ಹತ್ತನೆ ತರಗತಿಗೆ ಬಂದಾಗ ಇಬ್ಬರೂ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಅವಕಾಶವಿತ್ತು. ಅದೂ ಬೋರ್ಡಿಂಗ್ ಶಾಲೆಯಲ್ಲಿ. ಇಬ್ಬರೆ ಕುಳಿತುಕೊಳ್ಳುವ ಬೆಂಚ್ ನಮಗೆ ಹೇಳಿ ಮಾಡಿಸಿದಂತಿತ್ತು.. ನಮಗೆ ಆಗೆಲ್ಲ ಇಂಕ್ ಪೆನ್ನಿನಲ್ಲೇ ನೋಟ್ಸ್ ಬರೆಸುತ್ತಿದ್ದರು. ಒಂದುವೇಳೆ ಇಂಕ್ ಖಾಲಿಯಾದರೆ ಒಬ್ಬರ ಪೆನ್ನಿನಿಂದ ಇನ್ನೊಬ್ಬರ ಪೆನ್ನಿಗೆ ಇಂಕ್ ಹಾಕಿಕೊಳ್ಳುತ್ತಿದ್ದೆವು. ಗೊರಟೆ ಹೂ, ದುಂಡುಮಲ್ಲಿಗೆ ಮುಡಿಯಲು ಪೈಪೋಟಿ ನಡೆಸುತ್ತಿದ್ದೆವು. ಸಮಯ ಸಿಕ್ಕಾಗ ಹ್ಯಾಂಡ್ ಕರ್ಚಿಫ್ ಹಿಡಿದು ಆಟವಾಡುವುದರ ಜೊತೆಗೆ ದಾರವನ್ನು ಬೆರಳಿಗೆ ಸಿಕ್ಕಿಸಿಕೊಂಡು ಬಗೆ ಬಗೆ ವಿನ್ಯಾಸ ಮಾಡಿ ಸಂತೋಷಿಸುತ್ತಿದ್ದೆವು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ
ಬೋರ್ಡಿಂಗ್ ಬದುಕು ಸವೆದಂತೆ ಹಿತವಾಗುತ್ತಲೆ ಇತ್ತು. ಆದರೆ ಅದನ್ನು ಅನುಭವಿಸಲು ಸಮಯವಿರಲಿಲ್ಲ. ಪ್ರಿಪರೇಟರಿ ಪರೀಕ್ಷೆ ಮುಖ್ಯ ಪರೀಕ್ಷೆ ವೇಳಾಪಟ್ಟಿ ಸಿಕ್ಕಿದ್ದವು. ನಮ್ಮ ತರಗತಿಯ ಬೋರ್ಡಿನ ಮೇಲೆ ಕೌಂಟ್ಡೌನ್ ಅಂಕಿಗಳು ಸರಿಯುತ್ತಿದ್ದವು. ಅಷ್ಟರಲ್ಲಿ ಕಿರಿಯ ವಿದ್ಯಾರ್ಥಿಗಳಿಂದ ಸೆಂಡ್ ಆಫ್ ಪಾರ್ಟಿಗೆ ಆಹ್ವಾನ ಬಂದಿತ್ತು. ಅವರು ಕರೆದರೂ ಸರಿ ಕರೆಯದೆ ಇದ್ದರೂ ಸರಿ ನಮ್ಮ ತಯಾರಿ ತಿಂಗಳುಗಳಿಂದಲೇ ನಡೆಯುತ್ತಿತ್ತು, ಡ್ರೆಸ್ ಸೆಲೆಕ್ಷನ್, ಸೀರೆ ಉಡಲೂ ಅವಕಾಶವಿತ್ತು. ಹಾಗಾಗಿ ಅದಕ್ಕೂ ತಯಾರಿಗಳು… ಮ್ಯಾಚಿಂಗ್ ಬ್ಯಾಂಗಲ್ಸ್, ಸ್ಲಿಪ್ಪರ್ ಹೀಗೆ….. ಆದರೆ ಚೂಡಿದಾರ್ ಹಾಕುವವರಿಗೆ ಅದ್ಯಾವುದೇ ಸಮಸ್ಯೆ ಇರಲಿಲ್ಲ. ನನ್ನ ಗೆಳತಿ ಜಯಶ್ರೀ ಕಪ್ಪು ಬಣ್ಣದ ಸೀರೆ ಉಡಲು ತಯಾರಿ ಮಾಡಿಕೊಂಡು ಉಟ್ಟು ಬಹಳ ಚೆನ್ನಾಗಿ ಕಾಣಿಸುತ್ತಿದ್ದಳು. ಅವಳ ಉದ್ದ ಅಲ್ಲ… ಬಹಳ ಉದ್ದ ಜಡೆ ಆ ಸೀರೆಗೆ ಮೆರುಗು ತಂದಿತ್ತು. ನಿಜಕ್ಕೂ ಕೊಡಗಿನ ವರ್ಷಕಾಲದ ಈ ಬರಹ ಪೇಲವ. ಪ್ರಾಣದ ಗೆಳತಿ ಇಲ್ಲದೆ ಈ ಕಂತು ಮುಂದುವರೆಯುತ್ತಿದೆ.
