”ಇವರು ಮೂಡಿಸಿದ ರೆಕ್ಕೆಗಳನ್ನು ನಂಬಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದವರು ಸಮಾಜದ ನಡುವೆ ಹೆಜ್ಜೆಯಿಟ್ಟು ತುಪತುಪನೆ ಬಿದ್ದು ಎದ್ದು ಈಗ ಗಟ್ಟಿಯಾಗಿ ತಮ್ಮ ಕಾಲ ಮೇಲೆ ನಿಂತು ತಮ್ಮ ಕಥೆಯನ್ನು ಸಂಕೋಚದಿಂದಲೇ ಹೇಳುತ್ತ ಸಮಾಜದ ಎಲ್ಲರೊಂದಿಗೆ ಮುಖಾಮುಖಿಯಾಗುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಇಂಥ ಕೆಲಸಕ್ಕೆ ಕೈ ಹಾಕಿದ ಕಾರಂತರ ಶಿಷ್ಯ ಹುಲುಗಪ್ಪ ಕಟ್ಟೀಮನಿಯವರ ಹಿಂದಿನ ಪ್ರೇರೇಪಣೆ ಏನು? ಗುರು ಹಾಕಿಕೊಟ್ಟ ಭದ್ರ ಬುನಾದಿ!”
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಎಂಟನೆಯ ಕಂತು.

 

ಆರು ತಿಂಗಳ ಹಿಂದೆ ಮಳೆಗಾಲದ ಒಂದು ದಿನ ಸಕಲೇಶಪುರದ ‘ರಕ್ಷಿದಿ’ ಗೆ ನಮ್ಮನ್ನು ಬನ್ನಿರೆಂದು ಕರೆದಿದ್ದರು. ಮಲೆನಾಡಿನ ಆವರಣದಲ್ಲಿ ಹರಸಾಹಸದಲ್ಲಿ ಈ ಊರಲ್ಲೊಂದು ರಂಗಚಟುವಟಿಕೆ ನಡೆಯುತ್ತಿದೆ. ಪ್ರಸಾದ್ ರಕ್ಷಿದಿಯವರ ಆಸಕ್ತಿಯಿಂದ ಹಲವಾರು ವರುಷಗಳಿಂದ ಇಲ್ಲಿ ರಂಗ ಚಟುವಟಿಕೆ ಸಾಗುತ್ತಿದೆ. ಒಂದು ಸಣ್ಣ ರಂಗ ಮಂದಿರವೂ ಇಲ್ಲಿದೆ. ಅಲ್ಲಿಗೆ ಹೋದಾಗ ನಮ್ಮೆದುರು ಜೈಲು ಮತ್ತು ಅಲ್ಲಿನ ವಾತಾವರಣ ಹಾಗೂ ಜೈಲುಕೈದಿಗಳ ಕಥೆ ಬಿಚ್ಚಿಕೊಂಡಿದ್ದು ಹೀಗೆ…. ಕೇಳಿ ಕಣ್ಣೀರು ತುಂಬಿಕೊಳ್ಳುವಂತೆ….

ನಾವು, ನಮ್ಮವರು, ಬಂಧುಬಳಗ , ಪ್ರೀತಿ, ಕರುಣೆ, ದಬ್ಬಾಳಿಕೆ ಎಲ್ಲವೂ ಹೆಚ್ಚಾದಾಗ ಮನೆಯೂ ಕೂಡ ಒಮ್ಮೊಮ್ಮೆ ಜೈಲಿನಂತೆ ಪರಿವರ್ತನೆಯಾಗಿ ಹಿಂಸಿಸುವುದುಂಟು. ಪ್ರೀತಿಯ ಬಂಧನವೆಂಬುದೇ ಮೊದಲನೇ ಮಾನಸಿಕ ಜೈಲು. ಇದರಿಂದ ಕರುಳು ಸಂಬಂಧಗಳೇ ಕೆಲವೊಮ್ಮೆ ಗುರಿತಪ್ಪಿ ಉರುಳಾಗಬಲ್ಲವು. ಹೀಗೆ ಗುರಿ ತಪ್ಪಿದ ಸಂಕಟಗಳು ಕೋಪದ ತಾಪವಾಗಿ ಉಗ್ರ ರೂಪ ತಳೆದು ಭಯಾನಕ ದುರಂತಕ್ಕೆ ಎಡೆಮಾಡಿಕೊಟ್ಟರೆ….. ದುರಂತಕ್ಕೆ ಕಾರಣವಾಗುವ ಪಾತ್ರಧಾರಿ ಅಪರಾಧಿಯಾಗಿ ಮಾನಸಿಕ ಜೈಲಿನಿಂದ ಸಮಾಜದ ಸರಳುಗಳಿರುವ ನಿಜವಾದ ಜೈಲು ಸೇರುತ್ತಾನೆ.

ಎಲ್ಲರೊಳಗೂ ಕಾಣದಿರುವಂಥ ಅಪರಾಧಗಳು ಇದ್ದೇ ಇರುತ್ತವೆ. ನಾವು ಮನುಷ್ಯ ಮಾತ್ರರಾಗಿರುವುದರಿಂದಲೇ ಅಪರಾಧಗಳನ್ನು ಸಮಾಜದ ಕಣ್ಣಿಗೆ ಮುಚ್ಚಿಡಲು ಹೆಣಗುತ್ತೇವೆ. ಆದರೆ, ಅಪರಾಧ ನಾಕು ಜನರಿಗೆ ಕಂಡಾಗ ವ್ಯವಸ್ಥೆಯಲ್ಲಿರುವ ಶಿಕ್ಷೆ , ಜೈಲು, ಅವನನ್ನು ಮುಲಾಜಿಲ್ಲದೆ ಹಿಡಿದು ಹಾಕುತ್ತವೆ. ಮನುಷ್ಯ ಮನುಷ್ಯನನ್ನು ಕೊಲ್ಲುವ ಕ್ರೂರ ಅಪರಾಧಗಳಿಗೆ ಜೀವಾವಧಿ ಶಿಕ್ಷೆಯೂ ಆಗುತ್ತದೆ.

