ಹರೆಯದಲ್ಲಿ ಹೃದಯ ಕದ್ದ ಈ ಹುಡುಗಿ ಕವಿಯ ಬಾಳಿನುದ್ದಕ್ಕೂ ವ್ಯಾಪಿಸಿಕೊಳ್ಳುತ್ತಾಳೆ. ನಿನ್ನೆಯಿಂದ ಹಿಂಬಾಲಿಸುತ್ತ ಕವಿಯ ಪ್ರತಿ ಇಂದಿಗೂ ಕನಸಾಗುತ್ತ ಕಲ್ಪನೆಯಾಗುತ್ತ ಅಗಣಿತ ನಾಳೆಗಳ ಹಾಳೆಗಳಲ್ಲಿ ಮತ್ತೆ ಮತ್ತೆ ಹೊಸತು ಹೊಸತಾಗಿ ಅರಳುತ್ತ ಕಲಾಕೃತಿಯಾಗುತ್ತ ಓದುಗರ ಚಿತ್ತದಲ್ಲಿ ಉಳಿಯುವ ಮದುವೆಯಾಗದ ಲಾಲಿತ್ಯದ ಶಾಲೀನ ಚಿರಯವ್ವನದ ಕವನಕನ್ನಿಕೆ. ಕಾವ್ಯ ವಿಮಶೆ೯ಯ ಭಾಷೆಯಲ್ಲಿ ‘ನವನವೋನ್ಮೇಷ ಶಾಲಿನಿ’.
ಬಿ.ಆರ್. ಲಕ್ಷ್ಮಣರಾವ್ ಬರೆದ ‘ನವೋನ್ಮೇಷ’ ಕವನ ಸಂಕಲನದ ಕುರಿತು ಕಾತ್ಯಾಯಿನಿ ಕುಂಜಿಬೆಟ್ಟು ಬರಹ
ಕನ್ನಡದ ಪ್ರಸಿದ್ಧ ಕವಿಗಳಲ್ಲೊಬ್ಬರಾಗಿರುವ ಬಿ.ಆರ್.ಲಕ್ಷ್ಮಣರಾವ್ ಇವರ ಕವನಸಂಕಲನ ‘ನವನವೋನ್ಮೇಷ’ದ ಪ್ರತಿಯೊಂದು ಕವನವೂ ಪಕಳೆಗಳನ್ನು ತೆರೆದುಕೊಳ್ಳುತ್ತ ಹೃದಯವನ್ನು ಅರಳಿಸುತ್ತವೆ. ಏಕೆಂದರೆ ಇಲ್ಲಿಯ ಸಾಲುಗಳಲ್ಲಿ ಪದಗಳ ನೂಕುನುಗ್ಗಲಿಲ್ಲ, ಹಗ್ಗ-ಜಗ್ಗಾಟವಿಲ್ಲ, ಶಬ್ದಭಾರವಿಲ್ಲ… ಹೂಹಗುರ. ಗಿಡದ ಒಳಗಿನ ರಸಸಾರ ಭಾವಗಳೆಲ್ಲ ಟೊಂಗೆ ಟೊಂಗೆಗಳನ್ನು ಒಡೆದುಕೊಂಡು ಹೊಮ್ಮಿ ಮೊಗ್ಗು ಹೂವಾಗುವ ಹಾಗೆ ಕವನಗಳು ಲವಲವಿಕೆಯಿಂದ ಉಲ್ಲಾಸ ನೀಡುತ್ತವೆ.
