ಎಲ್ಲರಿಗಿಂತ ಚೆನ್ನಾಗಿಯೇ ಬರೆದಿದ್ದ ನನಗೆ, ಹಾಗೆ ಮೇಷ್ಟ್ರು ಹೊಡೆದದ್ದರಿಂದ ದಿಗ್ಬ್ರಾಂತನಾಗಿ ನೋಡುತ್ತಿದ್ದೆ. ನಾನು ಸಾವರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಕಣ್ಣಿನಿಂದ ನೀರು ಸುರಿಯುತ್ತಿತ್ತು. ನೋಟ್ ಬುಕ್ ನನ್ನಿಂದ ಇಪ್ಪತ್ತೈದು ಮೀಟರ್‌ನಷ್ಟು ದೂರ ಬಿದ್ದಿತ್ತು. ಹಾಳೆಗಳು ಗಾಳಿಗೆ ಹಾರುತ್ತಿದ್ದವು. ಅವರ ತರಗತಿ ಮುಗಿದ ಮೇಲೆ ಈ ಹಿಂದೆ ನಮಗೂ ಹೀಗೆ ಮಾಡಿದ್ದರು ಎಂದು ನನ್ನ ಗೆಳೆಯರು ನನ್ನನ್ನು ಸಮಾಧಾನ ಮಾಡಿದರು. ಈ ಘಟನೆ ನಡೆದ ಮೇಲೆ ಎರಡು-ಮೂರು ದಿನ ಅದರ ಬಗ್ಗೆಯೆ ಯೋಚಿಸಿದೆ. ಬಡತನವಿಲ್ಲದಿದ್ದರೆ ನನ್ನ ಅಪ್ಪ-ಅಮ್ಮನೂ ನನಗೆ ಒಳ್ಳೆಯ ನೋಟ್ ಬುಕ್ ತಂದುಕೊಡುತ್ತಿದ್ದರು ಎನಿಸಿದ್ದು ನಿಜ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಮೂರನೆಯ ಕಂತು ನಿಮ್ಮ ಓದಿಗೆ

ಬಡತನಕ್ಕಿಂತ ದೊಡ್ಡ ಶತ್ರು ಯಾವುದು ಅನ್ನುವುದು ನಿಜವಾದರೂ ಅದು ನಮ್ಮೊಳಗೊಂದು ಪಕ್ವತೆಯನ್ನು ಅನುಭವವನ್ನು ಬದುಕಿನ ಸತ್ಯವನ್ನು ಕಲಿಸುವುದಂತು ಸತ್ಯ. ಅದು ನಮ್ಮೊಳಗೊಂದು ಕೀಳರಿಮೆಯನ್ನು ಹುಟ್ಟು ಹಾಕುತ್ತದೆ ನಿಜ; ಅಷ್ಟೇ ಆತ್ಮವಿಶ್ವಾಸವನ್ನು ಮೂಡಿಸಬಲ್ಲದು. ನಮ್ಮೊಳಗೊಂದು ಬದುಕಿನ ಕಿಚ್ಚು ಹೊತ್ತಿದರೆ ಅದರ ಯಶಸ್ಸು ಈ ಬಡತನದ ಬದುಕಿಗೆ ಸಲ್ಲಬೇಕು. ಹಾಗೆಂದು ಬಡತನವನ್ನು ಹೀಯಾಳಿಸುವುದಾಗಲಿ ಅಥವಾ ಹೊಗಳುವುದಾಗಲಿ ಅಥವಾ ಶ್ರೀಮಂತಿಕೆಯೆ ಬೇಕು ಅನ್ನುವ ಜಾಯಮಾನವಾಗಲಿ ನನ್ನದಲ್ಲ. ಬಡತನವು ಹೇಗೆಲ್ಲಾ ನಮ್ಮಲ್ಲಿ ಪರಿವರ್ತನೆ ತಂದೀತು ಅನ್ನುವುದಷ್ಟೆ ಬಡತನ, ಶಾಪ ಅಲ್ಲ… ಬಡವರಾಗಿ ಬದುಕುವುದು ಶಾಪ. ಹಾಗಂತ ಏನಾದ್ರು ಮಾಡಿ ಶ್ರೀಮಂತ ಆಗು ಅಂತನೂ ಅಲ್ಲ. ಬಡತನವನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂಬುದಷ್ಟೆ ನನ್ನ ನಿಲುವು.

ಹೊಸ ಕಟ್ಟಡ ಹೊಸ ಮೇಷ್ಟ್ರು ಹೊಸ ಹುರುಪು ಉತ್ಸಾಹದಿಂದಲೆ ಹೊರಟ ನಮ್ಮ ಹೆಗಲ ಮೇಲೆ ಇದ್ದದ್ದು ಎರಡೂ ಮೂಲೆಯಲ್ಲಿ ತೂತುಬಿದ್ದ ಬ್ಯಾಗು ಅದೂ ನಮ್ಮಕ್ಕ ಬಳಸಿ ಬಿಟ್ಟದ್ದು. ಮನೆಯಲ್ಲಿ ಬಡತನವಿತ್ತೆ ವಿನಃ ನಮ್ಮ ಬುದ್ಧಿವಂತಿಕೆಗೇನು ಬಡತನವಿರಲಿಲ್ಲ. ಒಂದ್ನೆ ಕ್ಲಾಸ್ಸಲ್ಲಿ ಪಟ್ಟಾಗಿ ಕುಳಿತು ಕಲಿತ ಅಕ್ಷರ ಎದೆ ತುಂಬಾ ನಕ್ಷತ್ರಗಳನ್ನು ಮಿನುಗುವಂತೆ ಮಾಡಿತ್ತು. ಪಾಠಗಳನ್ನು ಓದುವುದೆಂದರೆ ನೀರು ಕುಡಿದಷ್ಟೆ ಸುಲಭ ನನಗೆ. ಹೊಸ ಮೇಷ್ಟ್ರು ಬೇರೆ ತುಂಬ ಕ್ರಿಯಾಶೀಲತೆ ಇರುವ ಶಾಲೆಯಲ್ಲಿ ಕಲಿಕೆಯಲ್ಲಿ ಮಹತ್ತರ ಬದಲಾವಣೆ ಮಾಡಿದ ಗಣಿತದ ಮೇಷ್ಟ್ರು ನವ ನವೀನ ಕಲಿಕೆಯನ್ನು ಮಕ್ಕಳಿಗೆ ಕಲಿಸುತ್ತ ಮಕ್ಕಳಲ್ಲಿ ಗಾಂಭೀರ್ಯವನ್ನು ಶಿಸ್ತನ್ನು ತಂದವರು. ಬಂದ ಒಂದೆರಡು ವರ್ಷಗಳಲ್ಲೆ ಜನಪ್ರಿಯರಾಗಿದ್ದರು. ಕೇವಲ ನೂರಿಪ್ಪತ್ತು ಮನೆಗಳಿರುವ ನಮ್ಮೂರ ಶಾಲೆಗೆ ಅಕ್ಕಪಕ್ಕದ ಶಾಲೆಯ ಮಕ್ಕಳು ಸೇರುವಂತೆ ಮಾಡಿದ್ದರು. ಇಂತಹ ಹಲವು ಪ್ರಥಮಗಳಿಗೆ ಹೆಸರಾಗಿದ್ದ ಸಣ್ಣ ಗಂಗಣ್ಣ ಮೇಷ್ಟ್ರು ಎಂತಹ ಶಿಸ್ತಿನ ಮನುಷ್ಯರಾಗಿದ್ದರೆಂದರೆ ಪ್ರತಿ ತರಗತಿಗೂ ಒಬ್ಬೊಬ್ಬರನ್ನು ಮಾನಿಟರ್ (ತರಗತಿ ನಿರ್ವಹಣೆ ಮಾಡುವ ನಾಯಕ) ನನ್ನಾಗಿ ಮಾಡುತಿದ್ದರು. ಕಪ್ಪುಹಲಗೆಯ ಮೇಲೆ ಪ್ರತಿದಿನವೂ ದಿನಾಂಕ ವಾರ ನಮೂದು ಮಾಡುವುದು, ತರಗತಿಗೆ ಶಿಕ್ಷಕರು ಯಾರಾದರೂ ಬಂದಿಲ್ಲ ಅಂದರೆ ಆ ಅವಧಿಯ ತರಗತಿ ನಿರ್ವಹಣೆ ಮಾಡುವುದು ಗಲಾಟೆ ಮಾಡುವವರ ಹೆಸರುಗಳನ್ನು ಬರೆಯುವುದು, ಪ್ರತಿದಿನದ ಹೋಂ ವರ್ಕ್ ಚೆಕ್ ಮಾಡುವುದು… ಇಂಥವೆ ಕೆಲಸಗಳನ್ನು ಮಾಡಬೇಕಾಗಿತ್ತು. ಇದರಲ್ಲಿ ಯಾವುದಾದರೂ ಕೆಲಸವಾಗಿಲ್ಲವೆಂದರೆ ಮಾನಿಟರ್‌ಗೆ ಶಿಕ್ಷೆಯಾಗುತಿತ್ತು. ಹಾಗಾಗಿ ಆ ಶಿಕ್ಷಕರೆಂದರೆ ಒಂದು ರೀತಿಯ ಭಯ ಹಾಗೂ ಗೌರವ ಎರಡೂ ಎಲ್ಲಾ ವಿದ್ಯಾರ್ಥಿಗಳಲ್ಲಿಯೂ ಇತ್ತು.

ಒಂದು ಘಟನೆ ಹೇಳಲೇಬೇಕು. ಒಂದು ದಿನ ಇದ್ದಕ್ಕಿದ್ದಂತೆ ಶಾಲಾ ತಪಾಸಣಾಧಿಕಾರಿ ಇದ್ದಕ್ಕಿದ್ದಂತೆ ಭೇಟಿ ನೀಡಿದ್ದರು. ನಮಗೇನು ಯಾರೋ ಬಂದಿದ್ದಾರೆ ಎಂದು ತರಗತಿಯಲ್ಲಿ ಸುಮ್ಮನೆ ನಾವೆ ಗಲಾಟೆ ಮಾಡುತ್ತ ಕುಳಿತಿದ್ದೆವು. ಅದು ಮಧ್ಯಾಹ್ನದ ಅವಧಿಯ ಪ್ರಾರಂಭದ ತರಗತಿಯಾದ್ದರಿಂದ ಇನ್ನು ಶಿಕ್ಷಕರ್ಯಾರು ಬಂದಿರಲಿಲ್ಲ ನೇರವಾಗಿ ತರಗತಿಗೆ ಹಾಜರಾದ ಅಧಿಕಾರಿ ಸುಮ್ಮನೆ ಎಲ್ಲರನ್ನು ಗಮನಿಸಿ ವಾಪಸ್ ಹೋಗಿದ್ದರು. ಆಮೇಲೆ ಮೇಷ್ಟ್ರು ಬಂದು ಎಲ್ಲಾ ತರಗತಿಯ ಲೀಡರ್‌ಗಳನ್ನ ಎಬ್ಬಿಸಿ ಅಂಗೈ ಗೆಣ್ಣುಗಳಿಗೆ ಹೊಡೆದಿದ್ದರು. ನಾವ್ಯಾಕೆ ಹೊಡೆದರು ಎಂದು ನೋಡುತ್ತಿರಬೇಕಾದರೆ ಬೋರ್ಡ್ ಕಡೆಗೆ ತೋರಿಸಿ ಅಲ್ಲಿ ಬರೆದಿದ್ದ ಹಿಂದಿನ ದಿನಾಂಕದ ವಾರವನ್ನು ತೋರಿಸಿದ್ದರು. ಆಗ ನಮ್ಮ ತಪ್ಪಿನ ಅರಿವಾಗಿದ್ದು ನಿಜ. ಆ ತಪ್ಪನ್ನು ಮುಂದೆಂದೂ ಮಾಡಲಿಲ್ಲ. ಅಂಗೈನ ಗೆಣ್ಣುಗಳು ನಮ್ಮನ್ನು ಮತ್ತೆ ಮತ್ತೆ ಎಚ್ಚರಿಸುತ್ತಿದ್ದವು. ನಂತರ ತಿಳಿದದ್ದೇನೆಂದರೆ ಎಲ್ಲಾ ರೆಕಾರ್ಡ್‌ಗಳು ಅತ್ತ್ಯುತ್ತಮವಾಗಿದ್ದರೂ ಶಿಕ್ಷಕರನ್ನು ಬೈಯುವುದಕ್ಕೆ ಬೋರ್ಡ್‌ನ ದಿನಾಂಕ ವಾರ ಬರೆದಿಲ್ಲದ್ದು ಕಾರಣವಾಗಿತ್ತು. ಆತ ಶಿಕ್ಷಕರಿಗೆ ಮನಸೋ ಇಚ್ಛೆ ಬೈದು ಸೈಕಲ್ ಏರಿ ಹೊರಟು ಹೋಗಿದ್ದ. ಹಾಗಾಗಿ ನಾವು ಅವನಿಗೆ ಹಿಡಿ ಹಿಡಿ ಶಾಪ ಹಾಕಿದ್ದೆವು. ಬಹಳ ಮುಂಗೋಪಿಯಾಗಿದ್ದ ಅಧಿಕಾರಿಗೆ ಮನಸ್ಸಿಗೆ ಏನಾಗಿತ್ತೊ ಅಥವಾ ಯಾವ ಒತ್ತಡದಲ್ಲಿ ಇದ್ದನೊ ಗೊತ್ತಿಲ್ಲ. ರಭಸವಾಗಿಯೆ ಶಾಲೆಯಿಂದ ಹೊರಟ ಆತ ನಮ್ಮೂರ ಕೆರೆ ಏರಿಯ ಮೇಲೆ ಹೋಗುವಾಗ ಆಯತಪ್ಪಿ ಸೈಕಲ್ ಸಮೇತ ಉರುಳಿ ಕೆರೆಗೆ ಬಿದ್ದಿದ್ದ. ಮಳೆಯಿಲ್ಲದೆ ಕೆರೆಯಲ್ಲಿ ನೀರೂ ಇರಲಿಲ್ಲ. ಆದ್ದರಿಂದ ಆತನ ಮೈ ಕೈಯೆಲ್ಲಾ ಗಾಯವಾಗಿತ್ತು. ಗ್ರಾಮಸ್ಥರೇ ಆತನನ್ನು ಎತ್ತಿ ಉಪಚರಿಸಿ ಆತನಿಗೆ ಅಂತಹ ದೊಡ್ಡ ಪೆಟ್ಟುಗಳೇನು ಆಗಿರಲಿಲ್ಲ. ತರಚಿದ ಗಾಯಗಳಷ್ಟೆ ಆಗಿದ್ದವು. ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಕಳಿಸಿದ್ದರು. ಇದೊಂದು ದೊಡ್ಡ ಸುದ್ದಿಯೆ ಆಗಿತ್ತು. ನಾವು ನಮ್ಮೇಷ್ಟ್ರುನ್ನ ಬೈದು ಹೋಗಿದಕ್ಕೆ ಅವನು ಬಿದ್ದ ಎಂದುಕೊಂಡೆವು.

ಇಂತಹದೊಂದು ಬಿಡಿಸಲಾಗದ ಗೌರವದ ನಂಟು ಶಿಕ್ಷಕರ ಮೇಲೆ ಬಾಲ್ಯದಲ್ಲಿ ಇದ್ದೆ ಇರುತ್ತದೆ. ಈಗ ಯೋಚಿಸಿದರೆ ಆ ರೀತಿ ಅಧಿಕಾರಿಯ ಬಗ್ಗೆ ಯೋಚಿಸಿದ್ದು ತಪ್ಪು ಎನಿಸುತ್ತದೆ. ಮಾನಸಿಕ ಕ್ರೌರ್ಯವು ಸಹ ಒಳ್ಳೆಯ ಮಾನವೀಯ ಲಕ್ಷಣವಲ್ಲ ಎಂಬ ಅರಿವು ನಮ್ಮ ಓದುವ ಗ್ರಹಿಕೆ ಜಾಸ್ತಿಯಾದಂತೆಲ್ಲ ತಿಳಿದು ಮನಸ್ಸು ಸಂಕುಚಿತವಾಗುತ್ತದೆ.

ಆ ಘಟನೆ ನಡೆದ ಮೇಲೂ ಅವರ ಮೇಲಿನ ಗೌರವ ಕಡಿಮೆಯಾಗಲಿಲ್ಲ. ಶಿಕ್ಷೆಯೆ ಬೇಡ ಎಂದು ವಾದಿಸುವವರ ಮಧ್ಯೆ ಇದು ತಪ್ಪು ಎನಿಸಬಹುದು. ತಪ್ಪನ್ನು ತಿದ್ದಲು ದಂಡಿಸುವ ಯಾವ ಶಿಕ್ಷೆಯೂ ಅಪರಾಧವಲ್ಲ ಎಂಬುದು ನನ್ನ ಭಾವನೆ. ಆದರೆ ಅದು ಸಮಯೋಚಿತವಾಗಿದ್ದು, ಮಾನಸಿಕವಾಗಿ ಘಾಸಿಗೊಳಿಸುವಂತಿರಬಾರದು. ಇದೆಲ್ಲಾ ಹೊರತಾಗಿ ಗಂಗಣ್ಣ ಮೇಷ್ಟ್ರು ಎಂದರೆ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಬಹುಶಃ ನಮ್ಮ ಬರವಣಿಗೆ ಸ್ಫುಟವಾಗಲು ತಪ್ಪಿಲ್ಲದೆ ಬರೆಯುತ್ತಿರುವುದರ ಹಿಂದೆ ಅವರ ಕೊಡುಗೆ ಇತ್ತು. ಗಾಂಧೀಜಿಯವರು “ಅಂದವಾದ ಅಕ್ಷರ ಒಳ್ಳೆಯ ಬರವಣಿಗೆ, ಶಿಕ್ಷಣದ ಅವಶ್ಯಕ ಅಂಶ. ಕೆಟ್ಟ ಅಕ್ಷರದ ಬರವಣಿಗೆ ಅಪಕ್ವ ಮತ್ತು ಅಪೂರ್ಣ ಶಿಕ್ಷಣದ ಚಿಹ್ನೆ” ಎಂದಿದ್ದಾರೆ. ಅಕ್ಷರಗಳು ಗುಂಡಾಗಿರಬೇಕು ಎಂಬುದು ಅವರ ಕಟ್ಟುನಿಟ್ಟಿನ ವಾಗ್ದಾನವಾಗಿತ್ತು. ಹೀಗಾಗಿ ನನ್ನ ಬರವಣಿಗೆಯು ಅಂದವಾಗಿತ್ತು. ಜೊತೆಗೆ ಬೇರೆ ತರಗತಿಗೆ ಮಕ್ಕಳಿಗೆ ತೋರಿಸಿ ನನಗೆ ಶಹಬ್ಬಾಸ್ ಗಿರಿ ಕೊಡುತ್ತಿದ್ದರು. ಆಗೆಲ್ಲ ನಾನು ಒಳಗೊಳಗೆ ಖುಷಿಪಡುತ್ತಿದ್ದೆ. ಬೀಗುವಿಕೆ ತನ್ನಿಂದ ತಾನೇ ಶುರುವಾಗುತ್ತಿತ್ತು. ಅವರ ಮೊದಲ ಕಂಡೀಷನ್ ಅದೆ ನೋಟ್ ಬುಕ್ ಚೆನ್ನಾಗಿ ಬರೆಯಬೇಕೆಂಬುದು ಇವತ್ತಿಗೂ ಅಂತಹದೊಂದು ಹವ್ಯಾಸ ನನ್ನಲ್ಲಿದೆ ಅದು ಅವರ ಕೊಡುಗೆ.

ಹೀಗೆಯೆ ಸಾಗುತ್ತಿದ್ದ ಶಿಕ್ಷಣದ ಬದುಕು ಆಗಾಗ ಹೊಡೆತಕ್ಕೂ ಸಾಕ್ಷಿಯಾಗಿತ್ತು. ಸಾಮಾನ್ಯವಾಗಿ ನಾನು ಹೊಡೆತ ತಿಂದದ್ದು ಕಡಿಮೆ. ಮನೆಯಲ್ಲಿ ಅಪ್ಪ ಅಮ್ಮ ಕೂಲಿ ಮಾಡುವುದನ್ನು ಬಿಟ್ಟು ಮನೆಯಲ್ಲಿಯೇ ಬೀಡಿ ಕಟ್ಟುವ ಗೃಹಕೈಗಾರಿಕೆಯ ಕೆಲಸ ಕಲಿತು ಅದರಿಂದ ಜೀವನೋಪಾಯದ ಮಾರ್ಗವನ್ನು ಕಂಡುಕೊಂಡಿದ್ದರು. ರೂಪಾಯಿ ಮೌಲ್ಯ ಆಗ ಜಾಸ್ತಿ ಇತ್ತೆಂದೆ ಹೇಳಬೇಕು. ನಾಲ್ಕಾಣೆ (೨೫ ಪೈಸೆ) ಗೆ ಒಂದು ಸೇರು ರಾಗಿ ತಂದುಂಡ ನೆನಪಿದೆ. ಊಟ ಬಟ್ಟೆಗೇನೊ ದಾರಿಯಾಗಿತ್ತು. ಬೇರೆ ಬೇರೆ ಖರ್ಚುಗಳಿಗೆ ಹಣ ಹೊಂದಿಸುವಷ್ಟು ಶಕ್ತಿ ನಮ್ಮಪ್ಪನಿಗಂತು ಇರಲಿಲ್ಲ. ಐದನೆಯ ತರಗತಿ ಓದುವಾಗ ಬಿದ್ದು ಗಾಯ ಮಾಡಿಕೊಂಡಿದ್ದೆ. ಅದು ನನ್ನ ತಮ್ಮನಿಂದ ಆಗಿದ್ದು, ಬುಗುರಿ ಆಡುವುದೆಂದರೆ ನನಗೆ ತುಂಬಾನೆ ಇಷ್ಟ. ನನ್ನದೆ ತರಗತಿಯ ‘ರಂಗ’ ಬುಗುರಿ ಮಾಡುತ್ತಿದ್ದ. ಅದ್ಹೇಗೆ ಮಾಡುತಿದ್ದನೊ ಗೊತ್ತಿಲ್ಲ. ಈಗಿನಂತೆ ಅಂಗಡಿಯಲ್ಲಿ ಸಿಗುತ್ತಿದ್ದದ್ದು ಕಡಿಮೆಯೆ. ಹಾಗಾಗಿ ಅವನಿಗೆ ಒಂದಿಷ್ಟು ಪೈಸೆಯ ಆಸೆ ತೋರಿಸಿ ಬುಗುರಿ ಪಡೆಯುತ್ತಿದ್ದೆವು.

ಬೇಸಿಗೆ ಬಂತೆಂದರೆ ಸಾಕು ಬುಗುರಿ ಆಡಿದ್ದೇ ಆಡಿದ್ದು. ಊಟಕ್ಕು ಹೋಗುತ್ತಿರಲಿಲ್ಲ. ಬುಗುರಿಗೆ ಗುನ್ನ ಹೊಡೆಯುವುದೆಂದರೆ ಎಲ್ಲಿಲ್ಲದ ಖುಷಿ. ಇಬ್ಬರು ಮೂವರು ಬುಗುರಿ ಆಡಿಸಿ ಕೊನೆಯಲ್ಲಿ ಯಾರು ಮಂಗ ತೆಗೆದುಕೊಳ್ಳುತ್ತಾರೋ ಅವರು ವೃತ್ತಾಕಾರದ ಪಟ್ಟಿಯಲ್ಲಿ ಅವರ ಬುಗುರಿ ಇಡಬೇಕು. ಅದಕ್ಕೆ ಪಟ್ಟೆಯಿಂದ ಹೊರಗೆ ಬರುವಂತೆ ಇತರರು ಹೊಡೆಯಬೇಕು. ಸರದಿ ಮುಗಿದ ನಂತರ ಮತ್ತೆ ಕೊನೆಯಲ್ಲಿ ಯಾರು ಮಂಗ (ಬುಗುರಿಯನ್ನು ಆಡಿಸಿ ಚಾಟಿಯಿಂದ ಕೈಯಲ್ಲಿ ಹಿಡಿಯುವುದು) ತೆಗೆದುಕೊಳ್ಳುವವರೋ ಅವರ ತಮ್ಮ ಬುಗುರಿಯನ್ನು ಪಟ್ಟೆಯಲ್ಲಿಡಬೇಕು. ಕೆಲವು ಬಾರಿ ಹೊಡೆಯುವ ರಭಸಕ್ಕೆ ಬುಗುರಿಯೆ ಒಡೆದು ಹೋಗಿದ್ದಿದೆ. ಅದಕ್ಕಾಗಿಯೇ ಜಗಳ ಆಡಿದ್ದಿದೆ. ಇಂತಹ ಆಟವನ್ನು ಆಡುವಾಗ ನನ್ನ ತಮ್ಮನ ಬುಗುರಿಗೆ ಗುನ್ನ ಹೊಡೆದಾಗಿತ್ತು. ನಾನು ಸೋತಿದ್ದೆ. ಅವನು ನನ್ನ ಬುಗುರಿಗೆ ಗುನ್ನ ಹೊಡೆಯಬೇಕು. ಹಾಗಾಗಿ ನಾನು ನನ್ನ ಬುಗುರಿಯನ್ನು ಎತ್ತಿಕೊಂಡು ಅಲ್ಲಿಂದ ತಪ್ಪಿಸಿಕೊಂಡು ಓಡುವುದಕ್ಕೆ ಶುರುಮಾಡಿದ್ದೆ. ಆಗ ತಮ್ಮ ನನ್ನ ಬೆನ್ನು ಬಿದ್ದಿದ್ದಾನೆ. ಇಬ್ಬರೂ ಮನೆಯಂಗಳದ ಕಡೆಗೆ ಜಿಗಿದು ಓಡಿಬರುತ್ತಿದ್ದೆವು. ಹೊಸದಾಗಿ ಹಟ್ಟಿಯಂಗಳಕ್ಕೆ ‘ಶೆಟ್ ಮಣ್ಣು’ ಹಾಕಿದ್ದರು. ಸಾಮಾನ್ಯವಾಗಿ ಬಯಲುಪ್ರದೇಶದಲ್ಲಿ ಮನೆಯ ಮುಂದಿನ ಹಟ್ಟಿಗೆ ಶೆಟ್ಮಣ್ಣು ಹಾಕಿ ಚೆನ್ನಾಗಿ ಬಡಿದು ಗಟ್ಟಿಗೊಳಿಸಿ ಒಣಗಿದ ಮೇಲೆ ಸಗಣಿ ಬಳಿಯುತ್ತಿದ್ದರು. (ಈಗ ಸಗಣಿಯು ಇಲ್ಲ ನೆಲವು ಇಲ್ಲ) ಹೊಸಶೆಟ್ಟಿನಲ್ಲಿ ಕಲ್ಲುಗಳು ತೇಲಿರುತ್ತವೆ. ಮಳೆಬಂದಂತೆಲ್ಲಾ ಇನ್ನೊಂದಿಷ್ಟು ಮೇಲೆ ಬಂದಿರುತ್ತದೆ. ಅದನ್ನು ಆಗಾಗ ಕುಟ್ಟಿ ಸರಿ ಮಾಡಬೇಕು. ಕೆಲಸದ ಒತ್ತಡದಲ್ಲಿ ಅಮ್ಮ ಅದನ್ನು ಸರಿ ಮಾಡಲು ಆಗಿರಲಿಲ್ಲ. ಇದ್ಯಾವುದರ ಪರಿವೆಯೂ ಇಲ್ಲದೆ ಆಟದಲ್ಲೆ ಮುಳುಗೇಳುತ್ತಿದ್ದ ನಮಗೆ ಹೇಗೆ ಗೊತ್ತಾಗಬೇಕು ಇದರಿಂದ ಅನಾಹುತ ಆಗುತ್ತದೆ ಎಂದು? ಅವನಿಂದ ತಪ್ಪಿಸಿಕೊಂಡು ಓಡಿ ಬರುತ್ತಿದ್ದ ನಾನು ಒಂದು ಕಲ್ಲನ್ನು ಎಡವಿ ನೆಲಕ್ಕೆ ಬಿದ್ದಿದ್ದೆ… ಯಾವ ಪರಿ ಬಿದ್ದಿದ್ದೆ ಎಂದರೆ ನನ್ನ ಎಡಗೈನ ಮಣಿಕಟ್ಟು ತಿರುವಿತ್ತು. ಬಾಗಿಲಲ್ಲೆ ಕುಳಿತು ಕೆಲಸ ಮಾಡುತ್ತಿದ್ದ ಅಮ್ಮ ಗಾಬರಿಯಾಗಿದ್ದಳು.. ಓಡಿ ಬಂದು ಕೈಯನ್ನು ಹಿಡಿದು ‘ಹೋಯಿತು ಕೈ’ ಇನ್ಮೇಲೆ ಬರೋದಿಲ್ಲ ಎಂದು ಗೊಳೋ…. ಎಂದು ಅಳುವುದಕ್ಕೆ ಶುರುಮಾಡಿದ್ದಳು. ನನಗೇನೊ ಆಯಿತೆಂದೆ ಅರಚುತ್ತ ತಿರುವಿಕೊಂಡ ಕೈಯನ್ನು ನೋಡುವಷ್ಟರಲ್ಲಿ ಅಮ್ಮ ಅದನ್ನು ನಿಧಾನವಾಗಿ ತಿರುಗಿಸಿ ಮೊದಲಿನಂತೆ ಮಾಡಿದ್ದಳು. ಈ ಗಲಾಟೆಯಲ್ಲಿ ಮೊಣಕಾಲಿಗೆ ಆದ ಗಾಯವನ್ನು ಯಾರು ಗಮನಿಸಿರಲಿಲ್ಲ. ಬಿಳಿಬಟ್ಟೆಯನ್ನು ಸುತ್ತಿ ಬಿಗಿಯಾಗಿ ಕಟ್ಟಿಬಿಟ್ಟಳು. ತತ್ ಕ್ಷಣಕ್ಕೆ ಆಸ್ಪತ್ರೆಗೆ ಹೋಗಲು ಆಗುವುದಿಲ್ಲ. ತಾಲ್ಲೂಕು ಕೇಂದ್ರಕ್ಕೆ ತಲುಪಲು ಅಂದು ಸಾಧ್ಯವಾಗದ ಕಾರಣ ಮರುದಿನವೇ ಹೋಗಬೇಕಿತ್ತು. ಆ ರಾತ್ರಿಗೆ ಉಪ್ಪಿನ ಕಾವು ಕೊಟ್ಟು ಒಂದು ಮಾತ್ರೆ ನುಂಗಿ ಕಳೆದದ್ದಾಯಿತು. ತಮ್ಮನಿಗೆ ಗುದ್ದುಗಳ ಮದ್ದು ಕೊಟ್ಟಿದ್ದರಿಂದ ಅವನು ಅಳುತ್ತಲೆ ಮಲಗಿದ್ದನು. ಮುಂದೆ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ಒಂದು ತಿಂಗಳಿಗಾಗುವಷ್ಟು ಔಷದಿ ಪಡೆದುಕೊಂಡೆವು. ಮೊಣಕಾಲು ವಾಸಿಯಾಗುತ್ತದೆ ಬಿಡು ಎಂದು ಅದರ ಗೋಜಿಗೆ ಹೋಗಿರಲಿಲ್ಲ.

ಬಹಳ ಮುಂಗೋಪಿಯಾಗಿದ್ದ ಅಧಿಕಾರಿಗೆ ಮನಸ್ಸಿಗೆ ಏನಾಗಿತ್ತೊ ಅಥವಾ ಯಾವ ಒತ್ತಡದಲ್ಲಿ ಇದ್ದನೊ ಗೊತ್ತಿಲ್ಲ. ರಭಸವಾಗಿಯೆ ಶಾಲೆಯಿಂದ ಹೊರಟ ಆತ ನಮ್ಮೂರ ಕೆರೆ ಏರಿಯ ಮೇಲೆ ಹೋಗುವಾಗ ಆಯತಪ್ಪಿ ಸೈಕಲ್ ಸಮೇತ ಉರುಳಿ ಕೆರೆಗೆ ಬಿದ್ದಿದ್ದ. ಮಳೆಯಿಲ್ಲದೆ ಕೆರೆಯಲ್ಲಿ ನೀರೂ ಇರಲಿಲ್ಲ. ಆದ್ದರಿಂದ ಆತನ ಮೈ ಕೈಯೆಲ್ಲಾ ಗಾಯವಾಗಿತ್ತು. ಗ್ರಾಮಸ್ಥರೇ ಆತನನ್ನು ಎತ್ತಿ ಉಪಚರಿಸಿ ಆತನಿಗೆ ಅಂತಹ ದೊಡ್ಡ ಪೆಟ್ಟುಗಳೇನು ಆಗಿರಲಿಲ್ಲ.

ಕೈ ಮೊದಲಿನಂತೆ ಆಗಿತ್ತು ಆದರೆ ಮೊಣಕಾಲ ಗಾಯ ಕೀವಾಗಿ ವಾಸಿಯಾಗಲು ನಾಲ್ಕೈದು ತಿಂಗಳು ತೆಗೆದುಕೊಂಡಿತು. ಹಾಗೆಯೇ ಶಾಲೆಗೆ ಹೋಗುತಿದ್ದೆ. ಮುಗಿದ ಪಾಠದ ನೋಟ್ಸ್ ಬರೆಯಲೆಬೇಕಾಗಿತ್ತು. ನಮ್ಮಪ್ಪ ನಮ್ಮಕ್ಕಂದಿರಿಗೆ ಒಳ್ಳೆಯ ಗುಣಾತ್ಮಕ ನೋಟ್‌ಬುಕ್‌ಗಳನ್ನು ತಂದಿದ್ದರು. ನನಗೆ ಸಣ್ಣ ತರಗತಿಯವನು ಅನ್ನೊ ಕಾರಣಕ್ಕೆ ಕಡಿಮೆ ಗುಣಾತ್ಮಕ ನೋಟ್ಬುಕ್ ತಂದು ಕೊಟ್ಟಿದ್ದರು. ನಾನು ಈಗಾಗಲೆ ಮುಗಿದ ಅಧ್ಯಾಯಗಳ ನೋಟ್ಸ್ ಬರೆಯಲೆಬೇಕಾಗಿತ್ತು. ಅವರು ಕಟ್ಟುನಿಟ್ಟಿನ ಶಿಕ್ಷಕರು. ಹಾಗಾಗಿ ಬರೆದೆ… ಬರೆದೆ.. (ಈಗಲೂ ಬರೆಯುವುದೆಂದರೆ ಇಷ್ಟ) ಎರಡ್ಮೂರು ದಿನಗಳಲ್ಲೆ ಎಲ್ಲಾ ವಿಷಯಗಳ ನೋಟ್ಸ್ ತಯಾರಾಗಿತ್ತು. ನನಗೆ ಒತ್ತಿ ಬರೆದು ರೂಢಿ. ಕಾಗದದ ಹಾಳೆಗಳು ತೆಳುವಾಗಿದ್ದರಿಂದ ಹಿಂದಿನಿಂದಲೂ ಅಕ್ಷರಗಳ ಪಡಿಯಚ್ಚು ಹಾಗೆ ಕಾಣುವಂತಿದ್ದವು. ಮೇಷ್ಟ್ರು ನೋಡಿದವರೆ ಬುಕ್ಕನ್ನು ಅಷ್ಟುದೂರಕ್ಕೆ ಪಟಾರೆಂದು ಎಸೆದುಬಿಟ್ಟಿದ್ದರು. ಕೆನ್ನೆಗೊಂದು ಏಟು ಸಹ ಬಿದ್ದಿತ್ತು. ಏನಾಯಿತೆಂದು ತಿಳಿಯದೆ ನಿಂತರೆ, ಸುತ್ತೆಲ್ಲ ಇದ್ದ ನನ್ನ ಸ್ನೇಹಿತರೆಲ್ಲ ನಗುತ್ತಲಿದ್ದರು. ಅಂದು ನಾನು ತೀವ್ರ ಅವಮಾನಿತನಾಗಿದ್ದೆ. ಹಾಗಾಗಿ ನನ್ನಲ್ಲೊಂದು ಕೀಳರಿಮೆಯ ಭಾವ ಉಳಿದು ಬಿಟ್ಟಿತು.

