ಇದಕ್ಕೆಲ್ಲ ಜೀವನಶೈಲಿ ಬದಲಿಸಿಕೊಳ್ಳಿ ಎಂಬ ರೆಡಿಮೇಡ್ ಹಾಗು ಸುಲಭ ಉಪದೇಶವೊಂದು ಫಿಟ್ನೆಸ್ ಗುರುಗಳು ಎಸೆಯುತ್ತಾರೆ. ಆದರೆ ಅದನ್ನು ಎಲ್ಲಿಂದ ಶುರು ಮಾಡಬೇಕೆಂದು ಕೇಳಿದರೆ ಸ್ವತಃ ಅವರಿಗೇ ಗೊತ್ತಿರುವುದಿಲ್ಲ. ಮನುಷ್ಯ ಅಭಿವೃದ್ಧಿ ಅಂದುಕೊಳ್ಳುವುದೆಲ್ಲ ಇನ್ನೊಂದು ಪಾತಳಿಯಿಂದ ನೋಡಿದರೆ ಅವನ ಅವನತಿಯೂ ಕಾಣುತ್ತದೆ. ಇದೊಂಥರ ಚಂದ್ರಶೇಖರ ಕಂಬಾರರ ಕವಿತೆ ಆ ಮರ ಈ ಮರ ಕವಿತೆ ಇದ್ದಂತೆ, ಒಂದು ನದಿಯ ದಂಡೆಯ ಮೇಲಿನ ನಿಜದ ಮರ ಮತ್ತು ನೀರಿನಲ್ಲಿ ಮೂಡಿದ ಅದರ ಬಿಂಬದ ಮರ. ತೆರೆ ಎದ್ದಾಗ ಒಂದು ನಗುತ್ತದೆ ಇನ್ನೊಂದು ನಡಗುತ್ತದೆ. ನೀನೊಂದು ಮರ ಹತ್ತಿದರೆ ಇನ್ನೊಂದರಲ್ಲಿ ಇಳಿಯುತ್ತಿ.
ಡಾ. ಲಕ್ಷ್ಮಣ ವಿ.ಎ. ಅಂಕಣ
1998 ರ ಆಸುಪಾಸಿನಲ್ಲಿ ಬಿಡುಗಡೆಯಾದ ಟೈಟಾನಿಕ್ ಎಂಬ ಇಂಗ್ಲೀಷ್ ಚಲನಚಿತ್ರ ಅದುವರೆಗಿನ ಅಷ್ಟೂ ಬಾಕ್ಸ್ ಆಫೀಸಿನ ಸಿನೇಮಾ ದಾಖಲೆಗಳನ್ನು ಮುರಿದು ಇಂದಿಗೂ ಜನಪ್ರಿಯ ಸಿನೇಮಾ ಎನ್ನಿಸಲು ಕಾರಣವೇನೆಂದರೆ ಈ ಭೂಮಿ ಸೃಷ್ಟಿಯಾದಾಗಿನಿಂದ ಇದುವರೆಗೆ ಮನುಕುಲದ ಮೇಲೆ ನಡೆದ ಅವಘಡಗಳ ಸಂದರ್ಭಗಳಲ್ಲಿ ಮನುಷ್ಯನ ನಡುವಳಿಕೆಗೊಂದು ಪ್ರಾತಿನಿಧಿಕ ಪ್ರತಿಮೆಯಾಗಿ ನಿಲ್ಲುತ್ತದೆ. ರೋಜ್ ಳ ಚೆಲುವು, ಉಸಿರುಗಟ್ಟಿಸುವ ಶ್ರೀಮಂತರ ಕಟ್ಟಳೆಗಳ ಬಂಗಾರದ ಪಂಜರದೊಳಗೇ ಬಂಧಿಯಾಗಿರುವ ಅವಳು ಜ್ಯಾಕ್ ನಂತಹ ಕೆಳವರ್ಗದ ಪುಟಿಯುವ ಉತ್ಸಾಹದ ಚಿಲುಮೆಯೊಡನೆ ಪ್ರೀತಿಯಾಗಿದ್ದು ಸಹಜವೇ ಆಗುತ್ತದೆ.
