ಜೇಪೀ ನಿಧಾನಕ್ಕೆ ತಮ್ಮ ಭಾಷಣ ಶುರು ಮಾಡಿ ಅಂದಿನ ಸರ್ಕಾರ ಹೇಗೆ ದೇಶವನ್ನು ಹಾಳು ಮಾಡಿದೆ ಎಂದು ವಿವರಿಸಿದರು. ಯುವಜನತೆ ಸಿಡಿದು ಬೀಳಬೇಕು. ನಮ್ಮ ಕಾನೂನು ಪರಿಪಾಲಕರು ನ್ಯಾಯಬದ್ಧವಲ್ಲದ ಆದೇಶ ಪಾಲಿಸಬಾರದು. ನಮ್ಮ ಸೈನಿಕರೂ ಸಹ ಅವರ ಬುಕ್ ಆಫ್ ಲಾ ಮೀರಿದ ಆದೇಶ ತಿರಸ್ಕರಿಸಬೇಕು…. ಮೊದಲಾಗಿ ಒಂದು ಒಂದೂವರೆ ಗಂಟೆ ಮಾತಾಡಿದರು. ಪ್ರೊ ಎಂ ಡಿ ನಂಜುಂಡಸ್ವಾಮಿ ಮತ್ತು ಇನ್ನಿಬ್ಬರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ
ಕಳೆದ ಸಂಚಿಕೆಯಲ್ಲಿ ಗಾಂಧಿ ಭವನದ ಸುತ್ತಮುತ್ತ ನಂಟಿನ ಬಗ್ಗೆ ಹೇಳಿದ್ದೆ. ಖಾದಿ ಗ್ರಾಮೋದ್ಯೋಗದ ಖಾದಿ ಭಂಡಾರದ ಬಗ್ಗೆ ಹೇಳುತ್ತಾ ಅಲ್ಲಿನ ಕೊಟ್ಟಣದ ಅಕ್ಕಿ, ಕುಟೀರ್ ಸಾಬೂನು, ಜೋನಿ ಬೆಲ್ಲ… ಮುಂತಾದವುಗಳ ಬಗ್ಗೆ ಒಂದು ಪುಟ್ಟ ನೋಟ್ ಹಾಕಿದ್ದೆ. ಗುರು ಶರ್ಟ್, ಹ್ಯಾಂಡ್ ಲೂಂ ಹೌಸ್, ಖಾದಿ ಖಾವಿ ಪಂಚೆ ಟವಲ್ ಬಂತು..
ಕೊನೆಗೆ ಈ ಸಾಲುಗಳು ಸೇರಿತ್ತು.
ಇನ್ನೊಂದು ಹೇಳೋದು ಮರೆತಿದ್ದೆ ಅರವತ್ತು ಎಪ್ಪತ್ತರ ದಶಕದಲ್ಲಿ ರಾ ಕಾಟನ್ (ಕಚ್ಚಾ ಹತ್ತಿ ) ಹೆಸರಿನಲ್ಲಿ ಪ್ಯಾಂಟ್ ಬಟ್ಟೆ ಕಟ್ ಪೀಸ್ ರೀತಿ ಮಾರಾಟ ಆಗುತ್ತಿತ್ತು. ಮುಖ್ಯವಾಗಿ ಇವೂ ಫುಟ್‌ಪಾತ್ ವ್ಯಾಪಾರ. ನಾಲ್ಕುವರೆ ರುಪಾಯಿಗೆ ಒಂದು ಪ್ಯಾಂಟ್ ಅಳತೆ. ಪ್ಯಾಂಟ್ ತೊಟ್ಟಾಗ ಅದೇನೋ ಹಿತಾನುಭವ. ಕಾಲೇಜು ಹುಡುಗರಲ್ಲಿ ನಾಲ್ಕಾರು ಇಂತಹ ಪ್ಯಾಂಟ್ ಇರುತ್ತಿತ್ತು ಮತ್ತು ಅದನ್ನು ಕಾಲೇಜಿಗೆ ಧರಿಸುತ್ತಿದ್ದರು. ಆಗ ಕಾಲೇಜುಗಳಿಗೆ ಇನ್ನೂ ಯೂನಿಫಾರ್ಮ್ ಪದ ತಲೆ ಹಾಕಿರಲಿಲ್ಲ.
ನನ್ನ ಹೈಸ್ಕೂಲ್ ಸಹಪಾಠಿ ಶ್ರೀಮತಿ ಚಂದ್ರಿಕಾ, ಖಾದಿ ಗ್ರಾಮೋದ್ಯೋಗ ದ ಕುಟೀರ ಸಾಬೂನು ಅವರ ಅತಿ ಮೆಚ್ಚಿನ ಸಾಬೂನು ಆಗಿತ್ತು ಅಂತ ನೆನೆಸಿಕೊಳ್ಳುತ್ತಾರೆ. ಮತ್ತೊಬ್ಬ ಸಹಪಾಠಿ ಶ್ರೀಮತಿ ಅನ್ನಪೂರ್ಣ ಅವರು ಅವರಿಗೆ ಸರ್ಕಾರಿ ನೌಕರರಾಗಿ ಬಟ್ಟೆ, ಮುಖ್ಯವಾಗಿ ಸೀರೆ, ಅದರಲ್ಲೂ ರೇಷ್ಮೆ ಸೀರೆ ಕೊಳ್ಳಲು ದೊರೆಯುತ್ತಿದ್ದ ಸಾಲ ಸೌಲಭ್ಯವನ್ನು ಜ್ಞಾಪಿಸಿಕೊಂಡರು. ಬಡ್ಡಿ ರಹಿತವಾಗಿ ಕೋ ಆಪ್ಟೆಕ್ಸ್ ಹಾಗೂ ರಾಜ್ಯ ಸರ್ಕಾರದ ಪ್ರಿಯದರ್ಶಿನಿ ಇವುಗಳಲ್ಲಿ ಕೊಳ್ಳುತ್ತಿದ್ದ ಇಡೀ ಕುಟುಂಬದ ಬಟ್ಟೆಗಳ ಬಗ್ಗೆ ನೆನೆಸಿಕೊಂಡರು. ಪ್ರತಿ ಮಹಿಳೆಯೂ ಈ ಸೌಲಭ್ಯ ವನ್ನು ಮೆಚ್ಚಿದ್ದರು. ksic, ಬಿನ್ನಿ ಸಿಲ್ಕ್ ಸೀರೆಗಳು ಎಲ್ಲರ ಅಚ್ಚುಮೆಚ್ಚಿನ ದಾಗಿತ್ತು ಎನ್ನುತ್ತಾರೆ. ನಾನು ಕಾರ್ಖಾನೆ ಸೇರಿದ ಕೆಲವು ವರ್ಷಗಳ ನಂತರ ಆಲ್ಲಿ ಸಮವಸ್ತ್ರ ಜಾರಿ ಆಯಿತು. ಸಮವಸ್ತ್ರ ಜಾರಿ ನಂತರ ಸುಮಾರು ಮಹಿಳಾ ಉದ್ಯೋಗಿಗಳು ಒಂದು ರೀತಿಯ ಔಷಧವೇ ಇಲ್ಲದ ಅಪಾರ ಖಿನ್ನತೆಗೆ ಒಳಗಾಗಿದ್ದಾರೆ ಅನಿಸಿತ್ತು. ಸ್ವಲ್ಪ ಸಮಯದ ನಂತರ ಖಿನ್ನತೆಗೆ ಕಾರಣ ಗೊತ್ತಾಯಿತು. ಎಲ್ಲರೂ ಯೂನಿಫಾರ್ಮ್ ತೊಟ್ಟು ಬಂದರೆ ಮನೆ ಕಬೋರ್ಡಿನಲ್ಲಿರುವ ರಾಶಿ ರಾಶಿ ಸೀರೆ ಉಡುವುದು ಯಾವಾಗ? ಮಿಕ್ಕವರ ಹೊಟ್ಟೆ ಉರಿಸೋದು ಯಾವಾಗ? ಸಹಜವಾಗಿ ಇದು ನೋವು ಕೊಟ್ಟ ಸಂಗತಿ ಮತ್ತು ಸುಮಾರು ಜನ ಈ ನೋವಿನಿಂದ ಆಚೆ ಬರಲೇ ಇಲ್ಲ!
ಸಮವಸ್ತ್ರಕ್ಕೆ ಮೊದಲಿನ ನಮ್ಮ ಕಾರ್ಖಾನೆ ಲೈಫ್ ಅದರಲ್ಲೂ ನಮ್ಮ ಪುರುಷ ಉದ್ಯೋಗಿಗಳು ಹಾಗೂ ಮಹಿಳಾ ಉದ್ಯೋಗಿಗಳ ಕುರಿತು ಒಂದು ಸುಮಾರು ದೊಡ್ಡ ವಸ್ತು ತಲೆಯಲ್ಲಿದೆ, ಅದು ಮುಂದೆ ಎಂದಾದರೂ ರೂಪು ತಳೆಯುತ್ತೆ..! ನಮ್ಮ ಕಾರ್ಖಾನೆಯ ಆವರಣದಲ್ಲಿ ಪ್ರಿಯದರ್ಶಿನಿ ಎಕ್ಸಿಬಿಷನ್ ಮತ್ತು ಸೇಲ್ಸ್ ಇರುತ್ತಿತ್ತು… ಸಾಲ ಸೌಲಭ್ಯ ಸಹ ಇರುತ್ತಿತ್ತು. ನಮ್ಮ ಕೋಆಪರೇಟಿವ್ ಸೊಸೈಟಿ ಸಹ ಆಲ್ಲಿ ಸಿಗುವ ಬಟ್ಟೆ ಮಾರಾಟ ಮಾಡುತ್ತಿತ್ತು.
ನನ್ನ ಮತ್ತೊಬ್ಬ ಗೆಳೆಯ ವಿ ಎಂ ಪ್ರಕಾಶ್ ನೆನಪು ಹೀಗಿದೆ.
‘….. ರಾಮಕೃಷ್ಣ ಆಶ್ರಮ ಅಂದರೆ ನನಗೆ ನೆನಪಾಗೋದು, ನಾವು ನಾಲ್ಕೈದು ಜನ ರಂಗಪ್ರಸಾದ್, ಸುಮಂತ ರಾನಡೆ, ನರಸಿಂಹಮೂರ್ತಿ ಇತ್ಯಾದಿ. ನಮ್ಮ ಸಿ ಸೆಕ್ಷನ್ ನಲ್ಲಿ ಒಬ್ಬ ಬೆಳ್ಳನೆ ಕೆಂಚು ಗುಂಗುರು ದಟ್ಟ ಕೂದಲಿನ ಹುಡುಗ ವಿಜಯಕುಮಾರ್ ಕಾಮತ್ ಅಂತ ಇದ್ದ. ಆತನು ಬರುತ್ತಿದ್ದ. ಅಲ್ಲೇ ಉಪನಿಷತ್ತುಗಳನ್ನೆಲ್ಲ ಕಲ್ತಿದ್ದು. ಮುಂದೆ ನಮ್ಮ ದಾರಿಗಳೆಲ್ಲ ಬೇರೆ ಬೇರೆ ಆದವು. ರಂಗ ಮತ್ತು ವಿಜಯಕುಮಾರ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದರೆ, ನಾನು ಕೆನರಾ ಬ್ಯಾಂಕ್ ಸೇರಿದೆ. ಸುಮಂತ ಅಮೆರಿಕೆಗೆ ಹೋದ. 1973 ಸುಮಾರು ಒಂದು ದಿನ ನನಗೆ ರಂಗ ಪ್ರಸಾದ್ ಹೇಳಿದ “ಪ್ರಕಾಶ ನಿನಗೆ ಗೊತ್ತೇನೋ? ವಿಜಯ್ ಕುಮಾರ ರಾಮಕೃಷ್ಣ ಆಶ್ರಮ್ ಸೇರಿ ಅಲ್ಲಿ ಒಬ್ಬ ಸನ್ಯಾಸಿ ಆಗಿದ್ದಾನೆ” ಅಂತ. ಆನಂತರ ವಿಜಯಕುಮಾರನ ಒಂದೆರಡು ಸಲ ಭೇಟಿನೂ ಮಾಡಿದ್ದೆ. 