ಪ್ರೀತಿ ಎಂದರೇನು? ಕೇಳಿದೆ
ಅಮ್ಮ ನೀ ಹೇಳು
ಅವಳೆಂದಳು ‘ಅದು ನನ್ನ
ಎದೆ ಒಸರುವ ಹಾಲು’
ಎಂದು ಆರಂಭವಾಗುವ ‘ಪ್ರೀತಿ ಎಂದರೇನು?’ ಎಂಬ ಕವನದಲ್ಲಿ ಅಮ್ಮ, ಸಂಗಾತಿ, ಪ್ರೇಯಸಿ, ಮಗ, ಮಗಳು ಕೊಡುವ ಉತ್ತರಗಳ ಮಿತಿಗಳನ್ನು ದಾಟಿಕೊಂಡು ಮುಂದೆ ಸಾಗುತ್ತದೆ. ಅಮ್ಮ ಕೊಡುವ ಉತ್ತರ ಅಮೂರ್ತವಾದ ಪ್ರೀತಿಯ ಮೂರ್ತ ಅಭಿವ್ಯಕ್ತಿ ರೂಪವಾದ ಎದೆಹಾಲಾದರೆ ನಲ್ಲೆಗದು ಮನ್ಮಥನ ಕಾಮಲೀಲೆ, ಜೀವನ ಸಂಗಾತಿಗೆ ಹೃದಯದಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಕಲಾನದಿ ಸರಸ್ವತಿ, ಗುರುವಿಗದು ಬಾಳನ್ನು ರೂಪಿಸುವ ಶಿಲ್ಪಿ, ಮಗಳಿಗೆ ತನ್ನ ತುಂಟ ಮಗುವಿನ ರಗಳೆ, ಮಗನಿಗೆ ರಸವು ವಿರಸವಾಗಿ ಬಾಳ ಸಂಘರ್ಷ, ದೇವನಿಗೆ ಅದು ಭಕ್ತರ ಹಾವಳಿ.. ತಿರುಗಿ ಕವಿಯಲ್ಲಿಗೇ ಮರಳುವ ಪ್ರಶ್ನೆ ಕವಿಯ ಹೃದಯ ಹೊಕ್ಕು ಅಲ್ಲಿಂದಲೇ ಭೂಮಿ- ಆಗಸವನ್ನು ನೋಡುತ್ತದೆ.
ಪ್ರೀತಿ ಎಂದರೇನು? ಕೇಳಿದೆ
ನನ್ನನ್ನೇ ನಾನು;
ಆಗ ನನಗೆ ತೋರಿದ್ದು:
ಈ ಭೂಮಿ, ಆ ಬಾನು.
ಭೂಮಿ ಮೈಚಾಚಿಕೊಂಡಷ್ಟೂ ಅನಂತದವರೆಗೂ ಆಕಾಶವೂ ಮೈಚಾಚಿಕೊಂಡಿದೆ. ಆಕಾಶವಿಲ್ಲದೆ ಭೂಮಿಗೆ ಉಸಿರಿಲ್ಲ, ಬಸಿರಿಲ್ಲ, ಹಸಿರಿಲ್ಲ. ಭೂಮಿಯಿಲ್ಲದೆ ನಿರಾಕಾರ ಆಕಾಶಕ್ಕೆ ಅಸ್ತಿತ್ವವಿಲ್ಲ. ಭೂಮಿ ಮತ್ತು ಆಕಾಶಗಳು ಮನುಷ್ಯನ ಭೋಗ೯ರೆಯುವ ಬಾಳಿನ ಎರಡು ತೀರಗಳು. ಮಣ್ಣಲ್ಲಿ ಬೇರೂರಿದ ಮರ ಆಗಸದತ್ತ ಕೈ ಚಾಚಿಕೊಂಡ ಹಾಗೆ. ಪ್ರೀತಿಗೆ ಭಾಷೆಯ ಅಂಗಿ ತೊಡಿಸಲು ಸಾಧ್ಯವಿಲ್ಲ. ಒಂದು ವೇಳೆ ತೊಡಿಸಿದೆವು ಅಂದುಕೊಂಡರೂ ಭಾಷೆ ಮೀರಿ ಭಾವ ಬೆಳೆಯುತ್ತಲೇ ಹೋಗುತ್ತದೆ. ಆಗುತ್ತಾಗುತ್ತಲೇ ಇಲ್ಲವಾಗುತ್ತದೆ, ಇಲ್ಲವಾಗುತ್ತ ಇಲ್ಲವಾಗುತ್ತಲೇ ಆಗುತ್ತದೆ. ಪ್ರೀತಿಯ ಎಲ್ಲೆಯೇ ಇಲ್ಲದ ಅಳತೆ ಆಳ ಪ್ರಮಾಣ ತೂಕ ಉದ್ದಗಲ ಅಳೆಯಲು ಬುದ್ಧಿ ಭಾವಗಳಿಗೆ ಅಳತೆಗೋಲು ಮಾಪನವಿಲ್ಲದೆ…