ಜಿಗುಪ್ಸೆಗೊಂಡ ರೋಜಳು ಆತ್ಮಹತ್ಯೆ ಮಾಡುವುದನ್ನು ತಡೆಯುವ ದೃಶ್ಯ ಹಾಗು ಶ್ರೀಮಂತ ಮನೆತನದ ಹುಡುಗಿಯೊಬ್ಬಳು ನಂತರ ಬಡವನನ್ನು ಪ್ರೀತಿಸುವುದು ನಮ್ಮ ಭಾರತದೇಶದ ಸಿನೇಮಾ ಸಂಸ್ಕೃತಿಗಳಲ್ಲಿ ಹಾಸು ಹೊಕ್ಕಾಗಿದ್ದರೂ ನಂತರ ಉತ್ತರಾರ್ಧದ ಸಿನೇಮಾ ನಮ್ಮನ್ನು ತುದಿಗಾಲಿನಲ್ಲಿ ಕುಳ್ಳಿರಿಸಿ ಮುಳುಗುತ್ತಿರುವುದು ಕೇವಲ ಟೈಟಾನಿಕ್ ಅಲ್ಲ ಇದುವರೆಗಿನ ನಂಬಿದ ನಮ್ಮ ಅಸ್ತಿತ್ವಗಳೇ ಅಲುಗಾಡುವಂತೆ ಮನುಷ್ಯನ ಲಾಲಸೆ, ಸಣ್ಣತನ, ಉದಾರತೆ, ಸಿಟ್ಟು, ಚೌಕಾಶಿ ಮತ್ತು ಇದನ್ನೆಲ್ಲ ತೀವ್ರವಾಗಿ ಅನುಭವಕ್ಕೆ ತಾಕುವಂತೆ ಘಟಿಸಿ ಹೋಗುವ ಇವರ ನಿರ್ವ್ಯಾಜ ಪ್ರೇಮ ಬದುಕುವ ಹಂಬಲವನ್ನು ದೇವರೇ ಹೇಗಾದರೂ ಮಾಡಿ ಈ ಪ್ರೀತಿಯ ಜೋಡಿಯನ್ನು ಗೆಲ್ಲಿಸುವಂತೆ ಮನದಲ್ಲಿ ಪ್ರಾರ್ಥಿಸುವುದು ನಮ್ಮ ಬದುಕಿನೆಡೆಗಿನ ನಮಗಿರುವ ಅತೀವ ಪ್ರೀತಿಯನ್ನು ದಾಖಲಿಸುತ್ತದೆ.
ಭಾರತದಲ್ಲಿ ಕೊರೋನಾ ಕಾಲಿಟ್ಟು ಲಾಕ್ ಡೌನ್ ಘೋಷಣೆಯಾದಾಗ ಭಾರತದಲ್ಲಿ ಕೊರೋನ ಬಾಧಿತರ ಸಂಖ್ಯೆ ಕೇವಲ ಮುನ್ನೂರರ ಆಸುಪಾಸಿನಲ್ಲಿತ್ತು. ಆಗ ಎಲ್ಲರ ಕಣ್ಣುಗಳಲ್ಲೂ ಆತಂಕ, ಅನಿಶ್ಚಿತತೆ… ಈಗ ಈ ಸಂಖ್ಯೆ ಮೂರುಲಕ್ಷ ದಾಟಿ ಬಂದು ಅದರ ಜೊತೆಗೆ ಬದುಕುವುದನ್ನು ರೂಢಿಸಿಕೊಳ್ಳುತ್ತಿದ್ದೇವೆ. ಅಲ್ಲಿಂದ ಇಲ್ಲಿಯತನಕ ಅನೇಕ ಅಗ್ನಿದಿವ್ಯಗಳನ್ನು ಹಾಯ್ದು ಬಂದಾಗಿದೆ. ಮೊದಲು ಈ ಕಾಯಿಲೆ ನಮಗೆ ಬರುವುದಿಲ್ಲ ಬಿಡು ಎಂಬ ನಿರಾಕರಣೆಯಿಂದ ಪ್ರಾರಂಭಗೊಂಡ ಮನಸಿನ ವ್ಯವಹಾರ, ಅಯ್ಯೋ ಯಾಕಾದರೂ ಈ ಲಾಕ್ ಡೌನ್ ಮಾಡಿದರೋ ಶಿವನೇ ಎಂದು ಸಿಡಿಮಿಡಿಗೊಳ್ಳುತ್ತ ಮನೆಯಲ್ಲೇ ಶತಪಥ ಹಾಕುತ್ತ, ಕೈ ಹೊಸೆಯುತ್ತ ತೊಳೆದ ಕೈ ಮತ್ತೆ ಮತ್ತೆ ತೊಳೆಯುತ್ತ ತಂದ ತರಕಾರಿಯಲ್ಲಿ ಹಾಲಿನಲ್ಲಿ ಮನೆಗೆ ಬಂದ ದಿನ ಪತ್ರಿಕೆಯಲ್ಲಿ ಕೊರೋನಾ ಇರಬಹುದೆಂಬ ಭೀತಿಯಲ್ಲಿ ಇಡೀ ತಿಂಗಳುಗಳು ಕಳೆದು ಇಡೀ ಭೂಮಂಡಲವೇ ವ್ಯಾಧಿಗ್ರಸ್ಥವಾದಂತೆ ಒಬ್ಬರನ್ನೊಬ್ಬರು ನಂಬಿಯೂ ನಂಬದಂತೆ ಅಥವ ಹಾಗಂತ ನಟಿಸುತ್ತ ಥೇಟ್ ಇದೇ ತರಹ ಮುಳುಗುವ ಟೈಟಾನಿಕ್ ನಲ್ಲಿ ಕೆಲವರಿಗೆ ಈ ದುರಂತದ ಅಂದಾಜು ಸಿಗದೇ ತಮ್ಮದೇ ಮೋಜು ಮಸ್ತಿ ಕುಡಿತ ಜೂಜು ಪ್ರೇಮ ಕಾಮದಲ್ಲಿ ತೊಡಗಿಕೊಂಡಿತ್ತು.
ಪ್ರಪಂಚದ ಯಾವ ಮೂಲೆಯಲ್ಲಿ ಅವಘಡಗಳಾದರೂ ಮೊದಲಿಗೆ ತಟ್ಟುವುದು ದೇಶದ ಮೂರನೇಯ ದರ್ಜೆಯ ನಾಗರೀಕರಿಗೆ. ಮೂರಂತಸ್ತಿನ ಟೈಟಾನಿಕ್ ನಲ್ಲಿ ಮೊದಲು ನೀರು ಹೊಕ್ಕಿದ್ದು ಕೆಳ ಮಹಡಿಯ ಬರ್ತ್ ನಲ್ಲಿ. ಇಲ್ಲಿ ಈ ಜನ ಬದುಕಿಗಾಗಿ ಹಾಹಾಕಾರ ನಡೆಸಿರುವಾಗಲೇ ಟೈಟಾನಿಕ್ ಮೇಲ್ಮಹಡಿಯಲ್ಲಿ ಅದೇ ಜನ ಪಿಟೀಲು ನುಡಿಸುತ್ತ ಹಾಡು ಹೇಳುತ್ತ ಕುಣಿಯುತ್ತಿದ್ದರು.