1986 ರಲ್ಲಿ ಅವನ ಬಗ್ಗೆ ಹೈದರಾಬಾದ್ ರಾಮಕೃಷ್ಣ ಆಶ್ರಮದಲ್ಲಿ ವಿಚಾರ ಮಾಡಿದಾಗ, ಅವನ ರಾಮಕೃಷ್ಣ ಆಶ್ರಮ ಬಿಟ್ಟು ಮಧ್ಯಪ್ರದೇಶದ ಹೋಷಂಗಬಾದ್‌ನಲ್ಲಿ ತನ್ನದೇ ಒಂದು ಆಶ್ರಮ ಶುರು ಮಾಡಿದ್ದಾನೆ ಅಂತ ಗೊತ್ತಾಯ್ತು. ಹೋಷಂಗಬಾದ್‌ಗೆ ಒಂದು ಸಲ ಹೋಗಿದ್ದೆ ಕೂಡ. ಆದರೆ ಆತನ ಬಗ್ಗೆ ಆಗಲಿ, ಆಶ್ರಮದ ಬಗ್ಗೆ ಆಗಲಿ ಯಾರಿಗೂ ಗೊತ್ತಿದ್ದಿಲ್ಲ. ಒಟ್ಟಿನಲ್ಲಿ ನಮ್ಮ ವಿವಾ ಸ್ನೇಹಿತರ ಪೈಕಿ ಒಬ್ಬನು ರಾಮಕೃಷ್ಣ ಆಶ್ರಮದಲ್ಲಿ ಒಬ್ಬ ಸನ್ಯಾಸಿಯಾಗಿ ಕಾರ್ಯ ಮಾಡಿದ್ದು ಒಂದು ಹೆಮ್ಮೆನೇ ಅಂತ ನಾನು ಭಾವಿಸುತ್ತೇನೆ……” (ಇಲ್ಲಿ ವಿವಾ ಅಂದರೆ ವಿವೇಕ ವರ್ಧಿನಿ ಶಾಲೆ, ನಾನು ಓದಿದ ಶಾಲೆ) ನಮ್ಮ ಶಾಲೆಯ ಒಂದು ಹುಡುಗ ರಾಮಕೃಷ್ಣ ಆಶ್ರಮದ ಸನ್ಯಾಸಿ ಅನ್ನುವುದು ನಮಗೆ ಕೋಡು ಬಂದ ಹಾಗೆಯೇ ಸರಿ.
ಗಾಂಧಿ ಭವನದ ಬಗ್ಗೆ ಹಲವಾರು ನೆನಪುಗಳು ನನಗೆ. ಅಲ್ಲಿನ ಸಭಾಭವನದಲ್ಲಿ ಸುಮಾರು ಕಾರ್ಯಕ್ರಮ ನೋಡಿದ್ದೇನೆ ಮತ್ತು ಸತ್ಯವ್ರತ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಿಂತು ಭಾಷಣ ಬೇರೆ ಬಿಟ್ಟಿದ್ದೇನೆ. ಅಲ್ಲಿ ಭಾಷಣದ ನಂತರ ಪ್ರಾಯೋಜಕರು ಹಾಕಿದ ಖಾದಿ ಹಾರ, ಇದು ಭಾರತದ ಬಾವುಟದ ಹಾಗೆ ತ್ರಿವರ್ಣ ರಂಜಿತ, ನನ್ನ ಬಳಿ ಈಗಲೂ ಇದೆ. ಈ ಹಾರದ ವಿಶೇಷ ಅಂದರೆ ಪೂರ್ಣ ಖಾದಿಯದ್ದು ಮತ್ತು ಗಂಧದ ಹಾರದ ಹಾಗೆ ರಿಸೈಕಲ್ ಮಾಡಲು ನನ್ನಂತಹವರಿಗೆ ಅವಕಾಶ ಇಲ್ಲದಿರುವುದು. ಕಾರಣ ನಮ್ಮ ಸಭೆಗಳು ಹೆಚ್ಚಾಗಿ ಗಂಧದ ಹಾರದವು! ಹಾಗೆ ನೋಡಿದರೆ ಗಂಧದ ಹಾರಗಳು ಕೂಡ ಮೊದಮೊದಲು ಖಾದಿ ಗ್ರಾಮೋದ್ಯೋಗದ ಪ್ರಾಡಕ್ಟ್ ಅಂದರೆ ಮಾಲುಗಳು ಅಂದರೆ ಉತ್ಪನ್ನಗಳು. ಅದನ್ನ ಮಿಕ್ಕವರು ಕಾಪಿ ಹೊಡೆದು ಯಾವ ಯಾವುದೋ ಕಾಡು ಮರಗಳನ್ನು ಉಪಯೋಗಿಸುವಾಗ ಬರುವ ತೋಪಡ ಹೊಡೆದ ಮರದ ತೆಳು ಸೀಳು ತಂದು ಅದನ್ನ ಹಾರ ಮಾಡುತ್ತಿದ್ದರು. ಅದು ಗಂಧದ್ದು ಎಂದು ಟೋಪಿ ಹಾಕಲು ಅದರ ಮೇಲೆ ಗಂಧದ ವಾಸನೆ ಸೂಸುವ ಸೆಂಟ್ ಸಿಂಪನ ಮಾಡುತ್ತಿದ್ದರು. ಅದನ್ನು ಸಭೆ ಸಮಾರಂಭ ಮಾಡುವವರು ತಂದು ಅತಿಥಿಗಳಿಗೆ ಹಾಕಿ ಧನ್ಯರಾಗುತ್ತಿದ್ದರು! ಎಲ್ಲಾ ಗೊತ್ತಿದ್ದೂ ಇದು ನಕಲಿ ಮಾಲು, ಸೆಂಟ್ ಸಿಂಪರಣೆ ಆಗಿರುತ್ತೆ, ಮೂಲ ಇದಕ್ಕಿಂತ ಅದೆಷ್ಟೋ ಪಾಲು ಉತ್ತಮ… ಇವೆಲ್ಲಾ ಗೊತ್ತಿದ್ದೂ, ನಮ್ಮೆದುರಿಗೆ ಸೆಂಟ್ ಸಿಂಪರಣೆ ಆಗಿದ್ದರೂ ಟೋಪಿ ಹಾಕಿಸಿಕೊಳ್ಳುತ್ತಿದ್ದೆವು! ಆಗ ಅರವತ್ತರಿಂದ ನೂರರ ಒಳಗೆ ಈ ಹಾರಗಳು ಸಿಗುತ್ತಿದ್ದವು.
