ಲಿಲ್ಲಿಪುಟ್‌ಗಳು ಅನಿಸುತ್ತೆ. ಮಾರನೇ ನಿಮಿಷ ಜೇಬಲ್ಲಿನ ದುಡ್ಡು ನೆನೆದು ಎದುರಿನ ಭಿಕ್ಷುಕನನ್ನು ನಿರ್ಲಕ್ಷಿಸಿ ಹೋಟೆಲ್ ನುಗ್ಗುತ್ತೇನೆ!

ಯಶವಂತಪುರ ಮಾರುಕಟ್ಟೆಗೂ ಮಲ್ಲೇಶ್ವರದ ಮಾರುಕಟ್ಟೆಗೂ ಎರಡು ಎರಡೂವರೆ ಕಿಮೀ ಅಂತರ ಅಷ್ಟೆ. ಯಶವಂತಪುರ ಮಾರುಕಟ್ಟೆಯಲ್ಲಿ ಮಲ್ಲೇಶ್ವರದ ಮಾರುಕಟ್ಟೆಗಿಂತಲೂ ತರಕಾರಿಗಳು, ಸೊಪ್ಪು ಸದೆ ಇತ್ಯಾದಿ ಶೇ ಐವತ್ತು ಎಪ್ಪತ್ತರಷ್ಟು ಕಡಿಮೆ ಬೆಲೆ. ಆದರೂ ಮಲ್ಲೇಶ್ವರದ ಮಾರುಕಟ್ಟೆಗೆ ಅಂಟಿಕೊಂಡ ಖಾಯಂ ಗಿರಾಕಿಗಳು ಇದ್ದರು. ಯಶವಂತಪುರ ಮಾರುಕಟ್ಟೆಯಲ್ಲಿ ಗ್ರಾಹಕರು ಎಂದರೆ ಕೆಳ ಮಧ್ಯಮ ವರ್ಗದವರು. ಹೆಚ್ಚಾಗಿ ಕಾರ್ಖಾನೆ ಕೆಲಸಗಾರರು, ಕಟ್ಟಡ ನಿರ್ಮಾಣದ ಕೆಲಸಗಾರರು ಮತ್ತು ಕೂಲಿ ಕಾರ್ಮಿಕರು. ಮಲ್ಲೇಶ್ವರದ ಮಾರುಕಟ್ಟೆಯ ಗಿರಾಕಿಗಳು ಎಂದರೆ ಮಧ್ಯಮ ದರ್ಜೆಯ ಮೇಲಿನ ಪದರದವರು. ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಒಂದು ರೀತಿಯ ಶಿಸ್ತು, ಒಪ್ಪ ಓರಣ ಎದ್ದು ಕಂಡರೆ ಯಶವಂತಪುರದ ಮಾರುಕಟ್ಟೆ ಒಂದು ರೀತಿ ಅವ್ಯವಸ್ಥೆ ಮತ್ತು ಕೊಳಕು. ಅಲ್ಲಿನ ಶಿಸ್ತು ಒಪ್ಪ ಓರಣ ಇಲ್ಲಿ ಮಿಸ್ಸಿಂಗ್. ಆದರೂ ಎರಡೂ ಮಾರುಕಟ್ಟೆ ನೋಡಿರುವ ನನ್ನಂತಹವರಿಗೆ ಮಲ್ಲೇಶ್ವರದ ಮಾರುಕಟ್ಟೆ ಅಷ್ಟಾಗಿ ಹಿಡಿಸದು. ಕಾರಣ ಎರಡೂ ಮಾರುಕಟ್ಟೆ ನೋಡಿರುವುದು ಮತ್ತು ಬೆಲೆ ಇಲ್ಲಿ ಮುಖ್ಯ ಪಾತ್ರ. ಇದೇ ರೀತಿಯ ಪರಿಸ್ಥಿತಿ ನಾನು ನೋಡಿರುವುದು ಎಂದರೆ ಗಾಂಧಿ ಬಝಾರ್ ಮಾರುಕಟ್ಟೆ. ಇಡೀ ಬೆಂಗಳೂರಿನಲ್ಲಿ ಎರ್ರಾ ಬಿರ್ರಿ ರೇಟು ಇರುವ ಮಾರುಕಟ್ಟೆ ಅಂದರೆ ಗಾಂಧಿ ಬಝಾರ್. ಅಲ್ಲಿನ ಗ್ರಾಹಕರು ಎಷ್ಟು ಸೌಮ್ಯ ಎಂದರೆ ಬೆಲೆ ಏಕೆ ಹೆಚ್ಚಾಗಿದೆ ಎಂದು ಮಾರಾಟಗಾರರಿಗೆ ಪ್ರಶ್ನೆಯನ್ನೇ ಹಾಕುವುದಿಲ್ಲ ಮತ್ತು ಚೌಕಾಸಿ ಸಹ ಮಾಡುವುದಿಲ್ಲ. ಇದರ ಮತ್ತೊಂದು ಬ್ಲೂ ಪ್ರಿಂಟ್ ಅಂದರೆ ಜಯನಗರ ಒಂಬತ್ತನೇ ಬ್ಲಾಕಿನ ಮಾರುಕಟ್ಟೆ! ರಾಜಾಜಿನಗರದಲ್ಲಿ ರಸ್ತೆ ಬದಿ ತರಕಾರಿ ಇಟ್ಟುಕೊಂಡು ಮಾರುವವರು ಹೆಚ್ಚಾಗಿ ಸಂಜೆ ಹೊತ್ತು ರಾಮಮಂದಿರದ ಆಸು ಪಾಸು ಇರುತ್ತಿದ್ದರು. ಅವರ ಬಳಿ ರೇಟುಗಳು ರೀಸನಬಲ್ ಅನಿಸೋದು! ಇನ್ನು ಮಡಿವಾಳ, ಸಾರಕ್ಕಿ ಮಾರುಕಟ್ಟೆಗಳು ಎರಡೂ ರೀತಿಯವು ಅಂದರೆ ಚಿಲ್ಲರೆ ಮತ್ತು ಹೋಲ್ ಸೇಲ್ ಲೆಕ್ಕದವು. ಯಶವಂತ ಪುರದಲ್ಲಿ ತರಕಾರಿಗಳು ಒಂದು ತೂಕ ಲೆಕ್ಕದವು. ತೂಕ ಅಂದರೆ ಎರಡೂವರೆ ಕೇಜಿ. ಕೇಜಿ ಲೆಕ್ಕಕ್ಕೆ ಮೊದಲು ಇದು ವೀಸೆ ಅನ್ನುವ ಲೆಕ್ಕದಲ್ಲಿ. ಯಶವಂತಪುರ ಮಾರುಕಟ್ಟೆಯಲ್ಲಿ ಹೂವು ಮಾರಿನ ಲೆಕ್ಕ. ಮಾರು ಅಂದರೆ ಎರಡೂ ಕೈ ಅಗಲಿಸಿ ಎಡಗೈನ ಎರಡು ಬೆರಳಲ್ಲಿ ಹೂ ಹಿಡಿದು ಹೂ ಹಾರದ ಮತ್ತೊಂದು ತುದಿ ಅಗಲಿಸಿದ ಬಲಗೈ ತೋರು ಬೆರಳನ್ನು ಮುಟ್ಟುವ ಹಾಗಿರಬೇಕು. ಇದು ಮೂರು ಮೊಳ ಆಗಬಹುದು ಎನ್ನುವ ಅಂದಾಜು. ಹೂ ಮಾರಲು ಸಣ್ಣ ಹುಟ್ಟಿನ ಹೆಂಗಸರು ಅಥವಾ ಪುಟ್ಟ ಮಕ್ಕಳು ಕೂಡುವುದು. ಕಾರಣ ಪುಟ್ಟ ಕೈಗಳು ಮತ್ತು ಮಾರು ಅಂದರೆ ಲಾಭ.

ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ತೂಕದ ಲೆಕ್ಕ(ಅಂದರೆ ಎರಡೂವರೆ ಕೇಜಿ ಲೆಕ್ಕ)ಇಲ್ಲ. ಹೂ ಸಹ ಮೊಳದ ಲೆಕ್ಕ. ಮಾರಿನ ಲೆಕ್ಕ ಇಲ್ಲಿಲ್ಲ. ಮೊಳ ಅಂದರೆ ಬೆರಳಿನ ತುದಿಯಿಂದ ಮೊಣಕೈವರೆಗಿನ ಉದ್ದ. ಇನ್ನೊಂದು ವಿಶೇಷ ಅಂದರೆ ಸುಮಾರು ವರ್ಷಗಳಿಂದ ಹೂವು ಮಾರಾಟ ಮಾರು ಮತ್ತು ಮೊಳದ ಲೆಕ್ಕದಲ್ಲಿ ಆಗುತ್ತಿರುವುದು! ಈ ವ್ಯಾಪಾರದಲ್ಲಿ ಮೀಟರ್ ಲೆಕ್ಕ ಈವರೆಗೂ ನನಗೆ ಕಂಡಿಲ್ಲ. ಯಾರೂ ಮೂವತ್ತು ಸೆಂಟಿ ಮೀಟರ್ ಅಥವಾ ಅರ್ಧ ಮೀಟರ್ ಹೂ ಕೊಡಿ ಅಂತ ವ್ಯಾಪಾರ ಮಾಡಿದ್ದು ನಾನು ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಕಂಡಿಲ್ಲ! ಬಿಡಿ ಹೂ ಆದರೆ ಗ್ರಾಂ ಕೇಜಿ ಲೆಕ್ಕ. ಮನೆ ಮುಂದೆ ಹೂ ಮಾರುವವರೂ ಸಹ ಮಾರು, ಮೊಳ ಈ ಲೆಕ್ಕದವರೆ.