ಈ ಲೋಕದ ಅನಂತ ಪರಮೋನ್ನತ ಪದಗಳಾದ ಭೂಮಿ ಮತ್ತು ಆಕಾಶ ಬಳಸಿ ಭಾಷೆಯಲ್ಲಿ ಪೂಣ೯ವಿರಾಮ ಇಡಲು ಯತ್ನಿಸುತ್ತಾರಾದರೂ ಆ ಪೂಣ೯ವಿರಾಮ ಸೂಯ೯ನಂತೆ ಚಂದ್ರನಂತೆ ಬೆಳಕುಕೈಗಳಿಂದ ಬೆಳದಿಂಗಳ ಕಾಲ್ಗಳಿಂದ ಮನುಜನನ್ನು ಮುಟ್ಟುತ್ತಲೇ ಇರುತ್ತದೆ. ಮುಟ್ಟಿದರೂ ಮುಟ್ಟದ ಮುಟ್ಟದಿದ್ದರೂ ಮುಟ್ಟುವ ಅನುಭವವೋ ಅನುಭಾವವೋ ಪದಗಳಲ್ಲಿ ಹಿಡಿದಿಡಲಾಗದ ಬೆಳಕಿನಂತೆ ಎದೆಯಿಂದ ಎದೆಗೆ ಹರಿಯುತ್ತಲೇ ಇರುತ್ತದೆ. ಸಿಕ್ಕದಿದ್ದರೂ ಸಿಗುವ, ಸಿಕ್ಕರೂ ಸಿಗದ ಭೂಮಿ- ಆಕಾಶ ಹೆಣ್ಣು-ಗಂಡು ಎರಡರ ನಡುವಿನ ಈ ಅನುಭವವನ್ನು ವಿಸ್ತರಿಸಿ ಆ ಅನುಭಾವಕ್ಕೇರಿಸುತ್ತಾರೆ. ಮನುಷ್ಯ ಸಂಬಂಧಗಳ ಒಳಗೇ ಹರಿಯುವ ಈ ಶಕ್ತಿಯ ಶೋಧವನ್ನು ಬದುಕಿನ ಅಥ೯ದ ಶೋಧವನ್ನು ಅಲ್ಲಿಗೇ ನಿಲ್ಲಿಸಿದರು ಅಂದುಕೊಂಡರೂ ಭೂಮಿ ಸೂಯ೯ನ ಸುತ್ತ ತಿರುಗುತ್ತಲೇ ಇರುತ್ತದೆ.
ಬಿ.ಆರ್.ಎಲ್ ಅವರ ಕವನಗಳ ವಿಶಿಷ್ಟತೆಯಿರುವುದು ಕಣ್ಣ ಮುಂದೆ ದೃಶ್ಯಗಳನ್ನು ಮೂಡಿಸುವ ಸಾಲುಗಳಲ್ಲಿ:
ಪಂಜರದಲ್ಲಿ ಜೋಡಿಹಕ್ಕಿ:
ತಂದ ಹೊಸದರಲ್ಲಿ
ಎಂಥ ಅನ್ಯೋನ್ಯ ದಾಂಪತ್ಯ!
ಹಸಿಮೆಣಸಿನಕಾಯಿ
ಕುಕ್ಕಿ ಕುಕ್ಕಿ
ಇದರ ಬಾಯಿಗದು
ಅದರ ಬಾಯಿಗಿದು
ಇಕ್ಕಿ ಮೆಲ್ಲುತ್ತ
ಮೈಗೆ ಮೈ ತಿಕ್ಕಿ ಮುದ್ದಾಡಿ
ರಮಿಸುತ್ತ
– ಹೀಗೆ ಮುದ್ದು ಮುದ್ದಾಗಿ ಆರಂಭವಾಗುವ ದೃಶ್ಯ ಕಾವ್ಯ ಮುಂದೆ ಬಾಳು ಏಕತಾನವಾಗಿ ಒಂದನ್ನೊಂದು ‘ಕುಕ್ಕಿ ಚೀರಾಡಿ ಗಾಯಗಳ ನೆಕ್ಕುತ್ತ’ ಪಂಜರದ ಕದ ತೆರೆದರೂ ಹೊರಬರದೆ… ಒಂದು ಕಾಯಿಲೆ ಬಿದ್ದಾಗ ಇನ್ನೊಂದು ಉಪಚಾರ ಮಾಡಿದರೂ.. ಸರಿ ಹೋದ ಬಳಿಕ ಮತ್ತೆ ಯಥಾಪ್ರಕಾರ… ಸರಸ-ವಿರಸಗಳ ನಡುವೆ ಹೊಯ್ದಾಡುತ್ತ ‘ಸಂಸಾರ’ ಪಂಜರದೊಳಗೇ ಬಾಳುವ ಜೋಡಿ ಹಕ್ಕಿಗಳ ರೂಪಕ ನಮ್ಮ ಭಾರತೀಯ ಕಲ್ಪನೆಯ ‘ಸಂಸಾರ’ ಬಂಧದ ಚಿತ್ರವನ್ನು ಮನದಲ್ಲಿ ಮೂಡಿಸುತ್ತದೆ.