ಈಗ ಒಂದು ನೆನಪು ಮಧ್ಯ ಕರಡಿ ಹಾಗೆ ನುಸುಳಿದೆ. ನನ್ನ ಪರಿಚಯದ ಹಿರಿಯ ಸಾಹಿತಿಗಳ ಮನೆಯಲ್ಲಿ ಅವರ ಕೊರಳಿಗೆ ಬಿದ್ದ ಹಾರಗಳನ್ನು ಒಂದು ಕಡೆ ಇಡುತ್ತಾ ಇದ್ದರು. ಒಮ್ಮೆ ಅವರ ಮನೆಗೆ ಹೋಗಿದ್ದಾಗ ಮೂಲೆಯಲ್ಲಿದ್ದ ಮೂಟೆ ತೋರಿಸಿ ಇದರ ಉಪಯೋಗ ಆಗುತ್ತಾ, ವಿಲೇವಾರಿ ಸಾಧ್ಯವಾ ಅಂತ ಕೇಳಿದ್ದರು. ಅದರ ವಿಲೇವಾರಿ ಒಂದು ಸಮಸ್ಯೆ ಎಂದು ಅವರಿಗೆ ಅನಿಸಿತ್ತು. ಅದನ್ನು ನಾನು ನಮ್ಮನೆಗೆ ಒಂದು ಆಟೋದಲ್ಲಿ ತಂದಿದ್ದೆ. ಒಂದೂವರೆ ಮೂಟೆ, ಸುಮಾರು ಏಳುನೂರು ಹಾರಗಳು!
ಅದರ ವಿಲೇವಾರಿ ನಂತರ ಎಷ್ಟು ಸೊಗಸಾಗಿ ಆಯ್ತು ಅಂದರೆ ಸುಮಾರು ಸಭೆಗಳಲ್ಲಿ ಹಾರದ ಸ್ಪಾನ್ಸರ್‌ಶಿಪ್ ನನ್ನದೇ ಆಗಿತ್ತು! ಹಾರ ಬೇಕಾ? ಗೋಪಾಲಕೃಷ್ಣ ಸಾರ್‌ನ ಕೇಳಿ ಎನ್ನುವವರೆಗೆ ನಾನು ಖ್ಯಾತಿ ಹೊಂದಿದ್ದೆ! ಒಂದು ವರ್ಷದಲ್ಲಿ ಮೂಟೆ ಖಾಲಿ ಆಗಿತ್ತು.
ಹಾರಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸಂಗತಿ ನೆನಪಿಗೆ ಬರ್ತಿದೆ. ಹಾರದ ಅವಳಿ ಜವಳಿ ಪದ ಅಂದರೆ ಶಾಲು. ಶಾಲು ಹೊದೆಸಿ ಹಾರ ಹಾಕಿ ಸನ್ಮಾನಿಸಿದರು ಎನ್ನುವ ವಾಕ್ಯ ಸರ್ವೇಸಾಮಾನ್ಯ. ಹಾರದ ಜತೆ ಶಾಲು ತಾನೇ? ಈಗ ಶಾಲಿನ ಕತೆ, ಅದನ್ನು ನಿಮಗೆ ಒಪ್ಪಿಸಿ ಮುಂದಕ್ಕೆ ಓಡ್ತೀನಿ, ಸರಿ ತಾನೇ.
ನನ್ನ ತುಂಬಾ ಹತ್ತಿರದ ಬಂಧು ಒಬ್ಬರು ಬಟ್ಟೆ ವ್ಯಾಪಾರ ತುಂಬಾ ಸಣ್ಣ ಗಾತ್ರದಲ್ಲಿ ಮಾಡುತ್ತಿದ್ದರು. ಐದೋ ಆರೋ ಸೀರೆ ಬ್ಯಾಗ್‌ನಲ್ಲಿ ತುಂಬಿಕೊಂಡು ಗೊತ್ತಿರೋರ ಮನೆಗೆ ಹೋಗಿ ಸೇಲ್ಸ್ ಮಾಡೋದು ಅವರ ಕೆಲಸ. ಹೀಗೇ ಒಂದು ಸಲ ಯಾರದ್ದೋ ಮನೆಗೆ ಹೋಗಿದ್ದಾರೆ. ಅವರ ಮನೇಲಿ ಸುಮಾರು ಎಪ್ಪತ್ತು ವರ್ಷದ ವೃದ್ಧರು ಸ್ವೆಟರ್ ತೊಟ್ಟು, ಮಫ್ಲರ್ ಸುತ್ತಿಕೊಂಡು ಸೋಫಾದ ಮೇಲೆ ಕೂತಿದ್ದರು. ಇವರಿಗೆ ಅವರು ಯಾರು ಅಂತ ತಿಳಿಯದು. ಅವರ ಮಗಳೋ ಸೊಸೆನೋ ಸೀರೆ ನೋಡ್ತಾ ಇದ್ದರು. ವೃದ್ಧರು ಇವರ ವ್ಯಾಪಾರದ ಬಗ್ಗೆ ವಿವರ ತಿಳಿದುಕೊಂಡರು. ಇವರು ವ್ಯಾಪಾರ ಮುಗಿಸಿ ಹೊರಡಬೇಕಾದರೆ ಅವರು ಸೀರೆ ಒಂದೇನಾ ನೀವು ಮಾರಾಟ ಮಾಡೋದೂ ಅಂತ ಕೇಳಿದರು. ತಾತ (ಅಂದರೆ ಅಲ್ಲೇ ಕೂತು ಇವರ ವ್ಯವಹಾರ ನೋಡುತ್ತಿದ್ದ ವೃದ್ಧರು) ಅದ್ಯಾಕೆ ಕೇಳಿದರು ಅಂತ ಇವರಿಗೆ ತಿಳಿಯದು. ಸದ್ಯಕ್ಕೆ ಸೀರೆ ಮಾರ್ತಾ ಇದೀನಿ ತಾತ. ಮುಂದೆ ವ್ಯಾಪಾರ ದೊಡ್ಡದು ಆಗಬಹುದು.. ಅಂದರು.