ಇದೆಲ್ಲ ಕಾನೂನು ವ್ಯವಸ್ಥೆಯೇನೋ ಸರಿ! ಅಪರಾಧಿಗಳು ಜೈಲಿನ ಒಳ ಹೋದ ಮೇಲೆ ಅವರ ಕಥೆ ಏನಾಗುತ್ತದೆ? ಜೈಲು, ಅಪರಾಧಗಳು ನಾರುವಂಥ ಇನ್ನೊಂದು ಕೂಪ! ವಿರಕ್ತ ಮಠಗಳಲ್ಲಿ ನಡೆವ ಆಸಕ್ತ ವಿಚಾರಗಳಂತೆ ಇಲ್ಲಿ ಎಲ್ಲವೂ ಇದೆ. ಎಲ್ಲಿ ಬಿಡುಗಡೆಯ ರೆಕ್ಕೆಗಳಿರುವುದಿಲ್ಲವೋ…. ಅಲ್ಲೆಲ್ಲ ಇಂಥ ಅಪ್ಪಟ ಅಪರಾಧದ ಕೂಪಗಳು ಸೃಷ್ಟಿಯಾಗಿಬಿಡುತ್ತವೆ. ಹೀಗೆ ಜೈಲು ತನ್ನ ಕಾನೂನಿಗೆ ತಾನೇ ಉರುಳು ಹಾಕಿಕೊಂಡು ಇನ್ನೊಂದಿಷ್ಟು ಅಪರಾಧಗಳನ್ನು ಸೃಷ್ಟಿಯಾಗಿಸುವ ಬಜಾರಿನಂತೆ ನಿರ್ಮಾಣವಾಗಿರುತ್ತದೆ.

ಸುತ್ತ ಇರುವ ಸರಳುಗಳು, ಅದರ ನಡುವೆ ಕಳಚಿಕೊಂಡ ಕರುಳ ಸಂಬಂಧಗಳು, ಚೆಲ್ಲಾಪಿಲ್ಲಿಯಾದ ತಮ್ಮ ಕುಟುಂಬ, ತಮ್ಮ ಮಾನಸಿಕ ಅವ್ಯವಸ್ಥೆ, ಅರಿಯದೇ ಕಾಲಿಟ್ಟ ಅಪರಾಧಗಳಿಗೆ ಬಲಿಯಾದ ತಮ್ಮ ವಯಸ್ಸು, ಸುತ್ತಲೂ ಇಂಥದೇ ಅಪರಾಧ ಮಾಡಿ ಬಂದಿರುವ ಖೈದಿಗಳ ಗೋಳು, ಹೊರ ಹೋಗಲು ಹೂಡುವ ಸಂಚುಗಳು, ಅಸಹಾಯಕರಾಗಿ ದಿನ ದೂಡಲು ಬಳಸುವ ಆಫೀಮುಗಳು, ದಿನ ನಿತ್ಯದ ಕರ್ಮಗಳಿಗೂ ಊಟ ವ್ಯವಸ್ಥೆಗಳಿಗೂ ಬೇಸರಿಸುವಷ್ಟು ಅನಾನುಕೂಲತೆ, ದಿನ ಕಳೆದು ತಮ್ಮನ್ನು ನೋಡಲು ಬರುವುದನ್ನು ನಿಲ್ಲಿಸುವ ತಮ್ಮವರು, ಶಕ್ತಿವಂತರ ದಬ್ಬಾಳಿಕೆಗಳು, ಅಸಹಾಯಕರ ಸಂಕಟಗಳು, ಹಳೆಯ ನೆನಪುಗಳಿಂದ ದಿನವೂ ಮಲಗುವಾಗ ಒದ್ದೆಯಾಗುವ ದಿಂಬುಗಳು, ಅಸ್ತವ್ಯಸ್ತವಾಗುವ ಕನಸುಗಳು. ಇದು ನಿಜವಾದ ಅಸ್ವಸ್ಥ ಮಾನಸಿಕ ನಿಲ್ದಾಣ.

ಇದನ್ನೆಲ್ಲ ಮೀರಿಯೂ ಹೊರಹೋದವರನ್ನು ವಿಚಿತ್ರವಾಗಿ ನೋಡುವ ಸಮಾಜದ ಕಣ್ಣುಗಳನ್ನು ತಪ್ಪಿಸಿದರೂ, ಸಮಾಜದಲ್ಲಿ ಆರ್ಥಿಕ ನೆಲೆಯಿಲ್ಲದೆ… ಹಿಡಿ ಪ್ರೀತಿಯಿಲ್ಲದೆ…. ಮತ್ತೆ ಸರಳಿನ ಹಿಂದೆ ಸೇರಿ ಹೊರ ಹೋಗುವ ಬಾಗಿಲುಗಳನ್ನು ಅವರೆ ಮುಚ್ಛಿ ಕೂರುವಂಥ ಪ್ರಮೇಯಗಳೇ ಹೆಚ್ಚು. ಇಂಥ ಕಳೆದುಹೋಗಿರುವ ಕುಟುಂಬದ ಋಣವನ್ನೂ ಸಮಾಜದ ನೆಲೆಯನ್ನೂ ಒಂದುಗೂಡಿಸುವ ನಂಬಿಕೆಯ ಎಳೆಯೊಂದು ಹಾಗೆಯೇ ಆರ್ಥಿಕ ತಿಳುವಳಿಕೆಯೊಂದು ಅಪರಾಧ ಹಾಗೂ ಸ್ವಾಸ್ಥ್ಯ ಸಮಾಜದ ನಡುವೆ ಕೆಲಸ ಮಾಡಬೇಕಾಗುತ್ತದೆ. ಅವರ ಒಂಟಿತನವನ್ನು ಹೋಗಲಾಡಿಸಿ ಸಹಕಾರದ ಬೆಂಬಲ ನೀಡಬೇಕಾಗುತ್ತದೆ.

ಇಂಥ ನಂಬಿಕೆಯ ಎಳೆಯೊಂದನ್ನು ಕೈಯಲ್ಲಿ ಹಿಡಿದು ರಂಗಾಯಣದ ಹುಲುಗಪ್ಪ ಕಟ್ಟಿಮನಿ ಒಂದೊಂದೇ ಜೈಲಿನ ಅ ಜೀವಗಳನ್ನು ಆ ಕೂಪದಿಂದ ಮೇಲೆತ್ತಿ ತರುವ ಸಾಹಸ ಮಾಡುತ್ತಿದ್ದಾರೆ. ಇದು ಒಂದು ದಿನದ ಕೆಲಸವಲ್ಲ. ಬರೋಬ್ಬರಿ ೨೧ ವರುಷಗಳದ್ದಾಗಿದೆ. ಅದರಲ್ಲಿ ಅವರ ಹೆಂಡತಿ ಮಕ್ಕಳ ಕಾಣಿಕೆಯೂ ಇದೆ.

ಸುಮಾರು ನಾನೂರಕ್ಕೂ ಹೆಚ್ಚು ಜನರಷ್ಟು ಅಪರಾಧಿಗಳು ಇವರ ನಾಟಕದಲ್ಲಿ ಭಾಗವಹಿಸಿ, ಶಿಕ್ಷೆ ರಿಯಾಯಿತಿಯನ್ನು ಹೊಂದಿ ಬಿಡುಗಡೆಯ ರೆಕ್ಕೆಗಳನ್ನು ಪಡೆದಿದ್ದಾರೆ. ಅಂತೆಯೇ ದಿನವೂ ನಾಟಕದ ತಾಲೀಮನ್ನು ಕುಳಿತು ನೋಡುತ್ತಿದ್ದ ೬೦ ರಿಂದ ೭೦ ಮಂದಿ ಅಪರಾಧಿಗಳಿಗೂ ಇದರಿಂದ ಮನ ಮೃದುತ್ವವನ್ನು ಹೊಂದಿಲ್ಲದೆ ಇರುತ್ತದೆಯೇ… ಆ ರಸಾಯನವೂ ಇದರಿಂದ ಸಿದ್ಧಿಸಿರುತ್ತದೆ.

ಇವರು ಮೂಡಿಸಿದ ರೆಕ್ಕೆಗಳನ್ನು ನಂಬಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದವರು ಸಮಾಜದ ನಡುವೆ ಹೆಜ್ಜೆಯಿಟ್ಟು ತುಪತುಪನೆ ಬಿದ್ದು ಎದ್ದು ಈಗ ಗಟ್ಟಿಯಾಗಿ ತಮ್ಮ ಕಾಲ ಮೇಲೆ ನಿಂತು ತಮ್ಮ ಕಥೆಯನ್ನು ಸಂಕೋಚದಿಂದಲೇ ಹೇಳುತ್ತ ಸಮಾಜದ ಎಲ್ಲರೊಂದಿಗೆ ಮುಖಾಮುಖಿಯಾಗುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಇಂಥ ಕೆಲಸಕ್ಕೆ ಕೈ ಹಾಕಿದ ಹುಲುಗಪ್ಪ ಕಟ್ಟಿಮನಿಯವರ ಹಿಂದಿನ ಪ್ರೇರೇಪಣೆ ಏನು? ತನ್ನ ಗುರು! ಹಾಕಿಕೊಟ್ಟ ಭದ್ರ ಬುನಾದಿ.

ಹೊರ ಹೋಗಲು ಹೂಡುವ ಸಂಚುಗಳು, ಅಸಹಾಯಕರಾಗಿ ದಿನ ದೂಡಲು ಬಳಸುವ ಆಫೀಮುಗಳು, ದಿನ ನಿತ್ಯದ ಕರ್ಮಗಳಿಗೂ ಊಟ ವ್ಯವಸ್ಥೆಗಳಿಗೂ ಬೇಸರಿಸುವಷ್ಟು ಅನಾನುಕೂಲತೆ, ದಿನ ಕಳೆದು ತಮ್ಮನ್ನು ನೋಡಲು ಬರುವುದನ್ನು ನಿಲ್ಲಿಸುವ ತಮ್ಮವರು, ಶಕ್ತಿವಂತರ ದಬ್ಬಾಳಿಕೆಗಳು, ಅಸಹಾಯಕರ ಸಂಕಟಗಳು, ಹಳೆಯ ನೆನಪುಗಳಿಂದ ದಿನವೂ ಮಲಗುವಾಗ ಒದ್ದೆಯಾಗುವ ದಿಂಬುಗಳು, ಅಸ್ತವ್ಯಸ್ತವಾಗುವ ಕನಸುಗಳು..

ಒಬ್ಬ ಗುರು ಕಲಿಸಬೇಕಾದ ಸೃಜನಶೀಲತೆ ಹಾಗೂ ತಿಳುವಳಿಕೆ ಎರಡು ತಲೆಮಾರಿನ ನಂತರವೂ ಹೇಗೆ ಉಳಿಯಬಲ್ಲದು? ಸಾಗಬಲ್ಲದು ಅನ್ನುವ ಒಂದು ಉದಾಹರಣೆ…ರಂಗಾಯಣ. ಬಿ. ವಿ. ಕಾರಂತರ ಇಂಥ ಚಲನಾತ್ಮಕ ಪ್ರಯೋಗವೊಂದು ಮೈಸೂರಿನ ರಂಗಾಯಣದಲ್ಲಿ…. ಗಟ್ಟಿಯಾಗಿ ಬೇರೂರಿ ಉಳಿದು, ಆ ನಾಟಕರಂಗ ಹಾಗೂ ನಟವರ್ಗ ನಿಜಕ್ಕೂ ಸಮಾಜಕ್ಕೊಂದು ದೊಡ್ಡ ಕೊಡುಗೆಯಾಗಿ ಉಳಿದಿದೆ.  ಎಲ್ಲ ಕಲೆಯಲ್ಲೂ ಪರಿಣಿತಿ ಹೊಂದಿದ ರಂಗಾಯಣದ ನಟರು ಕೇವಲ ನಟರಾಗಿ ಉಳಿದುಕೊಳ್ಳದೆ ತಮ್ಮ ಮಕ್ಕಳೊಂದಿಗೆ ಶಿಷ್ಯರೊಂದಿಗೆ ಪ್ರಯೋಗಶೀಲತೆಯ ನಡೆಯುಳ್ಳವರಾಗಿದ್ದಾರೆ.

ಕಾರಂತರ ಕನಸು ಅವರ ಶಿಷ್ಯರ ಮೂಲಕ ಇಂದು ನನಸಾಗುತ್ತಿದೆ. ಕಾರಂತರ ಶಿಷ್ಯ ಹುಲುಗಪ್ಪ ಕಟ್ಟೀಮನಿಯರವರ ಬಾಯಲ್ಲೇ ಇದರ ವಿವರ ಕೇಳೋಣ.

