`ಮೊಹರಂ’ ಎಂದರೆ ನಿಷಿದ್ಧವಾದುದು ಎಂದರ್ಥ. ಶ್ರದ್ಧಾವಂತ ಮುಸ್ಲಿಮರ ಪಾಲಿಗಿದು ಸೂತಕದ ಮಾಸ. ಈ ಮಾಸದಲ್ಲಿ ಅವರು ಮದುವೆಯಂತಹ ಶುಭಕಾರ್ಯ ಹಮ್ಮಿಕೊಳ್ಳುವುದಿಲ್ಲ. ದುರಂತ ಸಾವು ವಸ್ತುವಾಗಿರುವ ಮೊಹರಂ ಸಾಹಿತ್ಯವೂ ಒಂದರ್ಥದಲ್ಲಿ ಸೂತಕದ ಸಾಹಿತ್ಯವೇ. ವಿಶೇಷವೆಂದರೆ, ಅರಬರ ಈ ದಾಯಾದಿ ಸಂಘರ್ಷದ ರಾಜಕೀಯ ಚರಿತ್ರೆ, ಮೊಹರಂ ಆಚರಣೆಯ ರೂಪತಾಳಿದ ಬಳಿಕ, ಇಸ್ಲಾಮಿನ ಜತೆಜತೆಗೆ ಜಗತ್ತಿನ ನಾನಾ ಭಾಗಗಳಿಗೆ ಹೋಯಿತು ಮತ್ತು ಅರಬೇತರ ದೇಶಗಳಲ್ಲಿ ವಿಭಿನ್ನ ರೂಪಾಂತರ ಪಡೆಯಿತು. ಪ್ರಥಮ ಘಟ್ಟದಲ್ಲಿ ಭಾರತಕ್ಕೆ ಇದು ಇರಾನಿನಿಂದ ಶಿಯಾ ಪಂಗಡದ ದೊರೆ, ಅಧಿಕಾರಿ, ವ್ಯಾಪಾರಿ, ಸೈನಿಕ ಹಾಗೂ ವಿದ್ವಾಂಸರ ಜತೆ ಬಂದಿತು.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯಲ್ಲಿ ಹೊಸ ಬರಹ

ಜೀವನಾವರ್ತನದ ಆಚರಣೆಯಂತೆಯೇ ವಾರ್ಷಿಕಾವರ್ತನ ಆಚರಣೆಗಳಲ್ಲಿಯೂ ಗಂಟಿಚೋರ ಸಮುದಾಯ ಸಾರ್ವತ್ರಿಕ ಲಕ್ಷಣಗಳನ್ನು ಮೈಗೂಡಿಸಿಕೊಂಡಿದೆ. ಹಾಗಾಗಿ ಈ ಶಿರ್ಷಿಕೆಯಡಿ ಗಂಟಿಚೋರ ಸಮುದಾಯಕ್ಕೇ ವಿಶಿಷ್ಠವಾದ ಕೆಲವು ಪ್ರಮುಖ ಆಚರಣೆಗಳನ್ನು ಮಾತ್ರ ವಿವರಿಸಲಾಗಿದೆ. ಉಳಿದಂತೆ ಸಾರ್ವತ್ರಿಕ ಲಕ್ಷಣ ಪಡೆದು ಆಚರಿಸುವ ಹಬ್ಬ ಆಚರಣೆಗಳನ್ನು ಪರಿಚಯಿಸಿಲ್ಲ. ಕಾರಣ ಇವುಗಳಲ್ಲಿ ಒಂದು ಜನಪ್ರಿಯ ಮಾದರಿಯ ಅನುಕರಣೆ ಕಾಣುತ್ತದೆ. ಹಲವು ಕೆಳಜಾತಿ ದಲಿತ ಬುಡಕಟ್ಟು ಸಮುದಾಯಗಳಲ್ಲಿ ಸಂಭವಿಸಬಹುದಾದ ಮೇಲ್ಚಲನೆಯ ಲಕ್ಷಣಗಳು ಗಂಟಿಚೋರ ಸಮುದಾಯದಲ್ಲಿಯೂ ಕಾಣುತ್ತದೆ. ಹಾಗಾಗಿ ವಿರಳವಾಗಿ ಸತ್ಯನಾರಾಯಣ ಪೂಜೆ, ಮದುವೆಗಳಿಗೆ ಪುರೋಹಿತರನ್ನು ಕರೆಸುವುದು, ನಾಮಕರಣದಂತಹ ಸಂದರ್ಭದಲ್ಲಿ ಪುರೋಹಿತರ ಬಳಿ ಹೋಗುವುದು ಇದೆ. ಇಂತಹ ಮೇಲುಜಾತಿಗಳ ಅನುಕರಣೆ ಹೆಚ್ಚಾಗಿ ನಗರ ಭಾಗದಲ್ಲಿ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರ ಮನೆಗಳಲ್ಲಿ ಕಾಣುತ್ತದೆ.