ಇತ್ತ ಭಾರತದ ವಲಸೆ ಕಾರ್ಮಿಕ ತನ್ನ ಊರು ಹುಡುಕಿ ಬಸ್ಸು ರೈಲುಗಳ ಹಂಗಿಗೆ ಬೀಳದೇ ಕೆಂಡದ ದಾರಿ ತುಳಿಯುತ್ತಿದ್ದ. ಇದು ಕರೋನ ತಂದೊಡ್ಡಿದ ಭೀಕರತೆಯನ್ನು ಎದುರಿಸಲು ವ್ಯವಸ್ಥೆಗಳು ವಿಫಲವಾಗಿದ್ದನ್ನು ಜಗತ್ತಿಗೆ ಸಾರಿ ಸಾರಿ ಹೇಳುತ್ತಿದ್ದವು. ವ್ಯವಸ್ಥೆಗೂ ಇದು ಹೊಸ ಅನುಭವ, ಹೊಸ ದುರಂತ, ಇದು ಮತ್ತೊಂದು ಭೂಕಂಪ ಸುನಾಮಿ, ಪ್ರವಾಹ ಅಥವ ಇನ್ನೊಂದು ರೈಲು ಅವಘಡದಂತಲ್ಲವಲ್ಲ!?
ಈಗ ಕೊರೋನದ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಮೊದಲಿದ್ದ ಭಯ ಈಗಿಲ್ಲ, ಟೈಟಾನಿಕ್ ಮುಳುಗುವುದು ಖಾತ್ರಿಯಾಗಿದೆ. ಬದುಕುಳಿಯಲಿಕ್ಕೆ ಇರುವ ಉಪಾಯಗಳನ್ನೆಲ್ಲ ಬಳಸಿ ಇಂದೋ ನಾಳೆಯೋ ಬರಬಹುದಾದ ತೀರ್ಥಯಾತ್ರೆಗೆ ಸಿನೇಮಾದ ಕ್ಲೈಮ್ಯಾಕ್ಸಿಗಾಗಿ ಕಾಯ್ದು ಕುಳಿತಿದ್ದೇವೆ.
ಇಲ್ಲಿ ಈ ಜನ ಬದುಕಿಗಾಗಿ ಹಾಹಾಕಾರ ನಡೆಸಿರುವಾಗಲೇ ಟೈಟಾನಿಕ್ ಮೇಲ್ಮಹಡಿಯಲ್ಲಿ ಅದೇ ಜನ ಪಿಟೀಲು ನುಡಿಸುತ್ತ ಹಾಡು ಹೇಳುತ್ತ ಕುಣಿಯುತ್ತಿದ್ದರು.
ಈ ವಿಪ್ಲವದ ನಡು ನಡುವೆಯೇ ಕೊರೋನಾದ ಭಯದಲ್ಲಿ ಆಸ್ಪತ್ರೆಯಲ್ಲಿ ಬೇರೆ ಕಾಯಿಲೆಗೆ ಚಿಕಿತ್ಸೆ ಸಿಗದ ಎಷ್ಟೋ ರೋಗಿಗಳು ತೀರಿ ಹೋದರು. ಮದ್ಯ ಸಿಗಲಾರದಕ್ಕೆ ಕೆಲವರು ಹೃದಯಕಾಯಿಲೆಯವರು, ಗರ್ಭಿಣಿಯರು, ಕ್ಯಾನ್ಸರ್ ರೋಗಿಗಳು…. ಹಾಗೆ ನೋಡಿದರೆ ಈ ಕೊರೋನಾಗಿಂತ ಅದರ ಅಡ್ಡ ಪರಿಣಾಮದಿಂದಲೇ ಹೆಚ್ಚು ಸಾವುಗಳು ಸಂಭವಿಸಿದವು. ಆದರೆ ಕೊರೋನಾ ಸಾವಿಗೆ ದಕ್ಕಿದ ಪ್ರಚಾರ ಈ ಕಾಯಿಲೆಗಳಿಗೆ ಸಿಗಲಿಲ್ಲ. ಕೊರೋನಾ ಒಂದು ಅಪಾಯಕಾರಿ ಸಾಂಕ್ರಾಮಿಕ ನಿಜ ಆದರೆ ದಿನ ನಿತ್ಯ ಈ ಸಾಂಕ್ರಾಮಿಕ ಕಾಯಿಲೆಗಳಿಂದಲೂ ಜನ ಸಾಯುತ್ತಿದ್ದಾರೆ.