“ಮೇಷ್ಟ್ರು ಅಂದು ಕರೆದುಕೊಂಡು ಹೋಗಿ ನಮ್ಮನ್ನು ಜನರ ಸಂತೆಯಲ್ಲಿ, ಹಕ್ಕಿಪಕ್ಕಿಗಳ ಕಾಡು ಕಣಿವೆಯಲ್ಲಿ ಬಿಟ್ಟು ಅಲ್ಲಿ ಕಳೆದು ಹೋಗಿ, ಸುತ್ತ ಇರುವವರನ್ನು ನೋಡುತ್ತಾ ಹೋಗಿ. ನಿಮ್ಮನ್ನು ಮರೆತುಬಿಡಿ. ಆಗ ನಿಮ್ಮ ಮೇಲೆ ಪಾತ್ರಗಳು ಮೈದುಂಬುತ್ತವೆ ಅನ್ನುತ್ತಿದ್ದರು. ಅಂತೆಯೇ ಒಮ್ಮೆ ಜೈಲಿಗೂ ಹೋದೆ. ನಾನೂ ಆ ಬಂಧನವನ್ನು ಅನುಭವಿಸುವಂತೆ ಪಾತ್ರ ಮೈದುಂಬಿತು. ನಾನು ಅವರ ಮಾನಸಿಕ ತೊಳಲಾಟದಲ್ಲಿ ಸಿಕ್ಕಿ ಬಿದ್ದಿದ್ದೆ. ಮೇಷ್ಟ್ರ ಹೊಸಹೊಸ ಪ್ರಯೋಗಗಳು ತಲೆಗೆ ಬಂದವು. ಹೀಗೆ ಮೂರು ನಾಕು ಬಾರಿ ಹೋದೆ. ಬಿಡುಗಡೆಯ ದಾರಿಯೊಂದು ಬೇಕಾಗಿತ್ತು. ನಿಧಾನ ಅಂದಿನ ಡಿ. ಐ. ಜಿ. ಯವರೊಂದಿಗೆ ಮಾತನಾಡಿದೆ. ಖೈದಿಗಳಿಗೆ ನಾಟಕವನ್ನಾಡಿಸುವ ನನ್ನಾಸೆಗೆ ಅವರು ಒಪ್ಪಿಗೆ ಕೊಟ್ಟುಬಿಟ್ಟರು.

ಇದು ಮೊದಲ ಹೆಜ್ಜೆ. ನಂತರದ್ದು ನನ್ನ ಪ್ರೀತಿಯ ಜೀವಗಳೊಂದಿಗೆ ಹೊಡೆದಾಟ ನಡೆದಾಟ. ಆಟ ಹೋರಾಟ. ಹಾಗೆಯೇ ಇದು ನಿರಂತರ ತಾಕಲಾಟವಾಗಿ ಅವರೊಂದಿಗೆ ನನ್ನನ್ನು ೨೧ ವರ್ಷದ “ಸಂಕಲ್ಪ” ವಾಗಿ ಗೂಡು ನೇಯ್ದಿದೆ. ಈ ಇರುವೆಗೂಡಿಗೆ ಬಂದ ಒಬ್ಬ ಬಿಡುಗಡೆಗೊಂಡ ಖೈದಿ ಭರವಸೆಯಿಂದ…. ಎದುರು ಇರುವ ಸಾಲು ಇರುವೆ ಖೈದಿಗಳಿಗೆ ಮುತ್ತಿಟ್ಟು ಅರಿವು ಮೂಡಿಸುತ್ತಾನೆ. ಅವನ ತಿಳಿವು ಉಳಿದವರನ್ನೂ ಬಿಡುಗಡೆಯತ್ತ ತರಲು ಮನಸ್ಸು ಮಾಡುತ್ತದೆ. ಇದು ನಮ್ಮ ಯಶಸ್ಸು. ಇನ್ನು ಮೂರು ವರುಷದಲ್ಲಿ ನನ್ನ ನಿವೃತ್ತಿ. ಆ ನಂತರ ನಾನು ಈ ನನ್ನವರೊಂದಿಗೆ ಇದ್ದು ಅವರಿಗಾಗಿಯೇ ದುಡಿಯುತ್ತೇನೇ. ನನ್ನನ್ನು ತೊಡಗಿಸಿಕೊಳ್ಳುತ್ತೇನೆ.

ಇದಕ್ಕೆ ಸಮಾಜದ ಸಮ್ಮಾನದ ಇತರರೂ ಒಗ್ಗೂಡಬೇಕು. ಅವರೊಂದಿಗೆ ಬೆರೆತು ಮಾನಸಿಕ ಧೃಢತೆಯನ್ನು ಹಾಗೂ ನಂಬಿಕೆಯನ್ನು ಬೆಳೆಸಬೇಕು. ಇದು ನಮ್ಮ ಕರ್ತವ್ಯವಲ್ಲವೇ? ಮೊದಮೊದಲು ಹಿಂಜರಿಯುತ್ತಿದ್ದ ಸುತ್ತಮುತ್ತಲಜನ, ಅವರ ಕುಟುಂಬ, ಇಂದು, ಕಲೆ ತಂದುಕೊಟ್ಟ ಗುರುತಿನಿಂದ ಅವರನ್ನು ಒಳಗೆ ಸೆಳೆದುಕೊಳ್ಳುತ್ತಿದೆ. ಅಪರಾಧ ಮಾಡುವ ಮುನ್ನ ಅವರೂ ಕೂಡ ಕನಸು ಕಾಣುವ ನಮ್ಮಂಥ ತಂದೆ ತಾಯಿಯ ಮಕ್ಕಳೇ ಆಗಿದ್ದರು, ಈಗಲೂ ಆಗಿದ್ದಾರೆ, ಎಂಬುದನ್ನು ಸಮಾಜ ಮರೆಯದಿರಲಿ.