ಶಾಕ್ತಾರಾಧನೆಗಳು

ಈ ಹಿಂದೆ ಚರ್ಚಿಸಿದಂತೆ ಗಂಟಿಚೋರರು ಶಾಕ್ತೇಯ ಸಮುದಾಯ. ಹಾಗಾಗಿ ಸಹಜವಾಗಿ ಇವರ ವಾರ್ಷಿಕ ಆಚರಣೆಗಳಲ್ಲಿ ಶಾಕ್ತಪಂಥದ ಆರಾಧನೆಯೇ ಪ್ರಧಾನವಾಗಿ ಕಂಡುಬರುತ್ತದೆ. ಗಂಟಿಚೋರ ಸಮುದಾಯ ನೆಲೆಸಿದ ಕರ್ನಾಟಕದ ಎಲ್ಲಾ ಭಾಗಗಳಲ್ಲಿಯೂ ಸ್ತ್ರೀದೈವಗಳಲ್ಲಿ ಫರಕಿದೆಯಾದರೂ ಈ ಎಲ್ಲಾ ಆರಾಧನೆಗಳ ಎಳೆ ಒಂದೇಯಾಗಿದೆ. ಅದು ಶಾಕ್ತಾರಾಧನೆಯ ಜತೆ ಬೆಸೆದುಕೊಂಡಿದೆ. ಹಾಗಾಗಿ ಗಂಟಿಚೋರ ಸಮುದಾಯದ ವಾರ್ಷಿಕಾವರ್ತನ ಆಚರಣೆಯಲ್ಲಿ ಶಾಕ್ತಾರಾಧನೆಗಳು ಪ್ರಮುಖ ಸ್ಥಾನ ಪಡೆದಿದೆ.

ಕರ್ನಾಟಕದಲ್ಲಿ ನೆಲೆಗೊಂಡ ಗಂಟಿಚೋರ ಸಮುದಾಯದವು ವಾರ್ಷಿಕವಾಗಿ ಶಾಕ್ತಾರಾಧನೆಯಲ್ಲಿ ಬೇರೆ ಬೇರೆ ಸ್ತ್ರೀದೈವಗಳ ನೆಲೆಯಲ್ಲಿ ಪಾಲ್ಗೊಳ್ಳುತ್ತದೆ. ಪ್ರಮುಖವಾಗಿ ನೋಡುವುದಾದರೆ, ರಾಯಭಾಗ ತಾ. ಕಟಕಭಾವಿಯಲ್ಲಿ ಅಂಬಾಭವಾನಿ, ನಿಂಗಮ್ಮನ ಆಚರಣೆ, ಗೋಕಾಕ ಫಾಲ್ಸ್‌ನಲ್ಲಿ ಲಕ್ಕವ್ವ, ಹೊಳೆವ್ವ, ಕರೆಮ್ಮಾದೇವಿ, ದುರ್ಗಾದೇವಿಗೆ ಸಂಬಂಧಿಸಿದ ಆಚರಣೆಗಳು, ಶಾಹುಪಾರ್ಕಲ್ಲಿ ಲಕ್ಷ್ಮಿದೇವಿ, ದ್ಯಾಮವ್ವ, ಲಗಮವ್ವ, ಹುಲಿಗೆಮ್ಮರ ಜಾತ್ರೆ, ಗದಗ ಬೆಟಗೇರಿ ಸೆಟ್ಲಮೆಂಟ್‌ನಲ್ಲಿ ಮಂಗಳಾದೇವಿ ಆರಾಧನೆ, ಬರಗುಡಿಯಲ್ಲಿ ಮರಗಮ್ಮ, ಭಾಗ್ಯವಂತಿಯ ಜಾತ್ರೆ, ಕೊಪ್ಪಳ ತಾಲೂಕಿನ ಹಿರೇಬಮ್ಮನಾಳದಲ್ಲಿ ಹುಲಿಗೆಮ್ಮ, ಎಲ್ಲಮ್ಮರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಯಭಾಗ ತಾಲೂಕು ಬೆಂಡವಾಡ ಗಂಟಿಚೋರ ಮಡ್ಡಿ ಲಕ್ಕವ್ವನ ಜಾತ್ರೆ ಮಾಡುತ್ತಾರೆ.

ಗೋಕಾಕದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ `ಲಕ್ಷ್ಮಿದೇವಿ’ ಜಾತ್ರೆಯನ್ನು ಮಾಡುತ್ತಾರೆ. ಈ ಜಾತ್ರೆಯಲ್ಲಿ ಗೋಕಾಕ ಫಾಲ್ಸ್‌ನ ಗಂಟಿಚೋರ್ಸ್ ಸಮುದಾಯವು ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಕೆ.ಕೆ.ಮಮದಾಪುರದಲ್ಲಿ ಸಂತೂಬಾಯಿ ಜಾತ್ರೆ, ಕೊಪ್ಪಳ ಜಿಲ್ಲೆಯ ಹಿರೇಬಮ್ಮನಾಳದ ದುರ್ಗವ್ವನ ಜಾತ್ರೆ, ಗೋಕಾಕ ತಾಲೂಕಿನ ಹಳ್ಳೂರಿನ ಗಂಟಿಚೋರ ಸಮುದಾಯ 12 ವರ್ಷಕ್ಕೊಮ್ಮೆ `ಮಹಾಲಕ್ಷ್ಮಿ’ ಯ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತದೆ. ಈ ಮಹಾಲಕ್ಷ್ಮಿ ಜಾತ್ರೆಯನ್ನು ಹಳ್ಳೂರು ಒಳಗೊಂಡಂತೆ ಶಿವಾಪುರ, ಕಪ್ಪಲಗುಂಡಿ ಒಳಗೊಂಡಂತೆ ಮೂರು ಊರುಗಳು ಸೇರಿ ಮಾಡುತ್ತವೆ. ಕಡಕಬಾವಿ ಗಂಟಿಚೋರರು ಇಟಿಗಿ ಭೀಮವ್ವ, ಗುಡ್ಡಾಪುರ ಧಾನಮ್ಮನ ಜಾತ್ರೆ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ.

ಮುಖ್ಯವಾಗಿ ಕರ್ನಾಟಕದಲ್ಲಿ ನೆಲೆಗೊಂಡ ಎಲ್ಲಾ ಗಂಟಿಚೋರರು ಸವದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ವರ್ಷದಲ್ಲಿ ಬರುವ ಐದು ಹುಣ್ಣಿಮೆಗಳಿಗೆ ಶಕ್ತಾನುಸಾರ ಹೋಗುತ್ತಾರೆ. ಇದರಲ್ಲಿ ಹೊಸ್ತಲ ಹುಣ್ಣಿಮೆ, ಶೀಗೆ ಹುಣ್ಣಿಮೆ, ಗೌರಿ ಹುಣ್ಣಿಮೆ, ಭಾರತ ಹುಣ್ಣಿಮೆ, ಬನದ ಹುಣ್ಣಿಮೆಗಳಿದ್ದು, ಗಂಟಿಚೋರ ಸಮುದಾಯ ಹೆಚ್ಚು ಪ್ರಮಾಣದಲ್ಲಿ ಬನದ ಹುಣ್ಣಿಮೆಗೆ ನಡೆಯುತ್ತಾರೆ. ಉಳಿದಂತೆ ಅವರವರ ಅನುಕೂಲಕ್ಕೆ ತಕ್ಕಂತೆ ಐದೂ ಹುಣ್ಣಿಮೆಗೆ ಹೋಗುವುದೂ ಇದೆ. ಯಲ್ಲಮ್ಮನಿಗೆ ಹರಕೆ ಡಬ್ಬಿಯಿಟ್ಟು ವರ್ಷಪೂರ್ತಿ ಆ ಡಬ್ಬಿಗೆ ಹಣವನ್ನು ಹಾಕಿ ವರ್ಷಕ್ಕೊಮ್ಮೆ ದೇವಿಗೆ ಅರ್ಪಿಸುವ ಪದ್ಧತಿಯೂ ಇತ್ತು. ಹೀಗಿದ್ದಾಗಲೂ ತುಡುಗು ಯಶಸ್ವಿಯಾದರೆ ಅದರಲ್ಲಿ ಯಲ್ಲಮ್ಮನ ಪಾಲನ್ನು ತೆಗೆದಿಟ್ಟು ಹುಣ್ಣಿಮೆಗೆ ಬಂದಾಗ ಮುಡಿಪನ್ನು ಸಲ್ಲಿಸುವುದಿತ್ತು. ಅಂತೆಯೇ ತುಡುಗಿಗೆ ಹೋಗುವ ಮೊದಲು ಯಲ್ಲಮ್ಮನ ಪದಕದ ಶಕುನ ಕೇಳುವ ನಂಬಿಕೆಯೂ ಇತ್ತು.