‘ಹುಳ’ ಎಂಬ ರೂಪಕವು ಧಾನ್ಯ ತರಕಾರಿಗಳಲ್ಲಿ ಹುಟ್ಟಿ ಅರೆಕಾಲ ಬಾಳಿ ಸಾಯುವ ಹುಳವಾಗದೆ ಮನುಷ್ಯನ ಮೆದುಳಲ್ಲಿ ಹುಟ್ಟಿ ಸಂಶಯ, ಮೋಸ, ಕಪಟ, ದುರಾಸೆ.. ಹೀಗೆ ಬೇರೆ ಬೇರೆ ಹತ್ತು ಹಲವು ಮುಖಗಳು ಹುಟ್ಟಿ ಹರಿದಾಡುತ್ತ ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಗಿನ ತಿರುಳನ್ನೇ ನುಂಗಿ ನೀರು ಕುಡಿಯುತ್ತ.. ಜಾತಿ, ಮತ, ಧಮ೯ಗಳ ಸಹಸ್ರ ಕಾಲುಗಳಲ್ಲಿ ಚಲಿಸುತ್ತ… ಕೊನೆಗೆ ಸುಂದರವಾದ ಚಿತ್ರಪಟಗಳ ಬಾಲ್ಯ, ಯವ್ವನ ಎಲ್ಲವನ್ನು ಅಂದಗೆಡಿಸುವ… ಪುರಾಣದಿಂದ ಆರಂಭವಾಗಿ ಇತಿಹಾಸ ಭೂತ ವತ೯ಮಾನ ಭವಿಷ್ಯವನ್ನೇ ವಿರೂಪಗೊಳಿಸುವ ‘ಕಾಲ ಹುಳ’ ಭಯಾನಕ ಭೀಕರ ವಾಸ್ತವದಲ್ಲಿ ತಂದು ನಿಲ್ಲಿಸುತ್ತದೆ. ಸರಳವಾದ ಲಲಿತವಾದ ಪುಟ್ಟ ಪುಟ್ಟ ಸಾಲುಗಳಲ್ಲಿ ಕಾಲಹುಳದ ಕಾಲುಗಳ ಚಲನೆಯ ಲಯವಿದೆ… ಭೂತ ವತ೯ ಮಾನಗಳ ಹೆಜ್ಜೆ ಗುರುತುಗಳಿವೆ.
ಮಣ್ಣಲ್ಲಿ ಬೇರೂರಿದ ಮರ ಆಗಸದತ್ತ ಕೈ ಚಾಚಿಕೊಂಡ ಹಾಗೆ. ಪ್ರೀತಿಗೆ ಭಾಷೆಯ ಅಂಗಿ ತೊಡಿಸಲು ಸಾಧ್ಯವಿಲ್ಲ. ಒಂದು ವೇಳೆ ತೊಡಿಸಿದೆವು ಅಂದುಕೊಂಡರೂ ಭಾಷೆ ಮೀರಿ ಭಾವ ಬೆಳೆಯುತ್ತಲೇ ಹೋಗುತ್ತದೆ.
‘ಮತ್ತೆ ಲೋಲೀಟ’ ಕವನದಲ್ಲಿ ಕವಿಯನ್ನು ಯವ್ವನದಲ್ಲಿ ಕಾಡಿದ ದೋರೆಗಾಯಿ ಕಾಯದ ಬೆಡಗಿ ಲೋಲೀಟ ಇಳಿವಯಸ್ಸಿನಲ್ಲಿ ಮತ್ತೆ ಕನಸಲ್ಲಿ ಬಂದು ತುಂಟ ನಗು ಚೆಲ್ಲುತ್ತಾ ”ಹೇಗಿದ್ದೀರಿ ಸರ್?” ಎನ್ನುತ್ತಾಳೆ.
ಮದುವೆ ಆಗ್ತೀಯೇನೇ ಹುಡುಗಿ
ಅಂತ ನನ್ನ ಕೇಳಿ,
ಮಾಡ್ಕೊಳ್ತೀರಾ ಸರ್?
ಎಂದರೆ
ಯಾಕೋ ಮೌನ ತಾಳಿ,
ಮಾಯವಾದಿರಿ, ಕಾಯುತ್ತಿದ್ದೇನೆ….