ಇದಕ್ಕಾಗಿ, ಒಂದಷ್ಟು ಭೂಮಿಯನ್ನು ಸರ್ಕಾರ ಅಥವಾ ಯಾರಾದರೂ ದಾನಿಗಳು ದುಡಿಯಲು ಕಾಂಟ್ರಾಕ್ಟ್ ಮೇಲೆ ಕೊಟ್ಟೆರೆಂದರೆ ಅವರು ಅದನ್ನು ನಂದನವನ ಮಾಡಬಲ್ಲರು. ಅಂತೆ ಅದರಲ್ಲಿ ದುಡಿದು ಉಣ್ಣುವ ಅವರ ಸ್ವಾಭಿಮಾನ ಗಟ್ಟಿಯಾಗಬಲ್ಲುದು. ನೆಲೆಯಾಗಬಲ್ಲುದು.” ದೂರದೃಷ್ಟಿಯ ಅವರ ಮಾತುಗಳು ಹುಸಿಯಾಗಲಾರವು. ನಾವೂ ನಂಬೋಣ. ಅವರೊಂದಿಗೆ ನಂಬಿಕೆಯನ್ನು ಬೆಳೆಸೋಣ. ಸೋತ ಕಾಲಿಗೂ ಮನಸ್ಸಿಗೂ, ಆಶಯ ಹಾಗೂ ನಂಬಿಕೆಯೇ ದೊಡ್ದದು.

ಖೈದಿಗಳು ಸರಳುಗಳಿಂದ ಹಾಗೂ ಪೋಲೀಸರ ಕಣ್ಗಾವಲಿಂದ ತಪ್ಪಿಸಿಕೊಂಡು ತಮ್ಮ ಗುರುತಲ್ಲೇ ತಮ್ಮನ್ನು ಗುರುತಿಸಿಕೊಂಡ ಬಗೆಯನ್ನು ಅವರ ಮಾತಲ್ಲಿಯೇ ಕೇಳೋಣ : ರಾಮಾ, ಭೀಮ, ಗಣೇಶ, ಡಾಮ್ನಿಕ್, ಹುಸ್ಸೇನ ಇವು ಒಂದೇ ಮನಃಸ್ಥಿತಿಯ ಬೇರೆಬೇರೆ ಹೆಸರುಗಳಷ್ಟೇ….. ಜೈಲಿನಲ್ಲಿ ಅವರಿಗೆ ಸಿಕ್ಕಿದ್ದು ಅಂಕಿಯ ನಾಮಾರ್ಥ.

೧: “ಎದ್ದೂ ಬಿದ್ದೂ ತನ್ನನ್ನು ಈ ಸ್ಥಿತಿಗೆ ತಂದವರ ಮೇಲೆ ಸೇಡು ಹಲ್ಲು ಮಸೆಯುತಿತ್ತು. ಆ ಸಮಯದಲ್ಲಿ ಕಟ್ಟೀಮನಿ ಸರ್ ಜೈಲೊಳಗೆ ಭೇಟಿಗೆ ಬರತಿದ್ರು. ಆಗ ಅವರ ಸುತ್ತ ಕೈದಿಗಳಾಗಲೇ ತಾಲೀಮಿಗೆ ಕುಳಿತುಕೊಳ್ಳುತ್ತಿದ್ರು. ನಾನು ತಿರುಗಿಯೂ ನೋಡುತ್ತಿರಲಿಲ್ಲ. ಕೊನೆಗೆ ನನ್ನನ್ನೂ ಎಳೆದೊಯ್ದು ಯೋಗ ಹೇಳಿಕೊಡುತ್ತೇನೆ ಬಾ ಎಂದರು. ಅಲ್ಲಿಂದ ಇಂಚಿಂಚೆ ಬದಲಾದೆ. ಒಳ್ಳೇ ಪಾತ್ರಧಾರಿಯಾದೆ. ಈಗ ದ್ವೇಷದ ಬದಲು ಸಹನೆ ಜೊತೆಯಾಗಿದೆ. ಒಳ್ಳೆತನಕ್ಕೆ ಬಿಡುಗಡೆಯೂ ಸಿಕ್ಕಿದೆ.” ನಟನಾದವನ ಮಾತು.

೨: “ ಹಾರ್ಮೋನಿಯಂ ರಾಗ ನುಡಿದು ನಮ್ಮೆಲ್ಲರನ್ನೂ ಗುಂಪಾಗಲು… ನಮ್ಮ ನೋವು ಕಣ್ಣೀರಾಗಲು…. ಪ್ರೇರೇಪಿಸುತಿತ್ತು. ಈಗ ನನ್ನನ್ನು ದೂರದೂರಿನವರು ನಾಟಕಗಳಿಗೆ ಕರೆಸಿ ಹಾಡಿಸುತ್ತಾರೆ. ಹಾರ್ಮೋನಿಯಂ ಜನರಿಗೆ ನನ್ನ ಗುರುತನ್ನು ಹಚ್ಚಿದೆ.” ಹಾರ್ಮೋನಿಯಂ ಕಲಾವಿದರಾಗಿ ಇಂದು ನಾಟಕ ಕಲಿಸುವ ಮೇಸ್ಟ್ರಾಗಿರುವ ಅವರ ಪಕ್ಕಾ ಮಾತು.

೩: “ಉತ್ತಮ ಶಾಲೆಯ ಉತ್ತಮ ವಿದ್ಯಾರ್ಥಿ ದೆಸೆಯಲ್ಲಿ ನಾನು ದುಡುಕಿ ಕೋಪಕ್ಕೆ ಗುರಿಯಾಗಿ ಜೈಲು ಸೇರಿದವನು. ಇಂದು ಒಳ್ಳೆ ಪಾತ್ರಧಾರಿಯಾಗಿ ಸಮಾಜಕ್ಕೆ ಹಿಂದಿರುಗಿದ್ದೇನೆ. ಹಾಗೇ ಜೈಲು ಮೇಲ್ವಿಚಾರಕಿ ನನ್ನನ್ನು ನಂಬಿ ಪ್ರೀತಿಸಿ ಮದುವೆಯಾಗಿ ನನ್ನವಳಾಗಿದ್ದಾಳೆ. ಇದೂ ಪರಿವರ್ತನೆಯಲ್ಲವೇ” ಶಂಖ ಊದಿ ಸಮಾರಂಭಕ್ಕೆ ಕಳೆಗಟ್ಟಿಸಿದವನ ಮಾತು.

೪: “ನಾನೀಗ ಬಿಡುವಿಲ್ಲದ ಬೇಡಿಕೆಯ ನಟ ವಾಹಿನಿಗಳಲ್ಲಿ” ಮೊದಮೊದಲು ಸಿಟ್ಟಿನ ಅಗ್ನಿಕುಂಡವಾಗಿದ್ದು ಮಾತಾಡಲು ನಿರಾಕರಿಸುತ್ತಿದ್ದು ಇಂದು, ನಟನೆಯೇ ಜೀವಾಳವಾದವನ ಮಾತು.