ಅಂತೆಯೇ ಗಂಟಿಚೋರ ಸಮುದಾಯ ಕೆಲವರು ಕೊಪ್ಪಳ ಜಿಲ್ಲೆಯ ಹುಲಗಿಯ ಹುಲಿಗೆಮ್ಮನಿಗೂ ನಡೆಯುತ್ತಾರೆ. ಇದರಲ್ಲಿ ಕೊಪ್ಪಳ ಜಿಲ್ಲೆಯ ಹಿರೇಬೊಮ್ಮನಾಳ ಭಾಗದ ಗಂಟಿಚೋರರ ಪಾಲ್ಗೊಳ್ಳುವಿಕೆ ಸಂಖ್ಯೆ ಹೆಚ್ಚಿರುತ್ತದೆ. ಗದಗದ ನರಸಾಪುರ ಗ್ರಾಮ ಸಮೀಪದ ದಂಡಿನ ದುರುಗಮ್ಮನಿಗೆ ಈ ಭಾಗದ ಗಂಟಿಚೋರರು ತುಂಬಾ ನಡೆಯುತ್ತಾರೆ.

ಗಂಟಿಚೋರ ಸಮುದಾಯ ನೆಲೆಸಿದ ಕರ್ನಾಟಕದ ಎಲ್ಲಾ ಭಾಗಗಳಲ್ಲಿಯೂ ಸ್ತ್ರೀದೈವಗಳಲ್ಲಿ ಫರಕಿದೆಯಾದರೂ ಈ ಎಲ್ಲಾ ಆರಾಧನೆಗಳ ಎಳೆ ಒಂದೇಯಾಗಿದೆ. ಅದು ಶಾಕ್ತಾರಾಧನೆಯ ಜತೆ ಬೆಸೆದುಕೊಂಡಿದೆ.

ಹನುಮಾರಾಧನೆ

ಹನುಮನ ಆರಾಧನೆ ಗಂಟಿಚೋರ ಸಮುದಾಯದಲ್ಲಿ ಯಥೇಚ್ಚವಾಗಿ ಕಂಡುಬರುವ ಪುರುಷ ದೈವಾರಾಧನೆಯಾಗಿದೆ. ಇದು ಆಯಾ ಊರಿನ ಹನುಮಂತನ ಜತೆ ಒಂದು ಸಂಬಂಧವನ್ನು ಸೃಷ್ಟಿಸಿಕೊಂಡದ್ದಿದೆ. ಬೆಳಗಾಂ ಜಿಲ್ಲೆಯ ಹಲವು ಕಡೆಯ ಗಂಟಿಚೋರರು ಕಲ್ಲೋಳಿ ಹನುಮಂತನ ಒಕ್ಕಲಿನರಾಗಿದ್ದಾರೆ. ಕಲ್ಲೋಳಿ ಹನುಮಂತನ ಕಾರ್ತೀಕಕ್ಕೆ ಬಹುಪಾಲು ಗಂಟಿಚೋರ ಸಮುದಾಯದವರು ಹೋಗುತ್ತಾರೆ. ಇನ್ನು ಬಾಲೆಹೊಸೂರು ಹನುಮಂತನ ಆರಾಧನೆ ದೊಡ್ಡದಾಗಿದೆ. ಅಂತೆಯೇ ಗದಗ ಸೆಟ್ಲಮೆಂಟಲ್ಲಿಯೂ ಮಾರುತಿ ದೇವಸ್ಥಾನಕ್ಕೆ ನಡೆಯುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯೂ ವಾರ್ಷಿಕ ಆರಾಧನೆಗಳಲ್ಲಿ ಸ್ಥಳೀಯ ಗಂಟಿಚೋರ ಸಮುದಾಯವು ಭಾಗಿಯಾಗುತ್ತದೆ. ಕಟಕಬಾವಿಯಲ್ಲಿಯೂ ಹನುಮಂತನ ಆರಾಧನೆ ಇದೆ. ಹುಬ್ಬಳ್ಳಿ ಸೆಟ್ಲಮೆಂಟಿನಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಮಾಡುತ್ತಾರೆ. ಕೆ.ಕೆ.ಮಮದಾಪುರದಲ್ಲಿ ಹನುಮಂತನ ಜತೆ ಅಮೋಘಸಿದ್ದ, ಬಸವಣ್ಣನ ಜಾತ್ರೆ ಉತ್ಸವಗಳಲ್ಲಿಯೂ ಭಾಗವಹಿಸುತ್ತಾರೆ. ಕೊಪ್ಪಳ ಜಿಲ್ಲೆಯ ಹಿರೇಬಮ್ಮನಾಳದಲ್ಲಿ ಹನುಮಂತನ ಉತ್ಸವದ ಜತೆ ಶರಣಬಸವೇಶ್ವರ ಜಾತ್ರೆಯಲ್ಲಿಯೂ ಪಾಲ್ಗೊಳ್ಳುತ್ತಾರೆ.