ನೋಡಿ ನನ್ನ ಹತ್ತಿರ ಬೇಕಾದಷ್ಟು, ಹತ್ರ ಹತ್ರ ಮುನ್ನೂರು ಅಥವಾ ಅದಕ್ಕೂ ಹೆಚ್ಚು ತುಂಬಾ ಒಳ್ಳೆಯ ಶಾಲುಗಳಿವೆ. ಬಿಡುವಿದ್ದಾಗ ಬನ್ನಿ. ತೆಗೆಸಿ ಇಟ್ಟಿ ರ್ತೀನಿ. ಒಂದು ರೇಟ್ ಮಾತಾಡಿ, ತೆಗೆದುಕೊಂಡು ಹೋಗಿ ಅಂದರು!
ಸರಿ ಅಂತ ತಲೆ ಆಡಿಸಿ ಇವರು ಆಚೆ ಬಂದರು. ಇವರನ್ನು ಕಳಿಸಲು ಹೊರ ಬಂದ ಅವರ ಅಂದರೆ ತಾತನ ಸೊಸೆ ಹೇಳಿದರು. ನಮ್ಮ ಮಾವ ರೈಟರು. ಅವರಿಗೆ ಫಂಕ್ಷನ್‌ಗೆ ಕೂಗಿ ಕೂಗಿ ಶಾಲು ಹೊದಿಸುತ್ತಾರೆ. ಇವರೂ ಬೇಡ ಅನ್ನದೇ ಒಂದೊಂದು ಫಂಕ್ಷನ್‌ಗೆ ಹೋದಾಗಲೂ ಹಾರ, ಶಾಲು, ಕೆಟ್ಟಿರುವ ನಾಲ್ಕೈದು ರೀತಿಯ ಒಂದೊಂದೇ ಹಣ್ಣು ಇಟ್ಟಿರುವ ಹಣ್ಣಿನ ಬುಟ್ಟಿ ತರ್ತಾರೆ. ಕೊಳೆತು ಹೋಗಿರುವ ಹಣ್ಣು ಬಿಸಾಕಿ ಚೆನ್ನಾಗಿರೋದು ಸಿಕ್ಕಿದರೆ ಉಪಯೋಗ ಮಾಡ್ಕೋತೀವಿ. ಶಾಲು ಚೆನ್ನಾಗಿರುತ್ತೆ, ಯಾರಿಗೂ ಕೊಡೋಕ್ಕೆ ಮನಸು ಬರಲ್ಲ, ಹಾಗಾಗಿ ಬೇಕಾದಷ್ಟು ಶಾಲು ತುಂಬಿಹೋಗಿದೆ ಮನೇಲಿ. ನಮ್ಮತ್ತೆಗೂ ಇವರಿಗೂ ಯಾವಾಗಲೂ ಅದೇ ವಿಷಯಕ್ಕೆ ಜಗಳ… ಸುಮ್ನೆ ಕಸ ತಂದು ತಂದು ತುಂಬಿದೀರ ಮನೇಲಿ… ಅಂತ. ಮಾವನೂ ಕೂಗೋ ಅಷ್ಟು ಕೂಗಿ ಊಟ ಬಿಟ್ಟು ಮುಸುಕು ಹಾಕಿಕೊಂಡು ಮಲಗಿಬಿಡ್ತಾರೆ…. ಅಂತ ಸೊಸೆ ನಕ್ಕು ಕಷ್ಟ ಹೇಳಿಕೊಂಡಳು…
ನನಗೆ ಅಯ್ಯೋ ಅನಿಸಿಬಿಟ್ಟಿತು. ಯಾರು ಅವರು? ಅವರ ಹೆಸರು ಕೇಳಿದ್ರಾ ಅಂತ ವಿಚಾರಿಸಿದೆ. ಅವರು ಯಾರು ಅಂತ ಆಗ ಬಂಧುಗಳಿಗೂ ಗೊತ್ತಿರಲಿಲ್ಲ. ಎಷ್ಟೋ ವರ್ಷದ ನಂತರ ಅವರ ಪೋಟೋ ಯಾವುದೋ ಬುಕ್‌ನಲ್ಲಿ ನೋಡಿ ಇವರೇ ಅವತ್ತು ಹೇಳಿದ್ದೇನಲ್ಲಾ ಶಾಲು ಕತೆ ಆ ತಾತ… ಅಂತ ಪೋಟೋ ತೋರಿಸಿದರು. ಅಷ್ಟು ಹೊತ್ತಿಗೆ ಆ ರೈಟರ್ ತೀರಿ ಹೋಗಿದ್ದರು. ತುಂಬಾ ಹೆಸರು ಮಾಡಿದ್ದ ಹಿರಿಯ ಸಾಹಿತಿ ಅವರು. ಮನೆ ಅವರ ಕೈಲಿ ರೈಟರ್ ಆಗಿಬಿಟ್ಟಿದ್ದರು. ಪಾಪ ಶಾಲು ಮಾರಾಟ ಆಗಿಲ್ಲದೇ ಇದ್ದರೆ ಮನೆ ತುಂಬಾ ತುಂಬಿಕೊಂಡ ಶಾಲುಗಳ ಚಿಂತೆ ಹೊತ್ತು ಅವರು ಆ ಕೊರಗಿನಲ್ಲೇ ಜೀವ ಬಿಟ್ಟರೇನೋ ಎನ್ನುವ ನೋವು ಈಗಲೂ ನನ್ನನ್ನು ಆಗಾಗ ಕಾಡುವುದುಂಟು. ಪಾಪ ಸಾಹಿತಿಗಳನ್ನು ಸಭೆಗಳಿಗೆ ಆಹ್ವಾನಿಸಿದಾಗ ಅವರಿಗೆ ಏನು ಕೊಡಬೇಕು ಅಂತ ಸಾಹಿತಿಗಳ ಹೆಂಡತಿಯನ್ನು ಕೇಳುವುದು ಒಳ್ಳೇ ಉಪಾಯ! ಆದರೆ ಇದನ್ನು ಜಾರಿ ಮಾಡುವುದು ಅಸಾಧ್ಯ.