೫: “ದಿಂಬು ಹಾಸಿಗೆಗಳು ನನ್ನವರ ನೆನಪುಗಳನ್ನು ಕಣ್ಣೀರಾಗಿಸಿ ಕರಗಿಸುವ ಕರುಣಾಳು ಆಗಿದ್ದವು. ಈಗ ನಾಟಕಕ್ಕೆ ತೊಡಗಿಸಿಕೊಳ್ಳಲು ಪುರುಸೊತ್ತು ಸಿಗದಂತೆ ನನ್ನ ಜಮೀನಿನಲ್ಲಿ ದುಡಿಯುತ್ತಿದ್ದೇನೆ. ಚದುರಿದ ನನ್ನ ಕುಟುಂಬವನ್ನು ಒಂದಾಗಿಸುವತ್ತ ಬೆಳಿಗ್ಗಿಂದ ಬೈಗುವರೆಗೂ ದುಡಿಯುತ್ತಿದ್ದೇನೆ. ಅದಕ್ಕೆ ಆರ್ಥಿಕ ಭದ್ರತೆ ಕೊಟ್ಟ ನನ್ನ ಹೆಸರಿನಲ್ಲಿದ್ದ ಜಮೀನು ಮುಖ್ಯ ಕಾರಣ.” ಭಾವುಕನಾಗಿ ಕಣ್ಣೀರಿಂದ ಮೊದಲಾದ ಅವರ ಮಾತು ಕೊನೆಗೆ ಧೃಡತೆಗೆ ಬಂದು ನಿಂತಿತ್ತು.

ಇನ್ನಿಬ್ಬರು ಮಾತಾಡುವುದಕ್ಕಿಂತ ಹೆಚ್ಚು ನೇಯ್ಗೆ ಹಕ್ಕಿಗಳ ರೀತಿಯಲ್ಲಿ ತಮಗೆ ಸಿಕ್ಕಿದ ಮಣ್ಣು, ದಾರ, ತರಗಿನಿಂದಲೇ ಕಲೆಯನ್ನು ಮಾಡಿ ತೋರುವ ಪ್ರತಿಭಾವಂತರು. ಅದರ ವಿವರವನ್ನು ಬೇರೆಯವರು ಹೇಳಿದಾಗ ಅವರು ಒತ್ತಾಸೆಯಾಗಿ ನಕ್ಕರು.

ಗೋವಾ ಸಮ್ಮೇಳನಕ್ಕೆ ಮೊದಲನೇ ಬಾರಿ ವಿಮಾನ ಏರಿ ಹೊರಟಿರುವ ಕಲಾವಿದರೊಬ್ಬರ ಖುಶಿ….
ಅವರ ಒಂದು ಸಣ್ಣ ಸರಳ ಹಾಡು….

ನನ್ನಲ್ಲಿ ಕಾಗದವಿದೆ…..
ಕಾಗದವಿದೆ ನನ್ನಲ್ಲಿ….
ಲೇಖನಿಯಿದೆ.
ಲೇಖನಿಯಿದೆ ನನ್ನಲ್ಲೂ….
ಏನ ಬರೆಯಲಿ ನಾನು?
ಹೃದಯ ನಿಮ್ಮಲ್ಲಿದೆ…. ನಿಮ್ಮಲ್ಲಿದೆ.

ಮಾತು ಮಾತು ಮಥಿಸಿ ಸಮಾಜ ಹಾಗೂ ಬಿಡುಗಡೆಯ ಹಕ್ಕಿಗಳನ್ನು ಮುಖಾಮುಖಿಯಾಗಿಸಿದ ಹಾಡು ಇದು. ಇವರೆಲ್ಲಾರೂ ನಾಟಕದ ಪಾತ್ರಧಾರಿಗಳಾಗಿ ಹೆಸರು ಮಾಡಿ ಹತ್ತಾರು ನಾಟಕ ಮಾಡಿ ದುಡಿದು ಹೆಸರು ಮಾಡಿ ಪರಿವರ್ತನೆಗೆ ಒಳಗಾದವರು. ಪರಿವರ್ತನೆಯನ್ನು ಪ್ರೇರೇಪಿಸಿದವರು. ನಾಟಕ ರಂಗದ ಕೊಡುಗೆ ಇವರು.

ಹೀಗೆ…ಅವರ ದಿಕ್ಕೆಟ್ಟ ಬದುಕು ಕಲೆಯೆಂಬ ಸೂತ್ರದಿಂದ ಗಾಳಿಪಟವಾಗಿ ಮತ್ತೆ ರೆಕ್ಕೆ ಬಿಚ್ಚಿ ಎತ್ತರೆತ್ತರಕ್ಕೆ ಹಾರುತ್ತಿದೆ. ಅದು ಹಕ್ಕಿಯಾಗಬೇಕು. ಸ್ವತಂತ್ರದ ರೆಕ್ಕೆ ಮೂಡಬೇಕು. ಇದು ಕಲೆ ಮಾಡಬೇಕಾದ ಕೆಲಸ. ಒಬ್ಬ ಕಲಾವಿದನ ಪಯಣ ಇಂಥ ಸಾರ್ಥಕತೆಯನ್ನು ಹೊಂದುವಾಗ ಸಮಾಜ ಅವನಿಗೆ ಚಿರಋಣಿಯಾಗಬೇಕು.

ಈ ಇರುವೆಗೂಡಿಗೆ ಬಂದ ಒಬ್ಬ ಬಿಡುಗಡೆಗೊಂಡ ಖೈದಿ ಭರವಸೆಯಿಂದ…. ಎದುರು ಇರುವ ಸಾಲು ಇರುವೆ ಖೈದಿಗಳಿಗೆ ಮುತ್ತಿಟ್ಟು ಅರಿವು ಮೂಡಿಸುತ್ತಾನೆ. ಅವನ ತಿಳಿವು ಉಳಿದವರನ್ನೂ ಬಿಡುಗಡೆಯತ್ತ ತರಲು ಮನಸ್ಸು ಮಾಡುತ್ತದೆ.

