ಬೀದಿ ಬದಿಯ ಕನಸುಗಳನ್ನೂ ಹೆಕ್ಕಲು ಕಲಿಯುತ್ತಿದ್ದ ನಾವು ನಿಜಕ್ಕೂ ಮುಗಿ ಬೀಳುತ್ತಿದ್ದುದು ಅವನು ಮಾರುತ್ತಿದ್ದ ಕ್ಯಾಂಡಿಗೋ ಅಥವಾ ಅವನ ಕಥೆಗಳಿಗೋ ಅನ್ನುವುದೂ ಇವತ್ತಿಗೂ ಅರ್ಥವಾಗುವುದಿಲ್ಲ. ಮಂಗಳೂರಿನ ‘ಐಡಿಯಲ್’ನಲ್ಲಿ ಬೆಲ್ಲ ಕ್ಯಾಂಡಿ ಸಿಗುತ್ತೆ ಅಂತ ಸುದ್ದಿ ಆದಾಗ ತುಂಬ ಆಸೆ ಪಟ್ಟುಕೊಂಡಿದ್ದೆವು. ಎಳೆಯ ಮಗುವೊಂದು ಇದ್ದುದರಲ್ಲಿ ದೊಡ್ಡದನ್ನು ಆರಿಸಿ ತಿನ್ನುವಂತೆ ಅಲ್ಲಿದ್ದ ಅಷ್ಟೂ ಕ್ಯಾಂಡಿಗಳನ್ನು ಪರಿಶೀಲಿಸಿ, ಕೊಂಡು ಬಾಯಿಗಿಡುತ್ತಿದ್ದಂತೆ ಮುಖ ಹುಳ್ಳಹುಳ್ಳಗೆ. ಯಾಕೋ ತಿಮ್ಮಪ್ಪಣ್ಣನ ಐಸ್ ಕ್ಯಾಂಡಿಯಂತಿಲ್ಲ ಎಂದು ನಮ್ಮನಮ್ಮಲ್ಲೇ ಲೊಚಗುಟ್ಟುತ್ತಿರುವಾಗ, ಒಂದು ಕ್ಯಾಂಡಿಗಾಗಿ ದೊಡ್ಡ ಸಿದ್ಧತೆಯೊಂದನ್ನೇ ಮಾಡಿಕೊಂಡು ಬಂದಂತೆ ವರ್ತಿಸುತ್ತಿದ್ದ ನಮ್ಮನ್ನು ಸುಮಾರು ಹೊತ್ತಿನಿಂದ ಗಮನಿಸುತ್ತಿದ್ದ ಕ್ಯಾಶ್ ಕೌಂಟರ್ ನಲ್ಲಿದ್ದ ಹುಡುಗ ಮುಸಿ ಮುಸಿ ನಗುತ್ತಿದ್ದ.
ಫಾತಿಮಾ ರಲಿಯಾ ಅಂಕಣ

 

ಭೀಕರ ನೆರೆಗೆ ಊರು ಕೇರಿ ಮುಳುಗುತ್ತಿದ್ದಂತೆ, ಆಕಾಶ ಕೊರೆದು ಸುರಿಯುವ ಮಳೆ ನಿಲ್ಲುವ ಸೂಚನೆಗಳೇ ಕಾಣದೇ ಇದ್ದಂತೆ, ಆಳುವ ಸರಕಾರ ‘ಕಡಲ ತೀರದಲ್ಲಿ ಯಾರೂ ಸುಳಿಯುವಂತಿಲ್ಲ’ ಎಂದು ಫರ್ಮಾನು ಹೊರಡಿಸಿಬಿಡುತ್ತದೆ. ಆನಂತರದ ಕಡಲಿನ ಗತ್ತೇ ಬೇರೆ, ಗೈರತ್ತೇ ಬೇರೆ. ಮನುಷ್ಯನ ಒಡನಾಟವಿಲ್ಲದ, ಆಳ ಸಮುದ್ರ ಮೀನುಗಾರಿಕೆಯ ಅಬ್ಬರವಿಲ್ಲದ, ಬೀಚ್ ನೋಡಲು ಬರುವ, ದುಗುಡ ಹೇಳಿಕೊಳ್ಳಲು ಬರುವ, ಒಂದು ಸುಂದರ ಸಂಜೆಯನ್ನು ಕಳೆಯಲು ಬರುವ, ಕಡಲ ಹಾಡು ಕೇಳಿಸಿಕೊಳ್ಳಲು ಬರುವ, ತೀರವನ್ನು ಕೊಳಕಾಗಿಸಲು ಬರುವ, ಕಡಲ ನೀರಿಗೂ ಧರ್ಮಕ್ಕೂ ನಂಟು ಕಲ್ಪಿಸುವ ಮನುಷ್ಯ ಜೀವಿ ಇಲ್ಲದ, ದೂರದಲ್ಲಿ ಕೂತ ಗಾರ್ಡ್ ಆಗೊಮ್ಮೆ ಈಗೊಮ್ಮೆ ಊದುವ ಸೀಟಿಯ ಸಣ್ಣಗಿನ ಸದ್ದು ಬಿಟ್ಟರೆ ಇಡೀ ಕಡಲು ನಿರ್ಮಾನುಷ್ಯ, ನಿರಾಡಂಬರ.