ಮೊದಲೆಲ್ಲ ಐವತ್ತು ಅರವತ್ತರ ವಯಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೃದಯಾಘಾತದ ಸಾವುಗಳು ಈಗ ನಲವತ್ತರ ಆಸುಪಾಸಕ್ಕೆ ಬಂದಿವೆ. ಈ ಹಿಂದೆ ಹೃದಯ ಸಂಬಂಧಿ ಕಾಯಿಲೆಯ ಹಿರಿಯರನ್ನು ತಮ್ಮ ಮಕ್ಕಳು ಆಸ್ಪತ್ರೆಗೆ ಕರೆದು ತರುತ್ತಿದ್ದರು. ಈಗ ತಂದೆ -ತಾಯಿಗಳೇ ತಮ್ಮ ಹರೆಯದ ಮಕ್ಕಳನ್ನು ಹೃದಯದ ಆಸ್ಪತ್ರೆಗೆ ಕರೆದು ತರುವಂತಾಗಿದೆ. ಅಷ್ಟೇ ಅಲ್ಲ ಈಗ ಬಿ.ಪಿ, ಶುಗರ್, ಥೈರಾಯ್ಡ್, ಮಾನಸಿಕ ಖಿನ್ನತೆಗಳಂತಹ ಅಸಾಂಕ್ರಾಮಿಕ ರೋಗಗಳು ಕೊರೋನಾಗಿಂತ ಹೆಚ್ಚು ಅಪಾಯಕಾರಿ. ಈ ಅಸಾಂಕ್ರಾಮಿಕ ರೋಗಗಳು ಮೊದಲಿಗಿಂತಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಎಳೆ ಮಕ್ಕಳ ಕಣ್ಣುಗಳಿಗೆ ಕನ್ನಡಕ ಬಂದಿದೆ. ಮೂವತ್ತರ ಯುವಕರು ಇನ್ಸುಲಿನ್ ತೆಗೆದುಕೊಳ್ಳುತ್ತಾರೆ. ಖಿನ್ನತೆ ರೋಗಿಗಳು ಮಾನಸಿಕ ಚಿಕಿತ್ಸೆಯ ಬದಲಾಗಿ ಮಾದಕ ದ್ರವ್ಯದ ವ್ಯಸನಿಗಳಾಗುತ್ತಿದ್ದಾರೆ.
ಇದಕ್ಕೆಲ್ಲ ಜೀವನಶೈಲಿ ಬದಲಿಸಿಕೊಳ್ಳಿ ಎಂಬ ರೆಡಿಮೇಡ್ ಹಾಗು ಸುಲಭ ಉಪದೇಶವೊಂದು ಫಿಟ್ನೆಸ್ ಗುರುಗಳು ಎಸೆಯುತ್ತಾರೆ. ಆದರೆ ಅದನ್ನು ಎಲ್ಲಿಂದ ಶುರು ಮಾಡಬೇಕೆಂದು ಕೇಳಿದರೆ ಸ್ವತಃ ಅವರಿಗೇ ಗೊತ್ತಿರುವುದಿಲ್ಲ. ಮನುಷ್ಯ ಅಭಿವೃದ್ಧಿ ಅಂದುಕೊಳ್ಳುವುದೆಲ್ಲ ಇನ್ನೊಂದು ಪಾತಳಿಯಿಂದ ನೋಡಿದರೆ ಅವನ ಅವನತಿಯೂ ಕಾಣುತ್ತದೆ. ಇದೊಂಥರ ಚಂದ್ರಶೇಖರ ಕಂಬಾರರ ಕವಿತೆ ಆ ಮರ ಈ ಮರ ಕವಿತೆ ಇದ್ದಂತೆ, ಒಂದು ನದಿಯ ದಂಡೆಯ ಮೇಲಿನ ನಿಜದ ಮರ ಮತ್ತು ನೀರಿನಲ್ಲಿ ಮೂಡಿದ ಅದರ ಬಿಂಬದ ಮರ. ತೆರೆ ಎದ್ದಾಗ ಒಂದು ನಗುತ್ತದೆ ಇನ್ನೊಂದು ನಡಗುತ್ತದೆ. ನೀನೊಂದು ಮರ ಹತ್ತಿದರೆ ಇನ್ನೊಂದರಲ್ಲಿ ಇಳಿಯುತ್ತಿ. ನದಿ ನೀರಿನಲ್ಲಿ ಮೂಡಿದ ಮರದ ಚಿತ್ರ ಆ ಮರದ ಮೇಲೇರುತ್ತಿರುವ ಮನುಷ್ಯ ಅಸಲು ಕೆಳಗಿಳಿಯುತ್ತಿರುತ್ತಾನೆ. ಭ್ರಮೆ ಮತ್ತು ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ ನಮ್ಮ ಸುಳ್ಳುಗಳನ್ನು ಅದು ಹಂಗಿಸುತ್ತಲೇ ಇರುತ್ತದೆ.