ನಮ್ಮ ಶ್ರೀ ಸಿದ್ದರಾಮಯ್ಯ, ಈಗಿನ ಮು.ಮ.ಗಳು ಯಾವುದೋ ಸಮಾರಂಭದಲ್ಲಿ ಬಾಯಸುತ್ತ ಅಂಟಿದ್ದ ಆಹಾರದ ತುಣುಕನ್ನು ಇದೇ ರೀತಿಯ ಖಾದಿಯ ತ್ರಿವರ್ಣ ಹಾರದಿಂದ ಚೆನ್ನಾಗಿ ತಿಕ್ಕಿ ತಿಕ್ಕಿ ಬಾಯಿ ಒರೆಸಿಕೊಂಡಿದ್ದರು. ಇದರ ವಿಡಿಯೋ ಸುಮಾರು ವರ್ಷ ನಮ್ಮ ಜಾಲತಾಣದಲ್ಲಿ ವ್ಯಾಪಕವಾಗಿ ಓಡಾಡಿತ್ತು. ಮೊನ್ನೆ ಈ ಹಾರ ನೋಡಿದಾಗ ಈ ಪ್ರಸಂಗ ತಲೆಯಲ್ಲಿ ಓಡಿತು. ಕತೆ ಎಲ್ಲೆಂದರಲ್ಲಿ ಓಡಾಡುತ್ತಾ ಇದೆ. ಅದನ್ನ ಮತ್ತೆ ಟ್ರ್ಯಾಕ್ ಮೇಲೆ ತರುವ ಪ್ರಯತ್ನ ಮಾಡುತ್ತೇನೆ.
ಗಾಂಧಿ ಭವನದ ಮೊದಮೊದಲಿನ ನಾನು ಭಾಗವಹಿಸಿದ ಒಂದು ಕಾರ್ಯಕ್ರಮದ ನೆನಪು ಐದು ದಶಕಗಳ ನಂತರವೂ ನನ್ನ ಮನಸಿನಲ್ಲಿ ಹಸಿರು ಅಂದರೆ ಹಸಿರು. ಈಗ ಅದಕ್ಕೆ ಬರಲೇ..
೧೯೭೫ ಜಯಪ್ರಕಾಶ ನಾರಾಯಣರ ಸ್ವಚ್ಛ ರಾಜಕೀಯದ ಕೂಸು ಅನಿಸಿಕೊಂಡ ನವ ನಿರ್ಮಾಣ ವೇದಿಕೆ ಇಡೀ ದೇಶದಲ್ಲಿ ಹಬ್ಬುತ್ತಿದ್ದ ಸಮಯ ಅದು. ನವನಿರ್ಮಾಣ ವೇದಿಕೆಯ ಮೂಲಕ ದೇಶದಲ್ಲಿನ ಭ್ರಷ್ಟಾಚಾರವನ್ನು ಕಿತ್ತು ಒಗೆಯುವ ಉದ್ದೇಶ ಇತ್ತು. ಜಯಪ್ರಕಾಶ ನಾರಾಯಣರ ಹೆಸರ ಮೊದಲಿಗೆ ಲೋಕ ನಾಯಕ ಎನ್ನುವ ಹೆಸರನ್ನು ಅದು ಯಾರೋ ಪ್ರಮೋಟ್ ಮಾಡಿದ್ದರು. ಆಗಿನ ಜನಪ್ರಿಯ ಪತ್ರಿಕೆಗಳಲ್ಲಿ ಒಂದು ಅನಿಸಿದ್ದ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ಜಯಪ್ರಕಾಶ ನಾರಾಯಣರನ್ನು ಸಿಕ್ಕಾಪಟ್ಟೆ ಪ್ರೊಜೆಕ್ಟ್ ಮಾಡುತ್ತಿತ್ತು ಮತ್ತು ಆಗಿನ ಯುವ ಪೀಳಿಗೆ ಜಯಪ್ರಕಾಶ ನಾರಾಯಣರ ಅಯಸ್ಕಾಂತದ ಸೆಳೆತಕ್ಕೆ ಒಳಗಾಗಿದ್ದೆವು. ಪ್ರತಿದಿನ ಜಯಪ್ರಕಾಶ ನಾರಾಯಣ ಅವರು, (ಇನ್ನುಮುಂದೆ ಜೇಪೀ ಅನ್ನುತ್ತೇನೆ, ಅಷ್ಟುದ್ದ ತೈಪಿಸುವುದು ಟೈಮ್ ವೆಸ್ಟ್ ಅದರಿಂದ) ಎಲ್ಲಿ ಭಾಷಣ ಮಾಡಿದರು, ಏನು ಹೇಳಿದರು ಎನ್ನುವ ಸಕಲ ವಿವರಗಳನ್ನೂ express ಪತ್ರಿಕೆ ಹಾಕುತ್ತಿತ್ತು. ಅವರ ಟೂರ್ ಇಟಿನರಿ ಸಹ ಪ್ರಚಾರ ಪಡೆಯುತ್ತಿತ್ತು. ಸಹಜವಾಗಿ ಅಂದಿನ ರಾಜಕಾರಣದಲ್ಲಿ ಬದಲಾವಣೆ ಬಯಸುತ್ತಾ ಇದ್ದವರು ಜೇಪೀ ಚಳುವಳಿಗೆ ಆಕರ್ಷಿತರಾಗಿದ್ದರು.
ಜೇಪೀ ಅವರು ರಾಷ್ಟ್ರಾದ್ಯಂತ ಸಭೆ ಸಮಾರಂಭ ನಡೆಸಿ ಸಂಪೂರ್ಣ ಕ್ರಾಂತಿಗೆ ಜನರಿಗೆ ಕರೆಕೊಡುತ್ತಿದ್ದರು. ಮತ್ತು ಯುವಜನರ ಆಕರ್ಷಣೆ ಜೇಪೀ ಅವರತ್ತ ಹೆಚ್ಚೇ ಇತ್ತು.