ಒಬ್ಬ ಗೋಪಾಲ ಹೊಸೂರರಂಥ ಕ್ರಿಯಾತ್ಮಕ ಅಧಿಕಾರಿ ಹಾಗೂ ಏನನ್ನಾದರೂ ಮಾಡಬೇಕು ಎನ್ನುವ ಕಲಾವಿದನೊಬ್ಬನ ತಾಳ್ಮೆಯ ಪಯಣ, ಅವರ ಕುಟುಂಬದವರ ಸಹಕಾರ, ನಿಜವಾದ ರಂಗಪಯಣವೇ. ಇದು ಸಮಾಜದ ವಿರುದ್ಧ ದಿಕ್ಕಿನ ಪಯಣಗಳನ್ನು ಕೈ ಹಿಡಿದು ಹಿಂತಿರುಗಿಸಿ ಸ್ವಸ್ಥಾನಕ್ಕೆ ತರಬಲ್ಲ ಪಯಣ.

ಕೇವಲ ಒಂದೇ ಒಂದು ದಿನ ನಾಟಕ ಪ್ರದರ್ಶನಕ್ಕಾಗಿ ಜೈಲಿಂದ ಹೊರಬಂದು ಹೊರ ಜಗತ್ತನ್ನು ನೋಡಬಹುದು ಎಂಬಾಸೆಯಿಂದ ಕುತೂಹಲದಿಂದ ನಾಟಕಕ್ಕೆ ಬಂದು ಸೇರಿದ ಕೈದಿಗಳು ನಾಟಕವಾಡುತ್ತಾ ತಮ್ಮ ಒಳಗನ್ನು ತಾವೇ ಶೋಧಿಸಿಕೊಳ್ಳುತ್ತ ಹೊರ ಜಗತ್ತಿಗೆ ಅಂದು ಸೇರಲು ತಮ್ಮ ಬಾಹುಗಳನ್ನು ತೆರೆದಿದ್ದಾರೆ. ಇದರಿಂದಲೇ ಶಿಕ್ಷೆ ಕಡಿಮೆ ಆದವರಿದ್ದಾರೆ. ತಮ್ಮ ಜೊತೆಗಾರರನ್ನು ಇಲ್ಲಿಗೆ ಕರೆತಂದವರಿದ್ದಾರೆ.

ಮೊದಮೊದಲು ಮೂವತ್ತು ಜನರ ನಾಟಕ ತಂಡಕ್ಕೆ ತೊಂಬತ್ತು ಪೋಲೀಸರ ಕಾವಲಿತ್ತು. ಅಡ್ಡ ಹೆಸರು ಹಾಗೂ ನಂಬರಲ್ಲಿ ಆ ಪಾತ್ರಧಾರಿಗಳ ಗುರುತಿರುತ್ತು. ನಂತರ ಪೋಲೀಸರ ಕಾವಲಿನ ಸಂಖ್ಯೆ ಮೂವತ್ತಕ್ಕಿಳಿದು ತಮ್ಮ ಹೆಸರನ್ನು ಹಿಡಿದು ಕರೆದು ಗುರುತಿಸುವಂತಾಯಿತು. ಕೊನೆಕೊನೆಗೆ ಗುಂಪು ಚದುರಿ ಹೋದರೂ ಕಾವಲಿರುವ ನಾಕಾರು ಜನ ಪೋಲೀಸರಿರುವೆಡೆಗೆ ಕಲಾತಂಡವೇ ಗುಂಪಾಗಿ ಸಾಗುತಿತ್ತು. ಈಗ ಬಿಡುಗಡೆಯ ರೆಕ್ಕೆಗಳನ್ನು ನಮ್ಮ ಕಲೆ ಹಾಗೂ ತಂಡ ಮೂಡಿಸಿದೆ. ಹಾಗೆಯೇ ನಮ್ಮ ಪಾತ್ರದ ಹೆಸರಲ್ಲಿ ನಮ್ಮನ್ನು ಗೌರವಿಸುವ ಮಾತು ಪೋಲೀಸರಿಂದ ಕೇಳಿ ಶಹಬ್ಬಾಸ್ ಗಿರಿಯೂ ಮೂಡಿದೆ ಎಂದು ಸಂತಸಪಡುತ್ತಾರೆ.

ರಂಗಭೂಮಿ ಕಲೆ ನಮ್ಮಲ್ಲಿ ಮೂಡಿಸಿದ ಮಾಸದ ಹಚ್ಚೆ ಗುರುತು ಇದು. ಬದಲಾವಣೆ ಕೇವಲ ಕೈದಿಗಳದ್ದಲ್ಲ. ಪೋಲೀಸಿನವರದ್ದೂ ಕೂಡ. ಕಾಠಿಣ್ಯವನ್ನು ಕೇವಲ ತಾಳ್ಮೆ ಮಾತ್ರ ಕರಗಿಸಿ ಮೃದುವಾಗಿಸಬಲ್ಲುದು.” ಸಕಲೇಶಪುರದ ಮಳೆಯಲ್ಲಿ ತೊಳೆದಿಟ್ಟ ಹಸಿರು ನಡುವೆ ಈ ಹಕ್ಕಿಗಳು ರಕ್ಷಿದಿ ಊರಲ್ಲಿ ಪ್ರಸಾದ ರಕ್ಷಿದಿಯವರ “ಜೈ ಕರ್ನಾಟಕ ಸಂಘ ಬೆಳ್ಳೇಕೆರೆ” ಯ ಒಡಲಲ್ಲಿ ತಮ್ಮ “ಸಂಕಲ್ಪ” ಸಂಸ್ಥೆಯ ಕಾರ್ಯಾಗಾರವನ್ನು ಉದ್ಘಾಟಿಸುವಾಗ ಮೇಳದಲ್ಲಿ ಹಾಡುತ್ತಾ ಆಡಿದ ಮಾತುಗಳು ಇವು.

ಅವರೊಂದಿಗೆ ಕುಳಿತು ಕಾರ್ಯಕ್ರಮ ನೀಡುತ್ತಿದ್ದ ತಮ್ಮ ಪರಿವರ್ತನೆಯ ರೂವಾರಿ ಹುಲುಗಪ್ಪ ಕಟ್ಟಿಮನಿ ಹಾಗೂ ಪತ್ನಿ ಪ್ರಮೀಳಾ ಬೇಂಗ್ರೆಯನ್ನು ಒಂದೊಂದು ಮಾತಿಗೂ ನೆನೆಸುತ್ತಾ ಒಂದೊದು ರಂಗ ಗೀತೆಯನ್ನು ಸಾವಧಾನವಾಗಿ ಹಾಡುವ ಪರಿ ಕುಳಿತವರ ಮನಸ್ಸನ್ನು ಆದ್ರಗೊಳಿಸಿತ್ತು. ಇದು ರಂಗಪಯಣದ ಸಮಾಧಾನದ ನಡೆ ಹಾಗೂ ಯಶಸ್ಸು.