ನಾವೆಲ್ಲ ಅಭಿವೃದ್ಧಿ ಎಂದು ಏನು ಕರೆಯುತ್ತಿದ್ದೆವೆಯೋ ಇದನ್ನು ನೋಡಿ ಈ ಬ್ರಹ್ಮಾಂಡದ ಮೇಲೆ ಅಸ್ತಿತ್ವವಿರುವ ಇನ್ನೊಂದು ವಿಕಸಿತ ಜೀವಿ ನಮ್ಮನ್ನು ನೋಡಿ ತಮಾಷೆ ವ್ಯಂಗ್ಯ ಮಾಡಿ ಇದರ ಮೇಲೆ ಕತೆ ಕಾದಂಬರಿ ನಾಟಕ ಬರೆದು ಈಗ ನಾವು ಹಾಲಿವುಡ್ ಸಿನೇಮಾದಲ್ಲಿ ಬೇರೆ ಜೀವಿಗಳನ್ನು ಕಲ್ಪಿಸಿ ಚಿತ್ರಿಸಿದಂತೆ ಸಿನೇಮಾ ಮಾಡಿ ಆಸ್ಕರ್ ನಂತಹ ಪ್ರತಿಷ್ಠಿತ ಆವಾರ್ಡು ಪಡೆಯುತ್ತಿರಬಹುದು.
ಒತ್ತಡವೆಂಬುದು ಮನುಷ್ಯನ ಹುಟ್ಟಿನಿಂದಲೇ ಶುರುವಾಗಿರುತ್ತದೆ. ಪ್ರತಿಯೊಂದು ತಲೆಮಾರಿಗೆ ಈ ಬಾಹ್ಯ ಹಾಗು ಆಂತರಿಕ ಒತ್ತಡದ ಚಾಲೆಂಜುಗಳು ಬೇರೆ ಬೇರೆಯಾಗಿರುತ್ತವೆ. ನಮ್ಮ ತಂದೆಯವರ ತಲೆಮಾರಿಗಿದ್ದ ಬಡತನ ಅನಕ್ಷರತೆ ಹಸಿವು, ನಮ್ಮ ತಲೆಮಾರಿಗೆ ಮಾಯವಾಗಿ ಸರಕಾರೀ ನೌಕರೀ ಹಿಡಿಯವುದೇ ನನ್ನ ತಲೆಮಾರಿನ ಅತಿ ದೊಡ್ಡ ಚಾಲೆಂಜಾಗಿ ಕಾಣಿಸಿಕೊಳ್ಳುತ್ತದೆ. ಇದು ನನ್ನ ಮಗನ ಕಾಲಕ್ಕೆ ಈ ಚಾಲೆಂಜ್ ಬೇರೆಯೇ ಸ್ವರೂಪ ಪಡೆದಿರುತ್ತದೆ.