ಮೊಹರಂ ಆಚರಣೆ

ಗಂಟಿಚೋರ್ ಸಮುದಾಯದಲ್ಲಿ ನಡೆಯುವ ವಾರ್ಷಿಕ ಆಚರಣೆಯಲ್ಲಿ ವಿಶೇಷವಾಗಿ ಮೊಹರಂ ಬಹಳ ಮುಖ್ಯವಾದುದು. ಗಂಟಿಚೋರರ ವಾಸದ ಎಲ್ಲಾ ನೆಲೆಗಳಲ್ಲಿಯೂ ಸಾಮಾನ್ಯವಾಗಿ ಮೊಹರಂ ಹಬ್ಬವನ್ನು ಮಾಡುತ್ತಾರೆ. ಹುಬ್ಬಳ್ಳಿ, ಗದಗ, ಗೋಕಾಕ ಫಾಲ್ಸ್‌ನಲ್ಲಿನ ಗಂಟಿಚೋರರ ಸೆಟ್ಲಮೆಂಟುಗಳಲ್ಲಿಯೇ ಮೊಹರಂ ಮಸೀದಿಗಳು ಇರುವುದನ್ನು ನೋಡಬಹುದಾಗಿದೆ. ಈ ಸಮುದಾಯದ ಕೆಲವರಿಗೆ ಮೊಹರಂ ದೇವರುಗಳ ಹೆಸರನ್ನೂ ಇಟ್ಟಿರುವುದೂ ಇದೆ. ಹೀಗೆ ವಾರ್ಷಿಕಾವರ್ತನ ಆಚರಣೆಗಳಲ್ಲಿ ಸ್ತ್ರೀದೈವ, ಹನುಮನ ಆರಾಧನೆಯನ್ನು ಹೊರತುಪಡಿಸಿದರೆ ಮುಖ್ಯವಾಗಿ ಮೊಹರಂ ಆಚರಣೆ ದೊಡ್ಡಮಟ್ಟದಲ್ಲಿ ನಡೆಯುತ್ತದೆ.

`ಮೊಹರಂ’ ಎಂದರೆ ನಿಷಿದ್ಧವಾದುದು ಎಂದರ್ಥ. ಶ್ರದ್ಧಾವಂತ ಮುಸ್ಲಿಮರ ಪಾಲಿಗಿದು ಸೂತಕದ ಮಾಸ. ಈ ಮಾಸದಲ್ಲಿ ಅವರು ಮದುವೆಯಂತಹ ಶುಭಕಾರ್ಯ ಹಮ್ಮಿಕೊಳ್ಳುವುದಿಲ್ಲ. ದುರಂತ ಸಾವು ವಸ್ತುವಾಗಿರುವ ಮೊಹರಂ ಸಾಹಿತ್ಯವೂ ಒಂದರ್ಥದಲ್ಲಿ ಸೂತಕದ ಸಾಹಿತ್ಯವೇ. ವಿಶೇಷವೆಂದರೆ, ಅರಬರ ಈ ದಾಯಾದಿ ಸಂಘರ್ಷದ ರಾಜಕೀಯ ಚರಿತ್ರೆ, ಮೊಹರಂ ಆಚರಣೆಯ ರೂಪತಾಳಿದ ಬಳಿಕ, ಇಸ್ಲಾಮಿನ ಜತೆಜತೆಗೆ ಜಗತ್ತಿನ ನಾನಾ ಭಾಗಗಳಿಗೆ ಹೋಯಿತು ಮತ್ತು ಅರಬೇತರ ದೇಶಗಳಲ್ಲಿ ವಿಭಿನ್ನ ರೂಪಾಂತರ ಪಡೆಯಿತು. ಪ್ರಥಮ ಘಟ್ಟದಲ್ಲಿ ಭಾರತಕ್ಕೆ ಇದು ಇರಾನಿನಿಂದ ಶಿಯಾ ಪಂಗಡದ ದೊರೆ ಅಧಿಕಾರಿ ವ್ಯಾಪಾರಿ ಸೈನಿಕ ಹಾಗೂ ವಿದ್ವಾಂಸರ ಜತೆ ಬಂದಿತು; ಎರಡನೇ ಘಟ್ಟದಲ್ಲಿ ಬಹಮನಿ ಮತ್ತು ಆದಿಲಶಾಹಿ ದೊರೆಗಳ ಕಾಲದಲ್ಲಿ ಉತ್ತರದಿಂದ ಕರ್ನಾಟಕಕ್ಕೆ ಬಂದಿತು. ಭಾರತಕ್ಕೆ ಶಿಯಾಗಳ ನಾಡಾದ ಇರಾನಿನ ಜತೆ ರಾಜಕೀಯ ಧಾರ್ಮಿಕ ಸಾಂಸ್ಕೃತಿಕ ಒಡನಾಟ ಮೊದಲಿಂದಲೂ ಇದ್ದಕಾರಣ, ಮೊದಲ ಘಟ್ಟದ ಮೊಹರಮ್ಮಿಗೆ ಸಹಜವಾಗಿಯೇ ಪರ್ಶಿಯನ್ ಆಯಾಮವಿತ್ತು. ಆದರೆ ಮುಂದೆ ಅದು ಸ್ಥಳೀಯ ಸಮಾಜಗಳ ಜತೆ ಬೆರೆತು ಹೊಸ ರೂಪಾಂತರ ಪಡೆದುಕೊಂಡಿತು; ಹಾಡು ಸಂಗೀತ ಕುಣಿತ ಸೋಗುಗಳಿಂದ ಕೂಡಿ ಊರಹಬ್ಬವಾಗಿ ಮಾರ್ಪಟ್ಟಿತು(ರಹಮತ್ ತರೀಕೆರೆ:2014:?).