ಮದುವೆ, ಮೌನ ‘ತಾಳಿ’ (ಕರಿಮಣಿ ತಾಳಿಯ ಕುರಿತ ಮೌನವೂ ಹೌದು) ಪ್ರತಿಮಾತ್ಮಕವಾಗಿ ಪದಗಳಲ್ಲೇ ಆಟವಾಡುತ್ತಾ ಹೊಸ ಹೊಸ ಅಥ೯ ಧ್ವನಿಗಳನ್ನು ಹೊಳೆಯಿಸುತ್ತಾರೆ ತುಂಟತನದ ಈ ಕವಿ.
ವಿಚಿತ್ರ ಮತ್ತು ವಿಶಿಷ್ಟವೆಂದರೆ ಕವಿಗೆ ಈಗ ಇಳಿವಯಸ್ಸು.. ಲೋಲೀಟ ಹೊಳೆಯುತ್ತ ತೂಗುವ ಲೋಲಾಕದಂತೆ ಚಿರ ಯವ್ವನದ ಮಿಂಚವಳು. ಕವಿಯ ಯವ್ವನದ ಕಾಲದಲ್ಲಿ ಪದ್ಯವೆಂಬ ಪಂಜರದೊಳಗೆ ಬಂಧಿಯಾದವಳು. ನನಗೆ ನಿನ್ನೆಗಳು ಮಾತ್ರ ಉಳಿದಿವೆ… ನಾಳೆಗಳಿಲ್ಲ, ಪುಸ್ತಕ ಮುಗಿದಿದೆ… ಬರೆಯಲು ಹಾಳೆಗಳಿಲ್ಲ ಎಂದು ಕವಿಗೆ ಅವಳು ಬರೆಯಲು ಖಾಲಿ ನೋಟ್ಬುಕ್ಕನ್ನು ನೀಡುತ್ತಾಳೆ.. ಎಚ್ಚರವಾದಾಗ ನಿಜವಾಗಿಯೂ ಒಂದು ನೋಟ್ ಬುಕ್ ಹಾಳೆ ತೆರೆದುಕೊಂಡು ಇರುತ್ತದೆ.
ಹರೆಯದಲ್ಲಿ ಹೃದಯ ಕದ್ದ ಈ ಹುಡುಗಿ ಕವಿಯ ಬಾಳಿನುದ್ದಕ್ಕೂ ವ್ಯಾಪಿಸಿಕೊಳ್ಳುತ್ತಾಳೆ. ನಿನ್ನೆಯಿಂದ ಹಿಂಬಾಲಿಸುತ್ತ ಕವಿಯ ಪ್ರತಿ ಇಂದಿಗೂ ಕನಸಾಗುತ್ತ ಕಲ್ಪನೆಯಾಗುತ್ತ ಅಗಣಿತ ನಾಳೆಗಳ ಹಾಳೆಗಳಲ್ಲಿ ಮತ್ತೆ ಮತ್ತೆ ಹೊಸತು ಹೊಸತಾಗಿ ಅರಳುತ್ತ ಕಲಾಕೃತಿಯಾಗುತ್ತ ಓದುಗರ ಚಿತ್ತದಲ್ಲಿ ಉಳಿಯುವ ಮದುವೆಯಾಗದ ಲಾಲಿತ್ಯದ ಶಾಲೀನ ಚಿರಯವ್ವನದ ಕವನಕನ್ನಿಕೆ. ಕಾವ್ಯ ವಿಮಶೆ೯ಯ ಭಾಷೆಯಲ್ಲಿ ‘ನವನವೋನ್ಮೇಷ ಶಾಲಿನಿ’.
ಗಿಳಿ ಉಲಿಯಿತು, “ಬಿಗಿದಪ್ಪುವೆ
ಆಗ ನಿನ್ನ ನಾನು;
ನನ್ನ ಸಂಗ ಹೊಸ ಹರೆಯವ
ನಿನಗೆ ತಾರದೇನು “
– ‘ನವನವೋನ್ಮೇಷ’ ಕವನದ ಅರಗಿಳಿ ಪ್ರೇಮಗಿಳಿ ಕೂಡ ಕವಿಯ ಮನಸ್ಸನ್ನು ಇಳಿವಯಸ್ಸಲ್ಲೂ ಮತ್ತೆ ಮತ್ತೆ ಹೊಸದಾಗಿಸುವ ‘ಮತ್ತೆ ಲೋಲೀಟಾ’ಳದ್ದೇ ಮತ್ತೊಂದು ಮುಖ.