ಮಲ್ಲೇಶ್ವರದ ಎಂಟನೇ ಅಡ್ಡ ರಸ್ತೆ ಅಂದರೆ ಗಾಂಧಿ ಸಾಹಿತ್ಯ ಸಂಘದ ಸೆಳೆತ ಅಂದೆ. ಮತ್ತೆ ಕೆಲವು ಸೆಳೆತ ನಿಮಗೆ ಹೇಳಲೇಬೇಕು. ಮಾರ್ಗೋಸ ರಸ್ತೆ ಇಂದ ನೀವು ಎಂಟನೇ ಅಡ್ಡ ರಸ್ತೆ ತಿರುಗಿ ಬಲಕ್ಕೆ ಎರಡನೇ ರಸ್ತೆ ಹತ್ತಿರ ನಿಲ್ಲಿ. ನಿಮ್ಮ ಎದುರು ಕನ್ನಿಕಾ ಪರಮೇಶ್ವರಿ ದೇವಸ್ಥಾನ. ಆರ್ಯ ವೈಶ್ಯರ ಸುಪ್ರಸಿದ್ಧ ದೇವಾಲಯ ಇದು. ವರ್ಷ ಪೂರ್ತಿ ಒಂದಲ್ಲ ಒಂದು ವಿಶೇಷ ಕಾರ್ಯಕ್ರಮ ಇಲ್ಲಿ ನಡೆಯುತ್ತೆ. ಧಾರ್ಮಿಕ ಕಾರ್ಯಗಳ ಜತೆ ಜತೆಗೆ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ನಡೆಯುತ್ತವೆ. ಕಾರ್ಯಕ್ರಮದ ಒಪ್ಪ ಓರಣ ನಂತರದ ಪ್ರಸಾದ.. ಎಲ್ಲವೂ ಆಕರ್ಷಕ.
ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಎದುರು ರಸ್ತೆಗೆ ಬಂದ್ರ, ಎಡಕ್ಕೆ, ಕೊಂಚ ಮುಂದೆ ಬಂದರೆ ಗಣೇಶ ದೇವರು, ಇನ್ನೂ ಮುಂದೆ ಬಂದರೆ ಕೃಷ್ಣನ ದೇವಸ್ಥಾನ.

ಈ ರಾಘವೇಂದ್ರ ಸ್ವಾಮಿ ಮಠಕ್ಕೂ ನನಗೂ ಸುಮಾರು ನಾಲ್ಕು ದಶಕಗಳ ನಂಟು. ಈ ನಂಟು ವಿವರಿಸುವ ಮೊದಲು ಈ ಮಠಗಳು ನಮ್ಮ ಜನಜೀವನದಲ್ಲಿ ಮಾಡಿರುವ ಕೆಲವು ಕ್ರಾಂತಿಕಾರಕ ಬದಲಾವಣೆ ಹೇಳಬೇಕು. ಇದಕ್ಕೊಂದು ಹಿನ್ನೆಲೆ ಕೊಡಲೇ..

ಮಾಧ್ವರ ಕುಟುಂಬದಲ್ಲಿ ನಾಲ್ಕೈದು ದಶಕಗಳ ಹಿಂದೆ ಮನೆಯಲ್ಲಿನ ಯಾರಾದರೂ ಮೃತರಾದಾಗ ಅವರ ಕರ್ಮಾಂತರಗಳನ್ನು ನಡೆಸಲು ಒಂದು ಹರ ಸಾಹಸ ಪಡಬೇಕಾದ ಸ್ಥಿತಿ ಇತ್ತು. ಪಾರ್ಥಿವ ಶರೀರ ವಿಸರ್ಜನೆ ಸೇರಿದ ಹಾಗೆ ಮಿಕ್ಕ ಕರ್ಮಗಳನ್ನು ನಡೆಸಲು ನಗರ ವಾಸಿಗಳಿಗೆ ಸೂಕ್ತ ವ್ಯವಸ್ಥೆಗಳು ಇರಲಿಲ್ಲ. ಅದರಲ್ಲೂ ಆರ್ಥಿಕವಾಗಿ ದುರ್ಬಲರು ಮತ್ತಷ್ಟು ಸಾಲ ಸೋಲದಲ್ಲಿ ಮುಳುಗಬೇಕಿತ್ತು. ಈ ಒತ್ತಡ ಮತ್ತು ಆರ್ಥಿಕ ಸಂಕಷ್ಟದ ಕಾರಣ ಹಲವರು ಸಂಪ್ರದಾಯ ಕೈ ಬಿಡುತ್ತಾ ಇದ್ದರು. ಈ ಬಗ್ಗೆ ಚಿಂತಿಸಿದ ಗಣ್ಯರು ಸಮಸ್ಯೆಗಳನ್ನು ದೀರ್ಘವಾಗಿ ವಿಶ್ಲೇಷಿಸಿದರು ಮತ್ತು ಮಠಗಳ ನಿರ್ದೇಶನ ಬಯಸಿದರು. ಮಠಗಳ ನೆರವು ಈ ಸಮಯದಲ್ಲಿ ಒದಗಿ ಬಂತು. ಯಾರಾದರೂ ಮೃತರಾದಾಗ ಅವರ ಪಾರ್ಥಿವ ಶರೀರ ವಿಲೇವಾರಿಯಿಂದ ಮೊದಲುಗೊಂಡು ನಂತರ ನಡೆಯಬೇಕಾದ ಕರ್ಮಾಂತರಗಳು ಸಿಂಪ್ಲಿ ಫೈ ಆದವು ಮತ್ತು ಅದಕ್ಕೆ ತಗಲುವ ವೆಚ್ಚ ಸಹ ಗಣನೀಯವಾಗಿ ಕಡಿಮೆ ಆಯಿತು. ಆರ್ಥಿಕ ಹೊರೆಯ ಭಾರ ಹಗುರ ಆಯಿತು. ಜತೆಗೆ ಅಪರ ಕರ್ಮದ ಸುದೀರ್ಘ ಕಲಾಪಗಳು ಸಂಕ್ಷಿಪ್ತ ಆದವು. ಮರಣದಿಂದ ಹಿಡಿದು ವೈಕುಂಠ ಸಮಾರಾಧನೆವರೆಗೆ ಈಗ ಪ್ಯಾಕೇಜ್ ಡೀಲ್‌ಗಳು ಇವೆ ಮತ್ತು ಇದೇ ಕಸುಬಿನಲ್ಲಿ ಮುಂದೆ ಬಂದವರೂ ಇದ್ದಾರೆ. ಮನೆಗಳಲ್ಲಿ ತಿಥಿ ಕಾರ್ಯ ನಡೆಸಲು ಇರುವ ಹಲವಾರು ಅಡೆತಡೆಗಳನ್ನು ನಿವಾರಿಸಲು ಮಠಗಳಲ್ಲೇ ಈ ಕರ್ಮಗಳಿಗೆ ಸೂಕ್ತ ಮತ್ತು ನಿಖರ ಪರ್ಯಾಯ ಒದಗಿಸಲಾಯಿತು. ಇದು ಒಂದು ಕ್ರಾಂತಿಕಾರಕ ಬದಲಾವಣೆಗೆ ಕಾರಣ ಆಯಿತು. ಒಂದು ಉದಾಹರಣೆ ಅಂದರೆ ಹಿಂದೆ ಮನೆಗಳಲ್ಲಿ ತಿಥಿ ಕಾರ್ಯ ಆಗಬೇಕಾದರೆ ನಡೆಯುತ್ತಿದ್ದ ಒಂದು ಪುಟ್ಟ ವಿಶ್ಲೇಷಣೆ; ಹಿಂದಿನ ದಿವಸ ರಾತ್ರಿಯೇ ಮನೆ ಸಾರಿಸಿ ಒರೆಸಿ ಮಡಿ ಬಟ್ಟೆ ಒಣಗಿ ಹಾಕೋದು, ಬೆಳಿಗ್ಗೆ ಬೇಗ ಎದ್ದು ಮಡಿಲೇ ಅಡುಗೆ ಶುರು. ಹನ್ನೆರೆಡು ಒಂದರ ಸುಮಾರಿಗೆ ಪುರೋಹಿತರ ಆಗಮನ. ಅಷ್ಟರಲ್ಲಿ ಅಡುಗೆ ಮುಕ್ಕಾಲಾದರು ಆಗಿರಬೇಕು. ಹತ್ತು ಹಲವು ಬಗೆಯ ವಿಶೇಷ ಅಡುಗೆ ಬೇರೆ.. ಯಾರ ತಿಥಿ ಆಗುತ್ತೋ ಅದಕ್ಕೆ ಸಂಬಂಧ ಪಟ್ಟಂತೆ ಅಡುಗೆ. ಮುತ್ತೈದೆ ತಿಥಿ ಅಂದರೆ ಅದೇ ಒಂದು ರೀತಿ, ವಿಧವೆ ಆದರೆ ಅದೇ ಒಂದು ರೀತಿ, ಬ್ರಹ್ಮಚಾರಿ ಅಂದರೆ ಅದೇ ಮತ್ತೊಂದು ರೀತಿ…. ಹೀಗೆ. ಜತೆಗೆ ಮನೆ ಮಕ್ಕಳ ಉಪವಾಸ. ಮನೆ ಚಿಕ್ಕದಾದರೆ ಮಕ್ಕಳು ಅವೆಲ್ಲಾ ಮನೆಯಿಂದ ಹೊರಗೆ.. ಪುರೋಹಿತರು ಬಂದು ಅವರು ಮಡಿ ಉಟ್ಟುಕೊಂಡು ಸಂಪೂರ್ಣ ಕಾರ್ಯ ಮುಗಿಸುವ ಹೊತ್ತಿಗೆ ಸಂಜೆ ನಾಲ್ಕು. ನಂತರ ಮನೆ ಯಜಮಾನ ಒಂದು ತಟ್ಟೆಯಲ್ಲಿ ಪಿಂಡ ಇಟ್ಟುಕೊಂಡು ಹಸು ಹುಡುಕಿ ಅದನ್ನ ಅದಕ್ಕೆ ಹಾಕಿ ಮನೆಗೆ ಬಂದು ಊಟಕ್ಕೆ ಕೂಡಬೇಕು. ಅವನದ್ದು ಆದಮೇಲೆ ಮನೆ ಹೆಂಗಸರ ಊಟ….