ಮಳೆಯೇ ಕಡಲಾದಂತೆ, ಕಡಲೇ ಮಳೆಯಾದಂತೆ ಭ್ರಮೆ ಹುಟ್ಟಿಸುವ ವಿಹಂಗಮ ದೃಶ್ಯ ಕಾವ್ಯವನ್ನು ಹೂಬೇಹೂಬು ಕಾಣಬೇಕೆಂದರೆ ಮಳೆಯಲಿ ಕಡಲನೂ, ಕಡಲಲಿ ಮಳೆಯನೂ ನೋಡಬೇಕು, ಅನುಭಾವಿಸಬೇಕು. ಆಕಾಶದೆತ್ತರಕ್ಕೆ ಚಿಮ್ಮುವ ಕಡಲ ನೀರು, ಅಷ್ಟೇ ರಭಸದಿಂದ ಸುರಿಯುವ ಮಳೆ, ತೀರದ ತೋಟದಲ್ಲಿ ಯಾವುದೋ ಭ್ರಮೆಗೊಳಗಾದಂತೆ ಓಲಾಡುವ ಕಂಗು, ಜೋರು ಗಾಳಿಗೆ ಬೀಳದಂತೆ ನೆಟ್ಟಗೆ ನಿಲ್ಲಲು ಶಕ್ತಿ ಮೀರಿ ಪ್ರಯತ್ನಿಸುವ ತೆಂಗು ಮತ್ತದರ ಗರಿಗಳು, ಬುಡ ಸಮೇತ ಉರುಳಿ ಬೀಳುವ ಬಾಳೆ ಗಿಡಗಳು, ಕಿನಾರೆಯಲ್ಲಿ ಸಹಸ್ರ ಸಹಸ್ರ ವರ್ಷಗಳಿಂದಲೂ ಬೀಡು ಬಿಟ್ಟಿರುವ, ಸೃಷ್ಟಿಯ ಪರಮ ರಹಸ್ಯವನ್ನೂ, ಕೌತುಕವನ್ನೂ, ಸೌಂದರ್ಯವನ್ನೂ, ಅತಿಮಾನುಷತೆಯನ್ನೂ ಶತ ಶತಮಾನಗಳಿಂದಲೂ ಒಡಲೊಳಗೆ ಬಚ್ಚಿಕೊಂಡಿರುವ ಕಲ್ಲುಗಳನ್ನು, ಪುಟ್ಟ ಬಂಡೆಗಳನ್ನು ಅಪ್ಪಿ ಹಿಡಿದಿರುವ ಕಡಲ ಏಡಿಗಳು, ಉಬ್ಬರ ಇಳಿದಾಗೊಮ್ಮೆ ಹೊಳೆವ ಅವುಗಳ ಕಡು ಕಪ್ಪು ಮೈ, ಬಳಕ್ಕನೆ ನೆಗೆದು ಪಟ್ಟನೆ ಮಾಯವಾಗುವ ಬೆಳ್ಳನೆಯ ಮೀನುಗಳು, ತೀರಕ್ಕೆ ತಂದು ಸುರಿದ ರಾಶಿ ರಾಶಿ ತ್ಯಾಜ್ಯ, ಮನುಷ್ಯನ ಆಸೆಬುರುಕತನಕ್ಕೆ ಸಾಕ್ಷ್ಯ ಹೇಳುವ ಅವನದೇ ಅವಶೇಷಗಳು, ಬಸ್ ಗಳ ಓಡಾಟಕ್ಕೆ ಹೆದರಿ ಮುದುರಿರುವ ತಾರು ರಸ್ತೆಗಳ ಮೇಲೆ ಈಗಷ್ಟೇ ಬಿಡಿಸಿದ ರಂಗೋಲಿಯ ಚುಕ್ಕಿಗಳ ಹಾಗೆ ಪಿಳಿಪಿಳಿ ಕಣ್ಣು ಬಿಡುತ್ತಿರುವ ಮನುಷ್ಯನಿನ್ನೂ ಹೆಸರಿಟ್ಟಲ್ಲದ ಅಸಂಖ್ಯಾತ ಕಡಲ ಜೀವಿಗಳು…

ಕಡಲತಡಿಯ ಊರು ಒಂದು ಅಕಾಲದ ಮೌನ ಹೊದ್ದುಕೊಂಡು ಕೂತಿರಬೇಕಾದರೆ, ಕಡಲು ಭೋರ್ಗರೆಯುವ ಸದ್ದಿನ ಸೆರಗನ್ನು ಇಡೀ ಊರಿನ ಮೇಲೆ ಹೊದಿಸುವ ಬೆಚ್ಚನೆಯ ಭಾವವನ್ನು, ಈ ಜೋರು ಮಳೆಯಲಿ ಕಡಲಿಲ್ಲದೂರಲಿ ಕೂತು ಧೇನಿಸುತ್ತಿರಬೇಕಾದರೆ ಇನ್ ಬಾಕ್ಸಲ್ಲಿ ಬಂದು ಕೂತ ಮೆಸೇಜೊಂದು “ಐಸ್ಕ್ಯಾಂಡಿ ತಿಮ್ಮಪ್ಪಣ್ಣ ತೀರಿಹೋದರು” ಎಂದು ಸಣ್ಣಗೆ ಉಸಿರಿತ್ತು; ಧ್ಯಾನ ಅದುರಿಬಿತ್ತು.

ಹೇಳಿ-ಕೇಳಿ, ಅನುಮತಿ ಪಡೆದು ಬರದ ಸಾವಿಗೂ, ಪಟ್ಟೆಂದು ಸುರಿವ ಮಳೆಗೂ ಅವಿನಾಭಾವ. ಮಧ್ಯೆ ರೋಗದ್ದೋ, ಮೋಡದ್ದೋ ಪಾರುಪತ್ಯವಿರುತ್ತದ್ದಾರೂ ಕೆಲವೊಮ್ಮೆ ಯಾವ ಪಾರುಪತ್ಯವೂ ಇಲ್ಲದಂತೆ ಎರಡೂ ಆವರಿಸಿಕೊಂಡು ಬಿಡುತ್ತದೆ; ಈಗಷ್ಟೇ ಸರಿಯಿದ್ದ ತಂತಿಯೊಂದು ಕಣ್ಣು ಹೊರಳಿಸುವಷ್ಟರಲ್ಲಿ ತಟ್ಟನೆ ಕಡಿದು ಬಿದ್ದಂತೆ. ಮಳೆ-ಸಾವು ಎರಡನ್ನೂ ಬೇಡ ಎಂದು ತಡೆದು ನಿಲ್ಲಿಸುವ, ಬೇಕು ಎಂದು ಬರಸೆಳೆದು ಅಪ್ಪಿಕೊಳ್ಳುವ ಯಾವ ಶಕ್ತಿಯೂ ಪ್ರಪಂಚದಲ್ಲಿಲ್ಲ. ಇಷ್ಟ ಇದ್ದರೂ, ಇರದಿದ್ದರೂ ಬಂದಾಗ ಎರಡನ್ನೂ ಒಪ್ಪಿಕೊಳ್ಳಲೇಬೇಕು, ಒಪ್ಪಿಸಿಕೊಳ್ಳಲೇಬೇಕು.


ನಾಲ್ಕೂವರೆ ಅಡಿ ಎತ್ತರವಿದ್ದ ಬಹುದೊಡ್ಡ ವ್ಯಕ್ತಿತ್ವದ ತಿಮ್ಮಪ್ಪಣ್ಣನದು ಒಂಭತ್ತು ದಶಕಗಳ ಸಾರ್ಥಕ ಜೀವನ. ಬದುಕಿನ ಬಹುಪಾಲು ಅವಧಿಯನ್ನು ಅವರಿವರ ಗದ್ದೆಯಲ್ಲಿ ದುಡಿಯುತ್ತ ಕಳೆದ ಅವರು ಬದುಕಿನ ಇಳಿ ಸಂಜೆಯಲ್ಲಿ ಐಸ್ ಕ್ಯಾಂಡಿ ಮಾರಾಟದತ್ತ ಹೊರಳಿಕೊಂಡಿದ್ದರು. ಶಾಲೆ ಬಿಡುವ ಹೊತ್ತಾಗುತ್ತಿದ್ದಂತೆ ಸೈಕಲ್ ಗೆ ದೊಡ್ಡ ಶಬ್ದದ ಬೆಲ್ ಸಿಕ್ಕಿಸಿಕೊಂಡು ಹಿಂಬದಿಯಲ್ಲಿ ಐಸ್ ಕ್ಯಾಂಡಿ ಡಬ್ಬ ಪೇರಿಸಿ ಶಾಲೆಯ ಹತ್ತಿರ ಬಂದುಬಿಡುತ್ತಿದ್ದರು. ಎಲ್ಲಾ ಕ್ಯಾಂಡಿ ಮಾರಾಟವಾದ ಮೇಲೆ ಅರ್ಧ ಕಿಲೋಮೀಟರ್ ಸೈಕಲ್ ತುಳಿದು ಹಳೆಯ ಶರಾಬು ಅಂಗಡಿಯ ಜಗಲಿಯಲ್ಲಿ ಕುಳಿತು ಹರಟೆ ಹೊಡೆದು ಅಗ್ಗದ ಸರಾಯಿ ಕೊಂಡು ಮತ್ತೆ ಮನೆ ತಲುಪಿಬಿಡುತ್ತಿದ್ದರು. ಆಮೇಲೆ ನಿರುಪದ್ರವಿ ತಿಮ್ಮಪ್ಪಣ್ಣ ಕಾಣಲು ಸಿಗುತ್ತಿದ್ದುದು ಮರುದಿನ ಮಧ್ಯಾಹ್ನವೇ.