ಅದೇ ‘ರಾಜತರಂಗಿಣಿ’ಯ ಅರಗಿಣಿಯೇ ಭಿನ್ನ. ಪಂಜರದಂತಹ ವ್ಯವಸ್ಥೆಯೊಳಗೆ ಬಂಧಿಯಾದ ಹೆಣ್ಣು.. ಹೊರಗೆ ಹೊಂಚುಹಾಕುವ ಕಾಮಿಬೆಕ್ಕಿನಿ೦ದ ಅದನ್ನು ತಪ್ಪಿಸಲೆಂದೇ ವ್ಯವಸ್ಥೆಯ ಕಂಬಿಗಳು… ರೆಕ್ಕೆ ಬಿಡಿಸಿ ಬಾನಿಗೆ ಹಾರುವ ಅದಮ್ಯ ಆಸೆಯು ರಕ್ಷಣೆಯ ಹೆಸರಲ್ಲಿ ಪ್ರತಿಷ್ಠೆಯ ಹೆಸರಲ್ಲಿ ಕುಟುಂಬವೇ ಹೆಣ್ಣಿಗೆ ‘ಜೇಲರ್’ ಆಗುವುದರ ಪ್ರತಿಮೆಯಂತೆ ಭಾಸವಾಗುತ್ತದೆ.. ಈ ಕವನ ಸ್ತ್ರೀ ಸ್ಥಿತಿಗೆ ಕನ್ನಡಿ ಹಿಡಿದಂತಿದೆ.
ಬಿ.ಆರ್.ಎಲ್ ಅವರ ಈ ಕವನ ಸಂಕಲನದ ವೈವಿಧ್ಯಮಯ ವಸ್ತುಗಳನ್ನು ಕೇಂದ್ರವಾಗಿರಿಸಿಕೊಂಡು ಬರೆದಿರುವ ಕವನಗಳಲ್ಲಿ ಬಹುತೇಕ ಕವನಗಳು ಆಕಾರ ಹಾಗೂ ತಿರುಳಿನ ದೃಷ್ಟಿಯಿಂದ ರಸರಸವಾಗಿದ್ದು ಜೀವಜೀವ ಜೀವಂತಿಕೆಯಿಂದ ಕೂಡಿದ್ದು ಕವನದ ಕೊನೆಯ ಸಾಲನ್ನು ನಾವು ಸ್ಪಶಿ೯ಸುವ ಹೊತ್ತಿಗೆ ಜೀವನದ ವೈಚಾರಿಕ ತಾತ್ವಿಕ ಮೂಡು ಕದಗಳನ್ನು ತೆರೆದಿಟ್ಟಿರುತ್ತವೆ.
(ಕೃತಿ: ನವೋನ್ಮೇಷ (ಕವನ ಸಂಕಲನ), ಲೇಖಕರು: ಬಿ.ಆರ್. ಲಕ್ಷ್ಮಣರಾವ್, ಪ್ರಕಾಶಕರು: ಅಂಕಿತ ಪ್ರಕಾಶನ, ಬೆಲೆ:130/)
ಕಾತ್ಯಾಯಿನಿ ಕುಂಜಿಬೆಟ್ಟು ಉಡುಪಿಯ ಕಾಪು ಬಳಿಯ ಕರಂದಾಡಿಯವರು. ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ ಪದವಿ ಪಡೆದಿದ್ದಾರೆ. ಕನ್ನಡ ಮತ್ತ ತುಳು ಎರಡೂ ಭಾಷೆಯ ಲೇಖಕಿ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ೨೬ ಕೃತಿಗಳು ಪ್ರಕಟವಾಗಿವೆ.
ಹದವರಿತ ವಿಮರ್ಶೆ? ಕವಿತೆಯ ಸರಳತೆ ಹಾಗೂ ಅವು ನೀಡುವ ಸಹಜ ಲೋಕಾನುಭವವನ್ನು ದಾಖಲಿಸುತ್ತಲೇ ಅವು ಒಳಗೊಳ್ಳಬಹುದಾದ ತಾತ್ವಿಕ ಚೌಕಟ್ಟನ್ನೂ ಶೋಧಿಸಿದ್ದಾರೆ. ಕಾವ್ಯಾತ್ಮಕ ಭಾಷೆ ಖುಷಿ ನೀಡುತ್ತದೆ.ಲೇಖಕರಿಗೆ ಅಭಿನಂದನೆಗಳು??