ಇದು ಸಾಮಾನ್ಯ ದಿನಗಳು ಆದರೆ ತಿಥಿ ದ್ವಾದಶಿ ಬಂದರೆ ಅದರ ಕತೆ ಬೇರೆ. ಬೆಳಿಗ್ಗೆ ಆರಕ್ಕೆ ಅಡುಗೆ ಆಗಿರಬೇಕು ಮತ್ತು ಊಟ ಆರೂವರೆ ಸುಮಾರಿಗೆ.. ಸುಮಾರು ಮನೆಗಳಲ್ಲಿ ಈ ವಿಷಯಕ್ಕೆ ವೈಮನಸ್ಸು ಜಗಳ ಪಗಳ ಆಗುತ್ತಿತ್ತು. ಒಟ್ಟು ಕುಟುಂಬ ಆದರೆ ಅದು ಹೇಗೋ ಕೆಲಸ ಹಂಚಿಕೊಂಡು ನಿಭಾಯಿಸೋರು. ಸಣ್ಣ ಕುಟುಂಬ ಆದರೆ ಅವರ ಪಾಡು ಬೇಡ. ತಲೆತಲಾಂತರದ ಸಂಪ್ರದಾಯ ಬಿಡಲು ಆಗುತ್ಯೇ? ಮನೆ ಹಿರಿಯರ ತಿಥಿ ಬಿಟ್ಟರೆ ಅವರ ಪ್ರೇತಗಳು ಅಂತರಿಕ್ಷದಲ್ಲಿ ಹಾರಾಡ್ತಾ ಯಾವಯಾವ ಶಾಪ ಹಾಕಬಹುದು? ಈ ಚಿಂತನೆಯಲ್ಲಿ ತಿಥಿ ಪಥಿ ಕಾರ್ಯ. ಜತೆಗೆ ಪುರೋಹಿತರ ಸಂಭಾವನೆ. ಇದು ಫಿಕ್ಸೆಡ್ ಅಂತ ಇಲ್ಲ. ಮುಖ ನೋಡಿ ಮಣೆ ಹಾಕುವಂತಹುದು. ಅದೂ ಸಹ ಕೆಲವು ಸಲ ಕೈ ಮೀರುವ ಅಂಕೆಗಳದ್ದು. ಒಂದು ರೀತಿ ಬಿಸಿ ತುಪ್ಪ ಹೇಳಿಕೊಳ್ಳಲು ಆಗದ್ದು…

ಮಠದಲ್ಲಿನ ಇಂಪ್ರೂವ್ಡ್ ವರ್ಷನ್ ಹೇಗಿರುತ್ತೆ ಅಂದರೆ ಅಲ್ಲಿ ತಿಥಿ ಸಹ ಎರಡು ರೀತಿ. ಪಿಂಡ ಪ್ರದಾನ ಮಾಡುವ ತಿಥಿ ಒಂದು. ಮತ್ತೊಂದು ಪಿಂಡ ಪ್ರದಾನ ಇಲ್ಲದಿರುವುದು. ಮೊದಲನೆಯದು ಎರಡು ಗಂಟೆ ಹಿಡಿದರೆ ಎರಡನೆಯದು ಹತ್ತು ಹದಿನೈದು ನಿಮಿಷ ಅಷ್ಟೇ. ಹನ್ನೆರೆಡರ ಸುಮಾರಿಗೆ ಎಲ್ಲರಿಗೂ ಊಟ. ತಿಥಿ ಕಾರ್ಯಕ್ಕೆ ಒಂದು ನಿಗದಿತ ಶುಲ್ಕ ಮತ್ತು ಊಟಕ್ಕೂ ಸಹ. ದಕ್ಷಿಣೆ ಸಹ ನಿಗದಿ ದರ. ಸ್ವಯಂ ಪ್ರೇರಿತರಾಗಿ ಹೆಚ್ಚು ಕೊಡಬಹುದು. ಎರಡು ದಿವಸ ಮೊದಲೇ ಹೇಳಿದರೆ ಸಾಕು. ಅಲ್ಲಿನ ಪುರೋಹಿತರು ಕಾರ್ಯ ನಿರ್ವಹಿಸುತ್ತಾರೆ. ಅವರು ಅಲ್ಲೇ ಇರುವುದರಿಂದ ಅವರಿಗೆ ಕಾಯುವ, ವಾಹನ ವ್ಯವಸ್ಥೆ ಮಾಡುವ ನಂತರ ದಕ್ಷಿಣೆ ಬಗ್ಗೆ ಕೊಸರಾಡುವ ಯಾವುದೇ ತರಲೆ ತಾಪತ್ರಯ ಇಲ್ಲ. ಮಡಿ ಹಾಕುವ ಹಾಗಿಲ್ಲ, ನೀರು ಶೇಖರಣೆ ತಾಪತ್ರಯ ಇಲ್ಲ. ಊಟದ ನಂತರ ಎಲೆ ಎತ್ತಿ ಸಾರಿಸುವ ಕೆಲಸವೂ ಇಲ್ಲ! ಮನೆಯಲ್ಲಿ ಮಾಡುವ ತಿಥಿಗೂ ಮಠದ ತಿಥಿಗೂ ಇಂತಹ ಅಜಗಜಾಂತರ ವ್ಯತ್ಯಾಸ. ಇವೆಲ್ಲಕ್ಕಿಂತ ಹೆಚ್ಚಾಗಿ ಟೆನ್ಶನ್ ಇಲ್ಲ ಪರಸ್ಪರ ವೈಮನಸ್ಯ ಇಲ್ಲ ಮತ್ತು ಕುಟುಂಬದ ಎಲ್ಲರೂ ಒಟ್ಟಿಗೆ ಕೂತು ಉಣ್ಣುವ ಸೌಲಭ್ಯ.