ವಿಶೇಷವಾಗಿ ಉತ್ತರಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಹೈದರಾಬಾದ ನಿಜಾಮರ ಆಡಳಿತದ ಪ್ರಭಾವದಿಂದಾಗಿ ಈ ಎರಡೂ ಭಾಗಗಳಲ್ಲಿ ಮೊಹರಂ ದಟ್ಟವಾಗಿ ಹಬ್ಬಿದೆ. ಈ ಪ್ರದೇಶದ ನಗರ, ಹಳ್ಳಿ ಗ್ರಾಮಗಳಲ್ಲಿ ಮೊಹರಂ ಒಂದು ಜನಪ್ರಿಯ ದೊಡ್ಡಬ್ಬವಾಗಿದೆ. ಈ ಭಾಗದಲ್ಲಿ ಪ್ರತಿಯೊಂದು ಸಮುದಾಯಗಳೂ ಮೊಹರಂ ಜತೆ ತಮ್ಮದೇ ಆದ ಸಂಬಂಧವನ್ನು ಬೆಸೆದುಕೊಂಡಿವೆ. ಅದು ಎಷ್ಟರಮಟ್ಟಿಗೆಂದರೆ ಎಷ್ಟೋ ಊರುಗಳಲ್ಲಿ ಒಂದೂ ಮುಸ್ಲೀಂ ಕುಟುಂಬ ಇಲ್ಲವಾದರೂ ಮೊಹರಂ ಹಬ್ಬ ಅದ್ಧೂರಿಯಾಗಿ ನಡೆಯುತ್ತದೆ. ಅದರಲ್ಲೂ ಮಾಂಸಾಹಾರಿ ಕೆಳಜಾತಿಗಳ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಅಂತೆಯೇ ಬುಡಕಟ್ಟು ಸಮುದಾಯಗಳೂ ಕೂಡ ಮೊಹರಂ ಜತೆ ಬೆಸೆದುಕೊಂಡಿವೆ.