ಐಸ್ ಕ್ಯಾಂಡಿಗೆಂದೇ ಹುಟ್ಟಿದಂತಿದ್ದ ನಾವೊಂದಿಷ್ಟು ಹುಡುಗಿಯರು ಎಷ್ಟು ಗಹನವಾಗಿ ಪಾಠದಲ್ಲಿ ಮುಳುಗಿದ್ದರೂ ತಿಮ್ಮಪ್ಪಣ್ಣನ ಬೆಲ್ ಸದ್ದು ಕೇಳಿಸುತ್ತಿದ್ದಂತೆ ಎಲ್ಲಾ ಗಮನ ಆ ಕಡೆ ಸರಿದುಬಿಡುತ್ತಿತ್ತು. ಕಡು ಗುಲಾಬಿ ಬಣ್ಣದ ಕ್ಯಾಂಡಿ ಅಥವಾ ಬೆಲ್ಲದ ಕ್ಯಾಂಡಿ ಕೊಂಡು ಅಲ್ಲೇ ಇದ್ದ ಕಲ್ಲಿನ ಮೇಲೆ ಕೂತು ಅವನು ಹೇಳುತ್ತಿದ್ದ ಕಥೆಗಳನ್ನೂ, ಪಾಡ್ದನಗಳನ್ನೂ ಕೇಳುತ್ತಿದ್ದರೆ ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ.

ಆಗಷ್ಟೇ ಬೀದಿ ಬದಿಯ ಕನಸುಗಳನ್ನೂ ಹೆಕ್ಕಲು ಕಲಿಯುತ್ತಿದ್ದ ನಾವು ನಿಜಕ್ಕೂ ಮುಗಿ ಬೀಳುತ್ತಿದ್ದುದು ಅವನು ಮಾರುತ್ತಿದ್ದ ಕ್ಯಾಂಡಿಗೋ ಅಥವಾ ಅವನ ಕಥೆಗಳಿಗೋ ಅನ್ನುವುದೂ ಇವತ್ತಿಗೂ ಅರ್ಥವಾಗುವುದಿಲ್ಲ. ಮೊನ್ನೆ ಮಂಗಳೂರಿನ ‘ಐಡಿಯಲ್’ನಲ್ಲಿ ಬೆಲ್ಲ ಕ್ಯಾಂಡಿ ಸಿಗುತ್ತೆ ಅಂತ ಸುದ್ದಿ ಆದಾಗ ತುಂಬ ಆಸೆ ಪಟ್ಟುಕೊಂಡಿದ್ದೆವು. ಎಳೆಯ ಮಗುವೊಂದು ಇದ್ದುದರಲ್ಲಿ ದೊಡ್ಡದನ್ನು ಆರಿಸಿ ತಿನ್ನುವಂತೆ ಅಲ್ಲಿದ್ದ ಅಷ್ಟೂ ಕ್ಯಾಂಡಿಗಳನ್ನು ಪರಿಶೀಲಿಸಿ, ಕೊಂಡು ಬಾಯಿಗಿಡುತ್ತಿದ್ದಂತೆ ಮುಖ ಹುಳ್ಳಹುಳ್ಳಗೆ. ಯಾಕೋ ತಿಮ್ಮಪ್ಪಣ್ಣನ ಐಸ್ ಕ್ಯಾಂಡಿಯಂತಿಲ್ಲ ಎಂದು ನಮ್ಮನಮ್ಮಲ್ಲೇ ಲೊಚಗುಟ್ಟುತ್ತಿರುವಾಗ, ಒಂದು ಕ್ಯಾಂಡಿಗಾಗಿ ದೊಡ್ಡ ಸಿದ್ಧತೆಯೊಂದನ್ನೇ ಮಾಡಿಕೊಂಡು ಬಂದಂತೆ ವರ್ತಿಸುತ್ತಿದ್ದ ನಮ್ಮನ್ನು ಸುಮಾರು ಹೊತ್ತಿನಿಂದ ಗಮನಿಸುತ್ತಿದ್ದ ಕ್ಯಾಶ್ ಕೌಂಟರ್ ನಲ್ಲಿದ್ದ ಹುಡುಗ ಮುಸಿ ಮುಸಿ ನಗುತ್ತಿದ್ದ.