“ಆರೋಗ್ಯ ಚೆನ್ನಾಗಿ ನೋಡಿಕೊಳ್ಳಬೇಕಿತ್ತು”, “ಸ್ವಯ ಬೇಡ್ವ”, “ಬುದ್ಧಿ ಬೇಡ್ವ” ಬೇಜವಾಬ್ದಾರಿ! “ಈಗ ನಾರ್ಮಲ್ ಆಗುತ್ತಿದೆ” ಎಂದೆಲ್ಲಾ ಹೇಳಿದರೂ ನಮ್ಮ ಹೃದಯ ಯಥಾ ಸ್ಥಿತಿಗೆ ಮರಳುತ್ತಿದೆ ಎಂತಾದರೂ ನೆನಪು ಬಂದರೆ ಜಡವಾಗಿ ಕುಳಿತುಕೊಳ್ಳುವುದು ಬಿಟ್ಟು ಉಳಿದದ್ದೇನಿದೆ…. ಯಾರಾದರು ಬಂದು ಮಾತನಾಡಿಸುವವರೆಗೆ ಫೋನ್ ಸದ್ದು ಮಾಡುವವರೆಗೆ ಮೌನ ನಂತರ ಯಥಾಸ್ಥಿತಿ……
ಆತ್ಮೀಯತೆ ಎಂದರೇನು? ಎಂಬುದಕ್ಕೆ ಇನ್ನೊಂದು ಹೆಸರು ನನ್ನ ಬಾಲ್ಯದ ಗೆಳತಿ ಜಯಶ್ರೀ ಬಿ.ಡಿ. ನನ್ನ ಒಲುಮೆಯ ಗೆಳತಿ. “ಬಿ.ಡಿ”. ಈಕೆಯ ಇನಿಶಿಯಲ್. ವಾಸ್ತವದಲ್ಲಿ ನಾವಿಬ್ಬರೂ ಈಗ ಬಿಡಿ ಬಿಡಿಯಾಗಿಯೇ ಬೇರೆ ಬೇರೆ ಊರಲ್ಲಿ ಗಂಡ ಮಕ್ಕಳ ಜೊತೆ ಇದ್ದೆವು. ಕಾಲುಗಳಿಗೆ, ಕಾರುಗಳಿಗೆ ಇಬ್ಬರೂ ದೂರ ದೂರವಿದ್ದರೂ ಕಣ್ಣು ಕಿವಿಗಳಿಗೆ ಸದಾ ಹತ್ತಿರವೇ ಇದ್ದೆವು.
ನಾಲ್ಕನೆ ತರಗತಿಯಿಂದ ಹತ್ತನೆ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಕಲೆತೆವು, ಕಲಿತೆವು. ಹಾಡು, ಡ್ಯಾನ್ಸ್, ಇದ್ದಲ್ಲಿ ಜಯಶ್ರೀ ಯಾವಾಗಲೂ ಹಾಜರು! ಅದರಲ್ಲಿ ನಾನು ಸ್ವಲ್ಪ ಹಿಂದೆಯೇ..! ವಾರದಲ್ಲಿ ಎರಡು ದಿನ ನಮಗೆ ಮಾರಲ್ ಸೈನ್ಸ್ ತರಗತಿಗಳು ಇರುತ್ತಿದ್ದವು. ಆ ತರಗತಿಗಳಲ್ಲಿ ಹಾಡು ಹೇಳಿಸಿದರೂ ಹೇಳಿಸುತ್ತಾರೆಂದೇ ಜಯಶ್ರೀ ತಯಾರಿ ಮಾಡಿಕೊಂಡು ಇರುತ್ತಿದ್ದಳು. “ಸಂಪಿಗೆ ಮರದ ಹಸುರೆಲೆ ನಡುವೆ ಕೋಗಿಲೆ ಹಾಡಿತ್ತು” ಎಂಬ ಗೀತೆಯನ್ನು ಶುಶ್ರಾವ್ಯವಾಗಿ ನನ್ನನ್ನು ನೋಡಿಕೊಂಡೆ ಹಾಡುತ್ತಿದ್ದಳು. ಎಲ್ಲರೂ ಚಪ್ಪಾಳೆ ತಟ್ಟಿದರೆ ತುಂಬಾ ಸಂತೋಷವಾಗುತ್ತಿತ್ತು. ನಾನು ಭಾಷಣ, ಆಶುಭಾಷಣ, ಮಳೆಗಾಲದ ಬ್ರಾಡ್ಕಾಸ್ಟ್ ಕಾರ್ಯಕ್ರಮಗಳಲ್ಲಿ ಮಾತನಾಡುವಾಗ ಅವಳ ಮುಖ ನೋಡಿ ಮಾತನಾಡುತ್ತಿದ್ದೆ. ಏಳನೆ ತರಗತಿ ಮತ್ತು ಹತ್ತನೆ ತರಗತಿಯಲ್ಲಿ ಒಟ್ಟಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಸದಾವಕಾಶ ಇತ್ತು. ಆದರೆ ಎಂಟು ಹಾಗು ಒಂಬತ್ತನೆ ತರಗತಿಯಲ್ಲಿ ಬೇರೆ ಬೇರೆ ಸೆಕ್ಷೆನ್ ಆದಾಗ ಪರಸ್ಪರ ನಾವಿಬ್ಬರು ಭೇಟಿಯಾಗಲು ಸಾಹಸ ಮಾಡುತ್ತಿದ್ದೆವು. ಕಂಬೈಂಡ್ ಕ್ಲಾಸ್ ಯಾವಾಗ ಮಾಡುತ್ತಾರೆ ಎಂದು ಕಾಯುತ್ತಿದ್ದೆವು. ಆಗಲಾದರೂ ಜೊತೆಗಿರಬೇಕೆಂದು, ಒಟ್ಟಿಗೆ ಕುಳಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವು. ಆದರೆ ಕೆಲ ಗೆಳತಿಯರು ಬೇಕಂತಲೆ ಅಡ್ಡಿ ಮಾಡುತ್ತಿದ್ದರು.