ಎಲ್ಲರಿಗಿಂತ ಚೆನ್ನಾಗಿಯೇ ಬರೆದಿದ್ದ ನನಗೆ, ಹಾಗೆ ಮೇಷ್ಟ್ರು ಹೊಡೆದದ್ದರಿಂದ ದಿಗ್ಬ್ರಾಂತನಾಗಿ ನೋಡುತ್ತಿದ್ದೆ. ನಾನು ಸಾವರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಕಣ್ಣಿನಿಂದ ನೀರು ಸುರಿಯುತ್ತಿತ್ತು. ನೋಟ್ ಬುಕ್ ನನ್ನಿಂದ ಇಪ್ಪತ್ತೈದು ಮೀಟರ್‌ನಷ್ಟು ದೂರ ಬಿದ್ದಿತ್ತು. ಹಾಳೆಗಳು ಗಾಳಿಗೆ ಹಾರುತ್ತಿದ್ದವು. ಅವರ ತರಗತಿ ಮುಗಿದ ಮೇಲೆ ಈ ಹಿಂದೆ ನಮಗೂ ಹೀಗೆ ಮಾಡಿದ್ದರು ಎಂದು ನನ್ನ ಗೆಳೆಯರು ನನ್ನನ್ನು ಸಮಾಧಾನ ಮಾಡಿದರು. ಈ ಘಟನೆ ನಡೆದ ಮೇಲೆ ಎರಡು-ಮೂರು ದಿನ ಅದರ ಬಗ್ಗೆಯೆ ಯೋಚಿಸಿದೆ. ಬಡತನವಿಲ್ಲದಿದ್ದರೆ ನನ್ನ ಅಪ್ಪ-ಅಮ್ಮನೂ ನನಗೆ ಒಳ್ಳೆಯ ನೋಟ್ ಬುಕ್ ತಂದುಕೊಡುತ್ತಿದ್ದರು ಎನಿಸಿದ್ದು ನಿಜ. ಈಗ ನಾನೂ ಶಿಕ್ಷಕನಾಗಿದ್ದೇನೆ. ಹಾಗಾಗಿ ನನ್ನ ವಿದ್ಯಾರ್ಥಿಗಳು ನೋಟ್ಬುಕ್ ಇಲ್ಲ ಎಂದರೆ ನನ್ನನ್ನು ಕೇಳಿ ಕೊಡಿಸುತ್ತೇನೆ ಎಂದೆ ಹೇಳಿದ್ದೇನೆ. ಬೇಕಾದ ಮಕ್ಕಳಿಗೆ ಸಣ್ಣ ಸಹಾಯವನ್ನು ಮಾಡುತ್ತಲೆ ಇರುತ್ತೇನೆ. ಈ ಘಟನೆ ನಡೆದ ಮೇಲೆ ಶಿಕ್ಷಕರೆ ನನಗೆ ನಾಲ್ಕು ಲೇಖಿಕ್ ನೋಟ್ಬುಕ್ ತಂದುಕೊಟ್ಟಿದ್ದರು. ಅವರಿಗೆ ನನ್ನ ಮೇಲೆ ಇದ್ದ ಪ್ರೀತಿಗೆ ಇದು ಸಾಕ್ಷಿಯಾಗಿತ್ತು. ಈ ಹಿಂದೆ ತರಗತಿಯಲ್ಲಿ ಎಲ್ಲರಿಗೂ ಹೇಳಿದಂತೆ ನನಗೂ ಹೇಳಿದ್ದರು ಎಂಬುದು ನಂತರವಷ್ಟೇ ತಿಳಿಯಿತು.

ಇನ್ನೊಂದು ಘಟನೆಯನ್ನು ಹೇಳಲೇಬೇಕು. ಆಲೆಲ್ಲ ಪೈಸೆಗಳಲ್ಲೆ ನಡೆಯುತ್ತಿದ್ದ ಬದುಕು ಇಂದಿನಂತೆ ತರಾವರಿ ಅಂಗಡಿಗಳಿರಲಿಲ್ಲ. ಈಗಿನ ಮಕ್ಕಳಂತೆ ಯಾವ ಐಷಾರಾಮದ ತಿಂಡಿ ತಿನಿಸುಗಳಿರಲಿಲ್ಲ. ಚಾಕೊಲೇಟಂತು ಕೇಳೇ ಇರಲಿಲ್ಲ. ನಮ್ಮ ಕಾಲದ್ದೆಲ್ಲ ನಿಂಬೆಹುಳಿ ಪೇಪರ್‌ಮೆಂಟ್.. ಇದೇ ಅವಾಗಿನ ಮಕ್ಕಳ ಸಿಹಿ ಅನಿಸಿದ್ದು. ಇದನ್ನು ಬಿಟ್ಟರೆ ಸಿಂಕುಳ್ಳಿ (ಹುರುಳಿ ಕಾಳಿಗೆ ಕಾರದ ಒಗ್ಗರಣೆ ಹಾಕಿರುವ ತಿನಿಸು) ಜೊತೆಗೆ ಗೆಣಸನ್ನು ಮಾರುತ್ತಿದ್ದರು.

ಮೊದಮೊದಲು ಐದು ಪೈಸೆಗೆ ಒಂದು ಪೀಸ್ ಗೆಣಸು ಕೊಡುತ್ತಿದ್ದರು. ಆಮೇಲಾಮೇಲೆ ಹತ್ತು ಪೈಸೆಗೆ ಒಂದು ಗೆಣಸು ಕೊಡುತ್ತಿದ್ದರು. ಅದು ನಮ್ಮೂರಿನಲ್ಲಿದ್ದದ್ದು ಒಂದೆ ಅಂಗಡಿ ಭೂತಜ್ಜನ ಅಂಗಡಿ. ಹಳ್ಳಿಕಟ್ಟೆಯ ಎಡಭಾಗದಲ್ಲಿ ಒಂದು ದೊಡ್ಡ ಮನೆಯ ಒಂದು ಕೊಠಡಿಯ ಮುಂಭಾಗದಲ್ಲಿ ಪದಾರ್ಥಗಳನ್ನು ಜೋಡಿಸಿಟ್ಟುಕೊಂಡು ವ್ಯಾಪಾರ ಮಾಡಿ, ರಾತ್ರಿ ಒಳಗಿಟ್ಟು ಬೆಳಿಗ್ಗೆ ಅದನ್ನು ಮತ್ತೆ ತೆಗೆದು ಜೋಡಿಸಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು. ಇದು ಪ್ರತಿದಿನವು ಪುನರಾವರ್ತನೆಯಾಗುತ್ತಿತ್ತು. ಅಲ್ಲಿಗೆ ಹೋಗುವುದಕ್ಕೆ ಹೆದರಿಕೊಳ್ಳುತ್ತಿದ್ದೆವು. ಅದು ಕತ್ತಲ ಕೋಣೆಯಂತಿತ್ತು. ಅಪ್ಪ ಅಮ್ಮ ತಾಲ್ಲೂಕು ಕೇಂದ್ರಕ್ಕೆ ಕಟ್ಟಿದ ಬೀಡಿಗಳನ್ನು ಕೊಡಲು