ಹಿಂದೊಮ್ಮೆ ರಂಝಾನಿನಲ್ಲಿ ‘ಉಪವಾಸಿಗನ ಹಸಿವು ತಣಿಸಿದವನಿಗೂ ಉಪವಾಸಿಗನಷ್ಟೇ ಪುಣ್ಯವಿದೆ’ ಅನ್ನುವ ನಂಬಿಕೆಗೆ ಮತ್ತೊಂದಿಷ್ಟು ರೆಕ್ಕೆ ಪುಕ್ಕ ಸೇರಿಸಿ ತಿಮ್ಮಪ್ಪಣ್ಣನಿಗೆ ಹೇಳಿದ್ದು, ಅವನು ನಮ್ಮ ಅಭೋದ ‘ಪುಣ್ಯದ’ ಕಥೆಯನ್ನು ನಂಬಿದಂತೆ ನಟಿಸಿ ಒಂದೆರಡು ಕ್ಯಾಂಡಿ ಜಾಸ್ತಿ ಕೊಟ್ಟದ್ದು, ನಮ್ಮ ಬುದ್ಧಿವಂತಿಕೆಗೆ ನಾವೇ ಬೆನ್ನುತಟ್ಟಿಕೊಂಡ ಬೋಳೇತನ ನೆನಪಾಗಿ ನನಗೂ ನಗು ಬಂತು. ಬಿಡಿ, ಅದೊಂಥರಾ ಇಡೀ ಪ್ರಪಂಚ ದಡ್ಡರ ಸಂತೆ, ಇಲ್ಲಿ ನಾನು ಮತ್ತು ನನ್ನ ಗೆಳೆಯರ ಬಳಗ ಮಾತ್ರ ಬುದ್ಧಿವಂತರು ಎಂದು ನಂಬಿಕೊಂಡಿದ್ದ ಕಾಲ.

ಕಡಲತಡಿಯ ಊರು ಒಂದು ಅಕಾಲದ ಮೌನ ಹೊದ್ದುಕೊಂಡು ಕೂತಿರಬೇಕಾದರೆ, ಕಡಲು ಭೋರ್ಗರೆಯುವ ಸದ್ದಿನ ಸೆರಗನ್ನು ಇಡೀ ಊರಿನ ಮೇಲೆ ಹೊದಿಸುವ ಬೆಚ್ಚನೆಯ ಭಾವವನ್ನು, ಈ ಜೋರು ಮಳೆಯಲಿ ಕಡಲಿಲ್ಲದೂರಲಿ ಕೂತು ಧೇನಿಸುತ್ತಿರಬೇಕಾದರೆ ಇನ್ ಬಾಕ್ಸಲ್ಲಿ ಬಂದು ಕೂತ ಮೆಸೇಜೊಂದು “ಐಸ್ಕ್ಯಾಂಡಿ ತಿಮ್ಮಪ್ಪಣ್ಣ ತೀರಿಹೋದರು” ಎಂದು ಸಣ್ಣಗೆ ಉಸಿರಿತ್ತು; ಧ್ಯಾನ ಅದುರಿಬಿತ್ತು.

ಆಗೆಲ್ಲಾ ಮಂಗಳಮುಖಿಯರು ಊರೊಳಗೆ, ಅದರಲ್ಲೂ ನಮ್ಮಂತಹ ಹಳ್ಳಿಯೆಡೆಗೆ ಬರುತ್ತಿರಲಿಲ್ಲ. ಹಾಗೊಂದು ವೇಳೆ ಬಂದು ಬಿಟ್ಟರೆ ಊರ ಎಲ್ಲಾ ಮನೆಗಳ ಕಿಟಕಿಗಳು ಮುಚ್ಚಿಕೊಂಡುಬಿಡುತ್ತಿದ್ದವು. ಯಾವುದೋ ಅರಿಯದ ಭೀತಿ, ಅನ್ಯಗ್ರಹ ಜೀವಿಗಳೇನೋ ಅನ್ನುವ ರೀತಿಯಲ್ಲಿ ಇಡೀ ಊರು ಅವರೊಂದಿಗೆ ವರ್ತಿಸುತ್ತಿದ್ದರೆ ಮುಚ್ಚಿದ ಕಿಟಕಿಗಳ ಹಿಂದಿನ ಸಂದಿನಿಂದ ಒಂದು ಭಯಮಿಶ್ರಿತ ಕುತೂಹಲದಿಂದಲೇ ಅವರನ್ನು ನಾವು ಮಕ್ಕಳು ನೋಡಿ, ದೊಡ್ಡವರಿಗೆ ಗೊತ್ತಾಗದಂತೆ ನಮ್ಮನಮ್ಮಲ್ಲೇ ಮೆಲ್ಲಗೆ ಚರ್ಚಿಸುತ್ತಿದ್ದೆವು. ಯಾವ ಕಾರಣಕ್ಕಾಗಿ ಅವರನ್ನು ಊರಿಂದ ದೂರ ಇಡುತ್ತಿದ್ದಾರೆ ಎನ್ನುವ ಕೌತುಕ ನಮಗೆ.