ಹತ್ತನೆ ತರಗತಿಗೆ ಬಂದಾಗ ಇಬ್ಬರೂ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುವ ಅವಕಾಶವಿತ್ತು. ಅದೂ ಬೋರ್ಡಿಂಗ್ ಶಾಲೆಯಲ್ಲಿ. ಇಬ್ಬರೆ ಕುಳಿತುಕೊಳ್ಳುವ ಬೆಂಚ್ ನಮಗೆ ಹೇಳಿ ಮಾಡಿಸಿದಂತಿತ್ತು.. ನಮಗೆ ಆಗೆಲ್ಲ ಇಂಕ್ ಪೆನ್ನಿನಲ್ಲೇ ನೋಟ್ಸ್ ಬರೆಸುತ್ತಿದ್ದರು. ಒಂದುವೇಳೆ ಇಂಕ್ ಖಾಲಿಯಾದರೆ ಒಬ್ಬರ ಪೆನ್ನಿನಿಂದ ಇನ್ನೊಬ್ಬರ ಪೆನ್ನಿಗೆ ಇಂಕ್ ಹಾಕಿಕೊಳ್ಳುತ್ತಿದ್ದೆವು. ಗೊರಟೆ ಹೂ, ದುಂಡುಮಲ್ಲಿಗೆ ಮುಡಿಯಲು ಪೈಪೋಟಿ ನಡೆಸುತ್ತಿದ್ದೆವು. ಸಮಯ ಸಿಕ್ಕಾಗ ಹ್ಯಾಂಡ್ ಕರ್ಚಿಫ್ ಹಿಡಿದು ಆಟವಾಡುವುದರ ಜೊತೆಗೆ ದಾರವನ್ನು ಬೆರಳಿಗೆ ಸಿಕ್ಕಿಸಿಕೊಂಡು ಬಗೆ ಬಗೆ ವಿನ್ಯಾಸ ಮಾಡಿ ಸಂತೋಷಿಸುತ್ತಿದ್ದೆವು. ಡ್ರಾಯಿಂಗ್ ಮತ್ತು ಪೇಂಟಿಂಗ್‌ನಲ್ಲಿ ನಾವಿಬ್ಬರೂ ವೀಕ್. ನಾವು ಬರೆದ ಸೊಟ್ಟ ಮೂತಿಯ ವಿಚಿತ್ರ ಚಿತ್ರಗಳೆ ನಮಗೆ ಮನರಂಜನೆ ನೀಡುತ್ತಿದ್ದವು. ಆಗಂತೂ ಬಹಳ ಮಜಾ; ನಾವೇನು ಮಾತನಾಡದೆ ಇದ್ದರೂ ಮಾತನಾಡುತ್ತೀರ ಎಂದು ಹೇಳುವವರಿದ್ದರು. ಇಬ್ಬರದೂ ಉದ್ದ ಜಡೆಯೇ ಆದರೆ ಯಾರ ತಲೆಕೂದಲು ಉದ್ದವೆಂದು ಕೂದಲನ್ನು ಡೆಸ್ಕ್ ಮೇಲೆ ಚಾಚಿ ಅಳತೆ ಮಾಡುತ್ತಿದ್ದೆವು, ಕೈಬೆರಳನ್ನು ಡೆಸ್ಕ್ ಮೇಲಿಟ್ಟು ಯಾರ ಕೈ ತುಂಬಾ ಬಿಳಿಯಿದೆ, ನೇಲ್ ಪಾಲೀಶ್, ಮೆಹೆಂದಿ ಎಲ್ಲಾ ಹೇಗಿದೆ ಎಂದು ನೋಡುತ್ತಿದ್ದೆವು. ಈಗ ನೆನಪಿಸಿಕೊಂಡರೆ ಸಿಲ್ಲಿ ಎನ್ನಿಸಿದರೂ ಆಗಂತೂ ಚಿಕ್ಕ ಚಿಕ್ಕ ವಿಷಯಗಳಲ್ಲಿ ತುಂಬಾ ಸಂಭ್ರಮಿಸುತ್ತಿದ್ದೆವು. ಆಟ, ಊಟ, ತಿಂಡಿ, ಓದು ಎಲ್ಲದರಲ್ಲೂ ಒಟ್ಟಿಗೇ ಇರುತ್ತಿದ್ದೆವು. ಈ ಬರೆಹವನ್ನು ಬರೆಯುವಾಗಲೂ “ಇನ್ನೊಮ್ಮೆ ಆ ಶಾಲಾ ದಿನಗಳು ಬರಬಾರದೆ?” ಎನ್ನಿಸುತ್ತಿದೆ. ಅದಷ್ಟೇ ದಿನಗಳು ನಮ್ಮನ್ನು ಒಟ್ಟಿಗೆ ಇರಿಸಿದ್ದು. ನಂತರದಲ್ಲಿ ಅಧ್ಯಯನ ನಿಮಿತ್ತ ಬೇರೆ ಬೇರೆ ಊರು ಸೇರಬೇಕಾಯಿತು.
