ಪ್ಯಾಕ್ ಮಾಡಿರುವ ಲಗ್ಗೇಜು

ಮನೆಯ ಮೂಲೆಯಲ್ಲಿ
ಪ್ಯಾಕ್ ಮಾಡಿರುವ ಲಗ್ಗೇಜು
ಎರಡು ದೊಡ್ಡ ಸೂಟ್‌ಕೇಸು
ಒಂದು ಸಣ್ಣ ಸೂಟ್‌ಕೇಸು
ಒಂದು ಬ್ಯಾಕ್‌ಪ್ಯಾಕು
ಒಂದರ ಮೇಲೊಂದು
ಸ್ಥಾವರದಂತೆ.

ಮುಚ್ಚಿರುವ ಆ ಲಗ್ಗೇಜು
ನಿನಗೆ ತೆರೆದಿದೆ ದಾರಿಗಳು
ದೆಲ್ಲಿಗೆ ಅಲ್ಲಿಂದೆಲ್ಲಿಗೆ?
ನಿನ್ನ ಮುಂದಿದೆ ಆಕಾಶದಂತೆ
ಅಸಂಖ್ಯ ಸಾಧ್ಯತೆಗಳ ಬದುಕು.
ಆ ಎರಡು ಸೂಟ್‌ಕೇಸು
ಹಾರುವ ತವಕದಲ್ಲಿರುವ ನಿನಗೆ ರೆಕ್ಕೆಗಳು,
ಗೂಡು ಬಿಡಲೇ ಬೇಕು ಮರಿಹಕ್ಕಿ ಜಂಗಮ.

ಮುಚ್ಚಿರುವ ಆ ಲಗ್ಗೇಜು
ನನಗೆ ನೆನಪುಗಳ ಕಟ್ಟಿಟ್ಟ ಪೆಟ್ಟಿಗೆ.
ಇಷ್ಟೂ ವರ್ಷಗಳ ಪ್ರತಿ ಮಾತು ತೊದಲು,
ಹೆಜ್ಜೆ ಮುಗ್ಗರಿಕೆ, ಮುತ್ತು ಅಪ್ಪುಗೆ,
ಕೊನೆಯಿರದ ಪ್ರಶ್ನೆಗಳ ಸುರಿಮಾಲೆ,
ಮುಚ್ಚಿರುವ ನಡೆದು ಬಂದ ಹಾದಿ.

ಹಕ್ಕಿಗೂ ಬಿಡುಗಡೆ
ಮರಿಹಕ್ಕಿ ಗೂಡು ಬಿಟ್ಟಾಗ
ಅಂತೆ ನಿರುಮ್ಮಳವಾಗಿ ಕಳಿಸಿಕೊಡುತ್ತದೆ.
ನಾನೂ ಕಳಿಸುವೆ, ಕಳವಳದಲ್ಲಿ.
ಮನುಷ್ಯರಿಗೆಲ್ಲಿ ಹಕ್ಕಿಗಳ ನಿರ್ಲಿಪ್ತತೆ?

ಮನೆಯ ಮೂಲೆಯಲ್ಲಿ
ಮನದ ಮೂಲೆಯಲ್ಲಿ
ಪ್ಯಾಕ್ ಮಾಡಿರುವ ಲಗ್ಗೇಜು.