ಮನುಷ್ಯ, ಅವನ ಅಭದ್ರತಾ ಭಾವ, ‘ತನ್ನದು ಮಾತ್ರ’ ಅನ್ನುವ ಅತಿ ಸ್ವಾರ್ಥ, ಅಂತಸ್ತು, ಜಾತಿ, ಕುಟುಂಬ ಕೊನೆಗೆ ತನ್ನ ಲಿಂಗದ ಬಗ್ಗೆಯೂ ಅವನಿಗಿರುವ ಮೇಲರಿಮೆ, ಸಹ ಮನುಷ್ಯರ ಬಗೆಗೆ ಇರುವ ತಾತ್ಸಾರ ಇವೆಲ್ಲಾ ಅರ್ಥವಾಗುವ ವಯಸ್ಸು ಅದು ಅಲ್ಲವೇ ಅಲ್ಲ. ಹೀಗಿದ್ದೂ ಎಲ್ಲರ ಕಣ್ಣು ತಪ್ಪಿಸಿ ಒಮ್ಮೆ ಅವರ ಜೊತೆ, ದೂರ ನಿಂತುಕೊಂಡಾದರೂ ಸರಿ ಮಾತಾಡಬೇಕು ಅಂದುಕೊಳ್ಳುತ್ತಿದ್ದೆ.

ಹೀಗಿರುವಾಗಲೇ ಒಂದು ದಿನ ಸಂಜೆ ಶಾಲೆ ಬಿಟ್ಟ ಮೇಲೆ ತಿಮ್ಮಪ್ಪಣ್ಣನ ಕಥೆ ಕೇಳುತ್ತಾ ಕ್ಯಾಂಡಿ ಮೆಲ್ಲುತ್ತಿರಬೇಕಾದರೆ ಅದೇ ಕಡೆಯಿಂದ ಮಂಗಳಮುಖಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದರು. ಅವರೊಮ್ಮೆ ನಿಂತುಕೊಂಡು ನಮ್ಮತ್ತ ನೋಡಿದೊಡನೆ ನಮ್ಮ ಕುತೂಹಲವೆಲ್ಲ ಉಡುಗಿ ವಿಚಿತ್ರ ಭಯ ಹುಟ್ಟಿಕೊಂಡಿತು. ಅಲ್ಲಿಂದ ಓಡುವ ಹವಣಿಕೆಯಲ್ಲಿದ್ದಾಗ ತಿಮ್ಮಪ್ಪಣ್ಣ ಅವರನ್ನು ಹತ್ತಿರ ಕರೆದು ಒಂದು ಕ್ಯಾಂಡಿ ಕೊಟ್ಟು, ಹೆಗಲು ಬಳಸಿ ಯಾವುದೋ ಜನ್ಮದ ಆತ್ಮೀಯ ಮಿತ್ರನೆಂಬಂತೆ ಮಾತಿಗೆ ನಿಂತರು.

ನಮ್ಮ ಮುಂದೆ ಪ್ರಪಂಚದ ಅತ್ಯದ್ಭುತ ಘಟನೆಯೊಂದು ಸದ್ದಿಲ್ಲದೆ ಘಟಿಸುತ್ತಿರುವ ಭಾವ. ಮಂಗಳಮುಖಿಯರೂ ನಮ್ಮಂತೆಯೇ ಮನುಷ್ಯರು, ತಾನಾಗಿ ಎಂದೂ ತೊಂದರೆ ಕೊಡುವವರಲ್ಲ ಅಂತ ಬದುಕಿನಲ್ಲಿ ಮೊದಲ ಬಾರಿ ಅನಿಸಿದ್ದು ಆ ದಿನ. ಲಿಂಗ ಸಮಾನತೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿದು, ಪ್ರಶಸ್ತಿ ಗಿಟ್ಟಿಸಿ ತನ್ನ ಮೂಗಿನಡಿಯಲ್ಲೇ ನಡೆಯುವ ಅಸಮಾನತೆಯನ್ನು ಅತೀವವಾಗಿ ನಿರ್ಲಕ್ಷ್ಯಿಸುವವರ ಮುಂದೆ ಓದು ಬರಹ ಬಾರದ, ಒಂದು ಪುಸ್ತಕವನ್ನೂ ಓದಿರದ, ವೇದಿಕೆ ಹತ್ತಿ ಗೊತ್ತೇ ಇಲ್ಲದ ತಿಮ್ಮಪ್ಪಣ್ಣನಂತಹ ಕಾಯಕ ಜೀವಿಗಳು ದೊಡ್ಡವರು ಅನ್ನಿಸುತ್ತಾರೆ.