ಕಾರಣಾಂತರಗಳಿಂದ ಅನೇಕ ವರ್ಷಗಳು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಕೆಲ ವರ್ಷಗಳ ಹಿಂದೆ ನಮ್ಮೂರು ಮಡಿಕೇರಿಯ ದಸರೆಯಲ್ಲಿ ಆಕಸ್ಮಿಕವಾಗಿ ಭೇಟಿಯಾಗಿ ಫೋನ್ ನಂಬರ್ ವಿನಿಮಯ ಮಾಡಿಕೊಂಡೆವು. ಸ್ಮಾರ್ಟ್ ಫೋನ್ ಬಂದ ನಂತರ ಇಬ್ಬರೂ ಇನ್ನೂ ಇನ್ನೂ ಹತ್ತಿರವಾದೆವು. ನಮ್ಮೆತ್ತರಕ್ಕೆ ಬೆಳೆದ ಮಕ್ಕಳು ನಮ್ಮಿಬ್ಬರಿಗಿದ್ದರೂ ನಾವು ಬಾಲ್ಯದ ಗೆಳತಿಯರಂತೆ ಅದೇ ವರಸೆಯಲ್ಲಿ ಮಾತನಾಡಿಕೊಳ್ಳುತ್ತಿದ್ದೆವು. ಅದನ್ನು ಕೇಳಿಸಿಕೊಂಡ ನಮ್ಮಿಬ್ಬರ ಮಕ್ಕಳೂ ನಮ್ಮನ್ನು ಇನ್ನಿಲ್ಲದಂದೆ ಛೇಡಿಸುತ್ತಿದ್ದರು. ನನ್ನಜ್ಜಿ ಮಾಡುತ್ತಿದ್ದ ರಸಂ ಜಯಶ್ರೀಗೆ ಬಹಳ ಇಷ್ಟ. ಅವರ ಮನೆಯ ಗೋಕುಲಾಷ್ಟಮಿ ತಿನಿಸುಗಳು ನನಗೆ ಬಹಳ ಇಷ್ಟವಾಗುತ್ತಿದ್ದವು. ಜೊತೆಗೆ ನೆಲ್ಲಿಕಾಯಿ, ಬಟರ್ ಫ್ರೂಟನ್ನು ಹೆಚ್ಚಾಗಿ ಬಚ್ಚಿಟ್ಟುಕೊಂಡು ತಿನ್ನುತ್ತಿದ್ದೆವು. ಬೇರೆ ಯಾರು ಏನು ತಿನ್ನಲು ಕೊಟ್ಟರು ನಾವು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದೆವು. ಹಾಗಾಗಿ ನಮಗೆ ಯಾರೂ ಏನೂ ತಿನ್ನಲು ಕೊಡುತ್ತಿರಲಿಲ್ಲ ನಮಗೂ ಅದೇ ಬೇಕಿತ್ತು!