ಧಾವಂತ ಜೀವನದಲ್ಲಿ ಸಕಲ ತೊಂದರೆಯೂ ನಿವಾರಣೆ ಆಗಿ ಸುಲಭದಲ್ಲಿ ಪಿತೃಗಳು ಸಂತೃಪ್ತರಾಗುವ ಅವಕಾಶ ಬಿಡಲು ಸಾಧ್ಯವೇ..? ಮೊದಮೊದಲು ಕುಲ ಬಾಂಧವರು ಈ ವ್ಯವಸ್ಥೆಗೆ ಬದಲಾಗಲು ಮಾನಸಿಕವಾಗಿ ಸಿದ್ಧರಿರಲಿಲ್ಲವಾದರೂ ಕಾಲ ಕ್ರಮೇಣ ಈ ವ್ಯವಸ್ಥೆಗೆ ತಮ್ಮನ್ನು ಹೊಂದಿಸಿಕೊಂಡರು. ದೇವರ ಸನ್ನಿಧಿಯಲ್ಲಿ ಯಾವುದೇ ಲೋಪ ಇದ್ದರೂ ಅದು ಲೆಕ್ಕಕ್ಕೆ ಬರಬಾರದು ಎನ್ನುವ ಮೈಂಡ್ ಸೆಟ್ ಹುಟ್ಟಿತು. ಇದು ಎಲ್ಲಾ ರಾಘವೇಂದ್ರ ಸ್ವಾಮಿಗಳ ಮಠಗಳಲ್ಲಿ ಇರುವ ಸಂಪ್ರದಾಯ. ಒಮ್ಮೆ ಯಾವುದಾದರೂ ಮಠದಲ್ಲಿ ಈ ಕ್ರಿಯೆಗಳು ನಡೆದು ಮನಸಿಗೆ ಒಪ್ಪಿಗೆ ಆದರೆ ಅದೇ ಮಠ ಮುಂದುವರೆಯುತ್ತದೆ. ಹೀಗಾಗಿ ಎಂಟನೇ ಕ್ರಾಸ್ ಮಠ ನಮಗೆ ಹೆಚ್ಚು ಹತ್ತಿರ ಆಗಿತ್ತು. ಅಲ್ಲಿನ ಮಠದ ವಿಶೇಷ ಅಂದರೆ ಅದನ್ನು ಜಯಣ್ಣನ ಮಠ ಎಂದೇ ಕರೆಯುವುದು. ಮಠದ ಉಸ್ತುವಾರಿ ಯಜಮಾನಿಕೆ ನಡೆಸುವವರ ಹೆಸರೇ ಮಠಕ್ಕೂ ಬರುವುದು ತುಂಬಾ ಅಪರೂಪ. ಒಂದು ನೆನಪಿಗೆ ಬರುತ್ತೆ. ನಾನು ಕೆಲಸ ಮಾಡುತ್ತಿದ್ದ ಕಡೆ ಒಂದು ಸೆಕ್ಷನ್‌ಗೆ ಅದರ ಸೂಪರ್ವೈಸರ್ ಹೆಸರಿಂದಲೇ ಗುರುತು ಹಿಡಿಯುತ್ತಿದ್ದರು. ಮಾರಪ್ಪನ ಸೆಕ್ಷನ್…… ಹೀಗೆ. ಮಠಗಳಲ್ಲಿನ ಈ ಸೌಲಭ್ಯ ಈಗ ವಿಸ್ತಾರಗೊಂಡಿದೆ ಮತ್ತು ಪುಟ್ಟ ಸಮಾರಂಭಗಳು ಅನಿಸಿಕೊಳ್ಳುವ ನಾಮಕರಣ, ಚೌಲ, ದೇವರ ಸಮಾರಾಧನೆ ಮುಂತಾದ ವಿಧಿ ವಿಧಾನಗಳನ್ನು ಮಠಗಳು ಪ್ರೊಫೆಷನಲ್ ಆಗಿ ಮಾಡುತ್ತವೆ. ಅವರ ಬಳಿ ಯಾವಾಗಲೂ ಪುರೋಹಿತರು ಮತ್ತು ಇಂತಹ ಸಮಾರಂಭಗಳಿಗೆ ಅವಶ್ಯ ಸಾಮಾನು ಸರಂಜಾಮು ಇರುತ್ತದೆ. ಒಟ್ಟಾರೆ ಈ ಕಾರ್ಯಗಳ ಮೂಲಕ ಮಠಗಳು ಕುಲ ಬಾಂಧವರ ಹೊರೆಯನ್ನು ಕಡಿಮೆ ಮಾಡಿದೆ. ಈ ಎಲ್ಲದರ ಫಲಶ್ರುತಿ ಎಂದರೆ ಸುಮಾರು ಕುಟುಂಬಗಳು ಶ್ರಾದ್ಧ ಮತ್ತಿತರ ಧಾರ್ಮಿಕ ಕಾರ್ಯಗಳಿಗೆ ಮಠಗಳನ್ನು ಸಂಪೂರ್ಣ ಅವಲಂಬಿಸಿರುವುದು. ಕರಾವಳಿ ಮೂಲದ ಮಠಗಳು ಈ ನಿಟ್ಟಿನಲ್ಲಿ ಹೆಚ್ಚು ಕಸ್ಟಮರ್ ಫ್ರೆಂಡ್ಲಿ.