ಹೀಗೆ ಮೊಹರಂ ಗಂಟಿಚೋರ ಸಮುದಾಯದ ಜತೆಗೂ ವಿಭಿನ್ನವಾಗಿ ಬೆಸೆದುಕೊಂಡಿದೆ. ಗಂಟಿಚೋರರ ತುಡುಗು ವೃತ್ತಿಯ ಜತೆ ಮೊಹರಂ ಬೆಸೆದುಕೊಂಡ ಕಥೆಯೊಂದು ಕುತೂಹಲಕಾರಿಯಾಗಿದೆ. ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮದ ಗಂಟಿಚೋರರ ಕುಟುಂಬವೊಂದು ಹಿಂದೆ ಬನಹಟ್ಟಿಗೆ ತುಡುಗು ಮಾಡಲು ಹೋದಾಗ ಒಡವೆಗಳಿರಬೇಕೆಂದು ಭಾವಿಸಿ ಮನೆಯೊಂದರಲ್ಲಿ `ಪೆಟ್ಟಿಗೆ’ಯನ್ನು ಕದ್ದು ತರುತ್ತಾರೆ. ಹೀಗೆ ಕದ್ದ ಪೆಟ್ಟಿಗೆಯನ್ನು ಬಿಚ್ಚಿ ನೋಡಲಾಗಿ ಅದು ಮೊಹರಂ ದೇವರುಗಳ ಪೆಟ್ಟಿಗೆಯಾಗಿರುತ್ತದೆ. ಹೀಗಾಗಿ ಕದ್ದವರು ತಪ್ಪಾಯಿತೆಂದು ಭಾವಿಸಿ, ಅದನ್ನು ಕಳವು ಮಾಡಿದ ಮನೆಗೆ ಹೋಗಿ ವಾಪಾಸ್ಸು ತೆಗೆದುಕೊಳ್ಳುವಂತೆ ಕೇಳುತ್ತಾರೆ. ಆದರೆ ಮನೆಯವರು `ನೀವು ತುಡುಗು ಮಾಡಿದರೂ ಈ ದೇವರುಗಳು ನಿಮಗೆ ಒಲಿದು ನಿಮ್ಮ ಜತೆ ಬಂದಿವೆ’ ಹಾಗಾಗಿ ನೀವೆ ತೆಗೆದುಕೊಂಡು ಹೋಗಿ ಎನ್ನುತ್ತಾರೆ. ಆಗ ಅನಿವಾರ್ಯ ದೇವರ ಪೆಟ್ಟಿಗೆಯನ್ನು ತರುವಾಗ ಊರಿಗೆ ಒಯ್ಯುವುದು ಬೇಡವೆಂದು ಬಾವಿಗೆ ಎಸೆದು ಮುಂದೆ ನಡೆದರಂತೆ. ಆಗ ಯಾರಿಗೂ ಕಣ್ಣು ಕಾಣದಂತಾಗಿ, ಹೆದರಿ ದೇವರ ಪೆಟ್ಟಿಗೆಯನ್ನು ಬಾವಿಯಿಂದ ಮೇಲೆತ್ತಿಕೊಂಡು ತಮ್ಮ ಊರಿಗೆ ಒಯ್ದು ಸ್ಥಾಪಿಸಿದರಂತೆ. ಅಂದಿನಿಂದ ಈ ತನಕ ಈ ಮನೆಯವರೇ ಮೊಹರಂನ್ನು ಆಚರಿಸುತ್ತಾ ಬಂದಿದ್ದಾರೆ. ಈ ಮನೆತನದ ಫಕ್ಕೀರಪ್ಪ ದೊಡ್ಡಮನಿ ಅವರ ಮಕ್ಕಳಾದ ಚೊಂಚಪ್ಪ, ಯಮುನಪ್ಪ, ಹನುಮಂತ, ಅರ್ಜುನ, ರಾಮಪ್ಪ, ಸಿದ್ದಪ್ಪ ಇವರುಗಳು ಮೊಹರಂ ದೇವರ ಸೇವೆ ಮಾಡುತ್ತಾ ಬಂದಿದ್ದಾರೆ. (ಆರ್.ಎಲ್.ಹಂಸನೂರು:2008:120)

ಹೀಗೆ ಹಂದಿಗುಂದ ಗ್ರಾಮದಲ್ಲಿ ಮೊಹರಂನ್ನು ವಿಶೇಷವಾಗಿ ಗಂಟಿಚೋರ ಸಮುದಾಯ ಆಚರಿಸುತ್ತದೆ. ರಾಯಭಾಗ ತಾಲೂಕಿನ ಹಳ್ಳೂರು ಗ್ರಾಮದಲ್ಲಿ ಮೊಹರಂ ದೇವರನ್ನು `ಅಲಾದೇವರು’ ಎಂದು ಕರೆಯುತ್ತಾರೆ. ಇಲ್ಲಿ ಈ ಸಮುದಾಯದ ಒಂದು ಮನೆತನದವರು `ಹಜ್ಜಿಕಭಾವ’ ಎಂಬ ವೇಷ ಹಾಕುತ್ತಾರೆ. ಇದು ತಲೆಯ ಮೇಲೆ ಕಿರೀಟದಂತಹ ತಲೆಸುತ್ತನ್ನು ಹಾಕಿಕೊಂಡು, ಬಳ್ಳಿಸುತ್ತುವರಿದ ಬೆತ್ತ (ಮುರುಗಿ ಬೆತ್ತ) ವನ್ನು ಹಿಡಿದು ಊರನ್ನು ಬರಿಗಾಲಲ್ಲಿ 9 ದಿನಗಳ ಕಾಲ ಸುತ್ತಿ ಭಿಕ್ಷೆ ಬೇಡುತ್ತಾರೆ. ಈ ಮನೆಯವರನ್ನು ಹಜ್ಜಿಕೇರ ಮನೆ ಎಂತಲೇ ಕರೆಯುತ್ತಾರೆ. ಮೊದಲು ಈ ಮನೆತನದ ಫಕ್ಕೀರಪ್ಪ ವೇಷ ಹಾಕುತ್ತಿದ್ದರು. ಇದೀಗ ಅವರ ಸಾವಿನ ನಂತರ ಅದೇ ಮನೆಯ ಶಿವಪ್ಪ ಎನ್ನುವವರು ವೇಷ ಹಾಕುತ್ತಾರೆ. ಹಳ್ಳೂರಲ್ಲಿ ಮೊಹರಂಗೆ ಹುಲಿಗಳಾಗುವ ಫಕೀರರಾಗುವ ಪರಂಪರೆಯೂ ಇದೆ.