ದೇಹ ಬೇರೆಯಾದರೂ ನಾವಿಬ್ಬರೂ ಒಂದೇ ಪ್ರಾಣವಿದ್ದಂತೆ ಇದ್ದು, ಒಬ್ಬರಿಗೊಬ್ಬರು ಆತ್ಮ ಸಖಿಯರಾಗಿದ್ದೆವು. ಕಳೆದ ವರ್ಷ ಅವಳ ಹುಟ್ಟು ಹಬ್ಬದ ದಿನದಂದೆ ಆಕೆ ಇನ್ನಿಲ್ಲವಾಗಿದ್ದು ಮನಸ್ಸಿನ ಮಾಯದ ಗಾಯವಾಗಿದೆ. ಹೋಗಿ ಬಾ ಗೆಳತಿ ಎನ್ನಲೇ? ಇನ್ನೂ ಇರಬೇಕಿತ್ತು ಎನ್ನಲೇ? ಏಕೆ ಹೊರಟೆ ಎನ್ನಲೆ? ಹೀಗೆ ಅನೇಕ ಪ್ರಶ್ನೆಗಳು. ಪೂತ್ತೂರಿನ ಬಳಿ ಕಾವು ಎಂಬಲ್ಲಿ ಹೊಸ ಮನೆ ಮಾಡಿ ಒಕ್ಕಲು ಸೇರಿದ ಕೆಲ ದಿನಗಳಲ್ಲಿ ಕೊರೊನ ಬಂದಿತು. ಅದು ಸಹಜ ಸ್ಥಿತಿಗೆ ಬರುವಷ್ಟರಲ್ಲಿ ನಾನು ವ್ಯಸ್ಥವಾದೆ, ಅವಳಿಲ್ಲದ ಅವಳದೆ ಮನೆಯಲ್ಲಿ ಆಕೆಯನ್ನು ಜೀವಂತ ನೋಡಲಾಗದ ದುರಾದೃಷ್ಟವಂತೆ ನಾನಾಗಿದ್ದೆ. ಯಾವ ಸ್ನೇಹಿತೆಯರಿಗೂ ಹೀಗಾಗಬಾರದು ಎಂಬ ಕೋರಿಕೆಯನ್ನು ಸದಾ ಭಗವಂತನಲ್ಲಿ ಇರಿಸುವೆ.
ಅರ್ಪಣ
ಹಂಬಲ ತೊರೆದ ಹೊಂಬಲ ನಂಬಿದ್ದ ಪ್ರಣತಿ ನೀ…..
ನಿನ್ನೀ ಬದುಕಿನ ಕೈಸವೆಯಾಣಕೆ ಒಕ್ಕಣೆ ಬೇರಿಹುದೆ
ಹಿಗ್ಗಲು ಮುಗ್ಗಲು ಜಗ್ಗಲುಗಳೆ ಕಟ್ಟೆಯ ಮಾತುಗಳಾದವು
ಕುಬ್ಜರು ಬಾಯ್ನವೆ ತೀರುವವರೆಗು ಮರಮರಿಸುವರು ನಿನ್ನನೆ
ಹಾಲುಕಂದಗಳ ಬೆಳಕು ಕಸಿದಂತಾಯ್ತಲ್ಲ
ಎಚ್ಚರ ಜಾರಿ ಇಹವ ನೀತೊರೆಯೆ
ಒರಲುತಿಹವು ನಿನ್ನಕಂಗಳ ಕಂದಗಳು……
ನಿನ್ನಕ್ಕರೆಯ ಸವಿಯಡುಗೆ, ನುಡಿಯುಡುಗೆ
ಇನ್ನೂ ಇನ್ನೂ ಬೇಕಿತ್ತಲ್ಲ!
ಅಕಾಲ, ಆಕಾಲ ನಿನೆಹುಗಳು ಈ ಕಾಲಕೂ ಕಿಲಕಿಲುಸುತಿವೆ
ನೆನಹುಗಳು ಕಾಲ್ಗಳ ಮುನ್ನಡೆಸುವಂತಿವೆ……
ಹೋಗಲಾರವು ಹಿಂದ ಹಿಂದಕ್ಕೆ ಸರಿಯುತ್ತಿವೆ..
ಬೇಕಿತ್ತು ಗಾಳಿ ದೀಪಕ್ಕೆ
ಗಾಳಿ ಬಂತೇ? ಬಂತೇ ಗಾಳಿ? ಪ್ರಕೋಪಕ್ಕೆ
ಬೀಸಿತಲ್ಲ ಬಿರುಗಾಳಿ ನಿನ್ನ ಹೊಂಬಲವನು ಉರುಳಿಸುವಂದದಿ
ಹಂಬಲ ತೊರೆದೆಯೇಕೆ? ನೀ ಪ್ರಣತಿ!
ಸರಿಸಿದೆ ನೀ ಭಾವ ದರ್ಪಣ
ಇನ್ನೇನಿದೆ? ಬಲು ಇನ್ನೇನಿದೆ? ನೆನಹೆ ನಿನಗರ್ಪಣ
ಎನ್ನುವ ಕವಿತೆಯ ಮೂಲಕ ಈ ಬರಹಕ್ಕೆ ಮುಕ್ತಾಯ ಹೇಳಬೇಕೆಂದಿದ್ದೆ ಆದರೆ ಇನ್ನೂ ಬದುಕಿರುವುದು ಬದುಕಿಗಾಗಿ ಎಂದು ಹೇಳುವುದಿದೆ.