ಮಠದ ಕತೆ ಆಯ್ತಾ….. ಮಠದ ಪಕ್ಕದಲ್ಲಿಯೇ ಗಣೇಶನ ದೇವಸ್ಥಾನ. ಮಲ್ಲೇಶ್ವರದ ಮಾರುಕಟ್ಟೆಗೆ ಅಂಟಿಕೊಂಡಿರುವ ಮೌಂಟ್ ಗಣೇಶ ದೇವಸ್ಥಾನದ ವಿಗ್ರಹ ನಿಜಕ್ಕೂ ಚಾಲೆಂಜ್ ಗಣಪತಿ. ಒಳ್ಳೆಯ ಭಕ್ತಿಯ ಮನಸ್ಸಿನಿಂದ ಪ್ರಾರ್ಥನೆ ಸಲ್ಲಿಸಿದರೆ ನಿಮ್ಮ ಇಷ್ಟಾರ್ಥ ಸಿದ್ಧಿಸಿದ ಹಾಗೆಯೇ ಎಂದು ಜನರ ಅಪಾರ ನಂಬಿಕೆ. ಪರೀಕ್ಷೆ ಸಮಯದಲ್ಲಿ ಇಲ್ಲಿಗೆ ವಿದ್ಯಾರ್ಥಿ ಭಕ್ತರು ಮತ್ತು ಅವರನ್ನು ಹೆತ್ತವರು ಹೆಚ್ಚು ಭೇಟಿ ಕೊಡುತ್ತಾರೆ.

ಏಳನೇ ಅಡ್ಡರಸ್ತೆಯಲ್ಲಿ ಖ್ಯಾತ ರಂಗ ನಟ ಹಾಗೂ ಚಲನಚಿತ್ರ ನಿರ್ಮಾಪಕ ನಿರ್ದೇಶಕ ನಟ ಆರ್. ನಾಗೇಂದ್ರರಾವ್ ಇದ್ದದ್ದು. ಅವರ ಮಕ್ಕಳು ಸುದರ್ಶನ್, ಕೃಷ್ಣ ಪ್ರಸಾದ್ ಮತ್ತು ಜಯಗೋಪಾಲ್ ಎಲ್ಲಾ ಇಲ್ಲಿ ತಮ್ಮ ಬಾಲ್ಯ ಕಳೆದವರು. ಸುದರ್ಶನ್ ವಿಭಿನ್ನ ರೀತಿಯ ಪಾತ್ರಗಳಲ್ಲಿ ಮಿಂಚಿದವರು.

ಆರನೇ ಅಡ್ಡ ರಸ್ತೆಯಲ್ಲಿ ಖ್ಯಾತ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ವಾಸ. ಇಷ್ಟು ವರ್ಷದ ನಂತರವೂ ಯಾವುದಾದರೂ ಸಿನಿಮಾದ ಕನ್ನಡ ಹಾಡನ್ನು ನೀವು ಗುಣಗುಣಿಸುತ್ತೀರಿ ಎಂದರೆ ಅದು ಖಂಡಿತ ವಿಜಯ ಭಾಸ್ಕರ್ ಅವರ ಸಂಗೀತದ ಗೀತೆ! ನನ್ನ ಅತ್ಯಂತ ಪ್ರಿಯವಾದ ಗೀತೆಗಳಲ್ಲಿ ಉಯ್ಯಾಲೆ ಚಿತ್ರದ ದೋಣಿಯೊಳಗೆ ನೀನು.. ಸಹ ಸೇರಿದೆ!