ಜೂನ್ ತಿಂಗಳಲ್ಲಿ ಗಾಂಧಿ ಭವನದಲ್ಲಿ ಜೇಪೀ ಅವರ ಒಂದು ಸಭೆ ಆಯೋಜನೆ ಆಗಿತ್ತು ಮತ್ತು ಇದಕ್ಕೆ ಪ್ರೊ ಎಂ ಡಿ ನಂಜುಂಡಸ್ವಾಮಿ ಅವರೂ ಸೇರಿದ ಹಾಗೆ ಹಲವು ಪಕ್ಷಗಳು ಮತ್ತು ಆಗಿನ ಬುದ್ಧಿಜೀವಿಗಳು ಬೆಂಬಲ ನೀಡಿದ್ದರು. ಈ ಸಭೆಗೆ ನಾನು ಹೋಗಿದ್ದೆ. ಜೇಪೀ ಅವರು ಗೋಡೆ ಹತ್ತಿರ ಲೋಡು ಆತು ಕೂತಿದ್ದರು ಮತ್ತು ಅವರೆದುರು ಸುಮಾರು ಯುವಕರು ನೆಲದ ಮೇಲೆ ಹಾಸಿದ್ದ ಜಮಖಾನೆ ಮೇಲೆ ಚಕ್ಕಳ ಮಕ್ಕಳ ಹಾಕಿ ಕೂತಿದ್ದರು.
ಜೇಪೀ ನಿಧಾನಕ್ಕೆ ತಮ್ಮ ಭಾಷಣ ಶುರು ಮಾಡಿ ಅಂದಿನ ಸರ್ಕಾರ ಹೇಗೆ ದೇಶವನ್ನು ಹಾಳು ಮಾಡಿದೆ ಎಂದು ವಿವರಿಸಿದರು. ಯುವಜನತೆ ಸಿಡಿದು ಬೀಳಬೇಕು. ನಮ್ಮ ಕಾನೂನು ಪರಿಪಾಲಕರು ನ್ಯಾಯಬದ್ಧವಲ್ಲದ ಆದೇಶ ಪಾಲಿಸಬಾರದು. ನಮ್ಮ ಸೈನಿಕರೂ ಸಹ ಅವರ ಬುಕ್ ಆಫ್ ಲಾ ಮೀರಿದ ಆದೇಶ ತಿರಸ್ಕರಿಸಬೇಕು…. ಮೊದಲಾಗಿ ಒಂದು ಒಂದೂವರೆ ಗಂಟೆ ಮಾತಾಡಿದರು. ಪ್ರೊ ಎಂ ಡಿ ನಂಜುಂಡಸ್ವಾಮಿ ಮತ್ತು ಇನ್ನಿಬ್ಬರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಮಧ್ಯೆ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ಚುನಾವಣಾ ತಕರಾರಿಗೆ ತೀರ್ಪು ನೀಡಿದ ಅಲಹಾಬಾದ್ ಹೈ ಕೋರ್ಟ್ ಚುನಾವಣೆ ಅರ್ಜಿ ವಿಲೇವಾರಿ ನಡೆಸಿ ಇಂದಿರಾ ಗಾಂಧಿ ಅವರ ಅರ್ಹತೆ ಮೊಟಕು ಗೊಳಿಸಿತು. ಅಂದರೆ ಶ್ರೀಮತಿ ಇಂದಿರಾಗಾಂಧಿ ಅವರು ಅಧಿಕಾರ ತ್ಯಜಿಸಬೇಕಿತ್ತು.
ಇದರ ಹಿನ್ನೆಲೆ..
ಇಂದಿರಾ ಗಾಂಧಿಯವರಿಂದ 1971 ರ ಸಂಸತ್ತಿನ ಚುನಾವಣೆಯಲ್ಲಿ ಪರಾಭವಗೊಂಡಿದ್ದ ರಾಜ್ ನಾರಾಯಣ್ ಅವರು ತಮ್ಮ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನಲ್ಲಿ ಚುನಾವಣಾ ವಂಚನೆ ಮತ್ತು ಚುನಾವಣಾ ಉದ್ದೇಶಗಳಿಗಾಗಿ ಸರ್ಕಾರಿ ಯಂತ್ರೋಪಕರಣಗಳ ಬಳಕೆಯ ಪ್ರಕರಣಗಳನ್ನು ದಾಖಲಿಸಿದರು. ಶಾಂತಿ ಭೂಷಣ್ ಅವರು ರಾಜ್ ನಾರಾಯಣ ಅವರ ಪರವಾಗಿ ಹೋರಾಡಿದರು (ನಾನಿ ಪಾಲ್ಖಿವಾಲಾ ಅವರು ಇಂದಿರಾ ಅವರ ಪರವಾಗಿ ಹೋರಾಡಿದರು). ಇಂದಿರಾ ಗಾಂಧಿಯವರನ್ನೂ ಹೈಕೋರ್ಟ್‌ನಲ್ಲಿ ಕ್ರಾಸ್ ಎಕ್ಸಾಮಿನ್ ಮಾಡಲಾಯಿತು, ಇದು ಭಾರತದ ಪ್ರಧಾನಿಯೊಬ್ಬರಿಗೆ ಅಂತಹ ಮೊದಲ ಉದಾಹರಣೆಯಾಗಿದೆ (ಇಂದಿರಾ ಗಾಂಧಿಯವರು ನ್ಯಾಯಾಧೀಶರ ಮುಂದೆ 5 ಗಂಟೆಗಳ ಕಾಲ ಸ್ವತಃ ಹಾಜರಾಗಬೇಕಾಯಿತು).