ಭೂಮಿಯಲ್ಲಿ ಬದುಕಲು ಅವಕಾಶವಿರುವ ಮನುಷ್ಯ ನಿಜಕ್ಕೂ ಅದೃಷ್ಟವಂತ. ಬದುಕು ನಾವಂದುಕೊಂಡಷ್ಟು ಕಷ್ಟವಲ್ಲ. ಇಲ್ಲಿ ಕಷ್ಟಕೋಟಲೆಗಳೆ ಇಲ್ಲವೆಂದಲ್ಲ. ಅದರ ಜೊತೆ ಸುಖದ ತನಿರಸವೂ ಇದೆ. ಬದುಕಿನ ರೀತಿ ಬಳಕೆಯಾಗುವ ಯಾವುದೇ ಭಾಷೆಯಲ್ಲೂ ಅಂರ್ತಗತವಾಗಿರುತ್ತದೆ ಎಂಬುದಕ್ಕೆ ಆಯಾ ಭಾಷೆಯ ಜೋಡುನುಡಿಗಳು, ಗಾದೆ, ನುಡಿಗಟ್ಟುಗಳು, ಒಡಪುಗಳೆ ಸಾಕ್ಷಿ. ಸುಖ-ದುಃಖ, ಹಗಲು-ರಾತ್ರಿ, ಹುಟ್ಟು-ಸಾವು, ಕಪ್ಪು-ಬಿಳುಪು, ಸಿಹಿ-ಕಹಿ, ನಗು-ಅಳು ಮುಂತಾದ ಪರಸ್ಪರ ವಿರುದ್ಧಾರ್ಥ ಇರುವ ಜೋಡುನುಡಿಗಳ ಸಮೂಹವೇ ಸಾಮಾಜಿಕ ಬದುಕಿನಲ್ಲಿ ವೈರುಧ್ಯಗಳು ಇದ್ದೇಇರುತ್ತವೆ ಎಂಬುದನ್ನು ಸಂಕೇತಿಸುತ್ತದೆ.
ಈ ಕೌಟುಂಬಿಕ ವ್ಯವಸ್ಥೆಯಲ್ಲಿ, ಸಮಾಜದಲ್ಲಿ ಅಥವಾ ತಾವಾರಿಸಿಕೊಂಡ ಕ್ಷೇತ್ರದಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಿಧವಾದ ಐಡೆಂಟಿಟಿ ಇರುತ್ತದೆ. ಇದೊಂದು ಕಳಚಲಾರದ ಕವಚ ಎಂದೇ ಕರೆಯಬಹುದು ನೆರಳಿನಂತೆ ಬಿಸಿಲಂತೆ ನಮ್ಮನ್ನು ಹಿಂಬಾಲಿಸುತ್ತಿರುತ್ತದೆ. ಹೀಗಿದ್ದ ಮೇಲೆ ನಾವು ನಮಗಾಗಿ ಬದುಕುತ್ತೇವೆ ಎನ್ನುವುದು ತಪ್ಪು. ನಾವು ನಮ್ಮ ತಂದೆ ತಾಯಿಯನ್ನು ಬಂಧು-ಬಾಂಧವರನ್ನು ಸ್ನೇಹಿತರನ್ನು, ನೆರೆಹೊರೆಯವರನ್ನು ಅಷ್ಟೇ ಏಕೆ ಹಾಲು ಮಾರುವವರಿಂದ ದರ್ಜಿಯಿಂದ, ವಾಟರ್‌ಮ್ಯಾನ್ ಮೊದಲಾಗಿ ಎಲ್ಲರನ್ನು ಅವಲಂಬಿಸಿರುತ್ತೇವೆ. ಕರೆಂಟ್ ಹತ್ತು ನಿಮಿಷ ಬಾರದೆ ಇದ್ದರೆ ಗೂಗಲ್‌ನಲ್ಲಿಯಾದರು ಫೋನ್ ನಂಬರು ತಡಕಾಡಿ ಇಲಾಖೆಯವರಿಗೆ ಕರೆ ಮಾಡುತ್ತೇವೆ ಎಂದರೆ ನಾವು ಅವರನ್ನು ಅವಲಂಬಿಸಿದ್ದೇವೆ ಎಂದಾಯಿತಲ್ಲ! ಪ್ರಕೃತಿಯಲ್ಲಿ ಬದುಕುವ ಜೀವರಾಶಿಗಳೆಲ್ಲಾ ಒಂದಿಲ್ಲೊಂದು ರೀತಿ ಒಂದಕ್ಕೊಂದು ಸಂಬಂಧಿಗಳೇ ಸರಿ!