ಐದನೇ ಅಡ್ಡರಸ್ತೆಯಲ್ಲಿ ಪ್ರಕಾಶ್ ರೈ ವಾಸ. ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿ ನಟಿಸುತ್ತಿರುವ ಪ್ರತಿಭಾವಂತ. ನಾಲ್ಕನೇ ಅಡ್ಡ ರಸ್ತೆ ಅಂದರೆ ನಮ್ಮ ವೀಣೆ ದೊರೆಸ್ವಾಮಿ ಅಯ್ಯಂಗಾರರು. ಇಡೀ ಪ್ರಪಂಚಕ್ಕೆ ನಮ್ಮ ಮೈಸೂರು ವೀಣೆಯ ಬನಿ ಹಬ್ಬಿಸಿದ ಅಚ್ಚ ಕನ್ನಡಿಗ. ಎರಡನೇ ಅಡ್ಡರಸ್ತೆ ಬೆಳ್ಳಾವೆ ನರಹರಿ ಶಾಸ್ತ್ರಿಗಳು ವಾಸವಿದ್ದದ್ದು. ಬೆಳ್ಳಾವೆ ನರಹರಿ ಶಾಸ್ತ್ರಿ(೧೮೮೨, ಸೆಪ್ಟೆಂಬರ್ ೨೧ – ೧೯೬೧, ಜೂನ್ ೨೧) ಕನ್ನಡ ಚಿತ್ರರಂಗದ ಪ್ರಮುಖ ಚಿತ್ರಸಾಹಿತಿಗಳಲ್ಲೊಬ್ಬರು. ಕೆಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಕನ್ನಡದ ಪ್ರಥಮ ಚಿತ್ರಸಾಹಿತಿಯೂ ಹೌದು. ಒಂದನೇ ಅಡ್ಡರಸ್ತೆ ರಾಜಾಶಂಕರ್ ಸ್ಥಳ. ಕನ್ನಡ ಚಲನಚಿತ್ರ ನಟ, ನಿರ್ಮಾಪಕರು ಇವರು. ನಾನು ಕೆಲವು ಗಣ್ಯರನ್ನು ಹೆಸರಿಸಿದ್ದೇನೆ. ಆದರೆ ಪ್ರತಿ ರಸ್ತೆಯಿಂದ ಸುಮಾರು ಪ್ರತಿಭಾವಂತ ಜನರನ್ನು ಹೆಸರಿಸಬಹುದು. ಮೊಗೆದಷ್ಟೂ ಹೊರ ಹೊಮ್ಮುವ ಪ್ರತಿಭೆಗಳು ಇಲ್ಲಿ ಬೇಕಾದಷ್ಟು. ಒಂದು ತಮಾಷೆ ನನ್ನ ಅನುಭವಕ್ಕೆ ಬಂದಿರೋದು ಇಲ್ಲಿ ಹೇಳಲೇಬೇಕು. ಮಲ್ಲೇಶ್ವರದ ಯಾವುದಾದರೂ ಒಂದು ಮೂಲೆಯಲ್ಲಿ ಸುಮ್ಮನೆ ನಿಂತರೆ ನೀವು ಟೀವಿಯಲ್ಲಿ ನೋಡಿದ, ಪೇಪರಿನಲ್ಲಿ ಕಂಡ, ಸಿನಿಮಾದಲ್ಲಿ ನೋಡಿದ ಎಷ್ಟೋ ಜನ ನಿಮ್ಮ ಮುಂದೆ ಸಾಗಿರುತ್ತಾರೆ. ಅವರನ್ನು ನೆನೆಸಿಕೊಳ್ಳುವಷ್ಟರಲ್ಲಿ ನೀವು ಸುಸ್ತು ಹೊಡೆದಿರುತ್ತೀರಿ.

ಮಲ್ಲೇಶ್ವರ ಅಂದ ಕೂಡಲೇ ನೆನಪಿಗೆ ಬರುವ ಸುಮಾರು ಪ್ರತಿಭಾನ್ವಿತರು ಇಲ್ಲಿ ಬಂದಿಲ್ಲ ಮತ್ತು ಮಲ್ಲೇಶ್ವರದ ಪೂರ್ಣ ಚಿತ್ರಣವೂ ಆಗಿಲ್ಲ ಎಂದು ನನ್ನ ಅನಿಸಿಕೆ. ಇಲ್ಲಿನ ಸಾಂಸ್ಕೃತಿಕ ಮತ್ತು ಸಾಹಿತ್ಯ ಲೋಕದ ಅನಾವರಣ ಆಗಿಲ್ಲ, ಇಲ್ಲಿನ ಹೂ ಮನಸಿನ ಸುಸಂಸ್ಕೃತ ಮಹಿಳೆಯರ ಬಗ್ಗೆ ಉಲ್ಲೇಖ ಇಲ್ಲ. ಇಲ್ಲಿನ ಪ್ರಸಿದ್ಧ ವಿದ್ಯಾಸಂಸ್ಥೆಗಳ ಬಗ್ಗೆ ನೋಟ್ಸ್ ಇಲ್ಲ….. ಈ ಮೊದಲಾದ ಅಂಶಗಳೂ ಸೇರಿದ ಹಾಗೆ ಇಲ್ಲಿ ಕಾಣೆಯಾಗಿರುವ ಹಲವು ಗಣ್ಯರ ಬಗ್ಗೆ ಮುಂದೆ ಬರೆಯುತ್ತೇನೆ. ಒಟ್ಟಾರೆ ನನ್ನ ಪ್ರಕಾರ ಮಲ್ಲೇಶ್ವರಂ ಎನ್ನುವುದು ಮಾನವ ನಿರ್ಮಿತವಾದ ಒಂದು ಸುಂದರ ದೇವಲೋಕ ಮತ್ತು ಇಲ್ಲಿ ವಾಸ ಮಾಡುವ ಪುಣ್ಯವಂತರು ಅದೇ ಮನುಷ್ಯ ರೂಪಿನ ಗಂಧರ್ವರು! ಇಲ್ಲಿನ ಪರಿಧಿಯಿಂದ ಆಚೆ ಇರುವವರು, ಅಂದರೆ ನಾನು ನೀವು “ಶಾಪಗ್ರಸ್ತ ಕಿನ್ನರರು……!”

(ಮುಂದುವರೆಯುತ್ತದೆ…)