12 ಜೂನ್ 1975 ರಂದು, ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಜಗಮೋಹನ್‌ಲಾಲ್ ಸಿನ್ಹಾ ಅವರು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಸರ್ಕಾರಿ ಯಂತ್ರಗಳನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಪ್ರಧಾನಿಯನ್ನು ತಪ್ಪಿತಸ್ಥರೆಂದು ಘೋಷಿಸಿದರು. ನ್ಯಾಯಾಲಯವು ಆಕೆಯ ಚುನಾವಣೆಯನ್ನು ಅನೂರ್ಜಿತ ಎಂದು ಘೋಷಿಸಿತು ಮತ್ತು ಲೋಕಸಭೆಯಲ್ಲಿ ಅವರ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸಿತು. ಹೆಚ್ಚುವರಿಯಾಗಿ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನ್ಯಾಯಾಲಯ ಅವರನ್ನು ನಿಷೇಧಿಸಿದೆ. ಮತದಾರರಿಗೆ ಲಂಚ ನೀಡುವುದು ಮತ್ತು ಚುನಾವಣಾ ದುಷ್ಕೃತ್ಯಗಳಂತಹ ಗಂಭೀರ ಆರೋಪಗಳನ್ನು ಕೈಬಿಡಲಾಯಿತು ಮತ್ತು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಆಕೆಯನ್ನು ಹೊಣೆಗಾರರನ್ನಾಗಿ ಮಾಡಲಾಯಿತು ಮತ್ತು ವೇದಿಕೆ ನಿರ್ಮಿಸಲು ರಾಜ್ಯ ಪೊಲೀಸರನ್ನು ಬಳಸುವುದು, ಸರ್ಕಾರಿ ಅಧಿಕಾರಿ ಯಶಪಾಲ್ ಕಪೂರ್ ಅವರ ಸೇವೆಯನ್ನು ಪಡೆಯುವುದು ಮುಂತಾದ ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಯಿತು.
ಇಂದಿರಾ ಗಾಂಧಿ ಅವರು ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರು. 1975ರ ಜೂನ್ 24ರಂದು ನ್ಯಾಯಮೂರ್ತಿ ವಿಆರ್ ಕೃಷ್ಣಯ್ಯರ್ ಅವರು ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದರು ಮತ್ತು ಗಾಂಧಿಯವರು ಸಂಸದರಾಗಿ ಪಡೆದಿರುವ ಎಲ್ಲಾ ಸವಲತ್ತುಗಳನ್ನು ನಿಲ್ಲಿಸಿ, ಅವರನ್ನು ಮತದಾನದಿಂದ ನಿಷೇಧಿಸುವಂತೆ ಆದೇಶಿಸಿದರು. ಆದಾಗ್ಯೂ, ಆಕೆಯ ಮನವಿಯ ಪರಿಹಾರಕ್ಕಾಗಿ ಅವರು ಪ್ರಧಾನಿಯಾಗಿ ಮುಂದುವರಿಯಲು ಅವಕಾಶ ನೀಡಲಾಯಿತು. ಜಯಪ್ರಕಾಶ ನಾರಾಯಣ ಮತ್ತು ಮೊರಾರ್ಜಿ ದೇಸಾಯಿ ಅವರು ಪ್ರತಿನಿತ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದರು. ಮರುದಿನ, ಜಯಪ್ರಕಾಶ್ ನಾರಾಯಣ್ ಅವರು ದೆಹಲಿಯಲ್ಲಿ ದೊಡ್ಡ ರ್ಯಾಲಿಯನ್ನು ಆಯೋಜಿಸಿದರು, ಅಲ್ಲಿ ಅವರು ಆದೇಶವು ಅನೈತಿಕ ಮತ್ತು ಅನೈತಿಕವಾಗಿದ್ದರೆ ಪೊಲೀಸ್ ಅಧಿಕಾರಿಯು ಸರ್ಕಾರದ ಆದೇಶಗಳನ್ನು ತಿರಸ್ಕರಿಸಬೇಕು ಎಂದು ಹೇಳಿದರು ಏಕೆಂದರೆ ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಾತ್ಮ ಗಾಂಧಿಯವರ ಧ್ಯೇಯವಾಗಿತ್ತು. ಇಂತಹ ಹೇಳಿಕೆಯು ದೇಶದಲ್ಲಿ ದಂಗೆಯನ್ನು ಪ್ರಚೋದಿಸುವ ಸಂಕೇತವೆಂದು ಪರಿಗಣಿಸಲಾಗಿದೆ. ಆ ದಿನದ ನಂತರ, ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಘೋಷಿಸಲು ಅಧ್ಯಕ್ಷ ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ವಿನಂತಿಸಿದರು. ಮೂರು ಗಂಟೆಗಳಲ್ಲಿ, ಎಲ್ಲಾ ಪ್ರಮುಖ ಪತ್ರಿಕೆಗಳಿಗೆ ವಿದ್ಯುತ್ ಕಡಿತಗೊಳಿಸಲಾಯಿತು ಮತ್ತು ರಾಜಕೀಯ ವಿರೋಧವನ್ನು ಬಂಧಿಸಲಾಯಿತು. ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟದೊಂದಿಗೆ ಚರ್ಚಿಸದೆ ಕಳುಹಿಸಲಾಗಿದೆ, ಅವರು ಅದನ್ನು ಕಲಿತು ಮರುದಿನ ಬೆಳಿಗ್ಗೆ ಅದನ್ನು ಅನುಮೋದಿಸಿದರು.
ಹೀಗೆ ತುರ್ತು ಪರಿಸ್ಥಿತಿ ದೇಶದ ಮೇಲೆ ಜಾರಿ ಆಯಿತಾ…
ಜೇಪೀ ಅವರು ಈ ಸಂದರ್ಭದಲ್ಲಿ ಅರೆಸ್ಟ್ ಆದರು. ದೇಶ ತುರ್ತು ಪರಿಸ್ಥಿತಿಗೆ ಒಳಗಾಯಿತು ಮತ್ತು ಕ್ರೋಧ ಎಷ್ಟೇ ಇದ್ದರೂ ಅದನ್ನು ಹೊರಕ್ಕೆ ಬಿಡುವ ಯಾವ ದಾರಿಯೂ ಇಲ್ಲದಂತಹ ಪತ್ರಿಕಾ ಸೆನ್ಸಾರ್ ಜಾರಿಗೆ ಬಂದಿತು. ಜೂನ್ ೨೪,೧೯೭೫ ನಲ್ಲಿ ಜಾರಿ ಆದ ತುರ್ತು ಪರಿಸ್ಥಿತಿ ಮುಗಿದು ಚುನಾವಣೆ ನಡೆದದ್ದು, ಹೊಸ ಸರ್ಕಾರ ಬಂದದ್ದು…. ಅದೆಲ್ಲಾ ಈಗ ಕಳೆದುಹೋದ ನೆನಪುಗಳು…….
(ಇನ್ನೂ ಇದೆ…)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.