ನಮ್ಮ ಶರೀರಕ್ಕೆ ಹೆಸರೊಂದು ಇದೆ; ಅದು ನಮ್ಮದೆ ಅಂದ ಮಾತ್ರಕ್ಕೆ ನಾವು ನಮಗನ್ನಿಸಿದ ಹಾಗೆ ನಡೆದುಕೊಳ್ಳಲು ಸಾಧ್ಯವಿಲ್ಲ. ಜವಾಬ್ದಾರಿ -ಉತ್ತರದಾಯಿತ್ವ ಬೇಕಾಗುತ್ತದೆ. ಹುಟ್ಟಿದವರು ಸಾಯಲೇಬೇಕು ನಿಜ ಹಾಗಂತ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ. ವ್ಯಕ್ತಿಯೊಬ್ಬ ಜೀವಕ್ಕೆ ಜನ್ಮ ಕೊಡಬಹುದೆ ವಿನಃ ಅದನ್ನ ಕೊಲ್ಲಲು ಹಕ್ಕಿಲ್ಲ. ಇನ್ನು ಬದುಕಲು ಸಾಧ್ಯವಿಲ್ಲವೆಂದರೆ ದಯಾಮರಣಕ್ಕೆ ಅರ್ಜಿಸಲ್ಲಿಸುವವರು ಇದ್ದಾರೆ. ಇನ್ನು ಕೆಲವರು ದುಡುಕಿನ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ. ಇದು ಅಪರಾಧ. ಇತ್ತೀಚೆಗೆ ಮನುಷ್ಯನ ಆಯುಷ್ಯದ ಮಿತಿಯೇ ಕ್ಷೀಣಿಸುತ್ತಿದೆ. ಇಂಥದರಲ್ಲೂ ಮನಸ್ಸು ಮಾಗಿ ಮೈ ಸೋತರೂ ಜೀವನೋತ್ಸಾಹ ಹೊಂದಿರುವ ಅದೆಷ್ಟು ಜನರಿಲ್ಲ! ಹೀಗಿರುವಾಗ ನಮ್ಮ ಸುತ್ತವೇ ನಾವೆ ಅನಾಮಿಕ ಕೋಟೆ ಕಟ್ಟಿಕೊಂಡು ಕರ್ತವ್ಯದ ಹೊರೆಯನ್ನು ಅರ್ಧಕ್ಕೆ ನಿಲ್ಲಿಸುವುದು ಸರಿಯಲ್ಲ. ಕೈಮೀರಿ ಹೋದರೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ಸರಿಹೋಗುವುದನ್ನಾದರೂ ಸರಿ ಮಾಡಿಕೊಳ್ಳಬಹುದು.
ಮನುಷ್ಯನಿಗೆ ದಯೆ, ತಾಳ್ಮೆ, ಕ್ಷಮಾ, ಸಹಿಷ್ಣುತೆಯ ಗುಣಗಳಿರಬೇಕು. ಇವಿದ್ದಾಗ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಇನ್ನು ಕೆಲವೊಮ್ಮೆ ಕುಟುಂಬಕ್ಕಾಗಿ ನಾನಿದ್ದೇನೆ ಎಂದು ಸ್ವಂತ ಆರೋಗ್ಯದ ಕಡೆ ಅನಾದರವಹಿಸುವುದೂ ತಪ್ಪು. ಕುಟುಂಬದವರು ಎಷ್ಟೇ ಒತ್ತಡದ ಕೆಲಸ ಮಾಡುತ್ತಿದ್ದರೂ ಅವಲಂಬಿತರನ್ನು ನಿರ್ಲಕ್ಷಿಸುವ ಮಟ್ಟಕ್ಕೆ ಇರುವುದಿಲ್ಲ. ಮನೆಯದ್ದು ಮನಸ್ಸಿನದ್ದು ಎನ್ನುವ ಕಷ್ಟಗಳು ಇದ್ದೇ ಇರುತ್ತವೆ. ಇದನ್ನೆ ಚಿಂತೆ ಎನ್ನುವುದು. ಮನುಷ್ಯನಿಗೆ ಮಾತನಾಡುವ ಶಕ್ತಿ ಇದೆ ಎಂದಾದಮೇಲೆ ಅಂತರ್ಮುಖಿಯಾಗಿ ಇರುವುದಕ್ಕಿಂತ ಆತ್ಮೀಯರಲ್ಲಿ ಹೇಳಿಕೊಳ್ಳಬೇಕಾಗುತ್ತದೆ. ಸ್ವಹಂಗೆ ಮಾನ್ಯತೆ ಕೊಟ್ಟು ತನ್ನಲ್ಲೆ ಉಳಿಸಿಕೊಂಡರೆ ಅದು ಕೆಟ್ಟ ಹಠವೇ ಸರಿ!