ಹೀಗಾಗಿ ಒಂದು ಸಿದ್ಧಕ್ರಮವೆಂಬುದು ಒಂದು ತಲೆಮಾರಿಗೆ ರೆಡಿಮೇಡ್ ಆಗಿ ದಕ್ಕಿರುವುದಿಲ್ಲ. ಹಾಗೊಂದು ವೇಳೆ ದಕ್ಕಿದರೂ ಅದು ಆಗಲೇ ತನ್ನ ಮಹತ್ವ ಕಳೆದುಕೊಂಡಿರುತ್ತದೆ ಅಥವ ಸವೆದುಹೋಗಿ ಅದು ಅತೀ ಸಹಜವೆಂಬಂತೆ ಸಾಗಿ ಹೋಗುತ್ತದೆ. ಡಾ. ರಾಜ್ ಕುಮಾರರಿಗಿದ್ದ ಸವಾಲುಗಳಿಗಿಂತ, ಶಿವರಾಜ್ ಕುಮಾರರಿಗಿರುವ ವೃತ್ತಿ ಸವಾಲುಗಳು ಬೇರೆಯದ್ದೇ ಆಗಿರುತ್ತವೆ. ಇದರಲ್ಲಿ ಯಶಸ್ವಿಯಾದವರು ಮಾತ್ರ ಈ ಚಿತ್ರರಂಗದಲ್ಲಿ ಬದುಕಿ ಉಳಿಯಲು ಸಾಧ್ಯ.
ಒತ್ತಡಗಳನ್ನು ಕಡಿಮೆ ಮಾಡುವುದೆಂದರೆ ಎಲ್ಲಿಂದ ಶುರುಮಾಡಬೇಕು? ಈ ಓಟದ ಚಕ್ರವನ್ನು ರಿವರ್ಸ್ ತಿರುಗಿಸಬೇಕೇ?
ನಾವಿಂದು ಆಧುನಿಕ ತಂತ್ರಜ್ಞಾನದ ತುರೀಯಾವಸ್ಥೆಯಲ್ಲಿದ್ದೇವೆ. ಮಾಹಿತಿಗಳು ಬೇಗ ಬೇಗ ಲಭ್ಯವಾಗುತ್ತವೆ. ಒತ್ತಡಗಳನ್ನು ನಿಯಂತ್ರಣ ಮಾಡುವುದು ಹೇಗೆ ಎಂದು ಹತ್ತು ನಿಮಿಷ ಓದುತ್ತೇವೆ, ಆದರೆ ಅದನ್ನು ಕಾರ್ಯಗತ ಮಾಡಲು ನಮ್ಮ ವೃತ್ತಿ ಬದುಕು ವೈಯಕ್ತಿಕ ಬದುಕು ನಮ್ಮನ್ನು ಕಟ್ಟಿಹಾಕಿವೆ.
ಈ ಕೊರೋನೋತ್ತರ ಕಾಲದಲ್ಲಿ ಬದುಕಿ ಉಳಿಯಬೇಕಾದ ಮನುಷ್ಯನು ತುರ್ತಾಗಿ ಪರಿಸ್ಥಿತಿಗೆ ಹೊಂದಿಕೊಳ್ಳುವ ಜರೂರತ್ತಿದೆ. ಈ ತುರ್ತೆಂಬುದು ಕಾಲ ಕಾಲಕ್ಕೆ ತಲೆಮಾರಿನಿಂದ ತಲೆಮಾರಿಗಾದ ನಿಧಾನಗತಿಯದ್ದಲ್ಲ, ತೀರ ಕ್ಷಿಪ್ರಗತಿಯದ್ದು. ಉದ್ಯೋಗ ನಷ್ಟ, ಹಸಿವು, ಖಿನ್ನತೆಯನ್ನು ಗೆದ್ದವರು ಇಲ್ಲಿ ಗೆದ್ದಂತೆ, ಮುಳುಗಿದ ಟೈಟಾನಿಕ್ ನಲ್ಲೂ ಬದುಕಿ ಉಳಿದವರಿದ್ದಾರೆ. ನೆನಪಿನಲ್ಲುಳಿಯುವುದು ರೋಜ್ಳ ಚೆಲುವು ಜ್ಯಾಕ್ ನ ತ್ಯಾಗ ಮತ್ತು ಇವರಿಬ್ಬರ ಅಮರ ಪ್ರೇಮ.
ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.