ಕಳೆದ ಬಾರಿ ಊರಿಗೆ ಬಂದಿದ್ದಾಗ ಅಪ್ಪ “ತಿಮ್ಮಪ್ಪಣ್ಣ ಈಗ ಮೊದಲಿನಂತಿಲ್ಲ. ಮನೆ ಬಿಟ್ಟು ಹೊರಗೆ ಬರುವುದೇ ಇಲ್ಲ, ಅರಳುಮರಳು ಆದಂತಿದೆ” ಅಂದಿದ್ದರು. ನಾವು ದಂಡು ಕಟ್ಟಿ ಅವರನ್ನು ಒಮ್ಮೆ ಭೇಟಿಯಾಗಲೆಂದು ಹೋದೆವು. ಅವರ ಮನೆಯ ವಿನ್ಯಾಸ ಸಂಪೂರ್ಣ ಬದಲಾಗಿತ್ತು. ಹಂಚಿನ ಪುಟ್ಟ ಮನೆಯಿದ್ದ ಜಾಗದಲ್ಲಿ ತಾರಸಿ ಮನೆ ತಲೆ ಎತ್ತಿತ್ತು. ಮನೆಯ ಪಕ್ಕದಲ್ಲಿ ಇದ್ದಿದ್ದ ಹಲಸಿನ ಮರ ಕಾಣೆಯಾಗಿತ್ತು. ಆದರೆ ನಮ್ಮ ಹಲವು ಕಲ್ಪನೆಗಳಿಗೆ, ತಿಮ್ಮಪ್ಪಣ್ಣನೇ ಹೇಳುತ್ತಿದ್ದ ನಾಗರಾಜನ ಕಥೆಗಳಿಗೆ ಮೂಲಾಧಾರವಾಗಿದ್ದ ಸಂಪಿಗೆ ಮರ ಅಲ್ಲೇ ಬಿಮ್ಮನೆ ನಿಂತಿತ್ತು. ಆ ಮರದಡಿಯಲ್ಲಿ ಹಳೆಯ ಬಿದಿರಿನ ಖುರ್ಚಿಯೊಂದರಲ್ಲಿ ಏನನ್ನೋ ಕೈಯಲ್ಲಿ ಹಿಡಿದುಕೊಂಡು ಸೂಕ್ಷ್ಮವಾಗಿ ನೋಡುತ್ತಾ ಕನ್ನಡಕ ಧರಿಸಿ ಕೂತಿದ್ದ ಅವನು. ಹತ್ತಿರ ಹೋಗಿ ನೋಡಿದರೆ ಹೊಚ್ಚ ಹೊಸತರಂತಿದ್ದ ಬಟ್ಟೆಯೊಂದನ್ನು ಹೊಲಿಯುತ್ತಿದ್ದ, ಬಾಯಲ್ಲಿ ಅದೇನೋ ಮಣಗುಟ್ಟುತ್ತಿದ್ದ.