ಹೋಗುತ್ತಿದ್ದರು. ಸಾಮಾನ್ಯವಾಗಿ ಬೀಡಿ ಕೊಂಡುಕೊಳ್ಳುವವರು ಅಲ್ಲಿಯೆ ವಾಸವಾಗಿರುತ್ತಿದ್ದರು. ಈಗಿನಂತೆ ಬಸ್ಸುಗಳು ಜಾಸ್ತಿಯಿರಲಿಲ್ಲ. ಎರಡ್ಮೂರು ಅಷ್ಟೇ ಹೋಗ್ತಾ ಇದ್ವು. ಬೆಳಿಗ್ಗೆ ಹೋದರೆ ಸಾಯಂಕಾಲವೆ ಬರುತ್ತಿದ್ದುದು. ಅವರಿಗೆ ಅದು ಕಷ್ಟದ ಕೆಲಸವಾದರೆ ನಮಗೆ ಖುಷಿಯ ವಿಚಾರವಾಗಿತ್ತು. ಏಕೆಂದರೆ ನನಗೆ ಇಪ್ಪತ್ತು ಪೈಸೆ ಕೊಡುತ್ತಿದ್ದರು. ನಾವು ಗೆಣಸು ತಿನ್ನಬಹುದಲ್ಲ ಎಂಬ ಆಸೆ. ಮಧ್ಯಾಹ್ನ ಮಾಮೂಲಿಯಾಗಿ ಗೋಧಿ ಉಪ್ಪಿಟ್ಟು ಸಿಗುತ್ತಿತ್ತು. ಶಾಲೆ ಮುಗಿಸಿಕೊಂಡು ಬಂದು ನಾವು ಪುಸ್ತಕದ ಬ್ಯಾಗನ್ನು ಮನೆಯಲ್ಲಿಟ್ಟು ಓಡಿಹೋಗುತ್ತಿದ್ದೆವು. ಎಷ್ಟೊಂದು ಸಂಭ್ರಮ ಜೇಬಿನಲ್ಲಿದ್ದ ಆ ಪೈಸೆ ನನ್ನ ಮುಖದಲ್ಲೊಂದು ಆನಂದವನ್ನು ತಂದುಕೊಡುತಿತ್ತು. ಇವತ್ತು ಯೋಚಿಸಿದರೆ ಅಂಥದೊಂದು ಆನಂದಕ್ಕೆ ಕಾರಣವಾಗಿದ್ದು ಹಣವ, ಗೆಣಸ ಮನಸ್ಸು ತರ್ಕಕ್ಕೆ ಬೀಳುತ್ತದೆ. ಹಣದಿಂದ ಮನುಷ್ಯ ಸುಖವಾಗಿರುತ್ತಾನ ಎಂದು ಯೋಚಿಸಿದಾಗಲೆಲ್ಲಾ ಅವಶ್ಯಕತೆಗಿಂತ ಹೆಚ್ಚಿನ ಹಣವು ಯಾವತ್ತು ಸುಖ ತಂದುಕೊಡುವುದಿಲ್ಲ ಅನಿಸುತ್ತದೆ. ಇದನ್ನೆ ಇರಬೇಕು ಬುದ್ಥ “ಆಸೆಯೆ ದುಃಖಕ್ಕೆ ಮೂಲ, ದುಃಖ ನಿವಾರಣೆಗೆ ಆಸೆಯನ್ನು ಬಿಡಬೇಕು” ಎಂದಿರಬೇಕು ಎನಿಸುತ್ತದೆ. ಹಾಗಾಗಿ ನನ್ನ ಆನಂದಕ್ಕೆ ಕಾರಣವಾಗಿದ್ದು ಗೆಣಸು ಸಿಗುತ್ತಲ್ಲ ಎಂಬುದೆ ಆಗಿತ್ತು ಅನಿಸುತ್ತದೆ.

ನಾನು ಅಕ್ಕ ಅಂದು ಹಣ ಹಿಡಿದು ಆ ಮನೆಯತ್ತ ಓಡಿದೆವು. ಹಳ್ಳಿಕಟ್ಟೆಯ ಹತ್ತಿರ ಬಂದಂತೆ ಹೃದಯದ ಬಡಿತವು ಜಾಸ್ತಿಯಾಯಿತು. ಯಾಕೆಂದರೆ ಮನೆ ನೋಡಿದರೆ ಭಯವಾಗುತ್ತಿತ್ತು. ನಿಧಾನಕ್ಕೆ ಹೋದೆವು. ಜೇಬಿನಲ್ಲಿದ್ದ ಇಪ್ಪತ್ತು ಪೈಸೆ ತೆಗೆದುಕೊಟ್ಟು ಎರಡು ಗೆಣಸು ತೆಗೆದುಕೊಂಡೆವು. ನನ್ನೊಂದಿಗೆ ನನ್ನಕ್ಕನೂ ಬಂದಿದ್ದಳು. ಅವಳೇನೊ ತಕೊಂಡು ಓಡಿದಳು. ನಾನು ತಗೊಂಡು ಹಿಂತಿರುಗುವಷ್ಟರಲ್ಲಿ ನನ್ನ ಕೈಲಿದ್ದ ಗೆಣಸನ್ನು ನಾಯಿ ಕಚ್ಚಿಕೊಂಡಿತ್ತು. ಗಾಬರಿಯಲ್ಲಿ ನಾನು ಕಿರುಚಿ ಉಳಿದದ್ದನ್ನು ಕೈಚೆಲ್ಲಿದ್ದೆ. ಅದು ಅದನ್ನು ಒಂದು ಸಲ ಮೂಸಿ ಎರಡನ್ನೂ ತಿಂದಿತು. ಗಾಬರಿಯಿಂದ ಕಿರುಚುತ್ತಲೆ ಮನೆಯತ್ತ ಓಡಿದ್ದೆ. ನನ್ನಕ್ಕನೆ ಸಮಾಧಾನ ಮಾಡಿ ತಾನು ತಂದಿದ್ದ ಎರಡರಲ್ಲಿ ಒಂದನ್ನು ಕೊಟ್ಟಿದ್ದಳು. ಅದನ್ನೇ ತಿಂದು ಸಮಾಧಾನ ಪಟ್ಟುಕೊಂಡೆ. ರಾತ್ರಿ ಅಮ್ಮನಿಗೆ ಹೇಳಿದಾಗ ಹೋದ್ರೆ ಹೋಗ್ಲಿ ಬಿಡು. ಸದ್ಯ ನಿನ್ನನ್ನು ಕಚ್ಚಲಿಲ್ಲವಲ್ಲ ಎಂದಳು. ಸಮಾಧಾನಕ್ಕೆ, ಕಷ್ಟಕ್ಕೆ, ತಾಳ್ಮೆಗೆ, ಔದಾರ್ಯಕ್ಕೆ, ಕ್ಷಮಾಗುಣಕ್ಕೆ ಬದುಕು ನಡೆಸುವುದಕ್ಕೆ, ಧೈರ್ಯಕ್ಕೆ, ಆನಂದಕ್ಕೆ, ಜಗತ್ತಿನ ಯಾವ ವಿಶೇಷಣಗಳಿವೆಯೋ ಅವೆಲ್ಲವೂ ತಾಯಿಗೇ ಸಲ್ಲಬೇಕು. ಯಾಕೆಂದರೆ “ತಾಯಿಗಿಂತ ದೇವರಿಲ್ಲ” ಅಲ್ಲವೆ.

(ಮುಂದುವರಿಯುವುದು)