ಪರಿಹಾರವಿಲ್ಲದ ಯಾವ ಸಮಸ್ಯೆಗಳು ಇಲ್ಲ! ಸಮಸ್ಯೆಗಳನ್ನು ಬಗೆಹರಿಸಿಕೊಂಡು ಸಮಸ್ಯೆಗಳಿಗೆ ಸಮಸ್ಯೆಯಾಗಿ ಕಾಡುವುದರಲ್ಲಿ ಬದುಕಿನ ಯಶಸ್ಸು ಇದೆ. ನಮ್ಮ ಮನಸ್ಸನ್ನು ಸಮಸ್ಯೆಯ ಕಡೆಗೆ ಹರಿಯಬಿಟ್ಟರೆ ಕೆಟ್ಟವರು ನಾವೆ. ನಾವೆ ಅನ್ನುವುದಕ್ಕಿಂತ ನಮ್ಮನ್ನು ಅವಲಂಬಿಸಿದ್ದ ವ್ಯಕ್ತಿಗಳು ಆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೈಹಿಕ ಹಾಗು ಮಾನಸಿಕ ಸಮಸ್ಯೆಗಳನ್ನು ಯಾರಲ್ಲಿಯೂ ಹೇಳಿಕೊಳ್ಳದೆ ಇದ್ದು ಬಿಡುವುದು ಮಂದಗತಿಯ ಆತ್ಮಹತ್ಯೆಗೆ ಸಮ. ನಮ್ಮನ್ನು ಅವಲಂಬಿಸಿರುವ ಜೀವಗಳಿಗೂ ನಮ್ಮ ಮೇಲೆ ಹಕ್ಕು ಇರುತ್ತದೆ. ಇದೊಂದು ಜವಾಬ್ದಾರಿ ಅಲ್ಲವೆ! ಇದರಿಂದ ವಿಮುಖವಾಗುವುದು ಸರಿ ಅಲ್ಲ. ಹೀಗಾದಾಗ ಅನುಕಂಪವಲ್ಲ ಈ ರೀತಿಯ ವರ್ತನೆಗೆ ತೀವ್ರ ಟೀಕೆಗಳು ಎದುರಾಗುತ್ತವೆ. ತಪ್ಪು ಮಾಡದೆ ಇದ್ದವರು ಪೇಚಿಗೆ ಸಿಲುಕಬೇಕಾಗುತ್ತವೆ. ಇರುವವರೆಗೂ ನಾನಂದುಕೊಂಡಂತೆಯೇ ಬದುಕುವೆ ಎನ್ನುವುದು ತಪ್ಪಿನ ನಿರ್ಧಾರ. ಇರುವೆಯಿಂದ ಆನೆಯವರೆಗೆ ಅವುಗಳ ಹೋರಾಟ ಜೀವಿಸುವುದಕ್ಕಾಗಿಯೇ ಇರುತ್ತದೆ. ಮನುಷ್ಯ ಮಾತ್ರ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು. ‘ಮಾನವ ಜನ್ಮವಿದು ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ” ಎಂದು ದಾಸರು ಹೇಳಿದ ಮಾತುಗಳು ಅಕ್ಷರರೂಪಿ ಅಷ್ಟೇ ಆಗಿದೆ. ಅದರಾಚೆಗೂ ಮನನ ಮಾಡಿಕೊಂಡರೆ ಬದುಕು ಸುಂದರ. ಕ್ಷಮೆ ಮತ್ತು ನಂಬಿಕೆ ಬದುಕಿನ ಹೆದ್ದಾರಿಗಳು ಅದನ್ನು ಬಿಟ್ಟು ಸ್ವಅಹಂ, ಎಲ್ಲವೂ ಅಪರಿಹಾರ್ಯ ಎಂಬ ತಿಳುವಳಿಕೆ, ಇದೇನು ಮಹಾ ಅನ್ನುವ ದಾರಿಗೆ ಹೊರಳಬಾರದು. ಬದುಕಿನಲ್ಲಿ ಏನೇನು ಬರುತ್ತದೆಯೋ ಎಲ್ಲವನ್ನೂ ಸ್ವೀಕರಿಸಬೇಕು. ಬದುಕು ಒಂದು ನದಿ ಇದ್ದಂತೆ. ಅನೇಕ ಸೆಳಹುಗಳು ಇರುತ್ತವೆ ಹೇಗೆ ಬರುತ್ತದೆಯೋ ಹಾಗೆ ಬದುಕಿಬಿಡಬೇಕು. ಬದುಕನ್ನು ಬಿಟ್ಟುಬಿಬಾರದು. ಜೀವನ ಪಜೀತಿ ಅನ್ನುವ ತೀರ್ಮಾನ ಬೇಕಿಲ್ಲ! ಬದಲಿಗೆ ಜೀವನ ಪ್ರೀತಿ ಇರಬೇಕು! ಸೆಂಡ್ ಆಫ್ ನೆನಪುಗಳು ಗೆಳತಿಯ ನೆನಪಿನಲ್ಲಿ ಮರೆಯಾದವು….
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.
Very Nicely written suma veena avre! Agree with your understanding of life!
ಬದುಕಿನಲ್ಲಿ ಬರುವ ಅನೇಕ ಸಮಸ್ಯೆಗಳನ್ನು ಯಶಸ್ವೀಯಾಗಿ ಎದುರಿಸಿ, ಈ ಬದುಕನ್ನು ನಮಗೋಸ್ಕರ ಹಾಗೂ ನಮ್ಮ ಅವಲಂಬಿತರಿಗೋಸ್ಕರ ಸುಂದರಗೋಳಿಸಿಕೊಳ್ಳಲು ಪ್ರೆರೇಪಿಸುವ ಲೇಖನ. ತಮ್ಮ ಬಾಲ್ಯದ ಗೆಳತಿಯ ಒಡನಾಟದ ವಿಷಯ ಖುಷಿ ಕೊಟ್ಟಿತು ಆದರೆ ಅವರ ಅಗಲಿಕೆಯ ವಿಷಯ ತಿಳಿದು ಮನಸ್ಸಿಗೆ ನೋವಾಯಿತು.