ಅವನ ಪಕ್ಕದಲ್ಲಿ ಮೊಣಕಾಲೂರಿ ಕೂತು ನನ್ನ ಪರಿಚಯ ಹೇಳಿದೆ. ಅವನಿಗೆಷ್ಟು ಅರ್ಥವಾಯಿತೋ ಬಿಟ್ಟಿತೋ ಗೊತ್ತಿಲ್ಲ , ಒಮ್ಮೆ ಬೊಚ್ಚು ಬಾಯಿ ಬಿಟ್ಟು ನಕ್ಕ. ನಾನು “ನನಗೆ ಕ್ಯಾಂಡಿ ಬೇಕು” ಅಂದೆ. ಅವನು ಮತ್ತೆ ನಕ್ಕ. ಆ ನಗುವಿನಲ್ಲಿ ಬಾಲ್ಯ, ಯೌವ್ವನ ಮತ್ತು ವೃದ್ಧಾಪ್ಯದ ಬ್ರಹ್ಮಾಂಡ ಕಂಡಂತಾಯಿತು. ನಾನು ಬೆಚ್ಚಿ ಬಿದ್ದು ಒಂದು ಹೆಜ್ಜೆ ಹಿಂದೆ ಸರಿದ. ಅಷ್ಟರಲ್ಲಿ ಅವನ ಮೊಮ್ಮಗ ಕಾಫಿ ತಂದು ಕೈಗಿತ್ತ. ತಿಮ್ಮಪ್ಪಣ್ಣ ನಡುಗುತ್ತಿರುವ ಕೈಯಿಂದಲೇ ಸನ್ನೆ ಮಾಡಿ ಹತ್ತಿರ ಕರೆದು, “ನನಗೊಂದು ಹೊಸ ಬಟ್ಟೆ ಬೇಕಿತ್ತು, ತಂದು ಕೊಡುತ್ತೀಯಾ?” ಕೇಳಿದ. ನಾನು ‘ಆಗಲಿ’ ಎಂದು ತಲೆಯಾಡಿಸಿದೆ. ಅಲ್ಲೇ ಇದ್ದ ಮೊಮ್ಮಗ “ಹೊಸ ಬಟ್ಟೆ ತರೋದು, ಅದನ್ನು ಬೇಕಂತಲೇ ಕತ್ತರಿಸುವುದು, ಮತ್ತೆ ಹೊಲಿಯುವುದು, ಮತ್ತೆ ಹರಿಯುವುದು. ಇದೇ ಕೆಲ್ಸ ಇವ್ರಿಗೆ, ಮಧ್ಯೆ ನಿಂದೇನು?” ಅಂತ ಸಿಡಿಸಿಡಿಯಾದ. ಕೈಯಲ್ಲಿದ್ದ ಕಾಫಿ ಯಾಕೋ ಕಹಿ ಎನಿಸಿತು. ಒಂದೇ ಗುಟುಕಿಗೆ ಅದನ್ನು ಕುಡಿದು ಕಪ್ ಕೊಟ್ಟು ವಾಪಾಸ್ ಬಂದೆ. ಮನೆ ತಲುಪುವ ಹೊತ್ತಿಗೆ ಮನಸ್ಸೂ ಕಹಿ ಕಹಿ.

ಇಲ್ಲೀಗ ಸುರಿಯುತ್ತಿರುವ ಮಳೆಯಲ್ಲಿ ಕೊನೆಯ ಬಾರಿ ಅವನನ್ನೊಮ್ಮೆ ನೋಡಿಕೊಂಡು ಬರುತ್ತೇನೆ ಎಂದು ಹೊರಟು ನಿಂತೆ. ಆರ್ದ್ರ ಮನಸ್ಸು ಪದೇಪದೇ ಅವನನ್ನು ನೆನೆದು ಭಾವುಕವಾಗುತ್ತಿದ್ದರೆ, ಅಪ್ಪ “ತುಂಬಿ ಹರಿಯುತ್ತಿರುವ ತೋಡು ದಾಟಿ ನೀನೀಗ ಹೋಗಕೂಡದು” ಎಂದು ಹೇಳಿಬಿಟ್ಟರು.

ಅವನ ಮನೆಯ ಪಕ್ಕ ಹರಿಯುತ್ತಿರುವ ತೋಡು ಅಲ್ಲೆಲ್ಲೋ ದೂರ ಹರಿದು, ಮೊನ್ನೆ ಕಾಫಿ ಡೇಯ ಸಿದ್ಧಾರ್ಥ ಹಾರಿ ಆತ್ಮಹತ್ಯೆ ಮಾಡಿಕೊಂಡರಲ್ಲಾ, ಅದೇ ನೇತ್ರಾವತಿಯನ್ನು ಸೇರುತ್ತದೆ. ಅವಳು ಸಮುದ್ರ ರಾಜನ ಪ್ರಿಯ ಸಖಿಯಂತೆ, ನನಗದು ಗೊತ್ತಿಲ್ಲ. ಅರಬ್ಬೀ ಕಡಲನ್ನು ಸೇರುವ ಅವಳು ಅಲ್ಲಿ ನದಿಯೆಂಬ ಅಸ್ತಿತ್ವ ಕಳೆದುಕೊಳ್ಳುತ್ತಾಳೆ, ಭೋರ್ಗರೆಯುತ್ತಾಳೆ, ಮತ್ತೆ ಮಳೆಯಾಗುತ್ತಾಳೆ, ಯಾರದೋ ಬದುಕಲ್ಲಿ ಹಸಿರಾಗುತ್ತಾಳೆ. ನದಿ ಮೂಲ ಹುಡುಕಬಾರದು ಅಂತಾರೆ, ನನ್ನಂತಹ ಪರಮ ದಡ್ಡರಿಗೆ ಅದೂ ಅರ್ಥವಾಗುವುದಿಲ್ಲ. ಆದರೆ ಮನುಷ್ಯತ್ವದಂತಹ ಎಂದೂ ಬತ್ತದ ನದಿಗಳ ಮೂಲ ಮಾತ್ರ ತಿಮ್ಮಪ್ಪಣ್ಣನಂತಹ ಮನುಷ್ಯರ ಎದೆಯ ಕವಾಟವೇ ಆಗಿರುತ್ತದೆ.