ಹುಲುಗಪ್ಪ ದಂಪತಿಯ ಮಕ್ಕಳು ಅಂದು ಕೈದಿಗಳ ತೋಳುಗಳಲ್ಲಿ ಆಡಿದವರು, ಈಗ ದೊಡ್ಡವರಾಗಿ ಅವರ “ಸಂಕಲ್ಪ” ಶಕ್ತಿಯನ್ನು ಕ್ಯಾಮೆರಾ ಮೂಲಕ ಸೆರೆಹಿಡಿಯುತ್ತಿದ್ದರು. ಇದು ನನಗೆ ವಿಶೇಷ ಅನ್ನಿಸಿತು. ಹಾಗೆಯೇ ಪ್ರಾಮಾಣಿಕವಾಗಿದ್ದರೂ ಅವರೆಲ್ಲರಿಗೆ ಒಂದು ಪುಕ್ಕಟೆ ಸಲಹೆಯನ್ನಿತ್ತೆ.

“ಈ ಕಾರ್ಯಕ್ರಮವನ್ನು ಸಾಧ್ಯವಾದಷ್ಟೂ ಕಾಲೇಜುರಂಗದಲ್ಲಿ ಪ್ರಯೋಗಕ್ಕಿಳಿಸಿ. ಸಣ್ಣ ವಯಸ್ಸಿನ ದುಡುಕುಗಳಿಂದ ನೊಂದು ಜೈಲುವಾಸಿಯಾಗಿ ಬಂದ ನಿಮ್ಮಂಥವರು ಮಾತ್ರ ಹರಯದ ಹುಡುಗರಲ್ಲಿ ಆಗುವ ಕೆಲವು ದುಡುಕುಗಳನ್ನು ತಡೆಯಬಲ್ಲರೇನೋ” ಅನ್ನಿಸಿದ್ದನ್ನು ಹೇಳಿದಾಗ ಕಾರ್ಯಗೊಳಿಸುತ್ತೇವೆ ಎಂದ ಅವರಿಗೆ ನನ್ನ ನಮಸ್ಕಾರಗಳು.

ಕಾರ್ಯಕ್ರಮದ ಕೊನೆಯಲ್ಲಿ ಮಾತಾಡಿದ ಒಬ್ಬ ರಾಜಕೀಯ ವ್ಯಕ್ತಿಯೊಬ್ಬರ ಕಡೆಯ ಮಾತು ಅಲ್ಲಿ ಕುಳಿತ ಎಲ್ಲರ ಮನಸ್ಸಿನೊಳಗೆ ನಡೆಯುತ್ತಿದ್ದ ಮಾತುಗಳಾಗಿದ್ದರೂ ಪ್ರಾಮಾಣಿಕವಾಗಿ ಹೊರಹೊಮ್ಮಿದವು.

“ಇಲ್ಲಿರುವ ಕೈದಿಗಳನ್ನು ನಾವು ಸೃಷ್ಟಿ ಮಾಡಿದ್ದೇವೆ. ನಮ್ಮ ನ್ಯಾಯಾಂಗ… ಕಾರ್ಯಾಂಗ… ಶಾಸಕಾಂಗಗಳು ನಡೆಸುವ ಹಳವಂಡಗಳು ಇವರನ್ನು ಬಲಿಪಶುಗಳನ್ನಾಗಿಸಿವೆ. ಏಕೆಂದರೆ ಸಮಾಜವನ್ನು ಇವುಗಳೇ ನಿರ್ಮಾಣ ಮಾಡುತ್ತಿರುತ್ತವೆ ಎಂಬುದನ್ನು ಮರೆಯಬಾರದು. ಆದರೆ… ಕೈದಿಗಳಿಗೆ ತಪ್ಪನ್ನು ತಿದ್ದಿಕೊಳ್ಳುವ ಅವಕಾಶವಿದೆ. ಬಿಡುಗಡೆಯೂ ದಕ್ಕಿದೆ. ನಾವು ಎಂದಿಗೂ ಸರಿ ಹೋಗಲ್ಲ! ಯಾಕೆಂದರೆ, ನಮ್ಮೊಳಗೆ ಅಪರಾಧವಿದೆ. ಪಶ್ಚಾತ್ತಾಪವಿಲ್ಲ. ಹಾಗಾಗಿ ನಮಗೆ ಬಿಡುಗಡೆಯೂ ಇಲ್ಲ. ನಾವು ಅಪರಾಧಿಗಳನ್ನೂ ಸೃಷ್ಟಿಸುತ್ತೇವೆ ಮಾತ್ರವಲ್ಲ. ನಾವು ಬಚಾವಾಗುತ್ತೇವೆ.”

ಅವರಾಡಿದ ಮಾತುಗಳು ಮೂರು ಅಂಗಗಳನ್ನು ಹೊಂದಿದ ರಾಜಕಾರಣದ ಭಂಡತನ ಹಾಗೂ ಕ್ಷಣಿಕ ಪ್ರಾಮಾಣಿಕತೆ ಎರಡನ್ನೂ ಬಿಂಬಿಸುತ್ತಿದ್ದವು. ಎಲ್ಲರನ್ನೂ ಎದೆ ಮುಟ್ಟಿ ನೋಡಿಕೊಳ್ಳುವಂಥ ಬಿಡುಗಡೆಯ ಹಾದಿಗಳ ಆಶಯವೊಂದು ಈ ಕಾರ್ಯಕ್ರಮದಲ್ಲಿ ತೆರೆದುಕೊಂಡಿತೇನೋ….. ಹಾಗೇ ಮುಚ್ಚಿಹಾಕಿದ ಪುಟಗಳು ತೆರೆದುಕೊಳ್ಳಲಿ. ಬೀಸು ಗಾಳಿಗೆ ರೆಕ್ಕೆಗಳು ಪಟಪಟಿಸಲಿ.