ಬೆಂಡವಾಡದಲ್ಲಿಯೂ ಮೊಹರಂ ದೇವರನ್ನು `ಪೀರಲ ದೇವ್ರು’ ಎಂದು ಕರೆದು ಆರಾಧಿಸುತ್ತಾರೆ. ಪಕ್ಕದ ಊರಾದ ವಂಟೂರಿನ ಮುಸ್ಲೀಂರು ಬಂದು ದೇವರು ಕೂರಿಸಿ ಸಕ್ಕರೆ ಓದಿಸುವ ಆಚರಣೆ ಮಾಡುತ್ತಾರೆ. ಹುಬ್ಬಳ್ಳಿ ಸೆಟ್ಲಮೆಂಟಲ್ಲಿ ಮೊಹರಂನ್ನು ಅದ್ಧೂರಿಯಿಂದ ಆಚರಿಸುತ್ತಾರೆ. ರಾಯಭಾಗ ಸಮೀಪದ ಶಾಹುಪಾರ್ಕನಲ್ಲಿ ಗಂಟಿಚೋರರು ಮೊಹರಂ ಹಬ್ಬದಲ್ಲಿ ವಿಶೇಷವಾಗಿ ಲಾಡಿಕಟ್ಟಿಸಿಕೊಂಡು ಫಕೀರರಾಗುವ ನಂಬಿಕೆಯೂ ಇದೆ. ಉಳಿದಂತೆ ಅಂತೆಯೇ ಹಳ್ಳಿಗಳ ಕಡೆಯಲ್ಲಿ ಈ ಸಮುದಾಯದವರು `ಹುಲಿ’ ವೇಷ ಹಾಕುವುದೂ ಇದೆ. ಈಗೀಗ ಈ ನಂಬಿಕೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇನ್ನು ಆಚರಣೆಯಲ್ಲಿ ಸಕ್ಕರೆ ಓದಿಸುವುದು, ಮಸೀದಿಗೆ ಹರಕೆ ಸಲ್ಲಿಸುವುದು ಮಾಡುತ್ತಾರೆ.

ಹೋಳಿ ಆಚರಣೆ

ಹೋಳಿ ಹಬ್ಬವನ್ನು ಗಂಟಿಚೋರರು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ರತಿ ಮತ್ತು ಕಾಮನ ಮೂರ್ತಿ ಮಾಡಿ ಐದು ದಿನಗಳ ಕಾಲ ಪೂಜಿಸುವ ರೂಢಿಯಿದೆ. ಐದನೇ ದಿನ ಬೆಳಗಿನ ಜಾವ ಕಾಮನನ್ನು ಸುಟ್ಟು ಮರುದಿನ ಪೂರ್ತಿ ಬಣ್ಣಗಳನ್ನು ಚೆಲ್ಲುತ್ತಾ ಸಂಭ್ರಮಿಸುತ್ತಾರೆ. ಈ ಸಂದರ್ಭದಲ್ಲಿ ಅಣಕು ಶವಯಾತ್ರೆ ಮಾಡುತ್ತಾರೆ. ಒಬ್ಬರು ಶವದಂತೆ ಮಲಗುವುದು ಮತ್ತೊಬ್ಬ ಗಂಡು ಸೀರೆಯುಟ್ಟು ಹೆಂಡತಿಯಂತೆ ದುಃಖಿಸುವುದನ್ನು ಮಾಡುತ್ತಾರೆ. ಅನೇಕರು ಅಳುವ ನಟನೆ ಮಾಡಿ ಸೋಗುಹಾಕುವ ಪದ್ಧತಿಯಿದೆ.